Friday, May 18, 2018

ಕ್ಲಾಥ್‍ವುಡ್ ಭಾಗ-2

ನಮಸ್ತೆ..ಹೇಗಿದೀರಾ?
ಇದು "ಯುವರ್ಸ್ ಕೋಟ್" ಮತ್ತು "ಕಹಳೆ" ಜಂಟಿಯಾಗಿ ಆಯೋಜಿಸಿದ್ದ ಜಗುಲಿಸಾಲು ಕಾರ್ಯಕ್ರಮದಲ್ಲಿ ವಾಚಿಸಿದ್ದ ಕವನ. ದಯವಿಟ್ಟು ಓದಿ/ನೋಡಿ, ತಪ್ಪು-ಒಪ್ಪು ತಿಳಿಸಿ...ಕಾಯ್ತಿರ್ತೀನಿ :)

-----------------
ಇನ್ನೇನು ಬೆಳಗಾಗುತ್ತಿತ್ತು;ದಿನಪತ್ರಿಕೆ ಹಾಲಿನ ವ್ಯಾನು ಹೊರಡುತ್ತಿತ್ತು
ಬಟ್ಟೆಗಳೆಲ್ಲ ರಾತ್ರಿಯ ಹರಟೆ-ಹಾಸ್ಯದ ಮೆಲುಕು ಹಾಕುತ್ತಿದ್ದವು
ನೆಂಟರ ಲುಂಗಿ ಮಾತ್ರ ಏಕಾಂಗಿಯಾಗಿ ಸುಮ್ಮನೇ ಕೂತಿತ್ತು

ಇದೇನು ಹೊಸದಲ್ಲ,ಇದೇನು ಮೊದಲಲ್ಲ, ಇದರಲ್ಲೇನೂ ವಿಶೇಷವಿಲ್ಲ
ಪರರ ನಗಿಸುವ ಹೃದಯದ ಹಿಂದೆ ನೋವಿರುವುದು ಗುಟ್ಟಾಗಿ ಉಳಿದಿಲ್ಲ
ಆದರೂ ತಿಳಿಯಬೇಕೆನಿಸಿದೆ ನೆಂಟರ ಲುಂಗಿಯ ಕತೆಯನ್ನ
ಠಾಟು-ಠೀಕಾಗಿ ಓಡಾಡಿಕೊಂಡಿದ್ದ ನೆಂಟರಲುಂಗಿ ಗಡ್ಡಬಿಡಲು ಕಾರಣವನ್ನ

ಹರೆಯದ ಹೊಸದರಲ್ಲಿ ನೆಂಟರಲುಂಗಿ ಮನೆಗೆ ಬಂತು
ಆಗೆಲ್ಲ ಅದು ನೆಂಟರಲುಂಗಿಯಾಗಿರಲಿಲ್ಲ;
ಅಸಲಿಗೆ ಅದಕ್ಕೆ ಡೆಸಿಗ್ನೇಷನ್ನೇ ಇರಲಿಲ್ಲ
ಮದುವೆಯ ಜವಳಿಗಂಟು ರೇಷ್ಮೆಸೀರೆಯ ಭರಾಟೆಯಲ್ಲಿ
ಇದನ್ನು ಯಾರೂ ಗಮನಿಸುವವರೇ ಇರಲಿಲ್ಲ
ಇದಕ್ಕೋ, ಊರೆಲ್ಲ ಮೆರೆಯಬೇಕೆಂಬ ಆಸೆ; 
ಆದರೆ ದಾರಿ ಮಾತ್ರ ತಿಳಿದಿರಲಿಲ್ಲ

ಪಕ್ಕದ ಕೋಣೆಯಲ್ಲಿ ಅತ್ತೆ ತನ್ನ ಮಗನಿಗೆ ಹೇಳುತ್ತಿದ್ದಳು
“ಈ ಬರ್ಮೂಡಾ ಎಲ್ಲ ಬೇಡ; ಇವತ್ತಾದ್ರೂ ಲಕ್ಷಣವಾಗಿ ಪಂಚೆ ಉಡು”
ನೆಂಟರಲುಂಗಿಗೆ ಖುಷಿಯೋ ಖುಷಿ; 
ಬಿಗಿದಪ್ಪಿಕೊಂಡಿತು ಅವನ ಸೊಂಟವನ್ನ
ನೋಡುವವರೆಂದರು,
“ಅರೆರೆ..ಇವತ್ತೇನು ಈ ಪಟ್ಟೆ ಪಟ್ಟೆ ಲುಂಗಿ.ಉಡು ಬಿಳಿ ಪಂಚೆಯನ್ನ”

ಬೆಂಗಳೂರಿನಿಂದ ಬಂದ ಅತ್ತೆಯ ಮಗ ಕಿತ್ತೆಸೆದ ಲುಂಗಿಯನ್ನ
ಇಸ್ತ್ರೀಮಾಡಿದ್ದ ಜೀನ್ಸ್ ಸಿಕ್ಕಿಸಿ, ತಿರುಗಿಸಿದ ಬೈಕಿನ ಕೀಲಿಯನ್ನ
ನೆಂಟರಲುಂಗಿ ಮಾತ್ರ ಅಲ್ಲೇ ಮುದುಡಿಬಿದ್ದಿತ್ತು
ತನ್ನ ಅದೃಷ್ಟವ ಹಳಿಯುತ್ತಿತ್ತು, ಮುಂದೇನು ಎಂದು ಯೋಚಿಸುತ್ತಿತ್ತು
ಏನಾದರೂ ಮಾಡಲೇಬೇಕೆಂದು ಹವಣಿಸುತ್ತಿತ್ತು

ಅಷ್ಟರಲ್ಲಿ ಅತ್ತೆ ಕೋಣೆಗೆ ಬಂದಳು;
ರೇಷ್ಮೆ ಸೀರೆ ಕುಪ್ಪಸ ಚಿಲ್ಲರೆ ಕಾಸು ಎಲ್ಲವನ್ನೂ ಮಂಚದ ಮೇಲಿಟ್ಟಳು
ನೆಂಟರಲುಂಗಿಯ ಕಣ್ಣು ಇನ್ನೂರಾ ಇಪ್ಪತ್ತು ಡಿಗ್ರಿ ತಿರುಗಿತು
ಸೀರೆ-ಕುಪ್ಪಸದ ಕಡೆಗಲ್ಲ, ಅದರ ಜೊತೆಗಿದ್ದ ರೇಷಿಮೆ ಶಾಲಿನ ಕಡೆಗೆ
ರಾತ್ರಿಯಾಯಿತು, ಎಲ್ಲರೂ ಮಲಗಿದ್ದರು
ನೆಂಟರಲುಂಗಿ ಮಾತ್ರ ಎಲ್ಲರಿಗಿಂತ ಬೇಗ ಎದ್ದಿತ್ತು

ಹಲೋ, ಮೈ ನೇಮ್ ಈಸ್ ----, 
ಹೌಡುಯು ಡೂ ಎಂದು ಮಾತನಾಡಿಸಿತು
ಹೈ ಹೌವ್ ಆರ್ ಯು ಎಂದು ಶಾಲು
ಪರಿಚಯಪೂರ್ವಕ ನಗೆಬೀರಿತು

