Saturday, July 19, 2025

ಪುಸ್ತಕದ ಧೂಳು

ಅಂಗಡಿಯಲ್ಲಿ ಸಾಗುವಾಗ ಪುಸ್ತಕಗಳು ಮಿರಿ ಮಿರಿ ಮಿನುಗುತ್ತವೆ
ರೊಕ್ಕ ನೋಡದೇ ಕೈಗೆತ್ತಿಕೊಂಡು ; ಊಟ-ನಿದ್ದೆ ಬಿಟ್ಟು; ಓದಿ ಮುಗಿಸಲೇಬೇಕು ಅನಿಸುತ್ತದೆ
ಆದರೇಕೋ ಕೈ ತಾನಾರೆ ಜಗ್ಗುತ್ತದೆ; ಕಾಲು ತಡೆಯುತ್ತದೆ
ಓದಿದರೂ ಓದದಿದ್ದರೂ ಪುಸ್ತಕ ಮಾತ್ರ ಧೂಳು ತಿನ್ನುತ್ತದೆ

ಕೇಳಿದರಾಯ್ತು ಆಡಿಯೋ ರೂಪದಲ್ಲಿ; ಓದಿದರಾಯ್ತು ಟ್ಯಾಬ್ಲೆಟ್ಟಿನಲ್ಲಿ
ತಂದಿಟ್ಟ ಪುಸ್ತಕಗಳೇ ಸಾಕಷ್ಟು ಬಾಕಿ ಇವೆ; ಕೆಲವಂತೂ ಮರೆತೇ ಹೋಗಿವೆ
ಇರುವುದೆಲ್ಲವ ಬಿಟ್ಟು ಮತ್ತಷ್ಟು ಪುಸ್ತಕ ಖರೀದಿಸಬೇಕೇ ?
ಓದಿ-ಓದಿ ಮರುಳಾಗಿ ಅರ್ಥ-ಒಳಾರ್ಥದಲಿ ಮಥಿಸಬೇಕೇ?

ಹಳೆಯ ಪುಸ್ತಕಗಳನೆಲ್ಲ ಬಿಸುಟು; ಪೂರ್ತಿ ಹೊಸದರಿಂದ ಮಾಡಲೇ ಭರ್ತಿ?
ಕೊಡುವುದಾದರೂ ಹೇಗೆ? ಇವುಗಳ ಮೇಲೆಲ್ಲ ಮೊದಮೊದಲ ಸಂಬಳಗಳ ರಸೀತಿ
ತೆರೆದು ಓದಲಾರದೇ,ಓದದೇ ಇರಲಾರದೇ; ಇದೊಂದು ವಿಚಿತ್ರ ಪಜೀತಿ
ಚಿಕ್ಕಂದಿನಿಂದಲೇ ಬಯಸಿ ಮೈಗೂಡಿಸಿಕೊಂಡ ಓದಿನ ಕಕ್ಕುಲಾತಿ

ಪರಿಹಾರವೇನೆಂದು ಕೇಳಿದರೆ ಇಗೋ ತಿಳಿಯುತ್ತಿಲ್ಲ ಮೂಲಸಮಸ್ಯೆ
ಪ್ರಾಯಶಃ ಇದು ಹುಚ್ಚು ಮನಸ್ಸಿನ ಹನ್ನೊಂದನೇ ಸಮಸ್ಯೆ
ಓದುತ್ತೇನೆ ಆಗೊಮ್ಮೆ ಈಗೊಮ್ಮೆ; ಓದಲೇಬೇಕು ಅನಿಸಿದಾಗ
ಆಫೀಸು-ಇನ್ವೆಸ್ಟಮೆಂಟು-ಕ್ರಿಕೇಟುಗಳ ಮಧ್ಯೆ ನನ್ನ ನಾ ಹುಡುಕಿಕೊಳ್ಳಬೇಕು ಅನಿಸಿದಾಗ

ಅಂಗಡಿಯಲ್ಲಿ ಸಾಗುವಾಗ ಪುಸ್ತಕಗಳು ಮಿರಿ ಮಿರಿ ಮಿನುಗುತ್ತವೆ
ರೊಕ್ಕ ನೋಡದೇ ಕೈಗೆತ್ತಿಕೊಂಡು ; ಊಟ-ನಿದ್ದೆ ಬಿಟ್ಟು; ಓದಿ ಮುಗಿಸಲೇಬೇಕು ಅನಿಸುತ್ತದೆ
ಆದರೇಕೋ ಕೈ ತಾನಾರೆ ಜಗ್ಗುತ್ತದೆ; ಕಾಲು ತಡೆಯುತ್ತದೆ
ಓದಿದರೂ ಓದದಿದ್ದರೂ ಪುಸ್ತಕ ಮಾತ್ರ ಧೂಳು ತಿನ್ನುತ್ತದೆ

-ಚಿನ್ಮಯ
೧೯/೭/೨೦೨೫

Sunday, February 16, 2025

ಏರಲೇ ಬೇಕು ಉಗಿಬಂಡಿ

ಜಾರುತಿದೆ ಹಳಿಯಿಂದ ನಮ್ಮ ಬೆಂಗಳೂರು

ಏರುತಿಹ ದರದಿಂದ ಕಾಪಿಡುವವರಾರು?

