Wednesday, October 24, 2012

ಸಿಂಗಾರದ ಕಥೆ


ಕಣ್ಣಿಗೆ ಬೆಳಕು ಕಾಣುತ್ತಲೇ ,ಹಾಸಿಗೆಯ ಮೇಲೆ ಕೈ ಹಾಕಿ “gud mrng dearJ” ಎಂದು ಮೆಸ್ಸೆಜು ಟೈಪು ಮಾಡಿದ ಶತಭಿಷ ಆ ಹುಣಸಿಗೆ ಊರಿನಲ್ಲಿ ನೆಟ್ವರ್ಕು ಸಿಗಲ್ಲಾ ಎಂಬುದನ್ನು ನೆನಪಿಸಿಕೊಂಡು  ಮತ್ತೆ ಮಲಗಿದ.
“ತಮ್ಮಾ ಬೆಳ್ಗಾತು ಎದ್ಕಾ … ಎಂದು ಅಜ್ಜಿ ಎಬ್ಬಿಸಿದಾಗಲೇ ಆತ ಮತ್ತೆ ಕಣ್ಬಿಟ್ಟಿದ್ದು..
ಅಜ್ಜಿ ಹೂವಿನ ಕುಕ್ಕೆ ಹಿಡಿದು ದೇವಸ್ಥಾನಕ್ಕೆ ಹೋದರೆ ಬೆಂಗಳೂರಿನಲ್ಲಿ ಅರ್ಲಿ ಮಾರ್ನಿಂಗ್ ಹತ್ತಕ್ಕೆ ಎದ್ದು ಬಿಡುವ ಹೊಸಜಮಾನಾದ ಈ ಹುಡುಗ ಇಲ್ಲಿ ಏಳೂವರೆಗೇ ಎದ್ದು ಕೋಲ್ಗೇಟು ಹಿಡಿದು ಹೊರಟ.
ಬಚ್ಚಲು ಮನೆಯಲ್ಲಿ ಕಾಸಿಟ್ಟ ಬಿಸಿನೀರಿನಲ್ಲಿ ಮುಖತೊಳೆದು,ಹಾಗೆಯೇ ಒಂದಿಪ್ಪತ್ತೈದು ಹೆಜ್ಜೆ ನಡೆದು ಅಡಿಗೆ ಮನೆಯತ್ತ ನಡೆದವನಿಗೆ ,ಬಾಳೆ-ಮಣೆಯ ಸ್ವಾಗತ ಕಾದಿತ್ತು..ಬಂದೊಡನೆ ಬಂಡಿಮೇಲೆ ಹೊಯ್ದ ತೆಳ್ಳೇವು “ಚೊಯ್ ಯ್…”ಎಂದು ಸದ್ದು  ಮಾಡುತ್ತಿತ್ತು.ಬೆಳಿಗ್ಗೆಯ ಕಾಫಿ-ಬಿಸ್ಕತ್ತನ್ನು ಅವನ ಕಣ್ಣುಗಳು ಹುಡುಕುತ್ತಿರುವಾಗಲೇ ,
ಅಜ್ಜಿ “ತಮಾ ಬಾ ಆಸ್ರಿಗೆ ಕುಡ್ಯಲೇ”(ತಿಂಡಿ ತಿನ್ನಲು) ಎಂದರು…
ಬೆಳಬೆಳಿಗ್ಗೆ ತಿಂಡಿತಿಂದು ಅಭ್ಯಾಸವಿಲ್ಲ ಎಂದು ಬಾಯಿಗೆ ಬಂದರೂ,ತನ್ನಿಂದ ಅಜ್ಜಿಯ ಉಳಿದ ಕೆಲಸಗಳಿಗೆ ತಡವಾಗಬಾರದು ,ತಾನು ತಿಂಡಿ ತಿನ್ನದೇ ಅಜ್ಜಿ ತಿಂಡಿ ತಿನ್ನರು,ಅದರಿಂದ ಮನೆಯ ಕೆಲಸವೆಲ್ಲಾ ತಡವಾಗುವುದು ಎಂದರಿತು “ಹಾಂ ಸರಿ” ಎಂದು ತಿಂಡಿಗೆ ಕೂತ .
ಬೆಲ್ಲ ಬೆಣ್ಣೆಯ ಹದಪಾಕದಲ್ಲಿ ಗರಿಗರಿ ತೆಳ್ಳೆವಿನ ಚೂರುಗಳನ್ನು ಮುಳುಗಿಸಿ ತಿಂದ ಆತ ,ಒಂದು ಶೇರು ಚಹಾವನ್ನು ಹೀರಿ ಅಡುಗೆಯಮನೆಯಿಂದ ಹೊರಬಿದ್ದ.ಅದಾದ ಮೇಲೆ ಹಾಗೆಯೇ ಯಾರೋ ಶಿರಸಿಯಿಂದ ನಿನ್ನೆ ತಂದಿದ್ದ ಪೇಪರನ್ನು ಓದುತ್ತಾ ಕುಳಿತಿದ್ದ.
ಅಷ್ಟರಲ್ಲೇ ಒಬ್ಬ ಪಟ್ಟೇಪಟ್ಟೆ ಲುಂಗಿಯುಟ್ಟಿದ್ದ ಆಸಾಮಿ ಜಗುಲಿಗೆ ಬಂದು “ಅಮ್ಮಾ “ಎಂದ.
ಪೇಪರ್ ಓದುತ್ತಿದ್ದ ಶತಭಿಷ “ಎಂತದು?” ಎಂದು ಕೇಳಿದ,
ಆ ಆಸಾಮಿ ,”ತಮ್ಮಾ಼….ಅಮ್ಮನ ಕೂಡೆ ಆಚಾರಿ ಬಂದಿದ ಹೇಳು..”
ಶತಭಿಷನ ಕಿವಿಗಳು ಇದನ್ನು ಕೇಳಿ “ಬೈಂದೂರು ಭಾಷೆ’ ಎಂದವು..ಅದರ ಜೊತೆಗೆ ಗೊಬ್ಬರ ಹೊರಲು ಬರುತ್ತಿದ್ದ ಶೇರುಗಾರರು ಮಾತನಾಡುತ್ತಿದ್ದ ಭಾಷೆಯೂ ಇದೇ ಎಂಬ ಪುರಾವೆಯೂ ಸಿಕ್ಕಿತ್ತು..
”ಸರಿ ಹೇಳ್ತೆ ನೀವ್ ಕುತ್ಕಳಿ” ಎಂದು ಸ್ಟೂಲು ಮುಂದಿಟ್ಟು ಅಜ್ಜಿಯ ಹತ್ತಿರ ಹೋಗಿ “ಆಯಿ,..ಆಚಾರಿ ಬಂಜಾ”(ಅಜ್ಜಿ, ಆಚಾರಿ ಬಂದಿದ್ದಾನೆ)ಎಂದ.
