Wednesday, September 18, 2013

ಸಂಜೆಗತ್ತಲ ಪಯಣವೆತ್ತಲೊ….


ನಮಸ್ಕಾರ ಎಲ್ರಿಗೂ..

ಜೀವನದಲ್ಲಿ ಬದಲಾವಣೆಗಳು ಸಹಜ...ಕೆಲವೊಮ್ಮೆ ಅನಿವಾರ್ಯ ಕೂಡಾ..
ಆದರೂ ನೆಲೆನಿಲ್ಲುವ ಮತ್ತೆ ಕಾಲುಕೀಳುವ ಪ್ರಕ್ರಿಯೆ ಸಾಗುತ್ತಲೇ ಇರುತ್ತದೆ...
ಈ  ಸ್ಥಿತ್ಯಂತರದ ಸಮಯದಲ್ಲಿ  ಒಂದಿಷ್ಟು  ಗೊಂದಲಗಳು ನಮ್ಮನ್ನು ಹೊಕ್ಕಿರುತ್ತವೆ..
ಅದೇ ಭಾವ ಹೊತ್ತು ನಿಮ್ಮ ಮುಂದೆ ಈ ಕವನ...
ದಯವಿಟ್ಟು ಮರೆಯದೇ ಅನಿಸಿಕೆ ನಮೂದಿಸಿ,ಪ್ರೋತ್ಸಾಹಿಸಿ...ನಮಸ್ತೆ




ಸಂಜೆಗತ್ತಲ ಪಯಣವೆತ್ತಲೊ ಹಾದಿಮಸುಕಿನ ಚಾರಣ,
ಪಂಜಿಮೆತ್ತಿಹ ಧೂಳಸುತ್ತಲು ಕನಸಿನುಸುಕಿನ ತೋರಣ.


ಜೀಕುಗಾಲಿನ ಪ್ರೇಮಲಾಳಕೆ ಸೂಜಿಗಲ್ಲಿನ ಹಂಬಲ,
ಬದಲುಬಯಸುವ ಅಂತರಾಳಕೆ ಬೀಸುಗಾಳಿಯ ಬೆಂಬಲ.
ತಿರುಗುಭೂಮಿಯ ಬುಗುರಿಯಾನಕೆ ಕಾಶಿದಾರದ ಸರಗುಣಿ,
ಏರಿಇಳಿಯುವ ನೂರುಬಯಕೆಯು ಒಡೆದ ಮುಚ್ಚಲ ತಿರುಗುಣಿ.


ಸೂಡಿಕಿಡಿಯಾ ಹಾರುಗುಣಿತಕೆ ದುಗುಡವೆದೆಯಾ ಪಣತದಿ,
ಬಾಳೆದಡಿಯ ಬಾವಿಯಾಟವು ಗುರಿಯಗರಿಗಳ ಹೆಣೆತದಿ.
ನಡೆವಹಾದಿಯ ಮುಳ್ಳುಕಲ್ಲಿಗೆ ಕೆಂಪುನೆತ್ತರ ತಿಲಕವು.
ಸೋತಕಾಲಿಗೆ ಸುಳ್ಳುಪಾನಕ ಕಳೆದಆಸೆಗೆ ಫಲಕವು.


ಬುತ್ತಿಬಂಡಿ ಬಾಳಹಸಿವು ಎಂದುಮುಗಿಯದ ಗಣತಿಯು,
ಕತ್ತಪಿಂಡಿ ಸೋಲಶಿಂಬೆ ನಡುವೆ ಜಯದಾ ಪ್ರಣತಿಯು.
ಪಾದವಿಟ್ಟೆಡೆ ಜೀವಪಸೆದು ಇಟ್ಟಹೆಜ್ಜೆಯ ನೆಗ್ಗುತಾ,
ನಿತ್ತನೆಲದಾ ಲೆಕ್ಕಮುಗಿದೊಡೆ ಮತ್ತೆ ನೊಗವಾ ಎತ್ತುತಾ.


ಸಂಜೆಗತ್ತಲ ಪಯಣವೆತ್ತಲೊ ಹಾದಿಮಸುಕಿನ ಚಾರಣ ………
-ಚಿನ್ಮಯ ಭಟ್ಟ
ಶಬ್ದಾರ್ಥ :
( ಪಂಜಿ=ಪಂಚೆ,ಸರಗುಣಿ=ಸರಗುಣಿಕೆ,ಒಂದು ಬಗೆಯ ಗಂಟು,
ಪಣತ=ಕಣತ,ಧವಸ ಧಾನ್ಯ ಸಂಗ್ರಹಿಸುವ ಜಾಗ,
ಬಾಳೆದಡಿ=ಬಾಳೆಯ ಎಲೆಯ ನಡುವಿನ ದಂಟು,ಬಾಳೆಯ ಕೋಲು
ಸುಳ್ಳುಪಾನಕ=ಒಂದು ಬಗೆಯ ಬೆಲ್ಲದ ಪಾನಕ,
ಕತ್ತಪಿಂಡಿ=ಕತ್ತದ ದಾರದ ದೊಡ್ಡಮುದ್ದೆ
ಶಿಂಬೆ=ಗಂಟುಗಂಟಾಗಿರುವುದು
ಪ್ರಣತಿ=ಹಣತೆ,ಪಸೆ= ಸವೆಯುವುದು,ನೆಗ್ಗು=ಎತ್ತು )
[ತುಂಬಾ ದಿನದಲ್ಲಿಂದ ಏನೂ ಬ್ಲಾಗಿಸಲಾಗಲಿಲ್ಲ...ಕ್ಷಮೆ ಇರಲಿ..
ಇದೀಗ ಒಂದು ಕಡೆ ನೆಲೆ ನಿಂತೆ ಅಂದು ಕೊಂಡಿದ್ದೇನೆ....ಬೆಂಗಳೂರಿನೆಡೆಗೆ ಪ್ರಯಾಣ..ಮುಂದೇನೋ ಗೊತ್ತಿಲ್ಲ....

