Thursday, February 7, 2019

ಬ್ರಹ್ಮಕುಮಾರಿ

"ಯು ಆರ್ ಆಕ್ಟಿಂಗ್ ಲೈಕ್ ಅ ಬಿಚ್..." ಶತಭಿಷ ನೇರವಾಗೇ ಬೈದಿದ್ದ.
"ಕಮಾನ್....ಗ್ರೋ ಅಪ್..." ಆಕೆ ಕ್ಯಾರೇ ಅನ್ನಲಿಲ್ಲ.  ಬೇಕಾದವರಿಗೆಲ್ಲಾ ಕಾಲ್ ಮಾಡಿ ಕರೆಯತೊಡಗಿದಳು. ಶುರುವಿನಲ್ಲಿ ಏನೇನೋ ಕಾರಣ ಹೇಳಿದರಾದರೂ "ಮುಚ್ಕೋಂಡ್ ಬರ್ರೋ" ಎಂದು ಉಗಿದ ಮೇಲೆ ಒಬ್ಬೊಬ್ಬರಾಗಿ ಹಳೆಯ ಗೆಳೆಯರೆಲ್ಲಾ ಬಂದು ಸೇರತೊಡಗಿದರು.
ಶತಭಿಷ ಕನಿಷ್ಠ ಹತ್ತು ಬಾರಿ ಸ್ಥಿರೆಗೆ ಕರೆ ಮಾಡಿದ್ದ. ಆಕೆ ಹತ್ತೂ ಬಾರಿ ಕಟ್ ಮಾಡಿದ್ದಳು.
ಹನ್ನೊಂದನೇ ಕರೆ ಕಟ್ ಮಾಡಿ ಆಕೆ ರಿಪ್ಲೈ ಮಾಡಿದ್ದಳು.
"ಡೋಂಟ್ ವರಿ ಅಬೌಟ್ ಮಿ...ಹ್ಯಾಪಿ ಬರ್ತ್‍ಡೇ ಇನ್ ಅಡ್ವಾನ್ಸ್...ಗುಡ್ ನೈಟ್.." ಶತಭಿಷನಿಗೆ ಸ್ವಲ್ಪ ಧೈರ್ಯ ಬಂದಿತು. ಆದರೆ ಸಮಾಧಾನವೇನೂ ಆಗಲಿಲ್ಲ.
"ಹ್ಯಾಪೀ ಬರ್ತ್ ಡೇ ಟು ಯು...ಹ್ಯಾಪೀ ಬರ್ತ್ ಡೇ ಟು ಯು...ಹ್ಯಾಪಿ ಬರ್ತ್ ಡೇ ಹ್ಯಾಪಿ ಬರ್ತ್ ಡೇ ಡಿಯರ್ ಶತಭಿಷ....." ಶತಭಿಷನ ಹತ್ತಿರದವರೆಲ್ಲಾ ಸೇರಿದ್ದರು. ಕೇಕ್ ಕಟ್ ಮಾಡಿಸಿದರು. ಮುಖದ ಮೇಲೆ ಒತ್ತಾಯದ ನಗುವಿತ್ತು. ಎದುರಿಗೆ ಅವನಿಗೆ ಭಯಂಕರ ಇಷ್ಟವಾದ ಫೈನಾಪಲ್ ಕೇಕ್ ಇತ್ತು. ಅದ್ಯಾರೋ ಫೋಟೋ ತೆಗೆಯಲು "ಚೀಝ್ " ಅಂದರು. ಶತಭಿಷ ತನ್ನದೇ ಮೊಬೈಲಿನಲ್ಲಿ ಫೋಟೋ ತೆಗೆಸಿಟ್ಟುಕೊಂಡ. ಎಲ್ಲರಿಗೂ ಡ್ರಿಂಕ್ಸ್ ಸರ್ವ್ ಮಾಡಿದ. ಚಲನಾ ಊಟ-ತಿಂಡಿಯ ಜವಾಬ್ದಾರಿ ನೋಡಿಕೊಂಡಿದ್ದಳು. ಒಬ್ಬೊಬ್ಬರಾಗಿ ಎಲ್ಲರೂ ಖಾಲಿಯಾಗತೊಡಗಿದ ಮೇಲೆ ಚಲನೆಯೂ ಹೊರಡುವ ತಯಾರಿ ನಡೆಸಿದಳು.
"ನೀನ್ ಎಲ್ಲಿಗ್ ಹೊರಟೆ?" ಆತ ಕುತೂಹಲದಿಂದ ಕೇಳಿದ.
"ನನ್ ಫ್ಲ್ಯಾಟಿಗೆ. ಇನ್ನೆಲ್ಲಿಗೆ?" ಆಕೆ ತಾನು ಉಟ್ಟಿದ್ದ ಬಿಳೀ ಸೀರೆಯ ಮೇಲೆ ಕಪ್ಪು ಜರ್ಕೀನ್ ಧರಿಸುತ್ತಿದ್ದಳು.
"ಲೇಟ್ ಆಗಿಲ್ವೇನೆ...ಇಲ್ಲೇ ಇದ್ದ್ ಹೋಗು" ಆತ ನಿಶ್ಚಯವಾಗಿ ಹೇಳಿದ್ದ.
"ಬೇಡಪ್ಪಾ...ನೀನ್ ಮದ್ವೆ ಆದೋನು...ಆಮೇಲ್ ಸ್ಥಿರಾ ತಪ್ಪ್ ತಿಳ್ಕೊಂಡ್ರೆ ಕಷ್ಟಾ" ಆಕೆ ನಗುತ್ತಲೇ ಹೇಳಿದ್ದಳು.
"ಇನ್ನೇನ್ ತಪ್ಪ್ ತಿಳ್ಕೊಳಕ್ಕ್ ಬಾಕಿ ಇದೆ ಅಂತಾ?" ಆತ ತಲೆ ಕೆಳಹಾಕಿದ್ದ.
"ಸಿಲ್ಲಿ ಗರ್ಲ್..." ಆಕೆ ಹಣೆ ಚಚ್ಚಿಕೊಂಡಳು.
