ಮಲೆನಾಡಿನ
ಮಣ್ಣನ್ನು ಮೈ ತುಂಬಾ ಮೆತ್ತಿಕೊಂಡ,ಕೆಂಪು ಹಳದಿ ಬಣ್ಣದ ಬಸ್ಸು ಕುಲಕಾಡುತ್ತಾ ಬಂದು ” ಕುಯ್ ಕುಯ್ಯ್….” ಎಂದು ನಿಂತಿತು.ಬಸ್ಸಿನ ಬಾಗಿಲಿನಲ್ಲಿ
ನಿಂತಿದ್ದವರು ಇಳಿದು,ಇಳಿಯುವವರಿಗೆ ದಾರಿ ಮಾಡಿ ಕೊಟ್ಟು ,ಮತ್ತೆ ಅದನ್ನೇ ಹತ್ತಿ ಹೊರಟು ಹೋದರು.ಸುಮಾರು
ಒಂದು ಗಂಟೆಯ ಜನಜಂಗುಳಿಯ ಕಚಪಚ ಸದ್ದುಗಳನ್ನು ಕೇಳಿಸಿಕೊಂಡ ಕಿವಿಗಳಿಗೀಗ ನೀರವ ಮೌನದ ಸ್ವಾಗತ.ಮರಕುಟಿಗವೊಂದು
ಕುಟ್ ಕುಟ್ ಎಂದು ಸದ್ದು ಮಾಡಿದಾಗಲೇ ಯಾವುದೋ ಲೋಕದಲ್ಲಿದ್ದ ಕಾಂತಕ್ಕೋರಿಗೆ ಎಚ್ಚರವಾಗಿದ್ದು.ಡಾಂಬರು
ರಸ್ತೆ ದಾಟಿ ಬದಿಯ ಮಣ್ಣು ರಸ್ತೆಯನ್ನು ಹಿಡಿದು ಹೊರಟ ಅವರ ಕಣ್ಣುಗಳಿಗೆ ಬರಬರುತ್ತಾ ಎಲ್ಲವೂ ಮಸುಕು
ಮಸುಕಾಗಿ ಕಾಣುತ್ತಿತ್ತು.ಇದೇನಿದು ಕನ್ನಡಕ ಹಾಕಿಕೊಂಡಿಲ್ಲವೇ ಎಂದು ಕಣ್ಣು ಮುಟ್ಟಿಕೊಳ್ಳುವಷ್ಟರಲ್ಲೇ
,ರೆಪ್ಪೆಯನ್ನು ದಾಟಿ ಬಂದ ಅಶ್ರುಬಿಂದುಗಳು ಅವರ ನೆರಿಗೆ ಬಿದ್ದ ಕೆನ್ನೆಯನ್ನು ತಂಪಾಗಿಸಿತ್ತು,ಅದೊಂದು
ವಿಚಿತ್ರ ಅನುಭವ.ಮೂವತ್ತು ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಇಂದು ನಿವ್ರತ್ತಿಯಾಗುತ್ತಿರುವ ಸಾರ್ಥಕತೆಯ ಭಾವ ಒಂದು
ಕಡೆ ಇದ್ದರೆ,ಇಷ್ಟು ದಿನ ತಾನಿದ್ದ ಪ್ರಪಂಚವನ್ನು ಬಿಟ್ಟು ಹೋಗುತ್ತಿರುವ ನೋವು ಇನ್ನೊಂದು ಕಡೆ.ಆ
ಕಣ್ಣೀರು ಖುಷಿಗೋ?ಅಥವಾ ಬೇಜಾರಿಗೋ? ಗೊತ್ತಿಲ್ಲ,ಆದರೆ ಹ್ರ್‍ದಯದಲ್ಲಿದ್ದ ತಲ್ಲಣಗಳಿಗೆ
ಅದು ಸಾಂತ್ವನ ನೀಡಿದ್ದಂತೂ ನಿಜ.
