Sunday, March 10, 2019

ಹ್ಯಾಪಿ ಬರ್ತ್ ಡೇ & ಮುಖಾಮುಖಿ

9. ಹ್ಯಾಪಿ ಬರ್ತ್ ಡೇ

"ವಿನಯ್ ಏನ್ ಮಾಡ್ತಿದಾನೆ ಅಲ್ಲಿ?" ಶತಭಿಷನ ಮಾತಿನಲ್ಲಿ ಕೋಪವಿದ್ದಂತಿತ್ತು.
"ಬರ್ತ್‍ಡೇಗೆ ವಿಷ್ ಮಾಡಕ್ ಬಂದಿದ್ದ...." ಸ್ಥಿರೆ ಖುಷಿಯಿಂದಲೇ ಉತ್ತರಿಸಿದ್ದಳು.
"ಶಿಟ್..." ಶತಭಿಷನಿಗೆ ಆಕೆಯ ಬರ್ತ್ ಡೇ ಮರೆತಿತ್ತು.
ಅದೇನೋ ಕೆಲಸದ ಗಡಿಬಿಡಿಯಲ್ಲಿ ಆತ ಮರೆತಿದ್ದ....
ನೆನಪಿದ್ದರೂ ಏನು ಮಾಡುತ್ತಿದ್ದ? ಮಧ್ಯರಾತ್ರಿ ಕಾಲ್ ಮಾಡಿರುತ್ತಿದ್ದ.
ಆಕೆ "ಥ್ಯಾಂಕ್ಸ್" ಎನ್ನುತ್ತಿದ್ದಳೇನೋ....
"ಊಟವಾಯಿತಾ ಎನ್ನುತ್ತಿದ್ದ"..."ಹೂಂ" ಎನ್ನುತ್ತಿದ್ದಳು...
"ಓ.ಕೆ ಹ್ಯಾವ್ ಫನ್" ಎನ್ನುತ್ತಿದ್ದ....ಫೋನ್ ಕಟ್ ಆಗುತ್ತಿತ್ತು ಅಷ್ಟೇ....
ಆದರೆ ಅಷ್ಟಾದರೂ ಮಾಡಿರಲಿಲ್ಲವಲ್ಲ? ಆಕೆಯೇನೂ ಕೋಪಿಸಿಕೊಂಡಂತೆ ಕಾಣಿಸಲಿಲ್ಲ......ಕೋಪವಿದ್ದರೇ ಚೆನ್ನಾಗಿತ್ತೇನೋ....
"ಹ್ಯಾಪಿ ಬರ್ತ್ ಡೇ..." ಅರ್ಜಂಟಿಗಿರಲಿ ಎಂದು ಚೆಂದದ ಟೆಂಪ್ಲೇಟ್ ಹುಡುಕಿ, ಹೆಸರು ಬದಲಿಸಿ ಮೆಸ್ಸೇಜಿಸಿದ...
"ಥ್ಯಾಂಕ್ಸ್...." ಜೊತೆಗೊಂದು ಕೈ ಮುಗಿದ ಇಮೋಜಿ....
ಮುಂದೇನು? ಇಬ್ಬರಿಗೂ ತಿಳಿಯಲಿಲ್ಲ...
ವಿನಯ್ ಕಾಮನ್ ಕನಿನ್ಸ್ ಜೊತೆ ಮನೆಗೆ ಬಂದಿದ್ದ...ಇಬ್ಬರು ಜೀವದ ಗೆಳತಿಯರು...ಈಗೀಗ ಮದುವೆ-ಮನೆ-ಮಕ್ಕಳು ಎಂದು ಬ್ಯುಸಿಯಾಗಿದ್ದರು...ಸಿಕ್ಕಿದ್ದು ಆಕೆಗೆ ಬಹಳೇ ಖುಷಿಯಾಗಿತ್ತು....
"ಸಾರಿ...ಸ್ಟೇಟ್ಸ್‍ಗೂ ಇಂಡಿಯಾಗೂ ಟೈಂ ಜೋನ್ ಚೇಂಜ್ ಅಲ್ವಾ....ಕನ್‍ಫ್ಯೂಸ್ ಆಯ್ತು...." ಇನ್ನೊಮ್ಮೆ ಓದಿದ್ದರೆ ಶತಭಿಷ ಕೊಟ್ಟ ಕಾರಣ ಆತನಿಗೇ ಸಿಲ್ಲಿ ಎನಿಸುತ್ತಿತ್ತು....
ಆದರೆ ಆಕೆಗೇನೂ ಅನ್ನಿಸಲೇ ಇಲ್ಲ...
"ಇಟ್ಸ್ ಓ.ಕೆ" ಜೊತೆಗೊಂದು ಥಂಬ್ಸ್ ಅಪ್ ಇಮೋಜಿಯಿತ್ತು....
"ಪಾರ್ಟಿ ಜೋರಾ?ಯಾವ್ ಬ್ರಾಂಡು?" ಶತಭಿಷನ ಮಾತಿನಲ್ಲಿ ಹುಸಿ ತುಂಟತನವಿತ್ತು...
"ಓ.ಕೆ ಓ.ಕೆ" ಆಕೆಯ ಮೆಸ್ಸೆಜಿನಲ್ಲಿ ಯಾವುದೇ ಸ್ಮೈಲಿಯಿರಲಿಲ್ಲ...
"ಹಿಂಗಾದರೆ ಕಷ್ಟ" ಶತಭಿಷ ತನಗೆ ತಾನೇ ಹೇಳಿಕೊಂಡ....
ಹೇಗಾದರೂ ಜಗಳವಾಡಿ ಹಗುರಾಗಲೇ ಬೇಕೆಂದು ನಿಶ್ವಯಿಸಿದ....ಜಗಳಕ್ಕೆ  ಕಾರಣ ಹುಡುಕಿದ...ಸಿಗಲಿಲ್ಲ...ಜಗಳ ಮಾಡಲಿಕ್ಕೆ ಪ್ರೀತಿ ಬೇಕಿತ್ತು...ಅದು ಬಾಡಿ ಬಹಳೇ ದಿನಗಳಾಗಿದ್ದವು... ಪ್ರಯತ್ನ ನಡೆಸಿದ..
"ಲವ್ ಯು ಕಣೇ...."
ಕಾತುರದಿಂದ ರಿಪ್ಲೈಗೆ ಕಾಯುತ್ತಿದ್ದ....
ಟೈಪಿಂಗ್ ಎಂದು ಬಂದಂತಿತ್ತು.... ಅಷ್ಟರಲ್ಲಾಕೆ ಆಫ್ ಲೈನ್ ಹೋದಳು...ಬ್ಯಾಟರಿ ಲೋ ಆಯಿತಾ? ತಿಳಿಯಲಿಲ್ಲ....
"ಹೋಗಣ್ವಾ? " ಚಲನಾ ಬಳುಕುತ್ತಾ ಶತಭಿಷನೆಡೆಗೇ ಬಂದಳು...."ಶ್ಯುರ್" ಎಂದವನೇ ಕಾರ್ ಹತ್ತಿ ರೆಸ್ಟೊರೆಂಟ್ ಒಂದಕ್ಕೆ ಹೊರಟ. ನಾಕೈದು ಬಾರಿ ಮೊಬೈಲ್ ನೋಡಿದ....ಚಲನಾ ನಗುತ್ತಿದ್ದಳು...
"ಗಿಫ್ಟ್ ರೀಚ್ ಆಗಿಲ್ವಾ ಮನೆಗೇ?" ಚಲನಾ ಸಹಜವಾದದ್ದನ್ನು ಊಹಿಸಿದ್ದಳು...
"ಅಹ್ ಹಂಗಲ್ಲ...ಅದು..." ಶತಭಿಷ ತಡವರಿಸಿದ್ದ...
"ನಾನ್ ಕಳ್ಸಿದ್ ಇಷ್ಟೊತ್ತಿಗ್ ರೀಚ್ ಆಗಿರತ್ತೆ...." ಆಕೆಗೆ ಕಾಂಪಿಟೇಷನ್ ಅಂದರೆ ಜೀವವಾಗಿತ್ತು...ಗೆಲ್ಲುವುದು ಹಠವಾಗಿತ್ತು....ಆತ ಸೋಲೊಪ್ಪಿದ್ದ....ಸ್ಥಿರೆ ಆಟವನ್ನೇ ಬಿಡಲು ಹೊರಟಿದ್ದಳು...
ಅದೇ ದಿನ ಚಲನಾ ಕಳಿಸಿದ್ದ ಬರ್ತ್‍ಡೇ ಗಿಫ್ಟ್ ಸ್ಥಿರೆಯ ಮನೆ ಬಾಗಿಲು ತಲುಪಿತ್ತು....ಚಲನಾಳೇ ಬರೆದಿದ್ದ ಪೇಂಟಿಂಗ್ ಅದು....
