Thursday, May 23, 2013

ಗುಡುಗುಮ್ಮ ಬಂದೆನ್ನ…

ನಮಸ್ಕಾರ ಎಲ್ರಿಗೂ...
ಸುಮಾರ್ ದಿನಾ ಅಯ್ತಲ್ವಾ ಏನೂ ಬರೀದೆ???
ಮೂರನೇ ಇಂಟರ್ನಲ್ಸು ಮುಗ್ದು ನಾಲ್ಕೈದು ದಿನವಾದ್ರೂ ಏನು ಬರ್ದಿಲ್ಲಾ ಅಂದ್ರೆ ಹೆಂಗೆ ???
ಅದ್ನಾ ಒಂದೆರಡು ನಲುಮೆಯ ಗೆಳೆಯ ಗೆಳತಿಯರು ಕೇಳಿದ್ದೂ ಆಗಿದೆ ಬಿಡಿ...ಅದು ನನ್ನ ಪುಣ್ಯ ಅಂದ್ಕೋತೀನಿ :)..

ಇದು ಇನ್ನೊಂದು ಪ್ರಯತ್ನ....
ನೋಡಿ...ಬರೆದದ್ದು ನಿಮ್ಮ ಮುಂದಿದೆ...ನನ್ನ ಲೆಕ್ಕದಲ್ಲಿ ಬರೆದದ್ದು ಮುಗಿಯಿತು ಅಂದುಕೊಂಡಿದ್ದೇನೆ...ತಪ್ಪ್ಪು -ಒಪ್ಪು ತಿಳಿಸಿ ಇದನ್ನು  ತಿದ್ದುವುದು,ಇಷ್ಟವಾದರೆ ಮೆಚ್ಚಿ ಕಮೆಂಟಿಸುವುದು,ನಿಮ್ಮ ಅನಿಸಿಕೆಯನ್ನು ಬರೆದು ಪ್ರೋತ್ಸಾಹಿಸುವುದು ನಿಮ್ಮ ಕೈಲಿದೆ..ಮಾಡ್ತೀರಾ ಅಲ್ವಾ??

ಎಂದಿನಂತೆ ಅದರ ಕೆಳಗೆ ಕೆಲ ಶಬ್ದಾರ್ಥ..ಅದರ ಕೆಳಗೆ ನನ್ನ ಕಲ್ಪನೆಗಳ ಸಾರಾಂಶ...ಪ್ರಾಯಶಃ ಅದು ನನ್ನ ಕಲ್ಪನೆಗಳನ್ನು ನಿಮ್ಮ ಮೇಲೆ ಹೇರಿದಂತಾಗುತ್ತದೆ ಅನಿಸುತ್ತದೆ ..ಇರಲಿ..ಎಲ್ಲರಿಗೂ ಓದಿ ಅರ್ಥ ತಿಳಿದುಕೊಳ್ಳಲು ಸಹಾಯವಾಗಲಿ ಎಂಬುದೊಂದೇ ನನ್ನ ಆಶಯ...ಹಾಗಾಗಿ ಮೇಲೆ ಅರ್ಥವಾಗದಿದ್ದರೆ ಕೆಳಗೆ ಕಣ್ಣಾಡಿಸಿ..ನಿಮ್ಮ ಅನಿಸಿಕೆಯನ್ನೂ,ನಾ ಗೀಚಿದ್ದನ್ನೂ ಒಮ್ಮೆ ಹೋಲಿಸಿ,ಕಮೆಂಟಿಸಿ...
ಮರೆಯದೇ ಅನಿಸಿಕೆ ತಿಳಿಸಿ ಪ್ರೋತ್ಸಾಹಿಸಿ...





