Monday, October 14, 2013

"ಜಟ್ಟ"...ಮುಚ್ಚಿದ ಬಾಗಿಲೊಳಗೊಂದು ಸತ್ವಪೂರ್ಣ ಕಥನ..

ನಾನು ಸುಮಾರು ಒಂದು ತಿಂಗಳಿನಿಂದ ಜಟ್ಟ ಚಿತ್ರದ ಭಿತ್ತಿಚಿತ್ರಗಳನ್ನು ನೋಡುತ್ತಿದ್ದನೇನೋ...ಆಗಾಗ ಪತ್ರಿಕೆ ಸಿನಿಮಾ ಸಂಚಿಕೆಗಳಲ್ಲಿ ಬರುವ ಚಿತ್ರದ ಜಾಹೀರಾತುಗಳನ್ನು ನೋಡಿದವನಿಗೆ "ಹತ್ತೊರ ಮೇಲೆ ಹನ್ನೊಂದು" ಅನ್ನಿಸಿದ್ದುಂಟು..ಚಿತ್ರ ನೋಡಲೇ ಭಯ ಹುಟ್ಟಿಸುವಂತಹ ಹೊಡಿ-ಬಡಿ ರೌಡಿಸಂ ಕಥೆಯುಳ್ಳ ಚಿತ್ರಗಳು ಬಂದು ವಾಕರಿಕೆ ಹುಟ್ಟಿಸುವ ಸಂದರ್ಭ ಎದುರಿಗಿರುವಾಗ ,ಇದೂ ಅದರಂಥಹುದೇ ಇರಬೇಕು ಎಂಬುದು ನನ್ನ ಎಣಿಕೆಯಾಗಿತ್ತು...ಮತ್ತೆ ಕಿಶೋರ್ ಅವರು ಇಲ್ಲಿಯ ತನಕ ಪಾತ್ರಗಳೂ ಸಹ ಸುಮಾರೆಲ್ಲ ಗಡಸು ಪಾತ್ರಗಳೇ ಆಗಿದ್ದುದ್ದು,ಚಿತ್ರದ ಜಾಹೀರಾತುಗಳಲ್ಲಿದ್ದ ಬಿಂಬಗಳು ಕ್ರೌರ್ಯವನ್ನೇ ಹೇಳುವಂತೇ ಇದ್ದುದ್ದು,ಚಿತ್ರದ ಸಹಶೀರ್ಷಿಕೆಯಲ್ಲೂ ಸೇಡು ಎನ್ನುವ ಪದವಿದ್ದುದ್ದೂ ಇದಕ್ಕೆ ಕಾರಣವಿರಬಹುದು...ಏನೋ ಗೊತ್ತಿಲ್ಲ ನೋಡಲೇ ಬಾರದ ಚಿತ್ರಗಳ ಪಟ್ಟಿಯಲ್ಲಿ ಇದು ಇದ್ದುದಂತೂ ನಿಜ.....

