Monday, June 13, 2016

ಕನ್ನಡ ದೇವದಾಸ (Part-2)

ಕನ್ನಡ ದೇವದಾಸ ತೂರಾಡುತ್ತ ಬರುತ್ತಿದ್ದಾನೆ
ಚಂದ್ರಮುಖಿಯ ನೆನೆ-ನೆನೆಯುತ್ತಾ
ರಸ್ತೆಯ ಇಕ್ಕೆಲಗಳನೂ ಮುಟ್ಟುತ್ತಿದ್ದಾನೆ
ಕಣ್ಣು ಕೆಂಪಾಗಿದೆ
ಕೂದಲು ಗೆದರಿದೆ
ಬಟ್ಟೆಯಂತೂ ಗಬ್ಬು ಗಬ್ಬಾಗಿದೆ

ಆತನೇನೂ ಕುಡಿದಿಲ್ಲ
ರಾತ್ರಿಯೆಲ್ಲ ಯಾವಳದೋ ಮನೆಯಲ್ಲಿ
ಬಿದ್ದುಕೊಂಡಿಲ್ಲ

ಎಲ್ಲಿದ್ದ?
ಮೇಳದಲ್ಲಿದ್ದ.

ಊರಿಗೆ ಬಂದ ಮೇಳದವರ ಜೊತೆ
ಮೂರೂ ದಿನ ಕ್ಯಾಂಪು ಹಾಕಿದ್ದ
ರಾತ್ರಿಯೆಲ್ಲಾ ಕಣ್ಣೆದುರೇ
ರಾಜ ಮಹಾರಾಜರ ಒಡ್ಡೋಲಗ
ಸಿಕ್ಕಷ್ಟು ಸಮಯ ಕಣ್ಣು ಮುಚ್ಚಿ ತೆರೆದರೆ
ಮತ್ತೆ ಚೌಕಿಮನೆಯ ಸಹವಾಸ
ಅಷ್ಟೂ ದಿನ ಭಾಗವತರ ಪಕ್ಕ ಕೂತು
ಶ್ರುತಿ ಹಿಡಿದು ಪೀಯನ್ನು ಗುಂಡಿ ಒತ್ತುತ್ತಿದ್ದ
ಪಾಂಡವ-ಕೌರವ,
ರಾಮ-ರಾವಣ
ದೇವೇಂದ್ರರ ಆಸ್ಥಾನದಲ್ಲಿ
ಕಾಲ ಕಳೆಯುತ್ತಿದ್ದ

ಯಾಕೆ?

ಈಗಿನ ಕಾಲದ ಯುವಕರಂತೆ
ದೇವದಾಸನಿಗೂ ಬೇಗ ನಿದ್ದೆ ಹತ್ತುವುದಿಲ್ಲ
ನಿನ್ನೆಯ ದಿನ ಮಲಗಿ ಇವತ್ತು ಬೆಳಿಗ್ಗೆ ಏಳುವುದು
ಈತನಿಗೀಗ ಸಾಧ್ಯವಾಗುತ್ತಿಲ್ಲ
ಕತ್ತಲಾಯಿತೆಂದರೆ ಪಾರ್ವತಿಯ ಮುಖಚರ್ಯೆ
ಕಣ್ಣೆದುರು ಹರಡಿಕೊಳ್ಳುತ್ತದೆ
ಕ್ಷಣ ಕ್ಷಣಕ್ಕೂ ಆಕೆಯ ಮುದ್ದು ಮಾತುಗಳು
ಕಿವಿಯಲ್ಲಿ ಗುಯ್ಯಂ ಗುಟ್ಟಿ
ತಲೆ ಹನ್ನೆರೆಡಾಣೆಯಾಗುತ್ತದೆ

