Monday, December 5, 2011

ಒಂದು ಪ್ರಾಬ್ಲಮ್ಮು... ನಿಮ್ಗೂ ಹೀಗೇ ಆಗತ್ತಾ?

ಏ ಮನವೇ ನೀನೇಕಿಷ್ಟು ವಿಚಿತ್ರ ?

ನೂರಾರು ಬಾರಿ ಗೀಚಿದರೂ
ಬಾರದಲ್ಲ ನಿನ್ನ ಪೂರ್ತಿ ಚಿತ್ರ.

ಗೆಳೆಯರಿಗೆ ಬೇಜಾರಾದಾಗ
ನೀ ಬೇಜಾರಾಗುವೆ,
ಗೆಳೆಯರು ಖುಷಿ ಪಡುವಾಗ
ಅವರೊಡನೆಯೇ ಕೇಕೆ ಹಾಕುವೆ.

ಅದೇಕೆ ಆ ಕೊಂಕು?
ಗೆಳೆಯರಿಗೆ ಬೇಜಾರಾದಾಗ ಒಳಗೊಳಗೇ ಖುಷಿ ತರುವಂತದ್ದು?
ಗೆಳೆಯರು ಖುಷಿ ಪಡುತ್ತಿರುವಾಗ ,ನಗುಮುಖದಲ್ಲೇ ಬೇಜಾರಾಗುವಂತದ್ದು?

ಒಂಟಿ ಮನಕೊಂದು ಗೆಳತಿ
ಬೇಕೆಂದು ಹಂಬಲಿಸುವಂತದ್ದು
ಗೆಳತಿ ಸಿಕ್ಕಾಗ ," ಈ ವಯಸ್ಸಿಗೆ ಒಂಟಿಯಾಗಿದ್ದರೇ
ಬದುಕು ಚೆನ್ನ" ಎಂದು ಬಿಂಬಿಸುವಂತದ್ದು,


ಜಾತ್ರೆಯಲಿ ,ಖಾಲಿ ರಸ್ತೆಯಾದರೂ
ಇದ್ದರೆ ಹಾಯಾಗಿ ತಿರುಗಬಹುದುತ್ತು ಎನ್ನುವೆ..
ಮರುದಿನ ಖಾಲಿ ರಸ್ತೆಯ ಕಂಡು,
ಛೇ! ಬಿಕೋ ಎನ್ನುವ ಬದಲು
ಜಾತ್ರೆ ಪೇಟೆಯಾದರೂ ಇರಬಾರದಿತ್ತೇ ? ಎನ್ನುವೆ.

ಮದುವೆ ಮನೆ ಊಟದಲಿ ,ತನ್ನ ಬಾಳೆಯ ಬಿಟ್ಟು
ಬಾಕಿ ಏನೇನಿದೆ ಎಂದು ಹುಡುಕುವೆ.
ನೋಡಿ ನೋಡಿ ,ಎಲ್ಲಾ ಹಾಕಿಸಿಕೊಂದು
ಎಲ್ಲದನ್ನೂ ಎಂಜಲು ಮಾಡಿ ,
ಎಲ್ಲ ಬಾಳೆಯಲ್ಲೇ ಬಾಕಿ ಉಳಿಸಿ ಬರುವೆ


ಸೆಲ್ಲು,ಕಂಪ್ಯೂಟರಿನ ಮುಂದೆ ಕೆಂಪು ಕಣ್ಣಲಿ ಕುಳಿತಾಗ,
ಛೇ,"ಯಾಕಾದರೂ ಈ ರೀತಿ ಅಂಟಿರುವೆನೊ ಇದಕೆ "ಎನ್ನುವೆ.
ಅವರಿವರು ಬೈದು ಕಣ್ಣು ಕೆಂಪಗಾದಾಗ,ಮೆಸ್ಸೇಜುಗಳಿಗಾದೇ
ಹಪಹಪಿಸುವೆ,ನೆಟ್ಟಿನಲ್ಲೇ ಹೊಸ ಭಾವಲೋಕಕೆ ತೆರೆದುಕೊಳ್ಳುವೆ


ಹೇಳು ಓ ಮನವೇ ನೀ ಏಕೆ ಹೀಗೆ?

ನಿಜ ಹೇಳಿ,
ನಿಮಗೆಲ್ಲರಿಗೂ ಹೀಗಾಗುತ್ತದೆಯೋ,
ಅಥವಾ ನನಗೊಂದೆಯೋ ಹೇಗೆ???

Thursday, October 13, 2011

ಕೊನೆಯ ಪುಟದಿಂದ.......

ಇದಕ್ಕೆ ಸೌಮ್ಯಕ್ಕನ ಲೇಖನವೇ ಸ್ಪೂರ್ತಿ..



ಓದಿ ಓದಿ ಹೀಗೆ ಟೈ ಹಾಕಿ
ಕುಳಿತಾಗ ಸುಮ್ಮನೆ ಹಳೆಯದ್ದನ್ನೆಲ್ಲಾ ನೆನೆದರೆ
ನೆನೆಯುವುದು ಕಣ್ಣು, ಆ ಲೆಕ್ಕದಿಂದಲ್ಲ
ಈಗಲೂ ಅರ್ಥವಾಗದ ಸಿದ್ಧಾಂತಗಳಿಂದಲ್ಲ
ಬದಲಿಗೆ ತುದಿ ಹರಿದ ಕೊನೆ ಪುಟಗಳಿಂದ
ಬಾಳ ಬಂಗಾರದ ಪುಟಗಳಿಂದ


ಏನೆಂದೂ ಅರ್ಥವಾಗದ,ಆದರೂ ನಗು ತರಿಸುವ
ನೀಲಿ-ಕಪ್ಪು ಬಣ್ಣದ ಚಿತ್ರಗಳು
ಅದರ ಕೆಳಗೆ ಸುಂದರವಾದ
ಆದರೆ ಓದಲು ಬಾರದ ಲಿಪಿಗಳು
ಇನ್ನೇನೋ ವಿಚಿತ್ರಗಳು.


ಇನ್ನು ಮೇಲುಗಡೆ ಒಂಬತ್ತೇ
ಇರುವ ಮೊಬೈಲ್ ನಂಬರ್ರು
ಇನ್ನೊಂದಕ್ಕಾಗಿ ಹುಡುಕಿ
ಐವತ್ತು ರೂಪಾಯಿ ಕಳೆದಿದ್ದೆ
ಎಂದರೆ ಯಾರೂ ನಂಬರು.

