Monday, April 9, 2012

ಎಳೆಯರಾಗಿರಿ ಗೆಳೆಯರೇ.......

ಎಳೆಯರಾಗಿರಿ ಗೆಳೆಯರೇ ನೀವ್,
ಗೆಳೆಯರಾಗಿರಿ ಮತ್ತೆ ಎಳೆಯರಾಗಿ.

ಹೋಗದಿರಿ ಹುಚ್ಚರಂತೆ ಹಣದ ಹಿಂದೆ,
ಹೋದರೆ ಜೀವನ ಮಸಣವು ಮುಂದೆ.
ಬನ್ನಿ ಹೋಗುವಾ ಚಿಟ್ಟೆಯ ಹಿಡಿಯಲು
ದಾರವ ಕಟ್ಟಿ ನಕ್ಕು ನಲಿಯಲು

ಮೇಲೆ ತಾ ಮೇಲೆ ಹೋಗಲು
ಮೇಲಣ ಕಾಲ ಜಗ್ಗದೆ ನಿಲ್ಲಿ,
ಎಲ್ಲರೂ ಕೂಡಿ ಆಡುವಾ ಬನ್ನಿ
ಒಂಟಿ ಕಾಲ ಕುಂಟೆ- ಬಿಲ್ಲಿ

ಕದಿವುದೋ ಯಾಕೋ,ಹಿಡಿವುದು ನಿಜಕೋ
ಕ್ಲೋಸು ಮಾಡಿ ಆ ಹೊಡೆದಾಟದ ಕೇಸು.
ಜಾತ್ರೆಯ ಟೋಪಿಗೆ ಆಟಿಕೆ ಗನ್ನು,
ಆಡುವ ಬನ್ನಿ ಕಳ್ಳಾ-ಪೊಲೀಸು..


ಎಳೆಯರಾಗಿರಿ ಗೆಳೆಯರೇ ನೀವ್,
ಗೆಳೆಯರಾಗಿರಿ ಮತ್ತೆ ಎಳೆಯರಾಗಿ.


Saturday, March 24, 2012

ಎಲ್ಲಿ ಕಾಣೆಯಾಗಿರುವಿರಿ ? ನನ್ನ ಎಮ್ಮೆಗಳೆ ಬನ್ನಿ....


(ನನ್ನೆಲ್ಲಾ ಗೆಳೆಯ/ಗೆಳತಿಯರಿಗೆ ಈ ಕವನ ಸಮರ್ಪಿತ)

ಎಲ್ಲಿ ಕಾಣೆಯಾಗಿರುವಿರಿ
ನನ್ನ ಎಮ್ಮೆಗಳೆ ಬನ್ನಿ ಇಲ್ಲಿ,
ಕಣ್ಣ ಮುಚ್ಚಿ ಹತ್ ಎಣಿಸುವೆ
ನನ್ನ ಎದುರು ಬಂದು ನಿಲ್ಲಿ.

ಕಲ್ಲು ಮುಳ್ಳುಗಳಿದೆ ಎಲ್ಲೆಡೆ
ಆದಿರೇಕೆ ಒಬ್ಬಂಟಿ ?
ಬನ್ನಿ ಎಲ್ಲರೂ ,ಕೂಡಿ ತಿನ್ನುವ
ಈಗ ಒಂದು ಬನ್-ಟೀ

ಥೂ ,ಎಲ್ಲಿರುವಿರಿ??
ಹ್ಯಾಪಿ ಬರ್ತಡೇಯ ದಿನ ಜಾಡಿಸಿ
ಒದೆಯುವ ನನ್ನ ಎಮ್ಮೆಗಳೇ ಬನ್ನಿ
ಹ್ಯಾಪುಮೋರೆ ಹಾಕಿಕೊಂಡ ದಿನವು
ಗುದ್ದಿ ಎಬ್ಬಿಸಿದ ಎಮ್ಮೆಗಳೇ ಬನ್ನಿ

ಖಾಲಿ ಥೈಲಿಗೆ ಸಾಲವ ನೀಡಿ,
ಜೋಲಿ ಹೊಡೆದ ಮನವ ತಿದ್ದಿ ತೀಡಿ,
ಹೋದಿರೆಷ್ಟು ದೂರ ಸಾಗಿ??
ಕೇಳದೇಕೆ ನಿಮಗಿಂದು,ನಾ ಕರೆದರೂ ಕೂಗಿ!

