ಎರಡಾಣೆ ಬೆಲೆ ಕಾಣೆ,
ಮುದಿಯೆತ್ತ ತೊಗಲಲಿ
ಸದರಿನ ಮಾಲೆ ಕಾಣೆ
ಎಲ್ಲಿ ಹೋದೆ ಕರುವೆ ಜಾರಿ
ಎಲ್ಲೆ ಮೀರಿ ಊರ ಹಾರಿ...
ಡಬ್ಬಿಯ ತಿಂಡಿ ಕದ್ದ
ಕಳ್ಳ ಬೆಕ್ಕೆಲ್ಲಿಗೆ ಹೋಯ್ತು
ಗುಬ್ಬಿಯ ಗೂಡು ಹೆಣೆದ
ಒಳ್ಳೆ ಗಿಣಿ ಕಾಣದಾಯ್ತು
ಉಳಿದದ್ದು ಬರಡೆಮ್ಮೆ ಕನಸು
ಹಳಸಿದ್ದು ಹೊಸ ಹೊಸ ತಿನಿಸು.
ಮೊದಲಿದ್ದ ಜಡೆ ಜುಟ್ಟು ,
ರಟ್ಟೆಯಷ್ಟುದ್ದವಾಯ್ತು
ಹದವಿದ್ದ ಕುಡಿಮೀಸೆ
ಕಂಬಳಿ ಹುಳುವಾಗಿ ಕಚ್ತು
ಬಾಗಿದ್ದೊಂದೇ ಎತ್ತಿನ ಬೆನ್ನು
ನೊಗವ ಹೊತ್ತ ಬಾಳ ಹೊನ್ನು
ಬರಡೆಮ್ಮೆ ಮೇಲೆ
ಎರಡಾಣೆ ಬೆಲೆ ಕಾಣೆ
ಮುದಿಯೆತ್ತ ತೊಗಲಲಿ
ಸದರಿನ ಮಾಲೆ ಕಾಣೆ
ಎಲ್ಲಿ ಹೋದೆ ಕರುವೆ ಜಾರಿ
ಎಲ್ಲೆ ಮೀರಿ ಊರ ಹಾರಿ!!!
(ಮೊನ್ನೆ ರಜೆಯಲ್ಲಿ ಯಾವುದೋ ಕಾದಂಬರಿ ಓದುತ್ತಿದ್ದೆ..ಅದರಲ್ಲಿ ತಂದೆ ತಾಯಿಗಳನ್ನು ಬಿಟ್ಟು ಹೋದ ಮಕ್ಕಳ ಚಿತ್ರಣವಿತ್ತು..ಹಾಗೆ ಯೋಚಿಸುತ್ತಾ ಒಂದೆರಡು ಎನೇನೋ ಶಬ್ದಗಳು ಹೊಳೆದವು...ಅದನ್ನೇ ಸೇರಿಸಿ ಒಂದು ಕವನದ ಥರ ಏನೋ ಬರೆದಿಟ್ಟೆ..ಒಬ್ಬನೇ ಇದ್ದಾಗ ಅದಕ್ಕೊಂದು ರಾಗ ಹಾಕಲೂ ಪ್ರಯತ್ನಿಸುತ್ತಿದ್ದೇನೆ..ನಿಮಗೂ ಚೂರು ಪುರಸೊತ್ತಿದ್ದರೆ ಅದನ್ನೂ ಪ್ರಯತ್ನಿಸಿ ನೋಡಿ!!!!
ಹಾಂ..ಮತ್ತೊಂದು,ಮತ್ತೊಂದು ದಿನ ನಾನೇ ಓದಿದಾಗ ಇದು ನನಗೇ ಅರ್ಥವಾಗಲಿಲ್ಲ ,ಅದಕ್ಕೆ ಮೊದಲೇ ಹೇಳುತ್ತಿದ್ದೇನೆ,
ಇಲ್ಲಿ ಬರಡೆಮ್ಮೆ,ಮುದುಯೆತ್ತು ಎಲ್ಲಾ ವಯಸ್ಸಾದ ಅಪ್ಪ-ಅಮ್ಮಂದಿರು..ಕರು,ಗಿಳಿ,ಬೆಕ್ಕು ಎಲ್ಲಾ ಮಕ್ಕಳು!!!!!!)