ಅದೇ ಸಮಯದಲ್ಲಿ, ಪಕ್ಕದ ಕೋಣೆಯಲ್ಲಿ ವಾಟ್ಸಾಪ್ಪಿನ ಸ್ಮೈಲಿ ಹಾರಾಡುತ್ತಿತ್ತು
ಬೆಂಗಳೂರಿನ ಅತ್ತೆಯ ಮಗ -ಪಕ್ಕದೂರಿನ ಹುಡುಗಿಯ ವತಿಯಿಂದ
ಕರಕುಶಲ ಕೈಗಾರಿಕೆಯ ಪ್ರದರ್ಶನ ನಡೆಯುತ್ತಿತ್ತು
ಮತ್ತೆ ಬೆಳಗಾಯಿತು; ಕೆಲವರಿಗೆ ಬಹಳ ಬೇಜಾರಾಯಿತು
ರಾತ್ರಿಯ ಏಕಾಂತಕ್ಕಾಗಿ ಬಹಳೇ ಹೊತ್ತು ಕಾಯಬೇಕಾಯಿತು

ವಿಧಿಲಿಖಿತ, 
ಕೋಣೆಯಲ್ಲಿ ಹರಡಿದ್ದ ಲುಂಗಿಯಲ್ಲಿ ಸೀರೆಯ ರಾಶಿಯನ್ನ ಕಟ್ಟಿದರು
 ಕಳುವಾಗದಿರಲಿ ಎಂದು ಯಜಮಾನತಿ ಅದನ್ನು
ಜೋಪಾನವಾಗಿ ಕಪಾಟಿನಲ್ಲಿ ಬಚ್ಚಿಟ್ಟರು
ಆದರೆ ಕಳ್ಳತನ ಅದಾಗಲೇ ಆಗಿಹೋಗಿತ್ತು;
ನೆಂಟರಲುಂಗಿಯ ಹಾರ್ಟನ್ನ ರೇಷಿಮೆ ಶಾಲು ಅಪಹರಿಸಿತ್ತು

ವಿಧಿಲಿಖಿತ,
ಅತ್ತ ಜವಳಿಯಲ್ಲಿ ಚೂಡಿದಾರದ ಬಟ್ಟೆ ಕಮ್ಮಿಬಿತ್ತು
ಖರೀದಿಯ ಜವಾಬ್ದಾರಿ ಸುತ್ತಿ ಬಳಿಸಿ
ಬೈಕಿದ್ದ ಹುಡುಗ, ಪೇಟೆ ಗೊತ್ತಿದ್ದ ಹುಡುಗಿಯ ಮೇಲೆ ಬಿತ್ತು

ಜೊತೆಗೇ ಇದ್ದರೂ, ಇಬ್ಬರೂ ಇಲ್ಲಲ್ಲ ನಾಲ್ವರೂ ಅಂತರ ಕಾಯ್ದುಕೊಂಡಿದ್ದರು
ತಮಗೆ ಮಾತ್ರ ತಿಳಿಯುವಂತೆ ಕನಸಿನ ಅರಮನೆ ಕಟ್ಟುತ್ತಿದ್ದರು
ಮರುದಿನ ಮಧ್ಯಾನ್ಹದವರೆಗೂ ಅದು ಮುಂದುವರೆದಿತ್ತು
ಮುಂದಿನ ದಿಬ್ಬಣ ಪಕ್ಕದೂರಿಗೇ ಬರುವುದು ಬಹುತೇಕ ನಿಶ್ಚಿತವಾಗಿತ್ತು

ಮರುದಿನ, ಚಂದದ ಸೀರೆಯನುಟ್ಟು 
ಬಿತ್ತಕ್ಕಿಗಾಗಿ ಹುಡುಗಿ ಶಾಲುಹೊದ್ದಳು
ಅವನ ಡಿ.ಎಸ್.ಎಲ್.ಆರ್ ಕ್ಯಾಮರಾದಲ್ಲಿ 
ವಧು-ವರರಿಗಿಂತ ಅವಳ ಪೋಟೋಗಳೇ ಜಾಸ್ತಿ ಇದ್ದವು

ನೆಂಟರಲುಂಗಿ ಕೋಣೆಯಲ್ಲಿರಲಾಗದೇ 
ಯಾವುದೋ ಒಂದು ನೆಂಟರ ಸೊಂಟವನ್ನ ಅಪ್ಪಿಕೊಂಡಿತು
ಅಂದಿನಿಂದ ಅದಕ್ಕೆ ನೆಂಟರಲುಂಗಿಯ ಪಟ್ಟ ಪಕ್ಕಾ ಆಯಿತು

ಮದುವೆ ಮುಗಿದಮೇಲೆ ಹುಡುಗಿ ಬೈಕನ್ನೇರಿ ಹೊರಟಿದ್ದಳು
ಲುಂಗಿಗೆ ಬಾಯ್ ಹೇಳಲೆಂದು ಶಾಲು ನೆಲಕ್ಕೆ ಇಳಿದುಬಿತ್ತು

ಅದೇ ಘಳಿಗೆಯಲ್ಲಿ ಬೈಕಿನ ಚಕ್ರ ತಿರುಗಿತ್ತು
ಶಾಲು, ಶಾಲಿನ ಜೊತೆಗಿದ್ದ ಸೆರಗು, ಸೆರಗಿನ ಜೊತೆಗಿದ್ದ ಸೀರೆ
ಸೀರೆ ಉಟ್ಟಿದ್ದ ಹುಡುಗಿ ಅದಕ್ಕೆ ಬಲಿಯಾಗಿಯಾಗಿತ್ತು
ಶುಭ ಕಾರ್ಯ ಮುಗಿಸಿದ ಮನೆಯಲ್ಲಿ ಅಶುಭದ ಸುದ್ದಿ ಹರಡಿತು

ಚಿತೆಯು ಧಗಧಗ ದಹಿಸುವಾಗ ಎಲ್ಲರ ಕಣ್ಣಲ್ಲೂ ನೀರು
ಅಷ್ಟರಲ್ಲೇ ಯಾರೋ ಹುಡುಗಿಯ ಶಾಲನ್ನೂ ಬೆಂಕಿಗೆ ಬಿಸಾಡಿದರು
ಎಲ್ಲ ಮುಗಿದಿತ್ತು; ಹುಡುಗನಿಗಾಗಿ ಬೆಂಗಳೂರಿನ ಸ್ಲೀಪರ್ ಬಸ್ಸು ಕಾದಿತ್ತು
ಇತ್ತ ಪ್ರೇಯಸಿಯ ನೆನಪಲ್ಲಿ ಲುಂಗಿಯ ಗಡ್ಡಬೆಳೆದಿತ್ತು

ತಾನು ಶಾಲಿಗೆ ಪರಿಚಯವೇ ಆಗದಿದ್ದರೆ ಬಹುಷಃ ಹೀಗೆಲ್ಲ ಆಗುತ್ತಿರಲಿಲ್ಲ
ಶಾಲು ಬಗ್ಗೆ ತನಗೆ ಬಾಯ್ ಹೇಳುತ್ತಿರಲಿಲ್ಲ
ಇಬ್ಬರೂ ದೂರಾಗುತ್ತಿರಲಿಲ್ಲ
ನೆಂಟರ ಲುಂಗಿಯ ತಲೆಯಲ್ಲಿ ಬೇರೆ ಏನೇನೋ ಓಡುತ್ತಿತ್ತು
ಅಜನ್ಮ ಬ್ರಹ್ಮಚಾರಿಯಾಗುವ ಪಣತೊಟ್ಟಿತ್ತು