ಕಾಣದೇ ಕಾಡುವ ಒಲವೆ..........

ಕಾಣದೆ ಕಾಡುವ ಚೆಲುವೆ
ನೀ ಕಾಡುತ ಒಡುವ ಮನವೆ
ಆಣೆಯ ಪಡೆವ ನಲಿಮೆ
ನೀ ಎದೆಯ ಸುಡುವ ಕುಲುಮೆ

ಕಣ್ಣ ಮುಚ್ಚಿ ತೆರೆಸುವ ನಿನ್ನಯ ತುಟಿಗಳೆ ಸುಂದರ
ಮಣ್ಣು ಮೆತ್ತಿ ಕೊಂಡರೆ ಕೆನ್ನೆಯ ಒರೆಸುವ ಚಂದಿರ
ಮೋಹಕ-ಸಮ್ಮೋಹಕ ಕಣ್ಣಿನಾ ಸೆಳೆತವು
ಜಾರ್ಜಿಯಾ-ಕೆಲಿಫೋರ್ನಿಯಾ ನಿನ್ನದೇ ಎಲ್ಲವೂ
ಹಲ್ಲಲೇ ಹಾಲ,ಚೆಲ್ಲುವಾ ಚೆಲುವೆ

ಕನಸಲಿ ನನ್ನ ಕಾಡುವ ಈಗಿನ ಕಾಲದ ಮೋಹಿನಿ
ನನಸಲಿ ಸಿಗದೆ ಓಡುವ ಪ್ರೀತಿಯ ಲೋಕದ ವಾಹಿನಿ
ದಿಟವೋ ಇದು,ಹುಡುಗಾಟವೋ ನಿನ್ನದೇ ಎಲ್ಲವೂ
ಆಟದಿ ಹುಡುಕಾಟತಿ ಸಿಗುವುದೇ ಗೆಲುವು
ಬದುಕುವೆ ನಿನ ನೆನಪಲೇ ಬಂದರೂ ಸಾವು

Sunday, February 5, 2012

ಬರಡೆಮ್ಮೆ-ಮುದಿಯೆತ್ತು

ಬರಡೆಮ್ಮೆ ಮೇಲೆ
ಎರಡಾಣೆ ಬೆಲೆ ಕಾಣೆ,
ಮುದಿಯೆತ್ತ ತೊಗಲಲಿ
ಸದರಿನ ಮಾಲೆ ಕಾಣೆ

ಎಲ್ಲಿ ಹೋದೆ ಕರುವೆ ಜಾರಿ
ಎಲ್ಲೆ ಮೀರಿ ಊರ ಹಾರಿ...

ಡಬ್ಬಿಯ ತಿಂಡಿ ಕದ್ದ
ಕಳ್ಳ ಬೆಕ್ಕೆಲ್ಲಿಗೆ ಹೋಯ್ತು
ಗುಬ್ಬಿಯ ಗೂಡು ಹೆಣೆದ
ಒಳ್ಳೆ ಗಿಣಿ ಕಾಣದಾಯ್ತು

ಉಳಿದದ್ದು ಬರಡೆಮ್ಮೆ ಕನಸು
ಹಳಸಿದ್ದು ಹೊಸ ಹೊಸ ತಿನಿಸು.

ಮೊದಲಿದ್ದ ಜಡೆ ಜುಟ್ಟು ,
ರಟ್ಟೆಯಷ್ಟುದ್ದವಾಯ್ತು
ಹದವಿದ್ದ ಕುಡಿಮೀಸೆ
ಕಂಬಳಿ ಹುಳುವಾಗಿ ಕಚ್ತು

ಬಾಗಿದ್ದೊಂದೇ ಎತ್ತಿನ ಬೆನ್ನು
ನೊಗವ ಹೊತ್ತ ಬಾಳ ಹೊನ್ನು

ಬರಡೆಮ್ಮೆ ಮೇಲೆ
ಎರಡಾಣೆ ಬೆಲೆ ಕಾಣೆ
ಮುದಿಯೆತ್ತ ತೊಗಲಲಿ
ಸದರಿನ ಮಾಲೆ ಕಾಣೆ

ಎಲ್ಲಿ ಹೋದೆ ಕರುವೆ ಜಾರಿ
ಎಲ್ಲೆ ಮೀರಿ ಊರ ಹಾರಿ!!!

