Monday, May 1, 2017

ಮಳೆ, ಇಳಿಸಂಜೆ ಮತ್ತು ಮೊಂಬತ್ತಿ ಬೆಳಕು

ಮಳೆ, ಇಳಿಸಂಜೆ ಮತ್ತು ಮೊಂಬತ್ತಿ ಬೆಳಕು
ಕರಿಯ ನೆರಳ ನಡುವೆ ಅವಳ ನೆನಪು

ಕೊಡೆಯ ಮೃದಂಗ;ಜೀರುಂಡೆಯ ಶ್ರುತಿವೀಣೆ
ಮರಗಳಿಂದುದುರುವ ಹನಿಗಳ ತಾಳ
ಅವಳ ಚಪ್ಪಲಿಯಿಂದ ಚಿಮ್ಮಿದ ನೀರು
ಕಾಲ ಸೋಂಕಲು ಶುರು ಖುಷಿಯ ಕಛೇರಿ

ಮಳೆಯ ಹನಿಗಳ ನಡುವೆ ಐಸ್‍ಕ್ರೀಮಿನ ಸಹವಾಸ
ನೆಗಡಿಯಾದರೆ ಒಬ್ಬರಿಗಷ್ಟೇ ಅಲ್ಲ ಎಂಬ ಸಣ್ಣಸಂತಸ
ನೆನೆನೆನೆದು ತಂಪಾಗಿ;ತಂಪಿನಲಿ ಬಿಸಿಯಾಗಿ
ಒದ್ದೆ ಕೈಗಳ ಸಹಜಾಲಿಂಗನ; ಸೃಷ್ಟಿ ಸಮಷ್ಟಿ ದರ್ಶನ

ಗುಡುಗ ಆರ್ಭಟದ ನಂತರ
ಎಲೆಅಡಿಕೆ ಮೆಲ್ಲುವಂತೆ ತುಂತುರು
ಖುಷಿಯ ಅಮಲಿಳಿದಿಲ್ಲ; ಇಬ್ಬರಿಗೂ ಮಂಪರು
ಎಚ್ಚರವಾಗಲೆಂದು ಪರದೇಶಿ ಚಹಾ ಅರಸಿ ಹೋದೆ
ತಿರುಗಿ ಬಂದಾಗ ಅವಳಿರಲಿಲ್ಲ;
ಅಂಗಿಯ ಮೇಲೆ ಮಾತ್ರ ಪರಿಮಳದ ಉಸಿರು

ಚಳಿರಾಯ ಆಗಮಿಸಿದ
ನಾಳೆಗಳ ನಡುವೆ ನಡುಕ ಹುಟ್ಟಿಸಿದ
ಹೆಗಲುಗೊಡುವ ಮಾತಾಡಿ ಕರೆತರುವ ಮುನ್ನ
ಹಲ್ಲುಗಳ ಕಟ್ಟಿ ಕಟಕಟವೆನಿಸಿದ

ಚಳಿಗಾಲದಲಿ ಅವಡುಗಚ್ಚಿ ಕಾಲನೂಕಿದ್ದಾಯ್ತು
ಬೇಸಿಗೆಯ ಶುರುವಿನಲಿ ವಲಸೆ ಬಂದಿದ್ದಾಯ್ತು
ಇಂದು, ಸುಡುಬೇಸಿಗೆಯಿದ್ದರೂ ಹೊರಗೆ
ಬಚ್ಚಿಟ್ಟುಕೊಳ್ಳಕೊಂದು ತಾವಿದೆ
ಹೊಟ್ಟೆ ಹಸಿವ ತಣಿಸಲು ಗಟ್ಟಿ ಅವಲಕ್ಕಿ ಮೊಸರಿದೆ


ಅಂದಿನಂತೆ ಕಾಡಿನಲಿ ಅಲೆವ ಫಕೀರನಲ್ಲ
ಅರಣ್ಯದಲಿ ಔಷಧಿ ಹುಡುಕುವ ಮದ್ದಿನವನಲ್ಲ
ಗಡ್ಡ ಕತ್ತರಿಸಿದೆ; ಕೂದಲು ಬಾಚಿದೆ
ನಮ್ಮಂತೆ ಈತ ಎಂದು ಊರು ನಂಬಿದೆ

ಆದರೆ, ಮಳೆ ಬಿದ್ದೊಡನೆ ಕಾಡು ಕರೆದಿದೆ
ಅಲೆದಾಟಕೆ ಇಂಧನವಾಗಿದ್ದವಳ ನೆನಪು
ಮುಚ್ಚಿದ್ದ ಮಣ್ಣಿಂದ ಮೇಲೆದ್ದು ಬಂದಿದೆ
ಮೊಂಬತ್ತಿಯ ನೆರಳಿಗೆ ವನವಾಸದ ನೆನಪು ರಂಗು ತುಂಬಿದೆ
ಮಳೆ, ಇಳಿಸಂಜೆ ಮತ್ತು ಮೊಂಬತ್ತಿ ಬೆಳಕು
ಕರಿಯ ನೆರಳ ನಡುವೆ ಅವಳ ನೆನಪು...
-ಚಿನ್ಮಯ
1/5/2017

2 comments:

sunaath said...

Beautiful poem. Love it.

ಚಿನ್ಮಯ ಭಟ್ said...

ಧನ್ಯವಾದ ಸರ್ :)