ಅಜ್ಜಿ “ಸರಿ,ಕುತ್ಕಂಬಲೆ ಹೇಳು,ಆಸ್ರಿಗೆ ತತ್ತಿ”(ಕೂರಲು ಹೇಳು,ತಿಂಡಿ ತರುವೆನು) ಎಂದು ಹೇಳಿ ಕಳುಹಿಸಿದರು…
ಜಗುಲಿಗೆ ಬಂದ ಶತಭಿಶಷ ಆಚಾರಿಯ ಬಳಿ ಮಾತಿಗಿಳಿದ…
ಶತಭಿಷ : “ನಿಮ್ ಹೆಸ್ರು ಎಂತದು??ಎಷ್ಟ್ ವರ್ಷಆಯ್ತು ಈ ಕೆಲ್ಸಾ ಮಾಡ್ತಾ?”
ಆಚಾರಿ:”ನನ್ ಹೆಸ್ರು ಮಂಜೇಶ್ವರನಾಥೇಶ್ವರಾಚಾರಿ  .ಜನ  ಮಂಜಾಚಾರಿ,ಒಂದೊಂದ್ ಸಲ್  ಮಳ್ಳಾಚಾರಿ ಹೇಳು ಕರಿತ್ರು ಅಂತಿಟ್ಕಣಿ..ನಾನು ನಮ್ಮಪ್ಪನ ಕೂಡೆ ಉಳಿ-ಚಾಣ ಹಿಡ್ಕಂಡ್ ಘಟ್ಟ ಹತ್ತಿ ಬಂದವಾ..ಸಣ್ಣಕಿದ್ದಾಗಿಂದಲೂ ಇದೇ ಕೆಲ್ಸಾ..ಸುಮಾರ್ ವರ್ಷಾ ಆಯ್ತ್ ”
ಶತಭಿಷ: “ಹಮ್..ಮತ್ತೆ ಕೆಲಸ ಹೆಂಗದೆ ಈಗ??”
ಆಚಾರಿ :”ಎಂತಾ ಹೇಳುದ್ ಹೇಳಿ ಕಾಂಬಾ..ಎಲ್ಲಾ ಭಗವಂತ ಕೊಟ್ಟಿದ್ ಅಲ್ದಾ…ಈಗ ಮರದ ಕೆಲ್ಸಾ ಇಲ್ಲಾ ಮಷಿನ್ ನಲ್ಲೇ ಮಾಡ್ತಿರು,,ರೆಡಿಮೇಡ್ ಬಾಗ್ಲು,ರೆಡಿಮೇಡ್ ಕಿಡಕಿ ಚೌಕಟ್ಟು,ರೆಡಿಮೇಡ್ ಮಂಚ..ನಮ್ಮನ್ನ ಯಾರು ಕೇಳ್ತ್ರು… ಅದೂ ಈಗ ನಾಟಾ ಸಿಗೂದೂ ಕಷ್ಟಾ ಆಗಿತಲ್ದಾ...”
ಇಗಾ ಇಲ್ ಕಾಣಿ, ಆ ದ್ವಾರ ಬಾಗಿಲ್ ಇತ್ ಅಲ್ದಾ,,ಅದು ನಮ್ಮಪ್ಪನೆ ಮಾಡಿದು..ಒಂದ್ ವಾರ ಆ ಬಳ್ಳಿ ಬಿಡ್ಸುಕೆ ತಕಂಡಿದಾ ಅವಾ…ಅದ್ನೆ ನೀವು ಈಗ ಮಷಿನ ಅವ್ರ ಹತ್ರ ಹೋಗಿ ಹೇಳ್ರೆ,ಬೆಳಿಗ್ಗೆ ಹೇಳಿ ಸಂಜೆ ತಕಂಡ್ ಹೋಗಿ ಅಂತ್ರ್ …
ಅಲ್ಲಾ ಎಷ್ಟೇ ಹೇಳಿ,ನೆರಿಗೆ ಹಿಡ್ಯು ಕೆಲ್ಸಾ ಮಷಿನ್ ಇಂದಾ ಆತ್ತಾ??”
ಶತಭಿಷ:: “ಅರೆ ಹಂಗದ್ರೆ?”
ಆಚಾರಿ :” ಮರನಾ ಬರೆ ಕತ್ತಿನೋ ಕೊಡ್ಲಿನೋ ತಕಂಡ್ ಕಡ್ದು,ಕತ್ತರಿಸಿ ಕೂಡ್ಸದಲ್ಲಾ ಮರದ್ ಕೆಲ್ಸಾ ಅಂದ್ರೆ..ಅದ್ರ ನಾರು ಹೆಂಗದೆ..ಅದು ಯಾವ್ ಜಾತಿ ಮರ..ಎಷ್ಟ್ ಗಟ್ಟಿ ಇರ್ತ್, ಬಾಗಿಲಿಗೆ ಹಾಕುದಾ,ರೀಪಿಗೆ ಹೋಡ್ಯುದಾ,  ಎಲ್ ಹೊಡ್ದ್ರೆ ಸಿಗುಳು ಬತ್ತ್,ಎಷ್ಟ್ ಜೊರ್ ಹೊಡ್ಯಕ್,ಎಲ್ಲಾ ನೋಡ್ಕಣುಕಾತ್ತಾ ಮಷಿನ್ ಹತ್ರ?ಇಲ್ಲ ಬಿಡಿ  “
ಶತಭಿಷ: “ಅದು ಸರಿನೆ ಬಿಡಿ”..
ಅಷ್ಟರಲ್ಲಿ ತಿಂಡಿ ಬಂದಿತ್ತು ,ಆಚಾರಿ ಅದನ್ನು ತಿಂದು ಮನೆಯ ಹಿಂಭಾಗಕ್ಕೆ ಹೊರಟ..ಅಲ್ಲಿ ಆಚಾರಿ ದೇವರ ಪೀಠವನ್ನು ಸರಿ  ಮಾಡುವ ಕೆಲಸವಿತ್ತು…ದೇವರ ಪೀಠ ಹಳೆಯದಾಗಿ ಹಾಳಾದ್ದರಿಂದಲೇ ಇವನನ್ನು ಸರಿ ಮಾಡಲು ಕರೆಸಿದ್ದರು..ಶತಭಿಷನ ಮಾವ ಮೊದಲೇ ಪೀಠವನ್ನು ಅಲ್ಲಿಗೆ ತಂದಿಟ್ಟು ಶಿರಸಿಗೆ ಹೋಗಿದ್ದರು..ಆಚಾರಿ ತನ್ನ ಕೆಲಸದಲ್ಲಿ ಮಗ್ನನಾದರೆ ಶತಭಿಷ ಯಾವುದೋ ಇಂಗ್ಲಿಷ್ ಕಾದಂಬರಿ ಹಿಡಿದು ಕೂತ…
