Saturday, May 3, 2014

ಶ್ರಾಯ

ಬಹುಷಃ ಜೀವನದ ಘಟ್ಟಗಳೇ ಹಾಗೆ ಅನ್ನಿಸುತ್ತದೆ.,ಎಲ್ಲಿಂದಲೋ ಗುರುತು ಪರಿಚಯವಿಲ್ಲದೆಡೆಗೆ ಬಂದಾಗ ಹೆದರಿರುತ್ತೇವೆ, ಇದು ನಮ್ಮದಲ್ಲದ ಪರಿಸರ ಎಂದು ಕೊರಗುತ್ತೇವೆ, ಕ್ರಮೇಣ ನಮಗೇ ತಿಳಿಯದಂತೆ ಅಲ್ಲಿಗೆ ಹೊಂದಿಕೊಂಡುಬಿಡುತ್ತೇವೆ,ಅಲ್ಲಿನ ಚಟುವಟಿಕೆಗಳಿಗೆ ತೀವ್ರವಾಗಿ ಸ್ಪಂದಿಸತೊಡಗುತ್ತೇವೆ,ಅಲ್ಲಿಯವರೇ ಆಗಿಬಿಡುತ್ತೇವೆ. ಕೊನೆಗೊಂದು ದಿನ ಅದನ್ನೆಲ್ಲಾ ಬಿಟ್ಟು ಹೊರಡುವಾಗ ಮತ್ತೆ ನಮ್ಮ ಮನೆಯನ್ನೇ ಬಿಟ್ಟು ಹೋಗುವಾಗಿನ ತಳಮಳಗಳು ಶುರುವಾಗುತ್ತವೆ.  
ಇದು ನಾನು ಇಂಜಿನಿಯರಿಂಗ್ ಮುಗಿಸಿ ವಾಪಸ್ಸು ಹೊರಡುವಾಗ ಬರೆಯಲು ಶುರುಮಾಡಿದ ಕವನ.ಅದೇನೋ ಕುಂಟುತ್ತಾ ಸಾಗಿ ಈಗ ಈ ಆಕಾರ ತಲುಪಿದೆ.ದಯಮಾಡಿ ಓದಿ,ತಪ್ಪು-ಒಪ್ಪುಗಳನ್ನು ಮರೆಯದೇ ತಿಳಿಸಿ ಪ್ರೋತ್ಸಾಹಿಸಿ  

ಮಾರುಬೀದಿ ಸಾಲಿನೊಳು ಸೇರಿಹೋಗುವ ಮುನ್ನ
ಹೊಸಮಡಿಕೆ ಬುಡದಲ್ಲಿ ರವಿಸಿಹುದು ಹಳೆನೆನಪು
ನೂರು ಹಾದಿಬಲೆಯೊಳಗೆ ಕರಗಿ ಸಾಗುವ ಮುನ್ನ
ಬಿಸಿತಡಿಕೆ ಅಡಿಯಲ್ಲಿ ದ್ರವಿಸಿಹುದು ಕಳೆದೊನಪು

ಕಾಣದಬುದಿಯ ಪಯಣಕೆ ಒಂಟಿಹಡಗಲಿ ಬಂದು
ನಡುನೆಲದ ಬುಡದಲ್ಲಿ  ಕಾಲಿಡಲು ಬರಿದಿಗಿಲು
ಗೇಣಿಪಡೆದಾ ಭವನದಿ ಸ್ನೇಹದುದಕವ  ಮಿಂದು
ನಡೆಯೊಡನೆ ನಗೆಯಿರಲು ಗರಿಯಾಸೆ ಗಿರಿಮುಗಿಲು

ಹಾಲುಹಲ್ಲದು ಉದುರಿ ಮೈಲಿಗಲ್ಲದು ಚಿಗುರಿ
ಕಲಿಯುತಿರೆ ಹೊಸ ಈಜು,  ಬರದಿರದೆ ಎದುರುಸಿರು
ಬೇಲಿಯೆಲ್ಲೆಯ ದಾಟಿ ನೀಲಿಯಂಬರ ಮೀಟಿ
ಮೆಲಿಯುತಿರೆ ಮೆದುಎದೆಯ ಹನಿಸಿಹುದು ಹೊನ್ನೆಸರು

