Sunday, April 27, 2014

ಒಳಕಂಬಿ

ಬ್ಲಾಗಿಗರ ಖೋ ಖೋ ಆಟದಲ್ಲಿ ಕಥೆ ಬರೆಯುವ ಮುಂದಿನ ಪಾಳಿ ನನ್ನದು..ಒಂದು ಪುಟ್ಟ ಪ್ರಯತ್ನ..ನೋಡಿ ಹೆಂಗಿದೆ ಹೇಳಿ...
ಮೊದಲಿಗೆ  ಪ್ರಕಾಶಣ್ಣನ "ಬೇಲಿ" : http://ittigecement.blogspot.in/2014/04/blog-post.html
ನಂತರ ದಿನಕರಣ್ಣನ "ದಣಪೆ" : http://dinakarmoger.blogspot.in/2014/04/blog-post_14.html
ಅದಾದ ಮೇಲೆ ಬಾಲು ಸರ್ ಬರೆದ  "ಎಲ್ಲೆಯ ಮಿಂಚು" : http://nimmolagobba.blogspot.in/2014/04/blog-post_1912.html
ಆಮೇಲೆ ರೂಪಕ್ಕನ "ಮಿತಿ " :http://nimmolagobba.blogspot.in/2014/04/blog-post_1912.html
ಮುಂದುವರೆದು ಶಮ್ಮೀ ಅಕ್ಕಯ್ಯನ "ವ್ಯಾಪ್ತಿ-ಪ್ರಾಪ್ತಿ" : http://mandaaramallige.blogspot.in/2014/04/blog-post_24.html
ನನಗಿಂತ ಮುಂಚೆ ಸುಷ್ಮಾ ಬರೆದ ಕದಡಿದ ಕಡಲು :http://kanasukangalathumbaa.blogspot.in/2014/04/blog-post.html

ಈಗ ನನ್ನದು...ಕಥೆಯ ಬರವಣಿಗೆಯ ಹರವು ನನಗಿನ್ನು ತಿಳಿಯದು...ಹುಚ್ಚಿಗೆ ಬರೆದಿದ್ದೇನೆ... ನೋಡಿ ತಪ್ಪು-ಒಪ್ಪು ತಿಳಿಸಿ..

==============================================================
ಕಾಲಿಂಗ್ ಬೆಲ್ ಬಡಿದುಕೊಳ್ಳುತ್ತಿದೆ..ಕತ್ತಲಾಗಿದೆ ..ಗಡಿಯಾರ ಗಂಟೆ ಎಂಟು ಎಂದು ತೋರಿಸುತ್ತಿತ್ತು..
ಅರರೇ..ನಿದ್ದೆ ಬಂದುಬಿಟ್ಟಿತ್ತಾ ನನಗೆ..?
ಬಾಗಿಲು ತೆರೆದೆ...
ಪತಿರಾಯನೂ ಮೈತ್ರಿಯೂ ನಗುತ್ತಾ ಒಳಗೆ ಕಾಲಿಡುತ್ತಿದ್ದಾರೆ...ಅದೂ ರಾತ್ರಿಯ ಹೊತ್ತಲ್ಲಿ!!
ಮೈತ್ರಿಯ ಕೈ ನನ್ನ ಗಂಡನ ತೋಳೊಳಗೆ ಬಂಧಿಯಾಗಿತ್ತು.
ಕಾಲಡಿಯ ನೆಲ ಕುಸಿದಂತೆ ಭಾಸ..ಕುಸಿದು ಬಿದ್ದೆ...

ಕಣ್ಣೆಲ್ಲವೂ ಮಂಜುಮಂಜಾಗುತ್ತಿತ್ತು ..
ಕಣ್ಣೀರು ತುಂಬಿಬಂದುದರಿಂದಲೋ ಅಥವಾ ಆ ನೋಡಬಾರದ ದೃಶ್ಯವನ್ನು ನೋಡಿ ಅವಾಕ್ಕಾದುದರಿಂದಲೋ ತಿಳಿಯಲಿಲ್ಲ...
ನೋಡುನೋಡುತ್ತಿದ್ದಂತೆ ಮೇಲಿನ ಭಿತ್ತಿಪಟದ ಗುಲಾಬಿಗಳೆಲ್ಲ ಮರೆಯಾಗತೊಡಗಿತ್ತು .
ಹೂವು-ಬಳ್ಳಿ-ಮುಳ್ಳು  ಎಲ್ಲ ಒಂದೇ ಎನಿಸಹತ್ತಿತ್ತು.
ಕತ್ತಲೆ ಎನ್ನಿಸತೊಡಗಿತ್ತು...ಅದೇ ಕತ್ತಲೆ ನೀರಿಗೆ ಬಿಟ್ಟ ಉಜಾಲಾದಂತೆ ಕ್ಷಣಾರ್ಧದಲ್ಲಿ ನನ್ನ ಕಣ್ಣನ್ನೆಲ್ಲಾ ಪೂರ್ತಿಯಾಗಿ ಆವರಿಸಿಕೊಂಡಿತ್ತು,ರೆಪ್ಪೆ ಮುಚ್ಚಿತ್ತು...
ಆದೇನೋ ಪುನಃ ಕಣ್ಣುಬಿಡಬೇಕು ಅನ್ನಿಸಲಿಲ್ಲ..ನೋಡಬೇಕು ಅನ್ನಿಸಲಿಲ್ಲ..
ಯಾಕೋ ಎಲ್ಲವೂ ಬೇಡವಾಗಿತ್ತು,ರೆಪ್ಪೆ ಒಡೆಯುವುದೂ ಸಹಾ...
ನನ್ನೊಳಗೆ ನಾನಿದ್ದೆ..
ಹೌದು ಪೂರ್ತಿ ಒಳಗೇ ಹೋಗಿದ್ದೆ.....

ಸಂಬಂಧಗಳು ಎಂದರೆ ಏನು ???
ಸ್ನೇಹಕ್ಕೂ,ಪ್ರೀತಿಗೂ,ಬಯಸುವಿಕೆಗೂ ನಡುವೆ ಅಂತರವೇನು??
ಬೇಕು ಅನ್ನಿಸಿದರೆ ಅದು ಬಯಕೆಯಾ??
ಇಬ್ಬರ ಬಯಸುವಿಕೆಗೊಂದು ಅರ್ಥಕೊಡುವುದು ಸ್ನೇಹವಾ??
ಸ್ನೇಹದ ಉತ್ತುಂಗವೇ ಪ್ರೀತಿಯಾ?ಅಥವಾ ಅದೊಂದು ಹೊಸ ಥರಹದ ಉತ್ಕಟ ಬಯಕೆಯಾ ??

ನಾನು ನನ್ನ ಹುಡುಗನ ಸಾಂಗತ್ಯವನ್ನು ಬಯಸಿದ್ದೆ ನಿಜ ,ಆದರೆ ಅದು ಯಾವಗಲೂ ನನ್ನ ಜೊತೆಗೇ ಇರಬೇಕೆಂದು ಬಯಸಿದ್ದೆನಾ??ಇಲ್ಲ,ಅದೊಂದು ಕ್ಷಣಿಕದ ಭಾವನೆಯಷ್ಟೇ..ಏನೋ ಅಮಲೇರಿ ಹೊರಟಿದ್ದೆ,ಅದು ಬಯಕೆಯಷ್ಟೇ ಇರಬೇಕು ಹಾಗಾದರೆ....ಅಲ್ಲಾ ಅದು ಅದಕ್ಕಿಂತ ಚೂರು ಮುಂದಿನದಾ??

