Wednesday, April 17, 2019

ಭಾಗ-೧: ಅನಿರೀಕ್ಷಿತ

"ಯಾರ್ ದುಡ್ಡ್ ಜಾಸ್ತಿ ಕೊಡ್ತಾರೋ ಅಲ್ಲಿಗ್ ಹೋಗ್ತೀನಿ....ಯು ಕಾಂಟ್ ಕ್ವಶ್ಚನ್ ದಾಟ್..." ಅವಲೋಕನಾ ಖಡಕ್ ಆಗಿಯೇ ಹೇಳಿಬಿಟ್ಟಿದ್ದಳು.

"ಅಂದ್ರೆ ನಿಂಗ್ ನನ್ ಬಗ್ಗೆ ಏನೂ ಅನ್ಸದೇ ಇಲ್ವಾ?" ಶತಭಿಷ ಸೆನ್ಸಿಟಿವ್ ಅನ್ನೋದು ಅವಳಿಗೂ ಗೊತ್ತಿತ್ತು.

"ಪ್ಲೀಸ್ ಡೋಂಟ್ ಮಿಕ್ಸ್ ಪ್ರೋಫೇಷನಲ್ ಆಂಡ್ ಪರ್ಸನಲ್ ಮ್ಯಾಟರ್ಸ್...." ಆಕೆ ಆತನ ಕೈ ಹಿಡಿದು ಅದುಮಿದ್ದಳು.

"ಓ.ಕೇ...ಏನೋ...ಐ ಡೋಂಟ್ ನೌ....ವಾಟ್ ಟು ಡೂ ನೆಕ್ಸ್ಟ್..." ಶತಭಿಷ ತಲೆ ಕೆಳ ಹಾಕಿದ್ದ... ಕೈಬಿಡಿಸಿಕೊಂಡು ಮುಖ ಮುಚ್ಚಿಕೊಂಡಿದ್ದ...

"ಕಮಾನ್...ಚಿಯರ್ ಅಪ್...ಯು ನೌ ನಾನ್ ಕಾಂಟ್ರಾಕ್ಟ್ ಸೈನ್ ಮಾಡಿದೀನಿ...ಅದನ್ನಾ ಬಿಟ್ಟ್ ಬರಕ್ ಆಗಲ್ಲಾ ಅಂತಾ...." ಅವಲೋಕನಾ ಶತಭಿಷನಿಗೆ ಅರ್ಥಮಾಡಿಸುವ ಪ್ರಯತ್ನದಲ್ಲಿದ್ದಳು.

"ಸೋ...ನೀನ್ ಕಾಂಟ್ರಾಕ್ಟ್ ಇಂದ ಹೊರಗ್ ಬರಲ್ಲಾ...ವಾಟ್ ಇಫ್ ವಿ ಬೈ ಯು ಔಟ್?" ಆತ ಆಕೆಗೆ ಪ್ರಶ್ನಿಸಿದ್ದ...

"ನೌ ಯು ಆರ್ ಆಕ್ಟಿಂಗ್ ಲೈಕ್ಅ ರಿಯಲ್ ರಿಯಾಲಿಟಿ ಷೋ ಕಿಂಗ್ ಶತಭಿಷ.....ಯೋಚನೆ ಮಾಡು..." ಆಕೆ ಎಂದಿನ ಸಲಿಗೆಯಿಂದ ಭುಜ ತಟ್ಟಿದ್ದಳು. ಕಾಫಿ ಮಗ್ ಅನ್ನು ಸಿಂಕ್ನಲ್ಲಿಟ್ಟು ಹೊರಡಲು ತಯಾರಾಗುತ್ತಿದ್ದಳು.

"ಥ್ಯಾಂಕ್ಸ್ ಫಾರ್ ಕಮಿಂಗ್..." ಶತಭಿಷ ಆಕೆಯನ್ನು ಬೀಳ್ಕೊಡಲು ಬಾಗಿಲ ತನಕ ಬಂದಿದ್ದ....

"ನೀನ್ ಬಾ ಅಂತಾ ಕರದ್ರೆ ಎಲ್ಲಿಗ್ ಬೇಕಾದ್ರೂ ಬರ್ತೀನ್ ಕಣೋ..." ಆಕೆ ಕಣ್ಣಲ್ಲಿ ಕಣ್ಣಿಟ್ಟು ಹೇಳುತ್ತಾ ವ್ಯಾನಿಟಿ ಬ್ಯಾಗ್ ಹೆಗಲಿಗೇರಿಸಿದ್ದಳು...