(ಮೊನ್ನೆ ರಜೆಯಲ್ಲಿ ಯಾವುದೋ ಕಾದಂಬರಿ ಓದುತ್ತಿದ್ದೆ..ಅದರಲ್ಲಿ ತಂದೆ ತಾಯಿಗಳನ್ನು ಬಿಟ್ಟು ಹೋದ ಮಕ್ಕಳ ಚಿತ್ರಣವಿತ್ತು..ಹಾಗೆ ಯೋಚಿಸುತ್ತಾ ಒಂದೆರಡು ಎನೇನೋ ಶಬ್ದಗಳು ಹೊಳೆದವು...ಅದನ್ನೇ ಸೇರಿಸಿ ಒಂದು ಕವನದ ಥರ ಏನೋ ಬರೆದಿಟ್ಟೆ..ಒಬ್ಬನೇ ಇದ್ದಾಗ ಅದಕ್ಕೊಂದು ರಾಗ ಹಾಕಲೂ ಪ್ರಯತ್ನಿಸುತ್ತಿದ್ದೇನೆ..ನಿಮಗೂ ಚೂರು ಪುರಸೊತ್ತಿದ್ದರೆ ಅದನ್ನೂ ಪ್ರಯತ್ನಿಸಿ ನೋಡಿ!!!!
ಹಾಂ..ಮತ್ತೊಂದು,ಮತ್ತೊಂದು ದಿನ ನಾನೇ ಓದಿದಾಗ ಇದು ನನಗೇ ಅರ್ಥವಾಗಲಿಲ್ಲ ,ಅದಕ್ಕೆ ಮೊದಲೇ ಹೇಳುತ್ತಿದ್ದೇನೆ,
ಇಲ್ಲಿ ಬರಡೆಮ್ಮೆ,ಮುದುಯೆತ್ತು ಎಲ್ಲಾ ವಯಸ್ಸಾದ ಅಪ್ಪ-ಅಮ್ಮಂದಿರು..ಕರು,ಗಿಳಿ,ಬೆಕ್ಕು ಎಲ್ಲಾ ಮಕ್ಕಳು!!!!!!)

Monday, December 5, 2011

ಒಂದು ಪ್ರಾಬ್ಲಮ್ಮು... ನಿಮ್ಗೂ ಹೀಗೇ ಆಗತ್ತಾ?

ಏ ಮನವೇ ನೀನೇಕಿಷ್ಟು ವಿಚಿತ್ರ ?

ನೂರಾರು ಬಾರಿ ಗೀಚಿದರೂ
ಬಾರದಲ್ಲ ನಿನ್ನ ಪೂರ್ತಿ ಚಿತ್ರ.

ಗೆಳೆಯರಿಗೆ ಬೇಜಾರಾದಾಗ
ನೀ ಬೇಜಾರಾಗುವೆ,
ಗೆಳೆಯರು ಖುಷಿ ಪಡುವಾಗ
ಅವರೊಡನೆಯೇ ಕೇಕೆ ಹಾಕುವೆ.

ಅದೇಕೆ ಆ ಕೊಂಕು?
ಗೆಳೆಯರಿಗೆ ಬೇಜಾರಾದಾಗ ಒಳಗೊಳಗೇ ಖುಷಿ ತರುವಂತದ್ದು?
ಗೆಳೆಯರು ಖುಷಿ ಪಡುತ್ತಿರುವಾಗ ,ನಗುಮುಖದಲ್ಲೇ ಬೇಜಾರಾಗುವಂತದ್ದು?

