"ನಾ ಸಾಯೋದಕ್ಕಿಂತ ಮುಂಚೆ ನನ್ನ್
ಸುಡೋವಷ್ಟಾದ್ರೂ ಬುಕ್ಸ್ ಕಲೆಕ್ಟ್ ಮಾಡ್ಬೇಕ್ ಕಣೇ.."..ಶತಭಿಷ ಪುಸ್ತಕಗಳ ಎಡತಾಕುತ್ತಾ
ಹೇಳಿದ..
"ಏಯ್...ಸುಮ್ನಿರೋ...ಏನೇನೋ
ಹೇಳ್ಬೇಡಾ..ಈಡಿಯಟ್" ಶ್ರಾವ್ಯಾ ಮೆಲ್ಲಗೆ ಎಡಗೈ ತಟ್ಟಿದಳು. ಶತಭಿಷ ಅವಳ ಮುಖವನ್ನೊಮ್ಮೆ
ನೋಡಿದ. ಕಣ್ಣುಗಳಲ್ಲೇನೋ ತೀವ್ರತೆಯಿತ್ತು...ಅದು ಕೋಪವಾ, ಪ್ರೀತಿಯಾ, ಕಾಳಜಿಯಾ ಶತಭಿಷನಿಗೆ ಥಟ್ ಅಂತ
ಹೇಳಲು ಸಾಧ್ಯವಾಗಲಿಲ್ಲ..ಪುಸ್ತಕಗಳ ಮಧ್ಯೆ ನಿಂತಿದ್ದ ಇಬ್ಬರ ನಡುವೆ ಅದೇನೋ ಚಂದದ ಏಕಾಂತವಿತ್ತು...ಅರೆಗಳಿಗೆ
ಅಷ್ಟೆ..ಪಕ್ಕದಲ್ಲ್ಯಾರೋ ಓಡಾಡುತ್ತಿದ್ದು ಗಮನಕ್ಕೆ ಬಂದು "ಏನೋ?" ಎಂಬಂತೆ ಹುಬ್ಬು ಹಾರಿಸಿದಳು
ಶ್ರಾವ್ಯಾ..ಆತ ಏನೂ ಇಲ್ಲ ಎಂಬಂತೆ ತಲೆ ಅಲ್ಲಾಡಿಸಿ ಪುಸ್ತಕಗಳನ್ನು ಹುಡುಕಲು ಹೊರಟ.
ಆಕೆ ಸಡನ್ನಾಗಿ
ಕಾದಂಬರಿಯೊಂದನ್ನು ತೆಗೆದಳು. "ಹೇಳಿ ಹೋಗು ಕಾರಣ"
"ಚೆನಾಗಿದ್ಯೇನೋ?" ಎಂಬಂತೆ ಕೇಳಿದಳು.
"ಸೂಪರ್.." ಅಂದ ಶತಭಿಷ...
"ಓದಿದೀನಿ..ಸ್ಟಾರ್ಟಿಂಗ್ ಸಖತ್
ಇಷ್ಟ ಆಯ್ತು...ಒಳ್ಳೆ ಕತೆ... ರೊಮ್ಯಾಂಟಿಕ್ ....ಆದ್ರೆ ಕ್ಲೈಮಾಕ್ಸ್ ಯಾಕೋ ತೀರಾ ಫಿಕ್ಷನ್
ಅನಸ್ತು..ನೀನೂ ಓದು..ನಾನು ಬೆಂಗ್ಳೂರಿಂದ ಶಿಮೊಗ್ಗಾ, ದಾವಣಗೆರೆ ಇಂದ ಬೆಂಗಳೂರಿಗೆ
ಬರೋವಾಗ ಓದಿದ್ದೆ...ಮಜಾ ಅಂದ್ರೆ ಆ ಕತೆ ನಡ್ಯೋದೂ ಅಲ್ಲೇ...ಒಂಥರಾ ಥ್ರಿಲ್ ಇತ್ತು "
ಇನ್ನೂ ಏನೇನೋ ಹೇಳಬೇಕು ಅಂದುಕೊಂಡಿದ್ದ ಆದರೆ ನಾಲಿಗೆ ಹೊರಡಲೇ ಇಲ್ಲ.
ಶತಭಿಷ
ತಡವರಿಸುತ್ತಿರುವಷ್ಟರಲ್ಲಿ ಆಕೆ ಅದರೊಂದಿಗೆ ಇನ್ನೆರಡು ಪುಸ್ತಕಗಳನ್ನು ತೆಗೆದುಕೊಂಡು
"ಡನ್" ಎಂದಳು.
