Friday, February 26, 2016

ಬೂರ್ಗಳುವು

ನೇಗಲಬಾವಿಯ ನವತರುಣರೆಲ್ಲಾ ಆಗಷ್ಟೇ ಕಾನಬೈಲಿನಲ್ಲಿ ಕ್ರಿಕೇಟು ಮ್ಯಾಚು ಮುಗಿಸಿಕೊಂಡು  ಹಿಂದಿರುಗುತ್ತಿದ್ದರು.

ಸೋಲು-ಗೆಲುವು,ರನ್ನು,ರನ್ನೌಟುಗಳ ಲೆಕ್ಕಾಚಾರ ಬೇಜಾರಾಗಿ ಏನಾದರೂ ಮಾಡಿ ಸುತ್ತಮುತ್ತಲ ಜಗತ್ತಿನಲ್ಲೆಲ್ಲಾ ಸಡನ್ನಾಗಿ ಪ್ರಸಿದ್ಧರಾಗಬೇಕೆಂಬ ಹಂಬಲ ಹೆಡೆಯೆತ್ತುತ್ತಿದ್ದಾಗಲೇ ಬೂರ್ಗಳುವಿನ  ವಿಚಾರ ಕುಡಿಮೀಸೆ ಪೋರನೊಬ್ಬನಿಂದ  ಚರ್ಚೆಗೆ ಬಂತು.


ದೀಪಾವಳಿಗೆ ಇನ್ನೇನು ಬೆರಳೆಣಿಕೆಯಷ್ಟೇ ದಿನಗಳು ಬಾಕಿ ಉಳಿದಿರುವಾಗ ಈ ಕಾರ್ಯವು ಶಾಸ್ತ್ರಸಮ್ಮತವೂ ಹೌದೆನ್ನಿಸಿ ಪುಂಡರ ಪಡೆಯಲ್ಲೊಂದು ಯುಧ್ದೋನ್ಮಾದ ಮೂಡಿತು;ಬಿಸಿ ಬಿಸಿ ಚರ್ಚೆಗೆ ಅವಕಾಶ ಮಾಡಿಕೊಟ್ಟಿತು.


ತೆಂಗಿನಕಾಯಿ ಕದಿಯುವುದು,ಅಡಿಕೆಕೊನೆ ಇಳಿಸುವುದು ಮುಂತಾದ ಹಳೆಯ ಬೂರಸಲು ಐಡಿಯಾಗಳೆಲ್ಲ ಮುಗಿದು,ಸೈಕಲ್ಲಿನ ಹವಾತೆಗೆದು ಡೈನಮೋ ಕದಿಯುವವರೆಗಿನ ಕ್ರಾಂತಿಕಾರಿ ಯೋಚನೆಗಳು ಬಂದವಾದರೂ ಪರಿಣಾಮ ಮಿತಿಮೀರುವ ಸಾಧ್ಯತೆ ಇದ್ದುದ್ದರಿಂದ ಅದನ್ನು ಗಟ್ಟಿಯಾಗಿ ಮೀಸೆ ಬರುವವರೆಗೆ ಮುಂದೂಡಲಾಯಿತು.


ಹೀಗೆ ಅದೂ ಇದೂ ಮಾತಾಡುತ್ತಿದ್ದಾಗ ಅಚಾನಕ್ಕಾಗಿ ಜರೀಪೇಟದ ಶಂಭುಲಿಂಗ ಹೆಗಡೆಯವರ ಮನೆಯ ದ್ರಾಕ್ಷಿಬಳ್ಳಿಯ  ಪ್ರಸ್ತಾಪ ಬಂತು.


ಬ್ಯಾಣದಲ್ಲಿ ಒನ್  ಪುಟಕಿ ಕ್ಯಾಚ್ ಕ್ರಿಕೆಟ್ಟಾಡಲು ಬಿಡದ ಹೆಗಡೆಯವರ ಮೇಲಿನ ಸಿಟ್ಟಿನಿಂದಲೂ,ಅವರ ಮಗನಾದ ವೈಜಯಂತನು ಊರಿನ ಪುಟಗೋಸಿ ಪ್ರಮುಖರಾದ ತಮ್ಮೆಲ್ಲರ ಮಾತನ್ನು ಸಾಕಷ್ಟು ಬಾರಿ ಉಪೇಕ್ಷಿಸಿದ್ದರಿಂದಲೂ ಮತ್ತು ಆ ದ್ರಾಕ್ಷಿಬಳ್ಳಿ ಊರಿನವರ ಗಮನವನ್ನು ಭಯಂಕರವಾಗಿ ಸೆಳೆದುದ್ದರಿಂದಲೂ ಕದ್ದರೆ ಅದನ್ನೇ ಕದಿಯಬೇಕೆಂಬುದು ಏಕ್ದಂ ತೀರ್ಮಾನವಾಯಿತು.


ಆದರೆ ಊರಪ್ರಮುಖರಾದ ಹೆಗಡೆಯವರ ಮೇಲಿನ ಹೆದರಿಕೆಯಿಂದಲೂ,ಅವರ ಮನೆಯ ಮಾಲು ಕದ್ದರೆ ಅಪ್ಪನ ಬೆಲ್ಟು,ಬರ್ಲುಗಳಿಂದ ಯಾಥಾವತ್ ಛಡಿ ಬೀಳುವ ಸಾಧ್ಯತೆಯಿದ್ದುದ್ದರಿಂದಲೂ ಈ ಯೋಚನೆಯನ್ನು ಕಾರ್ಯಗತಗೊಳಿಸಲು ಇದ್ದ ಹತ್ತು ಹನ್ನೆರಡು ಜನರ ಸಮಿತಿಯಲ್ಲಿ ಅರ್ಧದಷ್ಟು ಜನ ಮೆಲ್ಲಗೆ ಅದು ಇದು ನೆವ ಹೇಳಿ ತಣ್ಣಗೆ ಜಾರಿಕೊಂಡರು. 


