Friday, May 25, 2012

ಮೋಡವ ಮುತ್ತಿಕ್ಕಿದೆನು(ನಾನೂ ಮುಳ್ಳಯ್ಯನ ಗಿರಿಗೆ ಹೋಗಿದ್ದೆ!)

ಮನೆಗೆ ಹೋಗಬೇಕೆಂದು ಹಟ ಹಿಡಿದು ಕೂತಿದ್ದ ನನ್ನೊಳಗಿನ ಪುಟ್ಟ  ಮಾಣಿಗೆ ಪರೀಕ್ಷೆಯ ಗುಮ್ಮವನ್ನು       ತೋರಿಸುತ್ತಾ  ಬೇಜಾರಾಗಿ , ಸಂಜೆ ಹಾಗೆ  ಬುಕ್ಕಿನ ಮೇಲಿಂದ ಫೇಸನ್ನು ತೆಗೆದು ಫೇಸ್ ಬುಕ್ ನ ಕಡೆಗೆ ತಿರುಗಿಸಿದ್ದೆ.ಅಷ್ಟರಲ್ಲಿ ಸುಮನಕ್ಕನ ಕರೆ ಬಂತು.ಸರಿ ಇನ್ನೇನು, ನಿಯತ್ತಾಗಿ ರೂಮು ಬಿಟ್ಟು ಸಿಗ್ನಲ್ಲು ಸರಿ ಸಿಗುವ ಮನೆಯ ಬಾಗಿಲಿಗೆ ಹೋಗಿ ನಿಂತೆ.ಆ ಕಡೆಯಿಂದ 
"ಲೋ ನಾಳೆ ಏನ್ ಪ್ಲಾನ್ಸ್ ನಿಂದು ?" 
ಅಂದಕೂಡಲೆ ತಲೆಯೊಳಗಿನ ಗೂಗಲ್ "ಮನೆಗೆ ಕರಿತಾಳೋ ಅಥವಾ ಇನ್ನೇನೋ ಇರಬೇಕು "ಎಂದು ಸಲಹೆಗಳನ್ನು ಕೊಟ್ಟಿತು. ಏನಾದರಾಗಲಿ ಎಂದುಕೊಂಡು ,

"ಎನಿಲ್ಲಾ ಅಕಾ ,ನಾಳೆ  ನಂದ್ ಎನೂ ಪ್ರೋಗ್ರಮ್ ಇಲ್ಲಾ "ಎಂದೆ.

ಅದಾಗ  "ನಾಳೆ ಮುಳ್ಳಯನ ಗಿರಿಗೆ ಹೋಗಣಾ ಬರ್ತಿಯಾ  ?" ಅಂದ್ಲು.
ಬಾಯಿಯ ತುದಿಯಲ್ಲೆ ಬರಲ್ಲಾ ಕಣೇ ಓದ್ಬೇಕು ಅನ್ನೋ ಉತ್ತರ ಇದ್ದರೂ,ಕುತೂಹಲಕ್ಕೋ ಅಥವಾ ನನ್ನೊಳಗಿನ ಗೊಂದಲಗಳನ್ನು ಕಡಿಮೆಮಾಡಿಕೊಳ್ಳಲಿಕ್ಕೋ ಗೊತ್ತಿಲ್ಲಾ, 

"ಯಾರ್ಯಾರು ಹೋಗ್ತಿರದು ?"ಅಂದೆ.

"ನಾನು ಸುಮಂತ್ ಶ್ಸ್ಫ಼್ಗ್ಜಿಗ್ದ್ರ್ಸುಇ ಇಹ್ಧಿದ್ಫ಼್ ದ್ಜ್ಕ್ಫ಼್ದ್ಶ್ಕ್ ಜ್ಕ್ಸ್ದ್ಫ಼್ಹ್ಜ್ಕ್ ಎವಿಒಎಉರಿಒ ಇಒಎರು"(ಅದು ಎನು ಅಂತಾ ಕೇಳ್ಸ್ಲಿಲ್ಲಾ ಆದ್ರೆ ಸುಮಂತ್ ಅನ್ನೋ ಎಂಬ ಹೆಸರು ಸಾಕಿತ್ತು)

ನಾನು "ಹಮ್ ಮ್ ಸರಿ "ಎಂದೆ.
ಆಕೆ "ಬರ್ತಿದಿಯಾ ತಾನೆ?ಇಲ್ಲಾಂದ್ರೆ ಹೊಡ್ಸ್ಕೋತಿಯಾ  "ಎಂದು ಅಕ್ಕನ ಪವರ್ ನೆನಪಿಸಿದಳು.