"ಹ್ಯಾಪೀ ಥರ್ಟಿ ಥ್ರೀ"..ಬ್ಲಾಕ್ ಬೋರ್ಡಿನ ಮೇಲೆ ಬರೆಯಲಾಗಿತ್ತು...
ಪಕ್ಕದಲ್ಲಿ ಟೀಚರ್ ಒಬ್ಬರು ನಿಂತಂತಿತ್ತು...ಆದರೆ ಮುಖದ ಬದಲು ಗಡಿಯಾರವಿತ್ತು...ಕೈಯ್ಯಲ್ಲಿ ಕೋಲಿನಂತೆ ಇದ್ದ ಕಾಸು...ಕಾಲಿ ತುದಿಗೆ ಕಟ್ಟಿದ್ದ ಗಾಲಿ...ಎದುರಿಗೆ ಒಂದಿಷ್ಟು ಬೆಂಚುಗಳು...ಬೆಂಚಿನ ಮೇಲೆಲ್ಲಾ ಪಾತ್ರೆ-ಪಗಡೆ...ಪಕ್ಕದಲ್ಲೊಂದಿಷ್ಟು ಫೈಲು....ಬಾಗಿಲಿನಲ್ಲಿ ನಿಂತಿರುವ ಯುವಕ...ಆತನ ಒಂದು ಕಾಲು ಮಾತ್ರ ನೆಲಕ್ಕಿತ್ತು....ಅಷ್ಟು ಹೊತ್ತು ನಗುನಗುತ್ತಾ ಇದ್ದ ಸ್ಥಿರೆ ಅದ್ಯಾಕೋ ಅತ್ತು ಬಿಟ್ಟಿದ್ದಳು....ಹಗುರಾಗಿದ್ದಳು...
ವಾಪಸ್ ಆನ್ ಲೈನ್ ಬಂದ ಮೇಲೂ ಸ್ಥಿರೆಯಿಂದ ರಿಪ್ಲೈ ಬಾರದಿದ್ದನ್ನು ನೋಡಿ ಶತಭಿಷ ಮೆಸ್ಸೇಜನ್ನು  ಡಿಲೀಟ್ ಮಾಡಿದ....ಮತ್ತೆ ಆ ವಿಷಯ ಪ್ರಸ್ತಾಪವಾಗಲಿಲ್ಲ....
***
ಶತಭಿಷ ಚಲನಾಳ ಹತ್ತಿರ ಎಲ್ಲವನ್ನೂ ಮುಚ್ಚುಮರೆಯಿಲ್ಲದೇ ಹೇಳಿದ್ದ....ಆಕೆಯೂ ತನಗನಿಸಿದ್ದನ್ನು ನೇರವಾಗೇ ಹೇಳಿದ್ದಳು. ಸ್ಥಿರೆ ಕೆಲಸಕ್ಕೆ ಹೋಗುವುದು ಶತಭಿಷನಿಗೆ ಇಷ್ಟವಿರಲಿಲ್ಲ....ಮಗುವಿನ ಆರೈಕೆಗೆ ತೊಂದರೆಯಾಗಬಹುದು ಎಂಬ ಆತಂಕ ಅವನನ್ನು ಕಾಡುತ್ತಿತ್ತು...ಸ್ಥಿರೆಯ ಕಾರಣಗಳನ್ನು ಯಾರೂ ಕೇಳಿಸಿಕೊಂಡಿರಲಿಲ್ಲ...
"ನಿಂಗ್ ಏನ್ ಇಷ್ಟನೋ ಅದನ್ನ್ ಮಾಡ್ತಿದಿಯಾ ಅಂದ್ರೆ ಅವಳಿಗ್ ಏನ್ ಇಷ್ಟನೋ ಅದನ್ನ್ ಯಾಕ್ ಮಾಡ್‍ಬಾರ್ದು?" ಚಲನಾ ಕೊನೆಗೂ ಚೆಕ್ ಇಟ್ಟಿದ್ದಳು....ಶತಭಿಷನ ಬಳಿ ಉತ್ತರವಿರಲಿಲ್ಲ....
ಕೊನೆಗೂ ಆತ ಸ್ಥಿರೆಗೆ ಫೋನ್ ಮಾಡಿದ್ದ...ಅಪರೂಪಕ್ಕೆಂಬಂತೆ ಆಕೆಯೂ ಮಾತನಾಡುವ ಮೂಡಿನಲ್ಲಿದ್ದಳು...ಮಾತು-ಕತೆ,ವಾದ-ವಾಗ್ವಾದ, ಜಗಳ-ಕಣ್ಣೀರು-ಬೈಗುಳ ಎಲ್ಲ ಹಂತಗಳೂ ಮುಗಿದವು...ಪಕ್ಕಾ ನಿರ್ಣಯಕ್ಕೆ ಬರಲು ಸಾಧ್ಯವಾಗಲಿಲ್ಲ....ಆದರೆ ಅದೆಲ್ಲದರ ಪ್ರತಿಫಲವಾಗಿ ಶತಭಿಷ ಬೆಂಗಳೂರಿನ ಫ್ಲೈಟನ್ನು ಹತ್ತಿದ್ದ.... ಚಲನಾ ಕೂಡಾ ಪಕ್ಕದ ಸೀಟಿನಲ್ಲಿದ್ದಳು..
ಹೊರಡುವ ಮುನ್ನ ಮಗುವಿಗಾಗಿ ಹೊಸ ಸ್ಕೇಟಿಂಗ್ ಶೂ ಒಂದನ್ನು ಖರೀದಿಸಿದ್ದ... ಸ್ಕೇಟಿಂಗ್‍ನಿಂದ ಮಗುವಿಗೆ ಒಳ್ಳೆಯ ವ್ಯಾಯಾಮವೂ ಆಗುವುದರಿಂದ ಒಳ್ಳೆಯ ಆಯ್ಕೆ ಎಂದು ಚಲನಾಳೂ ಪ್ರೋತ್ಸಾಹಿಸಿದ್ದಳು.....ಮಗುವನ್ನು ತುಂಬಾ ಮಿಸ್ ಮಾಡಿಕೊಂಡಿದ್ದ ಆತ, ಈ ಸ್ಕೇಟಿಂಗ್ ಕ್ಲಾಸ್‍ಗೆ ಜೊತೆಗೇ ಹೋಗುವ ಸಂಭ್ರಮಕ್ಕೆ ಕಾದಿದ್ದ...ಜೊತೆಜೊತೆಯಾಗಿ ಸ್ಕೇಟಿಂಗ್ ಆಡುವ ಕನಸು ಕಟ್ಟಿದ್ದ... ಆದರೆ ಕಾಲನ ಆಟ ಬೇರೆಯದೇ ಇತ್ತು....
**
ಮರು ದಿನ ಬೆಳಿಗ್ಗೆ ಸ್ಥಿರೆಗೆ ಆಫೀಸಿಗೆ ಹೋಗಲೇಬೇಕಾಯಿತು. ಶತಭಿಷ ಆಗಷ್ಟೇ ಬಂದಿದ್ದರಿಂದ ಮನೆಯಲ್ಲೇ ರೆಸ್ಟ್ ಮಾಡುವವನಿದ್ದ...ಸ್ಥಿರೆ ಮಗುವನ್ನು ಆತ ಕೈಗೊಪ್ಪಿಸಿ ಆಫೀಸಿಗೆ ಹೋಗಿದ್ದಳು...ಮೀಟಿಂಗ್ ಮುಗಿಸಿ ಬೇಗ ಬರುವಾ ಎಂದುಕೊಂಡವಳಿಗೆ ಸಂಜೆಯ ತನಕ ಬಿಟ್ಟೂ ಬಿಡದೇ ಕೆಲಸ ಬಂದೊದಗಿತ್ತು....
ಮಧ್ಯಾನ್ಹ ನಿದ್ದೆ ಮಾಡಿ ಎದ್ದ ಮಗು ಸ್ಥಿರೆ ಬೇಕೆಂದು ಹಠ ಮಾಡತೊಡಗಿತ್ತು.  ಸ್ಥಿರೆ ವೀಡಿಯೋ ಕಾಲ್ ಮಾಡಿ, ಕೊನೆಗೆ ಸಂಜೆ ಮಾಲ್‍ಗೆ ಹೋಗೋಣವೆಂದು ಹೇಳಿ ಸಮಾಧಾನಿಸಿದಳು.  ಶತಭಿಷ ಮಗುವಿನ ಜೊತೆ ಸ್ಥಿರೆಯ ಆಫೀಸಿನ ಸಮೀಪವೇ ಇದ್ದ ಮಾಲ್‍ಗೆ ಹೊರಟ...ಜೊತೆಗೆ ಸ್ಕೇಟಿಂಗ್ ಷೂ....
