ಆಗಷ್ಟೇ ಪಿ.ಯು ಮುಗಿಸಿ ಬಿ.ಇ ಗೆ ಸೇರಿದ್ದೇನೆಂಬ ಖುಷಿಯ ಜೊತೆಗೆ ,ಉಳಿದ ಮಗಾ-ಮಚ್ಚಿಗಳಿಗಿಂತ ತಾನು ಸ್ಟಾಂಡರ್ಡ್ ಕೋರ್ಸ್ ಆದ ಇಂಜಿನೀರಿಂಗ್ ಮಾಡುತ್ತಿದ್ದೇನೆ ಎಂಬ ಗರ್ವ ಅವನನ್ನು ಪುಟಿಯುವ ಚೆಂಡಿನಂತಾಗಿಸಿತ್ತು. ಚಿಕ್ಕ ವಿಷಯಕ್ಕೂ ಒಮ್ಮೆ ಆ ಕಡೆ ,ಒಮ್ಮೆ ಈ ಕಡೆ ಬೇಕಾಬಿಟ್ಟಿಯಾಗಿ ಕುಣಿದಾಡ ಹತ್ತಿತು.ಇದರ ಜೊತೆಗಾಗಲೇ ಹಾಸ್ಟೇಲಿನಲ್ಲಿ ಮಂಗಾಟಗಳೂ ಆಗಷ್ಟೇ ರಂಗೇರತೊಡಗಿದ್ದವು . ಅಲ್ಲಿಯ ತನಕ ಅಮ್ಮನ ಕಾಫಿಯನ್ನಷ್ಟೇ ಕುಡಿಯುತ್ತಿದ್ದ ಅವನ ಕೈ,"ಅವನಮ್ಮನ್ ......" ಎಂದೆನ್ನುತ್ತಾ ತೀರ್ಥದ ಬಾಟಲಿಯನ್ನೇರಿಸತೊಡಗಿತ್ತು. ಬರಬರುತ್ತಾ ತುಂಬಿರುತ್ತಿದ್ದ ಪಾಕೀಟೂ ಖಾಲಿಯಾಗತೊಡಗಿತ್ತು,ಖಾಲಿಯಿದ್ದ ಸಾಲದ ಲೀಸ್ಟು ತುಂಬತೊಡಗಿತ್ತು.
ಅಷ್ತೊತ್ತಿಗಾಗಲೇ ಹಾಸ್ಟೇಲಿಗೆ ಹೊರಗಿನಿಂದ ಬಂದ ಕೆಲವು ಹಿರಿತಲೆಗಳ ಆಶೀರ್ವಚನ ಕಿವಿಗೆ ಬಿತ್ತು ," ಬಿಡೋ ಮಚ್ಚಾ ,ಜಗತ್ ನಲ್ಲಿ ಇಲ್ಲಿ ತನ್ಕಾ ಯಾವ್ ಅಪ್ಪಾನೂ ಎಣ್ಣೆ ಹೊಡಿಬೇಕು ಅಂದ್ರೆ ದುಡ್ ಕೊಡಲ್ಲ.ಅದ್ಕೆಲ್ಲಾ ನಾವೇ ಅಡ್ಜಸ್ಟ್ ಮಾಡ್ಕೋಬೇಕು ,ಒಂದ್ ಕೆಲ್ಸಾ ಮಾಡೋ..... ನಮ್ ರೂಮ್ ಕಡೆನೇ ಬಂದ್ ಬಿಡು.ಅಲ್ಲಿ ಜಸ್ಟ್ ಒಂದ್ ಸಾವ್ರಕ್ಕೆ ಊಟಾ- ತಿಂಡೀ ಖರ್ಚು ಮುಗ್ಯತ್ತೆ . ಇಲ್ಲಿ ಕೊಡೋ ಎರಡು ವರೆ ಸಾವಿರದಲ್ಲಿ ,ಒಂದುವರೆ ಉಳಿಯತ್ತೆ,ಅಷ್ಟರಲ್ಲಿ ಜಿಂದಗೀ ಜಿಂಗಾಲಾಲ್ ಮಾಡ್ ಬೋದು, ಬಾ.. ವಿ ಆರ್ ಇಂಜಿನಿಯರಿಂಗ್ ಸ್ಟುಡೆಂಟ್ಸ್ ಮ್ಯಾನ್ ,ತಲೆ ಓಡ್ಸ್ ಬೇಕು " ಎಂದ.
