Sunday, May 14, 2017

ಕಂಟ್ರೋಲ್+ಎಸ್

ಸರ್ವರ್ ಡೌನ್ ಆಗಿರೋದ್ರಿಂದ ಆಫೀಸಿನ ಕೆಲಸ ಅರ್ಧಕ್ಕೇ ಹಾಲ್ಟ್ ಆಗಿದೆ. ಸರ್ವರ್ ಅಪ್ ಆಗೋದಕ್ಕೆ 11:45 ಆಗಬಹುದು ಅನ್ನೋ ಮೇಲ್ ಬಂದಿದೆ ಹನ್ನೊಂದರ ಅಪರಾತ್ರಿಯಲ್ಲಿ ಮತ್ತೇನೂ ಕೆಲಸ ಕಾಣದೇ ಗೀಚ್ತಾ ಇದೀನಿ
ಇದು ಪ್ರತೀದಿನ ನಡೆದಿದ್ದನ್ನ ಬರಿಯೋ ಡೈರಿ ಅಲ್ಲ. ಏನೇನೋ ಇಮ್ಯಾಜಿನ್ ಮಾಡ್ಕೊಂಡು ಕತೆ-ಕಾದಂಬರಿ ಥರ ಚಂದ ಮಾಡಿ ಬರಿಯೋ ಅಷ್ಟು ಟ್ಯಾಲೆಂಟ್ ನಂಗಿಲ್ಲ. ಬರೀತೀನಿ ಬೇಜಾರಿಗೆ; ಟೈಂ ಪಾಸಿಗೆ. ಊರು ಕಲಿಸಿದ ಕನ್ನಡ ಇನ್ನೂ ಬದುಕಿದೆ ಅನ್ನೋದನ್ನ ನೆನಪ್ ಮಾಡ್ಕೊಳ್ಳೋದಕ್ಕೆ.
ಕನ್ನಡದಲ್ಲಿ ಟೈಪ್ ಮಾಡೋದು ಸ್ವಲ್ಪ ಕಷ್ಟ. ಕಲೀತಾ ಇದೀನಿ. ಬರೀತಾ ಇದ್ರೆ ಈಸಿ ಆಗ್ಬಹುದೇನೋ..
ನಾಳೆ ಬೆಳಿಗ್ಗೆ 6.00 ಗೆ ಡೆಡ್ ಲೈನ್ ಇದೆ. ಕೆಲ್ಸಾ ಎಲ್ಲಾ ಆಲ್ಮೋಸ್ಟ್ ಆಗಿದ್ರೂ ಕ್ರಾಸ್ ಚೆಕ್ ಮಾಡಿ ಅಂತಾ ಮ್ಯಾನೇಜರ್ ಮೇಲ್ ಹಾಕಿ, ಮನೆಗ್ ಹೋಗಿ ಮಲಗಿದಾರೆ. ಹಂಗಾಗಿ ಮತ್ತೊಂದ್ ಸಲ ಫುಲ್ ಬಿಲ್ಡ್ ಮಾಡಿ ರನ್ ಥ್ರೂ ಮಾಡ್ಬೇಕು. ಎಲ್ಲಾದ್ರೂ ಬಗ್ ಬಂದ್ರೆ ಅದನ್ನಾ ಮಾರ್ಕ್ ಮಾಡಿ ಟಿಕೆಟ್ ರೈಸ್ ಮಾಡ್ಬೇಕು. ಏನೇ ಆದ್ರೂ ಬೆಳಗೆ ಒಳಗೆ ಮುಗಿಬೇಕುಸೋ
[Saved at  mm-dd-yyyy 11:46pm]
+++
ಥರ ನೋಟ್ ಮಾಡ್ತಾ ಇರೋದು ಒಂಥರ ಮಜಾ ಕೊಡ್ತಾ ಇದೆ. ಇನ್ನೊಂದೆರಡು ಏನೋ ಬರ್ದಿದ್ದೆ. ಮೊನ್ನೆ ಬೈ ಮಿಸ್ಟೇಕ್ ಡಿಲಿಟ್ ಆಗೋಯ್ತು. ಇದೊಂದ್ ಫೈಲ್ ಇದೆ. ಇದ್ರಲ್ಲೇ ಕಂಟಿನ್ಯೂ ಮಾಡ್ತಿನಿ. ಇದನ್ನಾ ಗೂಗಲ್ ಡ್ರೈವ್ಗೆ ಸಿಂಕ್ ಮಾಡಿದೀನಿ. ಸೋ ಒಂದಲ್ಲ ಒಂದಿನಾ ನಾನೇ ಇದನ್ನಾ ಓದಿ ನಗ್ತಿನೋ ಏನೋ. ಇದನ್ನ ಸ್ಟಾರ್ಟ್ ಮಾಡಿದ್ ದಿನದಿಂದ ಸರ್ವರ್ ಇಷ್ಯು ಬರ್ತಾನೇ ಇದೆ. ವಾರಕ್ ಒಂದೆರಡ್ ದಿನ ಟೈಪ್ ಮಾಡೋದ್ ನಡೀತಾನೇ ಇದೆ. ಮೊನ್ನೆ ಯಾವ್ದೋ ಬ್ಲಾಗ್ ಓದ್ದೆ. ಚೆನಾಗಿತ್ತು. ನಾನೂ ಬರಿಬೇಕು ಅಂತಾ ಅಂದ್ಕೊಂಡೆ. ಏನೋ ಕವಿತೆ ಬರ್ಯಕ್ ಟ್ರೈ ಮಾಡ್ದೆ. ಚೆನಾಗ್ ಆಗ್ಲಿಲ್ಲಲ್ಲ್ಲ್
[Saved at  mm-dd-yyyy 11:40pm]
+++
ಇವತ್ತು ಇಂಟರ್ನಲ್ ಕಾಂಟಾಕ್ಟ್ಸ್ ಲೀಸ್ಟ್ನಲ್ಲಿ ಸಡನ್ನಾಗಿ ನಮ್ಮೂರಿನ ಹುಡುಗಿಯೊಬ್ಬಳ ಹೆಸರು ನೋಡದೆ. ಕಾಂಟ್ರಾಕ್ಟ್ ಎಂಪ್ಲಾಯಿ ಆಗಿರೋದ್ರಿಂದ ಟೀಮ್ ನೇಮ್ ಬಿಟ್ಟು ಬೇರೆ ಏನೂ ಡಿಟೇಲ್ಸ್ ಸಿಗ್ಲಿಲ್ಲ. ಪ್ರೊಫೈಲ್ ಫೋಟೋ ನೋಡಡೆ. ಸೂಪರ್ ಆಗ್ ಇದಾಳೆ. ಮತ್ತೆ
[Saved at  mm-dd-yyyy 11:20pm]
+++
ನವ್ಯಾ ಜೊತೆ ನಿನ್ನೆ ಟೈಂ ಸ್ಪೆಂಡ್ ಮಾಡಿದ್ದು ಸಖತ್ ಖುಷಿ ಕೊಡ್ತು. ಅದ್ಯಾಕೋ ನೈಟ್ ಹೊತ್ತಲ್ಲಿ ಅವಳನ್ನಾ ಮಿಸ್ ಮಾಡ್ಕೊತಾ ಇದೀನಿ. ನಮ್ಮೂರಿನ್ ಹೆಸರು ಅವಳ್ ಹೆಸರಿನ್ ಮುಂದಿದೆ ಅಷ್ಟೇ. ಅಪ್ಪ ನಮ್ಮೂರಿನವ್ರು. ಇವಳು ಹುಟ್ಟಿ ಬೆಳದಿದ್ದೆಲ್ಲಾ ಬೆಂಗ್ಳೂರಲ್ಲೇ. ಇನ್ಫಾಕ್ಟ್ ನನ್ ಪೀ.ಜಿಯಿಂದ ಆಫೀಸ್ ಬರೋದಕ್ಕೆ ಶಾರ್ಟ್ಕಟ್ ಹೇಳ್ಕೊಟ್ಟಿದ್ದೂ ಅವಳೇ. ಅವಳು ಅದ್ ಹ್ಯಾಗೆ ಎಲ್ಲರ್ ಜೊತೆ ಮಿಂಗಲ್ ಆಗ್ತಾಳೋ ನಂಗಂತೂ ಗೊತ್ತಿಲ್ಲ. ಸೀನಿಯರ್ಸು, ಜ್ಯೂನಿಯರ್ಸು, ಇಂಟನ್ರ್ಸು ಎಲ್ಲಾರ್ನೂ ಸೇರ್ಸಿ, ನಾ ಬರಲ್ಲಾ ಅಂದ್ರೂ ಕೇಳ್ದೇ ನನ್ನ್ ಎಳ್ಕೊಂಡು ನಿನ್ನೆ ಲಂಚ್ ಆದ್ಮೇಲೆ ಅಂತ್ಯಾಕ್ಷರಿ ಆಡಿದ್ವಲ್ಲಾ, ಸೂಪರ್ರಾಗ್ ಇತ್ತು. ಈಗ್ಯಾಕೋ ಮೊನ್ನೆ ಅವಳು ಹೇಳಿದ್ ಫನಾ ಫಿಲಂ ಹಾಡು ಕೇಳ್ತಾ ಇದ್ದ ಹಾಗೆ ಹುಚ್ಚ್ ಹಿಡಿತಾ ಇದೆ.
