Friday, December 15, 2017

ಸೊಳ್ಳೆಗೆ ಧನ್ಯವಾದ

ಡಬಲ್ ಬಿ.ಹೆಚ್.ಕೆ ಫ್ಲ್ಯಾಟು, ಆರಂಕಿ ಸಂಬಳ, ವೈಟ್ ಕಾಲರ್ ಕೆಲಸ
ಒಂದು ದಿನ ರಾತ್ರಿ ತಣ್ಣನೆಯ ನಿದ್ದೆ, ಬೆಚ್ಚಗಿನ ಕನಸು
ಸುತ್ತಲೆಲ್ಲೋ ಸೊಳ್ಳೆ ಸುಳಿದು ಎಚ್ಚರಾಯ್ತು
"ಥತ್ ಥೇರಿ ನುಶಿಯೇ!" ಎಂಬ ಮೌನಬೈಗುಳದೊಂದಿಗೆ
ಚಂದವೆನಿಸಿದ್ದ ಕನಸಿನ ಅನಿರೀಕ್ಷಿತ ಕೊಲೆಯಾಯ್ತು
ಶಬ್ಧವೇದಿ ವಿದ್ಯೆ ಕರತಲಾಮಲಕವೇನಲ್ಲ
ಆದರೂ ಹೊಡೆಯುತ್ತಿದ್ದೆ ಕತ್ತಲಲ್ಲೇ ಕಣ್ಬಿಟ್ಟುಕೊಂಡು
ಚಪ್ಪಾಳೆ ಸದ್ದಿನೆದುರು ಬಹುಷಃ ಆ ಸೊಳ್ಳೆ ಸದ್ದು ಕ್ಷೀಣವಾಯ್ತು
"ಮುಗಿಯಿತು ಅಧ್ಯಾಯ" ಎಂದು ಮಲಗಿದೆ ಹೊದಕಲೆಳೆದುಕೊಂಡು
ಅರ್ಧಕ್ಕೆ ನಿಂತ ಕನಸು ರಿ-ಓಪನ್ ಆಗಿ ಅರ್ಧ ಎಪಿಸೋಡು ಕಳೆದಿಲ್ಲ
ಡಿ.ಟಿ.ಎಸ್ ಸೌಂಡಿನಂತೆ ಮೂಲೆಯಿಂದೆಲ್ಲೋ ಶುರು ಗುಯ್ಯ್ ಗಾಯನ
ಪಡೆದಿರಬೇಕು ಎಲ್ಲದಕ್ಕೂ ಅಂತಾರಲ್ಲ ಅದು ಖರೆಯಿರಬೇಕು!
ಬಳಿಕ ಶಯನಸುಖ-ಸ್ವಪ್ನದಿಂ ವಾಸ್ತವ ಕೂಪಕ್ಕೆ ಅನಿವಾರ್ಯ ಆಗಮನ
ಕತ್ತಲಲ್ಲೇ ಕೈಯ್ಯಾಡಿಸಿ ಮೊಬೈಲು ಕೈಗೆತ್ತಿಕೊಂಡೆ
ಟಾರ್ಚ್ ಆನ್ ಆಯಿತು, ಮೆಸ್ಸೇಜು-ನೊಟಿಫಿಕೇಷನ್ನು ಬಂದಿರಲಿಲ್ಲ
ಬೆಳಕಿನಲಿ ಬೇಟೆಗಾರನಾದೆ ಆಗ, ಬೇಟೆ ದಿಂಬಿನ ಕಡೆಯೆಲ್ಲೋ ಓಡುತಿತ್ತು
ದಬ್ ಎಂದು ಒಂದು ಬಿಟ್ಟೆ, ಶಬ್ಧ ಬಂತಷ್ಟೇ ಸೊಳ್ಳೆ ಮಾತ್ರ ಸಾಯಲಿಲ್ಲ
ಮಧ್ಯರಾತ್ರಿ ಹತ್ತು ನಿಮಿಷ ಮೊಬೈಲು ಕುಟ್ಟಿದರೂ
ಸ್ವಪ್ನಶತ್ರು ಸೊಳ್ಳೆಯ ಸುಳಿವು ಸ್ವಲ್ಪವೂ ಇಲ್ಲ, ಸದ್ದೂ ಕೇಳುತ್ತಿಲ್ಲ
ಬಹುಷಃ ರಕ್ತಹೀರುವ ಅವಕಾಶವನರಸಿ ಶಿಫ್ಟ್ ಆಗಿರಬೇಕು, ನಮ್ಮಂತೆ
ಇರಲಿ! ಬೇಟೆಯಿಲ್ಲದಿದ್ದರೂ ಕೈ ಬರಿದು ಮಾಡಿ ಮಲಗಲು ಅಡ್ಡಿಯಲ್ಲ
ಥೋ ಥೋ, ಬಹಳೇ ಎಚ್ಚರಾಗಿದೆ; ಕನಸು ಅರ್ಧಮೈಲಿಗೆಲ್ಲೂ ಕಾಣುತ್ತಿಲ್ಲ
ನಿನ್ನೆ-ನಾಳೆಗಳ ಚಿಂತೆ ಬಪ್ಪ ನಿದ್ದೆಗೂ ಅವಕಾಶ ಮಾಡಿಕೊಡುತ್ತಿಲ್ಲ
