Saturday, October 19, 2013

ಹುಣ್ಣಿಮೆಯ ತಡರಾತ್ರಿ.....(ಕಟ್ಟುಕಟ್ಟದ ಶಬ್ಧಗಳ ಜೊತೆಗೊಂದು ಹುಚ್ಚುಪ್ರಯೋಗ )


ನಮಸ್ಕಾರ ಎಲ್ರಿಗೂ,
ಅದೇನೋ ಗೊತ್ತಿಲ್ಲ...ನಿನ್ನೆ ರಾತ್ರಿ ಹಲ್ಲುತಿಕ್ಕಲು ಹೋದವನಿಗೆ ರಾತ್ರಿಯ ಆಗಸದಲ್ಲಿ ಚಂದಿರ ಕಂಡ..
ಉಳಿದ ದಿನಕ್ಕಿಂತ ಯಾಕೋ ವಿಶೇಷವಾಗಿ ಕಂಡ..
ಏನೂ ಬರೆಯಲಿಲ್ಲವಲ್ಲಾ ಎಂದು ಅಂದುಕೊಳ್ಳುತ್ತಿದ್ದವನಿಗೇಕೋ ಈ ಕೆಳಗಿನ ಬರಹದ ಎರಡು ಸಾಲುಗಳು ಹಲ್ಲುತಿಕ್ಕಿ ಮುಗಿಸುವುದರೊಳಗಾಗಿ ಹೊಳೆದುಬಿಟ್ಟವು..
ಏನೋ ಗೊತ್ತಿಲ್ಲ...ಸುಮ್ಮನೆ ಅದನ್ನು ಚಾಟಿನ ಮಧ್ಯೆ ಮೆಸ್ಸೆಜಿಸಿ ನಗುಮೊಗದ ಸ್ನೇಹಿತೆ ಲಹರಿಯೊಡನೆ  ಹಂಚಿಕೊಂಡೆ..

"ಚೆನಾಗಿದೆ ಕಣೋ ಮಾರಾಯಾ..ಅದ್ ಹೆಂಗ್ ಬರಿತೀಯಾ ಇದ್ನೆಲ್ಲಾ "ಅಂದಳು...
ಕೊಂಬು ಬಂದಂಗಾಯ್ತು ನೋಡಿ,ಏನೋ ಅನಿಸಿದ ಭಾವವನ್ನೆಲ್ಲಾ ಬರಹಕ್ಕಿಳಿಸಿದೆ...ಉಳಿದದ್ದು ನಿಮ್ಮ ಮುಂದೆ..

 ಇನ್ನು ಇದನ್ನಾ ಹಂಗೆ ಲೇಖನದ ಥರಬರ್ಯಕೆ ನಂಗ್ ಬರ್ಲಿಲ್ಲ....
ಇದಕ್ಕೆ  ಕವನ ಅಂತಾ ಹೇಳಕೆ ನನ್ನೊಳಗಿನ ಒಂದು  ಮನಸ್ಸು ಒಪ್ತಾ ಇಲ್ಲ...
ಹಂಗಂತಾ ಇದ್ನಾ ನಿಮ್ಮ ಜೊತೆ ಹಂಚ್ಕೊಳ್ದೇ ಇರಕ್ಕೆ ಇದನ್ನು ಬರೆದ ಮನಸ್ಸು ಬಿಡ್ತಾ ಇಲ್ಲ..

ಇಬ್ಬರಿಗೂ ಸಂಧಾನ ಮಾಡ್ಸೋ ಪ್ರಯತ್ನ ಇದು..ದಯವಿಟ್ಟು ಬೇಜಾರಾಗ್ಬೇಡಿ...
ಭಾವವ ಬರಹಕ್ಕಿಳಿಸಿದ ಸಂಸ್ಕರಿಸದ ಸಾಲುಗಳಿವು...
ಬೇಗ ಓದಿ,ಹೇಂಗಿದೆ ಹೇಳಿ..ಜಾಸ್ತಿ ಇಟ್ರೆ ಕೆಟ್ಟೋಗತ್ತೆ !!!

  (ನನ್ನ ಮೊಬೈಲಿನ ಮಸುಬು ಕ್ಯಾಮರಾ+ಫೋಟೋಸ್ಕೇಪಿನ ಕೃಪೆ )ಹುಣ್ಣಿಮೆಯ ತಡರಾತ್ರಿ
ಬರೆದ ಸಾಲುಗಳಿವು ಕಣೆ ಹುಡುಗಿ,
ನಿನ್ನ ಸಂಗದ ನಶೆಯಲ್ಲಿ,
ಅಳಿದುಳಿದ ನೆನಪುಗಳ ಬೆಳಕಿನ ಕತ್ತಲೆಯಲ್ಲಿ..

ಅವತ್ತು ಅಮಾವಾಸ್ಯೆಯಿರಬೇಕು ನೀ ಕಂಡ ದಿನ ಎನಗೆ
ಬಾಕಿಉಳಿದಿದ್ದ ಕನಸಚುಕ್ಕಿಗಳೆಲ್ಲಾ ಏಕೋ ಮಾಯವಾಗಿದ್ದವು,
ಕಣ್ಣ ಮುಂದಿದ್ದುದೊಂದೆ ಕತ್ತಲೆ....
ನಿನ್ನ ಪಿಸುಮಾತೊಂದೆ ಎದೆಯೊಳು ಮಾರ್ದನಿಸುವ ಕತ್ತಲೆ....

ಆ ರಾತ್ರಿಯಲು ಒಂದು ಸೊಗಸಿತ್ತು...
ತುಂಟಮಾತಿನ ಕಚಕುಳಿಯಿತ್ತು...
ತಡೆಯಿಲ್ಲದೆ ಹರಿವ ಮಾತಿನ ಸರಪಳಿಯಿತ್ತು...
ಕಾಲೆಳೆದಾಗ ನೀ ಎನ್ನ ಬಲಭುಜವ ಹೊಡೆವ ಚಂದದ ಸಪ್ಪಳವಿತ್ತು..
ನೀಯನ್ನ ತೀರ ರೇಗಿಸಿದಾಗಿನ ಮಾತಿಲ್ಲದ ಮೌನದ ಬಿಸಿಯುಸಿರ ಛಳವಿತ್ತು..