ತೇರೇ ಹಾಥ್ ಮೇ ... ಮೇರಾ ಹಾಥ್ ಹೋ..ಸಾರಿ ಜನ್ನತೇ..ಲಾಲಾ ಲಾಲಲಾ..
ಹಾಡ್ನಾ ಲೂಪ್ ಮೋಡಲ್ಲಿ ಕೇಳ್ತಾ ನಂಗೂ ಏನಾದ್ರೂ ಬರ್ಯಣಾ ಅನ್ನಿಸ್ತಾ ಇದೆ. ಎಷ್ಟ್ ದಿನ ಆಯ್ತು ಬರೀದೆ?
[Saved at  mm-dd-yyyy 12.01am]
+++
ಹೋದ ವಾರ ಬರೆದ ಹಾಡನ್ನಾ ಅವಳಿಗೆ ಟೆಕ್ಸ್ಟ್ ಮಾಡಿದ್ದೆ. ತುಂಬಾ ಇಷ್ಟ ಪಟ್ಲು. ನನ್ ಬಗ್ಗೆನೂ ಏನಾದ್ರೂ ಬರ್ಕೊಡೋ ಅಂದ್ಲು. ಏನ್ ಬರ್ಯೋದು ಗೊತ್ತಾಗ್ಲಿಲ್ಲ. ಹಂಗೆಲ್ಲಾ ಒಬ್ಬರ ಬಗ್ಗೆ ಬರ್ಯೋದ್ ಸರಿ ಅಲ್ಲ. ಸಮಾಜದ ಬಗ್ಗೆ ಬರಿಬೇಕು. ಬದಲಾವಣೆ ಬಗ್ಗೆ ಬರಿಬೇಕು. ನಮ್ಮ್ ಒಳಗಡೆ ಇರೋ ಹೊಯ್ದಾಟಗಳ ಬಗ್ಗೆ ಬರಿಬೇಕು. ಆಗ ಬರವಣಿಗೆಗೆ ಒಂದ್ ಮೀನಿಂಗ್...
[Saved at  mm-dd-yyyy 11:40pm]
+++
ನವ್ಯಾ ಜೊತೆ ಮಾತಾಡ್ತಾ ಹೇಳ್ತಿದ್ಲು ಲೈಫಲ್ಲಿ ಏನಾದ್ರೂ ಅಚೀವ್ ಮಾಡ್ಬೇಕು ಅಂತಿಯಲ್ಲಾ ಯಾಕೆ ಅಂತಾ? ಲೈಫ್ ಹೆಂಗ್ ಬರತ್ತೋ ಹಂಗ್ ಇರಕ್ಕ್ ಆಗಲ್ವಾ? ನಾನ್ ಆಗಲ್ಲ ಅಂತಾ. ಅವಳು ಆಗತ್ತೆ ಅಂತಾ. ಅವಳಿಗ್ ಏನ್ ಅನ್ಸತ್ತೆ ಗೊತ್ತಿಲ್ಲ, ಮನೆಯ ಹಿರಿಮಗ ಆಗಿ ನಾನಂತೂ ನನ್ ಫ್ಯೂಚರ್ನಾ ಸೆಟ್ ಮಾಡ್ಕೊಳ್ಳೇಬೇಕು. ಲೈಫಲ್ಲಿ ಆದಷ್ಟ್ ಬೇಗ ಸೆಟಲ್ ಆಗ್ಬೇಕು. ಈಗ ಎಂ.ಟಿ.ಎಸ್-1, ಆಮೇಲೆ ಎಂ.ಟಿ.ಎಸ್-2,3, ಸೀನಿಯರ್ ಎಂ.ಟಿ.ಎಸ್, ಟೀಂ ಲೀಡ್ ಆಮೇಲೆ ನಂದೇ ಒಂದು ಸ್ಟಾರ್ಟ್ ಅಪ್. ಅದು ಕರೆಕ್ಟಾಗಿ ವರ್ಕೌಟ್ ಆದ್ರೆ ಲೈಫು ಸೆಟಲ್. ಇದನ್ನೆಲ್ಲಾ ಅವಳಿಗ್ ಹೇಳಿದ್ರೆ ಅರ್ಥನೇ ಮಾಡ್ಕೊಳಲ್ಲಾ. ಲೈಫಲ್ಲಿ ಏನೋ ಟ್ವಿಸ್ಟ್ ಬೇಕಂತೆ. ಥ್ರಿಲ್ ಬೇಕಂತೆ. ನಿಜ್ವಾಗ್ಲೂ ಹಂಗ್ ಹೇಳ್ತಿದ್ಲಾ. ಇಲ್ಲಾ?
[Saved at  mm-dd-yyyy 11:54pm]