ತಮ್ಮ ಬೇಳೆಬೆಯ್ಯದೆಂದು ಇನ್ನಿಬ್ಬರೂ ಜಾರಿಕೊಳ್ಳಲಾಗಿ ಅಂತೂ ಉಳಿದ ನಾಲ್ಕು ಜನ ಈ ಸತ್ಕಾರ್ಯವನ್ನು ಸಾಂಗವಾಗಿ ನೆರವೇರಿಸುವುದೆಂದು ತೀರ್ಮಾನವಾಯಿತು.


ಬೂರುಗಳುವು,ದೀಪಾವಳಿಯ ಮುನ್ನಾಣದಿನದ ರಾತ್ರಿಗಳಲ್ಲಿ ಊರುಮನೆಯವರಿಗೆ ಗೊತ್ತಾಗದಂತೆ ಮನೆಯ ಅಂಗಳ,ಹಿತ್ತಿಲು,ಗೆದ್ದೆ,ತೋಟಗಳಲ್ಲಿ ಬೆಳೆದ ಪದಾರ್ಥಗಳನ್ನು ಮೋಜಿಗಾಗಿ ಊರಿನ ಯುವಕರು ಕದಿಯುವ,ತಲತಲಾಂತರಗಳಿಂದಲೂ ನಡೆದುಕೊಂಡು ಬಂದ ಪದ್ಧತಿಯಾಗಿತ್ತು.


ಈ ಪ್ರಕ್ರಿಯೆಯಲ್ಲಿ ಕದಿಯಲು ಹೊರಟ ಸಾಹಸಿಗಳನ್ನು ಮಾಲಿಕರೇನಾದರೂ ಕಣ್ಣಲ್ಲಿ ಕಂಡರೆ, ಕಳ್ಳರು ಕದ್ದ ಮಾಲನ್ನು ಅಲ್ಲಿಯೇ ಬಿಟ್ಟು ಹೋಗಬೇಕಾದದ್ದು ನಿಯಮವಾಗಿತ್ತು.  


ಇಂತಹ ಕಿತಾಪತಿಯನ್ನೆಲ್ಲಾ  ಊರಾವರಿ ಕಾಲದಲ್ಲಿ ಮಾಡಿಬಿಟ್ಟಿದ್ದ ಹಿರೀಕರು ದೊಡ್ಡಹಬ್ಬದ ಹಿಂದಿನ ದಿನಗಳಲ್ಲಿ ಮನೆಯ ಹೊರಗೆ ಯಾವಗಲೂ ಒಂದು ಕಣ್ಣಿಟ್ಟಿರುತ್ತಿದ್ದರು.


ಕಿರಿಯರು ಅವರ ಕಣ್ಣು ತಪ್ಪಿಸಲು ಕುನ್ನಿ-ಕಿರುಬನ ಕೂಗಿನ ನಾಟಕವಾಡುವುದೂ,ಮನೆಯ ಮಾಡಿಗೆ ಕಲ್ಲು ಹೊಡೆದು ಅವರನ್ನು ದಿಕ್ಕುತಪ್ಪಿಸುವುದೂ ಸಹ ಸಾಮಾನ್ಯವಾಗಿತ್ತು.



ಇತ್ತ ಹೆಗಡೆಯವರ ಮನೆ ಹಿತ್ತಲಿಗೆ ಹೋಗುವ  ದಾರಿಯನ್ನು ಹುಡುಕಲೆಂದು ನಾಲ್ವರೂ ತನ್ಮಯತೆಯಿಂದ ತೊಡಗಿಕೊಳ್ಳಲಾಗಿ ,ಅದಾಗಲೇ ಹಲವು ಬ್ಯಾಣ,ಗೆದ್ದೆಗಳಿಗೆ ಕಳ್ಳದಾರಿ ಹುಡುಕಿರುವ ಕಳ್ಳಶೀನ ಅಥವಾ ಶ್ರೀನಿವಾಸನು ಗೊಬ್ಬರಗಿಡದ ಸಂದಿಯಿಂದ ಕುನ್ನಿಗಳು ಓಡಾಡುವ ಸಂದಿಯೊಂದನ್ನು ನೆನಪು ಮಾಡಿಕೊಟ್ಟನು .


ಅಲ್ಲಿ ಬೇಲಿಯಗುಂಟ ಹೊರಬದಿಯಲ್ಲಿ ತೋಡಿದ್ದ ಕಾಲುವೆಯನ್ನು ಜಿಗಿಯುತ್ತಲೇ ಚಳ್ಳೆಮರದ ಹೆರೆಯೊಂದನ್ನು ಆಧಾರಕ್ಕೆ ಹಿಡಿದುಕೊಂಡು,

ಒಂದೊಂದಾಗಿ ಎರಡು ಕೈ ಬಿಟ್ಟು ಬ್ಯಾಲೆನ್ಸು ಮಾಡುತ್ತಾ ಎರಡು ಹೆಜ್ಜೆ ಬಲಕ್ಕೆ ದಾಟಿದರೆ ಸರ್ಕಾರಿ ಮುಳ್ಳು ಸರಿಸಿ,ಗೊಬ್ಬರ ಗಿಡದ ಸಂದಿಯಲ್ಲಿ ಒಳಕ್ಕೆ ನುಸುಳಿ ಹಿತ್ತಲಿಗೆ ಗುದುಕಬಹುದೆಂದು ಪ್ಲಾನು ಮಾಡಿದರು.