                             *************************************************
ಸಂಜೆ ನಾಲ್ಕು ಘಂಟೆಯ ಸುಮಾರಿಗೆ ಶತಭಿಷ ಮಲಗೆದ್ದು ಮುಖತೊಳೆಯಲು ಬಚ್ಚಲಮನೆಯ ಕಡೆಬಂದಾಗ ಹಳೆಯ ಪೀಠ ಹೊಸರೂಪವನ್ನು ಪಡೆದು ಸುಂದರವಾಗಿ ಕಾಣುತ್ತಿತ್ತು..ಅಷ್ಟೊತ್ತಿಗೆ ಅಲ್ಲಿಗೆ  ಬಂದ ಆಚಾರಿ
“ಇಗ ಆಯ್ತಂಬ್ರ..ನಾ ಹೊರ್ಟೆ.. “ ಎಂದು ಹೊರಟ..
ಆಗ ಅಜ್ಜಿ “ಏಯ್ ಆಚಾರಿ ಅಚ್ಚೆ ನಾಡಿದ್ದೆಯ ದೊಡ್ಡ ಹಬ್ಬ”(ದೀಪಾವಳಿ )”ಶಿಂಗಾರ ಬೇಕಾದ್ರೆ ತ್ವಾಟದಲ್ ಅದ್ಯಾ ನೋಡ್ಕಾ “ (ಸಿಂಗಾರ ಬೇಕಾದರೆ ತೋಟದಲ್ಲಿ ಇದೆಯೋ ನೋಡು)ಎಂದರು..
ಆಚಾರಿ:”ಹಾಂ ಮರ್ತೆ ಹೋಗಿತ್..ನಾ ತ್ವಾಟಕ್ ಹೋಗ ಬತ್ತೆ ಇವ್ರ್ ಕರ್ಕಂಡು..ಇವ್ರಿಗ್ ತ್ವಾಟದ್ ದಾರಿ ಗೊತ್ತೀತ್ ಅಲ್ದಾ??”
ಅಜ್ಜಿ :”ಹಾಂ..ತಮ್ಮಾ ಅವನ್ನಾ ಇಲ್ಲೆ ಬಾಗಿಲಿನ ಪಾಲಿಗೆ ಕರ್ಕಂಡ್ ಹೋಗಾ “
ಇತ್ತ ಶತಭಿಷನಿಗೆ ನಗುಬರುತ್ತಿತ್ತು..ಅವನಿಗೂ ತೋಟಕ್ಕೂ ಭಾರೀ ದೂರ..ಅವರಮ್ಮ ಒಮ್ಮೆಮ್ಮೆ “ಈ ಮಾಣೀಗೆ ಅಡ್ಕೆ ಕಾಯಿ ಅಡ್ಕೆ ಮರದ್ ಮೇಲೆ ಇರ್ತಾ??ಕೆಳಗ್ ಬಿಡ್ತಾ  ಹೇಳೂ ಗೊತ್ತಿದ್ದ ಇಲ್ಯ! “ ಎಂದು ಆಡಿಕೊಳ್ಳುವುದುಂಟು..ಅವನಿಗೆ ತೋಟದ ದಾರಿಯೊಂದು ಗೊತ್ತಿತ್ತು ಅಷ್ಟೇ.!!!.
ಗುಡ್ಡ ಇಳಿದು ಹೋಗುತ್ತಿರುವಾಗ,
 ಶತಭಿಷ :” ಅಲ್ಲಾ ಅದು ನೀವು ಕೆಲಸ ಮಾಡುತ್ತಿರುವಾಗ ಕೈತಪ್ಪಿ ಏನಾದ್ರು ಕರಗಸ,ಸುತ್ತಿಗೆ ತಟ್ಟಿ ದೇವರ ಪೀಠ ಹಾಳಾಗೊದ್ರೆ ಅಂಥ ಹೆದ್ರಿಕೆ ಆಗೂದಿಲ್ವಾ ?“
ಆಚಾರಿ:” ಇದು ನನ್ನ ಕಟ್ಟಿಗೆ,ಇದು ನನ್ನ ಪೀಠ..ಇದನ್ನು ನಾನೇ ಮಾಡುತ್ತಿರುವುದು ಅಂತಾ ಮಾಡುಕಾಗ..ಎಲ್ಲದೂ ದೇವರದ್ದು..ಅವನೇ ಮಾಡ್ಸ್ಕಂತಿಪ್ಪುದು…ಹೇಳಿ ಮಾಡ್ದ್ರೆ ಎಲ್ಲದೂ ಸರಿ ಆತ್..ಅಲ್ಲಾ ಅವ್ನೇ ಕೂಕಂಬು(ಕುಳಿತುಕೊಳ್ಳುವ)  ಪೀಠ ಅವ್ನೇ ಹಾಳ್ ಮಾಡ್ಕಂತ್ನಾ??ಹೇಳಿ ” ಎನ್ನುತ್ತಾ ತೋಟ ತಲುಪಿದ..
ಅದು ಮಲೆನಾಡಿನ ಶಿರಸಿಯ ವಳಭಾಗೀ ಸೀಮೆಯ ತೋಟ..ವರಷ ಪೂರ್ತಿ ನೀರಿರುವ ಆ ತೋಟದಲ್ಲಿ ಅಡಿಕೆಮರಗಳೆಲ್ಲಾ  ಸೂರ್ಯನನ್ನು ಚುಂಬಿಸುವಷ್ಟು ಎತ್ತರವಾಗಿದ್ದವು..ಬೈತಲೆ ತೆಗೆದಂತೆ ಇದ್ದ ಕಾಲುವೆಗಳು,ಪುಟ್ಪಾತಿನಂತಿದ್ದ ನಿತ್ತುಗಟ್ಟುಗಳು(ಮಧ್ಯ ನಡೆಯುವ ಜಾಗ) ..ಮೆಲ್ಲಗೆ ಹರಿಯುವ ನೀರುಹೊಂದಿದ ಮಂಡಗಾಲುವೆಗಳು,ಅಲ್ಲಲ್ಲಿ ತಲೆ ಎತ್ತಿನಿಂತದ್ದ ಹಲಸು ಮಾವುಗಳು,ಅಡಿಕೆಯ ಮರಗಳನ್ನು ಅಪ್ಪಿಕೊಂಡಿದ್ದ ಮೆಣಸಿನ ಬಳ್ಳಿಗಳು,ಆ ಮರಗಳ ಮಧ್ಯದಲ್ಲಿ ಸುಗಂಧ ಸೂಸುತ್ತಿದ್ದ ಏಲಕ್ಕಿಯ ಗಿಡಗಳು..ಬಂದವರನ್ನು ಬಾಗಿ ನಡೆಸುತ್ತಿದ್ದ ಬಾಳೆಯ ಗಿಡಗಳು,ನಡೆಯುವರನ್ನು ಜಾರಿ ಬೀಳಿಸುತ್ತಿದ್ದ ಕೊಳೆತಹಾಳೆಗಳು..ಅಲ್ಲಿಲ್ಲಿ  ಕಂಡುಬರುತ್ತಿದ್ದ ಸೋಂಗೆಹಸೆಗಳು(ಅಡಿಕೆಯ ಸೋಗೆಯನ್ನು ತಾತ್ಕಾಲಿಕವಾಗಿ ಸಂಗ್ರಹಿಸಿವು ಜಾಗ),ಅಲ್ಲಿಂದಿಲ್ಲಿಗೆ ಹೋಗಲು ಹಾಕಿದ್ದ ಅಡಿಕೆಯ ಮುಂಡಗಳು..
