ಈಗಷ್ಟೇ ಡ್ರಾಮಾ ಚಿತ್ರ ನೋಡಿ ಮಸಾಲೆ ದೋಸೆ ತಿಂದು ರೂಮಿಗೆ ಬಂದೆ .....ಬೆಳಿಗ್ಗೆ ಪರೀಕ್ಷೇಯಲ್ಲಿ ಔಟ್ ಪುಟ್ಟು ಬಂದ ಖುಷಿ ಒಂದು ಕಡೆಗಾದರೆ ಅಂತೂ ಇಂತೂ ಮೊದಲ ಪ್ರದರ್ಶನವನ್ನು ನೋಡಲಾಗದಿದ್ದರೂ ಎರಡನೇ ದಿನವೇ ನೋಡಿದ ಖುಷಿ..ನಾಳೆ ಬೆಳಿಗ್ಗೆ ಮನೆಗೆ...ಅದಕ್ಕೆ ರಾತ್ರಿ ಕಣ್ಣು ಕೆಂಪಗೆ ಮಾಡಿಕೊಂಡು ಬೆರಳಚ್ಚಿಸುತ್ತಿದ್ದೇನೆ...ಬೇರೆ ಎನೂ ಅರ್ಜಂಟ್ ಕೆಲಸವಿಲ್ಲದಿದ್ದರೆ ಹಂಗೇ ಒಂದ್ ಸಲ ಓದಿ....
ಚಿತ್ರದ ಬಗ್ಗೆ ವಿಮರ್ಶಿಸುವಷ್ಟೆಲ್ಲಾ ದೊಡ್ಡವನು ನಾನಲ್ಲ..ಒಂದಿಷ್ಟು ಅನಿಸಿಕೆಗಳು ಅಷ್ಟೇ..
ಚಿತ್ರದಲ್ಲಿ ಮೊದಲಿಗೆ ಇಷ್ಟವಾಗಿದ್ದು ಮಂಡ್ಯದ ಭಾಷೆಯ ಸೊಗಡು...ಒಂದಿಷ್ಟು ಗ್ರಾಮ್ಯತೆಯ ಚಿತ್ರಣ...ಎಂದಿನಂತೆ ಭಟ್ಟರ ಚಿತ್ರದ ಮೊದಲ ಅರ್ಧಗಂಟೆ ನಾಯಕನ ವ್ಯಕ್ತಿತ್ವವನ್ನು ಹೇಳಲು ಮೀಸಲು..ಅಲ್ಲಿಂದ ಇನ್ನೊಂದೆಡೆಗೆ ಪ್ರಯಾಣ...ಇಲ್ಲಿ ,ಬೇರೆಡೆ ಹೋದಾಗ ಪ್ರೀತಿ ಹುಟ್ಟಿದುವರ ಬದಲು ಪ್ರೀತಿಗಾಗಿಯೇ ಬೇರೆಡೆ ಹೋಗುತ್ತಾರೆ ನಾಯಕ ಯಂಕಟೇಸ ಹಾಗೂ ಸತೀಸ...ಅಲ್ಲಿ ಏನೇನೋ ನಡೆಯುತ್ತದೆ...ಜೊತೆಗೆ ಅಂಡರ್ ವರ್ಡನ ಥಳಕೂ ಚಿತ್ರಕ್ಕಿದೆ...ಒಟ್ಟಿನಲ್ಲಿ ಒಂದು ನಕ್ಕು ಹಗುರಾಗುವ ಚಿತ್ರ...ಮನಸ್ಸಿನಲ್ಲಿ ಭವಿಷ್ಯದ ಬಗೆಗಿನ ಗೊಂದಲಗಳನ್ನು ಮರೆತು ಇಂದಿನದನ್ನು ಆನಂದದಿಂದ ಕಳೆಯಿರಿ..ಉಳಿದದ್ದೆಲ್ಲಾ ಭಗವಂತನ ಮೇಲೆ ಬಿಡಿ ಎನ್ನುವ ಸಂದೇಶ ಇದೇಯೇನೋ ಅಂತ ನನಗನಿಸಿದ್ದು...