ಈತ ಐದಾರು ಪುಸ್ತಕಗಳನ್ನು
ಹೆಕ್ಕಿ,
ನಾಕೈದು ಪುಸ್ತಕಗಳನ್ನು ವಾಪಸ್ ಇಟ್ಟು, ಮತ್ತೆ ಎರಡನ್ನು ಎತ್ತಿ, ಪುನಃ ವಾಪಸ್ಸಿಟ್ಟು, ಮೂರ್ನಾಕು ಬಾರಿ ತಲೆ ಕೆರೆದು
ಕೊನೆಗೆ ಎಲ್ಲ ವಾಪಸ್ಸಿಟ್ಟು ಪೂರ್ಣಚಂದ್ರ ತೇಜಸ್ವಿಯವರ ಪುಟ್ಟ ಪುಸ್ತಕವೊಂದನ್ನು ಎತ್ತಿಕೊಂಡು
ಬಿಲ್ಲಿಂಗ್ ಕೌಂಟರ್‍ಗೆ ಬಂದ.
"ಇದೊಂದೇನಾ?" ಆಕೆ ಮುಗುಳು ನಗುತ್ತಾ
ಕೇಳಿದಳು. ಆ ನಗೆಯಲ್ಲೊಂದು ತುಂಟತನವಿತ್ತು. ಕಿಚಾಯಿಸುವಿಕೆಯ ಯೌವ್ವನ ತುಂಬಿತ್ತು. ಶತಭಿಷ
"ಹೂಂ" ಎಂದು ಯಾವಾಗ ಹೇಳಿದನೋ ಆತನಿಗೇ ತಿಳಿಯಲಿಲ್ಲ.
ಬಿಲ್ಲಿಂಗ್ ಕೌಂಟರ್‍ನಿಂದ
ಹೊರಡುವಾಗ ಕೊಟ್ಟ ಎರಡೂ ಬ್ಯಾಗ್‍ಗಳನ್ನು ಶತಭಿಷನೇ ಹಿಡಿದಿದ್ದ..
"ಕೊಡೋ" ಎಂದಳು ಶ್ರಾವ್ಯಾ.
"ಏಯ್...ಇರ್ಲಿ ಬಿಡೆ..ಇದೇನ್
ಭಾರ ಇಲ್ಲ" ಎಂದ ಶತಭಿಷ...
"ಅದ್ ಹಂಗಲ್ವೋ...ಕೊಡು"
ಎಂದಳು ಶ್ರಾವ್ಯಾ...
"ಫಿಪ್ಟಿ-ಫಿಫ್ಟಿ ನಾ? ಸರಿ ಸರಿ.." ಎನ್ನುತ್ತಾ
ಆತ ಒಂದು ಬ್ಯಾಗನ್ನು ಆಕೆಯ ಕೈಗಿಟ್ಟ. ಆಕೆ "ಹೂಂ" ಎಂಬಂತೆ
ಹುಬ್ಬೇರಿಸಿದಳು...ಇಬ್ಬರೂ ಜಯನಗರದ ಫೋರ್ತ್ ಬ್ಲಾಕಿನ ರಸ್ತೆಯಲ್ಲಿ ಓಡಾಡುತ್ತಿದ್ದರು...ದಾರಿಯ
ಸುತ್ತಲೂ ಅಂಗಡಿ..ಜನ...ಯುವಕರು,ಯುವತಿಯರು,ಹೆಂಗಸರು,ಮಕ್ಕಳು,ಮುದುಕರು..ರಸ್ತೆಯ ಎಡಬಲಕ್ಕೂ
ಚಾಚಿರುವ ಮರಗಳು...ಅದರ ಕೆಳಗೆ ಅಲ್ಲಲ್ಲಿ ತಳ್ಳುಗಾಡಿ, ಸಣ್ಣಪುಟ್ಟ ಅಂಗಡಿ...ಹಾರ್ನ
ಸದ್ದು...ಕವಿಯುತ್ತಿದ್ದ ಕತ್ತಲು...ಹೀಗೆ ಸುಮ್ಮನಿದ್ದರೆ ಆಕೆ ಹೊರಡುತ್ತಾಳೆ ಎನಿಸಿತು...ಆದರೆ
ಶತಭಿಷನಿಗೆ ಆಕೆಯ ಜೊತೆಗೆ ಮಾತಾಡಬೇಕಿತ್ತು...ವಿಷಯವೇನು? ಸ್ಪಷ್ಟವಿರಲಿಲ್ಲ...