ಗುಡುಗುಮ್ಮ ಬಂದೆನ್ನ ಭೂಗಡಲ ನಡುಗಿಸಿರೆ
ಉಡುಗಿತು ಎನ್ನೆದೆಯ ಉಸಿರ ನಡಿಗೆ,
ಅಡಗಿಹೆನು ಹೆದರಿಕೆಯ ಕರಿ ಗೂಡಿನೊಳಗೆ…

ಕರಿಮೋಡದಾ ಝಳಕೆ ಕನಸುಗಳು ಸುಡುತಲಿರೆ
ಹುಡುಗು ಬುದ್ಧಿಯ ಗುಡಿಸಲಲ್ಲಿಂದು ಮೌನದಡುಗೆ
ಬರಸಿಡಿಲ ಘೀಳಿಗೆ ಮಾನಸವು ಮುಡುಗುತಿರೆ,
ಕುಡಿಕೆ ಸದ್ದಿನ ಕಡಗೋಲಿಗಿಂದು ಖಾಲಿಗಡಿಗೆ

ದರಕೊಡೆವ ಗಾಳಿಯು ಮರಿಹೂವ ಬರಗುತಿರೆ
ಕಡಗಲದಳ ಮರೆಯಿತದುವೆ ಬಿದಿರ ಬಡಿಗೆ
ಮರಕೆಡುವೊ ಮಳೆಗೆ ಬರಿಗಾಲು ಜಾರುತಿರೆ
ಕಡಿಕೆಮಣೆಯಿನ್ನು ಹಳೆಮನೆಯ ಮಾಡಿನಡಿಗೆ

ಕೊರಗುಡುವ ಮಳೆಜಿರಲೆ ಮರವನು ಹೀರುತಿರೆ
ಅಡಿಕೆ ಶಿದ್ದಕ್ಕಿಯಿಲ್ಲ ಕೊಡಲು ಬೇಡುಪಡಿಗೆ
ಸುರಿಕೊಡೆಯ ಬೀಳಲಾ ಜವನಿಕೆಯು ಕರಗುತಿರೆ
ಹಿಡಿಕೆ ಇದ್ದಿಲ ಬಲವು ಸುಡುವ ಹಾದಿಕಡೆಗೆ


ಗುಡುಗುಮ್ಮ ಬಂದೆನ್ನ ಭೂಗಡಲ ನಡುಗಿಸಿರೆ…

-ಚಿನ್ಮಯ ಭಟ್ಟ.

ಇನ್ನು  ನಾ ತಿಳಿದಂತೆ+ಬಳಸಿದಂತೆ ಶಬ್ಧಾರ್ಥ ..ತಪ್ಪಿದ್ದರೆ ದಯವಿಟ್ಟು ತಿಳಿಸಿ…ಕಲಿಯಲು ಸಹಕರಿಸಿ..
( ಶಬ್ದಾರ್ಥ :
ಮಾನಸ-ಹಿಮಾಲಯದ ಒಂದು ಸರೋವರದ ಹೆಸರೂ ಇದೆ..ನಾ ಬಳಸಿದ್ದು ಮನಸ್ಸು ಎಂಬರ್ಥದಲ್ಲಿ..
ಕುಡಿಕೆ-ನಮ್ಮ ಕಡೆ  ಒಂದು ಬಗೆಯ ಪಟಾಕಿಗೆ ಈ ರೀತಿಯ ಹೆಸರಿದೆ ಆ ಅರ್ಥದಲ್ಲಿ ಬಳಸಿರುವುದು.ಅದಕ್ಕೆ ಹೂವಿನ ಕುಂಡ                  flower pot ಅಂತಾನೂ ಕರಿತಾರಂತೆ ...
ಕಡಗೋಲು-ಮಜ್ಜಿಗೆ ಕಡೆಯಲು ಬಳಸುವ ಕೋಲು,ದರಕು-ಒಣಗಿದ ಎಲೆ,ಮರಿಹೂವು-ಮೊಗ್ಗು ಎನ್ನುವ ಅರ್ಥದಲ್ಲಿ,
ಕಡಗಲದಳ-ಕಡಗಲ ಹೂವಿನ ದಳ,ನಮ್ಮನೆಯಲ್ಲಿ ಈ  ಹೂವು ಸುಮಾರು ಒಂದೂವರೆ ಅಡಿ ಎತ್ತರದ ಮರದಲ್ಲಿ ಬಿಡುತ್ತಿತ್ತು.ಸ್ವಲ್ಪ ಗಟ್ಟಿ ಅದರ ದಳಗಳು.
ಕಡಿಕೆ ಮಣೆ-ಕೊನೆಗೌಡರು ಮರದಲ್ಲಿ ಕುಳಿತುಕೊಳ್ಳಲು ಮಾಡುಕೊಳ್ಳುವ ಒಂದು ಬಗೆ ಮಣೆ.
ಶಿದ್ದಕ್ಕಿ-ಶಿದ್ದೆಯಷ್ಟು ಅಕ್ಕಿ,
ಬೇಡುಪಡಿ-ಬೇಡುವವರಿಗೆ ಕೊಡುವ ಭಿಕ್ಷೆ,ಪಡಿಯನ್ನು ಅಕ್ಕಿ ಎನ್ನುವ ಅರ್ಥದಲ್ಲೂ ಬಳಸುತ್ತಾರೆ.
ಬೀಳಲು-ಆಲದ ಮರದ ಇಳಿಬೀಳುವ ಬೇರುಗಳು ಎನ್ನುವ ಅರ್ಥದಲ್ಲಿ,
ಜವನಿಕೆ-ಪರದೆ,ಹೊದಿಕೆ ಎನ್ನುವ ಅರ್ಥದಲ್ಲಿ,  )
---------------------------------------------------------------------------------------------
ಇದು ಹಿಂಗೆ ನನ್ ಲೆಕ್ಕದಲ್ಲಿ....

