ಅಬ್ಬಾ..ಸುಮಾರು ೧೫ ದಿನದಿಂದ ಪರೀಕ್ಷೆಯ ನೆಪದಲ್ಲಿ ಬ್ಲಾಗ್ ಲೋಕದಿಂದ ದೂರವಿದ್ದೆ... ಅಂತೂ ಇಂತೂ ನಾಲ್ಕು ಪರೀಕ್ಷೆಗಳು ಮುಗಿದವು ..ಇನ್ನೆರಡು ಮುಂದಿನ ವರುಷಕ್ಕೆ (ಜನವರಿ ೩,೫ಕ್ಕೆ ಹಾ ಹಾ)...ಹಾಗಾಗಿ ಸಿಕ್ಕಾಪಟ್ಟೆ ಅಂತರವಿರುವುದರಿಂದ ಕೆಲಸ ಕಾಣದೇ ಮಾಡಿದ ಕೆಲಸವಿದು..ಒಂದು ಪುಟ್ಟ ಕವಿತೆ ಬರೆಯುವ ಪ್ರಯತ್ನ..ಸಂದರ್ಭ ಅಂತೇನೂ ಅಂದುಕೊಂಡು ಬರೆದಿದ್ದಲ್ಲ,ಬರೆಯುತ್ತಾ ಹೋದಂತೆ ಮನಸ್ಸಿಗೆ ಬಂದ ಸನ್ನಿವೇಶ..ಗೆಳತಿಯ ಮದುವೆಯ ಹಿಂದಿನ ದಿನ ಆಕೆಯ ಗಂಡನಾಗುವವನು ಮನೆಬಿಟ್ಟು ಹೋದಾಗ ,ಆಕೆಯನ್ನು ಸಂತೈಸುವ ಭಾವ ಹೊತ್ತು ಬರೆದದ್ದು...ಎಷ್ಟರಮಟ್ಟಿಗೆ ಬರೆದೆನೋ ಕಾಣೆ..ನೀವೇ ತಿದ್ದಿ ಆಶೀರ್ವದಿಸಬೇಕು..
ತಿಂಗಳು ಮರೆಯಾದರೇನಂತೆ
ತನ್ವಂಗಿ,
ಕಂಗಳಾ ಕನಸೆಲ್ಲಾ
ಇಂಗೀತೇ?
ಮದರಂಗಿ ಮಸುಕಾದರೇನಂತೆ
ಮುಂಗೈಲಿ,
ಅಂಗೈಯ್ಯ ಗೆರೆಯಂದ
ಅಳಿಸೀತೆ?
ಮಲಾರದಲ್ಲಿಪ್ಪ ಚಿಕ್ಕಿಬಳೆಯೀಗ
ಒಡೆಯಲು,ನೀ ಹೀಗೆ
ತೀಡದಿರು.
ಹಜಾರ ಬಳೆಯುಂಟು
ಇನ್ನೂ ಆ ಮಾಲೆಯಲಿ
ಹೊನ್ನಿನ ಕಡಗವ ಹುಡುಕುತಿರು
ಬೇಸರದ ಸಬರವ ಮೇಲ್ಮೆತ್ತಿಗಿಟ್ಟಿರು,
ಅಂಗಳದಿ ಗೊಂದಲದಾ
ಕಲ್ಲು-ಕ್ವಾಳೆಯ ಗುಡಿಸಿರು.
ಹಂಗಿಸುವ ನೆಂಟರ
ಸಗಣಿಯಲಿ ತೊಡೆದಿರು,
ನಾಳಿನಾಸೆಯಾ ಬಣ್ಣದಲಿ, ರಂಗೋಲಿ ಬಿಡಿಸಿರು.
ಚಂದಿರ ಮರೆಯಾದರೇನಂತೆ ??
ಶಬ್ಧಾರ್ಥ: ತಿಂಗಳು:ಚಂದಿರ,ತನ್ವಂಗಿ:ಕೋಮಲವಾದ
ಶರೀರವುಳ್ಳವಳು,ಮಲಾರ:ಬಳೆಗಾರನ ಬಳೆ ಸಂಚಿ,ಚಿಕ್ಕಿಬಳೆ:ಬಳೆಯ ಒಂದು ಪ್ರಕಾರ,
( ಇನ್ನು ನಮ್ಮ ಕಡೆ
ಬಳಸುವ ಶಬ್ಧಗಳನ್ನು ಬಳಸುವ ಒಂದು ಪುಟ್ಟ ಯತ್ನ…ಪಕ್ಕಾ ಇದೇ ಅರ್ಥವೋ ಗೊತ್ತಿಲ್ಲ,ನನಗೆ ತಿಳಿದಂತೆ
ಬರೆದಿದ್ದೇನೆ…
ತೀಡು:ಅಳು,ಸಬರ:ಗುಂಪು,ಚಲ್ಲಾಪಿಲ್ಲಿಯಾಗಿ ಬಿದ್ದಿರುವ ವಸ್ತುಗಳು,ಮೇಲ್ಮೆತ್ತಿ:ಮೆತ್ತಿಯ
ಮೇಲ್ಭಾಗ,ಮನೆಯ ಕೊನೆಯ ಹಂತ,ಕ್ವಾಳೆ-ಕತ್ತರಿಸಿದ ಗಿಡಗಂಟಿಯ ಉಳಿದ ಭಾಗ,ಕೋಳೆ..)
ದಯವಿಟ್ಟು ನಿಮ್ಮ ಅನಿಸಿಕೆಗಳನ್ನು ನಮೂದಿಸಿ..
ತಪ್ಪು ತಿದ್ದಿಕೊಂಡು ಬೆಳೆಯಲು ಸಹಕರಿಸಿ :)
ದಯವಿಟ್ಟು ನಿಮ್ಮ ಅನಿಸಿಕೆಗಳನ್ನು ನಮೂದಿಸಿ..
ತಪ್ಪು ತಿದ್ದಿಕೊಂಡು ಬೆಳೆಯಲು ಸಹಕರಿಸಿ :)
ನಮಸ್ತೆ.
-ಚಿನ್ಮಯ ಭಟ್ಟ