ಅಂತೂ ಇಂತೂ ಒಂದುವರೆ ತಿಂಗಳ ಬಳಿಕ ಏಳನೇ ಸೆಮಿಸ್ಟರ್ ಪರೀಕ್ಷೆಗೆ ತೆರೆ ಬಿತ್ತು..ಇನ್ನೊಂದೇ ಸೆಮಿಸ್ಟರು ಉಳಿದಿರುವುದು...ಪರೀಕ್ಷೆ ಮುಗಿಯಿತಲ್ಲಾ ಇನ್ನೇನು ಮಾಡಣಾ ಅಂದ್ಕೊಂಡು ಪಟ್ಟಿ ಹಾಳೆ ತೆಗೆದೆ...ಪ್ರಳಯ ಪ್ರಳಯ ಅಂತಾ ಎಲ್ರೂ ಮಾತಾಡ್ತಿರ್ಬೇಕಾದ್ರೆ ನಾನೂ ಅದ್ರ ಬಗ್ಗೆ ಏನಾದ್ರೂ ಬರೀಬೇಕು ಅನ್ಸಿ ಒಂದಿಷ್ಟು ಶಬ್ಧಗಳನ್ನಾ ಗುಡ್ಡೆ ಹಾಕಿ ಇಟ್ಟಿದ್ದು ಕಣ್ಣಿಗೆ ಬಿತ್ತು..ಸರಿ ಇನ್ನೇನು ಬರಿಯಣಾ ಅಂದ್ಕಂಡು ಗೀಚಲು ಕೂತೆ..ವಯಸ್ಸಿನ ಹುಡುಗನಿಗೆ ಅವನ ಹುಡುಗಿ ಮುತ್ತು ಕೊಟ್ಟಾಗ ಏನನ್ಸತ್ತೆ ಅನ್ನೊ ಕನಸು ಕಾಣ್ತಾ ಕೂತೆ...ಒಂದಿಷ್ಟು ಏನೇನೋ ತಲೆಗೆ ಹೊಳಿತು..ಅದನ್ನೆ ನಿಮ್ಮ ಮುಂದಿಟ್ಟಿದ್ದೇನೆ...ನೋಡಿ ....ಅಕ್ಕರೆಯ ಅನಿಸಿಕೆಯ ಜೊತೆ ತಪ್ಪು-ಒಪ್ಪನ್ನಾ ತಿಳ್ಸಿ, ನನ್ನನ್ನಾ ಬೆಳಸ್ತೀರಾ ಅಲ್ವಾ???
ಇಲ್ಲಿದೆ ನೋಡಿ ಪ್ರಳಯ/ಪ್ರಣಯ ಗೀತೆಯ ಸಾಲುಗಳು...
ಪ್ರಳಯವಾಯ್ತು ಗೆಣತಿ
ನನ್ನೆದೆಯೊಳಗೆ,
ನೀ ಮುತ್ತಿಟ್ಟಾ
ಅರೆಚಣದೊಳಗೆ…..
ಮುಂಗುರುಳ ಕಚಕುಳಿಯ
ಕಂಪನವು ಕೊರಳಲ್ಲಿ,
ಅಪ್ಪುಗೆಯ ಬೆವರ್ಮಳೆಯ
ಸಿಂಚನವು ತೋಳಲ್ಲಿ.
ನಟ್ಟಿರುಳ ಬಳುವಳಿಯ
ಕುಂಚನವು ಬೆರಳಲ್ಲಿ,
ಹೆಂಗರುಳ ಕಳಕಳಿಯ
ಬಂಧನವು ನೆರಳಲ್ಲಿ.
ಜುಮುಕಿಯಾ ವಜ್ಜೆಯಲೆ
,ಕುಳಿಯೀಗ ಭುಜದಲ್ಲಿ
ಬಿಸಿಯುಸಿರ ಸದ್ದಿನಾ
ಸುಳಿಯೀಗ ಕಿವಿಯಲ್ಲಿ.
ಅಂದಲದ ಕನಸಿನಾ ಹೊಳೆಯೀಗ
ಮನದಲ್ಲಿ,
ಗೊಂದಲದ ಬಿರುಗಾಳಿ ನೀ ಕೊಟ್ಟ ಮುತ್ತಲ್ಲಿ
ಗೊಂದಲದ ಬಿರುಗಾಳಿ ನೀ ಕೊಟ್ಟ ಮುತ್ತಲ್ಲಿ
ಸವಿಜೊಲ್ಲ ಹನಿಯೊಂದು
ಮಿನುಗಿರಲು ಗಡ್ಡದಲಿ,
ರವಿಮೆಲ್ಲನೆ ನಾಚಿ
ಅಡಗಿಹನು ಗುಡ್ಡದಲಿ,
ಬೆರೆಯಿತು ಎನ್ನುಸಿರು
ನಿನ್ನಯಾ ಹೆಸರಲ್ಲಿ,
ಬರೆದಿರಲು ಈ ಸಾಲ
ನಿನ್ನೆಯಾ ನೆನಪಲ್ಲಿ
ಪ್ರಳಯವಾಯ್ತು ಗೆಣತಿ
ನನ್ನೆದೆಯೊಳಗೆ,
ನೀ ಮುತ್ತಿಟ್ಟಾ
ಅರೆಚಣದೊಳಗೆ.....
-ಚಿನ್ಮಯ
(ಶಬ್ಧಾರ್ಥ(ನನಗೆ ತಿಳಿದಂತೆ):ಗೆಣತಿ=ಗೆಳತಿ,ಅರೆಚಣ=ಅರೆಕ್ಷಣ,ಮುಂಗುರುಳು=ಮುಂದಲೆಯ ಕೂದಲು,ನಟ್ಟಿರುಳು=ಮಧ್ಯರಾತ್ರಿ,ಅಂದಲ=ಪಲ್ಲಕ್ಕಿ...
ಜೊತೆಗೆ ನಮ್ಮ ಕಡೆ "ವಜ್ಜೆ" ಎಂದರೆ ಭಾರಕ್ಕೆ ಬಳಸುವ ಪದ..
ಮತ್ತೆ ಬೆವರಿನ ಮಳೆ ಎನ್ನುವ ಬದಲು ಬೆವರ್ಮಳೆ ಎಂದು ಬಳಸಿದ್ದೇನೆ...ಅದು ತಪ್ಪಾಗಿದ್ದರೆ ತಿಳಿಸಿ ದಯವಿಟ್ಟು)
ಹಾಂ ಅದೇನೋ ಹೇಳ್ತಾರಲ್ಲಾ ಕಲ್ಪನೆ ಅದು ಇದು ಅಂತಾ ಅದನ್ನೇ ಮಾಡ್ಕೊಂಡು ಬರೆದ ಸಾಲುಗಳಿವು..ಆ ಥರದ ಹುಡುಗಿ ಇನ್ನೂ ತಾನಾಗೇ ಸಿಕ್ಕಿಲ್ಲ,ನಾನಾಗೇ ಹುಡ್ಕಕೂ ಹೋಗಿಲ್ಲಾ..ಬರೆದಿದ್ದೆಲ್ಲಾ ಕಾಲ್ಪನಿಕ..ನನ್ನ ನಂಬಿ ಪ್ಲೀಸ್ ಪ್ಲೀಸ್...
ಅಂದದ ಪ್ರತಿಕ್ರಿಯೆಗಾಗಿ ಕಾಯ್ತಿರ್ತೀನಿ...ಬರಿತೀರಲ್ವಾ?