Saturday, April 20, 2013

ನಾಳೆಯಾ ಬೆಳಗನು.......

ಸಮಸ್ಯೆಗಳು ಎಲ್ಲರಲ್ಲೂ ಇದ್ದಿದ್ದೆ...ಒಬ್ಬೊಬ್ಬರಿಗೆ ಒಂದೊಂದು ತರಹದ್ದು...
ಚಾಕಲೇಟು ಸಿಕಲಿಲ್ಲವೆಂಬ ಬಾಲಕ,
ಹುಡುಗಿ ಸಿಗಲಿಲ್ಲವೆಂಬ ಯುವಕ,
ನಿನ್ನೆಯ ನೆನಪಲ್ಲಿ ಇಂದು ಪರಿತಪಿಸುವ ಮುದುಕ
ಹೀಗೆ ಪ್ರಾಯಶಃ ಅವರವರಿಗೆ ಅವರವರದೇ ಸಮಸ್ಯೆಗಳು....
ಆರಾಮಾಗಿ ಹಾರಾಡಿಕೊಂಡಿರುವ ಮನಸ್ಸನ್ನು ಹಿಂಡಿ ಹಿಪ್ಪೆ ಮಾಡುವುದೇ ಬಹುಷಃ ಈ ಯೋಚನೆಗಳು...ಅವುಗಳನ್ನು ತಿಳಿಯಾಗಿಸಿವಾ ಎಂಬ ಆಶಯ ಹೊತ್ತ ಒಂದೆರಡು ಸಾಲುಗಳು ನಿಮ್ಮ ಮುಂದೆ....
ಎಂದಿನಂತೆ ಆತ್ಮೀಯತೆಯಿಂದ ದಯವಿಟ್ಟು   ಅನಿಸಿಕೆ,ತಪ್ಪು-ಒಪ್ಪುಗಳನ್ನು ಕಮೆಂಟಿಸಿ...ನನ್ನನ್ನು ಆಶೀರ್ವದಿಸಿ...




ನಾಳೆಯಾ ಬೆಳಗನು ಶಿಖರದೀ ನೋಡುವಾ,
ತೋಳಿನಾ ಬಲದಲೇ ಶರಧಿಯಾ ಈಜುವಾ

ಸವೆದಿಹ   ಹಾದಿಯ  ಋಣವದು    ಕಳೆದಿದೆ,
ಅವಿತಿಹ ಎದೆಯೊಳ  ದನಿಯದು ಮೊಳಗಿದೆ,
ನವಯುಗ ನಾಂದಿಗೆ  ಚಣವದು  ಮೊಳೆತಿದೆ,
ಸವಿಸವಿ   ಕನಸಿನ     ಸರಪಣಿ    ಸೆಳೆದಿದೆ.

ಜವರಾಯನ ಕರಿ ಮೊಸಳೆಯು  ಮುಳುಗಿದೆ,
ಬವಣೆಯ  ತೆರೆಗಳ  ನೆರೆಯದು    ಇಳಿದಿದೆ,
ಸಾವಿನ   ಸುಳಿಗಳ    ಭಯವದು   ಅಳಿದಿದೆ,
ಭವಿತವ್ಯದ  ಗೆರೆ    ಕೈಯ್ಯಲೆ    ಹೊಳೆದಿದೆ.

ಕವಿದಿಹ ಕರಿಮೆದೆ ಹನಿಯದು ಜೊಳಗಿದೆ,
ಭುವನದ ಹಾದಿಗೆ ಲಾಟೀನು    ಬೆಳಗಿದೆ.
ನಾವೆಯ ಮರೆತಿಹ ಪಯಣವು ಎಳೆದಿದೆ,
ಜವ್ವನದಾ   ಹಸಿ   ಹಂಪಲು    ಗಳತಿದೆ .

ನಾಳೆಯಾ ಬೆಳಗನು...............