ಹಗಲೆಲ್ಲ ಹೇಗೋ ಕಳೆಯುವ ದೇವದಾಸನಿಗೆ
ರಾತ್ರಿ ಬಂತೆಂದರೆ ಹುಚ್ಚು ಹಿಡಿಯುತ್ತದೆ
ಕಳೆದುಕೊಂಡ ಪಾರ್ವತಿಯ ನೆನಪಾಗಿ
ಮೈ ಕಾವೇರುತ್ತದೆ
ದಿನ ಕಳೆದಂತೆ ಮೈ ಕಾವು ಕೆಚ್ಚಾಗಿ
ಮನಸೆಲ್ಲಾ ಹುಚ್ಚಾಗಿ
ಜ್ವರಬಂದು ಎರಡೂ ಕಾಲು
ಚಂದ್ರಮುಖಿಯ ಹುಡುಕ ಹೊರಡುತ್ತದೆ

ಅಲ್ಲೆಲ್ಲೋ ಆಟದ ಚೌಕಿ
ಬಣ್ಣ ವಸ್ತ್ರ ಗೆಜ್ಜೆ
ಕೀಚಕ ದುರ್ಯೋಧನ
ಭಾಗವತರ ಪದ್ಯ
ಇದೇ ಕನ್ನಡ ದೇವದಾಸನ
ಚಂದ್ರಮುಖಿ ಸಾಂಗತ್ಯ
ಎದೆಯ ಬಡಿತವ ನಡುಗಿಸಿ
ಹುಲುಮಾನವ ನೀನೆಂದು ಅಣಕಿಸುವ
ಚಂಡೆಯ ಸದ್ದು
ಟಂಟರ್ ಟಂಟರ್ ಟಂಟರ್ ಟಾ
ಟಂಟರ್ ಟಂಟರ್ ಟಂಟರ್ ಟಾ

ಆಹಾ ಕೇಳುತ್ತಿದ್ದರೆ
ಮೈ ಜ್ವರವೆಲ್ಲ ಮರೆಯುತ್ತದೆ
ಮೈ ತಣ್ಣಗಾಗಿರುತ್ತದೆ
ಬೆಳಗಿನ ಜಾವದ ನಿದ್ದೆಯಲ್ಲಿ
ಮತ್ತೆ ಪಾರ್ವತಿಯ ಮುಖ ಕಾಣಿಸುತ್ತದೆ

ಪಾರ್ವತಿ ದೇವದಾಸನ ಕೈ ಹಿಡಿಯುತ್ತಾಳೆ
ಹೀಗ್ಯಾಕಾದೆ ಎಂದು ಕುಶಲ ವಿಚಾರಿಸುತ್ತಾಳೆ
ನೀನಿಲ್ಲದೆ ನಾನಿಲ್ಲ ಎನ್ನುತ್ತಾಳೆ
ಅಷ್ಟರಲ್ಲಿ ಕುರುಡು ನೊಣವೊಂದು
ಭುಜಕ್ಕೆ ಕಚ್ಚುತ್ತದೆ
ಅರ್ಧ ನಿದ್ರೆಯಿಂದ ಎಚ್ಚರಾಗುತ್ತದೆ

ಅದೇ ಪ್ರಪಂಚ!
ಹಿಂದಿನ ರಾತ್ರಿ ಜಗಮಗಿಸಿದ ಭವ್ಯ ರಂಗಮಂಚ
ಈಗ ಎಲ್ಲ ಖಾಲಿ ಖಾಲಿಯಾಗಿದೆ
ಟ್ಯೂಬ್ ಲೈಟಿಗೆಂದು ಕಟ್ಟಿದ ವೈರು
ತನ್ನ ಪಾಡಿಗೆ ತಾನು ಜೋತಾಡುತ್ತಿದೆ
ಲಾಟಣ್ಣಿಗೆ ಹಾಕಿ ಚೆಲ್ಲಿದ ಸೀಮೆಎಣ್ಣೆಯ ಘಮ
ಇನ್ನೂ ಅಲ್ಲೆಲ್ಲೋ ಬರುತ್ತಿದೆ
ಹಣತೆಗೆಂದು ಹಚ್ಚಿದ ಬತ್ತಿ
ಅರ್ಧ ಸುಟ್ಟು ನೆಲಕ್ಕೆ ಬಿದ್ದಿದೆ
ಚೆಲ್ಲಿದ ಮಂಡಕ್ಕಿ
ಹರಿದು ಬಿದ್ದ ಹಿಂಪರದೆ
ಬಿಟ್ಟು ಹೋದ ಹರಕು ಚಾದರ
ನಿನ್ನೆಯ ವೈಭವವನೆಲ್ಲ ಅಪಹಾಸ್ಯ ಮಾಡುತ್ತದೆ
ಬದುಕೊಂದು ಭ್ರಮೆಯೆನಿಸುತ್ತದೆ