ಎಷ್ಟೊಂದು ಬದಲಾವಣೆಗಳಾಗಿದೆ ಈ ಮೂವತ್ತು ವರ್ಷಗಳಲ್ಲಿ
?ಮೊದಲಿದ್ದ ಕಾಲುದಾರಿಯು ಇದೀಗ
ಖಡಿಹಾಕಿದ ಕೆಂಪು ರಸ್ತೆಯಾಗಿದೆ,ಇನ್ನೇನು ಬರುವ ಚುನಾವಣೆಯ ಹೊತ್ತಿಗೆ ಟಾರು ರಸ್ತೆಯಾಗಲೂಬಹುದು.ರಸ್ತೆಯ
ಬದಿಗಿದ್ದ ರಾಕ್ಷಸರೂಪಿ ವ್ರ್‍ಕ್ಷಗಳು ರಾತ್ರಿಗಳು ಕಳೆದಂತೆ ಕಣ್ಮರೆಯಾಗಿದೆ.ಇದೀಗ ಅಲ್ಲಿ ಅಕೇಶಿಯಾ
ಪ್ಲಾಂಟೇಶನ್ ಗಳು ತಲೆ ಎತ್ತಿವೆ.ಮೊದಲಿಗೆ ಅಲ್ಲೇ ಮರದ ಬಡ್ಡೆಯ ಮೇಲೆ ಕಾಣುತ್ತಿದ್ದ ಗೌರಿದಂಡೆ,ಸೀತೆದಂಡೆಗಳು
ಇಂದು ಅಪರೂಪವಾಗಿದೆ.ಜೊತೆಗೆ ಹುಣಸಿಗೆಯ ಜನರ ಮನಸ್ಸೂ ಸಹ ಬದಲಾಗಿದೆ.ಹಾಸಿಗೆಯಲ್ಲಿ ರಾತ್ರಿ ಉಚ್ಚೆಹೊಯ್ದುಕೊಳ್ಳುತ್ತಿದ್ದ
ಹೈಕಳನ್ನು ಹೊಲಕ್ಕೆ ಕರೆದುಕೊಂಡು ಹೋಗುತ್ತಿದ್ದ ಹನುಮ,ಇಂದು ಮೊಮ್ಮಕ್ಕಳನ್ನು ತಾನೇ ಶಾಲೆಗೆ ಕರೆದುಕೊಂಡು
ಬರುತ್ತಾನೆ,ಶೆಟ್ಟರಂಗಡಿಯಲ್ಲಿ ಪೆನ್ಸಿಲ್ಲು ತೆಗಿಸಿಕೊಂದುತ್ತಾನೆ.ಇಪ್ಪತ್ತೆಂಟು ಗಂ ಹಾಗೂ ಹದಿನಾಲ್ಕು ಹೆಂ ಎಂದು ಬರೆದಿಡುತ್ತಿದ್ದ ದಾಖಲಾತಿ ಪುಸ್ತಕದಲ್ಲಿ
ಇಂದು ಮಕ್ಕಳ ಸಂಖ್ಯೆ ನೂರಕ್ಕೇರಿದೆ.ಶಾಲೆಗೆ ಮಳೆಗಾಲದಲ್ಲಿ ಇರುತ್ತಿದ್ದ ಜಡಿತಟ್ಟಿ
ಮಾಯವಾಗಿ ,ಕಂಪೌಂಡು ಬಂದು ನಿಂತಿದೆ.ಸುಣ್ಣ ಉದುರುತ್ತಿದ್ದ ಗೋಡೆಗಳ ಬದಲು ,ಈಗ ಗೋಡೆಯ ತುಂಬಾ ಇರುವ ಬಣ್ಣ ಬಣ್ಣದ ಚಿತ್ರಗಳು ಚಿಣ್ಣರನ್ನು ರಂಜಿಸುತ್ತಿವೆ.ಅಷ್ಟೇ
ಏಕೆ? ಕಾಂತಕ್ಕೋರಿಗೂ ವಯಸ್ಸಾಗಿದೆ.ಕಣ್ಣಿಗೆ ಕನ್ನಡಕ ಬಂದಿದೆ.ಆಗೀಗ ಮಂಡಿನೋವು,ಬೆನ್ನು ನೋವು ಕಾಣಿಸಿಕೊಳ್ಳುತ್ತಿದೆ.ಆದರೆ,ತಮ್ಮ
ಕೈಯಲ್ಲಿ ಅಕ್ಷರ ಕಲಿತ ಗಂಡು ಮಕ್ಕಳು ದೊಡ್ಡವರಾಗಿ ,ಈಗ ಎಲ್ಲಾದರೂ ಶಿರಸಿಯಲ್ಲಿ ಸಿಕ್ಕಿದಾಗ ಎಡಗೈಯ್ಯಲ್ಲಿ
ಕಾರಿನ ಕೀಲಿ ಹಿಡಿದು,ಬಲಗೈಯಲ್ಲಿ ನಮಸ್ತೆ ಎನ್ನುವಾಗ
ಮಂಡಿನೋವು ಕಡಿಮೆಯಾಗುತ್ತದೆ.ಅಕ್ಕೋರು ಮನೆಗೆ ಬಂದರೆ ಹೆದರಿ ಅಡುಗೆಮನೆಯಲ್ಲಿ ಪುಸ್ತಕ ಹಿಡಿದು ಕೂರುತ್ತಿದ್ದ ಹೆಣ್ಣುಮಕ್ಕಳು ಬರೆದ ಲೇಖನಗಳು
ಇಂದು ಆಳುವ ಕೈಗಳನ್ನೇ ಹೆದರಿಸುವಾಗ ಬೆನ್ನುನೋವು ವಾಸಿಯಾಗುತ್ತದೆ.