ನಾ ಅಂದುಕೊಂಡಂತೆ ಭಾವ ಹೀಗಿದೆ ,ಸ್ವಲ್ಪ ತಲೆತುರಿಸುತ್ತೆ ಎನ್ನುವ ಸಾಲುಗಳದ್ದನ್ನಷ್ಟೇ ಕೊಟ್ಟಿದೀನಿ,ಉಳ್ದಿದ್ದು ಓದ್ತೀರಾ ಅಲ್ವಾ??...

"ಪಂಜಿಮೆತ್ತಿಹ ಧೂಳಸುತ್ತಲು ಕನಸಿನುಸುಕಿನ ತೋರಣ."

ಇಲ್ಲಿ ಪಂಜಿಮೆತ್ತಿಹ ಧೂಳು ಅಂದರೆ ಶ್ರಮದ ಪ್ರತೀಕ..ಉಸುಕು ಕನಸನ್ನು ಬಿಂಬಿಸುವ ಸಲುವಾಗಿ(ಮರಳಿನ ಅರಮನೆ ಹೇಗೆ ಪೂರ್ತಿಯಾಗದೋ ಅದೇ ಥರಾ ಕನಸುಗಳೂ ಬಿದ್ದು ಹುಟ್ಟುತ್ತಿರುತ್ತವೆ ಅಂತಾ)..ಮನುಷ್ಯ ಶ್ರಮವಹಿಸಿ ದುಡಿಯುವುದು ಅವನ ಕನಸನ್ನು ಈಡೇರಿಸುವ ಆಸೆಹೊತ್ತು ಎನ್ನುವ ಭಾವ ಇಲ್ಲಿ..

"ತಿರುಗುಭೂಮಿಯ ಬುಗುರಿಯಾನಕೆ ಕಾಶಿದಾರದ ಸರಗುಣಿ,
ಏರಿಇಳಿಯುವ ನೂರುಬಯಕೆಯು ಒಡೆದ ಮುಚ್ಚಲ ತಿರುಗುಣಿ."

ಬದುಕಿನಲ್ಲಿ ಇಚ್ಛೆಬಂದಂತೆ ನಮ್ಮ ಪಾಡಿಗೆ ನಾವು ಜಗತ್ತನ್ನು ತಿರುಗುವ ಆಸೆಗಳಿಗೆ ಹೆತ್ತವರಿಂದ ಅಥವಾ ಹುಟ್ಟಿನೊಂದಿಗೆ ಬರುವ ಕೆಲ ಜವಾಬ್ದಾರಿಗಳಿಂದ ಕಡಿವಾಣ ಬೀಳುತ್ತದೆ ..ಜೊತೆಗೆ ಈ ಥರದ ಆಸೆಗಳು ದಿನದಿನಕ್ಕೂ ಬದಲಾಗುತ್ತಾ ಹೋಗುತ್ತದೆ,ಒಂದಾದ ಮೇಲೊಂದರಂತೆ..ಅದಕ್ಕೆ ಕೊನೆಯೆಂಬುದೇ ಇಲ್ಲ...ಮುಚ್ಚಲು ಒಡೆದ ತಿರುಗುಣಿಯ ಪಾತ್ರೆಯನ್ನು ಕೂರಿಸಲಾದೀತೆ??ಅದನ್ನು ತಿರುಗಿಸಿತ್ತಾ ಇರಬೇಕು ಅಷ್ಟೇ ಅಲ್ಲವೇ ??ಆ ಭಾವ ಹೊತ್ತು ಬರೆದ ಸಾಲುಗಳಿವು...

"ಸೂಡಿಕಿಡಿಯಾ ಹಾರುಗುಣಿತಕೆ ದುಗುಡವೆದೆಯಾ ಪಣತದಿ,"
ಉರಿಯುವು ಸೂಡಿ ಅಂದರೆ ಈಗಾಗಲೇ ನಮ್ಮ ಹಾದಿಯಲ್ಲಿ ಮುಂದೆ ಸಾಗಿರುವವರನ್ನು ನೋಡಿ ನಮ್ಮಲ್ಲಿ ಭಯ ಹುಟ್ಟುವುದು ಸಹಜ..ನಾವು ಆ ಮಟ್ಟಕ್ಕೆ ಏರಬಲ್ಲೆವೆ ಎನ್ನುವ ಆತಂಕ ನಮ್ಮಲ್ಲಿ ಮನೆಮಾಡಿರುತ್ತದೆ...

"ಬಾಳೆದಡಿಯ ಬಾವಿಯಾಟವು ಗುರಿಯಗರಿಗಳ ಹೆಣೆತದಿ."

 ಬಾಳೆದಡಿಯಲ್ಲಿ ಅಂದರೆ ಬಾಳೆ ಎಲೆಯ ಮಧ್ಯದ ಗಟ್ಟಿ ಕೋಲಿರತ್ತಲ್ಲಾ ಅದ್ರಲ್ಲಿ ಬಾವಿಯನ್ನು ಕಟ್ಟುತ್ತಿದ್ದೆವು ಬಾಲ್ಯದಲ್ಲಿ..ಅದೇಕೋ ಗುರಿಯು ಸ್ಪಷ್ಟವಾದರೆ ಅರ್ಧ ಕೆಲಸ ಮುಗಿದಂತೆ,ಮುಂದಿನದು ಮಕ್ಕಳಾಟ ಎಂಬುದನ್ನು ಹೇಳುವಾಗ ಈ ಆಟದ ನೆನಪಾಯ್ತು...ಮಕ್ಕಳಾಟದ ಬದಲು ಬಾಳೆದಡಿಯಾ ಬಾವಿಯಾಟ ಅಷ್ಟೇ...

"ನಡೆವಹಾದಿಯ ಮುಳ್ಳುಕಲ್ಲಿಗೆ ಕೆಂಪುನೆತ್ತರ ತಿಲಕವು."

