Wednesday, August 16, 2017

ಖಂಡಿತಾ ಸಿಗಬೇಡ

ಹತ್ತಿರದಲ್ಲೆಲ್ಲೋ ಇರಬೇಕು ನೀನು, ಖಂಡಿತಾ ಸಿಗಬೇಡ
ದೂರದಿಂ ಮರೆಯಾಗಿಬಿಡು ದಯವಿಟ್ಟು ಕಾಣಿಸಬೇಡ

ನೀನು ನೀನೇ, ನಾನು ನಾನೇ
ಆದರೆ ಈಗ ನಾವಿಬ್ಬರೂ ಮೊದಲಿನಂತಿಲ್ಲ
ಸ್ನೇಹ-ಮಮತೆ-ಪ್ರೀತಿ-ಸಲಿಗೆ ಪದಗಳಷ್ಟೇ
ಅಸಲಿಗೆ ಅನುಭವವನ್ನು ಅಕ್ಷರಗಳಲ್ಲಿ ಹೇಳಲೇ ಸಾಧ್ಯವಿಲ್ಲ

ಆಗಸದಷ್ಟು ಕನಸು, ಬೆಟ್ಟದಷ್ಟು ವಿಶ್ವಾಸ
ಹಸಿರುಗಣ್ಣು, ಸಂಜೆಗೂ ಬಾಡದ ಮಂದಹಾಸ
ರೆಂಬೆ ಟಿಸಿಲೊಡೆದು ಹೊಸ ಚಿಗುರು ಹೊರಟಿದ್ದು ನಿಜ
ಆದರೆ, ಕರಿಮೋಡ ಮುಸುಕಿದಾಗೆಲ್ಲ ಮಳೆ ಸುರಿಯಲೇಬೇಕೆಂದಿಲ್ಲ
ನಾವಂದುಕೊಂಡಿದ್ದೆಲ್ಲ ಖಾಯಂ ಆಗಿ ದಕ್ಕಲೇಬೇಕೆಂದಿಲ್ಲ

ಗಾಳಿಗೆ ಹಾರಿದ ಒಣಬೀಜ ಪರವೂರಿನಲ್ಲಿ ಕಳೆಯಾಯ್ತು
ಅಂಗಳದಲಿ ಬಿದ್ದ ಹಸಿಬೀಜ ಹಿತ್ತಲಿನ ಸಸಿಯಾಯ್ತು
ಎರಡೂ ಒಂದೇ ಆಗ, ಆದರೀಗ ಸಂಪೂರ್ಣ ಬೇರೆ ಬೇರೆ
ಬೇರೂರಿದ ಜಾಗ ಬದಲಾದಮೇಲೆ ಕಾಣಿಸುತ್ತದೆ ಗಡಿ-ರೇಖೆ-ಮೇರೆ

ಕಳೆಯೆನಿಸಿಕೊಂಡು, ಎಲ್ಲರಿಂ ಬೈಸಿಕೊಂಡು
ಅವರಿವರಿಂದ ಎಳೆಸಿಕೊಂಡು, ಕುಡುಕರಿಂದ ಕಡಿಸಿಕೊಂಡು
ನೋವು ಎಂಬುದನೇ ತ್ಯಜಿಸಿ ಮೋಕ್ಷಕ್ಕೆ ಅಣಿಯಾಗುತ್ತಿದ್ದೇನೆ
ಈ ಸಮಯದಲ್ಲಿ ಮತ್ತೆ ಹೂಬಿಡುವ ಗಿಡವೆಂದು ನೆನಪಿಸಬೇಡ
ದೇವರ ಪೀಠದಲಿ ಕುಳಿತು ರಾರಾಜಿಸುವ ಆಸೆಹುಟ್ಟಿಸಿ
ದನದ ಬಾಯಿಗೋ, ಕಿಡಿ ಬೆಂಕಿಗೋ ಆಹುತಿಯಾಗಿಸಬೇಡ

ಆ ಕಡೆಯಿಂದ ಬಂದ ಗಾಳಿಯಲಿ ಬೆರೆತಂತಿದೆ ಹಳೆಯ ಪರಿಮಳ
ಅದೇ ಘಮ, ಅದೇ ಸೆಳೆತ, ಅದೇ ನಗು, ಅದೇ ಆಕರ್ಷಣೆ
ದೂರ ಹೋಗಿ ಬಿಡು ಆದಷ್ಟು ಬೇಗ ಇಲ್ಲಿಂದ ಚಿನ್ನಾ
ಬಿಟ್ಟ ಬೇರೆತ್ತಿ ಜಿಗಿದು ನಾ,ಮತ್ತೊಂದೆಡೆ ಹಾರುವ ಮುನ್ನ

-ಚಿನ್ಮಯ
16-08-2017

6 comments:

Kartheek said...

ಅದ್ಭುತ ಬರವಣಿಗೆ.

ಚಿನ್ಮಯ ಭಟ್ said...

ಧನ್ಯವಾದ ಗುರುಗಳೇ :)

Unknown said...

ಮ್ಮ ಕವನ ವಿಭಿನ್ನ. ನನಗೆ ಇಷ್ಟವಾದದ್ದು ನೀವು ಸಿಗಬೇಡ ಎಂದುಕೊಂಡೆ ಹುಡುಕುವ ರೀತಿ. ನನ್ನ ಬ್ಲಾಗಿಗೂ ಭೇಟಿ ಕೊಡಿ. sarovaradallisuryabimba.blogspot.in

ಚಿನ್ಮಯ ಭಟ್ said...

ಧನ್ಯವಾದಗಳು ಚಂದ್ರಶೇಖರರೇ :) ...ಖ಼ಂಡಿತಾ ಓದ್ತೀನಿ :)

Anonymous said...

Awesome!!

Anonymous said...

Beautifully witten sir