"ಎಲ್ರೂ ನಿನ್ ಥರ ಇರಲ್ಲಾ ಕಣೇ" ಆತ ಸ್ಥಿರೆಯನ್ನು ಬಿಟ್ಟುಕೊಡಲು ತಯಾರಿರಲಿಲ್ಲ.
"ಹಮ್...ಇರೋ ವಿಷ್ಯ ಹೇಳ್ಬಿಡೋ...." ಆಕೆ ಸಲಹೆಯಿತ್ತಿದ್ದಳು.
"ಅದ್ರಿಂದ ಏನಾಗತ್ತೆ ಅಂತಾ?" ಆತ ಮರುಪ್ರಶ್ನಿಸಿದ್ದ.
"ಅವಳಿಗ್ ಇರೋ ಡೌಟ್ ಕ್ಲಿಯರ್ ಆಗತ್ತೆ...ರಿಲೇಷನ್‍ಶಿಪ್‍ಅಲ್ಲಿ ಈ ಥರ ಸಣ್ಣ್ ಸಣ್ಣ್ ವಿಷಯಾನೇ ತುಂಬಾ ಕಿರಿಕಿರಿ ಕೊಡತ್ತೆ..ಕ್ಲಿಯರ್ ಮಾಡ್‍ಬಿಡು"...ಆಕೆ ಎಕ್ಸ್‍ಪ್ಲೇನ್ ಮಾಡುತ್ತಿದ್ದಳು
"ಹಂಗಂತಿಯಾ...ಬಟ್ ಹೆಂಗ್ ಹೇಳ್ಳಿ ಗೊತ್ತಾಗ್ತಿಲ್ಲ..." ಆತ ತಲೆಕೆರೆದುಕೊಂಡ....
"ನೀನ್ ಶ್ರೀರಾಮ್‍ಚಂದ್ರ ಕಣೋ...ಬಟ್ ಇದು ಕಲಿಯುಗ..ಟ್ರುಥ್‍ಟೆಸ್ಟ್ ನಿಂಗೇ ಅನ್ಕೋ...ಬೆಂಕಿ ಒಳಗ್ ಬೀಳು...ನನ್ ಆಶೀರ್ವಾದ ಇದೆ..." ಆಕೆ ಕಿಚಾಯಿಸುವುದು ಬಿಡಲಿಲ್ಲ...
"ಅದ್ರಿಂದ ನಿಂಗೇನ್ ಪ್ರಾಬ್ಲಂ ಇಲ್ವಾ?" ಆತ ಅನುಮಾನಿಸಿದ್ದ..
"ಅದ್ರಿಂದ ನೀನು ಮತ್ತೆ ಸ್ಥಿರಾ ಚೆನಾಗ್ ಇರ್ತಿರಾ ಅಂದ್ರೆ ಐ ಡೋಂಟ್ ಮೈಂಡ್...ಅಷ್ಟಕ್ಕೂ ನಾನೇನ್ ತಪ್ಪ್ ಮಾಡ್ತಿಲ್ವಲ್ವಾ?" ಆಕೆ ವ್ಯಾನಿಟಿ ಹೆಗಲೇರಿಸಿ ಹೊರಟಿದ್ದಳು.
"ತಪ್ಪೇನಲ್ಲ...ಆದ್ರೂ ಏನೋ ಅನ್‍ಕಾಮನ್ ಅನ್ಸಲ್ವಾ? " ಆತ ದಾರಿಯ ಮಧ್ಯವೇ ನಿಂತಿದ್ದ.
"ಗಂಡಸ್ರಿಗಾದ್ರೆ ಅದೆಲ್ಲಾ ನಾರ್ಮಲ್ಲಾ? " ಆಕೆಯ ಪ್ರಶ್ನೆಗೆ ಆತನ ಬಳಿ ಉತ್ತರವಿರಲಿಲ್ಲ..
"ಆದ್ರೂ ತೀರಾ ಪರಸ್ನಲ್ ಅನ್ಸತ್ತಪ್ಪಾ..." ಆತ ಹಿಂಜರಿಯುತ್ತಿದ್ದ....
"ಗಂಡಸರೂ ನಾಚ್ಕೊತಾರಾ?" ಆಕೆ ಕಣ್ಣು ಹೊಡೆದಿದ್ದಳು.
ಆತ ದಾರಿ ಬಿಟ್ಟು, ಚಿಲಕ ಹಾಕಿಕೊಂಡಿದ್ದ. ಕುಡಿಯಲು ಶುರುವಿಟ್ಟುಕೊಂಡಿದ್ದ.
"ಐ ಆಮ್ ಸಾರಿ...ಎಲ್ಲಾ ಹೇಳ್ತೀನಿ...ಟೇಕ್ ಕೇರ್..."  ನಶೆಯಲ್ಲಿಯೇ ಸ್ಥಿರೆಗೆ ಮೆಸ್ಸೇಜು ಹಾಕಿ ಮಲಗಿಕೊಂಡಿದ್ದ. ಆದರೆ ಸ್ಥಿರೆಗೆ ನಿದ್ದೆ ಹತ್ತಿರಲಿಲ್ಲ...
**
ಮುಂದಿನ ವೀಕೆಂಡಿನಲ್ಲಿ ಮತ್ತೊಂದು ಮೀಟಿಂಗ್ ನಡೆಯುವುದಿತ್ತು. ಅದಕ್ಕಾಗಿ ಶತಭಿಷ ಚಲನಾಳನ್ನು ಕಾರ್‍ನಲ್ಲಿ ಕೂರಿಸಿಕೊಂಡು ಬ್ರಿಡ್ಜ್ ಕಡೆ ಹೊರಟಿದ್ದ.