ಒಂಟಿ ಮನಕೊಂದು ಗೆಳತಿ
ಬೇಕೆಂದು ಹಂಬಲಿಸುವಂತದ್ದು
ಗೆಳತಿ ಸಿಕ್ಕಾಗ ," ಈ ವಯಸ್ಸಿಗೆ ಒಂಟಿಯಾಗಿದ್ದರೇ
ಬದುಕು ಚೆನ್ನ" ಎಂದು ಬಿಂಬಿಸುವಂತದ್ದು,


ಜಾತ್ರೆಯಲಿ ,ಖಾಲಿ ರಸ್ತೆಯಾದರೂ
ಇದ್ದರೆ ಹಾಯಾಗಿ ತಿರುಗಬಹುದುತ್ತು ಎನ್ನುವೆ..
ಮರುದಿನ ಖಾಲಿ ರಸ್ತೆಯ ಕಂಡು,
ಛೇ! ಬಿಕೋ ಎನ್ನುವ ಬದಲು
ಜಾತ್ರೆ ಪೇಟೆಯಾದರೂ ಇರಬಾರದಿತ್ತೇ ? ಎನ್ನುವೆ.

ಮದುವೆ ಮನೆ ಊಟದಲಿ ,ತನ್ನ ಬಾಳೆಯ ಬಿಟ್ಟು
ಬಾಕಿ ಏನೇನಿದೆ ಎಂದು ಹುಡುಕುವೆ.
ನೋಡಿ ನೋಡಿ ,ಎಲ್ಲಾ ಹಾಕಿಸಿಕೊಂದು
ಎಲ್ಲದನ್ನೂ ಎಂಜಲು ಮಾಡಿ ,
ಎಲ್ಲ ಬಾಳೆಯಲ್ಲೇ ಬಾಕಿ ಉಳಿಸಿ ಬರುವೆ


ಸೆಲ್ಲು,ಕಂಪ್ಯೂಟರಿನ ಮುಂದೆ ಕೆಂಪು ಕಣ್ಣಲಿ ಕುಳಿತಾಗ,
ಛೇ,"ಯಾಕಾದರೂ ಈ ರೀತಿ ಅಂಟಿರುವೆನೊ ಇದಕೆ "ಎನ್ನುವೆ.
ಅವರಿವರು ಬೈದು ಕಣ್ಣು ಕೆಂಪಗಾದಾಗ,ಮೆಸ್ಸೇಜುಗಳಿಗಾದೇ
ಹಪಹಪಿಸುವೆ,ನೆಟ್ಟಿನಲ್ಲೇ ಹೊಸ ಭಾವಲೋಕಕೆ ತೆರೆದುಕೊಳ್ಳುವೆ


ಹೇಳು ಓ ಮನವೇ ನೀ ಏಕೆ ಹೀಗೆ?

ನಿಜ ಹೇಳಿ,
ನಿಮಗೆಲ್ಲರಿಗೂ ಹೀಗಾಗುತ್ತದೆಯೋ,
ಅಥವಾ ನನಗೊಂದೆಯೋ ಹೇಗೆ???

Thursday, October 13, 2011

ಕೊನೆಯ ಪುಟದಿಂದ.......

ಇದಕ್ಕೆ ಸೌಮ್ಯಕ್ಕನ ಲೇಖನವೇ ಸ್ಪೂರ್ತಿ..



ಓದಿ ಓದಿ ಹೀಗೆ ಟೈ ಹಾಕಿ
ಕುಳಿತಾಗ ಸುಮ್ಮನೆ ಹಳೆಯದ್ದನ್ನೆಲ್ಲಾ ನೆನೆದರೆ
ನೆನೆಯುವುದು ಕಣ್ಣು, ಆ ಲೆಕ್ಕದಿಂದಲ್ಲ
ಈಗಲೂ ಅರ್ಥವಾಗದ ಸಿದ್ಧಾಂತಗಳಿಂದಲ್ಲ
ಬದಲಿಗೆ ತುದಿ ಹರಿದ ಕೊನೆ ಪುಟಗಳಿಂದ
ಬಾಳ ಬಂಗಾರದ ಪುಟಗಳಿಂದ


ಏನೆಂದೂ ಅರ್ಥವಾಗದ,ಆದರೂ ನಗು ತರಿಸುವ
ನೀಲಿ-ಕಪ್ಪು ಬಣ್ಣದ ಚಿತ್ರಗಳು
ಅದರ ಕೆಳಗೆ ಸುಂದರವಾದ
ಆದರೆ ಓದಲು ಬಾರದ ಲಿಪಿಗಳು
ಇನ್ನೇನೋ ವಿಚಿತ್ರಗಳು.


