Saturday, June 20, 2015

ಶಕ್ಕರಗಂಚಿ

ದ್ಯಾವ ಅವತ್ತು ತನ್ನ ಪಾಡಿಗೆ ತಾನು ಕವಳದ ಚಂಚಿಯಿಂದ ಹೊಗೆಸಪ್ಪು ಹರಿಯುತ್ತಾ 

ಒಂದು ಚೂರು ಬಾಯಿಗೆ ಹಾಕಿಕೊಂಡು ಸಂಕದಾಟುತ್ತಿದ್ದ. 

ಇನ್ನೇನು ಎರಡನೇ ಸಂಕ ದಾಟಿ ಮಂಡಗಾಲಿಗೆ ಹತ್ತಿರ ಹೋಗಬೇಕು ಅಷ್ಟರಲ್ಲಿ  

ಭಟ್ಟರ ಮನೆಯಿಂದ ಕೆಂಪಮ್ಮ ಕರೆದಂತಾಯಿತು .

"ಏಯ್ ಯಾರೋ ಅದು ...ದ್ಯಾವ ನನ ???"


"ಹೌದ್ರಾ ಅಮ್ಮಾ..."

"ಬಾ ಇಲ್ಲಿ ...ಎತ್ಲಾಗ್ ಹೋಗಿದ್ದೇ ನೀನು ? " 

ಎಂದು ತಮ್ಮ ಊರುಗೋಲು ಹಿಡಿದುಕೊಂಡೇ ಬಾಗಿಲ ಮೆಟ್ಟಿಲು ಇಳಿದು ಬರತೊಡಗಿದರು.

ವಯಸ್ಸಾದ ಈ ಯಮ್ಮ ಎಲ್ಲಿ ಸಂಕ-ಗಿಂಕ ದಾಟಿ ಬಂದು ಬಿಡುವುದೋ ಎಂದು ಗಡಬಡೆಯಿಂದ 

ದ್ಯಾವ ಭಟ್ಟರ ಮನೆಯ ಅಂಗಳಕ್ಕೆ ಬಂದ .

ಅಮ್ಮ ಕೈ ಮಾಡಿ ಕರೆದು ವರಾಂಡದ ಮೇಲೆ ಕೂರಲು ಹೇಳಿ , 




"ಎತ್ಲಾಗ್ ಹೋಗ್ ಬಿಟ್ಟಿದ್ಯಾ ??

 ಅಲ್ಲಾ ಈಗೀಗ್ ದ್ಯಾವನಿಗೆ ಲಕ್ಶವೇ ಕಡಿಮೆ ಆಗ್ ಬುಟ್ಟದೆ...

ಅಲ್ಲಾ ನಿನ್ನೆ ರಾತ್ರಿ ಆ ಸುಡಗಾಡ್ ಮಂಗ ಹಂಚಿನ ಮೇಲೆಲ್ಲಾ ಓಡಾಡಿ,

ದಡುಬುಡು ಮಾಡದೇ..

ಹಿತ್ತಲ ಕಡಿಗೆ ಎಲ್ಲಾ ಬರೀ ಲಿಗಾಡಿ..

ತ್ವಾಟಕ್ಕೂ ಹೋಗದ್ಯೋ ಏನ ನೋಡ್ದವ್ರ್ ಯಾರು ? 

ನೀ ಎತ್ಲಾಗ್ ಹೋಗ್ತಿಯೇ ???"



ದ್ಯಾವ ಅದಕ್ಕೆ ಪ್ರತಿಯಾಗಿ ಕೋವಿ ಕೆಳಗಿಟ್ಟು,

ಬಟಾರಚೀಲದ ಮೇಲೆ ಕೂತು ಕೈಯಿಂದ ಎಲೆಚೊಕ್ಕಮಾಡುತ್ತಾ



 "ಇಲ್ರಾ ಅದು ನಾನೆ ಬೆರ್ಸಿದ್ದು...

ಅಚ್ಚೆ ಊರಿನ ತ್ವಾಟದ ಸರದಿಂದ ಬೆರೆಸ್ಕಂಡ ಬಂದೆ...

ಇವತ್ತ್ ಅದೆ ಕಬ್ಬಿನಗದ್ದೆ ಗಡಿ ದಾಟ್ಸಿ ಓಡ್ಸಿದೆನ್ರಾ.

.ಅದೆಲ್ಲಾ ಹಂಗೆಲ್ಲಾ ಈ ಹೊತ್ತಿಗ ಬರುದಿಲ್ರಾ.

.ಕಾನಬದಿಗೆ ಹಲ್ಸನ್ ಹಣ್ಣು ಮಾಯಿನ ಹಣ್ಣು ತಿನ್ಕಂಡು ಇರ್ತದೆ..

ಈಗೀಗ ಕಾನು ಕಡ್ಮೆ ಆಗಿ ಊರ ಬದಿಗೆ ಬರ್ತದೆ..

ಎಂತಾ ಮಾಡುದ್ ಹೇಳಿ ಪಾಪ ಅದ್ರದ್ದೂ  ಹೊಟ್ಟೆ ಅಲ್ದಾ ?" 

ಎಂದು ವೃತ್ತಿಪರ ಸಮಜಾಯಿಶಿ  ನೀಡಿದ...



ಅದಕ್ಕೆ ಅಮ್ಮ ಒಂದೊಮ್ಮೆ ಹಲ್ಲಿಲ್ಲದ ಬಾಯನ್ನು ಅಲ್ಲಾಡಿಸಿ ,

ಬಚ್ಚ ತುಟಿಯ ಒಳಗೆ ಹೊರಗೆ ಮಾಡಿ

 "ಅಲ್ಲೋ ನೀ ಮಂಗ್ಯಾನ್ ಕಾಯವ್ನೆ ಅದ್ಕೆ  ಪಾಪ ಪುಣ್ಯ ಅಂದ್ಕಂಡು 

ಹೊಟ್ಟಿಗಿಲ್ಲ ಹೇಳಿ ಸುಮ್ನಿದ್ರೆ ಹೆಂಗೋ ಮಾರಾಯ! .

ಅಗಾ ಅದೆಲ್ಲಾ ನಂಗೊತ್ತಿಲ್ಲ..

ಯುಗಾದಿ ಮುಗ್ದು ೧೫ ದಿವ್ಸಕ್ಕೆ ನಮ್ಮನೆ ಮಾಣಿ ,ಅದೇ ನನ್ನ ಮಮ್ಮಗ ಬತ್ತೆ ಹೇಳಿದಾನೆ...

ಆಮೇಲ್ ಅವಾ ಅದೆಂಥದೋ ಪರದೇಶಕ್ಕೆ ಹೋಗ್ತಾನಂತೆ...