"ಬಟ್ ನನ್ ಷೋಗ್ ಮಾತ್ರ ಬರಲ್ಲಾ ಅಲ್ಲಾ?" ಶತಭಿಷ ಛೇಡಿಸಿದ್ದ...

"ಅದ್ ಬೇರೆ ಇದ್ ಬೇರೆ...ಮಿಕ್ಸ್ ಮಾಡ್ಬೇಡಾ...ಆರೋಗ್ಯಕ್ ಒಳ್ಳೇದಲ್ಲಾ..." ಆಕೆ ಎಂದಿನ ತುಂಟತನದಲ್ಲೇ ನಕ್ಕು ಕಾರ್ ಹತ್ತಿದ್ದಳು...

ಶತಭಿಷ ತನ್ನ ಷೋ ಗತಿಯೇನು ಎಂದು ಯೋಚಿಸುತ್ತಾ, ಆಫೀಸಿಗೆ ಹೊರಡಲು ತಯಾರಾದ. ಮನೆಯಿಂದ ಆಫೀಸಿನವರೆಗೂ ಆತನಿಗೆ ಏನೇನೋ ಯೋಚನೆಗಳು. ಓಕಳಿಪುರಂ ತಲುಪುವಷ್ಟರಲ್ಲಿ ಕೊನೆಗೂ ಒಂದು ನಿರ್ಧಾರಕ್ಕೆ ಬಂದಿದ್ದ. ಆದರೆ ಅದಕ್ಕೆ ಬಾಸ್ ಒಪ್ಪಬೇಕಿತ್ತು. ಅವರನ್ನು ಒಪ್ಪಿಸುವುದು ಕಷ್ಟವಿತ್ತು.
**
"ಸಾಮ": ಶತಭಿಷ ಮೊದಲ ಅಸ್ತ್ರ ಪ್ರಯೋಗಿಸಿದ್ದ...

"ಐ ನೀಡ್ ಹರ್..."

"ನೋ...ವಿ ಕಾಂಟ್ ಅಕಮಡೇಟ್ ಹರ್..." ಬಾಸ್ ಆತನಿಗೆ ನೇರವಾಗೇ ಹೇಳಿಬಿಟ್ಟರು.

"ದಾನ": ಶತಭಿಷ ಎರಡನೇ ಅಸ್ತ್ರ ಪ್ರಯೋಗಿಸಿದ...

"ಎಲ್ಲಾ ಕಡೆ ಕಾಸ್ಟ್ ಕಟಿಂಗ್ ಮಾಡಣಾ...ಸಮ್ ಹೌ ವಿ ವಿಲ್ ಮ್ಯಾನೇಜ್..."

"ಆಲ್ ರೆಡಿ ಎಲ್ಲಾನೂ ಮಿನಿಮಲ್ ಅಲ್ಲೇ ಇದೆ... ವಿ ಕಾಂಟ್ ಸ್ಟ್ರೆಚ್ ಫರ್ದರ್...ವಿ ಕಾಂಟ್ ಬೈ ಹರ್ ಔಟ್" ಎಲ್ಲಾ ಬಾಸ್ಗಳ ಬಾಸ್ ಹಣವೇ ಆಗಿತ್ತು.

"ಭೇದ": ಶತಭಿಷ ಮೂರನೇ ಅಸ್ತ್ರ ಪ್ರಯೋಗಿಸಿದ...

"ಜನ ಒಪ್ಕೊಳಲ್ಲಾ...ಶಿ ಈಸ್ ದ ಐಕಾನ್"

"ಅದು ನಿನ್ ಚಾಲೆಂಜ್ ...ನಂಗೆ ರೇಟಿಂಗ್ ಅಷ್ಟೇ ಮುಖ್ಯ...ನಿನ್ ಜಾಬ್ ಈಸ್ ಟು ಗೆಟ್ ಇಟ್ ಡನ್..." ಜವಾಬ್ದಾರಿಯನ್ನು ಆತನ ಹೆಗಲಿಗೇ ಹಾಕಿದ್ದರು.

"ದಂಡ": ಶತಭಿಷ ಕೊನೆಯ ಅಸ್ತ್ರ ಪ್ರಯೋಗಿಸಿದ...

"ದೆನ್ ಐ ವಿಲ್ ಡ್ರಾಪ್ ಓಟ್...."

"ಐ ಡೋಂಟ್ ಹಾವ್ ಟೈಂ ಫಾರ್ ದಿಸ್ ಸ್ಟುಪಿಡ್ ಗೇಮ್...ಶತಭಿಷ..."
"ಬ್ರಿಂಗ್ ಸಮ್ವನ್ ಇನ್...ವಿ ವಿಲ್ ಶೂಟ್ ಆನ್ ಸ್ಯಾಟರ್ಡೇ...ಬೇಕಾದ್ರೆ ಇವನ್ ಸಂಡೇ..." ಚಾನೆಲ್ಲಿನ ನಾನ್ಫಿಕ್ಷನ್ ಹೆಡ್ ನೇರವಾಗಿ ಹೇಳಿದ್ದರು.