ಶಿಕ್ಷಕಿಯಾಗಿ ಬದುಕು
ಸಾರ್ಥಕವಾಯಿತೆಂದು ನೆಮ್ಮದಿಯ ನಿಟ್ಟುಸಿರು ಬಿಡುತ್ತಿರುವಾಗಲೇ ದಾರಿಯ ಬದಿಯಲ್ಲಿ ಬಿದ್ದಿದ್ದ ಬಾಳೆಗೋನೆಯನಿಂದ
ಹಿಸಿದ ಒಂದು ಚಿಪ್ಪಿನ ಜಿಂಡು ಕಣ್ಣಿಗೆ ಬಿತ್ತು.ಅದನೋಡಿ
ಅದ್ಯಾಕೋ ತುಟಿಗಳು ಅಗಲವಾದವು…ಹೌದು,ಅದು ಕಾಂತಕ್ಕೋರೇ ಮೊನ್ನೆ ಶನಿವಾರ ಸಂಜೆ ಎಸೆದದ್ದು.ಶನಿವಾರ
ಶಾಲೆಮುಗಿದ ಮೇಲೆ ಊರಿನವರು ಹಾಗೂ ಶಿಕ್ಷಕರಲ್ಲಾ ಸೇರಿ ಅವರನ್ನು ಬೀಳ್ಕೊಟ್ಟಿದ್ದರು.ಒಂದು ಸೀರೆ,ಫಲ-ತಾಂಬೂಲ
ಜೊತೆಗೊಂದು ಪುಟ್ಟ ಗಂಧದ ಗಣಪತಿಯ ಮೂರ್ತಿಯನ್ನು ಅಕ್ಕೋರ
ಕೈಗಿಟ್ಟು,ಊರಿನಲ್ಲಿ ಅಕ್ಷರದ ಬೆಳಕು ಹರಿಸಿದವರಿಗೆ ನಮಸ್ಕರಿಸಿದ್ದರು,ತಮ್ಮ ವಂದನೆಗಳನ್ನು ತಿಳಿಸಿದ್ದರು.ಅದನ್ನು
ಮುಗಿಸಿ ಮನೆಗೆ ವಾಪಸ್ಸಾಗುವಾಗ ಹಣ್ಣನ್ನು ತೆಗೆದು ಪ್ಲಾಸ್ಟಿಕ್ ಕೊಟ್ಟೆಯಲ್ಲಿ ಹಾಕಿಕೊಂಡು ಜಿಂಡನ್ನು
ಅಲ್ಲೇ ಬಿಸಾಡಿ ಹೋಗಿದ್ದರು.ಅಷ್ಟರಲ್ಲೇ ಮಕ್ಕಳು ಮೈದಾನದಲ್ಲಿ ಆಡುತ್ತಿರುವ ಸದ್ದು ಕೇಳತೊಡಗಿತ್ತು.ಕಾಂಪೋಂಡಿನ
ಹತ್ತಿರ ಬರುವಷ್ಟರಲ್ಲೇ “ಅಕ್ಕೋರೆ ನಮಸ್ಕಾರಾ” ಎಂಬ ಹುಡುಗರ ಕೂಗು,ಶಿಕ್ಷಕರ ಕೊಠಡಿಯನ್ನು ಮುಟ್ಟೀತ್ತು.ಮುಗುಳ್ನಗೆಯೊಂದಿಗೆ
ನಮಸ್ಕರಿಸಿದ ಅಕ್ಕೋರು,ಮಾಸ್ತರುಗಳನ್ನೆಲ್ಲಾ ಒಮ್ಮೆ ನೋಡಿ ,ನಮಸ್ಕರಿಸಿ,ತುಸು ನಕ್ಕು ತಮ್ಮ ಮುಖ್ಯ
ಶಿಕ್ಷಕರ ಕೊಠಡಿಗೆ ಹೋದರು.
ಟೇಬಲ್ಲಿನ ಬದಿಯ ಕುರ್ಚಿಯ ಮೇಲೆ ಕೈಚೀಲವನ್ನಿಟ್ಟು
ಟೇಬಲ್ಲಿನ್ಜ ಕಡೆ ಗಮನ ಹರಿಸಿದಾಗ ಅಲ್ಲೊಂದು ಅಶ್ಚರ್ಯವು ಕಾದಿತ್ತು,ಒಂದು ಅನಾಮಧೇಯ ಪತ್ರ ಅಲ್ಲಿತ್ತು.ಅದನ್ನು
ಬಿಡಿಸಿ ಓದಲು ಶುರು ಮಾಡಿದಾಗ,
ಗೆ,
ಕಾಂತಕ್ಕೋರು
ಹುಣಸಿಗೆ
ಶಾಲೆ
ಇಂದ,
ಅನಾಮಿಕ
ಮಾನ್ಯರೇ,
ವಿಷಯ: ಅನಿಲ್ ಮಾಸ್ತರ ಕುರಿತು.
ನಮ್ಮೂರಿನ ಶಾಲೆಯಲ್ಲಿ ಕೆಲಸ ಮಾಡುತ್ತಿರುವ ಅನೀಲ
ಮಾಸ್ತರು ಸರಿಯಾಗಿ ಪಾಠ ಮಾಡುತ್ತಿಲ್ಲ ಎಂದು ದೂರು ಬಂದಿರುತ್ತದೆ.ಜೊತೆಗೆ ಅವರು ಹೇಳದೇ ಕೇಳದೇ ರಜೆ
ಹಾಕಿ ಹೋಗುತ್ತಾರೆಂದೂ ತಿಳಿದು ಬಂದಿದೆ.ಇದಕ್ಕೆ ಪುರಾವೆಯಾಗಿ ಮೊನ್ನೆ ಶನಿವಾರ ಬೆಳಿಗ್ಗೆ ಅವರು ಹಾಜರಿ ಹಾಕಿ ಶಿರಸಿಗೆ ಹೋಗಿದ್ದರೆಂದು ಹೇಳಲು ವಿಷಾದಿಸುತ್ತೇವೆ.ಹೀಗಾಗಿ
ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಮ್ಮ ವಿನಂತಿ.
