ಆತನ ಹೆಸರು ಕರಣ್.ಒಳ್ಳೆಯ
ಮಿಮಿಕ್ರಿ ಪ್ರತಿಭೆ.ಕಾಲೇಜಿನ ಕ್ಯಾಂಟೀನಿನಲ್ಲಿ ಒನ್ ಬೈ ತ್ರೀ ಕೋಕೋಕೋಲಾ ಕುಡಿಯುತ್ತಾ ಗುಂಪಾಗಿ ಕುಳಿತ ಸ್ನೇಹಿತರ ನಡುವೆ ಬೇರೆ ಬೇರೆ
ಕಲಾವಿದರ ಅನುಕರಣೆಯನ್ನು ಮಾಡುತ್ತಾ ಅವರಲ್ಲಿ ನಗೆಬುಗ್ಗೆಯನ್ನು ಚಿಮ್ಮಿಸುವ ಹುಡುಗ.ಆದರೆ ಅವನ ಈ
ಕಲೆ ಕ್ಯಾಂಟಿನಿಗಷ್ಟೇ ಸೀಮಿತ.ವೇದಿಕೆಯ ಮೇಲೆ ಮಿಮಿಕ್ರಿ
ಮಾಡೋಕೆ ಅವನಿಗೇನೋ ಹಿಂಜರಿಕೆ.ಅದಕ್ಕೆ ಅವನೇ ಕೊಡುವ ಕಾರಣ “ಈ ನನ್ ಮಕ್ಳೆಲ್ಲಾ ಆಡ್ಕೊಂಡ್ ನಗ್ತಾರೆ ಆಮೇಲೆ”.ತನ್ನ ಗೆಳೆಯರು ತನ್ನನ್ನು ಹೀಯಾಳಿಸಬಹುದು,ತಾನೊಂದು
ಹಾಸ್ಯಕ್ಕೆ ವಸ್ತುವಾಗುತ್ತೇನೇನೋ ಎಂಬುದೇ ಆತನ ಹಿಂಜರಿಕೆಗೆ ಕಾರಣ.ಇನ್ನು ಆಕೆಯ ಹೆಸರು ರಿಯಾ .ವಾರಕ್ಕೆರಡು
ಚುಟುಕುಗಳನ್ನು ಪ್ರೀತಿಯ ಮೇಲೆ ರಚಿಸಿ,ಕೆಲ ಗೆಳತಿಯರಿಗೆ ಮೆಸ್ಸೇಜಿಸುತ್ತಾಳೆ.ಆಗೊಮ್ಮೆ ಈಗೊಮ್ಮೆ
ಬರೆದ ಪ್ರೇಮ ಕವಿತೆಗಳನ್ನು ಆಪ್ತರಿಗೆ ತೋರಿಸುವುದೂ ಉಂಟು.ಆದರೆ ಅವನ್ನೆಲ್ಲಾ ಹೊರಜಗತ್ತಿಗೆ ತೋರಿಸಲು
ಅವಳಿಗೇನೋ ಮುಜುಗರ.ಕಲ್ಪನೆಯಲ್ಲಿ ಬರೆದ ಸಾಲುಗಳಿಗೆ ಉಳಿದವರು ಹೊಸ ಅರ್ಥ ಕಲ್ಪಿಸುತ್ತಾರೇನೋ ,ಯಾರೇ
ಆ ಹುಡುಗ?ಎಲ್ಲಿದ್ದಾನೆ?ಎನ್ ಕಥೆ? ಎನ್ನುವ ಪ್ರಶ್ನೆಗಳಿಗೆ ತಾನು ಆಹಾರವಾದೀನೇನೋ ಎಂಬ
ಆತಂಕ.ಇದೇ ಆತಂಕ ಅವಳ ಕವಿತೆಗಳನ್ನು ,ಆಕೆಯ ದಿನಚರಿಯಲ್ಲಷ್ಟೇ ಇರುವಂತೆ ಮಾಡಿದೆ.ಇಂತಹ ಉದಾಹರಣೆಗಳು
ಹುಡುಕುತ್ತಾ ಹೋದರೆ ಹಲವಾರು ಸಿಗಬಹುದು,ಈ ಲೇಖನವನ್ನು ಓದುತ್ತಿರುವ ನಿಮ್ಮ ಕಥೆಯೂ ಆಗಿರಬಹುದು.ಆದರೆ
ಇದರ ಪರಿಣಾಮ??
