Wednesday, October 24, 2012

ಸಿಂಗಾರದ ಕಥೆ


ಕಣ್ಣಿಗೆ ಬೆಳಕು ಕಾಣುತ್ತಲೇ ,ಹಾಸಿಗೆಯ ಮೇಲೆ ಕೈ ಹಾಕಿ “gud mrng dearJ” ಎಂದು ಮೆಸ್ಸೆಜು ಟೈಪು ಮಾಡಿದ ಶತಭಿಷ ಆ ಹುಣಸಿಗೆ ಊರಿನಲ್ಲಿ ನೆಟ್ವರ್ಕು ಸಿಗಲ್ಲಾ ಎಂಬುದನ್ನು ನೆನಪಿಸಿಕೊಂಡು  ಮತ್ತೆ ಮಲಗಿದ.
“ತಮ್ಮಾ ಬೆಳ್ಗಾತು ಎದ್ಕಾ … ಎಂದು ಅಜ್ಜಿ ಎಬ್ಬಿಸಿದಾಗಲೇ ಆತ ಮತ್ತೆ ಕಣ್ಬಿಟ್ಟಿದ್ದು..
ಅಜ್ಜಿ ಹೂವಿನ ಕುಕ್ಕೆ ಹಿಡಿದು ದೇವಸ್ಥಾನಕ್ಕೆ ಹೋದರೆ ಬೆಂಗಳೂರಿನಲ್ಲಿ ಅರ್ಲಿ ಮಾರ್ನಿಂಗ್ ಹತ್ತಕ್ಕೆ ಎದ್ದು ಬಿಡುವ ಹೊಸಜಮಾನಾದ ಈ ಹುಡುಗ ಇಲ್ಲಿ ಏಳೂವರೆಗೇ ಎದ್ದು ಕೋಲ್ಗೇಟು ಹಿಡಿದು ಹೊರಟ.
ಬಚ್ಚಲು ಮನೆಯಲ್ಲಿ ಕಾಸಿಟ್ಟ ಬಿಸಿನೀರಿನಲ್ಲಿ ಮುಖತೊಳೆದು,ಹಾಗೆಯೇ ಒಂದಿಪ್ಪತ್ತೈದು ಹೆಜ್ಜೆ ನಡೆದು ಅಡಿಗೆ ಮನೆಯತ್ತ ನಡೆದವನಿಗೆ ,ಬಾಳೆ-ಮಣೆಯ ಸ್ವಾಗತ ಕಾದಿತ್ತು..ಬಂದೊಡನೆ ಬಂಡಿಮೇಲೆ ಹೊಯ್ದ ತೆಳ್ಳೇವು “ಚೊಯ್ ಯ್…”ಎಂದು ಸದ್ದು  ಮಾಡುತ್ತಿತ್ತು.ಬೆಳಿಗ್ಗೆಯ ಕಾಫಿ-ಬಿಸ್ಕತ್ತನ್ನು ಅವನ ಕಣ್ಣುಗಳು ಹುಡುಕುತ್ತಿರುವಾಗಲೇ ,
ಅಜ್ಜಿ “ತಮಾ ಬಾ ಆಸ್ರಿಗೆ ಕುಡ್ಯಲೇ”(ತಿಂಡಿ ತಿನ್ನಲು) ಎಂದರು…
ಬೆಳಬೆಳಿಗ್ಗೆ ತಿಂಡಿತಿಂದು ಅಭ್ಯಾಸವಿಲ್ಲ ಎಂದು ಬಾಯಿಗೆ ಬಂದರೂ,ತನ್ನಿಂದ ಅಜ್ಜಿಯ ಉಳಿದ ಕೆಲಸಗಳಿಗೆ ತಡವಾಗಬಾರದು ,ತಾನು ತಿಂಡಿ ತಿನ್ನದೇ ಅಜ್ಜಿ ತಿಂಡಿ ತಿನ್ನರು,ಅದರಿಂದ ಮನೆಯ ಕೆಲಸವೆಲ್ಲಾ ತಡವಾಗುವುದು ಎಂದರಿತು “ಹಾಂ ಸರಿ” ಎಂದು ತಿಂಡಿಗೆ ಕೂತ .
ಬೆಲ್ಲ ಬೆಣ್ಣೆಯ ಹದಪಾಕದಲ್ಲಿ ಗರಿಗರಿ ತೆಳ್ಳೆವಿನ ಚೂರುಗಳನ್ನು ಮುಳುಗಿಸಿ ತಿಂದ ಆತ ,ಒಂದು ಶೇರು ಚಹಾವನ್ನು ಹೀರಿ ಅಡುಗೆಯಮನೆಯಿಂದ ಹೊರಬಿದ್ದ.ಅದಾದ ಮೇಲೆ ಹಾಗೆಯೇ ಯಾರೋ ಶಿರಸಿಯಿಂದ ನಿನ್ನೆ ತಂದಿದ್ದ ಪೇಪರನ್ನು ಓದುತ್ತಾ ಕುಳಿತಿದ್ದ.
ಅಷ್ಟರಲ್ಲೇ ಒಬ್ಬ ಪಟ್ಟೇಪಟ್ಟೆ ಲುಂಗಿಯುಟ್ಟಿದ್ದ ಆಸಾಮಿ ಜಗುಲಿಗೆ ಬಂದು “ಅಮ್ಮಾ “ಎಂದ.
ಪೇಪರ್ ಓದುತ್ತಿದ್ದ ಶತಭಿಷ “ಎಂತದು?” ಎಂದು ಕೇಳಿದ,