ಒಂದಾನೊಂದು ಕಾಲದಲ್ಲಿ ತೀರಪರಿಚಿತರಾಗಿದುದರಿಂದ ಒಂದಿಷ್ಟು ಸಲಿಗೆಯಿಂದ ಮಾತನಾಡಿದುದು....
ಅಷ್ಟೇ ವಾಸ್ತವ...ಆದರೆ ನನ್ನದೆಲ್ಲವನ್ನು ಅವನಿಗೆ ಹೇಳಿದ್ದೆನಾ ಅಥವಾ ಅವನ ಬದುಕಿನ ನಡೆಗಳನ್ನು ಕೇಳಿದ್ದೆನಾ ?ಅವನ ಹೆಂಡತಿ-ಮಕ್ಕಳು ಸಂಸಾರದ ಬಗ್ಗೆ ತೀರಾ ಕೆದಕಿದ್ದೆನಾ ??
ಉಹೂಂ..ಅವನೇ ಯಾವಗಲೋ ಹೇಳಿದ ನೆನಪಲ್ಲವಾ ,"ಸ್ನೇಹಿತರಲ್ಲಿ ಎಲ್ಲವನ್ನು ಹೇಳಿಕೊಳ್ಳುತ್ತೇವೇಯೋ ಇಲ್ಲವೋ ಗೊತ್ತಿಲ್ಲ ಆದರೆ ಹಂಚಿಕೊಳ್ಳುತ್ತಿರುವ ವಿಚಾರಗಳೆಲ್ಲ ಸತ್ಯವಾಗಿರಬೇಕು" ಎಂದು!
ಹಾಗಾದರೆ ಅದೊಂದು ಪರಿಶುಧ್ಧ ಸ್ನೇಹವಾ ?

ಹಾಗಾದರೆ ಇಷ್ಟು ವರ್ಷದ ಮೇಲೆ ಅವನು ಸಿಕ್ಕಾಗ ನಾನೇಗೆ ಅಷ್ಟು ಗಲಿಬಿಲಿಯಾದೆ??
ನನಗೆ ತಿಳಿಯದಂತೆ ಅದೇಕೆ ಹಾಗೆ  ತೀವ್ರವಾಗಿ ಸ್ಪಂದಿಸಿದೆ?
 ನಾನು,ನನ್ನವರು, ಮಕ್ಕಳುಮರಿ,ಅಡಿಗೆ,ನೆಂಟರು,ಮನೆ,ಕಂಪನಿ,ನರ್ಸರಿ,ಸ್ಕೂಲು, ಕಾರು,ಸೈಟು,ಟೀ.ವಿ,ಸೀರಿಯಲ್ಲುಗಳಲ್ಲಿ ಮುಳುಗಿದ್ದವಳಿಗೆ ಅದೇಕೆ ಆ ಹುಡುಗ ಬೇಕೆನ್ನಿಸಿತು???ಅದೇ ಪ್ರೀತಿಯಾ??
ನನ್ನೆಲ್ಲ ಜವಾಬ್ದಾರಿ,ಸ್ಥಾನಮಾನಗಳನ್ನು ಮರೆಸಿ ಸೆಳೆಯುತ್ತಿರುವ ಬಂಧವಾ ??

ಊಹೂಂ..ಯಾಕೋ ಪೂರ್ತಿಯಾಗಿ ಒಪ್ಪಲಾಗುತ್ತಿಲ್ಲ..ಇರಲಿಕ್ಕಿಲ್ಲ..ಅದೊಂದು ಆಸೆಯಿರಬಹುದಷ್ಟೇ..ಚಿಕ್ಕಂದಿನಿಂದಲೂ  ಮಳೆ ಬಂದಾಗ ನೀರಿಗಿಳಿದು ನೆನೆದು ಬಿಡುವ ನನ್ನ ಹುಚ್ಚಿನಂತೆ!...

ಛೇ..ಇದಕ್ಕೆ ಹೆಸರೇ ಬೇಡ ..ಹೋಗಲಿ...
ನಾನು ಅವನೊಡನೆ ಮಾಡಹೊರಟಿರುವುದಾದರೂ ಏನು??
ನನ್ನ ಕಥೆ ಒತ್ತಟ್ಟಿಗಿರಲಿ ಅವನೂ ಸಂಸಾರಸ್ಥ.ಅದೇನು ಸ್ವೇಚ್ಛಾಚಾರವಾ ?
ನನಗನ್ನಿಸಿದ್ದನ್ನು ನಾನು ಮಾಡಿದೆ ಅದರಲ್ಲೇನು ತಪ್ಪು ಅನ್ನಬಹುದಾ??

ಹಾಗಾದರೆ ನನ್ನವರು ಮಾಡುತ್ತಿರುವುದು ಏನು ಈಗ?? ಹೇಸಿಗೆ ಅನ್ನುತ್ತೇನೆ ನಾನು...ಅದನ್ನೂ ಸ್ವೇಚ್ಛಾಚರವೇ ಎನ್ನಬಹುದಾ?? ಅವಳಿಗೂ ನನ್ನವರಿಗೂ ಇಷ್ಟವಿದ್ದಿರಬಹುದು..ಒಟ್ಟಿಗೆ ಓಡಾಡುತ್ತಿದ್ದಾರೆ,ಹಾಯಾಗಿದ್ದಾರೆ..ಅದರಲ್ಲೇನು ತಪ್ಪು?ನಾನೇಕೆ ಇವರಿಬ್ಬರನ್ನೂ ನೋಡಿ ಇಷ್ಟು ದಿಗಿಲಾಗಿದ್ದೇನೆ,ನನ್ನವರ ಮೇಲೆ ಕೋಪಿಸಿಕೊಂಡಿದ್ದೇನೆ??

ಅಥವಾ ಇದೇ ನನ್ನವರ ಮೇಲೆ ಇನ್ನೂ ಎಲ್ಲೋ ನನ್ನಲ್ಲಿ  ಆಗಾಧವಾಗಿರುವ  ಸಹಜ ಪ್ರೀತಿಯಾ??
ಎಲ್ಲೋ ಕೇಳಿದ ನೆನಪು ...ಎಲ್ಲಿ ಪ್ರೀತಿ ಜಾಸ್ತಿ ಇರುತ್ತದೆಯೋ ಅಲ್ಲಿ ಕೋಪವೂ ಜಾಸ್ತಿ ಎಂದು,ನಿಜವೇ ತಾನೆ??ಅದೇ ಕಾರಣವಾ?

ಹಾಗಾದರೆ ಈಗೇನು ಮಾಡಲಿ..ನಾನೇನೋ ನನ್ನ ಹುಚ್ಚು ಬಯಕೆಗಳನ್ನು ಬಚ್ಚಿಟ್ಟು ತೆಪ್ಪಗಿರಬಹುದು..ಏನೇನೋ ಕಾರಣಕೊಟ್ಟು ಅವನನ್ನು ನೋಡದೆಯೇ ಇರಬಹುದು..ತೀರಾ ತಡೆಯಲಾಗದಿದ್ದರೆ "ಇವರಿಗೆ" ದುಂಬಾಲು ಬಿದ್ದು ಊರನ್ನೇ ಬಿಡಲೂ ಬಹುದು..ಆದರೆ ಇವರು ??
ಈ ಪತಿರಾಯನಿಗೆ ಅವಳನ್ನು ಬಿಡುವುದು ಸಾಧ್ಯವಾ?? ಮನೆಯ ತನಕ ಕೈಕೈಹಿಡಿದು ಎದುರೇ ನಿಂತವರು ನಾಳೆ ನೀನು ಬೇಕಾದರೆ ಎಲ್ಲಿಗಾದರೂ ಹೋಗು ಅಂದಾರು....

ಎಲ್ಲಿಗೋ ಹೋಗುವುದು ಕಷ್ಟವಲ್ಲ...ಜಿದ್ದಿಗೆ ಬಿದ್ದು ಯಾರ ಮುಂದೆಯೂ ಕೈಯ್ಯೊಡ್ಡದೇ ತಲೆಯೆತ್ತಿಯೇ ಮಕ್ಕಳನ್ನು ಸಾಕಿಯೇನು..ಆಡಿಕೊಳ್ಳುವವರ ಮುಸಡಿ ಕೆಂಪಾಗುವಂತೆ ಮಕ್ಕಳ ಮದುವೆ-ಮಂಗಲವನ್ನೂ ಮಾಡಿಸಿಯೇನು..ನನ್ನ ಬದುಕು ಇರುವವರೆಗೂ ಮಕ್ಕಳಿಗೊಂದು ದಿಕ್ಕಾದೇನು .. 

