ಆಫೀಸಿನಿಂದ ಬರುವಾಗ ಪ್ರತೀಸಲ ಯುವತಿಯೊಬ್ಬಳು ಸಿಗುತ್ತಾಳೆ
ಮೀಟಿಂಗಿನಲ್ಲಿ ಬೈದಿದ್ದರೂ, ಹೊಗಳಿದ್ದರೂ, ಸಪ್ಪೆಯಾಗಿದ್ದರೂ ಈಕೆ ಮುಗುಳ್ನಗುತ್ತಾಳೆ
ಸುಯ್ಯೆಂದು ಸಾಗುತ್ತದೆ ಕ್ಯಾಬು, ಈಕೆ ಮಾತ್ರ ಕಣ್ಣ್ ಮುಚ್ಚುವುದಿಲ್ಲ
ಧೂಳು, ಮಳೆ, ಗಾಳಿ ಏನೇ ಬಂದರೂ ಆಕೆ ನಿಂತಲ್ಲಿಂದ ಕದಲುವುದಿಲ್ಲ
ಬಾಲ್ಯದಲ್ಲಾಗಿದ್ದರೆ ಆಕೆಯ ಬಳಿ ಹೋಗಿ ಗಡ್ಡ-ಮೀಸೆ ಬಿಡಿಸುತ್ತಿದ್ದೆ
ಚಂದದ ಹಲ್ಲುಗಳ ವಿಕಾರವಾಗಿಸಿ, ಕಣ್ಣು ಕುರುಡಾಗಿಸುತ್ತಿದ್ದೆ
ಕೇಸು ಬೀಳಬಹುದೇನೋ ಈಗ, ಹಾಗೆಲ್ಲ ಮಾಡುವುದು ತರವಲ್ಲ
ರಸ್ತೆ ಬದಿ ಫಲಕದಲ್ಲಿ ಕಾಗುಣಿತ ತಪ್ಪಿದ್ದರೂ ಈಗ ಹಿಡಿಸುವುದಿಲ್ಲ
ಮುಂದಿನ ಸೀಟಿನ ಮಹಿಳೆಯರು ಸೀರೆ-ಸರದ ಬಗ್ಗೆ ಮಾತಾಡುತ್ತಿಲ್ಲ
ಬರುಬರುತ್ತಾ ಆಕೆ ತೊಟ್ಟ ಆಭರಣ ಮಸುಕೆನಿಸಿದೆ, ಲಕ-ಲಕ ಹೊಳೆಯುತ್ತಿಲ್ಲ
ಅಕ್ಷಯ ತದಿಗೆ ಮುಗಿದ ಮೇಲೆ ಬೇರೇನೋ ಬರಬಹುದು; ಆಕೆಗಿದು ಗೊತ್ತೇ?
ಮತ್ತೇನೋ ರಿಯಾಯತಿಯ ಮೆಸ್ಸೇಜು ಹೊತ್ತು; ಆಕೆಯೇ ಬರಬಹುದೇ ಮತ್ತೆ!
ಟ್ರಾಫಿಕ್ಕು ಜಾಮಾಗಿ ನಿಂತಲ್ಲೇ ನಿಂತಾಗ; ಆಕೆಯೊಟ್ಟಿಗೆ ಮಾತನಾಡಿದ್ದೆ
ಆಕೆಯನ್ನೇ ಪಾತ್ರವಾಗಿಸಿ ಆಫೀಸಿನಲ್ಲಿ ಯಾರನ್ನೋ ಅಣುಕಿಸಿದ್ದೆ
ಇಂದು ಸಂಜೆ ಇದ್ದಕ್ಕಿದ್ದಂತೆ ಆಕೆ ಕಾಣಿಸುತ್ತಿಲ್ಲ; ಬರೀ ಸ್ಟೀಲ್ ರಾಡಿನ ಅಸ್ತಿಪಂಜರ
ಇದೀಗ ಜೇಬು ಖಾಲಿಮಾಡಿಸಲು ಅವಕಾಶವಿರುವ ಆಸೆಗಳ ಶರಪಂಜರ
ಕಾಯುತ್ತಿದ್ದೇನೆ ಇದೀಗ ಅಲ್ಲಿ ಮತ್ತೇನು ಅವತಾರ ಬರಬಹುದೆಂದು
ನಿರ್ಧಾರ ಮಾಡಿದ್ದೇನೆ ಯಾರೇ ಬಂದರೂ ಆಕೆಯ ಮಾತ್ರ ಮರೆಯಬಾರದೆಂದು!
-ಚಿನ್ಮಯ
೧೪/೧೦/೨೦೨೩