ಹಾಲಂಡ ಎಂಥದೋ ಸುಡಗಾಡು...

ಬರೂದ್ ಯಾವಾಗ್ಲ್ ಎಂತಾ ಕಥೆಯಾ...

ಅಲ್ಲಿ ತನ್ಕಾ ಈ ಮುದುಕಿ ಇರ್ತದ್ಯೋ ಇಲ್ಲ... 



[ಕಣ್ಣಲ್ಲಿ ಚೂರು ನೀರು ತುಂಬಿಕೊಂಡು]



ನೋಡು ..ನೀ ಎಂತಾ ಮಾಡ್ದೆ ನಂಗೊತ್ತಿಲ್ಲ.

.ಆ ಅಂಗಳದಲ್ಲಿ ಉಂಟಲ್ಲ ಆ ಶಕ್ಕರೆಕಂಚಿ ಮರ.

ಅದಕ್ಕೆ ಮಂಗ ಬರುಕಾಗ.. ಅವಾ ಬತ್ತಾ ಹೇಳಿ ಶಕ್ಕರ ಗಂಚಿ ಕಾಯಿ ಇಡ್ಸಿದ್ದೆ..

ಯಾರಿಗೂ ಈ ಸಲ ಕೊಯ್ಲಿಕ್ ಬಿಡ್ಲಿಲ್ಲ...

ಅವ್ನಿಗ್ ಶಕ್ಕರೆಗಂಚಿಕಾಯಿ ಅಂದ್ರೆ ರಾಶಿ ಛೊಲೊವಾ !..." 




ಎಂದು ತಮ್ಮ ಎಂದಿನ ಅಧಿಕಾರವಾಣಿಯಿಂದ ಹೇಳಿದರಾದರೂ ,

ಆಮೇಲೆ ಮೆಲ್ಲಗೆ ಎರಡು ಅಡಿಕೆ ನೆಲದಮೇಲಿಡುತ್ತಾ ,



"ದ್ಯ್ವಾವಾ ...ಅವ ಬರು ಮುನ್ನಾಣದಿನ ಹೇಳ್ ಕಳಿಸ್ತೆ ...

ಬಂದು ಚೂರ್ ಕೊಯ್ಕೊಟ್ಟು ಹೋಗು ಹಾಂ ???"

 ಎಂದು ಒಳಹೋಗಲು ಅಣಿಯಾದರು...


ದ್ಯಾವ ಏನು ಮಾಡುವುದೆಂದು ಅರಿಯದೇ ಸುಮ್ಮನೆ ಅಡಿಕೆ ತೆಗೆದು ಕೈಚಂಚಿಗೆ ಹಾಕಿ ,

ಅಲ್ಲಿ ದ್ದ ಇನ್ನೊಂದು ಅಡಿಕೆ ಚೂರು ಬಾಯಿಗೆ ಹಾಕಿ ಕೋವಿ ಹೆಗಲಿಗೇರಿಸಿ ಹೊರಟ...

ಇನ್ನೇನು ಎರಡು ಹೆಜ್ಜೆ  ನಡೆದಿಲ್ಲ ..

""ಹ್ವಾ...ಕಂಚಿಮರ..ಮಂಗ ಬರುಕಾಗ ಹಾಂ ???" ಎಂದು ಮತ್ತೆ ಕೆಂಪಮ್ಮ ಹೇಳಿದರು...



"ಈ ಅಮ್ಮಂಗೆ ತಲಿ ಪೂರ್ತಿ ಸಮಾ ಇಲ್ಲ...

ಅದೆಂತೋ ಅರವತ್ತಾದ್ಮೇಲ್ ಅರಳು ಮರಳು ಅಂತ್ರಲ್ಲ..ಅದೇ ಇರಬಕು .

ಅಲ್ಲಾ ..ಊರೆಲ್ಲಾ ತಿರುಗೂ ಮಂಗ ಇವ್ರ ಮನೆ ಕಂಚಿ  ಮರಕ್ ಬರುಕಾಗ ಅಂದ್ರೆ ??

ನಾ ಎಂತಾ ಇಲ್ಲೇ ಬಿಡಾರ ಹಾಕಂಡ್ ಕೂಕಂಡ್ಳಾ ?? 

ಈ ಮಂಗನ ಕಾವಲು ಸಾಕಬೇಕಾಯ್ತು..."

 ಎಂದು ತನ್ನಲ್ಲೇ ಹೇಳಿಕೊಳ್ಳುತ್ತಾ ಜಾಗಖಾಲಿ ಮಾಡಿದ...


                                                                                                   ***
ಈ ಮಾತುಕಥೆಯಾಗಿ ಒಂದುವಾರ ಆಗಿತ್ತಷ್ಟೇ .

ರಾತ್ರಿ ಬೆಳಗಾಗುವಷ್ಟರಲ್ಲಿ ಮರದ ಮೇಲಿದ್ದ  ನಾಕೇ ನಾಕು ಕಾಯಿಗಳಲ್ಲಿ 

ಒಂದನ್ನು ಹಾರುಬೆಕ್ಕೋ ,ಮಂಗವೋ ಕೆರೆದು ಹಾಕಿತ್ತು...

ಇನ್ನೂ ಎರಡು ಕಾಯಿಗಳು ಅವುಗಳ  ಓಡಾಟದ ಆರ್ಭಟಕ್ಕೆ ಸಿಲುಕಿ ನೆಲಕ್ಕೆ ಬಿದ್ದಿದ್ದವು...

ತಗೊಳ್ಳಿ ಬೆಳಗಿನ ಆಸರಿಗೆ ಮುಗಿಸಿ ಬಾಳೆ ಒಗೆಯಲು ಹೊಳೆಯ ಹತ್ತಿರ ಬಂದ ಕೆಂಪಮ್ಮನ್ನಿಗೆ

 ಅದು ಕಂಡದ್ದೇ ಕಂಡದ್ದು ಬಾಯಿಬಡಿದುಕೊಳ್ಳಲು ಶುರುವಾಯಿತು...




"ಆಯ್ಯೋ ದ್ಯಾವಾ ...ಎಲ್ ಹಾಳಾಗ್ ಹೋದ್ಯೋ ...ಅಯ್ಯೋ ನೋಡ್ರೋ ಯಾರಾದ್ರುವಾ ..

ಮೊಮ್ಮಗಾ ಬರ್ತಾ ಹೇಳಿ ಕಂಚೀಕಾಯಿ ಇಡ್ಸಿದ್ದೆ..
.
ಈ ಮಂಗ್ಯಾ ಎಲ್ಲಾ  ನೆಲಕ್ಕೆ ಕೆಡಗಿ ಹಾಕದೆ..ಥೋ ...