ಅತ್ತ ಬೆಂಗಳೂರಿನಲ್ಲಿ ಹುಡುಗನ ಬದುಕು 
ಎಂದಿನಂತೆ ಸಾಗಿತ್ತು

“ಈ ಮನುಷ್ಯರೇ ಹೀಗೆ” 
ನೆಂಟರಲುಂಗಿಗೆ ಮನುಕುಲದ ಬಗ್ಗೆ ಸಿಟ್ಟು ಬಂತು
ಉಟ್ಟವರು ಕೂರಲಿಕ್ಕಾಗದಂತೆ ಕಿರಿಕಿರಿಯಿಡಲು ಶುರುವಿಟ್ಟಿತು
ಮನೆಗೆ ಬಂದ ನೆಂಟರೆಲ್ಲ ಹೇಳಲಿಕ್ಕಾಗದ ವೇದನೆ ಅನುಭವಿಸಿದರು
ಮರೆಯಲ್ಲೆಲ್ಲೋ ನಿಂತು ಪರಪರ ಕೆರೆದು ಬಸ್ಸು ಹತ್ತಿದರು

ಕೆಲದಿನಗಳ ನಂತರ,
ನೆಂಟರ ಲುಂಗಿಯ ಕೋಪ ತಣ್ಣಗಾಯಿತು
ಯಜಮಾನ ಯಜಮಾನತಿಯ ಸ್ಥಿತಿ ನೋಡಿ
ಹೃದಯ ಆದ್ರ್ರವಾಯಿತು

ಅವತ್ತಿನಿಂದ ಮನೆಗೆ ಬಂದ ನೆಂಟರಿಗೆಲ್ಲ ಇದೇ ಲುಂಗಿಯೇ ಬೇಕು
ಅವರು ಹೊರಟ ದಿನ ರಾತ್ರಿ, 
ಕ್ಲಾತ್‍ವುಡ್‍ನಲ್ಲಿ ಅವರ ಬಗ್ಗೆ ಸಾಲು ಸಾಲು ಜೋಕು

ಇನ್ನೇನು ಬೆಳಗಾಗುತ್ತಿತ್ತು;ದಿನಪತ್ರಿಕೆ ಹಾಲಿನ ವ್ಯಾನು ಹೊರಡುತ್ತಿತ್ತು
ಬಟ್ಟೆಗಳೆಲ್ಲ ರಾತ್ರಿಯ ಹರಟೆ-ಹಾಸ್ಯದ ಮೆಲುಕು ಹಾಕುತ್ತಿದ್ದವು
ನೆಂಟರ ಲುಂಗಿ ಮಾತ್ರ ಏಕಾಂಗಿಯಾಗಿ ಸುಮ್ಮನೇ ಕೂತಿತ್ತು
-ಚಿನ್ಮಯ


Thursday, March 22, 2018

ಬದಲಾವಣೆ

ಊರೆಲ್ಲ ಖಾಲಿಯಾಗುತ್ತಿದೆ; ಆಟ ಮುಗಿದ ಅಂಗಳದಂತೆ
ಶಹರ ತುಂಬುತ್ತಲಿದೆ; ಇನ್ನೂ ಹೊರಡದ ಟೆಂಪೋವಿನಂತೆ
ನಾನೂ ಓಡುತ್ತಿದ್ದೇನೆ ಅದೇ ನಗರಿಯಲ್ಲಿ; ಸಿಟಿಯ ಸುಖದ ಅಮಲಿನಲ್ಲಿ
ಊರು-ತೋಟ-ನೆಮ್ಮದಿ ಕಾಡುತ್ತವೆ ತಡರಾತ್ರಿಯ ಕನವರಿಕೆಗಳಲ್ಲಿ

ಅಜ್ಜ-ಅಜ್ಜಿ-ದೊಡ್ಡಮ್ಮ-ದೊಡ್ಡಪ್ಪ ಇನ್ನು ಶ್ರಾದ್ಧಗಳಲ್ಲಷ್ಟೇ ಸಿಗುವುದು
ರಜೆ ಹಾಕಿ ಊರಿಗೆ ಹೋಗಿರಬೇಕು; ಕಾವ್ ಕಾವ್ ಎಂದು ಕರೆಯಬೇಕು
ಊಟ ಮಾಡಿ ಕೈ ತೊಳೆದು ಬೆಟ್ಟ ಹತ್ತಿ; ಮೇಲ್ ಚೆಕ್ ಮಾಡಬೇಕು
ಇನ್ಯಾವಗಲೋ ಬರುವೆನೆಂದು ಸಬೂಬು ಹೇಳಿ ಸ್ಲೀಪರ್ ಬಸ್ಸು ಹತ್ತಬೇಕು

ಅಶುಭಕ್ಕೊಂದೇ ಕಡ್ಡಾಯ ಪ್ರಯಾಣ; ಹಬ್ಬಗಳಲೆಲ್ಲ ಹೊಟೇಲಿನ ನಿರ್ಣಯ
ಹೆಸರಿಗೆ ಮಾತ್ರ ಅಲ್ಲಿಯವರು; ಆದರೆ ಎಲ್ಲಿಯೂ ನಿಲ್ಲದವರು
ಅವಕಾಶವನರಸಿ ಕೆಂಪು ಬಸ್ ಹತ್ತಿ ಬಂದದ್ದೇನೋ ನಿಜ. ಗುರಿ ಮುಟ್ಟಿದೆನಾ?
ಗುರಿಗಳಿಗೂ ಬಡ್ಡಿ-ಚಕ್ರಬಡ್ಡಿಯ ಹಾಕಿ, ಕೈ ಸಿಗದೆಡೆಯಲ್ಲಿ ಅಡಗಿಸಿಟ್ಟೆನಾ?

ತೊಂದರೆಯೇನಿಲ್ಲ ಈ ಪಟ್ಟಣದಲ್ಲಿ; ಬೆವರು ಬಸಿಯುವವರಿಗೆ ಬದುಕಲು
ಉಸಿರಾಡಲು ಶುದ್ಧ ಗಾಳಿ ಸ್ವಲ್ಪ ಕಷ್ಟ; ಟ್ರಾಫಿಕ್ಕಾಸುರನ ಲಹರಿ ನಿತ್ಯ ಅಸ್ಪಷ್ಟ
ಹೊರಡಲೇಬೇಕೆನ್ನುವುದಕ್ಕೆ ಸ್ಪಷ್ಟಕಾರಣವೇನೂ ಸಿಗುತ್ತಿಲ್ಲ
ಕಾರ್ಪರೇಟಿನಲ್ಲಿ ಮುಳುಗಿದ ಮೇಲೆ ಸತ್ಯ-ಪ್ರಾಮಾಣಿಕತೆಗಳೂ ಬದುಕಿಲ್ಲ