ಇದ್ದಕ್ಕಿದ್ದಂತೇ ಐಡಿಯಾವೊಂದು
ಹೊಳೆದು ಶತಭಿಷ "ಕಾಫಿ?" ಎಂದು ಕೇಳಿದ..
ಕಾಫಿಗೆ ನೀನು
"ಊಹೂಂ" ಅಂದ್ ದಿನ ಜೋರ್ ಮಳೆ ಬರತ್ತೆ ಕಣೆ ಎಂದು ಕಿಚಾಯಿಸುವ ಮಟ್ಟಿಗೆ ಆಕೆ
ಕಾಫಿಯನ್ನು ಇಷ್ಟಪಡುತ್ತಿದ್ದಳು..ಬಹುಷಃ ಅವತ್ತು ಬೆಂಗಳೂರಿಗೆ ಮಳೆಭಾಗ್ಯವಿರಬೇಕು...ಆಕೆ ಊಹೂಂ
ಎಂದಳು...ಶತಭಿಷ ಪೆಚ್ಚಾದ...
"ಐಸ್ ಕ್ರೀಮ್?" ಶತಭಿಷನಿಗೆ ಐಸ್ ಕ್ರೀಮ್
ತಿಂದಷ್ಟೇ ಖುಷಿ...
"ಎಲ್ಲಿ?" ಎಂದವನೇ ಮೊಬೈಲ್ ತೆಗೆದು
ಅಂಗಡಿಯೊಂದನ್ನು ಹುಡುಕಿದ...
ಅಲ್ಲೇ ಹತ್ತಿರವಿದ್ದಿದ್ದರಿಂದ
ಇಬ್ಬರೂ ನಡೆಯುತ್ತಲೆ ಹೊರಟರು...
ತಳ್ಳುಗಾಡಿಯೊಂದರಲ್ಲಿ
ಫ್ಯಾನ್ಸೀ ಐಟಮ್‍ಗಳಿತ್ತು..."ಒಂದ್ ನಿಮ್ಷ ಕಣೋ" ಎಂದು ಆ ಕಡೆ ಹೊರಟಳು. ಟಕಟಕನೇ
ನಾಲ್ಕು ಬಿಂದಿ ಶೀಟ್‍ಗಳನ್ನು ನೋಡಿ, ಒಂದನ್ನು ಆರಿಸಿಕೊಂಡು ವಾಪಸ್ ಬಂದು ಮತ್ತೆ ವಾಪಸ್ ಹೋಗಿ
ಏನನ್ನೋ ಪ್ಯಾಕ್ ಮಾಡಿಸಿಕೊಂಡು ಬಂದಳು...
"ತಗೊಳೋ...ಗಿಫ್ಟ್
ನಿಂಗೆ..."
"ನಂಗ್ಯಾಕೆಲೇ..."
"ಇಟ್ಕೊಳೋ..."
"ಓಪನ್ ಮಾಡು..."
ಶತಭಿಷ ಕವರ್ ತೆಗೆದಾಗ
ಅದರಲ್ಲೊಂದು ಚಂದದ ನಾಣ್ಯವಿತ್ತು..."ಥ್ಯಾಂಕ್ಯೂ" ಎಂದ ಶತಭಿಷ.
"ವೆಲ್‍ಕಮ್"
ಎಂದವಳು..."ಯಾಕೆ ಅಂತಾ ಗೊತ್ತಾಯ್ತಾ?" ಎಂದಳು
"ಹೂಂ" ಎಂದ ಶತಭಿಷ.
"ಯಾಕೆ? ಇದನ್ನಾತ ನಿರೀಕ್ಷಿಸಿರಲಿಲ್ಲ.
"ಅದು ಅದು..ಲಕ್ಷ್ಮಿ ಬರ್ಲಿ ಅಂತಾನಾ?"
