Tuesday, November 27, 2012

ಬಾ ಮರಳಿ……




ಸುಮ್ಮನೆ ಒಂದು ಕವನ ಬರ್ದಿದೀನಿ...ದಯವಿಟ್ಟು ತಪ್ಪು-ಒಪ್ಪು ತಿಳಿಸಿ....

ನಗೆಯಲ್ಲೆ ಅಪಹರಿಸಿ,ನಯನದಲೆ ಉಪಚರಿಸಿ
ನಾಭಿಯಲು ಸಂಚರಿಸಿ,ನಡಿಗೆಯಲು ಛಾಪಿರಿಸಿ
ಮಂಜಿನಂತೆ ಕರಗಿ ಮರೆಯಾದ ಮೋಹಿತೆ,
ಪಂಜಿನಂತೆ ಉರಿದು ಬರಿದಾದ ಸ್ನೇಹಿತೆ
ಕಣ್ಣಲ್ಲೆ ನಿನ್ನ ಹಚ್ಚೆಯ ಬರೆದಿಹೆ
ಓ ಗಿಣಿಯೆ ಬಾ ಒಮ್ಮೆ,ನಿನಗೆ ಕಾದಿಹೆ.

ಬಜ್ಜರಂದದ ಬೆಡಗಿ,ಚಿಕಣಿಯ ಕಂಗಳ ಹುಡುಗಿ,
ಕಂಜರಿಯಂತಹ ನುಡಿಯು,ಕಾಡುವ ಮೊಗ್ಗಿನ ಜಡೆಯು,
ಎಂದೆಂದೂ ನಿನ್ನ ಜೊತೆಗೆ ಇರುವ ಹವಣಿಕೆ,
ಸರಿಸಿ ಹಳೆಯ ಪರದೆ,ಬಾ ನೀ ಸನಿಹಕೆ,

ಬಣ್ಣಗಳು ಹಳೆನೆನಪು,ಇಂದೆಲ್ಲಾ ಕರಿಬಿಳುಪು,
ಕಾಣದು ಕಣ್ಣಲಿ ಹೊಳಪು ,ಕರಗಿದೆ ಕನಸಿನ ಒನಪು,
ಆ ಕಾಲನಿಂದ ಬಿರಿದೆದೆಗೆ ಮುತ್ತಿಗೆ.
ಸೋಲಿಸುವೆ ಅವನ ನೀ ಬರುವಾ ಹೊತ್ತಿಗೆ.
-ಚಿನ್ಮಯ
(ಶಬ್ಧಾರ್ಥ : ಬಜ್ಜರ-ವಜ್ರ,ಕಂಜರಿ-ಸಣ್ಣ ತಮಟೆ,ನಾಭಿ-ಹೊಕ್ಕಳು,ಕೇಂದ್ರ ಸ್ಥಾನ,ಚಿಕಣಿ-ಚಿಕ್ಕ )

Saturday, November 24, 2012

ನಾ ನೋಡಿದ ಡ್ರಾಮಾ .....



ಈಗಷ್ಟೇ ಡ್ರಾಮಾ ಚಿತ್ರ ನೋಡಿ ಮಸಾಲೆ ದೋಸೆ ತಿಂದು ರೂಮಿಗೆ ಬಂದೆ .....ಬೆಳಿಗ್ಗೆ ಪರೀಕ್ಷೇಯಲ್ಲಿ ಔಟ್  ಪುಟ್ಟು ಬಂದ ಖುಷಿ ಒಂದು ಕಡೆಗಾದರೆ ಅಂತೂ ಇಂತೂ ಮೊದಲ ಪ್ರದರ್ಶನವನ್ನು ನೋಡಲಾಗದಿದ್ದರೂ ಎರಡನೇ ದಿನವೇ ನೋಡಿದ ಖುಷಿ..ನಾಳೆ ಬೆಳಿಗ್ಗೆ ಮನೆಗೆ...ಅದಕ್ಕೆ ರಾತ್ರಿ ಕಣ್ಣು ಕೆಂಪಗೆ ಮಾಡಿಕೊಂಡು ಬೆರಳಚ್ಚಿಸುತ್ತಿದ್ದೇನೆ...ಬೇರೆ ಎನೂ ಅರ್ಜಂಟ್ ಕೆಲಸವಿಲ್ಲದಿದ್ದರೆ ಹಂಗೇ ಒಂದ್ ಸಲ ಓದಿ....

ಚಿತ್ರದ ಬಗ್ಗೆ  ವಿಮರ್ಶಿಸುವಷ್ಟೆಲ್ಲಾ ದೊಡ್ಡವನು ನಾನಲ್ಲ..ಒಂದಿಷ್ಟು ಅನಿಸಿಕೆಗಳು ಅಷ್ಟೇ..
ಚಿತ್ರದಲ್ಲಿ ಮೊದಲಿಗೆ ಇಷ್ಟವಾಗಿದ್ದು ಮಂಡ್ಯದ ಭಾಷೆಯ ಸೊಗಡು...ಒಂದಿಷ್ಟು ಗ್ರಾಮ್ಯತೆಯ ಚಿತ್ರಣ...ಎಂದಿನಂತೆ ಭಟ್ಟರ ಚಿತ್ರದ  ಮೊದಲ ಅರ್ಧಗಂಟೆ ನಾಯಕನ ವ್ಯಕ್ತಿತ್ವವನ್ನು ಹೇಳಲು ಮೀಸಲು..ಅಲ್ಲಿಂದ ಇನ್ನೊಂದೆಡೆಗೆ ಪ್ರಯಾಣ...ಇಲ್ಲಿ ,ಬೇರೆಡೆ ಹೋದಾಗ ಪ್ರೀತಿ ಹುಟ್ಟಿದುವರ ಬದಲು ಪ್ರೀತಿಗಾಗಿಯೇ ಬೇರೆಡೆ ಹೋಗುತ್ತಾರೆ ನಾಯಕ ಯಂಕಟೇಸ ಹಾಗೂ ಸತೀಸ...ಅಲ್ಲಿ ಏನೇನೋ ನಡೆಯುತ್ತದೆ...ಜೊತೆಗೆ ಅಂಡರ್ ವರ್ಡನ ಥಳಕೂ ಚಿತ್ರಕ್ಕಿದೆ...ಒಟ್ಟಿನಲ್ಲಿ ಒಂದು ನಕ್ಕು ಹಗುರಾಗುವ ಚಿತ್ರ...ಮನಸ್ಸಿನಲ್ಲಿ ಭವಿಷ್ಯದ ಬಗೆಗಿನ ಗೊಂದಲಗಳನ್ನು ಮರೆತು ಇಂದಿನದನ್ನು ಆನಂದದಿಂದ ಕಳೆಯಿರಿ..ಉಳಿದದ್ದೆಲ್ಲಾ ಭಗವಂತನ ಮೇಲೆ ಬಿಡಿ ಎನ್ನುವ ಸಂದೇಶ ಇದೇಯೇನೋ ಅಂತ ನನಗನಿಸಿದ್ದು...

ಮೊದಲಿಗೆ ಒಂದಿಷ್ಟು ತರಲೆ ಮಾತುಗಳು...ಮಂಗಾಟಗಳು....ಆಮೇಲಾಮೇಲೆ  ಗಂಭೀರವಾಗುವಂತಹ ಪಾತ್ರದಲ್ಲಿ ಯಶ್ ಅಭಿನಯ ಇಷ್ಟವಾಯ್ತು....ಹೊಡೆದಾಟದ ದೃಶ್ಯಗಳಲ್ಲಿ ಯಶ್ ಡಿಚ್ಚಿ ಒಂದು ಸಲ ನೆನಪಿರತ್ತೆ...ಪ್ರೀತಿ ಮಾಡುವ ಹುಡುಗನ ಪಾತ್ರ ಅವರಿಗೇನು ಹೊಸದೇನಲ್ಲ...ಹಾಂ ಯಾಕೋ ಕೊನೆಯಲ್ಲಿ ,ಕುಡಿದು ಮಾಡಿದ ತಪ್ಪುಗಳಿಗೆ ಫಾದರ ಹತ್ತಿರ ಕ್ಷಮೆ ಯಾಚಿಸುವಾಗ ನಟನೆ ಇನ್ನೂ ಚೆನ್ನಾಗಿರಬಹುದ್ದೇನೋ ಅನಿಸಿದರೆ,ಗುಂಡು ಬಿದ್ದು ನರಳುವ  ಸಂದರ್ಭದಲ್ಲಿಯೂ ಕೂಡ "ಪ್ರಿಯತಮೆಯನ್ನು ಚೆನ್ನಾಗಿ ನೋಡಿಕೋ" ಎಂದು ಅವರಪ್ಪನ ಹತ್ತಿರ ಭಾಷೆ ತೆಗೆದುಕೊಳ್ಳುವಾಗ ವ್ಹಾರ ವ್ಹಾ ಎನ್ನಿಸದೇ ಇರದು....

ಇನ್ನು ನೀನಾಸಂ  ಸತೀಶರದ್ದು ಕೂಡ ನಗೆಬುಗ್ಗೆ ಚಿಮ್ಮಿಸುವ ಪಾತ್ರ....ನಾಯಕನ ಜೊತೆಗೂಡಿ ಆಡುವ ಮಂಗಾಟಗಳಿಗೆಲ್ಲಾ ಸೋ ಎನ್ನುವ ಪಾತ್ರವದು....ಜೊತೆಯಿಷ್ಟು ಮುಗ್ಧತೆ ಕೂಡ ಆ ಪಾತ್ರಕ್ಕಿದ್ದು ,ಆ ಸಮಯದಲ್ಲಿ ಸತೀಶರ ಆಂಗಿಕ ಅಭಿನಯ ಮನಸೂರೆಗೊಳ್ಳುತ್ತದೆ.... ಕೊನೆಯಲ್ಲ್ಲಿ ಸಮುದ್ರದ ಹತ್ತಿರ ನಿಂತು ಅಳುವ ಸಂಧರ್ಭದ ಅಭಿನಯ ಇಷ್ಟವಾಯ್ತು.....

ಇನ್ನು ನಾಯಕಿ ರಾಧಿಕಾ ಪಾತ್ರಕ್ಕೆ ಎಂದಿನಂತೆ  ನ್ಯಾಯ ಒದಗಿಸಿದ್ದಾರೆ...ಮೊದಲಿಗೆ ಶ್ರೀಮಂತನ ಮಗಳಾಗಿ ಅವರು ತೋರಿಸುವ ಅಭಿನಯ ಯಾಕೋ ಅಷ್ಟೇನೂ ಇಷ್ಟವಾಗಲಿಲ್ಲ...ಜೊತೆಗೆ ಮೊದಲಾರ್ಧದ ತನಕ ಮುಖ ಯಾಕೋ ಪ್ರೆಶ್ ಅನಿಸಲಿಲ್ಲ....ಆದರೆ ದ್ವಿತೀಯಾರ್ಧದಲ್ಲಿ ಅವರ ನಟನೆ ನಮ್ಮನ್ನು ಪಾತ್ರದೊಳಗೆ ಕೊಂಡೊಯ್ಯುತ್ತದೆ...ಸುಚೇಂದ್ರ ಪ್ರಸಾದ್ ಅವರ ಕೈಯ್ಯಲ್ಲಿ ಮಗಳಂತೆ ಅವರ ಡ್ರಾಮಾ ಆಡುತ್ತಾ  ಕೈತುತ್ತು ತಿನ್ನುವ ದೃಶ್ಯದಲ್ಲಿ ನಿಜಕ್ಕೂ ಕಣ್ಣೀರು ತರಿಸುತ್ತಾರೆ ರಾಧಿಕಾ..ಅದನ್ನು ನೋಡುತ್ತಾ ಯಾಕೋ ನಾನು ನನ್ನ ಕನಸು ನೆನಪಾಯ್ತು.....ದ್ವಿತೀಯಾರ್ಧದಲ್ಲಿ ಮುದ್ದಾಗಿ ಕಾಣಿಸುವ ರಾಧಿಕಾ ಪಂಡಿತ್ ಅಭಿನಯದಲ್ಲಿ ಹಿನ್ನೆಲೆಯಲ್ಲಿ ತೇಲಿಬರುವ "ಹಂಬಲದ ಹೂವಂತೆ ...."ಮನಸ್ಸಿನಲ್ಲಿ ಉಳಿದಿರುತ್ತದೆ...