ಇಂತಿಪ್ಪ ತೋಟದಲ್ಲಿ ಅಚಾರಿಯ ಕಣ್ಣಿಗೆ ಅವತ್ತು ಯಾವ ಚಿಕ್ಕ ಮರವೂ ಬೀಳಲಿಲ್ಲ. . ದೊಡ್ಡ ಮರ ಹತ್ತಿ ಸಿಂಗಾರ ಕಡಿಯಲು ಅವನಿಗೆ ಹೆದರಿಕೆ..ಯಾವುದಾದರೂ ಬಿದ್ದ ಮರದಲ್ಲಿ ಸಿಂಗಾರ ವಿದ್ದೀತೇ ಎಂದು ಹುಡುಕುತ್ತಿದ್ದ ಆತ.. ದೊಡ್ಡ ಹಬ್ಬಕ್ಕೆ ಸಿಂಗಾರ ಅಂದರೆ ಅಡಿಕೆಯ ಹೂವು ಇಲ್ಲದೇ ಬಲಿವೇಂದ್ರನಿಗೆ ಕಳೆಯಿಲ್ಲ,ಹಾಂ ಆದರೆ ಈ ಸಿಂಗಾರ ಬೇಕೆಂದರೆ ಆ ಮರವನ್ನು ಕೊಲ್ಲಲೇ ಬೇಕು,,ಏಕೆಂದರೆ ಅದರ ತಲೆಯಲ್ಲಿಯೇ ಹೂವು ಇರುವುದು….
ಹೀಗೆ ಹುಡುಕುತ್ತಿದ್ದವನಿಗೆ ಒಂದು ಕಡೆ ಬಿದ್ದ ಮರ ಕಂಡಿತು,ಅವನ ಅದೃಷ್ಟಕ್ಕೆ ಸಿಂಗಾರವೂ ಅದರಲ್ಲಿತ್ತು..ಖುಷಿಯಿಂದ ಅದನ್ನು ಕಡಿದ ಆತ ,ಹಿಡಿದುಕೊಂಡು ಹುಣಸಿಗೆ ಕತ್ರಿಯ ಹಾದಿ ಹಿಡಿದ..
ಇತ್ತ ನಮ್ಮ ಶತಭಿಷನಿಗೇನೋ ಗಲಿಬಿಲಿ..ಅವನಿಗೆ ಇದು ತನ್ನ ಅಜ್ಜನಮನೆಗೆ ಸೇರಿದ ತೋಟವೆಂದು ಗೊತ್ತು..ಆದರೆ ಅವರಲ್ಲೇ ಹಿಸೆಯಾಗಿ (ಅವಿಭಕ್ತ ಕುಟುಂಬಗಳ ವಿಭಜನೆ) ಯಾವ ಪಾಲು ಯಾರದ್ದೆಂದು ತಿಳಿಯದ್ದಾಗಿತ್ತು..ತನ್ನ ಅಜ್ಜನದು ಯಾವ ಪಾಲೋ,ಚಿಕ್ಕಜ್ಜನದು ಯಾವ ಪಾಲೋ ತಿಳಿಯದಾಗಿತ್ತು..ಈ ಅಜ್ಜಂದಿರಿಬ್ಬಿರೂ ಈಗ ಹಾವು-ಮುಂಗುಸಿಯ ಥರ ಕಚ್ಚಾಡುತ್ತಿದ್ದುದೂ ಅವನಿಗೆ ತಿಳಿದಿತ್ತು.. ಇತ್ತ ಆಚಾರಿಯೋ ಇವನು ಮೊಬೈಲಿನಲ್ಲಿ ಸಿಗ್ನಲ್ಲು ಹುಡುಕುತ್ತಿರುವಾಗಲೇ ಸಿಂಗಾರ ತೆಗೆದುಕೊಂಡು “ ಬರ್ತೆ ಅಗಾ “ ಎಂದು ಹೇಳಿ ಹೊರಟು  ಹೋಗಿದ್ದ…ಏನು ಮಾಡುವುದೆಂದು ತಿಳಿಯದೇ ಬಿದ್ದ ಅಡಿಕೆ ಮರದ ಬಣ್ಣವನ್ನು (ನಿತ್ತುಗಟ್ಟಿನ ಅನುಕ್ರಮ ಸಂಖ್ಯೆ) ನೋಡುತ್ತಾ, “ಆರೆನೇ ಬಣ್ಣ” ಎಂದು ನೆನಪಿಟ್ಟುಕೊಂಡು ಮನೆಗೆ ಹಿಂದಿರುಗಿದ..
ಮರುದಿನ ಬೆಳಿಗ್ಗೆ ವಾಪಸ್ ತನ್ನ ಮನೆಗೆ ಹೊರಟಿದ್ದ ಶತಭಿಷ,ಬಸ್ಸು ಸ್ಟಾಪಿನ ತನಕ ತನ್ನನ್ನು ಕಳಿಸಿಕೊಡಲು ಬಂದ ಮಾವನ ಬಳಿ
“ಮಾವಾ ..ನಿಮ್ಮನೆದು ಕೆಳಗಿನ ಪಾಲು ಎಷ್ಟು ಬಣ್ಣ ???ಚಿಕ್ಕಜ್ಜಂದು ಎಲ್ಲಿಂದ ಶುರು ??”ಎಂದು ಕೇಳಿದ..
ಅದಕ್ಕೆ ಮಾವ..”ನಮ್ಮದು ಮೊದಲಿನ ಐದು ಬಣ್ಣ,ಆರನೇಯ ಬಣ್ಣದಿಂದ ಅವರದ್ದು” ಎಂದ.
ಅಷ್ಟರಲ್ಲೇ ಶತಭಿಷನಿಗೆ ಬೆವರಿಳಿಯತೊಡಗಿತ್ತು..ಇನ್ನು ಹುಣಸಿಗೆಯಲ್ಲಿ ಇವತ್ತು ಜಗಳ ಖಚಿತ..