+++
ನವ್ಯಾ ಓರಾಕಲ್ ಜಾಯಿನ್ ಆದ್ರೂ ನಾವ್ ಕೆಫೆಟೇರಿಯಾದಲ್ಲಿ ಮೀಟ್ ಆಗೋದ್ ನಿಂತಿಲ್ಲ. ಅದೇನೋ ಲಂಚ್ ಆದ್ಮೇಲೆ ಅಂತ್ಯಾಕ್ಷರಿ ಆಡೋದು ಹ್ಯಾಬಿಟ್ ಆಗ್ಬಿಟ್ಟಿದೆ. ಓರಾಕಲ್,ಅಕ್ಸೆಂಚರ್,ವಿಮ್ವೇರ್, ಸಿಂಫನಿ ಎಲ್ಲಾರೂ ಟಾಪ್ ಫ್ಲೋರ್ಗೇ ಊಟಕ್ ಬರೋದು. ನಾರ್ತ್ ಅವರೇ ಜಾಸ್ತಿ. ಒಂದ್ ಹತ್ತ್ ಜನರ ಟೀಂ ನಮ್ದು.ಅಲ್ಲಲ್ಲ ನವ್ಯಾದು. ನಾನ್ ಸುಮ್ನೆ ಇರೋದೇ ಜಾಸ್ತಿ..
ಯಾಕ್ ಗೂಬೆ ಥರ ಇರ್ತಿಯಾ ಅಂತಾ ಬೈತಾ ಇರ್ತಾಳೆ. ಅದೇನೋ ಹಿಂದಿ ನನಿಗ್ ಸರ್ಯಾಗ್ ಬರಲ್ಲ. ಕಾ ಎಲ್ಲಿ ಕೀ ಎಲ್ಲಿ ಅನ್ನೋದೇ ಕನ್ಫ್ಯೂಷನ್ನು. ಅವಳಿಗೂ ಸರಿ ಬರಲ್ಲ. ಆದ್ರೆ ಮಾತಾಡೋದ್ ನಿಲ್ಸಲ್ಲ.
[Saved at  mm-dd-yyyy 11:20pm]
+++
ಮಾಡಕ್ ಬೇರೆ ತುಂಬಾ ಕೆಲ್ಸಾ ಇದ್ರುನೂ ಯಾಕ್ ಇವತ್ತು ನವ್ಯಾ ಬಗ್ಗೆನೇ ತಲೆಕೆಡುಸ್ಕೊಳ್ತಾ ಇದೀನಿ? ಅವಳು ನಂಗ್ಯಾರೂ ಸ್ಪೆಷಲ್ ಅಲ್ಲ. ಜಸ್ಟ್ ಅನದರ್ ಫ್ರೆಂಡ್ ಅಷ್ಟೇ.
ನಂಬರ್ ಡಿಲೀಟ್ ಮಾಡ್ದೆ.
ವಾಟ್ಸಪ್ನಲ್ಲಿ ಬ್ಲಾಕ್ ಮಾಡ್ದೆ.
ಎಫ್.ಬಿ ಅಲ್ಲಿ ಅನ್ಫಾಲೋ ಮಾಡ್ದೆ.
ಪ್ರಾಡಕ್ಟ್ ಡಿಲೆವರಿ ಟೈಂ ಹತ್ರ ಬರ್ತಾ ಇದೆ. ಇನ್ನು ಟೈಂ ವೇಸ್ಟ್ ಮಾಡ್ಬಾರ್ದು. ಸರ್ವರ್ ಡೌನ್ ಆಗಿದ್ರೆ, ಲೋಕಲ್ ಸಿಸ್ಟಮ್ ಅಲ್ಲಿ ಏನ್ ಮಾಡಕ್ಕಾಗತ್ತೆ ಟ್ರೈ ಮಾಡ್ಬೇಕು.
ನವ್ಯಾ ಈಸ್ ನೋ ವನ್ ಟು ಮಿ...
[Saved at  mm-dd-yyyy 12:40am]
+++
ಬ್ಯಾಕ್ ವಿಥ್ ಬ್ಯಾಂಗ್. ಫಸ್ರ್ಟ್ ಪ್ರಮೋಷನ್. ತುಂಬಾ ಖುಷಿಪಟ್ರು ಮನೆನಲ್ಲಿ ಎಲ್ರೂನೂ. ಆಮ್ ಹ್ಯಾಪಿ ಅಂತಾ ಎಲ್ಲರಿಗೂ ಅನ್ನಿಸ್ತಾ ಇದೆ. ಬಟ್ ನಂಗೀಗ ಸಡನ್ನಾಗಿ ಯಾಕೋ ನವ್ಯಾ ನೆನಪಾಗ್ತಾ ಇದಾಳೆ. ಅವಳಿಲ್ಲಾ ಅಂದಿದ್ರೆ ನಾನ್ ಇಲ್ಲ್ ಇರಕ್ ಸಾಧ್ಯನೇ ಇರ್ತಿರ್ಲಿಲ್ಲ. ನಿನ್ ಹತ್ರ ಆಗತ್ತೆ ಅಂತಾ ಪುಷ್ ಮಾಡಿದ್ದೇ ಅವಳು. ಅದೇನೇನೋ ಆಗಿ ಅವಳನ್ನ ಅವಾಯ್ಡ್ ಮಾಡ್ದೆ.