ಅಂದು ಕತ್ತಲೆಯಿತ್ತು...ಕತ್ತಲೆಯೊಳಗೆಲ್ಲ ಇತ್ತು...

ಹುಣ್ಣಿಮೆಯ ತಡರಾತ್ರಿ
ಬರೆದ ಸಾಲುಗಳಿವು ಕಣೆ ಹುಡುಗಿ,
ನಿನ್ನ ಸಂಗದ ನಶೆಯಲ್ಲಿ,
ಅಳಿದುಳಿದ ನೆನಪುಗಳ ಬೆಳಕಿನ ಕತ್ತಲೆಯಲ್ಲಿ..

ಇಂದು ಹುಣ್ಣಿಮೆ..ನೀನಿಲ್ಲದ ಒಂಟಿ ಬದುಕಿನ ಹುಣ್ಣಿಮೆ..
ಜೇಬತುಂಬಿಬಂದ ಕನಸುಗಳು ನೋಡುತ್ತಿವೆ ಎನ್ನ ಕೆಕ್ಕರಿಸಿಕೊಂಡು..
ಜೀವಹಿಂಡುವ ಬಿಳಿಯಚಂದ್ರ ತಲೆತಿನ್ನುತಿಹ ಬಂದುವಕ್ಕರಿಸಿಕೊಂಡು..
ಈಗ ಎತ್ತನೋಡಿದರತ್ತಲಲ್ಲೆಲ್ಲ ಬೆಳಕು..
ಚಿತ್ತಕಲಕುವ ನೆನಪೆಲ್ಲವ ಕೆದಕಿ,ಉಸಿರುಗಟ್ಟಿಸುವ ಮಬ್ಬು ಬೆಳಕು...

ಏನಿದೆ ಈ ಬೆಳಕಲ್ಲಿ??ಏನಿದೆ ಈ ಬೆಳಕಲ್ಲಿ??

ಹಾಳುಗರಿವ ಕೆಂಪುಕುನ್ನಿಯ ರಾತ್ರಿರಾಗಕೆ ,
ಬರುತಿದ್ದ ಅರೆಬರೆ ನಿದ್ದೆಯೂ ಹತ್ತುತಿಲ್ಲ..
ಭಗಭಗನೆ ಹೊತ್ತುರಿದು ನಿರಾಸೆಯ ಮರಳುಗಾಡಿಗೆಕೊಂಡೊಯ್ಯುತಿದ್ದ
 ಹತಾಶೆಯ ಹಾಳುಬೆಂಕಿಯೂ ಇಂದು ಕತ್ತುತಿಲ್ಲ...
ಎಲ್ಲೆಲ್ಲೂ ಬರಿಕೆಂಪುದೀಪಗಳು ಕಣೆ ಹುಡುಗಿ,
ಕಣ್ಣಮುಚ್ಚಿದೊಡೆ ಬಣ್ಣಬಣ್ಣದ ಕನಸುಗಳ ಸುಳಿವಿಲ್ಲ..
ಬರಡುಬಿದ್ದಿಹ ಈ ಎದೆಯೊಳಗೆ 
ಒಂದಿನಿತು ಬದುಕ ಸಾಗಿಸುವ ಸ್ಪೂರ್ತಿಯ ಸೆಲೆಯಿಲ್ಲ..

ಇಂದು ನೀನಿಲ್ಲ...ಈ ಬೆಳಕಲ್ಲು ಏನಿಲ್ಲ...

ಹುಣ್ಣಿಮೆಯ ತಡರಾತ್ರಿ
ಬರೆದ ಸಾಲುಗಳಿವು ಕಣೆ ಹುಡುಗಿ,
ನಿನ್ನ ಸಂಗದ ನಶೆಯಲ್ಲಿ,
ಅಳಿದುಳಿದ ನೆನಪುಗಳ ಬೆಳಕಿನ ಕತ್ತಲೆಯಲ್ಲಿ..

          

ಇದ್ರ ಜೊತೆಗೆ ಇದನ್ನಾ ಓದಿಹೇಳೋ ಒಂದು ಪ್ರಯತ್ನಾನು ನಡ್ದಿದೆ..
ಬರಿ ಓದೋದಕ್ಕೆ ಹೇಳೋದ್ಕಿಂತಾ ಅದನ್ನಾ ಓದಿ ಹೇಳಿದ್ರೆ ಅದರ ಪರಿಣಾಮ ಜಾಸ್ತಿ ಅನಿಸ್ತು..
.ಗೊತ್ತಿಲ್ಲ..ನನ್ನ ಭಾವವನ್ನು ನಿಮಗೆ ತಿಳಿಸುವ ನಿಟ್ಟಿನಲ್ಲಿ ಒಂದು ಪುಟ್ಟ ಪ್ರಯತ್ನ..
ಒಂದ್ಸಲ ಕೇಳಿ ಕಿವಿ ತುಂಬುಸ್ಕೋಳಿ.:D..
ತಪ್ಪು ಒಪ್ಪುಗಳೇನಿದ್ರೂ ಹೇಳಿ..ನನ್ನನ್ನಾ ತಿದ್ದಿ ತೀಡಿ...


48 comments:

sunaath said...

‘ಅಳಿದುಳಿದ ನೆನಪುಗಳ ಬೆಳಕಿನ ಕತ್ತಲೆಯಲ್ಲಿ..’
ಚೆನ್ನಾಗಿ ಬರೆದಿದ್ದೀರಿ ಚಿನ್ಮಯರೆ. ಓದುತ್ತಿದ್ದಂತೆ ನನಗೂ ನಶೆ ಏರಿತು!

ಚಿನ್ಮಯ ಭಟ್ said...