ಕೆಂಪುನೆತ್ತರು ಇಲ್ಲಿ ತ್ಯಾಗದ ಪ್ರತೀಕ...ಸಾಧನೆಯ ಹಾದಿಯಲ್ಲಿ ಬರುವ ತೊಂದರೆಗಳನ್ನು ನಿವಾರಿಸಲು ಕೆಲ ತ್ಯಾಗವನ್ನು ಮಾಡಬೇಕು ಅಥವಾ ಅದಕ್ಕೆ ಸಿದ್ಧರಾಗಿರಬೇಕು ಎನ್ನುವುದನ್ನು ಹೇಳ ಹೊರಟಿದ್ದೇನೆ...

"ಸೋತಕಾಲಿಗೆ ಸುಳ್ಳುಪಾನಕ ಕಳೆದಆಸೆಗೆ ಫಲಕವು."
ಸೋತಕಾಲಿಗೆ ಸುಳ್ಳುಪಾನಕ ಅಂದರೆ ಸ್ಪೂರ್ತಿ ತುಂಬುವಿಕೆಯ ಅಗತ್ಯತೆಯನ್ನು ಹೇಳಲು ಬಳಸಿದ್ದು...ಇನ್ನು ನಮ್ಮೂರಿನ ಕಡೆ ದನಕರುಗಳು ಕಳೆದು ಹೋದಾಗ ಹಲಗೆಯ ಮೇಲೆ ಮಸಿಯಲ್ಲಿ ಏನೋ ಬರೆದು ಅವುಗಳ ದಿಕ್ಕನ್ನು ಹೇಳುವ ವಿದ್ಯೆಯಿದೆ..ಅದನ್ನು "ಹಲಗೆ ಬರೆಯದು" ಎಂದು ಬಳಸಿದ್ದನ್ನು ಕೇಳಿದ್ದೆ..ಹಾಗಾಗೆ ಫಲಕವು ಎಂಬುದನ್ನು ಬಳಸಿದೆ..ಇಲ್ಲಿ ಸಾಧನೆಯ ಹಾದಿಯಲ್ಲಿ ದಿಕ್ಕುತಪ್ಪಿದಾಗ ದಾರಿ ತೋರಿಸಿ ಎಂಬುದಷ್ಟೇ ತಾತ್ಪರ್ಯ..ಒಟ್ಟಿನಲ್ಲು ಮಾರ್ಗದರ್ಶನ ಹಾಗೂ ಸ್ಪೂರ್ತಿಯನ್ನು ಕುರಿತು ಹೇಳುವ ಸಾಲುಗಳಿವು..

"ಕತ್ತಪಿಂಡಿ ಸೋಲಶಿಂಬೆ ನಡುವೆ ಜಯದಾ ಪ್ರಣತಿಯು.’

ಕತ್ತದ ಪಿಂಡಿ ಎಂದರೆ ನಾರಿನ ದಾರದ ದೊಡ್ಡ ಮುದ್ದೆ..ಛಂದವಾಗಿ ಮಡಿಸಿಕೊಂಡು ಬಂದ ಅದನ್ನಾ,ಒಂದು ಮಾರು ಹುರಿಗಾಗಿ ಒಮ್ಮೆ ಹೇಗೇಗೋ ಎಳೆದು ಗಂಟು ಗಂಟು ಮಾಡಿಬಿಟ್ಟಿದ್ದೆ...ಬಿಡಿಸಲೇ ಸುಸ್ತಾಯ್ತು...ಇದನ್ನು ಬಳಸಿದ್ದು.. ಸಮಸ್ಯೆಗಳ ಸುಳಿಯ ನಡುವೆಯೇ ಜಯವಿರುತ್ತದೆ ಎಂಬುದನ್ನು ಹೇಳಲು...

ಧನ್ಯವಾದ ಬರ್ತಾ ಇರಿ...
ನಮಸ್ತೆ :)

45 comments:

Badarinath Palavalli said...

ಸಮೀಕರಣದ ಕಾವ್ಯಾತ್ಮಕತೆಗೆ ನಾನು ಮನಸೋತೇ. ಕಾಶಿದಾರದ ಬುಗುರಿ ನನ್ನನ್ನು ಬಾಲ್ಯಕ್ಕೆ ಮತ್ತೊಮ್ಮೆ ಹೊತ್ತೋಯ್ಯಿತು.

Swarna said...

ಚೆನ್ನಾಗಿದೆ.ಹಾದಿಯಲ್ಲಿ ಬೇಗ ಬೆಳದಿಂಗಳು ಬರಲಿ. ಬದರಿ ಸರ್ ಹೇಳಿದಂತೆ ಕಾವ್ಯಾತ್ಮಕತೆಗೆ ಮಾರು ಹೋದೆ

ಜಲನಯನ said...

ಚಿನ್ನು..
ಮೂಕ ನಾನು ಮಾತು ಬಾರದು ಎಂದರಲ್ಲವೇ ಬದುಕುವೆ
ಟೀಕೆ ಟಿಪ್ಪಣಿ ನಿನ್ನ ನಿಲುಕದು ಸುಮ್ಮನೇಕೆ ನೀ ಬೊಗಳುವೆ
ನನಗೆ ನಾನೇ ಹೇಳಿಕೊಂಡ ಸಾಲುಗಳು....ನಿನ್ನ ಕವನ ಪದಪ್ರಯೋಗದ ಮುಂದೆ ಮೂಕನಾಗುವುದು ಒಳಿತು..ಸುಮ್ಮನೆ ತಲೆಯಾಡಿಸಿ... ತುಂಬಾ ಇಷ್ಟ ಆಯ್ತು ತಮ್ಮಾ...

sunaath said...

