Wednesday, September 18, 2013

ಸಂಜೆಗತ್ತಲ ಪಯಣವೆತ್ತಲೊ….


ನಮಸ್ಕಾರ ಎಲ್ರಿಗೂ..

ಜೀವನದಲ್ಲಿ ಬದಲಾವಣೆಗಳು ಸಹಜ...ಕೆಲವೊಮ್ಮೆ ಅನಿವಾರ್ಯ ಕೂಡಾ..
ಆದರೂ ನೆಲೆನಿಲ್ಲುವ ಮತ್ತೆ ಕಾಲುಕೀಳುವ ಪ್ರಕ್ರಿಯೆ ಸಾಗುತ್ತಲೇ ಇರುತ್ತದೆ...
ಈ  ಸ್ಥಿತ್ಯಂತರದ ಸಮಯದಲ್ಲಿ  ಒಂದಿಷ್ಟು  ಗೊಂದಲಗಳು ನಮ್ಮನ್ನು ಹೊಕ್ಕಿರುತ್ತವೆ..
ಅದೇ ಭಾವ ಹೊತ್ತು ನಿಮ್ಮ ಮುಂದೆ ಈ ಕವನ...
ದಯವಿಟ್ಟು ಮರೆಯದೇ ಅನಿಸಿಕೆ ನಮೂದಿಸಿ,ಪ್ರೋತ್ಸಾಹಿಸಿ...ನಮಸ್ತೆ




ಸಂಜೆಗತ್ತಲ ಪಯಣವೆತ್ತಲೊ ಹಾದಿಮಸುಕಿನ ಚಾರಣ,
ಪಂಜಿಮೆತ್ತಿಹ ಧೂಳಸುತ್ತಲು ಕನಸಿನುಸುಕಿನ ತೋರಣ.


ಜೀಕುಗಾಲಿನ ಪ್ರೇಮಲಾಳಕೆ ಸೂಜಿಗಲ್ಲಿನ ಹಂಬಲ,
ಬದಲುಬಯಸುವ ಅಂತರಾಳಕೆ ಬೀಸುಗಾಳಿಯ ಬೆಂಬಲ.
ತಿರುಗುಭೂಮಿಯ ಬುಗುರಿಯಾನಕೆ ಕಾಶಿದಾರದ ಸರಗುಣಿ,
ಏರಿಇಳಿಯುವ ನೂರುಬಯಕೆಯು ಒಡೆದ ಮುಚ್ಚಲ ತಿರುಗುಣಿ.


ಸೂಡಿಕಿಡಿಯಾ ಹಾರುಗುಣಿತಕೆ ದುಗುಡವೆದೆಯಾ ಪಣತದಿ,
ಬಾಳೆದಡಿಯ ಬಾವಿಯಾಟವು ಗುರಿಯಗರಿಗಳ ಹೆಣೆತದಿ.
ನಡೆವಹಾದಿಯ ಮುಳ್ಳುಕಲ್ಲಿಗೆ ಕೆಂಪುನೆತ್ತರ ತಿಲಕವು.
ಸೋತಕಾಲಿಗೆ ಸುಳ್ಳುಪಾನಕ ಕಳೆದಆಸೆಗೆ ಫಲಕವು.


ಬುತ್ತಿಬಂಡಿ ಬಾಳಹಸಿವು ಎಂದುಮುಗಿಯದ ಗಣತಿಯು,
ಕತ್ತಪಿಂಡಿ ಸೋಲಶಿಂಬೆ ನಡುವೆ ಜಯದಾ ಪ್ರಣತಿಯು.
ಪಾದವಿಟ್ಟೆಡೆ ಜೀವಪಸೆದು ಇಟ್ಟಹೆಜ್ಜೆಯ ನೆಗ್ಗುತಾ,
ನಿತ್ತನೆಲದಾ ಲೆಕ್ಕಮುಗಿದೊಡೆ ಮತ್ತೆ ನೊಗವಾ ಎತ್ತುತಾ.


