Tuesday, November 27, 2012

ಬಾ ಮರಳಿ……




ಸುಮ್ಮನೆ ಒಂದು ಕವನ ಬರ್ದಿದೀನಿ...ದಯವಿಟ್ಟು ತಪ್ಪು-ಒಪ್ಪು ತಿಳಿಸಿ....

ನಗೆಯಲ್ಲೆ ಅಪಹರಿಸಿ,ನಯನದಲೆ ಉಪಚರಿಸಿ
ನಾಭಿಯಲು ಸಂಚರಿಸಿ,ನಡಿಗೆಯಲು ಛಾಪಿರಿಸಿ
ಮಂಜಿನಂತೆ ಕರಗಿ ಮರೆಯಾದ ಮೋಹಿತೆ,
ಪಂಜಿನಂತೆ ಉರಿದು ಬರಿದಾದ ಸ್ನೇಹಿತೆ
ಕಣ್ಣಲ್ಲೆ ನಿನ್ನ ಹಚ್ಚೆಯ ಬರೆದಿಹೆ
ಓ ಗಿಣಿಯೆ ಬಾ ಒಮ್ಮೆ,ನಿನಗೆ ಕಾದಿಹೆ.

ಬಜ್ಜರಂದದ ಬೆಡಗಿ,ಚಿಕಣಿಯ ಕಂಗಳ ಹುಡುಗಿ,
ಕಂಜರಿಯಂತಹ ನುಡಿಯು,ಕಾಡುವ ಮೊಗ್ಗಿನ ಜಡೆಯು,
ಎಂದೆಂದೂ ನಿನ್ನ ಜೊತೆಗೆ ಇರುವ ಹವಣಿಕೆ,
ಸರಿಸಿ ಹಳೆಯ ಪರದೆ,ಬಾ ನೀ ಸನಿಹಕೆ,

ಬಣ್ಣಗಳು ಹಳೆನೆನಪು,ಇಂದೆಲ್ಲಾ ಕರಿಬಿಳುಪು,
ಕಾಣದು ಕಣ್ಣಲಿ ಹೊಳಪು ,ಕರಗಿದೆ ಕನಸಿನ ಒನಪು,
ಆ ಕಾಲನಿಂದ ಬಿರಿದೆದೆಗೆ ಮುತ್ತಿಗೆ.
ಸೋಲಿಸುವೆ ಅವನ ನೀ ಬರುವಾ ಹೊತ್ತಿಗೆ.
-ಚಿನ್ಮಯ
(ಶಬ್ಧಾರ್ಥ : ಬಜ್ಜರ-ವಜ್ರ,ಕಂಜರಿ-ಸಣ್ಣ ತಮಟೆ,ನಾಭಿ-ಹೊಕ್ಕಳು,ಕೇಂದ್ರ ಸ್ಥಾನ,ಚಿಕಣಿ-ಚಿಕ್ಕ )

30 comments:

Subrahmanya said...

"ಬಣ್ಣಗಳು ಹಳೆನೆನಪು,ಇಂದೆಲ್ಲಾ ಕರಿಬಿಳುಪು,
ಕಾಣದು ಕಣ್ಣಲಿ ಹೊಳಪು ,ಕರಗಿದೆ ಕನಸಿನ ಒನಪು,"

ಅದ್ಭುತ ಸಾಲುಗಳು , ಬಹಳ ಇಷ್ಟವಾಯಿತು . ಯಾವುದೂ ತಪ್ಪಿಲ್ಲ, ಎಲ್ಲವೂ ಒಪ್ಪಗಿದೆ. ಬರೆಯುತ್ತಿರಿ.

ಪುಷ್ಪರಾಜ್ ಚೌಟ said...