ಆ ಆಸಾಮಿ ,”ತಮ್ಮಾ಼….ಅಮ್ಮನ ಕೂಡೆ ಆಚಾರಿ ಬಂದಿದ ಹೇಳು..”
ಶತಭಿಷನ ಕಿವಿಗಳು ಇದನ್ನು ಕೇಳಿ “ಬೈಂದೂರು ಭಾಷೆ’ ಎಂದವು..ಅದರ ಜೊತೆಗೆ ಗೊಬ್ಬರ ಹೊರಲು ಬರುತ್ತಿದ್ದ ಶೇರುಗಾರರು ಮಾತನಾಡುತ್ತಿದ್ದ ಭಾಷೆಯೂ ಇದೇ ಎಂಬ ಪುರಾವೆಯೂ ಸಿಕ್ಕಿತ್ತು..
”ಸರಿ ಹೇಳ್ತೆ ನೀವ್ ಕುತ್ಕಳಿ” ಎಂದು ಸ್ಟೂಲು ಮುಂದಿಟ್ಟು ಅಜ್ಜಿಯ ಹತ್ತಿರ ಹೋಗಿ “ಆಯಿ,..ಆಚಾರಿ ಬಂಜಾ”(ಅಜ್ಜಿ, ಆಚಾರಿ ಬಂದಿದ್ದಾನೆ)ಎಂದ.
ಅಜ್ಜಿ “ಸರಿ,ಕುತ್ಕಂಬಲೆ ಹೇಳು,ಆಸ್ರಿಗೆ ತತ್ತಿ”(ಕೂರಲು ಹೇಳು,ತಿಂಡಿ ತರುವೆನು) ಎಂದು ಹೇಳಿ ಕಳುಹಿಸಿದರು…
ಜಗುಲಿಗೆ ಬಂದ ಶತಭಿಶಷ ಆಚಾರಿಯ ಬಳಿ ಮಾತಿಗಿಳಿದ…
ಶತಭಿಷ : “ನಿಮ್ ಹೆಸ್ರು ಎಂತದು??ಎಷ್ಟ್ ವರ್ಷಆಯ್ತು ಈ ಕೆಲ್ಸಾ ಮಾಡ್ತಾ?”
ಆಚಾರಿ:”ನನ್ ಹೆಸ್ರು ಮಂಜೇಶ್ವರನಾಥೇಶ್ವರಾಚಾರಿ  .ಜನ  ಮಂಜಾಚಾರಿ,ಒಂದೊಂದ್ ಸಲ್  ಮಳ್ಳಾಚಾರಿ ಹೇಳು ಕರಿತ್ರು ಅಂತಿಟ್ಕಣಿ..ನಾನು ನಮ್ಮಪ್ಪನ ಕೂಡೆ ಉಳಿ-ಚಾಣ ಹಿಡ್ಕಂಡ್ ಘಟ್ಟ ಹತ್ತಿ ಬಂದವಾ..ಸಣ್ಣಕಿದ್ದಾಗಿಂದಲೂ ಇದೇ ಕೆಲ್ಸಾ..ಸುಮಾರ್ ವರ್ಷಾ ಆಯ್ತ್ ”
ಶತಭಿಷ: “ಹಮ್..ಮತ್ತೆ ಕೆಲಸ ಹೆಂಗದೆ ಈಗ??”
ಆಚಾರಿ :”ಎಂತಾ ಹೇಳುದ್ ಹೇಳಿ ಕಾಂಬಾ..ಎಲ್ಲಾ ಭಗವಂತ ಕೊಟ್ಟಿದ್ ಅಲ್ದಾ…ಈಗ ಮರದ ಕೆಲ್ಸಾ ಇಲ್ಲಾ ಮಷಿನ್ ನಲ್ಲೇ ಮಾಡ್ತಿರು,,ರೆಡಿಮೇಡ್ ಬಾಗ್ಲು,ರೆಡಿಮೇಡ್ ಕಿಡಕಿ ಚೌಕಟ್ಟು,ರೆಡಿಮೇಡ್ ಮಂಚ..ನಮ್ಮನ್ನ ಯಾರು ಕೇಳ್ತ್ರು… ಅದೂ ಈಗ ನಾಟಾ ಸಿಗೂದೂ ಕಷ್ಟಾ ಆಗಿತಲ್ದಾ...”
ಇಗಾ ಇಲ್ ಕಾಣಿ, ಆ ದ್ವಾರ ಬಾಗಿಲ್ ಇತ್ ಅಲ್ದಾ,,ಅದು ನಮ್ಮಪ್ಪನೆ ಮಾಡಿದು..ಒಂದ್ ವಾರ ಆ ಬಳ್ಳಿ ಬಿಡ್ಸುಕೆ ತಕಂಡಿದಾ ಅವಾ…ಅದ್ನೆ ನೀವು ಈಗ ಮಷಿನ ಅವ್ರ ಹತ್ರ ಹೋಗಿ ಹೇಳ್ರೆ,ಬೆಳಿಗ್ಗೆ ಹೇಳಿ ಸಂಜೆ ತಕಂಡ್ ಹೋಗಿ ಅಂತ್ರ್ …
ಅಲ್ಲಾ ಎಷ್ಟೇ ಹೇಳಿ,ನೆರಿಗೆ ಹಿಡ್ಯು ಕೆಲ್ಸಾ ಮಷಿನ್ ಇಂದಾ ಆತ್ತಾ??”
ಶತಭಿಷ:: “ಅರೆ ಹಂಗದ್ರೆ?”
