Sunday, January 26, 2014

ಮಾಸದ ಸಿನೆಮಾ :ಅತಿಥಿ

ನಮಸ್ತೆ ಎಲ್ರಿಗೂ....
   


             ನಿನ್ನೆ ವಿಜಯನಗರದ ಕಲಾವೇದಿಕೆ ಟ್ರಸ್ಟ್ ವತಿಯಿಂದ ನಡೆಯುವ "ಮಾಸದ ಸಿನೆಮಾ" ಕಾರ್ಯಕ್ರಮಕ್ಕೆ ಹೋಗಿದ್ದೆ . ಮನೆಯ ಟಾರಸಿಯಲ್ಲಿ ಪರದೆಗಳನ್ನು ಇಳಿಬಿಟ್ಟು ಪರದೆಯ ಮೇಲೆ ಸುಮಾರು ಎಂಬತ್ತು ಜನರಿಗೆ ಚಿತ್ರತೋರಿಸುವ ಪ್ರಯತ್ನ ಇದು.ತಿಂಗಳಿನಲ್ಲಿ ಎರಡು ದಿನ ಸಂಜೆ ಒಂದು ಒಳ್ಳೆಯ ಚಿತ್ರದ ವೀಕ್ಷಣೆಯ ಅವಕಾಶ.ವಿಳಾಸ ಹುಡುಕಿಕೊಂಡು ನಾನು ಅಂತೂ ನಿಗದಿತ ಸ್ಥಳ ತಲುಪಿದಾಗ ಚಿತ್ರ ಶುರುವಾಗಲು ಇನ್ನೂ ಒಂದು ಘಂಟೆ ಇರುವುದು ತಿಳಿದುಬಂತು.ಅಲ್ಲಿಯೆ ಇದ್ದ ಸಂಘಟರೊಂದಿಗೆ ಪರಿಚಯ ಮಾಡಿಕೊಳ್ಳುತ್ತಿರುವಾಗ ಈಗಾಗಲೇ ಮೂರ್ನಾಕು ಚಿತ್ರಗಳ ಪ್ರದರ್ಶನ ಆಗಿಹೋಯಿತೆಂದೂ ,ಇಂದು ಪಿ.ಶೇಷಾದ್ರಿಯವರ ನಿರ್ದೇಶನ,ಮಿತ್ರಚಿತ್ರ ನಿರ್ಮಾಣದ "ಅತಿಥಿ" ಚಿತ್ರ ಪ್ರದರ್ಶನಗೊಳ್ಳುತ್ತಿರುವುದಾಗಿಯೂ ತಿಳಿದುಬಂತು.


 (ಚಿತ್ರಕೃಪೆ :ಅಂತರ್ಜಾಲ )