ಈಗ ತುಂಬಾ ಮಿಸ್ ಮಾಡ್ಕೊತಾ ಇದೀನಿ
[Saved at  mm-dd-yyyy 11:59 pm]
+++
ಎರಡ್ ವರ್ಷದ್ ಬಾಂಡ್ ಇನ್ನೇನು ಮುಗೀತಾ ಬಂತು. ಅಡೋಬಿ ಇಂದಾ ಒಳ್ಳೆ ಆಫರ್ ಬಂದಿದೆ. ನನ್ ಕಂಪನಿಯಲ್ಲಿ ಎಚ್.ಆರ್ ಆಗಿದ್ದೋರು ಈಗ ಅಲ್ಲಿದಾರೆ. ಹಾಗಾಗಿ ಲಿಂಕ್ ಸಿಗ್ತು. ಅಲ್ಲಿ ಗ್ರೋತ್ ಚೆನಾಗಿದೆ ಅಂತಾ ಕಲೀಗ್ಸ್ ಎಲ್ಲಾರೂ ಹೇಳಿದ್ರು. ಈಗಷ್ಟೇ ಇನ್ಫಾರ್ಮಲ್ ಆಗಿ ಮ್ಯಾನೇಜರ್ ಹತ್ರ ಮಾತಾಡ್ ಬಂದೆ. 45 ಡೇಸ್ ನೋಟೀಸ್ ಪೀರಿಯಡ್ ಇರತ್ತೆ. ಹೊಸಾ ಪ್ರಾಜೆಕ್ಟ್ ಈಗಷ್ಟೇ ಸ್ಟಾರ್ಟ್ ಆಗಿರೋದ್ರಿಂದ ನನ್ ಕಡೆಯಿಂದ್ ಏನೂ ಆಬ್ಜೆಕ್ಷನ್ ಇಲ್ಲ. ಫಾರ್ಮಲ್ ಆಗಿ  ಮೇಲ್ ಕಳ್ಸಿ ಎಚ್.ಆರ್ ಹತ್ರ ಮಾತಾಡ್ತೀನಿ ಅಂದ್ರು.
[Saved at  mm-dd-yyyy 11:47pm]
+++
ಇವತ್ ಲಾಸ್ಟ್ ಡೇ. ಅಲ್ಲಲ್ಲ ಲಾಸ್ಟ್ ನೈಟ್. ಎಲ್ಲರಿಗೂ ಬೈ ಹೇಳಿ ಹೊರಡ್ತಾ ಇದೀನಿ. ತುಂಬಾ ಮಿಸ್ ಮಾಡ್ಕೊತೀನಿ ಕಂಪನಿನಾ, ಡೆಸ್ಕ್ನಾ..
[Saved at  mm-dd-yyyy 09:47pm]
+++
ಒಂದೂವರೆ ತಿಂಗಳಾದ್ಮೇಲೆ ಫಸ್ರ್ಟ್ ಟೈಂ ಟೈಯರ್ಡ್ ಅನಿಸ್ತಾ ಇದೆ. ಫುಲ್ ಕೆಲಸಾ. ಯಾಕಾದ್ರೂ ಕಂಪನಿ ಚೇಂಜ್ ಮಾಡ್ದೆ ಅನಿಸ್ತಾ ಇದೆ. ಅವಾಗಾ 40% ಹೈಕ್ ಅಂದೋರು ಈಗ ಅದು ಇದು ಕತೆ ಹೇಳಿ 25% ಕೊಟ್ಟಿದಾರೆ. ಏನೋ ಲೈಫಲ್ಲಿ ಅಂದ್ಕೊಂಡಿದ್ ಒಂದೂ ಆಗ್ತಿಲ್ಲಾ. ಏನೋ ಮಿಸ್ಸಿಂಗು. ಏನ್ ಮಾಡ್ಲಿ ಗೊತ್ತಾಗ್ತ್
[Saved at  mm-dd-yyyy 03:23am]
