Friday, February 22, 2019

ಸ್ಥಿರೆ, ಶತಭಿಷ ಮತ್ತು ಚಲನಾ (ಭಾಗ-೮)

ಐ ಥಿಂಕ್ ಐ ವಿಲ್ ಡೈ ಟು ಡೇ...." ಚಲನಾ ನಶೆಯಲ್ಲಿ ಮಾತಾಡಿದಂತಿತ್ತು.
"ನೋ...ಯು ಆರ್ ಜಸ್ಟ್ ಡ್ರಂಕ್....."
ಶತಭಿಷ ಚಲನಾಗೆ ಹೆಗಲು ಕೊಟ್ಟು ಒಳ ಕರೆದುಕೊಂಡು ಬಂದ...
ಆಕೆಗೆ ಓಡಾಡುವಷ್ಟೂ ತ್ರಾಣವಿರಲಿಲ್ಲ....
ಪೂರ್ತಿಯಾಗಿ ಕುಡಿದಂತಿತ್ತು....ಸೋಫಾದ ಮೇಲೆಯೇ ಬಿದ್ದುಕೊಂಡಳು....
"ಲವ್ ಯು ಡಿಯರ್....." ಆಕೆ ಗೊಣಗುತ್ತಲೇ ಹೇಳಿದಂತಿತ್ತು....
"ಜಸ್ಟ್ ಶಟಪ್ ಆಯ್ತಾ?..." ಶತಭಿಷ ಬಾಯಿ ಮುಚ್ಚಿಸಿದ್ದ....
ಆಕೆ ಹೀಗೆ ಕುಡಿದುಬರುವುದು ಶತಭಿಷನಿಗೆ ಹೊಸದೇನೂ ಆಗಿರಲಿಲ್ಲ...ಆದರೆ ಈಚೆಗೆ ನಾಕೈದು ವರ್ಷದಿಂದ ನಡೆದಿರಲಿಲ್ಲ ಅಷ್ಟೇ....
ಸ್ಥಿರೆ ಒಮ್ಮೆ ಶತಭಿಷನನ್ನು ಗುರಾಯಿಸಿ ನೋಡಿದಳು....
ಶತಭಿಷ ಚಲನೆಗೆ ಬ್ಲಾಂಕೆಟ್ ತರಲೆಂದು ರೂಮಿಗೆ ಹೋದ...
ಚಲನಾ ಇನ್ನೇನೋ ಮಾತಾಡುತ್ತಲೇ ಇದ್ದಳು....
"ಅಲ್ಯಾಕ್ ಕೂತಿದೀಯೋ.....ಬಾ ಒಳಗೆ...." ಸ್ಥಿರೆ ವಿನಯ್‍ನನ್ನು ಕರೆದಳು....
"ನಾ ಒಳಗ್ ಬರೋದಿಲ್ಲಾ....ನಾ ಒಳಗ್ ಬರೋದಿಲ್ಲ....ಓ ಇಲ್ಲಾ ಇಲ್ಲಾ ಇಲ್ಲಾ....." ವಿನಯ್ ಕೆಟ್ಟದಾಗಿ ಹಾಡಲು ಶುರುಮಾಡಿದ್ದ...
"ಬತ್ರ್ಯೋ ಇಲ್ವೋ ಈಗಾ?" ಸ್ಥಿರೆ ಗದರಿಸಿಯೇ ಬಿಟ್ಟಳು...
"ಬೈಬೇಡಾ ...ಬೈ ಬೇಡಾ....ಬೈದ್ರೆ ನನ್ ಹೆಂಡ್ತಿ ನೀನು ಅನಸ್‍ಬಿಡತ್ತೆ...." ವಿನಯ್ ಕೂಡಾ ಹಿಡಿತ ತಪ್ಪಿದ್ದ....
"ಏನಾಯ್ತು ನಿಮಗಿಬ್ರಿಗೂ?ಯಾಕ್ ಹಿಂಗ್ ಸಾಯ್ತಿದೀರಾ?" ಸ್ಥಿರೆ ಅಲವರಿಕೆಯಿಂದ ಕೇಳಿದಳು....
"ಅದೇನಾಯ್ತು ಅಂದ್ರೆ...." ವಿನಯ್ ಚಲನಾಳ ಜೊತೆ ಬಾರ್‍ಗೆ ಹೋಗಿದ್ದನ್ನೂ...ಅಲ್ಲಿ ಚಲನಾ ಚಾಲೆಂಜ್ ಮಾಡಿದಳೆಂದು ಏನೇನೋ ಮಿಕ್ಸ್ ಮಾಡಿ ಕುಡಿದಿದ್ದನ್ನೂ ಹೇಳಿದ...
ಚಲನಾ ಹಠ ಮಾಡಿದ್ದರಿಂದ ಅವಳನ್ನು ಇಲ್ಲಿಗೇ ಕರೆತಂದೆ ಎಂದೂ, ಜೊತೆಗೆ ತಾನು ಸ್ಟೇಬಲ್ ಆಗಿದ್ದೇನೆಂದೂ ಹೇಳಿ ಎದ್ದು ನಿಂತ..ಅಷ್ಟರಲ್ಲಿ ಶತಭಿಷ ಬಂದಿದ್ದ...
"ಮಿಸ್ಟರ್ ಶತಭಿಷ....ನಾನೂ ನೀವು ಇವತ್ತಿಂದಾ ಫ್ರೆಂಡ್ಸ್...." ವಿನಯ್ ಶೇಕ್‍ಹ್ಯಾಂಡ್ ಮಾಡಲು ಬಂದ....ಶತಭಿಷ ಅಲ್ಲಿಯೇ ನಿಂತಿದ್ದ...ವಿನಯ್ ಬಲವಂತದಿಂದ ಕೈಕುಲುಕಿ ಆಲಂಗಿಸಿಕೊಂಡ....
"ಯು ಸೀ ಮಿಸ್ಟರ್....ನಾನ್ ನಿಮ್ಮನ್ನ ತಪ್ಪ್ ತಿಳ್ಕೊಂಡಿದ್ದೆ....ಬಟ್ ನಿಮ್ಮ್ ಬಗ್ಗೆ ಚಲನಾ ತುಂಬಾ ಹೇಳಿದಾಳೆ.....ಸೋ ಐ ಆಮ್ ಸಾರಿ....ಓಕೆ?" ವಿನಯ್ ಕೈ ಮುಗಿದು ನಿಂತಿದ್ದ....ಶತಭಿಷ ಮಾತಾಡಲಿಲ್ಲ...
"ನಾಟ್ ಓ.ಕೆ?...ಓ.ಕೆ...ಇಟ್ಸ್ ಓ.ಕೆ...." ವಿನಯ್ ಮಾತನಾಡುತ್ತಲೇ ಇದ್ದ...ಅಷ್ಟರಲ್ಲಿ ಆತನಿಗೆ ಕರೆ ಬಂದಿತ್ತು...ಆತನ ಕಸಿನ್‍ದು....ಬಹುಷಃ ಸ್ಥಿರೆಯೇ ಹೇಳಿರಬೇಕು...ಆತ ಒಂದರ್ಧ ಗಂಟೆ ಅಲ್ಲಿಯೇ ಕೂತಿದ್ದು ನಂತರ ಹೊರಟ. ಶತಭಿಷ ಅವನನ್ನು ಅರ್ಧ ದಾರಿಯ ತನಕ ಬಿಡಲು ಹೋಗಿದ್ದ...
ಚಲನಾ ಮಾತ್ರ ಸೋಫಾ ಮೇಲೆಯೇ ಮಲಗಿದ್ದಳು. ತೀರಾ ಕ್ಯಾಷುಅಲ್ ಎನಿಸುವಂತಹ ಉಡುಗೆ...ಸ್ಪೋಟ್ರ್ಸ್ ಷೂ...ಅರೆ ಬರೆ ಹರಡಿದ್ದ ಕೂದಲು...ಅರ್ಧಂಬರ್ಧ ಮೈ ಮುಚ್ಚಿದ್ದ ಬ್ಲಾಂಕೆಟ್...ತೀರ ಎಚ್ಚರವೂ ಇಲ್ಲದ...ಪೂರ್ತಿ ನಿದ್ದೆಯೂ ಬಾರದ ಮಂಪರು.... ಸ್ಥಿರೆಗೆ ಚಲನಾಳ ಮೇಲೆ ಅದೇಕೋ ಪಾಪ ಎನಿಸಿತ್ತು....
"ಕಾಲ್ ಮಿ ಇಫ್ ಯು ನೀಡ್ ಎನಿಥಿಂಗ್...." ಸ್ಥಿರೆ ಅನುಕಂಪದಿಂದ ಹೇಳಿ, ಇನ್ನೇನು ಬೆಡ್‍ರೂಮಿಗೆ ಹೋಗುವವಳಿದ್ದಳು...
"ಐ ನೀಡ್ ಟು ಟೆಲ್ ಯು ಸಮ್ ಥಿಂಗ್...." ಚಲನಾಳಿಗೆ ಮಾತಾಡಲೇ ಬೇಕೆನಿಸಿತ್ತು...
"ಬೆಳಿಗ್ಗೆ ಮಾತಾಡಣಾ...ಈಗ ಮಲಗು" ಸ್ಥಿರೆ ಗುಡ್ ನೈಟ್ ಹೇಳಿದಳು....
"ಪ್ಲೀಸ್....." ಚಲನಾ ಸ್ಥಿರೆಯ ಕೈ ಹಿಡಿದು ಜಗ್ಗಿದಳು...ಇಲ್ಲವೆನ್ನಲಾಗಲಿಲ್ಲ....
"ಹೇಳು..." ಸ್ಥಿರೆ ಚಲನಾಳ ಬಳಿಯೇ ಕೂತಳು...
ಶಾಂತವಾಗಿಯೇ ಶುರುವಾದ ಮಾತುಕತೆ ನಿಧಾನವಾಗಿ ಇಂಟೆನ್ಸ್ ಆಗುವುದರಲ್ಲಿತ್ತು...ಅನಿರೀಕ್ಷಿತ ಅನಾಲೆಸಿಸ್ಸ್...ಕಾಕತಾಳೀಯ ಎನಿಸುವ ಘಟನೆಗಳು...ಅಲ್ಲಿಯವರೆಗೆ ಸ್ಥಿರೆಗೆ ಗೊತ್ತಿರದಿದ್ದ ಸಂಗತಿಗಳನ್ನು ಚಲನಾ ಹೇಳುತ್ತಲಿದ್ದಳು...
**
"ಬ್ರದರ್....ನೀವ್ ಒಂಥರಾ ಗ್ರೇಟ್ ಬಿಡಿ....ಈಗಿನ್ ಕಾಲದಲ್ಲಿ ನಿಮ್ಮಷ್ಟ್ ಗಾಂಧಿ ತರ ಇರೋರನ್ನಾ ನಾನ್ ನೋಡಿಲ್ಲ...." ವಿನಯ್ ಕಾರಿನಲ್ಲಿ ಮಾತುಕತೆ ಶುರುಮಾಡಿದ್ದ...ಶತಭಿಷ ಸುಮ್ಮನೇ ಕಾರು ಚಲಾಯಿಸುತ್ತಿದ್ದ...
"ಎಲ್ಲ್ ಸಿಕಾಕ್ಕೊಂಡಿದೆ ಈಗಾ?" ವಿನಯ್ ಕೆಲಸದ ವಿಷಯವನ್ನೇ ಮಾತಾಡುತ್ತಿದ್ದ.....ಶತಭಿಷ ಅದಾಗಲೇ ಕನ್ಸಲ್ಟಂಟ್ ಕೆಲಸ ಮಾಡುತ್ತಿದ್ದ...ಇನ್ನೇನು ಎರಡು ಮೂರು ತಿಂಗಳಲ್ಲಿ ಎಲ್ಲ ಸರಿ ಆಗಬಹುದು ಎಂಬ ನಿರೀಕ್ಷೆಯಲ್ಲಿದ್ದ....
"ಇನ್ನೇನೇ ಟೂ ಥ್ರೀ ಮಂಥ್ಸ್ ಅನ್ಸತ್ತೆ" ಶತಭಿಷನಿಗೆ ಶಾರ್ಟ್‍ಕಟ್‍ನಲ್ಲಿ ಹೋಗಲು ಇಷ್ಟಪಡಲಿಲ್ಲ....ಮೇನ್‍ರೋಡ್‍ನಲ್ಲಿಯೇ ಗಾಡಿ ಚಲಾಯಿಸಿದ....
"ಬ್ರದರ್...ನೀವ್ ಸುಮ್ನೆ ಆಫೀಸಿಗ್ ಅನ್ನಿ ಬ್ರದರ್...ನಾನೇ ಮಾಡಸ್‍ಕೊಡ್ತೀನಿ....ನನ್ನ್ ಕಡೆಯಿಂದ್ ಎಷ್ಟಾಗತ್ತೋ ಅಷ್ಟ್ ಬೇಗ...ಪ್ರಾಮಿಸ್ ಬ್ರದರ್...ಬನ್ನಿ ಯಾವತ್ತಾದ್ರೂ..." ವಿನಯ್ ಮಾತಾಡುತ್ತಲೇ ಇದ್ದ....ಶತಭಿಷನಿಗೆ ಯು ಟರ್ನ್ ತೆಗೆದುಕೊಳ್ಳುವುದಕ್ಕಿತ್ತು....
ಗಕ್ಕನೇ ಕಾರು ನಿಲ್ಲಿಸಿದ...
ಮಧ್ಯರಾತ್ರಿ...ಅದ್ಯಾವುದೋ ಸಿಗ್ನಲ್ಲು....ನಾಕೂ ಕಡೆ ರಸ್ತೆ ಬಹುತೇಕ ಖಾಲಿ ಖಾಲಿ...ಆಗಾಗ ರೊಯ್ಯ್ ಎಂದು ಬರುವ ವಾಹನಗಳು...ವಿನಯ್ ಪ್ರಾಮಾಣಿಕತೆಯ ಬಗ್ಗೆ ಶತಭಿಷನಿಗೆ ಅನುಮಾನವಿತ್ತು...
"ಶ್ಯುರ್...ನೋಡಣಾ...." ಕೊನೆಗೂ ಗ್ರೀನ್ ಸಿಗ್ನಲ್ಲು ಬಿದ್ದಿತ್ತು...
"ಬ್ರದರ್...ನಿಮ್ಮ್ ಬಗ್ಗೆ ಅವಳ್ ತುಂಬಾ ಮಾತಾಡ್ತಿರ್ತಾಳೆ....." ವಿನಯ್ ಚಲನಾಳ ಬಗ್ಗೆ ಮಾತಾಡಹೊರಟಿದ್ದ.....ಶತಭಿಷ ಹೂಂ ಹಾಕುತ್ತಿದ್ದ....
"ನಾವಿಬ್ರೂ ಹೆಂಗ್ ಇಷ್ಟ್ ಕ್ಲೋಸ್ ಆದ್ವಿ ಅಂತಾ ಕೇಳಲ್ವಾ?" ವಿನಯ್ ಪ್ರಶ್ನೆ ಹಾಕಿದ್ದ...ಶತಭಿಷ ಉತ್ತರಿಸಲಿಲ್ಲ...
"ಬ್ರದರ್..ಕೇಳಿ ಬ್ರದರ್..." ವಿನಯ್ ಸುಲಭಕ್ಕೆ ಬಿಡುವಂತೇ ಕಾಣಿಸಲಿಲ್ಲ...
ಶತಭಿಷ "ಹೇಳಿ" ಎಂದ...
ವಿನಯ್ ಚಲನಾಳ ಬಗ್ಗೆ ಮಾತಾಡಲು ಶುರುಮಾಡಿದ...
"ಬ್ರದರ್...ನಂಗ್ ಅವಳ್ ಜೊತೆ ಕಮಿಟ್ ಆಗ್ಬೇಕು ಅನಸ್ತಿದೆ..." ವಿನಯ್ ಕೊನೆಗೊ ಅಸಲಿ ವಿಷಯ ಹೇಳಿಯೇ ಬಿಟ್ಟಿದ್ದ....
ಶತಭಿಷ ಕಾರು ನಿಲ್ಲಿಸಿದ..
ವಿನಯ್‍ನ ಕಸಿನ್ ಹೇಳಿದ ಜಾಗ ಬಂದಿತ್ತು......ಅವರ ಕಾರ್‍ನ ಪಾರ್ಕಿಂಗ್ ಲೈಟ್ ಆನ್ ಆಗಿತ್ತು....
"ಮಾತಾಡಣಾ ಅದರ್ ಬಗ್ಗೆ ಯಾವತ್ತಾದ್ರು....ಇವತ್ತ್ ರೆಸ್ಟ್ ಮಾಡಿ.... " ಶತಭಿಷ ಮಾತು ಕಟ್ ಮಾಡಿದ....
"ಸೆಟ್ ಮಾಡ್‍ಕೊಡ್ತೀರಾ ಅಲ್ವಾ ಬ್ರದರ್?" ವಿನಯ್ ಸೀಟ್‍ಬೆಲ್ಟ್ ತೆಗೆಯಲು ತಡಕಾಡುತ್ತಿದ್ದ....
ಶತಭಿಷ ಪ್ರಶ್ನೆ ಕೇಳಿದರೂ ಕೇಳದಂತೇ ನಟಿಸಿದ್ದ.. ಅಷ್ಟರಲ್ಲಿ ಕಸಿನ್ ಬಂದು ತನ್ನ ಗೆಳೆಯರ ಜೊತೆ ವಿನಯ್‍ನನ್ನು ಕಾರಿಗೆ ತುಂಬಿಕೊಂಡು ಹೊರಟಿದ್ದ...
ಶತಭಿಷ ಮೊಬೈಲಿನ ವಾಲ್ ಪೇಪರ್ ನೋಡಿದ....ಸ್ಥಿರೆ ಮತ್ತು ಮಗುವಿನ ಫೋಟೋ ಇತ್ತು....ಮನೆಯ ಕಡೆ ಕಾರು ಚಲಾಯಿಸಿದ...
ಮಳೆ ಬರುವಂತಿತ್ತು.. ಗಾಳಿ ಬೀಸಿತ್ತು....ಆಗಾಗ ಮಿಂಚುತ್ತಿತ್ತು....ಇಂಥಹುದೇ ಒಂದು ರಾತ್ರಿ ಶತಭಿಷನ ಬದುಕು ಬದಲಿಸಿತ್ತು....ಊರಿನಲ್ಲಿ ಒಂಟಿ ಪಿಶಾಚಿಯಂತೇ ಓಡಾಡುತ್ತಿದ್ದ ಶತಭಿಷ ಷೇರ್ ಮಾರ್ಕೇಟ್‍ಗೆ ಎಂಟ್ರಿ ಕೊಡಲು ನಿರ್ಧರಿಸಿದ್ದ...ಅದೇ ರೀತಿಯ ಒಂಟಿತನ ಇದೀಗ ಮತ್ತೆ ಶತಭಿಷನನ್ನು ಕಾಡತೊಡಗಿತ್ತು.... ಪಕ್ಕದಲ್ಲೆಲ್ಲೋ ಕಂಡ ಮಿಂಚು, ಹಿಂದೆಲ್ಲೋ ಚಲನಾ ಬಿಡಿಸಿದ ಚಿತ್ರವನ್ನು ನೆನಪಿಸಿತ್ತು.....
**
"ನನ್ ಜೊತೆ ಕಮಿಟ್ ಆಗ್ಬೇಕು ಅಂತಿರೋ ಹುಡುಗ್ರು ಸತ್ತೋಗ್ತಾರೆ...." ಚಲನಾ ನಿರ್ಧಾರಕ್ಕೆ ಬಂದಂತೇ ಹೇಳಿದ್ದಳು...
ಆ ಮಾತು ಸ್ಥಿರೆಗೇನೋ ಸರಿ ಅನಿಸಲಿಲ್ಲ....
"ಹಂಗೇನಿಲ್ಲಾ....ಏನೇನೋ ಅಂದ್ಕೋಬೇಡಾ..." ಸ್ಥಿರೆ ಸಮಾಧಾನಿಸಲು ಪ್ರಯತ್ನಿಸಿದಳು....
"ಫಸ್ಟು ಸುಹಾಸ್...ಆಮೇಲೆ ಗಂಡ ಅನ್ಸ್‍ಕೊಂಡಿದ್ ಅರ್ಜುನ್... ಆಮೇಲೇ ಆ ಆಶ್ರಮದ ಮಾರ್ಕಂಡೇಯ..." ಚಲನಾಳ ಹತ್ತಿರ ಒಂದಲ್ಲ ಎರಡಲ್ಲ ಮೂರು ಉದಾಹರಣೆಗಳಿದ್ದವು......
ಸುಹಾಸ್ ಆಕ್ಸಿಡೆಂಟಿನಲ್ಲಿ ತೀರಿಕೊಂಡಿದ್ದ...ಅರ್ಜುನ್ ಹುಚ್ಚು ಹಿಡಿದು ತೀರಿಕೊಂಡ. ನಲವತ್ತು ದಾಟಿದ್ದ ಮಾರ್ಕಂಡೇಯ ಹಿಮಾಲಯಕ್ಕೆ ಹೋದಾಗ ತೀರಿಕೊಂಡಿದ್ದರು...
ತನ್ನ ಹಣೆಬರಹವೇ ಸರಿಯಿಲ್ಲ ಎಂದುಕೊಂಡು ಮತ್ತೆ ಅತ್ತಳು...
ತಾನೊಬ್ಬ ಕೊಲೆಗೆಡುಕಿ ಎಂದು ಹಳಿದುಕೊಂಡಳು..
ಬಹಳೇ ಬಹಳ ಗೊಂದಲ, ಚೂರ್ ಚೂರು ಬೈಗುಳ, ಕೊಂಚ ಹತಾಶೆ, ಒದ್ದೆಯಾಗಿ ಮುದ್ದೆಯಾದ ಟಿಷ್ಯೂ ಪೇಪರ್ರು...
ಸ್ಥಿರೆ ಚಲನಾಳನ್ನು ಹೇಗೋ ಸಮಾಧಾನಿಸಿ ಮಲಗಿಸಿದಳು...
ಶತಭಿಷ ಮನೆಗೆ ಬಂದವನು ಚಲನಾಳ ಬಗ್ಗೆ ವಿಚಾರಿಸಿದ....ವಿನಯ್ ಬಗ್ಗೆ ನಾಳೆ ಮಾತಾಡಬೇಕಿದೆ ಎಂದ...ಸ್ಥಿರೆಯ ಕೆಲಸದ ವಿಚಾರ ನಾಳೆ ಮಾತಾಡೋಣವೆಂದು ನಿರ್ಧರಿಸಿ ಇಬ್ಬರೂ ಮಲಗಿದರು...
ವಿನಯ್‍ನ ಕಸಿನ್ ಸ್ಥಿರೆಗೆ ಮೆಸ್ಸೇಜು ಮಾಡಿದ್ದ... "ಥ್ಯಾಂಕ್ಸ್...ಹಿ ಈಸ್ ಆಲ್‍ರೈಟ್..."
ಸ್ಥಿರೆಗೆ ಮಾತ್ರ ಅಂದು ಬಹಳ ಹೊತ್ತು ನಿದ್ರೆ ಬರಲಿಲ್ಲ...
"ವಿನಯ್ ಚಲನಾಳನ್ನು ಮದುವೆಯಾಗಲು ಹೊರಟನಾ?"
ಕರೆಂಟ್ ಹೋಯಿತು....ಶಕುನದ ಫಲ ಸ್ಥಿರೆಗೆ ತಿಳಿಯಲು ಇನ್ನೂ ಸಮಯವಿತ್ತು....
**
"ಕಂಗ್ರಾಟ್ಸ್ ...ಕೀಪ್ ಗೋಯಿಂಗ್...ವೇಯ್ ಟು ಗೋ....ವೆಲ್ ಕಮ್ ಬ್ಯಾಕ್ ಚಾಂಪಿಯನ್...ಬಿಷ್ ಈಸ್ ಬ್ಯಾಕ್ ವಿಥ್ ಅ ಬ್ಯಾಂಗ್....."
ವಾಟ್ಸಪ್ಪು, ಫೇಸ್‍ಬುಕ್, ಲಿಂಕಡಿನ್, ಟ್ವಿಟರ್....ಎಲ್ಲಾ ಕಡೆ ಶತಭಿಷನದೇ ಹವಾ ಕ್ರಿಯೇಟ್ ಆಗಿತ್ತು...
ಆತ ಏಂಜೆಲ್ ಇನ್ವೆಸ್ಟರ್ ಆಗಿ ಹಣ ಹೂಡಿದ್ದ ಕಂಪನಿಯೊಂದನ್ನು ಬಹುದೊಡ್ಡ ಕಂಪನಿ ಅಕ್ವೈರ್ ಮಾಡ ಹೊರಟಿತ್ತು....
ಶತಭಿಷನ ಎದುರು ಹೊಗಳಿಕೆಗಳ ದೊಡ್ಡ ರಾಶಿಯಿತ್ತು....ಬ್ಯಾಂಕ್ ಅಕೌಂಟಿನಲ್ಲಿ ಸಾಕಷ್ಟು ಹಣವೂ ತುಂಬುವುದಕ್ಕಿತ್ತು... ಐದು ವರುಷಗಳ ನಂತರ ಮತ್ತೆ ಬಿಸಿನೆಲ್ ವೀಕ್ಲಿಯೊಂದರ ಮುಖಪುಟದಲ್ಲಿ ಆತನ ಫೋಟೋ ಹಾಕಲಾಗಿತ್ತು....ಶತಭಿಷನ ಇನ್ವೆಸ್ಟ್‍ಮೆಂಟ್ ಜಗತ್ತಿನಲ್ಲಿ ಮೂರನೇ ಅಧ್ಯಾಯ ಶುರುವಾಗಿತ್ತು....
ಆದರೆ ಆತನ ಸಂಸಾರ ಮಾತ್ರ ಎಳೆಯ ಮೇಲೆ ನಿಂತಿತ್ತು...ಕಂಪನಿ ವಾಪಸ್ ಶುರುವಾದ ಮೇಲೆ ಶತಭಿಷ ಮನೆಯ ಕಡೆ ಮರೆತೇ ಬಿಟ್ಟಿದ್ದ...ಶುರು ಶುರುವಿನಲ್ಲಿ ಸಹಜವೆಂದುಕೊಂಡು ಸ್ಥಿರೆಯೂ ಸುಮ್ಮನಾಗಿದ್ದಳು....ಆದರೆ ಕ್ರಮೇಣ ಅವಳಿಗೂ ಶತಭಿಷನ ವರ್ತನೆ ಸರಿ ಬರುತ್ತಿರಲಿಲ್ಲ....ಮೊದಲಿದ್ದ ಶತಭಿಷ ಈಗ ಸಂಪೂರ್ಣ ಬದಲಾಗಿದ್ದ...
ಸ್ಥಿರೆಗೆ ಅಷ್ಟೇನೂ ಇಷ್ಟವಿಲ್ಲದಿದ್ದರೂ ಶತಭಿಷ ಆಕೆಯ ಕೆಲಸ ಬಿಡಿಸಿದ್ದ....ಬುಸಿನೆಸ್ ಟ್ರಿಪ್ ಹೆಸರಿನಲ್ಲಿ ತಿಂಗಳಿಗೆ ಎರಡು ವಾರ ಊರು ಬಿಟ್ಟು ಹೊರಗೇ ಇರುತ್ತಿದ್ದ...ಸ್ಥಿರೆಯ ತಂದೆಗೆ ಹುಷಾರು ತಪ್ಪಿದಾಗ ಸಹಕರಿಸುವುದಿರಲಿ, ಆಸ್ಪತ್ರೆಗೂ ಬರಲಿಲ್ಲ....ಹದಿನಾಲ್ಕನೇ ದಿನಕ್ಕೆ ಅತ್ತೂ-ಕರೆದು ಸ್ಥಿರೆ ಆತನನ್ನು ಕರೆಸಿದ್ದಳು...
ಸ್ಥಿರೆ ಶತಭಿಷನ ಜೊತೆ ಜಗಳವಾಡಿಯೂ ಇದ್ದಳು....ಆತನಿಗೆ ಸಂಸಾರದ ಬಗ್ಗೆ ವಿಶೇಷ ಆಸ್ಥೆ ಉಳಿದಂತಿರಲಿಲ್ಲ....ಆದರೆ ಮಗುವಿಗೆ ಮಾತ್ರ ಅಪ್ಪನ ಬಗ್ಗೆ ವಿಶೇಷ ಅಕ್ಕರೆ....ಅದೊಂದೇ ಕಾರಣಕ್ಕೆ ಸ್ಥಿರೆ ತಡೆದುಕೊಂಡಿದ್ದಳು...ಆದರೆ .....
**
ಚಲನಾ ನ್ಯೂಯಾರ್ಕಿನಲ್ಲಿದ್ದಳು. ಪ್ರತಿಷ್ಠಿತ ಆರ್ಟ್ ಎಕ್ಷಿಬೀಷನ್ ಒಂದರಲ್ಲಿ ಆಕೆಯ ವರ್ಣಚಿತ್ರಗಳು ಪ್ರದರ್ಶನಕ್ಕಿದ್ದವು. ಬ್ಯುಸಿನೆಸ್ ವಿಚಾರವಾಗಿ ಸ್ಟೇಟ್ಸಿಗೆ ಹೋಗಿದ್ದ ಶತಭಿಷ ಆಕೆಯ ಆಹ್ವಾನದ ಮೇರೆಗೆ ಅಲ್ಲಿಗೆ ಹೋಗಿದ್ದ...
"ವಾಟ್ ಡಸ್ ಇಟ್ ಮೀನ್ ಫಾರ್ ಯು...." ಚಿತ್ರಪಟವೊಂದರ ಕುರಿತು ಚಲನಾಳನ್ನು ಕಲಾರಸಿಕರೊಬ್ಬರು ಪ್ರಶ್ನಿಸಿದ್ದರು....
"ನಾನ್ ಹೇಳಿದ್ರೆ ಚೆನಾಗಿರಲ್ಲ....ಅದು ನಿಮಗ್ ಹೆಂಗ್ ಅನ್ಸತ್ತೋ ಹಂಗ್ ಇರ್ಲಿ.." ಚಲನಾ ಎಂದಿನ ಸ್ಮೈಲ್ ಕೊಟ್ಟಿದ್ದಳು...
.
"ಇದು ಸೂರ್ಯ....ಅದಕ್ಕೆ ಅಪೋಸಿಟ್ ಆಗಿ ಚಂದ್ರ....ಕೆಳಗಡೆ ಭೂಮಿ...ಪಕ್ಕದಲ್ಲಿ ನೀರು...ಎದುರುಗಡೆ ಒಂದು ಮೊಳಕೆ...ಮೊಳಕೆ ಅಂದ್ರೆ...." ಆತ ತನ್ನ ವರ್ಷನ್ ಹೇಳಿದ....
ಚಲನಾ ಅಲ್ಲಿಯೇ ಇದ್ದ ಶತಭಿಷನನ್ನು ಕೇಳಿದಳು....
"ನಿಂಗೇನ್ ಅನ್ಸತ್ತೋ?" ಶತಭಿಷ ಅದನ್ನು ನಿರೀಕ್ಷಿಸಿರಲಿಲ್ಲ....
"ಮೊಳಕೆ ಅಂದ್ರೆ ಪ್ರೊಗ್ರೆಸ್...ಭೂಮಿಗೆ ನೀರು-ಗೊಬ್ಬರ ಹಾಕಿದ್ರೆ ಫಲ ಸಿಗತ್ತೆ ..ಆದ್ರೆ ಭೂಮಿಗೆ ಸೂರ್ಯ ಚಂದ್ರ ಇದ್ರೆ ಮಾತ್ರ ಜೀವ...ಅವೆರಡೂ ಇಲ್ಲಾ ಅಂದ್ರೆ ಏನೂ ಇಲ್ಲ..." ಶತಭಿಷ ತನಗನ್ನಿಸಿದ್ದನ್ನು ಹೇಳಿದ...
"ಯಾ ವೆರಿ ಟ್ರೂ...." ಆತ ಹ್ಯಾಂಡ್‍ಶೇಕ್ ಮಾಡಿ ಹೊರಟು ಹೋಗಿದ್ದ....
"ವೆರಿ ನೈಸ್...." ಚಲನಾ ಚಪ್ಪಾಳೆ ತಟ್ಟುತ್ತಾ ಮೋಹಕವಾಗಿ ನಕ್ಕಿದ್ದಳು....ಅಪರೂಪಕ್ಕೆ ವಿಶೇಷವಾಗಿ ರೆಡಿಯಾಗಿದ್ದಳು...ವಜ್ರದ್ದೊಂದು ನೆಕ್‍ಲೆಸ್ ಧರಿಸಿದ್ದಳು...
" ಎಕ್ಸ್‍ಕ್ಯೂಸ್ ಮಿ .....ಸ್ವಲ್ಪ ವೇಟ್ ಮಾಡ್ತೀಯಾ ?" ಚಲನಾ ಬೇರೆ ಗೆಸ್ಟ್‍ಗಳನ್ನು ಅಟೆಂಡ್ ಮಾಡಲು ಹೋದಳು....
ಶತಭಿಷ ಚಲನಾಳಿಗಾಗಿ ಕಾಯುತ್ತಿದ್ದ....ಆಕೆಯ ಜೊತೆ ಬಹಳಷ್ಟು ವಿಚಾರ ಮಾತನಾಡುವುದಕ್ಕಿತ್ತು...ಆಕೆಯ ಸಲಹೆ-ಸೂಚನೆ ಆತನಿಗೆ ಬಹಳ ಮಹತ್ವದ್ದಾಗಿತ್ತು...ಆಗಾಗ ಆತನಿಗೇನೋ ಅಪರಾಧಿ ಭಾವ ಕಾಡುತ್ತಿತ್ತು...ಆದರೆ ಬಿಸಿನೆಸ್ಸಿನ ಸಕ್ಸೆಸ್ಸು ಅದನ್ನು ಮರೆಸಿಬಿಡುತ್ತಿತ್ತು...ಮತ್ತೇನೋ ಹೊಸ ಸಾಹಸಕ್ಕೆ ಪ್ರೇರೇಪಿಸುತ್ತಿತ್ತು....
ಆತ ಚಲನಾಳ ಬರುವಿಕೆಗೆ ಕಾದು ಸಿಗರೇಟು ಹಚ್ಚಿದ್ದ....
ಅಷ್ಟರಲ್ಲಿ ಸ್ಥಿರೆಯ ಮೆಸ್ಸೇಜು ಬಂದಿತ್ತು....
-ಚಿನ್ಮಯ
22/2/2019

ಸ್ಥಿರೆ, ಶತಭಿಷ ಮತ್ತು ಚಲನಾ (ಭಾಗ-7)