ಬೆಳೆಬೆಳೆದು ತನ್ನೆ ತಾ ತಿಂದು ಮುಗಿಸುವ ಮುನ್ನ

ಪುರವ ಕಾಯುವ ದೊರೆಗಳು ಎದ್ದುಕೂತರೆ ಚೆನ್ನ


ನೆರಳೆ-ಹಸಿರು ಸುಂದರಿಯರಿಗಾಗಿ ತಿಂದೆವೆಲ್ಲ ಮಣ್ಣು-ಧೂಳು

ತೆವಳುವ ಟ್ರಾಫಿಕ್ಕಿನಲ್ಲೇ ಸವೆಸಿದೆವಲ್ಲ ದಶಕದ ಬಾಳು

ಈಗ ಉಸ್ಸೆಂದು ಕೂತು ಮುಂದಿನ ನಿಲ್ದಾಣಕ್ಕೆ ಹೊರಡುವ ಮುನ್ನ

ಬೆವರಿದ ಜೇಬಿಗೆ ಹೊಡೆದಿರಲ್ಲ ದರ ಏರಿಕೆಯ ಗುನ್ನಾ


ಹಳದಿ ನೀಲಿ ಕಿತ್ತಳೆ; ವಿಸ್ತರಿಸಿದಿರಿ ದಾರಿಗೊಂದು ಬಣ್ಣ

ಕಾಲು ಚಾಚುವ ಮುನ್ನ ಹಾಸಿಗೆ ನೋಡಬೇಕಲ್ಲಣ್ಣ ?

ಯಾಕೆ ಬೇಕಿತ್ತು ಸ್ವಯಂಚಾಲಿತ ರೈಲು? ಬಿಟ್ಟು ಹೊರಟಿಲ್ಲ ಚೈನಾ

ಹೊಸ ಸೀರೆಗೆಂದು ಹಳೆಸೀರೆ ಸುಟ್ಟಂತೆ ನಮದೀಗ ನಾವಿಕನಿರದ ಪಯಣ


ಇಲ್ಲಿಯವರ ಬಳಿಯಿಲ್ಲ ಖಜಾನೆ, ಅಲ್ಲಿಯವರಿಗಿಲ್ಲ ಕೇಳುವ ಸಹನೆ

ಪರಿಹಾರದ ಮಾತಿಲ್ಲ; ಇಬ್ಬರದೂ ಬರೀ ಬಾಯಿಬಡುಕ ರಾಜಕಾರಣ

ಇಂದು ಅದ್ಯಾರ ಫರ್ಮಾನೋ ; ನಾಳೆ ಅದ್ಯಾರ ತಲೆದಂಡವೋ

ಶ್ರೀ ಸಾಮಾನ್ಯನ ಬದುಕಲ್ಲಂತೂ ನಿತ್ಯ ಸ್ವಪ್ನದಹನ


ಆದರೂ ಏರಲೇ ಬೇಕು ಉಗಿಬಂಡಿ; ಕಾರಣ? ಸಮಯ ಉಳಿಯುತ್ತದೆ

ಎಪ್ಪತ್ತು ಗಂಟೆ ದುಡಿದು ಸುಸ್ತಾಗಿರುವಾಗ ದೇಹ, ನಿದ್ದೆ-ಊಟ ಬೇಡುತ್ತದೆ

ಬಿನ್ನಹವಿಷ್ಟೇ ದೊರೆ!, "ಸುಂಕ ಏರಿಸಲೇಬೇಡಿ" ಎನ್ನುತ್ತಿಲ್ಲ ಖಂಡಿತ

ಲೆಕ್ಕದ ಪಟ್ಟಿ ಹಿಡಿದು ಕೂತಾಗ, ದಪ್ಪ ಅಕ್ಷರದಲಿ ಕಾಣಲಿ "ಜನಹಿತ"


-ಚಿನ್ಮಯ

೧೬/೨/೨೦೨೫