ಗೆ,
ಬರಿ ಹೆಸರಲ್ಲಿ
ಬಣ್ಣಿಸಲಾಗದ ನನ್ನ ಹುಡುಗಿಗೆ.
ಇಂದ,
ಶಬ್ಧಗಳೆಲ್ಲಾ
ಬತ್ತಿ ಬರಿದಾದ ನಿನ್ನ ಹುಡುಗನಿಂದ.
ಎಯ್,
ವಿಷಯ:ವಿಷಯವಿಲ್ಲದೇ ದಿನವಿಡೀ ಹರಟಬಹುದು ಕಣೆ,ವಿಷಯವಿದ್ದರೇ ತುಸು ಕಷ್ಟ.
ಗೊತ್ತು ಕಣೆ ನಾ ನಿನಗೆ,ನೀ ನನಗೆ.ಆದರೇನೋ ಹೇಳಬೇಕೆನಿಸಿದೆ…
ನಿನಗೆ
ಗೊತ್ತಿರುವುದನ್ನೇ ನಾ ,ಪದಗಳಲ್ಲಿ ಬರೆಯಬೇಕೆನಿಸಿದೆ…..
ದಿನಾ ತಡರಾತ್ರಿಯವರೆಗೂ
ಮಾಡುತ್ತಿದ್ದ ಮೆಸ್ಸೇಜಿನಲ್ಲೇ ನಾ ಹೇಳಬಹುದಿತ್ತೇನೋ ನಾನು,
“hmm…..” ,
“then…”,
“wassup????? “ ಗಳ ಬದಲು..
ಆದರೇಕೋ
ಬರೆವ ಅಕ್ಷರ ನನ್ನದಲ್ಲವೆನಿಸಿದೆ…
ನಗುವಾಗಲೂ,ಅಳುವಾಗಲೂ ಒಂದೇ ಥರ ಇರುವ ಅಕ್ಷರ
ಬೇಡವೆನಿಸಿದೆ…
ಇನ್ನು
ಫೇಸ್ಬುಕ್ಕು,ಜೀಮೇಲುಗಳಿವೆಯೇನೋ
ನಿಜ …ಆದರೆ ಅವೂ ನನ್ನದಲ್ಲವೆನಿಸಿದೆ…ಯಾರೋ ಕದ್ದು
ಕೇಳುವ ಭೀತಿ ನನ್ನ ಕಾಡಿದೆ…
ನೋಡು ಹುಡುಗಿ
ಇದು ನಿನಗಾಗಿ …ನಿನ್ನೊಬ್ಬಳಿಗಾಗಿ….
ಅದೇನೋ
ಗೊತ್ತಿಲ್ಲ ಕಣೆ..
ನನ್ನ ಕೈಯ್ಯಾರೆ, ನನ್ನಕ್ಷರದಲೆ ಮೊದಲ ಪ್ರೇಮಪತ್ರವ
ಬರೆಯಬೇಕೆನಿಸಿದೆ..
ನೂರಾರು
ಬಾರಿ ಗೀಚಿ,ಹತ್ತಾರು
ಬಾರಿ ಹರಿದು,ಮತ್ತೆ ಮತ್ತೆ ಬರೆಯಬೇಕೆನಿಸಿದೆ…
ಕೈ ನಡುಗಬಹುದು...ಅಕ್ಷರವು ಕಾಗೆ ಕಾಲು ಗುಬ್ಬಿ
ಕಾಲಾಗಬಹುದು,ನಿನ್ನೊಲವ ಕಂಪನದಿಂದ..
ಅರ್ಥವಾಗುವುದು
ಆದರೂ ಅಲ್ಲವೆ ನಿನಗೆ????
ಛೇ,ಬಿಡೆ….ಒಂದೆರಡು ಬಾರಿ ಭೂಮಿ ಆಕಾಶ ನೋಡಿ,ತಲೆಕೆರೆದುಕೊಂಡಾಗಲೇ,
“ಯಾಕೋ??Take it Easy “ ಅಂದವಳಲ್ಲವೇ ನೀನು??…
J
ನಿನಗೆಲ್ಲವೂ
ಗೊತ್ತು,ಆದರೂ
ನಾನೇ ಹೇಳಬೇಕು ಅಲ್ವಾ??