ಆದರೆ ಅಷ್ಟೇ ಸಾಕಾ??
ಗಂಡ-ಹೆಂಡತಿ-ಮಕ್ಕಳೆಲ್ಲಾ ಒಟ್ಟಿದ್ದರೆ ಚೆನ್ನವಲ್ಲವಾ?ನನ್ನ  ಅಪ್ಪ-ಅಮ್ಮನಿಗೂ ಇನ್ನೇನು ಬೇಕು??
ಎನು ಮಾಡಲಿ ಈಗ ಹಾಗಾದರೆ...

ಆ ಮೈತ್ರಿಯ ಜುಟ್ಟು ಹಿಡಿದು ಹೊರದಬ್ಬಲಾ??ನನ್ನವರ ಕಾಲು ಹಿಡಿದು ಬೇಡಿಕೊಳ್ಳಲಾ ??
ಅಥವಾ ಇಬ್ಬರನ್ನೂ ಕೂಡ್ರಿಸಿ  ಮಾತುಕಥೆಯಾಡಲಾ ?? ಇಲ್ಲಾ ನೇರವಾಗು ಅದದ್ದಾಯಿತು ಇನ್ನುಮುಂದಾದರೂ ನೆಟ್ಟಗಿರಿ,ಇದನ್ನು ಹೀಗೆ ಮುಂದುವರೆಸಿದರೆ ನನ್ನ ದಾರಿ ನನಗೆಂದು ಗಟ್ಟಿಯಾಗಿ ಕೂಗಿಹೇಳಲಾ??? ಅಂದುಕೊಳ್ಳುತ್ತಿರುವಾಗಲೇ ನನ್ನನ್ನು ದೂರದಿಂದ ಯಾರೋ ಕರೆದಂತಾಯಿತು...
ಮತ್ತೆ ಮತ್ತೆ ಕರೆದಂತಾಯಿತು...
ಹೌದು ಯಜಮಾನರ ಧ್ವನಿಯೇ ಅದು...

ಇನ್ನೊಂದು ಸಲ ಕರೆದಾಗ ಕಣ್ಣು ತಂಪುತಂಪಾಯಿತು...ಕೈಯ್ಯನ್ನು ಯಾರೋ ತಿಕ್ಕುತ್ತಿದ್ದಂತೆ ಅನ್ನಿಸಿತು..ಮುಖಕ್ಕೆ ತಂಪಾದ ಗಾಳಿಗೂ ಹೊಡದಂತೆ ಭಾಸವಾಯಿತು..ಕಣ್ಣು ಬಿಡುವ ಪ್ರಯತ್ನ ಮಾಡಿದೆ....ಉಹೂಂ ಎಲ್ಲ ಮಂಜು ಮಂಜು...ತಲೆ ಸುತ್ತುತ್ತಿತ್ತು...ಬರುಬರುತ್ತಾ ಮಸುಕು ಕಡಿಮೆಯಾಗುತ್ತಿತ್ತು..ಮೆಲ್ಲನೆ ಮಣ್ಣಮುದ್ದೆಯಲ್ಲೊಂದು ಕಪ್ಪು ಕಂಬಳಿಹುಳು ಕಂಡಂತಾಯಿತು..ಒಂದೆರಡು ಗಳಿಗೆಯಲ್ಲೇ ನನ್ನವರ ಮುಖ ಕಾಣತೊಡಗಿತ್ತು..ಅವರ ದಪ್ಪ ಮೀಸೆ,ಗಾಬರಿಯಾದ ಮುಖ ಎಲ್ಲವೂ ಕಾಣುತ್ತಿತ್ತು..ಮೈತ್ರಿ ಕೈ ತಿಕ್ಕುತ್ತಾ ಕುಳಿತ್ತಿದ್ದಳು.ಅವಳ ಮುಖದಲ್ಲೂ ಸ್ತ್ರೀ ಸಹಜ ವಾತ್ಸಲ್ಯವಿತ್ತು.. .ನಾನು ಹಾಲ್ ನ ಸೋಫಾದ ಮೇಲೆ ಮಲಗಿದ್ದೆ...ಇನ್ನೇನು ಎಳಬೇಕು ಅನ್ನಿಸುವಷ್ಟರಲ್ಲಿ ಮುಖದ ಮೇಲೆ ಏನೋ ಅಲುಗಾಡುವಂತೆ ಅನ್ನಿಸುತ್ತಿದ್ದು.ತಂಪಾದ ಗಾಳಿಯೂ ಬರುತ್ತಿತ್ತು...ಕತ್ತೆತ್ತಿದ್ದರೆ ಆ ಹುಡುಗ ಕಾಣುವುದಾ????
ಹೌದು ಅವನೇ ??? ಇರಲಾರದು..ಕಣ್ಣುಜ್ಜಿಕೊಂಡೆ...ಅವನೇ..
ಕೈ ಚಿವುಟಿಕೊಂಡೆ ಚುರ್ರ್  ಅಂದಿತು...ನಿಜವೇ..ಅವನೇ ಕೂತಿದ್ದಾನೆ..ಅರೇ ಇಸ್ಕಾ!!

ಮತ್ತೆ ತಲೆ ಗಿರ್ರೆಂದಿತು...ಅಥವಾ ಮೊದಲಿನಂದಲೂ ತಿರುಗುತ್ತಲೇ ಇತ್ತೋ ಎನೋ,ಸ್ವಲ್ಪ ಜೋರಾಯಿತು ...ಏಳಲು ಹವಣಿಸಿದಾಗ ಪತಿರಾಯರು ಭುಜ,ಬೆನ್ನು ಹಿಡಿದು ಮೇಲೆತ್ತಿದರು.ನೀರು ಕೊಟ್ಟರು..ಸ್ವಲ್ಪ ಸುಧಾರಿಸಿದ ಹಂಗೆ ಕಂಡ ಮೇಲೆ "ಏನಾಯ್ತೇ...ನಡಿ ಆಸ್ಪತ್ರೆಗೆ ಹೋಗಣಾ...ಸ್ಲ್ಜ್ ಸ್ಜ್ಫ಼್ಲ್ಕ್ಸ್ದ್ಜ್ ಫ಼್ಲ್ಸ್ದ್ಜ್ಫ಼್ಸ್ದ್ಕ್ಲ್ಫ಼್ಜ್ಸ್ಲ್ ಲ್ಕ್ಸ್ದ್ಜ್ಫ಼್ಸ್ಲ್ಕ್ದ್ಫ಼್ಜ್ಸ್ಲ್ದ್ಕ್ಫ಼್ಜೊಇವೆಫ಼್ವೆಜ್ಫ಼್ಲ್ಸ್ದ್ಜ್ಫ಼್ಲ್ಕ್ಸ್ದ್ಜ್ಫ಼್ಕ್ಲ್ಸ್ದ್ಜ್ಫ಼್ಸ್ಲ್ದ್ಕ್ಫ಼್ಜ್ ಅ;ದ್ಫ಼’ಸ್ವೊಇಫ಼್ಪೆಫ಼ಿಪೊಎವಿಫ಼್ಪ್ವಿಫ಼್ ಫ಼್ಕ್ವ್ಚ್ನ್ವ್ಸ್ಲ್ಕ್ದ್ಜ್ಫ಼್ಸ್ಲ್ಕ್ಫ಼್ಸ್" ಇನ್ನೂ ಏನೇನೋ ಹೇಳುತ್ತಿದ್ದಂತಿತ್ತು...
ನಾನು ಸರಿಯಾಗಿ ಕೇಳಿಸಿಕೊಳ್ಳಲಿಲ್ಲ... ಸಣ್ಣಗಿನ ಧ್ವನಿಯನ್ನ ಸ್ವಲ್ಪ ಗಟ್ಟಿ ಮಾಡಿಕೊಳ್ಳುತ್ತಾ "ಏನಿಲ್ಲ,ಸಂಕಷ್ಟಿಯೆಂದು ಊಟಮಾಡಿರಲಿಲ್ಲ ...ಅದ್ಕೇ ಸುಸ್ತು... ಚೂರು ಮಲಗುತ್ತೇನೆ...ಸರಿಯಾಗುತ್ತದೆ " ಎಂದು ರೂಮಿಗೆ ಹೊರಡಲು ಅನುವಾದೆ..ಎದ್ದವಳಿಗೆ ಕಾಲೆಡವಿ ಮತ್ತೆ ರೂಮು ತಲುಪಿಸಲು ನನ್ನವರೇ  ಬರಬೇಕಾಯಿತು..ಕಾಲೆಡವಿದಾಗ ಆ ಹುಡಗ "ನಿಧಾನ ನಿಧಾನ" ಎಂದಿದ್ದು ಈಗಲೂ ಕಿವಿಯಲ್ಲಿ ಗುಯ್ಯ್ಂ ಗುಡುತ್ತಿತ್ತು... ನಾನು ರೂಮಿನಲ್ಲಿ ಮಲಗಿದ್ದೆ...ಮನಸ್ಸು ಕೂಡಾ ರೂಮಿನ ಕದದಂತೆ ಆರ್ಧ ಒಳಗೆ-ಅರ್ಧ ಹಾಲಿನಡೆಗೆ ತೆರೆದಿತ್ತು...