ಜೊತೆಗೆ ಊರೂ ಮೊದಲಿನಂತಿಲ್ಲ; ಬದಲಾವಣೆ ಜಗದ ನಿಯಮ
ಬೇಡಿಕೆ-ಪೂರೈಕೆ;ಬ್ಲಾಕ್ ಆಂಡ್ ವೈಟ್ ಬದುಕಿಗೆ ಬಣ್ಣದ ಆಯಾಮ
ಆದರೆ, ಮೊದಲಂತೆ ಅನ್ನದ ಚರಿಗೆ ಬಿಸಿಯಾಗುವುದಿಲ್ಲ; ಕಾರಣ ಅಷ್ಟೆಲ್ಲ ಉಣ್ಣುವವರಿಲ್ಲ
ಊರ ಪ್ರತಿಷ್ಠೆ: ಬೇಲಿ ಸಲುವಾಗಿ ನಂಬರವಿಲ್ಲ; ಕಾರಣ ಬೇಲಿ ಕಾಯಲೂ ಜನರಿಲ್ಲ

ಅಲ್ಲೂ ಇಲ್ಲೂ ನನ್ನಲ್ಲೂ ಎಲ್ಲ ಬದಲಾಗಿವೆ
ಆದರೆ ನಾ ಕಂಡಿದ್ದ ಊರು ನನ್ನಲ್ಲೇ ಭದ್ರವಾಗಿದೆ;
ನನ್ನನ್ನು ಇಂದಿಗೂ ಸಂತೈಸುತ್ತಿದೆ
ಎಲ್ಲ ಬಿಟ್ಟು ಬರಿಗೈಯ್ಯಲ್ಲಿ ಬಂದಾಗಲೂ
ಅಮ್ಮನಂತೆ ಬಿಗಿದಪ್ಪಿಕೊಳ್ಳುತ್ತದೆ,
ಅಪ್ಪನಂತೆ ಹೆಗಲುಕೊಡುತ್ತದೆ
-ಚಿನ್ಮಯ
22/03/2018

Thursday, February 15, 2018

ಮಹಾನಗರಿ

ಮಹಾನಗರಿಯಲಿ ಈಗೀಗ ಕನಸುಗಳೂ ದುಬಾರಿಯೆನಿಸುತ್ತಿವೆ
ಪೂರ್ತಿ ಆಯಸ್ಸಿನ ಬದುಕಿಲ್ಲಿ ಬಹುಷಃ ಸ್ಪಪ್ನಗಳಿಗೂ ಕಷ್ಟ
ಆರೆವಯಸ್ಸಿಗೇ ಸತ್ತು ಪ್ರೇತಗಳಾಗಿ; ಕಣ್ಣೀರು ಕುಡಿವ ದುಂಬಿಗಳಾಗಿ
ನಡುರಾತ್ರಿಯೆಲ್ಲ ಕಾಡುತ್ತವೆ; ಕಾರಣ ಮಾತ್ರ ತೀರ ಅಸ್ಪಷ್ಟ
ಅದೆಷ್ಟು ಪುಳಕಗಳ ಪುಟಿತವಿತ್ತು, ಊರಿಂದ ಬಸ್ಸು ಹತ್ತುವಾಗ
ಹೊಸ ಶುರುವಾತಿನ ಹುರುಪು, ಗೆಳೆತನದ ಮೆಲಕು, ನೌಕರಿಯ ಅಳುಕು
ಅದೆಷ್ಟು ಮೂಟೆ ಮೂಟೆ ನಿರೀಕ್ಷೆಗಳಿತ್ತು ಮೆಜೆಸ್ಟಿಕ್ಕಿನಲ್ಲಿ ಇಳಿಯುವಾಗ
ಅವಕಾಶಗಳ ಆಗರ, ಐದಾರಂಕಿಯ ಪಗಾರ, ಜನಜಂಗುಳಿ ಸಾಗರ
ಬರಬರುತ್ತಾ ಅದೇಕೋ ಎಲ್ಲವೂ ಬೋರಾಗಿದೆ; ನಾಲಿಗೆ ಹಾಳಾಗಿದೆ
ಕ್ಯೂ ನಿಂತು ತಿನ್ನುತಿದ್ದ ವೀಬೀ ದೋಸೆಯಲ್ಲೂ ಜಿಡ್ಡು ಕಾಣಿಸುತ್ತಿದೆ
ಹೊಸದೆನಿಸಿದ್ದೆಲ್ಲ ಬೇಕೆನಿಸಿ, ಹಿಂದೆ ಹಿಂದೆ ಹಿಂದೆ ಓಡಿ ಸುಸ್ತಾಗಿದೆ
ಮಾಯಾಮೃಗವೆಂಬುದು ಮೆಟ್ರೋ ಸಿಟಿಯ ರೂಪದಿ ಅವತಾರವೆತ್ತಂತಿದೆ
ಥುತ್ತೆಂದು ಎದುರಾಗುತ್ತವೆ, ಶುರುವಲ್ಲೆಲ್ಲೋ ಖುಷಿಕೊಟ್ಟ ಸುಂದರ ಸ್ಪಪ್ನಗಳು
ಮಂಕಾಗಿಸಿ, ಗೋಳಾಡಿಸಿ, ನಿದ್ದೆಗೆಡಿಸಿ ಜೀವಹಿಂಡುತ್ತಿವೆ ಆ ವಿಶೇಷಾತ್ಮಗಳು
ಆತ್ಮಹತ್ಯೆಯೋ ಕೊಲೆಯೋ ಸಹಜ ಸಾವೋ;ಅವೆಲ್ಲ ಸತ್ತಿರುವುದಂತೂ ನಿಜ
ಆಸೆ ಹೊತ್ತವರೇ ಮುಕ್ತಿ ಪಡೆಯರಂತೆ, ಇನ್ನು ಕನಸುಗಳು ಏನಾಗಬೇಡ ?
ಎಲ್ಲ ಸರಿಯಿದೆಯೆಂದು ಬೆಳಗೆದ್ದು ಇನ್‍ಶರ್ಟು ಮಾಡಿ ಹೊರಡುವುದು ಸರಿಯೇ
ಆದರೆ ತಡರಾತ್ರಿಯ ಏಕಾಂತ ಮಾತ್ರ ಕಷ್ಟವಾಗುತ್ತದೆ, ಪಾಪಪ್ರಜ್ಞೆ ಕಾಡುತ್ತದೆ
ಅದೃಷ್ಟಕ್ಕೆ, ಹೊಸ ಕನಸುಗಳ ಹುಚ್ಚು ಹೊಳೆಯಲ್ಲಿ ತೇಲಿ ಹೋಗದ್ದೂ ಕೆಲವಿದೆ
ಊರಿಂದ ಕರೆತಂದ ಹಳೆಯ ಕನಸುಗಳು ಮಾತ್ರ ಬ್ಯಾಗಿನಲ್ಲಿ ಭದ್ರವಾಗಿವೆ
ಎಲ್ಲ ಬಿಟ್ಟು ಹೊರಟೇ ಬಿಡುವ ಎನಿಸುತ್ತದೆ, ಊರ ಬಸ್ಸು ಕಣ್ಣೆದುರು ಕಂಡಾಗ
ಎರಡೇ ಹೆಜ್ಜೆ, ನಿಂತು ಬಿಡುತ್ತೇನೆ,ಅದೊಂದು ಇದೊಂದು, ಮುಗಿಸುವಾ ಆದಷ್ಟು ಬೇಗ
ಹುಡುಕಬೇಕಿದೆ ಕಾರಣ ನಾನು, ಊರಿಗೆ ಹೋಗದಂತೆ ತಡೆವ ಬಂಧಗಳಿಗೆ
ಪಡೆಯಬೇಕಿದೆ ಉತ್ತರ ನಾನು, ಅಂದು ಊರು ಬಿಡಿಸಿದ ಪ್ರಶ್ನೆಗಳಿಗೆ
ಅಲ್ಲಿಯವರೆಗೆ ಹೊಸ ಕನಸುಗಳ ಹುಟ್ಟಿಸುವಿಕೆಗೊಂದು ದೀರ್ಘವಿರಾಮ
ಅವಲಕ್ಕಿ ಮೊಸರಲ್ಲೂ ಬಾಳಜಗ್ಗಿದ ಕನಸುಗಳ ಸಾಕಾರಕ್ಕೆ ಪಡಬೇಕಿದೆ ನಿತ್ಯಶ್ರಮ
ಆದರೂ ಅದೇಕೋ, ಮಹಾನಗರಿಯಲಿ ಕನಸುಗಳೂ ದುಬಾರಿಯೆನಿಸುತ್ತಿವೆ
ಆರೆವಯಸ್ಸಿಗೇ ಸತ್ತು ಪ್ರೇತಗಳಾಗಿ; ನಡುರಾತ್ರಿಯೆಲ್ಲ ಕಾಡುತ್ತವೆ;
-ಚಿನ್ಮಯ
15/2/2018