ಅದೇ ರಸ್ತೆ, ಅದೇ ಬೀದಿ, ಅದೇ ಗಿಡ-ಮರ, ಅದೇ ಜನ, ಅದೇ ಮನೆಗಳು. ಈಗೆಲ್ಲ ಮನೆಯ ಮೇಲಣ ಆಂಟೇನಾ ಕೆಳಗಿಳಿದು, ಅದರ ಬದಲು ಡಿಷ್ ಬಂದಿತ್ತು. ಸಂಜೆಯಾದರೆ ಕೇಳುತ್ತಿದ್ದ ಭಜನೆಗಳ ಬದಲಾಗಿ, ಧಾರಾವಾಹಿಗಳ ಟೈಟಲ್ ಸಾಂಗ್ ಕೇಳಿಸುತ್ತಿತ್ತು. ಜನರೂ ಬದಲಾಗಿದ್ದರು. ಮುಂಚಿನಂತೆ ಮನೆಯಂಗಳದ ಇಂಚಿಂಚಿಗೂ ಜಗಳ ಆಡುತ್ತಿರಲಿಲ್ಲ. ಪೈಸಾ ಪೈಸಾ ಲೆಕ್ಕಾಚಾರ ಹಾಕುತ್ತಾ ಕಂಜೂಷೀತನ ಮಾಡುತ್ತಿರಲಿಲ್ಲ. ದಾಯಾದಿಗಳ ಜಗಳದ ಅಬ್ಬರವೆಲ್ಲ ಇಳಿದು ಮನೆಯಲ್ಲಿ ಇಬ್ಬರೋ ಮೂವರೋ ಇರುತ್ತಿದ್ದರು. ಸಾಧ್ಯವಾದಷ್ಟು ಹೊಂದಿಕೊಂಡು ಹೋಗುತ್ತಿದ್ದರು..
ಬೆಂಗಳೂರಿನ ಗದ್ದಲದಲ್ಲಿ ಬೆಂದಿದ್ದವಳಿಗೆ ಊರು ಹಾಯಾಗಿತ್ತು. ಕಂಡವರೆಲ್ಲಾ ವಿಶೇಷ ಆಸ್ಥೆಯಿಂದ ಮಾತನಾಡಿಸುತ್ತಿದ್ದರು. ಹಳೇಹೆಂಗಸರು ಚಿಕ್ಕ-ಪುಟ್ಟ ಸಲಹೆಗಳನ್ನೂ ನೀಡುತ್ತಿದ್ದರು. ಸಿ.ಟಿಗೆ ಹೋಗಿಬರುವ ತಮ್ಮಂದಿರು ತಿನ್ನಲೇನೋ ತಂದಿರುತ್ತಿದ್ದರು. ಹಬ್ಬ-ತೇರು-ತಿಥಿ-ಒಪ್ಪತ್ತು-ಪೂಜೆಗಳ ಜೊತೆಜೊತೆ ಕೃಷಿ ಕೆಲಸಗಳೂ ನಡೆಯುತ್ತಿದ್ದು, ಸ್ಥಿರೆಗೆ ಖಾಲಿ ಖಾಲಿ ಅನ್ನಿಸಲೇ ಇಲ್ಲ. ಗೊಂದಲವಿದ್ದರೆ ಅದು ಶತಭಿಷ-ಚಲನಾ ವಿಷಯದಲ್ಲಿ ಮಾತ್ರ.
ಆತ ಬಂದಾಗಿನಿಂದಲೂ ಆಕೆ ಸರಿಯಾಗಿ ಮಾತಾಡಿರಲಿಲ್ಲ. ದಿನಾಲೂ ರಾತ್ರಿ ಕರೆ ಮಾಡುತ್ತಿದ್ದಳಾದರೂ ಎರಡು ನಿಮಿಷದ ಮೇಲೆ ಮಾತಾಡುತ್ತಿರಲಿಲ್ಲ...ಪಕ್ಕದ ಮನೆಯ ಅತ್ತಿಗೆಯ ಬಳಿ ಮಾತಾಡುತ್ತಾ ಅಳುತ್ತಿದ್ದಂತೆ ಎಂಬ ಸಮಾಚಾರ ಸುತ್ತೀಬಳಸಿ ಶತಭಿಷನ ಕಿವಿಗೂ ಬಿದ್ದಿತ್ತು. ಅದಕ್ಕೆಂದೇ ಆತ ಅವಳನ್ನು ಮನೆಯಿಂದ ಹೊರಕ್ಕೆ ಕರೆದುಕೊಂಡು ಬಂದಿದ್ದ.
"ಏನೇನ್ ಕೇಳ್ಬೇಕೋ ಕೇಳು...." ಆತ ಕೊನೆಗೂ ಧೈರ್ಯ ಮಾಡಿ ಕೇಳಿದ್ದ.
"ಏನಿಲ್ಲ..." ಆಕೆ ಮುಖ ತಿರುಗಿಸಿದ್ದಳು..
"ಪ್ಲೀಸ್...." ಆತ ಎಡಗೈಯ್ಯನ್ನು ಮೆದುವಾಗಿ ಅದುಮಿದ್ದ. ಆಕೆ ಕೈಬಿಡಿಕೊಂಡಿದ್ದಳು. ಅಳು ಬಂದಂತಾಗಿದ್ದನ್ನು ತಡೆದುಕೊಂಡಿದ್ದಳು.
"ಎಳ್‍ನೀರ್ ಕುಡಿಬೇಕು ಅನಸ್ತಿದೆ"...ಆಕೆಗೊಂದು ಬ್ರೀದಿಂಗ್ ಸ್ಪೇಸ್ ಬೇಕಿತ್ತು. ಆತ ಅಲ್ಲೇ ಕೆಳಗಡೆಯ ಅಂಗಡಿಗೆ ಹೋಗಿ ಎಳನೀರು ಕೊಚ್ಚಿಸಿಕೊಂಡು ಬಂದ. ಇಬ್ಬರೂ ಮಾತು ಶುರುಮಾಡದೇ ಎಳನೀರು ಕುಡಿದರು. ಎಳನೀರು ಖಾಲಿಯಾದ ಮೇಲೂ ಶತಭಿಷ ಸ್ಟ್ರಾ ಹೀರುತ್ತಲೇ ಇದ್ದ. ಅದು ಸೊರ ಸೊರ ಸದ್ದು ಮಾಡುತ್ತಿತ್ತು. ಸ್ಥಿರೆ  ಆತನ ಕೈಗೊಂದು ಪೆಟ್ಟುಕೊಟ್ಟಳು. ಶತಭಿಷನಿಗೂ ಅದೇ ಬೇಕಿತ್ತು.