ತವಕವಿದೆ ಎದೆಯೊಳಗೆ ಒಲವು ಚಿಕಣಿ ಸುಂದರಿ ಮರಳಿ ಬರಲೆಂದು..
ಆ ಕಾಲನಿಂದ ಬಿರಿದೆದೆಗೆ ಮುತ್ತಿಗೆ
ಸೋಲಿಸುವೆ ಅವನ ನೀ ಬರುವಾ ಹೊತ್ತಿಗೆ
ಎನ್ನುವಲ್ಲಿನ ಹುರುಪು ತುಂಬಿದ ಸಾಲುಗಳು ಮುದ ನೀಡುತ್ತವೆ. ಓದುತ್ತೇನೆ ಸಮಯ ಸಿಕ್ಕಾಗಲೆಲ್ಲ ನಿಮ್ಮೆ ಕವಿತೆಗಳ.

Srikanth Manjunath said...

ನಾನು ಕುಡಿಯುವ ಕಾಫೀಯಲ್ಲಿ ಕಾಫಿಪುಡಿ ಜಾಸ್ತಿ..ಸಕ್ಕರೆ ಹಾಲು ಸುಮಾರು ಕಡಿಮೆ ಇರುತ್ತೆ..ಚಿನ್ಮಯ್ ನಿಮ್ಮ ಕವಿತೆಗಳ ಸಾಲು ತುಂಬಾ ಗಾಢವಾಗಿದೆ..ಏಕ ದಂ ಕಿಕ್ ಕೊಡೋಲ್ಲ...ಆದ್ರೆ ನಿಧಾನವಾಗಿ ನಶೆ ಏರುತ್ತಿದೆ..ಸತ್ಯವಾನನ ಪ್ರಾಣವನ್ನು ಬಿಡಿಸಲು ಸಾವಿತ್ರಿ ಯಮನ ಜೊತೆ ವಾಗ್ವಾದ ನಡೆಸಿದಳು...ನಮ್ಮ ರಸ ಕವಿ ಕಾಲನ ಜೊತೆ ಗುದ್ದಾಡಲು ಸಿದ್ಧವಾಗಿದ್ದಾರೆ ಅದಕ್ಕೆ ಕಾರಣ ಕೂಡ ಕೊಟ್ಟಿದ್ದಾರೆ ಕವನಗಳ ಸಾಲುಗಳಲ್ಲಿ..ಇಂತಹ ಸ್ನೇಹ ಕೊಡುವ ಸಂಗಾತಿಗೆ ಇದಕ್ಕಿಂತ ಬೇರೆ ಏನು ಕೊಡುಗೆ ಕೊಡಲು ಸಾಧ್ಯ...ಸೂಪರ್..ಚಿನ್ಮಯ್

ಸುಬ್ರಮಣ್ಯ said...

:-)

balasubramanya said...

ಚಿನ್ಮಯ್ ಕವಿತೆಯಲ್ಲಿ ಪ್ರೀತಿಯ ಶೃಂಗಾರ ರಸ ಹರಿದಿದೆ.
"ಬಜ್ಜರಂದದ ಬೆಡಗಿ,ಚಿಕಣಿಯ ಕಂಗಳ ಹುಡುಗಿ,
ಕಂಜರಿಯಂತಹ ನುಡಿಯು,ಕಾಡುವ ಮೊಗ್ಗಿನ ಜಡೆಯು,
ಎಂದೆಂದೂ ನಿನ್ನ ಜೊತೆಗೆ ಇರುವ ಹವಣಿಕೆ,
ಸರಿಸಿ ಹಳೆಯ ಪರದೆ,ಬಾ ನೀ ಸನಿಹಕೆ,"
ನನಗೆ ಇಷ್ಟವಾದ ಸಾಲುಗಳು.
ಮತ್ತಷ್ಟು ಬರಲಿ ನಿಮ್ಮಿಂದ.
ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

mohan kumar.c said...

chandavagi bareyuttiri..

Badarinath Palavalli said...

ಮೊದಲನೆಯದಾಗಿ ಮೋಹಿತೆ ಎನ್ನುವ ಪದ ಸೆಳೆಯಿತು.

ಬಜ್ಜರಂದ., ಚಿಕಣಿ ಮುಂತಾದ ಪದಗಳು ನನಗೂ ಹೊಸದು, ಧನ್ಯವಾದ.

