Saturday, November 9, 2019

ಮೂವರ್ಸ್& ಪ್ಯಾಕರ್ಸ್

ಮನೆಯೆದುರು ಮೂವರ್ಸ್& ಪ್ಯಾಕರ್ಸ್ ಗಾಡಿ ಬಂದು ನಿಂತಿತ್ತು
ಅಪಾರ್ಟ್‍ಮೆಂಟಿನ ಹೊಸ ಮನೆ ಬಣ್ಣ ಬಳಿದುಕೊಂಡು ಕಾದು ಕುಳಿತಿತ್ತು
ಇಬ್ಬರೂ ಜತನದಿಂದ ಕೂಡಿಟ್ಟ ವಸ್ತುಗಳೆಲ್ಲ ಬಾಕ್ಸಿನಲ್ಲಿ ಬಂಧಿಯಾಗಿದ್ದವು
ಕೊನೆಯ ಬಾರಿ ಕದ ಹಾಕುವ ಮುನ್ನ ಇಬ್ಬರ ಕಣ್ಣುಗಳು ಒದ್ದೆಯಾಗಿದ್ದವು

ನಿಜ, ಅಪ್‍ಗ್ರೇಡ್ ಆಗಿತ್ತು ಬದುಕು 1 ಬಿ.ಹೆಚ್.ಕೆ ಇಂದ 2 ಬಿ.ಹೆಚ್.ಕೆಗೆ
ಹೆಚ್ಚಾಗುತ್ತಿತ್ತು ಸಂಬಳ ಮುಂದಿನ ಡಿಸೆಂಬರ್ ಪ್ರಮೋಷನ್‍ಗೆ
ಆದರೆ, ರಿಮೋಟಿಗಾಗಿನ ಜಗಳ, ಬಾತ್‍ರೂಮಿಗಾಗಿನ ಅವಸರ
ಬಜೆಟ್ಟಿನಲ್ಲಿಲ್ಲ ಎಂಬ ಬೇಸರ, ಬಹುಷಃ ಇಂದಿಗೆ ಕೊನೆಗಾಣುತ್ತಿತ್ತು

ಮಾಡ್ಯುಲರ್ ಕಿಚನ್, ಹೊಗೆಹೋಗುವ ಚಿಮಣಿ, ಎರಡೆರಡು ಬಾಲ್ಕನಿ
ಕದತೆರೆದರೆ ಕಾಣುವ ಲಿಫ್ಟು, ಬದಲಾವಣೆ ಬಯಸಿದ್ದೇ ಆದಂತಿತ್ತು
ರುಚಿಯಾಗದ ಮೊದಲ ಅಡುಗೆ, ಮುಗಿಯದ ಟೆರೇಸ್ ಮೇಲಣ ಮಾತು
ಕಾಯುವಿಕೆಗೆ ಸಾಥ್ ಕೊಟ್ಟ ಮನೆ ಮೆಟ್ಟಿಲುಗಳು, ಮತ್ತೆ ಇವೆಲ್ಲ ಸಿಗಲಾರದೆನಿಸುತ್ತಿತ್ತು

ಬಾರದ ನೀರು, ಕೈಕೊಟ್ಟ ಪಂಪು, ಅವರಿವರ ಕಿರಿಕಿರಿ
ಜೇಬು ಹಿರಿದಾದಂತೆ ಸಮಸ್ಯೆಗಳೂ ತೆರೆದುಕೊಂಡಿದ್ದವು
ಸೆಕ್ಯೂರಿಟಿಯ ಸಮವಸ್ತ್ರ, ಸಿ.ಸಿ.ಟಿ.ವಿಯ ಕೆಂಪುದೀಪ
ಮೆಂಟೆನೆನ್ಸ್ ಎಂಬ ಕಿಟಕಿ ತೆರೆದು ನೆಮ್ಮದಿಯ ಆಸೆ ಹುಟ್ಟಿಸಿದ್ದವು

ಹೋಗಲೇಬೇಕಲ್ಲ ಒಂದಲ್ಲ ಒಂದು ದಿನ ಬಾಡಿಗೆ ಮನೆಯ ಬಿಟ್ಟು, ಹೊರಟಿದ್ದಾಯ್ತು
ಆದರೆ ಮನೆ ಬಿಟ್ಟರೂ ಅಗ್ರೀಮೆಂಟು ಮುಗಿದಿರೂ ನೆನಪುಗಳು ಬಿಟ್ಟು ಹೋಗುವುದಿಲ್ಲ
ಹಳೆಮನೆಯ ಸಾಮಾನುಗಳ ಜೊತೆ ಹೊಸ ಕನಸುಗಳ ಬಿಚ್ಚುತ್ತಾ
ಹೊಸಮನೆಯ ಸಿಂಗರಿಸುವ ಹುಮ್ಮಸ್ಸು, ಬದುಕನ್ನು ಬೋರಾಗಿಸುವುದಿಲ್ಲ

ಮನೆಯೆದುರು ಮೂವರ್ಸ್& ಪ್ಯಾಕರ್ಸ್ ಗಾಡಿ ಬಂದು ನಿಂತಿತ್ತು
ಅಪಾರ್ಟ್‍ಮೆಂಟಿನ ಹೊಸ ಮನೆ ಬಣ್ಣ ಬಳಿದುಕೊಂಡು ಕಾದು ಕುಳಿತಿತ್ತು
ಇಬ್ಬರೂ ಜತನದಿಂದ ಕೂಡಿಟ್ಟ ವಸ್ತುಗಳೆಲ್ಲ ಬಾಕ್ಸಿನಲ್ಲಿ ಬಂಧಿಯಾಗಿದ್ದವು
ಕೊನೆಯ ಬಾರಿ ಕದ ಹಾಕುವ ಮುನ್ನ ಇಬ್ಬರ ಕಣ್ಣುಗಳು ಒದ್ದೆಯಾಗಿದ್ದವು

-ಚಿನ್ಮಯ
09/11/2019

Saturday, August 17, 2019

ಪ್ರೀತಿ

ಆನಿವರ್ಸರಿಗಳಿಗೆ ಲೆಕ್ಕವಿರಬಹುದು ಕಣೆ ಹುಡುಗಿ
ದಿನಕೊಂದು ರಂಗು ತೋರುವ ಗರಿ ಗರಿ ಪ್ರೀತಿಗಿದ್ದೀತೆ?
ಹುಣ್ಣಿಮೆಯ ಮುನಿಸು; ಅಮಾವಾಸ್ಯೆಯ ಸವಿಗನಸು
ಮಾತು ಎರಡಿದ್ದಿರಬಹುದು; ಒಂದಾಗಿ ಬದುಕಿದ್ದು ಸುಳ್ಳಾದೀತೆ?

ಕಾಲಮೇಲೆ ನಿಂತುಕೊಂಡದ್ದಾಯ್ತು; ವೀಕೆಂಡು ತಿರುಗಾಟವಾಯ್ತು
ದೂರ ಹಿಮಾಲಯದಲ್ಲಿ ಟೆಂಟು ಹೂಡಿದರೂ ಏಕಾಂತ ದಕ್ಕದಾಯ್ತು
ಕಾರ್ಪರೇಟ್ ಕಾನನದಿ ಅಲೆಯುತಾ ವಾತ್ಸಲ್ಯದ ಗುಡಿಸಿಲೊಂದ ಕಂಡೆ
ಸ್ನೇಹದ ಆಮಂತ್ರಣ, ಅಹಂ ಇಲ್ಲದ ಔತಣ; ಸಾಂಗತ್ಯದ ಅವಶ್ಯ ಮನಗಂಡೆ

ರಾತ್ರಿಯೆಲ್ಲ ಹರಟುವುದು ಏನಿರಬಹುದು? ಸ್ಲೀಪರ್ ಬಸ್ಸಿನ ಹಳೇ ಪ್ರಶ್ನೆ
ಮಾತು ಮುಖ್ಯವೇ ಅಲ್ಲ, ಮಾತಾಡುವಿಕೆಯೆ ಸುಖ; ನಡುಯೌವ್ವನದ ಪ್ರಜ್ಞೆ
ಎಲ್ಲ ಸರಿಯಾದಾಗ ಕರೆಯುವುದಕಿಂತ; ಒಟ್ಟಾಗಿ ತಪ್ಪು ಮಾಡಿವುದೆ ಅಸಲಿಯೆನಿಸಿದೆ 
ಸುಳ್ಳುಗಳ ಜೊತೆ ಸೆಲ್ಫೀಗಿಂತ; ಸತ್ಯ ಹೇಳಿ ಉಗಿಸಿಕೊಳ್ಳುವುದೇ ಸರಿಯೆನಿಸಿದೆ

ಬಕೇಟ್ ಲೀಸ್ಟು ಖಾಲಿಯಾದರೆ ಖುಷಿ; ಪ್ರಿಯಾರಿಟಿ ಲಾಸ್ಟ್ ಎಂದರೆ ಬೇಸರ
ಸಮಪಾಲು ಕಾರ್ಯರೂಪವಾಗದಿರೆ ಅಸಮತೆಗೆ ಸಮ್ಮತಿ; ಎಂದಿಗೂ ಸಮ್ಮಿಶ್ರ ಸರಕಾರ
ಅದೇಕೋ ತಮಾಷೆ ಮಾಡಿ ನಗಿಸುವುದಕಿಂತ, ನಿರಾಸೆಯ ಕೇಳಿಸಿಕೊಳ್ಳುವುದು ಇಷ್ಟವಾಗಿದೆ
ಎಲ್ಲರೆದುರು ಎದ್ದು ಕಾಣುವುದಕಿಂತ, ಎಲ್ಲರೊಳಗೊಂದಾವುದು ಆಪ್ತವಾಗುತ್ತಿದೆ

ಆನಿವರ್ಸರಿಗಳಿಗೆ ಲೆಕ್ಕವಿರಬಹುದು ಕಣೆ ಹುಡುಗಿ
ದಿನಕೊಂದು ರಂಗು ತೋರುವ ಗರಿ ಗರಿ ಪ್ರೀತಿಗಿದ್ದೀತೆ?
ಹುಣ್ಣಿಮೆಯ ಮುನಿಸು; ಅಮಾವಾಸ್ಯೆಯ ಸವಿಗನಸು
ಮಾತು ಎರಡಿದ್ದಿರಬಹುದು; ಒಂದಾಗಿ ಬದುಕಿದ್ದು ಸುಳ್ಳಾದೀತೆ?

-ಚಿನ್ಮಯ
17/08/2019

Monday, May 27, 2019

ಮಳೆಗಾಲದ ಒಂದು ದಿನ

ಮಳೆಗಾಲದ ಒಂದು ದಿನ; ವಿಶೇಷವೇನಿರಲಿಲ್ಲ
ಹಂಚಿನ ಮಾಡು ಸೋರುತ್ತಿತ್ತು; ಹೊಳೆ ತುಂಬಿ ಹರಿಯುತ್ತಿತ್ತು
"ಇಟ್ಸ್ ರೇನಿಂಗ್ ಔಟ್‍ಸೈಡ್"; ಎಲ್ಲ ಅಸ್ತವ್ಯಸ್ತ
ಕ್ಯಾಬು ಬುಕ್ ಆಗಲಿಲ್ಲ; ಫುಡ್ಡು ಡಿಲಿವರ್ ಆಗಲಿಲ್ಲ

ಮಾನ್ಸೂನು ಕೇರಳ ಮುಟ್ಟಿತಂತೆ; ಇನ್ನು ನಾಲ್ಕಾರೇ ದಿನ
ಹಪ್ಪಳ ಸಂಡಿಗೆ ಒಳಗಿಡಬೇಕು,ಕಂಬಳಿ ಕೊಪ್ಪೆ ತೆಗೆದಿಡಬೇಕು
ಬಾಕಿ ಉಳಿದಿದೆ ಕೊಡೆಯ ರಿಪೇರಿ
ನೂಕೂವರೆ ತಿಂಗಳ ಮಳೆಗೆ ತಯಾರಿ

ಥಂಡ್ ಸ್ಟೋರ್ಮು ಆಂಡ್ ರೇನಿಂಗು, ನೈಂಟಿ ಪರಸೆಂಟ್ ಛಾನ್ಸು
ಬೈಕ್ ಬಿಟ್ಟು ಕಾರಲ್ಲೇ ಓಡಾಡಬೇಕು; ಅಂಡರ್‍ಪಾಸು ಅವಾಯ್ಡ್ ಮಾಡಬೇಕು
ಮೀಟಿಂಗ್ ಇಟ್ಟ ಫಾರೆನ್ ಬಾಸು; ಆಫೀಸಿನಲ್ಲಿ ಅಧಿಕೃತ ಟೈಂ ಪಾಸು
ಒಂಭತ್ತೂವರೆಗೆ ಮುಗಿಯುವ ಆಗುವ ಸಂಭವ; ಲೇಟಾದ್ರೂ ಮ್ಯಾಚ್ ನಡೆಯೋ ಆಶಾಭಾವ

ಹೊಳೆನೀರ ಹರಿವಿನ ಮೇಲೆ ಬಿದ್ದ ಮಳೆಯ ಲೆಕ್ಕಾಚಾರ
ಪವನ ಪೌರುಷಕ್ಕೆ ತಲೆ ಬಾರಿ ಅಡಿಕೆ ಮರ ಬಿದ್ದ ಸಮಾಚಾರ
ಹರಿವ ನೀರಿನ ಎದುರು ಕಾಲಿಟ್ಟು ಪುಟ್ಟದೊಂದು ಕಟ್ಟೆ ಕಟ್ಟಬೇಕು
ತಿಳಿನೀರು ಕಟ್ಟೆ ದಾಟಿ ಕಾಲ ಸೋಂಕಿದಾಗ ಸರ್ವಾಂಗ ಪುಳಕವಾಗಬೇಕು