ಇನ್ನೂ ಸ್ವಲ್ಪ ಕಣ್ಣಿಟ್ಟು ನೋಡಿದರೆ
ಕಾಣುವುದು ಯಾರದೋ ಹೆಸರು
ಆ ಹೆಸರೇ ಆಗ ಉಸಿರಾಗಿತ್ತೆಂದು
ಹೇಳಲು ಈಗಿಲ್ಲ ಉಸಿರು

ಕವಿಯಾಗಿಸಿದ್ದ ಆ ತುಂಟ ಸಾಲುಗಳು
ಇಂದೇಕೆ ಬರಲಾರವು???
ಅಂದು ಹಾರುತ್ತಿದ್ದ ಬಣ್ಣದಾಸೆ ಹಕ್ಕಿಗಳು
ಇಂದೇಕೆ ಹಾರಲಾರವು???



Wednesday, September 14, 2011

ಒಂದ್ ಸುಳ್ಳು ಕಥೆ(ಇದು ನಿಜ್ವಾಗ್ಲೂ ಸುಳ್ಳಾ?)

ಅಂದೇಕೋ ಕಸಿವಿಸಿ,ನಾನೆಲ್ಲಿಯೋ ತಪ್ಪು ಮಾಡುತ್ತಿದ್ದೇನೆ ಎನ್ನೋ ಆತಂಕ ಆ ಹುಡುಗನಿಗೆ.ಅರ್ಧ ಸುಟ್ಟ ಸಿಗರೇಟಿನ ಹೊಗೆ ರೂಮಿನಲ್ಲಿ ಕಟ್ಟಿದ್ದ ಬಿಂಜಲುಗಳ ಮೂಲಕ ಕಿಟಕಿಯನ್ನು ಹಾರಿದಾಗ ಆ ಹುಡುಗನ ಮನಸ್ಸೂ ಅವನ ಸಿಗರೇಟಿನಂತೆ ಸುಡಹತ್ತಿತ್ತು. ತನಗರಿವಿಲ್ಲದೇ ಮಾಡಿದನೇನೋ ಎಂಬ ತಪ್ಪಿನ ಕಿಚ್ಚು ಅವನನ್ನು ಆವರಿಸಿತ್ತು. ನೋಡನೋಡುತ್ತಿದ್ದಂತೆ ಕಣ್ಣು ಕತ್ತಲಾಗಿ ಅವನ್ನನ್ನು ಹಳೆಯ ದಿನಗಳಿಗೆ ಕೊಂಡೊಯ್ದಿತ್ತು.
ಆಗಷ್ಟೇ ಪಿ.ಯು ಮುಗಿಸಿ ಬಿ.ಇ ಗೆ ಸೇರಿದ್ದೇನೆಂಬ ಖುಷಿಯ ಜೊತೆಗೆ ,ಉಳಿದ ಮಗಾ-ಮಚ್ಚಿಗಳಿಗಿಂತ ತಾನು ಸ್ಟಾಂಡರ್ಡ್ ಕೋರ್ಸ್ ಆದ ಇಂಜಿನೀರಿಂಗ್ ಮಾಡುತ್ತಿದ್ದೇನೆ ಎಂಬ ಗರ್ವ ಅವನನ್ನು ಪುಟಿಯುವ ಚೆಂಡಿನಂತಾಗಿಸಿತ್ತು. ಚಿಕ್ಕ ವಿಷಯಕ್ಕೂ ಒಮ್ಮೆ ಆ ಕಡೆ ,ಒಮ್ಮೆ ಈ ಕಡೆ ಬೇಕಾಬಿಟ್ಟಿಯಾಗಿ ಕುಣಿದಾಡ ಹತ್ತಿತು.ಇದರ ಜೊತೆಗಾಗಲೇ ಹಾಸ್ಟೇಲಿನಲ್ಲಿ ಮಂಗಾಟಗಳೂ ಆಗಷ್ಟೇ ರಂಗೇರತೊಡಗಿದ್ದವು . ಅಲ್ಲಿಯ ತನಕ ಅಮ್ಮನ ಕಾಫಿಯನ್ನಷ್ಟೇ ಕುಡಿಯುತ್ತಿದ್ದ ಅವನ ಕೈ,"ಅವನಮ್ಮನ್ ......" ಎಂದೆನ್ನುತ್ತಾ ತೀರ್ಥದ ಬಾಟಲಿಯನ್ನೇರಿಸತೊಡಗಿತ್ತು. ಬರಬರುತ್ತಾ ತುಂಬಿರುತ್ತಿದ್ದ ಪಾಕೀಟೂ ಖಾಲಿಯಾಗತೊಡಗಿತ್ತು,ಖಾಲಿಯಿದ್ದ ಸಾಲದ ಲೀಸ್ಟು ತುಂಬತೊಡಗಿತ್ತು.
ಅಷ್ತೊತ್ತಿಗಾಗಲೇ ಹಾಸ್ಟೇಲಿಗೆ ಹೊರಗಿನಿಂದ ಬಂದ ಕೆಲವು ಹಿರಿತಲೆಗಳ ಆಶೀರ್ವಚನ ಕಿವಿಗೆ ಬಿತ್ತು ," ಬಿಡೋ ಮಚ್ಚಾ ,ಜಗತ್ ನಲ್ಲಿ ಇಲ್ಲಿ ತನ್ಕಾ ಯಾವ್ ಅಪ್ಪಾನೂ ಎಣ್ಣೆ ಹೊಡಿಬೇಕು ಅಂದ್ರೆ ದುಡ್ ಕೊಡಲ್ಲ.ಅದ್ಕೆಲ್ಲಾ ನಾವೇ ಅಡ್ಜಸ್ಟ್ ಮಾಡ್ಕೋಬೇಕು ,ಒಂದ್ ಕೆಲ್ಸಾ ಮಾಡೋ..... ನಮ್ ರೂಮ್ ಕಡೆನೇ ಬಂದ್ ಬಿಡು.ಅಲ್ಲಿ ಜಸ್ಟ್ ಒಂದ್ ಸಾವ್ರಕ್ಕೆ ಊಟಾ- ತಿಂಡೀ ಖರ್ಚು ಮುಗ್ಯತ್ತೆ . ಇಲ್ಲಿ ಕೊಡೋ ಎರಡು ವರೆ ಸಾವಿರದಲ್ಲಿ ,ಒಂದುವರೆ ಉಳಿಯತ್ತೆ,ಅಷ್ಟರಲ್ಲಿ ಜಿಂದಗೀ ಜಿಂಗಾಲಾಲ್ ಮಾಡ್ ಬೋದು, ಬಾ.. ವಿ ಆರ್ ಇಂಜಿನಿಯರಿಂಗ್ ಸ್ಟುಡೆಂಟ್ಸ್ ಮ್ಯಾನ್ ,ತಲೆ ಓಡ್ಸ್ ಬೇಕು " ಎಂದ.