“ನಿಮ್ಮ ಮನೆಗೆ ಬಂದ ಆಚಾರಿ ತನ್ನ ತೋಟದ ಸಿಂಗಾರವನ್ನು ತೆಗೆದುಕೊಂಡು ಹೋಗಿದ್ದಾನೆ ಎಂದು,ಇದಕ್ಕೆ ನಿನ್ನ 

ಕುಮ್ಮಕ್ಕೇ ಕಾರಣ “ಎಂದು ಚಿಕ್ಕಜ್ಜ ಅಜ್ಜನ ಮನೆ ಬಾಗಿಲಿಗೆ ಬರುತ್ತಾನೆ..ಏನೂ ಗೊತ್ತಿರದ ಅಜ್ಜ ತಪ್ಪೇ ಇಲ್ಲವೆಂದು 

ಕೂಗಾಡುತ್ತಾನೆ..ಆಮೇಲೆ ಶುರು ಹುಣಸಿಗೆ ಮಹಾಯುದ್ಧ ಎಂದು ಎಣಿಸುತ್ತಿರುವಾಗಲೇ,ಒಬ್ಬ ಸೈಕಲ್ ಹತ್ತಿರ ಬಂದು

 “ ದೊಡ್ಡ ಭಟ್ರು ಅರ್ಜಂಟ್ ಬರುಕ್ ಹೇಳ್ ಕಳ್ಸಾರೆಮ್,ಅಚ್ಚೆ ಕೇರಿ ಭಟ್ರ್ ಎಲ್ಲಾ ಬಂದಾರೆ,ಏನೋ ನಂಬರಕಟ್ಟು(ಜಗಳ) ಆಗದೆ” ಎಂದು ಮಾವನ ಹತ್ತಿರ ಹೇಳಿದ..ಅದಾಗಲೇ ಬಸ್ಸೂ ಬಂದಿದ್ದರಿಂದ  ಶತಭಿಷನೂ ಬಸ್ಸೇರಿದ…ಕೂತವಿನಿಗೆ ಯಾಕೋ ಆಚಾರಿಯ ಮಾತುಗಳು ಮತ್ತೆ ನೆನಪಾದವು…
 “ಇದು ನನ್ನ ಕಟ್ಟಿಗೆ,ಇದು ನನ್ನ ಪೀಠ..ಇದನ್ನು ನಾನೇ ಮಾಡುತ್ತಿರುವುದು ಅಂತಾ ಮಾಡುಕಾಗ..ಎಲ್ಲದೂ ದೇವರದ್ದು..ಅವನೇ ಮಾಡ್ಸ್ಕಂತಿಪ್ಪುದು…ಹೇಳಿ ಮಾಡ್ದ್ರೆ ಎಲ್ಲದೂ ಸರಿ ಆತ್”..” 
ಜೊತೆಯಲ್ಲಿ
“ದೇವರು ಕೊಟ್ಟ ಭೂಮಿ,ಅವನು ಕೊಟ್ಟ ತೋಟ,ಅವನು ಕೊಟ್ಟ ಸಿಂಗಾರ..ಅದು ಸಲ್ಲುವುದೂ ಅವನಿಗೇ…ಮತ್ಯಾಕೆ ಈ ಜಗಳ ????”ಎಂಬ ಸಾಲುಗಳೂ ಮೂಡಿದವು…..
(ಇದು ಒಂದು ಕಾಲ್ಪನಿಕ ಕಥೆ..ನನ್ನ ಕನಸಿನ ಕಾದಂಬರಿಯಲ್ಲಿ ಬರುವ ಒಂದು ಪುಟ್ಟ ಭಾಗ..ಏನೋ ಬರೆಯುವ ಪ್ರಯತ್ನ ಮಾಡಿದ್ದೇನೆ..ನಮ್ಮ ಕಡೆ ಬಳಸುವ ಪದಗಳನ್ನು ಉಪಯೋಗಿಸುವ  ಪ್ರಯತ್ನವೂ ಇದೆ, ಶಬ್ಧಗಳು ಅರ್ಥವಾಗದಿದ್ದರೆ ದಯವಿಟ್ಟು ಕೇಳಿ..
ತಪ್ಪುಗಳಿದ್ದರೆ ದಯವಿಟ್ಟು ಹೇಳಿ...ನಿಮ್ಮ ಅನಿಸಿಕೆಗಳನ್ನು ಹೇಳಿ,ತಪ್ಪು-ಒಪ್ಪನ್ನು ತಿಳಿಸಿ,ಪ್ರೋತ್ಸಾಹಿಸಿ..)
-ನಿಮ್ಮನೆ ಹುಡುಗ,
ಚಿನ್ಮಯ ಭಟ್ಟ

29 comments:

Harisha - ಹರೀಶ said...

ಸೂಪರ್ ಇದ್ದು :)
ಒಂದ್ ಸಲ ಊರ ಬದಿಗೆ ಹೋಗ್ಬಂದಾಂಗಾತು :)

Shruthi B S said...

ತು೦ಬಾ ಚನ್ನಾಗಿದ್ದು ಚಿನ್ಮಯ್... ಮನುಷ್ಯ ತಾನು ತನ್ನದು ಅ೦ತ ಯೋಚನೆ ಮಾಡ್ತಾ ಇದ್ದಿದ್ರಿ೦ದನೇ ಇಷ್ಟೆಲ್ಲಾ ಜಗಳ, ಯುದ್ಧಗಳಾಗ್ತಾ ಇಪ್ಪುದು. ಎಲ್ಲಾ ದೇವರದ್ದು ಅನ್ನೋ ಯೋಚನೆ ಬ೦ದರೆ ಎಲ್ಲಾ ಸರಿ ಹೋಗ್ತು ಅಲ್ದಾ..?? ಹಾ೦.. ದೇವರು ಒಬ್ಬನೆ ಅನ್ನೋದು ಅರ್ಥ ಮಾಡ್ಕಳಕು.. ಇಲ್ದೆ ಇದ್ರೆ ಇದು ನಮ್ಮ ದೇವರದ್ದು, ಅದು ನಿಮ್ಮ ದೇವರದ್ದು ಅ೦ತ ಶುರುವಾಗ್ತು..
ಚನಾಗಿದ್ದು, ಇಷ್ಟ ಆತು...:)

Badarinath Palavalli said...

ಈ ನಡುವೆ ನಾನು ಓದಿದ ಅತ್ಯುತ್ತಮ ಮಾನವೀಯತೆ ಬೋಧಿಸುವ ಕಥನ.

ಗಿರೀಶ್.ಎಸ್ said...

ಚಿನ್ಮಯ್ ಕಥೆ ಚೆನ್ನಾಗಿದೆ... ಮನುಷ್ಯನ ಸ್ವ್ವರ್ಥಕ್ಕೆ ಕೆಲವೊಮ್ಮೆ ಹೊಡಹುಟ್ಟಿದವರು ಕೂಡ ಬಲಿ ಆಗುತ್ತಾರೆ.... ಕೆಲವೊಮ್ಮೆ ಸಣ್ಣ ಪುಟ್ಟ ವಸ್ತುಗಳಿಗೆ ಕೂಡ ಅಣ್ಣ ತಮ್ಮಂದಿರು ಜಗಳ ಕಾಯುವುದನ್ನು ನೋಡಿದ್ದೇನೆ....

ಅಲ್ಲದೆ ನಿಮ್ಮ ಕಥೆಯಲ್ಲಿ ಪೇಟೆಯಲ್ಲಿ ವಾಸಿಸುವ ಹುಡುಗ ಹಳ್ಳಿಗೆ ಬಂದಾಗ ಅನುಭವಿಸುವ ಸಂಕಟಗಳು ಕೂಡ ಎದ್ದು ಕಾಣುತ್ತದೆ..ಇನ್ನಷ್ಟು ಕಥೆ ಬರೆಯಿರಿ....

ಚಿನ್ಮಯ ಭಟ್ said...

ಧನ್ಯವಾದ ಹರೀಶ...ಸ್ವಾಗತ ನಮ್ಮನೆಗೆ..ಬರ್ತಾ ಇರಿ :)

ಚಿನ್ಮಯ ಭಟ್ said...

ಬದರಿ ಸರ್ ದೊಡ್ಡ ಮಾತು..ಖುಷಿಯಾಯ್ತು :)...ಏನಾದರೂ ತಪ್ಪುಗಳು,ಇನ್ನೂ ಸುಧಾರಿಸಬೇಕಾದ ಅಂಶಗಳು ಕಂಡಲ್ಲಿ ದಯವಿಟ್ಟು ತಿಳಿಸಿ...
ನಮಸ್ತೆ

ಚಿನ್ಮಯ ಭಟ್ said...

ನಿಜಾ ಶೃತಿ..
ಸುಮ್ಮನೆ ನಮ್ಮ ಕೆಲಸ ನಾವು ಮಾಡಿಕೊಂದಿದ್ರೆ ಯಾವ ತೊಂದ್ರೆನು ಇಲ್ಲೆ...ಇದು ನನ್ನದು,ಅದು ನಿನ್ನದು ಅಂತಾ ಹಂಚಿಕೊಂಡು ಕಿತ್ತಾಡೋದು ಇದ್ಯಲ್ಲಾ ಅದರ ಬಗ್ಗೆ ಏನ್ ಹೇಳದೋ ಗೊತ್ತಿಲ್ಲೆ...