ಚಿನ್ಮಯ,
There is light at the end of the tunnel ಅಂತ ಹೇಳ್ತಾರಲ್ಲ! ನಿಮ್ಮ ಪಯಣವು ನಿಮ್ಮನ್ನು ಬೆಳಕಿನೆಡೆಗೆ, ಹರ್ಷದೆಡೆಗೆ ಕರೆದೊಯ್ಯಲಿ. ಸುಂದರವಾದ ಕವನಕ್ಕಾಗಿ ಅಭಿನಂದನೆಗಳು.

ಮೌನವೀಣೆ said...

ಒಳ್ಳೆ ಪ್ರಯತ್ನ ಚೆನ್ನಾಗಿದೆ.

ಇಷ್ಟ ಆಯ್ತು ಸಾಲುಗಳು..
ಜೀಕುಗಾಲಿನ ಪ್ರೇಮಲಾಳಕೆ ಸೂಜಿಗಲ್ಲಿನ ಹಂಬಲ,
ಬದಲುಬಯಸುವ ಅಂತರಾಳಕೆ ಬೀಸುಗಾಳಿಯ ಬೆಂಬಲ.
ತಿರುಗುಭೂಮಿಯ ಬುಗುರಿಯಾನಕೆ ಕಾಶಿದಾರದ ಸರಗುಣಿ,
ಏರಿಇಳಿಯುವ ನೂರುಬಯಕೆಯು ಒಡೆದ ಮುಚ್ಚಲ ತಿರುಗುಣಿ.

ಮನಸು said...

ಪಯಣ ನಿರಂತರ .. ಸದಾ ವಿಭಿನ್ನ ಪದಪ್ರಯೋಗ ನಾನು ಮೂಕಳಾದೆ. ಚಿನ್ಮಯ್ ನಿಮ್ಮ ಮುಂದಿನ ವಿದ್ಯಾಭ್ಯಾಸಕ್ಕೆ ಬೆಂಗಳೂರಿಗೆ ತೆರಳುತ್ತಿದ್ದೀರಿ ಎಲ್ಲಾ ವಿಷಯ ತಿಳಿಯಿತು. ಹೊಸತನದ ಬದುಕು ಕಾಣ ಹೊರಟಿರುವ ನಿಮಗೆ ಶುಭವಾಗಲಿ ವಿದ್ಯಾಭ್ಯಾಸ ಹಚ್ಚ ಹಸಿರಾಗಲಿ ಎಂದು ಆಶಿಸುತ್ತೇನೆ.
ಚೆಂದದ ಕವನ ಹೀಗೆ ಬರೆಯುತ್ತಲಿರಿ

MPPRUTHVIRAJ KASHYAP said...

ರಸವದ್ಭರಿತವಾದ ಕಾವ್ಯ. "Hatsoff" ಭಟ್ರೆ.
ಇಷ್ಟು ದಿವಸ ಪ್ರಶ್ನೆಗಳಲ್ಲೊ ಅಥವಾ ಗೊಂದಲದಲ್ಲೋ ಮುಗಿಯುತ್ತಿದ್ದ ನಿಮ್ಮ ಕವನ ಇವತ್ತು ಒಂದು ಪರಿಹಾರದಲ್ಲಿ ಮುಗಿದಿದ್ದು ನೋಡಿ ತುಂಬಾ ಖುಷಿಯಾಯ್ತು.ನಿಮ್ಮ ಕವನಕ್ಕೆ ಪರಿಪೂರ್ಣತೆ ಸಿಕ್ಕ ಭಾವ ನನಗೆ ಬಂತು ಕಂಡ್ರಿ.
ಆಮೇಲೆ ಕವನದ ಬಗ್ಗೆ.
ಅಚ್ಚುಕಟ್ಟಾಗಿ ಬರೆದಂತಿದೆ ಭಟ್ರೆ.
"ನಿತ್ತನೆಲದಾ ಲೆಕ್ಕಮುಗಿದೊಡೆ ಮತ್ತೆ ನೊಗವಾ ಎತ್ತುತಾ"
ತುಂಬಾ ಇಷ್ಟಾ ಆಯ್ತು.
ಆಮೇಲೆ ಅಂತ್ಯ ಪ್ರಾಸ ಚೆನ್ನಾಗಿ ಮೂಡಿ ಬಂದಿದೆ.
ನನ್ನ ಅಭಿಪ್ರಾಯ:
ಕವನ ಅರ್ಥೈಸಿಕೊಳ್ಳೊದಕ್ಕೆ ಸಾಮಾನ್ಯರಿಗೆ ತುಂಬಾ ಕಷ್ಟ ಆಗುತ್ತೆ ಆದ್ದರಿಂದ ನಿಮ್ಮ ಕವನಗಳು ಒಂದು ವರ್ಗಕ್ಕೆ ಸೀಮಿತವಾಗಬಹುದು.
ಆದ್ದರಿಂದ ಈ ನಿಟ್ಟಿನಲ್ಲಿಯೂ ನೀವು ಗಮನ ಹರಿಸಿದರೆ ಎಲ್ಲರಿಗು ನಿಮ್ಮ ಕವನದ ಸುರೆಯನ್ನ ಸವಿಯುವ ಅವಕಾಶ ಸಿಗುತ್ತದೆ ಎಂದುಕೊಳ್ಳುತ್ತೇನೆ.
ಧನ್ಯವಾದಗಳು ಭಟ್ರೆ

ಪದ್ಮಾ ಭಟ್ said...

ತುಂಬಾ ಚನ್ನಾಗಿದ್ದು..ಪ್ರತೀ ಸಾಲುಗಳೂ ಬಹಳ ಚಂದ ಚಂದ...ಇಷ್ಟವಾಯಿತು.....

ಶ್ರೀವತ್ಸ ಕಂಚೀಮನೆ. said...

ಸಂಜೆಗತ್ತಲ ಪಯಣವೆತ್ತಲೊ ಹಾದಿಮಸುಕಿನ ಚಾರಣ,
ಪಂಜಿಮೆತ್ತಿಹ ಧೂಳಸುತ್ತಲು ಕನಸಿನುಸುಕಿನ ತೋರಣ...
ಇಷ್ಟವಾಯಿತು ಭಾವ ಬರಹ...