ಇನ್ನು ಚಿತ್ರಕ್ಕೆ ಹೊಸ ಛಾಪು ಕೊಟ್ಟ ಎರಡು ಪಾತ್ರಗಳ ಬಗ್ಗೆ ಹೇಳಲೇಬೇಕು.."ಏಯ್ ಹುಡುಗ್ರಾ..."ಎಂದು ಗಡಸು ದನಿಯೇರಿಸಿ ಚಿತ್ರದೊಳಗಿಳಿಯುವ ಬುಲ್ ಬುಲ್ (ಅಂಬರೀಷ ಅವರಿಗೆ ನಾಯಕ ಕರೆಯುವ ಹೆಸರು )..."ಅವನು ಆಡಿಸ್ತಾನೆ ಆಡ್ಭೇಕು "ಎಂದು ಕೈಯೆತ್ತಿ ಬೊಂಬೆ ತಿರುಗಿಸುತ್ತಾರೆ...ಪ್ರತಿಯೊಂದು ತಿರುವಿನಲ್ಲು ಕಾಣಿಸಿಕೊಂಡು ಕಣ್ಣಲ್ಲೇ ಎಲ್ಲಾ ಹೇಳುವ ಅಭಿನಯ ಕನ್ನಡದ ಕರ್ಣರದ್ದು.....ಆ ಟೋಪಿ,ಆ ಬೊಂಬೆ ಅದರ ಹಿಂದಿನ ಅರ್ಥ ಅಧ್ಯಾತ್ಮದ ಬಗ್ಗೆ ಆಸಕ್ತಿ ಇರುವವರಿಗೆ ಇನ್ನಷ್ಟು ಇಷ್ಟವಾಗಬಹುದು......

ಜೊತೆಗೆ ಸುಚೇಂದ್ರ ಪ್ರಸಾದ್ ಅವರ ಅಭಿನಯವನ್ನು ಮರೆಯಲು ಅಸಾಧ್ಯ...ಕಾಲೇಜಿನ ಪ್ರಾಂಶುಪಾಲರಾಗಿ "ಕನ್ನಡದಲ್ಲೇ ವ್ಯವಹರಿಸೋಣ" ಎಂದು ಬೋರ್‍ಡು ಹಾಕಿಕೊಂಡು ಅಚ್ಚ ಕನ್ನಡ ಮಾತನಾಡುವ ಅವರು,ಮನೆಯಲ್ಲಿ ಯೆಂಕ್ಟೇಶ್,ಸತೀಶ ಬಂದಾಗ ಕಾಣದ  ಮಗಳ ಬಗೆಗಿನ ಮೋಹದಲ್ಲಿ ,ಅವಳ ಮುದ್ದಾಡುವ  ಆಸೆಯಲ್ಲಿ ಭಾವಾವೇಶಕ್ಕೊಳಗಾಗುವ ಸನ್ನಿವೇಶ ಅವಿಸ್ಮರಣೀಯ, ಅನನ್ಯ ,ಅದ್ಭುತ...ಕೋಪದಲ್ಲೂ ಅಷ್ಟೇ,ಮಮತೆಯಲ್ಲೂ ಅಷ್ಟೇ,ಹತಾಶೆಯಲ್ಲೂ ಅಷ್ಟೇ,ಪ್ರೀತಿಯಲ್ಲೂ ಅಷ್ಟೇ ಸುಚೇಂದ್ರ ಪ್ರಸಾದ ಇಡೀ ತೆರೆಯನ್ನು ಆವರಿಸಿಕೊಂಡಿರುತ್ತಾರೆ ... ಅವರ  ಸ್ಪಷ್ಟವಾದ ಉಚ್ಚಾರ,ಸಂದರ್ಭಕ್ಕೆ ತಕ್ಕಂತೆ ಬದಲಾಗುವ  ಮುಖಭಾವ ನೆನಪಿನಲ್ಲುಳಿಯುತ್ತದೆ....

ಹಾಡುಗಳ ಬಗ್ಗೆಯಂತೂ ಹೇಳುವದೇ ಬೇಡ...ಒಂದಕ್ಕಿಂತ ಒಂದು ಸುಂದರ...ಚೆಂದುಟಿಯ ಪಕ್ಕದಲಿ ಯ ನೃತ್ಯ ಸಂಯೋಜನೆ,ಬೆಳಕಿನ ಸಂಯೋಜನೆಯ ಬಹಳ ಹಿಡಿಸಿತು...ಬಂಗಾರದಂತೆ ಹೊಳೆಯುವ ಬೆಳಕಿನಲ್ಲಿ ಪ್ರೇಮ ನಿವೇದನೆ ಮಾಡುತ್ತಿರುವ ಯಶ್ ಹಾಗೂ ಅಂದದ ರಾಧಿಕಾ ಇನ್ನೂ ಕಣ್ಣಿಗೆ ಕಟ್ಟಿದಂತಿದ್ದಾರೆ....
ತುಂಡ್ ಹೈಕಳ ಸಾವಾಸ ದಲ್ಲಿ ಯಶ್ ಹಾಗೂ ಸತೀಶ ಒಂದಿಷ್ಟು ನಗಿಸ್ತಾರೆ....."ಡ್ರಾಮಾ ತನಿನಾನನ " ಹಾಡುನಲ್ಲಿ ಹಚ್ಚಿಕೊಂಡಿರುವ ಮೀಸೆ,ಕಲ್ಲಂಗಡಿ,ಸೇಬು,ಏಣಿ ಮೇಲೆ ಸೈಕಲ್ಲು  ಹಿಂಗೆ ಏನೋನೋ ಹೊಸತರದ್ದು ಎನಿಸಿ ಮುಂದೇನು ವ್ಯಾಶವೋ ಎಂದು ಕಣ್ಣು ಹುಡುಕುವಂತೆ ಮಾಡುತ್ತದೆ....ಕೃಷ್ಣ ಅವರ ಕ್ಯಾಮರಾದಲ್ಲಿ ತೆಗೆದ  ಬ್ರಿಡ್ಜಿನ ಕೆಳಗಿನ ದೃಶ್ಯಗಳು,ಸಮುದ್ರದ ತೀರ ಮತ್ತೆ ಮತ್ತೆ ನೋಡಬೇಕು ಎನಿಸುವಂತೆ ಮಾಡುತ್ತದೆ...

ಇವಿಷ್ಟು ನಮ್ಮ ಡ್ರಾಮಾಕಥೆ ಪುರಾಣಗಳು....ಈ ನನ್ ಮಗಾ ಎನ್ ಸಿನಿಮಾ ಪಂಟರಾ ಅಂತ ಬೈಕೋಬೇಡಿ...ಅನಿಸಿದ್ದನ್ನು ಬರೆಯುವ ಚಟ ನೋಡಿ...ಬೆರಳಚ್ಚಿಸಿದ್ದೇನೆ ಆಷ್ಟೇ...ಇದು ನಾ ಕಂಡ ಡ್ರಾಮಾ...

ಪುರಸೊತ್ತು ಆದ್ರೆ ನೀವೂ ಒಂದು ಸಲ ಹೋಗಿ ಬನ್ನಿ.......

ಒಟ್ಟಿನಲ್ಲಿ ಎಲ್ಲರನ್ನೂ ನಗಿಸಿ,ನಾಳೆಯ ಬಗೆಗಿನ ಚಿಂತೆ ಹೊಡೆದೊಡಿಸಿ,ಎಲ್ಲ ನಿನ್ನ ಆಟ ಕಣೋ ಎಂಬತೆ ಹಾಯಾಗಿರಿ,ಇಂದಿನದನ್ನು ಆಸ್ವಾದಿಸಿ ಎನ್ನುವ ಡ್ರಾಮಾ ನಂಗಂತೂ ಇಷ್ಟವಾಯ್ತು...

ಇನ್ನೊಮ್ಮೆ ಹೋಗಬೇಕು ಅಪ್ಪ ಬೈದೇ ಇದ್ರೆ,
ಜೇಬಲ್ಲಿ ದುಡ್ಡು ಉಳಿದಿದ್ರೆ!!!!!!
-ಚಿನ್ಮಯ.

 

Thursday, November 8, 2012

ಉಸಿರನ್ನೆ ಕಸಿದಿಟ್ಟ…..


ಸುಮಾರು  ದಿನಗಳಿಂದ ಡ್ರಾಮಾ ಚಿತ್ರದ "ಚೆಂದುಟಿಯ ಪಕ್ಕದಲಿ"...ಹಾಗೂ  "ಹಂಬಲದ ಹೂವಂತೆ ..." ಗೀತೆಗಳನ್ನು ಗುನುಗುನಿಸುತ್ತಾ ಇದ್ದೆ...ತೀರಾ ಇಷ್ಟವಾದ ಹಾಡುಗಳವು... ಯಾವಾಗಲೋ ಊರಿಗೆ ಹೋಗುವಾಗ ಬಸ್ಸಿನ ಟಿಕೆಟ್ಟಿನ ಹಿಂದೆ ಒಂದೆರಡು ಸಾಲನ್ನೂ ಗೀಚಿದ್ದೆ...ಪರೀಕ್ಷೆ ಬರೆದು ಗಣಕದ ಮುಂದೆ ಕುಂತವನಿಗೆ ಇಂದೇಕೋ "ಹಳೆ ರಾಗ ಹೊಸ ಹಾಡು " ಗುಂಪಿನಲ್ಲಿ ಹೃದಯ ಶಿವ ಅವರ ಮಾತು ಕಣ್ಣಿಗೆ  ಬಿತ್ತು...ಹಾಗೆಯೇ ಕಣ್ಣ ಮುಂದೆ ಪೆನ್ನು-ಪೇಪರಿತ್ತು...
ಅದೇ ದಾಟಿಯನ್ನು ಗುನುಗುನಿಸುತ್ತಾ ಗೀಚಿದ ಸಾಲುಗಳಿವು..ದಯವಿಟ್ಟು ನೋಡಿ ತಪ್ಪು ಒಪ್ಪು ತಿಳಿಸಿ..ಆಶೀರ್ವದಿಸಿ...

ಉಸಿರನ್ನೇ ಕಸಿದಿಟ್ಟ ನೇಸರನ ಬಿಸಿಯಿಟ್ಟ,
 ಕನಸೂರ ಕನ್ನೆಗೆ ಹೆಸರಿಲ್ಲಾ.
ಕೆಸರಿದ್ದ ಕಿಸೆಯಲ್ಲಿ ಪ್ರೀತಿಸುವ ಕಾಸಿಟ್ಟ,
ಆ ಕುಸುಮವನ್ನಿಂದು ಮರೆತಿಲ್ಲಾ.
ಮಿಸರಿಯ ಎಸರಂತೆ ಈ ಪ್ರೇಮ,
ಕೇಸರಿಯ ತಿನಿಸಷ್ಟು ವ್ಯಾಮೋಹ,
ಬಸರಿಯ ಬಳ್ಳಿಯೇ ಈ ದೇಹ.