"ವಾಟ್ ರಬ್ಬಿಶ್? ವಾಟ್ ಈಸ್ ದಿಸ್ ನಾನ್ ಸೆನ್ಸ್...." ಸ್ಥಿರೆ ಮುಖಕ್ಕೆ ಹೊಡೆದಂತೇ ಹೇಳಿದ್ದಳು... ಬೇರೇನೋ ರಿಪ್ಲೈ ನಿರೀಕ್ಷಿಸುತ್ತಿದ್ದ ವಿನಯ್‍ಗೆ ಉರಿಹತ್ತಿತ್ತು...
"ಹೀ ವಿಲ್ ಕಂಟಿನ್ಯೂ ಹಿಸ್ ಕೃಷ್ಣ ಲೀಲಾ...ಯು ಕಂಟಿನ್ಯು ಟು ಬಿ ಸೀತಾ ದೇವಿ..." ಮೆಸ್ಸೇಜನ್ನು ಟೈಪ್ ಮಾಡಿದ್ದವನು ಅದೇಕೋ ಅಳಿಸಿ ಹಾಕಿದ...ಫೋಟೋಗಳನ್ನು ಡಿಲೀಟ್ ಮಾಡಿ, ಆಕೆಯನ್ನು ಬ್ಲಾಕ್ ಮಾಡಿದ.
ಸ್ಥಿರೆ ಮೆಸ್ಸೇಜ್ ಓದಿದ ತಕ್ಷಣಕ್ಕೆ ಶತಭಿಷನನ್ನು ಸಮರ್ಥಿಸಿಕೊಂಡಿದ್ದಳು. ಆಕೆಗೆ ವಿನಯ್ ಬಗ್ಗೆ ಸ್ಪಷ್ಟವಾಗಿ ಗೊತ್ತಿತ್ತು.. ಯಾರಾದರೂ ಖುಷಿಯಾಗಿದ್ದರೆ ಆತನಿಗೇನೋ ಮೈಯಲ್ಲಿ ಮುಳ್ಳು ಏಳುತ್ತಿತ್ತು..ಆತನನ್ನು ಇಗ್ನೋರ್ ಮಾಡುವುದೇ ಸೂಕ್ತ ಎಂದು ಮೆಸ್ಸೇಜ್‍ಅನ್ನು ಡಿಲೀಟ್ ಮಾಡಿದಳು. ಆತನನ್ನು ಬ್ಲಾಕ್ ಮಾಡಲಾ ಎಂದು ಯೋಚಿಸಿದಳು.
"ನಿಜವಿರಬಹುದಾ?" ಮತ್ತೊಂದು ಹುಳ ತಲೆ ಹೊಕ್ಕಿತ್ತು...
ತಕ್ಷಣವೇ ಶತಭಿಷನಿಗೆ ಕಾಲ್ ಮಾಡಿದಳು. ಆತ ರಿಸೀವ್ ಮಾಡಲಿಲ್ಲ. ಅರ್ಧಗಂಟೆಯ ನಂತರ ಆತನೇ ವಾಪಸ್ ಕಾಲ್ ಮಾಡಿದ. ಈಕೆ ಮಗುವಿಗೆ ಊಟ ಮಾಡಿಸುತ್ತಿದ್ದಳು. ಮಗು ದೊಡ್ಡ ಮನೆಯ ತುಂಬಾ ಓಡಾಡುತ್ತಾ ಆಗಾಗ ಒಂದೊಂದು ತುತ್ತು ತಿನ್ನುತ್ತಿತ್ತು...ಜಾಸ್ತಿ ಮಾತಾಡಲೇನೂ ಆಗಲೇ ಇಲ್ಲ...ನಂತರ ಕಾಲ್ ಮಾಡುವೆನೆಂದು ಹೇಳಿ, ಫೋನ್ ಇಟ್ಟಳು. ರಾತ್ರಿ ಊಟವಾಗಿ, ಮಗು ಮಲಗಿದ ಮೇಲೆ ಮತ್ತೆ ಫೋನಾಯಿಸಿದಳು. ಶತಭಿಷ ಫೋನ್ ಕಟ್ ಮಾಡಿದ.
"ಇನ್ ಪಿ.ವಿ.ರ್..ವಿಲ್ ಟೆಕ್ಸ್ಟ್ ಯು ಲೇಟರ್..." ಶತಭಿಷ ಮೆಸ್ಸೇಜ್ ಮಾಡಿದ್ದ...ಮಾಡಬಾರದಿತ್ತೇನೋ...
ಸ್ಥಿರೆಯ ತಲೆಯಲ್ಲಿ ಮತ್ತೇನೇನೋ ಯೋಚನೆಗಳು ಓಡಾಡಿದವು...ಶತಭಿಷ ನೈಟ್ ಷೋಗೆ ಹೋಗುವುದು ಹೊಸದೇನಲ್ಲ...ಆದರೆ ಒಬ್ಬನೇ ಹೋಗಬೇಕಿತ್ತಾ? ತಾನಿಲ್ಲದ ಹೊತ್ತಿನಲ್ಲಾ? ಬೇಜಾರಲ್ಲಿದ್ದಾನಾ? ಕೆಲಸದ ಟೆನ್ಷನ್ ಕಡಿಮೆ ಮಾಡಿಕೊಳ್ಳಲಾ? ಅಸಲಿಗೆ ಒಬ್ಬನೇ ಇದ್ದಾನಾ? ಜೊತೆಗೆ ಚಲನಾ ಏನಾದರೂ?? ಟೈಂ ಪಾಸಿಗೆಂದು ನೆಟ್ ಆನ್ ಮಾಡಿದಳು...ಇನ್ನೇನು ಮಲಗಬೇಕು ಎನ್ನುವಾಗ ಸುಮ್ಮನೇ ಸ್ಟೇಟಸ್‍ಗಳ ಕಡೆ ಕಣ್ಣಾಡಿಸಿದಳು...
ತುಂಬಾ ದಿನಗಳ ನಂತರ ಚಲನಾಳ ಸ್ಟೇಟಸ್ ಅಪ್‍ಡೇಟ್ ಆಗಿತ್ತು....
"ಇಟ್ಸ್ ಮೂವಿ ಟೈಂ......"
ಶತಭಿಷ ಮೂವಿ ಮುಗಿದ ಕೂಡಲೇ ಮೆಸ್ಸೇಜ್ ಮಾಡುವುದನ್ನು ಮರೆತಿದ್ದ...ತಡರಾತ್ರಿಯಲ್ಲೆಲ್ಲೋ "ಗುಡ್‍ನೈಟ್" ಎಂಬ ಮೆಸ್ಸೇಜು ಕುಟ್ಟಿ ಮಲಗಿದ್ದ...ಆ ದಿನ ಅಪರೂಪಕ್ಕೆ ಮಗು ಮಧ್ಯದಲ್ಲಿ ಎಳದೇ ಬೆಳಗಿನವರೆಗೂ ಮಲಗಿತ್ತು...ಆದರೆ ತಾಯಿಗೆ ಮಾತ್ರ ನಿದ್ದೆ ಹತ್ತಲೇ ಇಲ್ಲ..
**
ಅವತ್ತು ಶುಕ್ರವಾರ. ಸ್ಥಿರೆ ಬೆಳಬೆಳಿಗ್ಗೆಯೇ ಎದ್ದು ತಲೆಸ್ನಾನ ಮಾಡಿ ಊರದೇವಸ್ಥಾನಕ್ಕೆ ಹೋಗಿದ್ದಳು...ದೇವರ ಮುಂದೆ ತುಂಬಾ ಹೊತ್ತು ಕೂತಿದ್ದಳು. ಪ್ರಾರ್ಥಿಸಿದ್ದಳಾ? ....ವಾಪಸ್ ಬರುವಷ್ಟರಲ್ಲಿ ಶತಭಿಷನ ಮಿಸ್ ಕಾಲ್ ಇತ್ತು.....
"ಐ ಆಮ್ ಸಾರಿ...ತಲೆ ಚಿಟ್ಟ್ ಹಿಡದು ನಿನ್ನೆ ಫಿಲಂಗೆ ಹೋಗಿದ್ದೆ..ಅದೇನಾಯ್ತು ಅಂದ್ರೆ....." ವಾಪಸ್ ಕಾಲ್ ಮಾಡಿದಾಗ ಶತಭಿಷ ಮಾತಾಡಲು ಶುರುಮಾಡಿದ.
"ಯಾವ್ ಫಿಲ್ಮು? ಚೆನಾಗಿತ್ತಾ? ಒಬ್ನೇ ಹೋಗಿದ್ಯಾ?" ಸ್ಥಿರೆ ಸಹಜವಾಗಿಯೇ ಮಾತಾಡುತ್ತಾ ಪ್ರಶ್ನೆ ಹಾಕುತ್ತಾ ಹೋದಳು...ಶತಭಿಷನ ಎಲ್ಲದಕ್ಕೂ ಖುಷಿಯಿಂದಲೇ ಉತ್ತರಿಸಿದ್ದ...ಆಕೆ ಈ ರೀತಿ ಇನ್ವೆಸ್ಟಿಗೇಟ್ ಮಾಡುವುದು ಆತನಿಗೇನೂ ಹೊಸತಾಗಿರಲಿಲ್ಲ...ಆತನ ಮಾತಿನಲ್ಲಿ ಸ್ಥಿರೆಗೆ ಎಲ್ಲೂ ಅನುಮಾನ ಬರಲಿಲ್ಲ...ಶತಭಿಷನೂ ಉತ್ಸಾಹದಲ್ಲಿದ್ದ.. ಆದರೆ ಬಿಸಿನೆಸ್ ವಿಚಾರದಲ್ಲಿ ಆತ ಮತ್ತೂ ಡೆಸ್ಪರೇಟ್ ಆಗಿರುವುದು ಆಕೆಯ ಗಮನಕ್ಕೆ ಬಂದಿತ್ತು....ಕೈಯ್ಯಲ್ಲಿ ಪ್ರಸಾದವಿತ್ತು... ನೇರವಾಗಿ ವಿನಯ್ ವಿಷಯ ಹೇಳಲು ಮನಸ್ಸು ಬರಲಿಲ್ಲ...ಚಲನಾಳ ಬಗ್ಗೆಯೂ ಕೇಳಲಿಲ್ಲ...
"ಯಾವಾಗ್ ಬರ್ತಿಯಾ ಊರಿಗೆ?" ಮುಖತಃ ಮಾತುಕತೆಯೇ ಒಳ್ಳೆಯದೆಂದುಕೊಂಡಳು.
"ಅದು...ಇಲ್ಲ್ ಸ್ವಲ್ಪ್ ಕೆಲ್ಸಾ ಇದೆ...." ಆತನಿಗೆ ಬರಲು ಇಷ್ಟವಿದ್ದಂತಿರಲಿಲ್ಲ....
"ಇಲ್ಲೇನೋ ಪೂಜೆ ಇದ್ಯಂತೆ...ಅಮ್ಮ ನೀನ್ ಬರ್ಲೇ ಬೇಕು ಅಂತಿದಾಳೆ...." ಸ್ಥಿರೆ ಸುಳ್ಳಂತಿದ್ದರೂ ಸತ್ಯವನ್ನೇ ಹೇಳಿದ್ದಳು....ಆತ ಅದು ಇದು ಕಾರಣ ಹೇಳಿದನಾದರೂ ಈಕೆ ಪಟ್ಟು ಸಡಿಲಿಸಲಿಲ್ಲ....
"ಓ.ಕೆ...ನೋಡ್ತೀನಿ...ನಾಳೆ ಆಗಲ್ಲ...ನಾಡಿದ್ದ್ ಬರ್ತಿನಿ ಮೋಸ್ಟ್‍ಲೀ" ಆತ ಕೊನೆಗೂ ಒಪ್ಪಿದ್ದ.
ಸ್ಥಿರೆ ತಾಯಿಯ ಬಳಿ ಹೋಗಿ, ಎಂದೋ ಮಾಡಬೇಕು ಎಂದಿದ್ದ ಪೂಜೆಯ ಬಗ್ಗೆ ನೆನಪಿಸಿದಳು...ಶತಭಿಷ ಊರಿಗೆ ಬರುವನೆಂದೂ, ಆಗಲೇ ಮಾಡೋಣವೆಂದೂ ಸಲಹೆ ಮಾಡಿದಳು....ಆಕೆಯ ತಾಯಿ, ಪೂಜೆಯ ಕೆಲಸಗಳ ಬಗ್ಗೆ ತಯಾರಿ ನಡೆಸತೊಡಗಿದರು...
**
"ಎಲ್ಲಿದಾರೆ ಕೇಳೇ...." ಸ್ಥಿರೆಗೆ ಆಕೆಯ ತಾಯಿಯೇ ನೆನಪಿಸಿದ್ದಳು...ಸ್ಥಿರೆಗೆ ಶತಭಿಷನ ಬಗ್ಗೆ ಗೊತ್ತೇ ಇತ್ತು...ಪಕ್ಕದ ರೂಮಿಗೆ ಬೆಂಕಿ ಬಿದ್ದರೂ ಭಾನುವಾರ ಬೆಳಿಗ್ಗೆ ಒಂಭತ್ತರ ಕಡಿಮೆ ಶತಭಿಷ ಏಳುವವನೇ ಆಗಿರಲಿಲ್ಲ...ಅಷ್ಟೊತ್ತಿಗೆ ಎದ್ದು, ತಿಂಡಿ ತಿಂದು ಬರುವುದೆಂದರೆ ಎರಡು ಗಂಟೆಯಾದರೂ ಆಗೇ ಆಗುತ್ತಿತ್ತು. ಆದರೂ ತಾಯಿಯ ಮಾತಿನ ಸಲುವಾಗಿ ಮೆಸ್ಸೆಜೊಂದು ಹಾಕಿದ್ದಳು...
ಆತ "ಜಸ್ಟ್ ಲೆಫ್ಟ್ ಬ್ಯಾಂಗಲೋರ್" ಎಂದು ಮೆಸ್ಸೇಜ್ ಹಾಕಿದ್ದ....
ಆಕೆ "ವೈ ಸೊ ಲೇಟ್?" ಎಂದಾಗ "ವೇಟ್ ಫಾರ್ ಅ ಸರ್‍ಪ್ರೈಸ್..." ಎಂದಿದ್ದ....ಆಕೆಗೆ ಸರ್‍ಪ್ರೈಸ್ ಏನೆಂದು ಗೆಸ್ ಮಾಡಲು ಸಾಧ್ಯವಾಗಲಿಲ್ಲ....ಆತ ಹೇಳಲಿಲ್ಲ...
ಸಮಯ ಎರಡಾಗಿ, ಸ್ಥಿರೆ ಮತ್ತೊಮ್ಮೆ ಕಾಲ್ ಮಾಡಿದಾಗ "ಲೇಟಾಗತ್ತೆ...ನೀವ್ ಊಟ ಮಾಡಿರಿ" ಎಂದ....ಅದನ್ನೇ ತಾಯಿಗೆ ಹೇಳಿದರೆ, ಆಕೆ ಎಲ್ಲರೂ ಕಾಯೋಣವೆಂದಳು....
ಮಗು ಹಠ ಮಾಡುತ್ತಿದ್ದುದರಿಂದ ಸ್ಥಿರೆ ಊಟ ಮಾಡಿಸಿದಳು...ಸ್ಥಿರೆಯ ತಂದೆ ಗೇಟಿನ ಸುತ್ತಲೇ ಓಡಾಡಹತ್ತಿದ್ದರು....ಸ್ಥಿರೆಗೆ ಶತಭಿಷನ ಮೇಲೆ ಸಿಟ್ಟು ಬರುತ್ತಿತ್ತು...ಸರ್‍ಪ್ರೈಸ್ ಏನಿರಬಹುದೆಂದು ಹೇಳದಿದ್ದಕ್ಕೋ ಏನೋ ಗೊತ್ತಿರಲಿಲ್ಲ....ಜಗಳ ಆಡಬೇಕೆನಿಸಿತ್ತು... ಬಹಳ ದಿನವಾಗಿದ್ದಕ್ಕೋ ಏನೋ ಅರ್ಥವಾಗಲಿಲ್ಲ.... ಬೆಳಿಗ್ಗೆಯಿಂದ ಏನೂ ಸರಿಯಾಗಿ ತಿಂದಿಲ್ಲ...ಬಹುಷಃ ಆಸಿಡಿಟಿ ಆಯಿತೇನೋ ಎಂದುಕೊಂಡಳು...
ಕೊನೆಗೂ ಆತ ಬಂದಿದ್ದ...
ಮಗು ಹಠ ಮಾಡಿದ್ದರಿಂದ ಸ್ಥಿರೆಗೂ ಗೇಟಿನ ಬಳಿಯೇ ಬಂದಿದ್ದಳು...ಸರ್‍ಪ್ರೈಸ್ ಎಲ್ಲಿ ಎಂದು ಕೇಳೋಣವೆಂದುಕೊಂಡಳು...ಅಷ್ಟರಲ್ಲೇ ಕಾರಿನಲ್ಲಿ ಇನ್ಯಾರೋ ಇದ್ದಂತಿತ್ತು...ಯಾರಿರಬಹುದು? ಸ್ಥಿರೆಯ ತಂದೆಗೆ ಗುರುತುಹತ್ತಲಿಲ್ಲ...ಸ್ಥಿರೆಗೆ ಮಾತ್ರ ಸ್ಪಷ್ಟವಾಗಿ ಗುರುತು ಹತ್ತಿತ್ತು....
"ಸರ್‍ಪ್ರೈಸ್" ಎನ್ನುತ್ತಲೇ ಕಾರಿನಿಂದ ಇಳಿದು ಸ್ಥಿರೆಯನ್ನು ಹಗ್ ಮಾಡಿದ್ದಳು ಚಲನಾ!
**
"ನನ್ ಕಲೀಗ್...ಚಲನಾ ಅಂತಾ.... ಸ್ಥಿರಾ ಫ್ರೆಂಡ್ ಕೂಡಾ..." ಶತಭಿಷ ಸ್ಥಿರೆಯ ಮನೆಯವರಿಗೆ ಚಲನಾಳನ್ನು ಪರಿಚಯಿಸಿದ್ದ.... ಚಲನಾ ಮಾತ್ರ ಸ್ಥಿರೆಯ ಜೊತೆ ಮಾತನಾಡುತ್ತಲೇ ಇದ್ದಳು...
"ಯು ನೌ ವಾಟ್....ಐ ವಾಸ್ ಫೀಲಿಂಗ್ ಲೈಕ್ ಗೋಯಿಂಗ್ ಆನ್ ಅ ಶಾರ್ಟ್ ಟ್ರಿಪ್....ಭಿಷ್ ಇಲ್ಲಿಗ್ ಹೊರ್ಟಿದೀನಿ ಅಂದಾ....ಐ ಥಾಟ್ ಹೋಗ್‍ಬರಣಾ ಅಂತಾ....ನಾನ್ ಈ ಕಡೆ ಎಲ್ಲಾ ನೋಡೇ ಇಲ್ಲಾ... ನೋ ಪ್ರಾಬ್ಲಂ ಫಾರ್ ಯು ರೈಟ್?" ಮಾತು ಚಟಪಟ ಸಾಗಿತ್ತು....
ಶತಭಿಷ ಭಿಷ್ ಆಗಿದ್ದನ್ನು ಸ್ಥಿರೆ ಗಮನಿಸಿದ್ದಳು...
"ಪ್ರಾಬ್ಲಂ ಆಹ್? ಏನಿಲ್ಲ...ಖುಷಿ ಆಯ್ತು...ಪ್ಲೀಸ್ ಬನ್ನಿ...." ಸ್ಥಿರೆ ಮನೆಗೆ ಬಂದ ಅತಿಥಿಯನ್ನು ಸ್ವಾಗತಿಸಿದ್ದಳು...ಆರೇಳು ತಿಂಗಳ ಹಿಂದೆ ಶಾಂತಿ-ಅಹಿಂಸೆ ಅಂತೆಲ್ಲಾ ಮಾತಾಡುತ್ತಿದ್ದ ಚಲನಾ ಇವಳೇನಾ ಎಂದು ಸ್ಥಿರೆಗೆ ಅನ್ನಿಸುತ್ತಿತ್ತು...ಮೂವಿ ಬಗ್ಗೆ ಕಾಫಿ ಡೇ ಬಗ್ಗೆ ಬಹಳಷ್ಟು ಮಾತಾಡುವುದಕ್ಕಿತ್ತು... ಆದರೆ ಅದಾಗಲೇ ಊಟಕ್ಕೆ ತಡವಾಗಿದ್ದರಿಂದ ಜಾಸ್ತಿ ಮಾತುಕತೆ ಸಾಧ್ಯವಾಗಲಿಲ್ಲ...
ಊಟವಾದ ಮೇಲೆ ಮಗುವಿನ ಜೊತೆ ಚಲನಾ ಆಟವಾಡತೊಡಗಿದ್ದಳು. ಆಕೆ ತಂದ ಹೊಸ ಆಟಿಕೆ ಮಗುವಿಗೆ ಬಹಳೇ ಇಷ್ಟವಾಗಿತ್ತು. ಶತಭಿಷನೂ ಕೂಡ ಆಟದಲ್ಲಿ ತೊಡಗಿದ್ದ....ಅಂಗಳದಲ್ಲಿ ಶತಭಿಷ-ಚಲನಾ-ಮಗುವಿನ ಗದ್ದಲ ಜೋರಾಗಿತ್ತು....ಒಳಮನೆಯಲ್ಲಿ ಮಲಗಿದ್ದ ಸ್ಥಿರೆಯ ತಂದೆ ಕೋಣೆಯ ಬಾಗಿಲು ಹಾಕಿ ಮಲಗಿದರು...
"ಯಾರೇ ಅವಳು? ಮುಂಚೆ ಯಾವತ್ತು ನೀನ್ ಹೇಳ್ಳೇ ಇಲ್ಲಾ....." ಪಾತ್ರೆ ಜೋಡಿಸಿ ಇಡುತ್ತಿದ್ದ ಸ್ಥಿರೆಯನ್ನು ಆಕೆಯ ತಾಯಿ ಪ್ರಶ್ನಿಸಿದ್ದಳು...
"ಅವಳಾ...ಮುಂಚೆ ನಮ್ಮ್ ಅಪಾರ್ಟ್‍ಮೆಂಟ್‍ನಲ್ಲೇ ಇದ್ಲು...ನಮ್ಮ್ ಪಕ್ಕದ್ ಮನೆನೇ....ಅವಾಗ್ ಅವಾಗ್ ಬರ್ತಾ ಇದ್ಲು...ಈಗ್ ಒಂದ್ ಮೂರ್ ತಿಂಗ್ಳಿಂದಾ ಪತ್ತೆನೇ ಇರ್ಲಿಲ್ಲ...." ಸ್ಥಿರೆ ತನ್ನ ಅನುಮಾನಗಳನ್ನು ಚಲನಾಳ ಮೇಲೆ ಹೊರಿಸಲಿಲ್ಲ....
"ಮದ್ವೆ ಗಿದ್ವೆ ಏನ್ ಆದಂಗಿಲ್ಲ ಅನ್ಸತ್ತೆ...ಯಾವ್ ಜನಾ?" ಸ್ಥಿರೆಯ ತಾಯಿ ವಾಡಿಕೆಯ ಮಾತಾಡಿದ್ದರು...
"ಏಯ್...ಹೋಗಮ್ಮಾ....ಅವಳಿಗ್ ಮದ್ವೆ ಆಗಿ ಡೈವೊರ್ಸೂ ಆಗಿದೆ...ನೀನ್ ಏನ್ ಗಂಡ್ ಹುಡ್ಕದ್ ಬೇಕಾಗಿಲ್ಲ ಆಕೆಗೆ...." ಪಾತ್ರೆಯೊಂದು ಕೈತಪ್ಪಿ ನೆಲಕ್ಕೆ ಬಿದ್ದಿತ್ತು...ಬಗ್ಗಿ ಎತ್ತಿಡಲು ಹೋದಾಗ ಹಣೆಗೆ ತಗುಲಿತು..."ಹಾಯ್" ಎಂದಳು...
"ಹುಷಾರು ಕಣೆ...ಏಟಾಯ್ತಾ?" ಎಂದು ತಾಯಿ ಕೇಳಿದಾಗ,ಏನಿಲ್ಲ ಎಂದು ಹಣೆ ತಿಕ್ಕಿಕೊಂಡಳು...
"ಏನೋ ಅವಳ್ ಒಂಥರಾ ವಿಚಿತ್ರ ಅನ್ಸತ್ತೆ....ಯಾಕ್ ಹಂಗಿದಾಳೆ?" ಬಹುಷಃ ಆಕೆಯ ಬಟ್ಟೆ, ಮಾತುಕತೆ ಗಮನಿಸಿ ಸ್ಥಿರೆಯ ತಾಯಿ ಕೇಳಿದ್ದರು...
"ಏನೋ ಗೊತ್ತಿಲ್ಲ...ಅವಳೊಂಥರ ಹಂಗೇ...ಬಿಡು..ಅವರವರ ಹಣೆಬರಹ...." ಸ್ಥಿರೆ ಲೋಟವೊಂದನ್ನು ಕುಟ್ಟಿದ್ದಳು...ಅಲ್ಲಿಗೆ ಪಾತ್ರೆ ಜೋಡಿಸಿ ಮುಗಿದಿತ್ತು....
"ಬೇರೆಯವ್ರ್ ಮನೆಗ್ ಬಂದಿದೀವಿ ಅಂದ್ರೆ ಸ್ವಲ್ಪ ಇತಿ-ಮಿತಿಯಲ್ಲ್ ಇರ್ಬೇಕಪ್ಪಾ....ಅದೇನ್ ಹುಡಗೀರೋ? ನಮ್ಮ್ ಊರ್ ಹುಡುಗೀರೇ ಜೋರ್ ಅಂದ್ಕೊಂಡ್ರೆ ಇವ್ಳ್ ಇನ್ನೂ ಜೋರು....ನಮ್ಮ್ ಲಕ್ಷ್ಮೀನೂ ಹಂಗೇ...ಅದೇನ್ ಯೋಚನೇನೋ..." ಆಕೆಯ ತಾಯಿ ಗೊಣಗುತ್ತಿದ್ದಳು...
ಸ್ಥಿರೆಗೆ ಅಲ್ಲಿರಲಾಗಲಿಲ್ಲ...ಅಂಗಳದ ಕಡೆ ಹೊರಟಳು...ಶತಭಿಷ ಮತ್ತು ಚಲನಾ ಜೋರಾಗಿ ನಗುತ್ತಿದ್ದರು...ಅದೇಕೋ ಹೆಜ್ಜೆ ಮುಂದಿಡುವ ಮನಸ್ಸಾಗಲಿಲ್ಲ....ಅಲ್ಲಿಯೇ ನಿಂತಳು...
"ಏನಾದ್ರೂ ಹೆಲ್ಪ್ ಬೇಕಾ ಸ್ಥಿರಾ?" ಚಲನಾ ಅಂಗಳದಿಂದಲೇ ಅರಚಿದ್ದಳು....ಸ್ಥಿರೆ ಅಂಗಳಕ್ಕೆ ಬರಲೇಬೇಕಾಯಿತು....
**
"ಎಲ್ಲಾದ್ರೂ ಹೋಗಣ್ವೇನೋ?" ಚಲನಾ ಮಗುವನ್ನು ಕೇಳಿದ್ದಳು. ಸ್ಥಿರೆ-ಶತಭಿಷನೂ ಜೊತೆಗೂಡಿದರು. ಸಂಜೆ ಸೂರ್ಯ ಮುಳುಗುವ ಹೊತ್ತು...ಕ್ರಿಕೆಟ್ ಆಡುವ ಪೋರರು ಬೇಗ ಬೇಗ ಮತ್ತೊಂದು ಮ್ಯಾಚು ಆಡುವ ಆತುರದಲ್ಲಿದ್ದರು. ದನಗಳು ಅದಾಗಲೇ ಕೊಟ್ಟಿಗೆ ಸೇರಿದ್ದವು. ಭತ್ತದ ಗದ್ದೆ ಕಟಾವು ಮುಗಿಸಿ ಖಾಲಿಯಾಗಿತ್ತು. ಕಬ್ಬು ತಲೆಯೆತ್ತಿ ನಿಂತಿದ್ದು, ಆಲೆಮನೆಯ ತಯಾರಿಗಳು ಶುರುವಾಗಿದ್ದವು. ಹೊಳೆಗೆ ಅಡ್ಡಲಾಗಿ ಕಟ್ಟಿದ್ದ ಕಾಂಕ್ರೀಟ್ ಸೇತುವೆ ಅಂಚಿನಲ್ಲಿ ನಾಲ್ವರೂ ಕೂತಿದ್ದರು. ಅಷ್ಟರಲ್ಲೇ ದಾಯಾದಿಗಳ್ಯಾರೋ ಬಂದು ಮಗುವನ್ನು ಆಡಿಸತೊಡಗಿದರು. ಶತಭಿಷ ಸಿಗರೇಟಿನ ಸಲುವಾಗಿ ಎದ್ದು ಹೋದ. ಅಲ್ಲಿದ್ದುದು ಚಲನಾ-ಸ್ಥಿರೆ ಇಬ್ಬರೇ.
"ಹೌ ಈಸ್ ಲೈಫ್?" ಸ್ಥಿರೆ ಮಾತು ಶುರುಮಾಡಿದಳು.
"ನೈಸ್...ಏನೋ ಮಜಾ ಬರ್ತಿದೆ...ಹ್ಯಾಂಗಿಂಗ್ ಅರೌಂಡ್..." ಚಲನಾ ಚುಟುಕಾಗಿ ಉತ್ತರಿಸಿದ್ದಳು...
"ವಾಟ್ಸ್ ನೆಕ್ಸ್ಟ್?" ಸ್ಥಿರೆಯ ಪ್ರಶ್ನೆ ಶುರುವಾಯಿತು..
"ಐ ಡೋಂಟ್ ನೋ...ಟ್ರಾವೆಲ್ ಮಾಡ್ತಾ ಇದ್ರೆ ಟೈಂ ಪಾಸ್ ಆಗತ್ತೆ...ಅದ್ ಬಿಟ್ಟು ಬ್ಯಾಂಗಲೋರ್ ಬಂದ್ರೆ ಯಾಕೋ ಒಬ್ಳೇ ಒಬ್ಳೇ ಅನಸ್ತಿದೆ..." ಚಲನಾ ನಿಧಾನವಾಗಿ ಮಾತನಾಡಹತ್ತಿದ್ದಳು.
ಇನ್ನೊಂದಿಷ್ಟು ಪ್ರಶ್ನೆ ಮತ್ತೊಂದಿಷ್ಟು ಉತ್ತರ. ತಿರುಳೆಲ್ಲ ಒಂದೇ!
"ಐ ಥಿಂಕ್ ಯು ನೀಡ್ ಅ ಕಂಪಾನಿಯನ್..." ಸ್ಥಿರೆ ಅಳೆದೂ ತೂಗಿ ಸಲಹೆ ಕೊಟ್ಟಳು..
"ಐ ವಾಸ್ ಥಿಂಕಿಂಗ್ ಅಬೌಟ್ ದ ಸೇಮ್...ಬಟ್ ನನ್ನ ಅರ್ಥ ಮಾಡ್ಕೊಳ್ಳೋರ್ ಬೇಕು...ಐ ಡೋಂಟ್ ನೋ ಆ ಥರ ಯಾರಾದ್ರೂ ಇದಾರಾ ಅಂತಾ......" ಚಲನಾ ಒಪ್ಪಿದ್ದಳು. ತನ್ನ ಅನುಮಾನಗಳನ್ನೂ ಹೇಳಿದ್ದಳು..
"ನೈಸ್...ಯು ವಿಲ್ ಫೈಂಡ್ ಸಮ್‍ವನ್ ಡೋಂಟ್ ವರಿ..." ಸ್ಥಿರೆಯ ಮುಖದಲ್ಲಿ ನಗುವಿತ್ತು...
"ಇನ್ ಫ್ಯಾಕ್ಟ್ ಹೌ ಲಾಂಗ್ ಭಿಷ್ ಕಾನ್ ಹ್ಯಾಂಡಲ್ ಮಿ...." ಸ್ಥಿರೆಗೆ ಆಕೆಯ ಮಾತು ಅರ್ಥವಾಗಲಿಲ್ಲ..
..
"ವಾಟ್" ಎಂದಳು...ಕೇಳಬೇಕೆನಿಸಿದ ಸಾವಿರ ಪ್ರಶ್ನೆಗಳಿದ್ದವು...
"ಜಸ್ಟ್ ಕಿಡಿಂಗ್....ಅವನ್ ನನ್ ಫ್ರೆಂಡ್ ಅಷ್ಟೇ...." ಆಕೆಯ ತುಂಟಾಟ ಮುಂದುವರೆದಿತ್ತು....
ಸ್ಥಿರೆಗೆ ತುಂಬಾ ದಿನದಿಂದ ಕೇಳಬೇಕೆನಿಸಿತ್ತು. "ಇಫ್ ಯು ಡೋಂಟ್ ಮೈಂಡ್...ನಾನ್ ಏನೋ ಕೇಳ್‍ಬಹುದಾ?"
"ಶ್ಯುರ್...ಗೋ ಅಹೆಡ್" ಚಲನಾ ಸಿಗರೇಟ್ ತೆಗೆದಳು...ಆದರೆ ಲೈಟರ್ ಇರಲಿಲ್ಲ...ಶತಭಿಷ ಫೋನಿನಲ್ಲಿದ್ದ....ಸ್ಥಿರೆ ಕಾಫಿ ಡೇ, ಪಿ.ವಿ.ಆರ್ ವಿಚಾರಗಳನ್ನೆಲ್ಲಾ ಕೇಳಿದಳು....ಉತ್ತರ ಪಡೆದಳು...
"ನೀವಿಬ್ರೂ ಯಾಕ್ ಹಿಂಗ್ ಇರ್ತೀರಾ? ಅರ್ಥ ಮಾಡ್ಕೊಳೋದ್ ತುಂಬಾ ಕಷ್ಟ....." ಹುಸಿಕೋಪದಿಂದ ಕೇಳಿದ್ದಳು....
ಚಲನಾ ಮಾತಾಡಲು ಶುರುಮಾಡಿದಳು..."ಅದು ಏನ್ ಅಂದ್ರೆ...." ಮಾತು ಮುಗಿಸುವ ಮೊದಲೇ ನಗುತ್ತಿದ್ದಳು...ಸ್ಥಿರೆ ನಗಲಿಲ್ಲ...
"ನೆವರ್ ಮೈಂಡ್....ಪಾಸ್ಟ್ ಈ ಪಾಸ್ಟ್....ಮಿ ಆಂಡ್ ಶತಭಿಷ...ವಿ ಆರ್ ಜಸ್ಟ್ ಫ್ರೆಂಡ್ಸ್ ಈಗಾ...ಅವನ್ ಫರ್ಮ್ ಏನೋ ಲಾಕ್ ಆಗಿದೆ ಅಂತಲ್ಲ...ಈ ಥಿಂಕ್ ಹಿ ಈಸ್ ಡಿಪ್ರೆಸ್ಡ್....ಏನೋ ಹೆಲ್ಪ್ ಮಾಡ್ತಾ ಇದ್ದೆ...ಟು ಜಸ್ಟ್ ಚಿಲ್ಲ್ ಹಿಮ್...." ಚಲನಾ ಬಿಡಿಸಿ ಹೇಳಿದ್ದಳು...
"ಡಿಪ್ರೆಷನ್ನಾ? ಉಫ್..." ಸ್ಥಿರೆಗೆ ಶತಭಿಷನ ಜೊತೆ ಮಾತಾಡಬೇಕೆನಿಸಿತ್ತು....ಅವರಿಬ್ಬರೂ ವಿರಾಮವಾಗಿ ಸಮಯ ಕಳೆದು ಬಹಳೇ ದಿನಗಳಾಗಿತ್ತು....ಅಷ್ಟರಲ್ಲಿ ಶತಭಿಷ ವಾಪಸ್ ಬಂದ....ಖುಷಿಯಲ್ಲಿದ್ದ...ಸ್ವಲ್ಪ ಹೊತ್ತು ಅಲ್ಲಿಯೇ ಕಾಲ ಕಳೆದು ಕತ್ತಲಾದ ಮೇಲೆ ಎಲ್ಲರೂ ಮನೆಗೆ ಹೋದರು...
ಆ ದಿನ ರಾತ್ರಿಯೇ ಚಲನಾ ಹೊರಡುವೆನೆಂದಳು...ಅದೇನೇನೋ ಟ್ರಿಪ್ ಯೋಜನೆ ಹಾಕಿಕೊಂಡಿದ್ದಳು...ಹೊಸ ಗೋ ಪ್ರೋ ಕ್ಯಾಮರಾ ತೋರಿಸಿದಳು...ಟ್ರಾವೆಲ್ ವ್ಲಾಗ್ ಶುರುಮಾಡುವೆ ಎಂದಳು... ಹೊರಡುವ ಮುನ್ನ ಮನೆಯ ವೀಡಿಯೋ ಮಾಡಿ, ಸ್ಥಿರೆಯ ತಾಯಿಯ ಬಳಿಯಿದ್ದ ಸೀರೆಯೊಂದನ್ನು ಕೇಳಿ ಪಡೆದಿದ್ದಳು.
ಆಕೆಯನ್ನು ಬಸ್ ಹತ್ತಿಸಿ ಬಂದ ಶತಭಿಷ ಸ್ಥಿರೆಯ ಜೊತೆ ಅಪರೂಪದ ಸಮಾಧಾನದಿಂದ ಮಾತಾಡಿದ್ದ...ಉತ್ಸಾಹದಲ್ಲಿದ್ದ....ಆತನಿಗೆ ಹೊಸ ಪ್ರಾಜೆಕ್ಟ್‍ವೊಂದು ಸಿಕ್ಕಿತ್ತು. ಸ್ಟಾರ್ಟ್‍ಪ್‍ವೊಂದು ಸ್ಟಾಕ್‍ಗಳ ಪ್ರಿಡಿಕ್ಷನ್‍ಗೆ ಸಾಫ್ಟ್‍ವೇರ್ ತಯಾರಿಸುತ್ತಿತ್ತು. ಸ್ಟಾಕ್‍ಗಳ ಬಗ್ಗೆ ಅದಾಗಲೇ ಸಾಕಷ್ಟು ಗೊತ್ತಿದ್ದ ಶತಭಿಷನನ್ನೂ ರಿಸೋರ್ಸ್ ಆಗಿ ಪರಿಗಣಿಸಲಾಗಿತ್ತು. ಆದರದು ಕನ್ಸಲ್ಟಂಟ್ ಕೆಲಸ. ಆದದ್ದಾಗಲಿ ಎಂದು ಹೂಂ ಎಂದಿದ್ದ...ಸ್ಥಿರೆ ಕೂಡಾ ನೆಮ್ಮದಿಯಿಂದ ಮಲಗಿದಳು...ಪೂಜೆ ಮುಗಿಸಿ ಎಲ್ಲರೂ ಬೆಂಗಳೂರಿಗೆ ವಾಪಸ್ಸಾದರು....
**
ಒಂದು ವಾರದಿಂದ ಸ್ಥಿರೆ ಟೆನ್ಷನ್‍ನಲ್ಲಿ ಇದ್ದಂತೆ ಕಂಡಳು...ಕೊನೆಗೊಂದು ದಿನ ಶತಭಿಷ ಊಟವೆಲ್ಲ ಮುಗಿದ ಮೇಲೆ ರಮಿಸಿ ಕೊನೆಗೂ ಆಕೆಯ ಬಾಯಿ ಬಿಡಿಸಿದ...
"ಫುಲ್ ಟೀಂನಾ ಆನ್ ಸೈಟ್ ಶಿಫ್ಟ್ ಆಗಕ್ ಹೇಳ್ತಿದಾರೆ... ಬಟ್ ಐ ಕಾಂಟ್ ಗೋ... " ಸ್ಥಿರೆ ತನ್ನ ಪರಿಸ್ಥಿತಿ ವಿವರಿಸಿದ್ದಳು...
ಮಗುವಿನಿಂದ ದೂರವಿರುವುದು ಆಕೆಗೆ ಇಷ್ಟವಿರಲಿಲ್ಲ...ಜೊತೆಗೆ ಕರೆದುಕೊಂಡು ಹೋಗುವುದು ಸಾಧ್ಯವಿರಲಿಲ್ಲ...
ಅದಾಗಲೇ ಕಂಪನಿ ರೀ-ಆರ್ಗ್ ಆಗುತ್ತಿದ್ದುದರಿಂದ ಕೆಲಸ ಉಳಿಸಿಕೊಳ್ಳುವುದು ಕಷ್ಟವಿತ್ತು.....
ಶತಭಿಷ ಬಹಳ ಹೊತ್ತು ಯೋಚನೆ ಮಾಡಿ ಇನ್ನೇನು ಉತ್ತರ ನೀಡುವವನಿದ್ದ...
ಅಷ್ಟರಲ್ಲಿ ಮನೆಯ ಬೆಲ್ ರಿಂಗಣಿಸಿತ್ತು....
ಚಲನಾ ಮತ್ತು ವಿನಯ್ ಮನೆಬಾಗಿಲ ಮುಂದಿದ್ದರು...
-ಚಿನ್ಮಯ
17/2/2019