ವಾಪಸ್ಸು ಹೋದ ಪತಿರಾಯರು ಆಗಂತುಕರೊಂದಿಗೆ ನನ್ನ ಕುರಿತು "ಉಪವಾಸ ಗಿಪವಾಸ ಎಲ್ಲಾ ಬೇಕು ಇವಳಿಗೆ..ಎಷ್ಟ್ ಹೇಳಿದ್ರೂ ಕೇಳಲ್ಲಾ ಸಾರ್ " ಎಂದೆಲ್ಲಾ ಒಂದಿಷ್ಟು ಸಾಂದರ್ಭಿಕವಾಗಿ  ಬೈದು ಕೊನೆಗೆ 
"ಎನ್ ಸಾರ್, ಮೈತ್ರಿ ಮೇಡಮ್ ಅವ್ರು ನಿಮ್ ಮಿಸೆಸ್ ಅಂತಾ  ಇಷ್ಟ್ ದಿನಾ ಅದ್ರೂ ಹೇಳ್ಳೇ ಇಲ್ವಲ್ಲಾ ಸಾರ್? ಇದೇನ್ ಹಿಂಗೆ.” ಎಂದರು..
.ನನ್ನ ಕಿವಿ ಚುರುಕಾಯಿತು...
ಧಡಕ್ಕನೆ ಎದ್ದು ಕೂತೆ ಮಂಚದಿಂದ...

ಇವರು ಹಾಗೇ ಮುಂದುವರೆದು..".ಇವತ್ತು ನಿಮ್ ಮನೆಗೆ ಬರ್ತೀನಿ  ತೊಂದ್ರೆ ಇಲ್ಲಾ ಅಲ್ವಾ?? ನನ್ನ ಹಸ್ಬಂಡ್ ನಿಮ್ಮನೆ ದಾರಿಲೇ ಬರ್ತಿದಾರಂತೆ..ಅಲ್ಲಿಗೇ ಬಂದು ಪಿಕ್ ಮಾಡ್ತಾರೆ ಅಂದಾಗಲೇ ಗೊತ್ತಾಗಿದ್ದು ನಿಮ್ಮ ಬಗ್ಗೆ..ಏನಾ ಸಾರ್ ನೀವು,,ಮೊದ್ಲೇ ಹೇಳದಲ್ವಾ?? ನೀವಾದ್ರೂ ಮೇಡಮ್..ನಾನು ಅವಾಗಾವಾಗ ಸಾರ್ ಬಗ್ಗೆ ಹೇಳ್ತಾ ಇದ್ರೂ ಏನೂ ರೆಸ್ಪಾನ್ಸೆ ಮಾಡ್ತಿರ್ಲಿಲ್ವಲ್ಲಾ ಮೇಡಮ್.."ಎಂದರು...
ಆ ಹುಡುಗ.ಛೀ ಹುಡುಗನಲ್ಲ ಅವನು ವಯಸ್ಸಾಗಿದೆ...ಆದರೂ "ಹುಡುಗನೇ ಅವನು" ಇರಲಿ...ಆತ ಕರ್ತವ್ಯ ನಿಷ್ಠೆ,ವೈಯಕ್ತಿಕ ಬದುಕು ಇವುಗಳ ಬಗ್ಗೆ ತನ್ನ ಎಂದಿನ ಶೈಲಿಯಲ್ಲಿ ದೊಡ್ಡ ದೊಡ್ಡ ಮಾತುಗಳನ್ನು ಆಡಲು ಹೊರಟಾಗ ಮೈತ್ರಿ ಅವನನ್ನು ಅರ್ಧಕ್ಕೆ ತಡೆದು,
"ಗೊತ್ತಿದ್ರೆ ನೀವು ನನ್ ಹತ್ರಾ ಇಷ್ಟು ಕ್ಲೋಸಾಗಿ ಇರ್ತಿದ್ರಾ" ಎಂದು   ಕಣ್ಣು ಮಿಟುಕಿಸಿದ್ದಳು..ಮೂವರೂ ಜೋರಾಗಿ ಗಹಗಹಿಸಿ ನಕ್ಕರು...

ಮತ್ತೆ ಇನ್ನೇನೋ ಮಾತು..ಮತ್ತೆ ನಗು...ನಗು ನಗು...ನನಗೆ ಮಂಗಳೂರು ಟ್ರಿಪ್ಪಿನಲ್ಲಿ ನಾವು ಬಸ್ಸಿನಲ್ಲಿ ಹರಟೆಕೊಚ್ಚುತ್ತಿದ್ದ ನೆನಪು ತಂತು.ಆ ಹುಡುಗ ಚೂರೂ ಬದಲಾಗಿರಲಿಲ್ಲ...ಅದೇ ಮಾತುಗಳು..ಯಾರನ್ನೂ ಆಡಿಕೊಳ್ಳದ ತಿಳಿಹಾಸ್ಯ..ಮುಗ್ಧ ನಗು...ಮೈತ್ರಿಯೂ ಅಷ್ಟೇ...ಅದೇ ಧಾಟಿ...ಚೂರು ಘಾಟು,ಪೋಲಿಯೆನ್ನಿಸುವ ಡೈಲಾಗುಗಳು..ನಗು ನಗು...ಅದೇ ಥರ ಒಂದಿಷ್ಟು ಮಾತುಕಥೆ ಆದಮೇಲೆ ಮೈತ್ರಿ ತಾನು ನನ್ನ ಯಜಮಾನರೊಡನೆ ಕಂಪನಿ ಕೆಲಸದ ಮೇಲೆ ದೆಲ್ಲಿಗೆ ಹೋದಾಗಿನ ,ಅಲ್ಲಿಯ ಒಂದಿಷ್ಟು ನಗುಬರಿಸುವ ಸಂಗತಿಗಳನ್ನೂ ಹೇಳಿದಳು..ಆದನ್ನು ಆ ಹುಡುಗ ತೀರಾ ಸಾಮಾನ್ಯ ಎಂಬಂತೆ ಸ್ವೀಕರಿಸುತ್ತಿದ್ದ...ಅಲ್ಲಲ್ಲಿ ತನ್ನದೂ ಒಂದೆರಡು "ಅಲ್ಲಿ  ಹಾಗೆ ಹೀಗೆ"  ಎಂದು ಸಲ್ಲು ಸೇರಿಸುತ್ತಿದ್ದ...ನಗುತ್ತಿದ್ದ..
ನಾನು ಮಂಚದ ತುದಿಗೆ ಬಂದು ಕೂತಿದ್ದೆ...ಕಾಲು ನೆಲಕ್ಕಿರಿಸಿ ಕೈಯ್ಯಿಂದ ಮುಖಮುಚ್ಚಿಕೊಂಡಿದ್ದೆ..ತೀರಾ ಗೊಂದಲದಲ್ಲಿದ್ದೆ...ಅವರ ಮೂವರ ನಗು ನನ್ನ ಮೌನಕ್ಕೆ ಸಮನಾಗಿತ್ತು...