ಸರಿ…ಗಂಡು ಹುಳುವಾಗಿ ನಾನೇ ಹೇಳುತ್ತಿದ್ದೇನೆ
ಕೇಳು…
ಪೀಯು. ಹುಡುಗಿಯರ ಗ್ವಾಲೆಯಲಿ,ಕಣ್ಣು ಕುಕ್ಕಿದವಳು ನೀನು
ಕುಡಿಮೀಸೆ ಮೂಡುವಾಗಲೇ
,ನನ್ನವಳೆನಿಸಿದವಳು ನೀನು
ಹೂ-ದುಂಬಿಯ ಕವನದಲಿ,ಹೂವಾಗಿ ಕಂಡವಳು ನೀನು
ಮನದುಂಬಿ ಬಂದ ಮಾತೆಲ್ಲ,ಕೇಳಿಸಿಕೊಂಡವಳು ನೀನು
ಛೇ,ಇವಷ್ಟೇ ಹೇಳಿದರೆ ಯಾವುದೋ ಹಳೆಯ
ಕಥೆಯಂತಿದೆ ಅಲ್ವಾ???
ಚೆನ್ನಾಗಿ
ಕಂಡ ಐಸ್ ಕ್ರೀಮೆಲ್ಲಾ ತಿನ್ನಲು ಬೇಕೆನಿಸುವ ವಯಸ್ಸಿನಲ್ಲಿ ಹಿಮವಾಗಿ ಸೇರಿ ಒಂದೆರಡು ತಿಂಗಳಿಗೆ ಕರಗಿ
ಹೋದ ಕಥೆಯಲ್ಲ ಕಣೆ ಇದು…ಆ ನಿನ್ನ ಸೆಳೆತ ಧ್ರುವ ಪರ್ವ ಬಿಂದು..ಕಾಲವೆಷ್ಟೇ ಆದರೂ ನೀರೊಡೆಯದು
ಕಣೆ ಅದು,ನೀರೊಡೆಯದು…
ಚಾಕಲೇಟಿನ
ಕನಸು ಮುಗಿದು ಹೊಸ ಹೊಸ ಬಣ್ಣ ಬಣ್ಣದ ಕನಸು ಬೀಳುವ ಹೊತ್ತಲ್ಲವಾ ಅದು???
ಅದೆಷ್ಟು
ಬಾರಿ ಹೇಳಿದ್ದೆ,ನೀನಗೆ ಆ ನೀಳಕೂದಲ ಬಿಳಿಗೆಂಪು ಹುಡುಗನಾ ಕನಸನ್ನ…
ಆ ಕನಸ
ಕಥೆ ಕೇಳಿ ಅಲ್ಲವೇ ನಾನೂ ಉದ್ದ ಕೂದಲು ಬಿಟ್ಟಿದ್ದು…
ರಜೆಯಲ್ಲಿ
ಮನೆಗೆ ಹೋದಾಗ ಅಪ್ಪನ ಹತ್ತಿರ ಬೈಸಿಕೊಂಡಿದ್ದು…
ಮರುದಿನ
ಮಿಲಿಟರಿ ಕಟ್ಟು ಮಾಡಿಸಿಕೊಂಡು ಬಂದಾಗ ಅದೆಷ್ಟು ನಕ್ಕಿದ್ದೆ..”ಯಾರೋ ನೀನು?” ಅಂತೆಲ್ಲಾ
ಕೇಳಿ ಅದೆಷ್ಟು ರೇಗಿಸಿದ್ದೆ.
ಮುಂದೆ
ನಾ ವಿಜ್ನಾನಕೆ ಸಲಾಮು ಹೊಡೆದು ಕಲೆಯ ಹಾದಿ ಹಿಡಿದೆನಲ್ಲವೇ???