Wednesday, February 13, 2019

ಆಫ್ರಿಕಾ

"ಹೆಣ್‍ಮಕ್ಳು ಸಂನ್ಯಾಸಿ ಆಗದ್ ಕಷ್ಟಾ.....ಸುತ್ತಾ ಮುತ್ತ ಇರೋರು ಮನಸನ್ನಾ ಡೈವರ್ಟ್ ಮಾಡ್‍ಬಿಡ್ತಾರೆ...." ಸ್ಥಿರೆ ತರಕಾರಿ ಹೆಚ್ಚುತ್ತಾ ತೀರ್ಪುಕೊಡುತ್ತಿದ್ದಳು....
"ಹಂಗೇನಿಲ್ಲ...ಅವಳೇನ್ ಸಂನ್ಯಾಸಿ ಅಂತಾ ಹೇಳ್ಕೊಂಡಿಲ್ಲ...ಅವರವರ ನಂಬಿಕೆ ಅವರವರಿಗೆ..." ಶತಭಿಷ ಚಲನಾಳನ್ನು ಬಿಟ್ಟುಕೊಡಲು ತಯಾರಿರಲಿಲ್ಲ...
"ಶಾಂತಿ ನೆಮ್ಮದಿ ಸತ್ಯ ಎಲ್ಲಾ ಪ್ರವಚನ ಮಾಡಕ್ ಓ.ಕೆ....ಆದ್ರೆ ರಿಯಲ್ ಲೈಫಲ್ಲಿ ತುಂಬಾನೇ ಕಷ್ಟ..ಏನೋಪಾ....ನಂಗ್ಯಾಕೋ ಅವರಿಬ್ರ ಮಧ್ಯ ಏನೋ ಸ್ಪಾರ್ಕ್ ಕಂಡಂಗಾಯ್ತು...." ಸ್ಥಿರೆ ಗ್ಯಾಸ್ ಉರಿಸಿದಳು...
"ಏನೋ ನಡೀತಾ ಇದ್ರೆ ನಡೀಲಿ ಬಿಡು.. ಒಳ್ಳೇದೇ...." ಶತಭಿಷ ಹಳೆಯ ಸೂಟ್‍ಕೇಸನ್ನು ಲಿವಿಂಗ್ ರೂಮ್‍ನಲ್ಲೇ ಹರಡಿಕೊಂಡಿದ್ದ... ಮಗು ಆತನ ಜೊತೆಗೇ ಹಳೆಯ ಡೈರಿಗಳನ್ನು ತೆರೆದು ಆ ಪುಟ ಈ ಪುಟ ನೋಡುತ್ತಿತ್ತು...ಒಂದೆರಡು ಹಳೇಕಾಲದ ದಿನಪತ್ರಿಕೆಯ ತುಣುಕುಗಳೂ ಅಲ್ಲಿ ಹರಡಿದ್ದವು....ಕೆಲವು ಇನ್ನೇನು ಹರಿಯಲು ಬಂದಿದ್ದವು...ಧೂಳು ಹಿಡಿದಿದ್ದವು...
"ಅದ್ರಲ್ಲ್ ಬೇಕಾಗಿದ್ದ್ ಇಟ್ಕೊಂಡು, ಉಳಿದಿರೋದನ್ನ ರದ್ದಿಗ್ ಹಾಕ್‍ಬಾರ್ದಾ? ಸುಮ್ನೆ ಧೂಳ್ ಹೊಡ್ಕೊಂಡ್ ಇರತ್ತೆ...." ಸ್ಥಿರೆ ಮತ್ತೊಂದು ಬಾರಿ ಪ್ರಯತ್ನಿಸಿದ್ದಳು...
"ಬೇಕು ಅವಲ್ಲಾ....ಯಾವದನ್ನೂ ರದ್ದಿಗ್ ಹಾಕ್ಬೇಡಾ...." ಆತ ಮತ್ತೆ ಅದೇ ಉತ್ತರ ಕೊಟ್ಟಿದ್ದ...
ಈಗಾಗಲೇ ಈ ವಿಚಾರವಾಗಿ ಮನೆಯಲ್ಲಿ ಬಹಳ ಬಾರಿ ಚರ್ಚೆಯಾಗಿತ್ತು....ಸ್ಥಿರೆಗೆ ಕ್ಲೀನ್ ಮಾಡುವ ಚಿಂತೆ...ಸದಾ ಧೂಳು ಹೊಡೆಯುವ ಆ ಸೂಟ್‍ಕೇಸ್‍ನಲ್ಲಿ ಅದೇನಿದೆ ಎನ್ನುವುದು ಆಕೆಗೆ ಅರ್ಥವಾಗಿರಲಿಲ್ಲ....ಮದುವೆಯಾದ ಹೊಸತರಲ್ಲಿ ಓಪನ್ ಮಾಡಿ ನೋಡಿದ್ದಳಾದರೂ ಒಂದಿಷ್ಟು ಡೈರಿ, ಅದರೊಳಗೊಂದಿಷ್ಟು ಕವನ, ಜೊತೆಗೊಂದಿಷ್ಟು ಚಿತ್ರ ಅಷ್ಟೇ ಸಿಕ್ಕಿದ್ದುದು....ಶತಭಿಷ ಹಳೆಯ ಚಿತ್ರ-ಕವನ ನೋಡುತ್ತಾ ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಿದ್ದ....ಆತ ತುಸು ಗಂಭೀರವಾಗಿದ್ದುದನ್ನು ನೋಡಿ ಸ್ಥಿರೆಯೂ ಡಿಸ್ಟರ್ಬ್ ಮಾಡಲಿಲ್ಲ...
ಇದ್ದಕ್ಕಿಂದಂತೇ ಚಿತ್ರವೊಂದನ್ನು ನೋಡಿ ಮಗು ನಗಹತ್ತಿತು...
"ಏನ್ ಅರ್ಥ ಆಯ್ತು ಅವನಿಗೆ?" ಆಕೆ ಆಶ್ಚರ್ಯದಿಂದ ಕೇಳಿದ್ದಳು....
"ಏನಿಲ್ಲ...ಮಂಗ ಇದ್ಯಲ್ಲಾ...ಅದ್ಕೇ ಇಷ್ಟ ಆಗಿರ್ಬೇಕು...." ಆತ ತಲೆಗೊಂದು ಮೆದುವಾಗಿ ಮೊಟಕಿ, ಆ ಡೈರಿಯನ್ನು ಮಗುವಿನ ಕೈಯ್ಯಿಂದ ಜೋಪಾನವಾಗಿ ಎಳೆದುಕೊಂಡ......ಮಗು ಕೊಸರಾಡಿತು...ಮತ್ತೊಂದು ಡೈರಿ ಕೈಗೆ ಹಿಡಿಸಿದ... 
"ಹಮ್ಮ್...ಏನಿದೆ ಅದ್ರಲ್ಲಿ ಅಂಥದ್ದು?" ಸ್ಥಿರೆ ಹುಬ್ಬು ಹಾರಿಸಿದ್ದಳು... ಕುಕ್ಕರ್ ಇಟ್ಟು ಲಿವಿಂಗ್ ರೂಮಿಗೇ ಬಂದಿದ್ದಳು.. ಫೋಟೋದಲ್ಲಿ ಹುಡುಗ ಹುಡುಗಿಗೆ ಸೇಬೊಂದನ್ನು ಕೊಡಹೊರಟಿದ್ದ...ಆತನ ಹೆಗಲಮೇಲೆ ಕೂತ ಮಂಗ ಅದನ್ನು ಕದಿಯಹೊರಟಿತ್ತು.....
"ಏನೋ ಇರತ್ತಪ್ಪಾ...ನಿಂಗ್ಯಾಕ್ ಅದೆಲ್ಲಾ?" ಶತಭಿಷ ಕೆಕ್ಕರಿಸಿ ನೋಡಿದ್ದ...
"ಮದ್ವೆ ಆಗಿ ಮಗು ಆಯ್ತು...ಇನ್ನೂ ಸೀಕ್ರೆಟಾ?" ಸ್ಥಿರೆಯ ಮಾತಿನಲ್ಲಿ ತುಂಟನಗೆಯಿತ್ತು...
"ಮೆಂಟೇನ್ ಮಾಡ್ಬೇಕಾಗತ್ತೆ ಕೆಲವೊಂದು...." ಆತ ತಲೆ ತುರಿಸಿಕೊಂಡ....
"ಹೇಳ್ಳೇ ಬಾರ್ದು ಅಂತಿದ್ರೆ ನಮ್ದೇನ್ ಒತ್ತಾಯ ಇಲ್ಲಪ್ಪಾ...." ಆಕೆ ಕಿಚನ್ ಕಡೆ ಹೊರಟಿದ್ದಳು...
"ಹಮ್....ಸರಿ ಕೇಳು....ಅದು..ಅವತ್ತು ನಾವೆಲ್ಲಾ ಫ್ರೆಂಡ್ಸು ಮುಳ್ಳಯ್ಯನಗಿರಿಗ್ ಹೋಗಿದ್ವಿ...ಚಲನಾನೂ ಬಂದಿದ್ಲು" ಆತ ಚಲನಾಳ ಹೆಸರು ಹೇಳಿದ ಕೂಡಲೇ ಸ್ಥಿರೆ ತಿರುಗಿದಳು...ಶತಭಿಷ ಮುಂದುವರೆಸಿದ...
"ಸುಹಾಸ್‍ಗೆ ಚಲನಾ ಅಂದ್ರೆ ತುಂಬಾ ಇಷ್ಟ...ಆದ್ರೆ ಹೇಳ್ಕೊಳಕ್ಕ್ ಆಗ್ದೇ ಒದ್ದಾಡ್ತಾ ಇದ್ದ...ನಾವ್ ಮೂರ್ ಜನ ಸಖತ್ ಕ್ಲೋಸ್ ಆಗಿದ್ವಿ...ಅವತ್ತ್ ಛಳಿ ಅಂದ್ರೆ ಛಳಿ...ಬೆಳ್ ಬೆಳಿಗ್ಗೆ ಸನ್ ರೈಸ್ ನೋಡಕ್ಕೆ ಅಂತಾನೇ ಹೋಗಿದ್ವಿ...ಅದೇನಾಯ್ತು...ಚಲನಾಗೆ ಫುಲ್ ಛಳಿ ಆಗಿ, ಅವಳು ನಡಗ್ತಾ ಇದ್ಲು...ನಾನ್ ನನ್ ಜಾಕೇಟ್ ಕೊಟ್ಟೆ...ಪಾಪ ಸುಹಾಸ್ ಫುಲ್ ಉರ್ಕೋಂಡ....ಏನೋ ಸಿಲ್ಲಿ ಮ್ಯಾಟರ್‍ಗೆ ನಾನೂ ಅವನೂ ಫುಲ್ ಕಿತ್ತಾಡಿದ್ವಿ...." ಆತ ಮಾತು ಮುಗಿಸುವಷ್ಟರಲ್ಲೇ ಆಕೆ ಜೋರಾಗಿ ನಗಹತ್ತಿದ್ದಳು...
"ಏನಾಯ್ತು?" ಆತ ನಗುತ್ತಲೇ ಕೇಳಿದ್ದ...
"ಏನಿಲ್ಲ..." ಆಕೆ ಬಾಯಿಗೆ ಕೈ ಅಡ್ಡಮಾಡಿ ನಗುತ್ತಿದ್ದಳು...
"ಹೇಳು...." ಆತ ಒತ್ತಾಯಿಸಿದ್ದ....
"ಅವಳ್ ಬೇಕಂತನಾ ಸ್ವೇಟರ್ ಹಾಕೊಂಡ್ ಹೋಗಿರಲ್ಲ....ಛಳಿ ಛಳಿ ಅಂದಿರ್ತಾಳೆ.....ಬಿಡು...ನೀವ್ ಗುಗ್ಗುಗಳು....ಮುಂದೇ?" ಆಕೆ ಕುತೂಹಲದಿಂದ ಕೇಳಿದ್ದಳು...
"ಮುಂದೇನಿಲ್ಲ...ಆ ಟ್ರಿಪ್ ಅಲ್ಲಿ ನಾನು ಸುಹಾಸ್ ಜೊತೆ ಸರಿಯಾಗ್ ಮಾತಾಡಿಲ್ಲ....ಅವಳೂ ಅವನನ್ನ್ ಸ್ವಲ್ಪ್ ಅವಾಯ್ಡ್ ಮಾಡಿದ್ಲು ಅನ್ಸತ್ತೆ....ಅದ್ಕೇ ಅವನು ಅವತ್ತ್ ರಾತ್ರಿ ಫುಲ್ ಚಿತ್ತಾಗಿ ಎಲ್ಲರನ್ನೂ ವೀಲಿಂಗ್ ಮಾಡಣಾ ಅಂತಾ ಕರ್ಕೊಂಡ್ ಹೋದ.... ಬ್ಯಾಲೆನ್ಸ್ ತಪ್ಪಿ ಬಿದ್ದು, ಕೈ ಮುರ್ಕೊಂಡಿದ್ದ...ನಂಗೂ ಏಟಾಗಿತ್ತು...." ಶತಭಿಷ ಹಳೆಯ ಗಾಯದ ಕಲೆಯನ್ನು ನೋಡಿಕೊಳ್ಳಹತ್ತಿದ್ದ...
"ಅವಳು ಅವನ್ ಜೊತೆ ರಾತ್ರಿ ಪೂರ್ತಿ ಹಾಸ್ಪಿಟಲ್ ಅಲ್ಲ್ ಇದ್ಲಾ?" ಸ್ಥಿರೆ ಥಟ್ ಅಂತಾ ಕೇಳಿದಳು...
"ಹೂಂ...ಅವತ್ತ್ ರಾತ್ರಿ ಚಲನಾ ಬಿಡ್ಸಿದ್ ಚಿತ್ರ ಇದು..." ಶತಭಿಷ ಆ ಚಿತ್ರದ ಹಿನ್ನೆಲೆ ಹೇಳಿದ್ದ...
"ಇಕ್ವಲ್ ಆಯ್ತು ಬಿಡು...ಅಲ್ಲಿಂದ ಅವರದ್ದ್ ಪ್ಯಾಚ್‍ಅಪ್ ಆಯ್ತಾ?" ಆಕೆಗೆ ಚಿತ್ರಕ್ಕಿಂತ ಮುಂದಿನ ಕತೆಯ ಬಗ್ಗೆ ಆಸಕ್ತಿ ಮೂಡಿತ್ತು....
"ಹಾಂ...ಅವಳು ಅವನ ಹತ್ರ ಏನೋ ಸ್ವಲ್ಪ್ ಮಾತಾಡ್ತಿದ್ಲು...ಬಟ್ ನಾನೂ ಚಲನಾ...." ಆತ ಮಾತು ಮುಂದುವರೆಸಲು ತಿಣುಕಾಡುತ್ತಿದ್ದ...
ಅಷ್ಟರಲ್ಲೇನೋ ಪರ್ರ್ ಎಂಬ ಸದ್ದು...
ಮಗು ತಾಯಿಯ ಮಡಿಲಿಂದ ಡೈರಿಯನ್ನು ಎತ್ತಿಕೊಂಡು ಆ ಪುಟವನ್ನು ಹರಿದಿತ್ತು....ಶತಭಿಷ ಕೋಪದಿಂದ ಮಗುವನ್ನು ಬೈದ...ಅದು ಅಳಹತ್ತಿತ್ತು....ಸ್ಥಿರೆ ಮಗುವನ್ನು ಸುಮ್ಮನಾಗಿಸಲು ಕಷ್ಟಪಟ್ಟಳು...ಶತಭಿಷ ಡೈರಿಗಳ ಲೋಕದಲ್ಲಿ ಮುಳುಗಿಹೋದ...ಮುಳ್ಳಯ್ಯನಗಿರಿಯ ವಿಷಯ ಅಲ್ಲಿಗೇ ನಿಂತಿತು....ಕುಕ್ಕರ್ ಸೀಟಿ ಹೊಡೆಯಿತು...
** 
"ಲೇಡೀಸ್ ನೈಟ್...." ಸ್ಥಿರೆ ಶತಭಿಷನಿಗೆ ಮಗುವಿಗೆ ಊಟ ಮಾಡಿಸಿ ಮಲಗಿಸುವ ಜವಾಬ್ದಾರಿಯನ್ನು ವಹಿಸಿದ್ದಳು...ಶನಿವಾರ ಸಂಜೆ ಶಾಪಿಂಗ್‍ಗೆಂದು ಹೋದ ಸ್ಥಿರೆ ಮತ್ತು ಸಂಗಡಿಗರು ಮೆಕ್-ಡಿಯಲ್ಲಿ ಮೆನ್ಯು ಹಿಡಿದು ಕ್ಯಾಲರಿ ಲೆಕ್ಕ ಹಾಕುತ್ತಿದ್ದರು... ಸುಮ್ಮನೇ ಅದು-ಇದು ಮಾತಾಡುತ್ತಾ ಕಾಲೇಜು ದಿನಗಳಲ್ಲಿ ಮಾಡುತ್ತಿದ್ದ ಲೇಟ್ ನೈಟ್ ಪಾರ್ಟಿಗಳ ಬಗ್ಗೆ ನೆನಪಿಸಿಕೊಳ್ಳುತ್ತಿದ್ದರು. ಅಲ್ಲಿಂದ ಮಾತಿಗೆ ಮಾತು ಬೆಳೆದು, ನಾಲ್ಕೈದು ಮಂದಿ ಅನ್‍ಪ್ಲಾನ್ಡ್ ಆಗಿ ಅಂದು ರಾತ್ರಿ ಪಬ್ಬೊಂದಕ್ಕೆ ಎಂಟ್ರಿ ಕೊಟ್ಟಿದ್ದರು. ಸುಮ್ಮನೇ ಒಂದೆರಡು ತಾಸು ಇದ್ದು, ಹೊರಟುಬಿಡುವ ಆಲೋಚನೆ ಅವರದ್ದಾಗಿತ್ತು....ಶತಭಿಷನೂ ಕೂಡಾ "ಓ.ಕೆ...ಎಂಜಾಯ್" ಎಂದು ರಿಪ್ಲೈ ಮಾಡಿದ್ದ...ಆದರೆ ಸ್ಥಿರೆಗೆ ಮಾತ್ರ ಎಂಜಾಯ್ ಮಾಡಲು ಸಾಧ್ಯವೇ ಆಗಲಿಲ್ಲ...
"ಏನ್ ಫುಲ್ ಪಾರ್ಟಿನಾ?" ಅನಿರೀಕ್ಷಿತವಾಗಿ ವಿನಯ್ ಕಾಣಿಸಿಕೊಂಡಿದ್ದ....ಆತನಿಗೆ ಬಹುತೇಕ ಮಾತಿನ ಮೇಲಿನ ಹಿಡಿತ ತಪ್ಪಿದಂತಿತ್ತು...
"ಹಾಯ್....ಇಲ್ಲಾ ಹಂಗೇ ಸುಮ್ನೆ..."  ಸ್ಥಿರೆ ವಾಡಿಕೆಯ ಮಾತುಗಳನ್ನಾಡಿದಳು....
"ಓ.ಕೇ ಮಾಡಿ ಮಾಡಿ....ಏಂಜಾಯ್...." ಎಂದು ಆತ ಹೊರಟುಹೋಗಿದ್ದ....ಆಕೆ ಫಾರ್ಮಾಲಿಟಿಗೆ ನಕ್ಕಿದ್ದಳು...ಆತ ಹತ್ತೇ ನಿಮಿಷಕ್ಕೆ ವಾಪಸ್ ಬಂದಿದ್ದ....
"ಎಕ್ಸ್ ಕ್ಯೂಸ್ ಮಿ....ಚೂರ್ ಮಾತಾಡಕ್ಕಿದೆ ನಿಮ್ ಹತ್ರ...ನಿಮ್ಮ್ ಹಸ್ಬಂಡ್ ಬ್ಯುಸಿನೆಸ್ ವಿಷ್ಯ...ಇಫ್ ಯು ಡೋಂಟ್ ಮೈಂಡ್..." ಆಕೆಯ ಸ್ನೇಹಿತೆಯರೆದು ತುಂಬಾ ಡಿಗ್ನಿಫೈಡ್ ಆಗಿಯೇ ಮಾತಾಡಿದ್ದ...
"ಬಂದೆ" ಎಂದವಳೇ, ಕಾರ್ನರ್‍ಗೆ ಹೊರಟಳು....
"ಡೋಂಟ್ ವರಿ...ನಿನ್ ಜೊತೆ ಮಾತಾಡ್ಬೇಕು ಅಂತೇನ್ ಕರಿದ್ದಲ್ಲ...ನಿನ್ ಹಸ್ಬಂಡ್‍ಗೆ ಸ್ವಲ್ಪ ಬುದ್ಧಿ ಹೇಳು ಅಂತಾ ಹೇಳಕ್ಕ್ ಕರ್ದಿದ್ದು....." ನೇರವಾಗಿ ಮಾತಾಡುವವರು ಆಕೆಗೆ ಇಷ್ಟವೆಂದು ಆತನಿಗೆ ಗೊತ್ತಿತ್ತು....
"ಏನ್ ಹೇಳಕ್ಕಿದೆ? ನೀನ್ ಏನ್ ಮಾತಾಡದೇ ಅವತ್ತು?" ಆಕೆಗೆ ಶತಭಿಷನ ವ್ಯವಹಾರಗಳ ಕುರಿತು ಅಷ್ಟಾಗಿ ಗೊತ್ತಿರಲಿಲ್ಲ...
"ಕೈ ಬಿಸಿ ಮಾಡದೇ, ಹುಲ್ಲ್ ಕಡ್ಡಿನೂ ಅಲ್ಲಾಡಲ್ಲಾ ನಮ್ಮ್ ಆಫೀಸಲ್ಲಿ...ಅಂಥದ್ರಲ್ಲಿ ಪರ್ಮಿಷನ್ನ್ ಅಪ್ರೂವ್ ಆಗ್ಬೇಕು ಅಂದ್ರೆ ಮೇಲ್ನೋರಿಗೆಲ್ಲಾ ವ್ಯವಸ್ಥೆ ಮಾಡಬೇಕು.....ನಾನ್ ಸತ್ಯಹರಿಶ್ವಂದ್ರ ಅಂದ್ರೆ ಹಂಗೇ ಕೂತಿರ್ಬೇಕ್ ಅಷ್ಟೇ..." ವಿನಯ್ ಸೂಕ್ಷ್ಮವಾಗಿ ಹೇಳಿದ್ದ....
"ಅದ್ ಅವನ್ ಬ್ಯುಸಿನೆಸ್ ವಿಷಯ.....ಅವನ್ ಡಿಸಿಷನ್...ನಾವು ಇನ್ನೊಬ್ಬರ ಪ್ರೊಫೆಷನ್ ವಿಷಯದಲ್ಲಿ ತಲೆ ಹಾಕಲ್ಲ..." ಆಕೆ ಖಡಕ್ಕಾಗಿಯೇ ಹೇಳಿದ್ದಳು..
"ಸರಿಯಾಗಿದೀರಾ ಗಂಡ-ಹೆಂಡತಿ..." ಆತನ ಮಾತಿನಲ್ಲಿ ವ್ಯಂಗ್ಯವಿತ್ತು....ನಿರಾಸೆಯೂ ಇತ್ತು...
"...ಬಟ್ ಥ್ಯಾಂಕ್ಸ್ ದ ಅಡ್ವೈಸ್ " ಆಕೆ ಮಾತು ಮುಗಿಸಲು ಹೊರಟಿದ್ದಳು...
"ಅಲ್ವೇ ಅವನು ನೋಡಿದ್ರೆ ಆ ಥರ ಆಟ ಆಡ್ತಾನೆ...ಚಲನಾ ನಂಗ್ ಎಲ್ಲಾ ಹೇಳಿದಾಳೆ..ನೀನ್ ನೋಡಿದ್ರೆ ಅವನ್ನೇ ನಂಬ್ತೀನಿ ಅಂತೀಯಾ...." ಆತ ಮಾತು ನಿಲ್ಲಿಸಿದ.
"ಆಂ?" ಆಕೆಯ ಮುಖದಲ್ಲಿ ಅಲವರಿಕೆಯಿತ್ತು.....
"ಏನೋ....ಒಂದ್ ಕಾಲದಲ್ಲಿ ...ನಾನು ನೀನು ಕ್ಲೋಸಾಗಿದ್ವಲ್ಲಾ ಅಂತಾ ಹೇಳದೇ....ಇಟ್ಸ್ ಓ.ಕೆ...ಹ್ಯಾವ್ ಫನ್...."  ಆತ ಅಲ್ಲಿಂದ ಜಾಗ ಖಾಲಿ ಮಾಡಿದ್ದ...
ಸ್ಥಿರೆಯ ತಲೆಯಲ್ಲಿ ನೂರಾರು ಕ್ಯಾಸೆಟ್ಟುಗಳು ಓಡಾಡುತ್ತಿದ್ದವು....ಅವತ್ತು ತನ್ನ ಲಿಮಿಟ್ಟಿಗಿಂತ ಜಾಸ್ತಿಯೇ ಕುಡಿದಳು...ಅಲರ್ಜಿಯೆಂದು ಗೊತ್ತಿದ್ದೂ ಮಶ್ರೂಮ್ ತಿಂದಳು...ಏನೇನೋ ಮಾತಾಡಹತ್ತಿದ್ದಳು...ಎರಡೋ ಮೂರೋ ಬಾರಿ ಅತ್ತಿದ್ದಳು.....
**
ಅವತ್ತೊಂದು ದಿನ ಸಂಜೆ ಸ್ಥಿರೆ ಮನೆಗೆ ಬರುವಷ್ಟರಲ್ಲಿ ಶತಭಿಷ ಯಾರ ಬಳಿಯೋ ಮಾತಾಡುತ್ತಿದ್ದ....ಶತಭಿಷನ ಕಾಲೇಜಿನಲ್ಲಿ ಪಾಠ ಹೇಳುತ್ತಿದ್ದಾಗ ಆತನ ವಿದ್ಯಾರ್ಥಿಯಾಗಿದ್ದನಂತೆ...ಇದೀಗ ಯಾವುದೋ ರಾಜಕೀಯ ಪಕ್ಷದ ಕಾರ್ಯಕರ್ತನಂತೆ...
"ನಿಮ್ಮ್ ಟ್ಯಾಲೆಂಟ್‍ಗೆ ಪಾಲಿಟಿಕ್ಸ್‍ಅಲ್ಲಿ ಏನ್ ಬೇಕಾದ್ರೂ ಮಾಡ್‍ಬೋದು ಸಾರ್...." ಎಂದು ಹೊಗಳಿ ಅಟ್ಟಕ್ಕೇರಿಸಿದ್ದ...
ಶತಭಿಷನಿಗೆ ಪಾರ್ಟಿಯ ಮೆನಿಫೆಸ್ಟೋ ಬಹಳ ದಿನಗಳಿಂದ ಇಷ್ಟವಾಗಿತ್ತು...ಅದನ್ನಾತ ಆಗಾಗ ಫೇಸ್‍ಬುಕ್ಕಿನಲ್ಲಿ ವ್ಯಕ್ತಪಡಿಸುತ್ತಲೂ ಇದ್ದ....ಈತನ ಮಾತುಕತೆ-ಬರವಣಿಗೆಯ ವರಸೆ ನೋಡಿದ ಅವರು ಈತನಿಗೆ ಎಲೆಕ್ಷನ್ ಸ್ಟ್ರಾಟರ್ಜಿ ಟೀಂನ ಭಾಗವಾಗಲು ಆಹ್ವಾನ ಕೊಟ್ಟಿದ್ದರು...ಅದಾಗಲೇ ಆ ಟೀಂನಲ್ಲಿ ಶತಭಿಷನ ಕಲೀಗ್ ಒಬ್ಬರು ಕೆಲಸಕ್ಕಿದ್ದರು...ಶತಭಿಷ ಆ ಆಫರ್‍ಅನ್ನು ವಿನಯದಿಂದಲೇ ನಿರಾಕರಿಸಿದ್ದ...ಆದರೀಗ ಅವನನ್ನು ಕರೆತರಲೆಂದೇ ಶಿಷ್ಯನೊಬ್ಬ ಬಂದಿದ್ದ....ಶತಭಿಷನಿಗೆ ನೇರವಾಗಿ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ....ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಹೇಳಿ ಅವನನ್ನು ಕಳುಹಿಸಿಕೊಟ್ಟ....
ಆ ದಿನ ರಾತ್ರಿ ಸ್ಥಿರೆಯ ಜೊತೆ ಅದನ್ನು ಚರ್ಚಿಸಿದ...ಆಕೆಗೆ ರಾಜಕೀಯವೆಂದರೆ ಆಗುತ್ತಿರಲಿಲ್ಲ...
"ಇಲೆಕ್ಷನ್‍ಗೆ ನಿಲ್ತಿಯಾ? ಅದೊಂದ್ ಬಿಟ್ಟು ಬೇರೆ ಏನ್ ಬೇಕಾದ್ರು ಮಾಡು" ಎಂದಳು...
ಆತ ಅವಳಿಗೆ ಕನ್ವಿನ್ಸ್ ಮಾಡಲು ಹೊರಟ...ತಾನು ನೇರವಾಗಿ ನಿಲ್ಲುವುದಿಲ್ಲವೆಂದೂ...ನಿಲ್ಲುವ ಅಭ್ಯರ್ಥಿಗಳನ್ನು ಗೆಲ್ಲಿಸಲು ಬೇಕಾದ ರಣತಂತ್ರ ಹೂಡುವುದು ತನ್ನ ಕೆಲಸವೆಂದೂ ಹೇಳಲು ಪ್ರಯತ್ನಿಸಿದ....
ಆಕೆಯ ಉತ್ತರ ಸರಳವಾಗಿತ್ತು...."ಆ ಕೆಲ್ಸಾ ಮಾಡ್ಲೇ ಬೇಕು ಅಂತಿದ್ರೆ ನನ್ ಕೇಳ್ಬೇಡಾ...ನನ್ ಮಾತ್ ಕೇಳದಾದ್ರೆ ಪಾಲಿಟಿಕ್ಸ್ ಎಲ್ಲಾ ಬೇಡಾ..."
ಅವನಿಗೇನೋ ಅವತ್ತು ನಿದ್ದೆ ಬರಲಿಲ್ಲ...
ಮಧ್ಯರಾತ್ರಿಯಲ್ಲಿ ಚಲನಾಳಿಗೆ ಮೆಸ್ಸೇಜು ಹಾಕಿದ್ದ.... "ವಿ ನೀಡ್ ಟು ಟಾಕ್" 
**
ಶತಭಿಷನ ಕೆಲಸದ ವಿಷಯದಲ್ಲಿ ಸ್ಥಿರೆ ದಿನೇ ದಿನೇ ಸಹನೆ ಕಳೆದುಕೊಳ್ಳುತ್ತಿದ್ದಳು....ಶತಭಿಷ ಕೂಡಾ ಫರ್ಮ್ ಲಾಕೌಟ್ ಆಗಿರುವುದರಿಂದ ತೀರಾ ಹತಾಶನಾಗಿದ್ದ....ಅವರಿಬ್ಬರ ನಡುವೆ ಹಣಕಾಸಿನ ವಿಚಾರಕ್ಕೆ ಒಂದೆರೆಡು ಬಾರಿ ಮಾತಿನ ಚಕಮಕಿಯೂ ನಡೆಯಿತು....ಶಟ್‍ಡೌನ್ ನಡೆಯುತ್ತಿದ್ದುದರಿಂದ ಸ್ಥಿರೆ ಮಗುವನ್ನು ಕರೆದುಕೊಂಡು ಊರಿಗೆ ಹೋದಳು...ಶತಭಿಷ ಬ್ಯುಸಿನೆಸ್ ನೆಪ ಹೇಳಿ ಊರಿಗೆ ಹೋಗಿರಲಿಲ್ಲ....
ಹೀಗೇ ಒಂದು ದಿನ ಶತಭಿಷ ಕಾಫಿ ಡೇನಲ್ಲಿ  ಕೂತಿದ್ದ...ಚಲನಾ ಬಂದೇ ಬರುತ್ತಾಳೆಂದು ಯಾವ ಗ್ಯಾರೆಂಟಿಯೂ ಆತನಿಗಿರಲಿಲ್ಲ..ಏಕೆಂದರೆ ಅದಾಗಲೇ ಆತ ಹಲವಾರು ಬಾರಿ ಆಕೆಗೆ "ವೀ ನೀಡ್ ಟು ಟಾಕ್" ಎಂದಿದ್ದ....ಆಕೆಗೆ ಮೆಸ್ಸೇಜ್ ಡಿಲಿವರ್ ಆಗಿರಲಿಲ್ಲ....ಸಿಮ್ ಬದಲಾಯಿಸಿದಳಾ? ಉತ್ತರ ಸ್ಪಷ್ಟವಿರಲಿಲ್ಲ....ಹತ್ತು ದಿನಗಳ ಹಿಂದೆ ಮಧ್ಯಾನ್ಹದ ಹೊತ್ತಿನಲ್ಲೆಲ್ಲೋ ರಿಪ್ಪೈ ಮಾಡಿದ್ದಳು....
"ಡಿಸೆಂಬರ್ 27...ನಮ್ಮನೆ ಮುಂದಿನ ಕಾಫಿ ಡೇ...." ಅಷ್ಟೇ...ಅದಾದ ಮೇಲೆ ಮತ್ತೆ ಮಾತುಕತೆ ನಡೆದಿರಲಿಲ್ಲ...ಮೆಸ್ಸೇಜು ಎಕ್ಸ್‍ಚೇಂಜ್ ಆಗಿರಲಿಲ್ಲ....
ಶತಭಿಷ ಬೆಳಿಗ್ಗೆ ಹನ್ನೊಂದರಿಂದಲೇ ಕಾಯುತ್ತಿದ್ದ....ಒಂದೂವರೆಯ ಸುಮಾರಿಗೆ ಚಲನಾ ಬಂದಿದ್ದಳು...ಬಿಸಿಲಿನಲ್ಲಿ ಓಡಾಡಿದಂತೆ ಕಾಣುತ್ತಿದ್ದು ಚರ್ಮ ಟ್ಯಾನ್ ಆಗಿತ್ತು....
"ಏನೇ ಇದು? ಮತ್ತೆ ಮೊದ್ಲಿನ್ ಹಂಗೇ ಆದ್ಯಲ್ಲಾ..." ಶತಭಿಷ ಖುಷಿಯಿಂದ ಹೇಳಿದ್ದ...
ಅಚ್ಚುಕಟ್ಟಾಗಿ ಬಿಳಿ ಸೀರೆ ಉಟ್ಟು ಕೂದಲು ಬಾಚಿಕೊಂಡು ಮೆಲುವಾಗಿ ಮಾತನಾಡುವುದನ್ನು ರೂಢಿಸಿಕೊಂಡಿದ್ದ ಚಲನಾ ಮತ್ತೆ ಕುರ್ತಾ-ಜೀನ್ಸ್ ಧರಿಸಿದ್ದಳು...ಕೂದಲನ್ನು ಹಾಗೆಯೇ ಹರಡಿಕೊಂಡಿದ್ದಳು...ಸ್ಪೋಟ್ರ್ಸ್ ಷೂ ಹಾಕಿದ್ದಳು....ಫ್ರೀಯಾಗಿ ಮಾತಾಡುತ್ತಿದ್ದಳು...ಬಟ್ಟೆಗೆ ಐರನ್ ಮಾಡಿರಲಿಲ್ಲ...ಮೇಕಪ್ ದೂರವೇ ದೂರ...ಅವಳು ಹೀಗಿರುವುದು ಶತಭಿಷನಿಗೆ ಮೊದಲಿನಿಂದಲೂ ಬಹಳೇ ಇಷ್ಟವಾಗಿತ್ತು....
"ಹೂಂ ಕಣೋ..ಏನೋ...ಚೇಂಜ್ ಬೇಕು ಅನಸ್ತು...." ಆಕೆ ಚಾಕಲೇಟ್ ಮಿಲ್ಕ್ ಶೇಕ್ ಆರ್ಡರ್ ಮಾಡಿದಳು...
"ಎಲ್ಲಿದ್ಯೇ? ಹೆಂಗಿದಿಯಾ?" ಆತ ಕುಶಲ ವಿಚಾರಿಸಿದ...
"ಆಫ್ರಿಕಾ ಟ್ರಿಪ್ ಹೋಗಿದ್ದೆ ಕಣೋ...ಸಖತ್ ಆಗ್ ಇತ್ತು...." ಆಕೆಯ ಮುಖದಲ್ಲಿ ಮಿಂಚಿತ್ತು....ಅದನ್ನು ಗಮನಿಸಿದ ಆತ "ನೈಸ್" ಎಂದ...
"ಏನ್ ಮೆಸ್ಸೇಜ್ ಹಾಕಿದ್ಯಲ್ಲಾ? ಸ್ಥಿರಾ ಏನ್ ಮನೆ ಬಿಟ್ ಓಡ್ಸಿದ್ಲಾ?" ಎಂದಿನ ಸಲುಗೆಯಲ್ಲಿ ಚಲನಾಳ ಮಾತುಕತೆ ಓಡತೊಡಗಿತ್ತು...
"ಹಂಗೇನಿಲ್ವೇ....ಚೆನಾಗೇ ಇದೀವಿ...ಚೂರ್ ಮಾತಾಡಕಿತ್ತು ನಿನ್ ಹತ್ರ...." ಆತ ಪೀಠಿಕೆ ಹಾಕತೊಡಗಿದ್ದ...
"ಹೂಂ ಹೇಳು...ಏನಾಯ್ತ್ ನಿನ್ ಕಂಪನಿ ಕತೆ? ಓಪನ್ ಆಯ್ತಾ?" ಆಕೆ ಸಮಸ್ಯೆಯನ್ನು ಬಹುತೇಕ ಗುರುತಿಸಿದ್ದಳು....
"ಇಲ್ಲಾ...ಅದೇ ಸ್ವಲ್ಪ್ ಪ್ರಾಬ್ಲಂ ಅಲ್ ಇದೆ....ಅದನ್ನಾ ಮೂವ್ ಮಾಡ್ತಿಲ್ಲ...ತುಂಬಾ ದುಡ್ಡ್ ಎಕ್ಸ್‍ಪೆಕ್ಟ್ ಮಾಡ್ತಿದಾರೆ...." ಆತ ಬೇಸರದಿಂದಲೇ ಹೇಳಿದ್ದ...
"ಸೋ?" ಆಕೆ ಆತನ ಪಕ್ಕಕ್ಕೇ ಬಂದು ಕೂತಳು...
"ಏನಿಲ್ಲ...ಪಾಲಿಟಿಕ್ಸ್ ಅಲ್ಲಿ ಸ್ವಲ್ಪ ಲಿಂಕ್ ಸಿಕ್ತು.....ಅದಕ್ಕ್ ಎಂಟರ್ ಆದ್ರೆ ಏನೋ ಇನ್‍ಫ್ಲ್ಯುಯೆನ್ಸ್ ಮಾಡಸ್ಬೋದೇನೋ ಅಂತಾ...." ಆತ ರಾಜಕೀಯದ ವಿಷಯವನ್ನು ಆಕೆಗೆ ವಿವರಿಸಿದ...
"ನಿಂಗ್ ಪಾಲಿಟಿಕ್ಸ್  ಎಲ್ಲಾ ಮಾಡಕ್ ಬರಲ್ಲಾ ಕಣೋ...." ಆಕೆ ಸ್ಪಷ್ಟವಾಗಿಯೇ ಹೇಳಿದ್ದಳು....
"ಯಾಕೇ? ನಮ್ಮಲ್ಲ್ ಏನೂ ಸರಿ ಇಲ್ಲ...ಇಷ್ಟ್ ವರ್ಷದಿಂದ ನೋಡ್ತಿದೀನಿ..." ಆತ ರಾಜಕೀಯದ ದುಸ್ಥಿತಿಯ ಬಗ್ಗೆ ಭಾಷಣ ಆರಂಭಿಸಿದ್ದ...ಆಕೆ ಎಲ್ಲವನ್ನೂ ಕೇಳಿಸಿಕೊಂಡಳು...
"ಮುಗೀತಾ ಎಲ್ಲಾ?" ಆತನ ಮಾತು ಹತ್ತು ನಿಮಿಷ ಮೀರುತ್ತಲೇ ಭುಜ ಚಿವುಟಿದ್ದಳು..
"ಹಾ" ಎಂದ...ಚಿವುಟಿದ ಉರಿಗೋ, ಮಾತು ಮುಗಿಸಿದ್ದಕ್ಕೋ ಸ್ಪಷ್ಟವಿರಲಿಲ್ಲ....
"ನಾನ್ ಜಿಂಬಾಬ್ವೆಗ್ ಹೋಗಿದ್ನೋ....ಅಲ್ಲಿ ಪರಿಸ್ಥಿತಿ ಎಲ್ಲಾ ನೋಡ್ಕೊಂಡ್ ಬಂದ್ಮೇಲೆ ನಾವ್ ಎಷ್ಟ್ ಚೆನಾಗ್ ಇದೀವಿ ಅನಸ್ತಿದೆ...." ಆಕೆ ಅಲ್ಲಿನ ಪರಿಸ್ಥಿತಿಗಳನ್ನು ವಿವರಿಸಿದಳು...ಆಕೆ ಇನ್ನಷ್ಟು ಪ್ರಶ್ನೆಗಳನ್ನು ಕೇಳುತ್ತಾ ಹೋದಂತೆ ಶತಭಿಷನಿಗೆ ರಾಜಕೀಯ ತನ್ನ ಕ್ಷೇತ್ರ ಅಲ್ಲ ಎಂಬುದು ಅರಿವಾಗತೊಡಗಿತು...ಆತ ಸಮಾಧಾನದಿಂದ ಮನೆಯ ಕಡೆ ಹೆಜ್ಜೆ ಹಾಕಿದ...ಆದರೆ ಆ ಸಮಾಧಾನ ಬಹಳ ಹೊತ್ತು ಬಾಳಲಿಲ್ಲ..
**
"ನೋಡು ನಿನ್ ಶ್ರೀರಾಮಚಂದ್ರ..." ವಿನಯ್ ಸ್ಥಿರೆಗೆ  ಕೆಲವು ಫೋಟೋಗಳನ್ನು ವಾಟ್ಸಪ್ ಮಾಡಿದ್ದ... ಕಾಫಿ ಡೇನಲ್ಲಿ ಶತಭಿಷ-ಚಲನಾ ತೀರಾ ಸಮೀಪದಲ್ಲಿ ಕೂತಿದ್ದರು...ಕೊನೆಯ ಫೋಟೋದಲ್ಲಿ ಅಪ್ಪಿಕೊಂಡಿದ್ದರು..
-ಚಿನ್ಮಯ
13/02/2019