Monday, January 22, 2018

ಹೇಳದ ಮಾತು

ಒಂದನೇ ಪ್ರೀತಿ ಬಗ್ಗೆ ಎರಡನೇ ಹುಡುಗಿಗೆ ಹೇಳಬಹುದೇ?
ಮೂರು ಬಾರಿ ಯೋಚಿಸಿದೆ; ನಾಲ್ಕಾರು ಬಾರಿ ತಲೆ ಕೆರೆದೆ

ಕಳೆದ ವಾರದಂತಿದೆ ಆಹಾ!, ಕಣ್ಣೆದುರು ಕನಸುಗಳ ತೋರಣವಿತ್ತು
ಹುಣ್ಣಿಮೆಯ ತಡರಾತ್ರಿಯಲ್ಲೆಲ್ಲ ಸಾಲುಗಳು ಮೂಡುತ್ತಿತ್ತು
ಭೂಕಂಪ-ಜ್ವಾಲಾಮುಖಿ ಭಾವಲಹರಿ ಸುನಾಮಿಯಾಗಿತ್ತು
ಸಾಂತ್ವನದ ನಶೆಯೇರಿ; ವಾರಗೆಯವರಿಗೆ ಬರಾಬರಿಯಾಗಿಸಿತ್ತು

ವಸಂತಗಳು ಬದಲಾದವು; ಪ್ರಿಯಾರಿಟಿಗಳು ಬೇರೆಯಾದವು
ಜಗಳ ಕಮ್ಮಿಯಾದಂತೆಲ್ಲ ಅಹಂನ ಕೋಟೆಗಳು ಗಟ್ಟಿಯಾದವು
ಬ್ರೇಕ್-ಅಪ್ ಎಂಬ ಸಮಾರಂಭವಿಲ್ಲದೇ ಸಂಬಂಧ ಮುರಿದಿತ್ತು
ಉಪೇಕ್ಷೆ-ಉಡಾಫೆ-ಸ್ವಾರ್ಥಗಳ ನಡುವೆ ನಂಬಿಕೆ ದಿವಾಳಿಯಾಗಿತ್ತು

ಹೀಗೆ ಒಂದು ದಿನ ಆಮಂತ್ರಣ ಪತ್ರಿಕೆ ಡೌನ್ಲೋಡಾಯಿತು
ಅಷ್ಟುದಿನ ಅಡಗಿದ್ದ ಕಣ್ಣೀರು ಟಪ್ ಎಂದು ಹನಿಯಿಟ್ಟಿತು
ಕ್ಷಣಕಾಲ ಕತ್ತಲಷ್ಟೇ; ಸಾವಕಾಶದಿ ನಿಟ್ಟುಸಿರು ಹೊರಟಿತು
ಬೇಡವೆಂದರೂ ಗಡ್ಡ ಬೆಳೆಯಿತು; ಕೆಲಸ ಬದಲುಮಾಡಲೇಬೇಕಾಯಿತು

ಬದುಕಿದ್ದೆ ಬದುಕ ನೋಡುವ ಆಸೆಗೆ; ಬೆನ್ನುಹಾಕಲಾಗದ ಹಠಕ್ಕೆ
ರಾತ್ರಿಗಳೆಲ್ಲ ಅಮಾವಾಸ್ಯೆ, ಏಕಾಂತವೂ ಹಿಂಸೆ, ಬೈಗುಳ ನಾಯಿ ಬೊಗಳಿದ್ದಕ್ಕೆ
ಮತ್ತೆ ಕ್ಯಾಲೆಂಡರು ಮಗ್ಗಲು ಬದಲಿಸಿತು; ಮನಸ್ಸೊಂದಿಷ್ಟು ತಿಳಿಯಾಯಿತು
ಅಡಿಕೆ ಮರ ಹತ್ತಿ ಬಿದ್ದರೇನಂತೆ, ಏಲಕ್ಕಿ ಬೆಳೆಯುವ ಮನಸ್ಸಾಯಿತು
ಸೂರ್ಯನಿಂದ ಹೊರಸಿಡಿದ ಭೂಮಿ ನಿಧಾನವಾಗಿ ತಂಪಾಗುತ್ತಿತ್ತು
ಸ್ವಯಂ-ನಿಯಂತ್ರಣವೆಂಬ ಪರದೇಸಿ ಪೊರೆ ಕಳಚಿ ಹೋಯಿತು
ಗಾಳಿ ಬಂದ ಕಡೆ ಖುಷಿಯಿಂದ ಸಾಗಿ; ಹಸಿವಾದಾಗ ತಿಂದು ತೇಗಿ
ಮತ್ತೊಮ್ಮೆ ರಾತ್ರಿಯೆಲ್ಲ ನಿದ್ದೆ ಬರಹತ್ತಿತ್ತು; ಆದರ್ಶ ಮಾತಾಡಿತ್ತು

ಆದರ್ಶದ ಭೂತ ನೆತ್ತಿಹತ್ತುವ ಮೊದಲೇ ಇದಾಯಿತು
ಕಾಣದ ನಾಳಿಗಿಂತ, ಕಣ್ಣೆದುರಿನ ಇಂದು ಹಾಯೆನಿಸುತ್ತಿತ್ತು
ಹಾಯ್-ಬಾಯ್ ಇಂದ ಶುರುವಾದಾಗ ಮಾಮೂಲಿಯೆನಿಸಿತ್ತು
ನನ್ನ ಬೇಲಿಗಳ ನಾನೇ ದಾಟಿದಾಗ ಇದೇನೋ ವಿಶೇಷವೆನಿಸಿತು