    ಚಪ್ಪಲಿಗಳನ್ನು ಕೆಳಗೇ ಬಿಟ್ಟು ಮೇಲೇರಿದವನಿಗೆ ಎಲ್ಲಾ ಖುರ್ಚಿಗಳು ಖಾಲಿ ಇದ್ದುದು ಆಶ್ಚರ್ಯತಂದಿತ್ತಾದರೂ,ನಿಧಾನವಾಗಿ ಜನ ಬರತೊಡಗಿದ್ದು ಉತ್ಸಾಹ ಹೆಚ್ಚಿಸಿತ್ತು.ಬಂದವರಲ್ಲಿ ಹಿರಿಯರೇ ಹೆಚ್ಚಿದ್ದರು.ಅಬ್ಬಬ್ಬಾ ಎಂದರೆ  ನನ್ನನ್ನೂ ಸೇರಿಸಿ ೪  ಜನ ನಮ್ಮಂಥಹ ಹುಡುಗರಿರಬಹುದಷ್ಟೇ.ಆರೂ ಮೂವತ್ತರ ಹೊತ್ತಿಗೆ ಕಲಾವಿದ ಶ್ರೀನಾಥ ವಸಿಷ್ಠ ಅವರು ಎಲ್ಲರಿಗೂ ಸ್ವಾಗತ ಕೋರಿ,ಚಿತ್ರ ಪ್ರದರ್ಶನದ ನಂತರ ನಿರ್ದೇಶಕರೊಂದಿಗೆ ಸಂವಾದ ಇರುವುದಾಗಿ ತಿಳಿಸಿದರು.ನಾನು ಉತ್ಸುಕತೆಯಿಂದ ಚಿತ್ರನೋಡಲು ತಯಾರಾದೆ,ಚಿತ್ರ ನೋಡಿದ ಮೇಲೆ ನಿರ್ದೇಶಕರೊಂದಿಗೆ ಮಾತನಾಡುವ ಅವಕಾಶ ಸಿಗುತ್ತದೆ ಎಂಬ ಖುಷಿ ಬೇರೆ..
     ಮುಂದೆ ??
(ಇದು ಚಿತ್ರದ ಬಗೆಗಿನ ವಿಮರ್ಶೆ ಎಲ್ಲಾ ಅಲ್ಲ,ಅಷ್ಟು ತಿಳಿದವನೂ ನಾನಲ್ಲ, ಚಿತ್ರನೋಡಿದ ತಕ್ಷಣ ನನಗನಿಸಿದ ಮಾತುಗಳು ಅಷ್ಟೇ.)
          ಚಿತ್ರದ ಕಥೆಯಲ್ಲಿ ಎರಡು ಮುಖ್ಯಪಾತ್ರಗಳು.ನಾಲ್ಕುಗೋಡೆಗಳ ನಡುವೆ ಸಾಗುವ ಕಥೆಯಲ್ಲಿ ಹಿಂಸೆ- ಪ್ರತಿಕಾರ-ಕ್ರಾಂತಿಯನ್ನು ಹೇಳುವ ಒಂದು ಪಾತ್ರವಿದ್ದರೆ ಇನ್ನೊಂದೆಡೆ  ಸೇವೆ-ಅಸಹಾಯಕತೆ-ಮಾನವೀಯತೆಗಳನ್ನು ಹೊತ್ತುಕೊಂಡ ಇನ್ನೊಂದು ಪಾತ್ರವಿದ್ದು ಇವುಗಳ ನಡುವಿನ ವಿಚಾರಭೇಧ,ಮನಸ್ಸಿನ ತೊಳಲಾಟಗಳನ್ನು ಚಿತ್ರಿಸಲಾಗಿದೆ.ಕ್ರಾಂತಿಕಾರಿ ಯುವಕನ ಪಾತ್ರವನ್ನು ಶ್ರೀ ಪ್ರಕಾಶ ರೈ ನಿರ್ವಹಿಸಿದರೆ,ಹಳ್ಳಿಯಲ್ಲಿನ ಒಬ್ಬ ಪ್ರಾಮಾಣಿಕ ವೈದ್ಯನ ಪಾತ್ರವನ್ನು ಶ್ರೀ ದತ್ತಣ್ಣ ನಿರ್ವಹಿಸಿದ್ದಾರೆ.


(ಚಿತ್ರಕೃಪೆ :ಅಂತರ್ಜಾಲ ) 

          ಮಲೆನಾಡಿನ ಹಳ್ಳಿಯೊಂದರ ಸಮೀಪದ ಕಾಡಿನಲ್ಲಿ ಬಾಂಬ್ ತಯಾರಿಕೆಯಲ್ಲಿ ತೊಡಗಿರುವಾಗ ನಡೆದ ಸ್ಫೋಟದಿಂದ ಪ್ರಕಾಶ ರೈ ಗಾಯಗೊಂಡು ಅಲ್ಲೇ ಸಮೀಪದ ಡಾಕ್ಟರ ಮನೆಗೆ ಬರುತ್ತಾರೆ.ಡಾಕ್ಟರ ಹೆಂಡತಿಯನ್ನು ಒತ್ತೆಯಾಳಾಗಿರಿಸಿಕೊಂಡು ತಮ್ಮ ನಾಯಕನ ಗಾಯದ ಚಿಕಿತ್ಸೆಗೆ ಒತ್ತಾಯಿಸುವ ಕ್ರಾಂತಿಕಾರಿ ಗುಂಪಿನವರಿಗೆ ಪ್ರತಿರೋಧ ವ್ಯಕ್ತಪಡಿಸಲಾಗದೇ ದತ್ತಣ್ಣ ರೋಗಿಯ ಆರೈಕೆಯಲ್ಲಿ ತೊಡಗುತ್ತಾರೆ.ಮೊದಮೊದಲಿಗೆ ಪಿಸ್ತೂಲು ಹಿಡಿದುಕೊಂಡೇ ಮಾತಾಡುವ ಕ್ರಾಂತಿಕಾರಿ ಗುಂಪಿನ ನಾಯಕ,ಕ್ರಮೇಣ ತನ್ನೊಳಗಿನ ಮನುಷ್ಯನನ್ನು ಪರಿಚಯಿಸಿಕೊಳ್ಳುತ್ತಾ ಹೋಗುತ್ತಾನೆ.ವಯಸ್ಸಾದ ವ್ಯಕ್ತಿಯ ತುಮುಲಗಳು-ಯುವಕನ ಮಹತ್ವಾಕಾಂಕ್ಷೆ,ಹೆಂಡತಿಯನ್ನು ಬಿಡಿಸಿಕೊಳ್ಳಲಾಗದ ಅಸಹಾಯಕತೆ-ಪೋಲಿಸರ ಹೆದರಿಕೆ,ಇಳಿವಯಸ್ಸಿನಲ್ಲಿ ಮಗ ಹತ್ತಿರವಿರಬೇಕೆಂಬ ಬಯಕೆ-ದೇಹದ ಗಾಯವನ್ನು ಮೆಟ್ಟಿ ನಿಲ್ಲುವ ಛಲ ಹೀಗೆ ಹಲವಾರು ಆಯಾಮಗಳನ್ನು ಕಥೆ ಹೇಳುತ್ತಾ ಸಾಗುತ್ತದೆ.
        