"ಬೇಕಾ ನಿಂಗ್ ಇದೆಲ್ಲಾ? ಇನ್ನೊಂದ್ ಸ್ವಲ್ಪಾ ದಿನಕ್ ಅಪ್ಪಾ ಆಗ್ತಿಯಾ....ನಿಂಗೇನ್ ಕಮ್ಮಿ ಮಾಡಿದೀನಿ ನಾನು? " ಸ್ಥಿರೆ ಶತಭಿಷನನ್ನು ಗಟ್ಟಿಯಾಗೇ ಕೇಳಿದ್ದಳು.
"ಬೇಕಾಗಿದ್ದ್‍ಕಿಂತಾ ಜಾಸ್ತಿನೇ ಮಾಡಿದೀಯಾ ಕಣೆ...." ಆತ ಅಭಿಮಾನದಿಂದಲೇ ಹೇಳಿದ್ದ.
"ಮತ್ಯಾಕ್ ಅವಳನ್ನ್ ಮೂಸ್ಕಕೊಂಡ್ ಹೋಗ್ತಿಯಾ?" ಆಕೆ ಖಾರವಾಗಿ ಕೇಳಿದ್ದಳು.
ಆತ ಉತ್ತರಿಸಲಿಲ್ಲ. ಮುಗುಳ್ನಕ್ಕಿದ್ದ.
"ಕಿಸದ್ ಬಿಟ್ರೆ?" ಆಕೆಯ ಮುಖ ಗಂಟಿಕ್ಕಿಕೊಂಡಿತ್ತು...
"ನೀನ್ ಏನ್ ತಿಳ್ಕೊಂಡಿದಿಯಾ ಅಂತಾ ನಂಗೊತ್ತು...ಬರ್ತ್‍ಡೇ ದಿನ ವಿಡಿಯೋ ಕಾಲ್ ವಿಷಯ ತಾನೇ?" ಆತ ಮೊಬೈಲ್ ಕೈಗೆತ್ತಿಕೊಂಡಿದ್ದ.
"ಹೂಂ...ಅವಳ್ಯಾಕ್ ಮನೆಲ್ ಇದ್ಲು???" ಆಕೆ ಮಾತಿನಲ್ಲಿ ಹುಳಿಯಿತ್ತು.
"ಅವಳು ನನ್ ಬರ್ತ್‍ಡೇ ಪಾರ್ಟಿ ಅರೇಂಜ್ ಮಾಡ್ತಾ ಇದ್ಲು..." ಆತ ಮೊಬೈಲ್ ಹಸ್ತಾಂತರಿಸಿದ್ದ.
"ನಿಂಗಾ? ಬರ್ತ್‍ಡೇನಾ? ಸರ್‍ಪ್ರೈಸಾ?" ಆತ ವಿವರಗಳನ್ನು ಕೊಡುತ್ತಾ ಹೋದ...ಆಕೆ ಫೋಟೋಗಳನ್ನು ನೋಡುತ್ತಾ ಹೋದಳು....
"ಇವಳ್ಯಾರು?"....
"ಕೋಮಲಾ " ಅಂತಾ...ಆಫೀಸ್‍ನಲ್ಲಿ ಕೋಮ್ ಅಂತಾ ಕರಿತೀವಿ...
"ಇವರ್ಯಾರು?"
"ಮಹೇಶಾ" ಅಂತಾ.... ಹಾಸ್ಟೆಲ್‍ನಲ್ಲಿ "ಶಾ" ಅಂತಾ ಕರಿತಿದ್ವಿ...
"ಇವರು ಬಿಸ್ವಾಸ್ ಭೈಯ್ಯಾ ಅಲ್ವಾ?"
"ಏಯ್...ಭಾಯ್...ಬಿಸ್ವಾಸ್ ಬಾಯ್..."
"ಓ.ಕೆ ಓ.ಕೆ...ಭೈಯ್ಯಾಗೂ ಬಾಯ್‍ಗೂ ಏನ್ ವ್ಯತ್ಯಾಸ..."
"ಏಯ್...ಯಾರಾದ್ರೂ ನಾರ್ಥಿನಾ ಕೇಳು...." ಮಾತುಕತೆ ಎಂದಿನ ಆತ್ಮೀಯತೆಗೆ ತಿರುಗಿತ್ತು...
"ಮತ್ತ್ ಯಾಕ್ ನಂಗ್ ನೀ ಹೇಳ್ಳೇ ಇಲ್ಲಾ?" ಆಕೆ ಆತನದ್ದೇ ತಪ್ಪು ಎಂಬಂತೇ ಕೇಳಿದಳು...
"ಅದ್ ಅಲ್ಲಿಂದ ಹೇಳಿದ್ರೆ ನಿಂಗ್ ಅರ್ಥ ಆಗ್ತಿರ್ಲಿಲ್ಲ...ಮೋರ್ ಓವರ್.. ನೀನ್ ಇಲ್ಲಿಗ್ ಬಂದ್ಮೇಲೆ ಜಗಳಾ ಅಡಕ್ಕೂ ಆಗ್ತಿರ್ಲಿಲ್ಲ...."
"ತಲೆ ನಿಂದು...ನಾನ್ ಸುಮ್ನೆ ತಲೆ ಕೆಡಸ್ಕೊಂಡಿದ್ದೆ...ಸಾರಿ..." ಆಕೆ ಪುಟ್ಟ ಮುಖ ಮಾಡಿದ್ದಳು...
"ಇಟ್ಸ್ ಓ.ಕೆ....ನೀನ್ ಯೋಚ್ನೆ ಮಾಡಿದ್ರಲ್ ಏನೂ ತಪ್ಪಿಲ್ಲ...." ಆತ ಅವಳನ್ನೇ ಸಮರ್ಥಿಸಿಕೊಂಡಿದ್ದ...
