Saturday, November 2, 2013

ನಾಳೆ ದೀಪಾವಳಿ...



ನಮಸ್ಕಾರ ಎಲ್ರಿಗೂ...ರಾಜ್ಯೋತ್ಸವ ಹಾಗೂ  ದೀಪಾವಳಿಯ  ಶುಭಾಷಯಗಳು..
ನಿನ್ನೆ ರಾತ್ರಿ ಬರೆದ ಸಾಲುಗಳಿವು....ಕವನ ಅನ್ನಬೇಕೋ ಬಿಡ್ಬೇಕೋ ಗೊತ್ತಾಗ್ತಾ ಇಲ್ಲ...
ಸುಮಾರು ದಿನದಿಂದ ಒಂದೆರಡು ಅರ್ಧಮರ್ಧ ಕವನಗಳನ್ನು ಪೂರ್ತಿಮಾಡಲಾಗದೇ ಹೆಣಗಾಡುತ್ತಿದ್ದೆ....
ಇರ್ಲಿ, ಬರ್ಯಕ್ ಅಂತೂ ಆಗ್ತಿಲ್ಲಾ ಇನ್ನೇನು ಮಾಡದು ಎಂ.ಇ ಮಾಡ್ತಾ ಇರೋದಾದ್ರೂ ಸಾರ್ಥಕವಾಗ್ಲಿ ಅಂದ್ಕೊಂಡು Digital Image Processing ಪುಸ್ತಕ ಹಿಡಿದುಕೊಂಡಿದ್ದೆ..ಅದರಲ್ಲಿರುವುದು ಅರ್ಥವಾಗದೇ ಆ ಕಡೆ ಈ ಕಡೆ ಓಡಾಡಿಕೊಂಡಿದ್ದೆ..ಟೆರೇಸಿನ ಮೇಲೆ ಹೋದವನಿಗೆ  ನನ್ನ ರೂಮಿನ ಮುಂದಿನ  ಮನೆಯ ಸಾಲಿನಲ್ಲಿ ದೂರದಲ್ಲಿ  ಒಬ್ಬಳು ಹುಡುಗಿ ರಾತ್ರಿ ರಂಗೋಲಿ ಹಾಕುತ್ತಿರುವುದನ್ನಾ ನೋಡಿದೆ...ನಂಗೆ ಇದು ಹೊಸಾದು ಅನಿಸ್ತು...ನಮ್ಮನೆಲಿ ಎಲ್ಲಾ ಸಾಧಾರಣ ಬೆಳಿಗ್ಗೆ ಹೊತ್ತೇ ಹಾಕದು...
ಇನ್ನೇನು ವಯಸ್ಸಿನ ತಪ್ಪಿರ್ಬೇಕು ಒಂದೆರಡು ಸಾಲು ಮೂಡಿತು...
ಕೆಳಗೆ ಬಂದು ಬರೆಯುತ್ತಾ ಹೋದೆ...ಉಳಿದದ್ದು ನಿಮ್ಮ ಮುಂದಿದೆ...
ಎಂದಿನಂತೆ ಓದಿ,ಅನಿಸಿಕೆ ತಿಳಿಸಿ :) ...ಬೆಳೆಯಲು ಸಹಕರಿಸಿ...






ನಾಳೆ ದೀಪಾವಳಿ,ನನ್ನವಳಿಂದು ರಂಗವಲ್ಲಿಯಿಕ್ಕುತ್ತಿದ್ದಾಳೆ..
ತೊಳೆದ ಹಾದಿಯೊಳು,ತಿಳಿಯದ ಒಗಟಿನ ಚುಕ್ಕಿಯಿಕ್ಕುತ್ತಿದ್ದಾಳೆ


ದಿನವೂ ನಾವಿಬ್ಬರು  ಓಡಾಡುವ ಹಾದಿಯದು
ಅವಳೇ ಮುಂದೆ ಎಂದಿಗೂ,ನಾ ಬೇಗ ಬಂದಿದ್ದರೂ
ಮುನಿಸಿನ ಕೋಳಿಜುಟ್ಟದಲೆ ಕರೆಯುವಳು ಎನ್ನ
ಬಹುಳದ ಬಳಿಕದ ಬೆಳಕಿನಂತೆ,ನಾ ಅಲ್ಲೆ ಎಲ್ಲೋ ನಿಂತಿದ್ದರೂ