ಹಾಂ ಮಕ್ಕಳಿಗೆ ಹಣ್ಣನ್ನ ಹಂಚಿತಿನ್ನಿ ಅಂತಾ ಹೇಳೋ ದೊಡ್ಡವರೇ ಹಣ್ಣು ಬಿಡುವ ಮರ,ಜಮೀನು ಮುಂತಾದವುಗಳಿಗಾಗಿ ಹೊಡೆದಾಡುವುದು ವಿಪರ್ಯಾಸ...


ಧನ್ಯವಾದ ಶೃತಿ ಅಂದದ ಪ್ರತಿಕ್ರಿಯೆಗಾಗಿ..ಬರ್ತಾ ಇರಿ :)

umesh desai said...

chennagide chinmay..so ethnic and words used take us to sirsi
keep it up boss

ಚಿನ್ಮಯ ಭಟ್ said...

ದೇಸಾಯಿ ಅವ್ರೆ ಸ್ವಾಗತ ನಮ್ಮನೆಗೆ...ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ..:)

ಚಿನ್ಮಯ ಭಟ್ said...

ಗಿರೀಶ,
ನಿಜವಾಗ್ಲೂ ಬೇರೆಯವರಿಗೆ ಬುದ್ಧಿ ಹೇಳುವ ಸ್ಥಾನದಲ್ಲಿರುವವರೂ ಸಹ ಚಿಕ್ಕ ಚಿಕ್ಕ ವಿಷಯಗಳಿಗೆ ಕಿತ್ತಾಡುವುದನ್ನು ನೋಡಿದಾಗ ಖೇದವೆನಿಸುತ್ತದೆ...

ಇನ್ನು ಪೇಟೆಯಿಂದ ಹಳ್ಳಿಗೆ ಬಂದವರ ಕಥೆಯಂತೂ ನಿಮಗೂ ಗೊತ್ತಿದೆ ಅಂದ್ಕೋಡಿದಿನಿ...

ಚೆನ್ನವಾದ ಪ್ರತಿಕ್ರಿಯೆಗಾಗಿ ಧನ್ಯವಾದಗಳು..\
ಖಂಡಿತ ಬರೆಯುವ ಪ್ರಯತ್ನ ಮಾಡುತ್ತೇನೆ..
ಬರ್ತಾ ಇರಿ,ನಿಮ್ಮ ಪ್ರೋತ್ಸಾಹಕ್ಕೆ ಆಭಾರಿಯಾಗಿದ್ದೇನೆ..
ನಮಸ್ತೆ

MPPRUTHVIRAJ KASHYAP said...

"ಹಾಂ ಆದರೆ ಈ ಸಿಂಗಾರ ಬೇಕೆಂದರೆ ಆ ಮರವನ್ನು ಕೊಲ್ಲಲೇ ಬೇಕು,,ಏಕೆಂದರೆ ಅದರ ತಲೆಯಲ್ಲಿಯೇ ಹೂವು ಇರುವುದು…."
ಭಟ್ರೆ ನಾನು ಒದುತ್ತಾ ಮೇಲಿನ ವಾಕ್ಯ ಹೇಗೆ ಅನ್ಸುತ್ತೆ ಅಂದ್ರೆ ನಮಗೆ ಸಿಂಗಾರ ಬೇಕಾದ್ರೆ ಅಡಕೆ ಮರ ಕಡಿಯಲೇಬೇಕು ಅಂತ ಆದರೆ ನನಗೆ ಗೊತ್ತಿರುವ ಪ್ರಕಾರ ಮತ್ತು ನೀವೇ ಮೇಲೆ ಹೇಳಿರುವ ಪ್ರಕಾರ ಮರ ಹತ್ತಿದರೆ ಸಾಕು ಆದನ್ನು ಕೀಳಬಹುದು ಅಂತ ಸೊ ಈ ವಾಕ್ಯ ಏನು ಎತ್ತ ಅಂತ ಸ್ವಲ್ಪ ಹೇಳಿ

ಚಿನ್ಮಯ ಭಟ್ said...

ಪ್ರೀತಿಯ ಗೆಳೆಯ ಪ್ರಥ್ವಿ,ನಿಮ್ಮ ಅನಿಸಿಕೆಗಾಗಿ ಮೊದಲು ವಂದನೆಗಳು..

ನಾನು ತಿಳಿದಿರುವ ಮಟ್ಟಿಗೆ,ಇಲ್ಲಿಯ ತನಕದ ಅನುಭವ ಆಧಾರದ ಮೇಲೆ ಹೇಳುವುದಾದರೆ ಅಡಿಕೆಯ ಸಿಂಗಾರ ಬೇಕೆಂದರೆ ಅದನ್ನು ಕಡಿಯಲೇ ಬೇಕು..ಇದು ನಾನು ನೋಡಿದ ಪದ್ಧತಿ..ಅಡಿಕೆಯ ತಲೆಚೆಂಡನ್ನು ಪದರು ಪದರಾಗಿ ಬಿಡಿಸುತ್ತಾ ಹೋದಂತೆ ಸಿಂಗಾರದ ಕೊಟ್ಟೆಗಳು ಸಿಗುತ್ತಾ ಹೋಗುತ್ತವೆ..ಇದು ನಾನು ನೋಡಿದ ಪದ್ಧತಿ..ಆ ಕೊಟ್ಟೆಯ ಒಳಗೆ ಸಿಂಗಾರವಿರುತ್ತದೆ..ಈ ಕೊಟ್ಟೆಯು ಸಹಜವಾಗಿ ಸಿಂಗಾರ ದೊಡ್ಡವಾದ ಮೇಲೆಯೇ ಬಿದ್ದರೆ ಅದನ್ನು "ಹಂಬಾಳೆ" ಎನ್ನುತ್ತೇವೆ...ಇವಿಷ್ಟು ನನಗೆ ಗೊತ್ತಿರುವ ಸಂಗತಿ..ಅದರ ಮಟ್ಟಿಗೆ ಬರೆದಿದ್ದೇನೆ..

ಇನ್ನು ಇಲ್ಲಿ ಬರುವ ಆಚಾರಿಯೂ ಸಹ ಅಷ್ಟೇನು ತೋಟದ ಬಗೆಗೆ ಮಾಹಿತಿ ಉಳ್ಳವನಲ್ಲ,ಅವನು ಅಲ್ಲಿ ಪ್ರಚಲಿತವಿರುವ ಪದ್ಧತಿಯನ್ನೇ ಅನುಸರಿಸುತ್ತಾನೆಯೇ ಹೊರತು,ಹೊಸತನ್ನು ಹುಡುಕಲು ಹೋಗುವುದು ಅನುಮಾನ..ಹಾಗಾಗೆ ಅವನು ಮರವನ್ನು ಕಡಿಯಲ್ಲಿ ಹವಣಿಸುತ್ತಿದ್ದದ್ದು...

ಇನ್ನು ನೀವು ನನ್ನ ತಲೆಯಲ್ಲಿ ಹೊಸ ಹುಳವನ್ನು ಬಿಟ್ಟಿದ್ದೀರಿ..ಈ ಸಲದ ದೀಪಾವಳಿಯಲ್ಲಿ ಅದರ ಪ್ರಯೋಗ ಮಾಡಿ ಪರಿಣಾವ ತಿಳಿಸುತ್ತೇನೆ..