              ಇದರ ಜೊತೆಗೆ ವೃದ್ಧ ದಂಪತಿಯ ಜೀವನಪ್ರೀತಿ,ಪಕ್ಕದ ಮನೆಯ ಪುಟ್ಟಿಯ ಮುಗ್ಧತೆ,ಅವಳು ತನ್ನ ನಾಯಿಮರಿಗಾಗಿ ಹುಡುಕುವ ಪರಿ,ಪಟ್ಟಣದಲ್ಲಿ ನಡೆದ ಬಾಂಬ್ ಸ್ಪೋಟದಲ್ಲಿ ಮಗನನ್ನು ಕಳೆದುಕೊಂಡ ಅದೇ ಊರಿನ ಒಬ್ಬಾಕೆಯ ದುಃಖ ಹೀಗೆ ಒಂದಿಷ್ಟು ಮಾನವ ಸಹಜ ಅಭಿವ್ಯಕ್ತಿ,ಎಂ.ಟೆಕ್ ಓದಿಯೂ  ಸಾಮಾನ್ಯರಂತೆ ಬದುಕದೇ ಯಾವುದೋ ಸಿದ್ಧಾಂತಕ್ಕಾಗಿ ತನ್ನನ್ನು ಹುರುಪುಗೊಳಿಸಿಕೊಂಡಿರುವ ಯುವಕನ ವಿಶಿಷ್ಟ ಮನಸ್ಥಿತಿ,ಅವನಲ್ಲಿರುವ ಗೊಂದಲ,ನಾಗರೀಕತೆಯ ಮೇಲಿನ ಸಿಟ್ಟು ಎಲ್ಲವೂ ಇಲ್ಲಿದೆ.ಒಟ್ಟಿನಲ್ಲಿ ಒಂದು ಕ್ರೌರ್ಯದ ಮುಖವನ್ನು ಅದರೊಳಗೇ ಎಲ್ಲೋ ಇರುವ ಮಾನವೀಯತೆಯನ್ನು ಹುಡುಕುವಂತೆ ಮಾಡುವುದೇ ಕಥೆಯ ಮೂಲವಸ್ತು ಎನಿಸುತ್ತದೆ.
      