ಮೊನ್ನೆ ಎಲ್ಲೋ ಪತ್ರಿಕೆಯಲ್ಲಿ ಚಿತ್ರದ ನಿರ್ದೇಶಕರ ಬಗ್ಗೆ ಓದಿದೆ...ಸಾಹಿತ್ಯದ ಒಲವಿರುವ,ಈಗಾಗಲೇ ಸಾಕಷ್ಟು ಬರೆದಿರುವ ವ್ಯಕ್ತಿಯ ಸಿನಿಪ್ರಯೋಗ ಎನ್ನುವುದನ್ನು ಅರಿತೆ...ಕನ್ನಡ ಸಾಹಿತ್ಯಕ್ಕೆ ಪ್ರಶಸ್ತಿ ಪಡೆದವರೇಕೆ ಸಿನಿಮಾಕ್ಕೆ ಬಂದರಪ್ಪಾ ಎಂದೆನ್ನುತ್ತಾ ಪತ್ರಿಕೆ ಮುಚ್ಚಿಟ್ಟಿದ್ದೆ...ಚಿತ್ರದ ಬಗ್ಗೆ ಮತ್ತೆ ಆಸಕ್ತಿ ಮೂಡಿದ್ದು  ಹಿರಿಯ ಬ್ಲಾಗಿಗರೊಬ್ಬರು ಸಿನಿಮಾದ ಬಗ್ಗೆ ಫೇಸ್ ಬುಕ್ಕಿನಲ್ಲಿ ಹಂಚಿಕೊಂಡಾಗ...ಸರಿ ಯಾವಾಗಲಾದರೂ ನೋಡುವಾ ಎಂದುಕೊಂಡವನಿಗೆ ಮತ್ತೆ ನಿನ್ನೆ ಇವತ್ತು ಅದೇ ಚಿತ್ರದ ಬಗೆಗಿನ ಮಾತುಗಳು ಕಾಣ ಸಿಕ್ಕವು...ಹೊಸ ಪ್ರಯೋಗ,ಅದ್ಭುತ ಕತೆ ಎನ್ನುವ ಸಾಲುಗಳೂ ಕಂಡವು...ಇನ್ನೇನು?? ಇವತ್ತು ವಿಜಯದಶಮಿಯ ರಜೆ...ಗೆಳೆಯ ಪ್ರಥ್ವಿಯನ್ನೆಳೆದುಕೊಂಡು ಚಿತ್ರ ಮಂದಿರದೆಡೆಗೆ ಹೊರಟೆ...

ನನಗೋ ಬೆಂಗಳೂರು ಮೊದಲೇ ಹೊಸದು,ಇನ್ನ್ನು ಸ್ವಪ್ನ ಚಿತ್ರ ಮಂದಿರವೆಲ್ಲಿದೆಯೋ ಎಂದುಕೊಂಡವನಿಗೆ,ಗೂಗಲ್ ಮ್ಯಾಪ್ಸ್ ನ ಸಹಾಯಹಸ್ತ ಸಿಕ್ಕಿತು...೪ ಗಂಟೆಯ ದಿಖಾವೆಗೆ ಎಂದು  ನಾವು ಚಿತ್ರಮಂದಿರ ತಲುಪಿದಾಗ ಸುಮಾರು ೩:೫೦..ಅರ್ಜಂಟಿನಲ್ಲಿ ಹೋಗಿ "ಅಣ್ಣಾ ೨ ಬಾಲ್ಕನಿ " ಎಂದೆ,ಟಿಕೀಟು ಕೊಡುವವರು ಹುಸಿನಕ್ಕು ಎರಡು ಚೀಟಿ ಹರಿದುಕೊಟ್ಟರು...ಸರಿ ಬಾಗಿಲು ತೆಗೆಯುವುದು ಯಾವಾಗೆಂದು ಕಾಯುತ್ತಿರುವಾಗಲೇ ಯಾರೋ ಬಂದರು ಎಂದು ಜನ ಸೇರಿದರು..ಯಾರೋ ದೊಡ್ಡವರಿರಬೇಕೆಂದುಕೊಂಡು ನಾನೂ ಒಂದೆರಡು ಬಾರಿ ಎಗರಿ ನೋಡಿದರೂ ಕಂಡಿದ್ದು ಜನರ ಬುರುಡೆ ಮತ್ತು ಕೈ ಮೇಲೆತ್ತಿ ಹಿಡಿದ ಮೊಬೈಲುಗಳಷ್ಟೇ..ಅಷ್ಟರಲ್ಲಿ ಯಾರೋ  "ಹೀರೋಯಿನ್ನು ಬಂದಿದಾರೆ ಸಾರ್" ಎಂದರು..ಇರಲಿ ಬಿಡಿ ಅವರಿಗೆ ಇವತ್ತು ಅರ್ಜಂಟಿನಲ್ಲಿ ಮೇಕಪ್ಪೆಲ್ಲಾ ಮಾಡಿಕೊಳ್ಳಲು ಪುರಸೊತ್ತು ಸಿಕ್ಕಿತ್ತೋ ಇಲ್ಲವೋ ಹೇಗಂದ್ರೂ ಚಿತ್ರದಲ್ಲೇ ಒಪ್ಪವಾಗಿ ತೋರಿಸ್ತಾರೆ ಬಿಡಿ ಎಂದುಕೊಂಡು ಸುಮ್ಮನಾದೆ...ಮುಂದೆ ಒಂದೈದು ನಿಮಿಷ ಕಳೆದ ಮೇಲೆ ಬಾಗಿಲ ಬಳಿಯೇ ಅವರ ಪ್ರತ್ಯಕ್ಷ ದರ್ಶನವೂ ಆಯಿತೆನ್ನಿ...ಜೊತೆಗೆ ನಿರ್ದೇಶಕರದೂ ಸಹ...