ಅಲ್ಲದೇ ನೇರವಾಗಿ ಹಿತ್ತಲಿಗೆ ಕಡಗಲ ಮರದ ಮೂಲಕ ಹೋದರೆ ಬಚ್ಚಲು ಮನೆಯ ಹಿಂಬದಿಯಲ್ಲಿ ಮೂತ್ರಮಾಡಲು ಯಾರ್ಯಾದರೂ ಬಂದವರಿಗೆ ಸುಲಭವಾಗಿ ತಾವು ಕಾಣಸಿಗುವ ಸಾಧ್ಯತೆ ಇದ್ದುದ್ದರಿಂದ,ಗೊಬ್ಬರಗಿಡದ ಸಂದಿಯಲ್ಲೇ ಒಳಗೆ ಹೋಗಿ ಅಲ್ಲಿಂದ ನೀರುಟಾಕಿಯ ಹತ್ತಿರದ ಸಣ್ಣದಿಬ್ಬದ ಹತ್ತಿರ ಕೂರುವುದೆಂದೂ,ಅದರ ಹತ್ತಿರವೇ ಎಲ್ಲೋ ದ್ರಾಕ್ಷಿ ಬಳ್ಳಿ ಬರುವುದರಿಂದ ಕಲ್ಲುಹಾಸಿನ ಮೇಲೆ ತೆವಳಿ ಕೈಯ್ಯಾಡಿಸಿದರೆ ಸುಲಭವಾಗಿ ಸಿಗುವುದೆಂದೂ ಠರಾವು ಪಾಸುಮಾಡಲಾಯಿತು.



ಮುಂದೆ  ಕದ್ದಮಾಲಿನೊಂದಿಗೆ ಅಲ್ಲೇ ಇದ್ದ ನೀರಿಲ್ಲದ ಕಲ್ಲುಕಟ್ಟಿನ ಕಾಲುವೆಯ ಮೂಲಕ ಸಾಗಿ ,ದೊಡ್ಡ ಹೊಳೆ ಸೇರಿ ,ಮುಂದೆ ಹೊಳೆಗೆ ಬಿದ್ದ ಕ್ರಿಕೆಟ್ಟು ಬಾಲು ಹೆಕ್ಕುವ ಮಾಮೂಲಿ ಜಾಗದಲ್ಲಿ ಮೇಲೇರಿ,ತಮ್ಮ ತಮ್ಮ ಮನೆಯದಾರಿ ಹಿಡಿಯುವುದೆಂದು ಎಣಿಸಿ ನಿಟ್ಟುಸಿರಿಟ್ಟರು.


ಇಷ್ಟೇಲ್ಲಾ ಆದಮೇಲೆ ಇನ್ನು ತಡೆಯುವುದು ಸರಿಯಲ್ಲ ಎನಿಸಿ ಊರಿನ ಕತ್ರಿ ಕಂಡಕೂಡಲೇ ಲಗು-ಲಗು ಹೆಜ್ಜೆ ಹಾಕಿದರು,ಬೆಳದಿಂಗಳ ಬೆಳಕಲ್ಲೇ ಕೈಸನ್ನೆ ಬಾಯಿ ಸನ್ನೆಗಳ ಮೂಲಕ ಮತ್ತೊಮ್ಮೆ ತಮ್ಮ ಪ್ನಾನನ್ನು ನೆನೆಸಿಕೊಳ್ಳುತ್ತಾ ನಾಲ್ವರೂ ಹಿತ್ತಲಹಿಂದೆ ಬಂದು ನಿಂತರು.

ನಿಗದಿಯಂತೆ ನಾಲ್ವರೂ ಸಂದಿ ಕಳ್ಳಸಂದಿ ನುಸಿದರಾದರೂ,ಮೊದಲನೇಯವನು ಬರುವಾಗ ಗಿಡ ಅಲ್ಲಾಡಿದ ಪರಿಣಾಮ ಅಲ್ಲೇ ಎಲ್ಲೋ ಇದ್ದ ಚವಳಿಗಳೆಲ್ಲಾ ಹುಚ್ಚೆದ್ದು ಓಡಾಡಿ ಹಿಂದೆಬಂದವರ ಅಂಗಿ,ಇಜಾರ,ಚಡ್ಡಿ,ಬನಿಯನ್ನುಗಳಲ್ಲೆಲ್ಲಾ ಸೇರಿಕೊಂಡವು.



ಸಿಕ್ಕಸಿಕ್ಕಲ್ಲಿ ಅವನ್ನು ಅಪ್ಪಚ್ಚಿ ಮಾಡುತ್ತಾ,ಅದರಿಂದಾದ ವಾಸನೆಗೆ ಮುಖ ಕಿವಿಚುತ್ತಾ ಅಂತೂ ಮೂವರೂ ಮೊದಲವನನ್ನು ಹಿಂಬಾಲಿಸಿ ಟ್ಯಾಂಕಿನ ಹಿಂದೆ ಕುಕ್ಕರು ಕುಂತರು.ಅಲ್ಲಿನ ಕಲ್ಲು ದಿಬ್ಬವೂ ಬೆಳದಿಂಗಳಲ್ಲಿ ಸುಂದರವಾಗಿ ಕಂಡಿತು.



ಲೆಕ್ಕಮೀರಿ ಬೆಳೆದಿದ್ದ ಕಾಂಗ್ರೇಸ್ಸುಗಿಡವನ್ನು ಸರಿಸುತ್ತಾ,ಅವುಗಳಿಂದ ಅಸಂಖ್ಯಾತ ಉಣುಗುಗಳನ್ನು ಮೈಗೇರಿಸಿಕೊಂಡು ಅಂತೂ ಕಲ್ಲು ದಿಬ್ಬಕ್ಕೆ ಒರಗಿಕೊಂಡು ಅಬ್ಬಾ ಎಂದು ಉಸಿರುಬಿಟ್ಟರು.


ಒಂದರಗಳಿಗೆ ಆದಮೇಲೆ ,ಶೀನ ನಾಗರಾಜನಿಗೆ ಕೈಸನ್ನೆಯಿಂದ "ಕಿಳ್ಳು" ಎಂದು ಹೇಳಲಾಗಿ ,ದಿಬ್ಬ ಏರಿ ಕೈಯ್ಯಾಡಿಸಿದ ನಾಗರಾಜನಿಗೆ ಸಂಜೀವಿನಿ ಪರ್ವತವನ್ನೇ ಹೊಕ್ಕಹಾಗಾಯಿತು.