ಚಿನ್ಮಯ ಭಟ್ said...

ಬದರಿ ಸರ್....
ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ :)..
ನಿಮ್ಮ ಹೊಗಳಿಕೆಗೆ ನಾನು ಅರ್ಹನೋ ಇಲ್ಲವೋ ಗೊತ್ತಿಲ್ಲ..ಆದರೆ ಅವು ನನಗೆ ಖುಷಿ ಕೊಟ್ಟದ್ದಂತೂ ನಿಜ...
ಹಮ್. ಅಲ್ಲಿ ಕಾಶಿದಾರವನ್ನು ನಮ್ಮ ಹಿರಿಯ ಸಂಪ್ರದಾಯಗಳನ್ನು ಹೇಳಲು,ನಮ್ಮೊಡನೆ ಬರುವ ಕೆಲ ಜವಾಬ್ದಾರಿಗಳನ್ನು ಸೂಚಿಸಲು ಬಳಸಿದ್ದು..ಇಲ್ಲಿ ನಾವು ಹೇಗೆ ಬೇಕಾದಂತೆ ಹಾಗೆ ತಿರುಗಲು ಈ ಸಂಬಂಧಗಳು ಬಿಡಲಾರವು ಎಂಬುದನ್ನು ಹೇಳಲು ಈ ಸಾಲನ್ನು ಬಳಸಿದ್ದೆ...
ವಂದನೆಗಳು ಅದನ್ನು ಉಲ್ಲೇಖಿಸಿದ್ದಕ್ಕಾಗಿ,ಖುಷಿ ಪಟ್ಟಿದ್ದಕ್ಕಾಗಿ...
ಬರ್ತಾ ಇರಿ ಸರ್...
ಖುಷಿ ಆಯ್ತು...
ನಮಸ್ತೆ :)

ಚಿನ್ಮಯ ಭಟ್ said...

ಸ್ವರ್ಣಾ ಮೇಡಮ್ :)...
ನಮಸ್ತೆ :)...
ಧನ್ಯವಾದಗಳು ನಿಮ್ಮ ಹಾರೈಕೆಗೆ...
ಇದನ್ನು ಬರೆದದ್ದು ಸಿಕ್ಕ ಕೆಲಸಕ್ಕೆ ಹೋಗಲೋ ಅಥವಾ ಮುಂದೆ ಕಲಿಯಲು ಹೋಗಲೋ ಎಂಬ ಗೊಂದಲದಲ್ಲಿದ್ದಾಗ..ಮುಂದೆ ಆ ಸಾಲುಗಳಿಗೆ ಮತ್ತೊಂದಿಷ್ಟು ಭಾವಗಳು ಸಿಕ್ಕವು.. ಅವನ್ನೆಲ್ಲಾ ಸೇರಿಸಿ ಒಂದು ಕವನದ ರೂಪ ಕೊಟ್ಟೆ ,ಅದೃಷ್ಟಕ್ಕೆ ಕೆಲವೊಂದು ಶಬ್ಧಗಳೂ ಸಿಕ್ಕವು..ಮುಂದಿನದು ನಿಮ್ಮ ಕಣ್ಣ ಮುಂದಿದೆ,..
ವಂದನೆಗಳು ನಿಮ್ಮ ಅನಿಸಿಕೆಯನ್ನು ನಮೂದಿಸಿ,ನನ್ನನ್ನು ಪ್ರೋತ್ಸಾಹಿಸಿದ್ದಕ್ಕೆ.,..
ಹಿಂಗೆ ಬರ್ತಾ ಇರಿ...
ನಮಸ್ತೆ

Sudeepa ಸುದೀಪ said...

its very nice chinmay.... :-)

ಸುಬ್ರಮಣ್ಯ said...

ಥೋ, ಈ ಕವಿತೆಗಳೆಂದರೆ ದೂರ. ಆಗಾಗ್ಯೆ ಬೇರೆ ವಿಷಯಗಳ ಬಗ್ಗೆಯೂ ಬರೆಯಿರಿ.

prashasti said...

ಸೂಪರೋ .. !
>>
ಸಂಜೆಗತ್ತಲ ಪಯಣವೆತ್ತಲೊ ಹಾದಿಮಸುಕಿನ ಚಾರಣ,
ಪಂಜಿಮೆತ್ತಿಹ ಧೂಳಸುತ್ತಲು ಕನಸಿನುಸುಕಿನ ತೋರಣ.
<<

ಸಖತ್ತಾದ ಕವನ. ಸಾಮಾನ್ಯವಾಗಿ ಕವನಗಳು ಲಯದಿಂದಲೋ, ಸರಳ ಪದಗಳ ಬಳಕೆಯಿಂದಲೋ ಓದಿಸಿಕೊಂಡು ಹೋಗುತ್ತೆ ಕೊನೆವರೆಗೂ. ಮೊದಲೆರಡರು ಸಾಲುಗಳೇ ವೇಗಕ್ಕೆ ಬ್ರೇಕ್ ಹಾಕಿ ನಿಲ್ಲಿಸಿದ ಹಂಗಾತು ನಂಗೆ..ಬದುಕನ್ನು ಬುಗುರಿ, ಮುಳ್ಳದಾರಿಯ ಮೇಲಿನ ನೆತ್ತರು, ಸೋತ ಕಾಲಿಗೆ ಸುಳ್ಳು ಪಾನಕ ಹೀಗೆ ಹಲಹೋಲಿಕೆಗಳ ಮೂಲಕ ಚಿತ್ರಿಸಿದ ಪರಿ ಇಷ್ಟವಾತು. ಕೊನೆಯಲ್ಲಿ ಪದಗಳ ಅರ್ಥ ಕೊಟ್ಟಿದ್ದೂ ಸೂಕ್ತವೇ.