ಬೆಂತರದ ಹುಡುಕಾಟ ಎದೆಸೆಲ್ಲೆಯಲ್ಲಿರಲು,
ಎಲ್ಲಿರುವೆಯೆಂದು ನೀ ಹೇಳವಲ್ಲೆ.
ನಿಂತಲ್ಲೇ ನಿಲ್ಲು ನೀ ನನ್ನೊಲವಿನಾ ಹುಲ್ಲೆ,
ಸಿರಿಚೆಲುವ ಸವಿಯಲು ಬರುವೆನು ಅಲ್ಲೆ.
ಸಂತಿಗೆ ಹೊಡೆಯೋಣ ಸವಿಲಲ್ಲೆ,
ಜೊತೆಗೂಡಿ ಕದಿಯೋಣ ಸಿಹಿಜಲ್ಲೆ,
ನಕ್ಕಿರಲಿ ಅದ ನೋಡಿ ಮಳೆ ಬಿಲ್ಲೆ.
ಎಲ್ಲಿರುವೆ ನೀ ಓ ನಲ್ಲೆ…


 -ಚಿನ್ಮಯ ಭಟ್ಟ. 
 (ಶಬ್ಧಾರ್ಥ:ಮಿಸರಿ- ಒಂದು ಬಗೆಯ ಜೇನು,ಕೇಸರಿ-ನಮ್ಮ ಕಡೆಯಲ್ಲಿ ಮಾಡುವ ಒಂದು ಕಜ್ಜಾಯ,ಬೆಂತರ-ಬೇತಾಳ,ಸೆಲ್ಲೆ-ಮೇಲುಹೊದಿಕೆ,ವಲ್ಲೆ-ಬಯಲು ಸೀಮೆಯಲ್ಲಿ "ಇಲ್ಲ" ಎನ್ನವುದು,ಸಂತಿಗೆ-ಜೊತೆಯಲ್ಲಿ)
ದಯವಿಟ್ಟು ತಪ್ಪುಗಳನ್ನು ತಿಳಿಸಿ....ಹಾಂ ಈ ನನ್ನ ಹುಚ್ಚುತನವನ್ನು ಕಾಯ್ಕಿಣಿ ಹಾಗೂ ಭಟ್ಟರು ಕ್ಷಮಿಸುವಿರೆಂದೂ ನಂಬಿದ್ದೇನೆ..)