ಈ ಮಂಗ್ಯಾಂಗೆ ನಮ್ಮೆನೆ ಕಂಚಿಕಾಯಿ ಮರನೇ ಬೇಗಾಗಿತ್ತಾ ?? 

ಮಂಗ್ಯಾನ್ ತಪ್ಪಲ್ಲಾ ಅದು ...ಆ ದ್ಯಾವನ್ ತಲೆಬುರಡೆ...

ಬರ್ಲಿ ಅವಾ...ಅಲ್ಲಾ ಮುದುಕಿ ಕೊನೆಕಾಲದಲ್ಲಿ ಒಂದ್ ಆಸೆ ಇಟ್ಕಳದೇ ತಪ್ಪಾ ??

 ಎಲ್ಲಾ ಹಾಳಾಗ್ ಹೋಗ್ರ್ಲಿ.."

ಬೀಪ್ ಬೀಪ್ ಬೀಪ್  ಬೀಪ್ ಬೀಪ್ ಬೀಪ್  ಬೀಪ್ ಬೀಪ್ ಬೀಪ್

  ಬೀಪ್ ಬೀಪ್ ಬೀಪ್  ಬೀಪ್ ಬೀಪ್ ಬೀಪ್






ಕೆಂಪಮ್ಮ ಬಾಯಿಬಿಟ್ಟರೆ ಅದು ಬ್ರಹ್ಮಾಂಡ ಎಂದು ಗೊತ್ತಿದ್ದರಿಂದ

 ಮತ್ತು ಹೋದರೆ ವಿನಾಕಾರಣ ತಮಗೂ ಒಗ್ಗರಣೆ ಬೀಳುವುದರಿಂದ

 ಅಲ್ಲಿಗೆ ಯಾರೂ ಹೋಗಲು ಧೈರ್ಯಮಾಡಲಿಲ್ಲ..


ಒಂದು ಸ್ವಲ್ಪ ಹೊತ್ತು ಒದರಿ ಕೊಂಡು ಒಳಹೋಗಿ ಸ್ನಾನಮಾಡಿ ಭಜನೆಮಾಡುತ್ತಾ ಕೂರುತ್ತಾರೆ

ಎಂದು ಗೊತ್ತಿದ್ದುದರಿಂದ  ಆ ಕಡೆ ದ್ಯಾವನಿಗೆ ಹೋಗದಂತೆ ಹೇಳಿ ಸುಮ್ಮನಾದರು.

ವಿಷಯ ತಿಳಿದ ದ್ಯಾವ ತನ್ನ ಮನೆಯಲ್ಲಿ



 "ಅಗಾ,ಆ ಅಮ್ಮ  ಎಂತಾರು ಹೇಳ್ ಕಳ್ಸಿರೆ ಬ್ಯಾಟಿಗ್ ಹೋಯಿನಿ ಹೇಳಿ ಹಾಂ ?


 ಮಳೆಗಾಲ ಸುರು ಆದ್ಮೇಲ್ ಕಾಂಬ" ಎಂದುಬಿಟ್ಟಿದ್ದ.

ಅಲ್ಲಿಂದ  ಕೆಂಪಮ್ಮನಿಗೆ ದಿನಾಲೂ ಆ ಶಕ್ಕರೆಕಂಚಿಕಾಯಿಯದೇ ಚಿಂತೆ..

ಬರಬರುತ್ತಾ ಬೇರೆ ಲೋಕವೇ ಇಲ್ಲಾ ಎಂಬಂತಾಗಿತ್ತು..

ಜೋರು ಗಾಳಿ ಬೀಸಿದರೂ ಒಮ್ಮೆ ಹೊರಗೆ ಬಂದು ಕಣ್ಣು ಶಣ್ಣಗೆ ಮಾಡಿ ಮರ ನೋಡಿ



 "ಅಬ್ಬ ಉಂಟು!ಮಾಣಿ ಯಾವಾಗ್ ಬತ್ನೋ ಏನೋ" 


ಎಂದು  ನಿಟ್ಟುಸಿರು ಬಿಟ್ಟು ಮತ್ತೆ  ಮನೆಯೊಳಕ್ಕೆ ಹೋಗುತ್ತಿದ್ದರು.

ಏನಾದರೂ ಕಾಗೆ ಮರದ ಮೇಲೆ ಕುಂತಿದ್ದು ಕಂಡರೆ

 "ಹುಚಾ ಹುಚಾ " ಎಂದು ಓಡಿಸಿಯೇ ಒಳಹೋಗುತ್ತಿದ್ದುದು.

ಹುಳಿಮಜ್ಜಿಗೆ ತೆಗೆದುಕೊಂಡು ಹೋಗಲು,ಗಿಣ್ಣಹಾಲು ಕೊಟ್ಟುಬರಲು,

ಸತ್ಯನಾರಾಯಣಕಥೆ ಪ್ರಸಾದ ಕಾಯಿಸಿಕೊಂಡು ತೆಗೆದುಕೊಂಡು ಹೋಗಲು ಬಂದವರು,

ಸುಮ್ಮನೆ ಬಂದವರು ಎಲ್ಲ ಹೆಂಗಸರ ಹತ್ತಿರವೂ ಬರೀ ಮಾಣಿ ಮತ್ತು ಶಕ್ಕರಗಂಚಿ ಕಾಯಿದೇ ಕಥೆ.




"ಅವಾ ಬಂದಾಗ ಹೇಳಿ ಕಳಿಸ್ತೆ ಹಾಂ ?

 ನಂಗ್ ಕೈ ಸೋತು ಹೋಗ್ತದೆ,ಶಿಪ್ಪೆ ಬಿಡಿಸಿ ಕೊಟ್ಟು ಹೋಗ್ಬೇಕು" 


ಎಂದು ಭರವಸೆ ತೆಗೆದುಕೊಂಡೇ ಕಳಿಸುತ್ತಿದ್ದರು.

ಊರಿನ ಹಾಯಿಸ್ಕೂಲು ಮಕ್ಕಳಿಬ್ಬರಿಗೆ ಆ ಕಾಯಿಯ ಮೇಲೆ ಕಣ್ಣಿತ್ತಾದರೂ

 ಆಮೇಲೆ ಆ ಕೆಂಪಮ್ಮನ ಬಾಯಿಗೆ ಸಿಕ್ಕು ಮನೆಯಲ್ಲಿ ಬಾರುಕೋಲುಪೆಟ್ಟು ತಿನ್ನುವ ಪಚೀತಿ ಅವರಿಗೆ ಬೇಕಿರಲಿಲ್ಲ

.ಒಮ್ಮೆ  ಅದೇ ಗ್ಯಾಂಗಿನ ಹುಡುಗನೊಬ್ಬ ಯಾವುದೋ ರಿಬ್ಬನ್ನಿನ ಹುಡುಗಿಯ ಕನಸುಕಾಣುತ್ತಾ

 ಅವನಿಗೆ ತಿಳಿಯದಂತೆ ಶಕ್ಕರಕಂಚಿ ಮರವನ್ನು ನೋಡುತ್ತಿದ್ದನಾದರೂ 

ಅದನ್ನು ಕಂಡ ಕೆಂಪಮ್ಮ ,



"ಎಯ್ ತಮಾ, ಹಂಗೆಲ್ಲಾ ಕಣ್ಣು ಹಾಕುಕಿಲ್ಲ ಹಾಂ ?" 