ಓಡಾಟದ ಒಡನಾಟದಿ ಗೌಜಿಲ್ಲ,ನಂಬರವಿಲ್ಲ
ಬರಿಭರವಸೆಯ ಮೌನದಿ ನಡೆದ  ಮೈಲಿಮೈಲಿ ದೂರ,ಅರ್ಧಫರ್ಲಾಂಗಿನಂತಿದೆ
ಚಡಪಡಿಕೆಯ ಬಂಡಿಯೊಳು ಹೊಯ್ದಾಡಿದ ಛಂದದ ಬಿಸಿನೆನಪು
ಇಂದು ಅವಳುಟ್ಟ ನಿಗಿನಿಗಿ  ನವಿಲುಗರಿ ರೇಷಿಮೆಯಲಂಗದಂತಿದೆ


ಕಾಯಿಹುಳಿಯದು ಮಾಗಿ ಹಣ್ಣಸವಿಯುಕ್ಕುವ ಪರ್ವದಿ
ಎದೆಯೊಳು ಅಸೆಅಂಬಿಕ್ಕಿ ಕುಕ್ಕುತಿಹ ಹೆಜ್ಜೇನ ಪಡೆಯಿತ್ತು
ದುಂಡಗಿನ ಮೂರು ಪದಗಳ ಬಾಲತಿರುವಿ ಕೆಂಪಟವ ಬೀಸಲು
ಆ ಸ್ನೇಹ ಸಂತ್ರಸ್ತರ ದಾವೆಯಂಜಿಕೆಯ ತಡೆಯಿತ್ತು


ಮೂರುಕಾಲಿನ ಮೇಜು ಹರಕು ಚಾಪೆಯ ಬದುಕು
ಸಾಕೆನಿಸಿ ಕಡೆಗೆ ತೆರೆದೆ ನಾ ಕನವರಿಕೆಯ ಕದಗಳನು
ದಾರಸೂಜಿಯ ತೆರದಿ ಹೊಲಿಯಬಯಸುವೆ ನಾಳೆಯ
ನೂಕು ಬೇಗ ಕಿವಿಯೊಳು ನೀ,ಹಸಿನಾಚಿಕೆ ಪದಗಳನು


ನಾಳೆ ದೀಪಾವಳಿ,ನನ್ನವಳಿಂದು ರಂಗವಲ್ಲಿಯಿಕ್ಕುತ್ತಿದ್ದಾಳೆ..
ತೊಳೆದ ಹಾದಿಯೊಳು,ತಿಳಿಯದ ಒಗಟಿನ ಚುಕ್ಕಿಯಿಕ್ಕುತ್ತಿದ್ದಾಳೆ

-----------------------------------------------------------------------------------------------------------
ಶಬ್ದಾರ್ಥ :ಬಹುಳ=ಕೃಷ್ಣ ಪಕ್ಷ,ಗೌಜು=ಗದ್ದಲ,ನಂಬರ=ಜಗಳ
 

ಮತ್ತೊಮ್ಮೆ ಕವನ ವಾಚಿಸುವ ಪುಟ್ಟ ಪ್ರಯತ್ನ...ಸಮಯ ಮಾಡಿಕೊಂಡು  ಅದನ್ನೂ ಕೇಳಿ :) ನಿಮ್ಮ ಅನಿಸಿಕೆನೂ ದಯವಿಟ್ಟು ಹೇಳಿ :)
ನಮಸ್ತೆ :)





 

18 comments:

Divya Anjanappa said...

ಮೂರುಕಾಲಿನ ಮೇಜು ಹರಕು ಚಾಪೆಯ ಬದುಕು
ಸಾಕೆನಿಸಿ ಕಡೆಗೆ ತೆರೆದೆ ನಾ ಕನವರಿಕೆಯ ಕದಗಳನು
ದಾರಸೂಜಿಯ ತೆರದಿ ಹೊಲಿಯಬಯಸುವೆ ನಾಳೆಯ

ಇಷ್ಟವಾಯಿತು ಸಾಲುಗಳು :-)

sunaath said...