ಶತಭಿಷನ ಬತ್ತಳಿಕೆ ಖಾಲಿಯಾಗಿತ್ತು.

ಎದುರಾಡಲಾಗಲಿಲ್ಲ...

ಹೇಗಾದರೂ ಆಡಿಯಾನು? ಪಿ.ಹೆಚ್.ಡಿಅನ್ನು ಅರ್ಧಕ್ಕೇ ಬಿಟ್ಟು ಇಂಟರ್ನೆಟ್ಟಿನಲ್ಲಿ ಕತೆ ಕವನ ಬರೆಯುತ್ತಿದ್ದವನಿಗೆ ನೆಟ್ಟಗೊಂದು ಕೆಲಸ ಕೊಟ್ಟು ಅನ್ನ ಹಾಕಿದವರು ಅವರು...ಅವನಿಗೆ ಅಕ್ಕನ ಸಮಾನ ಆಕೆ. ಆ ನಾನ್ಫಿಕ್ಷನ್ ಹೆಡ್ ಅನ್ನುವುದು ಒಂದು ಡೆಸಿಗ್ನೇಷನ್ ಅಷ್ಟೆ...ಅಸಲಿಗೆ ಈತನ ಗುರು, ಮಾರ್ಗದರ್ಶಿ, ಇಂಡಸ್ಟ್ರಿಯ ಗಾಡ್ಫಾದರ್ ಎಲ್ಲ ಆಗಿದ್ದು ಆಕೆಯೇ...

"ಐ ನೌ ಯು ಕಾನ್ ಡೂ ಇಟ್...ಚೆನಾಗ್ ಮಾಡ್ತಿಯಾ ಕಣೋ" ಎಂದು ಬೆನ್ನು ತಟ್ಟಿ ಕಳಿಸಿದ್ದರು ಕ್ಯಾಬಿನ್ನಿಂದ...

ಶತಭಿಷನ ತಲೆ ಗೊಬ್ಬರವಾಗಿತ್ತು. ಒಂದೂವರೆ ತಿಂಗಳಿನಿಂದ ಮಾಡಿದ ಪ್ಲಾನಿಂಗ್ ಎಲ್ಲವೂ ತಲೆಕೆಳಗಾಗಿತ್ತು. ರಿಯಾಲಿಟಿ ಷೋ ಒಂದರ ಐದನೇ ಸೀಸನ್ನ ತಯಾರಿಯಲ್ಲಿದ್ದ ಶತಭಿಷ, ಆಂಕರ್ ಬಗ್ಗೆ ತಲೆಕೆಡಿಸಿಕೊಂಡೇ ಇರಲಿಲ್ಲ..ಅವಲೋಕನಾಳ ಜಾಗದಲ್ಲಿ ಮತ್ತೊಬ್ಬರನ್ನು ಕಲ್ಪಿಸಿಕೊಳ್ಳುವುದೂ ಸಾಧ್ಯವಿರಲಿಲ್ಲ.
****
"ಮೇಡಮ್ ಮೇಲ್ ಕಳ್ಸಿದೀನಿ..." ಅಂದು ಶತಭಿಷ ಸಣ್ಣ ಧ್ವನಿಯಲ್ಲಿ ಹೇಳಿದ್ದ.

"ಓ.ಕೆ" ಆಕೆ ಥಂಬ್ಸ್ ಅಪ್ ನೀಡಿದ್ದಳು. ಜೇ.ಬಿ.ಎಲ್ ವೈರ್ಲೆಸ್ ಹೆಡ್ಫೋನು ಆಗೀಗ ಲೈಟ್ ಮಾಡುತ್ತಿತ್ತು..

"ಮೇಡಮ್ ಕರೆಕ್ಟ್ ಇದ್ಯಾ?" ಪ್ಯಾಂಟ್ರಿಯಲ್ಲಿ ಸಿಕ್ಕಾಗ ಶತಭಿಷ ಮತ್ತೆ ನೆನಪಿಸಿದ್ದ.

"ಹಮ್...ಆಲ್ಮೋಸ್ಟ್...ಬಟ್ ಒಂದ್ ಮಿಸ್ಟೇಕ್ ಇದೆ...." ಆಕೆಯ ಮುಖ ಗಂಭೀರವಾಗಿತ್ತು. ಪಕ್ಕದಲ್ಲಿದ್ದ ಕಲೀಗ್ ನಗುವನ್ನು ತಡೆದಿಟ್ಟುಕೊಂಡಿದ್ದಳು.