ಚಿಕ್ಕಂದಿನಲ್ಲಿ ಅದೂ ಸಹ ಒಂದು ಮಜವೇ...ಗೋಟು ಅಡಿಕೆಗೆ ದಬ್ಬಣ ಸುರಿದು,ಅದಕ್ಕೆ ಪಚ್ಚೆತೆನೆ ಸಿಂಗಾರ ಸೇರಿಸಿ ಮಾಲೆ ಮಾಡುವುದೆಲ್ಲಾ ಇನ್ನೂ ಕಣ್ಣಿಗೆ ಕಟ್ಟಿದಂತಿದೆ...

ಆತ್ಮೀಯವಾದ ಪ್ರತಿಕ್ರೀಯೆಗೆ ವಂದನೆಗಳು..
ನಮಸ್ತೆ...

MPPRUTHVIRAJ KASHYAP said...

ಭಟ್ರೆ ಮೊದಲನೆಯದಾಗಿ ಸಿಂಗಾರವನ್ನ ಹೊಂಬಾಳೆ ಎಂಬುದು cover ಮಾಡಿ ಇರುತ್ತದೆ ಅದರ ಒಳಗೆ ಸಿಂಗಾರವಿರುತ್ತದೆ ಆ ಸಿಂಗಾರವೆ ಬೆಳೆದರೆ ಮುಂದೊಂದು ದಿನ ಅಡಕೆ ಕೊನೆಯಾಗುವುದು.ಇದು ಸಾರ್ವಕಾಲಿಕ ಸೊ ಸಿಂಗಾರವನ್ನ ಕೊಯ್ಯುವುದು ಎಂದರೆ ಅಡಕೆ ಕೊನೆ ತಗೆದಹಾಗೆ ಸೊ ಅಡಕೆ ಕೊನೆ ತೆಗೆಯಬೇಕಾದರೆ ಯಾರು ಮರವನ್ನ ಕಡಿಯುವುದಿಲ್ಲವೊ ಹಾಗೆ ಸಿಂಗಾರ ತೆಗೆಯಲು ಮರ ಕಡಿಯುವ ಅಗತ್ಯ ಕಂಡಿತ ಇಲ್ಲ.
ನೀವು ಒಂದುವೇಳೆ ಮರ ಕಡಿಯುವುದನ್ನು ನೊಡಿದಿರಿ ಅಂತ ಆದರೆ ಅದು ಕೇವಲ ಪದ್ದತಿಯಾಗಿರುತ್ತದೆ ಬದಲಾಗಿ ಕಡಿಯಲೇಬೇಕೆಂಬ ಅಗತ್ಯವಿರುವುದಿಲ್ಲ.
ನಾನು ಈ ವಿಷಯವಾಗಿ ಇಷ್ಟೊಂದು ಹೇಳುತ್ತಿರುದೆಂದರೆ ಕೊನೆಯಲ್ಲಿ ನೀವೇ ಹೇಳಿದ್ದೀರಿ ನಿಮ್ಮ ಕನಸಿನ ಕಾದಂಬರಿ ಅಂತ ಸೋ ನೀವು ಇಲ್ಲಿ ಎನೇ ಬರೆದರು ಅದನ್ನು ಪಕ್ಕಾ ಮಾಡಿಕೊಂಡೆ ಬರೆಯಿರಿ ಅಂತ. ಸೊ ಪದ್ದತಿಗೆ ನಮ್ಮ ವಿರೋಧವಿಲ್ಲ ಒಂದುವೇಳೆ ಪದ್ದತಿಯೇ ಆಗಿದ್ದರು ಆ ಪದ್ದತಿಯನ್ನು ವಿವರಿಸಿದರೆ ಅದರಿಂದ ಹೊಸ ಪದ್ದತಿಗಳನ್ನು ನಾವುಗಳು ತಿಳಿದುಕೊಳ್ಳಲು ಸಹಾಯವಾಗುತ್ತದೆ. ಆದರೆ ವಾಸ್ತವವಾಗಿಯೂ ಸಿಂಗಾರಕ್ಕಾಗಿ ಮರವನ್ನೇ ಕಡಿಯುವ ಅಗತ್ಯ 100 ಪ್ರತಿಶತ ಇಲ್ಲ ಒಮ್ಮೆ ಇದರ ಬಗ್ಗೆ confirm ಮಾಡಿಕೊಳ್ಳಿ ಧನ್ಯವಾದಗಳು

ಚಿನ್ಮಯ ಭಟ್ said...

ವಂದನೆಗಳು...ಪ್ರಥ್ವಿ

shivu.k said...

ಚಿನ್ಮಯ್,

ನಿಮ್ಮ ಕಾದಂಬರಿಯಲ್ಲಿನ ಒಂದು ಭಾಗ ಅಂತ ಹೇಳುತ್ತಿದ್ದೀರಿ...ಹವ್ಯಕ ಭಾಷೆಯ ಪದಗಳು..ಓದಿನ ಓಟವನ್ನು ನಿಲ್ಲಿಸುವುದು ಬಿಟ್ಟರೆ ಪ್ರಯತ್ನ ಉತ್ತಮವಾಗಿದೆ. ಬರಹದಲ್ಲಿ ಆಧ್ಯಾತ್ಮದ ಚಿಂತನೆ ಕಂಡು ಕಾಣದಂತೆ ಇದೆ..ಉತ್ಸಾಹದಿಂದ ಮುಂದುವರಿಸಿ..

balasubramanya said...

ನಿಮ್ಮ ಲೇಖನ ಬಹಳ ಇಷ್ಟಾ ಆಯ್ತು ಚಿನ್ಮಯ್ , ಹವ್ಯ ಭಾಷೆಯ ಸೊಗಡು ತುಂಬಿದ ಸಾಲುಗಳು ಲೇಖನದ ವಾಸ್ತವತೆಯ ದರ್ಶನ ಮಾಡಿಸಿವೆ.ನಿಮ್ಮ ಕನಸಿನ ಕಾದಂಬರಿಯ ಭಾಗ ಚೆನ್ನಾಗಿದೆ. ಕನಸಿನಿಂದ ನನಸಾಗಿ ಮುದ್ದಾದ ಕನ್ನಡದಲ್ಲಿ ಸುಂದರ ಕಾದಂಬರಿ ನಿಮ್ಮಿಂದ ಬರಲಿ ಓದಲು ನಾವೂ ಕಾಯುತ್ತೇವೆ.
ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

ಚಿನ್ಮಯ ಭಟ್ said...

ಶಿವು ಸರ್,
ಖಂಡಿತ ಸರ್...ಕಥೆಯ ವೇಗವನ್ನು ಕಡಿಮೆ ಮಾಡುವ ಪ್ರಯತ್ನ ಮಾಡುತ್ತೇನೆ..ಆಧ್ಯಾತ್ಮದ ಬಗ್ಗೆ ಅಷ್ಟೇನೂ ಗೊತ್ತಿಲ್ಲ ಸರ್..ಏನೋ ಆಚಾರಿಯ ಪಾತ್ರದ ಕಲ್ಪನೆಯಲ್ಲಿ ಬಂದ ಸಾಲುಗಳವು..