+++
ಡನ್ ವಿತ್ ಎಂ.ಬಿ.. ಬಿಟ್ಸ್ಪಿಲಾನಿಯಿಂದ ಎಂ.ಬಿ. ಮುಗ್ಸಿದ್ದು ಖುಷಿ ಆಗ್ತಿದೆ. ಇನ್ನು ಮ್ಯಾನೇಜರಿಯರ್ ಏರಿಯಾ ಕಡೆಗೂ ಚಾನ್ಸ್ ಇರತ್ತೆ ಅಂತಾ ಕಲೀಗ್ ಹೇಳ್ತಿದ್ರು
[Saved at  mm-dd-yyyy 1:51am]
+++
ಅಡೋಬಿಗೆ ಬಂದು ಒಳ್ಳೆ ಕೆಲಸಾ ಮಾಡ್ದೆ ಅಂತಾ ಮೊದಲನೇ ಸಲ ಅನಿಸ್ತಾ ಇದೆ. ಅಲ್ಲೇ ಇದ್ದಿದ್ರೆ ಇಷ್ಟ್ ಬೇಗ ಇನ್ನೊಂದ್ ಪ್ರಮೋಷನ್ ಸಿಗ್ತಾ ಇರ್ಲಿಲ್ಲ. ನಮ್ಮ್ ಟೀಂ ಲೀಡ್ ಬಿಟ್ರೆ ನಾನೇ ಸೀನಿಯರ್ರು ನಮ್ ಟೀಂನಲ್ಲಿ. ಮ್ಯಾನೇಜರ್ ಕೂಡಾ ಜಾಸ್ತಿ ಏನೂ ಹೇಳಲ್ಲ. ಒಂಥರಾ ಇಲ್ಲೀಗ ನಮ್ದೇ ಸಾಮ್ರಾಜ್ಯ. ಆದ್ರೆ ಒಂದೊಂದ್ ಸಲ ಹೆದ್ರಿಕೆ ಆಗತ್ತೆ. ಯಾಕಂದ್ರೆ ನೌ ಆಮ್ ಇನ್ ರಿಲೇಷನ್ಶಿಪ್. ಸಾಫ್ಟ್ವೇರ್ ಫೀಲ್ಡ್ನಲ್ಲಿ ಯಾವಾಗ ಏನ್ ಆಗತ್ತೆ ಗೊತ್ತಿಲ್ಲ. ಮನೆಲ್ ಯಾರ್ ಏನ್ ಹೇಳ್ತಾರೆ ಅನ್ನೋದೂ ಗೊತ್ತಿಲ್ಲ. ಎಲ್ಲಾ ದೇವರಿಗ್
[Saved at  mm-dd-yyyy 02:32am]
+++
ಮನೆಲ್ ಕೊನೆಗೂ ಒಪ್ಕೊಂಡ್ರು. ಮದ್ವೆಗಿಂತ ಮುಂಚೆ ಕಂಪನಿ ಚೇಂಜ್ ಮಾಡಿದ್ದೂ ಆಯ್ತು. ಹೊಸಾ ಸ್ಟಾರ್ಟ್ ಅಪ್ಗೆ ಹೋಗ್ತಾ ಇದೀನಿ. ಥ್ಯಾಂಕ್ಯೂ ಅಡೋಬಿ ನನ್ನ್ ಸಾಕಿದ್ದಕ್ಕೆ ಮೂರ್ ವರ್ಷಾ.
[Saved at  mm-dd-yyyy  4:00pm]
+++
ಉಫ್. ಹೊಸಾ ಕೆಲಸಾ. ಹೊಸಾ ಆಫೀಸು. ಸ್ಟ್ರಕ್ ಆಗಿದೀನಿ. ಎಲ್ಲಾರ್ ನಂಬರ್ ಕಲೆಕ್ಟ್ ಮಾಡಿ, ಕಾಂಟಾಕ್ಟ್ ಮಾಡ್ತಾ ಇದೀನಿ. ಎಷ್ಟ್ ಜನ ಬರ್ತಾರೆ ಗೊತ್ತಿಲ್ಲ.
[Saved at  mm-dd-yyyy  2:00pm]
+++
ನವ್ಯಾನಾ ಮೀಟ್ ಮಾಡಕ್ ಹೋಗ್ತಾ ಇದೀನಿ ವೀಕೆಂಡ್ ಚಿಕ್ಕಮಗಳೂರಿಗೆ.
[Saved at  mm-dd-yyyy  8:00pm]