ಧನ್ಯವಾದಗಳೊಂದಿಗೆ
ದಿನಾಂಕ:--------- ಇತಿ
ಸ್ಥಳ:ಹುಣಸಿಗೆ ಅನಾಮಿಕ
ಇದನ್ನು
ಓದಿದ ಕಾಂತಕ್ಕೋರಿಗೆ ಅದು ಸುನೀಲನದೇ ಕೆಲಸ ಎಂದು ಗೊತ್ತಾದರು ,ಸುಮ್ಮನೆ ಮಡಚಿ ಒಳಗಿಟ್ಟರು.ಅನೀಲ
ಹಾಗೂ ಸುನೀಲ ಅಕ್ಕ ಪಕ್ಕದ ಮನೆಯವರಾದರೂ ಆ ಎರಡು ಮನೆಗಳ ನಡುವೆ ಮೂರ್ನಾಲ್ಕುತಲೆಮಾರುಗಳಿಂದ ದ್ವೇಷವಿದೆ.ಒಬ್ಬರ
ಕಂಡರೆ ಇನ್ನೊಬ್ಬರಿಗಾಗದು.ಒಮ್ಮೆ ಶ್ರೀ ಧರ್ಮಸ್ಥಳದ ಒಂದು ಯೋಜನೆಯಡಿಯಲ್ಲಿ ಹುಣಸಿಗೆ ಶಾಲೆಗೆ ಒಂದು
ಒಂದು ಶಿಕ್ಷಕರ ನೇಮಕಾತಿಗೆ ಅವಕಾಶವಾಯಿತು.ಆಗ ಅರ್ಜಿ ಬಂದಿದ್ದು ಅನೀಲ ಹಾಗೂಸುನೀಲರದು.ಇಬ್ಬರೂ ಡಿಗ್ರಿ
ಮುಗಿಸಿದ್ದರಾದರೂ ಅನಿಲನ ಮನೆಯ ಆರ್ಥಿಕ ಪರಿಸ್ಥಿತಿಯನ್ನು ಕಂಡು ಕಾಂತಕ್ಕೋರು ಅನೀಲನನ್ನು ಮಾಸ್ತರನನ್ನಾಗಿಸಿದ್ದರು.ಇದರಿಂದ ಸುನೀಲನಿಗೆ ಅನೀಲನ ಕಂಡರಾಗದು,ಹಾಗಾಗಿ
ಅವನದೇ ಏನೋ ಒಂದು ಮೂಗರ್ಜಿ ಎಂದು ಸುಮ್ಮನಾದರಾದರೂ,ಹಾಜರಿ ಪುಸ್ತಕಕ್ಕೆ ಸಹಿಮಾಡುವಾಗ ಅವರಲ್ಲಿದ್ದ
ಮುಖ್ಯಶಿಕ್ಷಕರು ಜಾಗ್ರತರಾದರು.ಸರಿ,ಅಲ್ಲೇ ಓಡಾಡುತ್ತಿದ್ದ ಹುಡುಗರನ್ನು ಕರೆದು
“ಏಯ್ ಅಲ್ ಅನೀಲ್ ಮಾಸ್ತರ್ ಹತ್ರಾ ಬರೂಕ್ ಹೇಳಾ”
ಎಂದರು.ಆ ಹುಡುಗ ಅಲ್ಲಿಂದಲೇ ತಾನು ಬೈಕಿನಲ್ಲಿ ಕೂತಿರುವಂತೆ ಕೈತಿರುವುತ್ತಾ “ಕಾಂತಕ್ಕೋರ್
ಹೇಳಾರೆ,ಅನೀಲ್ ಮಾಸ್ತರಿಗೆ ಬರೂಕ್ ಹೇಳ್ಬಕಂತೆ “ಎಂದು ಜೋರಾಗಿ ಹೇಳುತ್ತಾ ಓಡಿದ.
ಅನೀಲ:”ಅಕ್ಕೋರೆ”
ಕಾಂತಕ್ಕೋರು:”ಕುತ್ಕಳಪ್ಪಾ”
ಅನೀಲ:”ಹೆಂಗಿತ್ತು?ಮೊನ್ನೆ
ಫಂಕ್ಷನ್ನು?ಖುಷಿ ಆಯ್ತಾ?”
ಅಕ್ಕೋರು:”ಹಾಂ..ಖುಷಿ
ಆಗ್ದೇ ಇರ್ತದ್ಯೇನ!”
ಅನೀಲ:”ನಾನೆಯ ಎಲ್ಲಾ ಓಡಾಡಿದ್ದು ಅದ್ಕೆ”
ಅಕ್ಕೋರು:”ಓಹೋ…ಎಯ್
ಆದ್ರು ಸೀರೆ ಗೀರೆ ಎಲ್ಲಾ ಬ್ಯಾಡ್ವಾಗಿತ್ತು”
ಅನೀಲ:”ಎಯ್
ಇರ್ಲಿ ಬಿಡಿ”
ಅಕ್ಕೋರು:”ಹಮ್…ಎಲ್ಲಿಂದ
ತಂದ್ರಿ ಆ ಗಣಪತಿ ಮೂರ್ತಿಯಾ?”