ಅಲ್ಲಿ ವೈಜಯಂತಿನ ಕಾರುಬಾರಿನಲ್ಲಿ ಯಾವುಯಾವುದೋ ಬಳ್ಳಿಗಳನ್ನು ಹಬ್ಬಿಸಿದ್ದು,ಒಂದಕ್ಕೊಂದು ಸುತ್ತಿಕೊಂಡು ಎಲ್ಲಾ ಶಿಂಬೆ ಶಿಂಬೆಯಾಗಿತ್ತು.


ಅಷ್ಟಕ್ಕೂ ಜನುಮದಲ್ಲೇ ದ್ರಾಕ್ಷಿಬಳ್ಳಿಯನ್ನೇ ನೋಡದ ಆತ ,ಅದೇ ಎದುರಿಗೆ ಸಿಕ್ಕರೂ ಗುರುತಿಸುವುದು ಅಸಾಧ್ಯವಾಗಿತ್ತು.


ಇದನ್ನೆಲ್ಲಾ ಆತ ಕೆಳಗಿಳಿದು ವಾಪಸ್ಸು ಕಳ್ಳಶೀನನಿಗೆ ಹೇಳುತ್ತಲೇ ಆತ ಪಿಸಿಪಿಸಿ ಮಾತಲ್ಲಿ ಎಲ್ಲ ಕಿಳ್ಳು ಎಂದು ಅಜ್ನಾಪಿಸಿದನು.


ಆತ ಕೈಸನ್ನೆಯಲ್ಲಿ ಅದು ಯಾವುದು ತನಗೆ ತಿಳಿಯುತ್ತಿಲ್ಲವೆಂದು ಹೇಳುತ್ತಿರುವಾಗಲೇ ,ಹಿತ್ತಿಲ ಬಾಗಿಲ ಮಿಡಕ್ಕೆ ಕಟ್ಟಿದ ಸರಪಣಿಯ ಸದ್ದಾಯಿತು..



ಹೋ ಯಾರೋ ಇತ್ತ ಬರುತ್ತಿರುವರೆಂಬ ಸೂಚನೆ ಸಿಕ್ಕಿ ಎಲ್ಲರೂ ದಿಗಿಲಾಗುತ್ತಲೇ,ಕಳ್ಳಸೀನ ಸ್ವಲ್ಪ ಭೋಳೆಶಂಕರನಾದ ಚಂಬುವಿಗೆ ಎಲ್ಲ ಕಿತ್ಗಾ ಬಾ ಎಂದು ತಿವಿದು ಮೇಲೆ ಹತ್ತಿಸಿದನು.



ಆತ ಸಾಕ್ಷಾತ್ ಆಂಜನೇಯನಂತೆ ಸಕಲ ಸಸ್ಯರಾಶಿಯನ್ನು ಬುಡುಗೂಡಿ ಕೈಲಿ ಕಿತ್ತುಕೊಳ್ಳಲಾಗಿ,ಎಲ್ಲರೂ ನಿಧಾನಕ್ಕೆ ಕಾಲುವೆಗೆ ಇಳಿದರು.



ಹಳೇ ಮುದುಕಿಯರಂತೇ ಪೂರಾ ಬೆನ್ನು ಬಗ್ಗಿಕೊಂಡು ನಡೆಯುತ್ತಿರುವಾಗ ನಾಕು ಹೆಜ್ಜೆ ನಡೆದ ಅವರಿಗೆ ಉಚ್ಚೆಯ ನಾತ ಗಂಭೀರವಾಗಿ ಭಾದಿಸಲಾಗಿ ಆ ಮನೆಯ ಕೆಂಪಮ್ಮ ಮುದುಕಿಗೆ ಅವ್ಯಾಹತವಾಗಿ ಬೈದುಕೊಳ್ಳುತ್ತಾ ಹೇಗೋ ಮೂಗು ಮುಚ್ಚಿಕೊಂಡು ಹೊಳೆಯನ್ನು ತಲುಪಿದರು.


ಕಾಲುವೆ-ಹೊಳೆಯನ್ನು ಕದ್ದು ನಡೆಯುವ ನಡುವೆಯೇ ಚಂಬುವಿಗೆ ಮೈ ಕೈ ಕೆರೆತ ಶುರುವಾಗಿ,ಬರುಬರುತ್ತಾ ಜಾಸ್ತಿ ಆಯಿತು.


ಆದರೆ ಅದನ್ನೆಲ್ಲಾ ಹೇಳುತ್ತಾ ಕೂರುವ ಸಂದರ್ಭ ಅದಾಗಿಲ್ಲದಿದ್ದುದರಿಂದ ಮತ್ತು ಮಾತಾಡಿದರೆ ಮುತ್ತು ಬಿಡುತ್ತದೆ ಎನ್ನುವ ಪಾರ್ಟಿ ಅವನಾಗಿದ್ದರಿಂದ ಸುಮ್ಮನೆ ಕೆರೆಯುತ್ತಾ ಹೊಳೆಯಲ್ಲಿ  ಮಾಳದ ಹೆಜ್ಜೆಹಾಕತೊಡಗಿದ್ದನು.



ಇತ್ತ ಶುಕ್ರವಾರದ ಚಿತ್ರಮಂಜರಿಯಲ್ಲಿ ತೋರಿಸಿದ ಅರೆನಗ್ನ ಹಾಡೊಂದಕ್ಕೆ ಬೈಯ್ಯುತ್ತಾ ,ಬೀಡಿ ಶೇದಲೆಂದು ಅಂಗಳಕ್ಕೆ ಬಂದಿದ್ದ ಶಂಭುಹೆಗಡೆಯವರಿಗೆ ಹೊಳೆಯಲ್ಲೇನೋ ಸಪ್ಪಳ ಕೇಳಿ ವಾಡಿಕೆಯಂತೆ  "ಯಾರ್ರಾ ಅದು...?" ಎಂದರು.