ಮೊದಲಿಗೆ ಒಂದಿಷ್ಟು ತರಲೆ ಮಾತುಗಳು...ಮಂಗಾಟಗಳು....ಆಮೇಲಾಮೇಲೆ ಗಂಭೀರವಾಗುವಂತಹ ಪಾತ್ರದಲ್ಲಿ ಯಶ್ ಅಭಿನಯ ಇಷ್ಟವಾಯ್ತು....ಹೊಡೆದಾಟದ ದೃಶ್ಯಗಳಲ್ಲಿ ಯಶ್ ಡಿಚ್ಚಿ ಒಂದು ಸಲ ನೆನಪಿರತ್ತೆ...ಪ್ರೀತಿ ಮಾಡುವ ಹುಡುಗನ ಪಾತ್ರ ಅವರಿಗೇನು ಹೊಸದೇನಲ್ಲ...ಹಾಂ ಯಾಕೋ ಕೊನೆಯಲ್ಲಿ ,ಕುಡಿದು ಮಾಡಿದ ತಪ್ಪುಗಳಿಗೆ ಫಾದರ ಹತ್ತಿರ ಕ್ಷಮೆ ಯಾಚಿಸುವಾಗ ನಟನೆ ಇನ್ನೂ ಚೆನ್ನಾಗಿರಬಹುದ್ದೇನೋ ಅನಿಸಿದರೆ,ಗುಂಡು ಬಿದ್ದು ನರಳುವ ಸಂದರ್ಭದಲ್ಲಿಯೂ ಕೂಡ "ಪ್ರಿಯತಮೆಯನ್ನು ಚೆನ್ನಾಗಿ ನೋಡಿಕೋ" ಎಂದು ಅವರಪ್ಪನ ಹತ್ತಿರ ಭಾಷೆ ತೆಗೆದುಕೊಳ್ಳುವಾಗ ವ್ಹಾರ ವ್ಹಾ ಎನ್ನಿಸದೇ ಇರದು....
ಇನ್ನು ನೀನಾಸಂ ಸತೀಶರದ್ದು ಕೂಡ ನಗೆಬುಗ್ಗೆ ಚಿಮ್ಮಿಸುವ ಪಾತ್ರ....ನಾಯಕನ ಜೊತೆಗೂಡಿ ಆಡುವ ಮಂಗಾಟಗಳಿಗೆಲ್ಲಾ ಸೋ ಎನ್ನುವ ಪಾತ್ರವದು....ಜೊತೆಯಿಷ್ಟು ಮುಗ್ಧತೆ ಕೂಡ ಆ ಪಾತ್ರಕ್ಕಿದ್ದು ,ಆ ಸಮಯದಲ್ಲಿ ಸತೀಶರ ಆಂಗಿಕ ಅಭಿನಯ ಮನಸೂರೆಗೊಳ್ಳುತ್ತದೆ.... ಕೊನೆಯಲ್ಲ್ಲಿ ಸಮುದ್ರದ ಹತ್ತಿರ ನಿಂತು ಅಳುವ ಸಂಧರ್ಭದ ಅಭಿನಯ ಇಷ್ಟವಾಯ್ತು.....
ಇನ್ನು ನಾಯಕಿ ರಾಧಿಕಾ ಪಾತ್ರಕ್ಕೆ ಎಂದಿನಂತೆ ನ್ಯಾಯ ಒದಗಿಸಿದ್ದಾರೆ...ಮೊದಲಿಗೆ ಶ್ರೀಮಂತನ ಮಗಳಾಗಿ ಅವರು ತೋರಿಸುವ ಅಭಿನಯ ಯಾಕೋ ಅಷ್ಟೇನೂ ಇಷ್ಟವಾಗಲಿಲ್ಲ...ಜೊತೆಗೆ ಮೊದಲಾರ್ಧದ ತನಕ ಮುಖ ಯಾಕೋ ಪ್ರೆಶ್ ಅನಿಸಲಿಲ್ಲ....ಆದರೆ ದ್ವಿತೀಯಾರ್ಧದಲ್ಲಿ ಅವರ ನಟನೆ ನಮ್ಮನ್ನು ಪಾತ್ರದೊಳಗೆ ಕೊಂಡೊಯ್ಯುತ್ತದೆ...ಸುಚೇಂದ್ರ ಪ್ರಸಾದ್ ಅವರ ಕೈಯ್ಯಲ್ಲಿ ಮಗಳಂತೆ ಅವರ ಡ್ರಾಮಾ ಆಡುತ್ತಾ ಕೈತುತ್ತು ತಿನ್ನುವ ದೃಶ್ಯದಲ್ಲಿ ನಿಜಕ್ಕೂ ಕಣ್ಣೀರು ತರಿಸುತ್ತಾರೆ ರಾಧಿಕಾ..ಅದನ್ನು ನೋಡುತ್ತಾ ಯಾಕೋ ನಾನು ನನ್ನ ಕನಸು ನೆನಪಾಯ್ತು.....ದ್ವಿತೀಯಾರ್ಧದಲ್ಲಿ ಮುದ್ದಾಗಿ ಕಾಣಿಸುವ ರಾಧಿಕಾ ಪಂಡಿತ್ ಅಭಿನಯದಲ್ಲಿ ಹಿನ್ನೆಲೆಯಲ್ಲಿ ತೇಲಿಬರುವ "ಹಂಬಲದ ಹೂವಂತೆ ...."ಮನಸ್ಸಿನಲ್ಲಿ ಉಳಿದಿರುತ್ತದೆ...