ಕರೆಂಟ್ ಹೋದರೆ ಇನ್ವರ್ಟರ್ ಉಂಟು; ಇಂಟರ್‍ನೆಟ್ಟಿಗೆ ಪರ್ಯಾಯವಿಲ್ಲ
ವರ್ಕಫ್ರಾಂ ಹೋಮ್ ಎಂಬ ಸಾಫ್ಟ್‍ವೇರ್ ಸುಖ ಅಂದಿಗೆ ದಕ್ಕುವುದಿಲ್ಲ
ಮನೆ ಮುಂದೆ ಬೇರೆ ಕಸ ಕಟ್ಟಿ ಡ್ರೈನೇಜು ಬ್ಲಾಕು; ರಸ್ತೆಯ ಮೇಲಿದ್ದ ನೀರೆಲ್ಲ ಕಪ್ಪು ತಪ್ಪು
ಕಟ್ಟಿದವರೋ ಅಗೆದವರೋ ಎಸೆದವರೋ, ಸೂಟು ಹಾಕಿದಾಗ ಕಾಣುವುದಿಲ್ಲ ಯಾರದೂ ತಪ್ಪು

ಬೀಜ ಮೊಳೆತು ಕುಡಿಯೊಡೆವ ಸಂಭ್ರಮ; ತೊಂದರೆಗಳ ಗಡಿ ಮೀರಿದ ಸಹನೆ
ಅಪರೂಪಕ್ಕೆ ಬಂದ ಎಳೆ ಬಿಸಿಲ ಬೆಂಕಿಪೆಟ್ಟಿಗೆಯಲ್ಲಿ ತುಂಬಿಡುವ ಕಲ್ಪನೆ
ಇತ್ತ ಗಿಜಿಗುಡುವ ಬಜಾರಕ್ಕೆ ಮಳೆಯ ಸಿಂಚನ; ಬಾಯ್ತೆರೆದ ಇಳೆಗೆ ಕೊಂಚ ಸಾಂತ್ವನ
ಸೂಟುಧಾರಿಗಳ ಶಾಪ, ಟ್ರಾಫಿಕ್ಕೆಂಬ ಶಕ್ತಿಕೂಪ, ಸರ್‍ಚಾರ್ಚುಗಳ ಅಟಾಟೋಪ

ಮನುಷ್ಯ ಒಬ್ಬನೇ, ಭೂಮಿಯೊಂದೇ
ಷಹರಕ್ಕೂ ಹಳ್ಳಿಗೂ ಅದೆಷ್ಟು ನೋಟಿನ ಅಂತರ
ಅದೆಂಥಾ ನೋಟದ ಅಂತರ

ಮಳೆಗಾಲದ ಒಂದು ದಿನ; ವಿಶೇಷವೇನಿರಲಿಲ್ಲ
ಹಂಚಿನ ಮಾಡು ಸೋರುತ್ತಿತ್ತು; ಹೊಳೆ ತುಂಬಿ ಹರಿಯುತ್ತಿತ್ತು
"ಇಟ್ಸ್ ರೇನಿಂಗ್ ಔಟ್‍ಸೈಡ್"; ಎಲ್ಲ ಅಸ್ತವ್ಯಸ್ತ
ಕ್ಯಾಬು ಬುಕ್ ಆಗಲಿಲ್ಲ; ಫುಡ್ಡು ಡಿಲಿವರ್ ಆಗಲಿಲ್ಲ
-ಚಿನ್ಮಯ
27/5/2019

Wednesday, May 1, 2019

ಆರಂಭ (ಭಾಗ-೨)