ಒಂದನೇ ಪ್ರೀತಿ ಬಗ್ಗೆ ಎರಡನೇ ಹುಡುಗಿಗೆ ಹೇಳಬಹುದೇ?
ಮೂರು ಬಾರಿ ಯೋಚಿಸಿದೆ; ನಾಲ್ಕಾರು ಬಾರಿ ತಲೆ ಕೆರೆದೆ
ಪ್ರಯೋಜನವೇನೂ ಆದಂತಿಲ್ಲ;ಉತ್ತರವೂ ಸಿಕ್ಕಿಲ್ಲ
ಬಹುಷಃ ನಂಬಿಕೆಯೊಂದಿದ್ದರೆ,
ಎಲ್ಲವನ್ನೂ ಬಾಯಿಬಿಟ್ಟು ಹೇಳಬೇಕೆಂದಿಲ್ಲ
ಎಲ್ಲವನ್ನೂ ಕಿವಿಯಿಂದಲೇ ಕೇಳಬೇಕೆಂದಿಲ್ಲ

-ಚಿನ್ಮಯ
22/1/2018

Friday, December 15, 2017

ಸೊಳ್ಳೆಗೆ ಧನ್ಯವಾದ

ಡಬಲ್ ಬಿ.ಹೆಚ್.ಕೆ ಫ್ಲ್ಯಾಟು, ಆರಂಕಿ ಸಂಬಳ, ವೈಟ್ ಕಾಲರ್ ಕೆಲಸ
ಒಂದು ದಿನ ರಾತ್ರಿ ತಣ್ಣನೆಯ ನಿದ್ದೆ, ಬೆಚ್ಚಗಿನ ಕನಸು
ಸುತ್ತಲೆಲ್ಲೋ ಸೊಳ್ಳೆ ಸುಳಿದು ಎಚ್ಚರಾಯ್ತು
"ಥತ್ ಥೇರಿ ನುಶಿಯೇ!" ಎಂಬ ಮೌನಬೈಗುಳದೊಂದಿಗೆ
ಚಂದವೆನಿಸಿದ್ದ ಕನಸಿನ ಅನಿರೀಕ್ಷಿತ ಕೊಲೆಯಾಯ್ತು
ಶಬ್ಧವೇದಿ ವಿದ್ಯೆ ಕರತಲಾಮಲಕವೇನಲ್ಲ
ಆದರೂ ಹೊಡೆಯುತ್ತಿದ್ದೆ ಕತ್ತಲಲ್ಲೇ ಕಣ್ಬಿಟ್ಟುಕೊಂಡು
ಚಪ್ಪಾಳೆ ಸದ್ದಿನೆದುರು ಬಹುಷಃ ಆ ಸೊಳ್ಳೆ ಸದ್ದು ಕ್ಷೀಣವಾಯ್ತು
"ಮುಗಿಯಿತು ಅಧ್ಯಾಯ" ಎಂದು ಮಲಗಿದೆ ಹೊದಕಲೆಳೆದುಕೊಂಡು
ಅರ್ಧಕ್ಕೆ ನಿಂತ ಕನಸು ರಿ-ಓಪನ್ ಆಗಿ ಅರ್ಧ ಎಪಿಸೋಡು ಕಳೆದಿಲ್ಲ
ಡಿ.ಟಿ.ಎಸ್ ಸೌಂಡಿನಂತೆ ಮೂಲೆಯಿಂದೆಲ್ಲೋ ಶುರು ಗುಯ್ಯ್ ಗಾಯನ
ಪಡೆದಿರಬೇಕು ಎಲ್ಲದಕ್ಕೂ ಅಂತಾರಲ್ಲ ಅದು ಖರೆಯಿರಬೇಕು!
ಬಳಿಕ ಶಯನಸುಖ-ಸ್ವಪ್ನದಿಂ ವಾಸ್ತವ ಕೂಪಕ್ಕೆ ಅನಿವಾರ್ಯ ಆಗಮನ
ಕತ್ತಲಲ್ಲೇ ಕೈಯ್ಯಾಡಿಸಿ ಮೊಬೈಲು ಕೈಗೆತ್ತಿಕೊಂಡೆ
ಟಾರ್ಚ್ ಆನ್ ಆಯಿತು, ಮೆಸ್ಸೇಜು-ನೊಟಿಫಿಕೇಷನ್ನು ಬಂದಿರಲಿಲ್ಲ
ಬೆಳಕಿನಲಿ ಬೇಟೆಗಾರನಾದೆ ಆಗ, ಬೇಟೆ ದಿಂಬಿನ ಕಡೆಯೆಲ್ಲೋ ಓಡುತಿತ್ತು
ದಬ್ ಎಂದು ಒಂದು ಬಿಟ್ಟೆ, ಶಬ್ಧ ಬಂತಷ್ಟೇ ಸೊಳ್ಳೆ ಮಾತ್ರ ಸಾಯಲಿಲ್ಲ
ಮಧ್ಯರಾತ್ರಿ ಹತ್ತು ನಿಮಿಷ ಮೊಬೈಲು ಕುಟ್ಟಿದರೂ
ಸ್ವಪ್ನಶತ್ರು ಸೊಳ್ಳೆಯ ಸುಳಿವು ಸ್ವಲ್ಪವೂ ಇಲ್ಲ, ಸದ್ದೂ ಕೇಳುತ್ತಿಲ್ಲ
ಬಹುಷಃ ರಕ್ತಹೀರುವ ಅವಕಾಶವನರಸಿ ಶಿಫ್ಟ್ ಆಗಿರಬೇಕು, ನಮ್ಮಂತೆ
ಇರಲಿ! ಬೇಟೆಯಿಲ್ಲದಿದ್ದರೂ ಕೈ ಬರಿದು ಮಾಡಿ ಮಲಗಲು ಅಡ್ಡಿಯಲ್ಲ
ಥೋ ಥೋ, ಬಹಳೇ ಎಚ್ಚರಾಗಿದೆ; ಕನಸು ಅರ್ಧಮೈಲಿಗೆಲ್ಲೂ ಕಾಣುತ್ತಿಲ್ಲ
ನಿನ್ನೆ-ನಾಳೆಗಳ ಚಿಂತೆ ಬಪ್ಪ ನಿದ್ದೆಗೂ ಅವಕಾಶ ಮಾಡಿಕೊಡುತ್ತಿಲ್ಲ
ಎಡಕೊಮ್ಮೆ-ಬಲಕೊಮ್ಮೆ; ವಿಚಾರ-ಗೊಂದಲ-ಹೊರಳಾಟ-ನಿಟ್ಟುಸಿರು
ಅಂಗಾತ ಮಲಗುವುದು ತಪ್ಪಲ್ಲ;ಬೋರಲಾಗಲು ಹೊಟ್ಟೆ ಹಿಡಿಯುತಿದೆಯಲ್ಲ.
ಇಲ್ಲೇ ಇಲ್ಲ! ನಿದ್ದೆ ಹತ್ತುವುದಿಲ್ಲವೆಂಬುದು ಖಚಿತವಾದಂತಾಯಿತು
ಸೋ, ನವ್ಯಮಾನವನ ಸಹಜಾಂಗದ ಮೊರೆಹೋಗುವುದು ಅನಿವಾರ್ಯ
ಶುರುವಿಗೆ ಗಝಲು-ಭಾವಗೀತೆ-ಎಫ್.ಎಂ-ಗಾನಾ.ಕಾಮ್‍ಗಳ ಸಂಗೀತ
ನಂತರ ಯೂಟ್ಯೂಬಿನಲ್ಲಿ ಸದ್ಗುರು-ಜಿಡ್ಡು-ಓಷೋ-ವಿವೇಕಾನಂದ
ಜ್ಞಾನ-ವಿಜ್ಞಾನ ಜೀವನ ಜಿಜ್ಞಾಸೆ, ಬಾಳಿಗೊಂದಿಷ್ಟು ಸರಳ ಸಂದೇಶ
ಅಜಮಾಸು ಎರಡು ಗಂಟೆಯ ನಂತರ ಚಾರ್ಜಿಗೆ ಹಾಕಲೇಬೇಕಾಯಿತು
ತಲೆಯೊಂದು ಮಟ್ಟಿಗೆ ನೆಟ್ಟಗಾಗಿತ್ತು, ನಿದ್ದೆ ಬರುವ ಸೂಚನೆಯೂ ಇತ್ತು
ಒಂದರಿಂದ ಎಣಿಸಲು ಶುರುವಿಟ್ಟೆ, ಎಚ್ಚರಾಗಿದ್ದು ಅಲಾರಾಂ ಕೂಗಿದಾಗಲೇ
ಹತ್ತು ನಿಮಿಷಕ್ಕೆ ಸ್ನೂಜು ಮಾಡಿ ಬಿದ್ದುಕೊಂಡವನಲ್ಲಿ ಒಂದಿಷ್ಟು ಪ್ರಶ್ನೆಗಳು ಎದ್ದಿತ್ತು
ನಿನ್ನೆ ನಿದ್ದೆಗೆಡಲು ಕಾರಣ ಸೊಳ್ಳೆಯಾ? ನಾನಾ?
ಸೊಳ್ಳೆಯೆಂಬ ಕೀಟ ನಿಜಕ್ಕೂ ಬಂದಿತ್ತಾ? ಭ್ರಮೆಯಾ?
ತಲೆತುಂಬ ಬಿಟ್ಟುಕೊಂಡಿರುವ ಹುಳಗಳೇ ಸೊಳ್ಳೆಯಾದವಾ?
ಹಾಸ್ಟೇಲಿನಲ್ಲಿ ಸೊಳ್ಳೆಗಳೂ ಸ್ನೇಹಿತರಾಗಿದ್ದವು
ಅವುಗಳ ಗುಯ್ಯ್‍ಂಗುಡುವಿಕೆ ಹಿತಸಂಗೀತವಾಗಿತ್ತು
ವಯಸ್ಸಾದಂತೆ ಸ್ನೇಹಿತರೇಕೆ ಶತ್ರುಗಳಾದರು?
ಅಮ್ಮನ ಮಾತೇಕೆ ಓವರ್ ಆಕ್ಟಿಂಗ್ ಅಂತಾಯಿತು?
ಅಪ್ಪನ ಮಾರ್ಗದರ್ಶನ ಗೊಡ್ಡು ಎಂದೆನಿಸಿತು?
ತಂಗಿಯ ಪ್ರೀತಿ ವಟವಟವೆನಿಸಿತು?
ನಿದ್ದೆಯಿಂದ ಎಬ್ಬಿಸಿದ ಸೊಳ್ಳೆಗೆ ಧನ್ಯವಾದ ಹೇಳಲೇಬೇಕೆನಿಸಿತು
ಹುಡುಕುತ್ತಿದ್ದೇನೆ,
ಸಿಕ್ಕರೆ ಖಂಡಿತಾ ಸನ್ಮಾನ-ಸಮಾರಂಭ-ಉಪ್ಪಿಟ್ಟು-ಕಾಫಿ
ಸಾಧ್ಯವಾದರೆ ನೀವೂ ಬನ್ನಿ
ಮಲಗಿದ್ದರೆ ಎಚ್ಚರಗೊಳ್ಳಿ 
-ಚಿನ್ಮಯ
15/12/2017