ನಾನು ದೊಡ್ಡ ರಾಜಕಾರಣಿಯಂತೆ "ನೋಡಣಾ ಕಣೆ,ಸುಮಂತ್ ಗೆ ಫೋನ್ ಮಾಡಿ ಕೇಳಿ ಆಮೇಲ್ ಹೇಳ್ತಿನಿ "ಎಂದು ನನ್ನ ಸಂಚಾರಿ ದೂರವಾಣಿಯ ಕೆಂಪುಗುಂಡಿಯನ್ನು ಅದುಮಿದೆ.

ಸರಿ..ಹೋಗ್ಲೋ ಬೇಡ್ವೋ ಎಂಬ ಯೋಚನೆಯ ಸುಳಿಯಲ್ಲಿ ಸಿಕ್ಕು ಹುಟ್ಟು ಹಾಕುತ್ತಲೇ,ಸುಮಂತನಿಗೆ ರಿಂಗಣಿಸಿದೆ
 "ಏಯ್ ನಾಳೆ ಹೋಪದನಾ,ಎಷ್ಟ್ ಹೊತ್ತಿಗೆ ?' ಎಂದೆ.

ಅವನಿಂದ ಬೆಳಿಗ್ಗೆ ೫.೩೦ಕ್ಕೆ ನಮ್ಮ ಕಾಲೇಜಿನ ಹತ್ತಿರದಿಂದ ಹೊರಡುವುದೆಂಬ ಮಾಹಿತಿ ಬಂತು.ಈಗ ಹೋಗಲೋ ಬಿಡಲೋ ಎಂದು ಕೇಳಲೆಂದು ಅಮ್ಮನಿಗೆ ಪೋನಾಯಿಸಲೆಂದು ಹೊರಟಾಗಲೇ ಅಮ್ಮ ಬೆಂಗಳೂರಿಗೆ ಹೊರಟಿರುವುದು ನೆನಪಾಯಿತು.ಸರಿ ಇನ್ನೇನು,ಚಿಕ್ಕಮಗಳೂರಿನಲ್ಲಿದ್ದು ೩ ವರ್ಷ ಮುಗಿಯುತ್ತಾ ಬಂದರೂ ಇನ್ನೂ ಗಿರಿಗೆ ಹೋಗಿಲ್ಲಾ ಅಂದ್ರೆ ನಾಚಿಕೆಗೇಡು ಅಂದು ಕೊಂಡು,ಉಳಿದೆಲ್ಲ ಯೋಚನೆಗಳನ್ನು ಇಗ್ನೋರ್ ಮಾಡಿ ,

ಸುಮನ್ ಗೆ "ಹೂಂ,ಬರ್ತಿನಿ" ಎಂದು ಸಂದೇಶಿಸಿದೆ.