ಆಚಾರಿ :” ಮರನಾ ಬರೆ ಕತ್ತಿನೋ ಕೊಡ್ಲಿನೋ ತಕಂಡ್ ಕಡ್ದು,ಕತ್ತರಿಸಿ ಕೂಡ್ಸದಲ್ಲಾ ಮರದ್ ಕೆಲ್ಸಾ ಅಂದ್ರೆ..ಅದ್ರ ನಾರು ಹೆಂಗದೆ..ಅದು ಯಾವ್ ಜಾತಿ ಮರ..ಎಷ್ಟ್ ಗಟ್ಟಿ ಇರ್ತ್, ಬಾಗಿಲಿಗೆ ಹಾಕುದಾ,ರೀಪಿಗೆ ಹೋಡ್ಯುದಾ,  ಎಲ್ ಹೊಡ್ದ್ರೆ ಸಿಗುಳು ಬತ್ತ್,ಎಷ್ಟ್ ಜೊರ್ ಹೊಡ್ಯಕ್,ಎಲ್ಲಾ ನೋಡ್ಕಣುಕಾತ್ತಾ ಮಷಿನ್ ಹತ್ರ?ಇಲ್ಲ ಬಿಡಿ  “
ಶತಭಿಷ: “ಅದು ಸರಿನೆ ಬಿಡಿ”..
ಅಷ್ಟರಲ್ಲಿ ತಿಂಡಿ ಬಂದಿತ್ತು ,ಆಚಾರಿ ಅದನ್ನು ತಿಂದು ಮನೆಯ ಹಿಂಭಾಗಕ್ಕೆ ಹೊರಟ..ಅಲ್ಲಿ ಆಚಾರಿ ದೇವರ ಪೀಠವನ್ನು ಸರಿ  ಮಾಡುವ ಕೆಲಸವಿತ್ತು…ದೇವರ ಪೀಠ ಹಳೆಯದಾಗಿ ಹಾಳಾದ್ದರಿಂದಲೇ ಇವನನ್ನು ಸರಿ ಮಾಡಲು ಕರೆಸಿದ್ದರು..ಶತಭಿಷನ ಮಾವ ಮೊದಲೇ ಪೀಠವನ್ನು ಅಲ್ಲಿಗೆ ತಂದಿಟ್ಟು ಶಿರಸಿಗೆ ಹೋಗಿದ್ದರು..ಆಚಾರಿ ತನ್ನ ಕೆಲಸದಲ್ಲಿ ಮಗ್ನನಾದರೆ ಶತಭಿಷ ಯಾವುದೋ ಇಂಗ್ಲಿಷ್ ಕಾದಂಬರಿ ಹಿಡಿದು ಕೂತ…
                             *************************************************
ಸಂಜೆ ನಾಲ್ಕು ಘಂಟೆಯ ಸುಮಾರಿಗೆ ಶತಭಿಷ ಮಲಗೆದ್ದು ಮುಖತೊಳೆಯಲು ಬಚ್ಚಲಮನೆಯ ಕಡೆಬಂದಾಗ ಹಳೆಯ ಪೀಠ ಹೊಸರೂಪವನ್ನು ಪಡೆದು ಸುಂದರವಾಗಿ ಕಾಣುತ್ತಿತ್ತು..ಅಷ್ಟೊತ್ತಿಗೆ ಅಲ್ಲಿಗೆ  ಬಂದ ಆಚಾರಿ
“ಇಗ ಆಯ್ತಂಬ್ರ..ನಾ ಹೊರ್ಟೆ.. “ ಎಂದು ಹೊರಟ..
ಆಗ ಅಜ್ಜಿ “ಏಯ್ ಆಚಾರಿ ಅಚ್ಚೆ ನಾಡಿದ್ದೆಯ ದೊಡ್ಡ ಹಬ್ಬ”(ದೀಪಾವಳಿ )”ಶಿಂಗಾರ ಬೇಕಾದ್ರೆ ತ್ವಾಟದಲ್ ಅದ್ಯಾ ನೋಡ್ಕಾ “ (ಸಿಂಗಾರ ಬೇಕಾದರೆ ತೋಟದಲ್ಲಿ ಇದೆಯೋ ನೋಡು)ಎಂದರು..
ಆಚಾರಿ:”ಹಾಂ ಮರ್ತೆ ಹೋಗಿತ್..ನಾ ತ್ವಾಟಕ್ ಹೋಗ ಬತ್ತೆ ಇವ್ರ್ ಕರ್ಕಂಡು..ಇವ್ರಿಗ್ ತ್ವಾಟದ್ ದಾರಿ ಗೊತ್ತೀತ್ ಅಲ್ದಾ??”
ಅಜ್ಜಿ :”ಹಾಂ..ತಮ್ಮಾ ಅವನ್ನಾ ಇಲ್ಲೆ ಬಾಗಿಲಿನ ಪಾಲಿಗೆ ಕರ್ಕಂಡ್ ಹೋಗಾ “