ಎದ್ದು ಊರ ಕಡೆ ಮುಖ ಮಾಡುತ್ತಾನೆ
ನಿದ್ದೆಗೆಟ್ಟಿದ್ದರಿಂದ ಓಲಾಡುತ್ತಾನೆ
ಹಸಿವಿನಿಂದ ತೂರಾಡುತ್ತಾನೆ
ಆಪ್ತೇಷ್ಟರಿಂದ ಬೈಸಿಕೊಂಡು ಹಗುರಾಗಲು
ಮನೆಯ ದಾರಿ ಹಿಡಿಯುತ್ತಾನೆ
ಮತ್ತೆ ಜ್ವರ ಬರುವವರೆಗೆ ಕಾಯುತ್ತಾನೆ

ಕಥೆ ಮುಂದುವರೆಯಬಹುದು

-ಚಿನ್ಮಯ (13/6/16)

Sunday, June 12, 2016

ಕನ್ನಡ ದೇವದಾಸ (Part:1 )

ಕನ್ನಡ ದೇವದಾಸ ಕುಡಿಯುವುದಿಲ್ಲ
ಹಾಡುತ್ತಾನೆ
ಯದ್ವಾ ತದ್ವಾ ಮಾತಾಡುತ್ತಾನೆ
ಒಮ್ಮೊಮ್ಮೆ ಪದ್ಯ ಬರೆಯುತ್ತಾನೆ

ಕಾಲೇಜುನಲ್ಲೇಲ್ಲೋ ಸಿಕ್ಕಿದ ಪಾರ್ವತಿ
ಈಗ ಇವನ ಜೊತೆ ಮಾತಾಡುವುದಿಲ್ಲ
ದೂರವಿರು ಎಂದು ಅಣ್ಣ-ಅಪ್ಪ-ಮಾವ
ಸಂಬಂಧಿಕರ್ಯಾರೂ ಆಕೆಯ ತಡೆದಿಲ್ಲ
ಬಹುಷಃ ಇವನೊಡನೆ
ಮಾತಾಡಲೇ ಬೇಕಾದದ್ದೇನೂ ಇಲ್ಲ
ಇವನ ಹಾಗೆ ಸುಮ್ಮನೇ ಹಲುಬಲು
ಆಕೆಗೆ ಮೊದಲಿಂದಲೂ ಮನಸ್ಸಿಲ್ಲ

ಮೊದಲೂ ಹೀಗೆಯಾ?
ಇಲ್ಲಿಲ್ಲ,

ಇಂಟರ್‍ವಲ್ಲಿಗೂ ಮುಂಚೆ ಮಾತಿತ್ತು
ಹಾವುಗಳು ಕೂಡುವಂತೆ ಮಾತಿನ ಬಳ್ಳಿ
ಇಬ್ಬರನ್ನೂ ಅಪ್ಪಿಕೊಂಡಿತ್ತು
ತಡರಾತ್ರಿಯಲಿ ಚಂದಿರನ ಆಶೀರ್ವಾದದಿಂದ
ನಿತ್ಯವೂ ಜೀವಂತ ಸ್ವಪ್ನಗಳ
ಬಂಗಾರದ ಮೊಟ್ಟೆ ಸಿಗುತ್ತಿತ್ತು
ದೇವದಾಸ್-ಪಾರು
ನೆಕ್ಸ್ಟ್ ಜನರೇಷನ್ನಿನ ಲವ್ ಐಕಾನ್ ಆಗುವ
ಎಲ್ಲ ಲಕ್ಷಣ ಕಾಣುತ್ತಿತ್ತು