ಇನ್ನೇನು ,ಮೈ ತುಂಬಾ ಐ.ಪಿ.ಎಲ್ ಮ್ಯಾಚುಗಳಿಂದ ಆದ ಸಾಲ ತೀರಿಸಲಾದರೂ ಬಿಡಿಗಾಸು ಬೇಕಿತ್ತು,ಅದ್ ಹೆಂಗೋ ಹಾಸ್ಟೇಲಿನವರನ್ನು ಸೆಟ್ಲ್ ಮಾಡಿ,ಯಾವುದೋ ರೂಮಿಗೆ ಹೋದ.ಅಂತೂ ಇಂತೂ ರಾತ್ರಿ ೩ ಗಂಟೆಗೆ ಮಲಗಿ ,ಬೆಳಿಗ್ಗೆ ೧೧ ಕ್ಕೆ ಎದ್ದು ಜೀವನ ಸಾಗುತ್ತಿದ್ದಾಗ ಅಮ್ಮನಿಗೆ ವಿಷಯ ಗೊತ್ತಾಗಿತ್ತು.
" ಅಮ್ಮಾ ,ಆ ಹಾಸ್ಟೇಲಿನಲ್ಲಿ ನನ್ನ ರೂಮಿನಲ್ಲಿ ನಾನ್ ಒಬ್ನೇ ಜೂನಿಯರ್ ,ರ್ಯಾಗಿಂಗ್ ತಡಿಯಕ್ ಆಗ್ತಿಲ್ಲಾ ,ಯಾರೋ ಸಿನಿಯರ್ ನನ್ನ ಈ ರೂಮ್ ಗೆ ತಂದ್ ಬಿಟ್ರು,ಎನ್ ಮಾಡ್ಲಿ?? ಅಮ್ಮಾ... ಆದ್ರೆ ಇನ್ನೂ ಐನೂರು ರೂಪಾಯಿ ಕಳ್ಸು ,ಕರೆಂಟ್ ಬಿಲ್ಲು ,ವಾಟರ್ ಬಿಲ್ಲು ಕಟ್ಬೇಕು, ಅದ್ರೆ ಅಪ್ಪಂಗೆ ಮಾತ್ರ ಹೇಳ್ಬೇಡಾ..." ಎಂದು ಹಸಿ ಸುಳ್ಳು ಹೇಳಿದ್ದ.
ಹೇಳಿದವನೇ ಜೋಗಿ ಬಿಟ್ರೆ ಇವನದೇ ಮದರ್ ಸೆಂಟಿಮೆಂಟೇನೋ ಎಂಬಂತೆ ಎರಡು ಪೆಗ್ ಜಾಸ್ತಿ ಹಾಕಿದ್ದ.ಅದೇ ಮತ್ತಿನಲ್ಲಿ ತಪ್ಪಿಗೆ ಪ್ರಾಯಾಶ್ಚಿತ ಎಂದು ಬ್ಲೇಡಿನಿಂದ ಕೈ ಕೆರೆದು ಕೊಂಡಿದ್ದ.ನಂತರ ಎಂದಿನಂತೆ ಜೀವನ ಸಾಗಿತ್ತು.
ಮುಂದೇನು ... ತಿಂದಿದ್ದು ಕೆಳಗೆ ಮೇಲಾಗಿ ಹೊಟ್ಟೇನೋವು ಬಂದಿತ್ತು. ಅದಕ್ಕೆ ಜ್ವರವೂ ಸೇರಿ ಕೊಂಡಿತ್ತು... ಕೊನೆಗೆ ಮನೆಗೆ ರೂಮ್ ಪಾರ್ಟ್ನ್ ನರ್ ನಿಂದ ಕರೆ ಹೋಗಿತ್ತು.ಆಗಲೇ ಅಪ್ಪ ಬಂದಿದ್ದು....ಅಲ್ಲಿಯ ತನಕ ಇರದ ಆತಂಕ ,ತಳಮಳ ಆಗಶುರುವಾಗಿತ್ತು.ಅಮ್ಮನ ಹತ್ತಿರ ಸುಳ್ಳು ಹೇಳಿದಷ್ಟು ಧೈರ್ಯ ಸಾಕಾಗದಾಗಿತ್ತು.ಅಪ್ಪ ಏನೆಂದಾರೋ ಏನೋ ಎಂಬ ಆತಂಕ ಮನಸ್ಸಿನಲ್ಲಿ ಆಗ ರೂಮ್ ಮಾಡಿತ್ತು.ಮುಂದೇನು ಕಥೆಯೋ? ಎನು ಹೇಳಲೋ?ಎಂದು ಯೋಚಿಸುತ್ತಿರುವಾಗಲೇ ಅಪ್ಪ ಚಿಕಿತ್ಸೆ ಕೊಡಿಸಿ ಹೊರಟಿದ್ದರು. ಅವರು ರೂಮಿನ ಬಗ್ಗೆ ಒಂದು ಮಾತೂ ಕೇಳಲಿಲ್ಲ,ಇವನಿಗೆ ಹೇಳಲು ಧೈರ್ಯ ಸಾಲಲಿಲ್ಲ..ಹೋಗುವಾಗ ಮುಖ ನೋಡಿ ,ಸಾವಿರದ ನೋಟನ್ನು ಕೈಗಿತ್ತು "ಜೋಪಾನ" ಎಂದಷ್ಟೇ ಹೇಳಿ ಬಸ್ಸು ಹತ್ತಿದರು.....
ಅದಾಗಿ ರೂಮಿನ ಮೆಟ್ಟಿಲು ಹತ್ತುತ್ತಿರುವಾಗ ಕೆಳಗಿನ ಮಾಲಿಕರ ಮನೆಯಲ್ಲಿ ನಡೆದ ಮಾತುಕತೆ ಹುಡುಗನ ಕಿವಿಗೆ ಬಿತ್ತು. "ಅಲ್ಲಾ ಕಣೇ... ನಮ್ ಮನೆ ಮೆಲ್ ಇರೋ ಹುಡುಗ ಹಾಸ್ಟೇಲಿನಲ್ಲಿ ಇದಿನಿ ಅಂತಾ ಅಪ್ಪಂಗೆ ಹೇಳೀದ್ನಂತೆ ,ಆಮೇಲೆ ಅಮ್ಮಂಗೆ ...ರ್ಯಾಗಿಂಗ್ ಅಂತಾ ಬೇರೆ ಹೇಳೀದಾನೆ..ಆದ್ರೆ ಜ್ಯೂನಿಯರ್ಸ್ ಗೆ ಬೇರೆ ಹಾಸ್ಟೇಲ್ ಇರೋ ವಿಷಯ ಅಪ್ಪಂಗೆ ನಾನ್ ಹೇಳೀದ್ ಮೇಲೇ ಗೊತ್ತಾಗಿದ್ದು. ಮಗ ಸುಮ್ನೆ ಸುಳ್ ಹೆಳ್ ಬಿಟ್ನಲಾ ....... ಅಂತ ತುಂಬಾ ಬೇಜಾರು ಮಾಡ್ಕಂಡ್ರು ,ಅವ್ನಿಗೆ ಹೊರ್ಗಡೆ ಊಟ ಸೆಟ್ ಆಗಲ್ಲಾ ಅಂತ ಹೇಳ್ದ್ರು ,ಜೊತೆಗೆ ನೀವೇ ಊಟ ಹಾಕಿ ತಿಂಗಳಿಗೆ ಐದು ಸಾವಿರ ಬೇಕಾದ್ರು ಕೊಡ್ತೀವಿ ಅಂದ್ರು...ನಾನು ಅಯ್ತು
ಅಂದೆ,ಆದ್ರೆ ಎನ್ ಹುಡ್ಗುರೋ.....ಥೂ..ಅಪ್ಪಾ ಅಮ್ಮಂಗೇ ಮೋಸ ಮಾಡೋ ಜೀವನಾ ಯಾಕ್ ಬೇಕೋ " ......