            ಇನ್ನು ಉಳಿದ ಪಾತ್ರಗಳ ಬಗ್ಗೆ ಹೇಳುವಾಗ ನನಗೆ ವೈಯಕ್ತಿಕವಾಗಿ ಆ ಊರಿನ ಒಬ್ಬ ಮಗನನ್ನು ಕಳೆದುಕೊಂಡ ತಾಯಿಯ ಪಾತ್ರ ಅಷ್ಟು ಪರಿಣಾಮಕಾರಿ ಎನಿಸಲಿಲ್ಲ. ಜೊತೆಗೆ  ಕಥೆಯಲ್ಲಿ  ಇನ್ನೂ ಗಂಭೀರನಡತೆಯವನಾಗಿ  ಇರುವಾಗಲೇ ಪ್ರಕಾಶ ರೈ ಪುಟ್ಟಿಯನ್ನು ಪ್ರೀತಿಯಿಂದ ಮಾತನಾಡಿಸುತ್ತಾರೆ,ಆ ಬದಲಾವಣೆಯ ಹಿಂದಿನ ,ಅವರು ಹೊಸಬರನ್ನು(ಪುಟ್ಟ ಮಗುವನ್ನು) ನಿರಾಕರಿಸುವ ಚಿತ್ರಣ ಯಾಕೋ ಅಷ್ಟಾಗಿ ನೆನಪಿಗೆ ಬರ್ತಾ ಇಲ್ಲ.ಮತ್ತೆ ಸತ್ತ ನಾಯಿಯನ್ನು ಹಿಡಿದ ಬುಟ್ಟಿ ಎಲ್ಲೋ ಅಲ್ಲಾಡಿದ ಹಾಗೇ ಭಾಸವಾಯ್ತು ಗೊತ್ತಿಲ್ಲ,ನನ್ನ ಗ್ರಹಿಕೆಯೇ ತಪ್ಪಿರಬಹುದು.ಇಷ್ಟು ಚಿತ್ರದ ಬಗ್ಗೆ ನನಗನ್ನಿಸಿದ್ದು.ಒಟ್ಟಿನಲ್ಲಿ ಖುಷಿ ಆಯ್ತು,ರೈ-ದತ್ತಣ್ಣರ ಅಭಿನಯಕ್ಕೆ ಚಪ್ಪಾಳೆ ಹೊಡೆಯಲೇ ಬೇಕೆನಿಸಿತು.

            ಕೊನೆಗೆ ಚಿತ್ರ ಮುಗಿಯುತ್ತಿದ್ದಂತೆ,ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದ ಶ್ರೀ ಪ್ರಹ್ಲಾದ್ ಅವರ ಆಗಮನವಾಯಿತು.  ಶೇಷಾದ್ರಿಯವರು ಬರುವುದು ತಡವಾಗುವುದರಿಂದ ಮೊಬೈಲ್ ಫೋನಿನ ಮೂಲಕವೇ ಸಂವಾದ ನಡೆಸಲಾಯಿತು.ಒಂದಿಷ್ಟು ಚಿತ್ರದ ಬಿಡುಗಡೆ,ಅಂಕಿ-ಅಂಶಗಳ ಮೇಲೆ ಮಾತುಕತೆಗಳಾಯಿತು.ಸುಮಾರು ಐದಾರು ಮಂದಿ ಅನಿಸಿಕೆ ವ್ಯಕ್ತಪಡಿಸಿದರು.
ಅದರಲ್ಲಿ ಒಬ್ಬರು ಕೇಳಿದ ಪ್ರಶ್ನೆ-ಉತ್ತರ ನನಗೆ ಇಷ್ಟವಾಯ್ತು.ಅದನ್ನೇ ಹಂಚಿಕೊಳ್ಳುತ್ತಿದ್ದೇನೆ ನೋಡಿ.

ಪ್ರಶ್ನೆ : ಸಾರ್ ನೀವು ಯಾಕೆ ಮಾಸ್ ನಟರನ್ನು ಹಾಕಿಕೊಂಡು ಸಿನೆಮಾ ಮಾಡುವುದಿಲ್ಲ ??ಇದರಿಂದ ಜಾಸ್ತಿ ಜನರನ್ನು ತಲುಪಬಹುದಲ್ಲ?
ಉತ್ತರ : ನಾನು ನಾಯಕನಿಗಾಗಿ  ಕಥೆ ಮಾಡುವುದಿಲ್ಲ,ಕಥೆಯೇ ನಾಯಕ .ಕಥೆಗೆ ಸೂಕ್ತವಾದ ನಟರು ತಾವಾಗಿಯೇ ಸಹಕರಿಸಿದರೆ ಅವರನ್ನಿಟ್ಟುಕೊಂಡು ಚಿತ್ರಿಸುತ್ತೇವೆ.ಇನ್ನು ಪ್ರೇಕ್ಷಕರನ್ನು ಕರೆತರುವ ಸಂಗತಿ.ಕನ್ನಡದ ಪ್ರಭುದ್ಧ ಪ್ರೇಕ್ಷಕ ಚಿತ್ರಮಂದಿರಗಳಿಗೆ ಬರುವುದು ಕಡಿಮೆಯಾಗಿದ್ದೆ ಚಿತ್ರಗಳ ಗುಣಮಟ್ಟವೂ ಕಡಿಮೆಯಾಗುತ್ತಿರಲು ಕಾರಣ.ಹಾಗಾಗಿ ಎಲ್ಲರನ್ನೂ ತಲುಪಲು ಸಾಧ್ಯವಾಗಿತ್ತಿಲ್ಲ.ಕಾಲೇಜು ವಿದ್ಯಾರ್ಥಿಗಳಿಗೆ ಇವುಗಳನ್ನು  ಹೆಚ್ಚು ಹೆಚ್ಚು ತಲುಪಿಸುವ ಬಗ್ಗೆ ಯೋಚಿಸುತ್ತಿದ್ದೇವೆ.