“ಬೆಳೆಯುವ ಸಿರಿ ಮೊಳಕೆಯಲ್ಲಿ”ಎಂಬಂತೆ ಸಾಮಾನ್ಯವಾಗಿ
ಪ್ರತಿಯೊಬ್ಬರ ಕೌಶಲ್ಯಗಳು ,ಅವರಲ್ಲಿರುವ ವಿಶೇಷತೆಗಳು ಅನಾವರಣಗೊಳ್ಳುವುದು ಪ್ರೌಢಶಾಲೆ ಹಾಗೂ ಕಾಲೇಜು
ದಿನಗಳಲ್ಲಿ.ಇವರ ವ್ಯಕ್ತಿತ್ವಕ್ಕೊಂದು ಗಟ್ಟಿಯಾದ ಅಡಿಪಾಯ ಸಿಗುವುದೂ ಸಹ ಈ ದಿನಗಳಲ್ಲೇ.ಆ ಕಾಲಘಟ್ಟದಲ್ಲಿಯೇ
ಅವರಿಗೆ ತಮ್ಮ ನೆಚ್ಚಿನ ಕ್ಷೇತ್ರದ ಬಗ್ಗೆ ಅರಿವಾಗತೊಡಗುತ್ತದೆ.ತನಗೆ ಯಾವ ಕೆಲಸದ ಮೇಲೆ ಆಸಕ್ತಿ ಇದೆ
ಎಂಬುದು ಗೊತ್ತಾಗತೊಡಗುತ್ತದೆ.ಇದೇ ಆಸಕ್ತಿ,ಕುತೂಹಲವಾಗಿ ಕೊನೆಗೊಂದು ದಿನ ಹವ್ಯಾಸವಾಗುತ್ತದೆ.ತಮ್ಮ
ನೆಚ್ಚಿನ ಹವ್ಯಾಸಗಳಿಂದ ಅವರಿಗೇನೋ ಹೇಳಿಕೊಳ್ಳಲಾಗದ ಸಂತೋಷ ಸಿಗಲಾರಂಭಿಸುತ್ತದೆ.ಸಂತೋಷದ ಜೊತೆಗೆ
ಅವರಲ್ಲಿ ಹೊಸ ಕನಸುಗಳು ಚಿಗುರೊಡೆಯುತ್ತಿರುತ್ತವೆ,ಸ್ರಜನಶೀಲ ಚಿಂತನೆಗಳು ಮೂಡತೊಡಗುತ್ತವೆ,ದುರದ್ರಷ್ಟವಶಾತ್
ಇದರ ಜೊತೆಗೆ ಒಂದಿಷ್ಟು ಆತಂಕ,ಹೆದರಿಕೆ,ಹಿಂಜರಿತಗಳೂ ಶುರುವಾಗುತ್ತವೆ.ತತ್ ಪರಿಣಾಮವಾಗಿ ಅವರ ಪ್ರತಿಭಾ
ಪ್ರದರ್ಶನ,ಕೌಶಲ್ಯದ ಅನಾವರಣ ನಿರ್ದಿಷ್ಟ ಪರಿಧಿಗೆ ಸೀಮಿತವಾಗತೊಡಗುವ ಸಾಧ್ಯತೆ ಹೆಚ್ಚು.ಯಾವುದೋ ಹೆದರಿಕೆಯಿಂದ ಪ್ರತಿಭಾವಂತರು ತಮ್ಮದೇ ಆದ ಸುಖವರ್ತುಲದೊಳಗೆ
ಮಾತ್ರ ತಮ್ಮೊಳಗಿನ ವಿಶೇಷತೆಯನ್ನು ತೋರಿಸಿಕೊಳ್ಳುವ ಸಂಭವವೂ ಉಂಟು.ಇದು ಹೀಗೆ ಮುಂದುವರೆದಲ್ಲಿ ಮುಂದೊಮ್ಮೆ