Wednesday, October 24, 2012

ಸಿಂಗಾರದ ಕಥೆ


ಕಣ್ಣಿಗೆ ಬೆಳಕು ಕಾಣುತ್ತಲೇ ,ಹಾಸಿಗೆಯ ಮೇಲೆ ಕೈ ಹಾಕಿ “gud mrng dearJ” ಎಂದು ಮೆಸ್ಸೆಜು ಟೈಪು ಮಾಡಿದ ಶತಭಿಷ ಆ ಹುಣಸಿಗೆ ಊರಿನಲ್ಲಿ ನೆಟ್ವರ್ಕು ಸಿಗಲ್ಲಾ ಎಂಬುದನ್ನು ನೆನಪಿಸಿಕೊಂಡು  ಮತ್ತೆ ಮಲಗಿದ.
“ತಮ್ಮಾ ಬೆಳ್ಗಾತು ಎದ್ಕಾ … ಎಂದು ಅಜ್ಜಿ ಎಬ್ಬಿಸಿದಾಗಲೇ ಆತ ಮತ್ತೆ ಕಣ್ಬಿಟ್ಟಿದ್ದು..
ಅಜ್ಜಿ ಹೂವಿನ ಕುಕ್ಕೆ ಹಿಡಿದು ದೇವಸ್ಥಾನಕ್ಕೆ ಹೋದರೆ ಬೆಂಗಳೂರಿನಲ್ಲಿ ಅರ್ಲಿ ಮಾರ್ನಿಂಗ್ ಹತ್ತಕ್ಕೆ ಎದ್ದು ಬಿಡುವ ಹೊಸಜಮಾನಾದ ಈ ಹುಡುಗ ಇಲ್ಲಿ ಏಳೂವರೆಗೇ ಎದ್ದು ಕೋಲ್ಗೇಟು ಹಿಡಿದು ಹೊರಟ.
ಬಚ್ಚಲು ಮನೆಯಲ್ಲಿ ಕಾಸಿಟ್ಟ ಬಿಸಿನೀರಿನಲ್ಲಿ ಮುಖತೊಳೆದು,ಹಾಗೆಯೇ ಒಂದಿಪ್ಪತ್ತೈದು ಹೆಜ್ಜೆ ನಡೆದು ಅಡಿಗೆ ಮನೆಯತ್ತ ನಡೆದವನಿಗೆ ,ಬಾಳೆ-ಮಣೆಯ ಸ್ವಾಗತ ಕಾದಿತ್ತು..ಬಂದೊಡನೆ ಬಂಡಿಮೇಲೆ ಹೊಯ್ದ ತೆಳ್ಳೇವು “ಚೊಯ್ ಯ್…”ಎಂದು ಸದ್ದು  ಮಾಡುತ್ತಿತ್ತು.ಬೆಳಿಗ್ಗೆಯ ಕಾಫಿ-ಬಿಸ್ಕತ್ತನ್ನು ಅವನ ಕಣ್ಣುಗಳು ಹುಡುಕುತ್ತಿರುವಾಗಲೇ ,
ಅಜ್ಜಿ “ತಮಾ ಬಾ ಆಸ್ರಿಗೆ ಕುಡ್ಯಲೇ”(ತಿಂಡಿ ತಿನ್ನಲು) ಎಂದರು…
ಬೆಳಬೆಳಿಗ್ಗೆ ತಿಂಡಿತಿಂದು ಅಭ್ಯಾಸವಿಲ್ಲ ಎಂದು ಬಾಯಿಗೆ ಬಂದರೂ,ತನ್ನಿಂದ ಅಜ್ಜಿಯ ಉಳಿದ ಕೆಲಸಗಳಿಗೆ ತಡವಾಗಬಾರದು ,ತಾನು ತಿಂಡಿ ತಿನ್ನದೇ ಅಜ್ಜಿ ತಿಂಡಿ ತಿನ್ನರು,ಅದರಿಂದ ಮನೆಯ ಕೆಲಸವೆಲ್ಲಾ ತಡವಾಗುವುದು ಎಂದರಿತು “ಹಾಂ ಸರಿ” ಎಂದು ತಿಂಡಿಗೆ ಕೂತ .
ಬೆಲ್ಲ ಬೆಣ್ಣೆಯ ಹದಪಾಕದಲ್ಲಿ ಗರಿಗರಿ ತೆಳ್ಳೆವಿನ ಚೂರುಗಳನ್ನು ಮುಳುಗಿಸಿ ತಿಂದ ಆತ ,ಒಂದು ಶೇರು ಚಹಾವನ್ನು ಹೀರಿ ಅಡುಗೆಯಮನೆಯಿಂದ ಹೊರಬಿದ್ದ.ಅದಾದ ಮೇಲೆ ಹಾಗೆಯೇ ಯಾರೋ ಶಿರಸಿಯಿಂದ ನಿನ್ನೆ ತಂದಿದ್ದ ಪೇಪರನ್ನು ಓದುತ್ತಾ ಕುಳಿತಿದ್ದ.
ಅಷ್ಟರಲ್ಲೇ ಒಬ್ಬ ಪಟ್ಟೇಪಟ್ಟೆ ಲುಂಗಿಯುಟ್ಟಿದ್ದ ಆಸಾಮಿ ಜಗುಲಿಗೆ ಬಂದು “ಅಮ್ಮಾ “ಎಂದ.
ಪೇಪರ್ ಓದುತ್ತಿದ್ದ ಶತಭಿಷ “ಎಂತದು?” ಎಂದು ಕೇಳಿದ,
ಆ ಆಸಾಮಿ ,”ತಮ್ಮಾ಼….ಅಮ್ಮನ ಕೂಡೆ ಆಚಾರಿ ಬಂದಿದ ಹೇಳು..”
ಶತಭಿಷನ ಕಿವಿಗಳು ಇದನ್ನು ಕೇಳಿ “ಬೈಂದೂರು ಭಾಷೆ’ ಎಂದವು..ಅದರ ಜೊತೆಗೆ ಗೊಬ್ಬರ ಹೊರಲು ಬರುತ್ತಿದ್ದ ಶೇರುಗಾರರು ಮಾತನಾಡುತ್ತಿದ್ದ ಭಾಷೆಯೂ ಇದೇ ಎಂಬ ಪುರಾವೆಯೂ ಸಿಕ್ಕಿತ್ತು..
”ಸರಿ ಹೇಳ್ತೆ ನೀವ್ ಕುತ್ಕಳಿ” ಎಂದು ಸ್ಟೂಲು ಮುಂದಿಟ್ಟು ಅಜ್ಜಿಯ ಹತ್ತಿರ ಹೋಗಿ “ಆಯಿ,..ಆಚಾರಿ ಬಂಜಾ”(ಅಜ್ಜಿ, ಆಚಾರಿ ಬಂದಿದ್ದಾನೆ)ಎಂದ.
ಅಜ್ಜಿ “ಸರಿ,ಕುತ್ಕಂಬಲೆ ಹೇಳು,ಆಸ್ರಿಗೆ ತತ್ತಿ”(ಕೂರಲು ಹೇಳು,ತಿಂಡಿ ತರುವೆನು) ಎಂದು ಹೇಳಿ ಕಳುಹಿಸಿದರು…
ಜಗುಲಿಗೆ ಬಂದ ಶತಭಿಶಷ ಆಚಾರಿಯ ಬಳಿ ಮಾತಿಗಿಳಿದ…
ಶತಭಿಷ : “ನಿಮ್ ಹೆಸ್ರು ಎಂತದು??ಎಷ್ಟ್ ವರ್ಷಆಯ್ತು ಈ ಕೆಲ್ಸಾ ಮಾಡ್ತಾ?”
ಆಚಾರಿ:”ನನ್ ಹೆಸ್ರು ಮಂಜೇಶ್ವರನಾಥೇಶ್ವರಾಚಾರಿ  .ಜನ  ಮಂಜಾಚಾರಿ,ಒಂದೊಂದ್ ಸಲ್  ಮಳ್ಳಾಚಾರಿ ಹೇಳು ಕರಿತ್ರು ಅಂತಿಟ್ಕಣಿ..ನಾನು ನಮ್ಮಪ್ಪನ ಕೂಡೆ ಉಳಿ-ಚಾಣ ಹಿಡ್ಕಂಡ್ ಘಟ್ಟ ಹತ್ತಿ ಬಂದವಾ..ಸಣ್ಣಕಿದ್ದಾಗಿಂದಲೂ ಇದೇ ಕೆಲ್ಸಾ..ಸುಮಾರ್ ವರ್ಷಾ ಆಯ್ತ್ ”
ಶತಭಿಷ: “ಹಮ್..ಮತ್ತೆ ಕೆಲಸ ಹೆಂಗದೆ ಈಗ??”
ಆಚಾರಿ :”ಎಂತಾ ಹೇಳುದ್ ಹೇಳಿ ಕಾಂಬಾ..ಎಲ್ಲಾ ಭಗವಂತ ಕೊಟ್ಟಿದ್ ಅಲ್ದಾ…ಈಗ ಮರದ ಕೆಲ್ಸಾ ಇಲ್ಲಾ ಮಷಿನ್ ನಲ್ಲೇ ಮಾಡ್ತಿರು,,ರೆಡಿಮೇಡ್ ಬಾಗ್ಲು,ರೆಡಿಮೇಡ್ ಕಿಡಕಿ ಚೌಕಟ್ಟು,ರೆಡಿಮೇಡ್ ಮಂಚ..ನಮ್ಮನ್ನ ಯಾರು ಕೇಳ್ತ್ರು… ಅದೂ ಈಗ ನಾಟಾ ಸಿಗೂದೂ ಕಷ್ಟಾ ಆಗಿತಲ್ದಾ...”
ಇಗಾ ಇಲ್ ಕಾಣಿ, ಆ ದ್ವಾರ ಬಾಗಿಲ್ ಇತ್ ಅಲ್ದಾ,,ಅದು ನಮ್ಮಪ್ಪನೆ ಮಾಡಿದು..ಒಂದ್ ವಾರ ಆ ಬಳ್ಳಿ ಬಿಡ್ಸುಕೆ ತಕಂಡಿದಾ ಅವಾ…ಅದ್ನೆ ನೀವು ಈಗ ಮಷಿನ ಅವ್ರ ಹತ್ರ ಹೋಗಿ ಹೇಳ್ರೆ,ಬೆಳಿಗ್ಗೆ ಹೇಳಿ ಸಂಜೆ ತಕಂಡ್ ಹೋಗಿ ಅಂತ್ರ್ …
ಅಲ್ಲಾ ಎಷ್ಟೇ ಹೇಳಿ,ನೆರಿಗೆ ಹಿಡ್ಯು ಕೆಲ್ಸಾ ಮಷಿನ್ ಇಂದಾ ಆತ್ತಾ??”
ಶತಭಿಷ:: “ಅರೆ ಹಂಗದ್ರೆ?”
ಆಚಾರಿ :” ಮರನಾ ಬರೆ ಕತ್ತಿನೋ ಕೊಡ್ಲಿನೋ ತಕಂಡ್ ಕಡ್ದು,ಕತ್ತರಿಸಿ ಕೂಡ್ಸದಲ್ಲಾ ಮರದ್ ಕೆಲ್ಸಾ ಅಂದ್ರೆ..ಅದ್ರ ನಾರು ಹೆಂಗದೆ..ಅದು ಯಾವ್ ಜಾತಿ ಮರ..ಎಷ್ಟ್ ಗಟ್ಟಿ ಇರ್ತ್, ಬಾಗಿಲಿಗೆ ಹಾಕುದಾ,ರೀಪಿಗೆ ಹೋಡ್ಯುದಾ,  ಎಲ್ ಹೊಡ್ದ್ರೆ ಸಿಗುಳು ಬತ್ತ್,ಎಷ್ಟ್ ಜೊರ್ ಹೊಡ್ಯಕ್,ಎಲ್ಲಾ ನೋಡ್ಕಣುಕಾತ್ತಾ ಮಷಿನ್ ಹತ್ರ?ಇಲ್ಲ ಬಿಡಿ  “
ಶತಭಿಷ: “ಅದು ಸರಿನೆ ಬಿಡಿ”..
ಅಷ್ಟರಲ್ಲಿ ತಿಂಡಿ ಬಂದಿತ್ತು ,ಆಚಾರಿ ಅದನ್ನು ತಿಂದು ಮನೆಯ ಹಿಂಭಾಗಕ್ಕೆ ಹೊರಟ..ಅಲ್ಲಿ ಆಚಾರಿ ದೇವರ ಪೀಠವನ್ನು ಸರಿ  ಮಾಡುವ ಕೆಲಸವಿತ್ತು…ದೇವರ ಪೀಠ ಹಳೆಯದಾಗಿ ಹಾಳಾದ್ದರಿಂದಲೇ ಇವನನ್ನು ಸರಿ ಮಾಡಲು ಕರೆಸಿದ್ದರು..ಶತಭಿಷನ ಮಾವ ಮೊದಲೇ ಪೀಠವನ್ನು ಅಲ್ಲಿಗೆ ತಂದಿಟ್ಟು ಶಿರಸಿಗೆ ಹೋಗಿದ್ದರು..ಆಚಾರಿ ತನ್ನ ಕೆಲಸದಲ್ಲಿ ಮಗ್ನನಾದರೆ ಶತಭಿಷ ಯಾವುದೋ ಇಂಗ್ಲಿಷ್ ಕಾದಂಬರಿ ಹಿಡಿದು ಕೂತ…
                             *************************************************
ಸಂಜೆ ನಾಲ್ಕು ಘಂಟೆಯ ಸುಮಾರಿಗೆ ಶತಭಿಷ ಮಲಗೆದ್ದು ಮುಖತೊಳೆಯಲು ಬಚ್ಚಲಮನೆಯ ಕಡೆಬಂದಾಗ ಹಳೆಯ ಪೀಠ ಹೊಸರೂಪವನ್ನು ಪಡೆದು ಸುಂದರವಾಗಿ ಕಾಣುತ್ತಿತ್ತು..ಅಷ್ಟೊತ್ತಿಗೆ ಅಲ್ಲಿಗೆ  ಬಂದ ಆಚಾರಿ
“ಇಗ ಆಯ್ತಂಬ್ರ..ನಾ ಹೊರ್ಟೆ.. “ ಎಂದು ಹೊರಟ..
ಆಗ ಅಜ್ಜಿ “ಏಯ್ ಆಚಾರಿ ಅಚ್ಚೆ ನಾಡಿದ್ದೆಯ ದೊಡ್ಡ ಹಬ್ಬ”(ದೀಪಾವಳಿ )”ಶಿಂಗಾರ ಬೇಕಾದ್ರೆ ತ್ವಾಟದಲ್ ಅದ್ಯಾ ನೋಡ್ಕಾ “ (ಸಿಂಗಾರ ಬೇಕಾದರೆ ತೋಟದಲ್ಲಿ ಇದೆಯೋ ನೋಡು)ಎಂದರು..
ಆಚಾರಿ:”ಹಾಂ ಮರ್ತೆ ಹೋಗಿತ್..ನಾ ತ್ವಾಟಕ್ ಹೋಗ ಬತ್ತೆ ಇವ್ರ್ ಕರ್ಕಂಡು..ಇವ್ರಿಗ್ ತ್ವಾಟದ್ ದಾರಿ ಗೊತ್ತೀತ್ ಅಲ್ದಾ??”
ಅಜ್ಜಿ :”ಹಾಂ..ತಮ್ಮಾ ಅವನ್ನಾ ಇಲ್ಲೆ ಬಾಗಿಲಿನ ಪಾಲಿಗೆ ಕರ್ಕಂಡ್ ಹೋಗಾ “
ಇತ್ತ ಶತಭಿಷನಿಗೆ ನಗುಬರುತ್ತಿತ್ತು..ಅವನಿಗೂ ತೋಟಕ್ಕೂ ಭಾರೀ ದೂರ..ಅವರಮ್ಮ ಒಮ್ಮೆಮ್ಮೆ “ಈ ಮಾಣೀಗೆ ಅಡ್ಕೆ ಕಾಯಿ ಅಡ್ಕೆ ಮರದ್ ಮೇಲೆ ಇರ್ತಾ??ಕೆಳಗ್ ಬಿಡ್ತಾ  ಹೇಳೂ ಗೊತ್ತಿದ್ದ ಇಲ್ಯ! “ ಎಂದು ಆಡಿಕೊಳ್ಳುವುದುಂಟು..ಅವನಿಗೆ ತೋಟದ ದಾರಿಯೊಂದು ಗೊತ್ತಿತ್ತು ಅಷ್ಟೇ.!!!.
ಗುಡ್ಡ ಇಳಿದು ಹೋಗುತ್ತಿರುವಾಗ,
 ಶತಭಿಷ :” ಅಲ್ಲಾ ಅದು ನೀವು ಕೆಲಸ ಮಾಡುತ್ತಿರುವಾಗ ಕೈತಪ್ಪಿ ಏನಾದ್ರು ಕರಗಸ,ಸುತ್ತಿಗೆ ತಟ್ಟಿ ದೇವರ ಪೀಠ ಹಾಳಾಗೊದ್ರೆ ಅಂಥ ಹೆದ್ರಿಕೆ ಆಗೂದಿಲ್ವಾ ?“
ಆಚಾರಿ:” ಇದು ನನ್ನ ಕಟ್ಟಿಗೆ,ಇದು ನನ್ನ ಪೀಠ..ಇದನ್ನು ನಾನೇ ಮಾಡುತ್ತಿರುವುದು ಅಂತಾ ಮಾಡುಕಾಗ..ಎಲ್ಲದೂ ದೇವರದ್ದು..ಅವನೇ ಮಾಡ್ಸ್ಕಂತಿಪ್ಪುದು…ಹೇಳಿ ಮಾಡ್ದ್ರೆ ಎಲ್ಲದೂ ಸರಿ ಆತ್..ಅಲ್ಲಾ ಅವ್ನೇ ಕೂಕಂಬು(ಕುಳಿತುಕೊಳ್ಳುವ)  ಪೀಠ ಅವ್ನೇ ಹಾಳ್ ಮಾಡ್ಕಂತ್ನಾ??ಹೇಳಿ ” ಎನ್ನುತ್ತಾ ತೋಟ ತಲುಪಿದ..
ಅದು ಮಲೆನಾಡಿನ ಶಿರಸಿಯ ವಳಭಾಗೀ ಸೀಮೆಯ ತೋಟ..ವರಷ ಪೂರ್ತಿ ನೀರಿರುವ ಆ ತೋಟದಲ್ಲಿ ಅಡಿಕೆಮರಗಳೆಲ್ಲಾ  ಸೂರ್ಯನನ್ನು ಚುಂಬಿಸುವಷ್ಟು ಎತ್ತರವಾಗಿದ್ದವು..ಬೈತಲೆ ತೆಗೆದಂತೆ ಇದ್ದ ಕಾಲುವೆಗಳು,ಪುಟ್ಪಾತಿನಂತಿದ್ದ ನಿತ್ತುಗಟ್ಟುಗಳು(ಮಧ್ಯ ನಡೆಯುವ ಜಾಗ) ..ಮೆಲ್ಲಗೆ ಹರಿಯುವ ನೀರುಹೊಂದಿದ ಮಂಡಗಾಲುವೆಗಳು,ಅಲ್ಲಲ್ಲಿ ತಲೆ ಎತ್ತಿನಿಂತದ್ದ ಹಲಸು ಮಾವುಗಳು,ಅಡಿಕೆಯ ಮರಗಳನ್ನು ಅಪ್ಪಿಕೊಂಡಿದ್ದ ಮೆಣಸಿನ ಬಳ್ಳಿಗಳು,ಆ ಮರಗಳ ಮಧ್ಯದಲ್ಲಿ ಸುಗಂಧ ಸೂಸುತ್ತಿದ್ದ ಏಲಕ್ಕಿಯ ಗಿಡಗಳು..ಬಂದವರನ್ನು ಬಾಗಿ ನಡೆಸುತ್ತಿದ್ದ ಬಾಳೆಯ ಗಿಡಗಳು,ನಡೆಯುವರನ್ನು ಜಾರಿ ಬೀಳಿಸುತ್ತಿದ್ದ ಕೊಳೆತಹಾಳೆಗಳು..ಅಲ್ಲಿಲ್ಲಿ  ಕಂಡುಬರುತ್ತಿದ್ದ ಸೋಂಗೆಹಸೆಗಳು(ಅಡಿಕೆಯ ಸೋಗೆಯನ್ನು ತಾತ್ಕಾಲಿಕವಾಗಿ ಸಂಗ್ರಹಿಸಿವು ಜಾಗ),ಅಲ್ಲಿಂದಿಲ್ಲಿಗೆ ಹೋಗಲು ಹಾಕಿದ್ದ ಅಡಿಕೆಯ ಮುಂಡಗಳು..
ಇಂತಿಪ್ಪ ತೋಟದಲ್ಲಿ ಅಚಾರಿಯ ಕಣ್ಣಿಗೆ ಅವತ್ತು ಯಾವ ಚಿಕ್ಕ ಮರವೂ ಬೀಳಲಿಲ್ಲ. . ದೊಡ್ಡ ಮರ ಹತ್ತಿ ಸಿಂಗಾರ ಕಡಿಯಲು ಅವನಿಗೆ ಹೆದರಿಕೆ..ಯಾವುದಾದರೂ ಬಿದ್ದ ಮರದಲ್ಲಿ ಸಿಂಗಾರ ವಿದ್ದೀತೇ ಎಂದು ಹುಡುಕುತ್ತಿದ್ದ ಆತ.. ದೊಡ್ಡ ಹಬ್ಬಕ್ಕೆ ಸಿಂಗಾರ ಅಂದರೆ ಅಡಿಕೆಯ ಹೂವು ಇಲ್ಲದೇ ಬಲಿವೇಂದ್ರನಿಗೆ ಕಳೆಯಿಲ್ಲ,ಹಾಂ ಆದರೆ ಈ ಸಿಂಗಾರ ಬೇಕೆಂದರೆ ಆ ಮರವನ್ನು ಕೊಲ್ಲಲೇ ಬೇಕು,,ಏಕೆಂದರೆ ಅದರ ತಲೆಯಲ್ಲಿಯೇ ಹೂವು ಇರುವುದು….
ಹೀಗೆ ಹುಡುಕುತ್ತಿದ್ದವನಿಗೆ ಒಂದು ಕಡೆ ಬಿದ್ದ ಮರ ಕಂಡಿತು,ಅವನ ಅದೃಷ್ಟಕ್ಕೆ ಸಿಂಗಾರವೂ ಅದರಲ್ಲಿತ್ತು..ಖುಷಿಯಿಂದ ಅದನ್ನು ಕಡಿದ ಆತ ,ಹಿಡಿದುಕೊಂಡು ಹುಣಸಿಗೆ ಕತ್ರಿಯ ಹಾದಿ ಹಿಡಿದ..
ಇತ್ತ ನಮ್ಮ ಶತಭಿಷನಿಗೇನೋ ಗಲಿಬಿಲಿ..ಅವನಿಗೆ ಇದು ತನ್ನ ಅಜ್ಜನಮನೆಗೆ ಸೇರಿದ ತೋಟವೆಂದು ಗೊತ್ತು..ಆದರೆ ಅವರಲ್ಲೇ ಹಿಸೆಯಾಗಿ (ಅವಿಭಕ್ತ ಕುಟುಂಬಗಳ ವಿಭಜನೆ) ಯಾವ ಪಾಲು ಯಾರದ್ದೆಂದು ತಿಳಿಯದ್ದಾಗಿತ್ತು..ತನ್ನ ಅಜ್ಜನದು ಯಾವ ಪಾಲೋ,ಚಿಕ್ಕಜ್ಜನದು ಯಾವ ಪಾಲೋ ತಿಳಿಯದಾಗಿತ್ತು..ಈ ಅಜ್ಜಂದಿರಿಬ್ಬಿರೂ ಈಗ ಹಾವು-ಮುಂಗುಸಿಯ ಥರ ಕಚ್ಚಾಡುತ್ತಿದ್ದುದೂ ಅವನಿಗೆ ತಿಳಿದಿತ್ತು.. ಇತ್ತ ಆಚಾರಿಯೋ ಇವನು ಮೊಬೈಲಿನಲ್ಲಿ ಸಿಗ್ನಲ್ಲು ಹುಡುಕುತ್ತಿರುವಾಗಲೇ ಸಿಂಗಾರ ತೆಗೆದುಕೊಂಡು “ ಬರ್ತೆ ಅಗಾ “ ಎಂದು ಹೇಳಿ ಹೊರಟು  ಹೋಗಿದ್ದ…ಏನು ಮಾಡುವುದೆಂದು ತಿಳಿಯದೇ ಬಿದ್ದ ಅಡಿಕೆ ಮರದ ಬಣ್ಣವನ್ನು (ನಿತ್ತುಗಟ್ಟಿನ ಅನುಕ್ರಮ ಸಂಖ್ಯೆ) ನೋಡುತ್ತಾ, “ಆರೆನೇ ಬಣ್ಣ” ಎಂದು ನೆನಪಿಟ್ಟುಕೊಂಡು ಮನೆಗೆ ಹಿಂದಿರುಗಿದ..
ಮರುದಿನ ಬೆಳಿಗ್ಗೆ ವಾಪಸ್ ತನ್ನ ಮನೆಗೆ ಹೊರಟಿದ್ದ ಶತಭಿಷ,ಬಸ್ಸು ಸ್ಟಾಪಿನ ತನಕ ತನ್ನನ್ನು ಕಳಿಸಿಕೊಡಲು ಬಂದ ಮಾವನ ಬಳಿ
“ಮಾವಾ ..ನಿಮ್ಮನೆದು ಕೆಳಗಿನ ಪಾಲು ಎಷ್ಟು ಬಣ್ಣ ???ಚಿಕ್ಕಜ್ಜಂದು ಎಲ್ಲಿಂದ ಶುರು ??”ಎಂದು ಕೇಳಿದ..
ಅದಕ್ಕೆ ಮಾವ..”ನಮ್ಮದು ಮೊದಲಿನ ಐದು ಬಣ್ಣ,ಆರನೇಯ ಬಣ್ಣದಿಂದ ಅವರದ್ದು” ಎಂದ.
ಅಷ್ಟರಲ್ಲೇ ಶತಭಿಷನಿಗೆ ಬೆವರಿಳಿಯತೊಡಗಿತ್ತು..ಇನ್ನು ಹುಣಸಿಗೆಯಲ್ಲಿ ಇವತ್ತು ಜಗಳ ಖಚಿತ..