"ಹುಡುಗು ಬುದ್ಧಿಯ ಗುಡಿಸಲಲ್ಲಿಂದು ಮೌನದಡುಗೆ"
ಹುಡುಗು ಬುದ್ಧಿಯವರು ಅಂದ್ರೆ ಯುವಜನರು,ನಾವು...ಹೊಸದನ್ನೇನೋ ಮನಸ್ಸುಳ್ಳವರು... ಗುಡಿಸಲು ಎನ್ನುವುದು ಅವರ ಬದುಕಿನ ಸರಳತೆ ತೋರಿಸಲು..ಮೌನದಡುಗೆ ಎಂದರೆ ಕನಸುಗಳೇ ನಮಗೆ  ಬಲ..ಅದೇ ಮನಸ್ಸಿಗೆ ಊಟ... ಅವೇ ಇಲ್ಲದಿದ್ದರೆ ನಮಗೆ   ಚೈತನ್ಯವಿಲ್ಲ ಎನ್ನುವ ಅರ್ಥದಲ್ಲಿ...

"ಕುಡಿಕೆ ಸದ್ದಿನ ಕಡಗೋಲಿಗಿಂದು ಖಾಲಿಗಡಿಗೆ"
ಕುಡಿಕೆ ಎನ್ನುವುದು ಒಂದು ಬಗೆಯ ಪಟಾಕಿ.. ಅದು ಸುರ್ರ್ ಎನ್ನುತ್ತಾ ಕತ್ತುತ್ತದೆ..ಆ ಶಬ್ಧ ಮಜ್ಜಿಗೆ ಕಡೆಯುವ ಶಬ್ಧದ ಥರ ಇರುತ್ತದೆ..ಅಂಥಹ ಮಜ್ಜಿಗೆ ಕಡೆಯುವ ಕಡಗೋಲಿಗೆ ಇಂದು ಕಡೆಯಲೂ ಏನೂ ಸಿಕ್ಕಿಲ್ಲ...ಅಂದರೆ ನಮ್ಮಲ್ಲಿ ಚಿಂತನ ಮಂಥನ ಕಡಿಮೆಯಾಗುತ್ತಿದೆ...ಯೋಚಿಸುವ ಶಕ್ತಿ ಖಾಲಿ ಆಗಿದೆ ಎನ್ನುವ ಅರ್ಥದಲ್ಲಿ...

"ಕಡಗಲದಳ ಮರೆಯಿತದುವೆ ಬಿದಿರ ಬಡಿಗೆ"
ಕಡಗಲ ಹೂವು ಆಗಲೇ ಹೇಳಿದಂತೆ ನಾ ನೋಡಿದ್ದು ಎತ್ತರದ ಮರದಲ್ಲಿ...ಅದನ್ನು ದೇವರಿಗೆ ಕೊಯ್ಯಲು ಅಜ್ಜಿ ಒಂದು ಬಿದಿರಿನ ಬಡಿಗೆಯನ್ನು  ಬಳಸುತ್ತಿದ್ದರು...ಹಾಗಾಗಿ ಬಿದಿರ ಕೋಲಿನ ಕೆಲಸ ಹೂವನ್ನು ಕೊಯ್ಯುವುದು..ಅದು ಅದನ್ನು ಮರೆತಿದೆ ಎಂದರೆ,ನಮ್ಮ ಕರ್ತವ್ಯವನ್ನು ಮರೆಯುತ್ತಿದ್ದೇವೆ ಎನ್ನುವ ಅರ್ಥದಲ್ಲಿ...

