Saturday, May 3, 2014

ಶ್ರಾಯ

ಬಹುಷಃ ಜೀವನದ ಘಟ್ಟಗಳೇ ಹಾಗೆ ಅನ್ನಿಸುತ್ತದೆ.,ಎಲ್ಲಿಂದಲೋ ಗುರುತು ಪರಿಚಯವಿಲ್ಲದೆಡೆಗೆ ಬಂದಾಗ ಹೆದರಿರುತ್ತೇವೆ, ಇದು ನಮ್ಮದಲ್ಲದ ಪರಿಸರ ಎಂದು ಕೊರಗುತ್ತೇವೆ, ಕ್ರಮೇಣ ನಮಗೇ ತಿಳಿಯದಂತೆ ಅಲ್ಲಿಗೆ ಹೊಂದಿಕೊಂಡುಬಿಡುತ್ತೇವೆ,ಅಲ್ಲಿನ ಚಟುವಟಿಕೆಗಳಿಗೆ ತೀವ್ರವಾಗಿ ಸ್ಪಂದಿಸತೊಡಗುತ್ತೇವೆ,ಅಲ್ಲಿಯವರೇ ಆಗಿಬಿಡುತ್ತೇವೆ. ಕೊನೆಗೊಂದು ದಿನ ಅದನ್ನೆಲ್ಲಾ ಬಿಟ್ಟು ಹೊರಡುವಾಗ ಮತ್ತೆ ನಮ್ಮ ಮನೆಯನ್ನೇ ಬಿಟ್ಟು ಹೋಗುವಾಗಿನ ತಳಮಳಗಳು ಶುರುವಾಗುತ್ತವೆ.  
ಇದು ನಾನು ಇಂಜಿನಿಯರಿಂಗ್ ಮುಗಿಸಿ ವಾಪಸ್ಸು ಹೊರಡುವಾಗ ಬರೆಯಲು ಶುರುಮಾಡಿದ ಕವನ.ಅದೇನೋ ಕುಂಟುತ್ತಾ ಸಾಗಿ ಈಗ ಈ ಆಕಾರ ತಲುಪಿದೆ.ದಯಮಾಡಿ ಓದಿ,ತಪ್ಪು-ಒಪ್ಪುಗಳನ್ನು ಮರೆಯದೇ ತಿಳಿಸಿ ಪ್ರೋತ್ಸಾಹಿಸಿ  

ಮಾರುಬೀದಿ ಸಾಲಿನೊಳು ಸೇರಿಹೋಗುವ ಮುನ್ನ
ಹೊಸಮಡಿಕೆ ಬುಡದಲ್ಲಿ ರವಿಸಿಹುದು ಹಳೆನೆನಪು
ನೂರು ಹಾದಿಬಲೆಯೊಳಗೆ ಕರಗಿ ಸಾಗುವ ಮುನ್ನ
ಬಿಸಿತಡಿಕೆ ಅಡಿಯಲ್ಲಿ ದ್ರವಿಸಿಹುದು ಕಳೆದೊನಪು

ಕಾಣದಬುದಿಯ ಪಯಣಕೆ ಒಂಟಿಹಡಗಲಿ ಬಂದು
ನಡುನೆಲದ ಬುಡದಲ್ಲಿ  ಕಾಲಿಡಲು ಬರಿದಿಗಿಲು
ಗೇಣಿಪಡೆದಾ ಭವನದಿ ಸ್ನೇಹದುದಕವ  ಮಿಂದು
ನಡೆಯೊಡನೆ ನಗೆಯಿರಲು ಗರಿಯಾಸೆ ಗಿರಿಮುಗಿಲು

ಹಾಲುಹಲ್ಲದು ಉದುರಿ ಮೈಲಿಗಲ್ಲದು ಚಿಗುರಿ
ಕಲಿಯುತಿರೆ ಹೊಸ ಈಜು,  ಬರದಿರದೆ ಎದುರುಸಿರು
ಬೇಲಿಯೆಲ್ಲೆಯ ದಾಟಿ ನೀಲಿಯಂಬರ ಮೀಟಿ
ಮೆಲಿಯುತಿರೆ ಮೆದುಎದೆಯ ಹನಿಸಿಹುದು ಹೊನ್ನೆಸರು