ಮುಂದೆ ನನಗೆ ಇವತ್ತು ಎರಡು ಹೊಸ ಅನುಭವವಾಯ್ತು...ಮೊದಲನೇಯದು ಚಿತ್ರ ನೋಡುವ ಮುಂಚೆಯೇ ಚಿತ್ರದ ನಿರ್ದೇಶಕರು ಒಳಬರುವ ಪ್ರೇಕ್ಷಕರನ್ನೆಲ್ಲಾ ಹಸ್ತಲಾಘವ ನೀಡಿ ಸ್ವಾಗತಿಸಿದ್ದು..ಪ್ರಾಯಶಃ ಇನ್ನುಮುಂದೆ ಅಂಥಹ ಭಾಗ್ಯ ಸಿಗಲಾರದೇನೋ ಗೊತ್ತಿಲ್ಲ,ನನಗಂತೂ ಸಖತ್ ಖುಷಿಯಾಯ್ತು..."ಸಾರ್ ಚಿತ್ರ ನೋಡಿ ಸಂಜೆ ಬ್ಲಾಗಿನಲ್ಲಿ ಬರೆಯುತ್ತೇನೆ " ಎಂದಿದ್ದೆ,ಅವರಿದನ್ನು ನೋಡುತ್ತಾರೋ ಇಲ್ಲವೋ ಗೊತ್ತಿಲ್ಲ ಆದರೆ ಚಿತ್ರದ ಮೊದಲಿನ ಹಸ್ತಲಾಘವ ಚಿತ್ರದ ಬಗ್ಗೆ ಸಾಕಷ್ಟು  ಆಸಕ್ತಿ ಕೆರಳಿಸಿದ್ದಂತೂ ನಿಜ...ಎರಡನೇಯದು ಚಿತ್ರಮಂದಿರದ್ದು..ನಾನು ಇಲ್ಲಿಯ ತನಕ ನೋಡಿದ ಚಿತ್ರ ಮಂದಿರಗಳೆಲ್ಲಾ ದೊಡ್ಡ ದೊಡ್ಡವು..ನಮ್ಮ ಶಿರಸಿಯಲ್ಲಿ ಗಟ್ಟಿ ಇರುವುದು ಎರಡೇ ಆದರೂ ತಕ್ಕ ಮಟ್ಟಿಗೆ ದೊಡ್ಡದಾಗೇ ಇದೆ...ಬಾಲ್ಕನಿ, ಗಾಂಧೀ ಕ್ಲಾಸು ಎಂಬುದೆಲ್ಲ ಇದೆ..ಇಲ್ಲಿ ನೋಡಿದರೆ ಒಂದು ಸಾದಾ ದೊಡ್ಡ ಹಾಲು..ಅದರ ಮುಂದೊಂದು ಚಿಕ್ಕ ಪರದೆ...ಜೊತೆಗೆ ಪಕ್ಕಪಕ್ಕದಲ್ಲೇ ಒತ್ತೊತ್ತಾಗಿ  ಕುಳಿತ ಜನ...