Tuesday, June 26, 2018

ಗಡಿ

ನಾವು ಬಡವರಾ? ಶ್ರೀಮಂತರಾ?”
ಅಂದು ಪ್ರಶ್ನೆಯೊಂದಷ್ಟೇ ಇತ್ತು; ಉತ್ತರ ಸ್ಪಷ್ಟವಿರಲಿಲ್ಲ
ಅಪ್ಪನಿಗೆ ದುಂಬಾಲು ಬಿದ್ದು ಕೇಳಿದ್ದೆ ಚಾಲಿ ಕೆತ್ತುವಾಗ
ಮುಗುಳುನಗುತ್ತಾ ಹೇಳಿದ್ದ ಅಪ್ಪ “ಎರಡೂ ಅಲ್ಲ”
ನನಗೇನೋ ಅಚ್ಚರಿ, ಅನುಮಾನ; “ಇದು ನಿಜವಲ್ಲ”
ಆದರೆ ಯಾವುದನ್ನು ನಂಬುವುದು ತಿಳಿಯುತ್ತಿರಲಿಲ್ಲ
ನಿನ್ನೆ-ಮೊನ್ನೆಯಷ್ಟೇ ಸಹಪಾಠಿಯೊಬ್ಬ ಹೇಳಿದ್ದ
“ಸಾವ್ ಕಾರ್ರು ನೀವು..ನಿಂಗಿದೆಲ್ಲಾ ಗೊತ್ತಾಗೂದಿಲ್ಲ”
ಅಮ್ಮ ಮೊನ್ನೆಯಷ್ಟೇ ಎಲ್ಲೋ ಹೇಳುತ್ತಿದ್ದಳು
“ನಮ್ಮನೆಯಲ್ಲಿ ದುಡ್ಡಿನ ಮರವೇನೂ ನೆಟ್ಟಿಲ್ಲ”
ಯಾರೋ ಹಿಡಿಸಿ ಹೋಗಿದ್ದ ನೋಟೊಂದನ್ನು ಪುಟ್ಟ ತಂಗಿ
ಇನ್ನೇನು ಒಲೆಗೆಸೆಯುತ್ತಿದ್ದಳು;ಅವಳದೇ ಥೇರಿಯೊಂದಿರಬಹುದಾ?
ಹೊಟ್ಟೆ-ಬಟ್ಟೆಗೇನೂ ಕೊರತೆಯಿರಲಿಲ್ಲ
ಕಮ್ಮಿಯೆನಿಸಿದ್ದು ಹೆಗ್ಗನಸುಗಳಷ್ಟೇ
ಕಟ್ಟಿದೆ ಬಗೆಬಗೆಯ ಕನಸುಗಳ ತೋಟವನ್ನ
ಸಾಕಿದೆ, ಕಾಪಾಡಿದೆ, ಕೊಯ್ದು ಹದ ಮಾಡಿದೆ
ಅಂದು ಕಂಡ ಕನಸುಗಳಲ್ಲಿ ಕಾಲಕ್ರಮೇಣ ಬಹುತೇಕವು ಮುದುಡಿವೆ
ಕಾರಣ ಕೇಳಲು ನನಗಂತೂ ವ್ಯವಧಾನವಿರಲಿಲ್ಲ
ಉಳಿದವು ಆಗಲೂ ಈಗಲೋ ಅನ್ನುತ್ತಿವೆ
ಅವುಗಳ ಉಳಿಸಿಕೊಳ್ಳಲು ನನಗಂತೂ ಮನಸ್ಸಿಲ್ಲ
ಹೊಸ ಕನಸುಗಳು ಹುಟ್ಟುತ್ತಿಲ್ಲ;
ಎಲ್ಲದಕ್ಕೂ ಕಾರಣ ತಿಳಿಯಲೇಬೇಕೆಂದಿಲ್ಲ
ಬಹುಷಃ ನಾನು ಯಾವುದಕ್ಕೂ ಕಾರಣನಲ್ಲ;
ಆದರೆ ಅವುಗಳಿಲ್ಲದೇ ಬೆಂಗಳೂರು ತಲುಪಿ ಹೀಗೆ ಕುಟ್ಟುತ್ತಿರಲಿಲ್ಲ
ಅದೇನೋ ಬಡತನ-ಶ್ರೀಮಂತಿಕೆ
"ಹಣ"ದ ಗಡಿ ಮೀರಿದೆ
ಎರಡೂ ಒಂದೇ ಎನಿಸುತ್ತಿದೆ;
ಅಪ್ಪನ ಮುಗುಳುನಗೆ ಅರ್ಥವಾದಂತಿದೆ
ಪ್ರಮೋಷನ್ನು ಹೆಚ್ಚಿದಂತೆ ಹೆಚ್ಚುವ ಟೆನ್ಷನ್ನು;
ಕೊಟ್ಟಷ್ಟು ಕೆಲಸ ಮಾಡಿ ಹೊರಡುವ ಖುಷಿ
ಏಕ್ಸಟ್ರಾ ಮಾಡುವ ಕೆಲಸ; ಫ್ರೀ ಟೈಮಿನ ಸಂತಸ
ಏಫ್.ಡಿಯಲ್ಲಿನ ಜಡತ್ವ; ಶೇರ್ ಮಾರ್ಕೆಟ್ಟಿನ ಏರಿಳಿತ ಬ್ರಹ್ಮಗುಟ್ಟು
ಪ್ರೈವಸಿ ಎನ್ನುವ ಹುಸಿ ಏಕಾಂತ; ಎಲ್ಲರೊಂದಿಗೆ ಬೆರೆಯುವ ಸುಖ
ಹೊಗೆ ಕುಡಿಸುವ ಆಧುನೀಕತೆ; ಹಸಿರು ಪಸರಿಸುವ ಸಾಂಪ್ರದಾಯಿಕತೆ
ವೈಫೈ ಜೊತೆ ಅಂಗೈಯ್ಯಲ್ಲಿ ಜಗತ್ತು; ಹೊಲಕ್ಕಿಳಿದರೆ ಮರೆಯುವುದು ಜಗತ್ತು
“ನಾನು ಬಡವನಾ? ಶ್ರೀಮಂತನಾ?”
ಉತ್ತರಗಳು ಸಾಕಷ್ಟಿವೆ;
ಆದರೆ ಪ್ರಶ್ನೆ ಕೇಳಿಕೊಳ್ಳಲೇ ಧೈರ್ಯ ಸಾಲುತ್ತಿಲ್ಲ
-ಚಿನ್ಮಯ
(26/06/2018)