Sunday, February 10, 2019

ಭಾಗ-೫

ಅಂದು ಸಂಜೆ ಮಗು ಮಲಗಿತ್ತು. ಸ್ಥಿರೆ ಆಫೀಸಿನಲ್ಲಿದ್ದಳು. ಮನೆಯಲ್ಲಿದ್ದು ಶತಭಿಷನೊಬ್ಬನೇ..ಚಲನಾ ಮನೆಗೆ ಬಂದಳು. ಆದರೆ ಒಬ್ಬಳೇ ಬಂದಿರಲಿಲ್ಲ. ಜೊತೆಗೆ ಒಬ್ಬ ಅಪರಿಚಿತನೂ ಬಂದಿದ್ದ. "ಬನ್ನಿ...ಒಳಗೆ...ಕೂತ್ಕೊಳಿ..." ಶತಭಿಷ ಆತ್ಮೀಯವಾಗಿ ಆಮಂತ್ರಿಸಿದ.. "ವಿನಯ್ ಅಂತಾ...ನಮ್ಮ್ ಓನರ್‍ಗೆ ತುಂಬಾ ಬೇಕಾದೋರು...ನಿಮ್ಮ್ ಜೊತೆ ಏನೋ ಮಾತಾಡ್ಬೇಕು ಅಂತಿದ್ರು " ಎಂದು ಚಲನಾ ಪರಿಚಯಿಸಿದಳು... "ಓಹ್...ಐ ಸಿ...ಹಲ್ಲೋ ವಿನಯ್" ಹಸ್ತಲಾಘವ ನಡೆದಿತ್ತು. ಶತಭಿಷನಿಗೆ ಆತನನ್ನು ಎಲ್ಲೋ ನೋಡಿದ ಹಾಗಿತ್ತು...ಎಲ್ಲಿ ಎಂದು ನೆನಪಾಗಲಿಲ್ಲ... "ನಿಮ್ಮ್ ಬಗ್ಗೆ ತುಂಬಾ ಕೇಳಿದೀನಿ...ತುಂಬಾ ಅಭಿಮಾನ ನಿಮ್ಮ್ ಕಂಡ್ರೆ" ವಿನಯ್ ಸುಳ್ಳುನಗೆಯಾಡಿದ್ದ. "ಥ್ಯಾಂಕ್ಯೂ..." ಶತಭಿಷನಿಗೆಲ್ಲೋ ಅಪಾಯದ ಕರೆಗಂಟೆ ಕೇಳಿಸುತ್ತಿತ್ತು..... "ಏನ್ ಮಾಡ್ತಿದಾನೆ ಚಿಂಟು?ಮಲಗಿದಾನಾ?" ಚಲನಾ ಪ್ರಶ್ನಿಸಿದ್ದಳು... "ಹಾಂ ರೂಮ್‍ನಲ್ಲ್ ಇದಾನೆ..." ಎಂದವನೇ, ಅತಿಥಿಗಳ ಉಪಚಾರಕ್ಕೆಂದು ಫ್ರಿಡ್ಜ್ ಬಾಗಿಲು ತೆರೆದ. ಚಲನಾ ಜ್ಯೂಸ್ ಕುಡಿದರೆ, ಅವರಿಬ್ಬರೂ ಸ್ಕಾಚ್ ಹೀರಿದರು. ವಿನಯ್ ಷೋಕೇಸಿನಲ್ಲಿ ಫೋಟೋ ನೋಡುತ್ತಾ ನಿಂತಿದ್ದ. ಶತಭಿಷನ ಬಳಿ ಏನೋ ಹೇಳಬೇಕೆನ್ನುವಷ್ಟರಲ್ಲಿ ಮಗು ಎದ್ದು ಹಠ ಮಾಡ ತೊಡಗಿತ್ತು. ಶತಭಿಷ ಮಗುವನ್ನು ಸುಧಾರಿಸಿ "ಚಲನಾ ಆಂಟಿ ಬಂದಿದಾರೆ ನೋಡು " ಎಂದು ನೆನಪಿಸಿದ. ಚಲನಾ, ಬ್ಯಾಗಿನಿಂದ ಚಾಕಲೇಟ್ ತೆಗೆದಳು. ಮಗುವಿನ ಜೊತೆ ಬಾಲ್ಕನಿಯಲ್ಲಿ ಆಟವಾಡಲು ಹೋದಳು. ಶತಭಿಷ ವಿನಯ್ ಜೊತೆ ಮಾತುಕತೆ ಆರಂಭಿಸಿದ. "ಐ ವರ್ಕ್ ಫಾರ್ ಗವರ್ನ್‍ಮೆಂಟ್....ನಿಮ್ಮ್ ಕೇಸ್ ಹೆಲ್ಡ್‍ಅಪ್ ಆಗಿರೋದ್ ಗೊತ್ತಾಯ್ತು.. ಹೆಲ್ಪ್ ಮಾಡಣಾ ಅಂತಾ ಬಂದೆ...." ವಿನಯ್ ಗಂಭೀರವಾಗಿಯೇ ಹೇಳಿದ್ದ. "ಓಹ್ ಐ.ಸಿ.. ಯು ವರ್ಕ್ ಫಾರ್?" ಎಂದು ಶತಭಿಷ ಪ್ರಶ್ನಿಸಿದ. "ಎಲ್ಲಾ ಕಡೆ ಲಿಂಕ್ ಇದೆ...ಏನ್ ಕೆಲ್ಸಾ ಬೇಕಾದ್ರೂ ಮಾಡಸ್ಕೊಡ್ತೀವಿ...ಏನೋ ನಮ್ಮೋರು...ಚೂರ್ ಹೆಲ್ಪ್ ಮಾಡಣಾ ಅಂತಾ ಬಂದ್ವಿ...." ಸ್ವಲ್ಪ ದರ್ಪದಿಂದಲೇ ಹೇಳಿದ್ದ. "ಓಹ್...ಗಾಟ್...ಇಟ್...ಬಟ್, ಥ್ಯಾಂಕ್ಯು ಫಾರ್ ದ ಆಫರ್...ನಂಗ್ ಆ ಥರ ವ್ಯವಹಾರ ಮಾಡಕ್ ಇಷ್ಟ ಇಲ್ಲ...." ಶತಭಿಷ ಖಂಡತುಂಡವಾಗಿ ಹೇಳಿದ್ದ. "ಅಯ್ಯೋ...ನಾನೆಲ್ಲಿ ವ್ಯವಹಾರದ ವಿಷ್ಯ ಮಾತಾಡ್ದೆ...ಏನೋ...ನಿಮ್ಮ್ ಫರ್ಮ್ ಫೈಲ್ ಕ್ಲಿಯರ್ ಮಾಡಿಸ್ಕೊಡಣಾ ಅಂತಾ ಬಂದೆ ಅಷ್ಟೇ....ನಿಮಗ್ ಬ್ಯಾಡಾ ಬಿಡಿ...ನಮ್ಗೇನು..." ಆತ ಮತ್ತೊಂದು ರೀತಿಯ ಬ್ಲಾಕ್‍ಮೇಲ್ ಶುರುಮಾಡಿದ್ದ... "ಐ ಆಮ್ ನಾಟ್ ಇಂಟರೆಸ್ಟೆಡ್...." ಶತಭಿಷ ಗ್ಲಾಸುಗಳನ್ನು ಎತ್ತಿಕೊಳ್ಳಲು ಹೊರಟ "ಅನುಭವಿಸ್ತೀನಿ ಅಂದ್ರೆ ಅನುಭವಿಸಿ....ಆಫರ್ ಇರತ್ತೆ ನಮ್ಮ್ ಕಡೆಯಿಂದ ಯಾವಾಗ್ಲೂ..ಯಾಕಂದ್ರೆ ನೀವು ನಮಗ್ ತುಂಬಾ ಬೇಕಾದೋರಿಗೆ ಬೇಕಾದೋರು..ನಿಮಗ್ ಹೆಲ್ಪ್ ಮಾಡಿದ್ರೆ ಅವರಿಗ್ ಹೆಲ್ಪ್ ಮಾಡಿದಂಗೆ...." ಆತನ ಮಾತು ಮುಂದುವರೆದಿತ್ತು....ಶತಭಿಷ ಮನೆಯ ಬಾಗಿಲು ತೆರೆದ....ಅರ್ಥವಾಯಿತು ಎಂಬಂತೇ ಆಗಂತುಕ ಹೊರಡುವ ತಯಾರಿ ನಡೆಸಿದ.. "ಚಲನಾ ಅವ್ರೇ...ಚೂರ್ ಕೆಲ್ಸಾ ಇದೆ...ಥ್ಯಾಂಕ್ಸ್ ಫಾರ್ ದ ಕನೆಕ್ಟ್...." ಚಲನೆಗೆ ಬಾಯ್ ಹೇಳಿ ಆತ ಹೊರಡುವುದರಲ್ಲಿದ್ದ....ಚಲನಾ ತಾನೂ ಬರುವುದಾಗಿ ಹೇಳಿದಳು...ಆತ ಕೆಳಗಡೆ ಕಾರ್ ಸಮೀಪ ಕಾಯುವುದಾಗಿ ಹೇಳಿ ಹೊರಟು ಹೋದ.. ಸ್ಥಿರೆ ಕೆಲಸ ಮುಗಿಸಿ ಹಿಂದಿರುಗುತ್ತಿದ್ದಳು. ದೇಹದಲ್ಲಿ ಆಹಾಸವಿತ್ತು...ತಲೆ ಧಿಮಿಧಿಮಿ ಎನ್ನುತ್ತಿತ್ತು...ಎಡಗಾಲು ಎಡವಿತ್ತು... ಹುಬ್ಬು ಹಾರುತ್ತಿತ್ತು...ಒಳ್ಳೆಯದಾ ಕೆಟ್ಟದಾ? ಅಕೆಗೂ ಸ್ವಷ್ಟವಿರಲಿಲ್ಲ...ಮಗು ಎದ್ಬಿಡ್ತೇನೋ ಎಂದು ಗಡಿಬಿಡಿಯಿಂದ ಲಿಫ್ಟ್ ಕಡೆ ಹೆಜ್ಜೆ ಹಾಕುತ್ತಿದ್ದಳು. ಲಿಫ್ಟಿನ ಬಟನ್ ಒತ್ತಿ ಕಾಯುತ್ತಿರುವಾಗಲೇ ಹಿಂದುಗಡೆಯಿಂದ ಧ್ವನಿಯೊಂದು ಕೇಳಿಸಿತ್ತು... "ಹಲೋ ಮೇಡಮ್...ಚೆನಾಗಿದೀರಾ?" ಸ್ಥಿರೆ ಅದನ್ನು ನಿರೀಕ್ಷಿಸಿರಲಿಲ್ಲ... "ಏಯ್...ವಿನಯ್...ಹೆಂಗಿದಿಯೋ ? ಅಪ್ಪ ಅಮ್ಮಾ ಎಲ್ಲಾ?" ಸ್ಥಿರೆ ಎಂದಿನ ಸಲಿಗೆಯಲ್ಲಿ ಕೇಳಿದ್ದಳು..ಬಹುಷಃ ಇಬ್ಬರೂ ಹಿಂದಿನ ಕಹಿ ಮರೆತಿದ್ದರು.. "ನಂಗೇನೇ...ಚೆನಾಗೇ ಇದೀನಿ...ಅಪ್ಪ-ಅಮ್ಮನೂ ಅರಾಮು....ನೀ ಹೆಂಗಿದೀಯಾ?" ಆತ ಸ್ವಲ್ಪ ಗತ್ತಿನಿಂದಲೇ ಪ್ರಶ್ನಿಸಿದ್ದ. "ನಾನ್ ಸೂಪರ್...ಬಾ ಮನೆಗ್ ಹೋಗ್ ಮಾತಾಡಣಾ..." ಆಕೆ ಆಮಂತ್ರಣ ಕೊಟ್ಟಿದ್ದಳು.... "ಇಲ್ಲಾ ಚೂರ್ ಕೆಲ್ಸಾ ಇದೆ...ಇಲ್ಲೇ ಕ್ಲೈಂಟ್ ಒಬ್ರ್ ಮನೆಗ್ ಬಂದಿದ್ದೆ...ಹೊರಟೆ..." ಆತ ಅರೆಬರೆ ಸತ್ಯ ಹೇಳಿದ್ದ. "ಓಹ್ ಹೌದಾ... ಸರಿ ಸರಿ...ಬಾ ನೆಕ್ಸ್ಟ್ ಟೈಂ ಬಂದಾಗ... ನಮ್ಮನೆ ಇಲ್ಲೇ ಇರೋದು" ಎಂದು ಮನೆ ನಂಬರ್ ಹೇಳಿದ್ದಳು. "ಓಹ್ ...ಮಿಸ್ಟರ್ ಶತಭಿಷ...ನನ್ ಕ್ಲೈಂಟು..." ಆತ ಉತ್ತರಿಸಿದ್ದ. "ಅರೇ..ನನ್ ಹಸ್ಬಂಡ್ ಕಣೋ....ಹೇಳ್ಳಿಲ್ವಾ? ಬಾ ಮತ್ತೆ ಮನೆಗೆ..." ಆಕೆ ಒತ್ತಾಯಿಸತೊಡಗಿದ್ದಳು... "ಇಲ್ಲಾ..ಇನ್ನೊಂದ್ ದಿನ ಬರ್ತಿನಿ...ಇವತ್ತು ನಿಮ್ಮ್ ಹಸ್ಬಂಡ್ ಬೇರೆ ಯಾವದೋ ಮೂಡ್ ಅಲ್ ಇದ್ದಂಗಿದೆ..." ಆತ ಕುಹಕದ ನಗೆಯಾಡಿದ್ದ... "ಹಂಗಂದ್ರೆ?" ಆಕೆ ಅನುಮಾನದಿಂದ ಕೇಳಿದ್ದಳು.. "ಏನಿಲ್ವೆ...ಆಫೀಸ್ ವಿಚಾರ... ಅವ್ರ್ ಫೈಲ್ ಕ್ಲಿಯರ್ ಆಗೋದ್ ಕಷ್ಟ ಇದೆ...ಆಫೀಸಲ್ಲ್ ಮಾತಾಡ್ಕೋತೀವಿ ಬಿಡು...." ಆತ ಮಾತು ಮುಗಿಸುವಷ್ಟರಲ್ಲಿ, ಲಿಫ್ಟ್ ಕೆಳಗೆ ಬಂದಿತ್ತು... ಲಿಫ್ಟಿನಿಂದ ಚಲನಾ ಹೊರಬಂದಳು....ಸ್ಥಿರೆಗೊಂದು ಹಾಯ್ ಹೇಳಿ, ವಿನಯ್ ಜೊತೆ ಹೊರಟಳು. ಸ್ಥಿರೆಯ ತಲೆನೋವು ಜಾಸ್ತಿಯಾಯಿತು. ** ವಿನಯ್‍ಗೆ ಲಂಚ ಕೊಡದ ಕಾರಣ, ಶತಭಿಷನಿಗೆ ಇನ್ನೂ ಕ್ಲಿಯರೆನ್ಸ್ ಸಿಕ್ಕಿರಲಿಲ್ಲ...ಆತನ ಹತಾಶೆ ಜಾಸ್ತಿಯಾಗುತ್ತಿತ್ತು...ಕುಡಿತ ಹೆಚ್ಚಿತ್ತು...ಮಾತು ಮಾತಿಗೂ ರೇಗುತ್ತಿದ್ದ.... ಸ್ಥಿರೆಗೆ ಆಫೀಸು-ಮನೆ-ಮಗು ಎಲ್ಲವನ್ನೂ ಮ್ಯಾನೇಜ್ ಮಾಡುವುದು ಕಷ್ಟವಾಗುತ್ತಿತ್ತು....ಆಕೆಯ ಸಹನೆಯೂ ಆಗಾಗ ತಪ್ಪುತ್ತಿತ್ತು....ಹೀಗೇ ಒಂದು ಜಗಳ. ಆದರೆ ಅಂತ್ಯ ಮಾತ್ರ ಎಂದಿನಂತೆ ಆಗಲಿಲ್ಲ...ಆತ ಅದ್ಯಾವುದೋ ಆವೇಶದಲ್ಲಿ ಕೈ ಎತ್ತಿದ್ದ...ಅರೆ ಕ್ಷಣವಷ್ಟೇ, ತನ್ನ ಮೇಲೆ ತನಗೆ ಹೇಸಿಗೆಯಾಗಿ ಗಾರ್ಡನ್‍ಗೆ ಧಾವಿಸಿದ್ದ.... ಬೆಳಕಿರದ ಜಾಗದಲ್ಲಿ ಬೆಂಚೊಂದರ ಮೇಲೆ ಕೂತಿದ್ದ......ಸಿಗರೇಟಿನ ಪ್ಯಾಕ್ ಮಾತ್ರ ಖರ್ಚಾಗುತ್ತಲೇ ಇತ್ತು...ಆಕೆ ಮಾತನಾಡುವವರೆಗೆ.... "ಪುಳಿಯೊಗರೆ ಬಾಕ್ಸ್‍ನಲ್ಲಿದೆ...." ಅಡಿಗೆ ಮನೆಯಿಂದ ಸ್ಥಿರೆ ವಾಟ್ಸಪ್ಪ್ ಮಾಡಿದ್ದಳು...ಆಕೆಯ ಕಣ್ಣಲ್ಲಿ ನೀರಿನ್ನೂ ಇಂಗಿರಲಿಲ್ಲ....ಶತಭಿಷ ಮೊಬೈಲ್ ನೋಡಿರಲಿಲ್ಲ....ನಂತರ ಅದನ್ನೇ ಕಾಪೀ ಪೇಸ್ಟ್ ಮಾಡಿ ನಾರ್ಮಲ್ ಮೆಸ್ಸೇಜ್ ಆಗಿಸಿ ಕಳಿಸಿದ್ದಳು...ಮಗುವಿಗೆ ಊಟ ಮಾಡಿಸಿ ಮಲಗಿಸ ಹತ್ತಿದ್ದಳು... "ಐ ಆಮ್ ಸಾರಿ....ಫೀಲಿಂಗ್ ಗಿಲ್ಟೀ..." ಆತ ಅರ್ಧ ಗಂಟೆಯ ನಂತರ ರಿಪ್ಲೈ ಮಾಡಿದ್ದ... "ಇಟ್ಸ್ ಓ.ಕೆ...ಬಟ್ ವಿ ನೀಡ್ ಟು ಟಾಕ್..." ಆಕೆ ಅಳೆದೂ ತೂಗಿ ಕೊನೆಗೂ ಮೆಸ್ಸೇಜು ಮಾಡಿದಳು.. ಆತ ಕೊನೆಗೂ ತನ್ನ ಅಹಂ ಬಿಟ್ಟು ಮಾತನಾಡಲು ಶುರುಮಾಡಿದ್ದ. "ಹಿಂಗಾಂದ್ರೆ ಹೆಂಗೆ?" ಆಕೆ ಸುತ್ತಿಬಳಸಿ ಹೋಗಲಿಲ್ಲ... "ಐ ಡೋಂಟ್ ನೋ...ಈ ಥಿಂಕ್ ಐ ಆಮ್ ಲಾಸ್ಟ್...ಯಾವ್ದೂ ಸರಿ ಹೋಗ್ತಿಲ್ಲಾ..." ಆತ ಅಲವತ್ತುಕೊಂಡಿದ್ದ... "ಎಲ್ಲಾ ಸರಿ ಆಗತ್ತೆ...ಡೋಂಟ್ ವರಿ...ಸ್ವಲ್ಪ ಟೈಂ ತಗೊಳತ್ತೆ..." ಆಕೆ ಸಮಾಧಾನದ ಮಾತಾಡಿದಳು.. "ಹಮ್..ನೋಡಣಾ..." ಆತನಿಗೆ ಮಾತು ಮುಂದುವರೆಸಲು ತಿಳಿಯಲಿಲ್ಲ... "ವಿನಯ್ ಯಾಕ್ ಬಂದಿದ್ದ?" ಆಕೆಯ ಪ್ರಶ್ನೆ ಆತನಿಗೆ ಅನಿರೀಕ್ಷಿತವಾಗಿತ್ತು... "ಅವರ್ ನಿಂಗ್ ಗೊತ್ತಾ?" ಆತ ಆಶ್ಚರ್ಯದಿಂದಲೇ ಮರುಪ್ರಶ್ನೆ ಹಾಕಿದ್ದ. "ಹೂಂ...ಎಂಗೇಜ್‍ಮೆಂಟ್ ಟೈಂನಲ್ಲಿ ಹೇಳಿರ್ಲಿಲ್ವಾ ನಿಂಗೆ...ವಿನಯ್ ಅಂತಾ?" ಸ್ಥಿರೆ ನೆನಪಿಸಿದಳು.. "ಓಹ್...ಓ.ಕೇ..ಓ.ಕೇ...ಗೊತ್ತಾಯ್ತ್ ...ಗೊತ್ತಾಯ್ತು....ಆ ವಿನಯ್ ಅಹ್" ಆತ ನೆನಪಿಸಿಕೊಂಡ... "ಹಾಂ...ಅದೇ ವಿನಯ್..." ಆಕೆ ಮುಗುಳ್ನಕ್ಕಳು... "ಅವ್ರ್ ಅದೇನೋ ಏಜೆಂಟ್ ಥರ ಕೆಲ್ಸಾ ಮಾಡ್ತಿದಾರೆ ಸೆಬಿ ಆಫೀಸರ್‍ಗಳಿಗೆ ಅನ್ಸತ್ತೆ.." ಆತನಿಗೆ ಕೆಟ್ಟದ್ದೇನೂ ಹೇಳಲು ಮನಸ್ಸಾಗಲಿಲ್ಲ... "ಓಹ್...ಹೆಲ್ಪ್ ತಗೋಬೋದಲ್ಲಾ ಹಂಗಿದ್ರೆ" ಆಕೆ ತುಂಬಾ ಇನ್ನೊಸೆಂಟ್ ಅನಿಸಿದ್ದಳು... "ಹೆಲ್ಪ್? ಬ್ಲಡೀ ಕರಪ್ಟ್ ಪೀಪಲ್....ಐ ವೋಂಟ್ ಬ್ರೈಬ್ ಎನಿವನ್..." ಆತ ಸ್ವಲ್ಪ ಗಡಸಾಗಿಯೇ ಹೇಳಿದ್ದ... "ಓಹ್...ಹಂಗಾ...ಸರಿ ಸರಿ...ಸಾರಿ" ಆಕೆ ಬೇಕಿತ್ತಾ ಎಂದುಕೊಂಡಳು... "ಮೊದ್ಲೂ ಇದೇ ಕೆಲ್ಸಾ ಮಾಡ್ತಿದ್ರಾ?" ಶತಭಿಷ ಕುತೂಹಲದಿಂದ ಪ್ರಶ್ನಿಸಿದ್ದ... "ಇಲ್ಲಪ್ಪಾ..ಮುಂಚೆ ಈ ಆಂಡ್ ವೈ ಅಲ್ ಇದ್ರು...ಅದೇನೇನೋ ಕಲ್ಚರ್, ಮಾರಲ್ಸ್, ಎಥಿಕ್ಸ್, ಸೋಷಿಯಲ್ ಸರ್ವೀಸ್ ಅಂತೆಲ್ಲಾ ಓಡಾಡ್ತಿದ್ರು...ಈಗೇನಾಯ್ತೋ ಗೊತ್ತಿಲ್ಲ..." ಆಕೆ ಮಾತು ಮುಗಿಸಿದ್ದಳು...ಮೀಟಿಂಗ್ ಕೂಡಾ ಎಂದಿನಂದೇ ಸ್ವಲ್ಪ ಹೊತ್ತಿಗೆ ಮುಕ್ತಾಯವಾಯಿತು...ಆದರೆ ತಡರಾತ್ರಿ ನಿದ್ದೆ ಬಾರದೇ ಹೊರಳಾಡುತ್ತಿದ್ದ ಸ್ಥಿರೆಗೆ ಹಳೆಯದೆಲ್ಲಾ ಮತ್ತೆ ನೆನಪಾಯಿತು... ** ಸ್ಥಿರೆ ಅಂದು ವಿನಯ್‍ಗಾಗಿ ಕಾಯುತ್ತಿದ್ದಳು. ಸಾಕಷ್ಟು ಮಾತನಾಡಬೇಕೆನ್ನುವ ತವಕವಿತ್ತು. ಜೊತೆಗೆ ಅರ್ಥವಾಗದ ಆತಂಕವೂ ಕೂಡಾ...ಅಂತೂ ಹತ್ತು ನಿಮಿಷ ಹತ್ತು ನಿಮಷವೆಂದು ನಾಲ್ಕು ಬಾರಿ ಹೇಳಿ ಅಂತೂ ಸಾಹೇಬರು ಬಂದಿದ್ದರು. ಬರೋಬ್ಬರಿ ನಲವತ್ತೈದು ನಿಮಿಷ ತಡವಾಗಿತ್ತು. ಆಕೆ ಅದಾಗಲೇ ಪುಟ್ಟದೊಂದು ರಿಹರ್ಸಲ್ ಕೂಡಾ ನಡೆಸಿದ್ದಳು. ಬಂದವನೇ ಸೀದಾ ತನಗೊಂದು ಕ್ಯಾಪಚೀನೋ ಆರ್ಡರ್ ಮಾಡಿದ. ನಿನಗೇನು ಎಂದು ಕೇಳಲೂ ಇಲ್ಲ. ಆರ್ಡರ್ ಸರ್ವ್ ಮಾಡಿದ ಮೇಲೆ, "ನಿಂಗೆ?" ಎಂದನಾದರೂ ಅದಾಗಲೇ ಆತ ಕಾಫಿಯನ್ನು ಸುರ್ರ್ ಎಂದು ಬಾಯಿಗೆ ಹೊಯ್ದುಕೊಳ್ಳುತ್ತಿದ್ದ. ಈಕೆ ಏನೂ ಆರ್ಥವಾಗದೇ ಸುಮ್ಮನೇ ಕೂತಿದ್ದಳು. "ಯಾಕ್ ಲೇಟು?" ಕೊನೆಗೂ ಕೇಳಿಯೇ ಬಿಟ್ಟಳು.. "ಯಾಕ್ ಲೇಟು ಅಂದ್ರೆ? ಕೆಲಸಾ ಇರತ್ತಪ್ಪಾ? ನಾನೇನ್ ಬೇಕಂತಾ ಲೇಟ್ ಮಾಡಿದೀನಾ? ಈಗ್ಲಿಂದನೇ ನಿಂಗ್ ಎಲ್ಲಾ ಡಿಟೇಲ್ ಕೊಡ್ಬೇಕಾ?" ಆತ ಬೇರೆಯದೇ ಟ್ರ್ಯಾಕ್‍ಗೆ ಹೊರಟು ಹೋಗಿದ್ದ. ಆಕೆಗೆ ಇನ್ನೂ ಒಂದಿಷ್ಟು ಪ್ರಶ್ನೆ ಕೇಳುವುದಿತ್ತು...ಚರ್ಚೆ ಮಾಡುವುದಿತ್ತು...ಇಷ್ಟ-ಕಷ್ಟಗಳನ್ನು ತಿಳಿದುಕೊಳ್ಳುವುದಿತ್ತು... ಆದರೆ ಅದಕ್ಕಾತ ಅವಕಾಶವನ್ನೇ ಕೊಡುತ್ತಿರಲಿಲ್ಲ...ದಾರಿಯಲ್ಲಿ ನಡೆಯುತ್ತಾ ಹೋಗುವಾಗ ಆತನದ್ದೇ ಮಾತು. ಆಕೆ ಹೂಂ ಹಾಕುತ್ತಿದ್ದಳು ಅಷ್ಟೇ!. ಮತ್ತೊಮ್ಮೆ ಸಿಕ್ಕಾಗ ಪಿಚ್ಚರ್ ಹೋಗೋಣವಾ ಎಂದ...ಆಕೆ ಹೂಂ ಎಂದಳು. ಆತ ಯಾವುದು ಎಂದ. "ಯಾವುದಾದ್ರೂ" ಎಂದಳು.... ಆತ ಎದುರಿಗಿದ್ದಾಗ ಆಕೆಗೆ ಮಾತನಾಡುವುದೇ ಮರೆತಂತಿತ್ತು... ** ಅವತ್ತು ಅಮಾವಾಸ್ಯೆ. ತಾಯಿ ""ಬೇಡ ಕಣೇ" ಎಂದರೂ ಹಠ ಮಾಡಿ ಸ್ಥಿರೆ ವಿನಯ್ ಜೊತೆ ಬ್ರಂಚ್‍ಗೆ ಹೋಗಿದ್ದಳು. ಆಕೆಯ ಇಂಟರ್‍ನೆಟ್ಟಿನಲ್ಲಿ ಹುಡುಕಿ ಫೈನಲ್ ಮಾಡಿದ ಜಾಗವದು. ಭಾನುವಾರದ ಬೆಳಗ್ಗಿನ ಡ್ರೈವ್ ಆಕೆ ಉಲ್ಲಾಸ ಕೊಟ್ಟಿತ್ತು... ಸ್ಥಿರೆಗೆ ಜೋರಾಗಿ ಹೋಗುವ ಕಾರಿನ ಕಿಟಕಿಯಿಂದ ಆಚೆ ಇಣುಕುವ ಮನಸ್ಸಾಗುತ್ತಿತ್ತು. ಆದರೆ ವಿನಯ್‍ಗೆ ಆತನ ಸೋಷಿಯಲ್ ವರ್ಕ್ ಟೀಂನಿಂದ ಕರೆಗಳು ಬರುತ್ತಿದ್ದವು. ಆತ ಕರೆ ಬಂದಾಗಲೆಲ್ಲಾ ಕಾರನ್ನು ಎಡಕ್ಕೆ ಹಾಕಿ ಮಾತಾಡಿ, ಸೀಟ್ ಬೆಲ್ಟ್ ಧರಿಸಿ ನಿಧಾನವಾಗಿ ಕಾರು ಚಲಾಯಿಸುತ್ತಿದ್ದ. ಈಕೆ ಆಗೆಲ್ಲ ಮುಗುಳುನಗುತ್ತಿದ್ದಳು. ಅಂತೂ ಪ್ಲೇಸ್ ತಲುಪಿ, ತರಹೇವಾರಿ ಖಾದ್ಯಗಳನ್ನು ಸೇವಿಸುವವರೆಗೂ ಎಲ್ಲವೂ ಚೆನ್ನಾಗಿತ್ತು...ಅವತ್ತು ವಿನಯ್ ಕೂಡ ಭೂಮಿಗಿಳಿದು ಮಾತನಾಡಿದ್ದ....ಸ್ಥಿರೆಯೂ ಒಂದೆರಡು ಅನಿಸಿಕೆ ಹಂಚಿಕೊಂಡಿದ್ದಳು....ಹಿನ್ನೆಲೆ ಸಂಗೀತ ಹಿತವಾಗಿತ್ತು...ಪಾನಿ ಪುರಿ ಖಾರವಾಗಿದ್ದರೂ, ಮಾತು ಸಿಹಿಯಾಗಿತ್ತು....ಹೀಗೆ ಎಲ್ಲ ಚೆನಾಗಿದ್ದಿದ್ದು, ಬಿಲ್ಲ್ ಬರುವವರೆಗೆ.... ಬಿಲ್ಲ್ ಬರುವ ಸಮಯದಲ್ಲಿ ವಿನಯ್ ಫೋನ್‍ನಲ್ಲಿ ಮಾತಾಡುತ್ತಿದ್ದ. ಆಕೆಯೇ ಬಿಲ್ ಕೊಟ್ಟು ಹೊರಬಂದಳು.... "ಬಿಲ್ ನೀನ್ ಯಾಕ್ ಕೊಟ್ಟೆ" ಆತನ ಮಾತು ಆಕೆಗೆ ಆಶ್ವರ್ಯವೇನೂ ತರಲಿಲ್ಲ... "ಏಯ್ ಇರ್ಲಿ ಬಿಡೋ..." ಆಕೆ ಭುಜಕ್ಕೆ ಭುಜ ತಾಗಿಸಿ ನಿಂತಿದ್ದಳು.... "ಎಷ್ಟಾಯ್ತು? ಹೇಳಿಲ್ಲಾ ಅಂದ್ರೆ ಅಷ್ಟೇ ಈಗ..." ಆತನ ಮುಖದಲ್ಲಿ ಹುಸಿಕೋಪವಿತ್ತು...ಜೊತೆಗೆ ವ್ಯಾಲೆಟ್ ತೆಗೆದಿದ್ದ. "ಏಯ್ ಬ್ಯಾಡ ಬಿಡೋ..." ಆಕೆ ಭುಜ ಸವರಿದ್ದಳು. "ಅದೆಂಗ್ ಆಗತ್ತೆ...ನಾನ್ ಕೊಡ್ಲೇ ಬೇಕು ಇವತ್ತು...ಎಷ್ಟು?" ಆತ ಹಠ ಬಿಡುವವನಾಗಿರಲಿಲ್ಲ... "ಕೊಡ್ಲೇ ಬೇಕಂದ್ರೆ.....ದುಡ್ಡೇ ಕೊಡ್ಬೇಕಂತೇನಿಲ್ಲ...." ಆಕೆಯ ಮಾತಿನಲ್ಲಿ ತುಂಟತನವಿತ್ತು.... "ಅಂದ್ರೆ?" ಆತ ಹುಬ್ಬು ಹಾರಿಸಿದ್ದ... " ಯೋಚ್ನೆ ಮಾಡು" ಆಕೆಯ ಮುಖ ಕೆಂಪೇರಿತ್ತು... "ಓ.ಕೆ.." ಆತ ಯೋಚನೆ ಮಾಡಿ ಕೊನೆಗೂ ಒಂದು ನಿರ್ಧಾರಕ್ಕೆ ಬಂದ.... "ಫಿಫ್ಟಿ-ಫಿಫ್ಟಿ..." ಹಲ್ಲುಕಿರಿಯುತ್ತಾ ಆತ ಐನೂರರ ನೋಟನ್ನು ಆಕೆಯ ಕೈಗಿಟ್ಟಿದ್ದ....ಆಕೆಗೆ ನಿರಾಸೆಯಾದಂತಿತ್ತು.....ಆದರೂ ನಕ್ಕಳು...ದುಡ್ಡನ್ನು ಮಡಿಸಿ ಕೈಯ್ಯಲ್ಲಿ ಹಿಡಿದುಕೊಂಡಳು... "ನಿಮ್ಮಂಥೋರಿಂದನೇ ಕಣೇ ನೋಟೆಲ್ಲಾ ಹಾಳಾಗೋದು...ಕರೆಕ್ಟಾಗ್ ಇಟ್ಕೋ ಅದನ್ನಾ...." ಆತ ತಮಾಷೆಗೆ ಹೇಳಿದ್ದೋ ಸೀರಿಯಸ್ಸಾಗಿದ್ದನೋ ಸ್ಥಿರೆಗೆ ತಿಳಿಯಲಿಲ್ಲ... "ನನ್ ದುಡ್ಡು...ಹೆಂಗಾದ್ರೂ ಇಟ್ಕೋತೀನಿ...ಏನೀಗಾ?" ಆಕೆಯೂ ತನ್ನ ವರಸೆ ತೆಗೆದಳು... "ಈಡಿಯಟ್ಸ್...ನಿಂಗ್ ಹೇಳ್ತಿದೀನಲ್ಲಾ...ಯು ಆರ್ ಡಂಬ್..." ಆತನ ಮಾತಿಗೆ ಅರ್ಥವಿರಲಿಲ್ಲ... "ವಾಟ್ ರಬ್ಬಿಷ್"..ಆಕೆಗೆ ಹರ್ಟ್ ಆಗಿತ್ತು... ಮಾತಿಗೆ ಮಾತು ಬೆಳೆಯಿತು...ಸ್ಥಿರೆಯೂ ಗಟ್ಟಿಯಾಗಿಯೇ ಆತ ಮುಖಕ್ಕೆ ಉಗಿದಿದ್ದಳು...ಹೊಂದಾಣಿಕೆಯ ಅವಶ್ಯಕತೆಯ ಬಗ್ಗೆ ತಿಳಿಸಹೊರಟಿದ್ದಳು...ಆದರೆ ಆತನಿಗೆ ವ್ಯವಧಾನವಿರಲಿಲ್ಲ...ಅಷ್ಟರಲ್ಲಿ ಮತ್ತೆ ಯಾವುದೋ ಕರೆ ಬಂದಿತ್ತು... ಈಗೆ ಸುಮ್ಮನೆ ಕಾರು ಹತ್ತಿ ಕುಳಿದ್ದಳು.....ಸ್ವಲ್ಪ ಹೊತ್ತಿನ ನಂತರ ಅಳುತ್ತಿದ್ದಳು... ಶತಭಿಷ ವಾಪಸ್ಸ್ ಬಂದಾಗ ಆಕೆ ಐನೂರರ ನೋಟನ್ನು ಆತನಿಗೇ ಹಿಂದಿರುಗಿಸಿದ್ದಳು...ಆತ ಕಾರಣ ಕೇಳಲಿಲ್ಲ...ಅವತ್ತು ಕಾರು ಜೋರಾಗಿ ಓಡಿತ್ತು...ಕಾರಿನಲ್ಲಿ ಕೇಳುತ್ತಿದ್ದ ಮಾತೆಂದರೆ ಎಫ್.ಎಮ್ ಆರ್.ಜೇಯದ್ದೊಂದೇ.... ** ಕೊನೆಗೂ ಸಂಬಂಧ ಮುರಿದುಬಿದ್ದಿತ್ತು....ಸ್ಥಿರೆಯ ಮಾವ ನಡೆಸಿದ ಸಂಧಾನವೂ ಯಶಸ್ವಿಯಾಗಲಿಲ್ಲ... "ಹುಡುಗಿ ಆಟಿಟ್ಯೂಡ್ ಸರಿ ಅನಸ್ತಿಲ್ವಂತೆ ಹುಡುಗಂಗೇ...."ಕೊನೆಗೂ ಸಬೂಬು ಸಿಕ್ಕಿತ್ತು... ಸ್ಥಿರೆಗೆ ಮೊದಮೊದಲು ಬೇಜಾರಾದರೂ, ಆಗುವುದೆಲ್ಲಾ ಒಳ್ಳೆಯದಕ್ಕೇ ಎಂದುಕೊಂಡು ಸುಮ್ಮನಾಗಿದ್ದಳು...ಆಕೆಯ ತಾಯಿ ಮಾತ್ರ ಮುಂದೆ ಮದುವೆ ಆಗುವವರೆಗೂ ಈ ಬಗ್ಗೆ ಎಚ್ಚರಿಸುವುದನ್ನು ಬಿಡಲಿಲ್ಲ... ** ಅವತ್ತು ಶತಭಿಷ ಬೆಳಿಗ್ಗೆ ಬೇಗ ಎದ್ದಿದ್ದ. ಸ್ಥಿರೆಗೆ ಇಷ್ಟವೆಂದು ಅಕ್ಕಿರೊಟ್ಟಿ ಮಾಡ ಹೊರಟಿದ್ದ. ಅದೇನೋ ಸರಿಯಾಗಲಿಲ್ಲ... ಹದ ಹೆಚ್ಚು ಕಡಿಮೆಯಾಗಿ ಚೂರು ಚೂರಾಗುತ್ತಿತ್ತು. ಸ್ಥಿರೆ ನಗುನಗುತ್ತಲೇ ತಿಂದಿದ್ದಳು. ಮಗುವಿಗೆ ಜ್ವರ ಬಂದಂತಿತ್ತು. ಸ್ಥಿರೆ ಆಫೀಸಿಗೆ ರಜಾ ಹಾಕಲೇನೋ ಎಂದು ಯೋಚಿಸಿದಳು. ಆದರೆ ಮೀಟಿಂಗ್ ಒಂದನ್ನು ಆಟೆಂಡ್ ಮಾಡಲೇಬೇಕಿತ್ತು. ಬೇಗ ಬರುವೆನೆಂದು ಹೇಳಿ ಆಫೀಸಿಗೆ ಹೊರಟಿದ್ದಳು. ಅದಾಗಲೇ ಲೇಟಾಗಿತ್ತು. ದಿನಕ್ಕಿಂತ ಚೂರು ಅರ್ಜಂಟಿನಲ್ಲಿ ಕಾರ್ ಓಡಿಸುತ್ತಿದ್ದಳು. ಇಂಟರ್‍ಸೆಕ್ಷನ್‍ನಲ್ಲಿ ಯಾರೋ ಗುದ್ದಿದರು. ಕಾರಿಳಿದು ನೋಡಿದಾಗ, ಅಲ್ಲಿದ್ದುದು ವಿನಯ್ ಮತ್ತು ಚಲನಾ. -ಚಿನ್ಮಯ 10/02/2019