"ಗೂಬೆ...ಲಕ್ಷ್ಮಿನೂ ಅಲ್ಲಾ ಅನಂತ್‍ನಾಗೂ
ಅಲ್ಲ...ನಿನ್ ತಲೆ ...ಆ ಕನ್‍ಫ್ಯೂಸ್ಡ್ ಮೈಂಡ್‍ಗೆ ಹೆಲ್ಪ್ ಆಗ್ಲಿ ಅಂತಾ"
"ಹಂಗಂದ್ರೆ"
"ಹಂಗಂದ್ರೆ....ಹೇಳ್ಳಾ ಬೇಡ್ವಾ? ಕೇಳ್ಳಾ ಬೇಡ್ವಾ.....ಸರಿನಾ
ತಪ್ಪಾ?
ಬೇಕಾ ಬೇಡ್ವಾ ಹಿಂಗೇ ಏನೇನೋ ತಲೆಕೆಡುಸ್ಕೋಂಡ್ ಇರ್ತಿಯಲ್ಲಾ ಅವಾಗೆಲ್ಲಾ ಟಾಸ್
ಹಾಕು ಅಂತಾ..."
"ಆಹಾ..ಚೆನಾಗಿದೆ ಕಣೆ..
..ಥ್ಯಾಂಕ್ಯೂ ಮೇಡಂ"
"ಆಶಿರ್ವಾದ..."
ಇಬ್ಬರೂ ಜೋರಾಗಿ ನಕ್ಕರು...
"ಲೇ ಇಲ್ಲೇ ಎಲ್ಲೋ ಫಿಫ್ಟೀ
ಮೀಟರ್ ಒಳಗಡೆ ಇದೆ ಅಂತಾ ಮ್ಯಾಪ್ ಅಲ್ಲಿ ತೋರಸ್ತಿದೆ...ಎಲ್ಲಿ ನೋಡು..."
"ಎಲ್ಲೋ
ಕಾಣಸ್ತಿಲ್ವಲ್ಲೋ...."
"ಮಿಸ್ ಮಾಡಿದ್ವಾ.."
"ಇಲ್ಲೇ ಇದೆ ಕಣೋ..."
"ಕರ್ಮಾ..."
ಇಬ್ಬರೂ ಪಾರ್ಲರಿನ ಒಳಹೊಕ್ಕರು...
"ಎಡಗಾಲಿಟ್ಟು ಬಂದೆನಾ?" ಶತಭಿಷ
ನೆನಪುಮಾಡಿಕೊಳ್ಳುತ್ತಿದ್ದ...ಶ್ರಾವ್ಯಾ ಮೆನು ನೋಡುತ್ತಿದ್ದಳು..
"ಡಿ.ಬಿ.ಸಿ ಓ.ಕೆ ನಾ?"
"ನಂಗ್ ಏನೂ ಬೇಡ ಕಣೇ...ನೀ
ತಗೋ"
"ಯಾಕೋ? ಸರಿ ಶೇರ್ ಮಾಡ್ಬೇಕು ಓ.ಕೇ?"
"ಹೂಂ..."
"ಆಕ್ಚುಲಿ ನಾನ್ ಡಿ.ಬಿ.ಸಿ ಶೇರ್
ಮಾಡಲ್ಲ...ವೆನಿಲ್ಲಾ ಓ.ಕೆನಾ?"
"ಏನೋ ಒಂದು"
ಆರ್ಡರ್ ಮಾಡಿ ಇಬ್ಬರೂ
ಮೂಲೆಯೊಂದರಲ್ಲಿ ಕುಳಿತರು...ಅಲ್ಲೇ ರ್ಯಾಕೊಂದರಲ್ಲಿ ಕೆಲ ಇಂಗ್ಲೀಷ್ ನಾವೆಲ್‍ಗಳಿದ್ದವು...ಶತಭಿಷ
ಅವನ್ನು ತೆಗೆದು ಓದಲೇ, ಇವಳೊಂದಿಗೆ ಮಾತಾಡಲೇ ಎನ್ನುವ ಗೊಂದಲದಲ್ಲಿದ್ದ...
"ಏನೋ?"
"ಏನಿಲ್ಲ..." ಎಂದವನೇ
ಕಾಯಿನ್ ತೆಗೆದು ಟಾಸ್ ಹಾರಿಸಿದ...
ಆಕೆ ನಕ್ಕಳು...
ಈತ ರಿಸಲ್ಟ್ ನೋಡದೇ ಮಾತಿಗಿಳಿದ...