ಇನ್ನೊಂದೆರಡು ನಿಮಿಷವಾದ ಮೇಲೆ ಅವರಿಬ್ಬರೂ ಹೊರಡಲು ತಯಾರಾದರು.ಮೈತ್ರಿ ನನಗೆ ಬಾಯ್ ಹೇಳಲೋ ಏನೋ ರೂಮಿನ ಹತ್ತಿರ ಬರುವಂತೆ ತೋರಿದಳು ಅಷ್ಟರಲ್ಲೇ ಆ ಹುಡುಗ ಅವಳನ್ನು ತಡೆದು "ಏಯ್ ಅವರನ್ನಾ ಯಾಕೆ ಎಬ್ಬಿಸ್ತೀಯಾ,ಮಲ್ಕೊಳ್ಳಿ ಬಿಡು" ಎನ್ನುತ್ತಾ
,"ನಿಮ್ ಮಿಸಸ್ ಗೂ ಹೇಳ್ಬಿಡಿ" ಎಂದು ಮೆಟ್ಟಿಲಿಳಿದು ಹೊರಟು ಹೋದ....

ನನಗೆ ಅದೇನೋ ಹಾಯೆನಿಸಿತು...ನನ್ನವರ ಬರುವಿಕೆಗಾಗಿ ಕಾದೆ..ಎಲ್ಲವನ್ನೂ ಹೇಳಬೇಕೆಂದುಕೊಂಡೆ..ಅಷ್ಟರಲ್ಲಿ ಅದೇನೋ ಟೇಬಲ್ಲಿನ ವರೆಗೆ ಬಂದವರು  ಬಂದವರು ಮತ್ತೆ ತಿರುಗಿ ತಿರುಗಿ ನೋಡಿದರು...ಮೈತ್ರಿಯಲ್ಲೇ ನೋಡುತ್ತಿದ್ದರಾ ???ಮತ್ತೆ ವಾಪಸ್ಸು ಗೇಟಿನೆಡೆಗೆ ಓಡಿದರು..ನನಗೆ ಸಿಟ್ಟು ಮತ್ತೆ ಬುಸ್ಸೆಂದಿತು...ಎದ್ದು ಹಾಲಿನ ಪಕ್ಕದ ರೂಮಿನ ಕಿಟಕಿಯ ಬಳಿ ನಿಂತೆ...ಇವರು  ಎಲ್ಲಿ ಮತ್ತೆ ಮೈತ್ರಿಗೆ ಬಾಯ್ ಹೇಳಲು ಚಪ್ಪರಿಸಿದರೋ ಅಂದುಕೊಂಡೆ...

ಇವರು ಹೊರಗೋಗಿ ,ಹೊರಟವರ ಕಾರಿನ ಬಳಿ ನಿಂತು,
"ಸಾರ್ ನಿಮ್ಮ ಮಿಸೆಸ್ ಮೊಬೈಲು ಸಾರ್...ಅವತ್ತು ಡೆಲ್ಲಿಇಂದ ಹೊರಡ್ಬೇಕಾದ್ರೆ..  ಏನೋ ತೀರಾ ತೀರಾ ಅರ್ಜಂಟ್ ಕಾಲ್ ಮಾಡ್ಬೇಕಿತ್ತು..ನನ್ ಮೊಬೈಲ್ ಹ್ಯಾಂಗ್ ಆಗ್ತಾ ಇತ್ತು...ಅದ್ಕೆ  ಮೇಡಮ್ ಅವ್ರ  ಹತ್ರಾ ಮೊಬೈಲ್ ಇಸ್ಕೊಂಡು ಕಾಲ್ ಮಾಡ್ದವ್ನು ಹಂಗೆ ಟೆನ್ಶಲ್ ಅಲ್ಲಿ ನಾನೆ ಬ್ಯಾಗಿಗೆ ಹಾಕ್ಕೊಂಡ್ ಬಿಟ್ಟಿದ್ದೆ ಅನ್ಸತ್ತೆ...ಬಂದವನು ನೆನಪಾಗ್ಲಿ ಆಂತಾನೆ ಟೇಬಲ್ಲಿನ ಮೇಲಿಟ್ಟಿದ್ದೆ...ಈಗ ನೆನಪಾಯ್ತು. ತಗೊಳಿ ಸಾರ್  " ಎಂದು ಮೊಬೈಲೊಂದನ್ನು ಕೊಟ್ಟರು...
ಹೌದು..ಅದೇ ಮೊಬೈಲು..ನಾನು ಮೈತ್ರಿಯ ಪ್ರೇಮಸಂದೇಶಗಳನ್ನೆಲ್ಲಾ ಓದಿದ ಮೊಬೈಲು...ನೂರೆಂಟು ಮೆಸ್ಸೇಜುಗಳಿದ್ದ ಮೊಬೈಲು... ಇದೇನಿದು ಅಂದುಕೊಳ್ಳುವಾಗಲೇ,ಆ ಹುಡುಗ ನಗುತ್ತಾ ಮೈತ್ರಿಯ ಮುಖ ನೋಡಿ
"ಥ್ಯಾಂಕ್ಯು ಸಾರ್...ಇದು ನನ್ನ ಹಳೆಯ ಮೊಬೈಲು.. ಅವಳಿಗೆ ಅದೇನೋ ಹುಚ್ಚು ಇವಳಿಗೆ...ಊರುಬಿಟ್ಟೂ ಹೋಗ್ಬೇಕಾದ್ರಲ್ಲಾ ಅದನ್ನಾ ತಗೊಂಡ್ ಹೋಗ್ತಾಳೆ...ನನ್ನ ನೆನಪಿಗಂತೆ... ಇರ್ಲಿ ಇಷ್ಟ ದಿನ ಸುಮ್ನೆ ತಗೊಂಡು ಹೋಗಿ ಬರ್ತಿದ್ಲು ಈ ಸರಿ ನಿಮ್ಗಾದ್ರು ಪ್ರಯೋಜನಕ್ಕೆ ಬಂತು" ಎಂದು ಕಾರು ಸ್ಟಾರ್ಟು ಮಾಡಿದ..

ನಮ್ಮ ಯಜಮಾನರಿಗೆ ಅದೇನನ್ನಿಸಿತೋ "ಸಾರ್..ಸ್ಸಾರಿ..ಇಷ್ಟೇಲ್ಳಾ ಪರ್ಸನೆಲ್ ಅಂತಾ ಗೊತ್ತಿರ್ಲಿಲ್ಲ...ಅದೂ ನಂದು ಒಂದು ಇದೇ ಮಾಡೆಲ್ ನಾ ಮೊಬೈಲ್ ಇದೆ...ಇದೇ ಮಾಡೇಲ್ದು..ಆಶ್ವರ್ಯ ಅಂದ್ರೆ ಅದೇ ಗುರು ರಾಘವೇಂದ್ರರ  ವಾಲ್ಪೇಪರ್ ಕೂಡಾ.. ಅದ್ಕೇ ಗೊತ್ತಾಗ್ಲಿಲ್ಲ..ಸ್ಸಾರಿ" ಎಂದು ಗಲ್ಲುಗಿಂಜಿದರು...
ಅದಕ್ಕೆ ಆತ "ಅಯ್ಯೋ ಪರವಾಗಿಲ್ಲ ಬಿಡಿ" ಎಂದು ನಕ್ಕುಕಾರನ್ನು   ರಿವರ್ಸು ಗೇರಿಗೆ ಹಾಕುತ್ತಾ ಮೈತ್ರಿಯ ಮುಖ ನೋಡಿದ...ಆಕೆ ಸರಿಯಿದ್ದ ತನ್ನ ವೇಲನ್ನು ಮತ್ತೆ ಸರಿಮಾಡಿಕೊಂಡಳು...
ಕಾರು ಮನೆದಾಟಿ ಮೂತಿ ತಿರುಗಿಸಿಕೊಂಡು ಹೊರಟಿತ್ತು.....
ನನ್ನವರು ಗೇಟು ಹಾಕಿ ವಾಪಸ್ಸು ಬರುತ್ತಿದ್ದರು...
ಆಗ ಯಾಕೋ ಆ ಹುಡುಗ ಕಾಲೇಜಿನಲ್ಲಿ  ಹೇಳಿದ ಮಾತು ನೆನಪಾಯಿತು...ಮತ್ತೆ ಮತ್ತೆ ಕೇಳಬೇಕು ಅನ್ನಿಸಿತು..