Thursday, November 16, 2017

ಕೃಪೆ:ವಾಟ್ಸಪ್

ಹಸಿರಂಗಿಯ ಈ ವಾಟ್ಸಪ್ಪು, ಅಂಗೈಗೆ ಅರ್ಜಂಟಿನಾಸರೆ
ಸ್ಕ್ರೋಲಾಗುವ ಸ್ಟೇಟಸ್ಸಿನಲ್ಲೇ 24*7 ಹರಿಯುತಿದೆ ಭಾವಧಾರೆ
ಪರಿಚಯಕ್ಕೊಂದು ಚಂದದ ಸ್ಮೈಲಿ
ಹುಟ್ಟುಹಬ್ಬಕ್ಕೊಂದು ಚಾಕಲೇಟಿನ ಥೈಲಿ
ಖುಷಿಯಾದಾಗಲೆಲ್ಲ ರಂಗುರಂಗಿನ ಚಿತ್ತಾರ
ಹೊಸ ಡೀಪಿಯಲಿ ಪೋಸಿನಾ ವೈಯ್ಯಾರ
ಪ್ರೀತಿ ಹೆಚ್ಚಾದಾಗೆಲ್ಲಾ ಮಂಗವೇಷದ ಪೋಟೋ
ಬೇಸರಾದಗೊಮ್ಮೊಮ್ಮೆ ಫಿಲಾಸಫಿಕಲ್ “ಕೋಟು”
ಮೆಸ್ಸೇಜು ಮಾಡಿದ ಮೇಲೆ ಡಬಲ್ ಟಿಕ್ಕಿಗಾಗಿ ಆತುರ
ನೀಲಿಟಿಕ್ಕಿನ ನಂತರವೂ ರಿಪ್ಲೈ ಬಾರದಿರೆ ಭಾರೀ ಬೇಸರ
ಆಕ್ಚುಲಿ, ನೋಟಿಫಿಕೇಷನ್ ಜೊತೆಗೇ ಮೆಸ್ಸೇಜು 90% ಅರ್ಥವಾಗುತ್ತದೆ
ಅನ್ನೌನು ನಂಬರು ಬಂದರೆ ಮಾತ್ರ ಕುತೂಹಲ ಇಮ್ಮಡಿಯಾಗುತ್ತದೆ
ವಿಡಿಯೋ ಡೌನ್ಲೋಡು ಆಗುವಷ್ಟರಲ್ಲೇ ಕ್ಯಾಸೆಟ್ಟು ಓಡಿರುತ್ತದೆ
ಇಮೇಜು ಓಪನ್ ಆಗುವಷ್ಟರಲ್ಲೇ ಹುಬ್ಬು ಹಣೆಸೇರಿರುತ್ತದೆ
ಇನ್ನು ಆ ಗ್ರೂಪುಗಳು.
ಗ್ರೂಪುಗಳು ಥೇಟು ಬಸ್ಸಿನಂತೆ ಬೇಡದಾಗ ದಂಡಿಯಾಗಿ ಬರುತ್ತಿರುತ್ತವೆ
ಅಪ್ಪಿ-ತಪ್ಪಿ ಏನೋ ಅರ್ಜಂಟಿದ್ದಾಗ ಮಾತ್ರ ಜಗತ್ತೇ ಖಾಲಿಯಾಗಿರುತ್ತದೆ
ಫ್ಯಾಮಿಲಿ-ಫ್ರೆಂಡ್ಸು-ಕಲೀಗ್ಸು-ಬಾಸು ಎಲ್ಲರಿಗೂ ಒಂದೊಂದು ಗ್ರೂಪು
ದಿನಗತಿಗೆ ತಕ್ಕಂತೆ ಮ್ಯೂಟ್ ಮೋಡು ಆನು-ಆಫು
ಈಗಷ್ಟೇ ಸ್ಮಾರ್ಟ್ ಆದ ಸೀನಿಯರ್ ಆಂಟಿ-ಅಂಕಲ್‍ಗಳೇನಕರಿಗೆ
ಫೋಟೋ-ವೀಡಿಯೋಗಳನು ಫಾರ್ವರ್ಡ್ ಮಾಡುವ ತೀಟೆ
ಅದಕೊಂದು ರಿಪ್ಲೈ ಮಾಡದಿದ್ದರೆ ಅಪ್ಪ-ಅಮ್ಮನ ಗಲಾಟೆ
ಎಷ್ಟೋ ಸಲ ಸಾಕೆಂದು ವಾಟ್ಸಾಪು ಅನ್‍ಇನ್‍ಸ್ಟಾಲ್ ಮಾಡಿದ್ದಿದೆ
ಆಮೇಲೆ ಎಲ್ಲರಿಗೂ ವಿಷಯ ತಿಳಿಸಲು ಮತ್ತೆ ಡೌನ್‍ಲೋಡ್ ಮಾಡಿದ್ದಿದೆ
ಅಂತೂ ಬದುಕು ನಡೆಯುತ್ತಿದೆ ಪೇಟಿಎಮ್ಮು-ಸ್ವಿಗ್ಗೀ-ವಾಟ್ಸಪ್ಪಿನ ಕೃಪೆಯಿಂದ
ಫೋನ್-ಸ್ಮಾರ್ಟಾದಷ್ಟೂ ತಲೆತುಕ್ಕು ಹಿಡಿಯುತಿದೆಯೋ ಎಂಬ ಅನುಮಾನ ನಿನ್ನೆಯಿಂದ ಕಾಡುತಿದೆ.
-ಚಿನ್ಮಯ
16/11/2017