ಎಂದು ಬಾಯಿಜೋರು ಮಾಡಿ ಹೇಳಿದ್ದರು.

ಹೀಗೇ ಸುಮಾರು ಒಂದು ವಾರದ ಕಳೆದಮೇಲೆ ಒಂದು ದಿನ ಹಾಲುಹಾಕಲು ಬಂದವ


 "ಅಲ್ರೋ,ಅದೆ ಬೆಳಿಗ್ಗೆ ಮುಂಚೆ ಅಚ್ಚೆಬದಿಗೆ ರಿಕ್ಷಾ ಬಂದಂಗ್ ಆತು.

ಯಾರೋ ನೆಂಟರು ಬಂದಿದ್ರು ಕಾಣ್ತದೆ., "

 ಅಂದಿದ್ದನ್ನು ಕೇಳಿ

 "ಏಯ್ ಅದ್ ನಮ್ಮನೆ ಮಾಣ್ಯೇ ಇರ್ಲಿಕ್ ಸಾಕೋ..ಬೆಂಗ್ಳೂರಲ್ ಇರವಾಂ..

ಯುಗಾದಿ ಮುಗ್ದು ೧೫ ದಿನಕ್ ಬರ್ತೆ ಹೇಳಿದ್ದ" 


ಎಂದು ಹೇಳಿ ಬಾಗಿಲಿನ ಮೀಡ ಹಾಕಿದರಾದರೂ ಅದ್ಯಾಕೋ ಶಕ್ಕರಗಂಚಿ ನೆನಪಾಗಿ

 ಮತ್ತೆ ಮರನೋಡಿ "ಉಂಟು" ಎಂದು ಹೇಳಿಕೊಂಡು ಒಳಹೋದರು.

ಮಧ್ಯಾನ್ಹ ನೀರು ಸೇದಿಕೊಂಡು ಹೋಗಲು ಬಂದ ದ್ಯಾವನ ಹೆಂಡತಿಗೆ 



"ಏಯ್ ಮಾರಾಯ್ತಿ ಆ ದ್ಯಾವಂಗೆ ಹನಿ ಮನೆಬದಿಗೆ ಇರ್ಲಿಕ್ ಹೇಳು..

.ಮೊಮ್ಮಗ ಬಂದಾನೆ,ಅವಾ ನಮ್ಮನೆಗ್ ಬರೂ ದಿನ ಹೇಳ್ ಕಳಿಸ್ತೆ...

ಮೂರ್ನಾಕ್ ದಿನ ಬಿಟ್ ಬರ್ತ್ನೇನ.. ಅಜ್ಜನ ಮನೆಗ್ ಹೋಗಿರ್ಲಿಕ್ ಸಾಕು ಈಗ..

.ಹಾಂ  ಶನಿವಾರ ಬೆಳ್ಗೆ ಬಂದು ಆ ಶಕ್ಕರಗಂಚಿ ಕಾಯಿ ಇಳಿಸಿಕೊಡ್ಲಿಕ್ ಅದೆ...

ಹಂಗೆ ನೀನು ಬಾ ...ಚೂರ್ ಅದ್ರದ್ ಶಿಪ್ಪೆ ಬಿಡಿಸಿಕೊಟ್ಟು ಹೋಗು..

.ಅವಾ ಯಾವಾಗ್ ಬರ್ತ್ನೇನ" ಎಂದು ಹೇಳಿದರು ,



ಆದರೆ  ಆಕೆ ದ್ಯಾವ ಊರಲ್ಲಿ ಇಲ್ಲ ಅನ್ನುವುದೋ ಇನ್ನೇನಾದರೂ ಹೇಳುವುದೋ 

 ಗೊತ್ತಾಗದೆ ಸುಮ್ಮನೆ ಹಗ್ಗ ಜಗ್ಗುವುದನ್ನು ಮುಂದುವರೆಸಿದಳು.



"ಈ ಹೆಂಗ್ಸಿಗ್ ಈಗ್ಲೆ ಕಿವಿ ಮಂದಾಗ್ ಹೋಗದೆ...ಕೆಪ್ಪ ಸ್ವಾಡ...ಏಯ್  ಕೇಳ್ತನೇ ??" 

ಎಂದು ಜೋರಾಗಿ ಇನ್ನೊಮ್ಮೆ ಹೇಳಿದಾಗ ಆಕೆ  "ಹಾಂ ಅಡ್ಡಿಲ್ರ.." 

ಎಂದು ಟೊಂಕಕ್ಕೆ ಕೊಡ ಇಟ್ಟುಕೊಂಡು ನಡೆದುಹೋದಳು.


                                                                 ****
ಅದಾದ ಮೂರ್ನಾಕು ದಿನದ ಮೇಲೆ ಸಂಜೆ ೭:೩೦ರ ಸುಮಾರು.

ವಾಡಿಕೆಯಂತೆ ಮಲೆನಾಡಿನಲ್ಲಿ ಕರೆಂಟು ಹೋಗಿತ್ತು.

ಸಾಯಂಕಾಲ ಬಿದ್ದ ಮಳೆಯ ನಂತರವೂ ಗುಡುಗು-ಮಿಂಚು ಸಣ್ಣಗೆ ಬಂದುಹೋಗುತ್ತಿತ್ತು.

ಕೆಂಪಮ್ಮನವರ ಮನೆ ಬಾಗಿಲು ತಟ್ಟಿದ ಸದ್ದಾಯಿತು. 

ಒಪ್ಪತ್ತು ಮಾಡುವುದಕ್ಕೆಂದು ಬಾಳೆಗಿಡದ ಎಲೆಯ ಮೇಲೆ ರೊಟ್ಟಿ ಹಾಕುತ್ತಿದ್ದ ಕೆಂಪಮ್ಮ 

ಬಂಡಿ ಆರಿಸಿ ಬಾಗಿಲೆಡೆಗೆ ಚುಮಣಿ ದೀಪ ಹಿಡಿದು ಬಂದರು ..



"ಯಾರ್ರಾ " ಎಂದು ಕೇಳುವುದಕ್ಕಿಂತ ಮೊದಲೇ 

ಬಳೆಗಳು ಮತ್ತು ಒಳಬಾಗಿಲ ಮೀಡತೆಗೆದ ಸದ್ದಾಗಿ  ಆಕಡೆ ಇಂದ


 "ಅಮ್ಮಾ ,ನಾನೇ !" 