ಕೇಳುತ್ತಿದ್ದಂತೆ ಹತ್ತುತ್ತಿದ್ದ ಮೆಟ್ಟಿಲುಗಳು ಪರ್ವತದಂತೆ ಅನಿಸಹತ್ತಿದ್ದವು.... ಅಂತೂ ರೂಮಿಗೆ ಬಂದು,ಕಬೋರ್ಡ್ ನಲ್ಲಿ ಮುಚ್ಚಿಟ್ಟಿದ್ದ ಸಿಗರೇಟು ಹಚ್ಚಿದ್ದ....ಸಿಗರೇಟಿನಂತೆ ಅವನ ಮನಸ್ಸೂ ಸುಡುತ್ತಿತ್ತು...



(" ತನ್ನನ್ನು ತಾನೇ ಬುದ್ದಿವಂತ ,ಪಾಲಕರೆಲ್ಲಾ ಬಕ್ರಾ ಗಳು ಎಂದು ತಿಳಿಯುವ ಮಕ್ಕಳು, ನಮ್ಮ ಮಕ್ಕಳು ಎನೂ ತಿಳಿಯದ ಮುಗ್ಧರು ಎಂದು ತಿಳಿಯುವ ಪಾಲಕರು")

ಮುಂದೇನು????
(ನಿಮ್ಮ ಕಲ್ಪನೆಗೆ ಬಿಟ್ಟಿದ್ದು)


Wednesday, August 17, 2011

ಬ್ರಷ್ಟತೆಯೆದುರು ಬಾಪು ,ಬನ್ನಿ ಮತ್ತೆ!!

ಬನ್ನಿ ,ಬಾಪು-ನೇತಾಜಿ ಎದ್ದಿರುವೆವು ನಾವು
ಬ್ರಷ್ಟ ನಿಯತ್ತಿಗೆದುರಾಗಲು ದಾರಿದೀಪ ನೀವು

ಕ್ವಿಟ್ ಇಂಡಿಯಾ ಎಂದಂತೆ
ಕ್ಲೀನ್ ಇಂಡಿಯಾ ಎನ್ನುವೆವು
ಉಪ್ಪಿನ ಕರದಂತೆ ನಾವು ,
ಕಪ್ಪು ಕರದೆದುರು ಹೋರಾಡುವೆವು

ಬನ್ನ್ನಿ ತಿಲಕರೇ ಮುಟ್ಟೋಣ,ಜನರನ್ನು ಹೊಸ ರೂಪದಲ್ಲಿ
ಇಂಟರ್ ನೆಟ್ಟು,ಟೀವಿ,ಪೇಪರುಗಳಲ್ಲಿ
ಹೇಳಬನ್ನಿ ಸಾವರ್ಕರರೇ ,ಹೊಸ ಸಂಗ್ರಾಮದ ಕಥೆಯನ್ನು
ಸ್ವತಂತ್ರ ಭಾರತ ,ಸ್ವಚ್ಛವಾದ ಬಗೆಯನ್ನು

ನಾಡಹಿರಿಯರೇ ಸಾಕ್ಷಿಯಾಗಲು ಬನ್ನಿ
ನಮ್ಮ ನಾಡನ್ನು ಸಿಂಗರಿಸಲಿದ್ದೇವೆ.
ಬ್ರಷ್ಟತೆಯನ್ನು ಗುಡಿಸಿ ಬುಟ್ಟಿಯಲ್ಲಿಟ್ಟು,
ಮನದಂಗಳಕೆ ಪಾರದರ್ಶಕತೆಯ ರಂಗವಲ್ಲಿಯನ್ನಿಟ್ಟು..