2 comments:

Srikanth Manjunath said...

ತಾಕಲಾಟಗಳನ್ನು ಕಾಡುವ ಪದಗಳಲ್ಲಿ ಹಿಡಿದಿಟ್ಟ ರೀತಿ ಸೊಗಸಾಗಿದೆ..
ಎಲ್ಲರ ಭಾವಕ್ಕೂ ತಾಕುವ ಸಾರ್ವಕಾಲೀಕ ಸತ್ಯ ನಿಮ್ಮ ಕಥಕವನದೊಳಗೆ ನುಗ್ಗಿರುವ ರೀತಿ ಸೊಗಸು
ಬೆಳೆದಂತೆಲ್ಲಾ ಅಪ್ಪನ ಮಾತುಗಳು ಇನ್ನಷ್ಟು ಆಳಕ್ಕಿಳಿಯುವ ಆ ಅನುಭವದ ಪಾಠಕ್ಕೆ ಇನ್ನೊಂದು ಸಮವಿಲ್ಲ

ಸೂಪರ್ ಬರಹ ಚಿನ್ಮಯ್.. ಸೂಪರ್ ಔಟ್ಪುಟ್

ಚಿನ್ಮಯ ಭಟ್ said...

ಧನ್ಯವಾದ ಶ್ರೀಕಾಂತಣ್ಣಾ :)