"ಕಡಿಕೆಮಣೆಯಿನ್ನು ಹಳೆಮನೆಯ ಮಾಡಿನಡಿಗೆ"
ಕಡಿಕೆ ಮಣೆ ಎಂದರೆ ಮರದಲ್ಲಿ ಕೊನೆಗೌಡರು ಕೂರಲು ಬಳಸುವುದು...ಆಂದರೆ ಮರ ಏರುವುದು ಎಂದರೆ ಪ್ರಗತಿಯ ಸಂಕೇತ..ಹೊಸ ಪ್ರಯೋಗಗಳ ಸಂಕೇತ... ಅಲ್ಲಿ ಕೂರುವುದು ಅಂದರೆ ಅಲ್ಲಿ ನೆಲೆನಿಂತು ಯಶಸ್ಸನ್ನು ಕಾಣುವುದು...ಹಂಗಾಗಿ ಆ ಕಡಿಕೆಮಣೆ ಹಳೆಮನೆಯ ಮಾಡಿನಡಿಗೆ ಅಂದರೆ ಆ ಹೊಸ ಪ್ರಯೋಗಗಳು ನಿಂತು,ಮತ್ತೆ ಹಳೆಯದಕ್ಕೇ ಜೋತುಬಿದ್ದಿದ್ದೇವೆ ಎನ್ನುವ ಆರ್ಥದಲ್ಲಿ... 

"ಅಡಿಕೆ ಶಿದ್ದಕ್ಕಿಯಿಲ್ಲ ಕೊಡಲು ಬೇಡುಪಡಿಗೆ"
ಇಲ್ಲಿ ಮಳೆಜಿರಲೆ ಎಂದರೆ ಬ್ರಷ್ಟಾಚಾರ....ಅವರು ಬೇಡುವವರು...ನಮ್ಮ ಕಡೆ ಬೇಡುವವರಿಗೆ ಅಡಿಕೆ ಅಥವಾ ಒಂದು ಶಿದ್ದೆ ಅಕ್ಕಿಯನ್ನು ಕೊಡುವುದನ್ನು ನೋಡಿದ್ದೇನೆ.. ಅವರಿಗೆ ಕೊಡಲು ನಮ್ಮಲ್ಲಿ ಅಕ್ಕಿ-ಅಡಿಕೆ ಏನೂ ಇಲ್ಲ,ಸಂಪತ್ತಿಲ್ಲ ...ಅವರ ಬಕಾಸುರ ಹೊಟ್ಟೆಯನ್ನು ತುಂಬಲು ಸಾಧ್ಯವಾಗುತ್ತಿಲ್ಲ ಎನ್ನುವ ಅರ್ಥದಲ್ಲಿ...

"ಹಿಡಿಕೆ ಇದ್ದಿಲ ಬಲವು ಸುಡುವ ಹಾದಿಕಡೆಗೆ"
ಇಲ್ಲಿ ಕೊಡೆ ಎಂದರೆ ನಮ್ಮ ಸಂಸ್ಕೃತಿ.ಬೀಳಲು ಅಂದರೆ ಅಂದರ ವಿವಿಧ ವಿಭಾಗಗಳು... ಅದರ ಅಂಗಾಂಗಳನ್ನೇ,  ನಮ್ಮೆಲ್ಲರನ್ನು ಒಂದು ಮಾಡಿದ್ದ ಆ  ಹೊದಿಕೆಯನ್ನೇ ನಾವಿಂದು ಕಳೆದುಕೊಳ್ಳುತ್ತಿದ್ದೇವೆ..ಹಿಡಿಕೆ ಇದ್ದಿಲು ಬಲ ಎಂದರೆ ಹಳೆಯ ತತ್ವ,ಆದರ್ಶಗಳ ಬಲ..ಅದರಿಂದಲೇ ಮುಂದಿನ ದಿನಗಳಿಗೆ ಪರಿಹಾರ ಎಂಬ ಅರ್ಥದಲ್ಲಿ...