ಎಡಕೊಮ್ಮೆ-ಬಲಕೊಮ್ಮೆ; ವಿಚಾರ-ಗೊಂದಲ-ಹೊರಳಾಟ-ನಿಟ್ಟುಸಿರು
ಅಂಗಾತ ಮಲಗುವುದು ತಪ್ಪಲ್ಲ;ಬೋರಲಾಗಲು ಹೊಟ್ಟೆ ಹಿಡಿಯುತಿದೆಯಲ್ಲ.
ಇಲ್ಲೇ ಇಲ್ಲ! ನಿದ್ದೆ ಹತ್ತುವುದಿಲ್ಲವೆಂಬುದು ಖಚಿತವಾದಂತಾಯಿತು
ಸೋ, ನವ್ಯಮಾನವನ ಸಹಜಾಂಗದ ಮೊರೆಹೋಗುವುದು ಅನಿವಾರ್ಯ
ಶುರುವಿಗೆ ಗಝಲು-ಭಾವಗೀತೆ-ಎಫ್.ಎಂ-ಗಾನಾ.ಕಾಮ್‍ಗಳ ಸಂಗೀತ
ನಂತರ ಯೂಟ್ಯೂಬಿನಲ್ಲಿ ಸದ್ಗುರು-ಜಿಡ್ಡು-ಓಷೋ-ವಿವೇಕಾನಂದ
ಜ್ಞಾನ-ವಿಜ್ಞಾನ ಜೀವನ ಜಿಜ್ಞಾಸೆ, ಬಾಳಿಗೊಂದಿಷ್ಟು ಸರಳ ಸಂದೇಶ
ಅಜಮಾಸು ಎರಡು ಗಂಟೆಯ ನಂತರ ಚಾರ್ಜಿಗೆ ಹಾಕಲೇಬೇಕಾಯಿತು
ತಲೆಯೊಂದು ಮಟ್ಟಿಗೆ ನೆಟ್ಟಗಾಗಿತ್ತು, ನಿದ್ದೆ ಬರುವ ಸೂಚನೆಯೂ ಇತ್ತು
ಒಂದರಿಂದ ಎಣಿಸಲು ಶುರುವಿಟ್ಟೆ, ಎಚ್ಚರಾಗಿದ್ದು ಅಲಾರಾಂ ಕೂಗಿದಾಗಲೇ
ಹತ್ತು ನಿಮಿಷಕ್ಕೆ ಸ್ನೂಜು ಮಾಡಿ ಬಿದ್ದುಕೊಂಡವನಲ್ಲಿ ಒಂದಿಷ್ಟು ಪ್ರಶ್ನೆಗಳು ಎದ್ದಿತ್ತು
ನಿನ್ನೆ ನಿದ್ದೆಗೆಡಲು ಕಾರಣ ಸೊಳ್ಳೆಯಾ? ನಾನಾ?
ಸೊಳ್ಳೆಯೆಂಬ ಕೀಟ ನಿಜಕ್ಕೂ ಬಂದಿತ್ತಾ? ಭ್ರಮೆಯಾ?
ತಲೆತುಂಬ ಬಿಟ್ಟುಕೊಂಡಿರುವ ಹುಳಗಳೇ ಸೊಳ್ಳೆಯಾದವಾ?
ಹಾಸ್ಟೇಲಿನಲ್ಲಿ ಸೊಳ್ಳೆಗಳೂ ಸ್ನೇಹಿತರಾಗಿದ್ದವು
ಅವುಗಳ ಗುಯ್ಯ್‍ಂಗುಡುವಿಕೆ ಹಿತಸಂಗೀತವಾಗಿತ್ತು
ವಯಸ್ಸಾದಂತೆ ಸ್ನೇಹಿತರೇಕೆ ಶತ್ರುಗಳಾದರು?
ಅಮ್ಮನ ಮಾತೇಕೆ ಓವರ್ ಆಕ್ಟಿಂಗ್ ಅಂತಾಯಿತು?
ಅಪ್ಪನ ಮಾರ್ಗದರ್ಶನ ಗೊಡ್ಡು ಎಂದೆನಿಸಿತು?
ತಂಗಿಯ ಪ್ರೀತಿ ವಟವಟವೆನಿಸಿತು?
ನಿದ್ದೆಯಿಂದ ಎಬ್ಬಿಸಿದ ಸೊಳ್ಳೆಗೆ ಧನ್ಯವಾದ ಹೇಳಲೇಬೇಕೆನಿಸಿತು
ಹುಡುಕುತ್ತಿದ್ದೇನೆ,
ಸಿಕ್ಕರೆ ಖಂಡಿತಾ ಸನ್ಮಾನ-ಸಮಾರಂಭ-ಉಪ್ಪಿಟ್ಟು-ಕಾಫಿ
ಸಾಧ್ಯವಾದರೆ ನೀವೂ ಬನ್ನಿ
ಮಲಗಿದ್ದರೆ ಎಚ್ಚರಗೊಳ್ಳಿ 
-ಚಿನ್ಮಯ
15/12/2017