ಯಾವುದೋ ಡ್ರೀಮ್ ಸಿಕ್ವೆನ್ಸಿನಲ್ಲಿ ದೇವದಾಸ
ಆಕೆಯ ಕೈ ಹಿಡಿದು ಮೆತ್ತಗೆ ಅದುಮಿದ
ಪಾಪದ ಪಾರ್ವತಿ ಭುಜಕ್ಕೆ ಒರಗಿದಳು
ಅಯ್ಯಯ್ಯೋ ಎಂದ ಪುಕ್ಕ ಭೂಪ
ಆಕೆ ಸೊಂಟಕ್ಕೆ ಕಚಕುಳಿಯಿಟ್ಟು
ಜೋಕು ಮಾಡಿದೆ ಎಂದ
ಆಕೆ ಕುಂತಲ್ಲಿಂದೆದ್ದಳು
ವಿಷಾದದ ನಗೆ ನಕ್ಕು ಹೊರಟುಬಿಟ್ಟಳು

ಅಷ್ಟೇ,
ಕರೆಂಟು ಹೋಯ್ತು ಮಾರಾಯ್ರೇ
ಕತ್ತಲಲ್ಲಿ ಭಯಂಕರ ಗದ್ದಲ
ಬಾಯ ತುದಿಯಲ್ಲೇ ಅವ್ವ-ಅಕ್ಕನ ಬೈಗುಳ
ಫ್ಯಾನುಗಾಳಿ ನಿಂತು ಮೈತುಂಬ ಬೆವರು
ನಿಟ್ಟುಸಿರ ಜೊತೆ ಮಾಮೂಲಿ ತಿರಸ್ಕಾರ

ಚಾಲೂ ಆಯಿತು ಕೊನೆಗೂ ಕಥೆ
ಈಗ ದೇವದಾಸನೊಡನೆ ಪಾರ್ವತಿಯಿಲ್ಲ
ಆಕೆ ತನ್ನದೊಂದು ಪುಟ್ಟ ಗೂಡಿನಲ್ಲಿ
ಗುಬ್ಬಚ್ಚಿಯಂತೆ ಮುದ್ದಾಗಿದ್ದಾಳೆ
ಪುಟ್ಟ ಆಸೆಗಳ ಕೈ ಕಸೂತಿ ಹಾಕುತ್ತಾ
ಮನೆಮಗಳಾಗಿ ಓಡಾಡಿಕೊಂಡಿದ್ದಾಳೆ

ದೇವದಾಸನೀಗ ಕನ್ನಡ ಜಿಲ್ಲೆಯಲ್ಲಿದ್ದಾನೆ
ಕಳೆದುಕೊಂಡ ಹುಡುಗಿಯ ನೆನಪಲ್ಲಿ ಪದ್ಯಗಳ ಬರೆದು
ಕನ್ನಡ ದೇವದಾಸನೆಂದೇ ಪ್ರಸಿದ್ಧನಾಗಿದ್ದಾನೆ

ಕಥೆ ಮುಂದುವರೆಯಬಹುದು....

-ಚಿನ್ಮಯ
(12/6/16)

Friday, June 10, 2016

ಎವರೆಸ್ಟ್ (ಮೂ: ಜಾನ್ ಕ್ರಾಕೌರ್, ಅ: ವಸುಧೇಂದ್ರ)