ಡಿಗ್ರಿಯ
ಆ ದಿನಗಳು…ಏನೆಂದು
ಹೇಳಲಿ ನಾ…
ತನ್ನ ಹೆಸರಲ್ಲಿ ಪುಸ್ತಕವ ತಂದು ಓದೆಂದು ಕೊಟ್ಟವಳು
ನೀನು
ನನ್ನಯಾ ಯೋಚನೆಗಳಿಗೆ ಸ್ಪೂರ್ತಿಯ ಸರಕಾಗಿ ನಿಂತವಳು ನೀನು
ನನ್ನೆಲ್ಲ ಪುಟಗೋಸಿ ಬರಹವಾ
ಓದಿ, “ ನಾ ನಿನ್ನ ಅಭಿಮಾನಿ” ಎಂದವಳು ನೀನು
ನಾ ಎಲ್ಲ ಬಲ್ಲವನೆಂದು
ಕೊಚ್ಚಿಕೊಂಡಾಗ,ಬಾಯ್ತುಂಬ ಬೈದವಳು ನೀನು
ಅದ್ಯಾಕೋ
ಗೊತ್ತಿಲ್ಲ ಕಣೆ..
ಎಲ್ಲ ಹೇಳುವಂತೆ
ಕಾಲೇಜಿನಲ್ಲಿ “ಕ್ರಷ್”,”ಲವ್ ಅಟ್ ಫಸ್ಟ್ ಸೈಟ್” ಅನ್ನುವುದೆಲ್ಲ
ಆಗಲೇ ಇಲ್ಲ ನನಗೆ….
ಮೊದಲೇ
ಆಗಿ ಬಿಟ್ಟಿತ್ತೇನೋ ಬಿಡು,ನನಗೇ ಗೊತ್ತಿಲ್ಲದಂತೆ…
ನಿನಗಿಂತ
ಚೆನಾಗಿರುವವರು ಕಾಣಲಿಲ್ಲವಂತೇನಲ್ಲ…ಆದರೇಕೋ ನಿನ್ನಷ್ಟು ಕಾಡಿಸಲಿಲ್ಲ ಕಣೆ ಹುಡುಗಿ ಅವರ್ಯಾರೂ..ಬಂದು
ಹೋಗಿ ಬಿಟ್ಟರು ಅಷ್ಟೇ…
ಹಮ್..ನನಗೂ ಗೊತ್ತು ,ನಿನಗೂ ಗೊತ್ತು ಆದೇಕೆ ಅವಾಗ ಒಂದು ವಾರ ಮಾತು ಬಿಟ್ಟಿದ್ದೆವೆಂದು…
ಬಿಟ್ಟಿರಲಾರದೇ
ಮತ್ತೆ ಜೊತೆಯಾದೆವೆಂದು…
ಅದೆಷ್ಟು
ಚೆನ್ನ ಹುಡುಗಿ ಗೆಳತಿಯ ಗುಂಪೊಡನೆ ನೀ ಸಿಕ್ಕರೆ
,ಸುಮ್ಮನೆ ಪರಿಚಯದ ನಗೆಯಾಡಿ ನಾ ಹೋಗುವಂತದ್ದು…
ಸ್ಟೇಡಿಯಮ್ಮಿನ
ಮೇಲುಗಡೆ ಇಬ್ಬರೇ ಇರುವಾಗ ಗಂಟೆಗಟ್ಟಲೇ ಊರ ಮೇಲಿನ ಸುದ್ದಿಯೆಲ್ಲಾ ಹಲುಬುವಂತದ್ದು…
ಬೇಲಿಯ
ರಾಕ್ಷಸ ಪರಂಗಿ ಎಲೆಯ ಮೇಲೆ ಇಬ್ಬರ ಹೆಸರನ್ನೂ ಗೀರುವಂತದ್ದು….