ಪಕ್ಕಾ ಖತರ್ನಾಕು ಕಳ್ಳರಾದ ಈ ಕನ್ನಡದ ಮಕ್ಕಳೆಲ್ಲಾ ಬೆಕ್ಕಿನಂತೆ ಮೆತ್ತಗೆ ಅಲ್ಲೆ ಎಲ್ಲೋ ಗಪ್ಪಾಗಿ ಕೂರಲು,ಹೆಗಡೆಯವರು

 "ತಥ್...ಎಡಬಟ್ಟು ಕುನ್ನಿ.." 

ಎಂದು ಮೋಟು ಬೀಡಿಯನ್ನು ಎಸೆದು ಜಗುಲಿಗೇರಿದರು.


ಅಬ್ಬಾ ..ಬದುಕಿದೆಯಾ ಬಡಜೀವವೇ ಎಂದೆಣಿಸಿದ ಪುಂಡರು ಕಿಸಿಕಿಸಿ ನಕ್ಕು ಮತ್ತೆ ನಡೆಯತೊಡಗಿದರು.


ಕಾಲುಗಳು ನಿತ್ಯರೂಢಿಯಂತೆ ಅವರನ್ನು ಕ್ರಿಕೆಟ್ಟು ಬಾಲು ಹೆಕ್ಕುವ ಜಾಗದಲ್ಲಿ ತಂದು ನಿಲ್ಲಿಸಿ ,ಮೇಲೆ ಹತ್ತಿಸಿಕೊಂಡವು.


ಅಷ್ಟರಲ್ಲೇ ಪೇಟೆಗೆಲ್ಲೋ ಹೋಗಿದ್ದ ವೈಜಯಂತನ ಪಿಟರ್ ಗಾಡಿಯ ಸದ್ದೂ ಕೇಳಲಾಗಿ,ಇನ್ನು ನಿಂತರೆ ಕೆಲಸ ಕೆಟ್ಟೀತು ಎಂದುಕೊಂಡು ಹಾಗೇ ಒಬ್ಬರಿಗೊಬ್ಬರು ಕೈಬೀಸಿ ಮರೆಯಾಗಿ,ಮನೆದಾರಿ ಹಿಡಿದರು.


ಮೊದಲು ಹೋಗಿದ್ದ ತನಗೆ ಮುಳ್ಳು ಚುಚ್ಚಿತು ಎಂದೂ ,ಅದಕ್ಕೆ ಶೀನನನ್ನೇ ಕಳಿಸಬೇಕಿತ್ತೆಂದೂ ನಾಗರಾಜ ಲೆಕ್ಕಹಾಕುತ್ತಿದ್ದರೆ,ಆ ಹುಂಬ ಬಹಾದ್ದೂರ ಚಂಬು,ಯಾವ ಬಳ್ಳಿಕಿತ್ತನೋ ಏನು ಕಥೆಯೋ,ದ್ರಾಕ್ಷಿಬಳ್ಳಿ ನೋಡಿದರೆ ಚೆನಾಗಿತ್ತು ಎಂದುಕೊಂಡು ಶ್ರೀನಿವಾಸ ಸರಗೋಲು  ತೆಗೆದು ಒಳಗೆ ಹೋದನು.



ಮರುದಿನ ಬೆಳಗಾಗಿ ಪದ್ಧತಿಯಂತೆ ಗುಡ್ಡೆಮೇಲೆ ಸೇರಿ ಹೈಸ್ಕೂಲಿಗೆ ಹೊರಡಲು "ಕೂ" ಹಾಕಲಾಗಿ ಚಂಬುವೊಬ್ಬನನ್ನು ಬಿಟ್ಟು ಉಳಿದವರೆಲ್ಲರೂ ಒಟ್ಟು ಸೇರಿದರು.

ಬಂದ ಹುಡುಗರಿಗೆಲ್ಳಾ ಕಿಸಿಕಿಸಿ ನಗೆಯಲ್ಲೇ ತಮ್ಮ ಸಾಹಸಗಾಥೆ ಹೇಳಿದ ನಾಗರಾಜ ,ಅಲ್ಲೇ ರಿಬ್ಬನ್ನು ವಾರೆಯಾಯಿತೆ ? ಎಂದು ತಲೆಕೆಡಿಸಿಕೊಂಡ ವಾರಿಜಾಳನ್ನು ನೋಡುತ್ತಾ ತನ್ನ ಮಹತ್ಸಾದನೆಯನ್ನು ಎದೆಯುಬ್ಬಿಸಿ ಹುಡುಗರಲ್ಲೇ ಹೇಳಿಕೊಳ್ಳುತ್ತಿದ್ದ.


ನಾಕು ನಾಕು ಬಾರಿ ಕೂ ಹಾಕಿ ಕೊನೆಗೆ "ನಾವ್ ಹೊಂಟ್ರೋ" ಎಂದು ಒಟ್ಟಾರೆ ಅರಚಿದರೂ ಚಂಬುಭಟ್ಟರು ಪಾದಬೆಳೆಸಲಿಲ್ಲವಾದುದ್ದರಿಂದ ಮತ್ತು ಅವರು ಹೈಸ್ಕೂಲಿಗೆ ಅತ್ಯಂತ ನಿಯಮಿತವಾಗಿ ಗೈರಾಗುವ ವಿದ್ಯಾರ್ಥಿಯಾಗಿದ್ದುದ್ದರಿಂದ ಜಾಸ್ತಿ ತಲೆಕೆಡಿಸಿಕೊಳ್ಳದೇ ಉಳಿದವರು ಬಸ್ ಸ್ಟಾಪಿನ ಕಡೆಗೆ ಹೆಜ್ಜೆ ಹಾಕಿದರು.