ತೊಳಕೆಬಳ್ಳಿಯು ತಡವಿ,ದಿಕ್ಕುತಪ್ಪಿರೆ ಅಡವಿ
ಹುಸಿನಡಿಗೆ ಕಾನ್ಗಿರಕಿ ,  ಹದತಪ್ಪಿ  ಮನದೊಲುವು
ಅರಿವ ದಿವಟಿಗೆ ಗೀರಿ ಗಮ್ಯ ಭೂಪಟ  ತೋರಿ
ಸಮಪಥದಿ ನಡೆಸಿರಲು ಗುರುತನಿಕೆ ನಯಮೆಲುವು

ಓಣಿಯೆಲ್ಲವ ಕಂಡು ಊರಿನನ್ನವ ಉಂಡು
ಕೊನೆಹುಲಿಕೆ ಬೇಸರಿಕೆ ,ಬರುಗಳಿಸೆ ಅಳುಮೊಗವು
ಬೆನ್ನದಂಟಿನ ನಂಟು ಕೈಗೆ ಕನಸಿನ ಗಂಟು
ತಿರುಗಿತದು  ಗಿರಗಿಟ್ಟಿ , ಹಾರಿರಲು  ನವಜಗವು

ಮಾರುಬೀದಿ ಸಾಲಿನೊಳು ಸೇರಿಹೋಗುವ ಮುನ್ನ…. 

--------------------------------------------------------------------------------------------
ಶಬ್ದಾರ್ಥ:
ರವಿಸು=ಆರ್ದ್ರವಾಗು,ನೀರೊಡೆ(ಮಳೆಗಾಲದಲ್ಲಿ ಮನೆಯ ಒಳನೆಲವು ತೇವಾಂಶಕ್ಕೆ ನೀರು ಉಗುಳುವುದನ್ನು ನೆನೆಸಿ ಬರೆದದ್ದು)
ಅಬುದಿ=ನೀರು,ಸರೋವರ
ಮೆಲಿಯುವುದು=ಚೆನ್ನಾಗಿ ಹದಮಾಡುವುದು(ಚಪಾತಿಹಿಟ್ಟನ್ನು ಮುದ್ದೆಥರ ಮಾಡಿ ತಿಕ್ತಾರಲ್ಲ ಅದು)
ತೊಳಕೆಬಳ್ಳಿ=ಇದನ್ನು ಹಾದು ಹೋದರೆ ಕಾಡಿನಲ್ಲಿ ದಾರಿತಪ್ಪುವುದೆಂಬ ಪ್ರತೀತಿ ಇರುವ ಬಳ್ಳಿ..ದಿಕ್ಕುಬಳ್ಳಿ,ದಿಕ್ ತಪ್ಸು ಬಳ್ಳಿ ಎಂದೂ ಕರೆಯುತ್ತಾರೆ
ಒಲುವು=ಆಯ,ಶರೀರದ ಸಮತೋಲನ
ಮೆಲುವು=ಹದವಾಗಿ ಜಾರುವ ದ್ರವ್ಯ (ಧಾರೆ ಚೆನ್ನಾಗಿ ಬರಲಿ ಎಂದು ಹಾಲುಕರೆಯುವ ಮುನ್ನ  ಆಕಳು/ಎಮ್ಮೆಯ ಮಲೆಗೆ ಚಿಕ್ಕಮಿಳ್ಳೆ ತುಪ್ಪ ಬೆಣ್ಣೆ ಹಚ್ಚುತ್ತಾರಲ್ವಾ ಅದಕ್ಕೆ ಮೆಲುವು ಎಂದು ಬಳಸುವುದನ್ನು ನೋಡಿದ್ದೆ )
ಹುಲಿಕೆ=ಬೆಳೆಯ ಕುಯ್ಲಿನ ಅಂತಿಮ ಕ್ಷಣಗಳು..ಈ ದಿನದಂದು ಸಿಹಿಹಂಚಿ ಖುಷಿಪಡುವುದು ವಾಡಿಕೆ
ಬರುಗಳಿಸು=ಅತಿಥಿಗಳನ್ನು ಮತ್ತೆಬನ್ನಿ ಎನ್ನುತ್ತಾ ವಾಪಸ್ಸು ಕಳಿಸಿಕೊಡುವುದು  

ವಾಚನವನ್ನು ಆಲಿಸಲು ಇಲ್ಲಿಗೆ ಕ್ಲಿಕ್ಕಿಸಿ : https://soundcloud.com/chinmay-bhat-3/ymep1oqarpmx

28 comments:

ಪ್ರಕಾಶ್ ಶ್ರೀನಿವಾಸ್ said...