ಇದೇನಿದು ಬಾಲ್ಕನಿಯೆಲ್ಲಿ ಎಂದುಕೊಳ್ಳುವಾಗಲೇ ಟಿಕೀಟು ಹರಿಯುವ ಮಾವನ ಹುಸಿನಗುವಿನ ಅರ್ಥ ಗೊತ್ತಾದದ್ದು..ಸರಿ ಕುಳಿತು ಕೊಳ್ಳುವಾ ಎಂದು ಸೀಟು ನಂಬರು ಹಿಡಿದು ಕೂತೆ..ಅದೇಕೋ ಆ ಭಾರಿ ಜನರನ್ನು ನೋಡಿ ಆ ಪರಿಸರ ಆಪ್ತವೆನಿಸಿದು...ಕೂತವನಿಗೆ ಯಾಕೋ ಕಾಯ್ಕಿಣಿಯವರ "ಟೂರಿಂಗ್ ಟಾಕೀಸ್ " ನ ಸಾಲುಗಳು ಮತ್ತೆ ನೆನಪಾದವು..."ಸಿನಿಮಾ ಮತ್ತು ಅಂಥಹ ಕಲೆಗಳು ಪಬ್ಲಿಕ್ ಪ್ರಾಪರ್ಟಿ.ನಾವು ಪಬ್ಲಿಕ ಆಗಿ ಪಬ್ಲಿಕ್ ನ ಅವಿಭಾಜ್ಯ ಅಂಗವಾಗಿ ಅದನ್ನು ಆಸ್ವಾದಿಸಿದಾಗಲೇ ಅದು ನಮ್ಮದಾಗುತ್ತದೆ"...
ಇನ್ನು  ನಮ್ಮಂಥಹ ಪಡ್ಡೆ ಹುಡುಗರು,ನಮಗಿಂತ ಸ್ವಲ್ಪ ದೊಡ್ಡವರು,ಕುಡಿಮೀಸೆಯವರು ಇರುವುದು ಸಹಜವೆನಿಸಿದರೂ ಐವತ್ತು ದಾಟಿದವರು,ನೀಟಾಗಿ ಇನ್ ಶರ್ಟು ಮಾಡಿ ಕೂದಲು ಬಾಚಿ ಚಾಲೀಸಿನ ಕನ್ನಡ ಹಾಕಿ ಬಂದವರು, ಎಲ್ಲಾ  ಕೂದಲು ಬೆಳ್ಳಗಾದರೂ ಡೈ ಹೊಡೆಯದೇ ಇದ್ದವರು,ನನ್ನ ವಯಸ್ಸಿನ ಮಕ್ಕಳಿರಬಹುದಾದ ಅಮ್ಮಂದಿರು ಹೀಗೆ ಮೇಲ್ನೋಟಕ್ಕೆ ಚಿಂತನಾಶೀಲ ವರ್ಗ ಎಂದೆನಿಸಿಕೊಳ್ಳುವವರೂ ಬಂದಿದ್ದು ಆಶ್ಚರ್ಯ ತಂದಿತ್ತು ...