(ಶಬ್ಧಾರ್ಥ : ಜವರಾಯ-ಯಮ ,ಭವಿತವ್ಯ-ಭವಿಷ್ಯ,ಮೆದೆ-ಗುಂಪು(ಸಾಮಾನ್ಯವಾಗಿ ಹುಲ್ಲಿನ ಕಟ್ಟನ್ನು ಮೆದೆ ಎಂದು ಬಳಸುತ್ತಾರೆ),ಭುವನ-ಭೂಮಿ,ಜಲ ,ಜವ್ವನ-ಯವ್ವನ )
-ಚಿನ್ಮಯ ಭಟ್ಟ




ಹಮ್...ನಿಜ ಹೇಳ್ಬೇಕು ಅಂದ್ರೆ  ನಾನೂ ಪ್ರಾಜೆಕ್ಟು,ಸೆಮಿನಾರು ಅವು ಇವು ಅಂತಾ ತಲೆ ಕೆಡಿಸಿಕೊಂಡು ಓಡಾಡುತ್ತಿದ್ದಾಗ,ನನಗೆ ಸ್ಪೂರ್ತಿಯಾಗಿದ್ದು ದಿನೇಶ ಮಾನೀರ್ ಅವರು ಕೊಟ್ಟ ಒಂದು ಛಾಯಾ ಚಿತ್ರ...ಅವರ ಒಂದು ಫೋಟೋ-ಬರಹಗಳ ಸರಣಿಯ ಒಂದು  ಭಾಗವಾಗಿ ನನಗೆ ಅವರ ಛಾಯಾ ಚಿತ್ರಕ್ಕೆ  ಒಂದೆರಡು ಸಾಲು ಬರೆಯುವ ಅವಕಾಶ ಸಿಕ್ಕಿತು....ಆ ಚಿತ್ರಕ್ಕೆ ಅವು ಸೂಕ್ತವಾದ ಸಾಲುಗಳು ಅವು ಹೌದೋ ಅಲ್ಲವೋ ಗೊತ್ತಿಲ್ಲ,ಆ ಕ್ಷಣದಲ್ಲಿ ನನ್ನ ಮನಸ್ಥಿತಿಯಲ್ಲಿ ಹೊಳೆದ ಸಾಲುಗಳು ಇವು...ಅದನ್ನು ಪ್ರೀತಿಯಿಂದ ಅವರ ವೆಬ್ ಸೈಟಿನಲ್ಲಿ ಪ್ರಕಟಿಸಿ,ನನ್ನನ್ನು ಪ್ರೋತ್ಸಾಹಿಸಿದ್ದಾರೆ... ದಯವಿಟ್ಟು ಒಮ್ಮೆ ಕಣ್ಣಾಡಿಸಿ..
(ಆ ಸುಂದರ  ಛಾಯಾ ಚಿತ್ರ ಎಲ್ಲಿ ನನ್ನ ಸಾಹಿತ್ಯವನ್ನು ನುಂಗಿ ಬಿಡುವುದೋ ಎಂಬ ಹೊಟ್ಟೆಕಿಚ್ಚಿನಿಂದ ಚಿತ್ರವನ್ನು ಇಲ್ಲಿ ಹಾಕಿಲ್ಲ...ಕ್ಷಮಿಸಿ) 

ಹಾಂ..ಹೇಳಕ್ ಮರ್ತಿದ್ದೆ ..ಇವತ್ತು ಎರಡನೇ ಇಂಟರ್ನಲ್ಸು ಮುಗೀತು...:D..
ಪರವಾಗಿಲ್ಲ,ಸಾಧಾರಣದಿಂದ ಮಧ್ಯಮ ....ಹಾ ಹಾ...

ಸರಿ.... ಕಾಯ್ತಿರ್ತೀನಿ,ನಿಮ್ ಕಮೆಂಟ್ ಗೆ..ಮರಿಬೇಡಿ...:)
ನಮಸ್ತೆ...