ಸಂಜೆ ಸ್ಥಿರೆಗೆ ಕಾಲ್‍ವೊಂದರಲ್ಲಿ ಜಾಯಿನ್ ಆಗುವುದಕ್ಕಿತ್ತು. ಮಾಲ್‍ನಲ್ಲಿ ಗಲಾಟೆಯಿರದ ಜಾಗ ಹುಡುಕಿ ಕೂತಿದ್ದಳು. ಮಗು ಓಡಾಡಿಕೊಂಡಿತ್ತು. ಶತಭಿಷ ಹತ್ತು ಹೆಜ್ಜೆ ಸ್ಕೇಟಿಂಗ್ ಷೂ ಹಾಕಿ ಓಡಾಡಿಸಿದ್ದ....ಬ್ಯಾಲೆನ್ಸ್ ಸಿಕ್ಕಿರಲಿಲ್ಲ....
ಶತಭಿಷನಿಗೆ ಅಲ್ಲೇ ಎಲ್ಲೋ ವಿನಯ್ ಮತ್ತು ಚಲನಾ ಕಂಡಂತಾಯಿತು.... ನಿಜವಾ ಎಂದು ನೋಡಲು ಒಂದ್ಚೂರು ಆ ಕಡೆ ಹೋದ...ಸ್ಥಿರೆ ದೂರದಿಂದ ಮಗುವನ್ನು ನೋಡುತ್ತಿದ್ದಳು...
ಇದ್ದಕ್ಕಿದ್ದಂತೇ ಸ್ಕೇಟಿಂಗ್ ಷೂ ಹಾಕಿಕೊಂಡ ಮಗು ಎಲಿವೇಟರ್ ಕಡೆ ಹೊರಟಿತು...
ಆಯತಪ್ಪಿತು...
ಶತಭಿಷ ವಾಪಸ್ ಬರುವಷ್ಟರಲ್ಲಿ ಎಲ್ಲ ಮುಗಿದಿತ್ತು....
**
ಸ್ಥಿರೆ ಸರಿಯಾಗಿ ಊಟಮಾಡದೇ ನಾಲ್ಕೈದು ದಿನಗಳಾಗಿತ್ತು.....ದಿನಕ್ಕೆ ಒಂದೇ ಬಾರಿ, ಏನೋ ಒಂದಿಷ್ಟು ತಿಂದಂತೆ ಮಾಡುತ್ತಿದ್ದಳು....ಅದೂ ತಾಯಿಯ ಒತ್ತಾಯಕ್ಕೆ.....
ಅವತ್ತು ವಿನಯ್ ಮನೆಗೆ ಬಂದಿದ್ದ....ಸ್ಥಿರೆಯ ತಾಯಿಯ ಜೊತೆ ಸುಮಾರು ಹೊತ್ತು ಮಾತಾಡಿದ್ದ....ಸ್ಥಿರೆ ಆತನಿಗೆ ಹಾಯ್ ಕೂಡಾ ಹೇಳಲಿಲ್ಲ....
ಬೆಂಗಳೂರಲ್ಲಿದ್ದರೆ ಮಗುವಿನ ನೆನಪು ಕಾಡುತ್ತದೆಂದು ಆಕೆಯನ್ನು ಊರಿಗೆ ಶಿಫ್ಟ್ ಆಗಲು ಸಲಹೆ ನೀಡಿದ....ತಾಯಿಗೂ ಸರಿ ಎನಿಸಿತು...ಶತಭಿಷನ ಅಭಿಪ್ರಾಯ ಯಾರೂ ಕೇಳಲಿಲ್ಲ....
***
ಊರಿಗೆ ಬಂದ ಸ್ಥಿರೆ ತುಂಬಾ ಸೈಲೆಂಟಾಗಿ ಇರುತ್ತಿದ್ದಳು...ಯಾರೊಂದಿಗೂ ಮಾತುಕತೆಯಿಲ್ಲ...ಎಷ್ಟಕ್ಕೇ ಬೇಕೋ ಅಷ್ಟಕ್ಕೇ...ಜಾಸ್ತಿ ಮಾತಾಡಿದರೆ ಏನಾದರೂ ಬೈದು ಎದ್ದು ಹೋಗುತ್ತಿದ್ದಳು.....ಮಗುವಿನ ಫೋಟೋ ನೋಡುತ್ತಾ ಮಲಗುತ್ತಿದ್ದಳು.... ದೇವರಿಗೆ ಕೈ ಮುಗಿಯುವುದನ್ನೂ ಬಿಟ್ಟಿದ್ದಳು.... ಶತಭಿಷನ ಜೊತೆ ಮಾತೇ ಆಡುತ್ತಿರಲಿಲ್ಲ....ಆದರೆ ಆತ  ಪ್ರಯತ್ನ ಬಿಟ್ಟಿರಲಿಲ್ಲ....
ಒಂದೆರಡು ಬಾರಿ ಊರಿಗೂ ಬಂದಿದ್ದ...ಮಾತಾಡಲೂ ಪ್ರಯತ್ನಿಸಿದ್ದ...ಆತ  ಬಂದರೆ ಸ್ಥಿರೆ ಸಿಟ್ಟಿಗೇಳುತ್ತಿದ್ದಳು...ಎಲ್ಲದಕ್ಕೂ ಆತನೇ ಕಾರಣ ಎಂದು ದೂರುತ್ತಿದ್ದಳು....ಹೊಡೆಯ ಹೋಗುತ್ತಿದ್ದಳು... ಅಳುತ್ತಿದ್ದಳು...ಒಮ್ಮೊಮ್ಮೆ ನಿಶ್ಶಕ್ತಿಯಿಂದ ಕುಸಿಯುತ್ತಿದ್ದಳು...
ಹೀಗೇ ಒಂದು ಶನಿವಾರ ಶತಭಿಷನ ಕಾರ್ ಬಂತು...ಶತಭಿಷ ಹೊರಬರಲಿಲ್ಲ....
ಕೆಳಗೆ ಇಳಿದದ್ದು ಚಲನಾ...
ಚಲನಾ ಸ್ಥಿರೆಯ ಜೊತೆ ಮಾತಾಡಿದಳು...ಸ್ಥಿರೆ ಮೊದಮೊದಲಿಗೆ ನಿರಾಸಕ್ತಿ ತೋರಿದರೂ ಕ್ರಮೇಣ ದುಃಖ ಹಂಚಿಕೊಳ್ಳತೊಡಗಿದಳು...ಆಕೆಯನ್ನು ಸಮಾಧಾನಿಸುತ್ತಾ ಎರಡು ದಿನ ಊರಲ್ಲೇ ಇದ್ದು ಚಲನಾ ಹಿಂದುರುಗಿದಳು....ಶತಭಿಷ ಎರಡೂ ದಿನ ಹೊಟೆಲ್‍ನಲ್ಲಿ ಉಳಿದುಕೊಂಡಿದ್ದ...
**
"ಎಲ್ಲಾದ್ರೂ ಹೊರಗ್ ಹೋಗಣಾ ಅನಸ್ತಿದೆ... ಹೋಗ್ತಿದೀನಿ....ಮನಸ್ಸ್ ಸರಿ ಆಗತ್ತೇನೋ ನೋಡಣಾ....ನೀನ್ ಹುಷಾರು..." ಸ್ಥಿರೆ ತಾಯಿಗೆ ಮತ್ತೇನನ್ನೂ ಹೇಳಿರಲಿಲ್ಲ...ಮನೆ ಬಿಟ್ಟು ಹೊರಗಡೆ ಹೋಗಿ ತಿರುಗಾಡಿದರೆ ಮನಸ್ಸೂ ಸರಿ ಆದೀತೆಂದು ಆಕೆಯೂ ಸಮ್ಮತಿಸಿದ್ದರು. ಸ್ಥಿರೆ ಹೊಸದೊಂದು ಲೋಕಕ್ಕೆ ಹೊರಟಿದ್ದಳು.
ಭೂತಾನ್!
ಶಾಂತಿ ಅರಸಿ ಹೊರಟವರಿಗೆ ಅದಕ್ಕಿಂತ ಒಳ್ಳೆಯ ಆಯ್ಕೆ ಇರಲಿಲ್ಲವೇನೋ...
ಬೆಂಗಳೂರಿನಿಂದ ಕೋಲ್ಕತ್ತಾಗೆ ಹೋಗಿ ಅಲ್ಲಿಂದ ಮತ್ತೊಂದು ಫ್ಲೈಟ್ ಹಿಡಿಯಬೇಕಿತ್ತು. ಬೆಂಗಳೂರಿನ ಸುಂಕದ ಕಟ್ಟೆ ಕಂಡಾಗಲೇ ಆಕೆಗೆ ಮಗುವಿನ ನೆನಪು ಕಾಡತೊಡಗಿತ್ತು....
ಅದೆಷ್ಟೋ ಬಾರಿ ಅಲ್ಲಿಗೆ ಬಂದಿದ್ದಳು...ಮೊದಲಿಗೆ ಅಪ್ಪನ ಜೊತೆ...ನಂತರ ಗೆಳತಿಯರ ಜೊತೆ...ಆನಂತರ ಒಬ್ಬಳೇ ....ಮತ್ತೆ ಶತಭಿಷನ  ಜೊತೆ...ಅದಾದ ಮೇಲೆ ಮಗುವಿನ ಜೊತೆ...ಒಮ್ಮೆಯಂತೂ ಅಪ್ಪ-ಅಮ್ಮ, ಶತಭಿಷ ಮತ್ತು ಮಗುವಿನ ಜೊತೆ....ನೆನಪುಗಳು ಕಣ್ಣೆದುರೇ ಪಟಪಟ ಹರಿದುಹೋದವು...ಕಣ್ಣು ಒದ್ದೆಯಾಯಿತು..