ಇನ್ನೇನು ,ಮೈ ತುಂಬಾ ಐ.ಪಿ.ಎಲ್ ಮ್ಯಾಚುಗಳಿಂದ ಆದ ಸಾಲ ತೀರಿಸಲಾದರೂ ಬಿಡಿಗಾಸು ಬೇಕಿತ್ತು,ಅದ್ ಹೆಂಗೋ ಹಾಸ್ಟೇಲಿನವರನ್ನು ಸೆಟ್ಲ್ ಮಾಡಿ,ಯಾವುದೋ ರೂಮಿಗೆ ಹೋದ.ಅಂತೂ ಇಂತೂ ರಾತ್ರಿ ೩ ಗಂಟೆಗೆ ಮಲಗಿ ,ಬೆಳಿಗ್ಗೆ ೧೧ ಕ್ಕೆ ಎದ್ದು ಜೀವನ ಸಾಗುತ್ತಿದ್ದಾಗ ಅಮ್ಮನಿಗೆ ವಿಷಯ ಗೊತ್ತಾಗಿತ್ತು.
" ಅಮ್ಮಾ ,ಆ ಹಾಸ್ಟೇಲಿನಲ್ಲಿ ನನ್ನ ರೂಮಿನಲ್ಲಿ ನಾನ್ ಒಬ್ನೇ ಜೂನಿಯರ್ ,ರ್ಯಾಗಿಂಗ್ ತಡಿಯಕ್ ಆಗ್ತಿಲ್ಲಾ ,ಯಾರೋ ಸಿನಿಯರ್ ನನ್ನ ಈ ರೂಮ್ ಗೆ ತಂದ್ ಬಿಟ್ರು,ಎನ್ ಮಾಡ್ಲಿ?? ಅಮ್ಮಾ... ಆದ್ರೆ ಇನ್ನೂ ಐನೂರು ರೂಪಾಯಿ ಕಳ್ಸು ,ಕರೆಂಟ್ ಬಿಲ್ಲು ,ವಾಟರ್ ಬಿಲ್ಲು ಕಟ್ಬೇಕು, ಅದ್ರೆ ಅಪ್ಪಂಗೆ ಮಾತ್ರ ಹೇಳ್ಬೇಡಾ..." ಎಂದು ಹಸಿ ಸುಳ್ಳು ಹೇಳಿದ್ದ.
ಹೇಳಿದವನೇ ಜೋಗಿ ಬಿಟ್ರೆ ಇವನದೇ ಮದರ್ ಸೆಂಟಿಮೆಂಟೇನೋ ಎಂಬಂತೆ ಎರಡು ಪೆಗ್ ಜಾಸ್ತಿ ಹಾಕಿದ್ದ.ಅದೇ ಮತ್ತಿನಲ್ಲಿ ತಪ್ಪಿಗೆ ಪ್ರಾಯಾಶ್ಚಿತ ಎಂದು ಬ್ಲೇಡಿನಿಂದ ಕೈ ಕೆರೆದು ಕೊಂಡಿದ್ದ.ನಂತರ ಎಂದಿನಂತೆ ಜೀವನ ಸಾಗಿತ್ತು.
ಮುಂದೇನು ... ತಿಂದಿದ್ದು ಕೆಳಗೆ ಮೇಲಾಗಿ ಹೊಟ್ಟೇನೋವು ಬಂದಿತ್ತು. ಅದಕ್ಕೆ ಜ್ವರವೂ ಸೇರಿ ಕೊಂಡಿತ್ತು... ಕೊನೆಗೆ ಮನೆಗೆ ರೂಮ್ ಪಾರ್ಟ್ನ್ ನರ್ ನಿಂದ ಕರೆ ಹೋಗಿತ್ತು.ಆಗಲೇ ಅಪ್ಪ ಬಂದಿದ್ದು....ಅಲ್ಲಿಯ ತನಕ ಇರದ ಆತಂಕ ,ತಳಮಳ ಆಗಶುರುವಾಗಿತ್ತು.ಅಮ್ಮನ ಹತ್ತಿರ ಸುಳ್ಳು ಹೇಳಿದಷ್ಟು ಧೈರ್ಯ ಸಾಕಾಗದಾಗಿತ್ತು.ಅಪ್ಪ ಏನೆಂದಾರೋ ಏನೋ ಎಂಬ ಆತಂಕ ಮನಸ್ಸಿನಲ್ಲಿ ಆಗ ರೂಮ್ ಮಾಡಿತ್ತು.ಮುಂದೇನು ಕಥೆಯೋ? ಎನು ಹೇಳಲೋ?ಎಂದು ಯೋಚಿಸುತ್ತಿರುವಾಗಲೇ ಅಪ್ಪ ಚಿಕಿತ್ಸೆ ಕೊಡಿಸಿ ಹೊರಟಿದ್ದರು. ಅವರು ರೂಮಿನ ಬಗ್ಗೆ ಒಂದು ಮಾತೂ ಕೇಳಲಿಲ್ಲ,ಇವನಿಗೆ ಹೇಳಲು ಧೈರ್ಯ ಸಾಲಲಿಲ್ಲ..ಹೋಗುವಾಗ ಮುಖ ನೋಡಿ ,ಸಾವಿರದ ನೋಟನ್ನು ಕೈಗಿತ್ತು "ಜೋಪಾನ" ಎಂದಷ್ಟೇ ಹೇಳಿ ಬಸ್ಸು ಹತ್ತಿದರು.....