ಆ ವರ್ತುಲದಲ್ಲಿ ಆ ವ್ಯಕ್ತಿಯೊಬ್ಬರೇ ಮೂಕಪ್ರೇಕ್ಷಕರಾಗಿ ಕುಳಿತುಬಿಡುತ್ತಾರೆ.ತನ್ನಲ್ಲಿರುವ ಕಲೆಯ
ಬಗ್ಗೆ ತನಗೇ ದ್ವೇಷ ಹುಟ್ಟುವಂತೆ ಮಾಡಿಕೊಳ್ಳುತ್ತಾರೆ.ಅಲ್ಲಿಗೆ ಅವರ ಸ್ರಜನಶೀಲತೆಗೊಂದು ಕಡಿವಾಣ
ಬೀಳುತ್ತದೆ.ಹಾಗಾದರೆ ಅವರು ಎಡವಿದ್ದಾದರೂ ಎಲ್ಲಿ?ಒಬ್ಬ ವ್ಯಕ್ತಿ ತನ್ನನ್ನು ತಾನು ಹೊರಜಗತ್ತಿಗೆ
ತೆರೆದುಕೊಳ್ಳದೇ,ತನ್ನನ್ನು ತಾನು ಅಳೆದುಕೊಳ್ಳಲು ಹೇಗೆ ಸಾಧ್ಯ?ಅದರಿಂದ ಅವನ ಕೌಶಲ್ಯದ ಬೆಳವಣಿಗೆಯಾದರೂ
ಹೇಗಾದೀತು?ಪರಸ್ಪರ ವಿಚಾರ ವಿನಿಮಯಗಳಿಂದ, ಸೂಕ್ತ ಅಭ್ಯಾಸದಿಂದ, ತಪ್ಪು-ಒಪ್ಪುಗಳ ವಿಮರ್ಶೆಯಿಂದಲ್ಲವೇ
ಯಾವುದೇ ಕಲೆಯಾದರೂ ವ್ಯಕ್ತಿಯೊಬ್ಬನ ಕೈ ಹಿಡಿಯುವುದು?ಅದಕ್ಕೆ ಮೊದಲ ಮೆಟ್ಟಿಲೇ ಕಾಲೇಜು ದಿನಗಳು.
ನಿಜ,ಕಾಲೇಜಿನಲ್ಲಿಯೇ
ಅವರ ಸಾಧನೆಗೆ ಸ್ಪೂರ್ತಿ ಸಿಗಬೇಕು,ಅದಕ್ಕೊಂದು ಸೂಕ್ತ ವೇದಿಕೆ ಬೇಕು.ಅದಕ್ಕಿಂತ ಜಾಸ್ತಿಯಾಗಿ ಸಿಕ್ಕ
ಅವಕಾಶವನ್ನು ಉಪಯೋಗಿಸಿಕೊಳ್ಳಬೇಕು.ನಾನು ಮೇಲೆ ಹೇಳೆದ ಎರಡೂ ಪ್ರಸಂಗಗಳಲ್ಲಿ ಕರಣ್ ಹಾಗೂ ರಿಯಾರಿಗೆ
ಅವಕಾಶದ ಕೊರತೆಯಿಲ್ಲ,ಆದರೆ ಭಯ,ನಾಚಿಕೆ ಅವರನ್ನು ಹೊರ ಜಗತ್ತಿಗೆ ತಮ್ಮನ್ನು ತೆರೆದುಕೊಳ್ಳದಂತೆ ಹಿಮ್ಮೆಟ್ಟಿಸುತ್ತಿದೆ.ಈ
ಭಯವನ್ನು ಎರಡು ರೀತಿಯಲ್ಲಿ ಸ್ಥೂಲವಾಗಿ ವಿಂಗಡಿಸುತ್ತೇನೆ.ಒಂದು ಅಪರಿಚಿತರಿಂದಾಗುವ ಭಯ.ಇದು ಅವರು