ಸುನಾಥ ಸರ್....
ನಮಸ್ತೆ...
ಏನೋ ಗೊತ್ತಿಲ್ಲ...
ನನಗೆ ತೀರಾ ಇಷ್ಟದ ರೂಪು ಕವನಗಳು...
ಅದರಲ್ಲಿ ಪ್ರಾಸ,ಪದಗಳ ಜೊತೆಗಿನ ಆಟ ನಂಗಿಷ್ಟ..
ಅವೇ ಎಲ್ಲಿ ನನ್ನ ಬರವಣಿಗೆಯನ್ನು ನುಂಗಿಬಿಡುತ್ತವೆಯೋ ಅನ್ನಿಸಿತು...
ಇದನ್ನು ಹಾಗೇ ಬದಲಾವಣೆಗೆಂದು ಬರೆದದ್ದು...
ಬರೆದವನಿಗೆ ಹಂಚಿಕೊಳ್ಳಬೇಕೆನಿಸಿತು...ಇಲ್ಲಿ ಬರೆದೆ..
ಬರೆದವನಿಗೆ ಕವಿತೆ ಓದೋಣ ಅನ್ನಿಸಿತು...ಅದನ್ನೂ ಮಾಡಿದೆ..
ನೋಡಿ ಇವಿಷ್ಟು ನಮ್ಮ ಕಿತಾಪತಿಗಳು :D.. ಧನ್ಯವಾದ ಸರ್ ನಿಮ್ಮ ಪ್ರೋತ್ಸಾಹಕ್ಕೆ :),,ಬರ್ತಾ ಇರಿ...
ನಮಸ್ತೆ :)

balasubramanya said...

ವಾವ್ ಚಿನ್ಮೈ ನಿಮ್ಮ ಪ್ರಯೋಗಕ್ಕೆ ಶರಣು, ಒಳ್ಳೆಯ ರಸಿಕ ಕವಿ ನೀವು, ಕವಿತೆಯ ಪ್ರತಿ ಪದಗಳೂ ಪ್ರೀತಿಯ ನಶೆ ಏರಿಸುತ್ತವೆ. ಕವಿತೆಯ ಜೊತೆಗೆ ನಿಮ್ಮ ಕವಿತಾ ವಾಚನವೂ ಸಹ ಬೊಂಬಾಟ್ . ಇದು ಖಂಡಿತಾ ಯಾವುದಾದರು ಕನ್ನಡ ಚಲನ ಚಿತ್ರಕ್ಕೆ ಬಳಸಿ ಕೊಳ್ಳಲು ಸೂಕ್ತವಾಗಿದೆ. ನಿಮಗೆ ಪ್ರೀತಿಯ ಶುಭಾಶಯಗಳು ಕವಿವರ್ಯ.

Ittigecement said...

Beautifullllllllllllllllllllllllllllllllllllllllll........................ !!!!!!!!!!!!!!!!!!!!
no words..........................

thank u tammaa........

ಜಲನಯನ said...

ಚಿನ್ನು ಮೊದಲಿಗೆ ಮೊಬೈಲಾಟ ಅದರ ಮೇಲೆ ಪದ-ಸಾಲುಗಳ ಮಾಯಾಜಾಲ...ಅಂತೂ ನಾನು ಸಂಮೋಹಿತನಾದದ್ದು ನಿಜ ಅದರಲ್ಲೂ///
ಹುಣ್ಣಿಮೆಯ ತಡರಾತ್ರಿ
ಬರೆದ ಸಾಲುಗಳಿವು ಕಣೆ ಹುಡುಗಿ,
ನಿನ್ನ ಸಂಗದ ನಶೆಯಲ್ಲಿ,
ಅಳಿದುಳಿದ ನೆನಪುಗಳ ಬೆಳಕಿನ ಕತ್ತಲೆಯಲ್ಲಿ..
ನಶೆಯೇರಿದುದರಲ್ಲಿ ಅತಿಶಯೋಲ್ತಿಯೇನಿಲ್ಲ ಸುನಾಥಣ್ಣ,,,

prashasti said...

nice 1 :-)

Badarinath Palavalli said...

ಚಿನ್ಮಯೀ ಮುಂದಿನ ಪೌರ್ಣಿಮೆಗೆ ಅವಳ ನೆನಸಿಕೊಂಡು ಬಾಲ್ಕಾನಿಯಲಿ ನಿಂತು ಹಾಡಿಕೊಳ್ಳುತ್ತೇನೆ.

ಯಾವುದೋ ಮರೆತ ತಂತಿ
ಮೂಲೆ ಹಿಡಿದ ತಂಬುರ
ಮೀಟಿದೆ,
ನಾದವೂ ವೇದನೆ ಮೂಲ
ಇಂದು ನಿನ್ನ ದೆಸೆಯಿಂದ!

Subrahmanya said...

khushi aaythu :) arthanoo aaythu shabdaarthada avashyakathenoo illade. bareetaa iri.

ಚಿನ್ಮಯ ಭಟ್ said...

ಬಾಲು ಸರ್ ...
ಧನ್ಯವಾದ ನಿಮ್ಮ ಪ್ರೀತಿಯ ಪ್ರೋತ್ಸಾಹಕ್ಕೆ :)..
ಏನೋ ಒಂದು ಪ್ರಯತ್ನ..
ಚಲನಚಿತ್ರದ ಕಥೆ ಗೊತ್ತಿಲ್ಲ,ಆ ಹುಚ್ಚು ಕನಸಂತೂ ಇದೆ ,ನೋಡುವಾ..
ಧನ್ಯವಾದ ಸರ್..
ಬರ್ತಾ ಇರಿ..
ನಮಸ್ತೆ :)

ಚಿನ್ಮಯ ಭಟ್ said...