ತುಂಬಾ ಚೆನ್ನಾಗಿದೆ ,
ಕಾವ್ಯದಲ್ಲಿ ಹಿಡಿತ ಸಾಧಿಸಿದ ಹಾಗೆ ಇರುವ ನಿಮ್ಮ ಸಾಲುಗಳು ಹೆಸರಾಂತ ಸಾಹಿತಿಗಳ ನೆನಪಿಸಿತು !
ಮತ್ತಷ್ಟು ಹರಡಿ ನಿಮ್ಮ ಭಾವನೆಗಳ
ಕವಿತೆಯಾಗಿ ಬಿಡಲಿ !
ಶುಭವಾಗಲಿ !

Badarinath Palavalli said...

'ಮೆದುಎದೆಯ ಹನಿಸಿಹುದು' ಸರಿಯಾದ ಮಾತು.
ಹೊಸ ಮನೆಗೆ ಬದಲಾಗುವಾಗ, ಹಳೆ ಮನೆಯೇ ಚೆಂದಿತ್ತು ಎನ್ನುವ ಕೊರಗು ಕಾಡುವುದು ಸಹಜ ಕ್ರಿಯೆ. ಅಂತೆಯೇ ಆ ಹೊಸ ಮನೆಯ ಹೊಂದಿಕೆಯಲ್ಲಿ ಹಳೆ ಮನೆ ನೆನಪೇ ಮುಸುಕಾಗುವುದು ಪ್ರಕ್ರಿಯೆ.
ಒಳ್ಳೆಯ revisionary ಕವನವಿದು.

ನೋವೇನಪ್ಪಾ ಅಂದರೆ, ನಾವು ಸಿಗಲೇ ಇಲ್ಲ! ಎಂಬುದೇ ಕಡೆಗೆ!!!

ವಾಣಿಶ್ರೀ ಭಟ್ said...

sooper

sunaath said...

ಬದುಕಿನ ಹಿನ್ನೋಟ ಭಾವಪೂರ್ಣವಾಗಿದೆ.

ಡಿ.ವಿ.ಪಿ said...
This comment has been removed by the author.
ಮಂಜಿನ ಹನಿ said...

ಚೆಂದದ ಕವನ ಚಿನ್ಮಯ್, ಗೇಯತೆ ನಿಮ್ಮ ಕವನಗಳ ವೈಶಿಷ್ಟ್ಯ :)

- ಪ್ರಸಾದ್.ಡಿ.ವಿ.

ಚಿನ್ಮಯ ಭಟ್ said...

ಪ್ರಕಾಶ್ ಜೀ,
ಸ್ವಾಗತ ನಮ್ಮನೆಗೆ :) :)
ಧನ್ಯವಾದಗಳು ನಿಮ್ಮ ಪ್ರೋತ್ಸಾಹಕ್ಕೆ,ಅಕ್ಕರೆಯ ಅನಿಸಿಕೆಗೆ :) ಖುಷಿ ಆಯ್ತು... :)
ಬರ್ತಾ ಇರಿ...ನಮಸ್ತೆ :)

ಚಿನ್ಮಯ ಭಟ್ said...

ಬದರಿ ಸರ್....
ಅದೆಷ್ಟು ಸಹಜ ಅಲ್ವಾ ,ನಮ್ಮದಲ್ಲಷ್ಟು ಹೊಸದು ಕೊನೆಗೆ ನಮ್ಮದೇ ಎನ್ನುವಷ್ಟು ಆಪ್ತವಾಗುವಂತದ್ದು :)...
ಧನ್ಯವಾದಗಳು ಸರ್ ನಿಮ್ಮ ಪ್ರೋತ್ಸಾಹಕ್ಕೆ :)..
ನಮಸ್ತೆ :)

ಚಿನ್ಮಯ ಭಟ್ said...

ವಾಣಿಶ್ರೀ ಅಕ್ಕಾ,
ಎಲ್ ಕಳ್ದ್ ಹೋಗಿದ್ಯೆ ???
ಧನ್ಯವಾದ ವಾಪಸ್ ಬಂದಿದ್ದಕ್ಕೆ :D..ಅನಿಸಿಕೆ ಬರ್ದು ಪ್ರೋತ್ಸಾಹಿಸಿದ್ದಕ್ಕೆ :)...

ಚಿನ್ಮಯ ಭಟ್ said...

ಸುನಾಥ ಕಾಕಾ :)..
ಧನ್ಯವಾದಗಳು :)

ಚಿನ್ಮಯ ಭಟ್ said...