ಪರ್ವತ ಚಾರಣವನ್ನು ಒಂದು ಸಣ್ಣ ಮಟ್ಟಿಗಿನ ಹುಚ್ಚು ಎಂದು ಪರಿಗಣಿಸಿದರೆ, ಎವರೆಸ್ಟ್ ಶಿಖರದ ಚಾರಣವನ್ನು ಹುಚ್ಚಿನ ಪರಮಾವಧಿ ಎನ್ನಬಹುದೇನೋ. ಅದೇ ಚಾರಣವನ್ನು ಸವಾಲು ಎಂದು ಪರಿಗಣಿಸಿದರೆ, ಎವರೆಸ್ಟ್ ಶಿಖರವನ್ನು ಯಕ್ಷಪ್ರಶ್ನೆ ಎನ್ನಬಹುದೇನೋ.
ಎವರೆಸ್ಟ್, ಜಗತ್ತಿನಾದ್ಯಂತ ಪರ್ವತಾರೋಹಿಗಳನ್ನು ತೀವ್ರವಾಗಿ ಸೆಳೆಯುವ ಮತ್ತು ತೀವ್ರವಾಗಿ ಹೆದರಿಸುವ ಚಾರಣ ತಾಣ. ಅದನ್ನು ಹತ್ತಿ ಜೀವನದ ಪರಮಾನಂದವನ್ನು ಅನುಭವಿಸಿದವರು ಕೆಲವರಾದರೆ, ಜೀವನದುದ್ದಕ್ಕೂ ಕಾಡುವ ದುರಂತಗಳ ದುಃಸ್ವಪ್ನವನ್ನು ಕಟ್ಟಿಕೊಂಡು ಬಂದವರು ಕೆಲವರು. ಇನ್ನೂ ಕೆಲವರಿದ್ದಾರೆ, ಆದರೆ ಅವರ ಬಗ್ಗೆ ಉಳಿದವರು ಮಾತನಾಡಬೇಕಷ್ಟೇ, ಅವರು ಮಾತ್ರ ಯಾವುದೋ ಹಿಮಗಡ್ಡೆಯಲ್ಲಿ ಖಾಯಂ ಆಗಿ ಮಲಗಿದ್ದಾರೆ.
ಪರಿಶ್ರಮ,ತೊಂದರೆ,ಪ್ರಸಿದ್ಧಿ,ಹಣ ಇವುಗಳ ಲೆಕ್ಕಾಚಾರ ಏನೇ ಇರಲಿ, ಎವರೆಸ್ಟ್ ಚಾರಣವಂತೂ ನಡೆಯುತ್ತಲೇ ಇದೆ. ಅದರ ಆ ಅನನ್ಯ ಅನುಭವ ಚಾರಣಿಗರಿಗೆ ಮಾತ್ರ ಸೀಮಿತವಾದದ್ದಾದರೂ, ಆ ಪ್ರಯಾಣದಲ್ಲಿ ಸಿಗುವ ಥ್ರಿಲ್ ಅನ್ನು ಚೂರೇ ಚೂರಾದರೂ ಅನುಭವಿಸಬೇಕೆಂದರೆ ಜಾನ್ ಕ್ರಾಕೌರ್ ಅವರು ಬರೆದ ವಸುಧೇಂದ್ರ ಅವರು ಕನ್ನಡಕ್ಕೆ ಅನುವಾದಿಸಿದ 'ಎವರೆಸ್ಟ್' ಕೃತಿಯನ್ನು (ಇಂಟು ಥಿನ್ ಏರ್ ) ಓದಬಹುದು.