=======================================================================
ಚಿತ್ರದ ಬಗ್ಗೆ ವಿಮರ್ಶೆ ಮಾಡುವಷ್ಟೆಲ್ಲಾ ದೊಡ್ಡವ ನಾನಲ್ಲ,ಅನ್ನಿಸಿದ್ದನ್ನು ಹೇಳುತ್ತಿದ್ದೇನೆ ನೋಡಿ...

ಚಿತ್ರದ ಕಥೆಯೇ ವಿಚಿತ್ರವಾಗಿದೆ..ಕಾಡಿನ ನಡುವೆ ನಡೆಯುವ ಮಾನವ ಸಹಜ ನಿಲುವುಗಳ ನಡುವಿನ ತಿಕ್ಕಾಟ ಎನ್ನಬಹುದೇನೋ....ಇಲ್ಲಿ ಕಿಶೋರ್ ಒಬ್ಬ ಮುಗ್ಧ ಮನಸ್ಸಿನ ಅರಣ್ಯಪಾಲಕ...ಅವನನ್ನು ಬಳಸಿಕೊಳ್ಳುವ ಕೆಲವರು,ಅವನನ್ನು ದಾಳವಾಗಿಸಿಕೊಳ್ಳುವ ಕೆಲ ಸಿದ್ಧಾಂತಗಳು,ಅದನ್ನು ವಿರೋಧಿಸಿ ನಡೆಯುವ ಇನ್ನೊಂದು ಬಗೆಯ ವಿಚಾರ ಧಾರೆ..ಅವುಗಳ ನಡುವಿನ ತಿಕ್ಕಾಟ ,ಭಾರತೀಯ ಸಂಸ್ಕೃತಿ,ಅದರ ಬಗೆ ಬಗೆಯ ಆಯಾಮಗಳು,ಪ್ರೀತಿ, ಪ್ರೇಮ ,ಕಾಮ ಹಾಗೂ  ಕರ್ತವ್ಯ ಪರಿಪಾಲನೆಗಳ ಭಾವಪಾಕ, ಹೀಗೆ ವಿವಿಧ ಮಜಲುಗಳಲ್ಲಿ ಕಥೆ ಸಾಗಿರುವಂತೆ ಅನಿಸಿತು...ಕಥೆಗಿಂತ ನನಗೆ ಇಷ್ಟವಾದದ್ದು ಪ್ರತಿಯೊಂದು ಪಾತ್ರಗಳ ಹಿಂದಿರುವ ಗಟ್ಟಿಯಾದ ಬೇರು,ಅವುಗಳಿದೇ ಆದ ವಿಭಿನ್ನ ದೃಷ್ಟಿಕೋನ....

ಇನ್ನು ಚಿತ್ರದ ಶೀರ್ಷಿಕೆ ಗೀತೆಗೆ ಜಾನಪದ ಶೈಲಿಯ ಸುಂದರ ಬೆನ್ನೆಲುಬಿದೆ...ಅದನ್ನು ಬಿಟ್ಟರೆ "ಜಟ್ಟ" ಎಂದು ಬರುವ ಒಂದು ಗೀತೆ ಸ್ವಲ್ಪ ನೆನಪಿಗೆ ಬರುತ್ತಿದೆ ಅಷ್ಟೇ...ನನ್ನ ಮಟ್ಟಿಗೆ ಮತ್ತೆ ಮತ್ತೆ ಕೇಳಬೇಕೆನಿಸುವ ಹಾಡುಗಳೇನು ಇಲ್ಲ .. ಛಾಯಾಗ್ರಹಣದ ಬಗ್ಗೆ ನನಗೆ ಜಾಸ್ತಿ ಗೊತ್ತಿಲ್ಲ...ಆಗಾಗ ವಾವ್ ವಾವ್ ಎನ್ನುವಂತಹದ್ದು ಸುಮಾರಿದೆ ಎಂದಷ್ಟೇ ಹೇಳಬಲ್ಲೆ...ಚಿತ್ರ ಮುಗಿಯುವುದಕ್ಕಿಂತ ಸ್ವಲ್ಪ ಹಿಂದಿನ ಹೊಡೆದಾಟದ ದೃಶ್ಯವೊಂದರಲ್ಲಿ ಜೇಡರ ಬಲೆಯಿಂದ ಶುರುಮಾಡಿ ಕಡೆಗೆ ಅದನ್ನು ಹುಲ್ಲು-ಕಿಶೋರ ನಡುವೆ ಫೋಕಸ್ ಮಾಡಿದ್ದು ತುಂಬಾ ಇಷ್ಟವಾಯ್ತು...