ಇತ್ತ ಶತಭಿಷನಿಗೆ ನಗುಬರುತ್ತಿತ್ತು..ಅವನಿಗೂ ತೋಟಕ್ಕೂ ಭಾರೀ ದೂರ..ಅವರಮ್ಮ ಒಮ್ಮೆಮ್ಮೆ “ಈ ಮಾಣೀಗೆ ಅಡ್ಕೆ ಕಾಯಿ ಅಡ್ಕೆ ಮರದ್ ಮೇಲೆ ಇರ್ತಾ??ಕೆಳಗ್ ಬಿಡ್ತಾ  ಹೇಳೂ ಗೊತ್ತಿದ್ದ ಇಲ್ಯ! “ ಎಂದು ಆಡಿಕೊಳ್ಳುವುದುಂಟು..ಅವನಿಗೆ ತೋಟದ ದಾರಿಯೊಂದು ಗೊತ್ತಿತ್ತು ಅಷ್ಟೇ.!!!.
ಗುಡ್ಡ ಇಳಿದು ಹೋಗುತ್ತಿರುವಾಗ,
 ಶತಭಿಷ :” ಅಲ್ಲಾ ಅದು ನೀವು ಕೆಲಸ ಮಾಡುತ್ತಿರುವಾಗ ಕೈತಪ್ಪಿ ಏನಾದ್ರು ಕರಗಸ,ಸುತ್ತಿಗೆ ತಟ್ಟಿ ದೇವರ ಪೀಠ ಹಾಳಾಗೊದ್ರೆ ಅಂಥ ಹೆದ್ರಿಕೆ ಆಗೂದಿಲ್ವಾ ?“
ಆಚಾರಿ:” ಇದು ನನ್ನ ಕಟ್ಟಿಗೆ,ಇದು ನನ್ನ ಪೀಠ..ಇದನ್ನು ನಾನೇ ಮಾಡುತ್ತಿರುವುದು ಅಂತಾ ಮಾಡುಕಾಗ..ಎಲ್ಲದೂ ದೇವರದ್ದು..ಅವನೇ ಮಾಡ್ಸ್ಕಂತಿಪ್ಪುದು…ಹೇಳಿ ಮಾಡ್ದ್ರೆ ಎಲ್ಲದೂ ಸರಿ ಆತ್..ಅಲ್ಲಾ ಅವ್ನೇ ಕೂಕಂಬು(ಕುಳಿತುಕೊಳ್ಳುವ)  ಪೀಠ ಅವ್ನೇ ಹಾಳ್ ಮಾಡ್ಕಂತ್ನಾ??ಹೇಳಿ ” ಎನ್ನುತ್ತಾ ತೋಟ ತಲುಪಿದ..
ಅದು ಮಲೆನಾಡಿನ ಶಿರಸಿಯ ವಳಭಾಗೀ ಸೀಮೆಯ ತೋಟ..ವರಷ ಪೂರ್ತಿ ನೀರಿರುವ ಆ ತೋಟದಲ್ಲಿ ಅಡಿಕೆಮರಗಳೆಲ್ಲಾ  ಸೂರ್ಯನನ್ನು ಚುಂಬಿಸುವಷ್ಟು ಎತ್ತರವಾಗಿದ್ದವು..ಬೈತಲೆ ತೆಗೆದಂತೆ ಇದ್ದ ಕಾಲುವೆಗಳು,ಪುಟ್ಪಾತಿನಂತಿದ್ದ ನಿತ್ತುಗಟ್ಟುಗಳು(ಮಧ್ಯ ನಡೆಯುವ ಜಾಗ) ..ಮೆಲ್ಲಗೆ ಹರಿಯುವ ನೀರುಹೊಂದಿದ ಮಂಡಗಾಲುವೆಗಳು,ಅಲ್ಲಲ್ಲಿ ತಲೆ ಎತ್ತಿನಿಂತದ್ದ ಹಲಸು ಮಾವುಗಳು,ಅಡಿಕೆಯ ಮರಗಳನ್ನು ಅಪ್ಪಿಕೊಂಡಿದ್ದ ಮೆಣಸಿನ ಬಳ್ಳಿಗಳು,ಆ ಮರಗಳ ಮಧ್ಯದಲ್ಲಿ ಸುಗಂಧ ಸೂಸುತ್ತಿದ್ದ ಏಲಕ್ಕಿಯ ಗಿಡಗಳು..ಬಂದವರನ್ನು ಬಾಗಿ ನಡೆಸುತ್ತಿದ್ದ ಬಾಳೆಯ ಗಿಡಗಳು,ನಡೆಯುವರನ್ನು ಜಾರಿ ಬೀಳಿಸುತ್ತಿದ್ದ ಕೊಳೆತಹಾಳೆಗಳು..ಅಲ್ಲಿಲ್ಲಿ  ಕಂಡುಬರುತ್ತಿದ್ದ ಸೋಂಗೆಹಸೆಗಳು(ಅಡಿಕೆಯ ಸೋಗೆಯನ್ನು ತಾತ್ಕಾಲಿಕವಾಗಿ ಸಂಗ್ರಹಿಸಿವು ಜಾಗ),ಅಲ್ಲಿಂದಿಲ್ಲಿಗೆ ಹೋಗಲು ಹಾಕಿದ್ದ ಅಡಿಕೆಯ ಮುಂಡಗಳು..