ಪ್ರಕಾಶಣ್ಣಾ ,
ಅಬ್ಬಾ...ಧನ್ಯೋಸ್ಮಿ..
ತೀರಾ ಖುಷಿ ಆಯ್ತು ನಿಮ್ಮ ಮಾತು ಕೇಳಿ...
ಈ ಥರಹದ ಬರಹಗಳನ್ನಾ ಬರ್ಯೋದಕ್ಕೆ ನಿಮ್ಮ ಬ್ಲಾಗಿನ ಸಾಲುಗಳದೂ ಒಂದು ಪಾಲಿದೆ...
ಧನ್ಯವಾದ..
ಬರ್ತಾ ಇರಿ..
ನಮಸ್ತೆ :)

ಚಿನ್ಮಯ ಭಟ್ said...

ಆಜಾದ್ ಸಾ...
ಸಂಮೋಹಿತ ಆದೆ ನಾ ಅಂತೀರಾ ಹಾ ಹಾ...
ಧನ್ಯವಾದಾ ಸಾ...
ಪದ-ಸಾಲುಗಳು ಹುಡುಕಿ ಬರೆದದ್ದಲ್ಲ ಇವು ಹೊಳೆದದ್ದನ್ನೆಲ್ಲಾ ಬರೆದದ್ದು...
ಹಮ್..ಧನ್ಯವಾದ ನಶೆ ಏರಿಸಿಕೊಂಡಿದ್ದಕ್ಕೆ :D..
ಬರ್ತಾ ಇರಿ ..
ನಮಸ್ಕಾರ..

ಚಿನ್ಮಯ ಭಟ್ said...

ಧನ್ಯವಾದಾನೋ ಪ್ರಶಸ್ತಿ...ಬರ್ತಾ ಇರು...

ಚಿನ್ಮಯ ಭಟ್ said...

ಹಾ ಹಾ...ಬದರಿ ಸರ್..
ಇದೇನಿದು ನೆಂಟರ ಮನೆಗೆ ಬಂದು ಅಡಿಗೆ ಮಾಡಿದ ಹಂಗಾಯ್ತಲ್ಲಾ...!!!
ಅನಿಸಿಕೆಯಲ್ಲೂ ಕವನದ ಹನಿಗಳು...
ವಂದನೆಗಳು ಅಷ್ಟೇ..ಖುಷಿಯಾಯ್ತು..
ದಯವಿಟ್ಟು ಮುಂದುವರೆಸಿ ಸಾರ್ ಆ ಸಾಲುಗಳನ್ನಾ :)...
ಬರ್ತಿರಿ..ನಮಸ್ತೆ..

ಚಿನ್ಮಯ ಭಟ್ said...

ಸುಬ್ರಹ್ಮಣ್ಯಾ...
ಹಾ ಹಾ..ಶಬ್ದಾರ್ಥ ಅದೊಂದು ಈ ಪೋಸ್ಟಿನಲ್ಲಿ ಬಂದಿಲ್ಲಾ ಅಲ್ವಾ??
ಹಮ್,,ನಿಮ್ಗ್ ಖುಷಿ ಆಗಿದ್ದು ನಮ್ಗೂ ಖುಷಿನೇ :)..
ಬರ್ತಿರಿ..
ನಮಸ್ತೆ :)

Pradeep Rao said...

Super lines.. nice feelings expressed & also good narration :)

ಚಿನ್ಮಯ ಭಟ್ said...

ಪ್ರದೀಪಣ್ಣಾ ,
ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕಾಗಿ...
ಬರ್ತಾ ಇರಿ..
ಖುಷಿ ಆಯ್ತು..

bilimugilu said...

hi Chinmay,
ಹುಣ್ಣಿಮೆಯ ರಾತ್ರಿಗಳಲ್ಲಿ ಹರಿದು ಬ೦ದ ಭಾವಲಹರಿ ಸೊಗಸಾಗಿ ಮೂಡಿದೆ.....
ಹೊಸ ಪದಗಳ ಪರಿಚಯವಿರುತ್ತೆ, ಶಬ್ಧಾರ್ಥಗಳನ್ನು ಕೊಟ್ಟಿರುತ್ತೀರಿ ಅ೦ದುಕೊ೦ಡೆ.... ಈ ಬಾರಿಯ ಕವನಕ್ಕೆ ಅದರ ಅವಶ್ಯಕತೆಯಿಲ್ಲ ಬಿಡಿ... ಇಷ್ಟವಾಯ್ತು :)

Shruthi B S said...

ಜೇಬತುಂಬಿಬಂದ ಕನಸುಗಳು ನೋಡುತ್ತಿವೆ ಎನ್ನ ಕೆಕ್ಕರಿಸಿಕೊಂಡು..
ಜೀವಹಿಂಡುವ ಬಿಳಿಯಚಂದ್ರ ತಲೆತಿನ್ನುತಿಹ ಬಂದುವಕ್ಕರಿಸಿಕೊಂಡು..
ಬಹಳ ಚನ್ನಾಗಿದೆ ಚಿನ್ಮಯ್... ನಾನ೦ತೂ ನಿನ್ನ ಅಭಿಮಾನಿಯಾಗಿಬಿಟ್ಟಿದೀನಿ.. ಸಿಕ್ಕಾಗ ನಿನ್ನ ಆಟೋಗ್ರಾಫ್ ಕೊಡು ಮಾರಾಯಾ....:)

ಕನಸು ಕಂಗಳ ಹುಡುಗ said...

ಅಂದಿನ ಅವಳ ಸಂಗದ ನೆನಪಿನ ನಶೆಯನ್ನ
ಇಂದಿನ ತಡರಾತ್ರಿಯ ಚಂದಿರ ಏರಿಸಿದ್ದಕ್ಕೆ
ಒಂದು ಒಳ್ಳೆಯ ಪ್ರಾಯೋಗಿಕ ಬರಹ ಓದಿದಂತಾಯ್ತು...

ಪ್ರಯೋಗಕ್ಕೆ ಹಾರಿಸಿದ ರಾಕೇಟ್ ಒಂದು ಹೊಸ ಶೋಧನೆಯನ್ನೇ ಮಾಡಿಕೊಂಡು ಬಂದರೆ
ಹೆಂಗೆ ಹಂಗಾಯ್ತಪಾ...