1996ರಲ್ಲಿ ನಡೆದ ಚಾರಣದ ಕುರಿತಾದ ಈ ಪುಸ್ತಕದಲ್ಲಿ ಚಾರಣದ ಬಗೆಗಿನ ಅನುಭವಗಳಿದೆ, ಚಾರಣಕ್ಕೆ ಬೇಕಾದ ಕೌಶಲ್ಯಗಳ ಬಗೆಗಿನ ವಿಚಾರಗಳಿದೆ, ಎವರೆಸ್ಟ್ ಬಗೆಗಿನ ಚಂದದ ಮಾಹಿತಿ ಇದೆ, ಚಾರಣದಲ್ಲಿ ಸಿಗುವ ವಿವಿಧ ಬಗೆಯ ಜನರ ಬಗ್ಗೆ ವಿಮರ್ಶೆಯಿದೆ, ಮೂರ್ನಾಕು ತಿಂಗಳು ಜೊತೆಗಿದ್ದವರ ಬಗೆಗಿನ ಸ್ನೇಹ-ಸಂಬಂಧಗಳ ಲಹರಿಯಿದೆ, ಶ್ರೇಷ್ಠ ಪರ್ವತಾರೋಹಿಗಳ ಸಾಹಸಗಾಥೆಯಿದೆ, ಗೊತ್ತಿದ್ದೂ ತಪ್ಪು ಮಾಡಿದವರ ವಿಷಾದದ ಕಥೆಯಿದೆ, ಎಲ್ಲಕ್ಕಿಂತ ಮುಖ್ಯವಾಗಿ ಸಾಧನೆಯಲ್ಲೂ ಕಾಡುವ ಅಪರಾಧಿಭಾವದ ಒಳನೋಟವಿದೆ.
ಬಹುಷಃ ಎಕ್ಸಾಮಿನಲ್ಲಿ ಪಾಸು ಫೇಲು ಎಂದು ವರ್ಗೀಕರಿಸುವಷ್ಟೇ ಸರಳವಾಗಿ ಎವರೆಸ್ಟ್ ಹತ್ತಿದವರು ಮತ್ತು ಹತ್ತಲು ಪ್ರಯತ್ನಿಸಿ ಸೋತವರು ಎಂದು ವರ್ಗೀಕರಿಸುವುದು ಈ ಪುಸ್ತಕವನ್ನು ಓದಿದ ಬಳಿಕ ಸಾಧ್ಯವಿಲ್ಲ ಎನಿಸುತ್ತದೆ. ಏಕೆಂದರೆ ಪ್ರತಿಯೊಬ್ಬರ ಚಾರಣದ ಹಿಂದೆಯೂ ಅವರದೇ ಆದ ಕಾರಣವಿದೆ. ಅವರದ್ದೇ ಆದ ಗುರಿಗಳಿದೆ. ಒಂದಿಷ್ಟು ಹುಚ್ಚುತನಗಳಿದೆ, ಅನಿವಾರ್ಯತೆಗಳಿದೆ, ಜೊತೆಗೆ ಅಪೂರ್ವವಾದ ತ್ಯಾಗವೂ ಇದೆ.

