Saturday, November 8, 2014

ಮಣ್ಮುಕ ನಜರು

ನಮಸ್ಕಾರ ಗೆಳೆಯರೆ...ಹೆಂಗಿದೀರಾ ?
ಜೀವನದಲ್ಲಿ ಉದರನಿಮ್ಮತ್ತ ಮಾಡುವ ಕಾರ್ಯಗಳು ಮತ್ತು ಮನಸ್ಸಿಗೆ ಹಿತಕೊಡುವಂಥ ಕೆಲಸಗಳು ಇವುಗಳ ನಡುವಿನ ತಿಕ್ಕಾಟದ ನಡೀತಾನೇ ಇರತ್ತೆ...ನಾವು ಮಾಡುತ್ತಿರುವುದು ಒಂದು ,ಅಂದುಕೊಳ್ಳುವುದು ಇನ್ನೊಂದು...ಏನೋ ಪರಿಸ್ಥಿತಿ ಎಂದು ಕೊಂಡು ಮುಂದುವರೆಯುತ್ತಿರುತ್ತೇವೆ..ಮನಸ್ಸಿಗೆ ಖುಷಿ ಕೊಡುವ ಕೆಲಸಗಳನ್ನು ಅವಕಾಶ ಸಿಕ್ಕಾಗಿ ಮಾಡಿ ಉಲ್ಲಸಿತರಾಗ್ತೇವೆ,ಸಿಗದೆ ಹೋದಾಗ ನಿರಾಸೆಗೊಳ್ತೇವೆ...ಹೀಗಾಗಿ ಇವುಗಳನ್ನೇ ಇಟ್ಟುಕೊಂಡು ನನ್ನ ವಿಚಾರವನ್ನು ಕವನದ ರೂಪದಲ್ಲಿ ಹೇಳುವ ಪ್ರಯತ್ನ...ದಯಮಾಡಿ  ಓದಿ,ಎಂದಿನಂತೆ ತಪ್ಪು-ಒಪ್ಪು ತಿಳಿಸಿ,ಅನಿಸಿಕೆಗಳನ್ನಾ ಹಂಚಿಕೊಳ್ತೀರಾ ಅಲ್ವಾ ?? ಕಾಯ್ತಿರ್ತೀನಿ :)..


ಜಡವು ಬದುಕಿನ ಹೊಣೆಯು,ಬಾಳ ಚೇತನ ಚಿಗುರು
ಬೂಮರಂಗಿನ  ನಡಿಗೆ , ಬಿಡದು ಮಣ್ಮುಕ ನಜರು

ಜಡವೆಂದರೆ ಚಿರ ಸ್ಥಿರವಲ್ಲಾ ಜಗ,
ಪಚನ ಪ್ರಚೋದಿತ ಪರಿಭ್ರಮಣೆ.
ಸೃಷ್ಟಿ-ಶೈಶವ-ಯೌವನ-ಮುಕ್ತಿಯ
ಪುನರಪಿ ಪುನರಪಿ ಅನುಕರಣೆ||ಜಡವು||

ಛೇದನ-ಬಂಧನ ಕರ್ಮಾಲಿಂಗನ
ಹೊಸದದು ಏನಿದೆ ನಡುವಿನಲಿ ?
ಹೊಸದದು ಹಳೆಯದು,ಹಳೆಯದೇ ಹೊಸದು
ಸಾಗುವ ಸಮಯದ ತಿರುವಿನಲಿ||ಜಡವು||

ಕನಲಿದ ಮನದಾ ಪುನರುತ್ಥಾನಕೆ
ಅವತರಿಸುವುದು ಚೇತನವು .
’ಅಲ್ಲ’ವ ಮರೆಸಿ,ಬೆಲ್ಲವ ತೋರಿಸಿ
ಕಲ್ಲನು ಕಡೆಸುವ ಸಾಧನವು ||ಜಡವು||

ನೊಗವದು ವೀಣೆ ಮೀಟುವುದರಿಯಲು
ನೂರಿದೆ ರಾಗವು ತಂತಿಯಲೇ.
ಬೇಸರ ಜೀಕುವ ಅರಿವಿನ ಹಾಣೆಯು
ಅಡಗಿದೆ ಒಳಮನೆ ಜಂತಿಯಲೇ||ಜಡವು||

ಜಡವು ಬದುಕಿನ ಹೊಣೆಯು,ಬಾಳ ಚೇತನ ಚಿಗುರು
ಬೂಮರಂಗಿನ ನಡಿಗೆ , ಬಿಡದು ಮಣ್ಮುಕ ನಜರು

-ಚಿನ್ಮಯ ಭಟ್ಟ



ಟಿಪ್ಪಣಿ:

ಮಣ್ಮುಕ ನಜರು : ಎರಡು ತಲೆಗಳಿರುವ ಹಾವಿನ ದೃಷ್ಟಿ.. ನಮ್ಮನೆ ಕಡೆ ಈ ಎರಡು ಮುಖದ ಹಾವಿಗೆ  ಮಣ್ಮುಕ ಹಾವು ಎಂದು ಕರೆಯುವುದನ್ನು ಬಲ್ಲೆ..ಹಾಗಾಗಿ ಬಳಸಿಕೊಂಡೆ.. ಇಲ್ಲಿ  ಇದನ್ನು ಯಾವಾಗಲೂ ಪರ-ವಿರುಧ್ಧವಾಗಿ ಬರುವ  ಯೋಚನೆಗಳಿಗೆ ಸಮೀಕರಿಸಬಹುದು...