ಎಂಬ ಕೂಗು ಬಂದಿತು.

"ಅಬ್ಬಾ ಮೊಮ್ಮಗನೇ" ಎಂಬ ಖುಷಿಯಿಂದ

 "ತಮ್ಮನನಾ ?" ಎಂದು ಕೇಳಲು

."yes...ಹೌದು.. ಬಾಗ್ಲು ತೆಗಿರಿ" ಎಂದು ಮೊಮ್ಮಗ ಉತ್ತರಿಸಿದ.


ಬಗ್ಗಿಯೇ ನಡೆದುಕೊಂಡು ಬಂದಿದ್ದ ಅಮ್ಮ ಬೆನ್ನು ನೆಟ್ಟಗೆ ಮಾಡಿ ಬಾಗಿಲಿನ ಕಳ್ಳಮೀಡವನ್ನೂ ತೆಗೆದು 

ಅಂತೂ ಮೊಮ್ಮಗನ ಮುಖನೋಡಲು ಕಾದರು.
ಆಶ್ಚರ್ಯ! 

ಎರಡು ಆಕೃತಿಗಳು ಕಂಡವು.

ಹಾಗೆಯೇ ಅವರಡೂ ಒಳಬಂದಮೇಲೆ ಬಾಗಿಲು ಮುಚ್ಚಿ

 "ತಮಾ ಬಟಾರಕ್ಕೆ ಕಾಲು ಒರೆಸಿಕ್ಯಾ"

ಎಂದಾಗ "ಎಯ್ ಇರ್ಲಿ No problem ಅಜ್ಜಿ" ಎಂದ.




ಇದೇನಿದು "ಅಜ್ಜಿ ??"  ಎಂದು ಒಮ್ಮೆ ನೋಡಿದರಾದರೂ

 ಪಕ್ಕದಲ್ಲಿ ಯಾರೋ ಇರುವುದನ್ನು ನೋಡಿ ಸುಮ್ಮನಾದರು.

ಮೊದಲೇ ಚುಮಣಿ ದೀಪದಲ್ಲಿ ನೋಡುತ್ತಿರುವುದರಿಂದ

 ಮತ್ತು ವಯಸ್ಸಿನ ಕಾರಣದಿಂದ ಚೂರು ಕಣ್ಣು ಮಸುಕಾಗಿದ್ದರಿಂದ 

ಆ ಆಕೃತಿ ಗಂಡೋ ಹೆಣ್ಣೋ ಪಕ್ಕಾ ಗೊತ್ತಾಗಲಿಲ್ಲ.




ನಿಲುವು ,ದೇಹದಾಕೃತಿಯಿಂದ ಹೆಣ್ಣು ಅನಿಸಿದರೂ ಪ್ಯಾಂಟು ಶರಟು ಟೊಪ್ಪಿಥರ

 ಎನೋ ತಲೆಗೆ ಹಾಕಿಕೊಂಡಿದ್ದು ನೋಡಿ ಚೂರು ಅನುಮಾನವಾಯಿತು..

"ಯಾರಾ ತಮಾ ಇದು ??" ಎಂದು ಕೇಳಬೇಕು ಅನ್ನಿಸುವಷ್ಟರಲ್ಲೇ


 "ಅಜ್ಜಿ ,this is akshi,my colleague  ಯಾಂಡ್ friend  " ಎಂದ.




ಆ ಕೆಂಪಮ್ಮ ಮತ್ತೊಮ್ಮೆ 

"ಆಂ ?" 

ಎಂದದ್ದು ನೋಡಿ 

"ನನ್ ಜೊತೆ ಕೆಲಸಾ ಮಾಡವ್ರು ಆಫೀಸಲ್ಲಿ ...ಲೋಲಾಕ್ಷಿ ಅಂತಾ" ಎಂದ.

ಅದಕ್ಕೆ ಪ್ರತಿಯಾಗಿ

 "ಹಾಯ್....ಅ ನಮಸ್ತೆ ಆಂಟಿ" 

ಎನ್ನುವ ಶಬ್ಧವೂ ಬರಲು  ಕೆಂಪಮ್ಮ ಮತ್ತೊಮ್ಮೆ ಬೆನ್ನು ನೆಟ್ಟಗೆ ಮಾಡಿ ಚುಮಣಿಯನ್ನು

 ಎತ್ತಿಹಿಡಿದು ಆ ಆಗಂತುಕ ಹೆಂಗಸಿನ ಮುಖನೋಡಿದರು. 

ಈ ಬಿಚ್ಚುಗೂದಲಿನ ಹೆಂಗಸು "ಯಾರು ಏನು ಎತ್ತ ?" ಎಲ್ಲಾ ಕೇಳಬೇಕು ಅನ್ನಿಸಿದರೂ

 ಏನೋ ಸರಿ ಎನ್ನಿಸದೇ

 "ಬನ್ನಿ ಒಳಗೆ ...ನಡಿರಿ ಬಚ್ಚಲಲ್ಲಿ ಬಿಸಿನೀರಿದ್ದು ..ಕಾಲು ತೊಳಕಳಿ," 

ಎಂದು ಮುಂದುವರೆದರು...

ಅಷ್ಟರಲ್ಲೇ ಹಿಂದುಗಡೆ ಇಂದ

 "No..Ok Leave...ಅಮ್ಮಾ  ನಾವ್ ಇಲ್ಲಿ  ಸುಮ್ನೆ ಒಂದು ವಿಸಿಟ್ ಗೆ ಅಂತಾ ಬಂದ್ವಿ...

ವಿ ಹಾವ್ ಟು  ಲಿವ್ ದಿಸ್ ನೈಟ್" ಎಂದ...





ಕೆಂಪಮ್ಮ ತಿರುಗಿ

 "ಆಂ ?" 
ಎನ್ನಲು "ಯಂಗ ಇಲ್ಲಿ ಉಳಕಂಬಲೆ ಬಂಜ್ವಿಲ್ಲೆ,ರಾತ್ರೆ ಬಸ್ಸಿಗೆ ಹೋಪವ್ವು" 

ಎಂದನಾದರೂ ಪಕ್ಕದಲ್ಲಿದ್ದವಳ ಮುಖನೋಡಿ



 "ರಾತ್ರಿ ಬಸ್ಸಿಗೆ ಹೋಗ್ಬೇಕು ವಾಪಸ್ಸು ...

ರಿಕ್ಷಾ ಬರತ್ತೆ ಇನ್ನೇನು .

.ಸುಮ್ನೆ ನಿಮ್ಮನ್ನಾ ಮಾತಾಡ್ಸ್ಕೊಂಡ್ ಹೋಗಣಾ ಅಂತಾ ಬಂದ್ವಿ " ಎಂದ. 