ಸಂಜೆಗತ್ತಲ ಪಯಣವೆತ್ತಲೊ ಹಾದಿಮಸುಕಿನ ಚಾರಣ ………
-ಚಿನ್ಮಯ ಭಟ್ಟ
ಶಬ್ದಾರ್ಥ :
( ಪಂಜಿ=ಪಂಚೆ,ಸರಗುಣಿ=ಸರಗುಣಿಕೆ,ಒಂದು ಬಗೆಯ ಗಂಟು,
ಪಣತ=ಕಣತ,ಧವಸ ಧಾನ್ಯ ಸಂಗ್ರಹಿಸುವ ಜಾಗ,
ಬಾಳೆದಡಿ=ಬಾಳೆಯ ಎಲೆಯ ನಡುವಿನ ದಂಟು,ಬಾಳೆಯ ಕೋಲು
ಸುಳ್ಳುಪಾನಕ=ಒಂದು ಬಗೆಯ ಬೆಲ್ಲದ ಪಾನಕ,
ಕತ್ತಪಿಂಡಿ=ಕತ್ತದ ದಾರದ ದೊಡ್ಡಮುದ್ದೆ
ಶಿಂಬೆ=ಗಂಟುಗಂಟಾಗಿರುವುದು
ಪ್ರಣತಿ=ಹಣತೆ,ಪಸೆ= ಸವೆಯುವುದು,ನೆಗ್ಗು=ಎತ್ತು )
[ತುಂಬಾ ದಿನದಲ್ಲಿಂದ ಏನೂ ಬ್ಲಾಗಿಸಲಾಗಲಿಲ್ಲ...ಕ್ಷಮೆ ಇರಲಿ..
ಇದೀಗ ಒಂದು ಕಡೆ ನೆಲೆ ನಿಂತೆ ಅಂದು ಕೊಂಡಿದ್ದೇನೆ....ಬೆಂಗಳೂರಿನೆಡೆಗೆ ಪ್ರಯಾಣ..ಮುಂದೇನೋ ಗೊತ್ತಿಲ್ಲ....

ನಾ ಅಂದುಕೊಂಡಂತೆ ಭಾವ ಹೀಗಿದೆ ,ಸ್ವಲ್ಪ ತಲೆತುರಿಸುತ್ತೆ ಎನ್ನುವ ಸಾಲುಗಳದ್ದನ್ನಷ್ಟೇ ಕೊಟ್ಟಿದೀನಿ,ಉಳ್ದಿದ್ದು ಓದ್ತೀರಾ ಅಲ್ವಾ??...

"ಪಂಜಿಮೆತ್ತಿಹ ಧೂಳಸುತ್ತಲು ಕನಸಿನುಸುಕಿನ ತೋರಣ."

ಇಲ್ಲಿ ಪಂಜಿಮೆತ್ತಿಹ ಧೂಳು ಅಂದರೆ ಶ್ರಮದ ಪ್ರತೀಕ..ಉಸುಕು ಕನಸನ್ನು ಬಿಂಬಿಸುವ ಸಲುವಾಗಿ(ಮರಳಿನ ಅರಮನೆ ಹೇಗೆ ಪೂರ್ತಿಯಾಗದೋ ಅದೇ ಥರಾ ಕನಸುಗಳೂ ಬಿದ್ದು ಹುಟ್ಟುತ್ತಿರುತ್ತವೆ ಅಂತಾ)..ಮನುಷ್ಯ ಶ್ರಮವಹಿಸಿ ದುಡಿಯುವುದು ಅವನ ಕನಸನ್ನು ಈಡೇರಿಸುವ ಆಸೆಹೊತ್ತು ಎನ್ನುವ ಭಾವ ಇಲ್ಲಿ..

"ತಿರುಗುಭೂಮಿಯ ಬುಗುರಿಯಾನಕೆ ಕಾಶಿದಾರದ ಸರಗುಣಿ,
ಏರಿಇಳಿಯುವ ನೂರುಬಯಕೆಯು ಒಡೆದ ಮುಚ್ಚಲ ತಿರುಗುಣಿ."