ಯಾರು,ಏನು ಎತ್ತ ಎಂದು ಗೊತ್ತಿಲ್ಲದಿದ್ದರೂ,ಅವರ ಪ್ರತಿಕ್ರೀಯೆಗಳಿಂದ ನಮಗಾಗುವ ಭಯ.ಉದಾಹರಣೆಗೆ ವೇದಿಕೆಯ ಮೇಲೆ ಹೋದಾಗ “ಹೋ ಹೋ ….” ಎಂದು ಕಿರಿಚುವುದು,ಕವನಗಳನ್ನು ಓದಿ
ಅಪಹಾಸ್ಯದ ನಗೆಯಾಡುವುದು,ಚಿತ್ರ ಕಲೆಯನ್ನು ಅಸಡ್ಡೆಯಿಂದ ನೋಡುವುದು ಇತ್ಯಾದಿ.ಇದರಿಂದ ಕಲಾವಿದನಲ್ಲಿ
ಹಿಂಜರಿಕೆ ಜಾಸ್ತಿಯಾಗತೊಡಗುತ್ತದೆ,ತಾನು ನಗಣ್ಯ ಎನ್ನುವ ಭಾವ ಜಾಸ್ತಿಯಾಗುತ್ತದೆ.ಇದನ್ನು ಸರಿಯಾದ
ತಿಳುವಳಿಕೆಯನ್ನು ಕೊಡುವುದರ ಮೂಲಕ ಹೋಗಲಾಡಿಸುವ ಪ್ರಯತ್ನ ಮಾಡಬಹುದು,ಹಿರಿಯರ ಮಾರ್ಗದರ್ಶನದಲ್ಲಿ
ಈ ಭಯವನ್ನು ಮೆಟ್ಟಿ ನಿಲ್ಲುವುದು ಕಷ್ಟವೇನಲ್ಲ.”ಯಾರು ಏನಂದ್ರೇನು?ನಿನಗೆ ಇಷ್ಟವಾದ್ರೆ ಸಾಕು ,ನಾಳೆ
ಅವರು ಬರ್ತಾರಾ?”ಎನ್ನುವ ಮಾತುಗಳೂ ಸ್ಪೂರ್ತಿ ಕೊಡಬಹುದು.ಆದರೆ ಎರಡನೇ ಭಯವು ವಿಚಿತ್ರವಾದದ್ದು ವಿಚಿತ್ರವಾದದ್ದು.ಅದು ಪರಿಚಿತರ ಭಯ,ಅಂದರೆ “ನನ್ನ ಸ್ನೇಹಿತರು
ಏನೆಂದುಕೊಳ್ಳುತ್ತಾರೋ?ಮನೆಯವರಿಗೆ ಏನೆನ್ನಿಸುವುದೋ?ನಾಳೆ ಅವರೆಲ್ಲಾ ಸೇರಿ ನನ್ನನ್ನು ಹೀಯಾಳಿಸಿದರೆ?..ಇದರಿಂದ
ನನಗೆ ಅವಮಾನವಾದಂತಲ್ಲವೇ??...ಛೇ ಛೇ..ಹೀಗಾಗುವುದು ಬೇಡ” ಮುಂತಾದ ಯೋಚನೆಗಳು.ಗೆಳೆಯರಲ್ಲಿ ತನಗಿರುವ
ಗೌರವವೆಲ್ಲಿ ಕಡಿಮೆಯಾದೀತೋ ಎಂಬ ಆತಂಕ.ಇದನ್ನು ಯಾರಿಗೂ ಹೇಳಲಾರದೇ ,ತಮ್ಮೊಳಗೇ ಅದುಮಿಟ್ಟುಕೊಳ್ಳುತ್ತಾ
,ಕೆಲವೊಮ್ಮೆ ಹತಾಶರಾಗುತ್ತಾ ,ಮೂಕವೇದನೆ ಅನುಭವಿಸುತ್ತಾರೆ..ಹಾಗಾದರೆ ಇದಕ್ಕೆಲ್ಲಾ ಕಾರಣಕರ್ತರು
ಯಾರು??