ಹಮ್...ನಂದ್ ಮುಗಿತು.. ಈಗ ನಿಮ್ಮ ಸರದಿ :)..
ಕಾಯ್ತಿರ್ತೀನಿ.. 


Sunday, May 5, 2013

ಮರುಕಳಿಸಿತೇ???


ಇವತ್ತು ಮತದಾನದ ದಿನ….
ಓಟು ಹಾಕುತ್ತಾರೆ ಎಲ್ಲರೂ…
ನಾನೂ ಹಾಕಬೇಕು ಅಲ್ವಾ??..


ಬೆಳಬೆಳಿಗ್ಗೆಯೇ ಎದ್ದು ಕೊಟ್ಟಿಗೆ ಕೆಲಸ ಮುಗಿಸಿ,ಮಡಿ ಉಟ್ಟುಕೊಂಡು,ಗಂಗೆ ತಂದು ಭಸ್ಮ ಹಚ್ಚಿ ಜಪಕ್ಕೆ ಕುಳಿತಿದ್ದೇನೆ…
ಎಂದಿನಂತಿಲ್ಲ ಜಪ…
ಬರೀ ಅವಳದೇ ನೆನಪು…
ಕಣ್ಣ ಮುಚ್ಚಿ ಕುಳಿತುಕೊಂಡಿದ್ದಷ್ಟೇ ಗೊತ್ತು….
ಗೊತ್ತಿಲ್ಲ ಅದೆಷ್ಟು ಬಾರಿ ಅವಳನ್ನು ನೆನೆದೆನೋ,ಅದೆಷ್ಟು ಬಾರಿ ದೇವರನ್ನು ಜಪಿಸಿದೆನೋ…
ಕಣ್ಣ ಮುಚ್ಚಿದರೆ ಅವಳದೇ ನೆನಪು,ಅದೇ ಅವಳದೇ ಆಕಾರ…

ಅಹಾ ಅದೆಂಥಹಾ ಹಾಲಿನಂತಾ ಬಿಳುಪು…
ಪೌಡರು ,ಲಿಪ್ಟಿಕ್ಕುಗಳಿಲ್ಲದಿದ್ದರೂ ಮತ್ತೆ ಮತ್ತೆ ನೋಡಬೇಕೆನ್ನಿಸುವ ಮೊಗದ ಸೊಗಸು..
ಚಿಕ್ಕವನಿದ್ದಾಗ ಹಿಡಿದು ಮಲಗುತ್ತಿದ್ದ ಅಮ್ಮನ ಆ ಜಡೆಯನ್ನು ನೆನಪಿಸುವ  ಉದ್ದನೆಯ ಕೂದಲು…
ಕನಸಿನಲ್ಲೂ ಕಾಡುವ ಆ ಛಂದದ ನಗು..
ಅಹ್..ಮತ್ತೆ ಮತ್ತೆ ನೆನಪಾಗುತ್ತಿದ್ದಾಳೆ…
ನನ್ನ ರಕ್ತವೆಲ್ಲಾ ಹೃದಯಕ್ಕೇ ನುಗ್ಗುತ್ತಿದೆಯೋ ಏನೋ!
ಎದೆಯು ಬಡಿವ  ಸದ್ದು,ಎಳೆದು ಬಿಡುವ  ಉಸಿರ ಬಿಸಿ ನನಗೇ ಕೇಳಿಸುತ್ತಿದೆ ಸ್ಪಷ್ಟವಾಗಿ…
ಅದೆಷ್ಟು ಬಾರಿ ಹಾಗೇ ಸುಮ್ಮನೆ ಎಂಜಲು ನುಂಗಿದೆನೋ…ಲೆಕ್ಕವಿಲ್ಲ..