"ಇದೆಂತಾ ಮಾಣಿದು ಪ್ಯಾಟೆ ಭಾಷೇ!ಎಂತಾ ಅತೋ?"

 ಎಂದು ಕೇಳಬೇಕು ಎಂದುಕೊಂಡರಾದರೂ 

"ಆ ಹೆಂಗಸಿಗೆ  ಅರ್ಥ ಆಗ್ಲಿ ಹೇಳಿ ಹಿಂಗೆ ಮಾತಾಡ್ತಾ ಇದ್ದಾ" ಎಂದುಕೊಂಡರು .



 "ಅಂದ್ರೂ ಮನೆಗ್ ಬಂದ್ಮೇಲ್ ಮನೆಯವ್ರ ಹಂಗೆ ಇರವಪಾ ,ಇದೆಂತಾ ಮಳ್ಳು" ಅನ್ನಿಸಲಾಗಿ ,

"ಇರ್ಲಿ ತಮಾ... ಬನ್ನಿ ಕುತ್ಕಳಿ " 

ಎಂದು ಕಂಬಳಿ ಹಾಸಿದರು.



ಒಳಗೊಳಗೆ ಅದೇನೋ ಸಿಟ್ಟು ಬರುತಿದ್ದಾದರೂ ತಮ್ಮ ಅನುಭವ ಬಲದಿಂದ ಅದನ್ನು ತಡೆದುಕೊಂಡರು..

 "ಎಯ್ ಇರ್ಲಿ ಇರ್ಲಿ ತೊಂದ್ರೆ ಇಲ್ಲ " ಎಂದು ಆತ ಹೇಳಿದ್ದನ್ನು ವಾಡಿಕೆಯ

 "ಬಿಡಿಯಾ" ಎಂದು ಪರಿಗಣಿಸಿದ ಕೆಂಪಮ್ಮ ಕೂರುವಂತೆ ಒತ್ತಾಯ ಮಾಡಿದರು.

 ಅವನು  ತನ್ನ ಜೊತೆಯಲ್ಲಿದ್ದವಳಿಗೆ  

"ಏಯ್ ಚುಚ್ಚತ್ತೆ ಅದು ,ಕೂರಕ್ ಎಲ್ಲಾ ಹೋಗ್ಬೇಡ" 


ಎಂದದ್ದು ಕೇಳಿಸಿತಲ್ಲದೇ ,ಅಲ್ಲೇ ಇದ್ದ ಕಿಟಕಿಯ ಕಟ್ಟೆಗೆ ಒರಗಿ ಕೂತು ಅವರು


 "ಹಾಂ ಇಲ್ಲೆ ತೊಂದ್ರೆ ಇಲ್ಲ...ನೀವು ಏನು ಮಾಡಕ್ ಹೋಗ್ಬೇಡಿ

..ಅಲ್ಲೇ ಮಣೆ ಮೇಲೆ ಕೂತ್ಕೋಳಿ ಕೈಮುಗಿದು ಬಾ ಅಂದ್ಲು ಆಯಿ ಅದ್ಕೆ ಬಂದೆ...ಪ್ಲೀಸ್" 

ಎಂದದ್ದೂ ಆಯಿತು...





"ಈ ಮಾಣಿದು ಅತೀ ಅತು" ಎಂದುಕೊಳ್ಳುತ್ತಾ 

ಅದನ್ನು ತೋರಿಸಗೊಡದೇ

 "ತಮಾ ಅಪರೂಪಕ್ಕೆ ಬಂಜೆ...ಇನ್ನು ಬರದು ಯಾವಗ್ಲೋ ..

.ಅಲ್ಲಿತನಕಾ ಈ ಮುದುಕು ಇರ್ತೋ ಇಲ್ಯೋ..

ಬರದ್ ಬಂಜೆ ಎರಡ್ ತುತ್ತು ಅನ್ನ ಉಂಡು ಹೋಗು...

ಹತ್ತೇ ನಿಮಿಷ ಅಡುಗೆ ಮಾಡಿಬಿಡ್ತೆ " ಅಂದರು.




"ನೋ ನೋ ...ಸಾರಿ..ಟೈಮಿಲ್ಲ ಅದ್ಕೆಲ್ಲಾ...

ಮತ್ತೆ ಜರ್ನಿ ಮಾಡದಲ್ವಾ ಏನು ತಿನ್ನೋಹಂಗಿಲ್ಲ ಜಾಸ್ತಿ.

ಅಲ್ಲಿ ಕೂತ್ಕೋಳಿ ನೀವು" ಎಂದು ಎದ್ದು ಬಂದೇ ಬಿಟ್ಟನು...


ಅಬ್ಬಾ ಹತ್ತಿರಬಂದಿದ್ದು ಖುಷಿ ಆಗಿ 


"ತಮಾ ಆತು..ಚೂರು ಆಸ್ರಿಗೆ ಆದ್ರೂ ಕುಡಿರಿ..ನೋಡು ರೊಟ್ಟಿ ಮಾಡಿದ್ದೇ ಇದ್ದು...

ಒಂದೊಂದೇ ರೊಟ್ಟಿ ತಿಂದು ಬಿಸಿನೀರು ಕುಡಿರಿ.." ಎಂದು ಹೇಳಿದರು. 

"ಅಯ್ಯೋ ನಿಮಗೆಲ್ಲಾ ಯಾಕ್ ತೊಂದರೆ ?ಬೇಡ್ ಬೇಡ...

ಚೂರು ಅಲ್ಲಿ ಹಂಗೆ ಕೂತು ಬಿಡಿ ನಮಸ್ಕಾರ ಮಾಡಿ ಹೊರಡ್ತೀವಿ" 

ಎಂದನು...ಕೆಂಪಮ್ಮನಿಗೆ ಒಂಥರಾ ಬೇಜಾರಾಗಿ ಸಿಟ್ಟೂ ಬಂತು....

ಇರಲಿ ಎಂದುಕೊಂಡು 



"ಆಗ್ಲಿ ಎಲ್ಲಾ ನಿಂಗ್ ಸರಿ ಕಾಣ್ತೋ ಹಂಗೆ...ನಾಕು  ಲಾಡು ಇದ್ದು...

ಅದು ಬಾಳೆಕಾಯಿ ತಾಳಿ ಆದ್ರೂ ತಿಂದು ಹೋಗು...ಬಿಸ್ನೀರು ಮಾಡ್ತಿ" 

ಎಂದು ನೀರು ಬಿಸಿಗಿಡಲು  ಪಾತ್ರೆ ಹುಡುಕತೊಡಗಿದರು..