( ಇದು ಕವಿತೆ ಎಂದೆನಿಸಿಕೊಳ್ಳಲು ಮಾರ್ಗದರ್ಶನ ನೀಡಿದ ವಿವೇಕಾನಂದ ಸರ್ ಅನ್ನು ನೆನೆಪಿಸಿಕೊಳ್ಳುತ್ತಾ )
ಸಮ್ರದ್ಧ ಭಾರತದ ಸಿಹಿಕನಸ ಹೊತ್ತು,

ನಿಮ್ಮನೆ ಹುಡುಗ
ಚಿನ್ಮಯ್

Monday, August 8, 2011

ಮೊದಲ ರಾತ್ರಿ .......... (ಪುಸ್ತಕದ ಜೊತೆ)

ಲೋ ಅ ಸರ್ಕಲ್ ಡಿರೈವಸನ್ ನೋಡ್ಕೊಳೋ !!! ಪಕ್ಕಾ ಅಂತೆ .. ಅಮ್ಯಾಗ ಆ ವೆಕ್ತರ್ ಮಾಡ್ಸಿದ್ ಪ್ರಾಬ್ಲಂಸ್ ಎಲ್ಲದು ಸರಿ ಇಲ್ಲೋ .. ಈದ್ ನೋಡು ಬೆಸ್ಟ್ ನೋಟ್ಸ್ , ಈದ್ ಬ್ಯಾಡಾ ಅಂದ್ರ a ಕಡಿ ಎಕ್ಸ್ ಪರ್ಟ್ ನೋಟ್ಸ್ ಅದಾವ್ ನೋಡು ....ಒಂದ್ ಗಂಟಿ ಮ್ಯಾಲ್ ಪೇಪರ್ ಸಿಕ್ರ್ ಕರಿತಿನ್ ಪಾ ... ಈಗ ಮಕ್ಕೋ ಬೊಸ್ಕೊ ಬುಕ್ ಐತಿ ಹೌವ್ದಿಲ್ಲೋ???" ಹೀಗೆ ಸೆಹ್ವಾಗ್ ಬೌಂಡರಿಗಳತರ ಒಂದರ ಹಿಂದೋದು ಮಾತಾಡುತ್ತಾ ರೂಮಿನ ಬಾಗಿಲು ಹೋದವ ಆ ಹುಬ್ಬಳ್ಳಿ ಹುಡುಗ... ಹುಬ್ಬಳ್ಳಿಯಿಂದ ನಿನ್ನೆ ಮೊನ್ನೆ ಬೈಕಿನಲ್ಲಿ ಬಂದ ,ನಮ್ಮ ಹಾಸ್ಟೆಲ್ ಗೆ ಸೆಕೆಂಡ್ ಪಿಯುಸಿ ಪರೀಕ್ಷೆ ಬರೆಯಲು ಬಂದಿದ್ದ..ಅರ್ಧ ಮುಕ್ಕಾಲು ವರುಷ , ಮಧ್ಯರಾತ್ರಿಯವರೆಗೆ ಓದಿ, ಅದರೂ ಎನೋ ಹೆದರಿಕೆ ಎನ್ನುತ್ತಿದ್ದ ನನಗೆ,ಆತನನ್ನು ನೋಡಿ ಎನೋ ಧೈರ್ಯ ಬಂತು.. ಹಗಲಿಡಿ ಯಾವುದೋ ಲೋಕದಲ್ಲಿರುತ್ತಿದ್ದ ಅವರಿಗೆ ,ಪರೀಕ್ಷೆ ನೆನಪಗುತ್ತಿದ್ದಿದ್ದೇ ಸಂಜೆಗೇನೋ???
ಇನ್ನೇನು ಅವರಿವರನ್ನೆಲ್ಲಾ ಕರೆದು ಗುಂಪಾಗಿ ಸೇರಿ,ಪರೀಕ್ಷೆಗೆ ಏನು ಓದುವುದೆಂದು ಚರ್ಚಿಸುವ ಹೊತ್ತಿಗಾಗಲೇ ಊಟದ ಹೊತ್ತಾಗಿರುತ್ತಿತ್ತು...ಕೂಗಾಡಿ ಜೋರು ಕೇಕೆ ಹಾಕುತ್ತಾ ಊಟ ಮಾಡುವುದನ್ನು ನೋಡಿದರೆ, ಆಕಾಶವೇ ತಲೆ ಮೇಲೆ ಬಿದ್ದಂತೆ ಆಡುತ್ತಿದ್ದ ನಮಗೆಲ್ಲ ಉರಿಯುತ್ತಿತ್ತು...ಹೊತ್ತಾಗುತ್ತದೆ ಎಂದು ಊಟ ಮಾಡಿ ತಟ್ಟೆ ತೊಳೆಯದೇ ರೂಮಿಗೆ ಹೋಗಿ, ಗಣಿತ ಪುಸ್ತಕ ತೆಗೆದರೆ ,ಎಲ್ಲವೂ ಮರೆತಂತೆ ಅನಿಸುತ್ತಿದೆ.ಅದಕ್ಕೆ ಸರಿ ಎಂಬಂತೆ ಅ ತುಪ್ಪ ಹೇಳಿದ ಪ್ರಾಬ್ಲಮ್ಮು ಎಸ್ಟಾದರೂ ಪ್ರಾಬ್ಲಮ್ಮಾಗೇ ಉಳಿದಿದೆ...ಏನು ಮಾಡುವುದೆಂದು ಗೊತ್ತಾಗದೇ ,ಸುಮ್ಮನೇ ಗೋಡೆಗೆ ಗುದ್ದಿ ಕೈ ನೋಯಿಸಿ ಕೊಂಡಿದ್ದಾಯ್ತು,ಬೆಳಿಗ್ಗೆ ಬೇಗ ಎಳುತ್ತೇನೆ ಎಂದವರನ್ನೆಲ್ಲಾ ಮಲಗಿಸಿ ಅಯಿತು..ನಾನೂ ಬೆಳಿಗ್ಗೆ ಬೇಗ ಏಳುವುದೆಂದು ಕಣ್ ಮುಚ್ಚಿದೆ ... ಊಹು ,ಎಂದಿಗೂ ಪುಸ್ತಕದೊಂದಿಗೇ ಬರುತ್ತಿದ್ದ ನಿದ್ರಾದೇವಿಗೆ ಅವತ್ತು ಬಸ್ಸು ತಪ್ಪಿತ್ತು!!!! ....ಆಗಲೇ ಹತ್ತಾರು ಬಾರಿ ಗೀಚಿದ್ದ ಥೇರಂ ಅನ್ನು ಮತ್ತೆ ಪ್ರೂವ್ ಮಾಡಿದರೂ ಪ್ರಯೋಜನವಿಲ್ಲ... ಅದರ ಮುಂದಿನ ಲೆಕ್ಕ ಅರ್ಧಕ್ಕೆ ನಿಂತ ಸಿಟ್ಟಿಗೂ ನಿದ್ರೆ ಬರುತ್ತಿಲ್ಲ ... ಏಕೆ ???? ಗೊತ್ತಿಲ್ಲ....
ಇನ್ನೇನು... ಪಾಪ ಆ ಪೋಲಿ ಹುಡುಗರಿಗೆ ಇಂಪಾರ್ಟೆಂಟ್ ಆದ್ರು ಹೇಳೋಣಾ ಅಂತಾ,ರೂಮಿನ ಬಾಗಿಲು ಬಡಿಯುವ ಮೊದಲೇ ಸಿಗರೇಟಿನ ಗಾಟು ಮೂಗಿಗೆ ರಾಚಿತು..ನನ್ನ ನೋಡಿದ ಕೂಡಲೇ ಎಂದಿಗೂ ಇಲ್ಲದ ರಾಜಮರ್ಯಾದಿ.. ನಮಗೂ ಅವರಿಗೂ ಮೊದಲಿಂದಲೂ ಅಷ್ಟಕ್ಕಷ್ಟೇ...ಇವತ್ತೇನು ಎಂದು ನನ್ನ ಕೆಂಪು ಕಣ್ಣನ್ನು ಅರಳಿಸುವ ಮೊದಲೇ,ಪಕ್ಕದ ರೂಮಿನಿಂದ ಕೂರ್ಚಿ ಬಂದಾಗಿತ್ತು.. ಸರಿ ,ಓನೋ ಸಾಧಿಸಿದವನ ಗತ್ತಿನಲ್ಲಿ ಕುಳಿತ ನನಗೆ ಅಲ್ಲಿ ಅಚ್ಚರಿ ಕಾದಿತ್ತು... ಅದಾಗಲೇ ರೂಮಿಗೆ ಬಂದ ಹುಬ್ಬಳ್ಳಿಯವ ಆಗ ಮಾತ್ರ ನೋಟ್ಸ್ ತೆಗೆಯುತ್ತಿದ್ದ ..