ಒಟ್ಟಾರೆಯಾಗಿ ಒಳ್ಳೆ ಪ್ರೇಮ ಪತ್ರವಾಗುವ ಕವನ. ಮೆಚ್ಚುಗೆ ಮೆಚ್ಚುಗೆ.

Dr.D.T.Krishna Murthy. said...

ಚಿನ್ಮಯ್;ಕವಿತೆ ಸೊಗಸಾಗಿ ಮೂಡಿಬಂದಿದೆ.ಬರವಣಿಗೆ ಮುಂದುವರೆಸಿ.

ಮೌನರಾಗ said...

ಚಂದ ಬರ್ದಿದ್ದಿ ಚಿನ್ಮಯ್..
ಉತ್ಸಾಹ ತುಂಬಿದ ಕವಿತೆ..
ಸೂಪರ್...

vaishu said...

ನವಿರಾದ ಭಾವನೆಯ ಹೊತ್ತ ಪದಪುಂಜಗಳ ಮೆರವಣಿಗೆ ನಿಮ್ಮೀ ಕವನ.ತುಂಬಾ ಚೆನ್ನಾಗಿದೆ.ಬರೆಯುತ್ತಿರಿ.:-)

Shruthi B S said...

ಕವನ ತು೦ಬಾ ಚನಾಗಿದ್ದು ಚಿನ್ಮಯ್.... ತು೦ಬಾ ಆಳವಾಗಿ ಬರದ್ದೆ... ಬಣ್ಣಗಳು ಹಳೆನೆನಪು, ಇ೦ದೆಲ್ಲಾ ಕರಿಬಿಳುಪು ಸಾಲುಗಳೂ ಬಹಳ ಇಷ್ಟ ಆತು...

ಚಿನ್ಮಯ ಭಟ್ said...

ಸುಬ್ರಹ್ಮಣ್ಯ ಹೆಗಡೆಜೀ,
ಅದೇನೋ ಗೊತ್ತಿಲ್ಲ...ಯಾರೋ ಹಳೆಯ ಚಿತ್ರದಲ್ಲಿಯ ಮಾಧುರ್ಯ ಇಂದಿನ ಗೀತೆಗಳಲ್ಲಿಲ್ಲ ಎಂದರು...ನನಗೆ ಅವಾಗ್ಲೇ "ಹಳೆಯ ಬಂಗಾರ ಅಂದು,ಬರಿಯ ಹೊಳೆಯುವಿಕೆ ಇಂದು" ಎಂದು ಅನಿಸಿ,ಪಟ್ಟಿಯ ತುದಿಯಲ್ಲಿ ಬರೆದಿಟ್ಟೆ..ಈ ಕವನ ಬರೆಯುವಾಗ ಆ ಸಾಲುಗಳು ಕಣ್ಣಿಗೆ ಕಂಡವು ಅದನ್ನೇ ಚೂರು ಬದಲಾಯಿಸಿ ಬಣ್ಣಗಳು ಹಳೆನೆನಪು ಇಂದೆಲ್ಲಾ ಕರಿಬಿಳುಪು ಎಂದು ಬರೆದೆ...
ವಂದನೆಗಳು ನಿಮ್ಮ ಪ್ರೋತ್ಸಾಹಕ್ಕಾಗಿ :)
ಬೋಣಿಗೆ ಕಮೆಂಟು!!!!ಖುಷಿಯಾಯ್ತು :)
ಬರುತ್ತಿರಿ...
ನಮಸ್ತೆ :)

ಚಿನ್ಮಯ ಭಟ್ said...