.ಆ ದೊಡ್ಡ ಪಾತ್ರೆ  ಸ್ವಲ್ಪ ಒಳಗೆ ಇದ್ದುದ್ದರಿಂದಲೋ

 ಕೈ ಚೂರು ನಡುಗಿದ್ದರಿಂದಲೋ 

ಅಲ್ಲಿದ್ದ ಉಳಿದ ಪಾತ್ರೆಗಳು ನೆಲಕ್ಕೆ ಬಿದ್ದವು...



ಅದು ಬಿದ್ದಂತೆ ಮಾಣಿ  ಆ ಹುಡುಗಿಯೆಡೆಗೆ ತಿರುಗಿ 

"ಸೀ ಆಯ್ ಟೋಲ್ಡ್ ಮಾಮ್ ನೋ...

ಇವ್ರಿಗ್ ವಯಸ್ಸಾದ್ರೂ ಮಾತು ಕೇಳಲ್ಲ..

ಏನಾದ್ರೂ ಮಾಡಕ್ ಹೋಗ್ತಾರೆ ಅಂತಾ" ಎಂದು ಬಿಟ್ಟ...




ಇದರಿಂದ ಕೆಂಪಮ್ಮನ ಸಿಟ್ಟು ತಾರಾಮಾರಿ ಏರಿಹೋಯಿತು...



ಅವರಿಗೆ ಅವರ ಅಡುಗೆ,ಅಡುಗೆಮನೆ,ಅತಿಥಿ ಸತ್ಕಾರದ ಮೇಲೆ ಅಪಾರ ಪ್ರೀತಿ..

ಸಾಯುವ ಹಿಂದಿನ ಕ್ಷಣವೂ ಮನೆಗೆ ಬಂದವರಿಗೆ ಅನ್ನನೀರು ಕೊಟ್ಟೇನು 

ಎನ್ನುವ ವಿಶ್ವಾಸ ಅವರದ್ದು..

ಅಡಿಗೆ ಅವರ ಆತ್ಮಗೌರವದ ಪ್ರತೀಕವೂ ಆಗಿತ್ತು... 

ನಿನ್ನೆಮೊನ್ನೆ ಮುಕುಳಿ ತೊಳೆಸಿ ಬೆಳೆಸಿದ ಮಾಣಿ

 ಹುಟ್ಟಿ ಮೂರು ಸೋಮವಾರ ಆಗುವುದರೊಳಗೆ ತನ್ನನ್ನೇ ಆಡಿಕೊಳ್ಳುವಷ್ಟು 

ದೊಡ್ಡವನಾದನೇ  ಅನ್ನಿಸಿ



"ಥೋ ಮಾಣಿಯೇ...

ಅಬ್ಬಬ್ಬಾ ಇದ ರಾಶಿ ಆಗೊತು....

ನಿನ್ ಪ್ಯಾಟೆ ರೂಡಿ ಎಲ್ಲಾ ಅಲ್ಲೆ ಇಟ್ಗಾ..

ಇಲ್ಲಿ ಅಲ್ಲಾ ..

ಮೊನ್ನೆ ಮೊನ್ನೆ ಹುಟ್ಟಿದವ ...ಯಂಗೆ ಹೇಳ್ತ್ಯಾ ?? " ಎಂದು ಜೋರಾಗಿ ಹೇಳಿಬಿಟ್ಟರು...



ತನ್ನಜ್ಜಿಯ ಸಿಟ್ಟು ಸುತ್ತಮೂರು ಹಳ್ಳಿಗೆಲ್ಲಾ ಪ್ರಸಿದ್ಧ 

ಎಂಬುದನ್ನು ಅರಿತ ಮೊಮ್ಮಗ ಮೆತ್ತಗಾಗಿ 

"ಅಲ್ಲಾ ನಾ ಹಂಗ್ ಹೇಳಿದ್ದಲ್ಲಾ...

ವಯಸ್ಸಾಯ್ತಲ್ಲಾ ನಿಂಗೆ ಸುಮ್ನೆ ಯಾಕ್ ತೊಂದ್ರೆ ಅಂದಿ ಅಷ್ಟೇ" 

ಎಂದು ಕುಕ್ಕರುಕಾಲಿನಲ್ಲಿ ಕೂತು ತಲೆತುರಿಸಿಕೊಂಡ...




"ಓಹೋಹೋ ...ಯಂಗ್ ವಯಸ್ಸಾತು ಹೇಳಲ್ ಬಂದ್ಯನೋ ದೊಡ್ಡ ಮನುಷ್ಯಾ ???

 ನಿನ್ನಲ್ದೋ ನಿನ್ ಅಪ್ಪನ್ನೂ ಬೆಳೆಸಿದ್ದು ಆನು...

ಬಾ ನಿನ್ನ ಮಕ್ಳಿಗೂ ಗಂಜಿ-ದ್ವಾಸೆ ಮಾಡಿ ಹಾಕ್ತಿ..

ನಂಗೆ ವಯಸ್ಸಾತು ಹೇಳ್ತಾ ! "

ಎಂದು ಶುರುಮಾಡಿ ಹಾಗೇಯೇ ಹಲವಾರು ಸಾಲುಗಳಿಗೆ ಮುಂದುವರೆಯಿತು....



ಅದೇನೋ ಕೆಂಪಮ್ಮನಿಗೆ ಸಿಟ್ಟು ಬಂದರೇ ಮುಂದಿದ್ದವರೇ ಕಾಣುತ್ತಿರಲಿಲ್ಲ.

.ತಮಗೆ ತಿಳಿಯದಂತೆ ಕೆಲಕ್ಷಣ ಮಾತಾಡುತ್ತಲೇ ಇರುತ್ತಿದ್ದರು.


ಮೊಮ್ಮಗ ಮಹಾಶಯ ಒಂದೈದು ನಿಮಿಷ ನೋಡಿ,

ಕೊನೆಗೆ ಅಜ್ಜಿಯ ಮಾತು ನಿಂತು ತನಗೇನೋ ಅವಮಾನವಾಯಿತು 

ಎನ್ನುವಂತೆ ಅನ್ನಿಸಲು ಶುರುವಾದಾಗ 

"ಅಮ್ಮಾ...ತಪ್ಪಾತು ಮಾರಾಯ್ತಿ ..

.ಆಂ ನಿಂಗ್ ಬೇಜಾರ್ ಮಾಡವು ಹೇಳಿ ಹಿಂಗಲ್ಲಾ ಹೇಳಿದ್ದಲ್ಲಾ...

ಹುಷಾರಾಗ್ ಇರು...ಆಂ ಹೋಗ್ ಬರ್ತಿ "

 ಎಂದು  ಕುಕ್ಕರುಗಾಲಲ್ಲೇ ಕೂತ ಕೆಂಪಮ್ಮನ ಕಾಲಿಗೆ ಕೈತಾಗಿಸಿ  ಹೊರಟು ಹೋದ.