ಅದೇಕೆ ಹೀಗೆ ಇವತ್ತು ????
ಅವಳ ನೋಡಲಿಕ್ಕೆಂದೇ ಹೀಗಾ???ಗೊತ್ತಿಲ್ಲ…
ಅವಳು ಬಂದೇ ಬರುವಳಾ??? ಅದೂ ಗೊತ್ತಿಲ್ಲ…

ನಿಜ …..ಇವತ್ತು ಮತದಾನದ ದಿನ…ಊರಿನವರೆಲ್ಲಾ ಸಾಲೇಮನೆಗೆ ಓಟು ಹಾಕಲು ಬಂದೇ ಬರುತ್ತಾರೆ…
ಊರಿನವರಷ್ಟೇ ಏನು ಇದೇ ಆಟದ ಬೈಲಿನಲ್ಲಿ ಕುಂಟಾಟ,ಕ್ರಿಕೆಟ್ಟು ಆಡಿ ಇಂದು ಬೆಂಗ್ಳೂರು,ಬೊಂಬಯ್ಯಿಯಲ್ಲಿರುವವರೂ ಬಂದೇ ಬರುತ್ತಾರೆ..ಮನೆಯವನ್ನು ನೋಡವುದೂ ಆಯಿತೆಂದು ಬಹುತೇಕ ಎಲ್ಲರೂ ಬರುತ್ತಾರೆ… ಜೊತೆಗೆ ಅವಳೂ????

ಹಮ್..ಗೊತ್ತಿಲ್ಲ…ಹಳೆಯ ನೆನಪು ಬಂದೇ ಬರುತ್ತಾಳೆ ಎಂದು ಬಿಸ್ಕೀಟು ಹಾಕುತ್ತಿದೆ..
ಮಧ್ಯದಲ್ಲಿನ ಸುಂಗು ಮಾತ್ರ ,ಅವಳ್ಯಾಕೆ ಬರುತ್ತಾಳೆ ??
ಬರುವುದೇ ಅನುಮಾನ,ಬಂದರೂ ಈಗ ಅವಳ್ಯಾರು ನಿನಗೆ??
ಎಂದೆಂಬ ಪ್ರಶ್ನೆಗಳ ಬಾರುಕೋಲು ಹಿಡಿದು ನಿಂತಿದೆ..
ನಾನು….??

ಯೋಚಿಸುತ್ತಾ ಇದ್ದೇನೆ ಬೆಳಗಿನಿಂದ…
ಆಸರಿಗೆ ಕುಡಿದೆನೋ ಇಲ್ಲವೋ ಗೊತ್ತಾಗಲಿಲ್ಲ..ಅವಲಕ್ಕಿ ಮಜ್ಜಿಗೆಗೆ ಬೆಲ್ಲ ಕಡಿಮೆ ಇದ್ದ ಹಾಗಿತ್ತು…
ಬಿಡಿ,ನಾಲಿಗೆಯ ರುಚಿಯೆಲ್ಲಿ ತಿಳಿದೀತು,ನೆನಪಿನ ಪಾಕದ ಮುಂದೆ ಅಲ್ವಾ???

ಹಮ್..ಏನೋ ..ಮೆದುಳು ಹೇಳದಿದ್ದರೂ ಕಾಲು ತನ್ನ ಕೆಲಸ ಮಾಡಿ ಮುಗಿಸಿದೆ..
 ಆಚೀಚೆ ನೋಡುತ್ತಾ ತಲೆಕೆರೆದುಕೊಳ್ಳುವುದರೊಳಗಾಗಿ ಸಾಲೆಮನೆಯ ಸರಗೋಲು ಕಾಣಿಸುತ್ತಿದೆ..
ಜನರೆಲ್ಲಾ ಆ ಕಡೆ ಈ ಕಡೆ ಓಡಾಡುತ್ತಿದ್ದಾರೆ…ಒಂದಿಷ್ಟು ಮೋಟರು ಸೈಕಲ್ಲು,ಓಮಿನಿಗಳೂ ನಿಂತಿವೆ..