"ಏನು?" ಶತಭಿಷ, ಪೆಚ್ಚಾಗಿಯೇ ಕೇಳಿದ..

"ಇಟ್ಸ್ ಅವಿ...ನಾಟ್ ಅವಲೋಕನಾ ಮೇಡಮ್..." ಆಕೆಯ ಮುಖದಲ್ಲಿ ತುಂಬುನಗೆಯಿತ್ತು. ಪಕ್ಕದಲ್ಲಿದ್ದ ಕಲೀಗ್ ಜೋರಾಗಿ ನಕ್ಕಿದ್ದಳು...

"ಅದೇನೋ ರೂಢಿ...ಹೊಸದಾಗ್ ಪರಿಚಯ ಆಗಿರದಲ್ವಾ..." ಶತಭಿಷ ತಲೆಕೆರೆದ....

"ಹಮ್...ಪರಿಚಯ ಮಾಡ್ಕೊಳ್ಳೇ ಬೇಕು..ಯಾಕಂದ್ರೆ ನೆಕ್ಸ್ಟ್ ಷೋಗೆ ನೀವೇ ಸ್ಕ್ರಿಪ್ಟ್ ಬರೀತಾ ಇರೋದು...." ಶತಭಿಷನ ಮುಖ ಅರಳಿತ್ತು
.
ಆತ ಕೆಲಸಕ್ಕೆ ಸೇರಿದಾಗಿಲಿನಿಂದ ಇಂಡಿಪೆಂಡೆಂಟ್ ಆಗಿ ಬರೆಯುವುದಕ್ಕೆ ಸಿಕ್ಕ ಮೊದಲ ಷೋ ಆಗಿತ್ತದು. ಅವಲೋಕನಾ ನಾನ್ಫಿಕ್ಷನ್ ಟೀಂನಲ್ಲಿದ್ದಳು. ಕಂಟೆಸ್ಟೆಂಟ್ಗಳ ಬಟ್ಟೆ-ಮೇಕಪ್ ಉಸ್ತುವಾರಿ ವಹಿಸಿದ್ದಳು.

ಷೋ ನಿಧಾನವಾಗಿ ಮುಂದುವರೆದಂತೆ ಇಬ್ಬರೂ ಒಳ್ಳೆಯ ಸ್ನೇಹಿತರಾದರು. ಬಹುವಚನದಿಂದ ಮಾತುಕತೆ ಏಕವಚನಕ್ಕಿಳಿಯಿತು. ಆಫೀಸಿನ ಮ್ಯಾಟರ್ಗಳ ಜೊತೆಗೆ ಪರ್ಸನಲ್ ಸಂಗತಿಗಳೂ ಕಷ್ಟ-ಸುಖ ಮಾತಾಡುವಾಗ, ಮಧ್ಯಾನ್ಹ ಊಟ ಮಾಡುವಾಗ ವಿನಿಮಯ ಆಗತೊಡಗಿದವು. ಆಕೆಗೆ ಶತಭಿಷನ ಬರವಣಿಗೆಯ ಮೇಲೆ ಅಪಾರ ವಿಶ್ವಾಸವಿತ್ತು. ಆತನಿಗೆ ಅವಲೋಕನಾಳ ಉತ್ಸಾಹ ನೋಡಿ ಹೆಮ್ಮೆ ಅನಿಸುತ್ತಿತ್ತು. ಆಕೆಯ ಪೇಷನ್ಸ್ ತನಗಾದರೂ ಇರಬಾದಿತ್ತಾ ಎಂದು ಹಲವಾರು ಬಾರಿ ಅಂದುಕೊಂಡಿದ್ದ... ಹೀಗೇ ಒಂದು ಸೀಸನ್ ಕಳೆದು ಹೋಗಿತ್ತು.
***
ಒಂದು ದಿನ ಬೆಳಿಗ್ಗೆ ಬೇಗ ಬಂದಿದ್ದ ಇಬ್ಬರೂ ಪಿ.ಸಿ.ಆರ್ನಲ್ಲಿ ಕ್ರ್ಯೂ-ಆರ್ಟಿಸ್ಟ್ಗಳಿಗೆ ಕಾದು ಕೂತಿದ್ದರು...

"ಒಂದಿನ ಡೈರೆಕ್ಟರ್ ಆಗ್ಬೇಕ್ ಕಣೇ" ಶತಭಿಷ ಮನದ ಇಂಗಿತ ತೋಡಿಕೊಂಡಿದ್ದ.