ಆದರೆ ಇತ್ತ ಶೀನ ಮತ್ತು ನಾಗರಾಜನಿಗೆ ಈ ಹುಂಬ ಚಂಬುವೆಲ್ಲಿ ಹೆಚ್ಚುಕಡ್ಮೆ ಮಾಡಿ ಮನೆಯಲ್ಲೆಲ್ಲಾ ವಿಷಯ ಹೇಳಿಬಿಟ್ಟನೋ ಅಥವಾ ದ್ರಾಕ್ಷಿಬಳ್ಳಿಯನ್ನು ಎಲ್ಲರಿಗೆ ಕಾಣುವಂತೆ ಹುಗಿಸಿಟ್ಟನೋ , ನಮಗೆಲ್ಲಾ ಎಲ್ಲಿ ಒದೆ ತಿನ್ನಿಸುವನೋ ಎಂದು ದಾರಿಯುದ್ದಕ್ಕೂ ಒಳಗೊಳಗೆ ಪುಕುಪುಕಿ ಶುರುವಾಯಿತು.


ಆದರೂ ಅವನು ಅಂಥವನಲ್ಲ ಎಂದು ತಮ್ಮ ಗೆಳೆಯನ ಬಗ್ಗೆಯೇ ಹೇಳಿಕೊಳ್ಳುತ್ತಾ ಟಾರು ರಸ್ತೆ ತಲುಪಿದರು.


ಅತ್ತಕಡೆಯಿಂದ ಶಂಭುಹೆಗಡೆಯವರ ಮನೆಯಾಳು ಪಕ್ಕು ಕಂಬಳಿಕೊಪ್ಪೆ ಸೂಡಿಕೊಂಡು ಬರುತ್ತಾ ಅವರಿವರನ್ನು ಏನೋ ಕೇಳುತ್ತಾ ಇವರೆಡೆಯೇ ಬರುತ್ತಿದ್ದನು.


ಕಳ್ಳರಿಗೆಲ್ಲಾ ಅಲ್ಲಲ್ಲೇ ಪುಕುಪುಕಿ ಶುರುವಾದರೂ ಭಯಂಕರ ಧೈರ್ಯ ಪ್ರದರ್ಶಿಸುತ್ತಾ ಅತ್ಯಂತ ಸಹಜರೀತಿಯಲ್ಲಿರಲು ಪ್ರಯತ್ನಿಸುತ್ತಿದ್ದರು.


ಆತ ಬಾಯಿತುಂಬ ಕವಳದಲ್ಲೇ "ಏಯ್ ಹುಡುಗುರ್ಯಾ ,ರಾತ್ರಿ ಯಾರ್ನಾರು ಹೆಗ್ದೇರ್ ಮನೆ ಹಿತ್ಲ್ ಕೂಡೆ ನೋಡಿರೇನ್ರ್ಯಾ ? " ಎಂದ.


ಮುಂದೆ ಹೋಗುತ್ತಿದ್ದ ಹೆಣ್ಣುಮಕ್ಕಳು ತಮಗಿದು ಸಂಬಂಧವಿಲ್ಲವೆಂಬಂತೆ ಬೇಗ ಬೇಗ ತಲೆತಗ್ಗಿಸಿ ಹೆಜ್ಜೆಹಾಕಿದರು.


ಅವರ ಹಿಂದಿನ ಪುಂಡ ಹುಡುಗರ ಗುಂಪು "ಇಲ್ಲಾ ..ಎಂತಕ್ಕೇ ?" ಎಂದು ದರ್ಪದಿಂದ ಕೇಳಲಾಗಿ ಆತ ತನ್ನ ಕೆಂಪು-ಕಪ್ಪು ಹಲ್ಲು ತೋರಿಸಿ "ಎಂತಿಲ್ಲ " ಎಂದು ನಕ್ಕು ಅವರನ್ನು ಪಾಸಾದನು.


ಸುಮ್ಮನಿರಲಾಗದ ಈ ಹುಡುಗರು "ಹ್ವಾ ..ಅವ್ರ ಮನೆ ಕೆಂಪಮ್ಮನ ತಲಿಗೆ ವಾಪಸ್ಸು ಕೂದಲು ಬಂತಂತೆ ಹೌದನಾ ??" ಎಂದು ಕೇಳಿ ಕೆಣಕಲಾಗಿ ಆತ ಸಿಟ್ಟಿನಿಂದ   ನಾಕು ಮಾರು ಅಟ್ಟಿಸಿಕೊಂಡು ಬಂದು  ಅಲ್ಲೇ ಇದ್ದ ಪಿಳ್ಳೆಗಿಡದ ದಂಟು ಮುರಿದು ಇವರತ್ತ ಹಣಿದನು.


ಒಂದು ಸಲ ಓಡಿ ನಿಂತ ಗಂಡು ಹುಡುಗರು ಮತ್ತೆ ವಾಪಸ್ಸು ತಿರುಗಿ ಅವನತ್ತ ತಿರುಗಿ ಹೇ ಹೇ ಎಂದು ಕೇಕೆ ಹಾಕಿದ್ದು ಹೆಣ್ಣುಮಕ್ಕಳು ಇವರತ್ತ ತಿರುಗಿ ನೋಡಲು ಕಾರಣವಾಯಿತು. 


 ಹಂಗೂ ಹಿಂಗೂ ಹೈಸ್ಕೂಲ್ ಮುಗಿಸಿ ವಾಪಸ್ಸು ಬಸ್ಸು ಪಾಸು ತೋರಿಸಿ ಕೆಳಗಿಳಿದ ಪುಂಡರ ಸೈನ್ಯಕ್ಕೆ ಸಾಲೆಮನೆ ಹತ್ತಿರ ಒಂದಿಷ್ಟು ಜನಸೇರಿದ್ದೂ ,ಅದರಲ್ಲಿ ವೈಜಯಂತನ ಪಿಟರ್ ಗಾಡಿಯು ಇದ್ದಿದ್ದೂ ನೋಡಿ ಅಚ್ಚರಿಯಾಯಿತು.