"ಅದ್ ಸರಿ ತಿನ್ನಕ್ಕ್ ಏನ್ ತರ್ಸಿದ್ದೆ? ಯಾವ್ ಪ್ಲೇಟ್ ಯೂಸ್ ಮಾಡಿದ್ರಿ? ನನ್ ಪ್ಲೇಟ್ ಮುಟ್ಟಿಲ್ಲಾ ತಾನೇ ಯಾರೂ.... " ಆಕೆ ತನ್ನ ಫೀಲ್ಡಿಗೆ ಇಳಿದಿದ್ದಳು....ಆತ ಉತ್ತರ ಕೊಟ್ಟು ಕೊಟ್ಟು ಕೊನೆಗೆ ಸೋಲೊಪ್ಪಿಕೊಂಡಿದ್ದ...
"ಓ.ಕೆ...ಅದೆಲ್ಲಾ ಬಿಡು...ಅವಳ್ ಏನ್ ಮಾಡ್ತಿದಾಳೆ ಈಗ? ಡಿವೋರ್ಸ್ ಆಯ್ತಂತಾ?" ಆಕೆ ಸಹಜವಾಗೇ ಕೇಳಿದ್ದಳು...
ಆತ ಕೊನೆಗೂ ವಿಷಯ ಬಾಯ್‍ಬಿಟ್ಟಿದ್ದ...
"ಅವಳಾ...ಅದೇನೋ ಮದ್ವೆ ಬಗ್ಗೆನೇ ವಿಶ್ವಾಸ ಹೊರ್ಟೊಗಿದೆ ಅವಳಿಗೆ...ಅದೇನೋ ಬ್ರಹ್ಮಕುಮಾರಿ ಸಮಾಜ ಅಂತೆ...ಯಾವಾಗ್ಲೂ ಬಿಳಿ ಬಟ್ಟೆ ಹಾಕ್ಕೊಂಡೇ ಓಡಾಡ್ತಾಳೆ...ಮಾತ್ ಎತ್ತಿದ್ರೆ ಎಲ್ಲರ್ ಎದ್ರೂ ಶಾಂತಿ ಶಾಂತಿ ಅಂತಾಳೆ....ಬರೀ ಹಣ್ಣು ತರಕಾರಿ ತಿಂತೀನಿ ಅಂತಾಳೆ...ಏನೋ..." ಆತ ಕಾರ್ ಚಾಲೂ ಮಾಡಿದ್ದ.
"ಓಹ್...ಸಂನ್ಯಾಸಿ ಆಗ್ತಾಳಂತಾ?" ಆಕೆ ಸಿಂಪಲ್ಲಾಗಿ ಸಮರೈಸ್ ಮಾಡಿದ್ದಳು...
"ಸಂನ್ಯಾಸಿನಿ ಅದು..." ಆತ ಗ್ರಾಮರ್ ತಿದ್ದಿದ್ದ...
"ಓಹೋಹೋ....ಭಾರಿ ಗೊತ್ತು ನಿಂಗೆ..." ಆಕೆ ಆಡಿಕೊಂಡಿದ್ದಳು.
"ಅದೇನೋ ಸಂನ್ಯಾಸಿ ಅಂತಾ ಅಲ್ಲ...ಏನೋ ಬೇರೆ ಥರ...ನಾರ್ಮಲ್ ಆಗೇ ಇರ್ತಾಳೆ...ಬಟ್ ಏನೋ ಬೇರೆ ಥರ ಲೈಫು...ಮೊದ್ಲಿನ್ ಥರ ಅವಳು ಚಿತ್ತಾಗ್ ಇರೋದಕ್ಕಿಂತ ಇದ್ ಬೆಟರ್ ಅನಸ್ತು ನಂಗೆ...ಏನೋ ಮಾಡ್ಲಿ ಅನ್ಕೊಂಡ್ ಸುಮ್ನಾದೆ.." ಆತ ಮಾತು ಮುಗಿಸಿ ಆಕೆಯ ಮುಖ ನೋಡಿದ್ದ...
"ಪಾಪ..ಏನೇನೋ ಟೆನ್ಷನ್ ಅಲ್ಲಿ ಹಂಗಾದ್ಲು ಅನ್ಸತ್ತೆ " ಸ್ಥಿರೆ ಹೃದಯತುಂಬಿ ಹೇಳಿದ್ದಳು... ಕಾರು ಕತ್ತಲೆಯಲ್ಲಿ ನಿಧಾನವಾಗಿ ಮನೆಯ ಕಡೆ ಸಾಗಿತ್ತು. ಮನೆಯಲ್ಲಿ ಹೊಸ ಬೆಳಕು ಮೂಡುವ ದಿನ ಸನ್ನಿಹಿತವಾಗಿತ್ತು.