Thursday, February 7, 2019

ಬ್ರಹ್ಮಕುಮಾರಿ

"ಯು ಆರ್ ಆಕ್ಟಿಂಗ್ ಲೈಕ್ ಅ ಬಿಚ್..." ಶತಭಿಷ ನೇರವಾಗೇ ಬೈದಿದ್ದ.
"ಕಮಾನ್....ಗ್ರೋ ಅಪ್..." ಆಕೆ ಕ್ಯಾರೇ ಅನ್ನಲಿಲ್ಲ.  ಬೇಕಾದವರಿಗೆಲ್ಲಾ ಕಾಲ್ ಮಾಡಿ ಕರೆಯತೊಡಗಿದಳು. ಶುರುವಿನಲ್ಲಿ ಏನೇನೋ ಕಾರಣ ಹೇಳಿದರಾದರೂ "ಮುಚ್ಕೋಂಡ್ ಬರ್ರೋ" ಎಂದು ಉಗಿದ ಮೇಲೆ ಒಬ್ಬೊಬ್ಬರಾಗಿ ಹಳೆಯ ಗೆಳೆಯರೆಲ್ಲಾ ಬಂದು ಸೇರತೊಡಗಿದರು.
ಶತಭಿಷ ಕನಿಷ್ಠ ಹತ್ತು ಬಾರಿ ಸ್ಥಿರೆಗೆ ಕರೆ ಮಾಡಿದ್ದ. ಆಕೆ ಹತ್ತೂ ಬಾರಿ ಕಟ್ ಮಾಡಿದ್ದಳು.
ಹನ್ನೊಂದನೇ ಕರೆ ಕಟ್ ಮಾಡಿ ಆಕೆ ರಿಪ್ಲೈ ಮಾಡಿದ್ದಳು.
"ಡೋಂಟ್ ವರಿ ಅಬೌಟ್ ಮಿ...ಹ್ಯಾಪಿ ಬರ್ತ್‍ಡೇ ಇನ್ ಅಡ್ವಾನ್ಸ್...ಗುಡ್ ನೈಟ್.." ಶತಭಿಷನಿಗೆ ಸ್ವಲ್ಪ ಧೈರ್ಯ ಬಂದಿತು. ಆದರೆ ಸಮಾಧಾನವೇನೂ ಆಗಲಿಲ್ಲ.
"ಹ್ಯಾಪೀ ಬರ್ತ್ ಡೇ ಟು ಯು...ಹ್ಯಾಪೀ ಬರ್ತ್ ಡೇ ಟು ಯು...ಹ್ಯಾಪಿ ಬರ್ತ್ ಡೇ ಹ್ಯಾಪಿ ಬರ್ತ್ ಡೇ ಡಿಯರ್ ಶತಭಿಷ....." ಶತಭಿಷನ ಹತ್ತಿರದವರೆಲ್ಲಾ ಸೇರಿದ್ದರು. ಕೇಕ್ ಕಟ್ ಮಾಡಿಸಿದರು. ಮುಖದ ಮೇಲೆ ಒತ್ತಾಯದ ನಗುವಿತ್ತು. ಎದುರಿಗೆ ಅವನಿಗೆ ಭಯಂಕರ ಇಷ್ಟವಾದ ಫೈನಾಪಲ್ ಕೇಕ್ ಇತ್ತು. ಅದ್ಯಾರೋ ಫೋಟೋ ತೆಗೆಯಲು "ಚೀಝ್ " ಅಂದರು. ಶತಭಿಷ ತನ್ನದೇ ಮೊಬೈಲಿನಲ್ಲಿ ಫೋಟೋ ತೆಗೆಸಿಟ್ಟುಕೊಂಡ. ಎಲ್ಲರಿಗೂ ಡ್ರಿಂಕ್ಸ್ ಸರ್ವ್ ಮಾಡಿದ. ಚಲನಾ ಊಟ-ತಿಂಡಿಯ ಜವಾಬ್ದಾರಿ ನೋಡಿಕೊಂಡಿದ್ದಳು. ಒಬ್ಬೊಬ್ಬರಾಗಿ ಎಲ್ಲರೂ ಖಾಲಿಯಾಗತೊಡಗಿದ ಮೇಲೆ ಚಲನೆಯೂ ಹೊರಡುವ ತಯಾರಿ ನಡೆಸಿದಳು.
"ನೀನ್ ಎಲ್ಲಿಗ್ ಹೊರಟೆ?" ಆತ ಕುತೂಹಲದಿಂದ ಕೇಳಿದ.
"ನನ್ ಫ್ಲ್ಯಾಟಿಗೆ. ಇನ್ನೆಲ್ಲಿಗೆ?" ಆಕೆ ತಾನು ಉಟ್ಟಿದ್ದ ಬಿಳೀ ಸೀರೆಯ ಮೇಲೆ ಕಪ್ಪು ಜರ್ಕೀನ್ ಧರಿಸುತ್ತಿದ್ದಳು.
"ಲೇಟ್ ಆಗಿಲ್ವೇನೆ...ಇಲ್ಲೇ ಇದ್ದ್ ಹೋಗು" ಆತ ನಿಶ್ಚಯವಾಗಿ ಹೇಳಿದ್ದ.
"ಬೇಡಪ್ಪಾ...ನೀನ್ ಮದ್ವೆ ಆದೋನು...ಆಮೇಲ್ ಸ್ಥಿರಾ ತಪ್ಪ್ ತಿಳ್ಕೊಂಡ್ರೆ ಕಷ್ಟಾ" ಆಕೆ ನಗುತ್ತಲೇ ಹೇಳಿದ್ದಳು.
"ಇನ್ನೇನ್ ತಪ್ಪ್ ತಿಳ್ಕೊಳಕ್ಕ್ ಬಾಕಿ ಇದೆ ಅಂತಾ?" ಆತ ತಲೆ ಕೆಳಹಾಕಿದ್ದ.
"ಸಿಲ್ಲಿ ಗರ್ಲ್..." ಆಕೆ ಹಣೆ ಚಚ್ಚಿಕೊಂಡಳು.
"ಎಲ್ರೂ ನಿನ್ ಥರ ಇರಲ್ಲಾ ಕಣೇ" ಆತ ಸ್ಥಿರೆಯನ್ನು ಬಿಟ್ಟುಕೊಡಲು ತಯಾರಿರಲಿಲ್ಲ.
"ಹಮ್...ಇರೋ ವಿಷ್ಯ ಹೇಳ್ಬಿಡೋ...." ಆಕೆ ಸಲಹೆಯಿತ್ತಿದ್ದಳು.
"ಅದ್ರಿಂದ ಏನಾಗತ್ತೆ ಅಂತಾ?" ಆತ ಮರುಪ್ರಶ್ನಿಸಿದ್ದ.
"ಅವಳಿಗ್ ಇರೋ ಡೌಟ್ ಕ್ಲಿಯರ್ ಆಗತ್ತೆ...ರಿಲೇಷನ್‍ಶಿಪ್‍ಅಲ್ಲಿ ಈ ಥರ ಸಣ್ಣ್ ಸಣ್ಣ್ ವಿಷಯಾನೇ ತುಂಬಾ ಕಿರಿಕಿರಿ ಕೊಡತ್ತೆ..ಕ್ಲಿಯರ್ ಮಾಡ್‍ಬಿಡು"...ಆಕೆ ಎಕ್ಸ್‍ಪ್ಲೇನ್ ಮಾಡುತ್ತಿದ್ದಳು
"ಹಂಗಂತಿಯಾ...ಬಟ್ ಹೆಂಗ್ ಹೇಳ್ಳಿ ಗೊತ್ತಾಗ್ತಿಲ್ಲ..." ಆತ ತಲೆಕೆರೆದುಕೊಂಡ....
"ನೀನ್ ಶ್ರೀರಾಮ್‍ಚಂದ್ರ ಕಣೋ...ಬಟ್ ಇದು ಕಲಿಯುಗ..ಟ್ರುಥ್‍ಟೆಸ್ಟ್ ನಿಂಗೇ ಅನ್ಕೋ...ಬೆಂಕಿ ಒಳಗ್ ಬೀಳು...ನನ್ ಆಶೀರ್ವಾದ ಇದೆ..." ಆಕೆ ಕಿಚಾಯಿಸುವುದು ಬಿಡಲಿಲ್ಲ...
"ಅದ್ರಿಂದ ನಿಂಗೇನ್ ಪ್ರಾಬ್ಲಂ ಇಲ್ವಾ?" ಆತ ಅನುಮಾನಿಸಿದ್ದ..
"ಅದ್ರಿಂದ ನೀನು ಮತ್ತೆ ಸ್ಥಿರಾ ಚೆನಾಗ್ ಇರ್ತಿರಾ ಅಂದ್ರೆ ಐ ಡೋಂಟ್ ಮೈಂಡ್...ಅಷ್ಟಕ್ಕೂ ನಾನೇನ್ ತಪ್ಪ್ ಮಾಡ್ತಿಲ್ವಲ್ವಾ?" ಆಕೆ ವ್ಯಾನಿಟಿ ಹೆಗಲೇರಿಸಿ ಹೊರಟಿದ್ದಳು.
"ತಪ್ಪೇನಲ್ಲ...ಆದ್ರೂ ಏನೋ ಅನ್‍ಕಾಮನ್ ಅನ್ಸಲ್ವಾ? " ಆತ ದಾರಿಯ ಮಧ್ಯವೇ ನಿಂತಿದ್ದ.
"ಗಂಡಸ್ರಿಗಾದ್ರೆ ಅದೆಲ್ಲಾ ನಾರ್ಮಲ್ಲಾ? " ಆಕೆಯ ಪ್ರಶ್ನೆಗೆ ಆತನ ಬಳಿ ಉತ್ತರವಿರಲಿಲ್ಲ..
"ಆದ್ರೂ ತೀರಾ ಪರಸ್ನಲ್ ಅನ್ಸತ್ತಪ್ಪಾ..." ಆತ ಹಿಂಜರಿಯುತ್ತಿದ್ದ....
"ಗಂಡಸರೂ ನಾಚ್ಕೊತಾರಾ?" ಆಕೆ ಕಣ್ಣು ಹೊಡೆದಿದ್ದಳು.
ಆತ ದಾರಿ ಬಿಟ್ಟು, ಚಿಲಕ ಹಾಕಿಕೊಂಡಿದ್ದ. ಕುಡಿಯಲು ಶುರುವಿಟ್ಟುಕೊಂಡಿದ್ದ.
"ಐ ಆಮ್ ಸಾರಿ...ಎಲ್ಲಾ ಹೇಳ್ತೀನಿ...ಟೇಕ್ ಕೇರ್..."  ನಶೆಯಲ್ಲಿಯೇ ಸ್ಥಿರೆಗೆ ಮೆಸ್ಸೇಜು ಹಾಕಿ ಮಲಗಿಕೊಂಡಿದ್ದ. ಆದರೆ ಸ್ಥಿರೆಗೆ ನಿದ್ದೆ ಹತ್ತಿರಲಿಲ್ಲ...
**
ಮುಂದಿನ ವೀಕೆಂಡಿನಲ್ಲಿ ಮತ್ತೊಂದು ಮೀಟಿಂಗ್ ನಡೆಯುವುದಿತ್ತು. ಅದಕ್ಕಾಗಿ ಶತಭಿಷ ಚಲನಾಳನ್ನು ಕಾರ್‍ನಲ್ಲಿ ಕೂರಿಸಿಕೊಂಡು ಬ್ರಿಡ್ಜ್ ಕಡೆ ಹೊರಟಿದ್ದ.
ಅದೇ ರಸ್ತೆ, ಅದೇ ಬೀದಿ, ಅದೇ ಗಿಡ-ಮರ, ಅದೇ ಜನ, ಅದೇ ಮನೆಗಳು. ಈಗೆಲ್ಲ ಮನೆಯ ಮೇಲಣ ಆಂಟೇನಾ ಕೆಳಗಿಳಿದು, ಅದರ ಬದಲು ಡಿಷ್ ಬಂದಿತ್ತು. ಸಂಜೆಯಾದರೆ ಕೇಳುತ್ತಿದ್ದ ಭಜನೆಗಳ ಬದಲಾಗಿ, ಧಾರಾವಾಹಿಗಳ ಟೈಟಲ್ ಸಾಂಗ್ ಕೇಳಿಸುತ್ತಿತ್ತು. ಜನರೂ ಬದಲಾಗಿದ್ದರು. ಮುಂಚಿನಂತೆ ಮನೆಯಂಗಳದ ಇಂಚಿಂಚಿಗೂ ಜಗಳ ಆಡುತ್ತಿರಲಿಲ್ಲ. ಪೈಸಾ ಪೈಸಾ ಲೆಕ್ಕಾಚಾರ ಹಾಕುತ್ತಾ ಕಂಜೂಷೀತನ ಮಾಡುತ್ತಿರಲಿಲ್ಲ. ದಾಯಾದಿಗಳ ಜಗಳದ ಅಬ್ಬರವೆಲ್ಲ ಇಳಿದು ಮನೆಯಲ್ಲಿ ಇಬ್ಬರೋ ಮೂವರೋ ಇರುತ್ತಿದ್ದರು. ಸಾಧ್ಯವಾದಷ್ಟು ಹೊಂದಿಕೊಂಡು ಹೋಗುತ್ತಿದ್ದರು..
ಬೆಂಗಳೂರಿನ ಗದ್ದಲದಲ್ಲಿ ಬೆಂದಿದ್ದವಳಿಗೆ ಊರು ಹಾಯಾಗಿತ್ತು. ಕಂಡವರೆಲ್ಲಾ ವಿಶೇಷ ಆಸ್ಥೆಯಿಂದ ಮಾತನಾಡಿಸುತ್ತಿದ್ದರು. ಹಳೇಹೆಂಗಸರು ಚಿಕ್ಕ-ಪುಟ್ಟ ಸಲಹೆಗಳನ್ನೂ ನೀಡುತ್ತಿದ್ದರು. ಸಿ.ಟಿಗೆ ಹೋಗಿಬರುವ ತಮ್ಮಂದಿರು ತಿನ್ನಲೇನೋ ತಂದಿರುತ್ತಿದ್ದರು. ಹಬ್ಬ-ತೇರು-ತಿಥಿ-ಒಪ್ಪತ್ತು-ಪೂಜೆಗಳ ಜೊತೆಜೊತೆ ಕೃಷಿ ಕೆಲಸಗಳೂ ನಡೆಯುತ್ತಿದ್ದು, ಸ್ಥಿರೆಗೆ ಖಾಲಿ ಖಾಲಿ ಅನ್ನಿಸಲೇ ಇಲ್ಲ. ಗೊಂದಲವಿದ್ದರೆ ಅದು ಶತಭಿಷ-ಚಲನಾ ವಿಷಯದಲ್ಲಿ ಮಾತ್ರ.
ಆತ ಬಂದಾಗಿನಿಂದಲೂ ಆಕೆ ಸರಿಯಾಗಿ ಮಾತಾಡಿರಲಿಲ್ಲ. ದಿನಾಲೂ ರಾತ್ರಿ ಕರೆ ಮಾಡುತ್ತಿದ್ದಳಾದರೂ ಎರಡು ನಿಮಿಷದ ಮೇಲೆ ಮಾತಾಡುತ್ತಿರಲಿಲ್ಲ...ಪಕ್ಕದ ಮನೆಯ ಅತ್ತಿಗೆಯ ಬಳಿ ಮಾತಾಡುತ್ತಾ ಅಳುತ್ತಿದ್ದಂತೆ ಎಂಬ ಸಮಾಚಾರ ಸುತ್ತೀಬಳಸಿ ಶತಭಿಷನ ಕಿವಿಗೂ ಬಿದ್ದಿತ್ತು. ಅದಕ್ಕೆಂದೇ ಆತ ಅವಳನ್ನು ಮನೆಯಿಂದ ಹೊರಕ್ಕೆ ಕರೆದುಕೊಂಡು ಬಂದಿದ್ದ.
"ಏನೇನ್ ಕೇಳ್ಬೇಕೋ ಕೇಳು...." ಆತ ಕೊನೆಗೂ ಧೈರ್ಯ ಮಾಡಿ ಕೇಳಿದ್ದ.
"ಏನಿಲ್ಲ..." ಆಕೆ ಮುಖ ತಿರುಗಿಸಿದ್ದಳು..
"ಪ್ಲೀಸ್...." ಆತ ಎಡಗೈಯ್ಯನ್ನು ಮೆದುವಾಗಿ ಅದುಮಿದ್ದ. ಆಕೆ ಕೈಬಿಡಿಕೊಂಡಿದ್ದಳು. ಅಳು ಬಂದಂತಾಗಿದ್ದನ್ನು ತಡೆದುಕೊಂಡಿದ್ದಳು.
"ಎಳ್‍ನೀರ್ ಕುಡಿಬೇಕು ಅನಸ್ತಿದೆ"...ಆಕೆಗೊಂದು ಬ್ರೀದಿಂಗ್ ಸ್ಪೇಸ್ ಬೇಕಿತ್ತು. ಆತ ಅಲ್ಲೇ ಕೆಳಗಡೆಯ ಅಂಗಡಿಗೆ ಹೋಗಿ ಎಳನೀರು ಕೊಚ್ಚಿಸಿಕೊಂಡು ಬಂದ. ಇಬ್ಬರೂ ಮಾತು ಶುರುಮಾಡದೇ ಎಳನೀರು ಕುಡಿದರು. ಎಳನೀರು ಖಾಲಿಯಾದ ಮೇಲೂ ಶತಭಿಷ ಸ್ಟ್ರಾ ಹೀರುತ್ತಲೇ ಇದ್ದ. ಅದು ಸೊರ ಸೊರ ಸದ್ದು ಮಾಡುತ್ತಿತ್ತು. ಸ್ಥಿರೆ  ಆತನ ಕೈಗೊಂದು ಪೆಟ್ಟುಕೊಟ್ಟಳು. ಶತಭಿಷನಿಗೂ ಅದೇ ಬೇಕಿತ್ತು.
"ಬೇಕಾ ನಿಂಗ್ ಇದೆಲ್ಲಾ? ಇನ್ನೊಂದ್ ಸ್ವಲ್ಪಾ ದಿನಕ್ ಅಪ್ಪಾ ಆಗ್ತಿಯಾ....ನಿಂಗೇನ್ ಕಮ್ಮಿ ಮಾಡಿದೀನಿ ನಾನು? " ಸ್ಥಿರೆ ಶತಭಿಷನನ್ನು ಗಟ್ಟಿಯಾಗೇ ಕೇಳಿದ್ದಳು.
"ಬೇಕಾಗಿದ್ದ್‍ಕಿಂತಾ ಜಾಸ್ತಿನೇ ಮಾಡಿದೀಯಾ ಕಣೆ...." ಆತ ಅಭಿಮಾನದಿಂದಲೇ ಹೇಳಿದ್ದ.
"ಮತ್ಯಾಕ್ ಅವಳನ್ನ್ ಮೂಸ್ಕಕೊಂಡ್ ಹೋಗ್ತಿಯಾ?" ಆಕೆ ಖಾರವಾಗಿ ಕೇಳಿದ್ದಳು.
ಆತ ಉತ್ತರಿಸಲಿಲ್ಲ. ಮುಗುಳ್ನಕ್ಕಿದ್ದ.
"ಕಿಸದ್ ಬಿಟ್ರೆ?" ಆಕೆಯ ಮುಖ ಗಂಟಿಕ್ಕಿಕೊಂಡಿತ್ತು...
"ನೀನ್ ಏನ್ ತಿಳ್ಕೊಂಡಿದಿಯಾ ಅಂತಾ ನಂಗೊತ್ತು...ಬರ್ತ್‍ಡೇ ದಿನ ವಿಡಿಯೋ ಕಾಲ್ ವಿಷಯ ತಾನೇ?" ಆತ ಮೊಬೈಲ್ ಕೈಗೆತ್ತಿಕೊಂಡಿದ್ದ.
"ಹೂಂ...ಅವಳ್ಯಾಕ್ ಮನೆಲ್ ಇದ್ಲು???" ಆಕೆ ಮಾತಿನಲ್ಲಿ ಹುಳಿಯಿತ್ತು.
"ಅವಳು ನನ್ ಬರ್ತ್‍ಡೇ ಪಾರ್ಟಿ ಅರೇಂಜ್ ಮಾಡ್ತಾ ಇದ್ಲು..." ಆತ ಮೊಬೈಲ್ ಹಸ್ತಾಂತರಿಸಿದ್ದ.
"ನಿಂಗಾ? ಬರ್ತ್‍ಡೇನಾ? ಸರ್‍ಪ್ರೈಸಾ?" ಆತ ವಿವರಗಳನ್ನು ಕೊಡುತ್ತಾ ಹೋದ...ಆಕೆ ಫೋಟೋಗಳನ್ನು ನೋಡುತ್ತಾ ಹೋದಳು....
"ಇವಳ್ಯಾರು?"....
"ಕೋಮಲಾ " ಅಂತಾ...ಆಫೀಸ್‍ನಲ್ಲಿ ಕೋಮ್ ಅಂತಾ ಕರಿತೀವಿ...
"ಇವರ್ಯಾರು?"
"ಮಹೇಶಾ" ಅಂತಾ.... ಹಾಸ್ಟೆಲ್‍ನಲ್ಲಿ "ಶಾ" ಅಂತಾ ಕರಿತಿದ್ವಿ...
"ಇವರು ಬಿಸ್ವಾಸ್ ಭೈಯ್ಯಾ ಅಲ್ವಾ?"
"ಏಯ್...ಭಾಯ್...ಬಿಸ್ವಾಸ್ ಬಾಯ್..."
"ಓ.ಕೆ ಓ.ಕೆ...ಭೈಯ್ಯಾಗೂ ಬಾಯ್‍ಗೂ ಏನ್ ವ್ಯತ್ಯಾಸ..."
"ಏಯ್...ಯಾರಾದ್ರೂ ನಾರ್ಥಿನಾ ಕೇಳು...." ಮಾತುಕತೆ ಎಂದಿನ ಆತ್ಮೀಯತೆಗೆ ತಿರುಗಿತ್ತು...
"ಮತ್ತ್ ಯಾಕ್ ನಂಗ್ ನೀ ಹೇಳ್ಳೇ ಇಲ್ಲಾ?" ಆಕೆ ಆತನದ್ದೇ ತಪ್ಪು ಎಂಬಂತೇ ಕೇಳಿದಳು...
"ಅದ್ ಅಲ್ಲಿಂದ ಹೇಳಿದ್ರೆ ನಿಂಗ್ ಅರ್ಥ ಆಗ್ತಿರ್ಲಿಲ್ಲ...ಮೋರ್ ಓವರ್.. ನೀನ್ ಇಲ್ಲಿಗ್ ಬಂದ್ಮೇಲೆ ಜಗಳಾ ಅಡಕ್ಕೂ ಆಗ್ತಿರ್ಲಿಲ್ಲ...."
