Sunday, March 16, 2014

ಪೂರ್ಣಾಹುತಿ

ನಮಸ್ತೆ,
ಅಹ್. ಜೀವಬಂಧ ಎನ್ನಿಸುವಷ್ಟಗಿನ ಮಟ್ಟಿಗೆ ಹಚ್ಚಿಕೊಂಡ  ಪ್ರೀತಿಯು ಮುರಿದುಹೋಗುವಾಗಿನ ಕೊನೆಯ ಹಂತದ ಚಡಪಡಿಕೆ ಹಾಗೂ ಮರುಮೈತ್ರಿಸಾಧ್ಯವೆನಿಸದಿದ್ದರೂ ಸಾಧ್ಯ ಎಂದು ಸತಾಯಿಸುವ  ಒಳಮನಸ್ಸಿನ ಆಸೆಗಳಿಗೊಂದು ಪೂರ್ಣವಿರಾಮವಿಡುವ ಭಾವ ಹೊತ್ತು ಬರೆದ ಒಂದಿಷ್ಟು ಸಾಲುಗಳಿವು....ದಯಮಾಡಿ ಓದಿ ಅನಿಸಿಕೆ ತಿಳಿಸಿ...

ಪೂರ್ಣಾಹುತಿ
=============
ಒಂದೆಳೆಯ ಉಸಿರಿನಲೆ ನಿಂತಿರುವೆ ಹುಡುಗಿ,
ಹನಿಸಿಬಿಡು ನೀ ಬೇಗ ಮಂಗಳದ ಗಂಗೆಯನು.
ಕುತೂಹಲದ ಸಣ್ಣುರಿಯಲೇ ಕಾಸದಿರು ಗೆಳತಿ,
ಅದೆಷ್ಟು ದಿನ ಹೊರಲಿ ಗೊಜಗುಟ್ಟುವಾ ಈ ಭೋಳೆದೆಯನು.

ಒಂದೋ,ನಿನ್ನ ನೆನಪಲೆ ಮಣ್ಣೊಳಗೆ ಮಲಗುವೆ,
ಜಗದೆಲ್ಲ ಉಬ್ಬುತಗ್ಗುಗಳ ಮರೆತು,ತೆಗೆದುಮುಚ್ಚಿದ ಗುಂಡಿಯೊಳಗೆ.
ಅಸ್ಥಿಯದು ಕರಗಿ ಕೆಂಕಣವಾಗುವವರೆಗೂ ಜತನದಿಂದಿರುವೆ,
ಆರುಗನಸೂದಿಸಿ ಬಚ್ಚಿಟ್ಟ ಮರುಜನುಮದಾ ಹಾರುಪುಗ್ಗಿಯೊಳಗೆ.

ಒಂದೊಮ್ಮೆ ದಕ್ಕಿದರೆ ನೀ ಕೊಡುವ ವಿಧಿಮದ್ದು,
ಹಾರುವೆ ಗರಿಬಿಚ್ಚಿ ಸುಂಗಿನಾಚೆಯ ಶ್ವೇತದಿಗಂಬರ ಚಿಟ್ಟೆಯಾಗಿ.
ಪೂರ್ವಭಾವಬಂಧನಸರಪಣಿಯ ತರಚುಗಾಯದಾರೈಕೆಗೆ
ಚುಚ್ಚಿಕೊಳ್ಳುವೆ ಕಳೆದೊಲವ ಕೋಶಗಳನೆ ಜೀವಲಸಿಕೆಯಾಗಿ.

ಒಂದೆಳೆಯ ಉಸಿರಿನಲೆ ನಿಂತಿರುವೆ ಹುಡುಗಿ,
ಹನಿಸು ನೀ ಬೇಗ ಮಂಗಳದ ಗಂಗೆಯನು.......


--------------------------
*ಗೊಜಗುಟ್ಟು=ಕುದಿ,ಕಾಸು=ಕಾಯಿಸು
ಪುಗ್ಗಿ=ಬಲೂನು,
ಸುಂಗು=ನಮ್ಮೂರ ಕಡೆ ತೆಳ್ಳಗಿನ ಮುಳ್ಳಿನಂಥ ರಚನೆಗಳಿಗೆ ಸುಂಗು ಎಂದು ಬಳಸುವುದುಂಟು( ಕಂಬಳಿಹುಳದ ಮೇಲಿನ ಮುಳ್ಳಿನ ಸಲುವಾಗಿ ಅದನ್ನು ಸುಂಗುನುಳ ಎಂದೂ ಕರೆಯುತ್ತಾರೆ )

ವಂದನೆಗಳು :)
ನಮಸ್ತೆ :)