"ನಮ್ಮ 
ಮನೆಯ ಹಿರಿಯರು ನಮಗೆ  ಒಳ್ಳೆಯ ಸಂಸ್ಕಾರವನ್ನು ಕೊಟ್ಟಿದ್ದಾರೆ..

ಹಿರಿಯರ 

ಆ ಸಂಸ್ಕಾರದ ಬೇಲಿ ನಮಗಾಗಿ..
ನಮ್ಮ ಒಳಿತಿಗಾಗಿ.. 

ಅವರು ಕೊಟ್ಟ 

ಸ್ವಾಂತಂತ್ರ್ಯ... 
ಬೇಲಿಯನ್ನು  ಹಾರುವದಕ್ಕಲ್ಲ...

ಒಪ್ಪುವ ಮನಸ್ಸಿಗಿಂತ..


ಬಯಸುವ  ದೇಹಕ್ಕಿಂತ ... 


ನಮಗೆ ನಾವೆ ಹಾಕಿಕೊಂಡ .. 

ನೀತಿ..
ನಿಯತ್ತು .. ಬಲು ದೊಡ್ಡದು..

ನಿನ್ನ 

ಚಂದದ ಸ್ನೇಹವನ್ನು  ಯಾವಾಗಲೂ ಮರೆಯುವದಿಲ್ಲ.."
ನನ್ನವರು ವಾಪಸ್ಸು ಬರುತ್ತಿದ್ದರು..ನಾನು ಗುಡುಕ್ಕನೆ ಮತ್ತೆ ರೂಮಿಗೋಡಿದೆ..ಅವರು ಬಾಗಿಲ ಚಿಲಕ ಹಾಕಿ ರೂಮಿನೆಡೆ ಬರುತ್ತಿದ್ದರು..
============================================================
(ಮುಂದೇನಾಯಿತು ?  ನಿಮಗೇ ಗೊತ್ತಿದೆ....)

Saturday, April 19, 2014

ಈ ಚುನಾವಣೆ ಮತ್ತು "ಬೂತ"ಗಣ್ಣು

ಅದು ಮಹಾಭಾರತದ ಕುರುಕ್ಷೇತ್ರ ಯುಧ್ದದ ಸಂದರ್ಭ.ಎರಡೂ ಪಂಗಡಗಳು ಹೋರಾಡಲು ಸಜ್ಜಾಗಿ ನಿಂತಿವೆ.ಗಜ-ಅಶ್ವ ಸವಾರರು,ರಥಿಕ-ಪದಾತಿಗಳು ತಮ್ಮ ತಮ್ಮ ಸ್ಥಾನದಲ್ಲಿ ರಣತಂತ್ರಗಳಿಗನುಗುಣವಾಗಿ ನಿಂತಿವೆ.ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭರತಖಂಡದ ಸೈನಿಕರು ಭರ್ಜಿ,ಬಿಲ್ಲು,ಬಾಣ,ಗದೆಗಳನ್ನು ಹಿಡಿದು ಹಣಾಹಣಿಗೆ ನಿಂತಿದ್ದಾರೆ.ಅದನ್ನು ನೋಡಲು ನಭದಲ್ಲಿ ದೇವ,ಗಂಧರ್ವ,ಕಿಂಕರಾದಿಗಣವೂ ಕಾದುಕುಳಿತಿದೆ......
ಹೀಗೆ ಯುದ್ಧಭೂಮಿಯಲ್ಲಿ ನಡೆಯುತ್ತಿರುವುದನ್ನೆಲ್ಳಾ ಕುರುವಂಶದ ರಾಜ ದೃತರಾಷ್ಟ್ರನಿಗೆ  ಸಂಜಯನು ಅರಮನೆಯಲ್ಲಿ ಕೂತಲ್ಲಿಯೇ ಹೇಳುತ್ತಿರುತ್ತಾನೆ.ತನ್ನ ದಿವ್ಯದೃಷ್ಟಿಯ ಮೂಲಕ ಪ್ರತೀಗಳಿಗೆಯ ಮಾಹಿತಿಯನ್ನು ಮಹಾರಾಜನಿಗೆ ತಿಳಿಸುತ್ತಾನೆ.ಇದು ದ್ವಾಪರಾಯುಗದ ಕಥೆ ,ನಮಗೆಲ್ಲರಿಗೂ ಗೊತ್ತು. ಆದರೆ ಕಲಿಯುಗದಲ್ಲಿಯೂ ಇದರ ಅನುಕರಣೆ ನಡೆದಂತಿದೆ ಅಂದ್ರೆ ನಂಬ್ತೀರಾ ??


ಹೌದು,ಇಂತಹ ಒಂದು ಪ್ರಯೋಗಕ್ಕೆ ಸಾಕ್ಷಿಯಾಗುತ್ತಿರುವುದು ಈ ಸಲದ ಲೋಕಸಭಾ ಚುನಾವಣೆ -೨೦೧೪.ಮತದಾರರಿಂದ ಮನ್ನಣೆ ಪಡೆಯುವ ಈ ಚುನಾವಣಾ ಸಂಗ್ರಾಮದಲ್ಲಿ  ಶಾಂತಿಯುತ,ಪಾರದರ್ಶಕ ಮತದಾನ ಪ್ರಕ್ರಿಯೆಗೆ ಆಸ್ಪದ ನೀಡುವ ಉದ್ದೇಶದಿಂದ ಈ ಬಾರಿ ಕೆಲವು ಆಯ್ದ ಲೋಕಸಭಾಕ್ಷೇತ್ರಗಳಲ್ಲಿ ಚುನಾವಣಾ ಆಯೋಗ "ವೆಬ್ ಕಾಸ್ಟಿಂಗ್" ತಂತ್ರಜ್ನಾನವನ್ನು ಅಳವಡಿಸಿಕೊಂಡಿದೆ.ಈ ತಂತ್ರಜ್ನಾನದ ಮೂಲಕ ಪ್ರತೀ "ಬೂತ್" ನಲ್ಲಿ ನಡೆಯುವ ಚಲನವಲನಗಳ ಬಗ್ಗೆ ಆಯೋಗ ಹದ್ದಿನಗಣ್ಣಿಡಬಹುದು. ಕರ್ನಾಟಕದಲ್ಲಿ ಪ್ರಾಯೋಗಿಕವಾಗಿ ಬೆಂಗಳೂರಿನಲ್ಲಿ ಇದನ್ನು ಅನುಷ್ಠಾನಗೊಳಿಸಿದ್ದು,ಇದಕ್ಕಾಗಿ ಇಂಜಿನಿಯರಿಂಗ್ ಸ್ನಾತಕೋತ್ತರ ವಿದ್ಯಾರ್ಥಿಗಳ ನೆರವುಪಡೆಯಲಾಗಿತ್ತು.
 ಬೆಂಗಳೂರು ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಯಾಗಿ ನಾನು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ವಸಂತನಗರದ ಮತಗಟ್ಟೆಯೊಂದರಲ್ಲಿ ಈ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದು ನನ್ನ ಮೊದಲ ಚುನಾವಣೆಯ  ಅನುಭವ,ತಿಳಿದುಕೊಂಡ ಕೆಲವಿಚಾರಗಳನ್ನು ಹಂಚಿಕೊಳ್ಳಬಯಸುತ್ತೇನೆ.