(ವಿ.ಸೂ: ಆತ್ಮೀಯ ಓದುಗರ ಸಲಹೆಯ ಅನುಸಾರ ಶತಭಿಷ ಎಂಬ ಪಾತ್ರದ ಹೆಸರನ್ನು ಆದಿ ಎಂದು ಬದಲಿಸಲಾಗಿದೆ)
"ಏನ್ ಮಾಡ್ಲಿ ಹೇಳೋ...." ಅವಲೋಕನಾ ಆದಿಯ ಭುಜ ಹಿಡಿದು ಅಲ್ಲಾಡಿಸುತ್ತಿದ್ದಳು.
"ಏನ್ ಮಾಡ್ಲಿ ಅಂದ್ರೆ? ಮುಚ್ಕೋಂಡ್ ಐಸ್‍ಕ್ರೀಮ್ ತಿನ್ನು..." ಆದಿ ಆ ಕಡೆಯಿಂದ ನಗುವೊಂದನ್ನು ಅಪೇಕ್ಷಿಸುತ್ತಿದ್ದ.
"ಊಹುಂ" ಅವಿ ಅಪರೂಪಕ್ಕೆಂಬಂತೆ ತಲೆ ಕೆಳಹಾಕಿ ಸುಮ್ಮನಾದಳು.
ಆದಿಯ ಮುಖ ಪೆಚ್ಚಾಯಿತು.
ಆಕೆಯನ್ನು ಸಮಾಧಾನಿಸುವುದು ಹೇಗೆಂದು ತಿಳಿಯಲಿಲ್ಲ.
ತಾನೇ ಎದ್ದು ಹೋಗಿ ಐಸ್ ಕ್ರೀಮ್ ತೆಗೆದುಕೊಂಡು ಬಂದ...
"ತಗೋ...." ಆಕೆಯ ಟೇಬಲ್ ಎದುರಿಗಿಟ್ಟ.
ಆಕೆ ವಿಶೇಷ ಆಸಕ್ತಿಯನ್ನೇನೂ ತೋರಿಸಲಿಲ್ಲ...
"ಏನಾಯ್ತೇ? ಯಾಕೆ ಐಸ್‍ಕ್ರೀಮ್ ಬೇಡ್ವಾ?" ಆತನ ಮಾತಿನಲ್ಲಿ ಅತೀವ ಕಾಳಜಿಯಿತ್ತು.
"ಹಂಗಲ್ವೋ...." ಆಕೆ ಕಾಟಾಚಾರಕ್ಕೆಂಬಂತೇ ಸ್ಪೂನ್ ಒಂದನ್ನು ಎತ್ತಿಕೊಂಡಳು.
"ಏನ್ ಹೇಳು..." ಆದಿ ಆಕೆಯ ಕಣ್ಣಲ್ಲಿ ಕಣ್ಣಿಟ್ಟು ಕೇಳಿದ್ದ.
"ಏನಿಲ್ವೋ... ನೀನ್ ಬೇಜಾರ್ ಮಾಡ್ಕೋಬಾರ್ದು"
"ಹೂಂ" ಆತ ಮತ್ತದೇ ಕಾಳಜಿಯಿಂದ ಉತ್ತರಿಸಿದ್ದ...
"ಪಕ್ಕಾ?"
"ಹೂಂ"
ಆಕೆ ಕೊನೆಗೂ ನಿಜ ಹೇಳಿದ್ದಳು...
"ಐಸ್‍ಕ್ರೀಮ್ ತಿಂದ್ರೆ ಮಾತಾಡಕ್ಕ್ ಆಗಲ್ವಲ್ಲಾ....ಅದಕ್ಕ್ ಬೇಡಾ ಅಂದೆ ಅಸ್ಟೇ..."
ಗೋಳು ಹೊಯ್ದುಕೊಂಡಿದ್ದು ಸಾಕೆನಿಸಿತ್ತು...
"ಏಯ್..." ಆತನ ಮುಖ ನಾಚಿಕೆಯಿಂದ ಕೆಂಪಾಗಿತ್ತು. ಮುಖದಲ್ಲಿ ಮಂದಹಾಸ ಮೂಡಿತ್ತು.
ಆಕೆ ಚಪ್ಪಾಳೆ ತಟ್ಟಿ ನಕ್ಕಳು. ಪಾಪ ಅನಿಸಿ ಆತನನ್ನು ಸಮಾಧಾನಿಸಿದಳು...
"ಓ.ಕೆ ಅಂದೆ ಕಣೋ..." ತನ್ನ ನಿರ್ಧಾರವನ್ನೂ ತಿಳಿಸಿದಳು...
ಐಸ್‍ಕ್ರೀಮ್ ಮುಗಿಸಿ ತಾನೇ ಬಿಲ್ ಕೊಟ್ಟು ಆಕ್ಟಿವಾ ಚಾಲೂ ಮಾಡಿ ಹೊರಟಳು.
ಆದಿ ಹಿಂದೆ ಕುಳಿತಿದ್ದ. ಆಕೆ ಗಾಡಿ ಓಡಿಸುತ್ತಿದ್ದಳು. ಅದಾಗಲೇ ಕಪ್ಪಾಗಿತ್ತು. ಹೆಬ್ಬಾಳದ ಫ್ಲೈ ಓವರ್ ವಾಹನಗಳಿಂದ ತುಂಬಿ ತುಳುಕುತ್ತಿತ್ತು. ಒಂದುವರೆ ಅಡಿ ಜಾಗ ಕಂಡರೆ ಸಾಕು ಅವಿ ಅಲ್ಲಿ ಗಾಡಿ ನುಗ್ಗಿಸುತ್ತಿದ್ದಳು. ಯರ್ರಾಬಿರ್ರಿ ಬ್ರೇಕ್ ಹಾಕಿದಾಗ ಬೈಯ್ಯುತ್ತಿದ್ದಳು. ತನ್ನನ್ನು ಗುರಾಯಿಸುವವರನ್ನು ಅಷ್ಟೇ ಗಂಭೀರವಾಗಿ ಗುರಾಯಿಸುತ್ತಿದ್ದಳು. ಅವರು ಕಣ್ಣನ್ನು ಬೇರೆಡೆ ಹೊರಳಿಸುತ್ತಿದ್ದರು.
ಆದಿ ಫ್ಲೈ ಓವರಿನ ಮೇಲಿನಿಂದ ಕೆಳಗಡೆ ನೋಡುತ್ತಿದ್ದ. ಮಾನ್ಯತಾ ಟೆಕ್‍ಪಾರ್ಕಿನಲ್ಲೋ, ಹೆಬ್ಬಾಳದ ಆಚೀಚಿನ ಕಛೇರಿಗಳಲ್ಲೋ ಕೆಲಸ ಮುಗಿಸಿದ ಜನ ಮನೆಯತ್ತ ಧಾವಿಸುತ್ತಿದ್ದರು. ಅತ್ತ ಕಡೆಯಿಂದ ಏರ್‍ಪೋರ್ಟಿಗೆ ಹೋಗುವ ಟ್ಯಾಕ್ಸಿಗಳು ರಭಸದಿಂದ ಮುನ್ನುಗ್ಗುತ್ತಿದ್ದವು. ನೈಟ್‍ಶಿಫ್ಟಿನ ಮಂದಿ ಹೊತ್ತ ಟ್ರಾವೆಲರ್‍ಗಳು ಮಾರತ್ಹಳ್ಳಿಯ ಕಡೆ ತೆರಳುತ್ತಿದ್ದವು. ಗಳಿಗೆಗೊಮ್ಮೆ ಹಾರನ್ನುಗಳು ಕಿವಿಗೆ ಅಪ್ಪಳಿಸುತ್ತಿದ್ದವು. ಆ ಗದ್ದಲ, ಸೆಕೆ, ಟ್ರಾಫಿಕ್ಕಿನ ಮಧ್ಯೆ ಅವಲೋಕನಾ ಆದಷ್ಟು ಬೇಗ ಮೇಖ್ರಿ ಸರ್ಕಲ್ ದಾಟಲು ಹವಣಿಸುತ್ತಿದ್ದಳು. ಕಪ್ಪು ಹೆಲ್ಮೆಟ್‍ನಿಂದ ಕೂದಲ ಎಳೆಗಳು ಕದ್ದು ಹೊರಬಿದ್ದಿದ್ದವು. ಹಿಂದು ಮುಂದಿನ ವಾಹನಗಳ ಬೆಳಕಿಗೆ ಬಂಗಾರದ ಬಣ್ಣ ತಳೆದಿದ್ದವು. ಗಾಡಿ ಹತ್ತಿದಾಗಲೆಲ್ಲಾ ಯಾವಾಗಲೂ ಬಡ ಬಡ ಮಾತಾಡುತ್ತಿದ್ದ, ಟ್ರಾಫಿಕ್ಕಿನ ಬಗ್ಗೆ ರನ್ನಿಂಗ್ ಕಾಮೆಂಟ್ರಿ ಕೊಡುತ್ತಿದ್ದ ಹುಡುಗಿ ಅಂದು ಅದೇಕೋ ತೀರಾ ಸುಮ್ಮನಿದ್ದಳು.
"ಏನಾಯ್ತೆಲೇಯ್? ತಲೆ ನೆಟ್ಟಿಗಿಟ್ಕೊಂಡ್ ಗಾಡಿ ಓಡ್ಸು...." ಆದಿ ಎಂದಿನ ಲಹರಿಯಲ್ಲಿ ಮಾತಾಡಿದ್ದ.
"ಹೂಂ ಕಣೋ...ನಿನ್ನೇನ್ ರೋಡಿಗ್ ಹಾಕಲ್ಲಾ...ಡೋಂಟ್ ವರಿ..." ಆಕೆ ಎಂದಿನಂತೇ ಉತ್ತರಿಸಿದ್ದಳು.
ಟ್ರಾಫಿಕ್ಕಿನ ಗಲಾಟೆಯಲ್ಲೂ ಮತ್ತದೇ ಮೌನ.
ಆದಿ ಆಕೆಯ ಮಾತಿಗಾಗಿ ಕಾಯುತ್ತಿದ್ದ. ಆಕೆ ಮಾತಾಡಲೇ ಇಲ್ಲ.
ಆತನೂ ಸುಮ್ಮನೆ ಕೂತಿದ್ದ. ಆಕೆ ಕೊನೆಗೂ ಸಿಗ್ನಲ್ ಒಂದರಲ್ಲಿ ಗಾಡಿ ನಿಂತಿತು.
ಆಕೆ ತಿರುಗಿ ಆತನನ್ನೊಮ್ಮೆ ನೋಡಿದ್ದಳು.
"ಇನ್ನೆಷ್ಟ್ ದಿನ ಹಿಂಗ್ ಇರಕಾಗತ್ತೋ ಗೊತ್ತಿಲ್ಲ ಕಣೋ" ಕಣ್ಣುಗಳೇ ಮಾತಾಡಿದ್ದವು.
ಆಕೆಗೆ ಸೆಲೆಬ್ರಿಟಿಗಳ ಕಷ್ಟದ ಅನುಭವವಿತ್ತು.
ಒಮ್ಮೆ ಕಿರುತೆರೆಯಲ್ಲಿ ಹಿಟ್ ಅನಿಸಿಕೊಂಡರೆ, ಪ್ರೈವಸಿ ಎನ್ನುವುದನ್ನು ಹರಾಜಿಗಿಟ್ಟಂತೆ ಆಗುತ್ತಿತ್ತು. ಪಾನಿಪುರಿ ತಿನ್ನಲೆಂದು ರೋಡ್ ಸೈಡಲ್ಲಿ ನಿಂತರೆ ಸೆಲ್ಫಿಗೆ ಪೋಸು ಕೊಟ್ಟೇ ಸಾಕಾಗುತ್ತಿತ್ತು. ಪಾರ್ಕಿನಲ್ಲಿ ಓಡಲು ಹೋದರೆ ಹೆಜ್ಜೆಗೂ ಹಲ್ಲುಗಿಂಜಿ ಆಂಟಿಯಂದಿರ ಬಳಿ ಮಾತಾಡಬೇಕಿತ್ತು. ಯಾವುದೋ ಬಟ್ಟೆ ತೊಟ್ಟು ಜಯನಗರಕ್ಕೋ ಮಲ್ಲೇಶ್ವರಕ್ಕೋ ಚಿಕ್ಕಪೇಟೆಗೋ ಹೋಗಿ ಬೀದಿ ಬೀದಿ ಅಲೆದು ಶಾಪಿಂಗ್ ಮಾಡುವ ಸೌಭಾಗ್ಯ ಕಳೆದುಕೊಳ್ಳಬೇಕಿತ್ತು.
"ಏನಿಲ್ಲಾ ಕಣೆ. ತಲೆ ಕೆಡಸ್ಕೋಬೇಡಾ...ಅವಕಾಶ ಸಿಕ್ಕಾಗ ಬೇಡಾ ಅನ್‍ಬಾರ್ದು..." ಆತ ಹಾರನ್ ಸದ್ದಿನ ನಡುವೆಯೇ ಕಿರುಚಿ ಹೇಳಿದ್ದ...ಸಿಗ್ನಲ್ ಬಿಟ್ಟಿತ್ತು.
"ಹೂ ನೋಡಣಾ" ಎಂಬಂತೇ ಆಕೆ ಹೇಳಿದಂತಿತ್ತು. ಸ್ವಷ್ಟವಾಗಿ ಆದಿಗೆ ಕೇಳಿಸಲಿಲ್ಲ...
"ಡೋಂಟ್ ವರಿ" ಎನ್ನುತ್ತಾ ಆಕೆಯ ಭುಜದ ಮೇಲೆ ಕೈಯ್ಯಿಟ್ಟಿದ್ದ.
ಥ್ಯಾಂಕ್ಸ್ ಎಂಬಂತೆ ಆಕೆ ತಲೆ ಹೊರಳಿಸಿದ್ದಳು. ಅರೆಕ್ಷಣಕ್ಕೆ ಅಡ್ಡಬಂದ ಬೈಕಿನವನಿಗೆ
"ಏಯ್ಯ್..." ಎಂದಿದ್ದಳು...ಆದಿ ಕೈ ಹಿಂತೆಗೆದುಕೊಂಡಿದ್ದ...ನಿಧಾನವಾಗಿ ಕಾರುಗಳ ಮಧ್ಯೆ ತೂರುತ್ತಾ ಆಕ್ಟಿವಾ ಮೇಖ್ರಿ ಸರ್ಕಲ್ ಕಳೆದು ಆಕೆಯ ಪಿ.ಜಿ ಹತ್ತಿರ ಬಂದಿತ್ತು. ಅಲ್ಲಿಂದ ಆದಿ ಬಸ್ಸ್ ಹತ್ತುತ್ತಿದ್ದ.
"ಬಸ್ ಸಿಗತ್ತಲ್ವೇನೋ?" ಆಕೆ ಎಂದಿನಂತೇ ಕೇಳಿದ್ದಳು. ಕೊಂಚ ರಾತ್ರಿಯಾಗಿತ್ತು.
"ಹೂಂ ಕಣೆ..ನಿಂಗ್ ಏನ್ ಪ್ರಾಬ್ಲಂ ಇಲ್ಲಾ ಅಲ್ವಾ? ರಾತ್ರಿ ಆಗಿದೆ..." ಬೇಡವೆಂದರೂ ಆತನ ಬಾಯಿಯಿಂದ ಮಾತು ಹೊರಟಿತ್ತು.
"ಅಯ್ಯೋ ಹೆದ್ರಿಕೆ ಕಣೋ...ಒಂಟಿ ಹೆಂಗ್ಸು...ರಾತ್ರಿ ಹತ್‍ಗಂಟೆ ಆಗೋಗಿದೆ...ಯಾರಾದ್ರೂ ಎತ್ತಾಕ್ಕೊಂಡ್ ಹೋದ್ರೆ...ಬಾರೋ...ನನ್ನ್ ಪ್ರೊಟೆಕ್ಟ್ ಮಾಡಕ್ಕೆ...ಬಟ್ ನಮ್ಮ್ ಪಿ.ಜಿ ಎದ್ರುಗಡೆ ಎರಡ್ ನಾಯಿ ಇರತ್ತಪ್ಪಾ...ನಿಂಗ್ ಹೆದ್ರಿಕೆ ಆಗಲ್ವಾ?" ಆಕೆ ನಗುತ್ತಾ ಕೇಳಿದ್ದಳು. ಆತನಿಗೆ ಆಕೆಯ ನಗು ಕಾಣಿಸಿರಲಿಲ್ಲ. ಆದರೆ ಆ ಕಣ್ಣಲ್ಲಿ ನಗೆಯ ಮಿಂಚು ಕಂಡಿತ್ತು.
"ತಲೆ ನಿಂದು" ಎಂದು ಹೆಲ್ಮೇಟಿನ ಮೇಲೊಂದು ಮೊಟಕಿ ಬಾಯ್ ಹೇಳಿದ್ದ.
ಆಕೆ ಬಾಯ್ ಹೇಳಿ ಎಕ್ಸಲರೇಟರ್ ತಿರುಗಿಸಿದ್ದಳು. ಆದಿ ಬಸ್ಸ್‍ಗಾಗಿ ಕಾಯುತ್ತಿದ್ದ...
ಒಮ್ಮೆ ಹಿಂತಿರುಗಿ ನೋಡಿದ. ಇಷ್ಟು ದಿನ ಬೈಕಿನಲ್ಲಿ ಲಿಫ್ಟ್ ಕೊಡುತ್ತಿದ್ದ ಹುಡುಗಿ ಇನ್ನೇನು ಸೆಲೆಬ್ರಿಟಿಯಾಗುವವಳಿದ್ದಳು. ಮುಂದಿನ ಎಪಿಸೋಡಿನಿಂದ ಆಕೆಯದೇ ಆಂಕರಿಂಗ್. ರೇಟಿಂಗಿನ ಪರಿಣಾಮವಾಗಿ ಡೈರೆಕ್ಟರ್‍ಗೆ ಏನಾದರೂ ಹೊಸತು ಬೇಕೇ ಬೇಕು ಅನಿಸಿತ್ತು. ಚಾನೆಲ್‍ನ ಬೆಂಗಳೂರಿ ಆಫೀಸಿನವರೂ ಹೂಂಗುಟ್ಟಿದ್ದರು. ಅವರೆಲ್ಲರ ಪಾಲಿಗೆ ಅವಲೋಕನಾ ಎನರ್ಜಿ ಬೂಸ್ಟರ್ ಆಗಿದ್ದಳು. ಮುಂಬೈಯ್ಯಲ್ಲಿನ ತಂಡವನ್ನು ಎದುರು ಹಾಕಿಕೊಂಡು, ಪ್ರೋಟೋಕಾಲ್‍ಗಳನ್ನೆಲ್ಲ ಮುರಿದು ಅವರು ರಿಸ್ಕ್ ತೆಗೆದುಕೊಂಡಿದ್ದರು.