ಪುಷ್ಟರಾಜ ಚೌಟರೇ...
ಖಂಡಿತ ಬರಿಯ ಯಾತನೆಯನ್ನೇ ಹೇಳುವ ಬದಲು ಕೊನೆಯಲ್ಲಿ ಮತ್ತೆ ಸಿಗುವಳೇನೋ ಎಂಬ ಆಶಾಕಿರಣವನ್ನು ಇಟ್ಟರೆ ಅರ್ಥಪೂರ್ಣ ಎನಿಸಿತು ಅದಕ್ಕಾಗಿ ಆ ಸಾಲುಗಳು..
ವಂದನೆಗಳು ಅಕ್ಕರೆಯ ಪ್ರತಿಕ್ರಿಯೆಗಾಗಿ..
ಬರುತ್ತಿರಿ
ನಮಸ್ತೆ.

Subrahmanya said...

ಹಿಂದಿನ ಹಾಡುಗಳ ಮಾಧುರ್ಯ ಇಂದಿನ ಚಿತ್ರಗಳಲ್ಲಿ ಇಲ್ಲ ಎಂಬುದು ನಿಜವೇ ಹೌದು. ಒಬ್ಬ ಜಯಂತ್ ಕಾಯ್ಕಿಣಿ , ಒಬ್ಬ ಕವಿರಾಜ್ ಹೀಗೆ ಬೆರಳೆಣಿಕೆಯಷ್ಟು ಗೀತರಚನಾಕಾರರನ್ನು ಬಿಟ್ಟರೆ ಮತ್ಯಾರೂ ಇಂಪು ಮೆಲೋಡಿನೆಸ್ ಗಳ ಬಗ್ಗೆ ತಲೆಯನ್ನೇ ಕೆಡಿಸಿಕೊಳ್ಳುತ್ತಿಲ್ಲ ಎಂಬುದೂ ನಿಜ. ಈ ಹಿನ್ನೆಯೇಳಲ್ಲಿ ಬರೆದ ಆ ಸಾಲುಗಳು ಹಿನ್ನೆಲೆಯನ್ನು ತಿಳಿದ ಮೇಲೆ ಮತ್ತೂ ಅದ್ಭುತವಾಗಿ ಕಾಣುತ್ತದೆ.

ಯಾವಾಗಲೂ ಬರುತ್ತಿರುತ್ತೇನೆ, ಕಾಮೆಂಟ್ ಮಾಡಿದ್ದು ಈಗಷ್ಟೇ . :)

ಚಿನ್ಮಯ ಭಟ್ said...

ಶ್ರೀಕಾಂತ್...
ಕಿಕ್ ತೆಗೆದುಕೊಂಡಿದ್ದು ನನ್ನ ಪುಣ್ಯ ಎಂದು ಭಾವಿಸುತ್ತೇನೆ...
ಖಂಡಿತ ಇಲ್ಲಿ ಬರಿಯ ಯಾತನೆಯನ್ನಷ್ಟೇ ಹೇಳದೇ ಇನ್ನೇನನ್ನೋ ಹೇಳಬೇಕು ಎಂಬುದು ಮೊದಲೇ ಇತ್ತು..ಆದಎರ್ ಅದ್ಯಾಕೋ ಅಲ್ಲೆಲ್ಲೂ ಸರಿ ಕಾಣಲಿಲ್ಲ ಜಾಗ ಅದಕ್ಕೆ...ಅದಕ್ಕೆ ಕೊನೆಯಲ್ಲೆ ಹಾಕಿದೆ...ಮೊದಲಿಗೆ ಮೊದಲ ನಾಲ್ಕು ಬರೆದು ಆಮೇಲೆ ಕೊನೆಯ ಎರಡು ಸಾಲು ಬರೆದದ್ದು..ಆಮೇಲೇಕೋ ಬೇಡಾ ಎನಿಸಿ ಕಾಟು ಹಾಕಿದ್ದೆ...ಪದ್ಯ ಹೇಗೆ ಮುಗಿಸುವುದು ಎಂದು ತಲೆಕೆರೆದು ಕೊಳ್ಳುತ್ತಿರುವಾಗ ಮತ್ತೇಕೋ ಕಾಟು ಹಾಕಿದ ಸಾಲುಗಳೇ ಕಣ್ಣಿಗೆ ಕುಕ್ಕಿದವು...ಎದೆಗವಚದ ಮುರಿದು ಹೊರಬಂದು ದೇವರೊಡನೆ ಸೆಣೆಸುವೆ ಎಂಬಂತಿದ್ದ ಶಬ್ದಗಳನ್ನೆ ಹಿಂದೆ ಮುಂದೆ ಮಾಡಿದೆ ಅಷ್ಟೇ....ವಂದನೆಗಳು ನಿಮ್ಮ ಅಕ್ಕರೆಗಾಗಿ...