**
ಮುಂದಿನ ಒಂದು ವರುಷ ಹೇಗೆ ಕಳಿಯಿತೆಂದೇ ಶತಭಿಷ-ಸ್ಥಿರೆಗೆ ತಿಳಿಯಲಿಲ್ಲ...ಸ್ಥಿರೆ ಮುದ್ದಾದ ಗಂಡು ಮಗುವನ್ನು ಹಡೆದಿದ್ದಳು...ಶತಭಿಷನಿಗೆ ಸ್ವರ್ಗಕ್ಕೆ ಮೂರೇ ಗೇಣು...ಆತ ಎಲ್ಲರಿಗೂ ಸಿಹಿ ಹಂಚಿ ಕುಣಿದಾಡಿದ್ದ. ಪ್ರತೀ ವೀಕೆಂಡು ಬರುವುದಕ್ಕೆ ಬಹಳೇ ಕಾಯುತ್ತಿದ್ದ. ಹಸಿಗೂಸೊಂದು ರಕ್ತ-ಮಾಂಸ ತುಂಬಿಕೊಂಡು ನಿಧಾನವಾಗಿ ಬೆಳೆಯುವುದನ್ನು, ಕಲಿಯುವುದನ್ನು ನೋಡಿ ಅಚ್ಚರಿಪಟ್ಟಿದ್ದ. ವಾರಕ್ಕೊಂದು ಫೋಟೋ ತೆಗೆದು ಅದರ ಹಿಂದೆ ವಾತ್ಸಲ್ಯದ ಸಾಲುಗಳನ್ನು ಗೀಚಿ ಫೇಸ್‍ಬುಕ್ಕಿನಲ್ಲಿ ಹಾಕಿದ್ದ. ವಾರಗಳ ಲೆಕ್ಕಕ್ಕೆ ಸರಿಯಾಗಿ ಇಂಜೆಕ್ಷನ್ ಹಾಕಿಸುತ್ತಿದ್ದ. ಇಂಜೆಕ್ಷನ್ ಕೊಡುವಾಗ ತಾನೇ ಹಿಂಸೆ ಅನುಭವಿಸಿದ್ದ. "ಪೋಲಿಯೋ ಡ್ರಾಪ್ ಥರ ಇದಕ್ಕೂ ಏನೂ ಇಲ್ವಾ?" ಎಂದೆಲ್ಲಾ ಕೇಳಿ ಡಾಕ್ಟರನ್ನೇ ಪೇಚಿಗೆ ಸಿಲುಕಿಸಿದ್ದ. ಸ್ಥಿರೆಯೂ ಅಮ್ಮನ ಆರೈಕೆಯಲ್ಲಿ ಬಾಣಂತನವನ್ನು ಚೆನ್ನಾಗಿಯೇ ಮುಗಿಸಿದ್ದಳು. ಕ್ರಮೇಣ ಸುಧಾರಿಸಿಕೊಂಡು ಮೈ ಆಯಾಸವನ್ನು ನೀಗಿಸಿಕೊಳ್ಳುತ್ತಿದ್ದಳು.
ಬೆಂಗಳೂರಿನಲ್ಲಿ ಶತಭಿಷನ ಕೆಲಸ ಚೆನ್ನಾಗಿಯೇ ನಡೆದಿತ್ತು. ಆತ ತಾನು ಮೊದಲು ಕೆಲಸಕ್ಕಿದ್ದ ಜಾಗ ಬಿಟ್ಟು ತಾನೇ ಫರ್ಮ್‍ವೊಂದನ್ನು ಆರಂಭಿಸಿದ್ದ. ಅದಕ್ಕೆ ಮಗನ ಹೆಸರನ್ನೇ ಇಟ್ಟಿದ್ದ. ಚಲನಾ ಕನ್ಸಲ್ಟಂಟ್ ಆಗಿ ಆಗಾಗ ಬಂದು ಹೋಗುತ್ತಿದ್ದಳು. ಸ್ಥಿರೆ ಮತ್ತು ಆಕೆಯ ಮಗನ ಬಗ್ಗೆಯೂ ವಿಚಾರಿಸುತ್ತಿದ್ದಳು. ಮೊದಲಿಗಿಂತ ತೀರಾ ಗಂಭೀರವಾಗಿರುತ್ತಿದಳ್ದು. ಪಡೆದ ಹಣವನ್ನೆಲ್ಲಾ ದಾನ ಮಾಡುತ್ತಿದ್ದಳು. ಫ್ಲಾಟ್‍ಅನ್ನು ಬಿಟ್ಟು, ಚಿಕ್ಕ ಕೊಠಡಿಯೊಂದರಲ್ಲಿ ಸರಳ ಜೀವನ ನಡೆಸುತ್ತಿದ್ದಳು.
ಎಲ್ಲ ಚೆನ್ನಾಗಿಯೇ ನಡೆಯುತ್ತಿದ್ದರಿಂದ ಶತಭಿಷ ಅಮ್ಮ-ಮಗನನ್ನು ಬೆಂಗಳೂರಿಗೆ ಶಿಫ್ಟ್ ಮಾಡುವ ಆಲೋಚನೆಯಲ್ಲಿ ತೊಡಗಿದ್ದ. ಮಗ-ಹೆಂಡತಿಯ ಜೊತೆ ಆರಾಮವಾಗಿ ಕಾಲ ಕಳೆಯುವ ಕನಸು ಕಾಣುತ್ತಿದ್ದ. ಆದರೆ ಆ ಕನಸುಗಳ ತುದಿಯಲ್ಲಿ ಪ್ರಪಾತವಿರುವುದು ಆತನಿಗೆ ತಿಳಿದಿರಲಿಲ್ಲ.
**
ಬೆಂಗಳೂರಿಗೆ ಬಂದ ಎರಡೂವರೆ ವರ್ಷ ಎಲ್ಲವೂ ಸರಿಯಾಗಿತ್ತು.  ಆದರೆ ನಂತರದಲ್ಲಿ ಒಂದು ದಿನ ಯಾರೋ ಕೊಟ್ಟ ಮೂಗರ್ಜಿಯ ಆಧಾರದ ಮೇಲೆ ಶತಭಿಷ ಆಫೀಸ್ ರೈಡ್ ಮಾಡಲಾಗಿತ್ತು. ಸೆಬಿಯವರು ಆತನ ಟ್ರೇಡಿಂಗ್‍ಗೆ ಬ್ರೇಕ್ ಹಾಕಿದ್ದರು. ಡಿಮ್ಯಾಟ್ ಅಕೌಂಟ್ ಸೀಜ್ ಆಗಿತ್ತು. ಆತನಲ್ಲಿ ಹಣತೊಡಗಿಸಿದ್ದವರು ವಾಪಸ್ಸ್ ಕೇಳಹತ್ತಿದ್ದರು. ಶತಭಿಷ ದಾಖಲೆಗಳನ್ನು ಒಟ್ಟುಗೂಡಿಸಿ ನಿರ್ದೋಷಿ ಎಂದು ಸಾಬೀತುಪಡಿಸಿಕೊಳ್ಳಲು ಹೆಣಗಾಡುತ್ತಿದ್ದ. ಮನೆಗೆ ಬಂದಾಗ ಮಗ ಅತ್ತರೂ ಸಿಟ್ಟಾಗುತ್ತಿದ್ದ.