ಬೇರೆಯವರಿಗೆ
ಕಾಣಿಸುವುದೆಂದು ಅಲ್ಲೇ ಸಿಗಿದು ಹಾಕುವಂತದ್ದು…
ಅದೆಷ್ಟು
ನೆನಪುಗಳೋ ಹೀಗೇ ಹೇಳುತ್ತಾ ಹೋದರೆ…
ಕಣ್ಣಲ್ಲೇ ಕೂತಿದ್ದ
ಕಣ್ಣೀರ ಗುರುತಿಸಿ,ಅದನೊರೆಸಿದವಳು ನೀನು
ದಾರಿತಪ್ಪಿದವನೆಂದು
ಮಂಕಾಗಿ ಕುಳಿತಾಗ,ಹಾದಿ ನೆನಪಿಸಿದವಳು ನೀನು
ಆ ಮೂರು
ವರುಷವನು,ಮೂರು ಮರೆಯದ ಕನಸಾಗಿಸಿದವಳು ನೀನು
ಕೊನೆಯ
ದಿನ ಉಟ್ಟ ಸೀರೆಯಲಿ ,ನನ್ನ ಮದುವೆಕೂಸಾಗಿ ಕಂಡವಳು ನೀನು
ಹಿಂಗಾಡಿ
ಹಂಗಾಡುವುದರೊಳಗೆ ಕಾಲೇಜೇ ಮುಗಿಯಿತಲ್ಲೆ…
ನೀ ಮುಂದೆ
ನಿನ್ನಿಷ್ಟದ ಮಾಯಾನಗರಿಯ ಸೇರಿದೆಯಲ್ಲೆ…
ನಾ ಉಳಿದೆ
ಇಲ್ಲೆ…
ನೋಡೆದೆ
ಕಣೆ ನಾ ಡಿಗ್ರಿ ಬಳಿಕ ಜಗತ್ತನ್ನ ಮತ್ತೆ…ಅದೆಷ್ಟು ಬದಲಾವಣೆಗಳು ಅಬ್ಬಾ…
ಅದಾವ ಗೆರೆಯು
ಕೈಗೂಡಿತೋ,ಬರೆಯುವುದೊಂದು
ನನ್ನದಾಯಿತು..
ಬರೆದು
ಹರಿದು,ಹರಿದು
ಬರೆದ ಬರಹಗಳು ದೊಡ್ಡವರಿಗಿಷ್ಟವಾಯ್ತು…
ಮತ್ತೆ
ಅಲೆದೆ,ಬರೆದೆ..ಓದಿದೆ,ಬರೆದೆ..ಅಲೆದೆ..
ಓದೇ ಅನ್ನವಾಯ್ತು…ಪುಸ್ತಕಗಳೇ ಉಸಿರಾಯ್ತು…ಅನುಭವವೇ ಆಸ್ತಿಯಾಯ್ತು…ಬರವಣಿಗೆ ವ್ರತವಾಯ್ತು…
ಕೊನೆಗೊಂದು
ದಿನ ಕೈ ಹಿಡಿಯಿತು ಅದೂ ನಿನ್ನಂತೆ…
ಈಗೇನೋ
ಒಂದಿಷ್ಟು ಪ್ರಶಸ್ತಿ ಅವು ಇವು ಕಪಾಟಿನಲ್ಲಿದೆ…
ಮನೆಗೆ
ಸಾಕಾಗುವಷ್ಟು ದುಡಿವ ಕೆಲಸ ಕೈಯ್ಯಲ್ಲಿದೆ…
ನಾಳೆಗೊಂದಿಷ್ಟು
ದುಡ್ಡು ಬ್ಯಾಂಕಿನಲ್ಲಿದೆ…
ಆದರೆ……..ನೀನು????
ಬರಿಗಣ್ಣಿನಿಂದ
ನಿನ್ನ ನೋಡದೇ ಎಷ್ಟು ತಿಂಗಳಾಯ್ತೇ??ಇಪ್ಪತ್ತಿರಬೇಕು ಅಲ್ವಾ??..
ಏನು ಮಾಡಲಿ
ಹೇಳು..ನಾನಿರುವುದು
ಇದೇ ಕೊಂಪೆಯಲ್ಲಿ…
ನೀ ಇರುವೆ
ಆ ಮಾಯಾನಗರಿಯಲಿ..
ಇರಲಿ ಹುಡುಗಿ
ರಾತ್ರಿ ಫೋನಿನಲ್ಲಾದರೂ ಸಿಗುವೆಯಲ್ಲಾ ಅದೇ ಸಂತೋಷ ನನಗೆ…
ಶನಿವಾರ,ರವಿವಾರ ನೆಟ್ಟಿನಲ್ಲಿ ಸಿಕ್ಕು,ವಾರದ ಸುದ್ದಿಯಲ್ಲಾ ಖರ್ಚು ಮಾಡುವೆವಲ್ಲಾ ಅದೇ ಖುಷಿ ಎನಗೆ..