"ಆಗ್ತಿಯಾ ಬಿಡೋ....ಸ್ವಲ್ಪ ಕನೆಕ್ಷನ್ ಜಾಸ್ತಿ ಮಾಡ್ಕೋ.."

"ಹೂಂ ನೋಡಣಾ..."

"ಒಂದಿಷ್ಟ್ ಕಾನ್ಸೆಪ್ಟ್ ರೆಡಿ ಮಾಡ್ಕೋ...ಟೈಂ ನೋಡಿ ಪಿಚ್ ಮಾಡು..."

"ಹೂಂ..ಒಂದೆರಡ್ ಐಡಿಯಾ ಇದೆ ಕಣೆ...ಹೇಳ್ಳಾ?"

"ಹಮ್...ಎರಡ್ ಐಡಿಯಾನಾ?ಇವತ್ತಿಗೇ ಮುಗ್ಯತ್ತಾ?"

"ಮುಗ್ಯತ್ತೆಲೇಯ್..ಯಾಕ್ ಹಂಗ್ ಕೇಳ್ತೀಯಾ?"

"ಏನಿಲ್ಲಾ..ನೀನು ಲೆಕ್ಚರರ್ ಆಗ್ ಇದ್ದೋನಲ್ವಾ? ಕುಯ್ಯದ್ ಜಾಸ್ತಿ ಅಂತಾ..."

"ಹಂಗೆಲ್ಲಾ ಏನಿಲ್ಲಾ...ಯು ವಿಲ್ ಲವ್ ಇಟ್..."

"ಐ ಅಮ್ ಲಿಸನಿಂಗ್"

"ಒಂದು ರಿಯಾಲಿಟಿ ಷೋ...ಅಕ್ಚುಲಿ ಅ ಟ್ರಾವೆಲ್ ಷೋ...ಒಂದ್ ಟ್ವೆಂಟಿ ಎಪಿಸೋಡ್ಸ್ ಇರತ್ತೆ...ಎಲ್ಲಾ ಡಿಸ್ಟ್ರಿಕ್ಟ್ಗೂ ಹೋಗ್ತಿವೀ..ಅಲ್ಲಿ ಪ್ಲೇಸಸ್ ವಿಸಿಟ್ ಮಾಡ್ತಿವೀ.."

"ಆಮೇಲೆ?"

"ಏನಿಲ್ಲಾ ಅಷ್ಟೇ..."

"ಹೆಂಗಿದೇ?"

"ಕೇಳ್ತಾ ಇದ್ರೆನೇ ನಿದ್ದೆ ಬಂದೋಗತ್ತೆ ಕಣೋ..."

"ಗೂಬೆ...ಅದ್ ಹೇಳಿದ್ರೆ ಅರ್ಥ ಆಗಲ್ಲಾ...ಮಾಡ್ ತೋರಿಸ್ಬೇಕು.."

"ಮಾಡು...ಯಾರ್ ಬೇಡ ಅಂದ್ರು..."

"ಮಾಡ್ತಿನಿ...ಡೆಫಿನೇಟ್ಲೀ..."
"ಹಮ್..."

"ನಿಂಗ್ ಏನಾಗ್ಬೇಕು ಅಂತಾ?"

"ಏನಿಲ್ಲ ಕಣೋ...ಐ ಆಮ್ ಹ್ಯಾಪಿ ವೇರ್ ಐ ಆಮ್..."

"ಕಮ್ ಆನ್...ಏನಾದ್ರೂ ಬೇಕು ಅನ್ಸತ್ತೆ...ಏನ್ ಬೇಕು ನಿಂಗೆ?"

"ಹಮ್...ನಂಗ್ ಒಂದ್ ದಿನದ್ ಮಟ್ಟಿಗಾದ್ರೂ ಆಂಕರ್ ಆಗ್ಬೇಕ್ ಕಣೋ"

"ಓಹ್. ನೈಸ್..ಅದೇನ್ ಹಂಗೆ?"

"ಬರೀ ಬೇರೆಯವ್ರ್ಗೆ ಡ್ರೆಸ್ ಸೆಲೆಕ್ಟ್ ಮಾಡೋದೇ ಆಗೋಯ್ತು...ನಂಗೂ ಬಿಟ್ಟಿಯಾಗಿ ಡ್ರೆಸ್ ಹಾಕ್ಕೊಬೇಕು..ಪುಕ್ಸಟ್ಟೇ ಮೇಕಪ್ ಮಾಡಸ್ಕೋಬೇಕು...." ಮಾತು ಮುಗಿಸುವುದೊರಳಾಗಿ ಆಕೆಯೇ ಜೋರಾಗಿ ನಗುತ್ತಿದ್ದಳು...