ಮಂಜಿನ ಹನಿ ಪ್ರಸಾದ್...
ಸ್ವಾಗತರೀ ನಮ್ಮನೆಗೆ :)..
ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ :)..
ಬರ್ತಾ ಇರಿ :)

ಈಶ್ವರ said...

ಕವನ ಚೆನ್ನಾಗಿದೆ. ರವಿಸು ಮತ್ತೆ ದ್ರವಿಸು ಎರಡೂ ಒಂದೇ ಅರ್ಥವನ್ನು ತರುತ್ತದೆ.

ಕೆಲವೊಂದನ್ನು ಪ್ರಯಾಸಪೂರ್ವಕವಾಗಿ ಕವನಕ್ಕೆ ಜೋಡಿಸಿದಂತೆ ಕಾಣುವುದರಿಂದ ಸುಲಭ ಓದು ಸಾಧ್ಯವಿಲ್ಲವೇನೋ. ಧನ್ಯವಾದ.

Bharath M Venkataswamy said...

"ಹಾಲುಹಲ್ಲದು ಉದುರಿ ಮೈಲಿಗಲ್ಲದು ಚಿಗುರಿ"
ಬಾಣದಂತೆ ನಾಟಿ ಬಿಡ್ತು :)

ಚಿನ್ಮಯ ಭಟ್ said...

ಈಶ್ವರಣ್ಣಾ..
ರವಿಸು ದ್ರವಿಸು ಒಂದೆನಾ ???..
ನಾನು ರವಿಸು ಅನ್ನೋದು ಆರ್ದತೆ ಇಂದ ನೀರಿನ ಹನಿಗಳು ಮೂಡುವುದಕ್ಕೆ ಅಷ್ಟೇ ಬಳಸುವುದು ಅಂದ್ಕೊಂಡಿದ್ದೆ...ಧನ್ಯವಾದಗಳು..
ಪ್ರಾಸ...ಗೊತ್ತಿಲ್ಲ..ಅದು ಚಟ..
ವಂದನೆಗಳು :) :)

ಚಿನ್ಮಯ ಭಟ್ said...

ಭರತ್,
ಹಾಲುಹಲ್ಲು ಮೈಲಿಗಲ್ಲು.ನಿಜ ಅಲ್ವಾ??
ಇಂಜಿನಿಯರಿಂಗ್ ನ ಮೊದಲ ವರುಷ ಹಾಲುಹಲ್ಲು,ನಂತರ ಮೂರನೇ ಸೆಮಿಸ್ಟರ್ ನಲ್ಲಿ ಸಂದರ್ಭ(ಅಂಕಪಟ್ಟಿಯೂ ಸಹ ಬಹುತೇಕರಿಗೆ) ಬದಲಾಗಿ ಮೈಲಿಗಲ್ಲು ಉದ್ದವಾಗುತ್ತದೆ (Aggregate ಗೆ ;)..
ಧನ್ಯವಾದಗಳು ಭರತ್ :)
ನಮಸ್ತೆ :)

Anonymous said...

ಮೊದಲೆರಡು ಸಾಲು ಎಷ್ಟು ಚಂದವಿದೆಯೆಂದರೆ ಪದೇ ಪದೇ ಓದಬೇಕು ಎನ್ನಿಸುವಂತೆ....ಇಡೀ ಕವನ ಮತ್ತೆಷ್ಟು ಚಂದವಿದೆಯೆಂದರೆ ಓದುತ್ತಲೇ ಇರಬೇಕು ಎನ್ನಿಸುವಂಥೆ...

-ಪದ್ಮಾ ಭಟ್

ಚಿನ್ಮಯ ಭಟ್ said...

ಪದ್ಮಾ...
ಧನ್ಯವಾದನೇ ....ಕವಿತೆಗೆ ಹಾಕುವ ಕಮೆಂಟಿನಲ್ಲೂ ಕವಿತೆಯ ಛಾಯೆ ಇದ್ಯಲ್ಲಾ ಖುಷಿ ಆಯ್ತು

Pradeep Rao said...