ಇಂತಿಪ್ಪ ತೋಟದಲ್ಲಿ ಅಚಾರಿಯ ಕಣ್ಣಿಗೆ ಅವತ್ತು ಯಾವ ಚಿಕ್ಕ ಮರವೂ ಬೀಳಲಿಲ್ಲ. . ದೊಡ್ಡ ಮರ ಹತ್ತಿ ಸಿಂಗಾರ ಕಡಿಯಲು ಅವನಿಗೆ ಹೆದರಿಕೆ..ಯಾವುದಾದರೂ ಬಿದ್ದ ಮರದಲ್ಲಿ ಸಿಂಗಾರ ವಿದ್ದೀತೇ ಎಂದು ಹುಡುಕುತ್ತಿದ್ದ ಆತ.. ದೊಡ್ಡ ಹಬ್ಬಕ್ಕೆ ಸಿಂಗಾರ ಅಂದರೆ ಅಡಿಕೆಯ ಹೂವು ಇಲ್ಲದೇ ಬಲಿವೇಂದ್ರನಿಗೆ ಕಳೆಯಿಲ್ಲ,ಹಾಂ ಆದರೆ ಈ ಸಿಂಗಾರ ಬೇಕೆಂದರೆ ಆ ಮರವನ್ನು ಕೊಲ್ಲಲೇ ಬೇಕು,,ಏಕೆಂದರೆ ಅದರ ತಲೆಯಲ್ಲಿಯೇ ಹೂವು ಇರುವುದು….
ಹೀಗೆ ಹುಡುಕುತ್ತಿದ್ದವನಿಗೆ ಒಂದು ಕಡೆ ಬಿದ್ದ ಮರ ಕಂಡಿತು,ಅವನ ಅದೃಷ್ಟಕ್ಕೆ ಸಿಂಗಾರವೂ ಅದರಲ್ಲಿತ್ತು..ಖುಷಿಯಿಂದ ಅದನ್ನು ಕಡಿದ ಆತ ,ಹಿಡಿದುಕೊಂಡು ಹುಣಸಿಗೆ ಕತ್ರಿಯ ಹಾದಿ ಹಿಡಿದ..
ಇತ್ತ ನಮ್ಮ ಶತಭಿಷನಿಗೇನೋ ಗಲಿಬಿಲಿ..ಅವನಿಗೆ ಇದು ತನ್ನ ಅಜ್ಜನಮನೆಗೆ ಸೇರಿದ ತೋಟವೆಂದು ಗೊತ್ತು..ಆದರೆ ಅವರಲ್ಲೇ ಹಿಸೆಯಾಗಿ (ಅವಿಭಕ್ತ ಕುಟುಂಬಗಳ ವಿಭಜನೆ) ಯಾವ ಪಾಲು ಯಾರದ್ದೆಂದು ತಿಳಿಯದ್ದಾಗಿತ್ತು..ತನ್ನ ಅಜ್ಜನದು ಯಾವ ಪಾಲೋ,ಚಿಕ್ಕಜ್ಜನದು ಯಾವ ಪಾಲೋ ತಿಳಿಯದಾಗಿತ್ತು..ಈ ಅಜ್ಜಂದಿರಿಬ್ಬಿರೂ ಈಗ ಹಾವು-ಮುಂಗುಸಿಯ ಥರ ಕಚ್ಚಾಡುತ್ತಿದ್ದುದೂ ಅವನಿಗೆ ತಿಳಿದಿತ್ತು.. ಇತ್ತ ಆಚಾರಿಯೋ ಇವನು ಮೊಬೈಲಿನಲ್ಲಿ ಸಿಗ್ನಲ್ಲು ಹುಡುಕುತ್ತಿರುವಾಗಲೇ ಸಿಂಗಾರ ತೆಗೆದುಕೊಂಡು “ ಬರ್ತೆ ಅಗಾ “ ಎಂದು ಹೇಳಿ ಹೊರಟು  ಹೋಗಿದ್ದ…ಏನು ಮಾಡುವುದೆಂದು ತಿಳಿಯದೇ ಬಿದ್ದ ಅಡಿಕೆ ಮರದ ಬಣ್ಣವನ್ನು (ನಿತ್ತುಗಟ್ಟಿನ ಅನುಕ್ರಮ ಸಂಖ್ಯೆ) ನೋಡುತ್ತಾ, “ಆರೆನೇ ಬಣ್ಣ” ಎಂದು ನೆನಪಿಟ್ಟುಕೊಂಡು ಮನೆಗೆ ಹಿಂದಿರುಗಿದ..
ಮರುದಿನ ಬೆಳಿಗ್ಗೆ ವಾಪಸ್ ತನ್ನ ಮನೆಗೆ ಹೊರಟಿದ್ದ ಶತಭಿಷ,ಬಸ್ಸು ಸ್ಟಾಪಿನ ತನಕ ತನ್ನನ್ನು ಕಳಿಸಿಕೊಡಲು ಬಂದ ಮಾವನ ಬಳಿ
“ಮಾವಾ ..ನಿಮ್ಮನೆದು ಕೆಳಗಿನ ಪಾಲು ಎಷ್ಟು ಬಣ್ಣ ???ಚಿಕ್ಕಜ್ಜಂದು ಎಲ್ಲಿಂದ ಶುರು ??”ಎಂದು ಕೇಳಿದ..
ಅದಕ್ಕೆ ಮಾವ..”ನಮ್ಮದು ಮೊದಲಿನ ಐದು ಬಣ್ಣ,ಆರನೇಯ ಬಣ್ಣದಿಂದ ಅವರದ್ದು” ಎಂದ.
ಅಷ್ಟರಲ್ಲೇ ಶತಭಿಷನಿಗೆ ಬೆವರಿಳಿಯತೊಡಗಿತ್ತು..ಇನ್ನು ಹುಣಸಿಗೆಯಲ್ಲಿ ಇವತ್ತು ಜಗಳ ಖಚಿತ..