“ನಿಮ್ಮ ಮನೆಗೆ ಬಂದ ಆಚಾರಿ ತನ್ನ ತೋಟದ ಸಿಂಗಾರವನ್ನು ತೆಗೆದುಕೊಂಡು ಹೋಗಿದ್ದಾನೆ ಎಂದು,ಇದಕ್ಕೆ ನಿನ್ನ 

ಕುಮ್ಮಕ್ಕೇ ಕಾರಣ “ಎಂದು ಚಿಕ್ಕಜ್ಜ ಅಜ್ಜನ ಮನೆ ಬಾಗಿಲಿಗೆ ಬರುತ್ತಾನೆ..ಏನೂ ಗೊತ್ತಿರದ ಅಜ್ಜ ತಪ್ಪೇ ಇಲ್ಲವೆಂದು 

ಕೂಗಾಡುತ್ತಾನೆ..ಆಮೇಲೆ ಶುರು ಹುಣಸಿಗೆ ಮಹಾಯುದ್ಧ ಎಂದು ಎಣಿಸುತ್ತಿರುವಾಗಲೇ,ಒಬ್ಬ ಸೈಕಲ್ ಹತ್ತಿರ ಬಂದು

 “ ದೊಡ್ಡ ಭಟ್ರು ಅರ್ಜಂಟ್ ಬರುಕ್ ಹೇಳ್ ಕಳ್ಸಾರೆಮ್,ಅಚ್ಚೆ ಕೇರಿ ಭಟ್ರ್ ಎಲ್ಲಾ ಬಂದಾರೆ,ಏನೋ ನಂಬರಕಟ್ಟು(ಜಗಳ) ಆಗದೆ” ಎಂದು ಮಾವನ ಹತ್ತಿರ ಹೇಳಿದ..ಅದಾಗಲೇ ಬಸ್ಸೂ ಬಂದಿದ್ದರಿಂದ  ಶತಭಿಷನೂ ಬಸ್ಸೇರಿದ…ಕೂತವಿನಿಗೆ ಯಾಕೋ ಆಚಾರಿಯ ಮಾತುಗಳು ಮತ್ತೆ ನೆನಪಾದವು…
 “ಇದು ನನ್ನ ಕಟ್ಟಿಗೆ,ಇದು ನನ್ನ ಪೀಠ..ಇದನ್ನು ನಾನೇ ಮಾಡುತ್ತಿರುವುದು ಅಂತಾ ಮಾಡುಕಾಗ..ಎಲ್ಲದೂ ದೇವರದ್ದು..ಅವನೇ ಮಾಡ್ಸ್ಕಂತಿಪ್ಪುದು…ಹೇಳಿ ಮಾಡ್ದ್ರೆ ಎಲ್ಲದೂ ಸರಿ ಆತ್”..” 
ಜೊತೆಯಲ್ಲಿ
“ದೇವರು ಕೊಟ್ಟ ಭೂಮಿ,ಅವನು ಕೊಟ್ಟ ತೋಟ,ಅವನು ಕೊಟ್ಟ ಸಿಂಗಾರ..ಅದು ಸಲ್ಲುವುದೂ ಅವನಿಗೇ…ಮತ್ಯಾಕೆ ಈ ಜಗಳ ????”ಎಂಬ ಸಾಲುಗಳೂ ಮೂಡಿದವು…..
(ಇದು ಒಂದು ಕಾಲ್ಪನಿಕ ಕಥೆ..ನನ್ನ ಕನಸಿನ ಕಾದಂಬರಿಯಲ್ಲಿ ಬರುವ ಒಂದು ಪುಟ್ಟ ಭಾಗ..ಏನೋ ಬರೆಯುವ ಪ್ರಯತ್ನ ಮಾಡಿದ್ದೇನೆ..ನಮ್ಮ ಕಡೆ ಬಳಸುವ ಪದಗಳನ್ನು ಉಪಯೋಗಿಸುವ  ಪ್ರಯತ್ನವೂ ಇದೆ, ಶಬ್ಧಗಳು ಅರ್ಥವಾಗದಿದ್ದರೆ ದಯವಿಟ್ಟು ಕೇಳಿ..
ತಪ್ಪುಗಳಿದ್ದರೆ ದಯವಿಟ್ಟು ಹೇಳಿ...ನಿಮ್ಮ ಅನಿಸಿಕೆಗಳನ್ನು ಹೇಳಿ,ತಪ್ಪು-ಒಪ್ಪನ್ನು ತಿಳಿಸಿ,ಪ್ರೋತ್ಸಾಹಿಸಿ..)
-ನಿಮ್ಮನೆ ಹುಡುಗ,
ಚಿನ್ಮಯ ಭಟ್ಟ

Monday, October 15, 2012

ಗಿರಿ-ಬಾಲೆಯ ದರ್ಶನ

"ಆಕಸ್ಮಿಕ","ಅದೃಷ್ಟ" ಅಂತೆಲ್ಲಾ ಹೇಳ್ತೀವಲ್ವಾ???ಅದ್ಕೆ ಒಂದು ಒಳ್ಳೆ ಉದಾಹರಣೆ ನಿನ್ನೆ ಸಿಕ್ತು. ..ಬೆಳಗಿಂದ ಪುಸ್ತಕ ಹಿಡಿದುಕೊಂಡು ಕೂತವನಿಗೆ ಸುಮನಕ್ಕ ದೇವಸ್ಥಾನಕ್ಕೆ ಹೋಗ್ತಿದೀನಿ ಅಂದಾಗ ನನಗೂ ದೇವರ ನೆನಪಾಯ್ತು..ಹಂಗೇ ಇಲ್ಲಿಯೇ ಪಿ.ಜಿಯ ಬದಿಯ ಹಿರೇಮಗಳೂರು ಕೋದಂಡರಾಮ ದೇವಸ್ಥಾನಕ್ಕೆ ಹೋದವನಿಗೆ ಗಿರೀಶ(ಗಿರಿ ಶಿಖರ ಬ್ಲಾಗ್) ಹಾಗೂ ಬಾಲು ಸರ್(ನಿಮ್ಮೊಳಗೊಬ್ಬ ಬಾಲು) ಸಿಕ್ಕಿದ್ರು..ಕೇವಲ ಬ್ಲಾಗಿನಲ್ಲಿ ಅವರ ಲೇಖನಗಳನ್ನು ಓದಿ ಅಭಿಮಾನಿಯಾಗಿದ್ದ ನನಗೆ ಅವರೊಂದಿಗೆ ಮುಖತಃ ಭೇಟಿಯಾಗಿ ಮಾತನಾಡುವ ಅದೃಷ್ಟ ಸಿಕ್ತು..ಹಂಗೆ ದೇವಸ್ಥಾನ ನೋಡಿಕೊಂಡು ಹೊರಡುವ ಮುನ್ನ ಬಾಲು ಸರ್ ಆತ್ಮೀಯತೆಯಿಂದ ಗಿರಿ ಪ್ರವಾಸಕ್ಕೆ ಕರೆದರು,ನಾನೂ ಗೋಣಲ್ಲಾಡಿಸಿ ಹೊರಟೆ..ಜೊತೆಗೆ ನಮ್ಮದೇ ಕಾಲೇಜಿನ ದರ್ಶನ್ ಕೂಡ ಸೇರಿದರು.. ಹೀಗೆ ಆಕಸ್ಮಿಕವಾಗಿ ಹೊರಟ ಪ್ರವಾಸ ನನ್ನ ಪಾಲಿಗೆ ಮರೆಯಲಾದದ್ದು...ಅಲ್ಲಿಯ ಗಿರಿ ಪರ್ವತಗಳನ್ನು ನೋಡಿ ಮನಸ್ಸಿಗನಿಸಿದ್ದಷ್ಟನ್ನು ಗೀಚಿದ್ದೇನೆ..ದಯವಿಟ್ಟು ಓದಿ ,ತಪ್ಪು-ಒಪ್ಪುಗಳನ್ನು ತಿಳಿಸಿ ಆಶೀರ್ವದಿಸಿ...