ಪಾಪ ದ್ರಾಕ್ಷಿಬಳ್ಳಿ ಕಳುವಾಗಿದನ್ನು ಹೇಳಿಕೊಂಡು ಪೇಚಾಡುತ್ತಿರುವನೇನೋ ಎಂದುಕೊಂಡು ಸಂಭ್ರಮಿಸಿದ ನಾಗರಾಜನ ತಂಡ ,ಅಲ್ಲಿನವರ ಮಾತುಕತೆಯ ಮಜಾತೆಗೆದುಕೊಳ್ಳಲೆಂದು ನಿಧಾನವಾಗಿ ಹೆಜ್ಜೆಯಿಡತೊಡಗಿತು.


ಹವಾಯಿ ಚಪ್ಪಲ್ಲಿಯ ಉಂಗುಷ್ಟ ಕಳಚಿರುವಂತೆ ಮತ್ತೊಮ್ಮೆ ಅದರ ಬಾರು ಕಿತ್ತು ಹೋಗಿರುವಂತೆ ,ಅದನ್ನು ವಾಪಸ್ಸು ತೂರಿಸುತ್ತಿರುವಂತೆ ನಾಟಕವಾಡುತ್ತಾ ಅಲ್ಲೇ ನಿಧಾನವಾಗಿ  ಮಾತು ಕೇಳಿಸಿಕೊಳ್ಳತೊಡಗಿದರು.


ಅಷ್ಟರಲ್ಲೇ ವೈಜಯಂತನು ದ್ರಾಕ್ಷಿ ಎನ್ನುತ್ತಲೇ ಇವರ ಕಿವಿ ನೆಟ್ಟಗಾಯಿತು.


 "ಅಲ್ಲೋ ಮಾರಾಯ..ಈ ಸುಡುಗಾಡು ದ್ರಾಕ್ಷೇ ಎಲ್ಲಾ ನಮ್ ಬದಿಗ್ ಆಗ್ ಬರೂದಿಲ್ಲಾ ನೋಡು"

 "ಮತ್ ಬಳ್ಳಿ ಆಗದೆ...ಇವತ್ ನಾಳೆ ಹಂಗೆ  ಕಾಯಿ ಬಿಡ್ತದೆ ನೋಡಾ ಅಂತಿದ್ಯಲಾ. ?" 

"ಇಲ್ವಾ ..ಸಾಯ್ಲಿ ಅದು..ಎಷ್ಟ್ ಗೊಬ್ರಾ ಮಣ್ಣೂ ನೀರು ಎಂತಾ ಸುಡುಗಾಡು ಹಾಕಿದ್ರೂ ಕಾಯಿ ಕಾಕೆ ಹಾಣ್ಣಿನ್ ಕಿಂತಾ ದೊಡ್ಡಕಾಗುದಿಲ್ಲಾ...ಆಗುದಿಲ್ಲಾ ಕಾಣ್ತದೆ ಅದು ಇಲ್ಲೆಲ್ಲಾ."

"ಮತ್ ಎಂತಾ ಮಾಡ್ತೆ ಅದ್ನಾ ?"

"ಕಡ್ದ್ ಹಾಕಿದ್ನಾ ಮೊನ್ನೆ ಅದ್ನಾ ..ತಲೆ ಚಿಟ್ ಹಿಡ್ದು...ಸುಮ್ನೆ ಎಸ್ಟ್ ವಾಗತಿ ಮಾಡಿದ್ರು ಅಷ್ಟೇಯಾ ಅದ್ಕೆ ಹೇಳಿ." 
ಎಂದು ವೈಜಯಂತ ಅಲ್ಲೇ ನಾಟಕ ಮಾಡುತ್ತಿದ್ದ ಹುಡುಗರ ಕಡೆಗೆ ನೋಡಿದ
.
ಅರ್ರೇ..ಇದೆಂತಾ ಇದು ಎಂದುಕೊಂಡ ಹುಡುಗರ ಮಳ್ಳರಂತೆ ಸುಮ್ಮನೆ ದಾರಿಸಾಗಿಸಿಬಿಟ್ಟರು.

ಈಗ ನಾಗರಾಜ,ಶೀನರ ತಲೆಯಲ್ಲಿ ಹುಳಬಿಟ್ಟಂತಿತ್ತು..

ಒಂದೋ ನಿನ್ನೆ ದ್ರಾಕ್ಷಿ ಬಳ್ಳಿ ಕಳುವಾದ ಸುದ್ದಿ ಊರಿಗೆಲ್ಲ ಗೊತ್ತಾಗಿ ಮರ್ಯಾದಿ ಹೋಗಬಾರದೆಂದು ಈ ವೈಜಯಂತ ಗುಂಡು ಬಿಗಿಯುತ್ತಿರಬೇಕು..

ಇಲ್ಲಾ ನಿನ್ನೆ ಎಂತಾರೂ ಎಡವಟ್ಟಾಗಿರಬೇಕು..


ಏನೇ ಆದ್ರೂ ಮೊದಲು ಚಂಬುವನ್ನು ನೋಡಬೇಕು ,ಮೊದಲು ಆ ದ್ರಾಕ್ಷಿಬಳ್ಳಿ ಪ್ರತ್ಯಕ್ಷ ನೋಡಿ ಎಲ್ಲಾ ಖಾತರಿ ಮಾಡಿಕೊಳ್ಳಬೇಕು ಎಂದೆಣಿಸಿ ದಡದಡ ಒಳದಾರಿ ಹಿಡಿದರು.


ಇನ್ನೇನು ಊರು ಸಿಗಲು ಕೆಲವೇ ಹೆಜ್ಜೆ ಇದ್ದಾಗ , ತಿರುಮುರುಕಿಯ ಹತ್ತಿರ ಪಿಳ್ಳೆಮಟ್ಟಿಯ ಹಿಂದಿಂದ ಯಾರೋ

 "ನಾಗು ,ಶೀನು" ಎಂದು ಕರೆದಂತಾಯಿತು..