“ನಿಮ್ಮ ಮನೆಗೆ ಬಂದ ಆಚಾರಿ ತನ್ನ ತೋಟದ ಸಿಂಗಾರವನ್ನು ತೆಗೆದುಕೊಂಡು ಹೋಗಿದ್ದಾನೆ ಎಂದು,ಇದಕ್ಕೆ ನಿನ್ನ 

ಕುಮ್ಮಕ್ಕೇ ಕಾರಣ “ಎಂದು ಚಿಕ್ಕಜ್ಜ ಅಜ್ಜನ ಮನೆ ಬಾಗಿಲಿಗೆ ಬರುತ್ತಾನೆ..ಏನೂ ಗೊತ್ತಿರದ ಅಜ್ಜ ತಪ್ಪೇ ಇಲ್ಲವೆಂದು 

ಕೂಗಾಡುತ್ತಾನೆ..ಆಮೇಲೆ ಶುರು ಹುಣಸಿಗೆ ಮಹಾಯುದ್ಧ ಎಂದು ಎಣಿಸುತ್ತಿರುವಾಗಲೇ,ಒಬ್ಬ ಸೈಕಲ್ ಹತ್ತಿರ ಬಂದು

 “ ದೊಡ್ಡ ಭಟ್ರು ಅರ್ಜಂಟ್ ಬರುಕ್ ಹೇಳ್ ಕಳ್ಸಾರೆಮ್,ಅಚ್ಚೆ ಕೇರಿ ಭಟ್ರ್ ಎಲ್ಲಾ ಬಂದಾರೆ,ಏನೋ ನಂಬರಕಟ್ಟು(ಜಗಳ) ಆಗದೆ” ಎಂದು ಮಾವನ ಹತ್ತಿರ ಹೇಳಿದ..ಅದಾಗಲೇ ಬಸ್ಸೂ ಬಂದಿದ್ದರಿಂದ  ಶತಭಿಷನೂ ಬಸ್ಸೇರಿದ…ಕೂತವಿನಿಗೆ ಯಾಕೋ ಆಚಾರಿಯ ಮಾತುಗಳು ಮತ್ತೆ ನೆನಪಾದವು…
 “ಇದು ನನ್ನ ಕಟ್ಟಿಗೆ,ಇದು ನನ್ನ ಪೀಠ..ಇದನ್ನು ನಾನೇ ಮಾಡುತ್ತಿರುವುದು ಅಂತಾ ಮಾಡುಕಾಗ..ಎಲ್ಲದೂ ದೇವರದ್ದು..ಅವನೇ ಮಾಡ್ಸ್ಕಂತಿಪ್ಪುದು…ಹೇಳಿ ಮಾಡ್ದ್ರೆ ಎಲ್ಲದೂ ಸರಿ ಆತ್”..” 
ಜೊತೆಯಲ್ಲಿ
“ದೇವರು ಕೊಟ್ಟ ಭೂಮಿ,ಅವನು ಕೊಟ್ಟ ತೋಟ,ಅವನು ಕೊಟ್ಟ ಸಿಂಗಾರ..ಅದು ಸಲ್ಲುವುದೂ ಅವನಿಗೇ…ಮತ್ಯಾಕೆ ಈ ಜಗಳ ????”ಎಂಬ ಸಾಲುಗಳೂ ಮೂಡಿದವು…..
(ಇದು ಒಂದು ಕಾಲ್ಪನಿಕ ಕಥೆ..ನನ್ನ ಕನಸಿನ ಕಾದಂಬರಿಯಲ್ಲಿ ಬರುವ ಒಂದು ಪುಟ್ಟ ಭಾಗ..ಏನೋ ಬರೆಯುವ ಪ್ರಯತ್ನ ಮಾಡಿದ್ದೇನೆ..ನಮ್ಮ ಕಡೆ ಬಳಸುವ ಪದಗಳನ್ನು ಉಪಯೋಗಿಸುವ  ಪ್ರಯತ್ನವೂ ಇದೆ, ಶಬ್ಧಗಳು ಅರ್ಥವಾಗದಿದ್ದರೆ ದಯವಿಟ್ಟು ಕೇಳಿ..
ತಪ್ಪುಗಳಿದ್ದರೆ ದಯವಿಟ್ಟು ಹೇಳಿ...ನಿಮ್ಮ ಅನಿಸಿಕೆಗಳನ್ನು ಹೇಳಿ,ತಪ್ಪು-ಒಪ್ಪನ್ನು ತಿಳಿಸಿ,ಪ್ರೋತ್ಸಾಹಿಸಿ..)
-ನಿಮ್ಮನೆ ಹುಡುಗ,
ಚಿನ್ಮಯ ಭಟ್ಟ