ಕರಿಹಸಿರು ಕೇಶರಾಶಿಯ ಬಿಟ್ಟು,
ಗಿಳಿಹಸಿರು ಕುಪ್ಪಸವ ತೊಟ್ಟು
ಬಿಳಿಮೋಡದ ಸೆರಗನು ಹೊದೆದು
ನಿಂತಿದ್ದಳಾಕೆ ನಮಗಾಗಿ ಕಾದು

ಮೋಡದಡಿಯಲಿ ನಮ್ಮನು ನೂಕಿ,
ಆಡಿಸಿದಳು ಹರುಷದುಯ್ಯಾಲೆಯನು ಜೀಕಿ,
ಬೀಳಿಸಿದಳು ಕ್ಯಾಮರವ ಹಳೆಹೋಳಿಯಲಿ
ಬೀಸಿದಳು ಚಾಮರವ ತಂಗಾಳಿಯಲಿ

ಅಲ್ಲಿತ್ತು ಹಸಿರು ಮೆತ್ತಿದ ಕಲ್ಲಿನ ಕೇಕು
ಜೊತೆಗಿತ್ತು ಹಸಿರಿನ ಹೂಗಳ ತಳಕು
ಕಂಡಿರಲು ಸುತ್ತಲೂ ಹಸಿರಿನ ಸಾಲುಗಳು
ಮೂಡಿತು ಮೆತ್ತಗೆ ಶಬ್ಧವಿರದ ಸಾಲುಗಳು.

( ಇಲ್ಲಿ ಜೀಕುವುದು ಎಂದರೆ ತೂಗುವುದು ಎಂದರ್ಥ,
ಹೋಳಿ ಎಂದರೆ ನಮ್ಮ ಕಡೆ ತುಂಟತನಕ್ಕೆ ಬಳಸುವ ಪದ)

ಧನ್ಯವಾದ ಗಿರೀಶ್,ಬಾಲು ಸರ್ ಹಾಗೂ ದರ್ಶನ್.......

-ನಿಮ್ಮನೆ ಹುಡುಗ

Friday, October 5, 2012

ಮೂಡುತಿದೆ ಮಿರಿಮಿಂಚು…..

ನಿನ್ನೆ ನಿಸಾರ್ ಅಹ್ಮದರ "ನಿತ್ಯೋತ್ಸವ 'ತಂದು ಓದುತ್ತಾ ಕೂತೆ.. ಅವರು ಶಬ್ದಗಳನ್ನು ಬಳಸುವ ರೀತಿ ಹಾಗೂ ಭಾವವನ್ನು ಅಭಿವ್ಯಕ್ತಪಡಿಸುವ ರೀತಿ ತುಂಬಾ ಇಷ್ಟವಾಯ್ತು.. .ಹಾಗೇಯೆ ಮಡಚಿಟ್ಟವನಿಗೆ ,ನನಗೂ ಏನಾದರೂ ಬರಿಯಬೇಕು ಎಂದೆನಿಸಿತು...ಆಗಷ್ಟೇ ಮಳೆ ಬಿಟ್ಟಿತ್ತು...ನನ್ನ ಮನಸ್ಸಿನಲ್ಲಿ ಹಲವಾರು ದಿನದಿಂದ ಹೊಯ್ದಾಡುತ್ತಿದ್ದ ಗೊಂದಲಗಳ  ಪರಿಹಾರಕ್ಕೊಂದು ದಾರಿ ಹೊಳೆದಿತ್ತು.ಅವೆರಡನ್ನೂ ಸೇರಿಸಿ ಬರೆಯುವ ಪ್ರಯತ್ನ ಇದು...ಇದನ್ನು  ಮಳೆ ನಿಂತು ಹೋದ ಮೇಲಿನ ವಾತವರಣವೆಂದಾದರೂ ತಿಳಿದುಕೊಳ್ಳಿ ಅಥವಾ ಮನದ ಗೊಂದಲಗಳು ಕಳೆದು,ಹೊಸ ದಾರಿ ಸಿಕ್ಕ ಸ್ಥಿತಿಯ ಸಾಲುಗಳು ಎಂದಾದರು ತಿಳಿದುಕೊಳ್ಳಿ....


ಮೂಡುತಿದೆ ಮಿರಿಮಿಂಚು ಬಾಂದಣದ ಅಂಚಿನಲಿ
ತಾಡಿಸುತಿದೆ ಹೊಸಕನಸು ಮಳೆಬಿಲ್ಲ ಕುಂಚದಲಿ||

ಕೊಚ್ಚಿಹೋಯಿತು ಕೊಳೆಯು ಜಡಿದಿದ್ದ ಸುರಿಮಳೆಗೆ,
ಚೊಕ್ಕವಾಯಿತು ಇಳೆಯು ನೆಗಸಿನಾ ಸುಳಿಗಳಿಗೆ.
ಬಿರುಕೆಲ್ಲಾ ಸೇರುತಿದೆ,ನನಕಾರ ಕರಗುತಿದೆ,
ಸಮತೆಯಾ ಬಯಲೀಗ ಕೈಬೀಸಿ ಕರೆಯುತಿದೆ.

ಚಾಮರವಾ ಬೀಸುತಿದೆ ಮಿಂದೆದ್ದ ಹಳೆಮರವು,
ಹಾನವನು ಸುಳಿದಿರಲು ಕೆನ್ನೀರ ಹೊಸಹರಿವು.
ಮೊಳೆಯುತಿದೆ ಚಿಗುರೊಂದು ಮಲಗಿದ್ದ ಮಣ್ಣಿನಲಿ,
ಕಾಣುತಿದೆ ಕೋಲ್ಮಿಂಚು ಕಂದಿದಾ ಕಣ್ಣಿನಲಿ.

(ಇದರಲ್ಲಿ ನಮ್ಮ ಮನೆಯ ಕಡೆ ಬಳಸುವ ಶಬ್ದವನ್ನು ಬಳಸುವ ಪ್ರಯತ್ನ ಮಾಡಿದ್ದೇನೆ,ನೋಡಿ..
ನೆಗಸು=ಜೋರಾದ ಮಳೆಯಿಂದ ಹೊಳೆಯ ನೀರಿನಲ್ಲಿ ಉಂಟಾಗುವ ಉಬ್ಬರ
ಹಾನ=ದ್ರಷ್ಟಿ ತೆಗೆಯುವ ಒಂದು ಬಗೆ  )
,ದಯವಿಟ್ಟು ಓದಿ ,,,ತಪ್ಪು ಒಪ್ಪುಗಳನ್ನು ತಿಳಿಸಿ, ನನ್ನನ್ನು ಬೆಳೆಸಿ
-ನಿಮ್ಮನೆ ಹುಡುಗ