ಮೊದಲೇ ಹೇಳಿದಂತೆ ಈ ವಿಮರ್ಶೆ ಎಲ್ಲಾ ಗೊತ್ತಿಲ್ಲ ಗೆಳೆಯಾ..ಕವನವನ್ನೋದಿದಾಗ ಅನಿಸಿದ್ದಷ್ಟೇ ಹಂಚಿಕೊಳ್ಳುತ್ತಿದ್ದೇನೆ. ಬರೆಯುತ್ತಿರಿ.

Shruthi B S said...

ಚಿನ್ಮಯ್ ಕವನ ಬಹಳ ಚನ್ನಾಗಿದೆ... ಪ್ರಶಸ್ತಿ ಹೇಳಿದ೦ತೆ ಮೊದಲೆರಡು ಸಾಲುಗಳೇ ಹಿಡಿದು ನಿಲ್ಲಿಸಿಬಿಡುತ್ತದೆ. ಅವರೆಡನ್ನು ಬಿಟ್ಟು ನನಗೆ ಬಹಳ ಹಿಡಿಸಿದ ಸಾಲುಗಳೆ೦ದರೆ,
ಬುತ್ತಿಬಂಡಿ ಬಾಳಹಸಿವು ಎಂದುಮುಗಿಯದ ಗಣತಿಯು,
ಕತ್ತಪಿಂಡಿ ಸೋಲಶಿಂಬೆ ನಡುವೆ ಜಯದಾ ಪ್ರಣತಿಯು.

ಹಾಗ೦ತ ಉಳಿದ ಸಾಲುಗಳು ಇಷ್ಟವಾಗಲಿಲ್ಲ ಎ೦ದಲ್ಲ..

ಹೀಗೆ ಬರೆಯುತ್ತಿರು ಚಿನ್ಮಯ್...:)

ಚಿನ್ಮಯ ಭಟ್ said...

ಅಜಾದ್ ಸಾ...
ದೊಡ್ಡ ಮಾತು...ನಿಮ್ಮ ಪ್ರೋತ್ಸಾಹಕ್ಕೆ ನಾನು ಋಣಿ..
ವಂದನೆಗಳು ಛಂದದ ಉತ್ತೇಜನಕ್ಕಾಗಿ,ಅಂದದ ಸಾಲುಗಳಿಗಾಗಿ...
ಬರುತ್ತಿರಿ..ನೀವೂ ಬರೆಯುತ್ತಿರಿ...
ಹಾಂ ಶಬ್ಧಗಳ ಬಗ್ಗೆ ನೀವು ಪ.ಚಿಂ ಅಲ್ಲಿ ತೋರುತ್ತಿರುವ ಪ್ರೀತಿ ನಿಜವಾಗ್ಲೂ ಸ್ಮರಣೀಯ...
ಒಂದೆಡೆ ನಿಂತಮೇಲೆ ಖಂಡಿತವಾಗಿಯೂ ಆ ಕಡೆಗೆ ಕೈಲಾದ್ದನ್ನು ಮಾಡುತ್ತೇನೆ...

ಖುಷಿಯಾಯ್ತು...
ನಮಸ್ತೆ :)

ಚಿನ್ಮಯ ಭಟ್ said...

ಸುನಾಥ ಸರ್...ನಮಸ್ತೆ..
ನಿಮ್ಮಂಥ ಹಿರಿಯರ ಮಾರ್ಗದರ್ಶನವನ್ನು ದೊರಕಿಸಿದ್ದಕ್ಕಾಗಿ ಬ್ಲಾಗ್ ಲೋಕಕ್ಕೆ ನಾನು ಧನ್ಯವಾದ ಹೇಳಲೇ ಬೇಕು..ನಮ್ಮಂಥ ಎಳಸುಗಳ ಬರಹವನ್ನು ಪ್ರೀತಿಯಿಂದ ಓದಿ ಪ್ರೋತ್ಸಾಹಿಸುವ ನಿಮಗೆ ನಾ ಏನೆನ್ನಲಿ? ವಂದನೆಗಳು ಬರುತ್ತಿರಿ ಅಷ್ಟೇ ..

ಖಂಡಿತವಾಗಿಯೂ ಇದು ಪಯಣದ ಶುರುವಿನ ಆರಂಭದಲ್ಲಿರುವ ಗೊಂದಲಗಳನ್ನು ಹೇಳುವ ಭಾವಹೊತ್ತು ಬರೆದದ್ದು..ಈ ಪಯಣಕ್ಕೆ ಶುಭ ಹಾರೈಸಿದ ನಿಮಗೆ ಧನ್ಯವಾದಗಳು..
ಬರುತ್ತಿರಿ... ನಮಸ್ತೆ.

ಚಿನ್ಮಯ ಭಟ್ said...