ಎನಪ್ಪಾ ಈಗ ರಿವೈಸ್ ಮಾಡ್ತೀಯಾ ಅಂದ್ರೆ ,"ಈಗ್ ಜಸ್ಟ್ ಶುರು ಪಾ "ಅಂದಾಗ ನಿಜಕ್ಕೂ ನಾನು ಶಿಲಾಮೂರ್ತಿಯಾದೆ.. ನಾನು ಪರೀಕ್ಷೆಗೆ ಎರಡು ದಿನ ಮೊದಲೇ ಪುನಾರಾವರ್ತಿಸುವವರನ್ನು ನೋಡಿದ್ದೆ. ಇನ್ನು ಹಿಂದಿನ ದಿನ ,ಬಿಟ್ಟ ಟಾಪಿಕ್ಕುಗಳನ್ನು ಓದುವವರನ್ನು ನೋಡಿದ್ದೆ,ಆದರೆ ಪರೀಕ್ಷೆಯ ಹಿಂದಿನ ರಾತ್ರಿ ಶ್ರೀ ಗಣ...ದಿಂದ ಶುರುಮಾಡುವ ಮಹಾನುಭಾವರ ದರ್ಶನವಾದದ್ದು ಆ ೧೧:೪೫ರ ಮುಹೂರ್ತದಲ್ಲೇ!!! ಸರಿ ಹೆಂಗಿದ್ದರೂ ನಿದ್ದೆ ಬರುತ್ತಿರಲಿಲ್ಲವಾದುದರಿಂದ,ಇವರ ಓದುವ ಕ್ರಮವನ್ನು ತಿಳಿಯುವ ಮನಸ್ಸಾಯಿತು.. ಗಜನಿಯಂತೆ ರೂಮಿನ ತುಂಬೆಲ್ಲ ಹಾಳೆ ಹಚ್ಚಿದ್ದ,ನನಗೆ ಹೊಸ ಹೊಸ ತರ ಓದುವುದರಲ್ಲಿ ಓಲವೂ ಇತ್ತು.. ಸರಿ,೧೫೦-೨೦೦ ಲೆಕ್ಕವಿರುವ ಆ ಪಾಠಗಳನ್ನು ಅದು ಹೇಗೆ ಓದುತ್ತಾನೆ ಎಂದು ಗುಣಿಸಿ,ಭಾಗಿಸುತ್ತಿದ್ದೆ.... ಅಷ್ಟರಲ್ಲೇ ರಿಂಗಣಿಸಿತು ನೋಡಿ ಆತನ ಸೆಲ್ಲು,ಕರೆ ಬಂದೊಡನೆ ಎನನ್ನೋ ಗೆದ್ದವನಂತೆ ಹೊರಗೆ ಹೋದವ,ಬಂದು ನಾನು ಇಲ್ಲಿ ಶುರುವಿನಲ್ಲಿ ಮೇಲುಗಡೆ ಗೀಚಿದ್ದನ್ನು ಒದರಿದ...ನನಗೆ ಆತ ಹೇಳಿದುದೆಲ್ಲ ಬರುತ್ತಿದ್ದರಿಂದ ಎನೋ ಧೈರ್ಯ ಬಂತು. ಸರಿ ಇನ್ನೇನು ಮಲಗಬೇಕು,ಇವನು ರಾತ್ರಿಯಿಡಿ ಇವನ್ನೆಲ್ಲ ಓದಿದರೂ ಪಾಸಾಗುವುದು ಕಷ್ಟ ಎಂದುಕೊಂಡ ನಾನು , ಮಲಗಲು ಹಲ್ಲು ತಿಕ್ಕಿ,ಮುಖ ತೊಳೆದು ಅಣಿಯಾದೆ...ಅಷ್ಟರಲ್ಲೇ ನನ್ನ ಕಂಡ ರಾಕಿ, " ಅವಾ ಮಕ್ಕೊಳಕ್ ಹತ್ಯಾನ್ ಲೇ " ಅಂದ.. "ಹೂ ಲೆ,ಪೇಪರ್ ಸಿಕ್ ಮ್ಯಾಗ್ ಎಬ್ರ್ ಸ್ತೀನ್ ಅವ್ಗ "ಎಂದ ಮಿಸ್ಟರ್ ಹುಬ್ಬಳ್ಳಿ. ಸರಿ ಇನ್ನೇನು ಮಲಗ ಬೇಕು ಎನ್ನುವಷ್ಟರಲ್ಲಿ ೧ ಗಂಟೆಗೇ ಎದ್ದ ವಿವೇಕ,ನನ್ನನ್ನು ಮಾತಿಗೆಳೆದ.. ಬೇಡ ಬೇಡ ಎಂದರೂ ವಿಷಯ ಕ್ರಿಕೇಟಿನ ಕಡೆ ಹೋಗಿದ್ದರಿಂದ ,ನಾನು ಮಾತನಾಡಾಲೇ ಬೇಕಾಯಿತು.. ಅಷ್ಟರಲ್ಲೇ ಆ ಕಡೆಯಿಂದ , "ಏ ಚಿಮ್ಮಯ್ ,ಪೇಪರ್ ಸಿಕ್ಕೈತ್ ಬಾರ್ಲೆ.. ಬುಕ್ ನಾಗ್ ಪ್ರೊಬ್ಲಮ್ಸ್ ಪೇಜ್ ನಂಬರ್ ಹುಡ್ಕ್ ಕೊಡ್ಲೆ ಪಾ"ಎಂದಿತು..ಇಲ್ಲಿಯತನಕ ಪೇಪರ್ ಲೀಕ್ ಆಗುತ್ತದೆ ಅಂತ ಕೇಳಿದ್ದ ನನಗೆ , ಅಂದು ನೋಡುವ ಅವಕಾಶ ಸಿಕ್ಕಿತೇ? ಎನಿಸಿತು... ಮನಸ್ಸು ಬೇಡ, ಬೇಡಾ ಎಂದರೂ ಪ್ಪೇಪರ್ರನ್ನು ನೋಡಿದೆ.. ಸಕತ್ ಖುಷಿಯಿಂದ ಅವನಿಗೆ ಪೇಜ್ ನಂಬರುಗಳನ್ನು ಟಿಕ್ಕು ಮಾಡಿ ಕೊಟ್ಟು,ನಾನೂ ಮೊದಲ ಬಾರಿ ನೈಟೌಟಿಗೆ ಸಿದ್ಧನಾದೆ...ಈ ಪೇಪರಿಗೆ ೧೦೦ ಬರಲೇಬೇಕು ಎಂದು ಕೊಂಡು,೨-೨:೩೦ ತಾಸುಗಳ ತನಕ ಲೆಕ್ಕಬಿಡಿಸಿದೆ.. ಅದಾಗಲೇ ಕಾರ್ತೀಕದಲ್ಲಿ ಎರಡನೇ ಆಟ ಶುರುವಾಗುವ ಹೊತ್ತು,ಸುಮಾರು ೦೪:೩೦... ಇನ್ನೇನು ನಿಶ್ಚಿಂತೆಯಿಂದ ಮಲಗಬೇಕು ಎಂದು ಕೊಂಡಾಗ,ದೀಪು ಮನೆಗೆ ಕರೆದ....ಸರಿ ಅಲ್ಲಿಗೆ ಹೊಗಿ ಬೆಂಗಳೂರಿನ ಪೇಪರನ್ನೂ ಬಿಡಿಸಿದ್ದಾಯ್ತು..ನನಗೆ ಎರಡರಲ್ಲಿ ಯಾವುದು ಕೊಟ್ಟರೂ ೧೦೦ ಅಂದುಕೊಂಡು ಸೂರ್ಯನ ಕಂಡ ನನಗೇ ನನ್ನನ್ನು ನಂಬಲಾಗುತ್ತಿರಲಿಲ್ಲ... ಒಂದು ಕಾಲದಲ್ಲಿ ೭:೩೦ಕ್ಕೆ ಮಲಗಿ ೬ ಕ್ಕೆ ಎಳುತ್ತಿದ್ದ ಮಾಣಿ ಇಂದು ಅಹೋ ರಾತ್ರಿ ಓದಿದ್ದ , ಇದೇ ನನ್ನ ಫಸ್ಟ್ ನೈಟು, ಅಲ್ಲಲ್ಲ ಫಸ್ಟ್ ಫುಲ್ ನೈಟು...