ವಂದನೆಗಳು ಸರ್ ನಿಮ್ಮ ಮಾರ್ಗದರ್ಶನಕ್ಕಾಗಿ...
ಖುಷಿಯಾಯ್ತು ನಿಮ್ಮ ಪ್ರತಿಕ್ರಿಯೆ ಓದಿ..
ದಾರಿ ತೋರುತ್ತಿರಿ,
ನಮಸ್ತೆ...

ಚಿನ್ಮಯ ಭಟ್ said...

ಬಾಲು ಸರ್...
ಧನ್ಯವಾದಗಳು ನಿಮ್ಮ ಪ್ರೋತ್ಸಾಹಕ್ಕಾಗಿ..ನಿಮ್ಮೆಲ್ಲರ ಆಶೀರ್ವಾದ ಇದೇ ತರ ಇರಲಿ...
ಬರ್ತಾ ಇರಿ..
ನಮಸ್ತೆ...

Srikanth Manjunath said...

ಬಸ್ ನಿಲ್ದಾಣಕ್ಕೆ ಹೋಗಿ..ಸರ್ ಚಿಕ್ಕಮಗಳೂರ್ ಹತ್ತಿರ ಇರುವ ಬನವಾಸಿಗೆ ಟಿಕೆಟ್ ಕೊಡಿ ಅಂದೇ...ನಿರ್ವಾಹಕ ಸರಿ ಎಂದು ಹೇಳಿ ಚೀಟಿ ಹರಿದ...ತಮಾಷೆ ಎಂದರೆ.ಆ ಚೀಟಿಯಲ್ಲಿ "ಕೆ.ಎಸ್ .ಆರ್.ಟಿ .ಸಿ ಗೆ ಸುಸ್ವಾಗತ....ಹೆಚ್ಚಿನ ಮಾಹಿತಿಗೆ ಈ ಕೊಂಡಿಯನ್ನು ಒತ್ತಿ" ಎನ್ನುವ ಸಂದೇಶ ಚೀಟಿಯಲ್ಲಿ ಇತ್ತು...
ಚಿನ್ಮಯ್...ನಿಮ್ಮ ಉತ್ತರ ಕನ್ನಡ ಭಾಷೆ, ನಿಮ್ಮ ಚಿಕ್ಕಮಗಳೂರಿನ ವಾಸ.ಇವರೆಡರ ಮಿಶ್ರಣ ಇಷ್ಟವಾಯಿತು...ಓದಲು (ಕೆಲವು ಕಡೆ ಅರ್ಥಮಾಡಿಕೊಳ್ಳಲು ಶ್ರಮಪಟ್ಟರು ನಿಮ್ಮ ಕಥೆಯ ಓಘ..ಸುಲಲಿತವಾಗಿ ದಡ ಸೇರಿಸುತ್ತದೆ.ಕಥೆ ಇಷ್ಟವಾಯಿತು..
ಮುಂದುವರೆಯಲಿ ಚಿಕ್ಕಮಗಳೂರಿನಲ್ಲಿ ಬನವಾಸಿಯ ಪಯಣ...

ಚಿನ್ಮಯ ಭಟ್ said...

ಶ್ರೀ...
ಧನ್ಯವಾದ ಅಂದದ ಪ್ರತಿಕ್ರಿಯೆಗಾಗಿ...
ಬರುತ್ತಿರಿ....
ನಮಸ್ತೆ..:)

ಸುಬ್ರಮಣ್ಯ said...

:-)

ಚಿನ್ಮಯ ಭಟ್ said...

ವಂದನೆಗಳು ಸುಬ್ರಹ್ಮಣ್ಯ ಸರ್..

Anonymous said...

ಚಂದಕ್ ಬರದ್ರಿ .... ಪ್ರಯತ್ನ ನಿರಂತರವಾಗಿ ಸಾಗಲಿ ಯಶಸ್ಸು ನಿಮ್ಮದೇ :)

Ashok K R said...

nice presentation.
only one suggestion!
please dont highlight few lines, that will distract us from reading other lines!

Swarna said...

ಕಥೆ ಚೆನ್ನಾಗಿದೆ.
ನಾವು ಒಂದು ಎಲೆಗಾಗಿ ಹೊದೆದಾಡುವವರು..ಮರ ದೊಡ್ಡದಲ್ಲವೇ ?
ಮೇಲೆ ಹೇಳಿದಂತೆ ಸಾಲುಗಳನ್ನ ಹೈ ಲೈಟ್ ಮಾಡದಿದ್ದರೆ ಒಳ್ಳೇದು ಅಂತ ನನ್ನ ಭಾವನೆ.
ನಿಮ್ಮ ಕಾದಂಬರಿ ಬೇಗ ಹೊರ ಬರಲಿ
ಸ್ವರ್ಣಾ

ಚಿನ್ಮಯ ಭಟ್ said...

ವಂದನೆಗಳು ರವಿಕಿರಣ...ಬರ್ತಾ ಇರಿ :)

ಚಿನ್ಮಯ ಭಟ್ said...

ಅಶೋಕಜೀ,
ಸ್ವಾಗತ ನಮ್ಮನೆಗೆ...ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗಾಗಿ...
ಖಂಡಿತ ನಿಮ್ಮ ಸಲಹೆಯನ್ನು ಸ್ವೀಕರಿಸುತ್ತೇನೆ...ಇನ್ನು ಮುಂದೆ ಈ ಬಗ್ಗೆ ಗಮನ ಹರಿಸುತ್ತೇನೆ...

ಪ್ರೀತಿಯಿಂದ ಪ್ರತಿಕ್ರಿಯಿಸಿದ್ದಕ್ಕಾಗಿ ವಂದನೆಗಳು ಸರ್...

ಬರುತ್ತಿರಿ..ಖುಷಿಯಾಯ್ತು..
ನಮಸ್ತೆ..

ಚಿನ್ಮಯ ಭಟ್ said...

ಸ್ವರ್ಣಾ..
ನಿಜವಾಗಿಯೂ ಎಲೆಗಾಗಿಯೂ ಹೊಡೆದಾಡುವರೆ!!!..ಎಲ್ಲದೂ ನನ್ನದೂ,ನಾನೇ ಮಾಡಿದ್ದು...ಇವೇ ಬಹುಷಃ ಈ ತರಹದ ಜಗಳಗಳಿಗೆ ಕಾರಣಾವಿರಬಹುದೇನೋ...

ವಂದನೆಗಳು ನಿಮ್ಮ ಪ್ರೋತ್ಸಾಹಕ್ಕಾಗಿ...ಖಂಡಿತ ನಿಮ್ಮ ಸಲಹೆಯನ್ನು ಪರಿಗಣಿಸುತ್ತೇನೆ...

ತಪ್ಪುಗಳನ್ನು ತಿಳಿಸಿದ್ದಕ್ಕಾಗಿ ಧನ್ಯವಾದಗಳು..ನನ್ನನ್ನು ಇದೇ ರೀತಿ ತಿದ್ದಿ ತೀಡಿ..

ಬರುತ್ತಿರಿ..
ನಮಸ್ತೆ...

ಚಿನ್ಮಯ ಭಟ್ said...

ಮೊನ್ನೆ ನೀವು ಹೇಳಿದ ಮಾತು ಮತ್ತೊಮ್ಮೆ ನಿಜ ಅನಿಸಿತು...