ನಿಜ ಹೇಳಬೇಕೆಂದರೆ ಕವನದ ಹೆಸರು ಓದಿದೊಡನೆ ಎದ್ದು ಹೋಗಿ ಶಬ್ಧಕೋಶ ತೆಗೆದುಕೊಂಡು ಬಂದೆ :) ಪದ ಬಳಕೆಯಲ್ಲಿ ನಿಮ್ಮ ಮೀರಿಸುವವರಿಲ್ಲ. ಅಷ್ಟೂ ಅರ್ಥ ಮಾಡಿಕೊಂಡವರಿಗೆ ಕವನವು ರಸದೌತಣ. "ಮಾರುಬೀದಿ ಸಾಲಿನೊಳು ಸೇರಿಹೋಗುವ ಮುನ್ನ" - ಮೊದಲ ಸಾಲಿಗೆ ಮಾರು ಹೋದೆ. ಪ್ರತಿಯೊಂದು ಸಾಲಿನಲ್ಲೂ ಘನವಾದ ಅರ್ಥವಿದೆ. ತುಂಬಾ ಚೆನ್ನಗಿದೆ. ಅಡಿಯಲ್ಲಿ ಕೊಟ್ಟ ಪದಗಳ ಅರ್ಥಗಳೂ ತುಂಬ ಉಪಯೋಗವಾಯಿತು.

ಚಿನ್ಮಯ ಭಟ್ said...

ಪ್ರದೀಪಣ್ಣಾ,
ಧನ್ಯವಾದಗಳು ನಿಮ್ಮ ಪ್ರೀತಿಪೂರ್ವಕ ಪ್ರೋತ್ಸಾಹಕ್ಕೆ :).ಮಾರುಬೀದಿಸಾಲಿನೊಳು ಸೇರಿಹೋಗುವ ಮುನ್ನ ಅಂತಾ ಬರ್ದಿದ್ದು ಶುರುವಿನಲ್ಲಿ ಇನ್ನು ಬೆಂಗಳೂರಿನಲ್ಲಿ ಕೆಲಸಕ್ಕೆ ಹೋಗಬೇಕಲ್ಲಪ್ಪಾ ಅಂತಾ...ಅದು ಏನೇನೋ ಆಗಿ ಎಂ.ಟೆಕ್ ಸೇರಿದೆ...ಆದರೂ ಆ ಸಾಲು ಸೂಕ್ತ ಎನಿಸಿತು ಈ ಕವನಕ್ಕೆ ..ಅದ್ಕೇ ಹಂಗೇ ಇಟ್ಟೇ :)..
ಧನ್ಯವಾದಗಳು ನಿಮ್ಮ ಅನಿಸಿಕೆಗೆ :)..
ಬರ್ತಾ ಇರಿ..
ನಮಸ್ತೆ :)

Anonymous said...

ಪ್ರಶಸ್ತಿ ಹೇಳಿದುದು..


ಸಖತ್ತಾಗಿದ್ದು ಚಿನ್ಮಯ್.. .
ಇಂಜಿನಿಯರಿನ ಕವನವನ್ನು ಭದ್ರಪಡಿಸಿ ಕೊನೆಗೂ ಪೂರ್ಣಗೊಳಿಸಿದ್ದು ನಿಜಕ್ಕೂ ಶ್ಲಾಘನೀಯ.
ನಿನ್ನೆ ಮೊನ್ನಿನ ಆಲೋಚನೆಗಳು, ವಾರದ ಹಿಂದೆ ಅರ್ಧ ಬರೆದ ಕವನಗಳೇ ಪೂರ್ಣಗೊಳ್ಳದೇ ಸತ್ತು ಹೋಗ್ತಿದ್ದು ನನ್ನ ಸೋಂಬೇರಿತನಕ್ಕೆ ಅವುಗಳೆಲ್ಲದರ ಅತೃಪ್ತ ಆತ್ಮಗಳು ಶಾಪ ಹಾಕ್ತಿದ್ದಂಗಾಗ್ತಿದ್ದು ಮಾರಾಯ

-ಪ್ರಶಸ್ತಿ ಪಿ.

ಚಿನ್ಮಯ ಭಟ್ said...

ಧನ್ಯವಾದನಲೇ ಪ್ರಶಸ್ತಿ :)...ಅತೃಪ್ತ ಆತ್ಮಗಳು..ನನ್ನನ್ನೂ ಕಾಡ್ತು ಮಾರಾಯ...ಆದ್ರೆ ಅದೇನೋ ಅವುಕ್ಕೆ ಮುಕ್ತಿಕೊಡಕ್ಕೆ ಸರಿಯಾದ ಸಮಯ ಬೇಕೇನೋ ಅಷ್ಟೇ..