ಇನ್ನು ಮೇಲುಗಡೆ ಒಂಬತ್ತೇ
ಇರುವ ಮೊಬೈಲ್ ನಂಬರ್ರು
ಇನ್ನೊಂದಕ್ಕಾಗಿ ಹುಡುಕಿ
ಐವತ್ತು ರೂಪಾಯಿ ಕಳೆದಿದ್ದೆ
ಎಂದರೆ ಯಾರೂ ನಂಬರು.

ಇನ್ನೂ ಸ್ವಲ್ಪ ಕಣ್ಣಿಟ್ಟು ನೋಡಿದರೆ
ಕಾಣುವುದು ಯಾರದೋ ಹೆಸರು
ಆ ಹೆಸರೇ ಆಗ ಉಸಿರಾಗಿತ್ತೆಂದು
ಹೇಳಲು ಈಗಿಲ್ಲ ಉಸಿರು

ಕವಿಯಾಗಿಸಿದ್ದ ಆ ತುಂಟ ಸಾಲುಗಳು
ಇಂದೇಕೆ ಬರಲಾರವು???
ಅಂದು ಹಾರುತ್ತಿದ್ದ ಬಣ್ಣದಾಸೆ ಹಕ್ಕಿಗಳು
ಇಂದೇಕೆ ಹಾರಲಾರವು???



Wednesday, September 14, 2011

ಒಂದ್ ಸುಳ್ಳು ಕಥೆ(ಇದು ನಿಜ್ವಾಗ್ಲೂ ಸುಳ್ಳಾ?)