"ತಲೆ ನಿಂದು...ನಾನ್ ಸುಮ್ನೆ ತಲೆ ಕೆಡಸ್ಕೊಂಡಿದ್ದೆ...ಸಾರಿ..." ಆಕೆ ಪುಟ್ಟ ಮುಖ ಮಾಡಿದ್ದಳು...
"ಇಟ್ಸ್ ಓ.ಕೆ....ನೀನ್ ಯೋಚ್ನೆ ಮಾಡಿದ್ರಲ್ ಏನೂ ತಪ್ಪಿಲ್ಲ...." ಆತ ಅವಳನ್ನೇ ಸಮರ್ಥಿಸಿಕೊಂಡಿದ್ದ...
"ಅದ್ ಸರಿ ತಿನ್ನಕ್ಕ್ ಏನ್ ತರ್ಸಿದ್ದೆ? ಯಾವ್ ಪ್ಲೇಟ್ ಯೂಸ್ ಮಾಡಿದ್ರಿ? ನನ್ ಪ್ಲೇಟ್ ಮುಟ್ಟಿಲ್ಲಾ ತಾನೇ ಯಾರೂ.... " ಆಕೆ ತನ್ನ ಫೀಲ್ಡಿಗೆ ಇಳಿದಿದ್ದಳು....ಆತ ಉತ್ತರ ಕೊಟ್ಟು ಕೊಟ್ಟು ಕೊನೆಗೆ ಸೋಲೊಪ್ಪಿಕೊಂಡಿದ್ದ...
"ಓ.ಕೆ...ಅದೆಲ್ಲಾ ಬಿಡು...ಅವಳ್ ಏನ್ ಮಾಡ್ತಿದಾಳೆ ಈಗ? ಡಿವೋರ್ಸ್ ಆಯ್ತಂತಾ?" ಆಕೆ ಸಹಜವಾಗೇ ಕೇಳಿದ್ದಳು...
ಆತ ಕೊನೆಗೂ ವಿಷಯ ಬಾಯ್‍ಬಿಟ್ಟಿದ್ದ...
"ಅವಳಾ...ಅದೇನೋ ಮದ್ವೆ ಬಗ್ಗೆನೇ ವಿಶ್ವಾಸ ಹೊರ್ಟೊಗಿದೆ ಅವಳಿಗೆ...ಅದೇನೋ ಬ್ರಹ್ಮಕುಮಾರಿ ಸಮಾಜ ಅಂತೆ...ಯಾವಾಗ್ಲೂ ಬಿಳಿ ಬಟ್ಟೆ ಹಾಕ್ಕೊಂಡೇ ಓಡಾಡ್ತಾಳೆ...ಮಾತ್ ಎತ್ತಿದ್ರೆ ಎಲ್ಲರ್ ಎದ್ರೂ ಶಾಂತಿ ಶಾಂತಿ ಅಂತಾಳೆ....ಬರೀ ಹಣ್ಣು ತರಕಾರಿ ತಿಂತೀನಿ ಅಂತಾಳೆ...ಏನೋ..." ಆತ ಕಾರ್ ಚಾಲೂ ಮಾಡಿದ್ದ.
"ಓಹ್...ಸಂನ್ಯಾಸಿ ಆಗ್ತಾಳಂತಾ?" ಆಕೆ ಸಿಂಪಲ್ಲಾಗಿ ಸಮರೈಸ್ ಮಾಡಿದ್ದಳು...
"ಸಂನ್ಯಾಸಿನಿ ಅದು..." ಆತ ಗ್ರಾಮರ್ ತಿದ್ದಿದ್ದ...
"ಓಹೋಹೋ....ಭಾರಿ ಗೊತ್ತು ನಿಂಗೆ..." ಆಕೆ ಆಡಿಕೊಂಡಿದ್ದಳು.
"ಅದೇನೋ ಸಂನ್ಯಾಸಿ ಅಂತಾ ಅಲ್ಲ...ಏನೋ ಬೇರೆ ಥರ...ನಾರ್ಮಲ್ ಆಗೇ ಇರ್ತಾಳೆ...ಬಟ್ ಏನೋ ಬೇರೆ ಥರ ಲೈಫು...ಮೊದ್ಲಿನ್ ಥರ ಅವಳು ಚಿತ್ತಾಗ್ ಇರೋದಕ್ಕಿಂತ ಇದ್ ಬೆಟರ್ ಅನಸ್ತು ನಂಗೆ...ಏನೋ ಮಾಡ್ಲಿ ಅನ್ಕೊಂಡ್ ಸುಮ್ನಾದೆ.." ಆತ ಮಾತು ಮುಗಿಸಿ ಆಕೆಯ ಮುಖ ನೋಡಿದ್ದ...
"ಪಾಪ..ಏನೇನೋ ಟೆನ್ಷನ್ ಅಲ್ಲಿ ಹಂಗಾದ್ಲು ಅನ್ಸತ್ತೆ " ಸ್ಥಿರೆ ಹೃದಯತುಂಬಿ ಹೇಳಿದ್ದಳು... ಕಾರು ಕತ್ತಲೆಯಲ್ಲಿ ನಿಧಾನವಾಗಿ ಮನೆಯ ಕಡೆ ಸಾಗಿತ್ತು. ಮನೆಯಲ್ಲಿ ಹೊಸ ಬೆಳಕು ಮೂಡುವ ದಿನ ಸನ್ನಿಹಿತವಾಗಿತ್ತು.
**
ಮುಂದಿನ ಒಂದು ವರುಷ ಹೇಗೆ ಕಳಿಯಿತೆಂದೇ ಶತಭಿಷ-ಸ್ಥಿರೆಗೆ ತಿಳಿಯಲಿಲ್ಲ...ಸ್ಥಿರೆ ಮುದ್ದಾದ ಗಂಡು ಮಗುವನ್ನು ಹಡೆದಿದ್ದಳು...ಶತಭಿಷನಿಗೆ ಸ್ವರ್ಗಕ್ಕೆ ಮೂರೇ ಗೇಣು...ಆತ ಎಲ್ಲರಿಗೂ ಸಿಹಿ ಹಂಚಿ ಕುಣಿದಾಡಿದ್ದ. ಪ್ರತೀ ವೀಕೆಂಡು ಬರುವುದಕ್ಕೆ ಬಹಳೇ ಕಾಯುತ್ತಿದ್ದ. ಹಸಿಗೂಸೊಂದು ರಕ್ತ-ಮಾಂಸ ತುಂಬಿಕೊಂಡು ನಿಧಾನವಾಗಿ ಬೆಳೆಯುವುದನ್ನು, ಕಲಿಯುವುದನ್ನು ನೋಡಿ ಅಚ್ಚರಿಪಟ್ಟಿದ್ದ. ವಾರಕ್ಕೊಂದು ಫೋಟೋ ತೆಗೆದು ಅದರ ಹಿಂದೆ ವಾತ್ಸಲ್ಯದ ಸಾಲುಗಳನ್ನು ಗೀಚಿ ಫೇಸ್‍ಬುಕ್ಕಿನಲ್ಲಿ ಹಾಕಿದ್ದ. ವಾರಗಳ ಲೆಕ್ಕಕ್ಕೆ ಸರಿಯಾಗಿ ಇಂಜೆಕ್ಷನ್ ಹಾಕಿಸುತ್ತಿದ್ದ. ಇಂಜೆಕ್ಷನ್ ಕೊಡುವಾಗ ತಾನೇ ಹಿಂಸೆ ಅನುಭವಿಸಿದ್ದ. "ಪೋಲಿಯೋ ಡ್ರಾಪ್ ಥರ ಇದಕ್ಕೂ ಏನೂ ಇಲ್ವಾ?" ಎಂದೆಲ್ಲಾ ಕೇಳಿ ಡಾಕ್ಟರನ್ನೇ ಪೇಚಿಗೆ ಸಿಲುಕಿಸಿದ್ದ. ಸ್ಥಿರೆಯೂ ಅಮ್ಮನ ಆರೈಕೆಯಲ್ಲಿ ಬಾಣಂತನವನ್ನು ಚೆನ್ನಾಗಿಯೇ ಮುಗಿಸಿದ್ದಳು. ಕ್ರಮೇಣ ಸುಧಾರಿಸಿಕೊಂಡು ಮೈ ಆಯಾಸವನ್ನು ನೀಗಿಸಿಕೊಳ್ಳುತ್ತಿದ್ದಳು.
ಬೆಂಗಳೂರಿನಲ್ಲಿ ಶತಭಿಷನ ಕೆಲಸ ಚೆನ್ನಾಗಿಯೇ ನಡೆದಿತ್ತು. ಆತ ತಾನು ಮೊದಲು ಕೆಲಸಕ್ಕಿದ್ದ ಜಾಗ ಬಿಟ್ಟು ತಾನೇ ಫರ್ಮ್‍ವೊಂದನ್ನು ಆರಂಭಿಸಿದ್ದ. ಅದಕ್ಕೆ ಮಗನ ಹೆಸರನ್ನೇ ಇಟ್ಟಿದ್ದ. ಚಲನಾ ಕನ್ಸಲ್ಟಂಟ್ ಆಗಿ ಆಗಾಗ ಬಂದು ಹೋಗುತ್ತಿದ್ದಳು. ಸ್ಥಿರೆ ಮತ್ತು ಆಕೆಯ ಮಗನ ಬಗ್ಗೆಯೂ ವಿಚಾರಿಸುತ್ತಿದ್ದಳು. ಮೊದಲಿಗಿಂತ ತೀರಾ ಗಂಭೀರವಾಗಿರುತ್ತಿದಳ್ದು. ಪಡೆದ ಹಣವನ್ನೆಲ್ಲಾ ದಾನ ಮಾಡುತ್ತಿದ್ದಳು. ಫ್ಲಾಟ್‍ಅನ್ನು ಬಿಟ್ಟು, ಚಿಕ್ಕ ಕೊಠಡಿಯೊಂದರಲ್ಲಿ ಸರಳ ಜೀವನ ನಡೆಸುತ್ತಿದ್ದಳು.
ಎಲ್ಲ ಚೆನ್ನಾಗಿಯೇ ನಡೆಯುತ್ತಿದ್ದರಿಂದ ಶತಭಿಷ ಅಮ್ಮ-ಮಗನನ್ನು ಬೆಂಗಳೂರಿಗೆ ಶಿಫ್ಟ್ ಮಾಡುವ ಆಲೋಚನೆಯಲ್ಲಿ ತೊಡಗಿದ್ದ. ಮಗ-ಹೆಂಡತಿಯ ಜೊತೆ ಆರಾಮವಾಗಿ ಕಾಲ ಕಳೆಯುವ ಕನಸು ಕಾಣುತ್ತಿದ್ದ. ಆದರೆ ಆ ಕನಸುಗಳ ತುದಿಯಲ್ಲಿ ಪ್ರಪಾತವಿರುವುದು ಆತನಿಗೆ ತಿಳಿದಿರಲಿಲ್ಲ.
**
ಬೆಂಗಳೂರಿಗೆ ಬಂದ ಎರಡೂವರೆ ವರ್ಷ ಎಲ್ಲವೂ ಸರಿಯಾಗಿತ್ತು.  ಆದರೆ ನಂತರದಲ್ಲಿ ಒಂದು ದಿನ ಯಾರೋ ಕೊಟ್ಟ ಮೂಗರ್ಜಿಯ ಆಧಾರದ ಮೇಲೆ ಶತಭಿಷ ಆಫೀಸ್ ರೈಡ್ ಮಾಡಲಾಗಿತ್ತು. ಸೆಬಿಯವರು ಆತನ ಟ್ರೇಡಿಂಗ್‍ಗೆ ಬ್ರೇಕ್ ಹಾಕಿದ್ದರು. ಡಿಮ್ಯಾಟ್ ಅಕೌಂಟ್ ಸೀಜ್ ಆಗಿತ್ತು. ಆತನಲ್ಲಿ ಹಣತೊಡಗಿಸಿದ್ದವರು ವಾಪಸ್ಸ್ ಕೇಳಹತ್ತಿದ್ದರು. ಶತಭಿಷ ದಾಖಲೆಗಳನ್ನು ಒಟ್ಟುಗೂಡಿಸಿ ನಿರ್ದೋಷಿ ಎಂದು ಸಾಬೀತುಪಡಿಸಿಕೊಳ್ಳಲು ಹೆಣಗಾಡುತ್ತಿದ್ದ. ಮನೆಗೆ ಬಂದಾಗ ಮಗ ಅತ್ತರೂ ಸಿಟ್ಟಾಗುತ್ತಿದ್ದ.
ಒಂದು ದಿನ ಈತನಿಲ್ಲದ ವೇಳೆಯಲ್ಲಿ ಚಲನಾ ಮನೆಗೆ ಬಂದಿದ್ದಳು. ಮಗುವನ್ನು ಆಟ ಆಡಿಸುತ್ತಾ ಜಗತ್ತೇ ಮರೆತಂತಿದ್ದಳು. ಸ್ಥಿರೆಗೆ ಸ್ವಲ್ಪ ಕೈ ಬಿಡುವಾಯಿತು.
"ಬರ್ತಿರಿ ಅವಾಗವಾಗ" ಎಂದಿದ್ದಳು.
ಅದೇಕೋ ಶತಭಿಷನಿಲ್ಲದ ವೇಳೆಯಲ್ಲಿಯೇ ಚಲನಾ ಮನೆಗೆ ಬರುತ್ತಿದ್ದಳು. ಮಗುವನ್ನು ಆಟವಾಡಿಸುತ್ತಿದ್ದಳು. ಮಗವೂ ಆಕೆಯನ್ನು ಹಚ್ಚಿಕೊಳ್ಳಲು ಶುರು ಮಾಡಿತು. ಮೊದಮೊದಲಿಗೆ ಸ್ಥಿರೆಗೆ ಹಿತವೆನಿಸಿದರೂ ಕ್ರಮೇಣ ಏನೋ ಅಸೂಯೆಯಾಯಿತು. ಅರ್ಧ ದಿನಕ್ಕಿಂತ ಜಾಸ್ತಿ ಆಕೆಯೇ ಮಗುವನ್ನು ಆಡಿಸಹತ್ತಿದ್ದಳು. ಸ್ಥಿರೆ ಸೂಕ್ಷ್ಮವಾಗಿ ಚಲನೆಗೆ ಅದನ್ನು ಹೇಳಬೇಕೆಂದು ನಿರ್ಧರಿಸಿದ್ದಳು.
ಅಷ್ಟರಲ್ಲಿ ಮನೆಗೊಂದು ನೋಟೀಸ್ ಬಂದಿತ್ತು. ಬಿಲ್ ಬಾಕಿ ಉಳಿಸಿಕೊಂಡಿದ್ದಕ್ಕೆ ಸಂಬಂಧಿಸಿದ್ದ ನೋಟೀಸ್ ಅದು...ಶತಭಿಷನ ಕಂಪನಿ ಆರ್ಥಿಕ ಮುಗ್ಗಟ್ಟಿನಿಂದ ಹೊರಬರುವುದಕ್ಕೆ ಇನ್ನೂ ಒಂದು ವರುಷ ಬೇಕಾಗಬಹುದು ಎಂದಿದ್ದ. ಆದರೆ ಬೆಂಗಳೂರಿನಲ್ಲಿ ಬಿಲ್ಲುಗಳ ಭಾರವನ್ನೂ ಹೊತ್ತು ಸಾಗಬೇಕಿತ್ತಲ್ಲ?  ಹೊರಗೆ ಚಲನಾ ಮಗುವನ್ನು ಆಡಿಸುತ್ತಿರುವಾಗ, ಸ್ಥಿರೆಗೊಂದು ಯೋಚನೆ ಬಂತು.  ರಾತ್ರಿ ಶತಭಿಷನೊಂದಿಗೆ ಅದನ್ನು ಪ್ರಸ್ತಾಪಿಸಿದ್ದಳು.
"ನಾನ್ ಮತ್ತೆ ಕೆಲ್ಸಕ್ಕ್ ಸೇರ್ಕೊಳ್ಳಾ?" ಸ್ಥಿರೆ ನಿಧಾನವಾಗಿ ಕೇಳಿದ್ದಳು.
"ಅಂದ್ರೆ? ನಂಗ್ ನಿಮ್ಮನ್ ಸಾಕಕ್ ಆಗಲ್ಲ ಅಂತಾನಾ?" ಆತ ಸಿಟ್ಟಿನಿಂದ ಉರಿಯುತ್ತಿದ್ದ.
"ಹಂಗಲ್ಲ..." ಆಕೆ ಏನನ್ನೋ ಹೇಳಹೊರಟಿದ್ದಳು..."ಬೇಡಾ....ಅಷ್ಟೇ.." ಆತ ಮಾತು ತುಂಡಿರಿಸಿದ್ದ. ಆಕೆ ಸುಮ್ಮನಾದಳು. ಯಾವತ್ತೋ ಒಂದು ದಿನ ಚಲನಾಳ ಬಳಿ ಈ ವಿಷಯ ಹೇಳಿಕೊಂಡು ಅತ್ತಳು.
**
"ಅವಳು ಕೆಲ್ಸಕ್ಕ್ ಹೋದ್ರೆ ನಿಂಗೇನ್ ಸಮಸ್ಯೆ?" ಚಲನಾ ಶತಭಿಷನನ್ನು ಕೂರಿಸಿಕೊಂಡು ಅರ್ಥಮಾಡಿಸುತ್ತಿದ್ದಳು.
"ಏಯ್...ಗೊತ್ತಿಲ್ಲಾ ಕಣೆ..ಅವಳ್ ಕೆಲ್ಸಕ್ ಹೋದ್ರೆ, ಮಗೂನ್ ನೋಡ್ಕೊಳೋದ್ ಯಾರು?" ಆತ ಆಕೆಯನ್ನು ಪ್ರಶ್ನಿಸಿದ್ದ.
"ಅದು ಬೇರೆ ಪ್ರಶ್ನೆ...ಇದ್ ಬೇರೆ ಪ್ರಶ್ನೆ...ಪ್ರಶ್ನೆಗ್ ಪ್ರಶ್ನೆ ಉತ್ತರ ಆಗಲ್ವಲ್ಲ..."
"ಅಂದ್ರೆ?"
"ನಿಂಗ್ ಅವಳ್ ಕೆಲ್ಸಕ್ ಹೋಗದ್‍ಕಿಂತಾ ಮಗು ನೋಡ್ಕೊಳೋದ್ ಯಾರು ಅನ್ನೊದ್ ಹೈ ಪ್ರಿಯಾರಿಟಿ..ಕರೆಕ್ಟ್?" ಆಕೆ ಆತನ ಮನವೋಲಿಸುವ ಪ್ರಯತ್ನ ನಡೆಸಿದ್ದಳು.
"ಕರೆಕ್ಟ್..." ಆತ ಸಮ್ಮತಿಸಿದ್ದ
"ಅದಕ್ಕ್ ವ್ಯವಸ್ಥೆ ಮಾಡಣಾ ಬಿಡು....ಅವಳ್ ಕೆಲ್ಸಕ್ಕ್ ಹೋದ್ರೆ ನಿಂಗೂ ನೆಮ್ದಿ...ಇವನ್ ಯು ಕ್ಯಾನ್ ಟೇಕ್ ಆಫ್ ದ ಬೇಬಿ ಅಲ್ವಾ?" ಆಕೆ ಆತನಿಗೊಂದು ಹೊಸ ಪರ್‍ಸ್ಪೆಕ್ಟಿವ್ ಕೊಟ್ಟಿದ್ದಳು...
"ಹಮ್...ಯೋಚ್ನೆ ಮಾಡ್ತಿನಿ..." ಆತ ಒಪ್ಪಿಕೊಂಡಿದ್ದ.
ಮುಂದಿನ ತಿಂಗಳಿನಿಂದಲೇ ಸ್ಥಿರೆ ಕೆಲಸಕ್ಕೆ ಹೋಗಲು ಶುರುಮಾಡಿದ್ದಳು. ಊರಿನಿಂದ ಸ್ಥಿರೆಯ ತಾಯಿ ಆಗಾಗ ಬಂದು ಹೋಗುತ್ತಿದ್ದರು. ಮನೆಗೆಲಸಕ್ಕೆ ಆಂಟಿಯೊಬ್ಬರನ್ನು ಗುರುತುಮಾಡಿದ್ದರು. ಆಕೆ ಮಗುವಿಗೆ ಸ್ನಾನ ಮಾಡಿಸಿಯೂ ಹೋಗುತ್ತಿದ್ದರು. ಮೂರೂವರೆ ವರುಷದ ಮಗು ಮತ್ತು ಶತಭಿಷ ದಿನವಿಡೀ ಒಟ್ಟಿಗೇ ಇರುತ್ತಿದ್ದರು. ಸ್ಥಿರೆ ಆಫೀಸಿನ ಕೆಲಸವನ್ನು ಆದಷ್ಟು ಬೇಗ ಮುಗಿಸಿ ಮನೆಗೆ ಬರುತ್ತಿದ್ದಳು. ತೀರಾ ಅವಶ್ಯವೆನಿಸಿದರೆ ವರ್ಕ್ ಫ್ರಾಂ ಹೋಮ್ ಮಾಡುತ್ತಿದ್ದಳು. ಶತಭಿಷನ ಕಂಪನಿಯ ಮೇಲಿನ ಕೇಸುಗಳು ರದ್ದಾದವು. ಇನ್ನೇನು ಕೆಲವೇ ದಿನದಲ್ಲಿ ಶತಭಿಷ ಮತ್ತೆ ಮಾರ್ಕೆಟ್ಟಿಗೆ ಕಾಲಿಡಲಿದ್ದ. ಕೆಟ್ಟದಿನಗಳು ಕಳೆದವೆಂದು ಇಬ್ಬರೂ ನಿಟ್ಟುಸಿರು ಬಿಡುತ್ತಿದ್ದರು
**
ಅಂದು ಸಂಜೆ ಮಗು ಮಲಗಿತ್ತು. ಸ್ಥಿರೆ ಆಫೀಸಿನಲ್ಲಿದ್ದಳು. ಮನೆಯಲ್ಲಿದ್ದು ಶತಭಿಷನೊಬ್ಬನೇ..ಚಲನಾ ಮನೆಗೆ ಬಂದಳು...ಬರಬಾರದಿತ್ತೇನೋ...ಸ್ಥಿರೆ ಮನೆಗೆ ಬರುವಷ್ಟರಲ್ಲಿ ನಡೆಯಬಾರದ್ದು ನಡೆದೇ ಹೋಗಿತ್ತು...

