Thursday, February 15, 2018

ಮಹಾನಗರಿ

ಮಹಾನಗರಿಯಲಿ ಈಗೀಗ ಕನಸುಗಳೂ ದುಬಾರಿಯೆನಿಸುತ್ತಿವೆ
ಪೂರ್ತಿ ಆಯಸ್ಸಿನ ಬದುಕಿಲ್ಲಿ ಬಹುಷಃ ಸ್ಪಪ್ನಗಳಿಗೂ ಕಷ್ಟ
ಆರೆವಯಸ್ಸಿಗೇ ಸತ್ತು ಪ್ರೇತಗಳಾಗಿ; ಕಣ್ಣೀರು ಕುಡಿವ ದುಂಬಿಗಳಾಗಿ
ನಡುರಾತ್ರಿಯೆಲ್ಲ ಕಾಡುತ್ತವೆ; ಕಾರಣ ಮಾತ್ರ ತೀರ ಅಸ್ಪಷ್ಟ
ಅದೆಷ್ಟು ಪುಳಕಗಳ ಪುಟಿತವಿತ್ತು, ಊರಿಂದ ಬಸ್ಸು ಹತ್ತುವಾಗ
ಹೊಸ ಶುರುವಾತಿನ ಹುರುಪು, ಗೆಳೆತನದ ಮೆಲಕು, ನೌಕರಿಯ ಅಳುಕು
ಅದೆಷ್ಟು ಮೂಟೆ ಮೂಟೆ ನಿರೀಕ್ಷೆಗಳಿತ್ತು ಮೆಜೆಸ್ಟಿಕ್ಕಿನಲ್ಲಿ ಇಳಿಯುವಾಗ
ಅವಕಾಶಗಳ ಆಗರ, ಐದಾರಂಕಿಯ ಪಗಾರ, ಜನಜಂಗುಳಿ ಸಾಗರ
ಬರಬರುತ್ತಾ ಅದೇಕೋ ಎಲ್ಲವೂ ಬೋರಾಗಿದೆ; ನಾಲಿಗೆ ಹಾಳಾಗಿದೆ
ಕ್ಯೂ ನಿಂತು ತಿನ್ನುತಿದ್ದ ವೀಬೀ ದೋಸೆಯಲ್ಲೂ ಜಿಡ್ಡು ಕಾಣಿಸುತ್ತಿದೆ
ಹೊಸದೆನಿಸಿದ್ದೆಲ್ಲ ಬೇಕೆನಿಸಿ, ಹಿಂದೆ ಹಿಂದೆ ಹಿಂದೆ ಓಡಿ ಸುಸ್ತಾಗಿದೆ
ಮಾಯಾಮೃಗವೆಂಬುದು ಮೆಟ್ರೋ ಸಿಟಿಯ ರೂಪದಿ ಅವತಾರವೆತ್ತಂತಿದೆ
ಥುತ್ತೆಂದು ಎದುರಾಗುತ್ತವೆ, ಶುರುವಲ್ಲೆಲ್ಲೋ ಖುಷಿಕೊಟ್ಟ ಸುಂದರ ಸ್ಪಪ್ನಗಳು
ಮಂಕಾಗಿಸಿ, ಗೋಳಾಡಿಸಿ, ನಿದ್ದೆಗೆಡಿಸಿ ಜೀವಹಿಂಡುತ್ತಿವೆ ಆ ವಿಶೇಷಾತ್ಮಗಳು
ಆತ್ಮಹತ್ಯೆಯೋ ಕೊಲೆಯೋ ಸಹಜ ಸಾವೋ;ಅವೆಲ್ಲ ಸತ್ತಿರುವುದಂತೂ ನಿಜ
ಆಸೆ ಹೊತ್ತವರೇ ಮುಕ್ತಿ ಪಡೆಯರಂತೆ, ಇನ್ನು ಕನಸುಗಳು ಏನಾಗಬೇಡ ?
ಎಲ್ಲ ಸರಿಯಿದೆಯೆಂದು ಬೆಳಗೆದ್ದು ಇನ್‍ಶರ್ಟು ಮಾಡಿ ಹೊರಡುವುದು ಸರಿಯೇ
ಆದರೆ ತಡರಾತ್ರಿಯ ಏಕಾಂತ ಮಾತ್ರ ಕಷ್ಟವಾಗುತ್ತದೆ, ಪಾಪಪ್ರಜ್ಞೆ ಕಾಡುತ್ತದೆ
ಅದೃಷ್ಟಕ್ಕೆ, ಹೊಸ ಕನಸುಗಳ ಹುಚ್ಚು ಹೊಳೆಯಲ್ಲಿ ತೇಲಿ ಹೋಗದ್ದೂ ಕೆಲವಿದೆ
ಊರಿಂದ ಕರೆತಂದ ಹಳೆಯ ಕನಸುಗಳು ಮಾತ್ರ ಬ್ಯಾಗಿನಲ್ಲಿ ಭದ್ರವಾಗಿವೆ
ಎಲ್ಲ ಬಿಟ್ಟು ಹೊರಟೇ ಬಿಡುವ ಎನಿಸುತ್ತದೆ, ಊರ ಬಸ್ಸು ಕಣ್ಣೆದುರು ಕಂಡಾಗ
ಎರಡೇ ಹೆಜ್ಜೆ, ನಿಂತು ಬಿಡುತ್ತೇನೆ,ಅದೊಂದು ಇದೊಂದು, ಮುಗಿಸುವಾ ಆದಷ್ಟು ಬೇಗ
ಹುಡುಕಬೇಕಿದೆ ಕಾರಣ ನಾನು, ಊರಿಗೆ ಹೋಗದಂತೆ ತಡೆವ ಬಂಧಗಳಿಗೆ
ಪಡೆಯಬೇಕಿದೆ ಉತ್ತರ ನಾನು, ಅಂದು ಊರು ಬಿಡಿಸಿದ ಪ್ರಶ್ನೆಗಳಿಗೆ
ಅಲ್ಲಿಯವರೆಗೆ ಹೊಸ ಕನಸುಗಳ ಹುಟ್ಟಿಸುವಿಕೆಗೊಂದು ದೀರ್ಘವಿರಾಮ
ಅವಲಕ್ಕಿ ಮೊಸರಲ್ಲೂ ಬಾಳಜಗ್ಗಿದ ಕನಸುಗಳ ಸಾಕಾರಕ್ಕೆ ಪಡಬೇಕಿದೆ ನಿತ್ಯಶ್ರಮ
ಆದರೂ ಅದೇಕೋ, ಮಹಾನಗರಿಯಲಿ ಕನಸುಗಳೂ ದುಬಾರಿಯೆನಿಸುತ್ತಿವೆ
ಆರೆವಯಸ್ಸಿಗೇ ಸತ್ತು ಪ್ರೇತಗಳಾಗಿ; ನಡುರಾತ್ರಿಯೆಲ್ಲ ಕಾಡುತ್ತವೆ;
-ಚಿನ್ಮಯ
15/2/2018