ಪ್ರತಿಯೊಂದು ಬ್ಲಾಗಿಗರ,ಪ್ರತಿಯೊಂದು ಪೋಸ್ಟನ್ನೂ ಓದಿ ಅವರಿಗೆ ಉತ್ತೇಜನ ಕೊಡುವ ನಿಮ್ಮ ದೊಡ್ಡತನ ನನಗಂತೂ ಮಾದರಿ...
ಬರುತ್ತಿರಿ...
ನಮಸ್ತೆ :)

ಚಿನ್ಮಯ ಭಟ್ said...

ಬಾಲು ಸರ್.....
ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ...
ನಾನು ಆತುರದಲ್ಲಿ ಅದೇಷ್ಟೊ ತಪ್ಪುಗಳನ್ನು ಮಾಡಲು ಹೊರಟಿರುತ್ತೇನೆ...ಅದನ್ನೆಲ್ಲಾ ನೋಡಿ ಹಾಗೆ ಬೇಡ ಚಿನ್ಮಯ್..ಹೀಗಾಗುತ್ತದೆ ...ಎಂದು ಹೇಳುತ್ತಾ ಅದರ ಮಧ್ಯೆಯೇ ಹಾಸ್ಯ ಚಟಾಕಿ ಹಾರಿಸುವ ನಿಮಗೆ ಏನೆನ್ನಲಿ..
ನಮಸ್ಕಾರ ಗುರುಗಳೆ...ನಿಮ್ಮ ಮಾರ್ಗದರ್ಶನ ಹೀಗೇ ಇರಲಿ ಎನ್ನಬಹುದಷ್ಟೇ...

ಹಾಂ ಅಲ್ಲಿ ಮೂರನೇ ಸಾಲಿನಲ್ಲಿ ಬಂದಣಿಕೆ(ಬಳ್ಳಿ) ಎನ್ನುವ ಪದ ಬಳಸಬೇಕೆಂಬ ಮನಸ್ಸಿತ್ತು...ಯಾಕೋ ಎಷ್ಟೇ ಒದ್ದಾಡಿದರೂ ಅಲ್ಲಿಗೆ ಸರಿಯಾಗಿ ಕೂರಲೇ ಇಲ್ಲ...ಕೊನೆಗೆ ಸರಿಸಿ ಹಳೆಯ ಜವನಿಕೆ ಎಂದು ಬರೆದು ಪಟ್ಟೊಯನ್ನು ಮುಚ್ಚಿಟ್ಟೆ..ಇಲ್ಲಿ ಬೆರಳಚ್ಚಿಸುವಾಗ ಯಾಕೋ ಪರದೆಯೆನ್ನುವ ಪದವೇ ಇಷ್ಟವಾಯಿತು..

ಅದಕ್ಕಾಗೇ ಪರದೆ
ಎಂದು ಬರೆದೆ

ವಂದನೆಗಳು ಸರ್...
ಬರುತ್ತಿರಿ...
ನಮಸ್ತೆ...

ಚಿನ್ಮಯ ಭಟ್ said...

ವಂದನೆಗಳು ಸುಬ್ರಹ್ಮಣ್ಯ ಮಾಚಿಕೊಪ್ಪಜೀ,ಈ ಸ್ಪೂರ್ತಿ ಕೊಡುವ ಪಟ್ಟಿಯಲ್ಲಿ ಪ್ರೋತ್ಸಾಹದ ಅಂಕಿತವನ್ನು ಹಾಕಿದ್ದಕ್ಕಾಗಿ...