ವೀಣಾ ಮೇಡಮ್...
ಸ್ವಾಗತ ನಮ್ಮನೆಗೆ ...
ಇಲ್ಲಿ ಮೊದಲನೇ ಸಾಲಿನಲ್ಲಿ ಜೀಕುಗಾಲು ಅಂದರೆ ನಮ್ಮ ಆಸೆಗಳು,ಅವೇ ನಮ್ಮನ್ನು ಎಳೆದುಕೊಂಡು ಹೋಗುವವು..ಅವುಗಳು ತಮ್ಮ ಸಾಧನೆಯ ಶಿಖರವನ್ನು ತಲುಪಲು ಸದಾ ತುಡಿಯುತ್ತಿರುತ್ತವೆ.. ಜೊತೆಗೆ ನಮ್ಮ ಈ ಒಂದು ಬದಲಾವಣೆಯ ಪ್ರಯಾಣಕ್ಕೆ ಸದಾ ಹೊಸದನ್ನು ಬಯಸುವ ಮನಸ್ಸಿನ ಅಲೆಮಾರಿ ಭಾವವೂ ಸೇರಿ,ನಮ್ಮನ್ನು ಒಂದೆಡೆ ನೆಲೆ ನಿಲ್ಲಲು ಬಿಡಲಾರವು..ಇನ್ನು ಅವಾಗಲೇ ಹೇಳಿದಂತೆ ನಮ್ಮ ತಿರುಗಾಟದ ಮನಸ್ಸನ್ನು ಕೆಲ ಸಂಬಂಧಗಳು ಕಟ್ಟಿಹಾಕುತ್ತವೆ.ಜ಼ೊತೆಗೆ ಸದಾ ಕಾಡುವ ಬಯಕೆಗಳು ಎಂದಿಗೂ ನಮ್ಮ ಸುತ್ತಲೂ ತಿರುಗುತ್ತಲೇ ಇರುತ್ತವೆ..ಅದು ಮುಗಿಯದ ಕಥೆ :).ಹೀಗೆ ಇವುಷ್ಟು ಭಾವವನ್ನು ಬರೆದ ಸಾಲುಗಳಿವು..ತಾತ್ಪರ್ಯ ಇಷ್ಟೇ ,ಒಂದೆಡೆ ನೆಲೆ ನಿಲ್ಲಲೂ,ಯಾವಾಗಲೂ ಸುತ್ತುತ್ತಲೇ ಇರಲೂ ಸಾಧ್ಯವಾಗದು ಎಂಬುದಷ್ಟೆ..ಹಮ್ ವಂದನೆಗಳು ಬಂದಿದ್ದಕ್ಕೆ..ಅನಿಸಿಕೆ ತಿಳಿಸಿದ್ದಕ್ಕೆ :)..ಬರ್ತಾ ಇರಿ...ನಮಸ್ತೆ

ಚುಕ್ಕಿಚಿತ್ತಾರ said...

ಚನ್ನಾಗಿದ್ದು..ಪದಪ್ರಯೋಗ,ಭಾವ, ಬರಹ,ಎಲ್ಲಾ.. ಅಭಿನಂದನೆಗಳು.

ಮಹಿಮಾ said...

chinmaya...
layabadda mattu artha garbhita..ninna kavanagaLu naMge padagaLa arthavattada prayogakkagi ista aaguttave!! all the best tammannaa..

ಸಂಧ್ಯಾ ಶ್ರೀಧರ್ ಭಟ್ said...

Ishtavaadavu saalugalu Chinnu :)

ಗಿರೀಶ್.ಎಸ್ said...

First 2 lines are very nice.... swalpa easy padagaLanna use madappa... namage swalpa easy aagi artha agli...though giving meaning will be usefull to understand..

ಚಿನ್ಮಯ ಭಟ್ said...

ಸುಗುಣಾ ಮೇಡಂ..ನಮಸ್ತೆ..ಧನ್ಯವಾದ ..

ಚಿನ್ಮಯ ಭಟ್ said...

ಧನ್ಯವಾದ ಪ್ರಥ್ವಿರಾಜ ಸರ್..

ಚಿನ್ಮಯ ಭಟ್ said...

ಪದ್ಮಾ. .ಧನ್ಯವಾದನೇ

ಚಿನ್ಮಯ ಭಟ್ said...

ವಂದನೆ ಶ್ರೀವತ್ಸಾ.

ಚಿನ್ಮಯ ಭಟ್ said...

ಧನ್ಯವಾದ ಸುಮತಿ ಅಕ್ಕಾ

ಚಿನ್ಮಯ ಭಟ್ said...

ನೇರ ಮಾತಿಗಾಗಿ ಧನ್ಯವಾದ..ಉಳ್ದಿದ್ದೂ ಬರಿತೀನಿ ಸರ್..

ಚಿನ್ಮಯ ಭಟ್ said...

ಧನ್ಯವಾದ ಪ್ರಶಸ್ತಿ..ಖುಷಿ ಆತು ..

ಚಿನ್ಮಯ ಭಟ್ said...

ಶ್ರುತಿ ಧನ್ಯವಾದನೇ..ಬರ್ತಾ ಇರು ..

ಚಿನ್ಮಯ ಭಟ್ said...

ವಂದನೆ ಚುಕ್ಕಿ ಅಕ್ಕಾ..

ಚಿನ್ಮಯ ಭಟ್ said...

ಧನ್ಯವಾದ ಅಕ್ಕಾ..

ಚಿನ್ಮಯ ಭಟ್ said...

ಸಂಧ್ಯಕ್ಕಾ..ಧನ್ಯವಾದಾ ..

ಚಿನ್ಮಯ ಭಟ್ said...

ವಂದನೆಗಳು ಗಿರೀಶ್..

ಚಿನ್ಮಯ ಭಟ್ said...

ಗೆಳೆಯರೇ ಮತ್ತೆ ಸಿಗುವೆ..ನಿಮ್ಮ ಅಂದದ ಸಲಹೆಗಳಿಗೆ ವಿವರವಾಗಿ ಪ್ರತಿಕ್ರೀಯಿಸಲು

akshaya kanthabailu said...

ಕನ್ನಡವನ್ನು ಹುಲುಸಾಗಿ ಬೆಳೆಸಿದ್ದಿಯಾ ಇದರಲ್ಲಿ ಮರುಮಾತಿಲ್ಲ ನಿನ್ನ ಕವನವೇ ಸಾಕ್ಷಿ ಆದರೆ ಕಾಳುಕೀಳು ಅಲ್ಲ ಅದು ಕಾಲುಕೀಳು ಆಗಬೇಕು,ಆಮೇಲೆ ನನ್ನ ಅನಿಸಿಕೆ ಈ ಕಥೆ ಕವಿತೆಯಲ್ಲಿ ರಕ್ತ ಅನ್ನೊ ಪದ ಬಳಕೆ ಮಾಡುವಾಗ ’ಕೆಂಪು ರಕ್ತ ಅನ್ನೊ ವಿಶ್ಲೇಷಣೆ ಬೇಕಿಲ್ಲ ಯಾಕೇಂದ್ರೆ ರಕ್ತದ ಬಣ್ಣ ಕೆಂಪು ಅನ್ನುವುದು ಸರ್ವಸತ್ಯ! ಮುಂದಿನ ನಿಮ್ಮ ಮುಂದಿನ ಬರವಣಿಗೆಯ ನಿರೀಕ್ಷೆಯಲ್ಲಿ

ಚಿನ್ಮಯ ಭಟ್ said...

