Tuesday, December 9, 2014

ಸಿಗ್ನಲ್ಲು ಬೀಳುವಂತಿದೆ (ಕವನ:ಸವಾರಿ)

ನಮಸ್ಕಾರ ಸ್ನೇಹಿತರೇ..
ಟ್ರಾಫಿಕ್ಕಿನ ಜಂಜಾಟ ಎಲ್ಲರಿಗೂ ಗೊತ್ತಿರುವಂಥದ್ದೇ..ಅದನ್ನೇ ನನ್ನೊಳಗಿನ ಒಂದಿಷ್ಟು ಗೊಂದಲದೊಂದಿಗೆ ,ಹೆದರಿಕೆಯೊಂದಿಗೆ ಸಮೀಕರಿಸಿ ಬರೆಯುವ ಪುಟ್ಟ ಪ್ರಯತ್ನವಿದು..ದಯಮಾಡಿ ಓದಿ,ವಾಚನ ಕೇಳಿ,ಅನಿಸಿಕೆ ಹೇಳಿ ಪ್ರೋತ್ಸಾಹಿಸಿ..ತಪ್ಪು-ಒಪ್ಪು ಹೇಳಿ ಬೆಳೆಯಲು ಸಹಕರಿಸಿ....ಹೇಳ್ತಿರಾ ಅಲ್ವಾ ?? ಇಲ್ಲಿದೆ ನೋಡಿ ಕವನ ..

ಸವಾರಿ
==========================
ಸಿಗ್ನಲ್ಲು ಇನ್ನೇನು ಬೀಳುವಂತಿದೆ,ಬದುಕೆಲ್ಲಾ ಹಳದಿಯಾಗಿದೆ
ಗಕ್ಕನೆ ನಿಲ್ಲುವುದೋ  ನುಗ್ಗಿ ಸಾಗುವುದೋ  ತಿಳಿಯದಾಗಿದೆ

ಅತ್ತಿತ್ತ ನೋಡದೇ ಬಂದಹಾಗೇ ಗುಡುಗುಡು ಓಡುತ್ತಲೇ ಇದ್ದರೆ
 ಬರ್ರನೆ ತೂರಿ  ಬಂದವನ ಅಡಿಗೆ ಸೇರಿ ಅಪ್ಪಚ್ಚಿಯಾಗುವ ಭೀತಿ.
ಎಡಬಲ ನೋಡಿ, ನೋಡಿಕೊಂಡು ಮೆಲ್ಲಗೆ ನುಸಿಯಹೋದರೆ,
ಹಾ!ಪಶೆ ಬಿದ್ದೆ ಎಂದು ಅಣಕಿಸುತಿದೆ ಆ ಮಾವನ ನೋಟದ ರೀತಿ.

ಸಿಗ್ನಲ್ಲು ಇನ್ನೇನು ಬೀಳುವಂತಿದೆ,ಬದುಕೆಲ್ಲಾ ಹಳದಿಯಾಗಿದೆ
ಗಕ್ಕನೆ ನಿಲ್ಲುವುದೋ  ನುಗ್ಗಿ ಸಾಗುವುದೋ  ತಿಳಿಯದಾಗಿದೆ

ಈ ಉರಿಉಚ್ಚೆಯರ್ಜಂಟು ಸಲ್ಲದು ನಿಂತು ಹೋಗುವಾ ಎಂದೆಣಿಸಿ
ಬಂದುಮಾಡಿದರೆ ಗಾಡಿ ,ನಿಂತದ್ದು ನಿಂತೇ ಹೋಗುತ್ತದೆ ಆತ್ಮಲಿಂಗದಂತೆ.
ಹಿಂದಿನವರ ಹಾರನ್ನುಗಳೆಲ್ಲಾ ಯಥಾಶಕ್ತಿ ಕಿರುಚಿಕೊಳ್ಳತೊಡಗುತ್ತವೆ
ವೈರಿಯ ನಡುಮುರಿಯಲು ಹಪಹಪಿಸುತಿಹ ಸೈನಿಕರ ಯುದ್ಧಘೋಷದಂತೆ.

ಸಿಗ್ನಲ್ಲು ಇನ್ನೇನು ಬೀಳುವಂತಿದೆ,ಬದುಕೆಲ್ಲಾ ಹಳದಿಯಾಗಿದೆ
ಗಕ್ಕನೆ ನಿಲ್ಲುವುದೋ  ನುಗ್ಗಿ ಸಾಗುವುದೋ  ತಿಳಿಯದಾಗಿದೆ

ಕದ್ದುಮುಚ್ಚಿ ನುಸುಳಿದರೆ ಗಳಿಗೆ ಗಳಿಗೆಗೂ ಅದೇನೋ ಹೆದರಿಕೆಯಾಗುತ್ತದೆ
ತಣ್ಣಗೆ ಬಿಳಿಗೆರೆಯ ಮೇಲೆ  ನಿಶ್ಚಿಂತೆಯಿಂದ ನಿಲ್ಲಬಾರದಿತ್ತೇ? ಅನ್ನಿಸುತ್ತದೆ
ನಿಂತಲ್ಲಿ,ರೊಯ್ಯ್ಯ ಎಂದು ಹೋಗುವವರ ನೋಡಿ ಥೋ ಹೊಟ್ಟೆಉರಿಯುತ್ತದೆ
ಉಲ್ಟಾಬರುವ ಕೆಂಪುನಂಬರು,ವ್ಯರ್ಥವಾಯಿತೀಕ್ಷಣವೆಂಬುದ  ನೆನಪಿಸುತ್ತದೆ .

ಸಿಗ್ನಲ್ಲು ಇನ್ನೇನು ಬೀಳುವಂತಿದೆ,ಬದುಕೆಲ್ಲಾ ಹಳದಿಯಾಗಿದೆ
ಗಕ್ಕನೆ ನಿಲ್ಲುವುದೋ  ನುಗ್ಗಿ ಸಾಗುವುದೋ  ತಿಳಿಯದಾಗಿದೆ

-
ಚಿನ್ಮಯ ಭಟ್ಟ
೦೯/೧೨/೧೪

ಪಶೆ ಬೀಳು-ವ್ಯೂಹಕ್ಕೆ ಸಿಲುಕು,ಮೋಸ ಹೋಗು
ಉರಿಯುಚ್ಚೆಯರ್ಜಂಟು-ತೀರಾ ಅರ್ಜಂಟು ಎನ್ನುವ ಅರ್ಥದಲ್ಲಿ..

ವಾಚನದ ಪ್ರಯೋಗ ಇಲ್ಲಿದೆ :

ಹುಂ....ಏನ್ ಅನ್ನಿಸ್ತು ?? ದಯಮಾಡಿ ಹೇಳಿ ಕಾಯ್ತಿದೀನಿ ::)...