ಅಂದೇಕೋ ಕಸಿವಿಸಿ,ನಾನೆಲ್ಲಿಯೋ ತಪ್ಪು ಮಾಡುತ್ತಿದ್ದೇನೆ ಎನ್ನೋ ಆತಂಕ ಆ ಹುಡುಗನಿಗೆ.ಅರ್ಧ ಸುಟ್ಟ ಸಿಗರೇಟಿನ ಹೊಗೆ ರೂಮಿನಲ್ಲಿ ಕಟ್ಟಿದ್ದ ಬಿಂಜಲುಗಳ ಮೂಲಕ ಕಿಟಕಿಯನ್ನು ಹಾರಿದಾಗ ಆ ಹುಡುಗನ ಮನಸ್ಸೂ ಅವನ ಸಿಗರೇಟಿನಂತೆ ಸುಡಹತ್ತಿತ್ತು. ತನಗರಿವಿಲ್ಲದೇ ಮಾಡಿದನೇನೋ ಎಂಬ ತಪ್ಪಿನ ಕಿಚ್ಚು ಅವನನ್ನು ಆವರಿಸಿತ್ತು. ನೋಡನೋಡುತ್ತಿದ್ದಂತೆ ಕಣ್ಣು ಕತ್ತಲಾಗಿ ಅವನ್ನನ್ನು ಹಳೆಯ ದಿನಗಳಿಗೆ ಕೊಂಡೊಯ್ದಿತ್ತು.
ಆಗಷ್ಟೇ ಪಿ.ಯು ಮುಗಿಸಿ ಬಿ.ಇ ಗೆ ಸೇರಿದ್ದೇನೆಂಬ ಖುಷಿಯ ಜೊತೆಗೆ ,ಉಳಿದ ಮಗಾ-ಮಚ್ಚಿಗಳಿಗಿಂತ ತಾನು ಸ್ಟಾಂಡರ್ಡ್ ಕೋರ್ಸ್ ಆದ ಇಂಜಿನೀರಿಂಗ್ ಮಾಡುತ್ತಿದ್ದೇನೆ ಎಂಬ ಗರ್ವ ಅವನನ್ನು ಪುಟಿಯುವ ಚೆಂಡಿನಂತಾಗಿಸಿತ್ತು. ಚಿಕ್ಕ ವಿಷಯಕ್ಕೂ ಒಮ್ಮೆ ಆ ಕಡೆ ,ಒಮ್ಮೆ ಈ ಕಡೆ ಬೇಕಾಬಿಟ್ಟಿಯಾಗಿ ಕುಣಿದಾಡ ಹತ್ತಿತು.ಇದರ ಜೊತೆಗಾಗಲೇ ಹಾಸ್ಟೇಲಿನಲ್ಲಿ ಮಂಗಾಟಗಳೂ ಆಗಷ್ಟೇ ರಂಗೇರತೊಡಗಿದ್ದವು . ಅಲ್ಲಿಯ ತನಕ ಅಮ್ಮನ ಕಾಫಿಯನ್ನಷ್ಟೇ ಕುಡಿಯುತ್ತಿದ್ದ ಅವನ ಕೈ,"ಅವನಮ್ಮನ್ ......" ಎಂದೆನ್ನುತ್ತಾ ತೀರ್ಥದ ಬಾಟಲಿಯನ್ನೇರಿಸತೊಡಗಿತ್ತು. ಬರಬರುತ್ತಾ ತುಂಬಿರುತ್ತಿದ್ದ ಪಾಕೀಟೂ ಖಾಲಿಯಾಗತೊಡಗಿತ್ತು,ಖಾಲಿಯಿದ್ದ ಸಾಲದ ಲೀಸ್ಟು ತುಂಬತೊಡಗಿತ್ತು.
ಅಷ್ತೊತ್ತಿಗಾಗಲೇ ಹಾಸ್ಟೇಲಿಗೆ ಹೊರಗಿನಿಂದ ಬಂದ ಕೆಲವು ಹಿರಿತಲೆಗಳ ಆಶೀರ್ವಚನ ಕಿವಿಗೆ ಬಿತ್ತು ," ಬಿಡೋ ಮಚ್ಚಾ ,ಜಗತ್ ನಲ್ಲಿ ಇಲ್ಲಿ ತನ್ಕಾ ಯಾವ್ ಅಪ್ಪಾನೂ ಎಣ್ಣೆ ಹೊಡಿಬೇಕು ಅಂದ್ರೆ ದುಡ್ ಕೊಡಲ್ಲ.ಅದ್ಕೆಲ್ಲಾ ನಾವೇ ಅಡ್ಜಸ್ಟ್ ಮಾಡ್ಕೋಬೇಕು ,ಒಂದ್ ಕೆಲ್ಸಾ ಮಾಡೋ..... ನಮ್ ರೂಮ್ ಕಡೆನೇ ಬಂದ್ ಬಿಡು.ಅಲ್ಲಿ ಜಸ್ಟ್ ಒಂದ್ ಸಾವ್ರಕ್ಕೆ ಊಟಾ- ತಿಂಡೀ ಖರ್ಚು ಮುಗ್ಯತ್ತೆ . ಇಲ್ಲಿ ಕೊಡೋ ಎರಡು ವರೆ ಸಾವಿರದಲ್ಲಿ ,ಒಂದುವರೆ ಉಳಿಯತ್ತೆ,ಅಷ್ಟರಲ್ಲಿ ಜಿಂದಗೀ ಜಿಂಗಾಲಾಲ್ ಮಾಡ್ ಬೋದು, ಬಾ.. ವಿ ಆರ್ ಇಂಜಿನಿಯರಿಂಗ್ ಸ್ಟುಡೆಂಟ್ಸ್ ಮ್ಯಾನ್ ,ತಲೆ ಓಡ್ಸ್ ಬೇಕು " ಎಂದ.
ಇನ್ನೇನು ,ಮೈ ತುಂಬಾ ಐ.ಪಿ.ಎಲ್ ಮ್ಯಾಚುಗಳಿಂದ ಆದ ಸಾಲ ತೀರಿಸಲಾದರೂ ಬಿಡಿಗಾಸು ಬೇಕಿತ್ತು,ಅದ್ ಹೆಂಗೋ ಹಾಸ್ಟೇಲಿನವರನ್ನು ಸೆಟ್ಲ್ ಮಾಡಿ,ಯಾವುದೋ ರೂಮಿಗೆ ಹೋದ.ಅಂತೂ ಇಂತೂ ರಾತ್ರಿ ೩ ಗಂಟೆಗೆ ಮಲಗಿ ,ಬೆಳಿಗ್ಗೆ ೧೧ ಕ್ಕೆ ಎದ್ದು ಜೀವನ ಸಾಗುತ್ತಿದ್ದಾಗ ಅಮ್ಮನಿಗೆ ವಿಷಯ ಗೊತ್ತಾಗಿತ್ತು.