ಮಾತು ಮಾತು ಮಾತು...ಶುರು
ಮಾಡಿದ್ದಷ್ಟೇ ಇವನು..ನಂತರ ಹೂಂ ಹಾಕಿದ್ದಷ್ಟೇ ಕೆಲಸ...ಆಕೆ ಪಟಪಟನೇ
ಮಾತಾಡುತ್ತಿದ್ದಳು...ಐಸ್-ಕ್ರೀಮ್ ತಿಂದು ನಾಲಿಗೆ ದಪ್ಪವಾಗಿ ಕೊನೆಗೆ ಅವರ ಮಾತಿಗೆ ಅವರೇ
ನಗುವಂತಾಯಿತು...ಅಷ್ಟರಲ್ಲಾಗಲೇ ಕೆಫೆಗೆ ಜನ ಸೇರುತ್ತಿದ್ದರು...ಚಿಕ್ಕದೊಂದು
ಕಾರ್ಯಕ್ರಮವಿದ್ದಂತೆ ತೋರುತ್ತಿತ್ತು...ಯಾರೋ ಗಿಟಾರ್ ಹಿಡಿದಿದ್ದರು...ಇನ್ಯಾರೋ ಸ್ಕ್ರಿಪ್ಟ್
ಓದುತ್ತಿದ್ದರು...ಮತ್ಯಾರೋ ಹಾಡು ಗುನುಗುತ್ತಿದ್ದರು..ಬಿಲ್ ಕೊಟ್ಟು ಶತಭಿಷ ಮತ್ತು ಶ್ರಾವ್ಯಾ
ವಾಪಸ್ ದಾರಿ ಹಿಡಿದರು...
"ಬಾಂಬೆಗ್ ಹೋಗ್ಲೇಬೇಕೇನೇ?" ಶತಭಿಷ ಕೊನೆಗೂ ಧೈರ್ಯಮಾಡಿ
ಕೇಳಿಯೇ ಬಿಟ್ಟು...
"ಅದೇ ಬೆಸ್ಟ್ ಆಪ್ಷನ್ ಅನಸ್ತಿದೆ
ಕಣೋ...ಆಫರ್ ಸಿಕ್ದಾಗ ಬಿಡ್ಬೇಡಾ ಅಂದ್ರು ಎಲ್ರೂ...ಸ್ಟಿಲ್ ಕನ್‍ಫ್ಯೂಷನ್ ಇದೆ.."
"ಮನೆಲ್ ಎಲ್ಲಾ ಮ್ಯಾನೇಜ್
ಮಾಡಿದಿಯಾ?"
"ಅಪ್ಪಾ ಓಕೆ ಅಂದ್ರು ಕಣೋ...ಬಟ್
ಸ್ಟಾರ್ಟಿಂಗ್ ಒಂದ್ ನಾಲಕ್ ತಿಂಗ್ಳು ಅತ್ತೆ ಮನೆಅಲ್ಲೇ ಇರಬೇಕು ಅನ್ನೋದ್ ಅವ್ರ್
ಕಂಡೀಷನ್..ಟ್ರಾವಲಿಂಗ್ ಸ್ವಲ್ಪ್ ಜಾಸ್ತಿ ಆಗತ್ತೆ..ಬಟ್ ಏನ್ ಮಾಡೋದು..."
"ಅಮ್ಮ?"
"ಅಮ್ಮಾ...ಕುಯ್ಯ್‍ಂ ಅಂತಿದಾಳೆ
ಕಣೋ...ಏನ್ ಹೇಳದು ಗೊತ್ತಾಗ್ತಿಲ್ಲಾ...ಏನಾದ್ರೂ ಡ್ರಾಮಾ ಮಾಡಿ ಒಪ್ಪಸ್‍ಬೇಕು..."
"ಓ.ಕೆ...ಗುಡ್"
"ಯಾ...ಲೆಟ್ಸ್ ಸೀ...ಇಲ್ಲಿದ್ರೆ
ಇಷ್ಟೇ ಕಣೋ...ಬಾಲಿವುಡ್‍ನಲ್ಲಾದ್ರೂ ಏನಾದ್ರೂ ಚಾನ್ಸ್ ಸಿಗ್‍ಬೋದಾ ಅಂತಾ...ವೆಬ್ ಸೀರಿಸ್, ಆಡ್ವರ್ಟೈಸ್‍ಮೆಂಟ್ ಅಂತಾ
ಏನಾದ್ರೂ ಇರತ್ತೆ ಹೊಸದಾಗಿ...ಇಲ್ಲಿದ್ರೆ ಗೊತ್ತಲ್ಲ..."