ಏನು ಮಾಡಲಿ ನಾನು??
ಹೋಗಿ ಓಟೋತ್ತಿ ಬಂದು ಬಿಡಲಾ???
ಬೇಡ ಬೇಡ..ಅವಳು ಬಂದರೂ ಬರಬಹುದು ಕಾಯಲಾ???
ಬಂದರೂ ಎಷ್ಟೋತ್ತಿಗೆ ಬರಬಹುದು???
ಒಬ್ಬಳೇ ಬರುವಳಾ???ಛೇ ಸಾಧ್ಯವಿಲ್ಲ..ಅವರಪ್ಪನ ಜೊತೆಗೇ ಬರುವದು…
ನಡೆದುಕೊಂಡಾ???ಹಮ್..ಅವರಪ್ಪ ದೊಡ್ಡಮನೆಯ ಶೀಪಾದನ ಲಟೂರೀ ಬೈಕು ಫೋರ್ತು ಹ್ಯಾಂಡಿಗೆ ತಗಂಡ ಎಂದು ಕೇಳಿದಂಗೆ ಇದೆ,,ಗೊತ್ತಿಲ್ಲ…ಏನು ಮಾಡಲಿ???.....
……
ಕಾಯುವಾ…..
ಏನಾದರಾಗಲಿ ಕಾಯಲೇ ಬೇಕು….
ಎಲ್ಲಿರಲಿ??????ಇಲ್ಲೇ ಇದ್ದರೆ ಪೋಲೀಸರು ಅನುಮಾನಿಸಬಹುದು…
ಸಾಲೆಯಲ್ಲೇ ಯಾವುದೋ ಪಕ್ಷದವರ ಜೊತೆ ಕೂರಲಾ??ಶೇ …ಅಲ್ಲಿ ಕೆಟ್ಟ ಗೌಜು…
ಎಲ್ಲಿರಲಿ??ಅವಳ್ಯಾವಾಗ ಬರುವದು ಬಂದರೆ???೯ಕ್ಕಾ , ೧೨ಕ್ಕಾ ಅಥವಾ ಸಂಜೆಗಾ??


ಅಗಾ…
ಅಲ್ಲಿ ಸಿಕ್ತು…
ಏನು?.
ಜಾಗ…
ನನ್ನ ಫೇವರೇಟ್ ಜಾಗ…
ನಾನು ನನ್ನೊಳಗಿನ ನನ್ನನ್ನು ನೋಡಿಕೊಳ್ಳೋ ಜಾಗ…ಕಷ್ಟ ಸುಖ ಹಂಚಿಕೊಂಡ ಜಾಗ…


ಇದೇ ರಸ್ತೆಯ ಬಲಬದಿಗೆ ಸ್ವಲ್ಪ ಕೆಳಗೆ ರಾಕ್ಷಸ ಪರಂಗಿ ಬೇಲಿ ಹಾರಿ,ಸಣ್ಣ ಧರೆಯ ದಾಟಿದರೆ ನಮ್ಮನೆಯದೇ ಬೆಟ್ಟ..
ಅಲ್ಲೊಂದು ಜೋಡಿ ಮತ್ತಿಯ ಮರ..ಅದರ ಪಕ್ಕದಲ್ಲೊಂದು ಹೊಸದಾಗಿ ಬೆಳೆದ ನುರುಕಲು ಗಿಡ..
ಮತ್ತಿಯ ಮರದಲ್ಲಿ ಕೊಟ್ಟೆಯ ಕಟ್ಟಿದಂತೆ ಇರುವ ಎಲೆಗಳು..
ತೊಟ್ಟಿಲಂತೆ ಹರಡಿಕೊಂಡ ಹೆಣೆಗಳು…
ಅಲ್ಲಿ ಕೂತು ನಾನು ಬರೆದದ್ದೆಷ್ಟೋ..ಓದಿದ್ದೆಷ್ಟೋ..ಕಾದಿದ್ದೆಷ್ಟೋ..ಅತ್ತಿದ್ದೆಷ್ಟೋ,ಕುಣಿದದ್ದೆಷ್ಟೋ..

ಹತ್ತಿದ್ದೇನೆ ಇಂದೂ ಆ ಮರವನ್ನು…
ಹತ್ತುವಾಗ  ಒಣಗಿದ ಕೊಂಬೆಯ ಮೇಲೆ ಕಾಲಿಟ್ಟಿದ್ದರಿಂದ ಜಾರಿತು ಒಂದೆರಡು ಬಾರಿ ಅಷ್ಟೇ…ಮತ್ತೇನೂ ಆಗಿಲ್ಲ..
ಬರುವಾಗ ಪಕ್ಕದ ನುರುಕಲು ಮರದ ಕೊಣಜು ಹತ್ತಿಕೊಂಡಿದೆ …ಸೊಂಟದಲ್ಲಿದ್ದ ಎರಡನ್ನು ಒರೆದು ಎಸೆದೆ..
ಗಲ್ಲದ ಮೇಲೆ ಹತ್ತಿಕೊಂಡದ್ದನ್ನು ಹಾಗೆಯೇ ಕೆಳಕ್ಕೆ ಉದುರಿಸಿದೆ…
ಮತ್ತೆಲ್ಲಿ ಕೊಣಜಿದೆಯೋ…ಅದೆಲ್ಲಿ ಸವಳಿಯಿದೆಯೋ…!!