ಅಬ್ಬಾ "ಕನ್ನಡದ ಪ್ರಭುದ್ಧ ಪ್ರೇಕ್ಷಕ ಚಿತ್ರಮಂದಿರಗಳಿಗೆ ಬರುವುದು ............." ನಿಜ ಅನಿಸಿತು.

 ಪ್ರಹ್ಲಾದ್ ಅವರು ಚಿತ್ರೀಕರಣದ ಸಂದರ್ಭದ ಕೆಲ ಘಟನೆಗಳನ್ನೂ ಮೆಲಕು ಹಾಕಿದರು.ಪ್ರಕಾಶ್ ರೈ ಕೇವಲ ಒಂದು ರೂಪಾಯಿ ಸಂಭಾವನೆ ಪಡೆದು ನಟಿಸಿದ್ದನ್ನು ನೆನಪಿಸಿಕೊಂಡರು.ಅವರ ಸರಳತೆಯನ್ನೂ ಹೇಳಿದರು.ಕಥೆಗೆ ಸ್ಫೂರ್ತಿಯಾದ ಘಟನೆಗಳನ್ನು ಮುಕ್ತವಾಗಿ ಹಂಚಿಕೊಂಡರು.ತಾವು ಕಥೆ-ಚಿತ್ರಕಥೆಯನ್ನು ಜೊತೆಜೊತೆಗೆ ಬರೆದಿದ್ದನ್ನೂ ತಿಳಿಸಿದರು.

 ಕಾರ್ಯಕ್ರಮದ ಕೊನೆಯಲ್ಲಿ  ,ಮುಂದಿನ ಪ್ರದರ್ಶನ ದಿನಾಂಕ ೮-೨-೧೪,ಸಂಜೆ ೬:೩೦ ಕ್ಕೆ .
ಚಿತ್ರ: ಗಿರೀಶ್ ಕಾಸರವಳ್ಳಿಯವರ "ಕ್ರೌರ್ಯ"ಎಂದೂ  ತಿಳಿಸಲಾಯಿತು.ನೀವು ಬರ್ತಿರಾ ಅಲ್ವಾ??


ಹಮ್.. ಒಟ್ಟಿನಲ್ಲಿ ಮಾಸದ ಸಿನಿಮಾ ಕಾರ್ಯಕ್ರಮಕ್ಕೆ ಹೋಗಿದ್ದು ಬಹಳ ತೃಪ್ತಿಕೊಟ್ಟಿತು..
ಪರೀಕ್ಷೆಗೆ ಇನ್ನು ಬೆರಳಣಿಕೆಯಷ್ಟೇ ದಿನ ಇದೆ ಎಂದು ನೆನಪಾದಾಗ ನಾಳೆಯಿಂದ ಖಂಡಿತ ಓದುತ್ತೇನೆ ಎನ್ನುವ ಸಿದ್ಧ ಉತ್ತರವೂ ಹೊರಟಿತು. :D..
ಮುಂದಿನದು ನಿಮ್ಮ ಮುಂದಿದೆ ನೋಡಿ :).
ಧನ್ಯವಾದಗಳು ನಮಸ್ತೆ.