ಶತಭಿಷ ಸುಮ್ಮನೇ ಹಲ್ಲು ಕಿಸಿದ.

ಅಷ್ಟರಲ್ಲೇ ಆಕೆಯ ವಾಕಿ-ಟಾಕಿ ಸದ್ದು ಮಾಡಿತು
"ಅವಿ ಕಮಿನ್ ಅವಿ..."
"ಗೋ ಫಾರ್ ಅವಿ"
"ಕಾಸ್ಟ್ಯೂಮ್ ಎಲ್ಲಾ ರೆಡಿ ನಾ?"
"ರೆಡಿ ಆಗ್ತಿದಾರೆ.."
"ಫಾಲೋ ಅಪ್ ಮಾಡಿ...ಐ ವಾಂಟ್ ದೆಮ್ ಆನ್ ದ ಫ್ಲೋರ್ ವಿದಿನ್ ಫಿಫ್ಟೀನ್ "
"ಕಾಪಿ ಕಾಪಿ"
"ಬಾಯ್ ಕಣೋ..." ಎಂದು ಕಿರುನಗೆಯೊಂದಿಗೆ ಪಿ.ಸಿ.ಆರ್ ಬಿಟ್ಟು ಹೊರಟಿದ್ದಳು ಅವಲೋಕನಾ...
***
ಮುಂದಿನ ಸೀಸನ್ಗಳಲ್ಲೂ ಇಬ್ಬರೂ ಒಟ್ಟಿಗೆ ಕೆಲಸ ಮಾಡಬೇಕಾಗಿ ಬಂತು. ಆಗ ಆತನೇ ಪೂರ್ತಿ ಕಂಟೆಂಟ್ ಕೆಲಸ ನೋಡಿಕೊಳ್ಳುತ್ತಿದ್ದ. ಟಾಕ್ಬ್ಯಾಕ್ ಕೂಡ ಆತನೇ ನೀಡುತ್ತಿದ್ದ. ಆಕೆ ಕಂಟೆಸ್ಟೆಂಟ್ಗಳ ಪೂರ್ತಿ ಉಸ್ತುವಾರಿ ವಹಿಸಿದ್ದಳು. ಜಡ್ಜ್ಗಳನ್ನೂ ನೋಡಿಕೊಳ್ಳುವ ಜವಾಬ್ದಾರಿಯನ್ನು ಆಕೆಗೆ ವಹಿಸಲಾಗಿತ್ತು. ಇಬ್ಬರ ಕೆಲಸವೂ ಚೆನ್ನಾಗಿಯೇ ಸಾಗುತ್ತಿತ್ತು. ದುರದೃಷ್ಟವಶಾತ್ ಆ ಬಾರಿಯ ಷೋನ ರೇಟಿಂಗು ಪಾತಾಳಕ್ಕಿಳಿಯಿತು. ಆಂಕರ್ ಬದಲಾಯಿಸಿ ಎಂಬುದು ಸೋಷಿಯಲ್ ಮೀಡಿಯಾದಲ್ಲಿ ಎದ್ದು ಕಾಣಿಸುತ್ತಿದ್ದ ಕಮೆಂಟ್ ಆಗಿತ್ತು. ಡೈರೆಕ್ಷನ್ ಟೀಂ ಪರ್ಯಾಯ ವ್ಯವಸ್ಥೆಯ ಬಗ್ಗೆ ಆಲೋಚಿಸುತ್ತಿತ್ತು.

ಅವತ್ತು ಶತಭಿಷ ಪಿ.ಸಿ.ಆರ್ನಲ್ಲಿ ಕೂತು ಎಲ್.ಇ.ಡಿ ಲೈಟಿನಲ್ಲಿ ಸ್ಕ್ರಿಪ್ಟಿಗೆ ಫೈನಲ್ ಟಚ್ ಕೊಡುತ್ತಲಿದ್ದ. ಪಕ್ಕದಲ್ಲೇ ಡೈರೆಕ್ಟರ್ ಕುಳಿತಿದ್ದರು.

"ಯಾರ್ನಾದ್ರೂ ಸ್ಕಿನ್ ಟೆಸ್ಟ್ ಗೆ ಕಳ್ಸಿ" ಎಂದು ಪಕ್ಕದಲ್ಲೇ ಇದ್ದ ಡಿ.ಓ.ಪಿ ಅಸಿಸ್ಟಂಟ್ ವಿನಂತಿಸಿದ.