ಅನೀಲ:”ಅದ್
ಗುಡಿಗಾರ್ ರ ಹತ್ರ ,ನೀಲೇಕಣಿಲಿ”
ಅಕ್ಕೋರು:”ಓಹ್?ನೀಲೇಕಣಿಲಾ?ಗುಡಿಗಾರ್
ರ ಮನಿಲಾ?ನೀನೇ ತಂದ್ಯಾ? “
ಅನೀಲ:”ಹಾಂ…ಅವಾ ಶುಕ್ರವಾರ ಕೊಡ್ತೆ ಹೇಳ್ದವಾ,ಶನಿವಾರ ಕೊಟ್ಟ,ಅದ್ಕೆ
ನಾನೇ ತಂದೆ.ಛೊಲೋ ಅದೆ ಅಲಾ?”
ಅಕ್ಕೋರು:”
ಹಾಂ ಛೊಲೋ ಅದೆ….ಸರಿ ನೀ ಹೋಗು…”
ಅಲ್ಲಿಗೆ
ಕಾಂತಕ್ಕೋರಿಗೆ ಅನೀಲ ರಜೆ ಹಾಕಿರದೇ ಶಿರಸಿಗೆ ಹೋಗಿರುವುದು ಖಾತ್ರಿಯಾಯಿತು.ಆದರೆ ಹಾಜರಿ ಹಾಕಿ ಅವನೇಕೆ ಹೋದ ? ಹಾಗೆಲ್ಲಾ ಮಾಡುವ ಹುಡುಗನಲ್ಲವಲ್ಲಾ
ಎಂದುಕೊಂಡು ,ಶಾಲೆಯ ಆಯಾ ಶಿವಮ್ಮನ ಹತ್ತಿರ ವಿಚಾರಿಸಿದರು.ಆಗ ಊರಿನವರೆಲ್ಲಾ ಶಾಲೆಗೆ ಬಂದಿದ್ದರೆಂದೂ
,ಅವರೇ ಅನೀಲನನ್ನು ಒತ್ತಾಯ ಮಾಡಿ ಕಳಿಸಿದರೆಂದೂ ಗೊತ್ತಾಯಿತು.ಆಗ ಅಕ್ಕೋರಿಗೆ ಅನಿಲನಿಗೂ ಗುಡಿಗಾರರಿಗೂ
ಒಳ್ಳೆಯ ಪರಿಚಯ ಇದ್ದುದ್ದರಿಂದ ಹಳ್ಳಿಯವರು ಅನೀಲನನ್ನೇ ಕಳಿಸಿದ್ದಾರೆ,ಊರಿನವರ ಒತ್ತಾಯಕ್ಕೆ ಮಣಿದು
,ಶಾಲೆಗೆ ಬಂದವನು ತಡಿಬಿಡಿಯಿಂದ ಪೇಟೆಗೆ ಹೋಗಿದ್ದಾನೆ ಎಂಬುದು ತಿಳಿಯಿತು.ಸಾಂದರ್ಭಿಕವಾಗಿ ನೋಡಿದರೆ
ಅವನದು ತಪ್ಪಿಲ್ಲವಾದರೂ ,ಅದ್ದು ಶಾಲೆಯ ನಿಯಮಗಲ ಪ್ರಕಾರ ತಪ್ಪು ಎನಿಸಿತು.ಕೊನೆಗೆ,ಇದಕ್ಕೆಲ್ಲಾ ತಾನೇ
ಕಾರಣ ಎಂದೆನಿಸಿ ಖಿನ್ನರಾಗಿ ಕುಳಿತುಬಿಟ್ಟರು.
**************
ಅನೀಲನನ್ನು
ಕರೆದ ಅಕ್ಕೋರು ಒಂದು ಪತ್ರಕೆ ಸಹಿ ಹಾಕು ಎಂದರು.ಅದನ್ನು ಓದಿದ ಆತ ಒಂದು ಕ್ಷಣ ಬೆವರಿದನಾದರೂ ,ತನ್ನ
ತಪ್ಪಿನ ಅರಿವಾಗಿ ಸುಮ್ಮನೆ ಸಹಿ ಹಾಕಿ ,ಐನೂರು ರೂಪಾಯಿಗಳನ್ನು ಟೇಬಲ್ಲಿನ ಮೇಲಿರಿಸಿ ಹೊರಟುಬಿಟ್ಟನು.ಅದು
ಆತ ಕಾಂತಕ್ಕೋರಲ್ಲಿಟ್ಟ ಗೌರವದ ಪ್ರತೀಕ.ಆಗ ಮತ್ತೆ ಶಿವಮ್ಮನನ್ನು ಕರೆದ ಅಕ್ಕೋರು
“ಶಿವಮ್ಮಾ ಆ ದೇಣಿಗೆ ಪುಸ್ತಕ
ತಗೊಂಡ್ ಬಾ “ ಎಂದರು.ಅದರಲ್ಲಿ ಅನೀಲಕುಮಾರ ,ದೇಣಿಗೆ ಐದು ನೂರು ರೂಪಾಯಿ
ಎಂದು ಬರೆದು,ಹಣ ಸ್ವೀಕರಿಸಿದವರು ಎಂಬ ಜಾಗದಲ್ಲಿ ತಮ್ಮ ಸಹಿ ಮಾಡಿ ,ಹಾಗೆಯೇ ಒಂದು ಕವರಿನಲ್ಲಿ ಆ
ಪತ್ರವನ್ನೂ ,ದೇಣಿಗೆಯ ಹಣವನ್ನೂ ಇರಿಸಿ,”ಇದನ್ನು ಶಾಲಾಮಂಡಳಿ
ಅಧ್ಯಕ್ಷರಿಗೆ ತಲುಪಿಸು “ಎಂದರು.