ಅದಾಗಿ ರೂಮಿನ ಮೆಟ್ಟಿಲು ಹತ್ತುತ್ತಿರುವಾಗ ಕೆಳಗಿನ ಮಾಲಿಕರ ಮನೆಯಲ್ಲಿ ನಡೆದ ಮಾತುಕತೆ ಹುಡುಗನ ಕಿವಿಗೆ ಬಿತ್ತು. "ಅಲ್ಲಾ ಕಣೇ... ನಮ್ ಮನೆ ಮೆಲ್ ಇರೋ ಹುಡುಗ ಹಾಸ್ಟೇಲಿನಲ್ಲಿ ಇದಿನಿ ಅಂತಾ ಅಪ್ಪಂಗೆ ಹೇಳೀದ್ನಂತೆ ,ಆಮೇಲೆ ಅಮ್ಮಂಗೆ ...ರ್ಯಾಗಿಂಗ್ ಅಂತಾ ಬೇರೆ ಹೇಳೀದಾನೆ..ಆದ್ರೆ ಜ್ಯೂನಿಯರ್ಸ್ ಗೆ ಬೇರೆ ಹಾಸ್ಟೇಲ್ ಇರೋ ವಿಷಯ ಅಪ್ಪಂಗೆ ನಾನ್ ಹೇಳೀದ್ ಮೇಲೇ ಗೊತ್ತಾಗಿದ್ದು. ಮಗ ಸುಮ್ನೆ ಸುಳ್ ಹೆಳ್ ಬಿಟ್ನಲಾ ....... ಅಂತ ತುಂಬಾ ಬೇಜಾರು ಮಾಡ್ಕಂಡ್ರು ,ಅವ್ನಿಗೆ ಹೊರ್ಗಡೆ ಊಟ ಸೆಟ್ ಆಗಲ್ಲಾ ಅಂತ ಹೇಳ್ದ್ರು ,ಜೊತೆಗೆ ನೀವೇ ಊಟ ಹಾಕಿ ತಿಂಗಳಿಗೆ ಐದು ಸಾವಿರ ಬೇಕಾದ್ರು ಕೊಡ್ತೀವಿ ಅಂದ್ರು...ನಾನು ಅಯ್ತು
ಅಂದೆ,ಆದ್ರೆ ಎನ್ ಹುಡ್ಗುರೋ.....ಥೂ..ಅಪ್ಪಾ ಅಮ್ಮಂಗೇ ಮೋಸ ಮಾಡೋ ಜೀವನಾ ಯಾಕ್ ಬೇಕೋ " ......
ಕೇಳುತ್ತಿದ್ದಂತೆ ಹತ್ತುತ್ತಿದ್ದ ಮೆಟ್ಟಿಲುಗಳು ಪರ್ವತದಂತೆ ಅನಿಸಹತ್ತಿದ್ದವು.... ಅಂತೂ ರೂಮಿಗೆ ಬಂದು,ಕಬೋರ್ಡ್ ನಲ್ಲಿ ಮುಚ್ಚಿಟ್ಟಿದ್ದ ಸಿಗರೇಟು ಹಚ್ಚಿದ್ದ....ಸಿಗರೇಟಿನಂತೆ ಅವನ ಮನಸ್ಸೂ ಸುಡುತ್ತಿತ್ತು...
(" ತನ್ನನ್ನು ತಾನೇ ಬುದ್ದಿವಂತ ,ಪಾಲಕರೆಲ್ಲಾ ಬಕ್ರಾ ಗಳು ಎಂದು ತಿಳಿಯುವ ಮಕ್ಕಳು, ನಮ್ಮ ಮಕ್ಕಳು ಎನೂ ತಿಳಿಯದ ಮುಗ್ಧರು ಎಂದು ತಿಳಿಯುವ ಪಾಲಕರು")
ಮುಂದೇನು????
(ನಿಮ್ಮ ಕಲ್ಪನೆಗೆ ಬಿಟ್ಟಿದ್ದು)