Monday, October 15, 2012

ಗಿರಿ-ಬಾಲೆಯ ದರ್ಶನ

"ಆಕಸ್ಮಿಕ","ಅದೃಷ್ಟ" ಅಂತೆಲ್ಲಾ ಹೇಳ್ತೀವಲ್ವಾ???ಅದ್ಕೆ ಒಂದು ಒಳ್ಳೆ ಉದಾಹರಣೆ ನಿನ್ನೆ ಸಿಕ್ತು. ..ಬೆಳಗಿಂದ ಪುಸ್ತಕ ಹಿಡಿದುಕೊಂಡು ಕೂತವನಿಗೆ ಸುಮನಕ್ಕ ದೇವಸ್ಥಾನಕ್ಕೆ ಹೋಗ್ತಿದೀನಿ ಅಂದಾಗ ನನಗೂ ದೇವರ ನೆನಪಾಯ್ತು..ಹಂಗೇ ಇಲ್ಲಿಯೇ ಪಿ.ಜಿಯ ಬದಿಯ ಹಿರೇಮಗಳೂರು ಕೋದಂಡರಾಮ ದೇವಸ್ಥಾನಕ್ಕೆ ಹೋದವನಿಗೆ ಗಿರೀಶ(ಗಿರಿ ಶಿಖರ ಬ್ಲಾಗ್) ಹಾಗೂ ಬಾಲು ಸರ್(ನಿಮ್ಮೊಳಗೊಬ್ಬ ಬಾಲು) ಸಿಕ್ಕಿದ್ರು..ಕೇವಲ ಬ್ಲಾಗಿನಲ್ಲಿ ಅವರ ಲೇಖನಗಳನ್ನು ಓದಿ ಅಭಿಮಾನಿಯಾಗಿದ್ದ ನನಗೆ ಅವರೊಂದಿಗೆ ಮುಖತಃ ಭೇಟಿಯಾಗಿ ಮಾತನಾಡುವ ಅದೃಷ್ಟ ಸಿಕ್ತು..ಹಂಗೆ ದೇವಸ್ಥಾನ ನೋಡಿಕೊಂಡು ಹೊರಡುವ ಮುನ್ನ ಬಾಲು ಸರ್ ಆತ್ಮೀಯತೆಯಿಂದ ಗಿರಿ ಪ್ರವಾಸಕ್ಕೆ ಕರೆದರು,ನಾನೂ ಗೋಣಲ್ಲಾಡಿಸಿ ಹೊರಟೆ..ಜೊತೆಗೆ ನಮ್ಮದೇ ಕಾಲೇಜಿನ ದರ್ಶನ್ ಕೂಡ ಸೇರಿದರು.. ಹೀಗೆ ಆಕಸ್ಮಿಕವಾಗಿ ಹೊರಟ ಪ್ರವಾಸ ನನ್ನ ಪಾಲಿಗೆ ಮರೆಯಲಾದದ್ದು...ಅಲ್ಲಿಯ ಗಿರಿ ಪರ್ವತಗಳನ್ನು ನೋಡಿ ಮನಸ್ಸಿಗನಿಸಿದ್ದಷ್ಟನ್ನು ಗೀಚಿದ್ದೇನೆ..ದಯವಿಟ್ಟು ಓದಿ ,ತಪ್ಪು-ಒಪ್ಪುಗಳನ್ನು ತಿಳಿಸಿ ಆಶೀರ್ವದಿಸಿ...



ಕರಿಹಸಿರು ಕೇಶರಾಶಿಯ ಬಿಟ್ಟು,
ಗಿಳಿಹಸಿರು ಕುಪ್ಪಸವ ತೊಟ್ಟು
ಬಿಳಿಮೋಡದ ಸೆರಗನು ಹೊದೆದು
ನಿಂತಿದ್ದಳಾಕೆ ನಮಗಾಗಿ ಕಾದು

ಮೋಡದಡಿಯಲಿ ನಮ್ಮನು ನೂಕಿ,
ಆಡಿಸಿದಳು ಹರುಷದುಯ್ಯಾಲೆಯನು ಜೀಕಿ,
ಬೀಳಿಸಿದಳು ಕ್ಯಾಮರವ ಹಳೆಹೋಳಿಯಲಿ
ಬೀಸಿದಳು ಚಾಮರವ ತಂಗಾಳಿಯಲಿ

ಅಲ್ಲಿತ್ತು ಹಸಿರು ಮೆತ್ತಿದ ಕಲ್ಲಿನ ಕೇಕು
ಜೊತೆಗಿತ್ತು ಹಸಿರಿನ ಹೂಗಳ ತಳಕು
ಕಂಡಿರಲು ಸುತ್ತಲೂ ಹಸಿರಿನ ಸಾಲುಗಳು
ಮೂಡಿತು ಮೆತ್ತಗೆ ಶಬ್ಧವಿರದ ಸಾಲುಗಳು.