ಆದರೂ ಯಾಕೋ
ನೀನು ಬೇಕೆನಿಸಿದೆ…
ನೀನಿಲ್ಲದೇ
ಈ ಜೀವ ಅಪೂರ್ಣವೆನಿಸಿದೆ…
ಬಾ ಹುಡುಗಿ……
ಸುಮ್ಮನೆ
ಎಲ್ಲರಂತೆ ನಾಳೆಯ ಬಗ್ಗೆ ನಾ ಕನಸ ಕಟ್ಟಿ ಹೇಳಲಾರೆ ಇಲ್ಲಿ..ಅದು ನನ್ನೊಬ್ಬನ ಕನಸಾದೀತು ನಿನ್ನ ಕೇಳದೇ..
ಜೊತೆಗೂಡೆ
ಕನಸ ಕಟ್ಟುವಾ ಬಾ…
ಜೊತೆಗೂಡೆ
ಅದನು ನನಸಾಗಿಸುವಾ ಬಾ..
ಕನಸ ನನಸಾಗಿಸಲು
ದುಡಿದು,ದುಡಿದು
ಜೀವ ತೈಯ್ಯುವಾ ಬಾ…
ಒಟ್ಟಿಗೇ
ದೇವರಿಗಿಡುವ ಗಂಧ,ಚಂದನವಾಗುವಾ ಬಾ…
ಏಯ್ ನೋಡೆ…ನೀ ನನಗೆ ಪರಿಚಯವಾಗಿ ಹತ್ತು
ವರುಷವಾಯ್ತು..
ನನ್ನವಳೆಂದು
ನಾ ತಿಳಿದೂ ಹತ್ತು ವರುಷವಾಯ್ತು..
ಆದರೇಕೋ
ಎಂದೂ ಪ್ರೇಮಪತ್ರವ ಬರೆಯಬೇಕೆನಿಸಿರಲಿಲ್ಲ..
ಇಂದೇಕೆ
ಬರೆಯ ಹೊರಟೆ?? ಅದೂ ಗೊತ್ತಿಲ್ಲ…
ಗೊತ್ತಿದ್ದು
ನಾ ಮಾಡಿದ ಕೆಲಸ ಯಾವುದಿದೆ ಬಿಡು!!!
ನನ್ನೆಲ್ಲ ಎಡಬಲವ ಬಲ್ಲವಳು ನೀನು.
ನನ್ನೊಲವ ಕಲರವದ ಸಂಗೀತ ನೀನು.
ನನ್ನದೆಯ ಬಡಿತವಾಗಿಹೆ ನೀನು,
ಹೇಳಲಿ ಇನ್ನೇನು???
ಒಂದಾಗಿ ನಡೆಯೋಣ ಬಾ ಇನ್ನು…
ಇದುವೆ
ಎನ್ನ ಪ್ರೇಮ ನಿವೇದನೆ…
ಅಲ್ಲಲ್ಲ
ಆತ್ಮ ನಿವೇದನೆ…
ಸ್ಥಳ: ಒಂದಿಷ್ಟು ಹೃದಯದಿಂದ,ಒಂದ್ಚೂರು ನೆನಪಿನಿಂದ ಇತಿ ನಿನ್ನ ನಿನ್ನವ,
ದಿನಾಂಕ: ನೀ ಕನಸಲ್ಲಿ ಬಂದ ಅನುದಿನ ---------
=============================================================================================
*********************************************************************************************
ಶಬ್ಧಾರ್ಥ:ಗ್ವಾಲೆ=ಗುಂಪು,ಕಾಗೆ ಕಾಲು ಗುಬ್ಬಿ ಕಾಲು ಅಕ್ಷರ =ಸ್ಪುಟವಾಗಿಲ್ಲದ ಕೈಬರಹ,ಹಲುಬು,=ಮಾತನಾಡು
********************************************************************************************
ಹಮ್... ಇದು ಪಕ್ಕಾ ದಾರಿ ತಪ್ಪಿ ಬಂದ ಪ್ರೇಮ ಪತ್ರ!!!!
ಗಾಬರಿ ಆಗ್ಬೇಡಿ...
ಆಗಿದ್ದಿಷ್ಟೇ...