ಸ್ನೇಹಿತರೇ?? ಹೌದು.ಅವರಲ್ಲಿ
ಈ ತರಹದ ಯೋಚನೆಗಳು ಬರಲು ಸ್ನೇಹವೂ ಕಾರಣವಿರಬಹುದು.ನಿಮ್ಮನ್ನು ನಗಿಸುವ,ಖುಷಿಪಡಿಸುವ ಸ್ನೇಹಿತರು,ಆತ್ಮೀಯರು
ಈ ತರಹದ ಸ್ನೇಹದ ಸಲುವಾಗಿಯೇ ವೇದನೆ ಅನುಭವಿಸುತ್ತಿದ್ದರೆ,ಅದೆಂತಹ ಸ್ನೇಹ ನೀವೇ ಯೋಚಿಸಿ?ಇದರಲ್ಲಿ
ನಿಮ್ಮೆದುರು ನಗುತ್ತಲೇ ಇರುವ ಕಲಾಕಾರರು ಇರಬಹುದಲ್ಲವೇ?ಅವರ
ಮನವನ್ನೊಮ್ಮೆ ಮೇಲೆ ಹೇಳಿದ ದ್ರಷ್ಟಿಕೋನದಿಂದ ಅವಲೋಕಿಸಿ,ಅವರ ನೋವನ್ನು ತಿಳಿದು ಕೊಳ್ಳುವ ಪ್ರಯತ್ನ
ಮಾಡಿ…….
ಹಾಗಾದ್ರೆ ಒಳ್ಳೆಯ
ಸ್ನೇಹಿತರಾಗಿ ಒಬ್ಬ ಸ್ನೇಹಿತನ ಪ್ರತಿಭೆಗೆ ಸ್ಪೂರ್ತಿ ತುಂಬಲು ಕಾಲೇಜು ದಿನಗಳಲ್ಲಿ ಏನೇನು ಮಾಡಬಹುದು??
ನನಗೆ ತೋಚಿದ್ದನ್ನು ಬರೆದಿದ್ದೇನೆ ನೋಡಿ.
೧) ಗೆಳೆಯರ ಪ್ರತಿಭೆಯನ್ನು
ಗುರುತಿಸಿ ಅವರಿಗೆ ಮನವರಿಕೆ ಮಾಡಿಕೊಡಿ.
ಎಷ್ಟೋ
ಜನರಿಗೆ ಅವರ ಬಗ್ಗೆಯೇ ಅವರಿಗೆ ಗೊತ್ತಿರುವುದಿಲ್ಲ.ಅಂಥವರಲ್ಲಿನ ಕಲೆಯನ್ನು ಗುರುತಿಸಿ,ಅವರಿಗೆ ಅವರ
ಬಗ್ಗೆ,ಅವರಲ್ಲಿನ ವಿಶೇಷತೆಯಯನ್ನು ಗುರುತಿಸಿಕೊಳ್ಳುವ ಬಗ್ಗೆ ವಿವರಿಸಿ.
೨)ವೇದಿಕೆ ಹತ್ತಲು ಪ್ರೇರೇಪಿಸಿ.
ನಿಮ್ಮ ನಿಮ್ಮ ನಡುವೆಯೇ
ಸುಪ್ತವಾಗಿರುವ ಕಲೆಯನ್ನು ವೇದಿಕೆಯ ಮೇಲೆ ಪ್ರದರ್ಶಿಸಲು
ಗೆಳೆಯರನ್ನು ಉತ್ತೇಜಿಸಿ.ಇದರಿಂದ ಅವರಿಗೆ ಕಲಿಕೆಯ ಹೊಸ ಮಾರ್ಗ ಕಾಣಿಸುತ್ತದೆ,ತಮ್ಮನ್ನು ತಾವು ತಿದ್ದಿಕೊಳ್ಳಲು
ಸಹಾಯಕವಾಗುತ್ತದೆ.
