Thursday, March 22, 2018

ಬದಲಾವಣೆ

ಊರೆಲ್ಲ ಖಾಲಿಯಾಗುತ್ತಿದೆ; ಆಟ ಮುಗಿದ ಅಂಗಳದಂತೆ
ಶಹರ ತುಂಬುತ್ತಲಿದೆ; ಇನ್ನೂ ಹೊರಡದ ಟೆಂಪೋವಿನಂತೆ
ನಾನೂ ಓಡುತ್ತಿದ್ದೇನೆ ಅದೇ ನಗರಿಯಲ್ಲಿ; ಸಿಟಿಯ ಸುಖದ ಅಮಲಿನಲ್ಲಿ
ಊರು-ತೋಟ-ನೆಮ್ಮದಿ ಕಾಡುತ್ತವೆ ತಡರಾತ್ರಿಯ ಕನವರಿಕೆಗಳಲ್ಲಿ

ಅಜ್ಜ-ಅಜ್ಜಿ-ದೊಡ್ಡಮ್ಮ-ದೊಡ್ಡಪ್ಪ ಇನ್ನು ಶ್ರಾದ್ಧಗಳಲ್ಲಷ್ಟೇ ಸಿಗುವುದು
ರಜೆ ಹಾಕಿ ಊರಿಗೆ ಹೋಗಿರಬೇಕು; ಕಾವ್ ಕಾವ್ ಎಂದು ಕರೆಯಬೇಕು
ಊಟ ಮಾಡಿ ಕೈ ತೊಳೆದು ಬೆಟ್ಟ ಹತ್ತಿ; ಮೇಲ್ ಚೆಕ್ ಮಾಡಬೇಕು
ಇನ್ಯಾವಗಲೋ ಬರುವೆನೆಂದು ಸಬೂಬು ಹೇಳಿ ಸ್ಲೀಪರ್ ಬಸ್ಸು ಹತ್ತಬೇಕು

ಅಶುಭಕ್ಕೊಂದೇ ಕಡ್ಡಾಯ ಪ್ರಯಾಣ; ಹಬ್ಬಗಳಲೆಲ್ಲ ಹೊಟೇಲಿನ ನಿರ್ಣಯ
ಹೆಸರಿಗೆ ಮಾತ್ರ ಅಲ್ಲಿಯವರು; ಆದರೆ ಎಲ್ಲಿಯೂ ನಿಲ್ಲದವರು
ಅವಕಾಶವನರಸಿ ಕೆಂಪು ಬಸ್ ಹತ್ತಿ ಬಂದದ್ದೇನೋ ನಿಜ. ಗುರಿ ಮುಟ್ಟಿದೆನಾ?
ಗುರಿಗಳಿಗೂ ಬಡ್ಡಿ-ಚಕ್ರಬಡ್ಡಿಯ ಹಾಕಿ, ಕೈ ಸಿಗದೆಡೆಯಲ್ಲಿ ಅಡಗಿಸಿಟ್ಟೆನಾ?

ತೊಂದರೆಯೇನಿಲ್ಲ ಈ ಪಟ್ಟಣದಲ್ಲಿ; ಬೆವರು ಬಸಿಯುವವರಿಗೆ ಬದುಕಲು
ಉಸಿರಾಡಲು ಶುದ್ಧ ಗಾಳಿ ಸ್ವಲ್ಪ ಕಷ್ಟ; ಟ್ರಾಫಿಕ್ಕಾಸುರನ ಲಹರಿ ನಿತ್ಯ ಅಸ್ಪಷ್ಟ
ಹೊರಡಲೇಬೇಕೆನ್ನುವುದಕ್ಕೆ ಸ್ಪಷ್ಟಕಾರಣವೇನೂ ಸಿಗುತ್ತಿಲ್ಲ
ಕಾರ್ಪರೇಟಿನಲ್ಲಿ ಮುಳುಗಿದ ಮೇಲೆ ಸತ್ಯ-ಪ್ರಾಮಾಣಿಕತೆಗಳೂ ಬದುಕಿಲ್ಲ

ಜೊತೆಗೆ ಊರೂ ಮೊದಲಿನಂತಿಲ್ಲ; ಬದಲಾವಣೆ ಜಗದ ನಿಯಮ
ಬೇಡಿಕೆ-ಪೂರೈಕೆ;ಬ್ಲಾಕ್ ಆಂಡ್ ವೈಟ್ ಬದುಕಿಗೆ ಬಣ್ಣದ ಆಯಾಮ
ಆದರೆ, ಮೊದಲಂತೆ ಅನ್ನದ ಚರಿಗೆ ಬಿಸಿಯಾಗುವುದಿಲ್ಲ; ಕಾರಣ ಅಷ್ಟೆಲ್ಲ ಉಣ್ಣುವವರಿಲ್ಲ
ಊರ ಪ್ರತಿಷ್ಠೆ: ಬೇಲಿ ಸಲುವಾಗಿ ನಂಬರವಿಲ್ಲ; ಕಾರಣ ಬೇಲಿ ಕಾಯಲೂ ಜನರಿಲ್ಲ

ಅಲ್ಲೂ ಇಲ್ಲೂ ನನ್ನಲ್ಲೂ ಎಲ್ಲ ಬದಲಾಗಿವೆ
ಆದರೆ ನಾ ಕಂಡಿದ್ದ ಊರು ನನ್ನಲ್ಲೇ ಭದ್ರವಾಗಿದೆ;
ನನ್ನನ್ನು ಇಂದಿಗೂ ಸಂತೈಸುತ್ತಿದೆ
ಎಲ್ಲ ಬಿಟ್ಟು ಬರಿಗೈಯ್ಯಲ್ಲಿ ಬಂದಾಗಲೂ
ಅಮ್ಮನಂತೆ ಬಿಗಿದಪ್ಪಿಕೊಳ್ಳುತ್ತದೆ,
ಅಪ್ಪನಂತೆ ಹೆಗಲುಕೊಡುತ್ತದೆ
-ಚಿನ್ಮಯ
22/03/2018