ಶತಭಿಷನನ್ನೊಮ್ಮೆ ಭೇಟಿಯಾಗಲಾ? ಒಂದು ಮನಸ್ಸು ಹೂಂ ಎನ್ನುತ್ತಿತ್ತು....
ಸಿಕ್ಕರೆ ಏನಾಗಬಹುದು? ಮತ್ತೆ ಜಗಳ...ದುಃಖ...ಹತಾಶೆ...ಕಣ್ಣೀರು...
ಬೇಡವೇ ಬೇಡ....
ಸ್ಥಿರೆ ಗಟ್ಟಿ ನಿರ್ಧಾರ ಮಾಡಿದ್ದಳು...ಬೆಂಗಳೂರಿಗೆ ಬಂದರೂ ಬಾರದಂತೆ ಕೆಂಪೇಗೌಡ ಏರ್‍ಪೋರ್ಟ್ ತಲುಪಿದ್ದಳು...ಚೆಕಿನ್ ಆಗಿ, ಕಲ್ಕತ್ತಾಗೆ ಹಾರಿದ್ದಳು....ಪ್ಲೇನ್ ಇಳಿಯುವಷ್ಟರಲ್ಲಿ ಆಕೆಗೊಂದು ಅಚ್ಚರಿ ಕಾದಿತ್ತು...
**
"ಹೆಂಗಿದಿಯಾ ಮಗಾ?" ಶತಭಿಷನ ಹಳೇ ದೋಸ್ತ್ ಒಬ್ಬನು ಕರೆ ಮಾಡಿದ್ದ....ಶತಭಿಷನೂ ಆತ್ಮೀಯತೆಯಿಂದ ಮಾತಾಡಿದ್ದ....
"ನಿಂಗ್ ಚಲನಾ  ಇನ್ನೂ ಟಚ್ ಅಲ್ ಇದಾಳಾ ?" ಶತಭಿಷ ಆ ಪ್ರಶ್ನೆಗೆ ಸ್ವಲ್ಪ ವಿವರವಾಗಿಯೇ ಉತ್ತರಿಸಿದ್ದ...ಮಾತುಕತೆ ಅಲ್ಲಿಗೆ ಮುಗಿದಿತ್ತು....
"ಕ್ಯಾನ್ ಯು ಇಂಟರ್‍ವ್ಯೂ ಚಲನಾ ಫಾರ್ ಅಸ್....." ಪ್ರತಿಷ್ಠಿತ ಪ್ರೊಡಕ್ಷನ್ ಹೌಸ್ ಒಂದರಿಂದ  ಶತಭಿಷನಿಗೆ  ಕರೆಬಂದಿತ್ತು...
ಅಚ್ಚರಿಯಾಯಿತು....ಆ ದೋಸ್ತ್ ಶತಭಿಷನನ್ನು ರೆಫರ್ ಮಾಡಿದ್ದ....
ಶತಭಿಷ ತನಗ್ಯಾಕೆ ಕೇಳುತ್ತಿದ್ದೀರಿ ಎಂದು ಪ್ರಶ್ನಿಸಿದ್ದ....ಆಗ ಆ ಟೀಂನವರು ಷೋ ಬಗ್ಗೆ ವಿವರಿಸಿದ್ದರು...
ಅಂತರರಾಷ್ಟ್ರೀಯ ಖ್ಯಾತಿಯುಳ್ಳ ವ್ಯಕ್ತಿಗಳನ್ನು ಇಂಟರ್‍ವ್ಯೂ ಮಾಡುವ ಕಾರ್ಯಕ್ರಮವದು. ಅವರಿಗೆ ಹತ್ತಿರವಿರುವ ವ್ಯಕ್ತಿಗಳಿಂದಲೇ ಪ್ರಶ್ನೆ ಕೇಳಿಸಿದರೆ ಮಾತುಕತೆ ಆತ್ಮೀಯವಾಗಿ ನಡೆಯುತ್ತದೆ ಎಂಬುದು ಆ ಟೀಂನ ಐಡಿಯಾ ಆಗಿತ್ತು....
ಶತಭಿಷ ತನಗೆ ಆಂಕರಿಂಗ್ ಅನುಭವ ಇಲ್ಲವೆಂದ...
ಆತನ ಹಳೆಯ ದೋಸ್ತ್ ಆತನಿಗೆ ಧೈರ್ಯ ತುಂಬಿದ....
"ಕಾಲೇಜಲ್ಲೇ ಕತೆ ಕವನ ಬರಿತಿದ್ದೋನ್ ಮಗಾ ನೀನು...ಇದೆಲ್ಲಾ ಈಸಿ..ಮಾಡ್ತಿಯಾ ಬಿಡು " ಎಂದಿದ್ದ....
ಶತಭಿಷನಿಗೂ ಸ್ಥಿರೆ-ಮಗು-ಕೆಲಸ ಎಂದುಕೊಂಡು ತಲೆ ಚಿಟ್ಟು ಹಿಡಿದಿದ್ದು....ಬದಲಾವಣೆ ಬೇಕೆನಿಸಿತ್ತು....ಆದರೆ ಪಕ್ಕಾ ಏನೆಂದೂ ಹೇಳಲಾಗಲಿಲ್ಲ....ಇನ್ನೆಂದೂ ಕೆಲಸ ಬದಲಾಯಿಸಲಾರೆ ಎಂದು ಆರೇಳು ತಿಂಗಳ ಹಿಂದಷ್ಟೇ ಆತ ನಿರ್ಧರಿಸಿದ್ದ....
ಶತಭಿಷ ಸ್ವಲ್ಪ ದಿನ ಸಮಯ ಕೇಳಿದ...
**
ಕೋಲ್ಕತ್ತಾದಲ್ಲಿ ಫ್ಲೈಟ್ ಇಳಿದ ಸ್ಥಿರೆಗೆ ಮುಂದಿನ ಫ್ಲೈಟ್ ಹತ್ತಲು ಇನ್ನೂ ಸಮಯವಿತ್ತು...ಸುಮ್ಮನೇ ಲಾಂಜ್‍ನಲ್ಲಿ ಕೂತಿದ್ದ ಆಕೆಯ ಕಣ್ಣಿಗೆ ವಯಸ್ಸಾದ ಹೆಂಗಸೊಬ್ಬರು ಕಂಡರು...ಸೆಲ್‍ಫೋನ್ ಹಿಡಿದಿದ್ದರು...ಏನೋ ಟ್ರೈ ಮಾಡುತ್ತಿದ್ದರು...ಕಷ್ಟಪಡುತ್ತಿದ್ದರು....ಸ್ಥಿರೆ ಹೆಲ್ಪ್ ಮಾಡಿದಳು...ಅವರು ಥ್ಯಾಂಕ್ಸ್ ಎಂದರು....
"ಒಬ್ಬರೇ ಹೊರಟಿದ್ದೀರಾ?ಯಾವ್ ಕಡೆ?" ಸ್ಥಿರೆ ಇಂಗ್ಲೀಷಿನಲ್ಲಿ ಕೇಳಿದಳು...
ಅವರಿಗೆ ಅರ್ಥವಾಗಲಿಲ್ಲ...
ಬೆಂಗಾಲಿಯಲ್ಲಿ ಉತ್ತರಿಸಿದ್ದರು....ಇಬ್ಬರಿಗೂ ಹಿಂದಿ ಅರ್ಥವಾಗುತ್ತಿತ್ತು....
ಸ್ಥಿರೆಗೆ ಆ ಅಜ್ಜಿಯ ಬಗ್ಗೆ ಕುತೂಹಲ ಎನಿಸಿತು...ಮಾತಾಡುತ್ತಾ  ಕೂತಳು...
ಆ ಮಾತುಕತೆ ಆಕೆಯ ಮುಂದಿನ ಹಾದಿಯನ್ನು ಬದಲಾಯಿಸಿಬಿಟ್ಟಿತು....
**
ಶತಭಿಷ ಬಹಳ ದಿನ ಸುಮ್ಮನಿದ್ದ...
ಮತ್ತೆ ಕರೆ ಬಂತು....
ಕೊನೆಗೂ ಒಪ್ಪಿಕೊಳ್ಳಲೇಬೇಕಾಯಿತು...