Sunday, September 17, 2017

ಕಾಫಿಹೂವು


ಮಲ್ಲಿಗೆಯ ಬನವೆಂದು ತೋಟಕ್ಕೆ ಅಡಿಯಿಟ್ಟೆ
ಎಲ್ಲೆಲ್ಲೂ ಹಿಮರಾಶಿ; ಪರಿಚಯ-ಮಾತಿನ ರಾಶಿ
ಮಟ್ಟಿದ ಮಾಲೆಯಂತೆ ಟೊಂಗೆಗುಂಟ ಹೂವುಗಳು
ನಗೆಯಲ್ಲಿ ಕಂಡ ದಾಳಿಂಬೆಹಲ್ಲು;ರೆಪ್ಪೆ ಸವರುತ್ತಿದ್ದ ಮುಂಗುರುಳು

ಹೂವ ಬಳಿ ಹೋಗಿ ಆಘ್ರಾಣಿಸಲು ಬೇರೇನೋ ಕಂಪು
ಇಂಜಿನಿಯಿರಿಂಗಿನ ನಟ್ಟನಡುವೆ ಸವಿಸಾಹಿತ್ಯದ ಜೋಂಪು
ಮೆದುಳ ಮೂಲೆ ಮುಟ್ಟಿ ಮಾರ್ದನಿಸುವ ಕಾಫಿಯ ಪರಿಮಳ
ಹೇಗೆ ಮರೆಯಲಿ ಹುಚ್ಚು ಹಿಡಿಸಿದ ಮಲೆನಾಡಿನ ಮಧುರ ಮಾತುಗಳ

ಹೂವ ಕೊಯ್ದು ದೇವರ ಪೀಠಕ್ಕೇರಿಸುವ ಮನಸ್ಸಂತೂ ಇರಲಿಲ್ಲ
ಮೆತ್ತಗಿದ್ದ ಪಕಳೆಗೆ ಕೆನ್ನೆಯಾನಿಸಿ ಅರೆಗಳಿಗೆ ಮಲಗಬೇಕಿತ್ತಷ್ಟೇ
ಇಲ್ಲಿಯವರೆಗೆ ಯಾವ ಹೂವಿನ ಬಗ್ಗೆಯೂ ಹೀಗೆಲ್ಲ ಅನಿಸಿರಲಿಲ್ಲ
ಇದೇಕೆ? ಬಹುಷಃ ಇದೂ ನನ್ನಂತೆ ನಾರ್ಮಲ್ ಕೇಸಾಗಿರಲಿಲ್ಲ

ಈ ಹೂವು ವರುಷಕ್ಕೊಮ್ಮೆ ಮಾತ್ರ ಬಿಡುವುದಂತೆ
ನಿಜವಾದ ಪ್ರೀತಿ ಅಪರೂಪಕ್ಕೊಮ್ಮೆ ಮಾತ್ರ ಆಗುವುದಂತೆ
ನೋಡುತ್ತ ನಿಲ್ಲುತ್ತಿದ್ದೆ ಅದನ್ನೇ, ಹಸಿರು-ಪ್ರಕೃತಿಯಲಿ ಬೆರೆತು
ಎಲ್ಲ ಮಾತಾಡಿಬಿಡುತ್ತಿದ್ದೆ ಖಾಸಗಿ ಕನಸುಗಳೆಂಬುದನೂ ಮರೆತು

ಅದೇನೋ ಕಾಫಿ ಹೂ ಬಿಟ್ಟಾಗ ಮಳೆ ಭರ್ರೆನ್ನ ಬಾರದು; ಬಂತು
ಪ್ರೀತಿ ಮೊಳಕೆಯೊಡೆದ ಮೇಲೆ ದೂರಾಗಬಾರದು; ಆಗಿದ್ದಾಯಿತು
ಮೋಡಗಟ್ಟಿ ತೋಟಕೆಲ್ಲ ಮಳೆಬಂದರೆ ಎಲ್ಲೆಲ್ಲಿ ಕೊಡೆ ಹಿಡಿದೇನು?
ಚದುರಿಹೋದ ಮನಸುಗಳಿಂದ ಚಪ್ಪಾಳೆ ಸದ್ದು ಹೇಗೆ ಕೇಳಿಯೇನು?

ಇಂದು ತೋಟದಲ್ಲಿ ಹೂವಿಲ್ಲ; ಕಾಯಿಗಳಿವೆ.
ಮನಸ್ಸಿನಲ್ಲಿ ನೋವಿಲ್ಲ; ಗಾಯಗಳಿವೆ

ಜಗತ್ತಿಗೇನು? 
ಹೊಸ ಹೂವು ಹುಡುಕು ಅನ್ನುತ್ತದೆ

ಬಜಾರದ ಗಲ್ಲಿಯಲ್ಲಿ ತರಹೇವಾರಿ ಹೂವೂ ಸಿಗುತ್ತದೆ
ನೆಟ್ಟಗೆ, ನಗುನಗುತ್ತಾ, ಘಂ ಎಂದು ಎಲ್ಲರನ್ನೂ ಸೆಳೆಯುತ್ತದೆ
ನಾನು ಮಾತ್ರ ಈ ಬಜಾರದ ಮಲ್ಲಿಗೆಯಿಂದ ದೂರವಿದ್ದೇನೆ
ಕಾಫಿಗಿಡ ಮತ್ತೆಂದು ಹೊಸ ಹೂ ಬಿಡುವುದು ಎಂದು ಕಾದಿದ್ದೇನೆ.
-ಚಿನ್ಮಯ
17/09/2017