ಒಕ್ಕೈ ನಮಸ್ಕಾರ ಮಾಡಿದ್ದೂ,

ಕೈಯ್ಯನ್ನು ಎದೆಗಿಡದೇ ತುಟಿಗೆ ತಾಗಿಸಿ

 ಅಸಹ್ಯವಾಗಿ ಪ್ಚ್ ಎಂದು ಸದ್ದು ಮಾಡಿ ಹಣೆಗೆ ಭುಜಕ್ಕೆ ತಟ್ಟಿಸಿಕೊಂಡದ್ದೂ 

ಕೆಂಪಮ್ಮನ ಗಮನಕ್ಕೆ ಬಂತಾದರೂ ಅವರು ಏನನ್ನೂ ಮಾತಾಡುವ ಸ್ಥಿತಿಯಲ್ಲಿರಲಿಲ್ಲ..
.

ಅವರಿಬ್ಬರೂ ಬಾಗಿಲ ದಾಟಿ ಹೋದರೂ 

ಏಳದ ಕೆಂಪಮ್ಮನನ್ನು ನೋಡಿ ಆ ಹುಡುಗಿ  

"ಆಂಟೀ ಡೋರ್ ಲಾಕ್ ಮಾಡ್ಕೋಳಿ" ಎಂದಳು ..

ಆ ದನಿಯಿಂದ ಬೆಚ್ಚಿಬಿದ್ದಂತಾದ ಕೆಂಪಮ್ಮ 

"ಆಹ್ ?  ಹಾಂ..." ಎಂದು ನಿಧಾನಕ್ಕೆ ಬಾಗಿಲೆಡೆಗೆ ಬಂದರು.. 

                                                                             ****
ಬೆಳಬೆಳಿಗ್ಗೆಯೇ ಹಂಚಿನ ಮೇಲೆಲ್ಲಾ ಹತ್ತಿ ದಾಂಧಲೆ ಎಬ್ಬಿಸುತ್ತಿದ್ದ 

 ಮಂಗನ ಹುಡುಕುತ್ತಾ  ಮನೆಕಡೆ ಇಂದ ಅದೇ ಗುಂಗಿನಲ್ಲಿ ಕೆಂಪಮ್ಮನ ಮನೆ ಅಂಗಳಕ್ಕೆ ಬಂದ 

ದ್ಯಾವನಿಗೆ "ದಪ್" ಎಂದು ಏನೋ ಹೊಳೆಗೆ ಬಿದ್ದ ಸದ್ದಾಯಿತು.

ಇಲ್ಲೇ ಇರ್ಬಕು ಎಂದು ಕೋವಿ ಗುರಿಹಿಡಿದವನಿಗೆ ಮರದ ಮೇಲೆ ಏನೂ ಕಾಣಿಸಲಿಲ್ಲ...



"ಎಂತಾ ಇರ್ಬಕು?"

 ಎಂದು ಹೊಳೆಗೆ ಇಣಿಕಿದಾಗ ದ್ಯಾವನಿಗೆ ಶಕ್ಕರಗಂಚಿ ಕಾಯಿ ಬಿದ್ದದ್ದು ಕಂಡಿತು..

ಥೋ ಕಥೆಯೇ...





ಎಂದು ಮತ್ತೆ ಕಂಚಿಮರ ನೋಡಿದವನಿಗೆ ಮರದ ಮೇಲೆ 

ಇನ್ಯಾವುದೂ ಕಾಯಿ ಬಾಕಿ ಇದ್ದಂತೆ ಕಾಣಿಸಲಿಲ್ಲ..

ಯಪ್ಪಾ ...





ಇದು ಆ ಅಮ್ಮನ ಕಣ್ಣಿಗೇನಾದರೂ ಬಿದ್ದರೆ ಅಷ್ಟೇ...

ಮಂಗ ಕೆಡಗಿತು ಎಂದುಕೊಂಡು ಭೂಮಿ ಆಕಾಶ ಒಂದು ಮಾಡುತ್ತಾರೆ...

ಹೆಂಗಿದ್ದರೂ ಅವರ ಮೊಮ್ಮಗ ಬಂದಿದಾನೆ ಅಂತ ಮೊನ್ನೆ ಹೆಂಡತಿ ಹೇಳಿದ ನೆನಪು..

"ನಾನೇ ಕುಯ್ದೆ,ಮಂಗ ಈ ಕಡೆ ಬಂದು ಕಾಟಕೊಡೋದ್ ಕಿಂತ್ ಮುಂಚೆ "

ಎಂದು ಹೇಳಿದರಾಯ್ತು ಎಂದೆಲ್ಲ ಯೋಚಿಸಿ ಕೆಂಪಮ್ಮನ ಮನೆ ಬಾಗಿಲ ಹತ್ತಿರ ಹೋದ....


"ಅಮ್ಮಾ ...ಓ ಅಮ್ಮಾ ...

ನಾನ್ರೋ ದ್ಯಾವ....

ಶಕ್ಕರಗಂಚಿ ಕೊಯ್ದು ತಗಂಡ್ ಬಂದೆನ್ರೋ",,

ಊಹೂಂ..


ಎಲ್ಲೋ ಬಚ್ಚಲುಮನೆ ಕಡೆ ಇರಬೇಕು....

ಅಲ್ಲೇ ಕೂತು ಕವಳಹಾಕಿ ಮತ್ತೆ ಕರೆದ...

"ಅಮ್ಮೋ ...ದ್ಯಾವ ಬಂದೀನ್ರೋ"

ಮತ್ತೆ ಉತ್ತರವಿಲ್ಲ...

ಎಂತಾ ಅಯ್ತು ?


ಬಾಗಿಲ ಹತ್ತಿರ ಹೋಗಿ ಇಣುಕುವಷ್ಟರಲ್ಲೇ ಜೋರಾಗಿ ಗಾಳಿ ಬೀಸಿತು.. 

ಬಾಗಿಲ ಬಳಿಯೇ ಕೆಂಪು ಸೀರೆ ಎಲ್ಲೋ ಹಾರಾಡಿದ ಹಾಗಾಯಿತು...

ಅಯ್ಯಯ್ಯೋ....





ದ್ಯಾವ ಎರಡು ಹೆಜ್ಜೆ ಮುಂದೆ ಹೋಗಿ ವಾಪಸ್ಸು ಜೋರಾಗಿ ಓಡಿದ...





ಅಲ್ಲೇ ಅವನ ಕೈಯಿಂದ ಕಳಚಿಬಿದ್ದ ಶಕ್ಕರಗಂಚಿ ಪೂರ್ತಿಯಾಗಿ ಮಾಗಿತ್ತು,...