೩)ತಪ್ಪುಗಳಾದಾಗ ಸಂತೈಸಿ,ಅವರನ್ನು ಮತ್ತೆ ಪ್ರಯತ್ನಿಸುವಂತೆ
ಉತ್ತೇಜಿಸಿ.
ಹೊಸದಾಗಿ ನಡೆಯಲು
ಕಲಿತ ಮಗು ಬೀಳುವುದು ಸಹಜ,ಇದೇ ತರಹ ಆರಂಭಿಕ ಹಂತದಲ್ಲಿ ತಪ್ಪುಗಳಾಗುವುದು ಸಾಮಾನ್ಯ,ಅವರ ತಪ್ಪುಗಳನ್ನು ಅವರಿಗೆ ಮನವರಿಕೆ
ಮಾಡಿ ಕೊಡಿ,ಬದಲಿಗೆ ಅವರನ್ನು ಗೇಲಿಮಾಡಿ,ನಿರುತ್ಸಾಹಗೊಳಿಸಬೇಡಿ.ತಪ್ಪುಗಳನ್ನು ತಿದ್ದಿಕೊಂಡು ಮತ್ತೆ
ಪ್ರಯತ್ನಿಸುವಂತೆ ಉತ್ತೇಜಿಸಿ
೪) ನಿಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಸಿ.
ಸಾಮಾನ್ಯವಾಗಿ ಕಾಲೇಜಿನಲ್ಲಿ
ನಮ್ಮ ಮೊದಲ ವಿಮರ್ಶಕರು ನಮ್ಮ ಸ್ನೇಹಿತರೇ .ನಿಮ್ಮ ಗೆಳೆಯರ ಪ್ರದರ್ಶನದ ಬಗ್ಗೆ ನಿಮಗೆ ಅನಿಸಿದ್ದನ್ನು
ಸ್ಪಷ್ಟವಾಗಿ,ಸರಲವಾಗಿ ಹೇಳಿ.ಅವರಿಗೆ ಬೇಜಾರಾಗುವುದೆಂದೋ
ಅಥವಾ ಅವರಿಗೆ ತಮ್ಮ ಬಗ್ಗೆ ಕೆಟ್ಟ ಅಭಿಪ್ರಾಯ ಬರುವುದೆಂದೋ ಯೋಚಿಸಬೇಡಿ,ಗೆಳೆಯರ ತಪ್ಪುಗಳನ್ನು
ಹೇಳಿ ಅವರು ಅದನ್ನು ತಿದ್ದಿಕೊಳ್ಳುವಂತೆ ಮಾಡುವವರೇ ನಿಜವಾದ ಸ್ನೇಹಿತರು.