ಇನ್ನು ಚಿತ್ರಕ್ಕೆ ಹೊಸ ಛಾಪು ಕೊಟ್ಟ ಎರಡು ಪಾತ್ರಗಳ ಬಗ್ಗೆ ಹೇಳಲೇಬೇಕು.."ಏಯ್ ಹುಡುಗ್ರಾ..."ಎಂದು ಗಡಸು ದನಿಯೇರಿಸಿ ಚಿತ್ರದೊಳಗಿಳಿಯುವ ಬುಲ್ ಬುಲ್ (ಅಂಬರೀಷ ಅವರಿಗೆ ನಾಯಕ ಕರೆಯುವ ಹೆಸರು )..."ಅವನು ಆಡಿಸ್ತಾನೆ ಆಡ್ಭೇಕು "ಎಂದು ಕೈಯೆತ್ತಿ ಬೊಂಬೆ ತಿರುಗಿಸುತ್ತಾರೆ...ಪ್ರತಿಯೊಂದು ತಿರುವಿನಲ್ಲು ಕಾಣಿಸಿಕೊಂಡು ಕಣ್ಣಲ್ಲೇ ಎಲ್ಲಾ ಹೇಳುವ ಅಭಿನಯ ಕನ್ನಡದ ಕರ್ಣರದ್ದು.....ಆ ಟೋಪಿ,ಆ ಬೊಂಬೆ ಅದರ ಹಿಂದಿನ ಅರ್ಥ ಅಧ್ಯಾತ್ಮದ ಬಗ್ಗೆ ಆಸಕ್ತಿ ಇರುವವರಿಗೆ ಇನ್ನಷ್ಟು ಇಷ್ಟವಾಗಬಹುದು......
ಜೊತೆಗೆ ಸುಚೇಂದ್ರ ಪ್ರಸಾದ್ ಅವರ ಅಭಿನಯವನ್ನು ಮರೆಯಲು ಅಸಾಧ್ಯ...ಕಾಲೇಜಿನ ಪ್ರಾಂಶುಪಾಲರಾಗಿ "ಕನ್ನಡದಲ್ಲೇ ವ್ಯವಹರಿಸೋಣ" ಎಂದು ಬೋರ್‍ಡು ಹಾಕಿಕೊಂಡು ಅಚ್ಚ ಕನ್ನಡ ಮಾತನಾಡುವ ಅವರು,ಮನೆಯಲ್ಲಿ ಯೆಂಕ್ಟೇಶ್,ಸತೀಶ ಬಂದಾಗ ಕಾಣದ ಮಗಳ ಬಗೆಗಿನ ಮೋಹದಲ್ಲಿ ,ಅವಳ ಮುದ್ದಾಡುವ ಆಸೆಯಲ್ಲಿ ಭಾವಾವೇಶಕ್ಕೊಳಗಾಗುವ ಸನ್ನಿವೇಶ ಅವಿಸ್ಮರಣೀಯ, ಅನನ್ಯ ,ಅದ್ಭುತ...ಕೋಪದಲ್ಲೂ ಅಷ್ಟೇ,ಮಮತೆಯಲ್ಲೂ ಅಷ್ಟೇ,ಹತಾಶೆಯಲ್ಲೂ ಅಷ್ಟೇ,ಪ್ರೀತಿಯಲ್ಲೂ ಅಷ್ಟೇ ಸುಚೇಂದ್ರ ಪ್ರಸಾದ ಇಡೀ ತೆರೆಯನ್ನು ಆವರಿಸಿಕೊಂಡಿರುತ್ತಾರೆ ... ಅವರ ಸ್ಪಷ್ಟವಾದ ಉಚ್ಚಾರ,ಸಂದರ್ಭಕ್ಕೆ ತಕ್ಕಂತೆ ಬದಲಾಗುವ ಮುಖಭಾವ ನೆನಪಿನಲ್ಲುಳಿಯುತ್ತದೆ....