ಚಿನ್ಮಯ ಭಟ್ said...

ಬದರಿ ಸರ್..
ಯಾಕೋ ಗೊತ್ತಿಲ್ಲ ಈಗೀಗ ನಮ್ಮ ಮನೆಯ ಕಡೆ ಬಳಸುವ ಪದಗಳನ್ನು ಬಳಸಲು ಇಷ್ಟವಾಗುತ್ತದೆ..ಹಾಗಾಗಿ ಆ ಶಬ್ಧಗಳಿಗೆ ಶಬ್ಧಕೋಶದಲ್ಲಿ ಅರ್ಥ ಹುಡುಕುತ್ತಿರುತ್ತೇನೆ...
ಮೊನ್ನೆ ಯಾವತ್ತೋ ಹಾಗೇ ನೋಡುವಾಗ ಚಿಕಣಿ ಎನ್ನುವ ಶಬ್ಧ ಇಷ್ಟವಾಗಿ ಪಟ್ಟಿಯ ತುದಿಯಲ್ಲಿ ಚಿಕ್ಕದು ಎಂದು ಬರೆದಿದ್ದೆ...ಅದನ್ನೇ ಬಳಸಿದೆ..
ಹಾಂ ನಮ್ಮ ಕಡೆ ಚಿಕಣೆ ಅಡಿಕೆ ಎಂಬುದು ಅಡಿಕೆಯ ಎಂದು ಪಡಿ...ಮಾರಲು ಸೊಸೈಟಿಗೆ ತೆಗೆದುಕೊಂಡು ಹೋಗುವಾಗ ಅಪ್ಪ ಒಂದೊಂದು ಥರದ ಅಡಿಕೆಯನ್ನು ಒಂದೊಂದು ಚೀಲದಲ್ಲಿ ಹಾಕಿಕೊಂಡು ಹೋಗುವುದು ಇಂದಿಗೂ ನೆನಪಿದೆ...ಅದಕ್ಕೆ ವಿಶೇಷ ಬೆಲೆ...ಹಮ್..ಈ ವಿವರಣೆ ಬೇಕಿತ್ತಾ??ಗೊತ್ತಿಲ್ಲಾ....ಚಿಕಣಿ ಎನ್ನುತ್ತಾ ನೆನಪಾಯಿತು ಬರೆದೆ...

ವಂದನೆಗಳು ನಿಮ್ಮ ಸಲಹೆಗಳಿಗಾಗಿ...
ತಿದ್ದುತ್ತಿರಿ...ಧನ್ಯವಾದ ಮೆಚ್ಚಿದ್ದಕ್ಕೆ :)

ನಮಸ್ತೆ :)

ಚಿನ್ಮಯ ಭಟ್ said...

ಮೋಹನ ಕುಮಾರಜೀ,
ಸ್ವಾಗತ ನಮ್ಮನೆಗೆ...
ವಂದನೆಗಳು ನಿಮ್ಮ ಪ್ರತಿಕ್ರೀಯೆಗೆ...
ಬರುತ್ತಿರಿ..
ತಪ್ಪುಗಳು,ಇನ್ನೂ ಸುಧಾರಿಸಬೇಕಾದ ಅಂಶಗಳಿದ್ದರೆ ತಿಳಿಸುವಿರೆಂಬ ಭರವಸೆಯೊಂದಿಗೆ.
ನಮಸ್ತೆ :)

ಚಿನ್ಮಯ ಭಟ್ said...

ಡಾಕ್ಟ್ರೇ..

ನಿಮ್ಮಂತಹ ಬೆನ್ನು ತಟ್ಟುವ ಹಿರಿಯರಿರುವಾಗ ನನಗೇಕೆ ನಿಲ್ಲುವ ಭಯ..ಖಂಡಿತ ಬರೆಯುತ್ತೇನೆ..ಖುಷಿಯಾಯ್ತು..ಅಲ್ಲಲ್ಲ ಟಾನಿಕ್ಕು,ಗ್ಲೂಕೋಜು ಕೊಟ್ಟ ಹಂಗಾಯ್ತು!!!