ಕವನವನ್ನು ಓದಿ ಹಾಗು ಕೇಳಿ ಖುಶಿಯಾಯಿತು.

ಕನಸು ಕಂಗಳ ಹುಡುಗ said...

ತೊಳೆದ ಹಾದಿಯೊಳು,ತಿಳಿಯದ ಒಗಟಿನ ಚುಕ್ಕಿಯಿಕ್ಕುತ್ತಿದ್ದಾಳೆ

ಮೂರುಕಾಲಿನ ಮೇಜು ಹರಕು ಚಾಪೆಯ ಬದುಕು
ಸಾಕೆನಿಸಿ ಕಡೆಗೆ ತೆರೆದೆ ನಾ ಕನವರಿಕೆಯ ಕದಗಳನು
ದಾರಸೂಜಿಯ ತೆರದಿ ಹೊಲಿಯಬಯಸುವೆ ನಾಳೆಯ

ಇಷ್ಟವಾಯಿತು ಸಾಲುಗಳು....
ಚಂದದ ಕವಿತೆ....

akshaya kanthabailu said...

ಇತ್ತೀಚೆಗೆ ನಿನ್ನ ಕವಿತೆಯ ಸಾಲುಗಳ ಓದುಲೆ ಅರ್ಥಮಾಡಿಗೊಂಬಲೆ ಬಾರಿ ಕಷ್ಟ ಆಗುತ್ತು ಮಾರಾಯಾ ಹ ಹ ಹ ಚಂದ ಬರದ್ದೆ

ಚಿನ್ಮಯ ಭಟ್ said...

ದಿವ್ಯಾ ಮೇಡಮ್..
ಸ್ವಾಗತ ನಮ್ಮನೆಗೆ :)
ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ :)
ಬರ್ತಿರಿ ..
ನಮಸ್ಕಾರ :)

ಚಿನ್ಮಯ ಭಟ್ said...

ಧನ್ಯವಾದ ಸುನಾಥ ಕಾಕಾ :)

ಚಿನ್ಮಯ ಭಟ್ said...

ಧನ್ಯವಾದ :) :)
ಬರ್ತಿರಿ :) )

ಚಿನ್ಮಯ ಭಟ್ said...

ಅಕ್ಷಯಾ...
ಹಾ ಹಾ...ಸುಮ್ನೆ ಬರ್ದಿದ್ದಪ್ಪಾ ಇದು :D..
ಧನ್ಯವಾದ :)
ಬರ್ತಾ ಇರು :)

ಮನಸ್ವಿ said...

ಎದೆಯೊಳು ಅಸೆಅಂಬಿಕ್ಕಿ ಕುಕ್ಕುತಿಹ ಹೆಜ್ಜೇನ ಪಡೆಯಿತ್ತು
ದುಂಡಗಿನ ಮೂರು ಪದಗಳ ಬಾಲತಿರುವಿ ಕೆಂಪಟವ ಬೀಸಲು
ಆ ಸ್ನೇಹ ಸಂತ್ರಸ್ತರ ದಾವೆಯಂಜಿಕೆಯ ತಡೆಯಿತ್ತು


ಮೂರುಕಾಲಿನ ಮೇಜು ಹರಕು ಚಾಪೆಯ ಬದುಕು
ಸಾಕೆನಿಸಿ ಕಡೆಗೆ ತೆರೆದೆ ನಾ ಕನವರಿಕೆಯ ಕದಗಳನು

ಇಷ್ಟವಾದ ಸಾಲುಗಳು

8 ಘಂಟೆ ಮೇಲೆ ಏಳ ಹೆಂಗಸರೆಲ್ಲಾ ಪೇಟೆಲಿ ರಾತ್ರಿನೆ ಮನೆ ಎದ್ರಿಗೆ ನೀರು ಹಾಕಿ ರಂಗೋಲಿ ಬಿಡ್ತ!

ಚಿನ್ಮಯ ಭಟ್ said...