 *************************************
ಇಷ್ಟೆಲ್ಲ ನೆನಪುಗಳನ್ನ ಸೇವ್ ಮಾಡಿದ ಜಗತ್ತು ಇವನ ಜೀವವೊಂದನ್ನ್ ಯಾಕ್ ಸೇವ್ ಮಾಡ್ಲಿಲ್ಲ? ಚಿಕ್ಕಮಗಳೂರಿಗೆ ಹೋದೋನು ಯಾಕ್ ವಾಪಸ್ ಬರ್ಲಿಲ್ಲ? ಹೊರಡಕ್ ಮುಂಚೆ .ಟಿ.ಎಮ್ನಿಂದ ಹಿಡಿದು ಗೂಗಲ್ ಅಕೌಂಟ್ತನಕ ಎಲ್ಲಾ ಪಾಸ್ವರ್ಡ್ಗಳನ್ನ ನಂಗ್ಯಾಂಕ್ ಹೇಳ್ ಹೋದ? ನವ್ಯಾನಾ ಮೀಟ್ ಆಗಿದ್ನಾ? ಅವರಿಬ್ಬರ ಮಧ್ಯ ಏನಾದ್ರೂ....
ಅವನನ್ನು ಮದುವೆಯಾಗಬೇಕಿದ್ದ ಹುಡುಗಿ ಗೊಂದಲದಲ್ಲಿದ್ದಳು.ಅಷ್ಟರಲ್ಲಿ ಅವರಿಬ್ಬರೂ ಸೇರಿ ಕೊಂಡುಕೊಳ್ಳಬೇಕು ಎಂದುಕೊಂಡಿದ್ದ ಫ್ಲ್ಯಾಟಿನ ಬ್ರೋಕರ್ನಿಂದ ಕಾಲ್ ಬಂದಿತ್ತು..ಕಾಲ್ ಕಟ್ ಮಾಡಿ, ನೋಟ್ ಪ್ಯಾಡಿನಲ್ಲಿಫ್ಲ್ಯಾಟ್ಎಂದು ಒದ್ದೆಗಣ್ಣಿನಲ್ಲೇ ಟೈಪಿಸಿ ಕಂಟ್ರೋಲ್+ಎಸ್ ಒತ್ತಿದಳು.

-ಚಿನ್ಮಯ

(14/5/17)



4 comments:

bilimugilu said...

well presented. Ishtavaaythu Chinmay.

ಚಿನ್ಮಯ ಭಟ್ said...

ಧನ್ಯವಾದ ☺☺

ಮನಸು said...

well written chinmay, good one liked it (y)

ಚಿನ್ಮಯ ಭಟ್ said...

ಧನ್ಯವಾದ.ಸುಗುಣಕ್ಕಾ ☺☺