ಸೂಪರೋ ರಂಗಾ..........

ಚಿನ್ಮಯ ಭಟ್ said...

ರೂಪಾ ಮೇಡಮ್ :)..
ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ :)..
ಶಬ್ದಗಳು ಅವು ಇವು ಅಂಥಾ ಈ ಸಲ ಏನೂ ತಲೆ ಕೆಡಿಸಿಕೊಂಡು ಬರೆದದದ್ದಲ್ಲ ..ಅದ್ಕೇ ಆ ಕಾಲಂ ಒಂದು ಖಾಲಿ ಇದೆ ,,,
ಖುಷಿ ಆಯ್ತು ಮೇಡಮ್..ಬರ್ತಾ ಇರಿ..
ನಮಸ್ತೆ :)

ಚಿನ್ಮಯ ಭಟ್ said...

ಶೃತಿ,
ಅಯ್ಯೋ ಮಾರಾಯ್ತಿ ಸುಮ್ನಿರೇ ಮೊದ್ಲೇ ಒಂದರ್ಧ ಗೇಣು ಮೇಲಿದೀನಿ ಮತ್ತೂ ಮೇಲ್ ಏರಿಸ್ ಬೇಡಾ !!! ಹಾ ಹಾ...
ಧನ್ಯವಾದನಪ್ಪಾ :) :) ನಾ ಬರೆದ ಸಾಲುಗಳನ್ನು ಓದಿದ್ದಕ್ಕೆ..
ಓದಿ ಅಕ್ಕರೆಯಿಂದ ಪ್ರತಿಕ್ರೀಯಿಸಿದ್ದಕ್ಕೆ :)...
ಬರ್ತಿರು ..ನಂಗೂ ಸ್ಪೂರ್ತಿ ತುಂಬ್ತಾ ಇರು :)
ನಮಸ್ತೆ :)

ಚಿನ್ಮಯ ಭಟ್ said...

ಕನಸು ಕಂಗಳ ಹುಡುಗ,
ಧನ್ಯವಾದಗಳು ಗುರುಗಳೇ...
ಪ್ರಯೋಗಕ್ಕೆ ಹಾರಿಸಿದ ರಾಕೆಟ್ಟು ಶೋಧನೆನೇ ಮಾಡ್ತಾ ?? ಹಾ ಹಾ...ಚೆನಾಗಿದೆ ನಿಮ್ ಕಥೆ :) :)
ಎನೋ ಗೊತ್ತಿಲ್ಲ, ಎಲ್ಲ ನಿಮ್ಮ ಪ್ರೀತಿ ಪ್ರೋತ್ಸಾಹದಿಂದಷ್ಟೇ :)
ಬರ್ತಿರಿ...ಖುಷಿ ಆಯ್ತು :)
ನಮಸ್ತೆ :)

ಸಂಧ್ಯಾ ಶ್ರೀಧರ್ ಭಟ್ said...


ಹುಣ್ಣಿಮೆಯ ತಡರಾತ್ರಿ
ಬರೆದ ಸಾಲುಗಳಿವು ಕಣೆ ಹುಡುಗಿ,
ನಿನ್ನ ಸಂಗದ ನಶೆಯಲ್ಲಿ,
ಅಳಿದುಳಿದ ನೆನಪುಗಳ ಬೆಳಕಿನ ಕತ್ತಲೆಯಲ್ಲಿ..

Chennaagiddu....

ಅಂದು ಕತ್ತಲೆಯಿತ್ತು...ಕತ್ತಲೆಯೊಳಗೆಲ್ಲ ಇತ್ತು...
ee lines kaadutte...

superb kavana maaraaya...

ಸತೀಶ್ ನಾಯ್ಕ್ said...

ಇದು ಕವನವಲ್ಲ.. ಹುಣ್ಣಿಮೆ ರಾತ್ರಿಯೊಳಗಣ ಕನವರಿಕೆಗಳು.. ಕನವರಿಸಿದವರಿಗಷ್ಟೇ ಅಲ್ಲ.. ಕೇಳಿ ಕೊಂಡವರಿಗೂ ಇಷ್ಟವಾಗುತ್ತವೆ.

ಚಿನ್ಮಯ ಭಟ್ said...

ಸಂಧ್ಯಕ್ಕಾ,
ಧನ್ಯವಾದನೇ :) :)..
ಬರ್ತಾ ಇರು :)...
ಸಾಮಾನ್ಯವಾಗಿ ಕತ್ತಲೆನಾ ನಕಾರಾತ್ಮಕವಾಗಿ ನಾನು ಬಳಸದೇ ಜಾಸ್ತಿ ಅಂತಾ ಅನಿಸ್ತು....ಯಾಕೋ ಈ ಸಲ ಅದಲು ಬದಲು ಮಾಡಿದರೆ ಮೇಲಿನ ಸಾಲುಗಳಿಗೆ ಸರಿ ಹೊಂದತ್ತೆ ಅನಿಸ್ತು..ಹಂಗಾಗಿ ಬರೆದದ್ದು...

ಹಮ್,,ಖುಷಿ ಆತು,ಬರ್ತಾ ಇರು :)

ಚಿನ್ಮಯ ಭಟ್ said...

ಸತೀಶ್ ನಾಯ್ಕರೇ ,
ಸ್ವಾಗತ ನಮ್ಮನೆಗೆ :)...ಸುಮಾರ್ ದಿನಾ ಆಗಿತ್ತು ನೋಡ್ದೆನೆ ಅಲಾ??ಇರ್ಲಿ ...ಬಂದಿದ್ ಖುಷಿ ಆಯ್ತು..
ಹಾಂ ಈ ಕನವರಿಕೆ ಅನ್ನೋ ಶಬ್ಧ ಚೆನಾಗ್ ಕಾಣ್ಸತ್ತೆ ಈ ಸಾಲುಗಳಿಗೆ ..ಧನ್ಯವಾದ ಹುಡುಕಿಕೊಟ್ಟಿದ್ದಕ್ಕೆ...
ಧನ್ಯವಾದ ಅನಿಸಿಕೆ ಬರೆದು ಪ್ರೋತ್ಸಾಹಿಸಿದ್ದಕ್ಕೆ...
ಸರಿ,ಸಮಯ ಆದಾಗೆಲ್ಲಾ ಬರ್ತಾ ಇರಿ ಸತೀಶ್...
ನಮಸ್ಕಾರ :)

ಪದ್ಮಾ ಭಟ್ said...