ಇನ್ನು ಚಿತ್ರದ ಇನ್ನೊಂದು ವಿಶೇಷತೆ ಎಂದರೆ ದೇಸೀತನ..ಅದು ಚಿತ್ರ ನಡೆಯುವ ಪರಿಸರ,ಉಡುಗೆ ತೊಡುಗೆ ಅಥವಾ ಸಂಭಾಷಣೆಯಲ್ಲಿರಬಹುದು...ಪರಿಸರ ಸುಂದರ ಮಲೆನಾಡು,ಹಸಿರು ಕಾಡುಗಳಲ್ಲಿದೆ...ಕರಾವಳಿ,ಹಿನ್ನೀರುಗಳೂ ನಿಮ್ಮೆದುರು ಬಂದು ಹೋಗುತ್ತವೆ...ಇನ್ನು ಚಿತ್ರದೆಡೆಗೆ ನಿಮ್ಮನ್ನು ಎಳೆದುಕೊಳ್ಳುವ ಇನ್ನೊಂದು ಅಂಶವೆಂದರೆ ಸಂಭಾಷಣೆ..ಕುಂದಾಪುರದ ಕನ್ನಡದ ಸೊಬಗನ್ನು ಕಾಣಬಹುದು...ಆ ಅಪ್ಪಟ ದೇಸೀ ಶಬ್ಧಗಳು ಕೇಳುವುದಕ್ಕೇ ಛಂದ..ಬೈದರೂ ಸಹ ಅಸಹ್ಯವೆನಿಸದಂತೆ ತೋರಿಸುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ ಅಂತಲೇ ಹೇಳಬೇಕು...

ಇನ್ನು ಸಂಭಾಷಣೆ ಅಂದ್ನಲಾ ಅಲ್ಲಿ ಯಾಕೋ ಮಧ್ಯ ಮಧ್ಯ ಬೆಂಗಳೂರು ಸೀಮೆಯ ಗ್ರಾಮ್ಯಪದಗಳೂ ನುಸುಳಿಬಿಟ್ಟಿವೆ...ಅದ್ಯಾಕೋ ಗೊತ್ತಿಲ್ಲ...ಇರತ್ತೆ ಬರತ್ತೆ ಪರ್ವಾಗಿಲ್ಲ ಆಧುನಿಕತೆಯ ಪ್ರಭಾವ ಎನ್ನಬಹುದು ಆದ್ರೆ  "ಹೋಯ್ತದೆ" ಎನ್ನುವ ಥರದ ಪದಗಳನ್ನು ಆ ಕಡೆ ಬಳಸುವುದನ್ನು ನಾನಂತೂ ಕಾಣೆ..ನನ್ನ ಮಟ್ಟಿಗೆ ಅದು   ಹಾಲಿಗೆ ಹುಳಿ ಹಿಂಡಿದಂತೆ ಅನಿಸಿತು..ಅಷ್ಟು ಛಂದದ ಮಾತಿನ ಸರಪಣಿಯ ನಡುವೆ ಬೆಂಗಳೂರು ಕನ್ನಡ  ಅದು ಹೆಂಗೆ ಬಂತೋ ನಂಗಂತೂ ಅರ್ಥವಾಗುತ್ತಿಲ್ಲ...