೫)ಕೈಲಾದಷ್ಟು ಸಂಪರ್ಕಗಳನ್ನು,ಸಂಪಸ್ಮೂಲಗಳನ್ನು
ಒದಗಿಸಿಕೊಡಿ…
ನಿಮ್ಮ ಕೈಲಾದಷ್ಟು
ಸಂಪನ್ಮೂಲಗಳನ್ನು ನಿಮ್ಮ ಗೆಳೆಯರಿಗೆ ಒದಗಿಸಿ ಕೊಡಿ.ಅದು ನಿಮ್ಮ ಸ್ನೇಹಿತನಿಗೆ ನಿಮ್ಮ ರೂಮಿನಲ್ಲಿ
ಅಭ್ಯಾಸಕ್ಕೆ ಜಾಗ ಒದಗಿಸುವುದರಿಂದ ಹಿಡಿದು,ಬೆಲೆಬಾಳುವ ಪರಿಕರಗಳನ್ನು ತಂದುಕೊಡುವವರೆಗೂ ಇರಬಹುದು.ಇನ್ನು
ನಿಮಗೆ ಪರಿಚಯವಿದ್ದ ಸಮಾನ ಮನಸ್ಕರನ್ನು ಪರಸ್ಪರ ಪರಿಚಯ
ಮಾಡಿಸಿ,ಉದಾಹರಣೆಗೆ ನಿಮ್ಮ ಪ್ರೌಢಶಾಲೆಯ ಮಿತ್ರರೊಬ್ಬರು ಸಂಗೀತ ಸಾಧನೆಯಲ್ಲಿ ತೊಡಗಿದ್ದು,ಕಾಲೇಜಿನ
ಮಿತ್ರರೊಬ್ಬರಿಗೂ ಅದೇ ಆಸಕ್ತಿ ಇದ್ದರೆ ಪರಸ್ಪರ ಅವರನ್ನು ಪರಿಚಯಿಸಿ.ಇದರಿಂದ ವಿಚಾರಗಳು ವಿನಿಮಯವಾಗಿ
ಇಬ್ಬರು ಸ್ನೇಹಿತರಿಗೂ ಒಳ್ಳೆಯದಾಗುತ್ತದೆ.ಹಾಗೆಯೇ ನಿಮ್ಮ ಸಂಬಂಧಿಕರಲ್ಲಿ ಸಂಗೀತದ ಗುರುಗಳಿದ್ದರೆ,ಅವರ
ಬಳಿಯೂ ಕರೆದೊಯ್ಯಿರಿ,ಇದರಿಂದ ವಿಪುಲವಾದ ವಿಚಾರಗಳು ದಕ್ಕಿ,ನಿಮ್ಮ ಸ್ನೇಹಿರಿಗೆ ಸಂಶಯಗಳನ್ನು ಪರಿಹರಿಸಿಕೊಳ್ಳಲೂ
ಸಹಾಯಕವಾದೀತು,
ಕೊನೆಯದಾಗಿ ಒಂದು
ಮಾತು,ಪ್ರತಿಭೆ ಎನ್ನುವುದು ದೈವದತ್ತವಾಗಿ ಬಂದ ಉಡುಗೊರೆ.ಸತತ ಅಭ್ಯಾಸದಿಂದ ಅದನ್ನು ಅರಗಿಸಿಕೊಂಡು
ಸಾಧನೆಯನ್ನು ಮಾಡಲು ಸಾಧ್ಯ,ಇಂತಹ ಒಂದು ಸಾಧನೆಯ ಹಾದಿಯಲ್ಲಿ
ಕಾಲೇಜು ಪ್ರಮುಖ ಪಾತ್ರ ವಹಿಸುತ್ತದೆ,ಕಾಲೇಜಿನಲ್ಲಿ ಸ್ನೇಹಕ್ಕೆ ಅಮೂಲ್ಯವಾದ ಸ್ಥಾನವಿದೆ.ಈ ಸ್ನೇಹ
ಅವರ ಸಾಧನೆಗೆ ಮುಳ್ಳಾಗದೇ,ಅವರ ಯಶಸ್ಸಿನ ಪ್ರಯಾಣಕ್ಕೆ ಊರುಗೋಲಾಗಲಿ ಎಂದು ಆಶಿಸುತ್ತೇನೆ.
ಪ್ರತಿಯೊಬ್ಬರೂ ಅವರಲ್ಲಿರುವ
ಕಲೆ,ಕೌಶಲ್ಯಗಳನ್ನು ಮುಕ್ತವಾಗಿ ಪ್ರಕಟಿಸಿ ಅದರಲ್ಲೇ ಪಳಗಿ,ಜಗತ್ತನ್ನು ಸಾಂಸ್ಕ್ರತಿಕವಾಗಿ ಬೆಳಗಲಿ
ಎನ್ನುವ ಸುಂದರ ಕನಸನ್ನು ಹೊತ್ತು,
ಸ್ನೇಹ ಪೂರ್ವಕವಾಗಿ,
ನಿಮ್ಮನೆ ಹುಡುಗ
ಚಿನ್ಮಯ ಭಟ್