ಅದು ಷೋನ ಲಾಂಚಿಂಗ್ ಎಪಿಸೋಡ್...ಅಂತರರಾಷ್ಟ್ರೀಯ ಚಿತ್ರ ಕಲಾವಿದೆಯಾಗಿ ಚಲನಾ ಬಹಳ ಹೆಸರುಗಳಿಸಿದ್ದಳು...ಜೊತೆಗೆ ನೇರವಾಗಿ ಮಾತಾಡುವ ಗುಣದಿಂದ ಆಗೀಗ ವಿವಾದಕ್ಕೂ ಗುರಿಯಾಗಿದ್ದಳು...ಹಲವಾರು ಜನರಿಗೆ ಇಷ್ಟವಾಗಿದ್ದಳು...ಹಲವರಿಗೆ ಕಣ್ಣು ಕೆಂಪಾಗಿಸಿದ್ದಳು...ಆಕೆಯ ವೈಯಕ್ತಿಕ ಜೀವನದ ಬಗ್ಗೆ ಹಲವರಿಗೆ ಕುತೂಹಲವಿತ್ತು...
ಚಲನಾಳಿಗಾಗಿ ಶತಭಿಷ ಕೆಲವೊಂದು ವಿಚಿತ್ರ ಪ್ರಶ್ನೆಗಳನ್ನು ಹುಡುಕಿಟ್ಟಿದ್ದ...ಜೊತೆಗೆ ಕೆಲವೊಂದು ಆಡಿಯನ್ಸ್ ಪ್ರಶ್ನೆಗಳಿಗೂ ಅವಕಾಶವಿತ್ತು....ಕೆಲವೊಂದು ಪ್ರಶ್ನೆಗಳು ಶತಭಿಷನಿಗೂ ಅಚ್ಚರಿ ತಂದಿದ್ದವು...
--(9/10)--


10. ಮುಖಾಮುಖಿ

"ಚೆನಾಗ್ ಮಾಡಿದ್ರೆ ಸ್ಥಿರಾನೂ ವಾಪಸ್ ಬರ್ತಾಳೇನೋ...." ಚಲನಾ ಶತಭಿಷನನ್ನು ಕಿಚಾಯಿಸುತ್ತಿದ್ದಳು....ಶತಭಿಷನಿಗೆ ತನ್ನ ಮೇಲೇ ನಂಬಿಕೆಯಿರಲಿಲ್ಲ....
ಸೆಟ್‍ನಲ್ಲಿ "ರೋಲ್" ಎಂಬ ಶಬ್ಧ ಕೇಳಿತು...ಅಷ್ಟೇ ಶತಭಿಷ  ಆಂಕರಿಂಗ್ ಬಗೆಗಿನ ಆತಂಕಗಳನ್ನೆಲ್ಲ ಮರೆತಿದ್ದ.......ಜೋಷ್‍ನಲ್ಲೇ ಮಾತು ಆರಂಭಿಸಿದ್ದ....ಡೈರೆಕ್ಟರ್ ಅದೇಕೋ ಕಟ್ ಹೇಳಿರಲಿಲ್ಲ....ಮಾತುಕತೆ ಆತ್ಮೀಯತೆಯಿಂದ ಸಾಗಿತ್ತು...
"ನಿಂಗ್ ತುಂಬಾ ಖುಷಿಕೊಟ್ಟಿರೋ ಸ್ಕೆಚ್ ಯಾವುದು?" ಶತಭಿಷ ಕೊನೆಗೂ ಪ್ರಶ್ನೆಗಳಿಗಾಗಿ ತಡಕಾಡುತ್ತಿದ್ದ....
"ನಂಗ್ ಖುಷಿ ಕೊಟ್ಟಿದ್ ಅಂತಾ ಏನಿಲ್ಲ....ಎಲ್ಲಾನೂ ಖುಷಿ ಕೊಡತ್ತೆ...ಬಟ್ ನಂಗ್ ಲಾಸ್ಟ್ ಇಯರ್ ಅವಾರ್ಡ್ ಬಂತಲ್ಲ ....ಅದ್ ಯಾಕೋ ಮನ್ಸಿಗ್ ತುಂಬಾ ಹತ್ರ ಆಗಿದ್ದ್ ಸ್ಕೆಚ್...." ಚಲನಾ ಕೂದಲು ಸರಿ ಮಾಡಿಕೊಂಡಳು...
"ಯಸ್.. ನೀನ್ ಯಾವತ್ತೋ ಒಂದಿನ ಅದನ್ನಾ ಒಂದ್ ಟೈಂನಲ್ಲಿ ನೀನ್ ತುಂಬಾ ಇಷ್ಟ ಪಟ್ಟ ಒಂದ್ ಸ್ಕೆಚ್‍ನಾ ಮಾರಕ್ ಹೊರಟೆ...ಯಾಕೆ?" ಶತಭಿಷನಿಗೂ ಅದರ ಬಗ್ಗೆ ಕುತೂಹಲವಿತ್ತು....
"ಯಾಕಂದ್ರೆ ನಂಗ್ ದುಡ್ಡ್ ಬೇಕಿತ್ತು....ಸಿಂಪಲ್ಲ್..." ಚಲನಾ ದಿಂಬೊಂದನ್ನು ಎತ್ತಿ ತೊಡೆಯ ಮೇಲೆ ಇಟ್ಟುಕೊಂಡಳು....
"ಸೋ ಆರ್ಟ್‍ಕಿಂತ ನಿಂಗೆ ದುಡ್ಡ್ ಮುಖ್ಯನಾ?" ಶತಭಿಷನಿಗೆ ಅವತ್ತೇ ಆ ಪ್ರಶ್ನೆ ಕೇಳಬೇಕೆನಿಸಿತ್ತು....
"ಹೊಟ್ಟೆ ತುಂಬಿದಾಗ ಮಾತ್ರ ಈ ಆರ್ಟ್ ಎಲ್ಲಾ....ಮೈಂಡ್ ಕ್ಲಿಯರ್ ಅಂದ್ರೆ ಏನೂ ಆಗಲ್ಲ...ಮೈಂಡ್ ಕ್ಲಿಯರ್ ಇರಬೇಕು ಅಂದ್ರೆ ನಂಗೇ ಲೈಫ್ ಕಂಫರ್ಟೆಬಲ್ ಇರ್ಬೇಕು....ಆ ಸ್ಕೆಚ್ ಯಾವ್ದೋ ಫೀಲಿಂಗ್ ಅಲ್ಲಿ ಬರ್ದಿದ್ದು....ಆ ಫೀಲಿಂಗ್‍ಗೆ ಲೈಫಲ್ಲಿ ಜಾಗ ಇಲ್ಲಾ ಅನಸ್ತು....ಅದ್ಕೆ ಮಾರಕ್ಕ್ ಹೊರ್ಟಿದ್ದೆ..." ಚಲನಾ ಆ ಬಗ್ಗೆ ಜಾಸ್ತಿ ಯೋಚಿಸಿರಲಿಲ್ಲ...
"ಓ.ಕೇ..." ಶತಭಿಷ ದೊಡ್ಡ ಉಸಿರೆಳೆದುಕೊಂಡ....ಮುಂದಿನ ಪ್ರಶ್ನೆಯ ಬಗ್ಗೆ ಯೋಚಿಸಿದ....
"ವಾಟ್ ಈಸ್ ಆರ್ಟ್ ಆಕಾರ್ಡಿಂಗ್ ಟು ಯೂ?" ಶತಭಿಷ ಕೊನೆಯ ಪ್ರಶ್ನೆ ಎಂಬಂತೇ ಕೇಳಿದ....
"ಆರ್ಟ್ ಈಸ್ ಆರ್ಟ್ ಅಷ್ಟೇ..." ಚಲನಾ ಚುಟುಕಾಗಿ ಉತ್ತರಿಸಿದ್ದಳು....
"ಯಸ್...ಅದು ಒಬ್ಬೊಬ್ರಿಗೆ ಒಂದೊಂಥರ ಕಾಣ್ಸಿದ್ರೆನೇ ಚಂದ....ನಂಗ್ ಆರ್ಟ್ ಅಂದ್ರೆ ಒಂದ್ ಅನ್‍ಪ್ಲಾನ್ಡ್ ಟ್ರೆಕ್ಕಿಂಗ್....ಏನೂ ಗೊತ್ತಿಲ್ದೇ ಹೊರಟು ಎಲ್ಲಿಗೋ ಹೋಗಿ ತಲುಪೋ ಖುಷಿ " ಶತಭಿಷ ಮಾತಾಡುತ್ತಲೇ ಇರುವಾಗ, "ಆಡಿಯನ್ಸ್ ಕ್ವಶ್ಚನ್ ತಗೊಳಿ....." ಡೈರೆಕ್ಟರ್ ಕಿವಿಯಲ್ಲಿ ಉಸುರಿದ್ದರು...
ಒಂದೆರಡು ಮಾಮೂಲಿ ಪ್ರಶ್ನೋತ್ತರಗಳು ನಡೆದವು...