ಇನ್ನು ಎರಡು ಕಡೆ ಚಿತ್ರ ಸ್ವಲ್ಪ ಬೋರು ಹೊಡೆದಂತೆ ಅನಿಸಿತು..ಅದೂ ಸಹ ನಾಯಕನಟಿಯ ಅಭಿನಯ ಹಾಗೂ ಹಿನ್ನೆಲೆಯ ಧ್ವನಿಯ ನಡುವಿನ ಸಮನ್ವಯತೆಯ ಕೊರತೆಯಿಂದೇನೋ...ಹೆಣ್ಣಿನ ಇಂದಿನ ಪರಿಸ್ಥಿತಿಯ ಕುರಿತು ವಿಶ್ಲೇಷಿಸುವಾಗ ನಾಯಕ ನಟಿಯ ಅಭಿನಯ ಸಪ್ಪೆಯೆನಿಸಿತು,ಜೊತೆಗೆ ತುಟಿಯ ಚಲನೆಗೂ  ಹಿನ್ನೆಲೆಯ ಮಾತುಗಳಿಗೂ ಯಾಕೋ ಹೊಂದಾಣಿಕೆ ಆಗುತ್ತಿಲ್ಲ ಅನಿಸಿತು.. ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಬಹುದಿತ್ತೇನೋ...ಗೊತ್ತಿಲ್ಲ...ಹಾಗಂತ  ಉಳಿದೆಡೆಗೆ ಅಭಿನಯದ ಬಗ್ಗೆ ಎರಡು ಮಾತಿಲ್ಲ// "yu hav met with a wrong person " ಎನ್ನುವಾಗ ಕಣ್ಣುಗುಡ್ಡೆಯ ಚಲನೆ ಖಂಡಿತವಾಗಿಯೂ ಅದ್ಭುತ ಎಂದೆನಿಸಿಬಿಡುತ್ತದೆ..ಭಾವಾವೇಶದ ಸಂದರ್ಭಗಳಲ್ಲಿ ಚಂದದ ಅಭಿನಯವಿದೆ...ಕಿಶೋರ್ ಅವರ ನಡಿಗೆಯ ಶೈಲಿಯೇ ವಿಶಿಷ್ಟವಾಗಿದೆ,,,

ಇವಿಷ್ಟು ನನಗೆ ಸಧ್ಯಕ್ಕೆ ತೋಚುತ್ತಿರುವಂತದ್ದು..ನನಗಂತೂ ಈ ಚಿತ್ರ ಒಂಥರ ಭೈರಪ್ಪನವರ ಕಾದಂಬರಿ ಓದಿದಾಗಿನ ನಂತರದ ಅನುಭವ ಕೊಡುತ್ತಿದೆ..ಪ್ರಾಯಶಃ ಹಲವಾರು ಹಾದಿಯಲ್ಲಿ ಸಾಗುವ ಕಥೆಯ ಅಂತ್ಯವನ್ನು ಒಂದೇ ಸಿದ್ಧಾಂತದಡಿಯಲ್ಲಿ ಹೇರದೇ ವೈಯಕ್ತಿಕ ನೆಲೆಗಟ್ಟಿನಲ್ಲಿ ಚಿಂತಿಸುವಂತೆ ಪ್ರೇರೇಪಿಸಿದ್ದಕ್ಕೋ ಏನೋ ಗೊತ್ತಿಲ್ಲ...
ಒಟ್ಟಿನಲ್ಲಿ ಹೊಸ ಅನುಭವಗಳನ್ನು ಪಡೆದ ಖುಷಿ ನನ್ನದು..ಒಳ್ಳೆಯ ಚಿತ್ರ ನೋಡಿದ ಖುಷಿ ನನ್ನದು..ಅದನ್ನು ಹಂಚಿಕೊಳ್ಳಿತ್ತಿದ್ದೇನೆ ಅಷ್ಟೇ :)..

ಮುಂದೆ ಹೋಗುವ  ಮುನ್ನ :
 ಹಮ್...ಈ ಚಿತ್ರ ಖಂಡಿತ ತೆರೆದ ಬಾಗಿಲಿನದಲ್ಲ..ಸುಮ್ಮನೆ ಹೋಗಿ ಏನೋ ಕುಣಿವಾಗ ಕುಣಿದು ನಗಿಸುವಾಗ  ನಕ್ಕುಬರುವುದಕ್ಕೆ ..ಇಷ್ಟಪಟ್ಟು ಪುರಸೊತ್ತು ಮಾಡಿಕೊಂಡು  ಹೋಗಿ,ಪಾತ್ರಗಳಲ್ಲಿ ಒಂದಾಗಿ ಒಂದಿಷ್ಟು ಯೋಚಿಸಿ...ಆ ತರ್ಕಗಳ ಸರಣಿಯನ್ನು ಆನಂದಿಸಿ..ಸತ್ವಪೂರ್ಣ ಕಥನವನ್ನು ಅಸ್ವಾದಿಸಿ...ಹೊಸತನದ ಚಿತ್ರವೊಂದನ್ನು ಬೆಂಬಲಿಸಿ..

ನಮಸ್ತೆ :) :)

10 comments:

ಪ್ರವೀಣ್ ಭಟ್ said...

Niroopane nodidare chitra nodabekenisuttade.. trailer nodidaagale andukonde ondu vibhinna prayatna anta.... ade halasalu savakalu katheye illa moviya munde .. ondu adbhuta prayatna ....

ಚಿನ್ಮಯ ಭಟ್ said...

ಧನ್ಯವಾದ ಪ್ರವೀಣಣ್ಣಾ :) :)..ಒಂದೊಳ್ಳೆ ಚಿತ್ರ...

Badarinath Palavalli said...

ಕನ್ನಡ ಚಿತ್ರ ಪ್ರೋತ್ಸಾಹಿಸುವ ನಿಮ್ಮ ಒಳ್ಳೆಯತನ ನನಗೆ ನೆಚ್ಚಿಗೆಯಾಯಿತು.

ಕಿರಣ್ ಅವರ ಛಾಯಾಗ್ರಾಹಣ ತುಂಬಾ ಚೆನ್ನಾಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಈ ಸಿನಿಮಾ ಖಂಡಿತ ನೋಡುತ್ತೇನೆ.

ಚಿನ್ಮಯ ಭಟ್ said...

ಧನ್ಯವಾದ ಬದರಿ ಸರ್ :)

ಗಿರೀಶ್.ಎಸ್ said...

innond sala film nodokke hoguva barappa...

SAVI RAJ said...

ಆಳವಾದ ಒಳನೋಟಗಳಿರುವ ಬರಹ. ಕನ್ನಡದ ಮಟ್ಟಿಗೆ ವಸ್ತುನಿಷ್ಟವಾದ ಸಿನಿಮಾ ವಿಮರ್ಶೆ ಕಾಣಸಿಗುವುದು ಪ್ರಜಾವಾಣಿಯಲ್ಲಿ ಮಾತ್ರ. ಉಳಿದ ಪತ್ರಿಕೆಗಳ ಸಿನಿ ವಿಮರ್ಶೆ ನಂಬಿ ಸಿನಿಮಾ ನೋಡಲು ಹೋಗಿ ಹಲವು ಸಲ ಕಣ್ಣು ಮತ್ತು ಕಿವಿಗಳನ್ನು ಅಪಾಯಕ್ಕೆ ಒಡ್ಡಿದ ಅನುಭವಗಳಾಗಿವೆ! ವೃತ್ತಿಪರ ಸಿನಿಮಾ ಪತ್ರಿಕೋದ್ಯಮಿಯಂತೆ ಬರೆದಿದ್ದೀರಿ.

ಚಿನ್ಮಯ ಭಟ್ said...

ಆಯ್ತ್ನ ನಡೀರಿ...ನಾವ್ ತಯಾರ್...

ಚಿನ್ಮಯ ಭಟ್ said...

ಧನ್ಯವಾದ ಸವಿರಾಜ್ ಸರ್ ...ಸ್ವಾಗತ ನಮ್ಮನೆಗೆ...ಬರ್ತಾ ಇರಿ...ನಮಸ್ತೆ :)

Srikanth Manjunath said...

ಸುಂದರ ಆರಂಭಿಕ ಮಾತುಗಳು.. ಚಿತ್ರದ ಹೂರಣವನ್ನು ತೆಗೆದಿಟ್ಟ ರೀತಿ. ಅದನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿರುವ ಭಾವ ಎಲ್ಲವು ಸೊಗಸು. ಸುಂದರ ಬರಹ ಚಿನ್ಮಯ್

ಚಿನ್ಮಯ ಭಟ್ said...

ಧನ್ಯವಾದ ಶ್ರೀ...ಬರ್ತಿರಿ ::): )