ಆದಿ ಆಕೆಗೀಗ ಸ್ಕ್ರಿಪ್ಟ್ ಬರೆಯುವವನಿದ್ದ. ಆಕೆಯ ತುಂಟತನ, ಹಠ, ಸೊಕ್ಕು ಎಲ್ಲವನ್ನೂ ಆತ ನೋಡಿದ್ದ. ಸ್ನೇಹಿತರಿಗಾಗಿ ಜಗಳ ಕಾದಿದ್ದನ್ನೂ ತಿಳಿದಿದ್ದ. ಅದೇ ಸ್ನೇಹಿತರ ಜೊತೆ ಆಡುವ ಮಂಗಾಟಗಳನ್ನು ಬಲ್ಲವನಾಗಿದ್ದ. ಆದರೂ ಆಕೆಯನ್ನು "ಮಾರಲು" ಬೇಕಾದ ಸರಕು ಆತನಿಗೇಕೋ ಸಿಕ್ಕಿರಲೇ ಇಲ್ಲ. ಹುಡುಕಲೂ ಮನಸ್ಸಾಗುತ್ತಿರಲಿಲ್ಲ. ಯಾಕೆಂದರೆ ಒಮ್ಮೆ ಮಾರುವ ಮನಸ್ಥಿತಿಗೆ ಇಳಿದರೆ ಅದರ ಅನುಸಾರವೇ ಆಕೆಯನ್ನು ಪ್ರೊಜೆಕ್ಟ್ ಮಾಡಬೇಕಿತ್ತು. ಶಾರ್ಟ್ ಟೆಂಪರ್ಡ್ ಎಂದೋ, ಎಮೋಷನ್ ಎಂದೋ, ಬಾಯಿಗೆ ಬಂದದನ್ನು ಯೋಚಿಸದೇ ಉದುರಿಸುವವಳೋ, ಅಳೆದೂ ತೂಗಿ ಮಾತಾಡುವವಳೋ, ರಿಸರ್ಚ್ ಮಾಡಿ ಹೇಳುವವಳೋ ಆನ್ ದ ಸ್ಪಾಟ್ ಇಂಪ್ರೊವೈಸ್ ಮಾಡುವವಳೋ, ಕಷ್ಟಪಟ್ಟು ಬೆಳೆದವಳೋ, ಬೆಳ್ಳಿ ತಟ್ಟೆಯಲ್ಲೇ ಉಂಡವಳೋ, ಅಲ್ಟ್ರಾ ಮಾಡರ್ನ್ ಹುಡುಗಿಯೋ, ಸಂಪ್ರದಾಯಸ್ಥ ಹೆಣ್ಣು ಮಗಳೋ ವೀಕ್ಷಕರಿಗೆ ರಿಜಿಸ್ಟರ್ ಮಾಡಿಸಬೇಕಾದ ವಿಷಯಗಳು ಹಲವಾರಿದ್ದವು. ಮೊದಲಿಗೆ ಆ ಮೆಟ್ರಿಕ್ಸ್‍ಗಳು ಡಿಸೈಡ್ ಆಗುತ್ತಿದ್ದವು. ಅದರ ಪ್ರಕಾರ ಆಕೆಯನ್ನು ತೋರಿಸಲಾಗುತ್ತಿತ್ತು. ಬೇಡದ್ದನ್ನು ಎಡಿಟ್ ಮಾಡಲಾಗುತ್ತಿತ್ತು.
ಆದಿಗೆ ಅದ್ಯಾವುದೂ ಇಷ್ಟವಿರಲಿಲ್ಲ. "ಆಕೆ ಆಕೆಯಾಗಿರಬೇಕು" ಆತನಿಗೆ ಅದೇ ಇಷ್ಟವಾಗಿತ್ತು. ಆದರೆ ಎಂ.ಬಿ.ಏ ಓದಿ ಏ.ಸಿಯಲ್ಲಿ ಕುಳಿತವರು ಅದನ್ನು ಒಪ್ಪುತ್ತಾರಾ? ಬಾಸ್ ಜೊತೆ ಮಾತಾಡಲೇ ಬೇಕಿತ್ತು.
**
ಆ ತಂಡದಲ್ಲಿ ಇದಷ್ಟೇ ತನ್ನ ಕೆಲಸ, ಇದಷ್ಟೇ ನಿನ್ನ ಕೆಲಸ ಎಂಬ ಅಡ್ಡಗೋಡೆಗಳೇ ಇರಲಿಲ್ಲ. ಅನಿಸಿದ್ದನ್ನು ಮೀಟಿಂಗ್‍ಗಳಲ್ಲಿ ಮುಕ್ತವಾಗಿ ಹೇಳುವ ಅವಕಾಶವಿತ್ತು. ಆದರೆ ಅಂತಿಮ ನಿರ್ಧಾರದ ಮಾತ್ರ ಅದಕ್ಕೆ ಸಂಬಂಧಪಟ್ಟವರದ್ದೇ ಆಗಿತ್ತು. ಇದರಿಂದ ಎಲ್ಲಾ ಕಡೆಯ ಆಲೋಚನೆಗಳಿಗೂ ಮನ್ನಣೆ ಸಿಗುವ ಅವಕಾಶವಿತ್ತು. ಷೋಗೆ ಬೇಕಾದ ಹೊಸತನದ ಬಗ್ಗೆ ಕೆಲವರು ಅನಿಸಿಕೆ ಹಂಚಿಕೊಂಡರು. ಆದಿ ಅಳುಕುತ್ತಲೇ ತನ್ನ ಅನಿಸಿಕೆ ಹಂಚಿಕೊಂಡಿದ್ದ. ಆದಿಯ ಮಾತಿಗೆ ಇಡೀ ಟೀಂ ಒಪ್ಪಿತ್ತು. ಸಾಕಷ್ಟು ಇನ್‍ಪುಟ್‍ಗಳೂ ಸಿಕ್ಕವು. ಅವಲೋಕನಾ ಕೂಡಾ ಮೀಟಿಂಗ್‍ನಲ್ಲಿದ್ದಳು. ಆಂಕರ್ ಆಗೋ, ಪ್ರೊಡಕ್ಷನ್ ಟೀಂನವಳಾಗೋ, ರೋಲ್ ಸ್ಪಷ್ಟವಿರಲಿಲ್ಲ.
ಆದಿ ರಾತ್ರಿಯಿಡೀ ಕಷ್ಟಪಟ್ಟು ಸ್ಕ್ರಿಪ್ಟ್ ಬರೆದಿದ್ದ. ಅದ್ಯಾವುದೋ ಅರ್ಜಂಟ್ ಕೆಲಸದ ಮೇಲೆ ಆತನ ಬಾಸ್ ಮುಂಬೈಗೆ ಹೋಗಿದ್ದರು. "ರನ್ ಆರ್ಡರ್ ಕೊಟ್ಟಿದಾರಲ್ವಾ? ಬರಿ ನಾರ್ಮಲ್ ಆಗಿ" ಹೊರಡುವ ಮುನ್ನ ಕಾಲ್ ಮಾಡಿ ಹೇಳಿದ್ದರು.
"ಕರೆಕ್ಷನ್ ಏನಾದ್ರೂ?" ಆದಿ ಎಂದಿನಂತೇ ಕೇಳಿದ್ದ.
"ಇಲ್ಲಾ. ನಾನ್ ಬರದ್ ಲೇಟ್ ಆಗತ್ತೆ. ಏನಾದ್ರೂ ಇದ್ರೆ ಶೂಟಿಂಗ್ ದಿನಾ ನೋಡಣಾ. ಯುಸುವಲ್ ಆಗೇ ಬರಿ. ಸ್ವಲ್ಪ ಎನರ್ಜಿ ಇರ್ಲಿ. ಇದೊಂಥರ ರಿವಾಂಪ್ ಮಾಡ್ತಿರೋದ್ ಷೋ ನಾ. ಡಿಸ್ಕಸ್ ಮಾಡಿದ್ದೆಲ್ಲಾ ನೆನಪಿದ್ಯಲಾ..ಓ.ಕೇ?" ಅದಾಗಲೇ ಏರ್‍ಪೋರ್ಟ್‍ನಲ್ಲಿ ಇದ್ದಂತಿತ್ತು.
ಆದಿ ಓ.ಕೆ ಎಂದು ಮಾತು ಮುಗಿಸಿದ್ದ. ಮಧ್ಯಾನ್ಹದ ನಿದ್ದೆ ಮುಗಿಸಿ ಮತ್ತೊಮ್ಮೆ ಸ್ಕ್ರಿಪ್ಟನ್ನು ತಿದ್ದಿ ತೀಡಿದ್ದ.
"ರನ್ ಆರ್ಡರ್ ರೆಡಿ ಆಗಿದೆ. ಫಸ್ಟ್ ಡ್ರಾಫ್ಟ್ ಸ್ಕ್ರಿಪ್ಟ್ ಬರ್ದಿದೀನಿ...ರಿಹರ್ಸ್ ಮಾಡಣ್ವಾ?" ಆದಿ ಅವಲೋಕನಾಳಿಗೆ ಕಾಲ್ ಮಾಡಿದ್ದ.
"ಪಾರ್ಲರ್ ಹೋಗ್ಬೇಕ್ ಕಣೋ..." ಆಕೆ ನಲವತ್ತೈದು ನಿಮಿಷ ತಡವಾಗಿ ಉತ್ತರಿಸಿದ್ದಳು.
"ಫಸ್ಟ್ ಟೈಂ ಆಂಕರಿಂಗ್ ಮಾಡ್ತಿರದ್ ನೀನು....ಪ್ರಾಕ್ಟೀಸ್ ಮಾಡ್ಕೋ ಬೇಕಲ್ವೇನೇ ಸರ್ಯಾಗಿ..ಬಾ" ಆದಿ ಒತ್ತಾಯಿಸಿದ್ದ.
"ಆಂಕರ್ ಅಂದ್ಮೇಲೇ ಲುಕ್ ಚೆನಾಗಿರ್ಬೇಕು ಫಸ್ಟು...ಇವತ್ ಆಗಲ್ಲಾ ಕಣೋ..." ಆದಿಗೆ ಲುಕ್‍ಗೆ ಅಷ್ಟೇನೋ ಮಹತ್ವ ಕೊಡುತ್ತಿರಲಿಲ್ಲ.
" ಮುಚ್ಕೊಂಡ್ ಬಾರೆಲೇ..." ಸಲಿಗೆ ಎಂದಿನಂತೇ ಇತ್ತು.
"ಹೋಗೊಲೋ..." ಆಕೆ ಕಡ್ಡಿ ತುಂಡು ಮಾಡಿದಂತೆ ಹೇಳಿದ್ದಳು.
"ಷೋದ ಆಂಕರ್ ಜೊತೆ ಹೀಗೆಲ್ಲಾ ಮಾತಾಡಬಹುದಾ?" ಆದಿಗೆ ಸ್ನೇಹಿತೆ ಮತ್ತು ಸೆಲೆಬ್ರಿಟಿ ಇಬ್ಬರನ್ನೂ ಒಟ್ಟಿಗೇ ನೋಡಲಾಗಲಿಲ್ಲ.
"ಸರಿ ಮೇಡಮ್..." ಆದಿ ಸೆಲೆಬ್ರಿಟಿಯನ್ನೆ ಆರಿಸಿಕೊಂಡಂತಿತ್ತು.
"ಲೋ ನಾಳೆ ಬರ್ತೀನ್ ಕಣೋ.... ಪ್ಲೀಸ್?" ಆಕೆಯ ಮಾತಿನಲ್ಲಿ ದರ್ಪವಿರಲಿಲ್ಲ. ಪ್ಲೀಸ್ ಎನ್ನುವಲ್ಲಿ ಭೂಮಿಗಿಳಿದಿರಲೂ ಇಲ್ಲ.
ಆದಿಗೆ ಎದುರಾಡಲಾಗಲಿಲ್ಲ. "ಸರಿ ಕಣೆ" ಎಂದು ನಕ್ಕು ಸುಮ್ಮನಾಗಿದ್ದ. ಆಕೆ ಮಾತಾಡಿದ ರೀತಿ ಆದಿಗೇನೋ ಇಷ್ಟವಾಗಿತ್ತು. ಅದೇನೋ ಹುಚ್ಚಿನಲ್ಲಿ ಮತ್ತೆ ಸ್ಕ್ರಿಪ್ಟ್ ತಿದ್ದುತ್ತಾ ಕುಳಿತಿದ್ದ. ಮಧ್ಯರಾತ್ರಿ ಕಳೆದಿತ್ತು.
ಆವಲೋಕನಾ ಮೆಸ್ಸೇಜು ಮಾಡಿದ್ದಳು. ಪಾರ್ಲರ್ ಬಗ್ಗೆ ಮಾತಾಡಿದ್ದಳು. ಮೊದಲ ಬಾರಿ ಅಷ್ಟೆಲ್ಲಾ ದುಬಾರಿ ಟ್ರೀಟ್‍ಮೆಂಟ್ ತೆಗೆದುಕೊಂಡಿದ್ದನ್ನೆಲ್ಲ ಬಡಬಡಾಯಿಸಿದಳು. ಆದಿ ಇಷ್ಟವಿಲ್ಲದಿದ್ದರೂ ಕೇಳಿಸಿಕೊಂಡಿದ್ದ ಹೂಂ ಹಾಕಿದ್ದ. ಕೊನೆಗೆ ಗುಡ್‍ನೈಟ್ ಹೇಳಿ ಮಲಗಿದ್ದ. ಆಕೆಗೆ ಆ ದಿನ ಖುಷಿಗೆ ನಿದ್ದೆ ಹತ್ತುವುದು ತಡವಾಗಿತ್ತು.
***
"ವಿಳಂಬ, ರಂಗು, ಕಾಕತಾಳೀಯ, ಅತೀ ವಿಶೇಷ ಏನೋ ಇದೆಲ್ಲಾ?" ಆಕೆ ಸ್ಕ್ರಿಪ್ಟ್ ಓದುತ್ತಾ ಕೇಳಿದ್ದಳು.
"ವಿಳಂಬ ಅಂದ್ರೆ ತಡ ಆಗೋದು, ಕಾಕತಾಳೀಯ ಅಂದ್ರೆ ಅದೇನೋ "
"ಅದ್ನಾ ಲೇಟ್ ಅಂದ್ರೆ ಆಗಲ್ವಾ? ಎಲ್ರಿಗೂ ಅರ್ಥ ಆಗತ್ತಪ್ಪಾ...." ಆಕೆಯ ಪ್ರಶ್ನೆ ನೇರವಾಗಿತ್ತು.
"ಅಲ್ಲಾ ಅದು...ಏನ್ ಅಂದ್ರೆ..." ಆದಿಗೆ ಆಕೆಯನ್ನು ಶುದ್ಧ ಕನ್ನಡ ಮಾತಾಡುವ ಹುಡುಗಿಯನ್ನಾಗಿ ತೋರಿಸುವ ಹುಚ್ಚಿತ್ತು.
"ನೋಡೋ...ಎಲ್ರೂ ಏನ್ ಮಾತಾಡ್ತಾರೋ ಆಂಕರ್ ಕೂಡಾ ಅದನ್ನೇ ಮಾತಾಡ್ಬೇಕು...ಅವಾಗ್ಲೇ ಜನ ಕನೆಕ್ಟ್ ಆಗೋದು..." ಆಕೆ ತನ್ನ ನಿರ್ಣಯ ಹೇಳಿಬಿಟ್ಟಿದ್ದಳು.
"ಅಲ್ಲಾ,...ಹಂಗಲ್ಲಾ ಅದು...ನಾವ್ ಬಳಸೋ ಪದ..." ಆದಿಯ ಮಾತನ್ನು ಅರ್ಧಕ್ಕೆ ತುಂಡರಿಸಲಾಗಿತ್ತು.
"ಕನೆಕ್ಟ್‍ಗೆ ಏನಂತಾರೆ?" ಅವಲೋಕನಾ ಪ್ರಶ್ನಿಸಿದ್ದಳು.
"ಕನೆಕ್ಟ್ ಅಂದ್ರೆ ಸಂಪರ್ಕ..." ಆದಿ ಉತ್ತರಿಸಿದ್ದ. ಮರುಕ್ಷಣವೇ ನಾಲಿಗೆ ಕಚ್ಚಿದ್ದ. ಅದು ಸೆಲ್ ಆಗುವ ಪದವಲ್ಲ ಎನ್ನುವುದು ಆತನಿಗೂ ಅರಿವಾಗಿತ್ತು.