ವಾಹ್............ಅದ್ಭುತ ಸಾಲುಗಳು.....

ಗಿರೀಶ್.ಎಸ್ said...

ಬೆಳದಿಂಗಳ ಕನವರಿಕೆಗಳು ಚೆನ್ನಾಗಿದೆ ... ಅಂದ ಹಾಗೆ ಆ ಹುಡುಗಿ ಯಾರು ..

ಚಿನ್ಮಯ ಭಟ್ said...

ಪದ್ಮಾ,ಧನ್ಯವಾದಾ :)

ಚಿನ್ಮಯ ಭಟ್ said...

ಧನ್ಯವಾದಗಳು ಗಿರೀಶ್ :)...
ಹುಡುಗಿ ..ಹಮ್..ನಂಗೊತ್ತಿಲ್ಲಾ ಮುಂದಿನ ಹುಣ್ಣಿಮೆಗೆ ಹೇಳ್ತೀನಿ ತಡೀರಿ ;)

prabhamani nagaraja said...

ಉತ್ತಮ ಪ್ರಯತ್ನ ಚಿನ್ಮಯ್, ಮು೦ದುವರೆಸಿ.

angi said...
This comment has been removed by the author.
MPPRUTHVIRAJ KASHYAP said...

1.ನಾನು ಈ ಕವನದಲ್ಲಿ ಬರಹಗಾರನ ಹುಡುಕಾಟದಲ್ಲಿದ್ದೆ ನಮ್ಮ ಭಟ್ರು ಕಾಣೆಯಾದಂತೆ ಅನ್ನಿಸಿತು
ಅಂದರೆ ಚಿನ್ಮಯ್ ಭಟ್ ಶಬ್ದಕೋಶ ಕಾಣಿಸಲಿಲ್ಲಿ
2."ಕಣ್ಣ ಮುಂದಿದ್ದುದೊಂದೆ ಕತ್ತಲೆ....
ನಿನ್ನ ಪಿಸುಮಾತೊಂದೆ ಎದೆಯೊಳು ಮಾರ್ದನಿಸುವ ಕತ್ತಲೆ...."
ಇಲ್ಲಿ ನನಗನಿಸಿದ ಹಾಗೆ ಗುರುಗಳೆ
ಒಬ್ಬ ಹುಡುಗನಿಗೆ ಹೊರಗೆಲ್ಲಾ ಕತ್ತಲೆ ಇದ್ದರು ತನ್ನವಳು ಹತ್ತಿರವಿದ್ದೊಡೆ ಬೆಳಕಾಣುವನು
ಆಲ್ಲದೆ ತನ್ನವಳ ಒಂದು ಪಿಸುಮಾತು ಆತನಿಗೆ ಉತ್ಸಾಹದ ಚಿಲುಮೆಯಾಗಿರುತ್ತದೆ ಆದ್ದರಿಂದ ಎದೆಯೊಳು ಮಾರದ್ನಿಸುವ ಕತ್ತಲೆ ಭಾವಕ್ಕೆ ಹೇಗೆ ಹೊಂದುತ್ತದೋ ಗೊತ್ತಿಲ್ಲ
3. ನಮ್ಮ ಭಟ್ರು ಸುಮ್ಮ ಸುಮ್ಮನೇ ಏನು ಮಾಡಲ್ಲ ಬಟ್ ಸ್ಟಿಲ್ ಇದೊಂದು ಹೊಸ ಪ್ರಯತ್ನ ಚೆನ್ನಾಗಿದೆ
ಹುಡುಗನ ಭಾವನೆಗಳು ಚೆನ್ನಾಗಿದೆ ಖುಷಿ ಯಾಯ್ತು ಭಟ್ರೆ.

Swarna said...

ನನಗೆ ಓದುತ್ತಾ ಡ್ರಾಮ ಚಿತ್ರದ ಭಟ್ಟರ ಸಾಲುಗಳು ನೆನಪಾದವು.
ಇದನ್ನು ಬರೆದದ್ದೂ ಭಟ್ಟರೇ ಆದ್ದರಿಂದ ಭಟ್ಟರ ದನಿಯಲ್ಲೇ ಕೇಳಿದೆ.
ಖಂಡಿತಾ ಇದನ್ನ ಕವಿತೆ , ಗಜಲು ಅನ್ನಬಹುದು ಅಂತ ನನ್ನ ಅನಿಸಿಕೆ.
ಮುಂದಿನ ಹುಣ್ಣಿಮೆಯಲ್ಲೂ ಹೊರಗೆ ಹೋಗಿ , ಇನ್ನೊಂದಷ್ಟು ಹುಣ್ಣಿಮೆ ಹಾಡು ನಿಮ್ಮಿಂದ ಬರಲಿ.
ಬರೆಯುತ್ತಿರಿ

ಚಿನ್ಮಯ ಭಟ್ said...

ಧನ್ಯವಾದ ಪ್ರಭಾಮಣಿ ಮೇಡಮ್ :)

ಚಿನ್ಮಯ ಭಟ್ said...

ಅನಿಸಿಕೆ ಮುಕ್ತವಾಗಿರಲಿ ,ತೊಂದರೆ ಏನಿಲ್ಲ :)ವಂದನೆಗಳು :)

ಚಿನ್ಮಯ ಭಟ್ said...