ತಪ್ಪಾದ್ರೆ ಇಂಜಕ್ಷನ್ನು ಕೊಡಲೂ ಮರೆಯದಿರಿ...ಹಾ ಹಾ
ನಮಸ್ತೆ..

ಚಿನ್ಮಯ ಭಟ್ said...

ಸುಷ್ಮಾ..
ಧನ್ಯವಾದ ಕಣ್ರಿ ನನಗೆ ಉತ್ಸಾಹ ತುಂಬಿದ್ದಕ್ಕೆ...
ಹಾಂ ಒಂದು ಮಾತು ಭಾವನೆಗಳಿಗಿಂತ ಶಬ್ಧಗಳು ಜಾಸ್ತಿಯಿರುವುದನ್ನು ಗೀಚುವವರು ನಾವು,ಶಬ್ಧಕ್ಕಿಂತ ಹೆಚ್ಚಿನ ಭಾವ ತುಂಬಿದ ಬರಹ ಬರೆಯುವವರು ನೀವು...ನಿಮ್ಮ ಆ ಶೈಲಿ ಇಷ್ಟ..ಸಾಧ್ಯವಾದಷ್ಟು ಬರೆಯಲು ಯತ್ನಿಸುತ್ತೇನೆ...

ವಂದನೆಗಳು..

ಚಿನ್ಮಯ ಭಟ್ said...

ವೈಶಾಲಿಯವರೇ,
"ನವಿರು" ಆಹಾ...ಸುಂದರ ಶಬ್ಧ..
ವಂದನೆಗಳು ನಿಮ್ಮ ಪ್ರೋತ್ಸಾಹಕ್ಕೆ...ಬರುತ್ತಿರಿ...
ನಮಸ್ತೆ :)

ಚಿನ್ಮಯ ಭಟ್ said...

ಶೃತಿ,
ಆಳವಾಗಿ ಬರೆಯುವ ಪ್ರಯತ್ನ ಅಂದರೆ ಏನೂ ಅಂತಾ ಪೂರ್ತಿಯಾಗಿ ನನಗೆ ಗೊತ್ತಿಲ್ಲ....ಆ ಪಾತ್ರವೇ ನಾನು ಎಂದು ಕಲ್ಪಿಸಿ ಬರೆದ ಕವನ ಇದು...ಅಲ್ಲಿರುವ ತುಮುಲಗಳನ್ನ,ಆಸೆಗಳನ್ನು ಪದಗಳಲ್ಲಿ ಹಿಡಿದಿಡುವ ಪ್ರಯತ್ನ ಅಷ್ಟೇ...
ಹಾಂ ಬಣ್ಣಗಳು ಹಳೆನೆನಪು,ಇಂದೆಲ್ಲಾ ಕರಿಬಿಳುಪು...ಇಲ್ಲಿಗೆ ದೂರರ್ಶನದ ಉದಾಹರಣೆಯೂ ಸರಿಯೆ...ಬಣ್ಣದ್ದಕ್ಕೆ ಬೆಲೆ ಹೆಚ್ಚು,ಕಪ್ಪು-ಬಿಳುಪಿಗೆ ಬೆಲೆಕಡಿಮೆ...ಹಾಗಾಗಿ ಅವಳಿದ್ದ ಕಾಲಕ್ಕೆ ಬಣ್ಣ,ಈಗ ಕಪ್ಪು ಬಿಳುಪು...ಹಿಂಗೆ ಏನೇನೋ ಯೋಚನೆಯೋ ಇದರ ಜೊತೆಗಿದೆ...ಮತ್ತೆ ಮೇಲೆ ಹೇಳಿದಂತೆ ಹಳೆಯ ಗೀತೆಗಳ ಮಾಧುರ್ಯದ ಬಗೀ,ಇಂದಿನ ಗೀತೆಯ ಅವಸ್ಥೆಯ ಬಗ್ಗೆ ಬರಿಯುವ ಯತ್ನದಲ್ಲಿ ಬರೆದ ಸಾಲೂ ಹೌದು..ಹೆಂಗಾದ್ರೂ ತಿಳ್ಕಳಿ...ಖುಷಿಯಾಯ್ತು...