 "ಎಂತದಿದು?" ಎಂದುಕೊಂಡು ತಲಾಶೆ ತೆಗೆದುಕೊಂಡಾಗ ಕಂಡಿದ್ದು ಚಂಬುಭಟ್ಟರ ಆಂಜನೇಯ ಅವತಾರ!


ಕೆನ್ನೆ,ಹಣೆ,ಗಲ್ಲ ಎಲ್ಲಾ ಊದಿಕೊಂಡು ಕೆಂಪುಕೆಂಪಾಗಿಯೂ,ತುಟಿ ದಪ್ಪದಪ್ಪವಾಗಿಯೂ,ಕಣ್ಣು ಅರೆಬರೆ ಕೆಂಪಾಗಿಯೂ,ಮೈ ಕೈ ಎಲ್ಲ ಕೆಂಪು ಕೆಂಪಾಗಿಯೂ ಕಂಡಿದ್ದ ಚಂಬು.

ಈ ಪರಿ ವಿರಾಟರೂಪ ದರ್ಶನಕ್ಕೆ ಕಾರಣವೇನೆಂದು ಕೇಳಲಾಗಿ ಆತ ನಿನ್ನೆಯ ಬೂರ್ಗಳುವಿನಲ್ಲಾದ ಸಣ್ಣಪ್ರಮಾದದ ಬಗ್ಗೆ ವಿವರಸತೊಡಗಿದ.


ರಾತ್ರಿ ಕಿತ್ತ ಬಳ್ಳಿಗಳಲ್ಲಿ ದ್ರಾಕ್ಷೆಬಳ್ಳಿ ಬಿಟ್ಟು ಏನೇನೋ ಕೆಲಸಕ್ಕೆ ಬಾರದ ಬಳ್ಳಿಗಳೂ,ಭಂಗೀಗಿಡವೂ ಇದ್ದು ಅದರ ಜೊತೆ ತುರಸಣಿಗೆಯೂ ಸೇರಿಕೊಂಡಿದ್ದರಿಂದ ,ತಾನು ಅದನ್ನು ಮಗುವಂತೆ ಮಡಿಲಲ್ಲೆ ಇಟ್ಟುಕೊಂಡು ಹೊಳೆಯಲ್ಲೆಲ್ಲಾ ನಡೆದಿದ್ದರಿಂದ ತುರುಕೆ ಶುರುವಾಯಿತೆಂದೂ, ಮನೆಗೆ ಹೋಗುತ್ತಲೇ ಇನ್ನೂ ಜಾಸ್ತಿ ಆಯಿತೆಂದೂ,ಅದಕ್ಕೆ ಅಪ್ಪನಿಂದ ಬೈಸಿಕೊಳ್ಳಬೇಕಾಗಿ ಬಂದೆಂದೂ ಮತ್ತು ಅವರ ಒತ್ತಾಯದ ಮೇರೆಗೆ ಅಡಗಿಸಿಟ್ಟ ಬಳ್ಳಿಯ ಶಿಂಬೆಯನ್ನು ತೋರಿಸಿದಾಗ ಅಲ್ಲಿದ್ದ ಭಂಗೀ ಗಿಡ ಕಂಡು  ತಾರಾಮಾರಿ ಹೊಡೆತವೂ  ಬಿದ್ದಿತೆಂದೂ,ಅದರಿಂದಲೇ ತನಗೀ ಫಿರಂಗಿ ರೂಪವೆಂದೂ ಅಶ್ರುಧಾರೆ ಸಮೇತವಾಗಿ ವಿವರಿಸಿದನು. 



ಗೆಳೆಯನ ಕಥೆ ಕೇಳಿ ಮರುಗಿದ ಪುಂಡರು ದೀಪಾವಳಿ ಹಬ್ಬಕ್ಕೆ ಮುಂಚೆ ತಮ್ಮ ತಮ್ಮ ಮನೆಯಲ್ಲಿ ಈ ಸಂಜೆ ನಡೆಯುವ ಮಂಗಳಾರತಿಗೆ ಸಿದ್ಧರಾಗತೊಡಗಿದರು.


ಬೆನ್ನು-ಕಾಲುಗಳಿಗೆ ಸಿಕ್ಕಿಸಿಕೊಳ್ಳಲು ಹಾಳೆಯನ್ನು ಹುಡುಕತೊಡಗಿದರು.

-ಚಿನ್ಮಯ ಭಟ್ಟ
9844702969

4 comments:

Srikanth Manjunath said...

ಶುಭ ಮಂಗಳ ಚಿತ್ರದ ಹಾಡು ನೆನಪಿಗೆ ಬಂತು
ಬಾಲ್ಯದ ಆಟ ಪಾಠ ತರಲೆಗಳು
ಹುಡುಗಾಟ ಅದರ ಮಜವೇ ಮಜಾ
ನನ್ನ ಶಾಲಾ ದಿನಗಳು ಸಾಹಸಗಾಥೆ ಆಗದಿದ್ದರೂ ನಾ ಬಾಲ್ಯದಲ್ಲಿ ಕಳೆದುಕೊಂಡಿದ್ದೇನು ಎಂದು
ಅರಿವಾಗುವಷ್ಟು ಪರಿಣಾಮಕಾರಿಯಾಗಿದೆ

ಬಳಸಿರುವ ಭಾಷೆ, ಬಣ್ಣಿಸಿರುವ ರೀತಿ, ಅವರ ಪಡಿಪಾಟಲು ಸೂಪರ್ ಚಿನ್ಮಯ್

sunaath said...

ಬೂರ್ಗಳವಿನ ಸಾಹಸ ರಮ್ಯವಾಗಿದೆ.

ಚಿನ್ಮಯ ಭಟ್ said...

ಧನ್ಯವಾದ ಶ್ರೀಕಾಂತಣ್ಣಾ

ಚಿನ್ಮಯ ಭಟ್ said...

ಧನ್ಯವಾದ ಸುನಾಥ ಸರ್