ಇಬ್ಬರೂ ಸೇರಿ ಪದಗಳನ್ನು ಬದಲಾಯಿಸತೊಡಗಿದರು. ವಿಳಂಬ ತಡವಾಯಿತು, ಕಾಕತಾಳೀಯವನ್ನು ತೆಗೆಯಲಾಯಿತು, ಅತೀ ವಿಶೇಷ ತುಂಬಾ ಸ್ಪೆಷಲ್ ಆಗಿ ತಿದ್ದುಪಡಿಯಾಯಿತು. ಉದ್ದುದ್ದ ವಾಕ್ಯಗಳು ಸಣ್ಣ ಸಣ್ಣ ಕಂಗ್ಲೀಷ್ ತುಣುಕುಗಳಾದವು. ಸಂಖ್ಯೆಯ ವಿಚಾರದಲ್ಲಿ ಕನ್ನಡವೋ ಇಂಗ್ಲೀಷೋ ಎಂಬ ಗೊಂದಲವಾಗಿ, ಎರಡನ್ನೂ ಅಲ್ಟರ್‍ನೇಟಿವ್ ಆಗಿ ಬಳಸುವುದೆಂದು ನಿರ್ಧಾರವಾಯಿತು. ಸ್ಕ್ರಿಪ್ಟ್ ಬಹುತೇಕ ಫೈನಲೈಸ್ ಆದ ಮೇಲೆ ರಿಹರ್ಸಲ್ ಶುರುಮಾಡಿದ್ದರು. ಒಂದು ಬಾರಿ ಮುಗಿಸುವಷ್ಟರಲ್ಲಿ ಸಂಜೆಯಾಗಿತ್ತು. ಆ ದಿನ ರಾತ್ರಿ ಅವಲೋಕನಾಳ ಮೆಚ್ಚಿನ ಗಾಯಕನ ಕಾನ್ಸರ್ಟ್ ಇತ್ತು. ಆದಿಯೇ ನಾಳೆ ಮಾಡಣಾ ಬಿಡು ಎಂದು ಆಕೆಯನ್ನು ಕಳುಹಿಸಿದ್ದ. ಆಕೆ ಗಡಿಬಿಡಿಯಲ್ಲಿ ಹೊರಟು ಕಾನ್ಸರ್ಟ್ ತಲುಪಿದ್ದಳು.
**
"ವನ್ ಮೋರ್ ಟೈಂ.. ಗೆಟ್ ರೆಡಿ...ಫಾಸ್ಟ್...." ಆದಿ ಟ್ರೇನರ್ ಮೋಡಿನಲ್ಲಿದ್ದ...
"ನನ್ ಹತ್ರ ಆಗಲ್ಲೋ ಕಣೋ....ನನ್ ಪಾಡಿಗ್ ನಾನ್ ಚಾನೆಲ್ ಕೆಲ್ಸಾ ಮಾಡ್ಕೊಂಡ್ ಇರ್ತೀನಿ..." ಅವಲೋಕನಾಳಿಗೆ ಆಂಕರಿಂಗ್ ಸಹವಾಸ ಸಾಕೆನಿಸಿತ್ತು. ಯಾವುದೇ ಕೆಲಸ ಕೊಟ್ಟರು ಕರಾರುವಕ್ಕಾಗಿ ಮಾಡಿಮುಗಿಸುವ ಅವಳಿಗೆ ಮೊದಲ ದಿನದ ರಿಹರ್ಸಲ್ ಕಷ್ಟವೆನಿಸಿತ್ತು.
"ಏಯ್ ಹಂಗೇನಿಲ್ವೇ...ಚೆನಾಗ್ ಮಾಡ್ತಿದೀಯಾ...ಕಮಾನ್..." ಆದಿ ಚಿಯರ್ ಮಾಡಲು ಪ್ರಯತ್ನಿಸಿದ್ದ.
"ಇಲ್ವೋ...ಅದೇನೋ ಸರಿ ಹೋಗ್ತಿಲ್ವಾ...ಏನ್ ಮಿಸ್ಸ್ ಆಗ್ತಿದೆ ಗೊತ್ತಿಲ್ಲಾ.." ಆಕೆ ಕುರ್ಚಿಯ ಮೇಲೆ ಕುಳಿತು ಬಿಟ್ಟಿದ್ದಳು. ಕ್ಯಾಮರಾ ರೋಲ್ ಆಗುತ್ತಲೇ ಇತ್ತು. ಆದಿ ಕಟ್ ಹೇಳಿದ.
ಇಬ್ಬರೂ ಬ್ರೇಕೌಟ್ ಏರಿಯಾ ಕಡೆ ನಡೆದರು. ಆಕೆ ಜ್ಯೂಸ್ ಕುಡಿದಳು. ಆದಿ ಬ್ಲಾಕ್ ಕಾಫಿ ಹೀರಿದ.
"ಎನರ್ಜಿ ಸಖತ್ತಾಗಿದೆ ಕಣೇ...ಸ್ವಲ್ಪ ಫ್ಲೋ ಬಂದ್ರೆ ಸುಪರ್ ಆಗ್ ಬರತ್ತೆ..." ಆದಿ ಮತ್ತೆ ಅವಳನ್ನು ರಿಹರ್ಸಲ್‍ಗೆ ಪುಸಲಾಯಿಸತೊಡಗಿದ್ದ.
ಅದಾಗಲೇ ಹಲವಾರು ಟೇಕ್ ತೆಗೆದುಕೊಂಡಿದ್ದ ಆಕೆ, ತನ್ನ ಆಂಕರಿಂಗ್ ವೀಡಿಯೋವನ್ನು ತಾನೇ ನೋಡಿದ ಮೇಲೆ ಭರವಸೆ ಕಳೆದುಕೊಂಡಿದ್ದಳು. ಅದೇನೋ ಆದಿಯ ಸಮಾಧಾನಕ್ಕೆಂದು ಇನ್ನೊಂದು ಟ್ರೈ ಮಾಡುವಾ ಎಂದು ನಿರ್ಧರಿಸಿದಳು.
"ಫಸ್ಟ್ ಟೈಂ ಅಲ್ವೇನೇ? ಕಷ್ಟ ಆಗತ್ತೆ.." ಆದಿ ಇನ್ನೂ ಸಮಾಧಾನ ಹೇಳುತ್ತಲೇ ಇದ್ದ.
"ಫಸ್ಟ್ ಆಹ್? ಕಷ್ಟ್ ಆಗತ್ತಾ? ನಿಂಗ್ ಹೆಂಗ್ ಗೊತ್ತು?" ಆಕೆ ಕಣ್ಣು ಹೊಡೆದಳು.
"ಲೇಯ್..." ಆತ ಹಣೆ ಚಚ್ಚಿಕೊಂಡ. ಕಪ್ ಎಸೆಯುವ ನೆಪದಲ್ಲಿ ಅಲ್ಲಿಂದ ಎದ್ದು ಹೋದ. ನಾಚಿಕೆಗೆ ಆತನ ಮುಖ ಕೆಂಪಾಗಿತ್ತು.
"ಬಾರೋ ಸುಂದ್ರಾ....ಸ್ಕ್ರಿಪ್ಟ್ ಮಾಸ್ಟರ್ ನೀನೆ ಇಲ್ಲಾ ಅಂದ್ರೆ ಹೆಂಗೆ" ಆಕೆ ರಿಹರ್ಸಲ್‍ಗೆ ತಯಾರಿದ್ದಳು.
**
"ಪಾರ್ಟೀ......." ಗುರುವಾರ ಮಧ್ಯಾನ್ಹವೇ ಎಲ್ಲರೂ ಅವಲೋಕನಾಳನ್ನು ಕಾಡಿಸತೊಡಗಿದ್ದರು.
"ನೆಕ್ಟ್ಸ್ ಸ್ಯಾಟರ್ ಡೇ ಪಕ್ಕಾ....." ಅವಲೋಕನಾ ಎಲ್ಲರ ಪಾರ್ಟಿ/ಟ್ರೀಟ್ ರಿಕ್ವೆಸ್ಟ್‍ಗಳಿಗೆ ಉತ್ತರ ಕೊಟ್ಟಿದ್ದಳು.
ಆದಿ ಮಾತ್ರ ಆಕೆಗೆ ಗ್ರೂಪಿನಲ್ಲಿ ವಿಷ್ ಮಾಡಿರಲಿಲ್ಲ. ಅದ್ಯಾವುದೋ ಕಾವ್ಯ ಸಮ್ಮೇಳನದಲ್ಲಿ ಆಕಳಿಸುತ್ತಾ ಕೂತಿದ್ದ.
ಇಡೀ ಟೀಂ ಹೊಸ ಹುಮ್ಮಸ್ಸಿನಿಂದ ಕೆಲಸ ಮಾಡಿದ್ದರ ಪರಿಣಾಮವೋ ಏನೋ ಷೋ ಅನ್ನು ವೀಕ್ಷಕರು ಇಷ್ಟಪಟ್ಟಿದ್ದರು. ಅದ್ಭುತ ಎನ್ನುವ ರೇಟಿಂಗ್ ಸಿಗದಿದ್ದರೂ ಎವರೇಜ್ ಎನಿಸಿಕೊಳ್ಳುವಷ್ಟು ರೇಟಿಂಗ್ ಸಿಕ್ಕಿತ್ತು. ಸೀಸನ್ ಆರಂಭದಿಂದ ಕಳಪೆ ರೇಟಿಂಗ್ ನೋಡಿ ಬೇಜಾರಲ್ಲಿದ್ದ ಟೀಂನಲ್ಲಿ ಹೊಸ ಉತ್ಸಾಹ ಮೂಡಿತ್ತು.
ಅವಲೋಕನಾಳಿಗೂ ಆಂಕರಿಂಗ್ ಬಗೆಗಿನ ಅಳುಕುಗಳ ನಿವಾರಣೆಯಾಗಿ ಆತ್ಮವಿಶ್ವಾಸ ಮೂಡಿತ್ತು. ಆದಿಯ ಮೆಸ್ಸೇಜಿಗಾಗಿ ಕಾಯುತ್ತಾ ಆಕೆ ಸುಮ್ಮನೆ ಬ್ರೌಸ್ ಮಾಡುತ್ತಿದ್ದಳು. ಸೋಷಿಯಲ್ ಮೀಡಿಯಾದಲ್ಲಿ ಷೋದಲ್ಲಿನ ಬದಲಾವಣೆಯ ಕುರಿತು ಹೊಸ ವೈಬ್ ಮೂಡಿತ್ತು.
"#ನೈಸ್ ಆಂಕರಿಂಗ್.", "#ಹಾಟ್ ಆಂಕರ್". "#ಸೂಪರ್ ಗುರೂ...", "#ಆಂಕರ್ಚೇಂಜ್ ಮಾಡಿದ್ದಕ್ಕೆ ಥ್ಯಾಂಕ್ಸ್. ""#ಆಂಕರ್ ಹಾಕಿದ್ ಡ್ರೆಸ್ ಇಷ್ಟ ಆಯ್ತು..", "#ಕೀಪ್ ಗೋಯಿಂಗ್ ಅವಲೋಕನಾ..." "#ಅವಲೋಕನಾ ಫ್ಯಾನ್ ಕ್ಲಬ್" "#ಲವ್ಯು ಅವಲೋಕನಾ" "ಯು ಆರ್ ದ ಬೆಸ್ಟ್" "#ಏನ್ ನುಲಿತಾಳೆ ಗುರೂ.." "#ಡಬ್ಬಾಷೋ ಬಟ್ ಕ್ಯೂಟ್ ಆಂಕರ್" "#ಗುಡ್ ಚೇಂಜ್" "#ಹಳೇ ಆಂಕರ್ ಎಲ್ಲಿ?" ಪ್ರತಿಯೊಬ್ಬರ ಅನಿಸಿಕೆಗಳನ್ನೂ ಅವಲೋಕನಾ ಓದುತ್ತಿದ್ದಳು. ಸಡನ್ನಾಗಿ ಆಕೆಯ ಎಫ್.ಬಿ ಅಕೌಂಟಿಗೆ ನೂರಾರು ಫ್ರೆಂಡ್ ರಿಕ್ವೆಸ್ಟ್‍ಗಳು ಬಂದಿದ್ದವು. ಅದ್ವಾವುದೋ ಪಿ.ಯು ಫೋಟೋಗೂ ಐವತ್ತು ಲೈಕ್‍ಗಳು ಹೊಸದಾಗಿ ಸೇರಿದ್ದವು. ಕನ್ನಡ ಯುವ ಜನತೆಯ ಪಾಲಿಗೆ ಅವಲೋಕನ ಹೊಸ ಸೆನ್ಸೇಷನ್ ಆಗುವ ಸಾಧ್ಯತೆಗಳಿದ್ದವು.
ಆದರೆ ಆದಿ ಮಾತ್ರ ಅವಳಿಗೆ ಮೆಸ್ಸೇಜ್ ಮಾಡಲೇ ಇಲ್ಲ.
**
"ಲೋ...ನೀನ್ ಯಾಕ್ ಅವತ್ ಪಾರ್ಟಿಗ್ ಬರ್ಲಿಲ್ಲಾ?" ಅವಲೋಕನಾ ಆದಿಯನ್ನು ಕೇಳಿದ್ದಳು.
"ಜನಾ ಅಂದ್ರೆ ಆಗಲ್ಲಾ ಕಣೇ..." ಆತನ ಉತ್ತರ ನಿರೀಕ್ಷಿತವೇ ಆಗಿತ್ತು.
"ಸರಿ ಸರಿ...ಇವತ್ತಾದ್ರೂ ಬಂದ್ಯಲ್ಲಾ ...ಥ್ಯಾಂಕ್ಸ್..." ಆಕೆ ಸೋಫಾದ ಮೇಲೆ ಕುಳಿತಿದ್ದಳು.
"ಹೂಂ...ಪಿ.ಜಿ ಬಿಟ್ಟು ಮನೆ ಮಾಡಿದೀನಿ ಅಂದ್ಯಲ್ಲಾ...ನೋಡ್ಕೊಂಡ್ ಹೋಗಣಾ ಅಂತಾ ಬಂದೆ..." ಆದಿಯೂ ಸೋಫಾದ ಮೇಲೆ ಕುಳಿತ.
"ಅಂದ್ರೆ ನನ್ ನೋಡಕ್ ಬಂದ್ಯಾ? ಮನೆ ನೋಡಕ್ ಬಂದ್ಯಾ?" ಆಕೆ ಕಿಚಾಯಿಸಿದ್ದಳು.
"ನಿನ್ ನೋಡಕ್ ಯಾರ್ ಬರ್ತಾರೆ ಲೇಯ್....ದಿನಾ ನೋಡಲ್ವಾ?...ಮನೆ ನೋಡಕ್ ಬಂದಿರದು..." ಆದಿಯೂ ಒಳ್ಳೆಯ ಮೂಡಿನಲ್ಲಿದ್ದ.
"ಹೌದಾ?" ಆಕೆ ಹುಬ್ಬೇರಿಸಿದ್ದಳು.
"ಹೂಂ...ಹೌದು..." ಆತನೂ ನಗುತ್ತಲೇ ಹೇಳಿದ್ದ.
ಆಕೆ ಆತನತ್ತ ದಿಂಬೊಂದನ್ನು ಎಸೆದಿದ್ದಳು. ಆತ ವಾಪಸ್ ಎಸೆದಿದ್ದ. ಇಬ್ಬರೂ ಒಂದಿಷ್ಟು ಮಾತಾಡಿದರು. ಆಂಕರಿಂಗ್-ಷೋ ವಿಚಾರ ಅಲ್ಲೆಲ್ಲೂ ಬರಲೇ ಇಲ್ಲ. ಮತ್ತೇನೇನೋ ಮಾತಾಡುತ್ತಲೇ ಕುಳಿತಿದ್ದರು. ಸುಮಾರು ದಿನಗಳ ನಂತರ ಅವಲೋಕನಾ ಮತ್ತೆ ನಕ್ಕಿದ್ದಳು. ಎಂದಿನಂತೆ ತುಂಟಾಟಕ್ಕಿಳಿದಿದ್ದಳು. ಅದೆಲ್ಲವನ್ನು ಆಕೆ ಆಂಕರ್ ಆದಾಗಿನಿಂದ ಮಿಸ್ ಮಾಡಿಕೊಂಡಿದ್ದಳು.
"ಪರಿಶುದ್ಧವಾದ ಹರಟೆ ಬಹಳ ಗಟ್ಟಿಯಾದ ಸ್ನೇಹದ ಕುರುಹು" ಆದಿ ಅವಲೋಕನಾಳಿಗೆ ಹೇಳಿದ್ದ.
"ವಾಟ್" ಆಕೆಗೆ ಪೂರ್ತಿ ಅರ್ಥವಾಗಲಿಲ್ಲ.
"ಏನಿಲ್ಲ...ಮನೆ ನೋಡಣ್ವಾ?" ಆತ ಕಿಚನ್ ದಾಟಿದ್ದ.
"ಹೂಂ... ಮನೆ ತಾನೆ ನೋಡಕ್ ಬಂದಿರದ್ ನೀನು... ತೋರಸ್ತೀನಿ ಬಾ...." ಆಕೆ ಬೆಡ್‍ರೂಮಿಗೆ ಕರೆದೊಯ್ದಿದ್ದಳು.
ಆಂಕರ್ ಆಗಿ ಇಂಟ್ರಡ್ಯೂಸ್ ಆದಾಗಿನಿಂದ ಪಿ.ಜಿಯಲ್ಲಿ ಇದ್ದಕ್ಕಿದ್ದಕ್ಕಿಂತೇ ಆಕೆ ಸ್ಟಾರ್ ಆಗಿದ್ದಳು. ಒಬ್ಬರಲ್ಲ ಒಬ್ಬರು ಬಂದು ಆಕೆಯನ್ನು ಮಾತಾಡಿಸಲು ಹಾತೊರೆಯುತ್ತಿದ್ದರು. ಆಕೆ ನೆಮ್ಮದಿ ಬೇಕು ಅನಿಸಿ ಕೋಲಿವಿಂಗ್ ಸೊಸೈಟಿಯೊಂದರಲ್ಲಿ ಫ್ಲಾಂಟ್ ಒಂದನ್ನು ಬಾಡಿಗೆಗೆ ಹಿಡಿದಿದ್ದಳು. ಸಧ್ಯಕ್ಕೆ ಒಬ್ಬಳೇ ಇದ್ದಳು. ಆಕೆಗೆ ಹತ್ತಿರವಾದವರೆಲ್ಲ ಹಂತ ಹಂತವಾಗಿ ದೂರಾಗುತ್ತಿದ್ದರು.
ಆದಿ ಆಕೆಯ ಮನೆ, ಮನಸ್ಸಿನಲ್ಲಿ ಓಡಾಡುತ್ತಿದ್ದ.
-ಚಿನ್ಮಯ
1-05-2019