ಅಷ್ಟರಲ್ಲೇ ಡೈರೆಕ್ಟರ್ಗೆ ಕಾಲ್ ಬರಲಾಗಿ ಶತಭಿಷನ ಭುಜ ತಟ್ಟಿ ಡಿ.ಓ.ಪಿ ಅಸಿಸ್ಟಂಟ್ ಕಡೆ ತೋರಿಸಿ ಅವರು ಎದ್ದು ಹೋದರು. ಶತಭಿಷ ಫ್ಲೋರ್ ಮ್ಯಾನೇಜರ್ಗೆ ಪೇಜ್ ಮಾಡಿದ. ಆತ ಬ್ಯುಸಿ ಇರುವುದಾಗಿ ತಿಳಿಯಿತು.

ಅವಲೋಕನಾಳಿಗೆ ಪೇಜ್ ಮಾಡಿದ.
"ಇಲ್ ಯಾರೂ ಇಲ್ಲ..ನಾನ್ ಒಬ್ಳೇ ಇರೋದು" ಆಕೆ ವಾಪಸ್ ಪೇಜ್ ಮಾಡಿದ್ದಳು.

ಡಿ.ಓ.ಪಿ ಅಸಿಸ್ಟಂಟ್ ಮತ್ತು ಶತಭಿಷ ಮುಖ-ಮುಖ ನೋಡಿಕೊಂಡರು.

ಡಿ.ಓ.ಪಿ ಅಸಿಸ್ಟಂಟ್ ಬೇಗ ಕೆಲಸ ಮುಗಿಸುವಂತೆ ಮುಖ ಸಣ್ಣಗೆ ಮಾಡಿದ.

"ಸರಿ ನೀನೇ ಬರಕಾಗತ್ತಾ ಒಂದ್ ನಿಮ್ಷಾ?" ಶತಭಿಷ ಅಂಜುತ್ತಲೇ ವಿನಂತಿಸಿದ.

"ಏಯ್... ಆಗಲ್ಲಾ ಕಣೋ....ಬೇರೆ ಯಾರೂ ಇಲ್ವಾ?" ಆಕೆಗೆ ಅಷ್ಟೇನೂ ಇಷ್ಟವಿರಲಿಲ್ಲ...

"ಯಾರೂ ಕಾಣ್ತಿಲ್ಲಾ...ಪ್ಲೀಸ್ ಪ್ಲೀಸ್ ಪ್ಲೀಸ್...ಪ್ಯಾಕಪ್ ಆದ್ಮೇಲೆ ಐಸ್ ಕ್ರೀಮ್ ಪಕ್ಕಾ..." ಆತ ಪೂಸಿಹೊಡೆಯುತ್ತಿದ್ದ...

"ಓ.ಕೆ ಓ.ಕೆ... ಟೂ ಮಿನಿಟ್ಸ್..." ಆಕೆ ಕಂಟೆಸ್ಟಂಟ್ಗಳ ಜವಾಬ್ದಾರಿಯನ್ನು ಇಂಟರ್ನ್ ಒಬ್ಬನಿಗೆ ವಹಿಸಿ ಸ್ಟೇಜು ಹತ್ತಿದಳು.

ಡಿ.ಓ.ಪಿ ಅಸಿಸ್ಟಂಟ್ ಕಲರ್ ಕರೆಕ್ಷನ್, ಫೋಕಸ್ಗಳ ಬಗ್ಗೆ ಗಮನ ಹರಿಸಿದ್ದ. ಕನ್ನಡ-ತಮಿಳು-ಹಿಂದಿಯಲ್ಲಿ ಕ್ಯಾಮರಾಮ್ಯಾನ್ಗಳಿಗೆ ಸೂಚನೆಗಳನ್ನು ಕೊಡುತ್ತಿದ್ದ. ಎಲ್ಲ ಸರಿ ಇದೆ ಎಂದು ಖಾತ್ರಿಯಾದಮೇಲೆ ಆತ "ಓ.ಕೆ ಮೇಡಮ್" ಎನ್ನುತ್ತಿದ್ದ..."ಆ ಕಡೆ ನೋಡಿ ಮೇಡಮ್..ಅಲ್ ನಿಲ್ಲಿ ಮೇಡಮ್" ಎಂದು ಹೇಳುತ್ತಲೇ ಇದ್ದ.
ಅಷ್ಟರಲ್ಲಿ ಡೈರೆಕ್ಟರ್ ತಮ್ಮ ಸೀಟಿಗೆ ಬಂದು ಕೂತರು. ಶತಭಿಷ ಸ್ಕ್ರಿಪ್ಟಿಗೆ ಫೈನಲ್ ಟಚ್ ಕೊಡುವುದನ್ನು ಮುಂದುವರೆಸಿದ.