೧) ಖಂಡಿತ ಪ್ರಥ್ವಿರಾಜರೇ...ಇದು ಯಾಕೋ ನನ್ನ ಮಾಮೂಲಿ ಪದ್ಧತಿಯನ್ನು ಬದಿಗಿಟ್ಟು ಬರೆದದ್ದು...ಹೊಳೆದ ಭಾವವನ್ನೆಲ್ಲಾ ಬರೆದಿಟ್ಟು,ಅದಕ್ಕೊಂದೆರಡು ಸಾಲುಗಳನ್ನು ಹಾಗೇ ಸುಮ್ಮನೆ ಬರೆದು,ನಂತರ ಆ ಭಾವಕ್ಕೆ ಕಾಲು ಬಾಲ ಸೇರಿಸಿ ಒಂದು ಕವನದ ಆಕಾರ ಕೊಟ್ಟು,ನಂತರದಲ್ಲಿ ಒಂದು ಪ್ರತಿಮೆ,ರೂಪಕಗಳನ್ನು ಹುಡುಕಿ ಅದಕ್ಕೆ ಪದಗಳನ್ನು ಜೋಡಿಸಿ,ಹೊಸ ಪದ ಸಿಕ್ಕರೆ ಸೇರಿಸಿ, ಪ್ರಾಸ ಹುಡುಕಿ ಬರೆಯುವುದು ಇವೆಲ್ಲಾ ಮಾಡ್ತಿದ್ದೆ..ಇದ್ರಲ್ಲಿ ಅದೆಂಥದೂ ಇಲ್ಲಾ.....ಒಂದು ಹದಿನೈದು ಇಪ್ಪತ್ತು ನಿಮಿಷದಲ್ಲಿ ಬರೆದದ್ದೇನೋ ..ಬೆಳಿಗ್ಗೆ ಎದ್ದು ಒಂದ್ಸಲ್ಪ ಬದಲಾವಣೆ ಮಾಡಿದ್ದೆ..ಆಷ್ಟೇ...ಹಾಗಾಗಿ ಶಬ್ಧಕೋಶ ,ಪ್ರಾಸ ಅವೆಲ್ಲಾ ಏನೂ ಇಲ್ಲಾ...

೨) ಅಹ್ ..ಈ ವಿಷಯದ ಬಗ್ಗೆ ಜಾಸ್ತಿ ನಾ ಏನೂ ಹೇಳಲಾರೆ..ಪ್ರಾಯಷಃ ಕಲ್ಪನೆ ಮತ್ತು ನೈಜತೆಯ ನಡುವಿನ ಸೂಕ್ಷ್ಮ ಪರಿಧಿಯಿರಬೇಕಿದು...ನನಗೆ ಅನುಭವದಿಂದ ಬಂದ ಸಾಲುಗಳ ಇವಲ್ಲವಾದುದರಿಂದ ನನ್ನ ಸಾಲುಗಳ ಬಗ್ಗೆ ಜಾಸ್ತಿ ಸಮರ್ಥನೆ ನೀಡಲಾರೆ..ಆದರೆ ಇದು ಹತಾಶೆ ಮಿಶ್ರಿತ ನೆನಪುಗಳಲ್ಲಿ ಬರೆದುದರಿಂದ ಕತ್ತಲೆ ಅನ್ನುವುದು ಸರಿ ಎನ್ನುವುದು ನನ್ನ ಅನಿಸಿಕೆ...ಇಲ್ಲಿ ಕತ್ತಲೆ ಎಂದರೆ ಪ್ರೀತಿಯಲ್ಲಿರುವವನಿಗೆ ಉಳಿದದ್ದೆಲ್ಲಾ ಗೌಣ ಎನ್ನುವ ಅರ್ಥವೂ ಸಹ ಇದೆ..ಕತ್ತಲೆಯಲ್ಲಿ ಹೇಗೆ ಕಲ್ಮಶವಿಲ್ಲವೋ ಹಾಗೆ ಪ್ರೀತಿಯಲ್ಲೂ ಎನ್ನುವುದನ್ನೂ ಗಮನಿಸಬಹುದೇನೋ...
ಗೊತ್ತಿಲ್ಲ...ನನಗೆ ಗೊತ್ತಿಲ್ಲದ ಇನ್ನೊಂದು ಮುಖವನ್ನು ತಿಳಿಸಿದ್ದೀರಿ...ಧನ್ಯವಾದ ಅದಕ್ಕಾಗಿ...

೩)ವಂದನೆಗಳು ನಿಮ್ಮ ಪ್ರೋತ್ಸಾಹಕ್ಕೆ ಬರ್ತಾ ಇರಿ....
ಅನಿಸಿಕೆಗಳನ್ನು ಹೀಗೆ ಮುಕ್ತವಾಗಿ ಹಂಚಿಕೊಂಡು ಬೆಳೆಯಲು ಸಹಕರಿಸಿ...
ಧನ್ಯವಾದ..
ನಮಸ್ತೆ :)

gururaja said...

ತುಂಬಾ ಸುಂದರವಾಗಿದೆ.. ಕವಿತೆ ..

ಚಿನ್ಮಯ ಭಟ್ said...