ಪ್ರಜಾವಾಣಿಯಲ್ಲೊಂದು ಪ್ರೇಮ ಪತ್ರ ಬರೆಯುವ ಸ್ಪರ್ಧೆ ಇದೆ ಅಂತಾ ಬ್ಲಾಗಿಗ ಮಿತ್ರ ಶ್ರೀ ವತ್ಸ ಕಂಚೀಮನೆಯವರು ತಿಳಿಸಿದ್ದರು ಡಿಸೆಂಬರಿನಲ್ಲಿ..."ಹುಂ" ಎಂದವನಿಗೆ ಮತ್ತೆ ನೆನಪಾಗಲಿಲ್ಲ ಅದು...ಮತ್ತೆ ಜನವರಿ ಮಧ್ಯದಲ್ಲೆಲ್ಲೋ ಸುಮನಕ್ಕ ಮೆಸ್ಸೆಜು ಮಾಡಿ "ಹಿಂಗಿದೆ ಕಣೊ,ಬರ್ಯದಾದ್ರೆ ಬರಿ" ಎಂದು ಅಡ್ರೆಸ್ಸನ್ನೂ ಕಳಿಸಿದ್ಲು...
ಇಲ್ಲಪ್ಪಾ ಮನೆಯಲ್ಲಿ ಏನನ್ನೂ ಬರೆಯಲು ಮನಸ್ಸೇ ಬರಲಿಲ್ಲ..ಅದೇಕೋ ಗೊತ್ತಿಲ್ಲ...ತೀರಾ ಅರಾಮವಾಗಿದ್ದೇನೆನಿಸಿದಾಗ ಬರೆಯಬೇಕೆನಿಸುವುದೇ ಇಲ್ಲ...ಮತ್ತೆ ವಾಪಸ್ಸು ಬಂದೆ ನೋಡಿ ಪ್ರಾಜೆಕ್ಟು,ಸೆಮಿನಾರು ಅಂತಾ ಚೂರು ತಲೆ ಬಿಸಿ ಶುರುವಾಯ್ತು..ಅದರ ಮಧ್ಯೆ ಒಂದು ಅಲ್ಪ ವಿರಾಮ ಈ ಬರಹ...ಅದಾವತ್ತೋ ಒಂದು ದಿನ ಮನೆಯಲ್ಲಿ ಕಷ್ಟಪಟ್ಟು ಒಂದು ಪುಟ ಬರೆದಿದ್ದೆ...ಅದನ್ನು ನಿನ್ನೆ ಪೂರ್ತಿಗೊಳಿಸಿ ಇವತ್ತು ನಿಮ್ಮೆದುರು ಇಟ್ಟಿದ್ದೇನೆ ಅಷ್ಟೇ...
ನನಗೆ ಈ ಪ್ರೇಮ ಪತ್ರ ಬರೆಯುವುದು ಓದುವುದೆಲ್ಲಾ ಹೊಸದು...
ಬರೆಯುವುದು ಕಡೆಗಾಯ್ತು,ಹಣೆಬರಕ್ಕೆ ಬರೆದ ಪತ್ರವನ್ನು ಓದಿದವನೂ ಅಲ್ಲ ನಾನು...
ಒಂದು ಪ್ರಯತ್ನ..
ಎಂದಿನಂತೆ ಒಂದಿಷ್ಟು ಕಲ್ಪನೆ..
ಬೇಡ ಬೇಡಾ ಅಂದರೂ ನುಸಿದು ಬರುವ ಕೆಲ ಶಬ್ಧಗಳು...
ಎಂದಿನಂತೆ ನೋಡಿ,ಹೆಂಗಿದೆ ಅಂತಾ ಹೇಳ್ತೀರಲ್ವಾ???
ಹಾಂ ನಿಮ್ಮ ಪ್ರೇಮ ಪತ್ರದ ಪ್ರಸಂಗಗಳೇನಾದ್ರೂ ಇದ್ರೂ ಬರಿರಿ ಒಂದಿಷ್ಟು ದಯವಿಟ್ಟು,....
ಕಾಯ್ತಿರ್ತೀನಿ ನಿಮ್ಮ ಕಮೆಂಟ್ ಗಳಿಗೆ...