( ಇಲ್ಲಿ ಜೀಕುವುದು ಎಂದರೆ ತೂಗುವುದು ಎಂದರ್ಥ,
ಹೋಳಿ ಎಂದರೆ ನಮ್ಮ ಕಡೆ ತುಂಟತನಕ್ಕೆ ಬಳಸುವ ಪದ)

ಧನ್ಯವಾದ ಗಿರೀಶ್,ಬಾಲು ಸರ್ ಹಾಗೂ ದರ್ಶನ್.......

-ನಿಮ್ಮನೆ ಹುಡುಗ

Friday, October 5, 2012

ಮೂಡುತಿದೆ ಮಿರಿಮಿಂಚು…..

ನಿನ್ನೆ ನಿಸಾರ್ ಅಹ್ಮದರ "ನಿತ್ಯೋತ್ಸವ 'ತಂದು ಓದುತ್ತಾ ಕೂತೆ.. ಅವರು ಶಬ್ದಗಳನ್ನು ಬಳಸುವ ರೀತಿ ಹಾಗೂ ಭಾವವನ್ನು ಅಭಿವ್ಯಕ್ತಪಡಿಸುವ ರೀತಿ ತುಂಬಾ ಇಷ್ಟವಾಯ್ತು.. .ಹಾಗೇಯೆ ಮಡಚಿಟ್ಟವನಿಗೆ ,ನನಗೂ ಏನಾದರೂ ಬರಿಯಬೇಕು ಎಂದೆನಿಸಿತು...ಆಗಷ್ಟೇ ಮಳೆ ಬಿಟ್ಟಿತ್ತು...ನನ್ನ ಮನಸ್ಸಿನಲ್ಲಿ ಹಲವಾರು ದಿನದಿಂದ ಹೊಯ್ದಾಡುತ್ತಿದ್ದ ಗೊಂದಲಗಳ  ಪರಿಹಾರಕ್ಕೊಂದು ದಾರಿ ಹೊಳೆದಿತ್ತು.ಅವೆರಡನ್ನೂ ಸೇರಿಸಿ ಬರೆಯುವ ಪ್ರಯತ್ನ ಇದು...ಇದನ್ನು  ಮಳೆ ನಿಂತು ಹೋದ ಮೇಲಿನ ವಾತವರಣವೆಂದಾದರೂ ತಿಳಿದುಕೊಳ್ಳಿ ಅಥವಾ ಮನದ ಗೊಂದಲಗಳು ಕಳೆದು,ಹೊಸ ದಾರಿ ಸಿಕ್ಕ ಸ್ಥಿತಿಯ ಸಾಲುಗಳು ಎಂದಾದರು ತಿಳಿದುಕೊಳ್ಳಿ....


ಮೂಡುತಿದೆ ಮಿರಿಮಿಂಚು ಬಾಂದಣದ ಅಂಚಿನಲಿ
ತಾಡಿಸುತಿದೆ ಹೊಸಕನಸು ಮಳೆಬಿಲ್ಲ ಕುಂಚದಲಿ||

ಕೊಚ್ಚಿಹೋಯಿತು ಕೊಳೆಯು ಜಡಿದಿದ್ದ ಸುರಿಮಳೆಗೆ,
ಚೊಕ್ಕವಾಯಿತು ಇಳೆಯು ನೆಗಸಿನಾ ಸುಳಿಗಳಿಗೆ.
ಬಿರುಕೆಲ್ಲಾ ಸೇರುತಿದೆ,ನನಕಾರ ಕರಗುತಿದೆ,
ಸಮತೆಯಾ ಬಯಲೀಗ ಕೈಬೀಸಿ ಕರೆಯುತಿದೆ.

ಚಾಮರವಾ ಬೀಸುತಿದೆ ಮಿಂದೆದ್ದ ಹಳೆಮರವು,
ಹಾನವನು ಸುಳಿದಿರಲು ಕೆನ್ನೀರ ಹೊಸಹರಿವು.
ಮೊಳೆಯುತಿದೆ ಚಿಗುರೊಂದು ಮಲಗಿದ್ದ ಮಣ್ಣಿನಲಿ,
ಕಾಣುತಿದೆ ಕೋಲ್ಮಿಂಚು ಕಂದಿದಾ ಕಣ್ಣಿನಲಿ.

(ಇದರಲ್ಲಿ ನಮ್ಮ ಮನೆಯ ಕಡೆ ಬಳಸುವ ಶಬ್ದವನ್ನು ಬಳಸುವ ಪ್ರಯತ್ನ ಮಾಡಿದ್ದೇನೆ,ನೋಡಿ..
ನೆಗಸು=ಜೋರಾದ ಮಳೆಯಿಂದ ಹೊಳೆಯ ನೀರಿನಲ್ಲಿ ಉಂಟಾಗುವ ಉಬ್ಬರ
ಹಾನ=ದ್ರಷ್ಟಿ ತೆಗೆಯುವ ಒಂದು ಬಗೆ  )
,ದಯವಿಟ್ಟು ಓದಿ ,,,ತಪ್ಪು ಒಪ್ಪುಗಳನ್ನು ತಿಳಿಸಿ, ನನ್ನನ್ನು ಬೆಳೆಸಿ
-ನಿಮ್ಮನೆ ಹುಡುಗ