ಸ್ವರ್ಣಾ ಮೇಡಮ್...
ಧನ್ಯವಾದಗಳು....
ಡ್ರಾಮಾ ಚಿತ್ರದ ಸಾಲುಗಳು...ಆಹ್..ನನಂಗಂತೂ "ಹೇಳಿಬಿಡು ಹುಡುಗಿ ನೀನಗೆ ಕೊಟ್ಟದ್ದು..." ಕೇಳಿದರೆ ಮತ್ತೆ ಕೇಳಬೇಕಿಸುವ ಸಾಲುಗಳು...ಆ ಧ್ವನಿಯಲ್ಲೇ ಏನೋ ಚಮತ್ಕಾರ ಇದೆ ಅನ್ಸತ್ತೆ...
ಹಮ್..ನಮ್ ಕಥೆಗ್ ಬರಣಾ..
ಧನ್ಯವಾದ :)...ಗೊತ್ತಿಲ್ಲಾ ಕವಿತೆ ಅನ್ನೋಕೆ ನಂಗೆ ನಾಚಿಕೆ ಅಂತಾ ಹೇಳ್ತಿದೀನಿ ಅಷ್ಟೇ..ಅವರವರರಿಗೆ ಅವರವರದೇ ಆದ ಅಭಿಪ್ರಾಯ ಇರ್ಬೋದು ಅಲ್ವಾ ?? ಗಝಲು,ಕವನ ಏನಾದ್ರೂ ಆಗ್ಲಿ ಕೊನೆಯಲ್ಲಿ ಅಡಿಯಲ್ಲಿ ಉಳಿಯೋದು ಭಾವ ಅಷ್ಟೇ ಅನ್ಸತ್ತೆ...
ಮುಂದಿನ್ ಹುಣ್ಮೆ ನಾ ?? ಏಯ್ ಇಲ್ಲಾ ನಾನ್ ಓಡ್ ಹೋಗ್ತೀನಿ ಇಲ್ಲಾ ಅಂದ್ರೆ ಗಿರೀಶ್ ಹಿಡ್ಕೋತಾರೆ ನನ್ನಾ . (ಮೇಲ್ಗಡೆ ಕಮೆಂಟ್ ನೋಡಿ).ಹಾ ಹಾ..

ಖಂಡಿತಾ ಬರೆಯೋ ಪ್ರಯತ್ನ ಮಾಡ್ತಿನಿ ಮೇಡಮ್...
ಧನ್ಯವಾದ ನಿಮ್ಮ ಅಕ್ಕರೆಯ ಅಲ್ಲಾ ಸಕ್ಕರೆಯ ಮಾತುಗಳಿಗೆ...
ಬರ್ತಿರಿ..
ನಮಸ್ತೆ :)

ಚಿನ್ಮಯ ಭಟ್ said...

ವಂದನೆಗಳು ಗುರುರಾಜ ಸರ್...ಬರ್ತಿರಿ...:)

Dileep Hegde said...

ಚೆನ್ನಾಗಿದೆ ಚಿನ್ಮಯ್

ಚಿನ್ಮಯ ಭಟ್ said...

ಧನ್ಯವಾದ ದಿಲೀಪಣ್ಣಾ :)

Unknown said...

ವಾ ವಾ ...
ತುಂಬಾ ದಿನಗಳಾಗಿತ್ತು ನಾನಿಲ್ಲಿ ಬಂದು .
ಎದುರು ಸಿಕ್ಕಿದ್ದೆ ಅಣ್ಣನ ಕಾಡೋ ಹುಣ್ಣಿಮೆಯ ಬೆಳಂದಿಗಳು ;)
ತಂಪು ತಂಪು ...
ಚಂದದ ಪದಗಳ ,ಅತೀ ಚಂದದ ಮುದ್ದು ಮುದ್ದು ಭಾವಗಳ ಅನಾವರಣ :)

ತುಂಬಾ ಇಷ್ಟ ಆಯ್ತು ಚಿನ್ಮಯಣ್ಣಾ ...

ಚಿನ್ಮಯ ಭಟ್ said...

ಭಾಗ್ಯಮ್ಮಾ :)
ಸ್ವಾಗತ ನಮ್ಮನೆಗೆ ಮತ್ತೊಂದ್ ಸಲಾ :P...
ಧನ್ಯವಾದನೇ :)
ನಿನ್ನ ಈ ಥರದ ಚಂದದ ಅನಿಸಿಕೆಗಳಿಂದಾ ಈ ಬ್ಲಾಗು ಇನ್ನೂ ಮುದ್ದಾಗಿ ಕಾಣ್ಲಿ..ಬರ್ತಿರು ...
ನಮಸ್ತೆ :)

ಶ್ರೀವತ್ಸ ಕಂಚೀಮನೆ. said...

ತುಂಬಾನೇ ಇಷ್ಟ ಆತು ಚಿನ್ಮಯ...

ಚಿನ್ಮಯ ಭಟ್ said...

ವತ್ಸಾ...ಧನ್ಯವಾದನೋ :)

Srikanth Manjunath said...

ಚಂದ್ರ ಬಂದಾಗ ಪ್ರಿಯತಮೆ.. ಸೂರ್ಯ ಬಂದಾಗ ತಮದಲ್ಲಿ ಪ್ರಿಯ.. ಎರಡು ಘಟ್ಟಗಳ ನಡುವೆ ಬರುವ ಹುಣ್ಣಿಮೆ ಅಮಾವಾಸ್ಯೆಗಳಲ್ಲಿ ಕಾಡುವ ಹುಡುಗಿಯ ನೆನಪು ಅಲೆಗಳ ಹಾಗೆ ಮರಳಿ ಮರಳಿ ಬರುತ್ತಲೇ ಇರುತ್ತದೆ.. ಹಲ್ಲು ತಿಕ್ಕುವ ಸಮಯದಲ್ಲಿ ಹೃದಯದಲ್ಲಿ ನಡೆಯುವ ಕೋಲಾಹಲಕ್ಕೆ ಸಾಕ್ಷಿಯಾಗಿದ್ದು ಕಟಕಟಿಸುವ ಹಲ್ಲುಗಳ ಶಬ್ದ. ಸುಂದರ ಪದಗಳ ಸಮೂಹ ಚಿನ್ಮಯ್.

ಚಿನ್ಮಯ ಭಟ್ said...

ಧನ್ಯವಾದ ಶ್ರೀಕಾಂತಣ್ಣಾ...ನಿಮ್ಮ ಪ್ರೋತ್ಸಾಹ ಸದಾ ಹೀಗೇ ಇರ್ಲಿ..ತಡವಾಗಿ ಬಂದರೂ ಚಂದದ ಪ್ರತಿಕ್ರಿಯೆಗಳಿಂದ ಬಂದಿದ್ದೀರಾ..ಖ಼ುಷಿ ಆಯ್ತು.ಬರ್ತಿರಿ..ನಮಸ್ತೆ :)