"ಯಾ ಐ ನೋ...ಮನುಷ್ಯ ಹಕ್ಕಿ ಥರ, ಪ್ರಪಂಚ ಎಲ್ಲಾ
ಹಾರ್ಬೇಕು.."
"ನೆಕ್ಸ್ಟ್‍ಡೈಲಾಗ್ ಏನೋ ಬೇರು
ಅದು ಇದು ಸಮ್‍ಥಿಂಗ್ ಅಲಾ...ನಾನೂ ನೋಡಿದೀನಿ ಅಮೇರಿಕಾ ಅಮೇರಿಕಾ ಫಿಲಂ ನಾ"
"ಲೇಯ್...ಹಂಗಲ್ವೇ..."
"ಏನೋ...ಬಿಡು...ನಿಂದೇನ್ ಕತೆ? "
"ನಂದಾ...ಏನೂ ಇಲ್ವೇ..."
"ಹೇಳಕ್ ಇಷ್ಟ ಇಲ್ಲಾ ಅಂದ್ರೆ
ನಾನೇನ್ ಫೋರ್ಸ್ ಮಾಡಲ್ಲಪ್ಪಾ..."
"ಹಂಗಲ್ವೇ...ಆಕ್ಚುಲಿ ಅದೇನೋ
ನಮ್ಮ್ ಊರಲ್ಲಿ ಇಂಜಿನಿಯರಿಂಗ್ ಕಾಲೇಜ್ ಓಪನ್ ಆಗ್ತಿದೆ ಅಂತೆ...ಅಲ್ಲೇ ಲೆಕ್ಚರಿಂಗ್ ಮಾಡ್ಕೊಂಡು
ಅರಾಮಾಗ್ ಇರಣಾ ಅನಸ್ತಿದೆ..."
"ವಾವ್...ನೈಸ್ ಕಣೋ...ನಿಂಗ್
ಸೂಟ್ ಆಗತ್ತೆ ಬಿಡು.."
"ಯಾ..ನೋಡ್ಬೇಕು.."
"ಬಟ್ ಒಂದ್
ರಿಕ್ಸೆಸ್ಟ್.."
"ಏನೇ?"
"ಲೆಕ್ಚರರ್ ಆದ್ರೆ ತುಂಬಾ
ಸ್ಟ್ರಿಕ್ಟ್ ಆಗ್ ಎಲ್ಲಾ ಇರ್ಬೇಡಾ ಕಣೋ..ಪಾಪಾ ಸ್ಟುಡೆಂಟ್ಸು...ಇಂಟರನಲ್ಲು ಅಟೆಂಡೆನ್ಸು ಎಲ್ಲಾ
ಕೊಡು ಪಾಪಾ..."
"ಏಯ್ ಹೋಗೆ..ನಾನೇ ಡಿಸೈಡ್
ಆಗಿಲ್ಲ ಇನ್ನೂ...ಯಾಕೋ ಈ ಊರ್ ಬೋರ್ ಆಗಿದೆ ಅಷ್ಟೇ"
"ನಂಗೂ ಕಣೋ...ಯಾಕೋ ಬೆಂಗ್ಳೂರ್
ಸಹವಾಸ ಸಾಕಾಗೋಗಿದೆ...ಈ ಜನ ಈ ಪಾಲಿಟಿಕ್ಸ್...ಎಲ್ಲೋ ದೂರ ಹೋಗ್ಬೇಕು..ನನ್ ಟ್ಯಾಲೆಂಟ್‍ಗೆ
ಬೆಲೆ ಇರೋ ಕಡೆ..."
"ಅಲ್ಲಿ ಇದೆಲ್ಲಾ ಇರಲ್ಲಾ
ಅಂತಿಯಾ?"
"ಈ ಡೋಂಟ್ ನೋ...ಟ್ರೈ
ಮಾಡೋದ್ರಲ್ ಏನ್ ತಪ್ಪಿಲ್ಲ ಅನ್ಸತ್ತೆ...ರೈಟ್?"
"ಯಾ...ಮೇ ಬಿ.."
"ಓ.ಕೆ ಕಣೋ...ಮತ್ತ್ ಯಾವಾಗ್
ಸಿಗ್ತಿನೋ ಗೊತ್ತಿಲ್ಲ...ಬಟ್ ಥ್ಯಾಂಕ್ಯು...ಥ್ಯಾಂಕ್ಸ್ ಫಾರ್‍ದ ಬುಕ್ಸ್...."