ಒಂದು ದಿನ ಈತನಿಲ್ಲದ ವೇಳೆಯಲ್ಲಿ ಚಲನಾ ಮನೆಗೆ ಬಂದಿದ್ದಳು. ಮಗುವನ್ನು ಆಟ ಆಡಿಸುತ್ತಾ ಜಗತ್ತೇ ಮರೆತಂತಿದ್ದಳು. ಸ್ಥಿರೆಗೆ ಸ್ವಲ್ಪ ಕೈ ಬಿಡುವಾಯಿತು.
"ಬರ್ತಿರಿ ಅವಾಗವಾಗ" ಎಂದಿದ್ದಳು.
ಅದೇಕೋ ಶತಭಿಷನಿಲ್ಲದ ವೇಳೆಯಲ್ಲಿಯೇ ಚಲನಾ ಮನೆಗೆ ಬರುತ್ತಿದ್ದಳು. ಮಗುವನ್ನು ಆಟವಾಡಿಸುತ್ತಿದ್ದಳು. ಮಗವೂ ಆಕೆಯನ್ನು ಹಚ್ಚಿಕೊಳ್ಳಲು ಶುರು ಮಾಡಿತು. ಮೊದಮೊದಲಿಗೆ ಸ್ಥಿರೆಗೆ ಹಿತವೆನಿಸಿದರೂ ಕ್ರಮೇಣ ಏನೋ ಅಸೂಯೆಯಾಯಿತು. ಅರ್ಧ ದಿನಕ್ಕಿಂತ ಜಾಸ್ತಿ ಆಕೆಯೇ ಮಗುವನ್ನು ಆಡಿಸಹತ್ತಿದ್ದಳು. ಸ್ಥಿರೆ ಸೂಕ್ಷ್ಮವಾಗಿ ಚಲನೆಗೆ ಅದನ್ನು ಹೇಳಬೇಕೆಂದು ನಿರ್ಧರಿಸಿದ್ದಳು.
ಅಷ್ಟರಲ್ಲಿ ಮನೆಗೊಂದು ನೋಟೀಸ್ ಬಂದಿತ್ತು. ಬಿಲ್ ಬಾಕಿ ಉಳಿಸಿಕೊಂಡಿದ್ದಕ್ಕೆ ಸಂಬಂಧಿಸಿದ್ದ ನೋಟೀಸ್ ಅದು...ಶತಭಿಷನ ಕಂಪನಿ ಆರ್ಥಿಕ ಮುಗ್ಗಟ್ಟಿನಿಂದ ಹೊರಬರುವುದಕ್ಕೆ ಇನ್ನೂ ಒಂದು ವರುಷ ಬೇಕಾಗಬಹುದು ಎಂದಿದ್ದ. ಆದರೆ ಬೆಂಗಳೂರಿನಲ್ಲಿ ಬಿಲ್ಲುಗಳ ಭಾರವನ್ನೂ ಹೊತ್ತು ಸಾಗಬೇಕಿತ್ತಲ್ಲ?  ಹೊರಗೆ ಚಲನಾ ಮಗುವನ್ನು ಆಡಿಸುತ್ತಿರುವಾಗ, ಸ್ಥಿರೆಗೊಂದು ಯೋಚನೆ ಬಂತು.  ರಾತ್ರಿ ಶತಭಿಷನೊಂದಿಗೆ ಅದನ್ನು ಪ್ರಸ್ತಾಪಿಸಿದ್ದಳು.
"ನಾನ್ ಮತ್ತೆ ಕೆಲ್ಸಕ್ಕ್ ಸೇರ್ಕೊಳ್ಳಾ?" ಸ್ಥಿರೆ ನಿಧಾನವಾಗಿ ಕೇಳಿದ್ದಳು.
"ಅಂದ್ರೆ? ನಂಗ್ ನಿಮ್ಮನ್ ಸಾಕಕ್ ಆಗಲ್ಲ ಅಂತಾನಾ?" ಆತ ಸಿಟ್ಟಿನಿಂದ ಉರಿಯುತ್ತಿದ್ದ.
"ಹಂಗಲ್ಲ..." ಆಕೆ ಏನನ್ನೋ ಹೇಳಹೊರಟಿದ್ದಳು..."ಬೇಡಾ....ಅಷ್ಟೇ.." ಆತ ಮಾತು ತುಂಡಿರಿಸಿದ್ದ. ಆಕೆ ಸುಮ್ಮನಾದಳು. ಯಾವತ್ತೋ ಒಂದು ದಿನ ಚಲನಾಳ ಬಳಿ ಈ ವಿಷಯ ಹೇಳಿಕೊಂಡು ಅತ್ತಳು.
**
"ಅವಳು ಕೆಲ್ಸಕ್ಕ್ ಹೋದ್ರೆ ನಿಂಗೇನ್ ಸಮಸ್ಯೆ?" ಚಲನಾ ಶತಭಿಷನನ್ನು ಕೂರಿಸಿಕೊಂಡು ಅರ್ಥಮಾಡಿಸುತ್ತಿದ್ದಳು.
"ಏಯ್...ಗೊತ್ತಿಲ್ಲಾ ಕಣೆ..ಅವಳ್ ಕೆಲ್ಸಕ್ ಹೋದ್ರೆ, ಮಗೂನ್ ನೋಡ್ಕೊಳೋದ್ ಯಾರು?" ಆತ ಆಕೆಯನ್ನು ಪ್ರಶ್ನಿಸಿದ್ದ.
"ಅದು ಬೇರೆ ಪ್ರಶ್ನೆ...ಇದ್ ಬೇರೆ ಪ್ರಶ್ನೆ...ಪ್ರಶ್ನೆಗ್ ಪ್ರಶ್ನೆ ಉತ್ತರ ಆಗಲ್ವಲ್ಲ..."
"ಅಂದ್ರೆ?"
"ನಿಂಗ್ ಅವಳ್ ಕೆಲ್ಸಕ್ ಹೋಗದ್‍ಕಿಂತಾ ಮಗು ನೋಡ್ಕೊಳೋದ್ ಯಾರು ಅನ್ನೊದ್ ಹೈ ಪ್ರಿಯಾರಿಟಿ..ಕರೆಕ್ಟ್?" ಆಕೆ ಆತನ ಮನವೋಲಿಸುವ ಪ್ರಯತ್ನ ನಡೆಸಿದ್ದಳು.