"ವಿಲ್ ಯು ಮ್ಯಾರಿ ಮೀ?" ವಿನಯ್ ನೇರವಾಗಿ ಕೇಳಿದ್ದ ಪ್ರಶ್ನೆ ಸ್ಟೇಜಿನ ಮೇಲಿದ್ದ ಎಲ್ಲರನ್ನೂ ಅವಾಕ್ಕಾಗಿಸಿತು...ಶತಭಿಷ ಮಾತಾಡಲು ತಡವರಿಸಿದ...ಟ್ಯಾಕ್‍ಬ್ಯಾಕಿನಲ್ಲೆಲ್ಲೋ "ಶಿಟ್" ಎನ್ನುವ ಪದ ಕೇಳಿತ್ತು...
"ಐ ಡೋಂಟ್ ನೋ...ಐ ಹ್ಯಾವ್ ಮೈ ಡೌಬ್ಟ್ಸ್..." ಚಲನಾಳ ಉತ್ತರ ಸ್ಪಷ್ಟವಾಗಿತ್ತು....
ಷೋ ಮುಗಿದ ನಂತರ ಇಬ್ಬರೂ ಮಾತಾಡಿದರು...ನಂತರ ಬಾರೊಂದಕ್ಕೆ ಹೋದರು...ಮತ್ತೆ ಮಾತನಾಡಿದರು...ಮಾತುಕತೆ ನಿಮಿಷಗಳ ಗಡಿ ದಾಟಿದ ಮೇಲೆ ವಿನಯ್ ಚಲನಾಳಿಗೆ ಪ್ರಪೋಸ್ ಮಾಡಿದ..
ಚಲನಾ ಒಲ್ಲೆಯೆಂದಳು...ಆತ ಕಾರಣ ಕೇಳಿದ...
"ನನ್ನ ಇಷ್ಟಪಡೋರು ಸತ್ತೋಗ್ತಾರೆ....." ಚಲನಾ ಒಲ್ಲದ ಮನಸ್ಸಿನಿಂದ ಹೇಳಿದ್ದಳು....
"ರಿಜೆಕ್ಟ್ ಆಗಿದೀನಿ ಅನ್ನೋ ಫೀಲ್ ಅಲ್ಲಿ ಕುಡದು ಸಾಯೋದಕ್ಕಿಂತ ಹಿಂಗ್ ಸತ್ರೆ ನೆಮ್ದಿ ಬಿಡು....." ವಿನಯ್‍ಗೆ ಸ್ವಲ್ಪ ನಶೆ ಏರಿತ್ತೇನೋ....ಚಲನಾಳ ಕೈಯ್ಯನ್ನು ಗಟ್ಟಿಯಾಗಿ ಅದುಮಿದ್ದ....
ಚಲನಾ ಅರೆಕ್ಷಣ ಯೋಚಿಸಿದಳು...
ಕೆನ್ನೆಗೊಂದು ಮುತ್ತಿಟ್ಟು, ಕೈ ಬಿಡಿಸಿಕೊಂಡಳು....
ವಿನಯ್ ವಾಷ್‍ರೂಮಿಗೆಂದು ಎದ್ದುಹೋದ..
ಚಲನಾ ಉಂಗುರದ ಬೆರಳನ್ನೊಮ್ಮೆ ನೇವರಿಸಿದಳು....
***
ಬೆಳಗಿನ ಜಾವ ಐದೂ ಮುಕ್ಕಾಲಿಗೇ ಸ್ಥಿರೆ ಮನೆಯ ಬಾಗಿಲು ಬಡಿದಿದ್ದಳು....
"ಯಾಕೋ ನಿನ್ನ್ ನೆನ್ಪಾಯ್ತು ಕಣಮ್ಮಾ....ಅದ್ಕೇ ಬಂದ್ಬಿಟ್ಟೆ...." ಬಾಗಿಲಲ್ಲೇ ತಲೆ ತಗ್ಗಿಸಿ ನಿಂತಿದ್ದಳು....
 "ಅಯ್ಯೋ...ಹುಚ್ಚ್ ಹುಡುಗಿ...ತಲೆ ಕೆಡಸ್ಕೋಬೇಡಾ ಬಾ ಒಳಗೆ..." ತಾಯಿ ಲಗೇಜ್ ಬ್ಯಾಗನ್ನು ಎತ್ತಿ ಒಳಗಿಡಲು ಹೋದರು...ಸ್ಥಿರೆ ತಾನೇ ಎತ್ತಿಕೊಂಡಳು...ತಾಯಿಗೆ ಸೊಂಟನೋವು ಕಡಿಮೆಯಾಯಿತಾ? ಉತ್ತರ ಯಾರಿಗೂ ಗೊತ್ತಿರಲಿಲ್ಲ...
"ಎಲ್ಲಿ ತನಕಾ ಹೋಗ್ ಬಂದೆ...." ವಿರಾಮವಾದಾಗ ತಾಯಿ ಕೇಳಿದ್ದರು...
"ಕಲ್ಕತ್ತಾ....ಅಲ್ಲಿ ನಿನ್ನ್ ಥರಾನೇ ಒಬ್ರ ಸಿಕ್ಕಿದ್ರು...ಯಾಕೋ ನಿನ್ನ್ ನೋಡದಂಗೇ ಆಯ್‍ತು.....ಬಂದ್ ಬಿಟ್ಟೆ..." ಸ್ಥಿರೆ ಪೂರ್ತಿ ವಿಷಯ ಹೇಳಿರಲಿಲ್ಲ....ಆದರೆ ಮಾಡಿತೋರಿಸ ಹೊರಟಿದ್ದಳು...
ಮಕ್ಕಳಿಗೆ ಪುರಸೊತ್ತಿಲ್ಲ....ಮೊಮ್ಮಕ್ಕಳಿಗೆ ಹೇಳಿಕೊಡಲು ಬರುವುದಿಲ್ಲ...ತಾವೇ ಕಲಿಯುವಷ್ಟು ಆಸಕ್ತಿಯಿಲ್ಲ...ಮಕ್ಕಳೆಲ್ಲ ಬೆಂಗಳೂರು-ನಮಗೆ ಮಾತ್ರ ನಮ್ಮೂರು... ಹೀಗೇ ಏನೇನೋ ಕಾರಣಗಳಿಂದ ಡಿಜಿಟಲ್ ಯುಗಕ್ಕೆ ಬರಲು ಒಂದು ಪೀಳಿಗೆ ಹಿಂದೇಟು ಹಾಕಿದ್ದನ್ನು ಸ್ಥಿರೆ ಗಮನಿಸಿದ್ದಳು...
ಇದೇ ಸ್ಮಾರ್ಟ್ ಫೋನ್ ಬಳಕೆ ಕಾರಣಕ್ಕೆ ಅಸಹನೆ, ಮೂದಲಿಕೆ, ತಾತ್ಸಾರ, ಹತಾಶೆ, ಅಹಂ ಹಲವಾರು ಮನೆಗಳಲ್ಲಿ ಅಶಾಂತಿಗೆ ಕಾರಣವಾಗಿತ್ತು....ಇಳಿವಯಸ್ಸಿನಲ್ಲಿ ಬ್ಯಾಂಕ್ ಸಾಲಿನಲ್ಲಿ ನಿಲ್ಲುವುದು...ಕರೆಂಟ್ ಬಿಲ್ಲ್ ಕಟ್ಟಲು ಬಿಸಿಲಲ್ಲಿ ಒದ್ದಾಡುವುದು...ಇವಕ್ಕೆಲ್ಲ ಪರಿಹಾರ ಹುಡುಕಬಾರದೇಕೆಂದು ಆಕೆ ಯೋಚಿಸಿದ್ದಳು...
"ಈ ಸಂಸ್ಥೆಯಲ್ಲಿ ಹಿರಿಯ ನಾಗರಿಕರಿಗೆ ಸ್ಮಾರ್ಟ್‍ಫೋನ್/ಲ್ಯಾಪ್‍ಟ್ಯಾಪ್ ಬಳಕೆ ಕಲಿಸಲಾಗುವುದು...ಆಸಕ್ತರು ಸಂಪರ್ಕಿಸಿ..." ವಾಟ್ಸಾಪುಗಳಲ್ಲಿ ಮೆಸ್ಸೇಜೊಂದು ಹರಿದಾಡಲು ಶುರುವಾಯಿತು....ಮೊದಲಿಗೆ ಟೀಚರ್ ಒಬ್ಬರು ಬಂದರು...ನಂತರ ಗೃಹಿಣಿ...ಆಮೇಲೆ ಹಳ್ಳಿಯಿಂದ ಮಾಜೀ ಪಟೇಲರು...ಕ್ರಮೇಣ ಜನ ನೊಂದಾಯಿಸಿಕೊಳ್ಳತೊಡಗಿದರು... ಐದಾರು ತಿಂಗಳಲ್ಲಿ ಸ್ಥಿರೆ ಹುಟ್ಟು ಹಾಕಿದ ಸಂಸ್ಥೆ ವೈರಲ್ ಆಗಿತ್ತು....ಬೆಂಗಳೂರು ಸೇರಿ ಕೀಲಿಮಣೆ ಕುಟ್ಟುತ್ತಿರುವ ಯುವಕ-ಯುವತಿಯವರು ತಾ ಮುಂದು ತಾ ಮುಂದು ಎಂಬಂತೆ ವೀಕೆಂಡುಗಳಲ್ಲಿ ಮನೆ ಮನೆಗೆ ಹೋಗಿ ತರಬೇತಿ ನೀಡತೊಡಗಿದ್ದರು...ಸ್ಥಿರೆ ಅವರಿಗೆಲ್ಲ ಸಂಪರ್ಕಕೊಂಡಿಯಾಗಿದ್ದಳು.....