"ಥ್ಯಾಂಕ್ಸ್ ಫಾರ್ ದ
ಚಾಕೋಲೇಟ್..ಸಾರಿ ಐಸ್‍ಕ್ರೀಮ್...ಐಸ್‍ಕ್ರೀಮ್ ಚಾಕಲೇಟ್..ಏನೋ ಒಂದು"
"ಡಿ.ಬಿ.ಸಿ ಕಣೋ..."
"ಯಾ...ಟಾಟಾ.."
ಹಸ್ತಲಾಘವ-ಕಿರುಅಪ್ಪುಗೆ
ಶುಭವಿದಾಯ....ವಾಪಸ್ ರೂಮಿನ ಬಸ್ ಹತ್ತಲು ಶತಭಿಷನಿಗೇಕೋ
ಮನಸ್ಸಿರಲಿಲ್ಲ...ತಲೆತಿರುಗಿದಂತಾಯಿತು...ಅಲ್ಲೇ ಬಸ್‍ಸ್ಟಾಂಡಿನ ಬೆಂಚಿಗೆ ಕೂತಿದ್ದ...ಪುಸ್ತಕ?
ಶ್ರಾವ್ಯಾಳನ್ನು ಊರಿಗೆ
ಕರೆದೊಯ್ಯಲು ಕನ್ವಿನ್ಸ್ ಮಾಡುವ ಹಂಬಲಹೊತ್ತು ಹೊರಟಿದ್ದ ಶತಭಿಷ ಪುಸ್ತಕದ ಬ್ಯಾಗನ್ನು ಪಾರ್ಲರ್‍ನಲ್ಲೇ
ಮರೆತಿದ್ದ....ಎಳನೀರು ಕುಡಿದು ಅರೆಗಳಿಗೆ ಸುಧಾರಿಸಿಕೊಂಡು ಆ ಕಡೆ ಹೆಜ್ಜೆ ಹಾಕಿದ...
ತಲೆಯಲ್ಲೇನೋ ಧಿಮ್ ಅನ್ನುತ್ತಿತ್ತು..
ಪಾರ್ಲರ್ ಬಾಗಿಲಲ್ಲೇ ಹೈಸ್ಕೂಲು
ಸ್ನೇಹಿತನೊಬ್ಬ ಸಿಕ್ಕ...ಆತನೇ ಓಪನ್ ಮೈಕು ಆಯೋಜಿಸಿದ್ದ...ಮಾತುಕತೆ ಉಭಯ ಕುಶಲೋಪರಿ ಮುಗಿದು
"ಪರ್‍ಫಾರ್ಮ್ ಮಾಡೋ" ಎಂದ.."ಇಲ್ಲ" ಎನ್ನಲು ಬಾಯಿತೆಗೆದವನಿಗೆ ಏನೋ
ಮೈಮೇಲೆ ಬಂದಂತಾಯಿತು...
ಬರೆದ..ಹರಿದ...ಬರೆದ...ಹರಿದ...
ಹರಿದ ಚೀಟಿಗಳನ್ನು ಒಂದು
ಗೂಡಿಸಿ ಮತ್ತೆ ಬರೆದ...
ಬಾಂಬೆಯಲ್ಲಿದ್ದ ಶ್ರಾವ್ಯಾಳಿಗೆ
ಆಕೆಯ ಬಾಸ್ "ಗೆಟ್ ದ ಡಿಟೇಲ್ಸ್.. ಟಾಕ್ ಟು ಹಿಮ್" ಎಂದು ಲಿಂಕ್ ಒಂದನ್ನು
ಕಳುಹಿಸಿದ್ದರು.. ಇಂಟರ್‍ನೆಟ್ಟಿನಲ್ಲಿ ಫೇಮಸ್ ಆಗುತ್ತಿದ್ದ ಪ್ಯಾಥೋ
ಕವನ ವಾಚನವದು.. ಇಂಗ್ಲೀಷ್-ಹಿಂದಿ ಚೂರ್ ಚೂರು ಕನ್ನಡ ಮಿಶ್ರಿತವಾಗಿತ್ತು.. ವೀಡಿಯೋದ
ಡಿಸ್ಕ್ರಿಪ್ಷನ್ "ಡೆತ್ ಬೈ ಚಾಕಲೇಟ್ ಬೈ ಶತಭಿಷ" ಎಂದು ತೋರಿಸುತ್ತಿತ್ತು...
-ಚಿನ್ಮಯ
02/10/2018