ಪ್ರೀತಿಯ ಅಕ್ಷಯ ,
ಧನ್ಯವಾದ ನಿನ್ನ ನೇರ ಅನಿಸಿಕೆಗಾಗಿ..
ಹಾಂ ಅದು ಕಾಲುಕೀಳುನೇ ಆಗಬೇಕು,ಸರಿ ಮಾಡ್ದೆ :) :)...

ಮತ್ತೆ ಕೆಂಪುರಕ್ತ ಅನ್ನೋದನ್ನಾ ಒಂಧರಾ ಆ ಶಬ್ಧಕ್ಕೆ ಹೆಚ್ಚಿನ ಒತ್ತು ಕೊಡಲು ಬಳಸಿದ್ದು...ಕಗ್ಗತ್ತಲು,ಬಿಳಿಯ ಹಾಲು ಅಂತೆಲ್ಲಾ ಬಳಸ್ತೀವಲ್ಲಾ ಹಾಗೆ,ಅದು ಓದುವಾಗ ಆ ಶಬ್ಧಕ್ಕೆ ಹೆಚ್ಚಿನ ಒತ್ತು ಮತ್ತು ಓದಿನೊಡನೆ ಬರುವ ಕಲ್ಪನೆಗೆ ಸಹಾಯಕ ಆಗತ್ತೆ ಅನ್ನೋ ದೃಷ್ಟಿಯಲ್ಲಿ ಬಳಸಿದ್ದು ಕಣೋ..ಸರಿನೋ ತಪ್ಪೋ ನಂಗೂ ಗೊತ್ತಿಲ್ಲ...

ಹಮ್..ಧನ್ಯವಾದ ಕಣಪ್ಪಾ ನನ್ನ ಕವನಗಳ ಮೇಲಿನ ವಿಶ್ವಾಸಕ್ಕಾಗಿ...
ಬರ್ತಾ ಇರು..
ನಮಸ್ತೆ :) :)

Unknown said...

superb....

Unknown said...

superb....

ಚಿನ್ಮಯ ಭಟ್ said...

ಧನ್ಯವಾದ ಚೇತನಜೀ...
ಸ್ವಾಗತ ನಮ್ಮನೆಗೆ :) :)

Unknown said...

ಸಂಜೆಗತ್ತಲ ಪಯಣವೆತ್ತಲೋ ....ತೀರಾ ಕಾಡಿದ ಪದಗಳು ಚಿನ್ಮಯಣ್ಣಾ ..ಅಷ್ಟಾಗಿ (ಪೂರ್ತಿಯಾಗಿ)ಅರ್ಥವಾಗದಿದ್ದರೂ ಇಷ್ಟವಾಯ್ತು ಪದಗಳ ನೀವು ಕಟ್ಟಿಕೊಡೋ ರೀತಿ
ನೀವಿದ ಬರೆಯೋವಾಗ ಇಂಟರ್ನಲ್ ಎರಡನೇ ಇಂಟರ್ನಲ್ ಮುಗಿದಿತ್ತು ನಮಗೆ ..ಅವತ್ತೆ ನೆನಪಿಸಿಕೊಂಡೆ ನಮ್ಮ ಕ್ಯಾಂಪಸ್ಸಿನ ಚಿನ್ಮಯಣ್ಣನ್ನಾ ...ಇಲ್ಲೆ ಇದ್ದಿದ್ರೆ ಇಂಟರ್ನಲ್ ಮುಗೀತಂತಾ ಹಾಕೋರು ಅಂತಾ ..ಆಶ್ಚರ್ಯವಾಗಿದ್ದಂತೂ ಸುಳ್ಳಲ್ಲ..
ಬರೀತಾ ಇರಿ ...
ಇಷ್ಟಪಡ್ತು ಓದ್ತೀವಿ

ಚಿನ್ಮಯ ಭಟ್ said...

ವಂದನೆಗಳು ಚೇತನ್ ಅವ್ರೇ..ಬರ್ತಾ ಇರಿ :)

ಚಿನ್ಮಯ ಭಟ್ said...

ಧನ್ಯವಾದ ಭಾಗ್ಯಮ್ಮಾ :)..
ಬರ್ತಿರು

Srikanth Manjunath said...

ಬಾಲ್ಯದ ಆಟ ಆ ಹುಡುಗಾಟ ಇನ್ನೂ ಮಾಸಿಲ್ಲ ಎನ್ನುವ ಹಾಡಿನಂತೆ ಜೀವನದ ಬದಲಾವಣೆಯ ಜೊತೆ ಜೊತೆಯಲ್ಲಿಯೇ ನೆನಪಿನ ಸರಪಣಿಯನ್ನು ಪೋಣಿಸಿಕೊಂಡೆ ಸಾಗುವ ಪರಿ ಇಷ್ಟವಾಯಿತು. ಹೇಳುವ ಸಂದೇಶವನ್ನು ತಾಕಿಸುವ ಸಂಗತಿಯನ್ನು ಪದಗಳ ಮೋಡಿಯಿಂದ ಹೇಳುವ ನಿಮ್ಮ ಔಟ್ಪುಟ್ ಸೂಪರ್ ಚಿನ್ಮಯ್

ಚಿನ್ಮಯ ಭಟ್ said...

ಶ್ರೀಕಾಂತಣ್ಣಾ ....
ಧನ್ಯವಾದ ಅಷ್ಟೇ ಹೇಳಬಲ್ಲೆ ನಾನು.... ;) :)
ಖುಷಿ ಆಯ್ತು :)..