ಅಂದ ಹಾಗೆ ಮುಂದಿನದ್ದೇನೂ ವಿಶೇಷವಿಲ್ಲ.ಎರಡೂ ಪೇಪರುಗಳನ್ನು ಸೇರಿಸಿದರೂ ೨೦ ಮಾರ್ಕ್ಸು ಬರುತ್ತಿರಲಿಲ್ಲ....ಅವರಿಬ್ಬರ ಮುಖ ಕೆಂಪಾಗಿತ್ತು,ನನ್ನ ಕಣ್ಣು ನಿದ್ದೆ ಗೆಟ್ಟು ಕೆಂಪಾಗಿತ್ತು....ಆಮೇಲೆ ಅವರಿಗೆ ಸಿಕ್ಕ ಪೇಪರ್ರುಗಳೆಲ್ಲವೂ ,ಪುಸ್ತಕದ ತುದಿಗಿನ ಮಾಡೆಲ್ ಕ್ವಶ್ಚನ್ ಪೇಪರಿನವು ಎಂದು ಗೊತ್ತಾದಾಗ,ಎಲ್ಲರ ಕೆನ್ನೆ ಕೆಂಪಾಗಿತ್ತು... ನನ್ನ ನೈಟ್ ಔಟಿನ ಕತೆ ಕೇಳಿದವರ ಮುಖ ನಕ್ಕು ನಕ್ಕು ಕೆಂಪಾಗಿತ್ತು.............

ಕೆಂಪಾದವೋ ಎಲ್ಲ ಕೆಂಪಾದವೋ..
ಹಾಸ್ಟೆಲು ಎಂದೊಡನೆ ಇಂದು ನೆನಪಾದವು...
ಥ್ಯಾಂಕ್ಸು ,ಆ ಹಾಸ್ಟೆಲ್ ರಾಜ ನರಸಿಂಹಣ್ಣಂಗೆ.
ನನ್ ಪ್ರೆಂಡ್ಸಿಗೆ,ಸಿರ್ಸಿಗೆ,ನಿಮ್ಗೆ,ಎಲ್ಲರಿಗೆ!!!
ಕೊನೆಗೆ ನನಗೆ ೬೫ ಕೊಟ್ಟು, ಪಾಸು ಮಾಡಿದ ಪುಣ್ಯಾತ್ಮರಿಗೆ!!!!

Sunday, August 7, 2011

ಈ-ದಿನ...