ಏನಿದು "ವೆಬ್ ಕಾಸ್ಟಿಂಗ್ "?? 

ವೆಬ್ ಕಾಸ್ಟಿಂಗ್ ಅಂದರೆ ಅಂತರ್ಜಾಲದಲ್ಲಿ ಮಾಹಿತಿಯನ್ನು ಹರಿಯಬಿಡುವುದು ಎಂದರ್ಥ.ಇಲ್ಲಿ ಚುನಾವಣಾ ಮತಗಟ್ಟೆಯಲ್ಲಿ ನಡೆಯುವ ವಿದ್ಯಮಾನಗಳನ್ನು ಕ್ಯಾಮರಾದಲ್ಲಿ ದಾಖಲಿಸಿಕೊಂಡು ತತ್ ಕ್ಷಣ ಹಾಗೆ ಅದನ್ನು ಅಂತರ್ಜಾಲಕ್ಕೆ ಹರಿ ಬಿಡುವುದು ಎಂದು ಅರ್ಥೈಸಿಕೊಳ್ಳಬಹುದು.

ಇದರ ಕಾರ್ಯವಿಧಾನವೇನು ?

ಮೊದಲಿಗೆ ನಿಗದಿಪಡಿಸಿದ ಜಾಗದಲ್ಲಿ ಲ್ಯಾಪ್ ಟಾಪ್ ಅನ್ನು ಇರಿಸಿ(ಪೂರ್ತಿ ಕೋಣೆ, ಮತಗಟ್ಟೆ ಅಧಿಕಾರಿಗಳು,ಮತದಾರರು  ಕಾಣುವಂತೆ ಮತ್ತು ಮತಯಂತ್ರದ ಬಗ್ಗೆ ತೀರಾ ಪೋಕಸ್ ಮಾಡದಂತೆ)ಅದರಲ್ಲಿನ ವೆಬ್ ಕ್ಯಾಮರಾವನ್ನು ಚಾಲೂ ಮಾಡಬೇಕು.ನಂತರ ಅಂತರ್ಜಾಲದ ಸಂಪರ್ಕವನ್ನು ಪಡೆದು(ಡೋಂಗಲ್ ಗಳ ಮೂಲಕ) ಮೊದಲೇ ಸಿಧ್ಧಪಡಿಸಿದ ಚಾನೆಲ್ಲಿನ ಮೂಲಕ ರೆಕಾರ್ಡಮಾಡಿದ ವಿಡಿಯೋವನ್ನು ಅಂತರ್ಜಾಲಕ್ಕೆ ಕಳಿಸಬೇಕು.

ಇಲ್ಲಿ  ಬಳಸಲಾಗುವ ತಂತ್ರಾಂಶಗಳೇನು ?

ಇದಕ್ಕೆ ಯಾವುದೇ ನಿರ್ದಿಷ್ಟ ತಂತ್ರಾಶದ ಬಳಕೆಯ ಬಗ್ಗೆ ಮಾಹಿತಿ ನೀಡಿರಲಿಲ್ಲ,ಬದಲಿಗೆ ಈಗಾಗಲೇ ರೂಢಿಯಲ್ಲಿರುವ ಕೆಲ ಸೋಶಿಯಲ್ ವೆಬ್ ಸೈಟ್ ಗಳನ್ನೇ ಉಪಯೋಗಿಸಲು ನಿರ್ದೇಶನ ನೀಡಲಾಗಿತ್ತು.www.ustream.tv ಎನ್ನುವ ವೆಬ್ ಸೈಟ್ ನಲ್ಲಿ ವೆಬ್ ಕಾಸ್ಟಿಂಗ್ ನ ಸೌಲಭ್ಯ(ಬೇಸಿಕ್ ವರ್ಗದ್ದು) ಮುಕ್ತವಾಗಿದ್ದು,ಅಲ್ಲಿಗೆ ನಮ್ಮ ಹೆಸರನ್ನು ನೊಂದಾಯಿಸಿಕೊಂಡು ಬ್ರೋಡ್ ಕಾಸ್ಟ  ಮಾಡಲು ಹೇಳಲಾಗಿತ್ತು.

ಪ್ರತಿ ಮತಗಟ್ಟೆಯಿಂದ ಸೆರೆಹಿಡಿದ ತುಣುಕುಗಳನ್ನು ಗುರುತಿಸುವುದು ಹೇಗೆ ?

ನಾವು ಸೆರೆಹಿಡಿದ ವಿಡಿಯೋಗಳನ್ನು ಭಿತ್ತರಿಸುವ ಚಾನೆಲ್ ಗಳಿಗೆ ಹೆಸರು ನೀಡುವ ಬಗ್ಗೆ  ಒಂದಿಷ್ಟು ಸೂಚನೆಗಳನ್ನು ನೀಡಲಾಗಿತ್ತು,ಇದು ಪ್ರತೀ ಮತಗಟ್ಟೆಯನ್ನು ಗುರುತಿಸಲು ಸಹಕಾರಿಯಾಗುತ್ತದೆ.
ಚಾನಲ್ ನ ಹೆಸರು  ಒಟ್ಟೂ ೧೧ ಅಕ್ಷರಗಳದ್ದಾಗಿದ್ದು ಈ ಕೆಳಗಿನ ಮಾದರಿಗಳಲ್ಲಿರುತ್ತಿತ್ತು
GEAC-XXX-YYYY
ಇಲ್ಲಿ ಮೊದಲ ನಾಲ್ಕು ಅಕ್ಷರಗಳು ಕಡ್ಡಾಯವಾಗಿದ್ದರೆ ನಂತರದ ಮೂರು ಅಂಕೆಗಳು ಲೋಕಸಭಾಕ್ಷೇತ್ರದ ಸಂಖ್ಯೆ(Assembly Number) ಯನ್ನೂ
ನಂತರದ ನಾಲ್ಕು ಸಂಖ್ಯೆಗಳು ಪೋಲಿಂಗ್ ಬೂತಿನ ಸಂಖ್ಯೆಯನ್ನೂ (Part Number)ಹೇಳುತ್ತಿದ್ದವು.
ಉದಾಹರಣೆಗೆ :GEAC1620040

ಈ ವಿಧಾನದ  ಪ್ರಯೋಜನಗಳೇನು ??
ಪ್ರತೀ ಮತಗಟ್ಟೆಯಲ್ಲಿನ ಕ್ಷಣಕ್ಷಣದ ತುಣುಕುಗಳನ್ನು ಅಧಿಕಾರಿಗಳು ಕೇಂದ್ರ ಕಛೇರಿಯಲ್ಲಿ ಕೂತಂತೆಯೇ ನೋಡಬಹುದು.ಇದರಿಂದ ಮತ್ತಷ್ಟು ಮತದಾನ ಪ್ರಕ್ರಿಯೆ ಮತ್ತಷ್ಟು ಪಾರದರ್ಶಕ ಹಾಗೂ ಸುಗಮವಾಗಿ ನಡೆಯುವ ಆಶಯವಿದೆ.

ಮತಗಟ್ಟೆ ಅಧಿಕಾರಿಗಳು ಇದನ್ನು ಹೇಗೆ ಸ್ವೀಕರಿಸಿದರು ?