"ಕರೆಕ್ಟ್..." ಆತ ಸಮ್ಮತಿಸಿದ್ದ
"ಅದಕ್ಕ್ ವ್ಯವಸ್ಥೆ ಮಾಡಣಾ ಬಿಡು....ಅವಳ್ ಕೆಲ್ಸಕ್ಕ್ ಹೋದ್ರೆ ನಿಂಗೂ ನೆಮ್ದಿ...ಇವನ್ ಯು ಕ್ಯಾನ್ ಟೇಕ್ ಆಫ್ ದ ಬೇಬಿ ಅಲ್ವಾ?" ಆಕೆ ಆತನಿಗೊಂದು ಹೊಸ ಪರ್‍ಸ್ಪೆಕ್ಟಿವ್ ಕೊಟ್ಟಿದ್ದಳು...
"ಹಮ್...ಯೋಚ್ನೆ ಮಾಡ್ತಿನಿ..." ಆತ ಒಪ್ಪಿಕೊಂಡಿದ್ದ.
ಮುಂದಿನ ತಿಂಗಳಿನಿಂದಲೇ ಸ್ಥಿರೆ ಕೆಲಸಕ್ಕೆ ಹೋಗಲು ಶುರುಮಾಡಿದ್ದಳು. ಊರಿನಿಂದ ಸ್ಥಿರೆಯ ತಾಯಿ ಆಗಾಗ ಬಂದು ಹೋಗುತ್ತಿದ್ದರು. ಮನೆಗೆಲಸಕ್ಕೆ ಆಂಟಿಯೊಬ್ಬರನ್ನು ಗುರುತುಮಾಡಿದ್ದರು. ಆಕೆ ಮಗುವಿಗೆ ಸ್ನಾನ ಮಾಡಿಸಿಯೂ ಹೋಗುತ್ತಿದ್ದರು. ಮೂರೂವರೆ ವರುಷದ ಮಗು ಮತ್ತು ಶತಭಿಷ ದಿನವಿಡೀ ಒಟ್ಟಿಗೇ ಇರುತ್ತಿದ್ದರು. ಸ್ಥಿರೆ ಆಫೀಸಿನ ಕೆಲಸವನ್ನು ಆದಷ್ಟು ಬೇಗ ಮುಗಿಸಿ ಮನೆಗೆ ಬರುತ್ತಿದ್ದಳು. ತೀರಾ ಅವಶ್ಯವೆನಿಸಿದರೆ ವರ್ಕ್ ಫ್ರಾಂ ಹೋಮ್ ಮಾಡುತ್ತಿದ್ದಳು. ಶತಭಿಷನ ಕಂಪನಿಯ ಮೇಲಿನ ಕೇಸುಗಳು ರದ್ದಾದವು. ಇನ್ನೇನು ಕೆಲವೇ ದಿನದಲ್ಲಿ ಶತಭಿಷ ಮತ್ತೆ ಮಾರ್ಕೆಟ್ಟಿಗೆ ಕಾಲಿಡಲಿದ್ದ. ಕೆಟ್ಟದಿನಗಳು ಕಳೆದವೆಂದು ಇಬ್ಬರೂ ನಿಟ್ಟುಸಿರು ಬಿಡುತ್ತಿದ್ದರು
**
ಅಂದು ಸಂಜೆ ಮಗು ಮಲಗಿತ್ತು. ಸ್ಥಿರೆ ಆಫೀಸಿನಲ್ಲಿದ್ದಳು. ಮನೆಯಲ್ಲಿದ್ದು ಶತಭಿಷನೊಬ್ಬನೇ..ಚಲನಾ ಮನೆಗೆ ಬಂದಳು...ಬರಬಾರದಿತ್ತೇನೋ...ಸ್ಥಿರೆ ಮನೆಗೆ ಬರುವಷ್ಟರಲ್ಲಿ ನಡೆಯಬಾರದ್ದು ನಡೆದೇ ಹೋಗಿತ್ತು...

-ಚಿನ್ಮಯ
7/2/2019

4 comments:

Srikanth Manjunath said...

ಕೆಲವೊಮ್ಮೆ ಭಾರ ಎಂದು ಅಂದುಕೊಂಡ ಬಿಂದಿಗೆಯಲ್ಲಿ ನೀರಿಲ್ಲದೆ ಇರೋದು ಗೊತ್ತಾಗದೆ ಎತ್ತಿಕೊಂಡಾಗ ಅಚಾನಕ್ ಮೇಲೆ ಬರುತ್ತದೆ.. ನೀರಿಲ್ಲ ಎಂದು ಎತ್ತಿಕೊಂಡಾಗ ಭಾರವಾಗಿ ನಮ್ಮನ್ನು ಬಾಗಿಸುತ್ತದೆ..

ಕತೆಗಳು ತೆಗೆದುಕೊಳ್ಳುತ್ತಿರುವ ತಿರುವುಗಳು ಹೀಗೆ ಇದೆ.. ಓಹ್ ಎಲ್ಲವೂ ಆರಾಮಾಗಿ ನೆಡೆಯುತ್ತದೆ ಎಂದಾಗ ಹೇರ್ ಪಿನ್ ತಿರುವು.. ಇನ್ನೊಂದು ಘಟ್ಟ.. ಇನ್ನೊಂದು ಕಥಾ ಪ್ರಸಂಗ.. ಸ್ಥಿರೇ ಎನ್ನುವ ಹೆಸರಿಗೆ ವಿರುದ್ಧವಾಗಿ ಕಥೆ ಸ್ಥಿರವಾಗಿರದೆ ಓಡುತ್ತಿದೆ.. ಸೂಪರ್ ಚಿನ್ಮಯ್

Unknown said...

U are a good story teller sir, keep the work going on

ಚಿನ್ಮಯ ಭಟ್ said...

ಧನ್ಯವಾದಗಳು ಶ್ರೀ :)

ಚಿನ್ಮಯ ಭಟ್ said...

ಧನ್ಯವಾದಗಳು :)