ಅನು ದಿನವೂ ಸ್ನೇಹಿತರ ದಿನ
ನೀವು ಒಳ್ಳೆಯ ಸ್ನೇಹವನ್ನು ಕೊಡುವವರಾಗಿದ್ದಲ್ಲಿ
ಪ್ರತಿ ದಿನವೂ ಪ್ರೇಮಿಗಳ ದಿನ
ನೀವು ಒಳ್ಳೆಯ ಪ್ರೀತಿಯನ್ನು ಕೊಡುವವರಾಗಿದ್ದಲ್ಲಿ

ಎಲ್ಲಾ ದಿನವೂ ಮಕ್ಕಳ ದಿನ
ನಿಮ್ಮಲ್ಲಿ ಬಾಲ್ಯದ ಮುಗ್ದತೆ ಉಳಿದಿದ್ದರೆ
ಶಿಕ್ಷಕರ ದಿನವು ಯಾವಾಗಲೂ
ನೀವು ಗುರುಗಳಿಗೆ ವಂದಿಸುವಿರಾದರೆ

ಪ್ರತಿ ದಿನವು ಪ್ರತಿ ಕ್ಷಣವೂ ವಿಶೇಷ
ನಾವು ಅಹಂಕಾರ,ಸ್ವಾರ್ಥವನ್ನು ಮರೆತರೆ,
ಪ್ರೀತಿ,ಸ್ನೇಹ,ವಂದನೆಗಳನ್ನು ಕೊಡುವುದನ್ನಷ್ಟೆ ಚಿಂತಿಸಿದರೆ.

Thursday, August 4, 2011

ಮಳೆ ಗೆಳತಿ ... ನೀನೀಕೆ ಬರುತಿ ?

ಹೇ ವರ್ಷಧಾರೆ
ನೀ ಎಷ್ಟು ವಿಚಿತ್ರ ಗೆಳತಿ
ಬೇಸಿಗೆಯಲ್ಲಿ ಬಾಯಾರಿದ ಗೆಳೆಯನಿಗೆ
ತಂಪನುಣಿಸಲೆಂದೇ ಬರುವೆಯಾ ?

ಕಾದು ಕಾದು ಬತ್ತಿರುವ ಭಾವದ ತೊರೆಯ
ಮತ್ತೆ ಉಕ್ಕಿಸಲೆಂದೇ ಬರುವೆಯಾ ?

ನೀ ಬಂದೊಡನೆ ಅರಳುವ ಗೆಳೆಯನ
ಹಸಿರು ಮೊಗವ ನೋಡಲು ಬರುವೆಯಾ ?
ನಿನ್ನ ಕಂಡೊಡನೆ ಹರಿದಾಡುವ
ಆ ಚೈತನ್ಯದ ನೀರ ನೋಡಲು ಬರುವೆಯಾ ?

ನೀ ಬರುವೆ ಎಂದೊಡೆ ವಟವಟಗುಟ್ಟುವ
ಗೆಳೆಯನ ಆ ಕೂಗ ಕೇಳಲೆಂದೇ ಬರುವೆಯಾ ?
ನಿಮ್ಮಂತೆ ಈ ಮಳೆಯಲಿ ಹೊಸ ಹ್ರದಯಗಳು
ಹಳೆ ರೀತಿ ಸೇರಲೆಂದೆ ಬರುವೆಯಾ ?


ಪುಟ್ಟ ಕಂದ ನೆನೆಯಾಯಬಾರದು ಎಂದು
ಕೊಡೆತರುವ ತಾಯಿಯ ಆ ಅಗಣಿತ ಮಮತೆಯ
ತೋರಿಸಲು ಬರುವೆಯಾ ?
ಹೊಸ ಬೆಳಕನು , ತುಸು ನೆಮ್ಮದಿಯನು ಬಯಸುವ
ಆ ನೇಗಿಲ ಯೋಗಿಯ ಬದುಕಿಸಲೆಂದೇ ಬರುವೆಯಾ ?

ಹೇಳು ಗೆಳತಿ ನೀನೇಕೆ ಬರುವೆ ?
ಈ ಗೆಳೆಯನೆದೆಯೊಳಗೆ ಹೊಸ ಕಲರವವ ತರುವೆ ?

Friday, February 18, 2011

ಹೀಗೊಂದು,ಪ್ರೇಮಿಗಳ ದಿನದಂದು!!!

ಇಂದು ,ಇದ್ದವರೆಲ್ಲಾ
ನಿಮ್ಮವರನ್ನು ನೆನೆಸಿಕೊಳ್ಳಿ
ಇರಬಹುದು,ಇಲ್ಲದವರೂ
ಅವರು ನಿಮ್ಮೊಳ್ಳೆತನವನ್ನು ನೆನೆಸಿಕೊಳ್ಳಿ
ಏನಾದರೂ ಆಗಲಿ,ಇಂದೊಮ್ಮೆ
ನಿಮ್ಮ ನಿರ್ಮಲ ಹ್ರದಯವನ್ನು ನೆನೆಸಿಕೊಳ್ಳಿ

ಇದ್ದವರು ವಿಷ್ ಮಾಡಿ,
ಇಲ್ಲದವರೂ ವಿಷ್ ಮಾಡೀ ನಿಮ್ಮ ಒಳ್ಳೆತನಕ್ಕೆ!!
ನೀವೂ ಹೇಳಿ ಇದ್ದವರಂತೆ
"ಬಿಡಲಾರೆನು ನಿನ್ನ ಸತ್ತರೂ....."ಎಂದು
ಜೊತೆಗೆ ಸೇರಿಸಿ
"ಹೀಗೇ ಇರುವೆವು ನಾವು ಎಂದೆಂದೂ"


ಪ್ರೀತಿಸಿ ಹೊಸಬರಾದರೆ
ನಿಮ್ಮನ್ನೇ,ನಿಮ್ಮ- ಒಳ್ಳೆಯ ಗುಣಗಳನ್ನೇ
ಯಾಕೆಂದರೆ ಬ್ರೇಕಪ್ಪಿನಲ್ಲಿ
ಬೈದುಕೊಳ್ಳುವೆವು ನಾವು ನಮ್ಮನ್ನೇ!!!!


ಎಲ್ಲರಿರೂ "ಪ್ರೇಮಿಗಳ ದಿನ"ದ ಶುಭಾಷಯ
ಪ್ರೀತಿಸಿ ನಿಮ್ಮನ್ನೇ,ನಿಮ್ಮ ಒಳ್ಳೆಯತನವನ್ನೇ
ಮೊದಲು,ಎಂಬುದು ನನ್ನ ಆಶಯ!!!!