Wednesday, April 17, 2019

ಭಾಗ-೧: ಅನಿರೀಕ್ಷಿತ

"ಯಾರ್ ದುಡ್ಡ್ ಜಾಸ್ತಿ ಕೊಡ್ತಾರೋ ಅಲ್ಲಿಗ್ ಹೋಗ್ತೀನಿ....ಯು ಕಾಂಟ್ ಕ್ವಶ್ಚನ್ ದಾಟ್..." ಅವಲೋಕನಾ ಖಡಕ್ ಆಗಿಯೇ ಹೇಳಿಬಿಟ್ಟಿದ್ದಳು.

"ಅಂದ್ರೆ ನಿಂಗ್ ನನ್ ಬಗ್ಗೆ ಏನೂ ಅನ್ಸದೇ ಇಲ್ವಾ?" ಶತಭಿಷ ಸೆನ್ಸಿಟಿವ್ ಅನ್ನೋದು ಅವಳಿಗೂ ಗೊತ್ತಿತ್ತು.

"ಪ್ಲೀಸ್ ಡೋಂಟ್ ಮಿಕ್ಸ್ ಪ್ರೋಫೇಷನಲ್ ಆಂಡ್ ಪರ್ಸನಲ್ ಮ್ಯಾಟರ್ಸ್...." ಆಕೆ ಆತನ ಕೈ ಹಿಡಿದು ಅದುಮಿದ್ದಳು.

"ಓ.ಕೇ...ಏನೋ...ಐ ಡೋಂಟ್ ನೌ....ವಾಟ್ ಟು ಡೂ ನೆಕ್ಸ್ಟ್..." ಶತಭಿಷ ತಲೆ ಕೆಳ ಹಾಕಿದ್ದ... ಕೈಬಿಡಿಸಿಕೊಂಡು ಮುಖ ಮುಚ್ಚಿಕೊಂಡಿದ್ದ...

"ಕಮಾನ್...ಚಿಯರ್ ಅಪ್...ಯು ನೌ ನಾನ್ ಕಾಂಟ್ರಾಕ್ಟ್ ಸೈನ್ ಮಾಡಿದೀನಿ...ಅದನ್ನಾ ಬಿಟ್ಟ್ ಬರಕ್ ಆಗಲ್ಲಾ ಅಂತಾ...." ಅವಲೋಕನಾ ಶತಭಿಷನಿಗೆ ಅರ್ಥಮಾಡಿಸುವ ಪ್ರಯತ್ನದಲ್ಲಿದ್ದಳು.

"ಸೋ...ನೀನ್ ಕಾಂಟ್ರಾಕ್ಟ್ ಇಂದ ಹೊರಗ್ ಬರಲ್ಲಾ...ವಾಟ್ ಇಫ್ ವಿ ಬೈ ಯು ಔಟ್?" ಆತ ಆಕೆಗೆ ಪ್ರಶ್ನಿಸಿದ್ದ...

"ನೌ ಯು ಆರ್ ಆಕ್ಟಿಂಗ್ ಲೈಕ್ಅ ರಿಯಲ್ ರಿಯಾಲಿಟಿ ಷೋ ಕಿಂಗ್ ಶತಭಿಷ.....ಯೋಚನೆ ಮಾಡು..." ಆಕೆ ಎಂದಿನ ಸಲಿಗೆಯಿಂದ ಭುಜ ತಟ್ಟಿದ್ದಳು. ಕಾಫಿ ಮಗ್ ಅನ್ನು ಸಿಂಕ್ನಲ್ಲಿಟ್ಟು ಹೊರಡಲು ತಯಾರಾಗುತ್ತಿದ್ದಳು.

"ಥ್ಯಾಂಕ್ಸ್ ಫಾರ್ ಕಮಿಂಗ್..." ಶತಭಿಷ ಆಕೆಯನ್ನು ಬೀಳ್ಕೊಡಲು ಬಾಗಿಲ ತನಕ ಬಂದಿದ್ದ....

"ನೀನ್ ಬಾ ಅಂತಾ ಕರದ್ರೆ ಎಲ್ಲಿಗ್ ಬೇಕಾದ್ರೂ ಬರ್ತೀನ್ ಕಣೋ..." ಆಕೆ ಕಣ್ಣಲ್ಲಿ ಕಣ್ಣಿಟ್ಟು ಹೇಳುತ್ತಾ ವ್ಯಾನಿಟಿ ಬ್ಯಾಗ್ ಹೆಗಲಿಗೇರಿಸಿದ್ದಳು...

"ಬಟ್ ನನ್ ಷೋಗ್ ಮಾತ್ರ ಬರಲ್ಲಾ ಅಲ್ಲಾ?" ಶತಭಿಷ ಛೇಡಿಸಿದ್ದ...

"ಅದ್ ಬೇರೆ ಇದ್ ಬೇರೆ...ಮಿಕ್ಸ್ ಮಾಡ್ಬೇಡಾ...ಆರೋಗ್ಯಕ್ ಒಳ್ಳೇದಲ್ಲಾ..." ಆಕೆ ಎಂದಿನ ತುಂಟತನದಲ್ಲೇ ನಕ್ಕು ಕಾರ್ ಹತ್ತಿದ್ದಳು...

ಶತಭಿಷ ತನ್ನ ಷೋ ಗತಿಯೇನು ಎಂದು ಯೋಚಿಸುತ್ತಾ, ಆಫೀಸಿಗೆ ಹೊರಡಲು ತಯಾರಾದ. ಮನೆಯಿಂದ ಆಫೀಸಿನವರೆಗೂ ಆತನಿಗೆ ಏನೇನೋ ಯೋಚನೆಗಳು. ಓಕಳಿಪುರಂ ತಲುಪುವಷ್ಟರಲ್ಲಿ ಕೊನೆಗೂ ಒಂದು ನಿರ್ಧಾರಕ್ಕೆ ಬಂದಿದ್ದ. ಆದರೆ ಅದಕ್ಕೆ ಬಾಸ್ ಒಪ್ಪಬೇಕಿತ್ತು. ಅವರನ್ನು ಒಪ್ಪಿಸುವುದು ಕಷ್ಟವಿತ್ತು.
**
"ಸಾಮ": ಶತಭಿಷ ಮೊದಲ ಅಸ್ತ್ರ ಪ್ರಯೋಗಿಸಿದ್ದ...

"ಐ ನೀಡ್ ಹರ್..."

"ನೋ...ವಿ ಕಾಂಟ್ ಅಕಮಡೇಟ್ ಹರ್..." ಬಾಸ್ ಆತನಿಗೆ ನೇರವಾಗೇ ಹೇಳಿಬಿಟ್ಟರು.

"ದಾನ": ಶತಭಿಷ ಎರಡನೇ ಅಸ್ತ್ರ ಪ್ರಯೋಗಿಸಿದ...

"ಎಲ್ಲಾ ಕಡೆ ಕಾಸ್ಟ್ ಕಟಿಂಗ್ ಮಾಡಣಾ...ಸಮ್ ಹೌ ವಿ ವಿಲ್ ಮ್ಯಾನೇಜ್..."

"ಆಲ್ ರೆಡಿ ಎಲ್ಲಾನೂ ಮಿನಿಮಲ್ ಅಲ್ಲೇ ಇದೆ... ವಿ ಕಾಂಟ್ ಸ್ಟ್ರೆಚ್ ಫರ್ದರ್...ವಿ ಕಾಂಟ್ ಬೈ ಹರ್ ಔಟ್" ಎಲ್ಲಾ ಬಾಸ್ಗಳ ಬಾಸ್ ಹಣವೇ ಆಗಿತ್ತು.

"ಭೇದ": ಶತಭಿಷ ಮೂರನೇ ಅಸ್ತ್ರ ಪ್ರಯೋಗಿಸಿದ...

"ಜನ ಒಪ್ಕೊಳಲ್ಲಾ...ಶಿ ಈಸ್ ದ ಐಕಾನ್"

"ಅದು ನಿನ್ ಚಾಲೆಂಜ್ ...ನಂಗೆ ರೇಟಿಂಗ್ ಅಷ್ಟೇ ಮುಖ್ಯ...ನಿನ್ ಜಾಬ್ ಈಸ್ ಟು ಗೆಟ್ ಇಟ್ ಡನ್..." ಜವಾಬ್ದಾರಿಯನ್ನು ಆತನ ಹೆಗಲಿಗೇ ಹಾಕಿದ್ದರು.

"ದಂಡ": ಶತಭಿಷ ಕೊನೆಯ ಅಸ್ತ್ರ ಪ್ರಯೋಗಿಸಿದ...

"ದೆನ್ ಐ ವಿಲ್ ಡ್ರಾಪ್ ಓಟ್...."

"ಐ ಡೋಂಟ್ ಹಾವ್ ಟೈಂ ಫಾರ್ ದಿಸ್ ಸ್ಟುಪಿಡ್ ಗೇಮ್...ಶತಭಿಷ..."
"ಬ್ರಿಂಗ್ ಸಮ್ವನ್ ಇನ್...ವಿ ವಿಲ್ ಶೂಟ್ ಆನ್ ಸ್ಯಾಟರ್ಡೇ...ಬೇಕಾದ್ರೆ ಇವನ್ ಸಂಡೇ..." ಚಾನೆಲ್ಲಿನ ನಾನ್ಫಿಕ್ಷನ್ ಹೆಡ್ ನೇರವಾಗಿ ಹೇಳಿದ್ದರು.