-ಚಿನ್ಮಯ
7/2/2019

Tuesday, February 5, 2019

ಫ್ಲಾಷ್ ಬ್ಯಾಕ್

"ಸಾರಿ...ಐ ಡಿಂಟ್ ಮೀನ್ ಟು ಹಿಟ್ ಆನ್ ಯುವರ್ ಬಮ್..." ಚಲನಾ ಶತಭಿಷನ ಹತ್ತಿರ ಅಪಾಲಜಿ ಕೇಳುತ್ತಿದ್ದಳು. ಪೇಂಟ್ ಬಾಲ್ ಆಟದಲ್ಲಿ ಹೊಟ್ಟೆಗಿಂತ ಕೆಳಗಡೆ ಶೂಟ್ ಮಾಡುವಂತಿರಲಿಲ್ಲ. ಆಕೆ ಆಟದ ಭರದಲ್ಲಿ ಮರೆತಿದ್ದಳು. ಅವಳು ಶೂಟ್ ಮಾಡುತ್ತಿರುವುದನ್ನು ಕೋರೆಗಣ್ಣಿನಲ್ಲಿ ನೋಡಿದ ಆತ ಬೆನ್ನು ಕೊಟ್ಟಿದ್ದ. ಗುರಿ ತಪ್ಪಿತ್ತು. ಹೊಡೆತ ಸ್ವಲ್ಪ ಕೆಳಗೆ ಬಿದ್ದಿತ್ತು. ಪೇಂಟ್ ಬಾಲ್ ಒಡೆದು ವಾಟರ್ ಗೇಮ್ಸ್‍ಗೆಂದೇ ತಂದಿದ್ದ ನೀಲೀ ಶಾಟ್ರ್ಸ್ ಕೆಂಪು ಕೆಂಪಾಗಿತ್ತು... ಎಲ್ಲರೆದು ಏನಾಗಿಲ್ಲ ಎಂದನಾದರೂ, ವಾಷ್‍ರೂಮಿಗೆ ಹೋದವನು ಸುಹಾಸ್ ಹತ್ತಿರ ಐಸ್‍ಕ್ಯೂಬ್ ಹುಡ್ಕೋ ಮಗಾ ಎಂದಿದ್ದ. ಐಸ್ ಕ್ಯೂಬ್ ಇಟ್ಟು ಸುಧಾರಿಸಿಕೊಳ್ಳುತ್ತಾ, "ಏನೋ ನಿನ್ ಫ್ರೆಂಡು ಲೇ...ಎಲ್ ಬೋರ್ಡು" ಎಂದು ಅಸಮಾಧಾನ ತೊಡಿಕೊಂಡಿದ್ದ. "ಜೀನ್ಸ್ ಹಾಕ್ಕೋಂಡೇ ಆಡ್ಬೇಕ್ ಕಣೋ ನೆಕ್ಸ್ಟ್ ಟೈಂ ಇಂದಾ" ಎಂದು ಗೊಣಗಿದ್ದ. ಶತಭಿಷ ಸುಧಾರಿಸಿಕೊಂಡು ಬರುವಷ್ಟರಲ್ಲಿ ಎರಡೂ ಟೀಮಿನವರೂ ಹೊರಡಲು ಅನುವಾಗಿದ್ದರು. ಆಟ ಗೆದ್ದ ಖುಷಿಯಲ್ಲಿ ಅಕೌಂಟ್ಸ್ ಟೀಂನವರು ಕೂಗುತ್ತಿದ್ದರು. ಆರ್ ಆಂಡ್ ಡಿಯವರು ಶತಭಿಷ ನಿಧಾನವಾಗಿ ಕುಂಟುತ್ತಾ ಬರುವುದನ್ನು ನೋಡಿ ಮುಸಿಮುಸಿ ನಗುತ್ತಿದ್ದರು. ಶತಭಿಷ ಎಲ್ಲರೂ ಹೋದಮೇಲೆ ನಿಧಾನವಾಗಿ ಬಸ್ಸನ್ನೇರಿದ. ಮುಂದಿನ ಸೀಟಿನಲ್ಲೇ ಸೀಟು ಖಾಲಿಯಿದ್ದಿದ್ದು ನೋಡಿ ಕಲೀಗ್ಸ್‍ಗಳ ಸಂಗ ಬಿಟ್ಟು ಅಲ್ಲಿಯೇ ಕೂತ. ಬಸ್ಸ್ ಹೊರಟು ಗೇಟ್ ತಲುಪುವಷ್ಟರಲ್ಲಿ ಸುಹಾಸ್ ಡ್ರೈವರ್ ಬಳಿ ಹೋಗಿ ಬಸ್ ನಿಲ್ಲಿಸಲು ಹೇಳಿದ. ಚಲನಾ ಓಡೋಡಿ ಬಂದು ಬಸ್ ಹತ್ತಿದ್ದಳು. ಬೇರೆಲ್ಲೂ ಸೀಟು ಕಾಣದಾಗಿ ಶತಭಿಷನ ಪಕ್ಕದಲ್ಲೇ ಕೂತಳು..ಶತಭಿಷನಿಗೆ ಕೂತಲ್ಲಿಯೇ ಇರಿಸು-ಮುರಿಸಾಗುತ್ತಿತ್ತು. "ಆರ್ ಯು ಕಂಫರ್ಟೆಬಲ್? ಶುಡ್ ಐ ಮೂವ್ ಸಮ್‍ವೇರ್?" ಆಕೆ ಸಹಜವೆಂಬಂತೆ ಕೇಳಿದ್ದಳು. "ನೋ ನೋ ಇಟ್ಸ್ ಫೈನ್..ಬೀ ಸೀಟೆಡ್..." ಆತ ಹಲ್ಲು ಕಿಸಿಯುತ್ತಾ ಹೇಳಿದ್ದ. ಪಕ್ಕದಲ್ಲಿದ್ದ ಸುಹಾಸ ಬೇರೆ ಉತ್ತರವನ್ನೇ ಬಯಸಿದ್ದನೇನೋ...ಸುಹಾಸ್, ಐದು ನಿಮಿಷದ ನಂತರ ಲೈಟ್ ಕಣ್ಣಿಗೇ ಹೊಡೆಯುತ್ತಿದೆ ಎಂಬ ನೆಪ ಹೇಳಿ ಯಾರೂ ಇಲ್ಲದ ಕೊನೆಯ ಸೀಟಿನೆಡೆ ಆಕೆಯನ್ನು ಕರೆದೊಯ್ದ. ** ಶತಭಿಷ-ಸುಹಾಸ-ಚಲನಾ ತುಂಬಾ ಚೆನ್ನಾಗಿ ಜೆಲ್ ಆಗುತ್ತಿದ್ದರು. ಸುಹಾಸ ತುಂಬಾ ಚೆನ್ನಾಗಿ ಹಾಡುತ್ತಿದ್ದ. ಬೀಟ್ ಬಾಕ್ಸಿಂಗ್ ಮಾಡುವುದರಲ್ಲಿ ವಿಶೇಷ ಆಸಕ್ತಿಯಿತ್ತು. ರ್ಯಾಪ್ ಹಾಡುತ್ತಿದ್ದ. ಅದಕ್ಕೆ ಶತಭಿಷನೂ ಚೂರು ಪಾರು ಪದ ಸೇರಿಸುತ್ತಿದ್ದ. ಆದರೆ ಶತಭಿಷ ಮಾತ್ರ ಸುಹಾಸನಿಗೆ ತದ್ವಿರುದ್ಧ. ತಿಳಿ ಸಂಜೆಯಲ್ಲಿ ಭಾವಗೀತೆಗಳು, ಮಧ್ಯರಾತ್ರಿಯಲ್ಲಿ ಗಝಲ್‍ಗಳು ಅವನಿಗೆ ಬಹಳೇ ಇಷ್ಟವಾಗುತ್ತಿದ್ದವು. ಶತಭಿಷ ಎಲ್ಲವನ್ನೂ ಅಳೆದೂ ತೂಗಿ ಮಾಡಿದರೆ, ಸುಹಾಸನಿಗೆ ಭಯಂಕರ ಅರ್ಜೆಂಟು. ಸುಹಾಸ ಒಮ್ಮೆ ಆಕಾಶದಲ್ಲಿದ್ದರೆ ಮತ್ತೊಮ್ಮೆ ಪಾತಾಳದಲ್ಲಿರುತ್ತಿದ್ದ. ತಲೆ ಕೆಟ್ಟಾಗಲೆಲ್ಲಾ ಜೋರಾಗಿ ಗಾಡಿ ಓಡಿಸಿಕೊಂಡು ನಗರ ಪ್ರದಕ್ಷಿಣೆ ಹಾಕುತ್ತಿದ್ದ. ನಾಲ್ಕುಗಂಟೆಗೇ ನಂದಿಬೆಟ್ಟಕ್ಕೆ ಹೋಗಿರುತ್ತಿದ್ದ. ಚಲನಾಳಿಗೆ ಚಿತ್ರ ಬಿಡಿಸುವುದರಲ್ಲಿ ಅಭಿರುಚಿಯಿತ್ತು. ಕುಸುರಿ ಹಾಕುತ್ತಿದ್ದಳು. ಕಥಕ್ ಕಲಿತಿದ್ದಳು..ಫ್ಲೋರ್‍ಗೆ ಇಳಿದಾಗಲೆಲ್ಲಾ ಎಂಥವರ ಬಾಯಲ್ಲೂ ವಾ ವಾ ಎನ್ನಿಸಿಕೊಳ್ಳುವಷ್ಟು ಚೆನ್ನಾಗಿ ಮೂವ್ಸ್ ಮಾಡುತ್ತಿದ್ದಳು.. ಹೀಗಾಗಿ ವೀಕೆಂಡುಗಳಲ್ಲಿ ಪಾನಗೋಷ್ಠಿ-ಗಾನಗೋಷ್ಠಿಗಳು ಮಜವಾಗಿಯೇ ನಡೆಯುತ್ತಿದ್ದವು. ಸುಹಾಸನಿಗೆ ಚಲನಾ ತೀರಾ ಇಷ್ಟವಾಗಿದ್ದಳು. ಶತಭಿಷ ಆಕೆ ಸುಹಾಸನ ಹುಡುಗಿ ಎಂದುಕೊಂಡು ಸುಮ್ಮನಾಗಿದ್ದ. ಚಲನಾಳ ಜೊತೆಯೇ ಇದ್ದ ಹುಡುಗಿಯರಿಗೆ ಕಾಳು ಹಾಕುತ್ತಿದ್ದ. ಸುಹಾಸನಿಗೆ ರೇಸಿಂಗ್ ಬಗ್ಗೆ ದಿನೇ ದಿನೇ ಹುಚ್ಚು ಜಾಸ್ತಿಯಾಗುತ್ತಿತ್ತು. ಹಳೆಯ ಕಾರೊಂದನ್ನು ಕೊಂಡು ಅಲ್ಟರೇಷನ್ನ್ ಮಾಡಿಸಿದ್ದ. ಪ್ರತೀ ವರ್ಷ ರೇಸ್ ನೋಡಲು ಚಿಕ್ಕಮಗಳೂರಿಗೆ ಹೋಗಿ ಬರುತ್ತಿದ್ದ. ಹೀಗೆ ಒಂದು ಬಾರಿ ಶತಭಿಷ ಕಂಪನಿ ಕೆಲಸದ ಮೇಲೆ ಪಾಲ್ ಆಲ್ಟೋಗೆ ಹೋಗಿದ್ದ. ಮೂರು ತಿಂಗಳ ಕೆಲಸ. "ಇವತ್ತ್ ಅವಳಿಗೆ ಪ್ರಪೋಸ್ ಮಾಡಣಾ ಅಂತಿದೀನಿ ಮಗಾ..." ಸುಹಾಸ ಮೆಸ್ಸೇಜು ಹಾಕಿದ್ದ. "ಆಲ್ ದ ಬೆಸ್ಟ್" ಎಂದು ಕಳಿಸಿದ ಸಂದೇಶಕ್ಕೆ ಎರಡು ಮೂರು ದಿನವಾದರೂ ಉತ್ತರ ಬಂದಿರಲಿಲ್ಲ. ಪ್ರಾಜೆಕ್ಟ್ ಡಿಲೆವರಿಯ ಗಡಿಬಿಡಿಯಲ್ಲಿ ಶತಭಿಷನೂ ಅವರ ಬಗ್ಗೆ ಅಷ್ಟಾಗಿ ಗಮನಹರಿಸಿರಲಿಲ್ಲ. ಬಹುಷಃ ಒಂದ್ಚೂರು ಗಮನ ಹರಿಸಬೇಕಿತ್ತೇನೋ... ** "ಸುಹಾಸ್ ಮೆಟ್ ವಿತ್ ಆನ್ ಆಕ್ಸಿಡೆಂಟ್...ಕಂಡೀಷನ್ ಈಸ್ ಸೀರಿಯಸ್" ಕಲೀಗ್ ಒಬ್ಬರು ಮೆಸ್ಸೇಜ್ ಮಾಡಿದ್ದರು. ಚಲನಾಳ ಕಡೆಯಿಂದ ಉತ್ತರವಿರಲಿಲ್ಲ. ನಿಗದಿತ ಪ್ಲಾನ್‍ಗಿಂತ ನಾಲ್ಕು ದಿನ ಮುಂಚೆಯೇ ಶತಭಿಷ ಬೆಂಗಳೂರಿಗೆ ಲ್ಯಾಂಡ್ ಆಗಿದ್ದ. ದುರದೃಷ್ಟವಶಾತ್ ಸುಹಾಸ ಅದಾಗಲೆ ತೀರಿಕೊಂಡಿದ್ದ. ಆತನ ಕಾರ್ಯಕ್ಕೆ ಹೋದಾಗ ಯಾರೋ ಹೇಳುತ್ತಿದ್ದರು...ಆಕ್ಸಿಡೆಂಟ್ ಆದ ಕಾರಿನಲ್ಲಿ ರಿಂಗ್ ಒಂದು ಸಿಕ್ಕಿತ್ತಂತೆ. ತುಂಬಾ ಕುಡಿದಿದ್ದನಂತೆ. ಬ್ಯಾಲೆನ್ಸ್ ತಪ್ಪಿ ಡಿವೈಡರ್‍ಗೆ ಡಿಕ್ಕಿಯಾಗಿತ್ತಂತೆ...ಇನ್ನೂ ಏನೇನೋ...ಶತಭಿಷನಿಗೆ ಬಹುತೇಕ ಉತ್ತರ ಸಿಕ್ಕಂತಿತ್ತು...ಆದರೆ ಇನ್ನೊಂದು ಅನಾಹುತ ತಪ್ಪಿಸಬೇಕೆನ್ನುವುದೂ ನೆನಪಾಗಿತ್ತು. ** "ಏನೇ ಹಿಂಗ್ ಆಗಿದೀಯಾ ನೀನು? ಸತ್ತೋಗ್ತಿಯಾ ಕಣೆ ಹಿಂಗಾದ್ರೆ..." ಶತಭಿಷ ಚಲನಾಳ ಫ್ಲಾಟ್ ಹೋಗಿದ್ದ. ಆಕೆ ಏನೇನೋ ಮಾತಾಡುತ್ತಿದ್ದಳು...ಮಾತು ಮುಗಿಸುವುದರೊಳಗಾಗೇ ಅಳುತ್ತಿದ್ದಳು...ಕಣ್ಣಾಲಿಗಳು ತೇಲುತ್ತಿದ್ದವು... "ನೀನ್ ಕರೆಕ್ಟಾಗ್ ಊಟ-ನಿದ್ದೆ ಮಾಡ್ ಎಷ್ಟ್ ದಿನಾ ಆಯ್ತು?" ಶತಭಿಷ ಸಲುಗೆಯಿಂದಲೇ ಗದರಿಸಿದ. ಆಕೆ ಗೊತ್ತಿಲ್ಲ ಎಂಬಂತೇ ಕೈ ತಿರುಗಿಸಿ ಸೋಫಾದ ಮೇಲೆ ಬಿದ್ದುಕೊಂಡಳು. ಆಕೆಯನ್ನು ಒತ್ತಾಯದಿಂದ ತನ್ನ ಫ್ಲಾಟ್‍ಗೆ ಕರೆದೊಯ್ದ ಶತಭಿಷ, ಮರುದಿನ ವರ್ಕ್ ಫ್ರಾಂ ಹೋಮ್ ಮಾಡಿ, ಆಕೆಯನ್ನು ನಾರ್ಮಲ್ ಮೋಡ್‍ಗೆ ತಂದಿದ್ದ. ನಿಧಾನವಾಗಿ ಆ ದಿನ ಸಂಜೆ ಚಲನಾಳೇ ವಿಷಯ ತಿಳಿಸಿದ್ದಳು. ಸುಹಾಸ ಪ್ರಪೋಸ್ ಮಾಡಿದ್ದಾಗಿಯೂ, ತಾನು ಸಧ್ಯಕ್ಕೆ ಕಮಿಟ್ ಆಗುವ ಯೋಚನೆಯಲ್ಲಿ ಇಲ್ಲವೆಂದು ಹೇಳಿದ್ದಾಗಿಯೂ ತಿಳಿಸಿದಳು. ಅದಕ್ಕಾತ ಮರುದಿನ ಸಂಜೆ ಆಕೆಯ ಜೊತೆ ಜಗಳವಾಡಿದ್ದನಂತೆ... ಆಕೆ ಆತನನ್ನು ಚೀಪ್ ಎಂದೇನೋ ಬೈದಿದ್ದಳಂತೆ...ಅಷ್ಟೇ.....ಬಾರಿಗೆ ಹೋಗಿ ಚಿತ್ತ್ ಆದ ಸುಹಾಸ, ಎಣ್ಣೆಯೇಟಿನಲ್ಲಿ ಗಾಡಿ ಗುದ್ದಿದ್ದ....ಆಕೆಗೆ ವಿಷಯ ಗೊತ್ತಾಗಿದ್ದು ಎರಡು ದಿನದ ನಂತರವೇ....ಅಂದಿನಿಂದ ಅದೇನೋ ಗಿಲ್ಟ್ ಕಾಡಲು ಶುರುವಾಗಿ, ಫ್ಲಾಟ್ ಬಿಟ್ಟು ಆಕೆ ಹೋಗಿರಲಿಲ್ಲ... ಆ ದಿನ ರಾತ್ರಿ ಶತಭಿಷನೇ ಅಡಿಗೆ ಮಾಡಿದ್ದ. ಊಟ ಮುಗಿಸಿದ ಆಕೆ, ಪೆನ್ಸಿಲ್ ಇದ್ಯಾ ಎಂದು ಕೇಳಿದ್ದಳು....ತಡರಾತ್ರಿಯವರೆಗೂ ಚಿತ್ರವೊಂದನ್ನು ಗೀಚಿದ್ದಳು...ಪುಟ್ಟದೊಂದು ಮಗು...ಸುತ್ತಮುತ್ತಲೆಲ್ಲ ಬಗೆ-ಬಗೆ ಆಟಿಗೆ, ಸಿಹಿ ತಿಂಡಿ...ಆಕೆಯ ಕಣ್ಣಲ್ಲಿ ಮಾತ್ರ ನೀರಿತ್ತು.... "ದಿಸ್ ಈಸ್ ಮಾಸ್ಟರ್ ಪೀಸ್....." ಶತಭಿಷ ಉದ್ಘರಿಸಿದ್ದ... "ದಿಸ್ ವನ್ ಈಸ್ ಸ್ಪೆಷಲ್...." ಚಲನಾ ನಿಟ್ಟುಸಿರು ಬಿಟ್ಟು ಹೇಳಿದ್ದಳು... ** ಇಷ್ಟೆಲ್ಲ ಆದಬಳಿಕ ಚಲನಾ ಮೊದಲಿನ ಚಲನಾ ಆಗಿರಲಿಲ್ಲ. ಅಲ್ಲಿಯವರೆಗೆ ಎಲ್ಲರೊಳಗೊಬ್ಬಳು ಎಂಬಂತಿದ್ದ ಆಕೆ ಎಲ್ಲರೆದು ಮಿಂಚಲು ಪ್ರಯತ್ನಿಸುತ್ತಿದ್ದಳು. ದುಬಾರಿ ಬಟ್ಟೆ ಹಾಕುವುದು, ಐಶಾರಾಮಿ ರೆಸಾರ್ಟ್‍ಗಳಿಗೆ ತೆರಳುವುದು ಸಾಮಾನ್ಯವಾಯಿತು. ಜೊತೆಗೆ ನಿಧಾನವಾಗಿ ಟ್ರಾವೆಲಿಂಗ್ ಹುಚ್ಚೂ ಶುರುವಾಯಿತು. ವೀಕೆಂಡ್ ಬಂತೆಂದರೆ ಒಂದೋ ಪಾರ್ಟಿಯಲ್ಲಿರುತ್ತಿದ್ದಳು ಅಥವಾ ಟ್ರಾವೆಲ್ ಮಾಡುತ್ತಿದ್ದಳು. ಅಪರೂಪಕ್ಕೆಂಬಂತೆ ದಿನಗಟ್ಟಲೇ ಬಾಗಿಲು ಹಾಕಿಕೊಂಡು ಪೇಂಟ್-ಬ್ರಶ್ ಹಿಡಿದಿರುತ್ತಿದ್ದಳು. ಆರ್ಟ್ ಗ್ಯಾಲರಿಯಿಂದ ಕಲಾಕೃತಿಗಳನ್ನು ಕೊಂಡು ತರುತ್ತಿದ್ದಳು. ಇಷ್ಟವಾದವರ ಜೊತೆ ಓಡಾಡುತ್ತಿದ್ದಳು...ಕೆಲಸದ ಕಡೆ ಶ್ರದ್ಧೆ ಮೊದಲಿಗಿಂತ ಕಡಿಮೆಯಾಗಿತ್ತು...ಆದರೆ ಪ್ರೊಡಕ್ಟಿವಿಟಿಯಲ್ಲ...ಪರಿಣಾಮ ಪ್ರಮೋಷನ್ ಮಾತ್ರ ಪ್ರತೀ ವರುಷವೂ ತಪ್ಪದಂತೆ ಸಿಗುತ್ತಲಿತ್ತು. ಶತಭಿಷ ಇನ್ನೊಂದು ಟ್ರ್ಯಾಕ್‍ಗೆ ಹೋಗಿದ್ದ. ಸಾಫ್ಟ್‍ವೇರ್‍ನಲ್ಲಿ ದುಡಿದು ಕಲಿಯಲಿಕ್ಕೆಂದು ಮಾಡಿದ ಸಾಲವೆಲ್ಲ ತೀರಿದ ಮೇಲೆ, ಮತ್ತೆ ಸಾಲ ಮಾಡಲು ಮನಸ್ಸಾಗಲಿಲ್ಲ. ಐ.ಏ.ಎಸ್ ಮಾಡುತ್ತೇನೆಂದು ಕೋಚಿಂಗ್ ಹೋಗಲು ಶುರುಮಾಡಿದ್ದ. ಪ್ರಿಲಿಮ್ಸ್ ಕ್ಲಿಯರ್ ಆದ ಮೇಲೆ ಐ.ಟಿ ಕೆಲಸಕ್ಕೆ ಪೂರ್ಣವಾಗಿ ರಾಜೀನಾಮೆಯಿತ್ತಿದ್ದ. ** ಐ.ಟಿ ಕೆಲಸ ಬಿಟ್ಟು ರಗಳೆ, ಸಮಾಸ, ಷಟ್ಪದಿ ಓದುತ್ತಲಿದ್ದ ಶತಭಿಷ ಚಲನಾಳ ಡಬಲ್ ಬೆಡ್‍ರೂಮ್ ಫ್ಲಾಟ್‍ನಲ್ಲಿಯೇ ಇರತೊಡಗಿದ್ದ. ಆಕೆ ವಾರದಲ್ಲಿ ಐದು ದಿನ ಆಫೀಸಿಗೆ ಹೋಗುತ್ತಿದ್ದಳು. ಆಫೀಸ್ ಮುಗಿಸಿ ಪಾರ್ಟಿಗೋ, ಫಂಕ್ಷನ್‍ಗೋ ಅಥವಾ ಸುತ್ತಾಡಲೋ ಹೋಗಿರುತ್ತಿದ್ದಳು. ವೀಕೆಂಡ್ ಬಂತೆಂದರೆ ಬ್ಯಾಗ್ ಪ್ಯಾಕ್ ಮಾಡಿ ಊರೂರು ಸುತ್ತುತ್ತಿದ್ದಳು. ಶತಭಿಷ ಬೆಳಿಗ್ಗೆ ಐದಕ್ಕೆ ಎದ್ದಿರುತ್ತಿದ್ದ. ರಾತ್ರಿ ಹತ್ತಕ್ಕೆ ಸರಿಯಾಗಿ ಮಲಗುತ್ತಿದ್ದ. ರವಿವಾರ ಮನೆ ಕ್ಲೀನ್ ಮಾಡುತ್ತಿದ್ದ. ಅವರಿಬ್ಬರೂ ಮುಖಕ್ಕೆ ಮುಖ ಕೊಟ್ಟು ಮಾತನಾಡುವುದು ಬಹಳೇ ಅಪರೂಪವಾಗಿತ್ತು. ಆದರೆ ವಿರಾಮದಲ್ಲಿ ಸಿಕ್ಕಾಗ ತುಂಬಾ ಮಾತನಾಡುತ್ತಿದ್ದರು. ಶತಭಿಷನ ಖರ್ಚುಗಳನ್ನೆಲ್ಲ ಬಹುತೇಕ ಆಕೆಯೇ ನೋಡಿಕೊಳ್ಳುತ್ತಿದ್ದಳು. ಶತಭಿಷ ತಾನು ಆಕೆಯನ್ನು ನೋಡಿಕೊಳ್ಳುತ್ತಿದ್ದೇನೆಂಬ ಭ್ರಮೆಯಲ್ಲಿದ್ದ! ** ಒಮ್ಮೆ ಹೀಗಾಯಿತು....ಚಲನಾ ವೀಕೆಂಡಿನಲ್ಲಿ ಟ್ರಿಪ್‍ಗೆಂದು ಹೋದವಳು, ವಾರವಾದರೂ ವಾಪಸ್ ಬರಲಿಲ್ಲ. ಫೋನ್ ಮಾಡಿದರೆ ಸ್ವಿಚ್ ಆಫ್ ಆಗಿತ್ತು. ಶತಭಿಷನಿಗೆ ಗಾಬರಿಯಾಗಿತ್ತು.. ಆಕೆಯನ್ನು ಸಂಪರ್ಕಿಸುವುದಕ್ಕೆ ಏನೇನೋ ಸರ್ಕಸ್ ಮಾಡಿದ. ಆಫೀಸಿಗೆ ಕಾಲ್ ಮಾಡಿದಾಗ ಆಕೆ ವೆಕೇಷನ್ ತೆಗೆದುಕೊಂಡಿದ್ದಾಗಿ ತಿಳಿಯಿತು... ಮಧ್ಯರಾತ್ರಿ ಐಡಿಯಾವೊಂದು ನೆನಪಾಗಿ ಆಫೀಸ್ ಮೇಲ್ ಗೆ, ಮೆಸ್ಸೇಜ್ ಕಳುಹಿಸಿದ್ದ. "ಹಿಮಾಲಯದಲ್ಲಿದೀನಿ ಕಣೋ....ಫೋನ್ ಯೂಸ್ ಮಾಡ್ತಿಲ್ಲಾ...ಇನ್ನೊಂದ್ ಎರಡ್ ವೀಕ್ ಆಗಬಹುದು..." ಎರಡು ದಿನಗಳ ನಂತರ ಆಕೆ ರಿಪ್ಲೈ ಮಾಡಿದ್ದಳು. ಆತನಿಗೇಕೋ ತೀರಾ ಸಿಟ್ಟು ಬಂದಿತ್ತು... ** "ಯಾಕ್ ನಂಗ್ ಹೇಳ್ ಹೋಗಿಲ್ಲಾ ನೀ?" ಆತ ಆಕೆ ಬರುಬರುತ್ತಲೇ ಪ್ರಶ್ನಿಸಿದ್ದ. ಆಕೆಗೆ ಕೆಂಡದಂಥಾ ಜ್ವರ ಬಂದಿತ್ತು... "ನಾನ್ ಯಾಕ್ ನಿಂಗ್ ಹೇಳ್ಬೇಕು?" ಆಕೆ ವಾಪಸ್ ಪ್ರಶ್ನಿಸಿದ್ದಳು. "ಯಾಕಂದ್ರೆ?" ಆತ ಗಟ್ಟಿಯಾಗೇ ಕೇಳಿದ "ಯಾಕೇ? ಹೇಳು..." ಆಕೆ ಬಳಲಿದ್ದಳಷ್ಟೇ. ಸೋಲುವವಳಾಗಿರಲಿಲ್ಲ.. "ಏನಿಲ್ಲ..." ಅತ ಕೈಲಿದ್ದ ಕಪ್ ಅನ್ನು ಬಿಸಾಡಿದ್ದ. ಆಕೆಯೇ ಬಿಡಿಸಿದ್ದ ಚಿತ್ರವಿದ್ದ ಆ ಪಿಂಗಾಣಿಯ ಕಪ್ಪ್ ಚೂರು ಚೂರಾಗಿತ್ತು. ಅವರ ರಿಲೇಷನ್‍ನಂತೆಯೇ.... ** "ಐ ಆಮ್ ನಾಟ್ ಯುವರ್ ಗರ್ಲ್‍ಫ್ರೆಂಡ್.." ಆಕೆ ಮೀಟಿಂಗ್‍ನಲ್ಲಿ ಸ್ಪಷ್ಟವಾಗಿ ಹೇಳಿದ್ದಳು. "ಸೋ? ನಾನ್ ಏನೂ ಅಲ್ವಾ ನಿಂಗೇ?" ಆತ ಕೊನೆಯ ಅಸ್ತ್ರವೆಂಬಂತೇ ಕೇಳಿದ್ದ "ನೀನ್ ನನ್ ಫ್ರೆಂಡು...ತುಂಬಾ ಒಳ್ಳೇ ಫ್ರೆಂಡು...ಇಲ್ಲೇ ಇರು...ಓದು...ಮಲ್ಕೋ...ನಂಗೇನೂ ಪ್ರಾಬ್ಲಂ ಇಲ್ಲ...ಬಟ್ ನಾನ್ ಏನ್ ಮಾಡಬೇಕು ಮಾಡಬಾರದು ಅನ್ನೋದನ್ನ ಕಂಟ್ರೋಲ್ ಮಾಡ್ಬೇಡಾ..." ಆಕೆ ನೇರವಾಗೇ ಹೇಳಿದ್ದಳು... "ಫೈನ್...ಐ ವಿಲ್ ಲೀವ್ ಯು ಆಂಡ್ ಯುವರ್ ಹೌಸ್ ದೆನ್...." ಆತ ಸಿಟ್ಟಿನಿಂದಲೇ ಹೇಳಿದ್ದ... "ಓನ್ಲೀ ದಿಸ್ ಫ್ಲಾಟ್..." ಆಕೆ ಸರಿ ಮಾಡಿದ್ದಳು.... "ವೈ ನಾಟ್ ಯು?" ಆತನ ಕಣ್ಣಲ್ಲಿ ಮುಂಚು ಮೂಡಿತ್ತು. "ಐ ಆಮ್ ನಾಟ್ ಯುವರ್ಸ್....ಐ ನೆವರ್ ವಾಸ್.." ಆಕೆ ನಗುತ್ತಲೇ ಹೇಳಿದ್ದಳು... ಆತ ಅದೇಕೋ ಜೋರಾಗಿ ನಕ್ಕಿದ್ದ.... "ಬೈ ದ ಬೈ ವೇರ್ ವಿಲ್ ಯು ಗೊ? ಹೌ ಡು ಯು ಮ್ಯಾನೇಜ್ ?" ಆಕೆ ಸಹಜವಾಗೇ ಕೇಳಿದ್ದರೂ, ಈತನಿಗೇನೋ ಕುಹಕವೆನ್ನಿಸಿತ್ತು.... "ಅಂದ್ರೆ? ನನ್ ಹತ್ರ ದುಡ್ಡಿಲ್ಲಾ ಅಂತಾ ನಾ?" "ಎಕ್ಸಾಟ್ಲೀ...." "ವಿಲ್ ಸಿ...." "ಓ.ಕೆ...ಫೈನ್...ಟೇಕ್ ಕೇರ್..." ಆಕೆ ಅಲ್ಲಿಂದ ಎದ್ದಿದ್ದಳು. ** ಶತಭಿಷ ಚಲನೆಯ ಫ್ಲಾಟ್ ಖಾಲಿ ಮಾಡಿ ಊರಿಗೆ ಹೊರಟಿದ್ದ. ಅಲ್ಲಿಯೇ ಇದ್ದು ಮೇನ್ಸ್‍ಗೆ ಓದುವ ನಿರ್ಧಾರ ಮಾಡಿದ್ದ. ಆತ ಬೇಡವೆಂದರೂ ಚಲನಾಳೇ ಏ.ಸಿ ಟೆಕೇಟ್ ಬುಕ್ ಮಾಡಿದ್ದಳು. ಪ್ಯಾಕಿಂಗ್‍ಗೆ ಸಹಕರಿಸಿದಳು. ಅವನಿಷ್ಟದ ಅವರೇಕಾಳಿನ ಉಪ್ಪಿಟ್ಟು ಮಾಡಿ ಬಡಿಸಿದಳು. "ಇರೋ ಇಲ್ಲೇ " ಎನ್ನುತ್ತಾಳೇನೋ ಎಂದು ಈತ ನಿರೀಕ್ಷಿಸುತ್ತಿರುವಾಗಲೇ "ಎಲ್ಲಾ ತಗೊಂಡ್ಯಾ " ಎಂದು ಕೇಳಿದಳು...."ಯಾಹ್..." ಎಂದು ಆತ ಲಿವಿಂಗ್ ರೂಮಿಗೆ ಬಂದ.... "ಯಾಕೋ ಅಳು ಬರ್ತಿದೆ ಕಣೋ....ವಾಸ್ ಐ ರೂಡ್?" ಆಕೆಯ ಮುಖ ಸಣ್ಣಗಾಗಿತ್ತು... "ಹಂಗೇನಿಲ್ವೇ..." ಆತ ಆಕೆಯ ಭುಜದ ಮೇಲೆ ಕೈಯ್ಯಿಟ್ಟು ಸಮಾಧಾನ ಹೇಳಿದ್ದ. "ಇಲ್ಲೇ ಇದ್ದು ಬಿಡೋಣವಾ?" ಶತಭಿಷ ಮತ್ತೊಮ್ಮೆ ಯೋಚಿಸುತ್ತಿದ್ದ. "ಅಣ್ಣಾ..ಅಲ್ಲೇ ಇರಿ..ಬರ್ತಿವಿ" ಎಂದ ಚಲನಾ ಬ್ಯಾಗ್ ತೆಗೆದುಕೊಂಡು ಕೆಳಗಿಳಿದಳು. ಓಲಾ ಕ್ಯಾಬ್‍ನಲ್ಲೇ ಸ್ಟೇಷನ್‍ವರೆಗೂ ಬಂದಳು. ಇನ್ನೇನು ಟ್ರೇನ್ ಹೊರಡಲಿದೆ ಎನ್ನುವಾಗ ಆತ್ಮೀಯವಾಗಿ ಅಪ್ಪಿಕೊಂಡು, "ಬಾಯ್" ಎಂದಳು. ಆಕೆಯ ಕಣ್ಣಲ್ಲಿ ನೀರಿತ್ತು. ಶತಭಿಷನ ಮುಖದಲ್ಲಿ ಮಂದಹಾಸ. ಕಾರಣ ಇಬ್ಬರಿಗೂ ಗೊತ್ತಿರಲಿಲ್ಲ. ** ಊರಿಗೆ ಬಂದ ಶತಭಿಷನಿಗೆ ಒಂದು ವಿಷಯವನ್ನೂ ಪೂರ್ತಿಯಾಗಿ ಓದಲಾಗಲಿಲ್ಲ. ಕೂಡುಕುಟುಂಬವಾಗಿದ್ದ ಅವರ ಮನೆ ದಾಯಾದಿಗಳ ಭಿನ್ನಾಭಿಪ್ರಾಯಗಳಿಂದ ನಿತ್ಯ ರಣರಂಗವಾಗಿತ್ತು. ಕೆಲಸ ಬಿಟ್ಟು ಬಂದವನು ಎನ್ನುವ ಮೂದಲಿಕೆಯೂ ಆಗಾಗ ಈತನಿಗೆ ಸಲ್ಲುತ್ತಿತ್ತು. ಆ ವಾತಾವರಣದಲ್ಲಿ ಆತನಿಗೆ ಓದಿನ ಕಡೆ ಗಮನಹರಿಸಲಾಗಲಿಲ್ಲ. ಅಲ್ಲಿಯೇ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಊಟ ತಿಂಡಿ ಮಾಡಿಕೊಂಡು ಇದ್ದವನಿಗೆ ಬುರುಡೆಯ ಮೇಲೆ ಕೊಟ್ಟಂತಾಗಿದ್ದು ಮೇನ್ಸ್ ಎಕ್ಸಾಮ್ ಬಂದಾಗಲೇ. ಎರಡನೇ ಬಾರಿಯೂ ಎಕ್ಸಾಂ ಕ್ಲಿಯರ್ ಮಾಡಲಾಗದ ಮೇಲೆ ಆತನಿಗೆ ಐ.ಏ.ಎಸ್ ಬಗ್ಗೆ ಆಸಕ್ತಿಯೇ ಹೊರಟು ಹೋಗಿತ್ತು. ಊರಿನಿಂದ ಹೊರ ಹೋಗಬೇಕು ಅನ್ನಿಸತೊಡಗಿತ್ತು. ಮತ್ತೆ ಐ.ಟಿಗೆ ಹೋಗಲು ಖಂಡಿತಾ ಮನಸ್ಸಿರಲಿಲ್ಲ. ಆಗೆಲ್ಲ ಖುಷಿ ಕೊಡುತ್ತಿದ್ದ ವಿಚಾರ ಒಂದೇ ಟ್ರೇಡಿಂಗ್...ಹವ್ಯಾಸವಾಗಿ ಶುರುವಾದ ಷೇರ್ ಮಾರ್ಕೇಟ್ ವ್ಯವಹಾರ, ಆತನಿಗೆ ಹುಚ್ಚು ಹಿಡಿಸಿತ್ತು...ಕೆಲಸ ಎನ್ನುವುದಕ್ಕಿಂತ ಹೆಚ್ಚಾಗಿ ಹುಚ್ಚಾಗಿತ್ತು...ಊರಿನಿಂದ ಒಂದಿಷ್ಟು ಹಣ ಪಡೆದು ಮತ್ತೆ ಬೆಂಗಳೂರಿನ ಬಸ್ಸು ಹತ್ತಿದ್ದ...ಹಣ ಹಾಕಿ, ಹಣ ಕಳೆದು, ಹಣ ಪಡೆದು, ನಿದ್ದೆಗೆಟ್ಟು ಹೇಗೋ ಒಂದು ಹಂತಕ್ಕೆ ಬಂದಿದ್ದ. ** "ನಿಂಗೂ ಅವಳಿಗೂ ಏನ್ ಸಂಬಂಧಾ?" ಸ್ಥಿರೆ ಕೇಳಿದಾಗ ಇದನ್ನೆಲ್ಲಾ ಹೇಳಬೇಕು ಎಂದು ಅವನಿಗೆ ಅನ್ನಿಸಿತ್ತು. ಆದರೆ ಇದು ಸರಿಯಾದ ಸಮಯವಲ್ಲ. ಆಕೆ ಮತ್ತು ಮಗುವಿನ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದುಕೊಂಡು, ಸಾಗ ಹಾಕಲೆಂದು ಏನೋ ಹಾರಿಕೆಯ ಉತ್ತರ ನೀಡಿದ. ನನ್ನನ್ನು ನಂಬು ಎಂದು ಸ್ಥಿರೆಯ ಕೈ ಹಿಡಿದು ಕೇಳಿಕೊಂಡ... ಅಷ್ಟರಲ್ಲಾಗಲೇ ಜೋರು ಮಾತು ನಡೆಯತ್ತಿರುವುದನ್ನು ಕೇಳಿ ಸ್ಥಿರೆಯ ತಾಯಿ ಅಡ್ಡ ಬಂದರು. ಆ ಬಗೆಗಿನ ಮಾತುಕತೆ ಅಲ್ಲಿಗೇ ನಿಂತಿತ್ತು. ಹೊರಡುವ ಮುನ್ನ ಸ್ಥಿರೆಗೆ ಶತಭಿಷ ಪ್ರಾಮಿಸ್ ಮಾಡಿದ್ದ. "ಆಫೀಸ್ ವಿಷಯ ಬಿಟ್ಟು ಚಲನಾ ಹತ್ರ ಏನೂ ಮಾತಾಡಲ್ಲ".... ಸ್ಥಿರೆ ಒಲ್ಲದ ಮನಸ್ಸಿನಿಂದ ಒಪ್ಪಿ, ಅವನನ್ನು ಕಳುಹಿಸಿಕೊಟ್ಟಿದ್ದಳು. ಆದರೆ ಆ ಪ್ರಾಮಿಸ್ ಬ್ರೇಕ್ ಆಗುವ ಸಂದರ್ಭ ಹತ್ತಿರ ಬಂದಿತ್ತು. ** ಎಂದಿನಂತೆ ರಾತ್ರಿ ಸ್ಥಿರೆ ಶತಭಿಷನಿಗೆ ವೀಡಿಯೋ ಕಾಲ್ ಮಾಡಿದ್ದಳು. ಶತಭಿಷ ಲಿವಿಂಗ್ ರೂಮಿನಿಂದ ಮಾತನಾಡುತ್ತಿದ್ದ. ಗುಡ್‍ನೈಟ್ ಹೇಳಿ ಫೋನ್ ಇಡಬೇಕು ಎನ್ನುವಷ್ಟರಲ್ಲಿ ಬೆಡ್‍ರೂಮ್ ಕಡೆ ಯಾರೋ ಓಡಾಡಿದಂತಾಯಿತು..."ಯಾರಾದ್ರೂ ಬಂದಿದಾರಾ?" ಸ್ಥಿರೆ ಕೇಳಿದ್ದಳು. "ಯಾರಿಲ್ಲ" ಎಂದು ಶತಭಿಷ ಹೇಳಿ ಮುಗಿಸುವಷ್ಟರಲ್ಲಿಯೇ, "ಹಾಯ್ ಸ್ಥಿರಾ" ಎಂಬ ಧ್ವನಿ ಮೊಳಗಿತ್ತು... ಶತಭಿಷ ಶಾಕ್‍ನಲ್ಲಿರುವಾಗಲೇ, ಆಕೆ ಫೋನ್ ಕಿತ್ತುಕೊಂಡು "ಹಾಯ್ ಸ್ಥಿರಾ? ಹೌ ಈಸ್ ಇಟ್ ಗೋಯಿಂಗ್ ಆನ್? ಆಲ್ ಗುಡ್" ಎಂದಿದ್ದಳು... ಸ್ಥಿರೆ ಮೂವತ್ತು ಸೆಕೆಂಡಿನ ನಂತರ ಫೋನ್ ಕಟ್ ಮಾಡಿದ್ದಳು. ಶತಭಿಷ ಸಿಟ್ಟಿನಿಂದ ಅರಚಿದ್ದ "ವಾಟ್ ಈಸ್ ದಿಸ್ ಚಲನಾ? ಹೇಳಿದ್ನಲ್ವಾ?" (ಮುಂದುವರೆಯುವುದು) -ಚಿನ್ಮಯ 5/2/2019