ಮನಸ್ವಿ ,
ಸ್ವಾಗತ ಅಣ್ಣಾ ಮತ್ತೊಂದ್ ಸಲಾ ...
ನಿಮ್ಮ ಬ್ಲಾಗುಗಳನ್ನೆಲ್ಲಾ ಓದ್ತಾ ಬ್ಲಾಗ್ ಬರೆಯಲು ಕಲ್ತಿದ್ದು ನಾನು...
ಖುಷಿ ಆಯ್ತು ನಿಮ್ಮ ಕಮೆಂಟು ನೋಡಿ....
ಹಾಂ ಅದೇ ನಂಗೂ ಆಶ್ವರ್ಯ ಕಂಡಿದ್ದು ರಾತ್ರಿ ಹೊತ್ತಿನಲ್ಲಿ ರಂಗೋಲಿ ಹಾಕ್ತಾ ಇದ್ವಲಿ ಹೇಳಿ...
ಇರ್ಲಿ ನಮ್ ಹಳ್ಳಿ ಕಡೆ ಇಲ್ದೇ ಇರ ಬೀದಿ ದೀಪ ಇಲ್ಲಿರದಕ್ಕೋ ಏನೋ....

ಬರ್ತಾ ಇರಿ ಅಣ್ಣಾ...
ನಮಸ್ತೆ :)

Shruthi B S said...

ತಡವಾಗಿ ಪ್ರತಿಕ್ರಿಯೆ ನೀಡುತ್ತಿದ್ದೇನೆ ಚಿನ್ಮಯ್.. ಕ್ಷಮಿಸು... ಕವನ ಬಹಳ ಚನ್ನಾಗಿದೆ. ಎಲ್ಲರಿಗೂ ಇಷ್ಟವಾದ ಸಾಲುಗಳೇ ನನಗೂ ಬಹಳ ಹಿಡಿಸಿದ್ದು...ಮೂರು ಕಾಲಿನ ಹರಕು ಚಾಪೆಯ ಬದುಕು.... ಹೀಗೆ ಬರೀತ ಇರು :)

ಚಿನ್ಮಯ ಭಟ್ said...

ಧನ್ಯವಾದನೆ ಶೃತಿ :)

Srikanth Manjunath said...

ರಸ್ತೆಯಲ್ಲಿ ಇಡುವ ರಂಗೋಲಿ ಹೀಗೆ ಕಾಡಿದ ಪರಿ ಸೊಗಸಾಗಿದೆ. ಮನದ ಅಂಗಳದಲ್ಲಿ ಇದುವ ರಂಗೋಲಿಯ ಒಡತಿ ಬಂದಾಗ ಇನ್ನು ಸೊಗಸಾದ ಪದಗಳ ಸಾಲು ಅಚ್ಚಾಗುತ್ತದೆ. ಸೂಪರ್ ಚಿನ್ಮಯ್..

ಚಿನ್ಮಯ ಭಟ್ said...

ಧನ್ಯವಾದ ಶ್ರೀಕಾಂತಣ್ಣಾ :)

ಕನಸು said...

ಮೂರುಕಾಲಿನ ಮೇಜು ಹರಕು ಚಾಪೆಯ ಬದುಕು
ಸಾಕೆನಿಸಿ ಕಡೆಗೆ ತೆರೆದೆ ನಾ ಕನವರಿಕೆಯ ಕದಗಳನು
ದಾರಸೂಜಿಯ ತೆರದಿ ಹೊಲಿಯಬಯಸುವೆ ನಾಳೆಯ ಈ ಸಾಲುಗಳು ತುಂಭಾ ಇಷ್ಟವಾದವು

ಚಿನ್ಮಯ ಭಟ್ said...

ಧನ್ಯವಾದ ಕನಸು :) )

ಪದ್ಮಾ ಭಟ್ said...

ದಿನವೂ ನಾವು ಓಡಾಡುವ ಹಾದಿಯದು ಅವಳೇ ಮುಂದೆ
ನಾ ಬೇಗ ಬಂದಿದ್ದರೂ
ಎಷ್ಟು ಚಂದದ ಸಾಲು :)
ಎಲ್ಲ ಸಾಲುಗಳೂ ತುಂಬಾ ಇಷ್ಟವಾಯ್ತು

ಚಿನ್ಮಯ ಭಟ್ said...

ಪದ್ಮಾ...ಧನ್ಯವಾದನೇ :)