ಇರಲಿ..ಇಲ್ಲಿಂದ ದಾರಿ ಚೆನ್ನಾಗೇ ಕಾಣುತ್ತಿದೆ..ಅಲ್ಲಿ ಓಡಾಡುವವರೂ ಕಾಣುತ್ತಿದ್ದಾರೆ….
ಅವರಿಗೆ ಮಾತ್ರ ನಾನು ಕಾಣಲಾರೆ…ನನಗಾದರೂ ನಾನು ಕಾಣುತ್ತೀನಾ????
ಗೊತ್ತಿಲ್ಲ….ತೀರ ತಲೆಬಿಸಿಯಾಯಿತೆಂದು ಎಂದಿನಂತೆ ಒಂದು ಗುಟಕಾ ಪ್ಯಾಕೆಟ್ಟು ಒಡೆದು ಬಾಯಿಗೆ ಹಾಕಿದೆ…
ಮನಸ್ಸೇ ಕಹಿಯಿತ್ತೋ ಅಥವಾ ಹಳೆಯ ಪ್ಯಾಕೇಟಿನಲ್ಲಿದ್ದ ಗುಟಕಾ ಕೆಂಪಾಗಿ ಕಹಿ ಎನಿಸಿತೋ ಏನೋ ಗೊತ್ತಿಲ್ಲ…
ಎಂದಿನ ಖುಷಿ ಸಿಗುತ್ತಿಲ್ಲ…
ಮತ್ತೊಂದು ಪ್ಯಾಕೆಟ್ಟು ಒಡೆದು,ಕೈಯ್ಯಲ್ಲಿ ತಿಕ್ಕಿ,ಹುಡಿಯನ್ನು ಉಬಿಸಿ ಬಾಯಿಗೆ ಹಾಕಿದೆ…
ನಿಧಾನವಾಗಿ ಒಳಸೇರುತ್ತಿದೆ…
ತಲೆ ಗುಯ್ಯ್ ಎನ್ನುತ್ತಿದೆ,ಕಣ್ಣು ಮಂಜಾಗುತ್ತಿದೆ..
ಮತ್ತೆ ಹಾಕಿದ ತಂಬಾಕು ಜಾಸ್ತಿ ಆಯ್ತೋ ಅಥವಾ ಅವಳ ನೆನಪಿನ ಮತ್ತು ಕಿಕ್ಕೇರಿತೋ ಗೊತ್ತಿಲ್ಲ…
ಹಾಗೆಯೇ ಕೈಗೆ ತಲೆಯಿಟ್ಟೆ…ಕಣ್ಣು ಮುಚ್ಚಿದೆ…





ಕತ್ತಲು...
 ಕತ್ತಲು ....
ಬರೀ ಕತ್ತಲು……
(ನಮಸ್ತೆ..ಇದೊಂದು ಹೊಸ ಪ್ರಯೋಗ ನನ್ನ ಪಾಲಿಗೆ...ಒಂದು ಎಳೆಯನ್ನು ಇಟ್ಟುಕೊಂಡು ಬರೆಯುವ ಪ್ರಯತ್ನ...ಇದನ್ನು ಇಲ್ಲಿಗೇ ಮುಗಿಸಬೇಕೋ ಅಥವಾ ಇನ್ನೂ ಬೆಳೆಸಬೇಕೋ ಅನ್ನೋ ಗೊಂದಲದಲ್ಲಿದೀನಿ... ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ಮರೆಯದೇ ದಾಖಲಿಸಿ... ನಿಮಗೆ ಅನಿಸಿದ್ದನ್ನು ಯಾವುದೇ ಮುಚ್ಚು ಮರೆಯಿಲ್ಲದೇ ಹೇಳಿ...ಅದೇ ನನಗೆ ಸ್ಪೂರ್ತಿ...ಕಾಯ್ತಿರ್ತೀನಿ...ನಮಸ್ತೆ )