ಬರುತ್ತಿರಿ..ಶೃತಿ..ನಿಮ್ಮ ಸಹಕಾರ ಹೀಗೇ ನಿರಂತರವಾಗಿರಲಿ...
ನಮಸ್ತೆ :)

ಚಿನ್ಮಯ ಭಟ್ said...

ಖಂಡಿತ ಸುಬ್ರಹ್ಮಣ್ಯಜೀ,
ನನಗೂ ಕವಿತೆ ಹುಟ್ಟಿದ ರೀತಿ,ಅದರ ಸಾಲುಗಳ ಹಿಂದಿನ ಅರ್ಥ ತಿಳಿಯುವುದು ಬಹಳ ಹಿತಕೊಡುತ್ತದೆ....ಹಾಂ ಮಣಿಕಾಂತರ "ಹಾಡು ಹುಟ್ಟಿದ ಸಮಯ"ವನ್ನಂತೂ ಅದೆಷ್ಟು ಬಾರಿ ನೆನೆಸಿಕೊಳ್ಳುತ್ತೇನೋ ತಿಳಿಯೆ...
ವಂದನೆಗಳು ನಿಮ್ಮ ಮಾತುಗಳಿಗಾಗಿ....ದಯವಿಟ್ಟು ತಪ್ಪು-ಒಪ್ಪುಗಳನ್ನು ತಿಳಿಸಿ..ನೋಡಿ ಸುಮ್ಮನೆ ಹೋಗದಿರಿ..
ಈ ಸಲ ಬಂದಿದ್ದು ಬಹಳ ಖುಷಿಯಾಯ್ತು....

ನಿಮ್ಮ ಮಾತುಗಳು ಅನಿಸಿಕೆಗಳೇ ಶಕ್ತಿ,
ನಿಮ್ಮ ಕಮೆಂಟುಗಳೇ ಸ್ಪೂರ್ತಿ..

ನಮಸ್ತೆ...

Subrahmanya said...

:)

ನಾನೂ ನಿನ್ನಷ್ಟೇ ದೊಡ್ಡವ ಅಥ್ವಾ ಸ್ವಲ್ಪ ಹೆಚ್ಚೂ ಕಮ್ಮಿ. ಸಿಕ್ಕಾಪಟ್ಟೆ ಗೌರವ ಕೊಟ್ರೆ ಮುಜುಗರ ಆಗ್ತು .

ಚಿನ್ಮಯ ಭಟ್ said...

ಹಮ್..ಸರಿನಪ್ಪಾ ಖುಷಿ ಆತು...ಬರ್ತಿರು :)

ಪದ್ಮಾ ಭಟ್ said...

nice......

ಚಿನ್ಮಯ ಭಟ್ said...

ಪದ್ಮಾ ಭಟ್..
ಸ್ವಾಗತ ನಮ್ಮನೆಗೆ :)
ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ :)
ಬರ್ತಾ ಇರಿ :)
ನಮಸ್ತೆ

bilimugilu said...

Lovely.... kavana tumbaa chennaagide.

Roopa Satish

ಚಿನ್ಮಯ ಭಟ್ said...

ರೂಪಾ ಮೇಡಮ್...
ಸ್ವಾಗತ ನಮ್ಮನೆಗೆ...
ಧನ್ಯವಾದ ನೀವು ತೋರುವ ಆತ್ಮೀಯತೆಗೆ.... ನಿಮ್ಮ ಪ್ರೋತ್ಸಾಹಕ್ಕೆ ...
ಸಂತೋಷವಾಯ್ತು...ಬರುತ್ತಿರಿ :)
ನಮಸ್ತೆ.....