                                                     *****
ಬೆಳಿಗ್ಗೆ ಆರುಗಂಟೆಗೆ ಏಳಲೆಂದೇ ಮೂರುಸಲ ಅಲಾರಾಂ ಇಡುವ ನಾನು,ಇವತ್ತು ೪.೩೦ ಕ್ಕೆ ಒಂದು ಸಲ ಅದು ಕೂಗುತ್ತಿದ್ದಂತೆ ಎದ್ದೆ.ನನ್ನೊಳಗಿನ ಸೋಮಾರಿ
  "ಏಯ್ ಬೇಕೇನಾ ಎವೆಲ್ಲ್ಲಾ?ಸುಮ್ನೆ ಮಲ್ಕಳಲೇಯ್"   ಎಂದರೂ
ಅದೇನೋ ಉತ್ಸಾಹದಲ್ಲಿ ಹಾಸಿಗೆ ಬಿಟ್ಟೆದ್ದೆ.ಅಲ್ಲಿಂದ ಅಂಕಲ್ ಕೊಟ್ಟ ಬಿಸಿಬಿಸಿ ಕಾಫಿ ಕುಡಿದು,ಸುಮಂತನ ಚಾಳ ತಲುಪುವಷ್ಟರಲ್ಲಿ ಸಮಯ ೫.೧೫.ಅಲ್ಲಿಂದ ಕಾಲೇಜು ತನಕ ನಮ್ಮ ಹಳೆಯ ಹೀರೋ ಜೆಟ್,ಹರ್ಕುಲೆಸ್ ಸೈಕಲ್ ಗಳನ್ನು ನೆನೆಸಿಕೊಂದು ನಡೆದೆವು.ಅಲ್ಲಿಂದ ಉಳಿದವರೆಲ್ಲಾ ಬಂದು ದಾರಿ ಮಧ್ಯ ಎಂದಿವ್ವರನ್ನು ಹತ್ತಿಸಿಕೊಂಡು ಚಿಕ್ಕಮಗಳೂರು ಬಿಡುವಷ್ಟರಲ್ಲಿ ಆಕಾಶವಾಣಿಯಲ್ಲಿ "ವಂದೇ ಮಾತರಂ"ಬರುತ್ತಿದ್ದ ಸಮಯ(೬ ಗಂಟೆ).ಆ ವಾಹನದಲ್ಲಿದ್ದು ನವಗ್ರಹಗಳು! ಜೊತೆಗೊಬ್ಬ ಸಾರಥ್ಜಿ.
ನಾನು ಅಂದರೆ ಈಗ ಕೆಲಸವಿಲ್ಲದೆ ಇದನ್ನು ಬರೆಯುತ್ತಿರುವ ಚಿನ್ಮಯ್,ಸುಮಂತ್,ಸುಮನಕ್ಕಾ,ಸೌಮ್ಯಾ,ಅರ್ಜುನ್,ವರ್ಷಾ,ವಸಂತ್,ಶ್ರತಿ,ನಿತಿನ್ ಇಂತಿಪ್ಪ ನಮ್ಮ ತಂಡದ ಸವಾರಿ ಬೆಳಬೆಳಿಗ್ಗೆಯೇ  ಮುಳ್ಳಯ್ಯನಗಿರಿಗೆ ಹೊರಟಿತ್ತು.ನನಗೆ ಗಿರಿ ಪ್ರವಾಸ ಮೊದಲಸಲವಾದರೆ,ಕೆಲವರಿಗೆ ಎರಡು,ಮೂರು ಹೀಗೆ ಏರಿಕೆ ಕ್ರಮದಲ್ಲಿತ್ತು.ಚೂರು ಛಳಿಯಾಗುತ್ತಿದ್ದರೂ ತೋರಿಸಿಕೊಳ್ಳದೇ ,ಅವರೆಲ್ಲಾ ಮಾತಾಡುತ್ತಿದ್ದ  ಅವರ ಕ್ಲಾಸಿನ,ಬ್ರಾಂಚಿನ ಸಮಾಚಾರಗಳನ್ನು ಮಂದಸ್ಮಿತದೊಂದಿಗೆ ಕೇಳುತ್ತಿದ್ದೆ.ಸಿದ್ದಾಪುರದಿಂದ ಶಿರಸಿಗೆ ಹೋಗುವ ದಾರಿಯ ನೆನಪಿಸುತ್ತಿದ್ದ ಆ ಇಳಿಜಾರು ದರೆ,ಅದರ ಅಂಚಿನಲ್ಲೆ ಇದ್ದ ಹತ್ತು ಹಜಾರು ಮರಗಳು ,ಕಣ್ಣು ಕುಕ್ಕುತ್ತಿದ್ದ ಕಪ್ಪು ಹಸಿರು ಹೀಗೆ ದಾರಿಯ ಬದಿಯನ್ನೇ ನೋಡುತ್ತಾ ಹೊರಟವನಿಗೆ,ಮುಂದೆ ಗಿರಿಯ ಹತ್ತಿರದ ತಿರುವು ಮುರುವು ರಸ್ತೆಗಳನ್ನು ನೋಡಿ ಮುಂಬೈ -ಪುಣಾ ಮಧ್ಯ ಸಿಗುವ ಖಂಡಾಲಾಘಾಟ್ ನ ರಸ್ತೆ ನೆನಪಾಗಿದ್ದು ಸುಳ್ಳಲ್ಲ.ಆ ಇಬ್ಬನಿ ಮುಸುಕಿದ ದಾರಿಯಲಿ ಗಾಡಿಯಲಿ ಕೂತು, ಪರ್ವತವ ಹತ್ತುತ್ತಿದ್ದ ನನಗೆ ಬಿ.ಎಂ.ಶ್ರೀ ಅವರ
"ಕರುಣಾಳು ಬಾ ಬೆಳಕೆ 
ಮುಸುಕಿದೆ ಮಬ್ಬಿನಲಿ
ಕೈ ಹಿಡಿದು ನಡೆಸೆನ್ನನು"
ಸಾಲುಗಳು ನೆನಪಾದವು.
                                                           *********
 ನಮ್ಮ ವಾಹನದಿಂದ ಕಾಲು ಕೆಳಗಿಟ್ಟು ನಾಲ್ಕು ಹೆಜ್ಜೆ ನಡೆದಿರಬಹುದಷ್ಟೇ ,ಆಹಾ..ಅದೆಲ್ಲಿಯದೋ ತಂಗಾಳಿ ನನ್ನ ಮೈಗೆ ಸೋಕಿತ್ತು.ಮೈ ನಡುಗುತ್ತಿದ್ದರೂ,ಕೈ ಎತ್ತಿ,ಕಣ್ಣು ಮುಚ್ಚಿ ದೀರ್ಘವಾದ ಉಸಿರು ತೆಗೆದುಕೊಂಡಾಗ ಕಣ್ಣೆದುರು ಕಂಡ ಪದ 