ಹೌದು,ಇದು ಆ ಶಾಲೆಯ ನಿಯಮ.ಮಾಡಿದ
ತಪ್ಪಿಗೆ ದಂಡವನ್ನು ದೇಣಿಗೆಯಾಗಿ ಕಟ್ಟಬೇಕು ಎಂಬುದು ಕಾಂತಕ್ಕೋರೇ ಮಾಡಿಕೊಂಡ ನಿಯಮ,ನಡೆಸಿಕೊಂಡು
ಬಂದ ನಿಯಮ.ಅದನ್ನು ಅವರು ಮೂವತ್ತು ವರುಷದಿಂದ ಕಾಪಾಡಿಕೊಂಡೂ ಬಂದಿದ್ದರು.ಅದನ್ನು ಕೊನೆಯತನಕವೂ
ಉಳಿಸಿಕೊಂಡರು.
“ಅಬ್ಬಾ..ಮುಗಿಯಿತಲ್ಲಾ “ಎಂದು ಕಣ್ಮುಚ್ಚಿ ಕುಳಿತ ಮುಖ್ಯಶಿಕ್ಷಕರಲ್ಲಿ
ಅಂತಃಕರಣ ಜಾಗ್ರತವಾಯಿತು.ತನ್ನ ನೆಚ್ಚಿನ ಶಿಕ್ಷಕರಿಗಾಗಿ,ಅದೂ ಊರಜನರ ಒತ್ತಾಯದ ಮೇರೆಗೆ ಶಿರಸಿಗೆ
ಅನೀಲ ಹೋಗಿದ್ದು ಅವರೊಳಗಿನ ಹ್ರದಯಕ್ಕೆ ತಪ್ಪು ಎಂದೆನಿಸಲೇ ಇಲ್ಲ .ಮೊದಲೇ ಆರ್ಥಿಕ ಸಂಕಷ್ಟದಲ್ಲಿದ್ದ ಅನೀಲನಿಗೆ ತಾನೇ ತೊಂದರೆಯಾದೆನಲ್ಲಾ ಎನ್ನುವ ಅಪರಾಧಿ ಭಾವ ಅವರನ್ನು ಪೀಡಿಸತೊಡಗಿತ್ತು.ಅದಾಗಲೇ
ಕಷ್ಟಕ್ಕೆ ಮಿಡಿಯುವ ಅವರ ಮಮಕಾರದ ಮನಸ್ಸು ಜಾಗ್ರತಗೊಂಡಿತ್ತು.ಒಂದು ನಿರ್ಧಾರಕ್ಕೆ ಬಂದು ತಮ್ಮ ದಿನದ
ಕಾರ್ಯಗಳಲ್ಲಿ ಮಗ್ನರಾದರು.
**********
ಸಂಜೆ
೪:೩೦ಕ್ಕೆ ಜನಗಣಮನ ಹೇಳಿ ಹೊರಡುತ್ತಲೇ ಅಕ್ಕೋರು,ಅನೀಲನನ್ನು
ಕರೆದರು.ಅವನಿಗೆ ಬೆಲಿಗ್ಗೆ ದಂಡಕಟ್ಟು ಅಂದಿರುವುದರಿಂದ ಬೇಜಾರಾಗಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿತ್ತು.ಹಾಗೆಯೇ
ಬರುವ ಒಂದು ಸಾವಿರದಲ್ಲಿ ಐದುನೂರನ್ನು ಕಲೆದುಕೊಂಡೆನಲ್ಲಾ ಎನ್ನುವ ಹತಾಶೆಯೂ ಕೂಡಿತ್ತು.ಅಕ್ಕೋರು
ನಿಧಾನಕ್ಕೆ ಹೋಗಿ ಅವನ ಬಳಿ ಹೋಗಿ,
“ನನ್ ಜೊತೆ ಬಸ್ ಸ್ಟಾಪಿನ ತನ್ಕಾ ಬರ್ತ್ಯಾ?” ಎಂದರು.”ಸರಿ “ಎಂಬಂತೆ ಗೋಣಲ್ಲಾಡಿಸಿದ ಅನೀಲ,ಸುಮ್ಮನೆ ಅವರ ಹಿಂದೆ ಬಸ್
ಸ್ಟಾಪಿನ ತನಕ ನಡೆದ.ಕಾಂತಕ್ಕೋರಿಗೆ ಈಗ ಮತ್ತೊಮ್ಮೆ ವಿಚಿತ್ರ ಅನುಭವವಾಗಿತ್ತು.ತನ್ನದೆಲ್ಲವನ್ನೂ
ಬಿಟ್ಟು ಹೋಗುತ್ತಿದ್ದೇನೆ,ನನ್ನ ನೆಚ್ಚಿನ ಕೆಲಸಕ್ಕೆ ವಿದಾಯ ಹೇಳುತ್ತಿದ್ದೇನೀಂದು ಬೇಜಾರಾಗುವ ಬದಲು
ಅದೇಕೋ ಖುಷಿಯಾಗುತ್ತಿತ್ತು.ಆ ಖುಷಿಯನ್ನು ಅನೀಲ ಗಮನಿಸಿದನಾದರೂ ಆತನಿಗೆ ಅದರ ಬಗ್ಗೆ ಕೇಳುವ ಮನಸ್ಸಿರಲಿಲ್ಲ ..ಕೊನೆಗೆ ಬಸ್ಸು
ಹತ್ತಿ ಹೋಗುವಾಗ ಕಾಂತಕ್ಕೋರು ಅನೀಲನ ಕೈಗೆ ಎಂದು ಕವರನ್ನಿತ್ತು ಹೊರಟು ಹೋದರು.