ಇರ್ಲಿ ಸಬರ್ ಕಾ ಫಲ್ ಮೀಠಾ ಹೋತಾ ಹೈ..ಬಿಡು

Shruthi B S said...

ಗೇಣಿಪಡೆದಾ ಭವನದಿ ಸ್ನೇಹದುದಕವ ಮಿಂದು, ಸಾಲು ಬಹಳ ಇಷ್ಟವಾಯಿತು. ಅಲ್ಲದೇ ನಾನು ಎಲ್ಲೋ ಹಳೆಯ ನೆನಪುಗಳಲ್ಲಿ ಕಳೆದುಹೋದೆ. ಧನ್ಯ್ವವಾದ ಚಿನ್ಮಯ್, ನಿನ್ನೀ ಕವನ ನನ್ನನ್ನು ಸು೦ದರ ನೆನಪುಗಳನ್ನು ಮತ್ತೊಮ್ಮೆ ಮೆಲುಕು ಹಾಕುವ೦ತೆ ಮಾಡಿತು.

ಚಿನ್ಮಯ ಭಟ್ said...

ಶೃತಿ,
ಕೆಲವೊಂದಿಷ್ಟು ನೆನಪುಗಳೇ ಹಾಗೆ ಅಲ್ವಾ ??ಸಣ್ಣದೊಂದು ಎಳೆಮೂಡಿದರೂ ಸಾಕು ಅದರಲ್ಲೇ ಸವಿಭಾವದ ಧಾರೆಯಿಳಿಯುತ್ತದೆ,ಮೊಗದಲ್ಲೊಂದಿಷ್ಟು ಚೆಲುವು ಮೂಡಿಸುತ್ತದೆ..ಆ ನಗುವಿನ ಹೊಳಪಿನಲ್ಲೆ ತೀರಾ ಆಪ್ತವೆನಿಸಿದ ಕ್ಷಣಗಳೆಲ್ಲ ಮಿಂಚಿ ಮರೆಯಾಗುತ್ತದೆ..
ಧನ್ಯವಾದಗಳು ಚಂದದ ಅನಿಸಿಕೆಗೆ..
ಕವನದ ಭಾವದಲ್ಲಿ ಸಹಭಾಗಿಯಾಗಿದ್ದಕ್ಕೆ :)..ಮೆಚ್ಚಿ ಪ್ರೋತ್ಸಾಹಿಸಿದ್ದಕ್ಕೆ :)..
ಬರ್ತಾ ಇರು :)..
ನಮಸ್ತೆ :)

akshaya kanthabailu said...

ಪ್ರಾಸ ಬದ್ದ..

Swarna said...

ಇವತ್ತು ಓದಿದೆ. ತುಂಬಾ ಚೆನ್ನಾಗಿ ಬರೆದಿದ್ದೀರಿ ಚಿನ್ಮಯ್. ಅಪರಿಚಿತ ರಸ್ತೆಗಳು ನಮ್ಮವಾಗಿ ಅವಕ್ಕೆ ನಾವು ನಮಗೆ ಅವು ಒಗ್ಗುವಾಗ ವಿದಾಯದಘಳಿಗೆ ಬಂದಿರುತ್ತದೆ ಎಂಬ ಸತ್ಯವನ್ನು ಹೊಲಿಕೆಗಳಲ್ಲಿ ಸೊಗಸಾಗಿ ಹಿಡಿದಿಟ್ಟಿದ್ದಿರಿ

ಚಿನ್ಮಯ ಭಟ್ said...

ಧನ್ಯವಾದ ಅಕ್ಷಯ,ಸ್ವರ್ಣಾ ಮೇಡಮ್ :)

ಮನಸು said...

ಚಿನ್ಮಯ್ ಹೊಸ ಪದಗಳ ಜೋಡಣೆಯಲ್ಲಿ ನೀವು ಎತ್ತಿದ ಕೈ. ನಮಗೂ ಹೊಸ ಪದಗಳ ಪರಿಚಯ ಮಾಡಿಕೊಡುತ್ತಲಿದ್ದೀರಿ ಬಹಳ ಧನ್ಯವಾದಗಳು. ಹೊಸದು ಬಂದಾಗ ಹಳೆಯದನ್ನು ಮರೆಯದೆ ಮುಂದೆ ಸಾಗಲೇ ಬೇಕು.. ಚೆಂದದ ಕವನ

ಚಿನ್ಮಯ ಭಟ್ said...

ಧನ್ಯವಾದ ಸುಗುಣಕ್ಕಾ :)