"ವಾವ್ !!!".

ನನಗೆ ಗೊತ್ತಿಲ್ಲದೆಯೇ ನನ್ನೊಳಗೆ ಅದೇನೋ ಖುಷಿಯಾಗುತ್ತಿತ್ತು,ಮೈಸೂರಿನಲ್ಲಿ  ಜಿ.ಆರ್.ಎಸ್ ನ ಕ್ರತಕ ಜಲಪಾತಕ್ಕೆ ತಲೆಕೊಟ್ಟಾಗಲೂ ಅದೇತರಹದ ಅನುಭವವಾಗಿತ್ತು.ಅದನ್ನು ಮಾತಿನಲ್ಲಿ ಹೇಳಲಾರೆನು ಕ್ಷಮಿಸಿ!
ಸರಿ ಮೆಟ್ಟಿಲುಗಳನ್ನು ಹತ್ತುತ್ತಾ,ಛಾಯಾಚಿತ್ರಗಳನ್ನು ತೆಗೆದುಕೊಳ್ಳುತ್ತಾ,ಗಿರಿಯ ಮೇಲಣ ದೇವಸ್ಥಾನವನ್ನು ತಲುಪಿದೆವು.ಅಲ್ಲಿ ನೆರೆದಿದ್ದ ಸುಮಾರು ೨೦-೩೦ ಜನರನ್ನು ನೋಡಿ ಮದುವೆಯೇನಾದರೂ ಇರಬಹುದೇನೋ ಎಂದು ಅಂದುಕೊಂಡೆನಾದರೂ ನನ್ನ ಊಹೆ ತಪ್ಪಾಗಿತ್ತು.ಅದಾಗ ಅಕಾಶಾವಾಣಿಯಲ್ಲಿ ವಾರ್ತೆಬರುವ ಸಮಯ(೭.೩೫),
ಅಲ್ಲೇ ಒಂದೆರಡು ಛಾಯಾ ಚಿತ್ರಗಳನ್ನು ತೆಗೆದೆನಾದರೂ ,ಅದರ ಸಂಖ್ಯೆ ವ್ರದ್ದ್ಧಿಸಿದ್ದು ಅಲ್ಲಿಂದ ಚೂರು ಕೆಳಗಿಳಿದು ಕಲ್ಲುಗಳ ಹತ್ತಿರ ಹೋದಾಗ.
ಅಲ್ಲಿ  ಗಿರಿಯನ್ನು ಸುತ್ತುವರೆದು ಬಿಳಿಯ ಮೋಡಗಳು ಹೋಗುವ ಪರಿ ಅನನ್ಯ,ಅದ್ಭುತ,ಅಮೋಘ,ಅಪೂರ್ವ,ಅತಿಮನೋಹರ,ಅತಿಸುಂದರ!!