ಮಾರ್ಗದರ್ಶಿಗಳು,ಶೇರ್ಪಾಗಳು,ಅವರ ವ್ಯವಹಾರ,ಹಣ, ಕ್ಯಾಂಪು, ಎಜೆನ್ಸಿ, ಪೈಪೋಟಿ, ಶೇರ್ಪಾಗಳ ವಿಚಿತ್ರ ನಂಬಿಕೆಗಳು ಓದುಗರೆದುರು ಹೊಸದೊಂದು ಸಾಂಸ್ಕøತಿಕ ಪ್ರಪಂಚವನ್ನು ಖಂಡಿತಾ ಕಟ್ಟಿಕೊಡುತ್ತದೆ.
ಪ್ರಕೃತಿಯ ವೈಪರಿತ್ಯಕ್ಕೆ ಸಿಕ್ಕಿ ಸತ್ತು ಹೋದವರು ಕೆಲವರಾದರೆ, ಸೂಕ್ತ ಸಂವಹನದ ಕೊರತೆಯಿಂದ ಸತ್ತವರು ಕೆಲವರು. ಅನಾರೋಗ್ಯವನ್ನು ಅಲಕ್ಷ್ಯ ಮಾಡಿ ಯಾವುದೋ ಜಿದ್ದಿಗೆ ಹತ್ತಿ ದೇಹ ಕೈಕೊಟ್ಟವರು, ಶೋಕಿಗೆ ಹತ್ತಿ ಸತ್ತವರು, ಹಣಕ್ಕಾಗಿ ಅಲ್ಲಿದ್ದವರು, ಸ್ವಾಮಿ ನಿಷ್ಠೆ ಪರಿಪಾಲನೆಗಾಗಿ ಪ್ರಾಣವನ್ನು ಲೆಕ್ಕಿಸದವರು, ಕರ್ತವ್ಯಪಾಲನೆಗಾಗಿ ಪ್ರಾಣವನ್ನೇ ಕೊಟ್ಟವರು ಹೀಗೆ ಇಲ್ಲಿ ಮನುಷ್ಯನ ಸಂಕೀರ್ಣ ಮುಖಗಳ ಪರಿಚಯವಾಗುತ್ತದೆ.
ಪುಸ್ತಕದ ಬರವಣಿಗೆಯ ಬಗ್ಗೆ ನಾನೇನೂ ಮಾತನಾಡಲಾರೆ. ಪುಸ್ತಕದ ಕನ್ನಡ ಚೆಂದವಾಗಿದೆ. 'ಹಿಮಕುಳಿ'ಯಂಥಹ ಕನ್ನಡ ಪದಗಳ ಬಳಕೆ ಇಷ್ಟವಾಯಿತು. ಅಗತ್ಯವಿರುವೆಡೆ ಆಂಗ್ಲಭಾಷಾ ಪದಗಳನ್ನು ಹಾಗೆಯೇ ಇಟ್ಟಿದ್ದು ಮೂಲಪುಸ್ತಕದ ಫೀಲ್ಗೆ ಹತ್ತಿರವೆನ್ನಿಸಿತು.
ಪುಸ್ತಕ ಓದಿ ಅವತ್ತೆ ಬರೆಯಬೇಕೆಂದಿದ್ದನ್ನು ಬೇಕಂತಲೇ ತಡೆಹಿಡಿದು, ಮನಸ್ಸಿನಲ್ಲಿ ಉಳಿದಿದ್ದನ್ನು, ಮನಸ್ಸಿನಲ್ಲಿ ಅರಳಿದ್ದನ್ನು ಇಲ್ಲಿ ಬರೆದಿದ್ದೇನೆ. ಸ್ಮೃತಿಯಲ್ಲಿ ರಾಬ್ ಹಾಲ್, ಆಂಡಿ, ಸ್ಕಾಟ್, ಡಹ್ಗ್, ಫಿಷರ್,ಬೊಕ್ರೀವ್ ಮುಂತಾದ ಹಲವು ಹೆಸರುಗಳಿದೆ. ಮನೆಯಲ್ಲಿ ಕಂಬಳಿಯ ಮೇಲೆ ಮಲಗಿ ಪುಸ್ತಕ ಓದುತ್ತಾ ಕಣ್ಣೆದುರು ಹರಡಿದ ಹಿಮಾಲಯದ ಚಂದದ ಕಲ್ಪನೆಗಳಿದೆ.
ಮತ್ತು
ನಾನೂರು ಚಿಲ್ಲರೆ ಅಡಿ ಮೇಲೆ ಇದ್ದವನನ್ನು ರಕ್ಷಿಸಲಾಗದ್ದಕ್ಕೆ ತನ್ನನ್ನು ತಾನು ಅಪರಾಧಿ ಎಂದುಕೊಳ್ಳುವ ಜಾನ್ ಕ್ರಾಕೌರ್ನ ಮನದಾಳದ ಮಾತುಗಳು ವಾರದಾಟಿದರೂ ಕಾಡುತ್ತಿದೆ.
ಧನ್ಯವಾದಗಳು ವಸುಧೇಂದ್ರ ಸರ್ ಚಂದದ ಪುಸ್ತಕಕ್ಕೆ, ಹಿಮಾಲಯವೆನ್ನುವ ಅದ್ಭುತ ಪ್ರಪಂಚದ ತುಣುಕನ್ನು ಪರಿಚಯಿಸಿದ್ದಕ್ಕೆ.
-ಚಿನ್ಮಯ