ಬೂಮರಂಗು : BOOMRANG ,ಅಸ್ತ್ರೇಲಿಯಾದ ಆದಿವಾಸಿಗಳು ಬಳಸುತ್ತಿದ್ದ ಆಯುಧ..ಬೇಟೆಗಾರನ ಕೈಯ್ಯಿಂದ ಹೊರಟು ಬೇಟೆಯಾಡಿ ವಾಪಸ್ಸು ತಿರುಗಿ ಬೇಟೆಗಾರನ ಕೈಸೇರುತ್ತಿದ್ದುದು ಇದರ ವಿಶೇಷ. ಇಲ್ಲಿ ನಮ್ಮ ಪ್ರಯತ್ನಗಳೆಲ್ಲಾ ಏನೇ ಇದ್ದರೂ ಕೊನೆಗೆ ನಾವು  ಮೊದಲಿದ್ದಲ್ಲಿಗೆ ತಲುಪುವುದರ ಸಂಕೇತವಾಗಿ ಅರ್ಥೈಸಿಕೊಳ್ಳಬಹುದು...

ಪಚನ ಪ್ರಚೋದಿತ ಪರಿಭ್ರಮಣೆ :ಪಚನ ಅಂದರೆ ಜೀರ್ಣವಾಗುವುದು .ಪರಿಭ್ರಮಣೆ ಅಂದರೆ ಸುತ್ತುವುದು..ಹೊಟ್ಟೆಪಾಡಿಗಾಗಿ ಮಾಡುವ ಕಾರ್ಯಗಳು ಎಂದು ತಿಳಿದುಕೊಳ್ಳಬಹುದು.

ಪುನರಪಿ ಪುನರಪಿ: ಮತ್ತೆ ಮತ್ತೆ

ಕನಲಿದ : ಬೇಸರಗೊಂಡ

ಪುನರುತ್ಥಾನ : ಮರು ಹುಟ್ಟು,ಮತ್ತೆ  ಅಸ್ತಿತ್ವಕ್ಕೆ ಬರುವುದು,ಪುನಃ ಶುರುವಾಗುವ ಬೆಳವಣಿಗೆ

ಬೇಸರ ಜೀಕುವ  :ಜೀಕು,ಜೋರಾಗಿ ತಳ್ಳು ,ನೂಕು.

ಅರಿವಿನ ಹಾಣೆಯು: ಹಾಣೆ -ಕೋಲು,ದಾಂಡು..ನಮ್ಮೂರಿನಲ್ಲಿ ಗಿಲ್ಲಿ-ದಾಂಡುವಿಗೆ ಹಾಣೆ-ಗಿಂಡು ಎಂದು ಕರೆಯುವುದುಂಟು. ಇಲ್ಲಿ   ಗಿಲ್ಲಿಯನ್ನು ಮಣ್ಣಿನ ಸಣ್ಣ ಕುಳಿಯಿಂದ ಚಿಮ್ಮಿಸುವ ಕ್ರಿಯೆಗೆ ಜೀಕುವುದು ಎಂದು ಬಳಸುತ್ತಾರೆ.ಹೀಗೆ  ಅರಿವು ಬೇಸರವನ್ನು ಹೊರಗೆ ಹಾರಿಸುವ ಸಾಧನ ಎನ್ನುವ ಅರ್ಥದಲ್ಲಿ ಬಳಸಿದ್ದು

ಒಳಮನೆ ಜಂತಿ :ಜಂತಿ ಎಂದರೆ  ಕೈ ಅಟ್ಟ..ಸಾಮಾನ್ಯವಾಗಿ ಅಡಿಗೆ ಮನೆ ಸುತ್ತ ಮುತ್ತಲು ಇರುವ ಪಾತ್ರೆ,ಡಬ್ಬಿಗಳನ್ನು ಇಡುವ ಸಣ್ಣ ಅಟ್ಟ..ಇಲ್ಲಿ ನಮ್ಮೊಳಗೇ ಬೇಸರವನ್ನು ಓಡಿಸುವ ಅರಿವು ಅಡಗಿದೆ ,ಅದನ್ನು ನಾವು ಹುಡುಕುತ್ತಾ ಹೋಗಬೇಕು ಎನ್ನುವ ಭಾವದಲ್ಲಿ ಬಳಸಿದ್ದು..

ಈ ಕವನವನ್ನು ವಾಚಿಸುವ ಪ್ರಯತ್ನವನ್ನೂ ಮಾಡಿದ್ದೇನೆ ದಯಮಾಡಿ ಕೇಳಿ ಹೆಂಗಿದೆ ಹೇಳಿ ...
https://soundcloud.com/chinmay-bhat-3/0inwdpw2cbwl


ಇವುಗಳ  ಜೊತೆಗೆ ನಿಮ್ಮ ಅನಿಸಿಕೆಗಳೂ ಬಹಳ ಮುಖ್ಯ..ಅವುಗಳನ್ನು ತಾವು  ಬಿಚ್ಚುಮನಸ್ಸಿನಿಂದ ಹಂಚಿಕೊಳ್ಳುವಿರೆಂದು ನಂಬಿದ್ದೇನೆ.
ವಂದನೆಗಳು :)