ಅದನ್ನು ನೋಡಿ ಒಂದೆರಡು ಸಾಲುಗಳು ಹೊಳೆದವು ಅವನ್ನೇ ಬರೆದಿದ್ದನೆ ನೋಡಿ,

ಮೇಘರಾಶಿಯ ಬಗೆದು ಎದ್ದು 
ನಿಂತಿರುವುದು ಈ ಗಿರಿಯು
ಅದಕೆ ಅಂದ ನೀಡಿದೆ ಹಸಿರು
ಮರಗಳು ಅಂಟಿಕೊಂಡ ಪರಿಯು

ಈ ಜಗವ ಮರೆಸುವುದು
ಆ ಮನಮೋಹಕ ತಂಗಾಳಿಯು
ಬಿಸಿ ಮಾಡಿ ಎಬ್ಬಿಸುವುದು ಸಂತಸವ
ಆ ಜುಮು ಜುಮು ಛಳಿಯು

ನೋಡುವ ಕಂಗಳಿಗೆ ಹಬ್ಬವು
ಈ ನಿಸರ್ಗದ ಸಿರಿಯು
ಚಿರ ಕಾಲ  ಉಳಿಯಲಿ ಆ ಸೊಬಗು ಆಶಿಸುವೆ,
ನೋಡಿ ಖುಷಿ ಪಡಲೆಂದು ಮುಂದಿನ ಮಕ್ಕಳು ಮರಿಯು
 

                                    *******
ಮುಂದೇನು ವಿಶೇಷವಿಲ್ಲ,ತಾಳ ಹಾಕುತ್ತಿದ್ದ ಹೊಟ್ಟೆಯನ್ನು ಚಪಾತಿ,ಪಲ್ಯಗಳು ತಣಿಸಿದವು.ಒಗ್ಗರಣೆ ಮಂಡಕ್ಕಿ,ಚಕ್ಕುಲಿಗಳು ದಾರಿ ಖರ್ಚಿಗಾದವು.ಸುಮಾರು ಹನ್ನೊಂದಕ್ಕೆ ವಾಪಸ್ಸಾದೆವು.ಅಲ್ಲಿಂದ ಬಂದ ಮೇಲೂ ಅದೇ ಗುಂಗಿನಲ್ಲೇ ಇದ್ದೇನೆ.

ಆ ಛಳಿ,ಬೀಸುವ ಗಾಳಿ ,ಹಸಿರನುಟ್ಟು ನಿಂತಿರುವ ಪರ್ವತರಾಶಿ 
ಇನ್ನೂ ನನ್ನ ಕಣ್ ಮುಂದಿದೆ,
ಅದರ ನೆನಪಲ್ಲೇ ಈ ಪ್ರವಾಸ ಲೇಖನದ ಥರ ಬರೆಯ ಹೊರಟ ತಲೆಹರಟೆ 
ನಿಮ್ಮ ಕಣ್ಣ  ಮುಂದಿದೆ

ನನಗೆ ಗಿರಿಯನ್ನು ತೋರಿಸಿದ ನವಗ್ರಹಗಳಿಗೆ ಧನ್ಯವಾದಗಳು.
ಈ ಲೇಖನವನ್ನು ಓದಿದ ನಿಮಗೂ ಧನ್ಯವಾದಗಳು.

ಕೊನೆಗೆ ಅಂತೂ ನಾನೀಗ ಹೇಳಬಲ್ಲೆ ,
"ನಾನೂ ಗಿರಿಗೆ ಹೋಗಿದ್ದೆ!" ಅಂತ

-ಮನದಾಳದ ಮಾತುಗಳನ್ನು ಹಂಚಿಕೊಂಡ ಸಂತಸದೊಂದಿಗೆ 
 ಇತಿ ನಿಮ್ಮನೆ ಹುಡುಗ 
ಚಿನ್ಮಯ ಭಟ್