ತೊಳಕೆಬಳ್ಳಿಯು ತಡವಿ,ದಿಕ್ಕುತಪ್ಪಿರೆ ಅಡವಿ
ಹುಸಿನಡಿಗೆ ಕಾನ್ಗಿರಕಿ ,  ಹದತಪ್ಪಿ  ಮನದೊಲುವು
ಅರಿವ ದಿವಟಿಗೆ ಗೀರಿ ಗಮ್ಯ ಭೂಪಟ  ತೋರಿ
ಸಮಪಥದಿ ನಡೆಸಿರಲು ಗುರುತನಿಕೆ ನಯಮೆಲುವು

ಓಣಿಯೆಲ್ಲವ ಕಂಡು ಊರಿನನ್ನವ ಉಂಡು
ಕೊನೆಹುಲಿಕೆ ಬೇಸರಿಕೆ ,ಬರುಗಳಿಸೆ ಅಳುಮೊಗವು
ಬೆನ್ನದಂಟಿನ ನಂಟು ಕೈಗೆ ಕನಸಿನ ಗಂಟು
ತಿರುಗಿತದು  ಗಿರಗಿಟ್ಟಿ , ಹಾರಿರಲು  ನವಜಗವು

ಮಾರುಬೀದಿ ಸಾಲಿನೊಳು ಸೇರಿಹೋಗುವ ಮುನ್ನ…. 

--------------------------------------------------------------------------------------------
ಶಬ್ದಾರ್ಥ:
ರವಿಸು=ಆರ್ದ್ರವಾಗು,ನೀರೊಡೆ(ಮಳೆಗಾಲದಲ್ಲಿ ಮನೆಯ ಒಳನೆಲವು ತೇವಾಂಶಕ್ಕೆ ನೀರು ಉಗುಳುವುದನ್ನು ನೆನೆಸಿ ಬರೆದದ್ದು)
ಅಬುದಿ=ನೀರು,ಸರೋವರ
ಮೆಲಿಯುವುದು=ಚೆನ್ನಾಗಿ ಹದಮಾಡುವುದು(ಚಪಾತಿಹಿಟ್ಟನ್ನು ಮುದ್ದೆಥರ ಮಾಡಿ ತಿಕ್ತಾರಲ್ಲ ಅದು)
ತೊಳಕೆಬಳ್ಳಿ=ಇದನ್ನು ಹಾದು ಹೋದರೆ ಕಾಡಿನಲ್ಲಿ ದಾರಿತಪ್ಪುವುದೆಂಬ ಪ್ರತೀತಿ ಇರುವ ಬಳ್ಳಿ..ದಿಕ್ಕುಬಳ್ಳಿ,ದಿಕ್ ತಪ್ಸು ಬಳ್ಳಿ ಎಂದೂ ಕರೆಯುತ್ತಾರೆ
ಒಲುವು=ಆಯ,ಶರೀರದ ಸಮತೋಲನ
ಮೆಲುವು=ಹದವಾಗಿ ಜಾರುವ ದ್ರವ್ಯ (ಧಾರೆ ಚೆನ್ನಾಗಿ ಬರಲಿ ಎಂದು ಹಾಲುಕರೆಯುವ ಮುನ್ನ  ಆಕಳು/ಎಮ್ಮೆಯ ಮಲೆಗೆ ಚಿಕ್ಕಮಿಳ್ಳೆ ತುಪ್ಪ ಬೆಣ್ಣೆ ಹಚ್ಚುತ್ತಾರಲ್ವಾ ಅದಕ್ಕೆ ಮೆಲುವು ಎಂದು ಬಳಸುವುದನ್ನು ನೋಡಿದ್ದೆ )
ಹುಲಿಕೆ=ಬೆಳೆಯ ಕುಯ್ಲಿನ ಅಂತಿಮ ಕ್ಷಣಗಳು..ಈ ದಿನದಂದು ಸಿಹಿಹಂಚಿ ಖುಷಿಪಡುವುದು ವಾಡಿಕೆ
ಬರುಗಳಿಸು=ಅತಿಥಿಗಳನ್ನು ಮತ್ತೆಬನ್ನಿ ಎನ್ನುತ್ತಾ ವಾಪಸ್ಸು ಕಳಿಸಿಕೊಡುವುದು  

ವಾಚನವನ್ನು ಆಲಿಸಲು ಇಲ್ಲಿಗೆ ಕ್ಲಿಕ್ಕಿಸಿ : https://soundcloud.com/chinmay-bhat-3/ymep1oqarpmx