ಶತಭಿಷನ ಬತ್ತಳಿಕೆ ಖಾಲಿಯಾಗಿತ್ತು.

ಎದುರಾಡಲಾಗಲಿಲ್ಲ...

ಹೇಗಾದರೂ ಆಡಿಯಾನು? ಪಿ.ಹೆಚ್.ಡಿಅನ್ನು ಅರ್ಧಕ್ಕೇ ಬಿಟ್ಟು ಇಂಟರ್ನೆಟ್ಟಿನಲ್ಲಿ ಕತೆ ಕವನ ಬರೆಯುತ್ತಿದ್ದವನಿಗೆ ನೆಟ್ಟಗೊಂದು ಕೆಲಸ ಕೊಟ್ಟು ಅನ್ನ ಹಾಕಿದವರು ಅವರು...ಅವನಿಗೆ ಅಕ್ಕನ ಸಮಾನ ಆಕೆ. ಆ ನಾನ್ಫಿಕ್ಷನ್ ಹೆಡ್ ಅನ್ನುವುದು ಒಂದು ಡೆಸಿಗ್ನೇಷನ್ ಅಷ್ಟೆ...ಅಸಲಿಗೆ ಈತನ ಗುರು, ಮಾರ್ಗದರ್ಶಿ, ಇಂಡಸ್ಟ್ರಿಯ ಗಾಡ್ಫಾದರ್ ಎಲ್ಲ ಆಗಿದ್ದು ಆಕೆಯೇ...

"ಐ ನೌ ಯು ಕಾನ್ ಡೂ ಇಟ್...ಚೆನಾಗ್ ಮಾಡ್ತಿಯಾ ಕಣೋ" ಎಂದು ಬೆನ್ನು ತಟ್ಟಿ ಕಳಿಸಿದ್ದರು ಕ್ಯಾಬಿನ್ನಿಂದ...

ಶತಭಿಷನ ತಲೆ ಗೊಬ್ಬರವಾಗಿತ್ತು. ಒಂದೂವರೆ ತಿಂಗಳಿನಿಂದ ಮಾಡಿದ ಪ್ಲಾನಿಂಗ್ ಎಲ್ಲವೂ ತಲೆಕೆಳಗಾಗಿತ್ತು. ರಿಯಾಲಿಟಿ ಷೋ ಒಂದರ ಐದನೇ ಸೀಸನ್ನ ತಯಾರಿಯಲ್ಲಿದ್ದ ಶತಭಿಷ, ಆಂಕರ್ ಬಗ್ಗೆ ತಲೆಕೆಡಿಸಿಕೊಂಡೇ ಇರಲಿಲ್ಲ..ಅವಲೋಕನಾಳ ಜಾಗದಲ್ಲಿ ಮತ್ತೊಬ್ಬರನ್ನು ಕಲ್ಪಿಸಿಕೊಳ್ಳುವುದೂ ಸಾಧ್ಯವಿರಲಿಲ್ಲ.
****
"ಮೇಡಮ್ ಮೇಲ್ ಕಳ್ಸಿದೀನಿ..." ಅಂದು ಶತಭಿಷ ಸಣ್ಣ ಧ್ವನಿಯಲ್ಲಿ ಹೇಳಿದ್ದ.

"ಓ.ಕೆ" ಆಕೆ ಥಂಬ್ಸ್ ಅಪ್ ನೀಡಿದ್ದಳು. ಜೇ.ಬಿ.ಎಲ್ ವೈರ್ಲೆಸ್ ಹೆಡ್ಫೋನು ಆಗೀಗ ಲೈಟ್ ಮಾಡುತ್ತಿತ್ತು..

"ಮೇಡಮ್ ಕರೆಕ್ಟ್ ಇದ್ಯಾ?" ಪ್ಯಾಂಟ್ರಿಯಲ್ಲಿ ಸಿಕ್ಕಾಗ ಶತಭಿಷ ಮತ್ತೆ ನೆನಪಿಸಿದ್ದ.

"ಹಮ್...ಆಲ್ಮೋಸ್ಟ್...ಬಟ್ ಒಂದ್ ಮಿಸ್ಟೇಕ್ ಇದೆ...." ಆಕೆಯ ಮುಖ ಗಂಭೀರವಾಗಿತ್ತು. ಪಕ್ಕದಲ್ಲಿದ್ದ ಕಲೀಗ್ ನಗುವನ್ನು ತಡೆದಿಟ್ಟುಕೊಂಡಿದ್ದಳು.

"ಏನು?" ಶತಭಿಷ, ಪೆಚ್ಚಾಗಿಯೇ ಕೇಳಿದ..

"ಇಟ್ಸ್ ಅವಿ...ನಾಟ್ ಅವಲೋಕನಾ ಮೇಡಮ್..." ಆಕೆಯ ಮುಖದಲ್ಲಿ ತುಂಬುನಗೆಯಿತ್ತು. ಪಕ್ಕದಲ್ಲಿದ್ದ ಕಲೀಗ್ ಜೋರಾಗಿ ನಕ್ಕಿದ್ದಳು...

"ಅದೇನೋ ರೂಢಿ...ಹೊಸದಾಗ್ ಪರಿಚಯ ಆಗಿರದಲ್ವಾ..." ಶತಭಿಷ ತಲೆಕೆರೆದ....

"ಹಮ್...ಪರಿಚಯ ಮಾಡ್ಕೊಳ್ಳೇ ಬೇಕು..ಯಾಕಂದ್ರೆ ನೆಕ್ಸ್ಟ್ ಷೋಗೆ ನೀವೇ ಸ್ಕ್ರಿಪ್ಟ್ ಬರೀತಾ ಇರೋದು...." ಶತಭಿಷನ ಮುಖ ಅರಳಿತ್ತು
.
ಆತ ಕೆಲಸಕ್ಕೆ ಸೇರಿದಾಗಿಲಿನಿಂದ ಇಂಡಿಪೆಂಡೆಂಟ್ ಆಗಿ ಬರೆಯುವುದಕ್ಕೆ ಸಿಕ್ಕ ಮೊದಲ ಷೋ ಆಗಿತ್ತದು. ಅವಲೋಕನಾ ನಾನ್ಫಿಕ್ಷನ್ ಟೀಂನಲ್ಲಿದ್ದಳು. ಕಂಟೆಸ್ಟೆಂಟ್ಗಳ ಬಟ್ಟೆ-ಮೇಕಪ್ ಉಸ್ತುವಾರಿ ವಹಿಸಿದ್ದಳು.

ಷೋ ನಿಧಾನವಾಗಿ ಮುಂದುವರೆದಂತೆ ಇಬ್ಬರೂ ಒಳ್ಳೆಯ ಸ್ನೇಹಿತರಾದರು. ಬಹುವಚನದಿಂದ ಮಾತುಕತೆ ಏಕವಚನಕ್ಕಿಳಿಯಿತು. ಆಫೀಸಿನ ಮ್ಯಾಟರ್ಗಳ ಜೊತೆಗೆ ಪರ್ಸನಲ್ ಸಂಗತಿಗಳೂ ಕಷ್ಟ-ಸುಖ ಮಾತಾಡುವಾಗ, ಮಧ್ಯಾನ್ಹ ಊಟ ಮಾಡುವಾಗ ವಿನಿಮಯ ಆಗತೊಡಗಿದವು. ಆಕೆಗೆ ಶತಭಿಷನ ಬರವಣಿಗೆಯ ಮೇಲೆ ಅಪಾರ ವಿಶ್ವಾಸವಿತ್ತು. ಆತನಿಗೆ ಅವಲೋಕನಾಳ ಉತ್ಸಾಹ ನೋಡಿ ಹೆಮ್ಮೆ ಅನಿಸುತ್ತಿತ್ತು. ಆಕೆಯ ಪೇಷನ್ಸ್ ತನಗಾದರೂ ಇರಬಾದಿತ್ತಾ ಎಂದು ಹಲವಾರು ಬಾರಿ ಅಂದುಕೊಂಡಿದ್ದ... ಹೀಗೇ ಒಂದು ಸೀಸನ್ ಕಳೆದು ಹೋಗಿತ್ತು.
***
ಒಂದು ದಿನ ಬೆಳಿಗ್ಗೆ ಬೇಗ ಬಂದಿದ್ದ ಇಬ್ಬರೂ ಪಿ.ಸಿ.ಆರ್ನಲ್ಲಿ ಕ್ರ್ಯೂ-ಆರ್ಟಿಸ್ಟ್ಗಳಿಗೆ ಕಾದು ಕೂತಿದ್ದರು...

"ಒಂದಿನ ಡೈರೆಕ್ಟರ್ ಆಗ್ಬೇಕ್ ಕಣೇ" ಶತಭಿಷ ಮನದ ಇಂಗಿತ ತೋಡಿಕೊಂಡಿದ್ದ.

"ಆಗ್ತಿಯಾ ಬಿಡೋ....ಸ್ವಲ್ಪ ಕನೆಕ್ಷನ್ ಜಾಸ್ತಿ ಮಾಡ್ಕೋ.."

"ಹೂಂ ನೋಡಣಾ..."

"ಒಂದಿಷ್ಟ್ ಕಾನ್ಸೆಪ್ಟ್ ರೆಡಿ ಮಾಡ್ಕೋ...ಟೈಂ ನೋಡಿ ಪಿಚ್ ಮಾಡು..."

"ಹೂಂ..ಒಂದೆರಡ್ ಐಡಿಯಾ ಇದೆ ಕಣೆ...ಹೇಳ್ಳಾ?"

"ಹಮ್...ಎರಡ್ ಐಡಿಯಾನಾ?ಇವತ್ತಿಗೇ ಮುಗ್ಯತ್ತಾ?"

"ಮುಗ್ಯತ್ತೆಲೇಯ್..ಯಾಕ್ ಹಂಗ್ ಕೇಳ್ತೀಯಾ?"

"ಏನಿಲ್ಲಾ..ನೀನು ಲೆಕ್ಚರರ್ ಆಗ್ ಇದ್ದೋನಲ್ವಾ? ಕುಯ್ಯದ್ ಜಾಸ್ತಿ ಅಂತಾ..."

"ಹಂಗೆಲ್ಲಾ ಏನಿಲ್ಲಾ...ಯು ವಿಲ್ ಲವ್ ಇಟ್..."

"ಐ ಅಮ್ ಲಿಸನಿಂಗ್"

"ಒಂದು ರಿಯಾಲಿಟಿ ಷೋ...ಅಕ್ಚುಲಿ ಅ ಟ್ರಾವೆಲ್ ಷೋ...ಒಂದ್ ಟ್ವೆಂಟಿ ಎಪಿಸೋಡ್ಸ್ ಇರತ್ತೆ...ಎಲ್ಲಾ ಡಿಸ್ಟ್ರಿಕ್ಟ್ಗೂ ಹೋಗ್ತಿವೀ..ಅಲ್ಲಿ ಪ್ಲೇಸಸ್ ವಿಸಿಟ್ ಮಾಡ್ತಿವೀ.."

"ಆಮೇಲೆ?"

"ಏನಿಲ್ಲಾ ಅಷ್ಟೇ..."

"ಹೆಂಗಿದೇ?"

"ಕೇಳ್ತಾ ಇದ್ರೆನೇ ನಿದ್ದೆ ಬಂದೋಗತ್ತೆ ಕಣೋ..."

"ಗೂಬೆ...ಅದ್ ಹೇಳಿದ್ರೆ ಅರ್ಥ ಆಗಲ್ಲಾ...ಮಾಡ್ ತೋರಿಸ್ಬೇಕು.."

"ಮಾಡು...ಯಾರ್ ಬೇಡ ಅಂದ್ರು..."

"ಮಾಡ್ತಿನಿ...ಡೆಫಿನೇಟ್ಲೀ..."
"ಹಮ್..."

"ನಿಂಗ್ ಏನಾಗ್ಬೇಕು ಅಂತಾ?"

"ಏನಿಲ್ಲ ಕಣೋ...ಐ ಆಮ್ ಹ್ಯಾಪಿ ವೇರ್ ಐ ಆಮ್..."

"ಕಮ್ ಆನ್...ಏನಾದ್ರೂ ಬೇಕು ಅನ್ಸತ್ತೆ...ಏನ್ ಬೇಕು ನಿಂಗೆ?"

"ಹಮ್...ನಂಗ್ ಒಂದ್ ದಿನದ್ ಮಟ್ಟಿಗಾದ್ರೂ ಆಂಕರ್ ಆಗ್ಬೇಕ್ ಕಣೋ"

"ಓಹ್. ನೈಸ್..ಅದೇನ್ ಹಂಗೆ?"

"ಬರೀ ಬೇರೆಯವ್ರ್ಗೆ ಡ್ರೆಸ್ ಸೆಲೆಕ್ಟ್ ಮಾಡೋದೇ ಆಗೋಯ್ತು...ನಂಗೂ ಬಿಟ್ಟಿಯಾಗಿ ಡ್ರೆಸ್ ಹಾಕ್ಕೊಬೇಕು..ಪುಕ್ಸಟ್ಟೇ ಮೇಕಪ್ ಮಾಡಸ್ಕೋಬೇಕು...." ಮಾತು ಮುಗಿಸುವುದೊರಳಾಗಿ ಆಕೆಯೇ ಜೋರಾಗಿ ನಗುತ್ತಿದ್ದಳು...