ನಾನು ಗಮನಿಸಿದಂತೆ  ಚುನಾವಣಾ ಅಧಿಕಾರಿಗಳಿಗೆ ಇದು ಬಿಸಿ ಮುಟ್ಟಿಸಿತ್ತು.ತಮ್ಮ ಮಾತುಕತೆಗಳೆಲ್ಲವೂ ಕೇಂದ್ರ ಕಛೇರಿಯಲ್ಲಿ ದಾಖಲಾಗುವ ಮಾಹಿತಿ ಅವರಿಗಿದ್ದುದ್ದರಿಂದ ಅವರ ಕಾಡುಹರಟೆಗಳಿಗೆ ಅವಕಾಶವಿರಲಿಲ್ಲ.ಜೊತೆಗೆ ಮತಗಟ್ಟೆಯ ಎಜೆಂಟರು,ಕೆಲ ಮತದಾರರ ಒರಟು ವಾದಗಳನ್ನು ಸಾಗು ಹಾಕಲೂ ಇದು ಸಹಾಯಕವಾಗಿತ್ತು."ನೋಡಿ ನೀವು ಮಾತನಾಡುವುದೆಲ್ಲವೂ ಅಲ್ಲಿ ರೆಕಾರ್ಡ ಆಗಿ ಹೆಡ್ಡಾಫೀಸಿಗೆ ಕಾಣುತ್ತದೆ" ಎಂದಾಗ ತೆಪ್ಪಗಾದ ಸುಮಾರು ಜನರನ್ನು ನೋಡಿದ್ದೆ

.ಸಾರ್ವಜನಿಕರಿಗೆ ಈ ತುಣುಕುಗಳನ್ನು  ನೋಡುವ ಅವಕಾಶ ಇದೆಯೇ ?

www.ustream.tv ವೆಬ್ ಸೈಟ್ ಸಾರ್ವಜನಿಕ ವೀಕ್ಷಣೆಗೆ  ಮುಕ್ತವಾಗಿರುವುದರಿಂದ ಅಲ್ಲಿನ ವಿಡಿಯೋಗಳನ್ನು ಸಾರ್ವಜನಿಕರೆಲ್ಲರೂ ನೋಡಬಹುದು.ಅಲ್ಲಿ ನಿಮಗೆ ಬೇಕಾದ ಚಾನೆಲ್ ಅನ್ನು (ಚಾನಲ್ ಬರೆಯುವ ವಿಧಾನ ಮೇಲಿದೆ) ಹುಡುಕಿ ಮತಗಟ್ಟೆಯ ವಿಡಿಯೋವನ್ನು ನೋಡಬಹುದು.


 ಇನ್ನು ವೆಬ್ ಕಾಸ್ಟಿಂಗ್ ನ ಬಗ್ಗೆ ನನಗನ್ನಿಸಿದ ವಿಷಯಗಳಲ್ಲಿ ಆಯೋಗ ಬೇರೆ ವೆಬ್ ಸೈಟ್ ಗಳನ್ನು ಆಧರಿಸುವ ಬದಲು ತನ್ನದೇ ಆದ ಪೋರ್ಟಲ್ ಅನ್ನು ಆರಂಭಿಸುವುದು,ಆಪರೇಟರುಗಳಿಗೆ ಸಾಧ್ಯವಿದ್ದೆಡೆ ವೈ-ಫೈ ವ್ಯವಸ್ಥೆ ಮಾಡುವುದು(ಕೆಲವೆಡೆ 3G ಯ ನೆಟವರ್ಕ ಆಗಾಗ ಕಡಿತವಾಗುವುದರಿಂದ) ಸೇರಿದೆ.ಮತಗಟ್ಟೆಯಲ್ಲಿ ಚುನಾವಣಾ ಆಯೋಗದಿಂದ ಕೊಟ್ಟ ಬ್ಯಾಚು ಸಿಕ್ಕಿಸಿಕೊಂಡೆನೆಂಬ ಖುಷಿ ಬೇರೆ.ಹಿಂದಿನ ದಿನವೇ ಬಸ್ಸಿನಲ್ಲಿ ಮತಗಟ್ಟೆ ಯಂತ್ರಗಳನ್ನು ತೆಗೆದುಕೊಂಡು ಹೋಗುವುದು ,ಅಲ್ಲಿ ಮೇಜು ಕುರ್ಚಿಗಳನ್ನು ಜೋಡಿಸಿಕೊಳ್ಳುವುದು,ಮರುದಿನ ಬೆಳಿಗ್ಗೆ  ಪಕ್ಷದಿಂದ ಒಬ್ಬೊಬ್ಬ ಎಜೆಂಟುಗಳು ಬಂದು ಕುಳಿತುಕೊಳ್ಳುವುದು,ಮೊದಲನೇ ಮತಗಟ್ಟೆ ಅಧಿಕಾರಿ ಮತದಾರರ ಗುರುತು ನೋಡಿ ಅವರ ಹೆಸರನ್ನು,ಸಂಖ್ಯೆಯನ್ನು  ಜೋರಾಗಿ ಕೂಗುವುದು ಅದನ್ನುಎಜೆಂಟರುಗಳು ಗುರುತು ಹಾಕಿಕೊಳ್ಳುವುದು,ನಂತರ ಎರಡನೇಯ ಅಧಿಕಾರಿ ಹೆಬ್ಬರಳಿಗೆ ಶಾಯಿ ಬಳಿದು ,ಸಹಿ ಹಾಕಿಸಿಕೊಂಡು ,ಸ್ಲಿಪ್ ನೀಡುವುದು.ಅದನ್ನು ಪಡೆದ ಕಂಟ್ರೋಲ್ ಯುನಿಟ್ಟಿನ   ಮೂರನೇಯ ಅಧಿಕಾರಿ  ಯಂತ್ರದಲ್ಲಿ ಒಟ್ಟೂ ಮತದಾರರ  ಸಂಖ್ಯೆಯನ್ನು ಲೆಕ್ಕ ಹಾಕಿ,ಮತಚಲಾವಣೆ ಯಂತ್ರವನ್ನು ಸಿದ್ಧ ಮಾಡುವುದು.ಓಟು ಹಾಕಿದ ಕೂಡಲೇ ಅದು ಕುಯ್ಯ್ ಎಂದು ಕೂಗುವುದು(ತುಂಬಾ ಸಲ ಕೂಗಿದ ಮೇಲೆ ಅದೇ ಶಬ್ಧ ತಲೆಚಿಟ್ಟು ಬರಿಸಿತ್ತು ಅನ್ನುವ ವಿಷಯ ಬೇರೆ )ಎಲ್ಲವೂ ಕುತೂಹಲಕಾರಿಯಾಗಿತ್ತು.ಮತಗಟ್ಟೆಯ ಮೇಲಧಿಕಾರಿ ಪ್ರತೀ ಎರಡು ತಾಸಿಗೊಮ್ಮೆ ಒಟ್ಟೂ ಮತದಾರದ ಸಂಖ್ಯೆಯನ್ನು "ಇಷ್ಟು ಗಂಡು,ಇಷ್ಟು ಹೆಣ್ಣು " ಎಂದು ತನ್ನ ಮೇಲಿನವರಿಗೆ ಮೊಬೈಲಿನ ಮೂಲಕ ತಿಳಿಸುವುದನ್ನೂ ನೋಡುವ ಅವಕಾಶವಾಯಿತು.ಇದೆಲ್ಲದರ ಜೊತೆಗೆ  ಕೊನೆಯಲ್ಲಿ ಕಿಟಕಿ,ಗಾಳಿಪಂಖಗಳಿಲ್ಲದ ಕೊಠಡಿಯಲ್ಲಿ ಬಿಸಿಲುಬಾಳೆಹಣ್ಣು ತಿಂದ ಅನುಭವವವೂ ಉಚಿತವಾಗಿದ್ದಿತ್ತು.

ವಿಶೇಷ ಕೃತಜ್ನತೆ :ಪದ್ಮಾ ಭಟ್ (ಲೇಖನ ಬರೆಯುವ ಅಂಗಾಕಾರ ಹೇಳಿಕೊಟ್ಟು ಬರೆಸಿದ್ದಕ್ಕಾಗಿ )