"ಈ ಹೊಸಾ ಮೊಬೈಲ್ ಸಹವಾಸ ಮಾತ್ರ ಬ್ಯಾಡ....ನಮಗ್ ಹಳೇ ಫೋನೇ ಸಾಕು...ಫೋನ್ ಮಾಡಕ್ಕೆ ಎತ್ತಕ್ಕೆ ಗೊತ್ತದೆ... " ಎಂದು ಸುಮ್ಮನಿದ್ದ ಸೀನಿಯರ್ ಸಿಟಿಜನ್‍ಗಳು ಕಲಿಯಲು ಉತ್ಸಾಹ ತೋರಿದ್ದರು...ಅದೆಷ್ಟೋ ಹಿರಿಯ ಜೀವಗಳಲ್ಲಿ ಹೊಸ ಉತ್ಸಾಹ ಮೂಡಿತ್ತು....
ಹೀಗೇ ಒಂದು ದಿನ ಪಾಠ ಹೇಳುವಾಗ ಫೋನ್ ರಿಂಗಾಯಿತು...ಸೈಲೆಂಟ್ ಮಾಡಿದಳು..ಮತ್ತೊಮ್ಮೆ ರಿಂಗಾಯಿತು...ಕಟ್ ಮಾಡಿ, ಸೈಲಂಟ್ ಮೋಡಿನಲ್ಲಿಟ್ಟಳು....
"ಅರ್ಜಂಟದೆ ಅನಸ್ತದೆ...ತಗಳವ್ವಾ..." ಎಂಬತ್ತರ ಮಹಿಳೆಯೊಬ್ಬರು ಸಲಹೆಯಿತ್ತರು...ಸ್ಥಿರೆ ಪಾಠ ಮುಗಿಸಿ ಪರ್ಸನಲ್ ಮೊಬೈಲ್ ಕೈಗೆತ್ತಿಕೊಂಡಳು...ಎರಡು ಮಿಸ್‍ಕಾಲ್ ಇತ್ತು...ಟ್ರೂ ಕಾಲರ್‍ನಲ್ಲಿ ನೋಡಿದಾಗ ಮೊದಲನೇಯದ್ದು ಖಾಸಗೀ ಚಾನೆಲ್ ಒಂದರ ಹೆಸರು ತೋರಿಸುತ್ತಿತ್ತು...ಎರಡನೇಯ ಹೆಸರು ಚಲನಾ!
**
ಶತಭಿಷನ ಮೊದಲ ಎಪಿಸೋಡ್ ಸೂಪರ್ ಹಿಟ್ ಆಗಿತ್ತು...ಆ ವೇವ್‍ಅನ್ನು ನೋಡಿದ ನಿರೂಪಕರು ಮತ್ತೆ ಫಾರ್ಮಾಟ್ ಬದಲಾಯಿಸಿ ಶತಭಿಷನನ್ನೇ ಹೋಸ್ಟ್ ಆಗಿ ಮುಂದುವರೆಸಿದರು... ಇಂದು ಸಕ್ಸಸ್‍ಫುಲ್ ಅನಿಸಿಕೊಂಡವರ ಹಿಂದಿನ ಫೇಲ್ಯುರ್‍ಗಳನ್ನು ಆ ಕಾರ್ಯಕ್ರಮ ಎಲ್ಲರೆದುರು ತಂದಿತ್ತು...ಅವರು ತೆಗೆದುಕೊಂಡ ನಿರ್ಧಾರಗಳು, ಪಟ್ಟ ಪರಿಶ್ರಮ ಎಲ್ಲವನ್ನೂ ಶತಭಿಷ ಸರಳವಾಗಿ ಹೊರತೆಗೆಸುತ್ತಿದ್ದ....ಮೊದಲ ಷೋಗೆಂದು ಬಂದವನು ಬರೊಬ್ಬರಿ ಹನ್ನೆರಡು ಷೋಗಳನ್ನು ನಡೆಸಿಕೊಟ್ಟಿದ್ದ....ಜೊತೆಜೊತೆಗೆ ಆತನ ವೃತ್ತಿ ಜೀವನವೂ ಚೆನ್ನಾಗಿಯೇ ಸಾಗುತ್ತಿತ್ತು...
"ಸರ್...ನೆಕ್ಸ್ಟ್‍ಷೋಗೆ ಗೆಸ್ಟ್ ಡಿಟೇಲ್ಸ್ ಕಳ್ಸಿದೀನಿ ನೋಡಿ..." ಷೋದ ಹುಡುಗ ಕಾಲ್ ಮಾಡಿ ಹೇಳಿದ್ದ....
"ಸ್ಥಿರಾ...ದ ಸ್ಮಾರ್ಟ್‍ಫೋನ್ ಟೀಚರ್.." ಶತಭಿಷ ಟೈಟಲ್ ನೋಡಿಯೇ ದಂಗಾದ....ಪ್ರೊಡಕ್ಷನ್‍ನವರಿಗೆ ಕಾಲ್ ಮಾಡಿ ಆಗಲ್ಲ ಎನ್ನುವವನಿದ್ದ....ಅಷ್ಟರಲ್ಲಿ ಅವರೇ ಕಾಲ್ ಮಾಡಿದ್ದರು...
ಸ್ಥಿರೆ ಷೋಗೆ ಬರಲೊಲ್ಲೆ ಎಂದಳಂತೆ...ಷೋದ ಹುಡುಗರು "ಕೊಬ್ಬು " ಎಂದು ಬೈದುಕೊಳ್ಳುತ್ತಿದ್ದರು....ಅರ್ಜಂಟಾಗಿ ಹೊಸ ಗೆಸ್ಟ್ ಹುಡುಕುವ ತರಾತುರಿಯಲ್ಲಿದ್ದರು....
ಶತಭಿಷನಿಗೆ ಷೋ ಕ್ಯಾನ್ಸಲ್ ಮಾಡಿದ್ದಕ್ಕೆ ಕಾರಣ ಪಕ್ಕಾ ಗೊತ್ತಾಗಲಿಲ್ಲ...
"ನಾನು ಆಂಕರ್ ಆಗಿದ್ದಕ್ಕೇ ಕ್ಯಾನ್ಸಲ್ ಮಾಡಿದಳಾ...?" ಮನಸ್ಸೆಲ್ಲೋ ಇಲ್ಲ ಎನ್ನುತ್ತಿತ್ತು...
"ಮುಖ ನೋಡಲೂ ಇಷ್ಟವಿಲ್ಲವಾ...." ಮತ್ತೆ ಕರೆ ಮಾಡಬೇಕು ಅನಿಸಿತು....ಕರೆ ಮಾಡಿದ ಕೂಡ....ಆದರೆ ಆತನ ಹೆಸರು ಸ್ಥಿರೆ ಬ್ಲಾಕ್‍ಲೀಸ್ಟ್‍ನಲ್ಲಿತ್ತು...
ಷೋದ ಡೈರೆಕ್ಟರ್‍ಗೆ ಕರೆ ಮಾಡಿದ....ಶತಭಿಷನ ಅನುಮಾನ ನಿಜವಾದಂತಿತ್ತು....ಮೊದಲಿಗೆ ಹೂಂ ಎಂದು ಆಮೇಲೆ ಷೋ ಡೀಟೇಲ್ಸ್ ಕೇಳಿದ ಮೇಲೆ ಕಾನ್ಸಲ್ ಮಾಡಿದ್ದಾರೆಂದು ಹೇಳಿದರು...
ಡೈರೆಕ್ಟರ್ ಅದಾಗಲೇ ಆಕೆಯ ಬಗ್ಗೆ ರಿಸರ್ಚ್ ಟೀಂನಿಂದ ಡೇಟಾ ತರಿಸಿದ್ದರಿಂದ, ಜಾಸ್ತಿಯೇನೂ ಹೇಳಲಿಲ್ಲ....ಶತಭಿಷನಂಥಾ ಎಕ್ಕದೆಲೆಯನ್ನು ಅವರು ಬಿಟ್ಟುಕೊಡಲು ಸಿದ್ಧರಿರಲಿಲ್ಲ....
ಶತಭಿಷನಿಗೆ ಸಿಟ್ಟು ಬಂತು....ಅಳಬೇಕೆನ್ನಿಸಿತು...ಕುಡಿಯಬೇಕೆನ್ನಿಸಿತು...ಕೊನೆಗೊಮ್ಮೆ ಯಾವುದೂ ಬೇಡವೆನ್ನಿಸಿತು...