Saturday, September 22, 2012

ಊರುಗೋಲಾಗಿರಿ ಗೆಳೆಯರೆ…



ಆತನ ಹೆಸರು ಕರಣ್.ಒಳ್ಳೆಯ ಮಿಮಿಕ್ರಿ ಪ್ರತಿಭೆ.ಕಾಲೇಜಿನ ಕ್ಯಾಂಟೀನಿನಲ್ಲಿ ಒನ್ ಬೈ ತ್ರೀ ಕೋಕೋಕೋಲಾ  ಕುಡಿಯುತ್ತಾ ಗುಂಪಾಗಿ ಕುಳಿತ ಸ್ನೇಹಿತರ ನಡುವೆ ಬೇರೆ ಬೇರೆ ಕಲಾವಿದರ ಅನುಕರಣೆಯನ್ನು ಮಾಡುತ್ತಾ ಅವರಲ್ಲಿ ನಗೆಬುಗ್ಗೆಯನ್ನು ಚಿಮ್ಮಿಸುವ ಹುಡುಗ.ಆದರೆ ಅವನ ಈ ಕಲೆ ಕ್ಯಾಂಟಿನಿಗಷ್ಟೇ  ಸೀಮಿತ.ವೇದಿಕೆಯ ಮೇಲೆ ಮಿಮಿಕ್ರಿ ಮಾಡೋಕೆ ಅವನಿಗೇನೋ ಹಿಂಜರಿಕೆ.ಅದಕ್ಕೆ ಅವನೇ ಕೊಡುವ ಕಾರಣ “ಈ ನನ್ ಮಕ್ಳೆಲ್ಲಾ ಆಡ್ಕೊಂಡ್ ನಗ್ತಾರೆ ಆಮೇಲೆ”.ತನ್ನ ಗೆಳೆಯರು ತನ್ನನ್ನು ಹೀಯಾಳಿಸಬಹುದು,ತಾನೊಂದು ಹಾಸ್ಯಕ್ಕೆ ವಸ್ತುವಾಗುತ್ತೇನೇನೋ ಎಂಬುದೇ ಆತನ ಹಿಂಜರಿಕೆಗೆ ಕಾರಣ.ಇನ್ನು ಆಕೆಯ ಹೆಸರು ರಿಯಾ .ವಾರಕ್ಕೆರಡು ಚುಟುಕುಗಳನ್ನು ಪ್ರೀತಿಯ ಮೇಲೆ ರಚಿಸಿ,ಕೆಲ ಗೆಳತಿಯರಿಗೆ ಮೆಸ್ಸೇಜಿಸುತ್ತಾಳೆ.ಆಗೊಮ್ಮೆ ಈಗೊಮ್ಮೆ ಬರೆದ ಪ್ರೇಮ ಕವಿತೆಗಳನ್ನು ಆಪ್ತರಿಗೆ ತೋರಿಸುವುದೂ ಉಂಟು.ಆದರೆ ಅವನ್ನೆಲ್ಲಾ ಹೊರಜಗತ್ತಿಗೆ ತೋರಿಸಲು ಅವಳಿಗೇನೋ ಮುಜುಗರ.ಕಲ್ಪನೆಯಲ್ಲಿ ಬರೆದ ಸಾಲುಗಳಿಗೆ ಉಳಿದವರು ಹೊಸ ಅರ್ಥ ಕಲ್ಪಿಸುತ್ತಾರೇನೋ ,ಯಾರೇ  ಆ ಹುಡುಗ?ಎಲ್ಲಿದ್ದಾನೆ?ಎನ್ ಕಥೆ? ಎನ್ನುವ ಪ್ರಶ್ನೆಗಳಿಗೆ ತಾನು ಆಹಾರವಾದೀನೇನೋ ಎಂಬ ಆತಂಕ.ಇದೇ ಆತಂಕ ಅವಳ ಕವಿತೆಗಳನ್ನು ,ಆಕೆಯ ದಿನಚರಿಯಲ್ಲಷ್ಟೇ ಇರುವಂತೆ ಮಾಡಿದೆ.ಇಂತಹ ಉದಾಹರಣೆಗಳು ಹುಡುಕುತ್ತಾ ಹೋದರೆ ಹಲವಾರು ಸಿಗಬಹುದು,ಈ ಲೇಖನವನ್ನು ಓದುತ್ತಿರುವ ನಿಮ್ಮ ಕಥೆಯೂ ಆಗಿರಬಹುದು.ಆದರೆ ಇದರ ಪರಿಣಾಮ??
“ಬೆಳೆಯುವ ಸಿರಿ ಮೊಳಕೆಯಲ್ಲಿ”ಎಂಬಂತೆ ಸಾಮಾನ್ಯವಾಗಿ ಪ್ರತಿಯೊಬ್ಬರ ಕೌಶಲ್ಯಗಳು ,ಅವರಲ್ಲಿರುವ ವಿಶೇಷತೆಗಳು ಅನಾವರಣಗೊಳ್ಳುವುದು ಪ್ರೌಢಶಾಲೆ ಹಾಗೂ ಕಾಲೇಜು ದಿನಗಳಲ್ಲಿ.ಇವರ ವ್ಯಕ್ತಿತ್ವಕ್ಕೊಂದು ಗಟ್ಟಿಯಾದ ಅಡಿಪಾಯ ಸಿಗುವುದೂ ಸಹ ಈ ದಿನಗಳಲ್ಲೇ.ಆ ಕಾಲಘಟ್ಟದಲ್ಲಿಯೇ ಅವರಿಗೆ ತಮ್ಮ ನೆಚ್ಚಿನ ಕ್ಷೇತ್ರದ ಬಗ್ಗೆ ಅರಿವಾಗತೊಡಗುತ್ತದೆ.ತನಗೆ ಯಾವ ಕೆಲಸದ ಮೇಲೆ ಆಸಕ್ತಿ ಇದೆ ಎಂಬುದು ಗೊತ್ತಾಗತೊಡಗುತ್ತದೆ.ಇದೇ ಆಸಕ್ತಿ,ಕುತೂಹಲವಾಗಿ ಕೊನೆಗೊಂದು ದಿನ ಹವ್ಯಾಸವಾಗುತ್ತದೆ.ತಮ್ಮ ನೆಚ್ಚಿನ ಹವ್ಯಾಸಗಳಿಂದ ಅವರಿಗೇನೋ ಹೇಳಿಕೊಳ್ಳಲಾಗದ ಸಂತೋಷ ಸಿಗಲಾರಂಭಿಸುತ್ತದೆ.ಸಂತೋಷದ ಜೊತೆಗೆ ಅವರಲ್ಲಿ ಹೊಸ ಕನಸುಗಳು ಚಿಗುರೊಡೆಯುತ್ತಿರುತ್ತವೆ,ಸ್ರಜನಶೀಲ ಚಿಂತನೆಗಳು ಮೂಡತೊಡಗುತ್ತವೆ,ದುರದ್ರಷ್ಟವಶಾತ್ ಇದರ ಜೊತೆಗೆ ಒಂದಿಷ್ಟು ಆತಂಕ,ಹೆದರಿಕೆ,ಹಿಂಜರಿತಗಳೂ ಶುರುವಾಗುತ್ತವೆ.ತತ್ ಪರಿಣಾಮವಾಗಿ ಅವರ ಪ್ರತಿಭಾ ಪ್ರದರ್ಶನ,ಕೌಶಲ್ಯದ ಅನಾವರಣ ನಿರ್ದಿಷ್ಟ ಪರಿಧಿಗೆ ಸೀಮಿತವಾಗತೊಡಗುವ ಸಾಧ್ಯತೆ ಹೆಚ್ಚು.ಯಾವುದೋ  ಹೆದರಿಕೆಯಿಂದ ಪ್ರತಿಭಾವಂತರು ತಮ್ಮದೇ ಆದ ಸುಖವರ್ತುಲದೊಳಗೆ ಮಾತ್ರ ತಮ್ಮೊಳಗಿನ ವಿಶೇಷತೆಯನ್ನು ತೋರಿಸಿಕೊಳ್ಳುವ ಸಂಭವವೂ ಉಂಟು.ಇದು ಹೀಗೆ ಮುಂದುವರೆದಲ್ಲಿ ಮುಂದೊಮ್ಮೆ ಆ ವರ್ತುಲದಲ್ಲಿ ಆ ವ್ಯಕ್ತಿಯೊಬ್ಬರೇ ಮೂಕಪ್ರೇಕ್ಷಕರಾಗಿ ಕುಳಿತುಬಿಡುತ್ತಾರೆ.ತನ್ನಲ್ಲಿರುವ ಕಲೆಯ ಬಗ್ಗೆ ತನಗೇ ದ್ವೇಷ ಹುಟ್ಟುವಂತೆ ಮಾಡಿಕೊಳ್ಳುತ್ತಾರೆ.ಅಲ್ಲಿಗೆ ಅವರ ಸ್ರಜನಶೀಲತೆಗೊಂದು ಕಡಿವಾಣ ಬೀಳುತ್ತದೆ.ಹಾಗಾದರೆ ಅವರು ಎಡವಿದ್ದಾದರೂ ಎಲ್ಲಿ?ಒಬ್ಬ ವ್ಯಕ್ತಿ ತನ್ನನ್ನು ತಾನು ಹೊರಜಗತ್ತಿಗೆ ತೆರೆದುಕೊಳ್ಳದೇ,ತನ್ನನ್ನು ತಾನು ಅಳೆದುಕೊಳ್ಳಲು ಹೇಗೆ ಸಾಧ್ಯ?ಅದರಿಂದ ಅವನ ಕೌಶಲ್ಯದ ಬೆಳವಣಿಗೆಯಾದರೂ ಹೇಗಾದೀತು?ಪರಸ್ಪರ ವಿಚಾರ ವಿನಿಮಯಗಳಿಂದ, ಸೂಕ್ತ ಅಭ್ಯಾಸದಿಂದ, ತಪ್ಪು-ಒಪ್ಪುಗಳ ವಿಮರ್ಶೆಯಿಂದಲ್ಲವೇ ಯಾವುದೇ ಕಲೆಯಾದರೂ ವ್ಯಕ್ತಿಯೊಬ್ಬನ ಕೈ ಹಿಡಿಯುವುದು?ಅದಕ್ಕೆ ಮೊದಲ ಮೆಟ್ಟಿಲೇ ಕಾಲೇಜು ದಿನಗಳು.
ನಿಜ,ಕಾಲೇಜಿನಲ್ಲಿಯೇ ಅವರ ಸಾಧನೆಗೆ ಸ್ಪೂರ್ತಿ ಸಿಗಬೇಕು,ಅದಕ್ಕೊಂದು ಸೂಕ್ತ ವೇದಿಕೆ ಬೇಕು.ಅದಕ್ಕಿಂತ ಜಾಸ್ತಿಯಾಗಿ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಳ್ಳಬೇಕು.ನಾನು ಮೇಲೆ ಹೇಳೆದ ಎರಡೂ ಪ್ರಸಂಗಗಳಲ್ಲಿ ಕರಣ್ ಹಾಗೂ ರಿಯಾರಿಗೆ ಅವಕಾಶದ ಕೊರತೆಯಿಲ್ಲ,ಆದರೆ ಭಯ,ನಾಚಿಕೆ ಅವರನ್ನು ಹೊರ ಜಗತ್ತಿಗೆ ತಮ್ಮನ್ನು ತೆರೆದುಕೊಳ್ಳದಂತೆ ಹಿಮ್ಮೆಟ್ಟಿಸುತ್ತಿದೆ.ಈ ಭಯವನ್ನು ಎರಡು ರೀತಿಯಲ್ಲಿ ಸ್ಥೂಲವಾಗಿ ವಿಂಗಡಿಸುತ್ತೇನೆ.ಒಂದು ಅಪರಿಚಿತರಿಂದಾಗುವ ಭಯ.ಇದು ಅವರು ಯಾರು,ಏನು ಎತ್ತ ಎಂದು ಗೊತ್ತಿಲ್ಲದಿದ್ದರೂ,ಅವರ ಪ್ರತಿಕ್ರೀಯೆಗಳಿಂದ  ನಮಗಾಗುವ ಭಯ.ಉದಾಹರಣೆಗೆ ವೇದಿಕೆಯ ಮೇಲೆ ಹೋದಾಗ “ಹೋ ಹೋ ….” ಎಂದು ಕಿರಿಚುವುದು,ಕವನಗಳನ್ನು ಓದಿ ಅಪಹಾಸ್ಯದ ನಗೆಯಾಡುವುದು,ಚಿತ್ರ ಕಲೆಯನ್ನು ಅಸಡ್ಡೆಯಿಂದ ನೋಡುವುದು ಇತ್ಯಾದಿ.ಇದರಿಂದ ಕಲಾವಿದನಲ್ಲಿ ಹಿಂಜರಿಕೆ ಜಾಸ್ತಿಯಾಗತೊಡಗುತ್ತದೆ,ತಾನು ನಗಣ್ಯ ಎನ್ನುವ ಭಾವ ಜಾಸ್ತಿಯಾಗುತ್ತದೆ.ಇದನ್ನು ಸರಿಯಾದ ತಿಳುವಳಿಕೆಯನ್ನು ಕೊಡುವುದರ ಮೂಲಕ ಹೋಗಲಾಡಿಸುವ ಪ್ರಯತ್ನ ಮಾಡಬಹುದು,ಹಿರಿಯರ ಮಾರ್ಗದರ್ಶನದಲ್ಲಿ ಈ ಭಯವನ್ನು ಮೆಟ್ಟಿ ನಿಲ್ಲುವುದು ಕಷ್ಟವೇನಲ್ಲ.”ಯಾರು ಏನಂದ್ರೇನು?ನಿನಗೆ ಇಷ್ಟವಾದ್ರೆ ಸಾಕು ,ನಾಳೆ ಅವರು ಬರ್ತಾರಾ?”ಎನ್ನುವ ಮಾತುಗಳೂ ಸ್ಪೂರ್ತಿ ಕೊಡಬಹುದು.ಆದರೆ ಎರಡನೇ ಭಯವು ವಿಚಿತ್ರವಾದದ್ದು  ವಿಚಿತ್ರವಾದದ್ದು.ಅದು ಪರಿಚಿತರ ಭಯ,ಅಂದರೆ “ನನ್ನ ಸ್ನೇಹಿತರು ಏನೆಂದುಕೊಳ್ಳುತ್ತಾರೋ?ಮನೆಯವರಿಗೆ ಏನೆನ್ನಿಸುವುದೋ?ನಾಳೆ ಅವರೆಲ್ಲಾ ಸೇರಿ ನನ್ನನ್ನು ಹೀಯಾಳಿಸಿದರೆ?..ಇದರಿಂದ ನನಗೆ ಅವಮಾನವಾದಂತಲ್ಲವೇ??...ಛೇ ಛೇ..ಹೀಗಾಗುವುದು ಬೇಡ” ಮುಂತಾದ ಯೋಚನೆಗಳು.ಗೆಳೆಯರಲ್ಲಿ ತನಗಿರುವ ಗೌರವವೆಲ್ಲಿ ಕಡಿಮೆಯಾದೀತೋ ಎಂಬ ಆತಂಕ.ಇದನ್ನು ಯಾರಿಗೂ ಹೇಳಲಾರದೇ ,ತಮ್ಮೊಳಗೇ ಅದುಮಿಟ್ಟುಕೊಳ್ಳುತ್ತಾ ,ಕೆಲವೊಮ್ಮೆ ಹತಾಶರಾಗುತ್ತಾ ,ಮೂಕವೇದನೆ ಅನುಭವಿಸುತ್ತಾರೆ..ಹಾಗಾದರೆ ಇದಕ್ಕೆಲ್ಲಾ ಕಾರಣಕರ್ತರು ಯಾರು??
ಸ್ನೇಹಿತರೇ?? ಹೌದು.ಅವರಲ್ಲಿ ಈ ತರಹದ ಯೋಚನೆಗಳು ಬರಲು ಸ್ನೇಹವೂ ಕಾರಣವಿರಬಹುದು.ನಿಮ್ಮನ್ನು ನಗಿಸುವ,ಖುಷಿಪಡಿಸುವ ಸ್ನೇಹಿತರು,ಆತ್ಮೀಯರು ಈ ತರಹದ ಸ್ನೇಹದ ಸಲುವಾಗಿಯೇ ವೇದನೆ ಅನುಭವಿಸುತ್ತಿದ್ದರೆ,ಅದೆಂತಹ ಸ್ನೇಹ ನೀವೇ ಯೋಚಿಸಿ?ಇದರಲ್ಲಿ ನಿಮ್ಮೆದುರು ನಗುತ್ತಲೇ ಇರುವ  ಕಲಾಕಾರರು ಇರಬಹುದಲ್ಲವೇ?ಅವರ ಮನವನ್ನೊಮ್ಮೆ ಮೇಲೆ ಹೇಳಿದ ದ್ರಷ್ಟಿಕೋನದಿಂದ ಅವಲೋಕಿಸಿ,ಅವರ ನೋವನ್ನು ತಿಳಿದು ಕೊಳ್ಳುವ ಪ್ರಯತ್ನ ಮಾಡಿ…….
ಹಾಗಾದ್ರೆ ಒಳ್ಳೆಯ ಸ್ನೇಹಿತರಾಗಿ ಒಬ್ಬ ಸ್ನೇಹಿತನ ಪ್ರತಿಭೆಗೆ ಸ್ಪೂರ್ತಿ ತುಂಬಲು ಕಾಲೇಜು ದಿನಗಳಲ್ಲಿ ಏನೇನು ಮಾಡಬಹುದು?? ನನಗೆ ತೋಚಿದ್ದನ್ನು ಬರೆದಿದ್ದೇನೆ ನೋಡಿ.
೧) ಗೆಳೆಯರ ಪ್ರತಿಭೆಯನ್ನು ಗುರುತಿಸಿ ಅವರಿಗೆ ಮನವರಿಕೆ ಮಾಡಿಕೊಡಿ.
ಎಷ್ಟೋ ಜನರಿಗೆ ಅವರ ಬಗ್ಗೆಯೇ ಅವರಿಗೆ ಗೊತ್ತಿರುವುದಿಲ್ಲ.ಅಂಥವರಲ್ಲಿನ ಕಲೆಯನ್ನು ಗುರುತಿಸಿ,ಅವರಿಗೆ ಅವರ ಬಗ್ಗೆ,ಅವರಲ್ಲಿನ ವಿಶೇಷತೆಯಯನ್ನು ಗುರುತಿಸಿಕೊಳ್ಳುವ ಬಗ್ಗೆ ವಿವರಿಸಿ.
೨)ವೇದಿಕೆ ಹತ್ತಲು ಪ್ರೇರೇಪಿಸಿ.
ನಿಮ್ಮ ನಿಮ್ಮ ನಡುವೆಯೇ ಸುಪ್ತವಾಗಿರುವ ಕಲೆಯನ್ನು  ವೇದಿಕೆಯ ಮೇಲೆ ಪ್ರದರ್ಶಿಸಲು ಗೆಳೆಯರನ್ನು ಉತ್ತೇಜಿಸಿ.ಇದರಿಂದ ಅವರಿಗೆ ಕಲಿಕೆಯ ಹೊಸ ಮಾರ್ಗ ಕಾಣಿಸುತ್ತದೆ,ತಮ್ಮನ್ನು ತಾವು ತಿದ್ದಿಕೊಳ್ಳಲು ಸಹಾಯಕವಾಗುತ್ತದೆ.
೩)ತಪ್ಪುಗಳಾದಾಗ ಸಂತೈಸಿ,ಅವರನ್ನು ಮತ್ತೆ ಪ್ರಯತ್ನಿಸುವಂತೆ ಉತ್ತೇಜಿಸಿ.
ಹೊಸದಾಗಿ ನಡೆಯಲು ಕಲಿತ ಮಗು ಬೀಳುವುದು ಸಹಜ,ಇದೇ ತರಹ ಆರಂಭಿಕ ಹಂತದಲ್ಲಿ  ತಪ್ಪುಗಳಾಗುವುದು ಸಾಮಾನ್ಯ,ಅವರ ತಪ್ಪುಗಳನ್ನು ಅವರಿಗೆ ಮನವರಿಕೆ ಮಾಡಿ ಕೊಡಿ,ಬದಲಿಗೆ ಅವರನ್ನು ಗೇಲಿಮಾಡಿ,ನಿರುತ್ಸಾಹಗೊಳಿಸಬೇಡಿ.ತಪ್ಪುಗಳನ್ನು ತಿದ್ದಿಕೊಂಡು ಮತ್ತೆ ಪ್ರಯತ್ನಿಸುವಂತೆ ಉತ್ತೇಜಿಸಿ
೪) ನಿಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಸಿ.
ಸಾಮಾನ್ಯವಾಗಿ ಕಾಲೇಜಿನಲ್ಲಿ ನಮ್ಮ ಮೊದಲ ವಿಮರ್ಶಕರು ನಮ್ಮ ಸ್ನೇಹಿತರೇ .ನಿಮ್ಮ ಗೆಳೆಯರ ಪ್ರದರ್ಶನದ ಬಗ್ಗೆ ನಿಮಗೆ ಅನಿಸಿದ್ದನ್ನು ಸ್ಪಷ್ಟವಾಗಿ,ಸರಲವಾಗಿ ಹೇಳಿ.ಅವರಿಗೆ ಬೇಜಾರಾಗುವುದೆಂದೋ  ಅಥವಾ ಅವರಿಗೆ ತಮ್ಮ ಬಗ್ಗೆ ಕೆಟ್ಟ ಅಭಿಪ್ರಾಯ ಬರುವುದೆಂದೋ ಯೋಚಿಸಬೇಡಿ,ಗೆಳೆಯರ ತಪ್ಪುಗಳನ್ನು ಹೇಳಿ ಅವರು ಅದನ್ನು ತಿದ್ದಿಕೊಳ್ಳುವಂತೆ ಮಾಡುವವರೇ ನಿಜವಾದ ಸ್ನೇಹಿತರು.
೫)ಕೈಲಾದಷ್ಟು ಸಂಪರ್ಕಗಳನ್ನು,ಸಂಪಸ್ಮೂಲಗಳನ್ನು ಒದಗಿಸಿಕೊಡಿ…
ನಿಮ್ಮ ಕೈಲಾದಷ್ಟು ಸಂಪನ್ಮೂಲಗಳನ್ನು ನಿಮ್ಮ ಗೆಳೆಯರಿಗೆ ಒದಗಿಸಿ ಕೊಡಿ.ಅದು ನಿಮ್ಮ ಸ್ನೇಹಿತನಿಗೆ ನಿಮ್ಮ ರೂಮಿನಲ್ಲಿ ಅಭ್ಯಾಸಕ್ಕೆ ಜಾಗ ಒದಗಿಸುವುದರಿಂದ ಹಿಡಿದು,ಬೆಲೆಬಾಳುವ ಪರಿಕರಗಳನ್ನು ತಂದುಕೊಡುವವರೆಗೂ ಇರಬಹುದು.ಇನ್ನು ನಿಮಗೆ ಪರಿಚಯವಿದ್ದ ಸಮಾನ  ಮನಸ್ಕರನ್ನು ಪರಸ್ಪರ ಪರಿಚಯ ಮಾಡಿಸಿ,ಉದಾಹರಣೆಗೆ ನಿಮ್ಮ ಪ್ರೌಢಶಾಲೆಯ ಮಿತ್ರರೊಬ್ಬರು ಸಂಗೀತ ಸಾಧನೆಯಲ್ಲಿ ತೊಡಗಿದ್ದು,ಕಾಲೇಜಿನ ಮಿತ್ರರೊಬ್ಬರಿಗೂ ಅದೇ ಆಸಕ್ತಿ ಇದ್ದರೆ ಪರಸ್ಪರ ಅವರನ್ನು ಪರಿಚಯಿಸಿ.ಇದರಿಂದ ವಿಚಾರಗಳು ವಿನಿಮಯವಾಗಿ ಇಬ್ಬರು ಸ್ನೇಹಿತರಿಗೂ ಒಳ್ಳೆಯದಾಗುತ್ತದೆ.ಹಾಗೆಯೇ ನಿಮ್ಮ ಸಂಬಂಧಿಕರಲ್ಲಿ ಸಂಗೀತದ ಗುರುಗಳಿದ್ದರೆ,ಅವರ ಬಳಿಯೂ ಕರೆದೊಯ್ಯಿರಿ,ಇದರಿಂದ ವಿಪುಲವಾದ ವಿಚಾರಗಳು ದಕ್ಕಿ,ನಿಮ್ಮ ಸ್ನೇಹಿರಿಗೆ ಸಂಶಯಗಳನ್ನು ಪರಿಹರಿಸಿಕೊಳ್ಳಲೂ ಸಹಾಯಕವಾದೀತು,