ಆ ಕವರಿನಲ್ಲಿ ಒಂದು ಸಾವಿರ ರೂಪಾಯಿಯೂ ,ಒಂದು ಪತ್ರವೂ ಇದ್ದಿತ್ತು.ಎಡಗೈಯ್ಯಲ್ಲಿ ದುಡ್ಡುಹಿಡಿದು,ಬಲಗೈಯ್ಯಲ್ಲಿ
ಪತ್ರ ಹಿಡಿದು ಅನೀಲ ಆ ಪತ್ರವನ್ನು ಓದುತ್ತಾ ಹೋದ.
ಪ್ರೀತಿಯ ಅನೀಲ,
ನಿನ್ನ ಮನಸ್ಸನ್ನು ನೋಯಿಸಿದ್ದಕ್ಕೆ ಮೊದಲಿಗೆ ಕ್ಷಮೆಯಾಚಿಸುತ್ತೇನೆ.ಇಲ್ಲಿಯತನಕ
ಶಾಲೆಯ ನಿಯಮಗಳನ್ನು ನಾನು ತಪ್ಪದೇ ಪಾಲಿಸಿಕೊಂಡು ಬಂದೆ,ಹಾಗೆಯೇ ಕೊನೆಯ ದಿನವಾದರೂ ನಿನ್ನ ತಪ್ಪನ್ನು
ಮನ್ನಿಸಿ ಸುಮ್ಮನಿರಲು ನನ್ನೊಳಗಿನ ಮುಖ್ಯಶಿಕ್ಷಕಿ ಬಿಡಲಿಲ್ಲ.ಅದಕ್ಕೆಂದೇ ಐದುನೂರು ರೂಪಾಯಿ ದಂಡದ
ದೇಣಿಗೆ ಬರೆದೆ.ಬಹುಷಃ ಅದಕ್ಕೆ ಕಾರಣ ನಿನಗೂ ಗೊತ್ತು.
ಆದರೆ
ಆ ತಪ್ಪಿಗೆ ನಾನೇ ಕಾರಣನಾದಿನೇನೋ ಎಂಬ ಭಾವನೆ ನನ್ನನ್ನು ಚುಚ್ಚುತ್ತಿದೆ .ಜೊತೆಗೆ ನಿನ್ನ ಮನೆಯ ಪರಿಸ್ಥಿತಿಯನ್ನೂ
ನಾನು ಬಲ್ಲೆ ,ನಿಮ್ಮ ತಾಯಿಯ ಕಣ್ಣಿನ ಶಸ್ತ್ರ ಚಿಕಿತ್ಸೆಗಾಗಿ ನೀನು ಹಣ ಹೊಂದಿಸಲು ಪರದಾಡುತ್ತಿರುವುದೂ
ನನಗೆ ಗೊತ್ತು,ಅದಕ್ಕಾಗಿ ನನ್ನ ಸ್ವಂತದ ಒಂದು ಸಾವಿರವನ್ನು ಈ ಪತ್ರದೊಡನೆ ಇಟ್ಟಿದ್ದೇನೆ.ಅದನ್ನು ನನ್ನ ಉಡುಗೊರೆ ಎಂದು ಭಾವಿಸಿ ಸ್ವೀಕರಿಸುವುದು.
ಕೊನೆಗೊಂದು ವಿಷಯ ಹೇಳಲೇ ಬೇಕು.ಇಷ್ಟು
ದಿನ ಜೀವನದಲ್ಲಿ ನಾನು ಮಕ್ಕಳಿಗೆ ಪಾಠ ಕಲಿಸುತ್ತಿದ್ದೆ,ಆದರೆ
ಇಂದು ಕೊನೆಯ ದಿನ ನನಗೆ ಪಾಠ ಕಲಿಸಿತು.ವ್ರತ್ತಿ
ಜೀವನದಲ್ಲಿ ಕರ್ತವ್ಯ ನಿಷ್ಠೆ ಎಷ್ಟು ಮುಖ್ಯವೂ ,ನಿತ್ಯ ಜೀವನದಲ್ಲಿ ಮಾನವೀಯತೆ ಅಷ್ಟೇ ಮುಖ್ಯ.
ಅವೆರಡೂ ಸೂರ್ಯ-ಚಂದ್ರರಿದ್ದಂತೆ,ಯಾವುದೊಂದಿಲ್ಲದಿದ್ದರೂ ಆ ಹಗಲು ಅಥವಾ ರಾತ್ರಿಗೆ ಅಂದವಿಲ್ಲ.ಇವತ್ತು ನಾನು ಕಲಿತ ಪಾಠ ,ಇಲ್ಲಿನ ತನಕ ನಾನು
ಕಲಿಸಿದ ಪಾಠಗಳಿಗಿಂತ ದೊಡ್ಡದು.ಇಂತಹ ಪಾಠಗಳನ್ನು ಕಲಿಯಲು ಶಿಕ್ಷಕಿಯಿಂದ ಮತ್ತೆ ವಿದ್ಯಾರ್ಥಿಯಾಗುತ್ತಿದ್ದೇನೆ.
