ಓದಿ ಓದಿ ಹೀಗೆ ಟೈ ಹಾಕಿ
ಕುಳಿತಾಗ ಸುಮ್ಮನೆ ಹಳೆಯದ್ದನ್ನೆಲ್ಲಾ ನೆನೆದರೆ
ನೆನೆಯುವುದು ಕಣ್ಣು, ಆ ಲೆಕ್ಕದಿಂದಲ್ಲ
ಈಗಲೂ ಅರ್ಥವಾಗದ ಸಿದ್ಧಾಂತಗಳಿಂದಲ್ಲ
ಬದಲಿಗೆ ತುದಿ ಹರಿದ ಕೊನೆ ಪುಟಗಳಿಂದ
ಬಾಳ ಬಂಗಾರದ ಪುಟಗಳಿಂದ
ಏನೆಂದೂ ಅರ್ಥವಾಗದ,ಆದರೂ ನಗು ತರಿಸುವ
ನೀಲಿ-ಕಪ್ಪು ಬಣ್ಣದ ಚಿತ್ರಗಳು
ಅದರ ಕೆಳಗೆ ಸುಂದರವಾದ
ಆದರೆ ಓದಲು ಬಾರದ ಲಿಪಿಗಳು
ಇನ್ನೇನೋ ವಿಚಿತ್ರಗಳು.
ಇನ್ನು ಮೇಲುಗಡೆ ಒಂಬತ್ತೇ
ಇರುವ ಮೊಬೈಲ್ ನಂಬರ್ರು
ಇನ್ನೊಂದಕ್ಕಾಗಿ ಹುಡುಕಿ
ಐವತ್ತು ರೂಪಾಯಿ ಕಳೆದಿದ್ದೆ
ಎಂದರೆ ಯಾರೂ ನಂಬರು.
ಇನ್ನೂ ಸ್ವಲ್ಪ ಕಣ್ಣಿಟ್ಟು ನೋಡಿದರೆ
ಕಾಣುವುದು ಯಾರದೋ ಹೆಸರು
ಆ ಹೆಸರೇ ಆಗ ಉಸಿರಾಗಿತ್ತೆಂದು
ಹೇಳಲು ಈಗಿಲ್ಲ ಉಸಿರು
ಕವಿಯಾಗಿಸಿದ್ದ ಆ ತುಂಟ ಸಾಲುಗಳು
ಇಂದೇಕೆ ಬರಲಾರವು???
ಅಂದು ಹಾರುತ್ತಿದ್ದ ಬಣ್ಣದಾಸೆ ಹಕ್ಕಿಗಳು
ಇಂದೇಕೆ ಹಾರಲಾರವು???