ಹಾಡುಗಳ ಬಗ್ಗೆಯಂತೂ ಹೇಳುವದೇ ಬೇಡ...ಒಂದಕ್ಕಿಂತ ಒಂದು ಸುಂದರ...ಚೆಂದುಟಿಯ ಪಕ್ಕದಲಿ ಯ ನೃತ್ಯ ಸಂಯೋಜನೆ,ಬೆಳಕಿನ ಸಂಯೋಜನೆಯ ಬಹಳ ಹಿಡಿಸಿತು...ಬಂಗಾರದಂತೆ ಹೊಳೆಯುವ ಬೆಳಕಿನಲ್ಲಿ ಪ್ರೇಮ ನಿವೇದನೆ ಮಾಡುತ್ತಿರುವ ಯಶ್ ಹಾಗೂ ಅಂದದ ರಾಧಿಕಾ ಇನ್ನೂ ಕಣ್ಣಿಗೆ ಕಟ್ಟಿದಂತಿದ್ದಾರೆ....
ತುಂಡ್ ಹೈಕಳ ಸಾವಾಸ ದಲ್ಲಿ ಯಶ್ ಹಾಗೂ ಸತೀಶ ಒಂದಿಷ್ಟು ನಗಿಸ್ತಾರೆ....."ಡ್ರಾಮಾ ತನಿನಾನನ " ಹಾಡುನಲ್ಲಿ ಹಚ್ಚಿಕೊಂಡಿರುವ ಮೀಸೆ,ಕಲ್ಲಂಗಡಿ,ಸೇಬು,ಏಣಿ ಮೇಲೆ ಸೈಕಲ್ಲು ಹಿಂಗೆ ಏನೋನೋ ಹೊಸತರದ್ದು ಎನಿಸಿ ಮುಂದೇನು ವ್ಯಾಶವೋ ಎಂದು ಕಣ್ಣು ಹುಡುಕುವಂತೆ ಮಾಡುತ್ತದೆ....ಕೃಷ್ಣ ಅವರ ಕ್ಯಾಮರಾದಲ್ಲಿ ತೆಗೆದ ಬ್ರಿಡ್ಜಿನ ಕೆಳಗಿನ ದೃಶ್ಯಗಳು,ಸಮುದ್ರದ ತೀರ ಮತ್ತೆ ಮತ್ತೆ ನೋಡಬೇಕು ಎನಿಸುವಂತೆ ಮಾಡುತ್ತದೆ...
ಇವಿಷ್ಟು ನಮ್ಮ ಡ್ರಾಮಾಕಥೆ ಪುರಾಣಗಳು....ಈ ನನ್ ಮಗಾ ಎನ್ ಸಿನಿಮಾ ಪಂಟರಾ ಅಂತ ಬೈಕೋಬೇಡಿ...ಅನಿಸಿದ್ದನ್ನು ಬರೆಯುವ ಚಟ ನೋಡಿ...ಬೆರಳಚ್ಚಿಸಿದ್ದೇನೆ ಆಷ್ಟೇ...ಇದು ನಾ ಕಂಡ ಡ್ರಾಮಾ...
ಪುರಸೊತ್ತು ಆದ್ರೆ ನೀವೂ ಒಂದು ಸಲ ಹೋಗಿ ಬನ್ನಿ.......
ಒಟ್ಟಿನಲ್ಲಿ ಎಲ್ಲರನ್ನೂ ನಗಿಸಿ,ನಾಳೆಯ ಬಗೆಗಿನ ಚಿಂತೆ ಹೊಡೆದೊಡಿಸಿ,ಎಲ್ಲ ನಿನ್ನ ಆಟ ಕಣೋ ಎಂಬತೆ ಹಾಯಾಗಿರಿ,ಇಂದಿನದನ್ನು ಆಸ್ವಾದಿಸಿ ಎನ್ನುವ ಡ್ರಾಮಾ ನಂಗಂತೂ ಇಷ್ಟವಾಯ್ತು...
ಇನ್ನೊಮ್ಮೆ ಹೋಗಬೇಕು ಅಪ್ಪ ಬೈದೇ ಇದ್ರೆ,
ಜೇಬಲ್ಲಿ ದುಡ್ಡು ಉಳಿದಿದ್ರೆ!!!!!!
-ಚಿನ್ಮಯ.