ಊಟ ಮಾಡದೇ ಮಲಗಿದ್ದ....ನಿದ್ದೆ ಹತ್ತಲಿಲ್ಲ...
ಚಲನಾಳಿಗೆ ಮೆಸ್ಸೇಜ್ ಮಾಡಿದ....
**
"ಐ ಆಮ್ ಗೆಟ್ಟಿಂಗ್ ಮ್ಯಾರೀಡ್....ನೀನ್ ಬರ್ಲೇ ಬೇಕು...." ಚಲನಾ ಸ್ಥಿರೆಯ ಮನೆಗೆ ಬಂದು ಕರೆದಿದ್ದಳು....
"ನೀನ್ ಬರ್ಲೇ ಬೇಕ್ ಕಣೆ....ತುಂಬಾ ಸಿಂಪಲ್ ಆಗಿ ದೇವಸ್ಥಾನಕ್ ಹೋಗಿ ಮದ್ವೇ ಆಗ್ ಬರ್ತಿರದು....ನಾಲ್ಕೈದ್ ಜನಾ ಅಷ್ಟೇ..." ವಿನಯ್ ಕೂಡಾ ಒತ್ತಾಯ ಮಾಡಿದ್ದ....
ಇಬ್ಬರ ಒತ್ತಾಯಕ್ಕೂ ಮಣಿದು ಆಕೆ "ಹೂಂ" ಎಂದಿದ್ದಳು...
ಆ ದಿನ ರಾತ್ರಿಯೇಕೋ ಸಡನ್ನಾಗಿ ಯೋಚನೆ ಬಂದಂಗಾಯಿತು...."ಶತಭಿಷನೂ ಬಂದ್ರೆ?"
ಆತನನ್ನು ಅವಾಯ್ಡ್ ಮಾಡುತ್ತೇನೆ ಎಂದುಕೊಂಡಳು....
ನೋಡಿದರೂ ನೋಡದಂತೆ ಇರುತ್ತೇನೆ ಎಂದುಕೊಂಡಳು...
ಜಗಳವಾಡಬೇಕು ಎಂದುಕೊಂಡಳು..
ಕೊನೆಗೊಮ್ಮೆ ಪಾಪ ಎನ್ನಿಸಿತು...
ಮದುವಾದಾಗಿನಿಂದ ಕಳೆದ ಸಿಹಿ ನೆನಪುಗಳು ಕಣ್ಣೆದುರು ಬಂದವು...ಅದೇಕೋ ಆತನನ್ನು ಪೂರ್ಣವಾಗಿ ಮರೆಯುವುದು ಆಕೆಗೆ ಸಾಧ್ಯವೇ ಇರಲಿಲ್ಲ....
**
"ಇನ್ನೊಂದ್ ಅವರ್ ಅಲ್ಲಿ ದೇವಸ್ಥಾನದ್ ಹತ್ರಾ ಇರ್ತೀವಿ....ನೀವ್ ಎಲ್ಲಿದೀರಾ?" ಚಲನಾ ವಿನಯ್‍ಗೆ ಮೆಸ್ಸೇಜು ಮಾಡಿದ್ದಳು...ಶತಭಿಷ ಕಾರು ಓಡಿಸುತ್ತಿದ್ದ....ಚಲನಾಳಿ ತನ್ನವರೆಂದು ಮತ್ಯಾರನ್ನೂ ಕರೆದುಕೊಂಡು ಹೋಗುವ ಮನಸ್ಸಾಗಲಿಲ್ಲ....ಸ್ಥಿರೆ ವಿನಯ್ ಜೊತೆ ಊರಿಂದಲೇ ಬರುತ್ತಿದ್ದಳು....
"ನಾವ್ ಇನ್ನೊಂದ್ ನಲವತ್ತ್ ನಿಮಿಷ....ಬ್ರಿಡ್ಜ್ ಹತ್ರಾ ಇದೀವಿ....ಹಾರ ತಗೋತಾ ಇದೀವಿ" ವಿನಯ್ ಮೆಸ್ಸೇಜ್ ಮಾಡಿದ್ದ....
ಪಕ್ಕದಲ್ಲಿ ಸ್ಥಿರೆ ಕುಳಿತಿದ್ದಳು...
ವಿನಯ್‍ನ ಅಪ್ಪ-ಅಮ್ಮ ಮಗಳ ಮನೆಯಿಂದ ನೇರವಾಗಿ ದೇವಸ್ಥಾನಕ್ಕೆ ಬರುತ್ತೇವೆಂದಿದ್ದರು...
ಶತಭಿಷ-ಸ್ಥಿರೆ ದೇವಸ್ಥಾನದಲ್ಲಿ ಮೀಟ್ ಆಗುವುದು ಖಚಿತವಿತ್ತು....
ಕಣ್ಣಲ್ಲಿ ಕಣ್ಣಿಟ್ಟು ನೋಡಿ, ಮಾತನಾಡುವುದೋ....ಕಂಡರೂ ಕಾಣದಂತೆ ಹೋಗಿಬಿಡುವುದೋ ಇಬ್ಬರಲ್ಲೂ ಗೊಂದಲವಿತ್ತು....
ಮರೆತೇ ಬಿಡಬೇಕು....ಒಂಟಿಯಾಗೇ ಬದುಕಿ ತೋರಿಸಬೇಕು...ನಾನ್ ಯಾವುದ್ರಲ್ ಕಮ್ಮಿ? ....ಮೂರ್ನಾಕು ತಿಂಗಳ ಹಿಂದಿದ್ದ ಕೋಪ ಈಗೀಗ ತಣ್ಣಗಾಗಿತ್ತು....
ಚಲನಾ-ವಿನಯ್‍ಗೂ ಕೂಡಾ ಅವರಿಬ್ಬರ ಮುಖಾಮುಖಿ ಕುತೂಹಲ ಕೆರಳಿಸಿತ್ತು...
ಆದರೆ ಅಷ್ಟರಲ್ಲಿ ಮತ್ತೊಂದು ಮುಖಾಮುಖಿ ಸಂಭವಿಸಿತ್ತು...
ವಿನಯ್ ಗಾಡಿ ತೆಗೆಯುತ್ತಿರುವಾಗ ಲಾರಿಯೊಂದು ಬಂದು ಗುದ್ದಿತ್ತು...
ಚಲನಾಳ ಮದುವೆ ಕನಸು ಮತ್ತೆ ಭಗ್ನವಾಗಿತ್ತು....
***
ಶತಭಿಷ-ಸ್ಥಿರೆ-ಚಲನಾ ಎಲ್ಲರ ಕಣ್ಣಲ್ಲೂ ನೀರಿತ್ತು....ಚಲನಾ ಯು.ಎಸ್.ಗೆ ಹಾರಲೆಂದು ಏರ್‍ಪೋರ್ಟಿನಲ್ಲಿ ಫ್ಲೈಟಿಗೆ ಕಾದಿದ್ದಳು....
ಶತಭಿಷ ಡ್ರೈವ್ ಮಾಡಿಕೊಂಡು ವಾಪಸ್ ಬರುತ್ತಿದ್ದ....ಸ್ಥಿರೆ ಪಕ್ಕದಲ್ಲಿದ್ದಳು...
ಕಾರು ಐ.ಟಿ.ಪಿ.ಎಲ್ ರಸ್ತೆಯಲ್ಲಿ ನಿಧಾನವಾಗಿ ಸಾಗುತ್ತಿತ್ತು...
ದೂರದಲ್ಲೆಲ್ಲೋ ಶಾಂತಿನಿಕೇತನ್ ಅಪಾರ್ಟ್‍ಮೆಂಟ್ಸ್ ಕಾಣಿಸುತ್ತಿತ್ತು....
ಹೊಸದಾಗಿ ಮದುವೆಯಾದಂತಿದ್ದ ಜೋಡಿ ಶತಭಿಷ-ಸ್ಥಿರೆಯ ಫ್ಲಾಟಿನಲ್ಲಿ ಲಗೇಜು ಜೋಡಿಸುತ್ತಿತ್ತು...ಪಕ್ಕದ ಫ್ಲಾಟಿನಿಂದ ಗಂಡ ಹೆಂಡಿರ ಜಗಳದ ಸದ್ದು ಕೇಳಿಸುತ್ತಿತ್ತು...
ಚಲನಾ ಬಿಡಿಸಿದ್ದ, ಸ್ಥಿರೆಗೆ ಅರ್ಥವಾಗದಿದ್ದ, ಶತಭಿಷ ಕಾಪಾಡಿಕೊಂಡಿದ್ದ, ವಾಪಸ್ ಕೊಟ್ಟಿದ್ದ, ಮತ್ತೆ ವಾಪಸ್ ತೆಗೆದುಕೊಂಡಿದ್ದ ಸ್ಕೆಚ್ ಮಾತ್ರ ಮೊಳೆಗೆ ಜೋತಾಡಿಕೊಂಡಿತ್ತು...