Monday, February 4, 2019

ಸೆಕೆಂಡ್ ರೌಂಡ್

ಒಂದ್ ಮಗು ಮಾಡ್ಕೋ. ಜವಾಬ್ದಾರಿ ಬರತ್ತೆ. ಎಲ್ಲಾ ಸರಿ ಆಗತ್ತೆ".
ಸ್ಥಿರೆಗೇಕೋ ತಾಯಿಯ ಸಲಹೆ ಕನ್ವಿನ್ಸಿಂಗ್ ಅನ್ನಿಸಲಿಲ್ಲ. ರಾತ್ರಿ ಊರಿನಿಂದ ವಾಪಸ್ಸ್ ಹೊರಡಬೇಕು ಎನ್ನುವಾಗ ಸ್ಥಿರೆ ತಾಯಿಯ ಬಳಿ ಚಲನಾಳ ವಿಚಾರವನ್ನು ಮತ್ತೆ ಹೇಳಿದ್ದಳು. ಅವತ್ತಿನವರೆಗೂ ತಾಯಿ ಏನನ್ನೂ ಗಟ್ಟಿಯಾಗಿ ಹೇಳಿರಲಿಲ್ಲ. ಅವತ್ತು ಹೇಳಿದ್ದಳು.
ಹಬ್ಬಕ್ಕೆಂದು ಊರಿಗೆ ಹೋದಾಗ ಇದರ ಜೊತೆಗೆ ಇನ್ನೆರಡು ವಿಶಿಷ್ಟ ಘಟನೆಗಳು ನಡೆದವು. ಮೊದಲನೇಯದು, ಶತಭಿಷನ ಸಾಹಿತ್ಯಿಕ-ಆಧ್ಯಾತ್ಮಿಕ ಪ್ರಪಂಚದ ಪರಿಚಯ ಸ್ಥಿರೆಯ ಮನೆಯವರಿಗಾದದ್ದು. ಕಾರಂತರ ಕಾದಂಬರಿ, ಮಾಸ್ತಿ-ಅನಂತಮೂರ್ತಿಗಳ ಕತೆಗಳು, ಮೈಸೂರು ಮಲ್ಲಿಗೆ, ನಾಕುತಂತಿ, ರತ್ನನ್ ಪದಗಳು, ಗದುಗಿನ ಭಾರತ, ಮಂಕುತಿಮ್ಮನ ಕಗ್ಗದ ಹಾಡುವಿಕೆ, ಭಜಗೋವಿಂದಂ, ಭಗವದ್ಗೀತೆಯಲ್ಲಿನ ಜಿಜ್ಞಾಸೆ, ಹೀಗೆ ಸ್ಥಿರೆಗೆ ಶತಭಿಷನ ಇನ್ನೊಂದು ಪ್ರಪಂಚದ ಪರಿಚಯವಾಗಿತ್ತು. ಸ್ಥಿರೆಯ ತಂದೆ ತಾಯಿಗಂತೂ ಅಳಿಯನ ಬಗ್ಗೆ ವಿಶೇಷ ಅಭಿಮಾನ ಮೂಡಿತ್ತು.
ಎರಡನೇಯದ್ದು, ಸ್ಥಿರೆಯ ತಂದೆ ಹೇಳಿದ ವಿಚಾರ. "ಲೆಕ್ಚರಿಂಗ್ ಮಾಡೋ ಹಂಗಿದ್ರೆ ನಮ್ಮೂರ್ ಇಂಜಿನಿಯರಿಂಗ್ ಕಾಲೇಜ್‍ನಲ್ಲೇ ಮಾಡ್ಬೋದಲ್ಲಾ?" ಮಗ ವಿದೇಶಕ್ಕೆ ಹೋದಾಗಿನಿಂದ ಸ್ಥಿರೆಯ ತಂದೆಗೆ ಮಗಳ ಮೇಲೆ ಪ್ರೀತಿ ದುಪ್ಪಟ್ಟಾಗಿತ್ತು. ಖಾಸಾ ದೋಸ್ತ್‍ಗಳಾಗಿದ್ದ ಬೋರ್ಡ್ ಮೆಂಬರ್‍ಗಳ ಇನ್‍ಫ್ಲುಯೆನ್ಸ್ ಬಳಸಿ, ಅಳಿಯನಿಗೊಂದು ಕೆಲಸ ಕೊಡಿಸಿ ಮಗಳ ಸಂಸಾರವನ್ನು ಕಾಲಬುಡದಲ್ಲೇ ಇಟ್ಟುಕೊಳ್ಳುವ ಆಸೆ ಅವರದ್ದಾಗಿತ್ತು. ಶತಭಿಷ ಆ ಆಫರ್‍ಅನ್ನು ವಿನಯಪೂರ್ವಕವಾಗಿ ತಿರಸ್ಕರಿಸಿದ್ದ. ಶತಭಿಷನ ಈ ನಿರ್ಧಾರಕ್ಕೆ ಸ್ಥಿರೆಯ ಸಮ್ಮತಿಯಿತ್ತು.
ಅಂತೂ ಹಿರಿಯರಿಗೆ ನಮಸ್ಕರಿಸಿ, ರಾತ್ರಿಯ ಸ್ಲೀಪರ್ ಬಸ್ಸಿನಲ್ಲಿ ಗಂಡ-ಹೆಂಡತಿ ಬೆಂಗಳೂರಿಗೆ ಬಂದಿಳಿದಿದ್ದರು. ಸ್ನಾನ ಮಾಡದೇ ಆಫೀಸಿಗೆ ಹೋಗಿದ್ದರು.
**
ಸಂಜೆ ಲಿಫ್ಟಿನಲ್ಲಿ ಚಲನಾ ಎದುರಾದಳು. ಮತ್ತದೇ ಚಿತ್ರ-ವಿಚಿತ್ರ ವೇಷ. ಆದರೆ ಆತ್ಮೀಯವಾದ ನಗು. "ಹಾಯ್" ಎಂದು ಮಾತನಾಡಿಸಿದಳು. ಸ್ಥಿರೆ "ಹಾಯ್ " ಎಂದು ನಕ್ಕಳಷ್ಟೇ. ಮಾತುಕತೆಯೇನೂ ನಡೆಯಲಿಲ್ಲ. ಲಿಫ್ಟ ದಾಟಿ ತಮ್ಮ ತಮ್ಮ ಮನೆಯ ಕಡೆ ಹೋಗುವಾಗ ಅಳೆದೂ ತೂಗಿ ಸ್ಥಿರೆಯೇ ಮಾತನಾಡಿದಳು. "ಊರಿಂದ ಪ್ರಸಾದ ತಂದಿದೀನಿ. ತಗೊಂಡ್ ಹೋಗಿ ಪ್ಲೀಸ್..." ಅದು ಬರೀ ಪ್ರಸಾದ ಕೊಡಲೆಂದಷ್ಟೇ ಕೊಟ್ಟ ಆಮಂತ್ರಣವಾಗಿರಲಿಲ್ಲ.
"ಅಹ್...ಬಿಟ್ ಬಿಸಿ ಟುಡೇ.. ಮೇ ಬಿ ಟುಮಾರ್ರೋ?" ಚಲನಾ ಸಿಗರೇಟ್ ಹಚ್ಚುತ್ತಾ ಕೇಳಿದ್ದಳು.
ಸ್ಥಿರೆ "ಓ.ಕೆ ..ಶ್ಯುರ್ " ಎಂದಳಾದರೂ ಗಾಂಚಾಲಿ ಎಂದು ಬೈದುಕೊಂಡು ಮನೆಯ ಬಾಗಿಲು ಹಾಕಿದಳು.
ಶತಭಿಷ ಅದಾಗಲೇ ಮನೆಯಲ್ಲಿದ್ದ. ಬಾಲಿಂಜರ್ ಬ್ಯಾಂಡ್‍ಅನ್ನು ಅನಲೈಸ್ ಮಾಡುತ್ತಾ ಶೇರಿನ ರೇಟು ಇದಕ್ಕಿಂತ ಕಡಿಮೆ ಹೋಗಲಾರದು ಎಂದು ಲೆಕ್ಕ ಹಾಕುತ್ತಿದ್ದ. ಕಿಚನ್‍ಗೆ ಹೋದ ಸ್ಥಿರೆ, ಅದಾಗಲೇ ಹಾಲು ಕಾಯಿಸಿಟ್ಟಿದ್ದನ್ನು ನೋಡಿ ಖುಷಿಯಾದಳು. "ಕಾಫಿ?" ಎಂದಳಾದರೂ ಶತಭಿಷ "ನೋ" ಎಂದು ಮತ್ತೆ ಗ್ರಾಫುಗಳಲ್ಲಿ ಮುಳುಗಿಹೋದ. ಸ್ಥಿರೆಯ ಗಮನ ಲಿವಿಂಗ್ ರೂಮ್‍ನಲ್ಲಿಟ್ಟ ಚಿತ್ರದ ಕಡೆ ಹೋಯಿತು. ಚಲನಾಳಿಂದ ಕೊಂಡು ತಂದ ಚಿತ್ರವಾ? ತಲೆ ಗಿರ್ರ್ ಎಂದಿತು. "ಇದ್ಯಾಕ್ ಇಲ್ಲ್ ಇಟ್ಟಿದಿಯಾ?" ಜೋರಾಗಿ ಅರಚಬೇಕೆನ್ನಿಸಿತು. ಶತಭಿಷ ಟ್ರೆಂಡ್ ಅನಲೈಸ್ ಮಾಡುವಾಗ ಸಣ್ಣ ಡಿಸ್ಟರ್ಬನ್ಸ್‍ಗೂ ತೀವ್ರವಾಗಿ ಸಿಟ್ಟಾಗುತ್ತಿದ್ದ. ಅಲ್ಲಿರಲು ಸಾಧ್ಯವಾಗದೇ ಆಕೆ ಬಾಲ್ಕನಿಗೆ ಹೋಗಿ ಊರಿಗೆ ಫೋನು ಮಾಡಿದಳು. ಅಪ್ಪನ ಆರೋಗ್ಯ ವಿಚಾರಿಸಿದಳು.
**
"ಊಟಕ್ಕೇನೂ ಮಾಡ್ಬೇಡಾ...ಜೋಳದ್ ರೊಟ್ಟಿ ಪಲ್ಯಾ ಪಾರ್ಸೆಲ್ ತರ್ತೀನಿ.." ಶತಭಿಷ ಏಳೂವರೆಗೇ ಫೋನ್ ಮಾಡಿ ಹೇಳಿದ್ದ. ಸ್ಥಿರೆ ಹಾಗೇ ವಿರಾಮವಾಗಿ ಕುಳಿತಿದ್ದಳು.
"ಐ ಆಮ್ ನಾಟ್ ಡಿಸ್ಟರ್ಬಿಂಗ್ ಯು ಪೀಪಲ್ ರೈಟ್?" ಚಲನಾ ಕರೆ ಮಾಡಿದ್ದಳು. ಸ್ಥಿರೆಯ ಆಮಂತ್ರಣ ಮನ್ನಿಸಿ ಮನೆಗೂ ಬಂದಳು. ಅವತ್ತು ಸೀರೆಯನ್ನುಟ್ಟಿದ್ದಳು. ಸ್ಥಿರೆಗೆ ಅವಳನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವೇ ಇಲ್ಲ ಅನ್ನಿಸಿತು. ವಾಡಿಕೆಯ ಮಾತುಕತೆ ಚಹಾ ಎಲ್ಲ ಆದ ಮೇಲೆ ಸ್ಥಿರೆಗೆ ಕೇಳಲೇಬೇಕೆನ್ನಿಸಿತು "ಹೌ ಡು ಯು ನೌ ಮೈ ಹಸ್ಬಂಡ್?"
ಚಲನಾ ಆ ಪ್ರಶ್ನೆಯನ್ನೇ ನಿರೀಕ್ಷಿಸುತ್ತಿದ್ದಂತೆ ಮುಗುಳು ನಕ್ಕಳು.
"ಐ ಥಿಂಕ್ ಬೆಟರ್ ಕ್ವಶ್ಚನ್ ವುಡ್ ಬಿ ಹೌ ಬೆಟರ್ ಐ ನೌ ಹಿಮ್. ಅಲ್ವಾ?" ಸ್ಥಿರೆಯ ಕಡೆ ದಿಟ್ಟಿಸಿದಳು.
ಸ್ಥಿರೆಗೆ ಸಿಟ್ಟು-ಗೊಂದಲ-ಪಾಪಪ್ರಜ್ಞೆ ಒಟ್ಟೊಟ್ಟಿಗೆ ಅನುಭವಕ್ಕೆ ಬಂದವು. ರಿಪ್ಲೈ ಮಾಡಲು ಗೊತ್ತಾಗಲಿಲ್ಲ.
"ಡೋಂಟ್ ವರಿ. ಐ ಆಮ್ ಲಿವಿಂಗ್ ದಿಸ್ ಸ್ಟುಪಿಡ್ ಸಿಟಿ. ಯು ವೋಂಟ್ ಸೀ ಮಿ ಅಗೇನ್" ಸ್ಥಿರೆಯ ಭುಜದ ಮೇಲೆ ಕೈಯ್ಯಿಟ್ಟು ಚಲನಾ ಹೊರಟು ಹೋದಳು.
ಶತಭಿಷ ತಂದಿದ್ದ ರೊಟ್ಟಿ ಪಲ್ಯ ಅವತ್ತೇಕೋ ಸ್ಥಿರೆಗೆ ಬಹಳೇ ಇಷ್ಟವಾಯಿತು. ಲಿವಿಂಗ್ ರೂಮಿನಲ್ಲಿದ್ದ ಫೋಟೋ ವಿಚಾರ ಕೇಳಲು ಮನಸ್ಸಾಗಲೇ ಇಲ್ಲ.
**
ಅವತ್ತು ಬೆಳಿಗ್ಗೆಯಿಂದ ಚಲನಾಳ ಮನೆ ಆಕ್ಟಿವ್ ಆಗಿತ್ತು. ಪ್ಯಾಕಿಂಗ್‍ನವರು, ಓ.ಎಲ್.ಎಕ್ಸ್‍ನವರು, ಆಕೆಯ ಗಂಡ-ತಾಯಿ ಮತ್ತವರ ನೆಂಟರು ಹೀಗೆ ಹಲವಾರು ಜನ ಬಂದು ಹೋಗುತ್ತಿದ್ದರು. ಎಲ್ಲಾ ಪ್ಯಾಕ್ ಆದಮೇಲೆ ಚಲನಾ ಸ್ಥಿರೆಯ ಮನೆಯ ಬೆಲ್ ರಿಂಗ್ ಮಾಡಿದಳು. ಶತಭಿಷ ಬಾಗಿಲು ತೆರೆದ.
ಚಲನಾ ನೇರವಾಗಿ ಕಿಚನ್‍ಗೆ ಹೋಗಿ, "ಕ್ಯಾನ್ ಐ ಗೆಟ್ ಅ ಬಾಟಲ್ ವಾಟರ್?" ಎಂದಳು.
ಸ್ಥಿರಾ ಅಲ್ಲಿರಲಿಲ್ಲ. ಸ್ನಾನಕ್ಕೆ ಹೋಗಿದ್ದಳು.
"ತಗೋ" ಶತಭಿಷ ಕುಳಿತಲ್ಲಿಂದಲೇ ಹೇಳಿದ್ದ.
"ಡ್ರಾಯಿಂಗ್ ಬೇಡ್ವಾ?" ಶತಭಿಷ ಆಶ್ವರ್ಯವೆಂಬಂತೆ ಮಾತನಾಡಿದ್ದ. "ಕೊಟ್ರೆ ತಗೊಂಡ್ ಹೋಗ್ತಿನಿ. ಬಟ್ ನನ್ ಹತ್ರಾ ದುಡ್ಡಿಲ್ಲಾ.." ಚಲನಾ ಮುಖಕ್ಕೆ ಮುಖ ಕೊಟ್ಟು ಮಾತನಾಡಿದ್ದಳು.
ಶತಭಿಷ ಆಕೆಯನ್ನು ಮುಖವಿಟ್ಟು ನೋಡಲೇ ಇಲ್ಲ.
ಎದ್ದು ಫೋಟೋ ಫ್ರೇಮನ್ನು ಪ್ಯಾಕ್ ಮಾಡಿ, ಕುರ್ಚಿಯ ಮೇಲಿಟ್ಟ.
ಚಲನಾ ಬಾತ್‍ರೂಮ್ ಬಳಿ ಬಂದು, ಸ್ಥಿರೆಗೆ ಕೂಗಿ ಹೇಳಿದಳು. "ಐ ಆಮ್ ಲೀವಿಂಗ್. ಬಾಯ್...". ಸ್ಥಿರೆ ಒಂದೈದು ನಿಮಿಷ ಕಾಯಲು ಹೇಳಿದಳಾದರೂ "ಗೆಟ್ಟಿಂಗ್ ಲೇಟ್...ಟೇಕ್ ಕೇರ್" ಎಂದು ಚಲನಾ ಹೊರಟು ಹೋದಳು.
ಶತಭಿಷ ಆಕೆ ಪ್ಯಾಕಿಂಗ್ ಟ್ರಕ್‍ನಲ್ಲಿಯೇ ಕೂತು ಒಂಟಿಯಾಗಿ ಹೊರಡುವುದನ್ನು ಬಾಲ್ಕನಿಯಿಂದ ನೋಡುತ್ತಿದ್ದ. ಅಪರೂಪಕ್ಕೆ ಸೇದಿದ್ದ ಆತನ ಸಿಗರೇಟಿನ ಹೊಗೆ ಬಾತ್‍ರೂಮ್ ತಲುಪಿತ್ತು. "ಹೊರ್ಟೊದ್ಲಾ?" ಸ್ಥಿರೆ ಹೊರಬಂದು ಕೇಳಿದಳು. ಶತಭಿಷ "ಹಾಂ" ಎಂದ. ಇನ್ನೊಂದು ಸಿಗರೇಟು ಹಚ್ಚಿದ. "ಫೋಟೋ ಫ್ರೇಮ್ ಎಲ್ಲೋಯ್ತು?" ಸ್ಥಿರೆ ಟಕ್ಕನೆ ಗಮನಿಸಿದ್ದಳು. "ಹೋಯ್ತಲ್ಲ...ಬಿಡು ಈಗ" ಶತಭಿಷ ಮುಖ ತಿರುಗಿಸಿಯೇ ಉತ್ತರಿಸಿದ್ದ. ಸ್ಥಿರೆಗೇಕೋ ಸಿಟ್ಟು ಬಂದಂತಿತ್ತು.
**
ಶತಭಿಷ ಯಾವುದೋ ಕಂಪನಿಯ ಬ್ಯಾಲೆನ್ಸ್ ಶೀಟ್ ನೋಡುತ್ತಿದ್ದ. "ನಿಂಗೂ ಅವಳಿಗೂ ಏನ್ ಸಂಬಂಧ?" ಸ್ಥಿರೆ ಚಹಾ ಕುಡಿಯುತ್ತಾ ಕೇಳಿದ್ದಳು.
"ಏಯ್..ನಾಟ್ ನೌ..ವಿ ವಿಲ್ ಟಾಕ್ ಸಮ್ ಡೇ" ಶತಭಿಷ ಕನ್ನಡಕ ಹಾಕಿಕೊಳ್ಳುತ್ತಾ ಹೇಳಿದ್ದ.
"ಆಗಲ್ಲ...ಇಷ್ಟ್ ದಿನ ತಡ್ಕೊಂಡಿದೀನಿ...ಹೇಳು" ಆಕೆ ಜಗಳವಾಡಲು ಸಿದ್ಧವಾಗಿದ್ದಳು.
"ನಿಂಗೂ ವಿನಯ್‍ಗೂ ಏನ್ ಸಂಬಂಧ ಅಂತಾ ನಾನ್ ಕೇಳಿದೀನಾ?" ಶತಭಿಷ ಉಡಾಫೆಯಿಂದ ಕೇಳಿದ.
"ಅದ್ ಬೇರೆ ಇದ್ ಬೇರೆ...ನಿಂಗೆಲ್ಲಾ ಹೇಳಿದೀನಿ ನಾನು... ಅದ್ ಏನಾಯ್ತ್ ಅಂದ್ರೆ...." ಆಕೆ ಒಂದೈದು ನಿಮಿಷ ಹಳೆಯ ಟೇಪನ್ನೇ ಮತ್ತೆ ಓಡಿಸಿದ್ದಳು.
"ಹೂಂ..." ಎನ್ನುತ್ತಾ ಆತ ಕಂಪನಿಯ ಷೇರ್ ವ್ಯಾಲ್ಯು ಬಿದ್ದಿದ್ದೇಕೆ ಎಂದು ತಲೆ ಕೆಡಿಸಿಕೊಳ್ಳುತ್ತಿದ್ದ.
"ನಂದ್ ಮುಗೀತು...ಹೇಳು..ನೀನ್ ಈಗ" ಆಕೆ ಮತ್ತೆ ಕೇಳತೊಡಗಿದ್ದಳು.
"ನನ್ ಪಾಸ್ಟ್ ಬಗ್ಗೆ ತಿಳ್ಕೋಳ್ಳೋದ್ ಮುಖ್ಯನಾ? ಅಥವಾ ಸಧ್ಯ ನಾನ್ ಫ್ರೆಸೆಂಟ್ ಹೆಂಗಿದೀನೋ ಹಂಗೆ ಒಪ್ಕೊಳ್ಳೋದ್ ಮುಖ್ಯನಾ?" ಶತಭಿಷ ಚಲನಾಳ ವಿಚಾರ ಮಾತಾಡಲು ನಿರಾಕರಿಸಿದ್ದ.
"ಅರ್ಥ ಆಗಿಲ್ಲ" ಆಕೆ ತನ್ನ ಪ್ರಯತ್ನ ಬಿಡಲಿಲ್ಲ.
"ನಾನ್ ಏನೇನ್ ಮಾಡಿದೀನಿ ಅನ್ನೋದ್ ಇಂಪಾರ್ಟೆಂಟ್ ಅಲ್ಲಾ ಕಣೆ. ಪಾಸ್ಟ್ ಈಸ್ ಪಾಸ್ಟ್. ಅದನ್ನಾ ಕೆದ್ಕೋದ್ರಿಂದ ಏನೂ ಯೂಸ್ ಇಲ್ಲ. ಪ್ರೆಸೆಂಟ್ ನಾನ್ ಇರೋದ್ರಲ್ಲಿ ನಿಂಗ್ ಏನಾದ್ರೂ ಪ್ರಾಬ್ಲಂ ಇದ್ರೆ ಹೇಳು...ಈ ಮನೆ ಚಿಕ್ಕದಾಯ್ತಾ? ನಾನ್ ಸರಿ ಇಲ್ವಾ? ನಿಂಗ್ ಟೈಮ್ ಕೊಡ್ತಿಲ್ವಾ? ದುಡ್ಡ್ ಕಳ್ಕೊಂಡಿದೀನಿ ನಿಜಾ...ಬಟ್ ಅದೊಂದ್ ಬ್ಯಾಡ್ ಪ್ಯಾಚ್ ಅಷ್ಟೆ...ಆಸ್ ಫರ್ ದಿಸ್ ಕಂಪನಿ ಪ್ರೊಫೈಲ್ .." ಆತ ಷೇರ್ ಮಾರ್ಕೆಟ್ ಮತ್ತು ಟ್ರೆಂಡಿಂಗ್ ಬಗ್ಗೆ ಪ್ರೆಡಿಕ್ಷನ್ ಶುರು ಮಾಡಿದ್ದ.
ಆತನ ಲೆಕ್ಚರ್ ಶುರುವಾದರೆ ಅರ್ಧ ತಾಸಿನ ಕಡಿಮೆ ನಿಲ್ಲುತ್ತಿರಲಿಲ್ಲ. ಸ್ಥಿರೆಗೆ ಅಮ್ಮನ ಕಾಲ್ ಬಂದಿತ್ತು.
"ನಾನ್ ಹೇಳಿದ್ ವಿಚಾರ ಯೋಚ್ನೆ ಮಾಡಿದ್ರಾ? ಇನ್ನೂ ಎಸ್ಟ್ ದಿನ ಅಂತಾ? ನಿಂಗೂ ಮೂವತ್ತ್ ಆಗ್ತಾ ಬಂತು..." ತಾಯಿಯ ಧ್ವನಿ ಗಟ್ಟಿಯಾಗುತ್ತಲೇ ಇತ್ತು. ಸ್ಥಿರೆಯ ಬಳಿ ಉತ್ತರವಿರಲಿಲ್ಲ.
**
"ಐ ವಾಂಟ್ ಯು ಇನ್ ಮೈ ಟೀಮ್..." ಶತಭಿಷನ ಹಳೆಯ ಬಾಸ್ ಒಬ್ಬರು ಕರೆ ಮಾಡಿ ಒತ್ತಾಯಿಸುತ್ತಿದ್ದರು. ಅವರು ಫಂಡ್ ಮ್ಯಾನೇಜರ್ ಆಗಿ ನೇಮಕಗೊಂಡಿದ್ದು ಮತ್ತು ಶತಭಿಷನಿಗೆ ಆಯಕಟ್ಟಿನ ಸೀನಿಯರ್ ಪೋಸ್ಟ್‍ವೊಂದನ್ನು ಆಫರ್ ಮಾಡಿದ್ದರು. ಶತಭಿಷ ಒಪ್ಪಿಕೊಳ್ಳಲೋ ಬಿಡಲೋ ಎಂಬ ಗೊಂದಲದಲ್ಲಿದ್ದ.
"ನಿಂಗ್ ಆ ಕೆಲ್ಸಾನೇ ಮಾಡ್ಬೇಕು ಅನ್ಸಿದ್ರೆ ಮಾಡು" ಸ್ಥಿರೆ ಸಹಜವೆಂಬಂತೆ ಹೇಳಿದ್ದಳು.
"ಡಿಸೆಂಬರ್‍ಗೆ ಇನ್ನ್ ಮೂರ್ ತಿಂಗ್ಳ್ ಮಾತ್ರ ಇದೆ. ದೆನ್ ಡಿಲೆವರಿ. ಓಡಾಟ. ಮಗು ನೋಡ್ಕೊಳೋದು....ಎಷ್ಟ್ ಟೈಂ ಕೊಡಕ್ ಆಗತ್ತೆ ಗೊತ್ತಿಲ್ಲಾ" ಆತ ಗೊಂದಲದಲ್ಲಿದ್ದ. "ಹೆಂಗೋ ಮ್ಯಾನೇಜ್ ಆಗತ್ತೆ ಕಣೋ...ಅಮ್ಮ ಹೆಲ್ಪ್ ಮಾಡ್ತಾಳೆ... ಐ ನೌ ಯು ಕ್ಯಾನ್ ಮ್ಯಾನೇಜ್ ಇಟ್..." ಆಕೆಗೆ ಆತನ ಬಗ್ಗೆ ನಂಬಿಕೆಯಿತ್ತು. ಚಲನಾ ಎಂಬ ಕಾರ್ಮೋಡ ದೂರವಾಗಿ , ಅವಳ ಬಾಳಲ್ಲಿ ಆನಂದದ ಮೊಳಕೆ ಮೂಡುವ ಸಮಯ ಒದಗಿಬಂದಿತ್ತು. ಆಕೆಯ ತಾಯಿ ಅದಾಗಲೇ ಮಗಳ ಬಾಣಂತನದ ಸಿದ್ಧತೆ ಶುರುವಿಟ್ಟುಕೊಂಡಿದ್ದರು.
**
ಶತಭಿಷ ಮತ್ತೆ ಷೇರ್ ಮಾರ್ಕೆಟ್ ಪ್ರಪಂಚಕ್ಕೆ ಎಂಟ್ರಿ ಕೊಟ್ಟಿದ್ದ. ಬಹುತೇಕ ಎರಡು ವರುಷಗಳ ಕಾಲ ಅಜ್ಞಾತವಾಸದಲ್ಲಿದ್ದವನನ್ನು ಕೆಲವರು ಹೊಸಬ ಎಂದೇ ಭಾವಿಸಿದ್ದರು. ಇನ್ನೂ ಕೆಲವರು, ಈತ ಮುಳುಗಿಯೇ ಹೋದ ಎಂದ ನಂಬಿದ್ದರು. ಆತನ ಕೈಕೆಳಗೆ ಕೆಲಸ ಮಾಡಿದ್ದ ಒಬ್ಬಿಬ್ಬರು ಆಗ ಸಮಕ್ಕೆ ಬಂದಿದ್ದರು. ಏನೋ ಸಾಧಿಸಿದವರಂತೆ ಪೋಸು ಕೊಡುತ್ತಿದ್ದರು. ಶತಭಿಷನಿಗೂ ಟಚ್ ತಪ್ಪಿದಂತಾಗಿತ್ತು. ಒಂದಿಷ್ಟು ಅವಮಾನ, ಮೂದಲಿಕೆ, ಹಿಯಾಳಿಸುವುದು, ಮತ್ತೆ ಬಂದ್ನಾ ಎಂದು ಅಣಕಿಸುವುದು ಸಾಮಾನ್ಯವಾಗಿತ್ತು. ಜೊತೆಗೆ ಶತಭಿಷ ಮೀಟಿಂಗ್‍ಗಳಲ್ಲಿ ತುಂಬಾನೇ ಹಠಮಾರಿಯಂತೆ ತೋರುತ್ತಿದ್ದುದರಿಂದ ಆತನ ಬಗ್ಗೆ ಗಾಳಿ ಸುದ್ದಿಗಳಿಗೇನೂ ಕೊರತೆ ಇರಲಿಲ್ಲ. ಇವುಗಳಿಗೆಲ್ಲಾ ಬ್ರೇಕ್ ಬಿದ್ದಿದ್ದು ಶತಭಿಷನ ಸಲಹೆಯ ಅನುಸಾರ ಷೇರಿನ ಮೌಲ್ಯವೊಂದು ಒಂದೇ ದಿನಕ್ಕೆ 14% ಜಿಗಿದು ಜಾಕ್‍ಪಾಟ್ ಹೊಡೆದಾಗ. ಅಂದಿನಿಂದ ಶತಭಿಷನ ಗೋಲ್ಡನ್ ರನ್ ಮತ್ತೆ ಶುರುವಾಗಿತ್ತು. ರಾತ್ರಿಯಿಡೀ ನಿದ್ದೆಗೆಟ್ಟು ಕಂಪನಿಯ ವ್ಯಾಲ್ಯು ಎಸ್ಟಿಮೇಟ್ ಮಾಡುವುದು ಸಾಮಾನ್ಯವಾಗತೊಡಗಿತ್ತು.
ಸ್ಥಿರೆ ಕೆಲಸ ಬಿಟ್ಟಿದ್ದಳು. ಅಮ್ಮನ ಸಲಹೆಯ ಅನುಸಾರ ತವರು ಮನೆಯಲ್ಲಿ ಸಣ್ಣ-ಪುಟ್ಟ ಕೆಲಸ ಮಾಡುತ್ತಿದ್ದಳು. ಶತಭಿಷ ವೀಕೆಂಡಿನಲ್ಲೆಲ್ಲ ಬಹುತೇಕ ಅಲ್ಲಿಗೆ ಬರುತ್ತಿದ್ದ. ದಿನಾ ರಾತ್ರಿ ಸ್ಥಿರೆಗೆ ಕರೆ ಮಾಡುತ್ತಿದ್ದ. ಆಕೆಗೆ ಅರ್ಥವಾಗುತ್ತದೆಯೋ ಇಲ್ಲವೋ ಎಂಬುದನ್ನೂ ಯೋಚಿಸದೇ ಆಫೀಸಿನ ಆಗು-ಹೋಗುಗಳನ್ನು ಹೇಳುತ್ತಿದ್ದ. ಆರೋಗ್ಯ ವಿಚಾರಿಸುತ್ತಿದ್ದ. ಕನಸುಗಳನ್ನು ಹಂಚಿಕೊಳ್ಳುತ್ತಿದ್ದ. ದಿನಾ ರಾತ್ರಿ ಆತನ ಜೊತೆ ಮಾತನಾಡಿದ ಮೇಲೆ ಸ್ಥಿರೆಗೆ ಏನೋ ಒಂದು ರೀತಿಯ ನೆಮ್ಮದಿ ಸಿಗುತ್ತಿತ್ತು. ದುರದೃಷ್ಟವಶಾತ್ ಆ ನೆಮ್ಮದಿ ಕೆಡುವ ಸಮಯ ಹತ್ತಿರವಾಗಿತ್ತು.!
**
ಅಂದು ಸೋಮವಾರ...ಶತಭಿಷ ಆಫೀಸಿನಲ್ಲಿ ವಿರಾಮವಾಗಿ ಚಹಾ ಕುಡಿಯುತ್ತಲಿದ್ದ. ಗಂಟೇ ಅದಾಗಲೇ ಎಂಟೂವರೆಯಾಗಿತ್ತು. ಆತನ ಬಾಸ್ ಕರೆ ಮಾಡಿ ಕ್ಯಾಬಿನ್‍ಗೆ ಬರಹೇಳಿದರು. ಆತ ಇನ್ನೇನು ಮನೆಗೆ ಹೊರಡುವವನಿದ್ದ. ಏನಿರಬಹುದು ಎಂದು ಯೋಚನೆ ಮಾಡುತ್ತಾ ಆತ ಕ್ಯಾಬಿನ್ ಬಾಗಿಲು ತೆರೆದಾಗ ಅಲ್ಲೊಂದು ಅಚ್ಚರಿ ಕಾದಿತ್ತು. ಚಲನಾ!
"ಮೀಟ್ ಅವರ್ ನ್ಯೂ ಸಿ.ಏ" ಎಂದು ಬಾಸ್ ಪರಿಚಯ ಮಾಡಿಸಿದರು. ವಾಡಿಕೆಗೆಂದು ಕೈ ಕುಲುಕುತ್ತಾ ಇಬ್ಬರೂ ಅಪರಿಚಿತರಂತೇ ಪರಿಚಯ ಮಾಡಿಕೊಂಡು. ನಂತರ ರೋಲ್‍ಗಳ ಬಗ್ಗೆ ಚಿಕ್ಕದೊಂದು ಬ್ರೀಫ್ ಕೊಟ್ಟು ಇಬ್ಬರೂ ಅಲ್ಲಿಂದ ಹೊರಬಿದ್ದರು.
"ಹೌ ಈಸ್ ಸ್ಥಿರಾ?" ಆಕೆ ಮಾತು ಶುರುಮಾಡಿದ್ದಳು.
"ಗುಡ್ ಗುಡ್..ಎಕ್ಸ್‍ಪೆಕ್ಟಿಂಗ್ ಅ ಬೇಬಿ ಇನ್ ಡಿಸೆಂಬರ್ " ಆತ ನಿರ್ಲಿಪ್ತನಾಗಿ ಉತ್ತರಿಸಿದ್ದ.
"ಏಯ್...ನೈಸ್...ಕಂಗ್ರಾಟ್ಸ್...ಯಾಕ್ ಅದನ್ನಾ ಅಷ್ಟ್ ಸೀರಿಯಸ್ ಹೇಳ್ತಿದೀಯಾ? ಅಪ್ಪ ಆಗಕ್ ಇಷ್ಟ ಇಲ್ವಾ?" ಆಕೆ ಎಂದಿನಂತೆ ಚುಡಾಯಿಸಿದ್ದಳು...
"ಹಂಗೆನಿಲ್ವೇ..." ಆತ ಒತ್ತಾಯದಿಂದ ನಕ್ಕಿದ್ದ.
"ನೀನ್ ಮತ್ತೆ ಆಫೀಸ್ ಜಾಯಿನ್ ಆಗ್ತಿಯಾ ಅಂತಾ ಅಂದ್ಕೊಂಡಿರ್ಲಿಲ್ಲ..." ಶತಭಿಷನೇ ಮಾತು ಮುಂದುವರೆಸಿದ.
"ಯಾ..ಏನೋ ..ಒನ್ಸ್ ಯು ಆರ್ ಬ್ಯಾಂಗಳೂರಿಯನ್...ಯು ಆರ್ ಅಲ್ವೇಸ್ ಬ್ಯಾಂಗಳೂರಿಯನ್.." ಆಕೆ ತನ್ನ ಮಾತಿಗೆ ತಾನೇ ನಕ್ಕಿದ್ದಳು.
"ಓ.ಕೆ ...ವೆಲ್ ಕಮ್ ಆನ್ ಬೋರ್ಡ್...ಸೀಯು" ಎಂದೆನ್ನುತ್ತಾ ಆತ ಹೊರಡಲು ಅನುವಾದ...
"ಮನೆಗ್ ಕರ್ಯಲ್ವೇನೋ?" ಆಕೆ ಕಾಲೇಜು ಹುಡುಗಿಯಂತೆ ಹಲ್ಲು ಕಿಸಿದಿದ್ದಳು..
"ಸ್ವಲ್ಪ ಆದ್ರೂ ಮಾನ ಮರ್ಯಾದೆ ಇಟ್ಕೋ...ಮದ್ವೆ ಆಗಿದೆ ಇಬ್ರಿಗೂ...." ಆತನ ಮುಖ ಕೆಂಪಾಗಿತ್ತು.. ಕಾರಿನ ವೇಗ ಮಿತಿ ಮೀರಿತ್ತು..ಕಾರು ನಿಯಂತ್ರಣ ತಪ್ಪಿ ಡಿವೈಡರ್ ಒಂದಕ್ಕೆ ಗುದ್ದಿತ್ತು.. ಆತ ಸುಧಾರಿಸಿಕೊಂಡು ನಾಳೆ ಟೋ ಮಾಡಿಸಿದರಾಯ್ತು ಎಂದುಕೊಂಡು ಹಾಗೇಯೇ ಮನೆಗೆ ಬಂದು ಬಿದ್ದುಕೊಂಡ. ಇಷ್ಟರ ಮಧ್ಯೆ ಸ್ಥಿರೆಯ ಕಾಲ್‍ಅನ್ನು ಕಟ್ ಮಾಡಲಾಗಿತ್ತು. ಮತ್ತೆ ಕಾಲ್ ಮಾಡಿದಾಗ, ಆತ ಕಾರ್ ಗುದ್ದಿದ ವಿಷಯವನ್ನಷ್ಟೇ ಹೇಳಿದ. ಅಷ್ಟಕ್ಕೇ ಆಕೆ ಗಾಬರಿಯಾದದ್ದನ್ನು ನೋಡಿ, ಚಲನಾಳ ವಿಚಾರವನ್ನು ಇನ್ಯಾವತ್ತಾದರೂ ಹೇಳೋಣವೆಂದು ಸುಮ್ಮನಾದ. ಹೇಳಿದ್ದರೇ ಒಳ್ಳೆಯದಿತ್ತೇನೋ!
***
ಆ ವೀಕೆಂಡಿನಲ್ಲಿ ಶತಭಿಷ ಮಾವನ ಮನೆಗೆ ಹೋಗಿದ್ದ. ಹೊಸ ಕೆಲಸದ ಸಂಬಳದಲ್ಲಿ ಸ್ವೀಟು-ಬಟ್ಟೆ ಖರೀದಿಸಿ ತಂದಿದ್ದ. ಹಳೆಯ ಕಾರನ್ನು ಬದಲಾಯಿಸಿ ಹೊಸ ಕಾರೊಂದನ್ನು ತಂದಿದ್ದ. ಬೇಬೀ ಸೀಟ್ ಅನ್ನು ಹಾಕಿಸುವಾ ಎಂದನಾದರೂ, ತಡ್ಯೋ ಇನ್ನೂ ಟೈಂ ಇದೆ ಎಂದು ಸ್ಥಿರೆ ಹೇಳಿದ ಮೇಲೆ ಸುಮ್ಮನಾಗಿದ್ದ. ಆದರೆ ಚಲನಾಳ ವಿಚಾರ ಮಾತ್ರ ಸ್ಥಿರೆಯ ಬಳಿ ಹೇಳಲು ಮನಸ್ಸಾಗಲಿಲ್ಲ.
ಅತ್ತೆ-ಹೆಂಡತಿಯ ಒತ್ತಾಯದ ಮೇರೆಗೆ ಅದ್ಯಾವುದೋ ಪೂಜೆಯ ಕಾರಣದಿಂದ ಸೋಮವಾರವೂ ರಜೆ ಹಾಕಬೇಕಾಗಿ ಬಂತು. ಆತ ಹಿತ್ತಿಲಿನಲ್ಲೆಲ್ಲೋ ಮಾವನ ಜೊತೆ ಮಾತನಾಡುತ್ತಿರುವಾಗ ಫೋನು ರಿಂಗಣಿಸಿತು. ಸಾಮಾನ್ಯವಾಗಿ ಸ್ಥಿರೆ ಆತನ ಫೋನ್‍ಕಾಲ್‍ಅನ್ನು ರಿಸೀವ್ ಮಾಡುತ್ತಿರಲಿಲ್ಲ. ಅವತ್ತೇಕೋ ಫೋನ್ ತೆಗೆದುಕೊಂಡಳು. ಫೋನ್ ಸ್ಕ್ರೀನಿನಲ್ಲಿ ಚಲನಾ ಆಫೀಸ್ ಎಂದು ತೋರಿಸುತ್ತಿತ್ತು...
ಆಕೆ ಗಾಬರಿಯಾದರೂ ತೋರಿಸಿಕೊಳ್ಳದೇ, ಶತಭಿಷನನ್ನು ಕೂಗಿ ಕರೆದಳು. ಆತ ಫೋನ್ ನೋಡಿ ಅವಾಕ್ಕಾದ. ಆಕೆ ಮಾತನಾಡು ಎಂಬಂತೆ ಇಷಾರೆಯಿತ್ತಳು. ಆತ ಲೌಡ್ ಸ್ಪೀಕರ್ ಆನ್ ಮಾಡಿ ಮಾತನಾಡಿದ.
ಆಕೆ ಆಫೀಸಿನ ವಿಚಾರ ಬಿಟ್ಟು ಒಂದಕ್ಷರವನ್ನೂ ಎಕ್ಸ್‍ಟ್ರಾ ಕೇಳಲಿಲ್ಲ. ಈತನೂ ಎಷ್ಟಕ್ಕೆ ಬೇಕೋ ಅಷ್ಟಕ್ಕೇ ಉತ್ತರಿಸಿದ್ದ.
ಆದರೆ ಸ್ಥಿರೆಯನ್ನು ಸಂಭಾಳಿಸುವುದು ಮಾತ್ರ ಶತಭಿಷನಿಗೆ ಅಂದು ಕಷ್ಟವಾಗಿತ್ತು.
ಆಕೆ ಪೂರ್ತಿ ಕತೆ ಹೇಳಲೇಬೇಕೆಂದು ಒತ್ತಾಯಿಸುತ್ತಿದ್ದಳು.
(ನಿಮ್ಮ ಅನಿಸಿಕೆಗಳನ್ನು ಆಧರಿಸಿ, ಕತೆ ಮುಂದುವರೆಯಬಹುದು)
-ಚಿನ್ಮಯ
04/02/2019