4 comments:

sunaath said...

ಧನ್ಯವಾದಗಳು, ಚಿನ್ಮಯ! ನಮಗೆ ಟೀಪಾರ್ಟಿ ಕೊಡಲು ಕಾರಣೀಭೂತವಾದ ಆ ಸೊಳ್ಳೆಗೂ ಸಹ ನಾನು ಧನ್ಯವಾದಗಳನ್ನು ಹೇಳಲೇ ಬೇಕು!

ಮನಸ್ವಿ said...

ಸೊಳ್ಳೆ ಗುಯ್ ಗುಟ್ಟಿದ್ದೇ ಬರವಣಿಗೆಗೆ ಸ್ಫೂರ್ತಿ ಆದಂತಿದೆ.. ಉತ್ತರವಿಲ್ಲದ ಪ್ರಶ್ನೆಗಳನ್ನೇ ಕೇಳಿದ್ದೀರಿ.. ಚನ್ನಾಗಿದೆ ಬರವಣಿಗೆ ಬರೆಯುತ್ತಿರಿ.

ಚಿನ್ಮಯ ಭಟ್ said...

ಸುನಾಥ ಕಾಕಾ...ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ :)...

ಚಿನ್ಮಯ ಭಟ್ said...

ಮನಸ್ವಿ..ಹೇಗಿದ್ದೀರಿ? ಬಹಳ ದಿನಗಳಾಯ್ತು...ಖುಶಿ ಆಯ್ತು ಕಮೆಂಟ್ ನೋಡಿ..
ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ :)