Saturday, November 8, 2014

ಮಣ್ಮುಕ ನಜರು

ನಮಸ್ಕಾರ ಗೆಳೆಯರೆ...ಹೆಂಗಿದೀರಾ ?
ಜೀವನದಲ್ಲಿ ಉದರನಿಮ್ಮತ್ತ ಮಾಡುವ ಕಾರ್ಯಗಳು ಮತ್ತು ಮನಸ್ಸಿಗೆ ಹಿತಕೊಡುವಂಥ ಕೆಲಸಗಳು ಇವುಗಳ ನಡುವಿನ ತಿಕ್ಕಾಟದ ನಡೀತಾನೇ ಇರತ್ತೆ...ನಾವು ಮಾಡುತ್ತಿರುವುದು ಒಂದು ,ಅಂದುಕೊಳ್ಳುವುದು ಇನ್ನೊಂದು...ಏನೋ ಪರಿಸ್ಥಿತಿ ಎಂದು ಕೊಂಡು ಮುಂದುವರೆಯುತ್ತಿರುತ್ತೇವೆ..ಮನಸ್ಸಿಗೆ ಖುಷಿ ಕೊಡುವ ಕೆಲಸಗಳನ್ನು ಅವಕಾಶ ಸಿಕ್ಕಾಗಿ ಮಾಡಿ ಉಲ್ಲಸಿತರಾಗ್ತೇವೆ,ಸಿಗದೆ ಹೋದಾಗ ನಿರಾಸೆಗೊಳ್ತೇವೆ...ಹೀಗಾಗಿ ಇವುಗಳನ್ನೇ ಇಟ್ಟುಕೊಂಡು ನನ್ನ ವಿಚಾರವನ್ನು ಕವನದ ರೂಪದಲ್ಲಿ ಹೇಳುವ ಪ್ರಯತ್ನ...ದಯಮಾಡಿ  ಓದಿ,ಎಂದಿನಂತೆ ತಪ್ಪು-ಒಪ್ಪು ತಿಳಿಸಿ,ಅನಿಸಿಕೆಗಳನ್ನಾ ಹಂಚಿಕೊಳ್ತೀರಾ ಅಲ್ವಾ ?? ಕಾಯ್ತಿರ್ತೀನಿ :)..


ಜಡವು ಬದುಕಿನ ಹೊಣೆಯು,ಬಾಳ ಚೇತನ ಚಿಗುರು
ಬೂಮರಂಗಿನ  ನಡಿಗೆ , ಬಿಡದು ಮಣ್ಮುಕ ನಜರು

ಜಡವೆಂದರೆ ಚಿರ ಸ್ಥಿರವಲ್ಲಾ ಜಗ,
ಪಚನ ಪ್ರಚೋದಿತ ಪರಿಭ್ರಮಣೆ.
ಸೃಷ್ಟಿ-ಶೈಶವ-ಯೌವನ-ಮುಕ್ತಿಯ
ಪುನರಪಿ ಪುನರಪಿ ಅನುಕರಣೆ||ಜಡವು||

ಛೇದನ-ಬಂಧನ ಕರ್ಮಾಲಿಂಗನ
ಹೊಸದದು ಏನಿದೆ ನಡುವಿನಲಿ ?
ಹೊಸದದು ಹಳೆಯದು,ಹಳೆಯದೇ ಹೊಸದು
ಸಾಗುವ ಸಮಯದ ತಿರುವಿನಲಿ||ಜಡವು||

ಕನಲಿದ ಮನದಾ ಪುನರುತ್ಥಾನಕೆ
ಅವತರಿಸುವುದು ಚೇತನವು .
’ಅಲ್ಲ’ವ ಮರೆಸಿ,ಬೆಲ್ಲವ ತೋರಿಸಿ
ಕಲ್ಲನು ಕಡೆಸುವ ಸಾಧನವು ||ಜಡವು||

ನೊಗವದು ವೀಣೆ ಮೀಟುವುದರಿಯಲು
ನೂರಿದೆ ರಾಗವು ತಂತಿಯಲೇ.
ಬೇಸರ ಜೀಕುವ ಅರಿವಿನ ಹಾಣೆಯು
ಅಡಗಿದೆ ಒಳಮನೆ ಜಂತಿಯಲೇ||ಜಡವು||

ಜಡವು ಬದುಕಿನ ಹೊಣೆಯು,ಬಾಳ ಚೇತನ ಚಿಗುರು
ಬೂಮರಂಗಿನ ನಡಿಗೆ , ಬಿಡದು ಮಣ್ಮುಕ ನಜರು

-ಚಿನ್ಮಯ ಭಟ್ಟ



ಟಿಪ್ಪಣಿ:

ಮಣ್ಮುಕ ನಜರು : ಎರಡು ತಲೆಗಳಿರುವ ಹಾವಿನ ದೃಷ್ಟಿ.. ನಮ್ಮನೆ ಕಡೆ ಈ ಎರಡು ಮುಖದ ಹಾವಿಗೆ  ಮಣ್ಮುಕ ಹಾವು ಎಂದು ಕರೆಯುವುದನ್ನು ಬಲ್ಲೆ..ಹಾಗಾಗಿ ಬಳಸಿಕೊಂಡೆ.. ಇಲ್ಲಿ  ಇದನ್ನು ಯಾವಾಗಲೂ ಪರ-ವಿರುಧ್ಧವಾಗಿ ಬರುವ  ಯೋಚನೆಗಳಿಗೆ ಸಮೀಕರಿಸಬಹುದು...

ಬೂಮರಂಗು : BOOMRANG ,ಅಸ್ತ್ರೇಲಿಯಾದ ಆದಿವಾಸಿಗಳು ಬಳಸುತ್ತಿದ್ದ ಆಯುಧ..ಬೇಟೆಗಾರನ ಕೈಯ್ಯಿಂದ ಹೊರಟು ಬೇಟೆಯಾಡಿ ವಾಪಸ್ಸು ತಿರುಗಿ ಬೇಟೆಗಾರನ ಕೈಸೇರುತ್ತಿದ್ದುದು ಇದರ ವಿಶೇಷ. ಇಲ್ಲಿ ನಮ್ಮ ಪ್ರಯತ್ನಗಳೆಲ್ಲಾ ಏನೇ ಇದ್ದರೂ ಕೊನೆಗೆ ನಾವು  ಮೊದಲಿದ್ದಲ್ಲಿಗೆ ತಲುಪುವುದರ ಸಂಕೇತವಾಗಿ ಅರ್ಥೈಸಿಕೊಳ್ಳಬಹುದು...

ಪಚನ ಪ್ರಚೋದಿತ ಪರಿಭ್ರಮಣೆ :ಪಚನ ಅಂದರೆ ಜೀರ್ಣವಾಗುವುದು .ಪರಿಭ್ರಮಣೆ ಅಂದರೆ ಸುತ್ತುವುದು..ಹೊಟ್ಟೆಪಾಡಿಗಾಗಿ ಮಾಡುವ ಕಾರ್ಯಗಳು ಎಂದು ತಿಳಿದುಕೊಳ್ಳಬಹುದು.

ಪುನರಪಿ ಪುನರಪಿ: ಮತ್ತೆ ಮತ್ತೆ

ಕನಲಿದ : ಬೇಸರಗೊಂಡ

ಪುನರುತ್ಥಾನ : ಮರು ಹುಟ್ಟು,ಮತ್ತೆ  ಅಸ್ತಿತ್ವಕ್ಕೆ ಬರುವುದು,ಪುನಃ ಶುರುವಾಗುವ ಬೆಳವಣಿಗೆ

ಬೇಸರ ಜೀಕುವ  :ಜೀಕು,ಜೋರಾಗಿ ತಳ್ಳು ,ನೂಕು.

ಅರಿವಿನ ಹಾಣೆಯು: ಹಾಣೆ -ಕೋಲು,ದಾಂಡು..ನಮ್ಮೂರಿನಲ್ಲಿ ಗಿಲ್ಲಿ-ದಾಂಡುವಿಗೆ ಹಾಣೆ-ಗಿಂಡು ಎಂದು ಕರೆಯುವುದುಂಟು. ಇಲ್ಲಿ   ಗಿಲ್ಲಿಯನ್ನು ಮಣ್ಣಿನ ಸಣ್ಣ ಕುಳಿಯಿಂದ ಚಿಮ್ಮಿಸುವ ಕ್ರಿಯೆಗೆ ಜೀಕುವುದು ಎಂದು ಬಳಸುತ್ತಾರೆ.ಹೀಗೆ  ಅರಿವು ಬೇಸರವನ್ನು ಹೊರಗೆ ಹಾರಿಸುವ ಸಾಧನ ಎನ್ನುವ ಅರ್ಥದಲ್ಲಿ ಬಳಸಿದ್ದು

ಒಳಮನೆ ಜಂತಿ :ಜಂತಿ ಎಂದರೆ  ಕೈ ಅಟ್ಟ..ಸಾಮಾನ್ಯವಾಗಿ ಅಡಿಗೆ ಮನೆ ಸುತ್ತ ಮುತ್ತಲು ಇರುವ ಪಾತ್ರೆ,ಡಬ್ಬಿಗಳನ್ನು ಇಡುವ ಸಣ್ಣ ಅಟ್ಟ..ಇಲ್ಲಿ ನಮ್ಮೊಳಗೇ ಬೇಸರವನ್ನು ಓಡಿಸುವ ಅರಿವು ಅಡಗಿದೆ ,ಅದನ್ನು ನಾವು ಹುಡುಕುತ್ತಾ ಹೋಗಬೇಕು ಎನ್ನುವ ಭಾವದಲ್ಲಿ ಬಳಸಿದ್ದು..

ಈ ಕವನವನ್ನು ವಾಚಿಸುವ ಪ್ರಯತ್ನವನ್ನೂ ಮಾಡಿದ್ದೇನೆ ದಯಮಾಡಿ ಕೇಳಿ ಹೆಂಗಿದೆ ಹೇಳಿ ...
https://soundcloud.com/chinmay-bhat-3/0inwdpw2cbwl


ಇವುಗಳ  ಜೊತೆಗೆ ನಿಮ್ಮ ಅನಿಸಿಕೆಗಳೂ ಬಹಳ ಮುಖ್ಯ..ಅವುಗಳನ್ನು ತಾವು  ಬಿಚ್ಚುಮನಸ್ಸಿನಿಂದ ಹಂಚಿಕೊಳ್ಳುವಿರೆಂದು ನಂಬಿದ್ದೇನೆ.
ವಂದನೆಗಳು :)

22 comments:

ಮನಸು said...

chennagide chinmay... neenu yavaglu vibhinna reetiyalle bariteeya.. good

Badarinath Palavalli said...

"ಮನಸ್ಸಿಗೆ ಖುಷಿ ಕೊಡುವ ಕೆಲಸಗಳನ್ನು ಅವಕಾಶ ಸಿಕ್ಕಾಗಿ ಮಾಡಿ ಉಲ್ಲಸಿತರಾಗ್ತೇವೆ,ಸಿಗದೆ ಹೋದಾಗ ನಿರಾಸೆಗೊಳ್ತೇವೆ..." ನಿಜವಾದ ಮಾತು ಗೆಳೆಯ.

ಮನುಜನು ಸಾವಿರ ತಿಪ್ಪರಲಾಗಗಳನು ಹಾಕಿದರೂ ಕಡೆಗೆ ’ಬೂಮರಾಂಗ್’ನಂತೆ ಮಣ್ಮುಕ! ಅಲ್ಲಿಗೇ ನಮ್ಮ ಪಯಣದ ನಜರು!


’ಅಲ್ಲ’ವನೇ ಮರೆಸುವ ಮನ, ಅದರ ಬಯಕೆಯಲೇ ಕಹಿ ಉಣ್ಣುತ್ತದೆ!

ಅರಿವಿನ ಹಾಣೆ - ಉತ್ತಮ ಪ್ರಯೋಗ.

shared at:
https://www.facebook.com/groups/191375717613653?view=permalink&id=435285689889320

sunaath said...

ನಿಮ್ಮ ಬರಹದಲ್ಲೇ ಹೊಸತನವಿದೆ. ಹಾಗಿದ್ದಾಗ ಬದುಕು ಏಕೆ ಜಡವಾಗಬೇಕು? ಒಳ್ಳೆಯ ಕವನ ಓದಿದ ಖುಶಿ ನನಗಾಗಿದೆ.

ಚಿನ್ಮಯ ಭಟ್ said...

ಸುಗುಣಕ್ಕಾ,
ಧನ್ಯವಾದ :) :)....
ಖುಷಿ ಆಯ್ತು :) :)..ವಂದನೆಗಳು ನಿಮ್ಮ ಪ್ರೋತ್ಸಾಹಕ್ಕೆ :)

Imran said...

ಚಿನ್ಮಯಾ ನಿನ್ನ ಪದಗಳ ಬಳಕೆಗೆ ನಾನು ಮೂಕವಿಸ್ಮೀತ :)
ಹೀಗೆ ಬರೆಯುತ್ತಿರು :)

ಚಿನ್ಮಯ ಭಟ್ said...

ಬದರಿ ಸರ್...
ಧನ್ಯವಾದಗಳು ನಿಮ್ಮ ಪ್ರೋತ್ಸಾಹಕ್ಕೆ :) :..
:)
ಖುಷಿ ಆಯ್ತು :)...:)
ಅರಿವಿನ ಹಾಣೆ ..ಹಮ್ ಗೊತ್ತಿಲ್ಲ...ಮೊದಲಿಗೆ ಅರಿವಿನ ತೊರೆ,ಸೋಲಿನ ಹಾಣೆ ಇತ್ತು..ಅದನ್ನು ಈ ಥರ ಬದಲಾಯಿಸಿದ್ದು ಅಷ್ಟೇ :)
ವಂದನೆಗಳು ಸರ್...
ಬರ್ತಿರಿ :)
ನಮಸ್ತೆ :)

ಚಿನ್ಮಯ ಭಟ್ said...

ಸುನಾಥ ಕಾಕಾ...
ಧನ್ಯವಾದಗಳು ನಿಮ್ಮ ಆಶೀರ್ವಾದಕ್ಕೆ :) :)...
ಬದುಕು ಜಡ ..ಹಮ್ ..ಬದುಕಿನ ಕೆಲವೊಂದು ಜವಾಬ್ದಾರಿಗಳು,ಹೊಣೆಗಳು ಜಡ ಅದು ಆಗಲೇ ಬೇಕು..ಅದನ್ನು ಪ್ರೀತಿಯಿಂದ ಅಪ್ಪಿಕೊಂಡರೆ ಅದು ಕೆಲಸ ಅನ್ನಿಸುವುದಿಲ್ಲ ಅಂದೆಣೆಸಿ ಬರೆದದ್ದು...
ವಂದನೆಗಳು ಕಾಕಾ..
ಖುಷಿ ಆಯಿತು ನನಗೂ ಸಹ ನಿಮ್ಮ ಹಿತ ನುಡಿ ಕೇಳಿ.
ಬರುತ್ತಿರಿ..
ನಮಸ್ತೆ :)

ಚಿನ್ಮಯ ಭಟ್ said...

ಇಮ್ರಾನ್ ಜೀ,
ಸ್ವಾಗತ ನಮ್ಮನೆಗೆ :) :)..
ಧನ್ಯವಾದಗಳು ನಿಮ್ಮ ಪ್ರೀತಿಯ ಪ್ರೋತ್ಸಾಹಕ್ಕೆ :) ಬರ್ತಿರಿ :)

Santhoshkumar LM said...

Super Chinmay! 'Boomarang' bagge eega gottaytu!

ಚಿನ್ಮಯ ಭಟ್ said...

ಧನ್ಯವಾದ ಸಂತೋಷಣ್ಣಾ...:)

ಮನಸಿನಮನೆಯವನು said...

ಹೊಸತರದ ಕವನ ಓದಿ ಖುಷಿಯಾಯಿತು.. ಹೊಸಪದಗಳನ್ನು ಬಳಸಿ ಅರ್ಥಗಳನ್ನು ತಿಳಿಸಿದ್ದರಿಂದ ಅವುಗಳ ಪರಿಚಯವೂ ಆಯಿತು

ಚಿನ್ಮಯ ಭಟ್ said...

ಸ್ವಾಗತ ಮನಸಿನ ಮನೆಯವರಿಗೆ :) :)...
ಧನ್ಯವಾದಗಳು ಸರ್ ನಿಮ್ಮ ಪ್ರೀತಿಯ ಪ್ರೋತ್ಸಾಹಕ್ಕೆ :) :)
ಬರ್ತಾ ಇರಿ :)
ನಮಸ್ತೆ :)

Shruthi B S said...

ಹೊಸದದು ಏನಿದೆ ನಡುವಿನಲಿ ?
ಹೊಸದದು ಹಳೆಯದು,ಹಳೆಯದೇ ಹೊಸದು
ಸಾಗುವ ಸಮಯದ ತಿರುವಿನಲಿ.

ಈ ಸಾಲುಗಳು ಬಹಳ ಆಪ್ಯಾಯವೆನಿಸಿತು ಚಿನ್ಮಯ್. ಹೊಸತನವನ್ನು ಹುಡುಕತ್ತಾ ಹೋಗುವುದು ಬಹಶಃ ಮನುಷ್ಯನ ಸಹಜ ಗುಣವೇನೋ..? ಆದರೆ ಕೆಲವೊಮ್ಮೆ ಹಳೆಯದರಲ್ಲೇ ಅದೇನೋ ಒ೦ದು ರೀತಿಯ ಹೊಸತನವನ್ನು ಕ೦ಡುಕೊಳ್ಳುತ್ತೇವೆ. ನಾನು ನನ್ನ ಗೆಳತಿ ಪತ್ರದ ಮೂಲಕ ಇದರ ಬಗ್ಗೆ ಚರ್ಚೆ ಮಾಡಿದ್ದೆವು. ಕೊನೆಗೆ ಅನಿಸಿದ್ದು, ಹೊಸತನ ಇರುವುದು ನಮ್ಮ ಮನದಲ್ಲಿ. ಮನಸ್ಸು ಪ್ರಫುಲ್ಲವಾಗಿದ್ದಾಗ ಹಳೆಯದೂ ಹೊಸತ೦ತೆ. ಇಲ್ಲದಿದ್ದರೆ ಹೊಸತರಲ್ಲೂ "ಹೊಸತೇನಿದೆ"? ಎ೦ಬ ಭಾವ.
ಕವನ ತು೦ಬಾ ಚನ್ನಾಗಿದೆ..

ಚಿನ್ಮಯ ಭಟ್ said...

ಶೃತಿ..ಧನ್ಯವಾದನೇ :) :)...
ಹೊಸದು ಹಳೆದು ಸ್ವಲ್ಪ ದಿನ ಕಳೆದಮೇಲೆ...ಯಾವುದೋ ಕಾಲದ್ದೇ ಮತ್ತೆ ಹೊಸದು ತುಂಬಾ ದಿನ ಕಳೆದ ಮೇಲೆ..ಅಲ್ವಾ ???
ಧನ್ಯವಾದಗಳು ಚಂದದ ಅನಿಸಿಕೆಗೆ :)
ಬ್ಲಾಗನ್ನು ಅಂದಗಾಣಿಸಿದ್ದಕ್ಕೆ..
ಬರ್ತಿರಿ :)..
ನಮಸ್ತೆ :)

ಸಂಯುಕ್ತ said...

ಎಷ್ಟು ಚೆನ್ನಾಗಿದೆ! ಅರ್ಥ-ಲಯ ಎರಡರ ಮಿಳಿತದ ಶೈಲಿ ಸೊಗಸಾಗಿ ಮೂಡಿ ಬಂದಿದೆ.

ಚಿನ್ಮಯ ಭಟ್ said...

ಸಂಯುಕ್ತಾ ಅಕ್ಕಾ..ಸ್ವಾಗತ ನಮ್ಮನೆಗೆ :)...ಧನ್ಯವಾದಗಳು ನಿಮ್ಮ ಪ್ರೋತ್ಸಾಹಕ್ಕೆ :)..ಖುಷಿ ಆಯ್ತು.. ಬರ್ತಾ ಇರಿ..ನಮಸ್ತೆ :)

mounayaana said...

Nimmella rachanegaloo arthapoornavaagiruttave Chinmay Ji.Upamegalannu utaamavagi balasiddeera.Hosa shabdagala balakeya praytnavu nijakkoo prashamsaarha.
Abhinandanegalu :-)
Nimma kavithegalannu aadashtu bega Patrikegalalli oduvantaagali endu aashisuttene.


ಚಿನ್ಮಯ ಭಟ್ said...

ಧನ್ಯವಾದಗಳು ವಿನಾಯಕ ಭಟ್ಟರೇ :).ಖ಼ಂಡಿತವಾಗಿಯೂ ಪ್ರಯತ್ನ ಮಾಡ್ತೇನೆ..ವಂದನೆಗಳು ನಿಮ್ಮ ಪ್ರೋತ್ಸಾಹಕ್ಕೆ :)

sush said...

E kaivite nanna manasina bhavaneyanne vyaktapadisiruvantide ...uttama .

ಚಿನ್ಮಯ ಭಟ್ said...

@Sushmita : ಸ್ವಾಗತಾರೀ ಬ್ಲಾಗ್ ಗೆ :) :)...ಧನ್ಯವಾದಗಳು ನಿಮ್ಮ ಪ್ರೋತ್ಸಾಹಕ್ಕೆ :) :)..ಬರ್ತಾ ಇರಿ...ನಮಸ್ತೆ

Unknown said...

ಹೌದು.. ಜಡವು ಬಿಡದು.. ಆಡಿನ ಮನಸ್ಥಿತಿಯ ಬದುಕಿದುವೆ ಮನುವು.. ಎಲ್ಲವೂ ಬೂಮರಂಗು ರಂಗುರಂಗಿನ ಬದುಕಲಿ... Im fan of ur ultimate usage of kannada words..as usaul awesome

ಚಿನ್ಮಯ ಭಟ್ said...

ಧನ್ಯವಾದ ರಘು :) :)