ಶತಭಿಷ ಸುಮ್ಮನೇ ಹಲ್ಲು ಕಿಸಿದ.

ಅಷ್ಟರಲ್ಲೇ ಆಕೆಯ ವಾಕಿ-ಟಾಕಿ ಸದ್ದು ಮಾಡಿತು
"ಅವಿ ಕಮಿನ್ ಅವಿ..."
"ಗೋ ಫಾರ್ ಅವಿ"
"ಕಾಸ್ಟ್ಯೂಮ್ ಎಲ್ಲಾ ರೆಡಿ ನಾ?"
"ರೆಡಿ ಆಗ್ತಿದಾರೆ.."
"ಫಾಲೋ ಅಪ್ ಮಾಡಿ...ಐ ವಾಂಟ್ ದೆಮ್ ಆನ್ ದ ಫ್ಲೋರ್ ವಿದಿನ್ ಫಿಫ್ಟೀನ್ "
"ಕಾಪಿ ಕಾಪಿ"
"ಬಾಯ್ ಕಣೋ..." ಎಂದು ಕಿರುನಗೆಯೊಂದಿಗೆ ಪಿ.ಸಿ.ಆರ್ ಬಿಟ್ಟು ಹೊರಟಿದ್ದಳು ಅವಲೋಕನಾ...
***
ಮುಂದಿನ ಸೀಸನ್ಗಳಲ್ಲೂ ಇಬ್ಬರೂ ಒಟ್ಟಿಗೆ ಕೆಲಸ ಮಾಡಬೇಕಾಗಿ ಬಂತು. ಆಗ ಆತನೇ ಪೂರ್ತಿ ಕಂಟೆಂಟ್ ಕೆಲಸ ನೋಡಿಕೊಳ್ಳುತ್ತಿದ್ದ. ಟಾಕ್ಬ್ಯಾಕ್ ಕೂಡ ಆತನೇ ನೀಡುತ್ತಿದ್ದ. ಆಕೆ ಕಂಟೆಸ್ಟೆಂಟ್ಗಳ ಪೂರ್ತಿ ಉಸ್ತುವಾರಿ ವಹಿಸಿದ್ದಳು. ಜಡ್ಜ್ಗಳನ್ನೂ ನೋಡಿಕೊಳ್ಳುವ ಜವಾಬ್ದಾರಿಯನ್ನು ಆಕೆಗೆ ವಹಿಸಲಾಗಿತ್ತು. ಇಬ್ಬರ ಕೆಲಸವೂ ಚೆನ್ನಾಗಿಯೇ ಸಾಗುತ್ತಿತ್ತು. ದುರದೃಷ್ಟವಶಾತ್ ಆ ಬಾರಿಯ ಷೋನ ರೇಟಿಂಗು ಪಾತಾಳಕ್ಕಿಳಿಯಿತು. ಆಂಕರ್ ಬದಲಾಯಿಸಿ ಎಂಬುದು ಸೋಷಿಯಲ್ ಮೀಡಿಯಾದಲ್ಲಿ ಎದ್ದು ಕಾಣಿಸುತ್ತಿದ್ದ ಕಮೆಂಟ್ ಆಗಿತ್ತು. ಡೈರೆಕ್ಷನ್ ಟೀಂ ಪರ್ಯಾಯ ವ್ಯವಸ್ಥೆಯ ಬಗ್ಗೆ ಆಲೋಚಿಸುತ್ತಿತ್ತು.

ಅವತ್ತು ಶತಭಿಷ ಪಿ.ಸಿ.ಆರ್ನಲ್ಲಿ ಕೂತು ಎಲ್.ಇ.ಡಿ ಲೈಟಿನಲ್ಲಿ ಸ್ಕ್ರಿಪ್ಟಿಗೆ ಫೈನಲ್ ಟಚ್ ಕೊಡುತ್ತಲಿದ್ದ. ಪಕ್ಕದಲ್ಲೇ ಡೈರೆಕ್ಟರ್ ಕುಳಿತಿದ್ದರು.

"ಯಾರ್ನಾದ್ರೂ ಸ್ಕಿನ್ ಟೆಸ್ಟ್ ಗೆ ಕಳ್ಸಿ" ಎಂದು ಪಕ್ಕದಲ್ಲೇ ಇದ್ದ ಡಿ.ಓ.ಪಿ ಅಸಿಸ್ಟಂಟ್ ವಿನಂತಿಸಿದ.

ಅಷ್ಟರಲ್ಲೇ ಡೈರೆಕ್ಟರ್ಗೆ ಕಾಲ್ ಬರಲಾಗಿ ಶತಭಿಷನ ಭುಜ ತಟ್ಟಿ ಡಿ.ಓ.ಪಿ ಅಸಿಸ್ಟಂಟ್ ಕಡೆ ತೋರಿಸಿ ಅವರು ಎದ್ದು ಹೋದರು. ಶತಭಿಷ ಫ್ಲೋರ್ ಮ್ಯಾನೇಜರ್ಗೆ ಪೇಜ್ ಮಾಡಿದ. ಆತ ಬ್ಯುಸಿ ಇರುವುದಾಗಿ ತಿಳಿಯಿತು.

ಅವಲೋಕನಾಳಿಗೆ ಪೇಜ್ ಮಾಡಿದ.
"ಇಲ್ ಯಾರೂ ಇಲ್ಲ..ನಾನ್ ಒಬ್ಳೇ ಇರೋದು" ಆಕೆ ವಾಪಸ್ ಪೇಜ್ ಮಾಡಿದ್ದಳು.

ಡಿ.ಓ.ಪಿ ಅಸಿಸ್ಟಂಟ್ ಮತ್ತು ಶತಭಿಷ ಮುಖ-ಮುಖ ನೋಡಿಕೊಂಡರು.

ಡಿ.ಓ.ಪಿ ಅಸಿಸ್ಟಂಟ್ ಬೇಗ ಕೆಲಸ ಮುಗಿಸುವಂತೆ ಮುಖ ಸಣ್ಣಗೆ ಮಾಡಿದ.

"ಸರಿ ನೀನೇ ಬರಕಾಗತ್ತಾ ಒಂದ್ ನಿಮ್ಷಾ?" ಶತಭಿಷ ಅಂಜುತ್ತಲೇ ವಿನಂತಿಸಿದ.

"ಏಯ್... ಆಗಲ್ಲಾ ಕಣೋ....ಬೇರೆ ಯಾರೂ ಇಲ್ವಾ?" ಆಕೆಗೆ ಅಷ್ಟೇನೂ ಇಷ್ಟವಿರಲಿಲ್ಲ...

"ಯಾರೂ ಕಾಣ್ತಿಲ್ಲಾ...ಪ್ಲೀಸ್ ಪ್ಲೀಸ್ ಪ್ಲೀಸ್...ಪ್ಯಾಕಪ್ ಆದ್ಮೇಲೆ ಐಸ್ ಕ್ರೀಮ್ ಪಕ್ಕಾ..." ಆತ ಪೂಸಿಹೊಡೆಯುತ್ತಿದ್ದ...

"ಓ.ಕೆ ಓ.ಕೆ... ಟೂ ಮಿನಿಟ್ಸ್..." ಆಕೆ ಕಂಟೆಸ್ಟಂಟ್ಗಳ ಜವಾಬ್ದಾರಿಯನ್ನು ಇಂಟರ್ನ್ ಒಬ್ಬನಿಗೆ ವಹಿಸಿ ಸ್ಟೇಜು ಹತ್ತಿದಳು.

ಡಿ.ಓ.ಪಿ ಅಸಿಸ್ಟಂಟ್ ಕಲರ್ ಕರೆಕ್ಷನ್, ಫೋಕಸ್ಗಳ ಬಗ್ಗೆ ಗಮನ ಹರಿಸಿದ್ದ. ಕನ್ನಡ-ತಮಿಳು-ಹಿಂದಿಯಲ್ಲಿ ಕ್ಯಾಮರಾಮ್ಯಾನ್ಗಳಿಗೆ ಸೂಚನೆಗಳನ್ನು ಕೊಡುತ್ತಿದ್ದ. ಎಲ್ಲ ಸರಿ ಇದೆ ಎಂದು ಖಾತ್ರಿಯಾದಮೇಲೆ ಆತ "ಓ.ಕೆ ಮೇಡಮ್" ಎನ್ನುತ್ತಿದ್ದ..."ಆ ಕಡೆ ನೋಡಿ ಮೇಡಮ್..ಅಲ್ ನಿಲ್ಲಿ ಮೇಡಮ್" ಎಂದು ಹೇಳುತ್ತಲೇ ಇದ್ದ.
ಅಷ್ಟರಲ್ಲಿ ಡೈರೆಕ್ಟರ್ ತಮ್ಮ ಸೀಟಿಗೆ ಬಂದು ಕೂತರು. ಶತಭಿಷ ಸ್ಕ್ರಿಪ್ಟಿಗೆ ಫೈನಲ್ ಟಚ್ ಕೊಡುವುದನ್ನು ಮುಂದುವರೆಸಿದ.

ಇದ್ದಕ್ಕಿದ್ದಂತೇ ಡೈರೆಕ್ಟರು ಅವಲೋಕನಾಳಿಗೆ ಟಾಕ್ಬ್ಯಾಕ್ ಇಯರ್ಫೋನ್ ತೊಡಿಸುವಂತೆ ಹೇಳಿದರು. ಶತಭಿಷನಿಗೆ ಸ್ಟಾರ್ಟಿಂಗ್ ಲೈನ್ ಓದು ಎಂದಿದ್ದರು. ಶತಭಿಷ ಮತ್ತು ಅವಲೋಕನಾ ಇಬ್ಬರೂ ಇದಕ್ಕೆ ತಯಾರಾಗಿರಲಿಲ್ಲ. ಶತಭಿಷ ಎನ್ ಹೇಳ್ಳಿ ಎನ್ನುವಂತೆ ಡೈರೆಕ್ಟರ್ಗೆ ಕೇಳಲಾಗಿ, ಓಪನಿಂಗ್ ಲೈನ್ಸ್ ಎಂದಿದ್ದರು. ಅವಲೋಕನಾ ಅದುವರೆಗೆ ಆಂಕರ್ಗಳ ಜೊತೆ ರನ್ ಆರ್ಡರ್ ಬಗ್ಗೆ ಡಿಸ್ಕಸ್ ಮಾಡಿದ್ದಳೇ ಹೊರತು ಸ್ಕ್ರಿಪ್ಟ್ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಆಂಕರಿಂಗ್ ಅಂತೂ ದೂರದ ಮಾತು.
ಶುರುಶುರುವಿನಲ್ಲಿ ಸ್ವಲ್ಪ ತಡವರಿಸಿದಳಾದರೂ, ಒಂದೆರೆಡು ಟೇಕ್ಗಳ ನಂತರ ಆಕೆಗೆ ಕಾನ್ಫಿಡೆನ್ಸ್ ಬಂತು. ಕೊನೆಗೊಮ್ಮೆ ಪೂರ್ತಿ ಲೈನ್ಅನ್ನು ಸರಿಯಾಗೇ ಹೇಳಿದಳು.

"ಏನಾದ್ರೂ ಇನ್ಫಾರ್ಮಲ್ ಆಗಿ ಪ್ರಾಂಪ್ಟ್ ಮಾಡಿ" ಎಂದಾಗ ಶತಭಿಷ ಅರ್ಜಂಟಿನಲ್ಲಿ ಏನೋ ಹೇಳಿದ್ದನ್ನು ಇಂಪ್ರವೈಸ್ ಮಾಡಿ ತಾನೇ ಪಿಕಪ್ ಮಾಡಿಕೊಂಡು ಮಾತು ಮುಂದುವರೆಸಿದಳು...

ಶತಭಿಷನಿಗೆ ಆಶ್ವರ್ಯವೋ ಆಶ್ವರ್ಯ...ತಾನೇ ಸರಿಯಾಗಿ ಪ್ರಾಂಪ್ಟ್ ಮಾಡಲಿಲ್ಲವೇನೋ ಎಂಬ ಅಪರಾಧಿಭಾವವೂ ಕಾಡಿತು.
"ಓ.ಕೆ ವೆಲ್ ಡನ್ ಅವಿ. ಮಾತಾಡಣಾ ಮತ್ತೆ..." ಡೈರೆಕ್ಟರ್ ಶಭಾಸ್ಗಿರಿ ಕೊಟ್ಟು, ರೋಲ್ಗೆ ತಯಾರಾಗತೊಡಗಿದರು.

ಸೆಟ್ಟಿನಲ್ಲೇನೋ ಹೊಸ ಗುಲ್ಲೆದ್ದಿತು. ಅವಲೋಕನಾಳಿಗೆ ವಿಶೇಷ ಮರ್ಯಾದಿ ಸಿಗಲಾರಂಭಿಸಿತು. ಅಲ್ಲಿಯವರೆಗೆ ಅಷ್ಟೇನೂ ಮಾತಾಡಿಸದಿದ್ದ ಪ್ರೊಡಕ್ಷನ್ ಮ್ಯಾನೇಜರ್ಗಳೂ ಚೇರ್ ತರಿಸತೊಡಗಿದರು.

ಅಂದಿನ ಶೂಟಿಂಗ್ ಶತಭಿಷ ಮತ್ತು ಅವಲೋಕನಾರ ಪಾಲಿಗೆ ವಿಶೇಷವಾಗಿತ್ತು.

ಆ ಸಂಜೆಯೂ ಕೂಡಾ!

(ಮುಂದುವರೆಯುವುದು)

-ಚಿನ್ಮಯ
17/4/2019