ಬದುಕಿನಲ್ಲಿ ಇಚ್ಛೆಬಂದಂತೆ ನಮ್ಮ ಪಾಡಿಗೆ ನಾವು ಜಗತ್ತನ್ನು ತಿರುಗುವ ಆಸೆಗಳಿಗೆ ಹೆತ್ತವರಿಂದ ಅಥವಾ ಹುಟ್ಟಿನೊಂದಿಗೆ ಬರುವ ಕೆಲ ಜವಾಬ್ದಾರಿಗಳಿಂದ ಕಡಿವಾಣ ಬೀಳುತ್ತದೆ ..ಜೊತೆಗೆ ಈ ಥರದ ಆಸೆಗಳು ದಿನದಿನಕ್ಕೂ ಬದಲಾಗುತ್ತಾ ಹೋಗುತ್ತದೆ,ಒಂದಾದ ಮೇಲೊಂದರಂತೆ..ಅದಕ್ಕೆ ಕೊನೆಯೆಂಬುದೇ ಇಲ್ಲ...ಮುಚ್ಚಲು ಒಡೆದ ತಿರುಗುಣಿಯ ಪಾತ್ರೆಯನ್ನು ಕೂರಿಸಲಾದೀತೆ??ಅದನ್ನು ತಿರುಗಿಸಿತ್ತಾ ಇರಬೇಕು ಅಷ್ಟೇ ಅಲ್ಲವೇ ??ಆ ಭಾವ ಹೊತ್ತು ಬರೆದ ಸಾಲುಗಳಿವು...

"ಸೂಡಿಕಿಡಿಯಾ ಹಾರುಗುಣಿತಕೆ ದುಗುಡವೆದೆಯಾ ಪಣತದಿ,"
ಉರಿಯುವು ಸೂಡಿ ಅಂದರೆ ಈಗಾಗಲೇ ನಮ್ಮ ಹಾದಿಯಲ್ಲಿ ಮುಂದೆ ಸಾಗಿರುವವರನ್ನು ನೋಡಿ ನಮ್ಮಲ್ಲಿ ಭಯ ಹುಟ್ಟುವುದು ಸಹಜ..ನಾವು ಆ ಮಟ್ಟಕ್ಕೆ ಏರಬಲ್ಲೆವೆ ಎನ್ನುವ ಆತಂಕ ನಮ್ಮಲ್ಲಿ ಮನೆಮಾಡಿರುತ್ತದೆ...

"ಬಾಳೆದಡಿಯ ಬಾವಿಯಾಟವು ಗುರಿಯಗರಿಗಳ ಹೆಣೆತದಿ."

 ಬಾಳೆದಡಿಯಲ್ಲಿ ಅಂದರೆ ಬಾಳೆ ಎಲೆಯ ಮಧ್ಯದ ಗಟ್ಟಿ ಕೋಲಿರತ್ತಲ್ಲಾ ಅದ್ರಲ್ಲಿ ಬಾವಿಯನ್ನು ಕಟ್ಟುತ್ತಿದ್ದೆವು ಬಾಲ್ಯದಲ್ಲಿ..ಅದೇಕೋ ಗುರಿಯು ಸ್ಪಷ್ಟವಾದರೆ ಅರ್ಧ ಕೆಲಸ ಮುಗಿದಂತೆ,ಮುಂದಿನದು ಮಕ್ಕಳಾಟ ಎಂಬುದನ್ನು ಹೇಳುವಾಗ ಈ ಆಟದ ನೆನಪಾಯ್ತು...ಮಕ್ಕಳಾಟದ ಬದಲು ಬಾಳೆದಡಿಯಾ ಬಾವಿಯಾಟ ಅಷ್ಟೇ...

"ನಡೆವಹಾದಿಯ ಮುಳ್ಳುಕಲ್ಲಿಗೆ ಕೆಂಪುನೆತ್ತರ ತಿಲಕವು."