" ಅಮ್ಮಾ ,ಆ ಹಾಸ್ಟೇಲಿನಲ್ಲಿ ನನ್ನ ರೂಮಿನಲ್ಲಿ ನಾನ್ ಒಬ್ನೇ ಜೂನಿಯರ್ ,ರ್ಯಾಗಿಂಗ್ ತಡಿಯಕ್ ಆಗ್ತಿಲ್ಲಾ ,ಯಾರೋ ಸಿನಿಯರ್ ನನ್ನ ಈ ರೂಮ್ ಗೆ ತಂದ್ ಬಿಟ್ರು,ಎನ್ ಮಾಡ್ಲಿ?? ಅಮ್ಮಾ... ಆದ್ರೆ ಇನ್ನೂ ಐನೂರು ರೂಪಾಯಿ ಕಳ್ಸು ,ಕರೆಂಟ್ ಬಿಲ್ಲು ,ವಾಟರ್ ಬಿಲ್ಲು ಕಟ್ಬೇಕು, ಅದ್ರೆ ಅಪ್ಪಂಗೆ ಮಾತ್ರ ಹೇಳ್ಬೇಡಾ..." ಎಂದು ಹಸಿ ಸುಳ್ಳು ಹೇಳಿದ್ದ.
ಹೇಳಿದವನೇ ಜೋಗಿ ಬಿಟ್ರೆ ಇವನದೇ ಮದರ್ ಸೆಂಟಿಮೆಂಟೇನೋ ಎಂಬಂತೆ ಎರಡು ಪೆಗ್ ಜಾಸ್ತಿ ಹಾಕಿದ್ದ.ಅದೇ ಮತ್ತಿನಲ್ಲಿ ತಪ್ಪಿಗೆ ಪ್ರಾಯಾಶ್ಚಿತ ಎಂದು ಬ್ಲೇಡಿನಿಂದ ಕೈ ಕೆರೆದು ಕೊಂಡಿದ್ದ.ನಂತರ ಎಂದಿನಂತೆ ಜೀವನ ಸಾಗಿತ್ತು.
ಮುಂದೇನು ... ತಿಂದಿದ್ದು ಕೆಳಗೆ ಮೇಲಾಗಿ ಹೊಟ್ಟೇನೋವು ಬಂದಿತ್ತು. ಅದಕ್ಕೆ ಜ್ವರವೂ ಸೇರಿ ಕೊಂಡಿತ್ತು... ಕೊನೆಗೆ ಮನೆಗೆ ರೂಮ್ ಪಾರ್ಟ್ನ್ ನರ್ ನಿಂದ ಕರೆ ಹೋಗಿತ್ತು.ಆಗಲೇ ಅಪ್ಪ ಬಂದಿದ್ದು....ಅಲ್ಲಿಯ ತನಕ ಇರದ ಆತಂಕ ,ತಳಮಳ ಆಗಶುರುವಾಗಿತ್ತು.ಅಮ್ಮನ ಹತ್ತಿರ ಸುಳ್ಳು ಹೇಳಿದಷ್ಟು ಧೈರ್ಯ ಸಾಕಾಗದಾಗಿತ್ತು.ಅಪ್ಪ ಏನೆಂದಾರೋ ಏನೋ ಎಂಬ ಆತಂಕ ಮನಸ್ಸಿನಲ್ಲಿ ಆಗ ರೂಮ್ ಮಾಡಿತ್ತು.ಮುಂದೇನು ಕಥೆಯೋ? ಎನು ಹೇಳಲೋ?ಎಂದು ಯೋಚಿಸುತ್ತಿರುವಾಗಲೇ ಅಪ್ಪ ಚಿಕಿತ್ಸೆ ಕೊಡಿಸಿ ಹೊರಟಿದ್ದರು. ಅವರು ರೂಮಿನ ಬಗ್ಗೆ ಒಂದು ಮಾತೂ ಕೇಳಲಿಲ್ಲ,ಇವನಿಗೆ ಹೇಳಲು ಧೈರ್ಯ ಸಾಲಲಿಲ್ಲ..ಹೋಗುವಾಗ ಮುಖ ನೋಡಿ ,ಸಾವಿರದ ನೋಟನ್ನು ಕೈಗಿತ್ತು "ಜೋಪಾನ" ಎಂದಷ್ಟೇ ಹೇಳಿ ಬಸ್ಸು ಹತ್ತಿದರು.....
ಅದಾಗಿ ರೂಮಿನ ಮೆಟ್ಟಿಲು ಹತ್ತುತ್ತಿರುವಾಗ ಕೆಳಗಿನ ಮಾಲಿಕರ ಮನೆಯಲ್ಲಿ ನಡೆದ ಮಾತುಕತೆ ಹುಡುಗನ ಕಿವಿಗೆ ಬಿತ್ತು. "ಅಲ್ಲಾ ಕಣೇ... ನಮ್ ಮನೆ ಮೆಲ್ ಇರೋ ಹುಡುಗ ಹಾಸ್ಟೇಲಿನಲ್ಲಿ ಇದಿನಿ ಅಂತಾ ಅಪ್ಪಂಗೆ ಹೇಳೀದ್ನಂತೆ ,ಆಮೇಲೆ ಅಮ್ಮಂಗೆ ...ರ್ಯಾಗಿಂಗ್ ಅಂತಾ ಬೇರೆ ಹೇಳೀದಾನೆ..ಆದ್ರೆ ಜ್ಯೂನಿಯರ್ಸ್ ಗೆ ಬೇರೆ ಹಾಸ್ಟೇಲ್ ಇರೋ ವಿಷಯ ಅಪ್ಪಂಗೆ ನಾನ್ ಹೇಳೀದ್ ಮೇಲೇ ಗೊತ್ತಾಗಿದ್ದು. ಮಗ ಸುಮ್ನೆ ಸುಳ್ ಹೆಳ್ ಬಿಟ್ನಲಾ ....... ಅಂತ ತುಂಬಾ ಬೇಜಾರು ಮಾಡ್ಕಂಡ್ರು ,ಅವ್ನಿಗೆ ಹೊರ್ಗಡೆ ಊಟ ಸೆಟ್ ಆಗಲ್ಲಾ ಅಂತ ಹೇಳ್ದ್ರು ,ಜೊತೆಗೆ ನೀವೇ ಊಟ ಹಾಕಿ ತಿಂಗಳಿಗೆ ಐದು ಸಾವಿರ ಬೇಕಾದ್ರು ಕೊಡ್ತೀವಿ ಅಂದ್ರು...ನಾನು ಅಯ್ತು
ಅಂದೆ,ಆದ್ರೆ ಎನ್ ಹುಡ್ಗುರೋ.....ಥೂ..ಅಪ್ಪಾ ಅಮ್ಮಂಗೇ ಮೋಸ ಮಾಡೋ ಜೀವನಾ ಯಾಕ್ ಬೇಕೋ " ......