ಕೊನೆಯದಾಗಿ ಒಂದು ಮಾತು,ಪ್ರತಿಭೆ ಎನ್ನುವುದು ದೈವದತ್ತವಾಗಿ ಬಂದ ಉಡುಗೊರೆ.ಸತತ ಅಭ್ಯಾಸದಿಂದ ಅದನ್ನು ಅರಗಿಸಿಕೊಂಡು ಸಾಧನೆಯನ್ನು ಮಾಡಲು ಸಾಧ್ಯ,ಇಂತಹ  ಒಂದು ಸಾಧನೆಯ ಹಾದಿಯಲ್ಲಿ ಕಾಲೇಜು ಪ್ರಮುಖ ಪಾತ್ರ ವಹಿಸುತ್ತದೆ,ಕಾಲೇಜಿನಲ್ಲಿ ಸ್ನೇಹಕ್ಕೆ ಅಮೂಲ್ಯವಾದ ಸ್ಥಾನವಿದೆ.ಈ ಸ್ನೇಹ ಅವರ ಸಾಧನೆಗೆ ಮುಳ್ಳಾಗದೇ,ಅವರ ಯಶಸ್ಸಿನ ಪ್ರಯಾಣಕ್ಕೆ ಊರುಗೋಲಾಗಲಿ ಎಂದು ಆಶಿಸುತ್ತೇನೆ.
ಪ್ರತಿಯೊಬ್ಬರೂ ಅವರಲ್ಲಿರುವ ಕಲೆ,ಕೌಶಲ್ಯಗಳನ್ನು ಮುಕ್ತವಾಗಿ ಪ್ರಕಟಿಸಿ ಅದರಲ್ಲೇ ಪಳಗಿ,ಜಗತ್ತನ್ನು ಸಾಂಸ್ಕ್ರತಿಕವಾಗಿ ಬೆಳಗಲಿ ಎನ್ನುವ ಸುಂದರ ಕನಸನ್ನು ಹೊತ್ತು,
ಸ್ನೇಹ ಪೂರ್ವಕವಾಗಿ,
ನಿಮ್ಮನೆ ಹುಡುಗ
ಚಿನ್ಮಯ ಭಟ್