ಕೆಂಪುನೆತ್ತರು ಇಲ್ಲಿ ತ್ಯಾಗದ ಪ್ರತೀಕ...ಸಾಧನೆಯ ಹಾದಿಯಲ್ಲಿ ಬರುವ ತೊಂದರೆಗಳನ್ನು ನಿವಾರಿಸಲು ಕೆಲ ತ್ಯಾಗವನ್ನು ಮಾಡಬೇಕು ಅಥವಾ ಅದಕ್ಕೆ ಸಿದ್ಧರಾಗಿರಬೇಕು ಎನ್ನುವುದನ್ನು ಹೇಳ ಹೊರಟಿದ್ದೇನೆ...

"ಸೋತಕಾಲಿಗೆ ಸುಳ್ಳುಪಾನಕ ಕಳೆದಆಸೆಗೆ ಫಲಕವು."
ಸೋತಕಾಲಿಗೆ ಸುಳ್ಳುಪಾನಕ ಅಂದರೆ ಸ್ಪೂರ್ತಿ ತುಂಬುವಿಕೆಯ ಅಗತ್ಯತೆಯನ್ನು ಹೇಳಲು ಬಳಸಿದ್ದು...ಇನ್ನು ನಮ್ಮೂರಿನ ಕಡೆ ದನಕರುಗಳು ಕಳೆದು ಹೋದಾಗ ಹಲಗೆಯ ಮೇಲೆ ಮಸಿಯಲ್ಲಿ ಏನೋ ಬರೆದು ಅವುಗಳ ದಿಕ್ಕನ್ನು ಹೇಳುವ ವಿದ್ಯೆಯಿದೆ..ಅದನ್ನು "ಹಲಗೆ ಬರೆಯದು" ಎಂದು ಬಳಸಿದ್ದನ್ನು ಕೇಳಿದ್ದೆ..ಹಾಗಾಗೆ ಫಲಕವು ಎಂಬುದನ್ನು ಬಳಸಿದೆ..ಇಲ್ಲಿ ಸಾಧನೆಯ ಹಾದಿಯಲ್ಲಿ ದಿಕ್ಕುತಪ್ಪಿದಾಗ ದಾರಿ ತೋರಿಸಿ ಎಂಬುದಷ್ಟೇ ತಾತ್ಪರ್ಯ..ಒಟ್ಟಿನಲ್ಲು ಮಾರ್ಗದರ್ಶನ ಹಾಗೂ ಸ್ಪೂರ್ತಿಯನ್ನು ಕುರಿತು ಹೇಳುವ ಸಾಲುಗಳಿವು..

"ಕತ್ತಪಿಂಡಿ ಸೋಲಶಿಂಬೆ ನಡುವೆ ಜಯದಾ ಪ್ರಣತಿಯು.’

ಕತ್ತದ ಪಿಂಡಿ ಎಂದರೆ ನಾರಿನ ದಾರದ ದೊಡ್ಡ ಮುದ್ದೆ..ಛಂದವಾಗಿ ಮಡಿಸಿಕೊಂಡು ಬಂದ ಅದನ್ನಾ,ಒಂದು ಮಾರು ಹುರಿಗಾಗಿ ಒಮ್ಮೆ ಹೇಗೇಗೋ ಎಳೆದು ಗಂಟು ಗಂಟು ಮಾಡಿಬಿಟ್ಟಿದ್ದೆ...ಬಿಡಿಸಲೇ ಸುಸ್ತಾಯ್ತು...ಇದನ್ನು ಬಳಸಿದ್ದು.. ಸಮಸ್ಯೆಗಳ ಸುಳಿಯ ನಡುವೆಯೇ ಜಯವಿರುತ್ತದೆ ಎಂಬುದನ್ನು ಹೇಳಲು...

ಧನ್ಯವಾದ ಬರ್ತಾ ಇರಿ...
ನಮಸ್ತೆ :)