ಶುಭಮಸ್ತು,
ಆಶೀರ್ವಾದಗಳೊಂದಿಗೆ,
ಕಾಂತಕ್ಕೋರು.
ಇದನ್ನು
ಓದಿದ ಅನಿಲನ ಕಣ್ಣುಗಳಲ್ಲಿ ನೀರು ಜಿನುಗಿತ್ತು.
ಇಲ್ಲಿಗೀಕಥೆ
ಮುಗಿಯಿತು,ಆದರೆ ಈ ಶಿಕ್ಷಕಿಯ ಕಥೆಯಿಂದ ನಾವು ಕಲಿಯ ಬೇಕಾದ ಪಾಠ,ಪ್ರತಿಯೊಂದು ವ್ರತ್ತಿಗೂ ಅನ್ವಯಿಸುತ್ತದೆ
ಎಂಬುದು ನನ್ನ ಭಾವನೆ.ಸರಿಯಾದ ಕರ್ತವ್ಯ ಪಾಲನೆಯೊಂದಿಗೆ ಮಾನವೀಯತೆಯೂ ಇದ್ದಲ್ಲಿ ನಮ್ಮ ಬಾಳಿಗೊಂದು ಸಾರ್ಥಕತೆ ಸಿಕ್ಕೀತು. ನಾವು ನಿತ್ಯವೂ ಇಂತಹ
ಪಾಠಗಳನ್ನು ಕಲಿಯುವ,ಅದನ್ನು ಅಳವಡಿಸಿಕೊಳ್ಳುವ ವಿದ್ಯಾರ್ಥಿಗಳಾಗೇ
ಇರೋಣ ಎನ್ನುವಂತಹ ಆಶಯ ಹೊತ್ತು ,
ನನ್ನೆಲ್ಲ
ಗುರುಗಳಿಗೆ ವಂದಿಸುತ್ತಾ,
ಇತಿ
ನಿಮ್ಮನೆ ಹುಡುಗ
ಚಿನ್ಮಯ
ಭಟ್
14 comments:
ದಯವಿಟ್ಟು ನಿಮ್ಮ ಅಭಿಪ್ರಾಯ ಬರೆದು,ನನ್ನನ್ನು ನಾನು ತಿದ್ದಿಕೊಳ್ಳಲು ಸಹಕರಿಸಿ.
kalpanikana??
ಹಾ...ಕಾಲ್ಪನಿಕ...ಧನ್ಯವಾದ ಕಿರಣ್..ನಿಮ್ಮ ಮಾರ್ಗದರ್ಶನ ಹೀಗೇ ಮುಂದುವರೆಲಿ..ನಮಸ್ಕಾರ
thumba channagide batre munduvaresi ee prayatna..al d best:)
ಹಾ...ಕಾಲ್ಪನಿಕ...ಧನ್ಯವಾದ ಕಿರಣ್..ನಿಮ್ಮ ಮಾರ್ಗದರ್ಶನ ಹೀಗೇ ಮುಂದುವರೆಲಿ..ನಮಸ್ಕಾರ
ತಮ್ಮಯ್ಯ.. ಎಶ್ಟ್ ಚನ್ನಾಗಿ ಬರದ್ದೆ.. ಆಪ್ತವಾಗಿದ್ದು.ಬರೀತಾ ಇರು..
"ಸರಿಯಾದ ಕರ್ತವ್ಯ ಪಾಲನೆಯೊಂದಿಗೆ ಮಾನವೀಯತೆಯೂ ಇದ್ದಲ್ಲಿ ನಮ್ಮ ಬಾಳಿಗೊಂದು ಸಾರ್ಥಕತೆ ಸಿಕ್ಕೀತು. ನಾವು ನಿತ್ಯವೂ ಇಂತಹ ಪಾಠಗಳನ್ನು ಕಲಿಯುವ,ಅದನ್ನು ಅಳವಡಿಸಿಕೊಳ್ಳುವ ವಿದ್ಯಾರ್ಥಿಗಳಾಗೇ ಇರೋಣ ಎನ್ನುವಂತಹ ಆಶಯ ಹೊತ್ತು "
ಸತ್ಯವಾದ ಮಾತು ಚಿನ್ಮಯ್ . ಇಷ್ಟವಾಯ್ತು ಒಳ್ಳೆಯ ಆದರ್ಶವೊಂದನ್ನು ಕಥೆಯ ಮೂಲಕ ಹೇಳಿದ ರೀತಿ :)
ಧನ್ಯವಾದ ಕಿರಣ್
ಚಿಕ್ಕಿ ಚಿತ್ತಾರ:ಧನ್ಯವಾದ ಅಕ್ಕಾ..ಬರ್ತಾ ಇರಿ
ಸುಮ: ಧನ್ಯವಾದ ..ನಿಮ್ಮ ಪ್ರೋತ್ಸಾಹಕ್ಕಾಗಿ ವಂದನೆಗಳು..ಬರ್ತಾ ಇರಿ.
tumba chennagiddu.... hinge barita iru.
ಧನ್ಯವಾದ ಪ್ರಸನ್ನ...ಬರ್ತಾ ಇರೋ..
super agiddu
ಧನ್ಯವಾದ ಸಚಿನ್ :)
Post a Comment