Tuesday, January 14, 2014

ಸಂಕ್ರಮಣ



ನೋಡಬೇಕಿದೆ ಒಮ್ಮೆ ನಡೆದ ಹಾದಿಯನು
ಸಾಗಬೇಕಿದೆ ಬಿಟ್ಟು ಅಹಂಮಿನ ಪೊರೆಯನು

ಸುಗ್ಗಿಹುಗ್ಗಿಯ ಮಾಡಿ,ಶಾರದೆಯು ಕರೆಯುತಿರೆ
ಬರುತಿಹನು ರವಿ,ಪಥಪಲ್ಲಟಗೈದು ಹಬ್ಬದೂಟಕೆಂದು
ಕಾಲಧೂಳನು ನೆಕ್ಕಿ,ಸ್ವರ್ಗಪುಣ್ಯವ ಪಡೆದು
ಸಾಗಿಹುದು ನದಿಮೀನು ಮಕರಗಂಬದ ಚೆಲುವನೋಟಕೆಂದು|ನೋ|

ಅಂದದೆಲೆಗಳನೆಲ್ಲ ಬಿಟ್ಟು,ಕನಸಕಸ್ತ್ರವನು ಹೊತ್ತು 
ನಿಂತಿಹುದು ಮಾಮರವು ಫಲಬಲ ಸಾರ್ಥಕ್ಯದಾ ಗುರಿತೊಟ್ಟು
ಕಿಚ್ಚು ಹಾಯುವ ಕೆಚ್ಚು,ಜೆಲ್ಲಿಕಟ್ಟಿನ ಕಸುವರಸಿ
ಕೋಡೆತ್ತಿಹುದು ಜೋಡೆತ್ತು,ಡೊಣಕಲಿಗೊಂದು ಗುದ್ದುಕೊಟ್ಟು|ನೋ|

ಬೇರಿನಾಲವ ಮರೆತು ಬಲುದೂರ ನೆರೆದಿರುವ
ದಿವಾಚರಕೆ ತಿರುಗಿಂದು ತವರಿನೆಡೆ ನಡೆತೃಷೆಯು
ಬೆಳೆದಪೈರನು ಕೊಯ್ದು,ಗೋಣಿಚೀಲದಿ ಒಯ್ದ
ಗೆದ್ದೆಬಯಲಲಿ ನಾಳೆ,ಮಗೆಬಳ್ಳಿ ಹಸಿರ್ಹಸೆಯು |ನೋ|


ನೋಡಬೇಕಿದೆ ಒಮ್ಮೆ ನಡೆದ ಹಾದಿಯನು
ಸಾಗಬೇಕಿದೆ ಬಿಟ್ಟು ಬೇಡದಹಂಮಿನ ಪೊರೆಯನು
ಏಕೆಂದರಿದು ಸಂಕ್ರಮಣ ಕಾಲ,ಇದು ಸಂಕ್ರಮಣಕಾಲ

--------------------------------------------------------------------

*ಶಬ್ದಾರ್ಥ:(ನನಗೆ ತಿಳಿದಂತೆ ,ತಪ್ಪಿದ್ದರೆ ತಿಳಿಸಿ)

ಮಕರಗಂಬ=ಮಕರರಾಶಿಯ ಪ್ರತೀಕವಾದ ಕಂಬ(ಪ್ರತಿರಾಶಿಗೂ ಒಂದೊಂದು ಕಂಬ ಶಾರದೆಯ ಮಡಿಲಲ್ಲಿ)ಜೆಲ್ಲಿಕಟ್ಟು=ಒಂದು ಬಗೆಯ ಎತ್ತುಗಳ ಪಂದ್ಯ,ಡೊಣಕಲು=ಕೊಟ್ಟಿಗೆಯಲ್ಲಿ ದನಕರುಗಳನ್ನು ಕಟ್ಟುವ ಜಾಗ(ಬೇಲಿಯ ಗೇಟು ಎಂದೂ ಬಳಕೆಯಲ್ಲಿದೆಯಂತೆ),ಮಗೆಬಳ್ಳಿ=ಒಂದು ಬಗೆಯ ತರಕಾರಿ,ಮಗೆಕಾಯಿಯ ಬಳ್ಳಿ,ಗೆದ್ದೆ=ಗದ್ದೆ,ಹಸಿರ್ಹಸೆ=ಹಸಿರುಹಸೆ,ದಿವಾಚರ=ಆಕಾಶದಲ್ಲಿ ಚಲಿಸುವುದು,ಪಕ್ಷಿಗಳು ಎಂಬ ಅರ್ಥದಲ್ಲಿ   (ಬೆಳಕಿನಲ್ಲಿ ಓಡಾಡುವ ಜೀವಿಗಳು ಎಂಬ ಅರ್ಥವೂ ಇದೆ)