ಕೇಳುತ್ತಿದ್ದಂತೆ ಹತ್ತುತ್ತಿದ್ದ ಮೆಟ್ಟಿಲುಗಳು ಪರ್ವತದಂತೆ ಅನಿಸಹತ್ತಿದ್ದವು.... ಅಂತೂ ರೂಮಿಗೆ ಬಂದು,ಕಬೋರ್ಡ್ ನಲ್ಲಿ ಮುಚ್ಚಿಟ್ಟಿದ್ದ ಸಿಗರೇಟು ಹಚ್ಚಿದ್ದ....ಸಿಗರೇಟಿನಂತೆ ಅವನ ಮನಸ್ಸೂ ಸುಡುತ್ತಿತ್ತು...



(" ತನ್ನನ್ನು ತಾನೇ ಬುದ್ದಿವಂತ ,ಪಾಲಕರೆಲ್ಲಾ ಬಕ್ರಾ ಗಳು ಎಂದು ತಿಳಿಯುವ ಮಕ್ಕಳು, ನಮ್ಮ ಮಕ್ಕಳು ಎನೂ ತಿಳಿಯದ ಮುಗ್ಧರು ಎಂದು ತಿಳಿಯುವ ಪಾಲಕರು")

ಮುಂದೇನು????
(ನಿಮ್ಮ ಕಲ್ಪನೆಗೆ ಬಿಟ್ಟಿದ್ದು)