ಇದ್ದಕ್ಕಿದ್ದಂತೇ ಡೈರೆಕ್ಟರು ಅವಲೋಕನಾಳಿಗೆ ಟಾಕ್ಬ್ಯಾಕ್ ಇಯರ್ಫೋನ್ ತೊಡಿಸುವಂತೆ ಹೇಳಿದರು. ಶತಭಿಷನಿಗೆ ಸ್ಟಾರ್ಟಿಂಗ್ ಲೈನ್ ಓದು ಎಂದಿದ್ದರು. ಶತಭಿಷ ಮತ್ತು ಅವಲೋಕನಾ ಇಬ್ಬರೂ ಇದಕ್ಕೆ ತಯಾರಾಗಿರಲಿಲ್ಲ. ಶತಭಿಷ ಎನ್ ಹೇಳ್ಳಿ ಎನ್ನುವಂತೆ ಡೈರೆಕ್ಟರ್ಗೆ ಕೇಳಲಾಗಿ, ಓಪನಿಂಗ್ ಲೈನ್ಸ್ ಎಂದಿದ್ದರು. ಅವಲೋಕನಾ ಅದುವರೆಗೆ ಆಂಕರ್ಗಳ ಜೊತೆ ರನ್ ಆರ್ಡರ್ ಬಗ್ಗೆ ಡಿಸ್ಕಸ್ ಮಾಡಿದ್ದಳೇ ಹೊರತು ಸ್ಕ್ರಿಪ್ಟ್ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಆಂಕರಿಂಗ್ ಅಂತೂ ದೂರದ ಮಾತು.
ಶುರುಶುರುವಿನಲ್ಲಿ ಸ್ವಲ್ಪ ತಡವರಿಸಿದಳಾದರೂ, ಒಂದೆರೆಡು ಟೇಕ್ಗಳ ನಂತರ ಆಕೆಗೆ ಕಾನ್ಫಿಡೆನ್ಸ್ ಬಂತು. ಕೊನೆಗೊಮ್ಮೆ ಪೂರ್ತಿ ಲೈನ್ಅನ್ನು ಸರಿಯಾಗೇ ಹೇಳಿದಳು.

"ಏನಾದ್ರೂ ಇನ್ಫಾರ್ಮಲ್ ಆಗಿ ಪ್ರಾಂಪ್ಟ್ ಮಾಡಿ" ಎಂದಾಗ ಶತಭಿಷ ಅರ್ಜಂಟಿನಲ್ಲಿ ಏನೋ ಹೇಳಿದ್ದನ್ನು ಇಂಪ್ರವೈಸ್ ಮಾಡಿ ತಾನೇ ಪಿಕಪ್ ಮಾಡಿಕೊಂಡು ಮಾತು ಮುಂದುವರೆಸಿದಳು...

ಶತಭಿಷನಿಗೆ ಆಶ್ವರ್ಯವೋ ಆಶ್ವರ್ಯ...ತಾನೇ ಸರಿಯಾಗಿ ಪ್ರಾಂಪ್ಟ್ ಮಾಡಲಿಲ್ಲವೇನೋ ಎಂಬ ಅಪರಾಧಿಭಾವವೂ ಕಾಡಿತು.
"ಓ.ಕೆ ವೆಲ್ ಡನ್ ಅವಿ. ಮಾತಾಡಣಾ ಮತ್ತೆ..." ಡೈರೆಕ್ಟರ್ ಶಭಾಸ್ಗಿರಿ ಕೊಟ್ಟು, ರೋಲ್ಗೆ ತಯಾರಾಗತೊಡಗಿದರು.

ಸೆಟ್ಟಿನಲ್ಲೇನೋ ಹೊಸ ಗುಲ್ಲೆದ್ದಿತು. ಅವಲೋಕನಾಳಿಗೆ ವಿಶೇಷ ಮರ್ಯಾದಿ ಸಿಗಲಾರಂಭಿಸಿತು. ಅಲ್ಲಿಯವರೆಗೆ ಅಷ್ಟೇನೂ ಮಾತಾಡಿಸದಿದ್ದ ಪ್ರೊಡಕ್ಷನ್ ಮ್ಯಾನೇಜರ್ಗಳೂ ಚೇರ್ ತರಿಸತೊಡಗಿದರು.

ಅಂದಿನ ಶೂಟಿಂಗ್ ಶತಭಿಷ ಮತ್ತು ಅವಲೋಕನಾರ ಪಾಲಿಗೆ ವಿಶೇಷವಾಗಿತ್ತು.

ಆ ಸಂಜೆಯೂ ಕೂಡಾ!

(ಮುಂದುವರೆಯುವುದು)

-ಚಿನ್ಮಯ
17/4/2019

No comments: